ಪಂಚದ್ರಾವಿಡ ಭಾಷೆಗಳಲ್ಲಿ ಕನ್ನಡ ಮತ್ತು ತುಳು ಬಹಳ ನಿಕಟ ಸಂಬಂಧವುಳ್ಳ ಭಾಷೆಗಳು. ಕನ್ನಡದ ಅನೇಕ ಪದಗಳು ತುಳುವಿನಲ್ಲಿ ಕಂಡು ಬಂದರೆ ತುಳುವಿನ ಅದೆಷ್ಟೋ ಪದಗಳು ಕನ್ನಡದಲ್ಲೂ ಬಳಕೆಯಾಗುತ್ತವೆ. ಕನ್ನಡ-ತುಳು ಎರಡು ಭಾಷೆಗಳಲ್ಲಿ ಸಮಾನವಾಗಿ ಬಳಕೆಯಾಗುವ ಈ ಕೆಳಗಿನ ಪದಗಳನ್ನು ಗಮನಿಸಿ.

ಕನ್ನಡ ತುಳು
ಗಾಳಿ ಗಾಳಿ
ನೀರು ನೀರ್
ಮಣ್ಣು ಮಣ್ಣ್
ಕಲ್ಲು ಕಲ್ಲ್
ಮರ ಮರೊ
ಕೈ ಕೈ
ಬಾಯಿ ಬಾಯಿ
ಕಣ್ಣು ಕಣ್ಣ್
ಕಾಡು ಕಾಡ್

ಅಲ್ಪಸ್ವಲ್ಪ ವ್ಯತ್ಯಾಸವಿರುವ ಇಂತಹ ಹಲವಾರು ಶಬ್ದಗಳು ಕನ್ನಡ ತುಳು ಭಾಷೆಗಳಲ್ಲಿ ಪ್ರಯೋಗವಾಗುತ್ತಿವೆ.

ಮೂಲದ ಪದಾಂತ್ಯದ ‘ಮ್’ ಕಾರವು ತುಳು ಮತ್ತು ಕನ್ನಡಗಳಲ್ಲಿ ಲೋಪವಾಗುತ್ತದೆ. ಉಳಿದ ಎಲ್ಲ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಅದು ಹಾಗೆಯೇ ಉಳಿದುಬಂದಿದೆ. ಉದಾ:

ತು. ಕುಳ ಕ.ಕೊಳ ತ.ಮ.ಕುಳಮ್
ತು.ಚಟ್ಟ ಕ.ಚಟ್ಟ ತ.ಮ.ಚಟ್ಟಮ್
ತು.ಪಳ್ಳ ಕ.ಪಳ್ಳ ತ.ಮ.ಪಳ್ಳಮ್
ತು.ಪುಣ ಕ.ಪೆಣ(ಹೆಣ) ತ.ಮ.ಪಿಣಮ್

ಮೂಲದ ಪದಾಂತ್ಯದ *ವ ‘ಕಾರವು ತುಳು, ಕನ್ನಡ ಮತ್ತು ಕೊಡಗು ಭಾಷೆಗಳಲ್ಲಿ ‘ಬ’ ಕಾರವಾಗಿ ಬದಲಾಗಿರುವುದನ್ನು ಕಾಣಬಹುದು.

ತು.ಬಡಕ್ಕಾಯಿ ಕ.ಬಡಗು ಕೊಡ.ಬಡಕು ತ.ಮ.ನಟಕ್ಕು
ತು.ಬಯಲು ಕ.ಬಯಲು ಕೊಡ.ಬೇಲಿ ತ.ಮ.ವಯಲ್
ತು.ಬುಳೆ ಕ.ಬೆಳೆ ಕೊಡ.ಬೊಳೆ ತ.ವಿಳೈ
ತು.ಬೆರಿ ಕ.ಬೆನ್ನು ಕೊಡ.ಬೆನ್ನು ತ.ವೆರಿನ್,ವೆನ್

ಕನ್ನಡದ ಸಜಾತೀಯ ದ್ವಿತ್ವಾಕ್ಷರಗಳಿಗೆ ಸಮಾನವಾಗಿ ತುಳುವಿನಲ್ಲಿ ಸರೇಫಾಕ್ಷರಗಳು ಕಂಡುಬರುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ಗಮನಿಸಬಹುದು.

ಕನ್ನಡ ತುಳು
ಪೊತ್ತು / ಹೊತ್ತು ಪೊರ್ತು
ನುಗ್ಗೆ ನುರ್ಗೆ
ಎಮ್ಮೆ ಎರ್ಮೆ
ಹತ್ತಿ ಪರ್ತಿ
ಅತ್ತಿ ಅರ್ತಿ
ಹತ್ತು ಬರ್ತು
ಹೆಗ್ಗಣ ಪೆರ್ಗುಡೆ
ಬೊಮ್ಮ ಬೆರ್ಮ

ತಮಿಳಿನ ಪೊಱು(ಳು)ದು ‘ಸಮಯ’ ಹಳೆಗನ್ನಡದಲ್ಲಿ ಪೊಱ್ತು – ಪೊತ್ತು ಎಂದೂ ಪೊಱುದು > ಪೊರ್ದು > ಪೊತ್ತು – ಎಂಬುದಾಗಿ ರೂಪಾಂತರಗೊಂಡು ಹೊಸಗನ್ನಡದಲ್ಲಿ ಹೊತ್ತು ಎಂದೂ ತುಳುವಿನಲ್ಲಿ ಪೊರ್ತು ಎಂಬುದಾಗಿಯೂ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಬರ್ಟ್ ಕಾಲ್ಡ್‌ವೆಲ್ ಹೇಳುವ ‘The change of into r is common in Tulu’ (ಇಲ್ಲಿ ಈ r > ಱ, r >ರ) ಎಂಬ ಮಾತನ್ನು ಗಮನಿಸಬಹುದು.

ಸಾಮಾನ್ಯವಾಗಿ ಭಾಷೆಯಲ್ಲಿ ವ್ಯತ್ಯಾಸಗಳುಂಟಾಗಲು ಅನೇಕ ಕಾರಣ ಗಳಿವೆಯಾದರೂ ಅವುಗಳಲ್ಲಿ ‘ಸಮರೂಪಧಾರಣೆ’ಯೂ ಒಂದೆನ್ನಬಹುದು. ಒಂದೇ ಶಬ್ದದಲ್ಲಿ ಎರಡು ಬೇರೆ ಬೇರೆ ಧ್ವನಿಗಳನ್ನು ಉಚ್ಚರಿಸಬೇಕಾಗಿ ಬಂದಾಗ ಅವೆರಡನ್ನೂ ಸೇರಿಸಿ ಒಂದೇ ಧ್ವನಿ ಉಂಟಾಗುವುದು; ಆಗ ವಿಜಾತೀಯ ಸಂಯುಕ್ತ ವ್ಯಂಜನಗಳು ಉಚ್ಚಾರಣೆಯ ಸೌಲಭ್ಯಕ್ಕಾಗಿ ಸಜಾತೀಯಗಳಾಗುತ್ತವೆ. ಮೇಲೆ ವಿವರಿಸಿದ ಉದಾಹರಣೆಯಲ್ಲಿ ಈ ಬಗೆಯ ವ್ಯತ್ಯಾಸಗಳಾಗಿರುವುದನ್ನು ಕಾಣಬಹುದು.

ಕೆಲವೊಮ್ಮೆ ಉಚ್ಚರಿಸಲು ಕಷ್ಟವಾಗುವ ಪದಗಳನ್ನು ಬಿಡಿಸಿ ಸರಳಗೊಳಿಸಿ ಹೇಳುವುದನ್ನು ಕಾಣಬಹುದು. ಆಗ ಪದದ ಮಧ್ಯದಲ್ಲಿ ಒಂದು ಅಕ್ಷರ ಸೇರಿಕೊಳ್ಳುತ್ತದೆ. ಕನ್ನಡದ ಕೆವಲು ಪದಗಳು ತುಳುವಿನಲ್ಲಿ ಈ ರೀತಿಯ ವ್ಯತ್ಯಾಸ ಹೊಂದಿರುವುದನ್ನು ಗಮನಿಸಿ.

ಕನ್ನಡ ತುಳು
ಪ್ರಾಯ ಪಿರಯ
ಪ್ರಾಣ ಪಿರಣ
ಪ್ರೀತಿ ಪಿರೀತಿ

ವ್ಯಂಜನ ದ್ವಿತ್ವವಿದ್ದುದು ಬದಲಾಗಿ ದ್ವಿತ್ಯ ಲೋಪವಾಗಿ ಅದರ ಹಿಂದಿನ ಸ್ವರ ದೀರ್ಘವಾಗುವ ಕ್ರಮ ಅನೇಕ ಕನ್ನಡ ಪದಗಳಲ್ಲಿ ಕಂಡುಬರುತ್ತದೆ. ಹೀಗೆ ವ್ಯತ್ಯಾಸಗೊಂಡ ಪದಗಳಲ್ಲಿ ಕೆಲವು ಇದ್ದಂತೆಯೇ ಮತ್ತೆ ಕೆಲವು ಮಾರ್ಪಾಟಾಗಿ ತುಳು ಪದಗಳಾಗಿರುವುದೂ ಈ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ಕನ್ನಡ ತುಳು
ಇಷ್ಟು>ಈಟು ಈತ್
ಅಷ್ಟು>ಆಟ್ ಆತ್
ಎಷ್ಟು>ಏಟ್ ಏತ್
ಅವರು ಆರ್
ಗ್ರಹಚಾರ>ಗ್ರಾಚಾರ ಗ್ರಾಚಾರ

ಕನ್ನಡದ ಕೆಲವು ಶಬ್ದಗಳಿಗೆ ಸಮನಾಗಿ ತುಳುವಿನಲ್ಲಿ ಅನುಸ್ವಾರದಿಂದ ಕೂಡಿದ ಪದಗಳು ಕಂಡುಬರುತ್ತವೆ. ಉದಾ:

ಕನ್ನಡ ತಮಿಳು
ಬೇಗೆ ಬೇಂಕೆ
ಓಟೆ ಓಂಟೆ
ಗಡ್ಡೆ ಕಂಡೆ
ಮೂಗು ಮೂಂಕು
ಪುತ್ತ ಪುಂಚ
ಮುಸುಡು ಮುಸುಂಟು
ಕರು ಕಂಜಿ
ಕಬ್ಬು ಕರುಂಬು
ಕಿಲುಬು ಕಲೆಂಬು
ತಾಟು ತಾಂಟು

ಕನ್ನಡದ ಕೆಲವು ಅನುಸ್ವಾರಯುಕ್ತ ಪದಗಳಿಗೆ ಸಮಾನವಾಗಿ ತುಳುವಿನಲ್ಲಿ ಅನುಸ್ವಾರರಹಿತ ಪದಗಳಿವೆ.

ಕನ್ನಡ ತುಳು
ಪೆಂಡತಿ ಬುಡೆದಿ
ಮೆಂತೆ ಮೆತ್ತೆ
ಹೇಂಟೆ ಪೆರಡೆ

ತುಳುವಿನಲ್ಲಿ ಪಕಾರ ಹಕಾರವಾಗಿಲ್ಲ. ಈ ವಿಷಯದಲ್ಲಿ ತುಳು ತನ್ನ ಸ್ವಂತಿಕೆ ಉಳಿಸಿಕೊಂಡಿದೆ. ‘ಪ’ ಕಾರ ‘ಪ’ಕಾರವಾಗಿಯೇ ಉಳಿದಿದೆ. ಆದರೆ ಕೆಲವೆಡೆ ‘ಪ’ ಕಾರಯುಕ್ತ ಪದಗಳ ಜೊತೆಗೆ ‘ಹ’ ಕಾರಯುಕ್ತ ಪದಗಳೂ ಬಳಕೆಗೆ ಬಂದಿವೆ. ಈ ಪದಗಳು ಕನ್ನಡದಿಂದ ತುಳುವಿಗೆ ಎರವಲಾಗಿ ಬಂದಿವೆ.

ಉದಾ: ಹಾಸಿಗೆ, ಹಾಳು, ಹೋಳಿಗೆ ಇತ್ಯಾದಿ.

ಕನ್ನಡ ತುಳು
ಹಲಗೆ ಪಲಾಯಿ
ಹೀರೆ ಪೀರೆ
ಹುಂಜ ಪೂಂಜ
ಹೇಂಟೆ ಪೆರಡೆ
ಹಾಲು ಪೇರ್
ಕಹಿ ಕೈಪ್ಪೆ
ಹಂದಿ ಪಂಜಿ

ಆಧುನಿಕ ಭಾಷಾ ವಿಜ್ಞಾನಿಗಳ ಪ್ರಕಾರ ‘ಹ’ಕಾರ ದ್ರಾವಿಡ ಭಾಷೆಯ ಧ್ವನಿಯಲ್ಲ. ಅದು ಸಂಸ್ಕೃತದ ಪ್ರಭಾವದಿಂದ ಕನ್ನಡ, ತೆಲುಗು, ಭಾಷೆಗಳಲ್ಲಿ ಬಳಕೆಗೆ ಬಂದಿದೆ ಎಂಬುದು ಕಾಲ್ಡ್‌ವೆಲ್‌ರ ಅಭಿಪ್ರಾಯ. ಮೇಲಿನ ಉದಾಹರಣೆಗಳಿಂದ ಅಚ್ಚ ತುಳು ಭಾಷೆಯಲ್ಲಿ ‘ಹ’ಕಾರ ಇಲ್ಲ ಎನ್ನಬಹುದು.

ಮುಂದೆ ಬರುವ ಸ್ವರಗಳ ಪ್ರಭಾವದಿಂದ ಕೆಲವು ವ್ಯಂಜನಗಳು ಆ ಸ್ವರಗಳಿಗನುಗುಣವಾಗಿ ರೂಪವನ್ನು ತಾಳುತ್ತವೆ. ಕನ್ನಡದ ಕೆಲವು ಧ್ವನಿಗಳು ತುಳುವಿನಲ್ಲಿ ತೌಲವೀಕರಣ ಹೊಂದಿರುವುದನ್ನು ಕಾಣಬಹುದು.

ಕ > ಚ, ತ > ಚ, ದ > ಜ ಆಗಿರುವುದು ಕಂಡುಬರುತ್ತದೆ.

ಕ > ಚ ಕನ್ನಡ ತುಳು
  ಕೆಸು ಚೇವು
  ಕೆಸರು ಚೋರು
  ಕೆತ್ತೆ ಚೆಕ್ಕೆ
  ಕೆಮ್ಮು ಚೆಮ್ಮು
  ಕಂತು ಚುಚ್ಚು
  ಕಿತ್ತಳೆ ಚಿತ್ತುಪುಳಿ
  ಕೆಡ ಚೆಟ್ಟು
ತ > ಚ ಕಣ್ಣೀರ್ ಚಣ್ಡ್ರ್ > ಬೆನ್ದ್ರ್
  ತೇಗು ಚೆಕ್ಕಿ
  ಪುತ್ತ (ಹುತ್ತ) ಪುನಚ – ಪುಞ್ಚ (ಪುಂಚ)
ದ>ಜ ಪಂದಿ ಪಂಜಿ
  ಕೂದಲು ಕೂಚೆಲ್, ಕೂಜಲ್
ಸ >ಜ ಕಸ ಕಜವು
  ಪೂಸು ಪೂಜು
  ಹಸೆ ಪಜೆ
  ಬೀಸು ಬೀಜು
  ಮಸಿ ಮಜಿ

ಒಂದು ಪದದಲ್ಲಿರುವ ಅಕ್ಷರಗಳು ಸ್ಥಾನಪಲ್ಲಟ ಹೊಂದಿ ಅದರಿಂದದ ಅರ್ಥ ವ್ಯತ್ಯಾಸವಾಗದೇ ಇರುವುದನ್ನು ಅಕ್ಷರಪಲ್ಲಟ ಎನ್ನಲಾಗುತ್ತದೆ. ಕನ್ನಡದ ಕೆಲ ಪದಗಳು ಅಕ್ಷರ ಪಲ್ಲಟ ಹೊಂದಿ ತುಳು ಪದಗಳಾಗಿರುವುದನ್ನು ಈ ಕೆಳಗಿನ ಉದಾಹರಣೆಯಲ್ಲಿ ಗಮನಿಸಬಹುದು.

ಕನ್ನಡ ತುಳು
ಅವುಡಲ ಅಲುಂಬುಡ
ಪಂದಲ ದಂಪ, ದೊಂಪ

ಕೆಲವು ಪದಗಳಲ್ಲಿ ವ್ಯತ್ಯಾಸವಾಗುವಾಗ ನಷ್ಟವಾಗುವ ವ್ಯಂಜನ ಅನುನಾಸಿಕವಾಗಿದ್ದರೆ ಅದರ ಹಿಂದಿನ ಸ್ವರ ಅನುನಾಸಿಕವಾಗುತ್ತದೆ.

ಉದಾ: ಮಾಂಸ (ಕ) > ಮಾಸ (ತುಳು) (ಚಿನ್ಹೆ ಅನುನಾಸಿಕೀಕರಣವನ್ನು ಸೂಚಿಸುತ್ತದೆ)

ಕೆಲವು ಪದಗಳಲ್ಲಿ ಮೊದಲ ಸ್ವರವನ್ನು ಬಿಟ್ಟು ವ್ಯಂಜನದಿಂದಲೇ ಪದವನ್ನು ಪ್ರಾರಂಭಿಸುವುದನ್ನು ಗಮನಿಸಬಹುದು.

ಉದಾ: ಅಹಂಕಾರ (ಕ) > ಹಾಂಕಾರ (ತು) > ಆಂಕಾರ (ತು)

ಕನ್ನಡದಲ್ಲೂ ‘ಹಾಂಕಾರ’ – ‘ಹಂಕಾರ’ ಪದ ಬಳಕೆಯಲ್ಲಿದೆ.

ಸಂಸ್ಕೃತದಿಂದ ತುಳುವಿಗೆ ಬಂದ ಅಕಾರಾಂತ ಪದಗಳು (ಪುಲ್ಲಿಂಗ ನಾಮಪದಗಳನ್ನೂ ಹೊರತುಪಡಿಸಿ) ಒಕಾರಾಂತವಾಗಿ ಮಾರ್ಪಡುತ್ತವೆ.

ಸಂಸ್ಕೃತ ತುಳು
ವರ್ಷ ಒರ್ಸೊ
ಧರ್ಮ ಧರ್ಮೊ
ಅಂಶ ಅಂಸೊ
ಶಂಖ ಸಂಕೊ
ಶ್ರಾವಣ ಸೋಣೊ
ಸಹಸ್ರ-ಸಾವಿರ ಸಾವಿರೊ, ಸಾರೊ

ಸಂಸ್ಕೃತದಿಂದ ತುಳುವಿಗೆ ಬರುವಾಗ ಷ,ಕಗಳು ‘ಸ’ ಆಗುತ್ತವೆ. ಮಹಾಪ್ರಾಣಗಳು ಅಲ್ಪಪ್ರಾಣಗಳಾಗುತ್ತವೆ.

ಸಂಸ್ಕೃತ ಮತ್ತು ಕನ್ನಡದ ಅಕಾರಾಂತ ಪುಲ್ಲಿಂಗ ಪದಗಳು ತುಳುವಿನಲ್ಲಿ ‘ಎ’ ಕಾರಾಂತವಾಗುತ್ತವೆ.

ಕನ್ನಡ ತುಳು
ರಾಮ ರಾಮೆ
ಕೃಷ್ಣ ಕೃಷ್ಣೆ
ಮುದ್ದ ಮುದ್ದೆ
ಚನಿಯ ಚನಿಯೆ
ಸೋಮ ಚೋಮೆ
ಅಂಗರ ಅಂಗರೆ
ಮಾಧವ ಮಾಧವೆ

ಸಂಬಂಧವಾಚಕ ಶಬ್ದಗಳಲ್ಲೂ ಈ ಬದಲಾವಣೆ ಇರುವುದನ್ನು ಗಮನಿಸಬಹುದು.

ಕನ್ನಡ ತುಳು
ಅಣ್ಣ ಅಣ್ಣೆ
ಮಾವ ಮಾಮೆ
ಮಗ ಮಗೆ

ಕೆಲವೆಡೆ ಪುಲ್ಲಿಂಗವಲ್ಲದ ಅಕಾರಾಂತ ಶಬ್ದಗಳೂ ಎಕಾರಾಂತ ವಾಗುವುದಿದೆ. ಉದಾ:

ಕನ್ನಡ ತುಳು
ಅಕ್ಕ ಅಕ್ಕೆ
ಮಂಗ ಮಂಗೆ
ಗುಡ್ಡ ಗುಡ್ಡೆ

ಮತ್ತೆ ಕೆಲವೆಡೆ ಕನ್ನಡದ ಪದ ಮಧ್ಯದ ‘ಅ’ ಕಾರವು ‘ಎ’ಕಾರ ವಾಗುತ್ತದೆ. ಉದಾ:

ಕನ್ನಡ ತುಳು
ಪೊದರು ಪುದೆಲ್
ಪೆಗಲು ಪುಗೆಲ್
ನೆತ್ತರು ನೆತ್ತೆರ್

ಇಲ್ಲೆಲ್ಲಾ ಪದಾಂತ್ಯದ ‘ಉ’ಕಾರವು ತುಳುವಿನಲ್ಲಿ ಪದಾಂತ್ಯದ ವಿಶಿಷ್ಟ ಅರ್ಧಾಕ್ಷರವಾಗಿರುವುದನ್ನು ಗಮನಿಸಬಹುದು.

ಕನ್ನಡ ಪದಗಳ ಆರಂಭದ ‘ಅ’ ಕಾರವು ತುಳುವಿನಲ್ಲಿ ‘ಏ’ ಕಾರವಾಗುವುದು.

ಕನ್ನಡ ತುಳು
ಆಡು ಏಡು
ಪಾಲು ಪೇರ್
ಆಮೆ ಏಮೆ

ಹಾಗೆಯೇ ಕನ್ನಡದ ಆದಿಯ ‘ಎ’ಕಾರ ತುಳುವಿನಲ್ಲಿ ಕೆಲವೆಡೆ ‘ಒ’ ಕಾರವಾಗಿರುವುದೂ ಉಂಟು. ಉದಾ:

ಕನ್ನಡ ತಮಿಳು
ಬೆಳ್ಳಿ ಬೊಳ್ಳಿ
ಬೆಳಕು ಬೊಳ್ಪು
ಬೆಳ್ಳ ಬೊಳ್ಳ
ಬೆಟ್ಟ ಬೊಟ್ಟು / ಬೆಟ್ಟು
ಮೆಟ್ಟು ಮೊಟ್ಟು
ಪೆಣ್ಣು ಪೊಣ್ಣು

ಕನ್ನಡ ಪದಗಳ ಅಂತ್ಯದ ‘ಉ’ಕಾರ ತುಳುವಿನಲ್ಲಿ ‘ಇ’ಕಾರ ವಾಗಿರುವುದು ಕೆಲವೆಡೆ ಕಂಡುಬರುತ್ತದೆ.

ಕನ್ನಡ ತುಳು
ಕರು ಕಂಜಿ
ಪುಳು ಪುರಿ
ಕುರು ಕುರಿ
ಮೇಜು ಮೇಜಿ
ಬೆಂಚು ಬೆಂಚಿ
ವಾಚು ವಾಚಿ
ಮುಳುಗು ಮುರ್ಕುನಿ

ಕನ್ನಡದ ಆದಿಯ ಇ ಕಾರ ತುಳುವಿನಲ್ಲಿ ಕೆಲವೆಡೆ ‘ಉ’ ಕಾರವಾಗುವುದಿದೆ.

ಕನ್ನಡ ತುಳು
ಹಿಂಡಿ ಪುಂಡಿ
ಪಿಡಿ ಪುಡಿ
ಬಿಡಾರ ಬುಡಾರೊ

ಕನ್ನಡದ ಆದಿಯ ಈಕಾರ ತುಳುವಿನಲ್ಲಿ ‘ಊ’ ಆಗಿರುವುದೂ ಇದೆ.

ಬೀಡು    ಬೂಡು

ಪ್ರೊ.ಎಲ್.ವಿ.ರಾಮಸ್ವಾಮಿ ಅಯ್ಯರ್‌ರವರು ತುಳುಧ್ವನಿಗಳ ಕುರಿತು ಹೀಗೆ ಹೇಳಿದ್ದಾರೆ : ” There is a rule in South India where by a short radical ‘i’ followed by an open vowel in the next syllable is replaced by e; the operation of this rule is restricted to derivative words only and further, the change occurs only when in the above circumstances, the consonant immediately following the radical vowel is a short one… Tulu shows forms with i and e side by side in some cases, and those with e alone in others”.

ಕನ್ನಡದಲ್ಲಿ ಪದಗಳಲ್ಲಿ ‘ಇ’ ಕಾರವಿರುವಲ್ಲಿ ಅದಕ್ಕೆ ಸಮಾನವಾದ ತುಳು ಪದಗಳಲ್ಲಿ ‘ಎ’ ಕಾರವಿರುತ್ತದೆ. ಉದಾ:

ಕನ್ನಡ ತುಳು
ಬಿದಿರು ಬೆದುರು
ಕವಿ ಕೆಬಿ
ಇಲಿ ಎಲಿ
ತಿಳಿ ತೆಲಿ
ಕಿಡು ಕೆಡು

ಇನ್ನೂ ಕೆಲವೆಡೆ ಕನ್ನಡ ಪದಗಳ ಆದಿಯಲ್ಲಿ ‘ಎ’ ಕಾರ ಇರುವಲ್ಲಿ ಅವುಗಳಿಗೆ ಸಮಾನವಾದ ತುಳುಪದಗಳ ಆದಿಯಲ್ಲಿ ‘ಇ’ ಕಾರವಿರುವುದೂ ಕಂಡುಬರುತ್ತದೆ. ಉದಾ:

ಕನ್ನಡ ತುಳು
ಬೆರಲ್ ಬಿರೆಲ್
ಎಡೆ ಇಡೆ
ನೆಲೆ ನಿಲೆ
ತೆಗಲೆ ತಿಗಲೆ
ಎಲೆ ಇರೆ
ಕೆರೆ ಕಿರೆ, ಕೆದು
ಎಮೆ-ಎವೆ ಇಮೆ-ಸೀಮೆ

ಎಲ್.ವಿ.ರಾಮಸ್ವಾಮಿ ಅಯ್ಯರ್ ಹೇಳಿದಂತೆ ‘ಇ’ ಯಿಂದ ‘ಎ’ ಬಂದಿದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ.

ಎಲ್.ವಿ.ರಾಮಸ್ವಾಮಿ ಅಯ್ಯರ್ ‘ಉ’ ಮತ್ತು ‘ಓ’ಗಳ ಕುರಿತು ಹೀಗೆ ಹೇಳುತ್ತಾರೆ. ‘In circumstances similar to those discribed, for i>e above, there exists in South Dravidian a change of u > o also. Tulu shows forms with u and o side by side in some cases and words with o alone in others.

ಕನ್ನಡ ಪದಗಳ ಆದಿಯಲ್ಲಿ ‘ಉ’ ಕಾರವಿರುವಲ್ಲಿ ಅದಕ್ಕೆ ಸಮಾನವಾದ ತುಳು ಪದಗಳಲ್ಲಿ ‘ಒ’ ಕಾರ ಬರುತ್ತದೆ. ಉದಾ:

ಕನ್ನಡ ತುಳು
ಉಣಿಸು ಒಣಸು
ಪುರಿ ಪೊರಿ
ಕುಡಿ ಕೊಡಿ
ಪುಡಿ ಪೊಡಿ

ಇನ್ನೂ ಕೆಲವೆಡೆ ಕನ್ನಡ ಪದಗಳ ಆದಿಯ ‘ಒ’ ಕಾರವಿರುವಲ್ಲಿ ಅದಕ್ಕೆ ಸಮಾನವಾದ ತುಳು ಪದಗಳ ಆದಿಯಲ್ಲಿ ‘ಉ’ ಕಾರವಿರುವುದೂ ಗಮನಾರ್ಹ.

ಕನ್ನಡ ತುಳು
ಮೊಗ್ಗೆ ಮುಗುರು
ಪೊದರು ಪುದೆಲು
ಒಡಲು ಉಡಲು
ತೊಡೆ ತುಡೆ
ನೊರೆ ನುರೆ
ಕೊಚ್ಚೆ ಕುಜರು

ಕೆಲವೆಡೆ ಕನ್ನಡ ಪದಗಳಲ್ಲಿ ಆದಿಯ ಎಕಾರಕ್ಕೆ ಸಮನಾಗಿ ತುಳುವಿನಲ್ಲಿ ‘ಉ’ಕಾರವು ಪ್ರಯೋಗವಾಗಿದೆ.

ಕನ್ನಡ ತುಳು
ಮೆಣಸು ಮುಣ್ಚಿ
ಪೆಗಲ್ ಪುಗೆಲ್
ಪೆಣ ಪುಣ

ಕನ್ನಡದ ‘ಇ’ಕಾರ ತುಳುವಿನಲ್ಲಿ ಕೆಲವೆಡೆ ‘ಅ’ ಕಾರವಾಗುವುದಿದೆ.

ಕನ್ನಡ ತುಳು
ಕಿಂಡಿ ಕಂಡಿ
ಕಿಲುಬು ಕಲೆಂಗ್
ಮುಗಿಲು ಮುಗೆಲು
ಬಾಗಿಲು ಬಾಕಿಲ್

ದಿಕ್ಕು ಸೂಚಿಸುವ ಪದಗಳು ಕನ್ನಡದಿಂದ ತುಳುವಿಗೆ ಬರುವಾಗ ಅವುಗಳಿಗೆ ಸ್ವಲ್ಪ ವ್ಯತ್ಯಾಸದೊಂದಿಗೆ ‘ಅಯ್’ ಪ್ರತ್ಯಯ ಸೇರುವುದು ಕಂಡುಬರುತ್ತದೆ.

ಕನ್ನಡ ತುಳು
ಮೂಡು ಮೂಡಾಯ್
ಪಡು ಪಡ್ಡಾಯ್ > ಪಡ್ಡೋಯ್, ಪಡ್ಡೆಯ್
ಬಡಗು ಬಡಕ್ಕಾಯ್ > ಬಡೆಕ್ಕಾಯ್
ತೆಂಕು ತೆಂಕಾಯ್ > ತೆಣ್ಕಾಯ್

ಹೊಸಗನ್ನಡದಲ್ಲಿ ಅಪ್ಪ = ತಂದೆ, ತುಳುವಿನಲ್ಲಿ ಅಪ್ಪೆ = ತಾಯಿ, ಹೊಸಗನ್ನಡದಲ್ಲಿ ಅಮ್ಮ = ತಾಯಿ, ತುಳುವಿನಲ್ಲಿ ಅಮ್ಮೆರ್ = ತಂದೆಯವರು, ಹಳೆಗನ್ನಡದಲ್ಲಿ ಇಂದು ತುಳುವಿನಲ್ಲಿರುವಂತೆ ಅಪ್ಪ = ತಾಯಿ, ಅಮ್ಮ = ತಂದೆ ಎಂಬ ಅರ್ಥವಿತ್ತು.

ಎಱಂಕೆ > ಎಱಕೆ > ರೆಕ್ಕೆ (ಕ) > ರೆಂಕೆ, ಎದಿಂಕೆ (ತುಳು)

ಎಮೆ, ಎವೆ (ಕ)> ಸೀಮೆ, ಇವೆ (ತುಳು)

ಕನ್ನಡದಲ್ಲಿ ಗುದ್ದು (ಕ್ರಿ) ಎಂಬುದರಿಂದ ಗುದ್ದೊಲಿ (ನಾ) – A kind of pick ಆಗಿರುವಂತೆ ತುಳುವಿನಲ್ಲಿ ಕೊತ್ತು – to dig ಎಂಬುದರಿಂದ ಕೊಟ್ರೆ – ಹಾರೆ – ಎಂದಾಗಿದೆ.

ತುಳು – ಕನ್ನಡ ಸಂಬಂಧದ ಬಗ್ಗೆ ಯೋಚಿಸುವಾಗ ಕನ್ನಡ ನಾಡಿನ ಒಂದು ಜಿಲ್ಲೆಗಷ್ಟೇ ಸೀಮಿತವಾದ ತುಳುಭಾಷೆಯ ಮೇಲೆ ಕನ್ನಡದ ಅಪಾರ ಪ್ರಭಾವ ಸಹಜವಾಗಿಯೇ ಆಗಿದೆ. ಹೀಗಾಗಿ ಅನೇಕ ಕನ್ನಡ ಪದಗಳು ತುಳುವಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ. ಸಮಾಜ ಮುಂದುವರಿದಂತೆ ನಮ್ಮ ವ್ಯವಹಾರಗಳಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆ ಗಳಾಗುತ್ತಿರುತ್ತವೆ. ಅವಕ್ಕೆಲ್ಲಾ ಸೂಕ್ತವಾಗಿ ಸ್ಪಂದಿಸಲು ಭಾಷೆ ಸಮರ್ಪಕ ವಾಗಿರುವುದು ಅನಿವಾರ್ಯ. ಈ ದೃಷ್ಟಿಯಿಂದ ಹೆಚ್ಚು ಅಭಿವೃದ್ಧಿ ಹೊಂದಿದ ಕನ್ನಡದ ಮೇಲಿನ ಅವಲಂಬನೆ ತುಳುವಿಗೆ ಅನಿವಾರ್ಯ. ತುಳುವರಿಗೆ ಕನ್ನಡದಲ್ಲೂ ಪ್ರಾವೀಣ್ಯ ಇರುವುದು ತುಳುವನ್ನು ಅಭಿವೃದ್ಧಿಗೊಳಿಸುವಲ್ಲಿ ತುಂಬಾ ನೆರವಾಗುತ್ತದೆ. ತುಳುವನ್ನು ಆಧುನಿಕತೆಗೆ ಹೊಂದಿಸುವಲ್ಲಿ ಕನ್ನಡ ಲಿಪಿ ತುಂಬಾ ಸಹಕಾರಿಯಾಗಿದೆ. ಕನ್ನಡದ ಲಿಪಿಯನ್ನೇ ತುಳುಭಾಷೆಗೂ ಬಳಸಿಕೊಳ್ಳುವುದು ಪ್ರಚಲಿತವಾಗಿದೆ. ಆದರೆ ಕನ್ನಡಿಗರಿಗೆ ತುಳು ಓದಲು ಇದರಿಂದ ಸಾಧ್ಯವಾಗುವುದಾದರೂ ಅರ್ಥವಾಗುವುದಿಲ್ಲ. ಇದರಿಂದ ಲಿಪಿ ಇದ್ದರೆ ಮಾತ್ರ ಸ್ವತಂತ್ರ ಭಾಷೆ ಎಂಬ ಅಭಿಪ್ರಾಯ ತಪ್ಪು ಎಂಬುದು ಸಾಬೀತಾಗುತ್ತದೆ. ಇದಕ್ಕೆ ರೋಮನ್ ಲಿಪಿಯನ್ನು ಬಳಸಿಕೊಂಡ ಇಂಗ್ಲೀಷ್, ಲ್ಯಾಟಿನ್, ಫ್ರೆಂಚ್, ಜರ್ಮನ್ ಮೊದಲಾದ ಭಾಷೆಗಳನ್ನು ಉದಾಹರಿಸಬಹುದು.

ಈ ಮೇಲಿನ ವಿವರಣೆಗಳನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದಾಗ ತುಳುವಿನಲ್ಲಿ ದಕ್ಷಿಣ ದ್ರಾವಿಡದ ಕೆಲವು ಲಕ್ಷಣಗಳಿವೆ. ಹಾಗೇ ಮಧ್ಯದ್ರಾವಿಡದ ಕೆಲವು ಲಕ್ಷಣಗಳೂ ಬೆರೆತಿವೆ ಎನ್ನಬಹುದು. ಇದರ ಹಿನ್ನೆಲೆಯನ್ನು ವಿವೇಚಿಸಿದರೆ ಮೂಲ ದ್ರಾವಿಡಭಾಷೆಯಿಂದ ಕೆಲವು ಬದಲಾವಣೆಗಳು ಸಾಮೂಹಿಕವಾಗಿ ಮಧ್ಯದ್ರಾವಿಡ ಭಾಷೆಗಳಲ್ಲಿ ಉಂಟಾಗಿರಬೇಕು. ಈ ಸಂಕ್ರಮಣ ಕಾಲದಲ್ಲಿ ತುಳು ಭಾಷೆಯ ಮೇಲೂ ಆದ ಸಾಮೂಹಿಕ ಬದಲಾವಣೆಯ ಪರಿಣಾಮವಾಗಿ ಅದು ತುಳುವಿನಲ್ಲಿ ಉಳಿದಿರಬೇಕು. ಆ ಮೇಲೆ ತುಳು ದಕ್ಷಿಣ ದ್ರಾವಿಡ ಭಾಷೆಗಳೊಂದಿಗೆ ಸೇರಿಕೊಂಡು ಸಾಗುತ್ತಿರುವ ಸಂದರ್ಭಗಳಲ್ಲಿ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಕಾಣುವ ಬದಲಾವಣೆಗಳು ತುಳುವಿನಲ್ಲಿ ಕಂಡುಬರುತ್ತವೆ. ಕನ್ನಡ ಮತ್ತು ತುಳುವಿಗಷ್ಟೇ ಸೀಮಿತವಾದ ಕೆಲವೊಂದು ಬದಲಾವಣೆಗಳನ್ನು ಹಿಂದಿನ ಪುಟಗಳಲ್ಲಿ ವಿವಿರಸಿದೆ. ತುಳು ದಕ್ಷಿಣ ದ್ರಾವಿಡ ಭಾಷಾಗುಂಪಿನಿಂದ ಬೇರೆಯಾದ ಮೊದಲ ಭಾಷೆ ಎಂಬುದು ವಿದ್ವಾಂಸರ ಅಭಿಪ್ರಾಯ. ತುಳು ದಕ್ಷಿಣ ದ್ರಾವಿಡ ಗುಂಪಿನಿಂದ ಬೇರೆಯಾಗುವ ಪೂರ್ವದಲ್ಲಿ ಕನ್ನಡ – ತುಳು ಮೂಲ ದಕ್ಷಿಣ ದ್ರಾವಿಡದ ಉಪಭಾಷೆಗಳು ಅಥವಾ ಪ್ರತ್ಯುಪಭಾಷೆಗಳಾಗಿದ್ದಿರಬೇಕು. ಇಂತಹ ಸಂದರ್ಭದಲ್ಲಿ ಕನ್ನಡ – ತುಳುವಿಗಷ್ಟೇ ಸೀಮಿತವಾದ ಕೆಲವು ಬದಲಾವಣೆಗಳಾಗಿದ್ದಿರಬೇಕೆಂದೂ ಅವು ಬೇರೆ ದಕ್ಷಿಣ ದ್ರಾವಿಡ ಭಾಷೆಗಳಿಗೆ ಅನ್ವಯವಾಗದೇ ಇರಬೇಕೆಂದೂ ಊಹಿಸಬಹುದು. ಅನಂತರ ತುಳು ಸ್ವತಂತ್ರಗೊಂಡು ಇಂದು ನಾವು ಕಾಣುವ ತುಳು ಭಾಷೆಯಾಗಿ ಬೆಳೆದುಬಂದಿರಬೇಕೆಂದು ಹೇಳಬಹುದು.

ಭಾಷೆಯಲ್ಲಾಗುವ ಬದಲಾವಣೆಗಳು ನಿಧಾನಗತಿಯ ಒಂದು ಪ್ರಕ್ರಿಯೆ. ಒಂದು ಭಾಷೆಯ ಉಪಭಾಷಾ ಪ್ರಭೇದಗಳು ಎಷ್ಟೋ ವರ್ಷಗಳಾದ ಮೇಲೆ ಅದೆಷ್ಟೋ ಬದಲಾವಣೆಗಳನ್ನು ತುಂಬಿಕೊಂಡು ಸ್ವತಂತ್ರ ಭಾಷೆಗಳಾಗುತ್ತವೆ. ಈ ಸಂಕ್ರಮಣ ಕಾಲದಲ್ಲಾಗುವ ಭಾಷೆಗಳಲ್ಲೇ ಪ್ರತ್ಯುಪಭಾಷೆಗಳಿರುವಾಗ ಕೆಲವು ಬೆಳವಣಿಗೆಗಳು ಕೇವಲ ಕೆಲವು ಪ್ರತ್ಯುಪಭಾಷೆಗಳಿಗೇ ಸೀಮಿತವಾಗಿರಬಹುದು. ಹೀಗಿರುವ ಲಕ್ಷಣಗಳು ಮುಂದೆ ಈ ಉಪಭಾಷೆ ಅಥವಾ ಪ್ರತ್ಯುಪಭಾಷೆಗಳೇ ಸ್ವತಂತ್ರ ಭಾಷೆಗಳಾಗಿ ಬಳಕೆಗೆ ಬಂದಾಗ ಬೇರೆ ಬೇರೆ ಭಾಷೆಗಳಲ್ಲೂ ಸಮಾನವಾಗಿ ಹಂಚಿಕೆಯಾಗಿರುವುದನ್ನು ಕಾಣಬಹುದು. ಇಂತಹ ಒಂದು ಸಾಧ್ಯತೆ ಕನ್ನಡ- ತುಳು ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಆಗಿರಬಹುದೆಂದು ಮೇಲೆ ವಿವರಿಸಿರುವ ಲಕ್ಷಣಗಳಿಂದ ತಿಳಿಯಬಹುದಾಗಿದೆ.

ಆಕರಸೂಚಿ

೧. ಬರ್ರೋ‍ಜಿ. ಮತ್ತು ಎಮೆನೋ ಎಂ.ಬಿ. – ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್‌ಶ್ನರಿ, ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೬೧.

೨. ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್‌ಶ್ನರಿ ಸಪ್ಲಿಮೆಂಟ್, ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ೧೯೬೮.

೩. ಕಾಲ್ಡ್‌ವೆಲ್ ಆರ್. – ಎ ಕಂಪ್ಯಾರಟಿವ್ ಗ್ರಾಮರ್ ಆಫ್‌ದ ದ್ರವಿಡಿಯನ್ ಆರ್ ಸೌತ್‌ಇಂಡಿಯನ್ ಲಾಂಗ್ವೇಜಸ್ – ಯುನಿವರ್ಸಿಟಿ ಆಫ್ ಮದ್ರಾಸ್, ೧೯೭೬ (ಮೂಲ ಆವೃತ್ತಿ, ೧೮೭೫)

೪. ಚಟರ್ಜಿ ಎಸ್.ಕೆ. – ದ್ರವಿಡಿಯನ್, ಅಣ್ಣಾಮಲೈ ಯುನಿವರ್ಸಿಟಿ, ೧೯೬೫.

೫. ಕೆಂಪೇಗೌಡ ಕೆ. – ಭಾಷಾವಿಜ್ಞಾನಕೋಶ, ಮೈಸೂರು, ವಿಶ್ವವಿದ್ಯಾನಿಲಯ, ೧೯೭೬.

೬. ಮೈಸೂರು ವಿಶ್ವವಿದ್ಯಾನಿಲಯ – ಕನ್ನಡ ಕೈಪಿಡಿ, ಸಂಪುಟ ೧, ೧೯೬೯ (ಪಂಚಮ ಮುದ್ರಣ) – ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ – ಕನ್ನಡ ನಿಘಂಟು, ೧೯೭೭ (ಮೂರನೆಯ ಆವೃತ್ತಿ)

೭. ಶಕ್ತಿವೇಲು ಎಸ್.- ಟ್ರೈಬಲ್ ಲ್ಯಾಂಗ್ವೇಜಸ್ ಆಫ್ ಇಂಡಿಯಾ, ಸಪತಿಸ್ಪಾಕಮ್, ಮಧುರೈ, ೧೯೭೬.

೮. ಶ್ರೀಕಂಠಯ್ಯ ತೀ.ನಂ – ಕನ್ನಡ ಮಾಧ್ಯಮ ವ್ಯಾಕರಣ, ಗೀತಾ ಬುಕ್ ಹೌಸ್, ಮೈಸೂರು, ೧೯೭೨.

೯. ಷಣ್ಮುಗಂ ಎಸ್.ವಿ. – ದ್ರವಿಡಿಯನ್ ನೌನ್ಸ್, ಎ ಕಂಪ್ಯಾರೆಟಿವ್ ಸ್ಟಡಿ, ಅಣ್ಣಾಮಲೈ ಯೂನಿವರ್ಸಿಟಿ, ೧೯೭೧.

೧೦. ಸುಬ್ರಹ್ಮಣ್ಯಂ ಸಿ.ಎಸ್. – ದ್ರವಿಡಿಯನ್ ವರ್ಡ್ ಮಾರ್ಫೊಲಜಿ – ಎ ಕಂಪ್ಯಾರಿಟಿವ್ ಸ್ಟಡಿ, ಅಣ್ಣಾಮಲೈ ಯುನಿವರ್ಸಿಟಿ, ೧೯೭೧.

೧೧. ದ್ರಾವಿಡ ಭಾಷೆಲು (ತೆಲುಗಿನಲ್ಲಿ), ಸತ್ಯವತೀ ಪಬ್ಲಿಕೇಷನ್ಸ್, ಅಣ್ಣಾಮಲೈ ನಗರ, ೧೯೭೭.

೧೨. ರತ್ನ ಮಂಜೂಷಾ – ಸಂ. ಶ್ರೀ ಕಯ್ಯಾರ ಕಿಞ್ಞಣ್ಣ ರೈ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ, ಧರ್ಮಸ್ಥಳ, ದ.ಕ., ೧೯೭೯

೧೪. ನವನೀತ – ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟ, ತೆಕ್ಕುಂಜ ಅಭಿಮಾನ ಬಳಗ, ಹೈದ್ರಾಬಾದ್, ೧೯೮೨.

೧೫. ತುಳುಬದುಕು – ಕೆಲವು ಮುಖಗಳು ಶ್ರೀ ಅಮೃತ ಸೋಮೇಶ್ವರ, ಪ್ರಕೃತಿ ಪ್ರಕಾಶನ, ಕೋಟೆಕಾರ್, ೧೯೮೪

೧೬. ತೌಳವ ಸಂಸ್ಕೃತಿ – ಶ್ರೀ ಬಿ.ಎ. ವಿವೇಕ ರೈ.ಪ್ರ. ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಮೈಸೂರು, ೧೯೭೭.