ಮೂಲತಃ ಒಂದೇ ಭಾಷೆಯಿಂದ ನಿಶ್ಚಯವಾಗಿ ಹೇಳಬಹುದಾದರೂ, ಬೇರೆ ಬೇರೆ ಪ್ರದೇಶಗಳ ಭಿನ್ನ ಭಿನ್ನ ರೀತಿಯ ಜನಗಳ ಸಂಪರ್ಕ ಸಹವಾಸಗಳ ಪರಿಣಾಮವಾಗಿ ಒಂದು ಭಾಷೆಯಲ್ಲಿ ಹಲವು ತೆರನ ಪ್ರಾದೇಶಿಕ ಪದಪ್ರಯೋಗಗಳು, ಮಾರ್ಪಾಡುಗಳು ಆಗುವುದನ್ನು ನಾವು ಕಾಣುತ್ತೇವೆ. ನಮ್ಮ ನೆರೆಕರೆಯವರು ಆಡುವ ಮಾತುಗಳನ್ನು ದಿನನಿತ್ಯ ಕೇಳುತ್ತಿರುವುದರಿಂದ, ನಾವು ವಾಸಮಾಡುವ ಪ್ರದೇಶದ ಹವೆ ವಾತಾವರಣಗಳ ಪ್ರಭಾವದಿಂದ, ನಾವು ನಿತ್ಯ ಉಪಯೋಗಿಸುವ ಆಹಾರ ಪಾನೀಯಗಳ ಪರಿಣಾಮದಿಂದ ಕೂಡ ನಮ್ಮ ಮಾತಿನಲ್ಲಿ ಸಾಹಜಿಕವಾಗಿ ವ್ಯತ್ಯಾಸ ಉಂಟಾಗುತ್ತದೆ. ಇಂಗ್ಲಿಷ್, ಸಂಸ್ಕೃತ ಮೊದಲಾದ ಪ್ರೌಢ ಭಾಷೆಗಳಲ್ಲಿ ಮಾತ್ರವಲ್ಲ, ಹಿಂದಿ, ಬಂಗಾಳಿ, ಕನ್ನಡ, ಮಲೆಯಾಳ ಇತ್ಯಾದಿ ಪ್ರಾದೇಶಿಕ ಭಾಷಾವರ್ಗದಲ್ಲಿಯೂ ಇಂತಹ ಮಾರ್ಪಾಟುಗಳನ್ನು ಸರಿಯಾಗಿ ಗುರುತಿಸಬಹುದು. ಧಾರವಾಡದ ಕನ್ನಡ, ಮೈಸೂರು ಕನ್ನಡ, ಮಂಗಳೂರು ಕನ್ನಡ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ದಂಡಿ ಮೊದಲಾದ ಸಂಸ್ಕೃತದ ಲಾಕ್ಷಣಿಕರು, ವೈದರ್ಭೀ ಗೌಡೀ ರೀತಿಗಳನ್ನು ತಿಳಿಸಿದಂತೆ, ನೃಪತುಂಗನೇ ಮುಂತಾದ ಕನ್ನಡದ ಲಾಕ್ಷಣಿಕರೂ ದಕ್ಷಿಣೋತ್ತರ ಮಾರ್ಗಗಳನ್ನು ಹೇಳಿದರು. ಈ ಪ್ರಭೇದ ಭಾಷಾ ವರ್ಗಕ್ಕೆ ಮಾತ್ರ ಸೀಮಿತವಾಗದೆ ಸಂಗೀತ ಕಲಾ ಪ್ರಸಂಗಕ್ಕೂ ಅನ್ವಯಿಸುತ್ತದೆ. ಉತ್ತರಾದಿ ದಕ್ಷಿಣಾದಿ ಸಂಗೀತ ಸಂಪ್ರದಾಯಗಳು, ತೆಂಕುತಿಟ್ಟು ಬಡಗುತಿಟ್ಟು ಯಕ್ಷಗಾನ ಪ್ರಭೇದಗಳು, ಮೂಡಲ ಪಾಯ, ಪಡುವಲ ಪಾಯ ಜಾನಪದ ಕ್ರಮಗಳು ಈ ತೆರನ ಮಾರ್ಪಾಟಿನ ದ್ಯೋತಕಗಳಾಗಿವೆ. ಇಂತಹ ಪ್ರಾದೇಶಿಕ ಮಾರ್ಪಾಟು ತುಳು ಭಾಷೆಯಲ್ಲಿಯೂ ಸಹಜವಾಗಿಯೇ ಇದೆ.

ಎಲ್ಲಾ ಭಿನ್ನತೆಗಳಲ್ಲಿಯೂ ಅಂತರ್ಗತವಾಗಿ ನಿರಂತರ ಹರಿದು ಬಂದ ಏಕತೆಯನ್ನು ನಾವು ಈ ಪ್ರಭೇದಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ನಿಂತಲ್ಲಿಯೇ ನಿಂತ ನೀರು ಕೊಳೆಕೆಸರಾಗಿ ಹಾಳಾಗಿ ಹೋಗುವುದೂ ಹರಿಯುವ ಪ್ರವಾಹದ ಉದ್ದಕ್ಕೂ ಅದು ಸ್ಪರ್ಶಿಸುತ್ತಾ ಬಂದ ಮಣ್ಣಿನ ಗೈರಿಕಾದಿ ಧಾತುಗಳ ಸತ್ವಗಳಿಂದ ನದೀ ಜಲ ಪರಿಶುದ್ಧ ಪವಿತ್ರವಾಗುವುದೂ ಎಂತೋ ಅಂತೆ ಭಾಷೆ ಕಲೆ ಮೊದಲಾದವುಗಳ ವಿಷಯವೂ ಆಗಿದೆ. ಇದು ಜೀವಂತಿಕೆಯ ಸಲ್ಲಕ್ಷಣವೂ ಆಗಿರುವುದು. ಸೌಂದರ್ಯದ ಲಕ್ಷಣವನ್ನು ಹೇಳುತ್ತಾ ಕವಿಯೋರ್ವನು – ‘ಕ್ಷಣೇಕ್ಷಣೇ ಯನ್ನವತಾಮುಪೈತಿ ತದೇವರೂಪಂ ರಮಣೀಯತಾಯಾ’ ಎಂಬ ಲಕ್ಷಣವನ್ನು ಹೇಳಿದನು. ಈ ಸೂತ್ರ ಭಾಷೆ ಕಲೆಗಳಿಗೂ ಸರಿಯಾಗಿ ಅನ್ವಯಿಸುವುದು. ಪರಿವರ್ತನೆ ಪ್ರಗತಿಯ ಲಕ್ಷಣವಾಗಿ ನಾವು ಗುರುತಿಸಬೇಕಾಗಿದೆ.

‘ಕಾಸರಗೋಡಿನ ತುಳು’ ಎಂಬ ಈ ಪ್ರಬಂಧವನ್ನು ಮಂಡಿಸುವಾಗ, ತುಳು ಭಾಷೆಯ ಸಹಜವಾದ ಬೆಳವಣಿಗೆಯ ಒಂದು ಹೆಜ್ಜೆಯನ್ನು ಗುರುತಿಸುವ ಪ್ರಯತ್ನ ಮಾಡುತ್ತೇನೆಂಬ ವಿಶ್ವಾಸ ನನ್ನದು. ಈ ಪ್ರದೇಶದಲ್ಲಿರುವ ತುಳುಜನತೆ ಕನ್ನಡ ಕೊಂಕಣಿ ಭಾಷೆಗಳ ನಿರಂತರ ಸಂಪರ್ಕ ಹೊಂದಿರುವಂತೆ, ನೆರೆಯ ಕೇರಳ ಮತ್ತು ಕೊಡಗಿನ ಮಲೆಯಾಳ ಹಾಗೂ ಕೊಡವ ಭಾಷೆಗಳ ಸಂಸರ್ಗವನ್ನೂ ಹೊಂದಿ ತಮ್ಮ ಮಾತನ್ನು ಇನ್ನಷ್ಟು ಪರಿಪುಷ್ಪವಾಗಿ ಬೆಳೆಸಿಕೊಳ್ಳಲು ಸಮರ್ಥರಾಗಿದ್ದಾರೆ. ಇತರ ಭಾಷೆಗಳಲ್ಲಿನ ವ್ಯವಹಾರಕ್ಕೆ ಅಗತ್ಯವಾದ ಎಷ್ಟು ಪದಗಳನ್ನು ನಾವು ನಮ್ಮ ನುಡಿಯಲ್ಲಿ ನಿಸ್ಸಂಕೋಚವಾಗಿ ಮಾತ್ರವಲ್ಲ ಉದಾರವಾಗಿ ಹೀರಕೊಂಡೆವೋ ಅಷ್ಟು ನಮ್ಮ ಭಾಷೆ ಬೆಳವಣಿಗೆಗೊಳ್ಳುವುದೆಂಬುದನ್ನು ಅರ್ಥಮಾಡಿಕೊಳ್ಳಬೇಕು.

ಕಾಸರಗೋಡಿನ ತುಳು ಭಾಷೆಯಲ್ಲಿನ ಕೆಲವೊಂದು ಪ್ರಾಮುಖ್ಯ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಇಲ್ಲಿ ಸೂಚಿಸಲು ಬಯಸುತ್ತೇನೆ. ಭಾಷಾಭ್ಯಾಸಿಗಳು ಈ ಸೂತ್ರರೂಪದ ಸೂಚನೆಯನ್ನು ಬೇಕಾದಷ್ಟು ವಿಸ್ತರಿಸಿಕೊಳ್ಳಬಹುದು.

(ಅ) ಇತರತ್ರ ಇಕಾರಾಂತವಾಗಿರುವ ಪದಗಳಲ್ಲಿ ಇಲ್ಲಿ ಎಕಾರಾಂತ ವಾಗುತ್ತವೆ.

ಅಗಿಪುನಿ-ಅಗಿಪುನೆ

ಮುಟ್ಟುನಿ-ಮುಟ್ಟುನೆ

ಹೊಸಮನೆ, ಹೊಸಮನಿ – ಎಂಬೀ ರೂಪಭೇದ ಕನ್ನಡ ಭಾಷೆಯಲ್ಲೂ ಬರುತ್ತದೆ.

(ಆ) ತವರ್ಗದ ಪಂಚಮಾಕ್ಷರ ಅನುಸ್ವಾರ ನಕರಾದ ಬದಲು ಟವರ್ಗ ಪಂಚಾಮಾಕ್ಷರ ಣಕಾರವು ಪ್ರಯೋಗದಲ್ಲಿದೆ.

ಮೋನೆ – ಮೋಣೆ

ದಾನೆ – ದಾಣೆ

ಕೇನ್ – ಕೇಣ್

(ಇ) ಲಕಾರದ ಸ್ಥಾನದಲ್ಲಿ ಳಕಾರವೇ ಹೆಚ್ಚಾಗಿ ಬರುತ್ತದೆ

ಪೊರ್ಲು – ಪೊರ್ಳು

ತೆಲಿಪು – ತೆಳಿಪು

ಬುಲಿಪು – ಬುಳ್ಪು

ಬಾಲೆ – ಬಾಳೆ

ನಿರೆಲ್ – ನಿರೆಳ್

(ಈ) ಪದಮಧ್ಯದ ಇಕಾರಾಂತ ಕೆಲವೆಡೆ ಉಕಾರಾಂತವಾಗುವುದು

ಪರ್ಪಿನಿ – ಪರ್ಪುನೆ

ಬರ್ಪಿನಿ – ಬರ್ಪುನೆ

(ಉ) ತಕಾರಾಂತ ಪದಗಳು ಕೆಲವೆಡೆ ದಕಾರಾಂತವಾಗುವುವು

ಉಳ್ಳಾಲ್ತಿ – ಉಳಾಲ್ದಿ

ಅಂಗಾತ್ – ಅಂಗಾದ್

ಕಡ್ತ್‌ತ್ – ಕಡ್ತ್‌ದ್

(ಊ) ತಕಾರವು ಕೆಲವೆಡೆ ಚಕಾರವೂ ಸಕಾರವೂ ಆಗುವುದು

ತಡಮೆ – ಚಡಮೆ, (ಹಡಮೆ ಎಂಬ ರೂಪ ಪುತ್ತೂರು ಕಡೆ ಇದೆ)

ತೆಲಿಕೆ – ಚೆಲಿಕೆ

ತಪ್ಪು – ಚಪ್ಪು, ಸಪ್ಪು

ತೋಜುಂಡು – ಚೋಜುಂಡು, ಸೋಜುಂಡು

ತಾಂಕ್‌ದಿನ – ಸಾಂಕ್‌ದಿನ

ತೈತಿನ – ಸೈತ್‌ನ

(ಎ) ಬಹುವಚನದ ತುಳು ಪ್ರತ್ಯಯ ಕಕಾರಗಕಾರಗಳು ಕೆಲವು ಕಡೆಗಳಲ್ಲಿ ಲೋಪವಾಗುವಂತೆ ಇಲ್ಲಿ ಆಗುವುದಿಲ್ಲ.

ಬಾಲೆಲು – ಬಾಳೆಗುಳು

ಕೈಕಂಜೆಲು – ಕೈಕಂಜಿಗುಳು

ಶಬ್ದೊಲು – ಶಬ್ದೊಗುಳು

(ಏ) ಇತರ ಕಡೆಗಳಲ್ಲಿನ ಪದಾಂತದ ಟಕಾರ ಇಲ್ಲಿಲ ಡಕಾರವಾಗುವುದು

ಎದ್‌ರ್‌ಟ್‌ಎದ್‌ರ್‌ಡ್‌

ಭಕ್ತಿಟ್ – ಭಕ್ತಿಡ್‌

(ಐ) ಕೆಲವು ಪದಗಳ ಮೊದಲಿನ ಸ್ವರಾಕ್ಷರ ಬರುತ್ತದೆ.

ನುಪ್ಪು – ಉನುಪ್ಪು

ದಕ್ಕ್‌ಅಡಕ್ಕ್

ದೆಂಗ್ – ಅಡೆಂಗ್

ಅಡೆಂಗ್ ಎನ್ನುವ ರೂಪ ಕನ್ನಡದ ಅಡಗು ಎಂಬುದಕ್ಕೆ ಹತ್ತಿರವಾಗಿದೆ.

(ಓ) ಕೆಲ ಸ್ವರಾದಿಯ ಪದಗಳ ಆದಿಗೆ ವ್ಯಂಜನವಾಗುವುದು

ಉಣಸ್ – ವಣಸ್

(ಔ) ಯಾನ್ ಎಂಬ ಸರ್ವನಾಮ್ ಏನ್ ಎಂದಾಗುತ್ತದೆ.

(ಅಂ) ‘ಸಾರ’ ಎಂಬ ಸರ್ವನಾಮ ಏನ್ ಎಂದಾಗುತ್ತದೆ.

(ಅಃ) ಪದಾಂತದ ಎಕಾರ ಆಕಾರವಾಗುತ್ತದೆ

ಕೇಣಿಯೆರೆ – ಕೇಣಿಯೆರೆ

ಉಪ್ಯೆರೆ – ಉಪ್ಯೆರ

(ಕ) ಪದ ಮಧ್ಯದ ಏಕಾರಕ್ಕೆ ವ್ಯಂಜನ ಬರುತ್ತದೆ.

ಬೂರೇದೆ – ಬೂರ್‌ದೇ

ಬರ್ಪೇದೆ – ಬತ್ತ್‌ದೆ

ಬೂರೇದೆ – ಬೂರ್‌ದ

(ಖ) ಪದದಾದಿಯ ಹ್ರಸ್ವ ದೀರ್ಘವಾಗುವುದು

ಮಳ್ವನ – ಮಾಳ್ವನ

ಮಳ್ಪಾವುಜಿ – ಮಾಳ್ವಾವುಜಿ

ಕನ್ನಡದ ಮಾಡು ಎಂಬ ರೂಪಕ್ಕೆ ಮಾಳ್ಪು ರೂಪ ಹತ್ತಿರವಿದೆ.

(ಗ) ಜಕಾರಕ್ಕೆ ದಕಾರಾವಾಗುತ್ತದೆ.

ಇಜ್ಜಿ – ಇದ್ದಿ

ಇಜ್ಯ – ಇದ್ದಿಯ

(ಘ) ಒಕಾರವು ಉಕಾರವಾಗುವುದು ಮಾತ್ರವಲ್ಲದೆ ಅಂತ್ಯದ ಅಕಾರಕ್ಕೆ ಒಕಾರ ಬರುತ್ತದೆ.

ಬೊಕ್ಕ – ಬುಕ್ಕೊ

(ಙ) ಪದದಾದಿಯ ಆಕಾರ ಏಕಾರವಾಗುವುದು

ದಂಡೊ – ದಂಡೊ

(ಚ) ಕೆಲವೆಡೆ ಪದದಾದಿಯ ಸ್ವರಲೋಪವಾಗಿ ವ್ಯಂಜನವಾಗುವುದು

ಉಗ್ಗೆಲ್ – ಗೂವೆಲ್

(ಛ) ಮಲೆಯಾಳ ಭಾಷೆಯಲ್ಲಿ ‘ಮದಿ’ ಎಂದರೆ ಸಾಕು, ಮುಗಿಸು ಎಂಬರ್ಥದಲ್ಲಿರುವ ಪದ ಇಲ್ಲಿ ‘ಮತಿ’ ಯಾಗುತ್ತದೆ. ಮತಿಮಾಳ್ತೆ, ಮತಿಯಾಂಡ್, ಮುಗಿಸಿದ, ಮುಗಿಯಿತು ಎಂಬ ಅರ್ಥದಲ್ಲಿ.

(ಜ) ಕಿನ್ನಿ, ಕಿಞ್ಞ ಎಂಬ ಪದ ಮಲೆಯಾಳದ ಸಂಪರ್ಕದಿಂದ ಕುಂಞ ಎಂದು ಪ್ರಯೋಗವಾಗುತ್ತದೆ.

ಕೋರಿದ ಕಿನ್ನಿ – ಕೋರಿದ ಕುಂಞ

ಇಲ್ಲಿ ಕುಂಞಣ್ಣ ಎಂಬ ಹೆಸರು ರೂಢಿಯಲ್ಲಿದೆ. ಮಲೆಯಾಳದ ಕುಂಞಂಬು, ಕುಂಞಿಮೋನು ಕುಂಞಿಕಣ್ಣ, ಈ ರೂಢಿಯ ಪದಗಳ ರೀತಿಯಲ್ಲಿ

(ಞ) ವಿನಯ ಹಾಗೂ ಸೌಜನ್ಯ ಸೂಚಕವೆಂದು ತೋರುವ ಮಂಗಳೂರು ಉಡುಪಿ ಕಡೆಗಳಲ್ಲಿ ರಾಗ ಯುಕ್ತವಾಗಿ ಮಾತನಾಡುವ ಧಾಟಿ ಇಲ್ಲಿ ಇಲ್ಲ.

ದಾsದಮಲ್ಪುನೀs -ದಾನೆ ಮಾಳ್ಪುನೆ – ಎಂಬಿಷ್ಟೇ ನೇರವಾಗಿ ಹೇಳುವ ಶೈಲಿ ಇಲ್ಲಿನದು. ಬಹುಶಃ ನಗರ ಜೀವನಕ್ಕೆ ಹತ್ತಿರದ ತುಳು ಹಾಗೂ ಗ್ರಾಮ ಜೀವನವನ್ನು ಸ್ಪರ್ಶಿಸುವ ತುಳು – ಇವುಗಳ ವ್ಯತ್ಯಾಸ ಇದಾಗಿರಬಹುದು.

ನಗರ ಜೀವನದವರ ಮಾತು ಗ್ರಾಮ ಜೀವನದವರ ಮಾತು ವ್ಯತ್ಯಾಸ ಇರಬಹುದು. ಹಸು ಮೃದುವಾದ ಹುಲ್ಲನ್ನು ಮೇಯುತ್ತದೆ; ಒಂಟೆಯೋ ಮುಳ್ಳನ್ನು ಜಗಿಯುತ್ತದೆ. ಕೋಮಲತೆಯನ್ನು ಇಚ್ಛಿಸುವ ಹಸುಕಂಟಕ ಲಂಪಟವಾದ ಒಂಟೆಯನ್ನು ಪರಿಹಾಸ್ಯ ಮಾಡುವುದೂ, ಮುಳ್ಳನ್ನು ಮುಟ್ಟಲು ಶಕ್ತಿಯಿಲ್ಲದ ಮೆದು ಹುಲ್ಲನ್ನು ಮೇಯುವ ಪಶುವನ್ನು ಒಂಟೆ ಹೀನೈಸುವುದೂ ಸರಿಯಲ್ಲ. ಇದರಲ್ಲಿ ಮದ್ಯಸ್ಥಿತಿಕೆಯೇ ಮೇಲಲ್ಲದೆ ಪಕ್ಷಪಾತ ಸರಿಯಲ್ಲ – ಹಾಗೆ ಒಂದು ಕಡೆಯವರ ಮಾತಿಗೆ ಇನ್ನೊಂದು ಕಡೆಯವರು ಹೀನೈಸುವುದು ಬಿಟ್ಟು ಅವರವರ ಸಂಸ್ಕೃತಿಯ ಸಾರ ಅವರವರ ಮಾತಿನಲ್ಲಿ ಕೃತಿಯಲ್ಲಿ ಎದ್ದು ತೋರುವುದನ್ನು ಗುರುತಿಸಿ ಅದನ್ನು ಅರ್ಥಮಾಡಿಕೊಂಡು ಅನ್ಯೋನ್ಯತೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ.

ಇಷ್ಟಾದರೂ, ಅರ್ಧ ಶತಮಾನದಿಂದ ಈಚೆಗೆ ತುಳು ಮಾತು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಏಕರೂಪತೆಯನ್ನೇ ತಾಳುತ್ತಿರುವುದು ಗಣನೀಯ ವಿಷಯ. ಉಡುಪಿಯಿಂದ ಕಾಸರಗೋಡಿನವರೆಗೆ, ಬೊಂಬಾಯಿಯಿಂದ ಬೆಂಗಳೂರಿನವರೆಗೂ ಸಂಚಾರ ಸೌಕರ್ಯ ಹೆಚ್ಚುತ್ತಾ ಬಂದಿರುವುದು, ಅಲ್ಲಿಂದ ಇಲ್ಲಿವರೆಗೆ ಸಾಂಸಾರಿಕ ಕೊಳ್ಕೊಡುಗೆಯ ಸಂಬಂಧ ದಿನನಿತ್ಯ ಹೆಚ್ಚುತ್ತಿರುವುದು ಈ ಎಲ್ಲಾ ಪ್ರಭೇದಗಳ ಏಕರೂಪತೆಯನ್ನು ಸಾಧಿಸಲು ಸಹಾಯಕಗಳಾಗಿವೆ. ಇಂದಿನೀ ಏಕರೂಪತೆಯ ಸಾಧನೆಯನ್ನು ಇನ್ನಷ್ಟು ದೃಢಗೊಳಿಸುವುದು ನಮ್ಮೆಲ್ಲರ ಕರ್ತವ್ಯ.

ತುಳು ಭಾಷೆಯ ಏಕರೂಪದ ಈ ಸಂಯೋಜನೆ ಶಾಸ್ತ್ರೀಯವಾಗಿ ನಡೆಯಬೇಕಾಗಿದೆ. ಈ ಬಗ್ಗೆ ಸಮಗ್ರ ತುಳುನಾಡಿನ ಭಾಷಾವಿದರು ಒಟ್ಟು ಸೇರಿ ವಿಚಾರ ವಿನಿಮಯ ನಡೆಸುವುದು ಅಗತ್ಯ. ಈ ವಿಚಾರ ವಿನಿಮಯದಲ್ಲಿ ಮಥಿತವಾಗಿ ಮೂಡಿಬಂದ ಒಂದು ರೂಪವನ್ನು ಎಲ್ಲರೂ ಬಳಸಲು, ಬೆಳೆಸಲು ಅನುಕೂಲವಾಗುವುದು. ಇಂದು ಜನಪ್ರಿಯವಾಗುತ್ತಿರುವ ತುಳುನಾಟಕಗಳು, ತುಳು ಪತ್ರಿಕಾ ಲೇಖನಗಳು, ಮಂಗಳೂರು ಆಕಾಶವಾಣಿಯ ತುಳು ಕಾರ್ಯಕ್ರಮಗಳು ತುಳುಭಾಷೆಯನ್ನು ಏಕರೂಪತೆಗೆ ತರುವರೆ ನಮಗೆ ನೆರವಾಗುವುವು.

ಇಂದು ಕೇರಳದಲ್ಲಿ ಕೊಂಕಣಿ ಮಾತೃಭಾಷೆಯ ಮಕ್ಕಳಿಗೆ ಪ್ರಾಥಮಿಕ ವಿದ್ಯೆಯನ್ನು ಅವರ ಮಾತೃಭಾಷೆಯಲ್ಲಿ ಒದಗಿಸಲು ಸರಕಾರ ಒಪ್ಪಿಕೊಂಡಿದೆ. ಕೊಂಕಣಿ ಭಾಷೆಗೆ ಭಾರತದ ಅಧಿಕೃತ ಭಾಷಾ ವರ್ಗದಲ್ಲಿ ಸ್ಥಾನ ದೊರೆತುದೂ ಈ ಮನ್ನಣೆಗೆ, ಸರ್ವಥಾ ಪಡೆಯಲೇಬೇಕಾಗಿದೆ. ತುಳುನಾಡಿನ ಜನರ ಮಕ್ಕಳಿಗೆ ಇಲ್ಲಿಯೂ ಅವರ ತಾಯ್ನುಡಿಯಲ್ಲಿಯೇ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಸರಕಾರ ಅನುಕೂಲ ಕಲ್ಪಿಸುವುದು ಅವಶ್ಯ. ಆಗ ತುಳುಭಾಷೆಗೂ ಒಂದು ಸುಂದರ ರೂಪ ಸಿದ್ಧಿಸೀತು. ಪರುಷಾಕ್ಷರಗಳಿಂದಲೂ ಮಹಾಪ್ರಾಣಾಕ್ಷರಗಳಿಂದಲೂ ವಿರಹಿತವಾಗಿ, ದ್ರಾವಿಡ ಭಾಷಾ ವರ್ಗದಲ್ಲಿ ಅತ್ಯಂತ ಚೆಲುವಾದದೆಂದು ಕಾಲ್ಡ್‌ವೆಲ್‌ನಂತಹ ಭಾಷಾ ಶಾಸ್ತ್ರಜ್ಞರಿಂದ ಮುಕ್ತ ಕಂಠ ಪ್ರಶಂಸಿತವಾದ ತುಳು ಭಾಷೆಯ ಸೌಂದರ್ಯ ಇನ್ನಷ್ಟು ಹೆಚ್ಚೀತು.