ದಕ್ಷಿಣ ಕನ್ನಡದಷ್ಟು ದಾಕ್ಷಿಣ್ಯವುಳ್ಳ ಪ್ರದೇಶ ಪ್ರಾಯಶಃ ಭಾತರದ ಬೇರೆಲ್ಲಿಯೂ ಇರಲಾರದು. ಎಷ್ಟು ಭಾಷೆಗಳು ಈ ನೆಲದಲ್ಲಿ ಬೆಳೆದುಬಂದಿವೆ! ಬಹಳ ಹಿಂದಿನಿಂದಲೂ ಕರ್ನಾಟಕ ರಾಜ್ಯಕ್ಕೆ ಸೇರಿದ ಈ ಭಾಗವನ್ನು ಕನ್ನಡ ಜಿಲ್ಲೆ ಎಂದರೂ, ಅದು ವಿದೇಶೀಯ ಬಾಯಲ್ಲಿ ಕೆನರಾ ಎಂದಾದರೂ, ನಾಡವರು ತುಳುನಾಡು ಎಂದರೂ – ಎಲ್ಲ ಸರಿಯೆ. ಹೆಸರಿಗಾಗಿ ಹೊಡೆದಾಡಿದವರು ಈ ನಾಡವರಲ್ಲ. ಇದು ಅವರ ಸೌಜನ್ಯದ, ಸಮರಸದ ಮನೋವೃತ್ತಿ.

ಈ ಪ್ರದೇಶದಲ್ಲಿರುವ ಮುಖ್ಯ ಭಾಷೆಗಳು – ತುಳು ಕನ್ನಡ, ಕೊಂಕಣಿ; ಇನ್ನು ಮಲೆಯಾಳ, ಮರಾಠಿ, ತಮಿಳು, ತೆಲುಗು, ಉರ್ದು (ಹಿಂದೂಸ್ಥಾನೀ), ಗುಜರಾಥಿ ಭಾಷೆಗಳನ್ನಾಡುವ ನಿವಾಸಿಗಳು ಇಲ್ಲಿ ಸಾಕಷ್ಟು ಮಂದಿ ಇರುತ್ತಾರೆ. ಒಂದು ಭಾಷೆಯ ಜನ ಮತ್ತೊಂದು ಭಾಷೆಯ ಜನವನ್ನು ಭಾಷಾ ದ್ವೇಷ ವ್ಯಾಮೋಹಗಳಿಂದ ವಿರೋಧಿಸುವುದು ಇಲ್ಲವೆಂದರೆ ಅತಿಶಯೋಕ್ತಿಯಾಗದು. ಭಾಷೆಯ ತಳಹದಿಯಿಂದ ಬೆಳೆದ ಸಂಕುಚಿತ ಭಾವನೆ ಇಲ್ಲಿರುವುದಿಲ್ಲ.

ದಕ್ಷಿಣ ಕನ್ನಡದವರಿಗೆ ಭಾಷೆಗಳನ್ನು ಕಲಿಯಬೇಕೆಂಬ ಅಪೇಕ್ಷೆ ಹೆಚ್ಚು. ಇಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ನಗರದಲ್ಲಿ ಹೆಚ್ಚಿನ ವ್ಯವಹಾರಗಳೆಲ್ಲ ಕನ್ನಡದಲ್ಲಿ ಸಾಗುವುದರಿಂದ, ಶಾಲೆಗಳಲ್ಲಿ ಕನ್ನಡವೇ ಮಾಧ್ಯಮವಾಗಿರುವುದರಿಂದ, ಪಟ್ಟಣಿಗರಿಗೆ ಹಾಗೂ ಸಾಮಾನ್ಯವಾಗಿ ಓದುಬರಹ ಬರುವವರಿಗೆ ಕನ್ನಡ ಬಂದೇ ಬರುತ್ತದೆ. ತಾಯ್ನುಡಿ ಹೇಗೂ ಗೊತ್ತಿರುತ್ತದೆ. ಆದುದರಿಂದ ಹೆಚ್ಚಿನ ಜನಕ್ಕೆ ಎರಡು ಭಾಷೆಗಳಲ್ಲಿ ವ್ಯವಹರಿಸುವ ಸಾಮರ್ಥ್ಯವಿದ್ದೇ ಇರುತ್ತದೆ. ಕನ್ನಡ ತಾಯ್ನುಡಿಯಾಗಿರುವವರಿಗೆ  ತುಳು ಗೊತ್ತಿರುತ್ತದೆ. ತುಳುವಿನಲ್ಲಿ ಮಾತನಾಡಲು ಬಾರದಿದ್ದರೆ, ಎಷ್ಟೋ ಕಷ್ಟ. ಓದುಬರಹ ಬಾರದ ಹಳ್ಳಿಗರಲ್ಲಿ ಹೆಚ್ಚಿನವರ ತಾಯ್ನುಡಿ ತುಳು. ತುಳುವನ್ನು ಬಿಟ್ಟರೆ ಅವರಿಗೆ ಬೇರೆ ಭಾಷೆ ಗೊತ್ತಿಲ್ಲ. ಅವರೊಡನೆ ವ್ಯವಹರಿಸಬೇಕಾದರೆ ತುಳು ಗೊತ್ತಿರಬೇಕಾಗುತ್ತದೆ. ಆದರೆ ಇತ್ತೀಚೆಗೆ ಹಳ್ಳಿಗಳಲ್ಲಿ ಕಡ್ಡಾಯ ಪ್ರಾಥಮಿಕ ಶಿಕ್ಷಣವಿರುವುದರಿಂದ ನಿರಕ್ಷರತೆ ಮಾಯವಾಗುವ ಸಂದರ್ಭ ಒದಗಿಬರುವುದು. ಹೀಗೆ ಎಲ್ಲರೂ ದ್ವಿಭಾಷಿಗಳಾಗುವರು.

ಉಡುಪಿಯ ಉತ್ತರ ಭಾಗ, ಕುಂದಾಪುರ – ಈ ಪ್ರದೇಶಗಳ ಹಳ್ಳಿಗಳಲ್ಲಿ ತುಳು ಇರುವುದಿಲ್ಲ. ಅಲ್ಲಿ ಎಲ್ಲರೂ ಕನ್ನಡವನ್ನೇ ಆಡುತ್ತಾರೆ. ಜಿಲ್ಲೆಯ ಮಿಕ್ಕ ತಾಲೂಕುಗಳಲ್ಲಿ ಎಲ್ಲ ಹಳ್ಳಿಗಳಲ್ಲಿ ತುಳುವೇ ಸರ್ವತ್ರ ಬಳಕೆಯಲ್ಲಿರುವ ಭಾಷೆ. ತುಳುವಿನ ಒಲವಿನ ಹಿಡಿತ ಜನರ ಮೇಲೆ ಎಷ್ಟೆಂದರೆ, ತುಳು ಕನ್ನಡ ಗೊತ್ತಿರುವವರಾಗಿದ್ದರೆ. ತುಳುವಿನಲ್ಲಿ ಮಾತನಾಡಲು ಜನ ಮೆಚ್ಚುತ್ತಾರೆ. ಅದೇನೋ ತುಳುವಿನಲ್ಲಿ ಮಾತನಾಡಿದರೆ ಅದರಲ್ಲೊಂದು ಆತ್ಮೀಯತೆ ಮೂಡಿಬರುತ್ತದೆ. ಇಂದಿಗೂ ಸರಿಯಾಗಿ ತುಳು ಮೆಯ್ಗೂಡಿದವನಿಗೆ ‘ಏನ್ರೀ ಹೆಂಗಿದ್ದೀರಿ, ಚೆನ್ನಾಗಿದ್ದೀರೋ’ ಎಂಬುದಕ್ಕಿಂತ ‘ದಾನೆಯೇ ಎಂಚ ಉಳ್ಳಾರ್, ಮಂತ ಪೊರ್ಲತ್ತೆ’ ಎಂಬ ಮಾತು ಹೆಚ್ಚು ಹಿತವಾಗಿರುತ್ತದೆ.

ಇನ್ನು ಈ ಭಾಷೆಗಳ ಮಟ್ಟಿಗೆ ಕೆಲವು ವಿವರಗಳು, ಕನ್ನಡ ಎಂದರೆ ಮೈಸೂರಿನಲ್ಲಿ ಮಾತನಾಡುವ ಸಂಭಾಷಣಾ ರೂಪದ ಕನ್ನಡವನ್ನು ದಕ್ಷಿಣ ಕನ್ನಡ ಜನ ಮಾತನಾಡುವುದು ಕಡಿಮೆ. ಸ್ವಲ್ಪ ಮಟ್ಟಿಗೆ ಪುಸ್ತಕದ ಕನ್ನಡದಂತೆ ಅದಿರುತ್ತದೆ. ಮೈಸೂರತ್ತ ‘ನೋಡ್ಕೊಂಡು ಹೋಗೋಣಾಂತ ಬಂದೆ’ ಎಂದರೆ, ಇಲ್ಲಿ ‘ನೋಡಿಕೊಂಡು ಹೋಗುವ ಎಂತ (ಅಂತ) ಬಂದಿದ್ದೇನೆ’ ಎಂಬುದಾಗಿ ಬಿಡಿಬಿಡಿಯಾಗಿ ಆಡುವರು. ಇನ್ನು ಮನೆಮಾತು ಕನ್ನಡ ಎಂಬವರು ಕನ್ನಡದ ವಿವಿಧ ಉಪಭಾಷೆಗಳನ್ನು ಆಡುತ್ತಾರೆ. ಜಾತಿಗೊಂದು ಭಾಷೆ ಎಂಬಂತಿದೆ ಇವುಗಳ ವೈವಿಧ್ಯ. ಹವ್ಯಕರಿಗೊಂದು ಕನ್ನಡ, ಕೋಟ, ಕೋಟೇಶ್ವರದವರಿಗೊಂದು ಕನ್ನಡ, ಗೌಡರಿಗೊಂದು ಕನ್ನಡ, ಕೋಟೆಯವರಿಗೊಂದು ಕನ್ನಡ, ಹರಿಜನರಲ್ಲಿ ಬೈರರೆಂಬವರಿಗೊಂದು ಕನ್ನಡ, ಇನ್ನೆಷ್ಟೊ ಕನ್ನಡಗಳು. ಒಂದು ಕನ್ನಡ ಗೊತ್ತಿರುವವನಿಗೆ ಸುಲಭವಾಗಿ ಇನ್ನೊಂದು ಕನ್ನಡ ಗೊತ್ತಾಗುವಂತಿಲ್ಲ. ಪರಸ್ಪರ ತಿಳುವಳಿಕೆಯಾಗದು. ಕವಿರಾಜಮಾರ್ಗಕಾರ ಹೇಳಿದ ‘ವಾಸುಕಿಯ ಬೇಸಱುಗುಂ ದೇಶಿ ಬೇಱಿವೇಱಪ್ಪುದಱಿಂ’ ಎಂಬ ಮಾತು ನೆನಪಿಗೆ ಬರುತ್ತದೆ. ಈ ದೇಶಿಗರ ಗೊಂದಲದಿಂದ ವಾಸುಕಿ ನಾಗನಿಗೂ ತಲೆಭಾರವಂತೆ. ಅಂದರೆ ಶತಮಾನಗಳ ಹಿಂದೆಯೇ ನಮ್ಮ ದೇಶಿಗಳ ವೈವಿಧ್ಯ ಅಷ್ಟಿತ್ತು. ಯಾರಿಗೆ ತಲೆನೋವಾದರೂ, ದೇಶಿಗಳ ದೇಶಿ ಅವನ್ನಾಡುವವರಿಗೆ ಬೇಕಿತ್ತು. ಅಂತೆಯೇ ಅವುಗಳ ವ್ಯಕ್ತಿತ್ವ ಉಳಿದುಬಂದಿರುವುದು ಸೋಜಿಗ. ಜನತೆಯ ಆತ್ಮೀಯ ಅಭಿಮಾನವೇ ಅವುಗಳ ಉಳಿವಿಗೆ ಕಾರಣವಿರಬಹುದು.

ಈ ಭಾಷೆಗಳಲ್ಲಿ ಅಥವಾ ಕನ್ನಡದ ಉಪಭಾಷೆಗಳಲ್ಲಿ ಅನೇಕ ಪ್ರಾಚೀನ ರೂಪಗಳೂ ಪ್ರಯೋಗಗಳೂ ಇನ್ನೂ ಇರುತ್ತವೆ. ಆದುದರಿಂದ ಭಾಷಾಶಾಸ್ತ್ಯಾಭ್ಯಾಸಿಗಳಿಗೆ ಇವು ಒಂದು ಚಿನ್ನದ ಗನಿ. ಪಂಪ ‘ಕೂಸು’ ಎಂಬ ಪದವನ್ನು ‘ಹೆಣ್ಣು ಮಗು’ ಎಂಬರ್ಥದಲ್ಲಿ ಪ್ರಯೋಗಿಸಿದ್ದಾನೆ. ಹವ್ಯಕ ಕನ್ನಡದಲ್ಲಿ ಇಂದಿಗೂ ಇದೇ ಅರ್ಥದಲ್ಲಿ ‘ಕೂಸು’ ಪದ ಉಪಯೋಗವಿದೆ. ಇಂಥ ಅನೇಕ ಶಬ್ದಗಳನ್ನು ಇಲ್ಲಿನ ಪ್ರಾದೇಶಿಕ ಹಳಗನ್ನಡದಲ್ಲಿ ಕಾಣಬಹುದು. ತುಲನಾತ್ಮಕ ಅಭ್ಯಾಸಕ್ಕೆ ಇಲ್ಲಿ ಸಾಕಷ್ಟು ದ್ರವ್ಯವುಂಟು.

ತುಳುವಿನಲ್ಲಿ ಅನೇಕ ಪ್ರಭೇದಗಳಿವೆ. ಬ್ರಾಹ್ಮಣ ತುಳು, ಅಬ್ರಾಹ್ಮಣ ತುಳು, ಉಡುಪಿ ತುಳು, ಮಂಗಳೂರು ತುಳು, ಪುತ್ತೂರು ತುಳು, ಕಾರ್ಕಳ ತುಳು, ಕಾಸರಗೋಡು ತುಳು ಇತ್ಯಾದಿಯಾಗಿ ಜಾತಿ – ಪ್ರದೇಶ ವ್ಯತ್ಯಾಸಗಳು. ‘ತಲೆ’ಗೆ – ಒಂದೆಡೆ ತುಳುವಿನಲ್ಲಿ ‘ತರೆ’ ಇನ್ನೊಂದೆಡೆ ‘ಸರೆ’ ಮತ್ತೊಂದೆಡೆ ‘ಹರೆ’, ‘ಬೇಲಿ’ಗೆ-‘ತಡಮೆ’, ‘ಸಡಮೆ’, ‘ಹಡಮೆ’. ಬ್ರಾಹ್ಮಣ ತುಳುವಿನಲ್ಲಿ ‘ಏನು’ ಎಂಬುದಕ್ಕೆ ‘ಜಾನೆ’, ಇತರರಲ್ಲಿ  ‘ದಾನೆ’. ಇಲ್ಲಿ ಧ್ವನಿ-ಸಾದೃಶ್ಯಗಳ ಮಹತ್ವವನ್ನು ಗಮನಿಸಬಹುದು. ಬ್ರಾಹ್ಮಣರ ತುಳುವಿನಲ್ಲಿ ಸಂಸ್ಕೃತದ ಎರವು ಹೆಚ್ಚು. ಅವರ ‘ಊಟ ಆಯಿತೋ’ ಎಂಬಲ್ಲಿ ‘ಆಶನ ಆನೊ’ ಎಂದರೆ ಇತರರು ‘ಒಣಸ್‌ಆಂಡೊ’ ಎನ್ನುತ್ತಾರೆ.

ತುಳು ಬಹಳ ನಾಜೂಕಾದ ಭಾಷೆ. ಎಂಥ ಗಹನ ವಿಷಯವನ್ನಾದರೂ ಶಬ್ದ ದಾರಿ‌ದ್ಯ್ರವಿಲ್ಲದೆ ಲಲಿತವಾಗಿ ತುಳುವಿನಲ್ಲಿ ಹೇಳಲು ಬರುತ್ತದೆ. ಉತ್ತಮ ಜನಪದ ಗೀತೆಗಳೂ ಕತೆಗಳೂ ತುಳುವಿನಲ್ಲಿವೆ. ರಸವತ್ತಾದ ಯಕ್ಷಗಾನ ಪ್ರಸಂಗಗಳು ತುಳುವಿನಲ್ಲಿ ರಚಿತವಾಗಿವೆ. ಚಲನಚಿತ್ರಗಳಿವೆ. ತುಳು ವಾರ್ತಾ ಪತ್ರಿಕೆಗಳಿವೆ. ತುಳುವನ್ನು ಬರೆಯಲು, ಕನ್ನಡ ಲಿಪಿಯನ್ನು ಬಳಸುತ್ತಾರೆ. ಜ್ಞಾನದ ಮಿಠಾಯಿಗಳಂತಿರುವ ಸ್ವಾರಸ್ಯವಾದ ಗಾದೆಗಳಿವೆ. ಇತರ ಪ್ರಮುಖ ದ್ರಾವಿಡ ಭಾಷೆಗಳಲ್ಲಿರುವ ದೇಶ್ಯ ಪದಗಳಿಗೆ ತುಳುವಿನಲ್ಲಿ ಜ್ಞಾತಿ ಪದಗಳು ಲಭಿಸುತ್ತವೆ. ದ್ರಾವಿಡ ನುಡಿಯ ವೈಲಕ್ಷಣಗಳಲ್ಲಿ ಮುಖ್ಯವಾಗಿರುವ, ಉತ್ತಮ ಪುರುಷ ಬಹುವಚನದ ಎರಡು ಪ್ರಭೇದಗಳು ತುಳುವಿನಲ್ಲಿ ಇಂದಿಗೂ ಇವೆ; ‘ನಮೊ’ (ಎದುರಿಗಿರುವವರನ್ನು ಸೇರಿಸಿ ಹೇಳುವ ಪದ – ‘ನಾಮ’ ಎಂಬರ್ಥದಲ್ಲಿ). ‘ಎಂಕುಳು’ (ಎದುರಿಗಿರುವವರನ್ನು ಸೇರಿಸದೆ ಹೇಳುವ ಪದ – ‘ನಾವು’ ಎಂಬರ್ಥದಲ್ಲಿ). ಎಂದಿನ ಕನ್ನಡದಲ್ಲಿ ಈ ಚೆಂದ ಹಾಗೂ ಉಪಯುಕ್ತ ವ್ಯತ್ಯಾಸವನ್ನು ಸೂಚಿಸುವಂತಿಲ್ಲ. ಎರಡು ಸಂದರ್ಭದಲ್ಲಿಯೂ ‘ನಾವು’ ಎಂದೇ ಹೇಳಬೇಕಾಗಿದೆ. ಹಳಗನ್ನಡದಲ್ಲಿ ‘ಆಮ್‌’ ‘ನಾಮ್’ ಎಂಬೆರಡು ರೂಪಗಳೂ ಇದ್ದುವು. ಹವ್ಯಕ ಕನ್ನಡದಲ್ಲಿ ಈ ರೂಪಗಳು ಎಂದಿಗೂ ಇವೆ; ‘ನಾವು’, ‘ಎಂಗೊ’.

ತುಳು ಭಾಷೆ ಕನ್ನಡ ಜಿಲ್ಲೆಯಲ್ಲಿ ಅನೇಕ ಮತೀಯರ ತಾಯ್ನುಡಿ. ಶಿವಳ್ಳಿ, ಶಿಬ್ರಾಹ್ಮಣರು, ಬಂಟರು, ಗೌಡರು, ಜೈನರು, ಬಿಲ್ಲವರು, ಮೂಲಿಗರು, ಗಾಣಿಗರು, ಪ್ರೊಟೆಸ್ಟಂಟ್‌ಕ್ರೈಸ್ತರು, ಮೇರರು ನಲಿಕೆಯವರು, ಮನ್ಸರು-ಇವರಲ್ಲಿ ಬಹುಮತ ತುಳು ಮನೆಮಾತುಳ್ಳವರು.

ಕೊಂಕಣಿ ಭಾಷೆಯ ಸ್ಥಾನಮಾನಗಳನ್ನು ಇಂದು ಭಾರತ ಸರಕಾರವೇ ಒಪ್ಪಿಕೊಂಡು ಅದನ್ನು ಗೌರವಿಸಿದೆ. ಗೌಡಸಾರಸ್ವತರು, ಸಾರಸ್ವತರು, ರೋಮನ್ ಕಥೋಲಿಕರು ಮುಖ್ಯವಾಗಿ ಕೊಂಕಣಿಯನ್ನಾಡುತ್ತಾರೆ. ಈ ಮೂರು ಪಂಗಡಗಳಾಡುವ ಕೊಂಕಣಿಗಳೊಳಗೆ ಅಲ್ಪಸ್ವಲ್ಪ ವ್ಯತ್ಯಾಸಗಳಿರುವುವು. ಸಾರಸ್ವತರು ಏನು ಎಂಬಲ್ಲಿ ‘ಕಸಲೆ’ ಎಂದರೆ, ಕೆಥೋಲಿಕರು ‘ಕಹಲೆ’ ಎನ್ನುತ್ತಾರೆ. ಇಂಥ ಕೆಲವು ಶಬ್ದರೂಪ ವ್ಯತ್ಯಾಸಗಳುಂಟು. ಇಲ್ಲಿನ ಕೊಂಕಣಿಯ ಮೇಲೆ ಕನ್ನಡದ ಪ್ರಭಾವವಿದೆ. ಕೊಂಕಣಿ ಮಾತನಾಡುವಾಗ ಹೆಚ್ಚಾಗಿ ಸಂಖ್ಯೆಗಳನ್ನು ಕನ್ನಡದಲ್ಲೇ ಹೇಳುತ್ತಾರೆ. ಇಂಥ ಸ್ವಾರಸ್ಯಗಳು ಹಲವಿವೆ.

ಈಗ ಕೊಂಕಣಿಯಲ್ಲಿ ಸಾಹಿತ್ಯ ರಚನೆಯಾಗುತ್ತಿದೆ. ವೃತ್ತಪತ್ರಿಕಗಳಿವೆ. ಚಲನಚಿತ್ರಗಳು ತಯಾರಾಗುತ್ತಿವೆ. ಕೊಂಕಣಿ ಭಾಷೆಯ ವಿಷಯವಾಗಿ ಸಂಶೋಧನೆಗಳು ನಡೆಯುತ್ತವೆ. ಕೊಂಕಣಿ ಕ್ಷೇತ್ರ ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ.  ಪಶ್ಚಿಮ ಕರಾವಳಿಯ ಉದ್ದಕ್ಕೂ ಅಗಲಕ್ಕೂ ಕೊಂಕಣಿ ಜನ ನೆಲಸಿರುತ್ತಾರೆ. ಅವರು ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಬಹಳ ಮುಂದುವರಿದ ಜಾಗೃತ ಜನಾಂಗ.

ಕೊಂಕಣಿಯನ್ನು ಬಹಳ ಮಟ್ಟಿಗೆ ಹೋಲುವ (ಕೊಂಕಣಿಯ ಒಂದು ಪ್ರಭೇದವೊ ಏನೊ) ಒಂದು ಭಾಷೆಯನ್ನು ನವಾಯಿತರೆಂಬ ಮುಸ್ಲಿಮ ಪಂಗಡದವರು ಆಡುತ್ತಾರೆ. ಇವರು ಅಧಿಕ ಸಂಖ್ಯೆಯಲ್ಲಿರುವುದು ಭಟ್ಕಳದಲ್ಲಿ. ಇವರು ಭಟ್ಕಳಕ್ಕೆ ಬಂದ ಹೊಸತಿನಲ್ಲಿ (ಶತಮಾನಗಳ ಹಿಂದೆ) ಜನರು ಇವರನ್ನು, ಹೊಸತಾಗಿ ಬಂದವರೆಂಬರ್ಥದಲ್ಲಿ ‘ನವಾಯತರು’ ಎಂದು ಕರೆದರೊ ಏನೋ? ಕೊಂಕಣಿಯನ್ನು ಬರೆಯಲು ಹೆಚ್ಚಾಗಿ ದೇವನಾಗರಿ ಅಥವಾ ಕನ್ನಡ ಲಿಪಿಯನ್ನು ಬಳಸುತ್ತಾರೆ.

ಬಹಳ ವರ್ಷಗಳಿಂದ ಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಬ್ಯಾರಿಗಳೆಂಬ ಮುಸ್ಲಿಮ ಪಂಗಡದವರು ಮಲೆಯಾಳವನ್ನಾಡುತ್ತಾರೆ. ಇವರು ತೆಂಕಣ ಕೇರಳದಿಂದ ಇತ್ತ ವಲಸೆ ಬಂದವರಿರಬೇಕು. ಇವರ ಮುಖ್ಯ ಉದ್ಯೋಗ ವ್ಯಾಪಾರ ವ್ಯಾಪಾರಿಗಳಾದುದರಿಂದ, ‘ವ್ಯಾಪಾರಿ’ ಪದದ ತದ್ಭವವಾದ ‘ಬ್ಯಾರಿ’ ಪದ ಬಂದಿರಬೇಕು. ವೃತ್ತಿ ವಾಚಕ ಜಾತಿಪದವಾಗಿದೆ ಈ ಪದ. ಇವರಾಡುವ ಮಲೆಯಾಳ ಕೇರಳದ ಮಲೆಯಾಳದಿಂದ ಒಂದಿಷ್ಟು ಭಿನ್ನವಾಗಿದೆ. ಇವರು ‘ತಾಯಿ’ ಎಂಬ ಪದಕ್ಕೆ ‘ಉಮ್ಮ’ ಎಂದರೆ, ಕೇರಳದವರು ‘ಅಮ್ಮೆ’ ಎನ್ನುವರು. ಹೀಗೆಯೇ ಅನೇಕ ವ್ಯತ್ಯಾಸಗಳಿವೆ. ಇವರಲ್ಲದೆ, ಮಲೆಯಾಳ ತಾಯ್ನುಡಿಯಾಗಿರುವ ಬಿಲ್ಲವರೂ, ಬೆಸ್ತರೂ, ಮರ, ಕಲ್ಲು ಕೆಲಸಗಳನ್ನು ಮಾಡುವ ಕುಶಲಕರ್ಮಿಗಳು ಇರುತ್ತಾರೆ. ಮಲೆಯಾಳವನ್ನಾಡುವ ಮಾಯಿಲರೆಂಬ  ಹರಿಜನರೂ ಕನ್ನಡ ಜಿಲ್ಲೆಯಲ್ಲಿ ಇದ್ದಾರೆ.

ತಮಿಳು ತೆಲಗು ಭಾಷೆಗಳನ್ನಾಡುವವರು ಅಷ್ಟಾಗಿ ಈ ಜಿಲ್ಲೆಯಲ್ಲಿ ನೆಲೆಸಿಲ್ಲ. ಅಲ್ಲೊಂದು, ಇಲ್ಲೊಂದು ಹಿಂದಿನಿಂದಲೇ ನೆಲೆಸಿದ ತಮಿಳು ಅಥವಾ ತೆಲುಗು ಕುಟುಂಬ ಇರಬಹುದು. ಆದರೆ ಈ ಶತಮಾನದ ಎರಡನೇ ದಶಕದಿಂದ ನಗರ ಪಟ್ಟಣಗಳಲ್ಲಿ ವಾಣಿಜ್ಯಕ್ಕಾಗಿ ಈ ಜನ ಬಂದು ನೆಲಸಿರುತ್ತಾರೆ.

ಮರಾಠಿ ಉಪಭಾಷೆಗಳನ್ನಾಡುವವರು ದಕ್ಷಿಣ ಕನ್ನಡದಲ್ಲಿ ಬಹಳ ಜನ ಇರುತ್ತಾರೆ. ಕರಾಡ, ಚಿತ್ಪಾವನರು ಹಾಗೂ ಮರಾಟಿಗಳೆಂದೆನಿಸಿಕೊಳ್ಳುವ ನಾಯಕ ಜನರು ಮರಾಠಿಯ ಉಪಭಾಷೆಗಳನ್ನಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉರ್ದು ಅಥವಾ ಹಿಂದೂಸ್ಥಾನಿ ಭಾಷೆಯನ್ನಾಡುವವರು ಹೆಚ್ಚಾಗಿ ಮುಸ್ಲಿಮರು. ಇವರನ್ನು ತಪ್ಪಾಗಿ ತುರ್ಕರು ಎಂಬುದಾಗಿ ಕರೆಯುವ ಪರಿಪಾಠವಿತ್ತು. ಸಾಯಿಬರೆನ್ನುವುದೂ ಉಂಟು. ಈಗ ಕರ್ಣಾಟಕ ರಾಜ್ಯದಲ್ಲಿ ದೊಡ್ಡ ಅಧಿಕಾರಿಗಳನ್ನು ಸಾಹೇಬರು ಎಂಬುದಾಗಿ ಕೆಳಗಿನ ನೌಕರರು ಹೇಳುವುದಿದೆ. ಇವರು ಸಾಯಿಬರಲ್ಲ, ಸಾಹೇಬರು.

ಮಂಗಳೂರಿನಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಗುಜರಾಥಿಗಳು ಹೆಸರಾಂತವರು. ಅವರು ಕುಟುಂಬ ಸಮೇತರಾಗಿ ಇಲ್ಲಿ ನೆಲೆಸಿರುತ್ತಾರೆ. ಅವರ ಸಂಪರ್ಕವಿಟ್ಟುಕೊಂಡವರು ಅವರೊಡನೆ ಗುರುರಾಥಿಯಲ್ಲಿ ವ್ಯವಹರಿಸುತ್ತಾರೆ. ಅವರೂ ಕನ್ನಡ ಬಲ್ಲವರಿದ್ದಾರೆ. ಅಂತೂ ಮಂಗಳೂರಿನ ಬಂದರದಲ್ಲಿ ಗುಜರಾಥಿ ಗಾಳಿ ಬೀಸುತ್ತಿದೆ. ದೇಶಕ್ಕೆ ಸ್ವಾತಂತ್ಯ್ರ ಬಂದಂದಿನಿಂದ ಪಟ್ಟಣಗಳಲ್ಲಿ ಹಿಂದಿ ಪ್ರಚಾರ ಕ್ರಮೇಣ ವರ್ಧಿಸುತ್ತಲಿದೆ. ಪಟ್ಟಣಿಗರಾದ ವ್ಯಾಪಾರಿಗಳು ಹಿಂದಿ ಹಿಂದೂಸ್ಥಾನಿಗಳಲ್ಲಿ ವ್ಯವಹರಿಸಬಲ್ಲರು. ಅವರೆ ಎಲ್ಲ ನಾಗರಿಕ ಜನ ಹಿಂದಿ ಬಲ್ಲವರೆಂತಿಲ್ಲ. ಕನ್ನಡದ ಕತ್ತನ್ನು ಎಲ್ಲಿ ಹಿಂದಿ ಹಿಸುಕಿಬಿಡುವುದೊ ಎಂಬ ಪ್ರಾಮಾಣಿಕ ಭಯ ಕೆಲವೆಡೆ ಉಂಟು. ಇಲ್ಲಿ ರಾಜಕೀಯದ ಚದುರಂಗವೂ ಇದೇ ಇದೆ.

ಏನೇ ಇರಲಿ, ದಕ್ಷಿಣ ಕನ್ನಡ ಭಾಷೆಗಳ ಆಡುಂಬೊಲ, ಎಲ್ಲ ಭಾಷೆಗಳಿಗೂ ಸುಸ್ವಾಗತ. ಜನಸಾಮಾನ್ಯರಿಗೆ ಭಾಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯಬೇಕೆಂಬ ಅಪೇಕ್ಷೆ. ಇದರಿಂದ ಜನರೊಳಗೆ ಐಕ್ಯ ಹೆಚ್ಚುವುದು. ನಾವೆಲ್ಲ ಒಂದೇ ಎಂಬ ಭಾವನೆ ಮೂಡುವುದು. ಪರಸ್ಪರ ವಿಚಾರವಿನಿಮಯಗಳು ಸುಲಭವಾಗುವುವು. ಒಬ್ಬಾತನ ತಾಯ್ನುಡಿಯಲ್ಲಿ ಮಾತನಾಡಿದರೆ ಆತನಿಗೊಂದು ಆತ್ಮೀಯತೆ ಬರುವುದು ಸಹಜ. ಇದು ಭಾವನಾಮಯ ಪ್ರಶ್ನೆ. ಇದರಿಂದ ಫಲಸಿದ್ಧಿಯಾಗುವುದು. ಸ್ವಾರ್ಥ ದೃಷ್ಟಿಯಿಂದ ನೋಡಿದರೆ ಹೆಚ್ಚು ಭಾಷೆಗಳನ್ನು ತಿಳಿಯುವುದರಿಂದ ಲಾಭ ಹೆಚ್ಚು ನಿಶ್ಚಯವಾಗಿಯೂ ನಷ್ಟವಿಲ್ಲ. ಈ ರಹಸ್ಯವನ್ನು ದಕ್ಷಿಣ ಜಿಲ್ಲೆಯವರು ತಿಳಿದುಕೊಂಡಂತಿದೆ. ಭಾಷೆಗಳನ್ನು ಕಲಿಯುವ ಗುಣ ಈ ಜನಕ್ಕೆ ರಕ್ತಗತವಾಗಿ ಬಂದಿರಬೇಕು.

ಇಲ್ಲಿ ಅನೇಕರಿಗೆ ‘ಆರು ಭಾಷೆ’ಗಳಲ್ಲಿ ಮಾತನಾಡುವ ಸಾಮರ್ಥವಿರುತ್ತದೆ : ಕನ್ನಡ, ತುಳು, ಮಲೆಯಾಳ, ಕೊಂಕಣಿ, ಹಿಂದೂಸ್ಥಾನಿ, ಇಂಗ್ಲಿಷು, ಮತ್ತೆ ಐದು ಭಾಷೆಗಳನ್ನು ಬಲ್ಲವರು: ಕನ್ನಡ, ತುಳು, ಮಲೆಯಾಳ, ಹಿಂದೂಸ್ಥಾನಿ, ಇಂಗ್ಲಿಷು, ಇವರಿಗಿಂತೆಲ್ಲ ಹೆಚ್ಚು ಸಂಖ್ಯೆಯಲ್ಲಿ ನಾಲ್ಕು ಭಾಷೆಗಳನ್ನು ಬಲ್ಲವರು: ಕನ್ನಡ, ತುಳು, ಇಂಗ್ಲಿಷು (ಅಥವಾ ಹಿಂದೂಸ್ಥಾನಿ). ಇನ್ನು ಎರಡು ಭಾಷೆಗಳನ್ನು ಬಲ್ಲವರು ಜಿಲ್ಲೆಯಲ್ಲಿ ಅತ್ಯಧಿಕ ಜನ ಎನ್ನಬಹುದು. ತುಳು ಮತ್ತು ಕನ್ನಡ ಆ ಎರಡು ಭಾಷೆಗಳು. ಬಲ್ಲವರು ಜಿಲ್ಲೆಯಲ್ಲಿ ಅತ್ಯಧಿಕ ಜನ ಎನ್ನಬಹುದು. ತುಳು ಮತ್ತು ಕನ್ನಡ ಆ ಎರಡು ಭಾಷೆಗಳು. ಇವರಲ್ಲಿ ಅನೇಕರು ಶಾಲೆಗಳಿಗೆ ಹೋದವರಲ್ಲ. ಯಕ್ಷಗಾನ ಬಯಲಾಟಗಳೇ ಅವರ ವಿದ್ಯಾಕೇಂದ್ರ. ಇನ್ನು ಕುಂದಾಪುರ ತಾಲೂಕಿನ ಒಳ ಗ್ರಾಮಗಳಲ್ಲಿರುವ ಜನರು ಶಾಲೆಗೆ ಹೋಗದವರು ಗ್ರಾಮೀಣ ಕನ್ನಡವನ್ನು ಮಾತ್ರ ಬಲ್ಲವರು. ಹಾಗೆಯೇ ಇತರ ತಾಲೂಕುಗಳ ಒಳಗ್ರಾಮಗಳಲ್ಲಿರುವ ಶಾಲೆಗಳಿಗೆ ಹೋಗದ ಜನ ತುಳುಮಾತ್ರ ಗೊತ್ತಿರುವವರು. ಇಂಥವರ ಸಂಖ್ಯೆ ಈಗ ತೀರ ಕಡಿಮೆಯೆನ್ನಬಹುದು.

ಇದು ದಕ್ಷಿಣ ಕನ್ನಡದ ಭಾಷಾ ಬಾಂಧವ್ಯದ ರೂಪರೇಷೆ. ಇದೇನೂ ಹೊಸತಲ್ಲ. ಶತಮಾನಗಳ ಹಿಂದೆ ನಮ್ಮ ಜಿಲ್ಲೆಯ ಕವಿರತ್ನ ರತ್ನಾಕರವರ್ಣಿ ಎಲ್ಲ ಭಾಷೆಗಳಿಗೂ ನಮಗೆ ಬೇಕು, ಎಂಬ ವಿಶಾಲ ಮನೋಭಾವವನ್ನು ವ್ಯಕ್ತಪಡಿಸಿದ್ದಾನೆ. ತನ್ನ ಮಹಾಕೃತಿಯಾದ ಭರತೇಶ ವೈಭವದ ಪೀಠಿಕಾ ಭಾಗದಲ್ಲಿ :

ಅಯ್ಯಯ್ಯಾ ಚೆನ್ನಾದುದೆನೆ ಕನ್ನಡಿಗರು
ರಯ್ಯಮಂಚಿದಿಯೆನೆ ತೆಲುಗಾ
ಅಯ್ಯಯ್ಯಾ ಎಂಚ ಪೊರ್ಲಾಂಡೆಂದು ತುಳುವರ
ಮೆಯ್ಯುಬ್ಬಿ ಕೇಳಬೇಕಣ್ಣಾ !

-ಎಲ್ಲರೂ ಬನ್ನಿ, ನಮ್ಮ ಕಾವ್ಯದ ರಸಾಸ್ವಾದ ಮಾಡಿರಿ ಎಂದು ವಿನಯದಿಂದ ಕರೆ ನೀಡುತ್ತಾನೆ. ಪ್ರಾಯಶಃ ಯಾವ ಭಾಷೆಯ ಕವಿಯೂ ಈ ರೀತಿ ಇತರ ಭಾಷಾ ಬಾಂಧವರನ್ನು ಎಷ್ಟು ಹೃದಯ ತುಂಬಿ ಆಮಂತ್ರಿಸಲಿಲ್ಲ ಎಂದರೆ ತಪ್ಪಾಗದು.