ತುಳು ಎಂಬೀ ಶಬ್ದದ ಮೂಲಾರ್ಥವನ್ನು ಕಂಡುಹಿಡಿಯಲು ಈ ಶತಮಾನದ ಆರಂಭದಿಂದಲೂ ಪ್ರಖ್ಯಾತ ವಿದ್ವಾಂಸರನೇಕರು ಪ್ರಯತ್ನಿಸಿದ್ದಾರೆ. ಆದರೆ ತೃಪ್ತಿಕರವಾದ ಒಂದು ನಿಗಮನಕ್ಕೆ ಯಾರೂ ತಲುಪಿರುವುದಿಲ್ಲ. ಈ ವಿಚಾರದಲ್ಲಿ ಯಥಾಶಕ್ತಿ ನಾನೂ ಸಮಯ ಕಳೆದಿದ್ದೇನೆ. ಅದರ ಫಲಿತಾಂಶವನ್ನು ಇಲ್ಲಿ ವಾಚಕಲೋಕದ ಮುಂದಿಡುತ್ತಿದ್ದೇವೆ.

ತುಳು ಎಂಬೀ ಶಬ್ದವು ಸಂಸ್ಕೃತ ಮೂಲವೆಂದು ಹೇಳಲು ಆಧಾರವೇ ಇಲ್ಲವೆಂದರೆ ತಪ್ಪಾಗಲಾರದು. ವಿಶಾಲವಾದ ಸಂಸ್ಕೃತ ಶಬ್ದ ಸಮುದಾಯದಲ್ಲಿ ‘ತುಲು’ (=ತುಳು) ಎಂಬುದು ಎಲ್ಲಿಯೂ ಕಾಣುವುದಿಲ್ಲ. ಅದು ದೇಶವಾಚಕವಾದ ಒಂದು ಹೆಸರಾಗಿ ಮಾತ್ರ ಅಲ್ಲಿ ಇದೆ. ‘ತೌಳವ’ ಎಂಬುದು ಸಂಸ್ಕೃತ ಶಬ್ದರೂಪವಾಗಿರುವುದು ನಿಜ. ಆದರೆ ಅದು ವಿಶೇಷಣಪ್ರಯೋಜನಕ್ಕಾಗಿ ತುಳು ಎಂಬ ನಾಮದಿಂದ ಸಾಧಿತವಾದ ಶಬ್ದ-ಯುರೋಪ್ ಎಂಬುದರಿಂದ ಯೌರೋಪ್ಯ ಎಂದು ಮಾಡಿಕೊಂಡಿರುವ ಹಾಗೆ* (*ಐರೋಪ್ಯ’ ಎಂದು ಸಾಧಾರಣವಾಗಿ ಬಳಕೆಯಲ್ಲಿರುವ ಶಬ್ದರೂಪಕ್ಕೆ ‘ಇರೋಪ್’ ಅಥವಾ ‘ಈರೋಪ್’ ಎಂಬ ಉಚ್ಚಾರವು ಮೂಲವಾಗಿದೆ.) ತುಲಾ ಎಂಬುದರಿಂದ ತುಲು – ತುಳು ಹುಟ್ಟಿತು ಎಂಬ ಕಟ್ಟುಕತೆಯೊಂದು ಇದೆ. ಆದರೆ ಈ ಕಾಲದಲ್ಲಿ ಈ ಕಥೆಯನ್ನು ಯಾರೂ ನಂಬುವಂತಿಲ್ಲ; ಅಲ್ಲದೆ ಈ ಕಟ್ಟುಕಥೆಯಲ್ಲಿ ಹೇಳಿರುವಂತೆ, ‘ತುಲಾ’ ಎಂಬುದು ‘ತುಳು’ ಎಂದು ರೂಪಾಂತರಗೊಂಡಿತೆಂದು ಹೇಳುವುದು ಸಂಭಾವ್ಯವೂ ಅಲ್ಲ. ಇನ್ನು ಕೆಲವರು ಹೇಳುವಂತೆ ತಲ (=ತಳ) ಎಂಬ ಸಂಸ್ಕೃತದ ಶಬ್ದವು (ಈ ನಾಡು ತಗ್ಗಿನಲ್ಲಿರುವುದರಿಂದ) ಮೂಲವಾಗಿದ್ದಿತೆಂದಾವರೆ, ಮೇಲೆ ತೋಡಿಸಿದಂತೆ ಅದರ ಸಾಧಿತ ರೂಪವು ಸಂಸ್ಕೃತ ಭಾಷಾ ನಿಯಮಾನುಸಾರವಾಗಿ ತೌಳವ ಎಂದಾಗುವಂತಿಲ್ಲ. ಆದುದರಿಂದ ತಳ ಎಂಬುದರಿಂದಾಗಲಿ ತುಲಾ ಎಂಬುದರಿಂದಾಗಲಿ ತುಳು ಹುಟ್ಟಿತು ಎಂಬ ಮಾತಿನಲ್ಲಿ ಹುರುಳಿಲ್ಲ. ಕೌರವ ಎಂಬುದಕ್ಕು ಕುರು, ಪೌರವ ಎಂಬುದಕ್ಕೆ ಪುರು ಹೇಗೆ ಜನಕವೋ, ಹಾಗೆಯೆ ‘ತೌಳವ’ ಎಂದೇ ಇರುವ ಆ ಜನ್ಯರೂಪಕ್ಕೆ ‘ತುಳು’ ಎಂಬುದೇ ಜನಕರೂಪ, ಬೇರಾವುದೂ ಅಲ್ಲ.

ತುಳುನುಡಿಯ ಒಡಹುಟ್ಟುಗಳಾದ ಕನ್ನಡ ಮೊದಲಾದ ಇತರ ದ್ರಾವಿಡ ಭಾಷೆಗಳಲ್ಲಿಯೂ ತುಳು ಎಂಬುದು ದೇಶವಾಚಕವಾಗಿ, ಕ್ವಚಿತ್ ಈ ಭಾಷೆಯ ಹೆಸರಾಗಿ, ಗೋಚರಿಸುವುದು ಹೊರತು ಅನ್ಯಥಾ ಪ್ರಯುಕ್ತವಾದುದು ಕಂಡುಬರುವುದಿಲ್ಲ. ಇಲ್ಲಿಯ ಜನರನ್ನು ತುಳುವರೆಂದು ಕರೆದುದುಂಟು. ಅದಕ್ಕೆ ಏತದ್ದೇಶಿಯರೆಂಬುದಲ್ಲದೆ ಬೇರೆ ಅರ್ಥ ಹುಟ್ಟುವಂತಿಲ್ಲ. ಕನ್ನಡದಲ್ಲಿ ತುಳುಗತ್ತಿ ಎಂಬುದೊಂದು ಶಬ್ದವಿತ್ತು. ಇಲ್ಲಿಯೂ ಕೂಡ, ಈ ನಾಡಿನಲ್ಲಿ ತಯಾರಿಸುವ ಅಥವಾ ಬಳಸುವ ವಿಶಿಷ್ಟ ರೂಪದ ಕತ್ತಿ ಎಂಬುದಕ್ಕಿಂತ ಹೆಚ್ಚು ಅರ್ಥವನ್ನು ಅದು ಕೊಡಲಾರದು. ಆದುದರಿಂದ ತುಳು ಶಬ್ದದ ಅರ್ಥವನ್ನು ತಿಳಿಯಲು ತುಳು ಭಾಷೆಯಲ್ಲಿಯೇ ಏನಾದರೂ ಆಧಾರವಿದೆಯೋ ಎಂದು ನೋಡಬೇಕು.

ಆದರೆ, ತುಳು ಭಾಷೆ ತನ್ನ ಒಡಹುಟ್ಟುಗಳಾದ ಕನ್ನಡ, ತಮಿಳು, ತೆಲುಗುಗಳಷ್ಟೇ ಪುರಾತನ ಭಾಷೆಯಾಗಿರುವುದಾದರೂ, ಗ್ರಂಥಸ್ಥವಲ್ಲದುದರಿಂದ ಅದರ ಪುರಾತನ ರೂಪ ಹೇಗಿತ್ತೆಂದು ತಿಳಿಯಲು ನಮಗೆ ಸಾಧನ ಸಂಪತ್ತು ಇಲ್ಲ. ಆಡುವ ಮಾತು ಬದಲಾಗುತ್ತಲೇ ಹೋಗುತ್ತಿರುವುದು ಸ್ವಾಭಾವಿಕ. ಅದು ಗ್ರಂಥಭಾಷೆಯಾಗಿಲ್ಲದಿರುವಲ್ಲಿ ವ್ಯತ್ಯಾಸ ಹೊಂದುವ ಸಂಭವ ಅಧಿಕತರ. ಆಡುವ ಮಾತಿನಲ್ಲಿ, ಯಾವುದೊಂದು ಅರ್ಥವನ್ನು ತಿಳಿಸಲು ಒಮ್ಮೆ ಪ್ರಯುಕ್ತವಾಗುತ್ತಿದ್ದ ಶಬ್ದವು ಕಾಲಾನಂತರದಲ್ಲಿ ಮರೆಯಾಗಿ, ಬೇರೊಂದು ಶಬ್ದವು ಅದರ ಸ್ಥಳವನ್ನು ಆಕ್ರಮಿಸಿ ಕುಳಿತುಕೊಳ್ಳುವುದು ಸರ್ವಸಾಮಾನ್ಯ. ಈ ಬದಲಾವಣೆಗೆ ಮುಖ್ಯ ಕಾರಣವು ಪರಭಾಷಾ ಸಂಪರ್ಕ. ಈ ಕಾರಣದಿಂದ ತುಳು ಶಬ್ದಗಳೆಷ್ಟೋಲುಪ್ತವಾಗಿ, ಅಪುನರ್ಲಭ್ಯವಾಗಿ ಹೋಗಿವೆಯೆಂಬುದರಲ್ಲಿ ಸಂದೇಹವಿಲ್ಲ. ಇದಕ್ಕೊಂದು ನಿದರ್ಶನವನ್ನು ಕೊಡೋಣ :-

ಕನ್ನಡದಲ್ಲಿ ನಾವು ‘ಮಳೆ’ ಎಂಬುದನ್ನು ತುಳುವಿನಲ್ಲಿ ‘ಬರ್ಸ’ ಎನ್ನುತ್ತಾರೆ (ಬರ್ಸೊ ಎಂಬುದರ ಕೊನೆಯಲ್ಲಿರುವ ಒಕಾರವು ತುಳುವಿನ ಪ್ರಥಮಾ ವಿಭಕ್ತಿ ಪ್ರತ್ಯಯ. ಅತ್ಯಂತವಾಗಿ ವಿಕೃತಿ ಹೊಂದಿದ ಕರೆನಾಡಿನ ತುಳುವಿನಲ್ಲಿ ಈ ಒಕಾರವನ್ನು ಕಾಣುವದು ದುರ್ಲಭವಾದರೂ ಒಳನಾಡಿನ ತುಳುವಿನಲ್ಲಿ ಇದು ಇಂದೂ ಇದೆ. ಕರೆನಾಡಿನ ತುಳುವಿನಲ್ಲಿ ವಿಭಕ್ತಿ ಮಾತ್ರವಲ್ಲ, ನೂರಾರು ಶಬ್ದಗಳು ಸವೆದು ರೂಪನಾಶವನ್ನು ಪಡೆದಿವೆ. ಉದಾ :ಬಿಸಾಡು ಎಂಬರ್ಥವನ್ನು ಇಂದು ಹೇಳುವ ತುಳು ಶಬ್ದವು ‘ಅಡಕ್ಕ್’ ಎಂಬುದಾಗಿದೆ. ಇದನ್ನು ಕರೆನಾಡಿನ ತುಳುವರು ‘ದಕ್ಕ್’ ಎನ್ನುತ್ತಾರೆ. ಹೀಗೆಯೇ ‘ಅಡಪ್ಪು’ ಎಂಬುದು ‘ದಪ್ಪು’ಎಂದಾಗಿದೆ. ಒಳನಾಡಿನವರು ‘ಕೊಂಡು ಬಾ’ ಎಂಬರ್ಥವನ್ನು ‘ಕೊಂಡು ಬಲ’ ಅಥವಾ ‘ಕೊಂಡಲ’ ಎನ್ನುವುದಾದರೆ, ಕೆರನಾಡಿನವರು ‘ಕನಲ’ ಎನ್ನುತ್ತಾರೆ ! ಅಲ್ಲದೆ ಕರೆನಾಡಿನ ತುಳುವರು ಮೂಲತಃ ಣ-ಳಗಳಿದ್ದಲೆಲ್ಲ ನ-ಲಗಳನ್ನುಚ್ಚರಿಸುತ್ತಾರೆ. ಒಳನಾಡಿನ ತುಳುವಿನಲ್ಲಿ ಈಗಲೂ ನ-ಣ, ಲ-ಳ ಭೇದವಿದ್ದರೇ ಇದೆ. ದ್ರಾವಿಡ ಭಾಷೆಗಳಲ್ಲೆಲ್ಲ ಒಮ್ಮೆ ಇದ್ದೇ ಇದ್ದಂತೆ, ಒಳನಾಡಿನ ತುಳುವಿನಲ್ಲಿ ಇಂದೂ ಇರುವ, ಉತ್ತಮ ಪುರುಷ ಬಹುವಚನ ಸರ್ವನಾಮದ ರೂಪದ್ವಯದ ಅರ್ಥಭೇದವು – (‘ಎಂಕುಳೊ’ Exclusive ಕೇವಲೋತ್ತಮ ಪುರುಷ ‘ನಮೊ’- ‘Inclusive’ ಸಮಧ್ಯಮೋತ್ತಮ ಪುರುಷ) ಕರೆನಾಡಿನ, ವಿಶೇಷತಃ ಮಂಗಳೂರಿನ ತುಳುವಿನಲ್ಲಿ ಮಾಯವಾಗಿದೆ. ಒಳನಾಡಿನ ತುಳುವಿನಲ್ಲಿ ಇದು ನಿರಪವಾದವಾಗಿ ರೂಢಿಯಲ್ಲಿದೆ. ಆದುದರಿಂದ ತುಳು ಭಾಷೆಯ ಸಹಜರೂಪಗಳನ್ನು ತಕ್ಕಮಟ್ಟಿಗಾದರೂ ಕಾಣಬೇಕಾದರೆ, ಪರಭಾಷಾ ಸಂಪರ್ಕವು ಕಡಮೆಯಾಗಿರುವ ಒಳನಾಡಿನ ತುಳುವನ್ನೇ ಆಶ್ರಯಿಸಬೇಕು; ಹೊರತು ಕರೆನಾಡಿನ ರೂಪಗಳನ್ನಲ್ಲ. ತುಳುನುಡಿಯಲ್ಲಿ ಇಲ್ಲಿ ಮೇಲೆ ಹೇಳಿದ ಎರಡು ಪ್ರಾದೇಶಿಕ ಭೇದಗಳು ಮಾತ್ರವಲ್ಲ : ಹಲವು ಭೇದಗಳಿವೆ. ಒಂದೊಂದು ಜಾತಿಗೇ ಮೀಸಲಾದ ನುಡಿಗಳೂ ಇವೆ. ಉದಾ : ತುಳು ಬ್ರಾಹ್ಮಣರ ನುಡಿ. ಇದು ಇತರ ಭಾಷೆಗಳ ಪ್ರಭಾವಕ್ಕೆ ವಿಶೇಷವಾಗಿ ಒಳಗಾದ ರೂಪವಾದುದರಿಂದ, ತುಳು ಶಬ್ದಗಳ ಮೂಲ ರೂಪವನ್ನು ಊಹಿಸುವ ಕೆಲಸದಲ್ಲಿ ಹೆಚ್ಚು ಸಹಾಯಕವಲ್ಲ. ಬ್ರಾಹ್ಮಣರ ತುಳುವಿನಲ್ಲಿ, ಕನ್ನಡದಲ್ಲಾದಂತೆ, ಹಳೆಯ ೞಕಾರಗಳು ಹೆಚ್ಚಾಗಿ – ಎಲ್ಲವೂ ಅಲ್ಲ; ಕೆಲವು ಸಾಧಾರಣ ತುಳುವಿನಲ್ಲಿರುವಂತೆ ರಕಾರವೇ ಆಗಿವೆ, – ಳಕಾರಗಳಾಗಿ ಪರಿಣಮಿಸಿರುವುದು ಲಕ್ಷಿಸತಕ್ಕ ವಿಷಯ. ಇದರಿಂದ ಅವರ ಮೂಲಪುರುಷರು ಕನ್ನಡನಾಡಿನಿಂದ ಬಂದವರೆಂಬುದಕ್ಕೆ ಸಮರ್ಥನೆ ದೊರಕುತ್ತದೆ. ಬರ್ಸ ಎಂಬುದು ವರ್ಷ (Rain) ಎಂಬ ಸಂಸ್ಕೃತ ಶಬ್ದದ ನೇರವಾದ ತದ್ಭವ. ಈ ಅರ್ಥವನ್ನು ಹೇಳುವುದಕ್ಕೆ ತುಳುವಿನಲ್ಲಿ ಇಂದು ಇರುವ ಶಬ್ದವು ಇದೊಂದೇ ಆಗಿದೆ. ಹಾಗಾದರೆ, ವರ್ಷಕ್ಕೆ ೧೫೦ ಇಂಚುಗಳಿಗಿಂತಲೂ ಹೆಚ್ಚು ಮಳೆ ಸುರಿಯುವ ಈ ನಾಡಿನ ನುಡಿಯಲ್ಲಿ ‘ವರ್ಷ’ ಎಂಬ ಸಂಸ್ಕೃತ ಶಬ್ದದ ಪರಿಚಯವಾಗುವ ಮೊದಲು, ಮಳೆ ಎಂಬುದನ್ನು ತಿಳಿಸಬಲ್ಲ ಶಬ್ದವೇ ಇರಲಿಲ್ಲವೇ? ಇದ್ದಿರಬೇಕೆಂಬುದರಲ್ಲಿ ಸಂಶಯಪಡುವ ಹಾಗಿಲ್ಲ. ಆದರೆ ಈ ಶಬ್ದವು ಈಗ ಲುಪ್ತವಾಗಿ ಹೋಗಿದೆ, ಅಷ್ಟೆ. ಇದರಂತೆ ಎಷ್ಟು ಶಬ್ದಗಳು ಲುಪ್ತಾಗಿವೆಯೋ ಹೇಳಲಳವಲ್ಲ; ಅವು ಇನ್ನೂ ನಮಗೆ ಉಪಲಬ್ಧವಾಗುವಂತೆಯೂ ಇಲ್ಲ.

ಆದರೆ ಮಳೆ ಎಂಬರ್ಥವನ್ನು ಹೇಳುತ್ತಿದ್ದ ಆ ಮೂಲ ಶಬ್ದವು ಏನಾಗಿದ್ದಿರಬಹುದೆಂದು ಗುರುತಿಸಲು, ದೈವವಶಾತ್ ಒಂದು ಸಾಕ್ಷ್ಯ ಉಳಿದುಕೊಂಡಿದೆ. ತುಳುನಾಡಿನಲ್ಲಿ ಸ್ಪುಟವಾದ ಋತುಭೇದಗಳು ಎರಡೇ. ತುಳುನುಡಿಯಲ್ಲಿ ಅವುಗಳಲ್ಲೊಂದನ್ನು ಅರೆಗಾಲವೆಂದೂ ಮತ್ತೊಂದನ್ನು ಮರಿಯಾಲವೆಂದು ಕರೆಯುತ್ತಾರೆ. ‘ಮರಿಯಾಲ’ವೆಂದರೆ ಮಳೆ ಬರುವ ಕಾಲ. ಹಾಗಾದರೆ ಒಂದಾನೊಂದು ಕಾಲದಲ್ಲಿ ಮಳೆ ಎಂಬುದನ್ನು ಹೇಳತಕ್ಕ ಶಬ್ದವೊಂದಿತ್ತು ಎಂಬುದು ಸ್ಪಷ್ಟ. ಅದರ ರೂಪ ಹೇಗಿದ್ದಿರಬಹುದು? ‘ಮರಿಯಾಲ’ ಎಂಬ ಶಬ್ದದಲ್ಲಿ ತೋರಿರುವಂತೆ ಅದು ‘ಮರಿ’ ಎಂದೇ ಆಗಿದ್ದಿರುವ ಸಂಭವ ಕಡಮೆ. ಅದು ‘ಮರ’ ಎಂದೇ ಇದ್ದಿರಬೇಕೆಂದು ಊಹಿಸಲು ಬಲವಾದ ಆಧಾರವಿದೆ. ಇಂದಿನ ತುಳುವಿನಲ್ಲಿ ‘ಮರೆ’ ಎಂಬೊಂದು ಶಬ್ದವು ಬಳಕೆಯಲ್ಲಿದೆ. ಯಾವುದೊಂದು ಹಸಿ ಗಿಡವನ್ನೊ ಎಲೆಯನ್ನೋ ಮುರಿದಾಗ ಸ್ರವಿಸುವ ದ್ರವವನ್ನು ‘ಮರೆ’ ಎಂದು ಕರೆಯುತ್ತಾರೆ. ಮರೆ ಎಂಬೀ ಶಬ್ದದ ಅರ್ಥವ್ಯಾಪ್ತಿ ಇಂದು ಇಷ್ಟು ಸಂಕುಚಿತವಾಗಿರುವುದಾದರೂ, ಮೂಲತಃ ಇದು ‘ಮಳೆ’ ಎಂಬರ್ಥವನ್ನು ಕೊಡುತ್ತಿದ್ದಿರಬೇಕು. (ಮಳೆ ಎಂದರೆ ಬಾನಿಂದ ಸ್ರವಿಸುವ ದ್ರವವಷ್ಟೆ?) ಮಳೆ ಎಂದು ನಾವೀಗ ಕನ್ನಡದಲ್ಲಿ ನುಡಿಯುವ ಶಬ್ದದಲ್ಲಿರುವ ಳಕಾರವು ಮೂಲತಃ ಳಕಾರವಲ್ಲ, ೞಕಾರ. ಹೊಸಗನ್ನಡದಲ್ಲಿ ಹೇಗೋ ಹಾಗೆ ತುಳುವಿನಲ್ಲಿಯೂ ಇಂದು ೞಕಾರದ ಉಚ್ಚಾರವಿಲ್ಲ. ಕನ್ನಡದಲ್ಲಿ ಅದು ಳಕಾರವಾಗಿದ್ದರೆ ತುಳುವಿನಲ್ಲಿ ಬಹುಧಾ ಅದು ರಕಾರವಾಗಿದೆ. ಉದಾ:

ಹೊಸಗನ್ನಡ ಹಳಗನ್ನಡ ತುಳು
ಬಾಳೆ ಬಾೞೆ ಬಾರೆ
ಕೊಳೆ ಕೊೞೆ ಕುರೆ
ಬಳಿ ಬೞಿ ಬರಿ
ಹುಳು ಪುೞು ಪುರಿ

ಇತ್ಯಾದಿ. ಇದಕ್ಕೆ ಎಷ್ಟು ಉದಾಹರಣೆಗಳನ್ನೂ ಕೊಡಬಹುದು. ಆದುದರಿಮದ ಹೊಸ ಗನ್ನಡದಲ್ಲಿ ನಾವು ನುಡಿಯುವ ಮಳೆ ಎಂದರೆ ಹಳಗನ್ನಡದ ಮೞೆ ಎಂಬುದನ್ನು ಹಿಂದಿನ ಕಾಲದಲ್ಲಿ ತುಳುವರು ‘ಮಳೆ’ ಎನ್ನುತ್ತಿದ್ದರು ಎಂದು ನಿರ್ಧರಿಸಬಹುದಾಗಿದೆ.

ದ್ರಾವಿಡ ಭಾಷೆಗಳಲ್ಲೆಲ್ಲ ಆದಿಕಾಲದಲ್ಲಿ, ಈಗ ಕನ್ನಡದಲ್ಲಾಗಲಿ ತುಳುವಿನಲ್ಲಾಗಲಿ ಇರುವುದಕ್ಕಿಂತ ಎರಡು ಅವರ್ಗೀಯ ವ್ಯಂಜನಗಳು ಹೆಚ್ಚಿಗಿದ್ದುವು. ಆ ಉಚ್ಚಾರಗಳನ್ನು ಕನ್ನಡದಲ್ಲಿ ೞ ಮತ್ತು ಱ ಎಂಬೀ ರೂಪಗಳಲ್ಲಿ ಬರೆಯುತ್ತಿದ್ದರು. ಕಾಲಾಂತರದಲ್ಲಿ ಕನ್ನಡ ಮಾತಿನಲ್ಲಿ ೞ ಎಂಬುದು ಳ ಎಂಬುದರ ಹಾಗೆಯೇ ಉಚ್ಚರಿಸಲ್ಪಡತೊಡಗಿದಾಗ, ಭಾಷಾ ವಿಚಾರಾವಸರಗಳಲ್ಲಿ ೞಕಾರವನ್ನು ನಿರ್ದಿಷ್ಟವಾಗಿ ತಿಳಿಸುವುದಕ್ಕೋಸ್ಕರ, ಅದರ ಲಿಪಿ ರೂಪವು ಱ ಎಂಬ ಲಿಪಿಯನ್ನು ಹೋಲುವ ಕಾರಣದಿಂದ, ‘ಱೞ’ ಎಂಬ ಹೆಸರು ಹುಟ್ಟಿತು. ಆಗ ಳಕಾರವನ್ನು ನಿರ್ದಿಷ್ಟವಾಗಿ ತಿಳಿಸುವುದಕ್ಕೆ ಇನ್ನೊಂದೂ ಹೆಸರೂ ಬೇಕಾಯಿತು. ಆ ಕಾಲದ ಕನ್ನಡ ಬರವಣಿಗೆಲ್ಲಿ ಳ ಎಂಬ ಲಿಪಿರೂಪವು ಕು ಎಂಬ ಲಿಪಿರೂಪವನ್ನು ಹೋಲುತ್ತಿದ್ದುದರಿಂದ, ಳಕಾರಕ್ಕೆ ‘ಕುಳ’ ಎಂದು ಹೆಸರಿಡಲಾಯಿತು. ಱ ಎಂಬುದರ ಉಚ್ಚಾರವು ಬಹುಶಃ ೧೭ನೆಯ ಶತಮಾನದ ವರಗೂ ಕನ್ನಡ ಮಾತಿನಲ್ಲಿ ಉಳಿದಿದ್ದ ಕಾರಣ, ಅದಕ್ಕೆ ಪ್ರತ್ಯೇಕವಾದೊಂದು ಹೆಸರು ಆ ವರೆಗೆ ಕನ್ನಡ ಮಾತಿನಲ್ಲಿ ಉಳಿದಿದ್ದ ಕಾರಣ, ಅದಕ್ಕೆ ಪ್ರತ್ಯೇಕವಾದೊಂದು ಹೆಸರು ಆ ವರೆಗೆ ಬೇಕಾಗಿರಲಿಲ್ಲ. ಅನಂತರ ೧೯ನೇ ಶತಮಾನದ ವರೆಗೂ ಭಾಷಾ ಮೀಮಾಂಸೆ ಕನ್ನಡದಲ್ಲಿ ಪ್ರಾಯಃ ಆಗಿದ್ದಿಲ್ಲವಾದುದರಿಂದ, ಱಕಾರಕ್ಕೆ ಪ್ರತ್ಯೇಕವಾದೊಂದು ಹೆಸರನ್ನು ಕನ್ನಡದಲ್ಲಿ ಯಾರೂ ನಿರ್ಮಿಸಲಿಲ್ಲ. ತೆಲುಗಿನಲ್ಲಿ ಈ ಱಕಾರವನ್ನು ‘ಬಂಡಿ ಱ’ ಎಂದು ಕರೆಯುವ ಕಾರಣ, ಇತ್ತೀಚೆಯವರು ಕನ್ನಡದಲ್ಲಿ ಅದನ್ನು ‘ಶಕಟ ರೇಫ’ ಎಂದು ಕರೆಯುವುದುಂಟು. ಆದರೆ ನನ್ನ ಮತಿಗೆ ಕಾಣುವಂತೆ, ಆ ಹೆಸರು ಅದಕ್ಕೆ ಒಪ್ಪುವುದಿಲ್ಲ. ಅದಕ್ಕೆ ನಾನು ‘ಅಱ’ (ಆ ಲಿಪಿಯ ಹೋಲಿಕೆಯಿರುವುದರಿಂದ) ಎಂಬ ಹೆಸರನ್ನು ಪೂರ್ವ ಪರಂಪರಾನುರೋಧವಾಗಿಯೇ ಕೊಟ್ಟಿರುತ್ತೇನೆ. ರಕಾರಕ್ಕೆ ರೇಫವೆಂಬ ಹೆಸರು ಪುರಾತನ ಕಾಲದಿಂದಲೂ ಸಂಸ್ಕೃತದಲ್ಲಿ ಪ್ರಸಿದ್ಧವಾಗಿದ್ದು, ಕನ್ನಡ ವ್ಯಾಕರಣಗಳಲ್ಲಿಯೂ ಪ್ರಯೋಗಿಸ್ಪಟ್ಟಿದೆ (ಈ ವಿಷಯದಲ್ಲಿ ಹೆಚ್ಚಿನ ಜಿಜ್ಞಾಸೆಯುಳ್ಳವರು ನನ್ನ ‘ಕನ್ನಡ ವರ್ಣಗಳು’ ಎಂಬ ಪುಸ್ತಕವನ್ನು ನೋಡಬಹುದು).

ಇಂದಿನ ಕನ್ನಡದಲ್ಲಿ ಱೞ – ಕುಳ ಭೇದವಿಲ್ಲ; ಎರಡೂ ಕುಳವಾಗಿಯೇ ಉಚ್ಚರಿಸಲ್ಪಡುವುದರಿಂದ – ಉಚ್ಚಾರಾನುರೂಪವಾದ ನಮ್ಮ ಲಿಪಿಪದ್ಧತಿಗೊಪ್ಪುವಂತೆ (Phonetical Script)- ಒಂದೇ ಲಿಪಿಯನ್ನು (ಳ) ಅವೆರಡರ ಸ್ಥಾನಗಳಲ್ಲಿಯೂ ಬರೆಯುತ್ತೇವೆ. ಅದರಂತೆಯೇ ಇಂದು ಕನ್ನಡದಲ್ಲಿ ಅಱವನ್ನೂ ರೇಫವನ್ನೂ ಒಂದೇ ರೀತಿಯಲ್ಲಿ (ಎಂದರೆ ರೇಫವಾಗಿಯೇ) ನಾವು ಉಚ್ಚರಿಸುವುದರಿಂದ, ಆ ಎರಡರ ಸ್ಥಾನದಲ್ಲಿಯೂ ರ ಎಂದು ಒಂದೇ ಲಿಪಿರೂಪವನ್ನು ಬಳಸುತ್ತೇವೆ. ತುಳುವಿನಲ್ಲಿ ಹಳೆಯ ಱೞಗಳು ಬಹುಧಾ ರೇಫಗಳಾಗಿ ಮಾರ್ಪಾಟ್ಟಿವೆ. ಕನ್ನಡದಲ್ಲಾದಂತೆ ಅವು ಕುಳಗಳಾಗಿಲ್ಲ. ಱೞದ ೞಕಾರದ ಶುದ್ಧೋಚ್ಚಾರವು ಕುಳ-ರೇಫಗಳ ಮಧ್ಯವರ್ತಿಯಾದುದರಿಂದ ಕಾಲಾಂತರದಲ್ಲಿ ಕನ್ನಡದಲ್ಲಿ ಅದು ಕುಳವಾಗಿಯೂ ತುಳುವಿನಲ್ಲಿ ರೇಫವಾಗಿಯೂ ಪರಿಣಮಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಲ್ಲದೆ ತುಳು ಭಾಷೆಯನ್ನು ಪರೀಕ್ಷಿಸಿದರೆ, ಅದಕ್ಕೆ ರೇಫದ ಮೆಲೆ ವಿಶೇಷವಾದ ಪಕ್ಷಪಾತವಿರುವಂತೆ ಕಾಣುತ್ತದೆ. ೞಕಾರ ಸ್ಥಾನಗಳಲ್ಲಿ ಮಾತ್ರವಲ್ಲ, ಇತರ ದ್ರಾವಿಡ ಭಾಷೆಗಳಲ್ಲೆಲ್ಲ ಲಕಾರವೋ ಡಕಾರವೋ ಇರುವಲ್ಲಿಯೂ ಹಲವೆಡೆಗಳಲ್ಲಿ ತುಳುವಿನಲ್ಲಿ ರೇಫವಿದೆ. ಉದಾ: ಕಾಲ್-ಕಾರ್, ತಲೆ-ತರೆ, ಪಾಲ್-ಪೇರ್, ಕೊಡು-ಕೊರು, ಬಿಲ್ಲು-ಬಿರು ಇತ್ಯಾದಿ. ಹೀಗಿದ್ದರೂ ಕುಳವು ಸ್ವಸ್ವರೂಪದಲ್ಲಿಯೇ ಉಳಿದಿದೆ. ಉದಾ: ಬೊಳ್ದು, ಬೊಳ್ಪು, ಆಳ್, ತೆಳ್ಪು, ಗಿಳಿ ಇತ್ಯಾದಿ (ಇವೆಲ್ಲ ಕನ್ನಡದ ಬಿಳಿದು, ಬೆಳಕು, ಅವಳು ಇತ್ಯಾದಿಗಳ ಪ್ರತಿರೂಪಗಳಾಗಿದ್ದು ಎಲ್ಲವೂ ಕುಳ ಶಬ್ದಗಳೂ). ಆದರೆ ಕರೆನಾಡಿನ ತುಳುವಿನಲ್ಲಿ ಮಾತ್ರ ಳ-ಲ ಗಳಲ್ಲಿ ಭೇದವಿಲ್ಲವೆಂಬಂತಾಗಿರುವುದರಿಂದ, ತುಳುವಿನ ಕುಳಗಳು ಅಲ್ಲಿ ಲಕಾರಗಳಾಗಿಯೂ ಉಚ್ಚರಿಸಲ್ಪಡುತ್ತವೆ.

ಉದಾ:

ಕನ್ನಡ ಒಳನಾಡ ತುಳು ಕರೆನಾಡ ತುಳು
ಅವಳು ಆಳ್ ಆಲ್
ಬೆಳೆ ಬುಳೆ ಬುಲೆ
ಹೋರಿಗಳು ಬೋರಿಗ್‌ಳು-ಬೋರಿಳು ಬೋರಿಲು
ಭೂತಗಳು ಬೂತೊಗ್‌ಳು-ಬೂತೊಳು ಬೂತೊಲು
ಹಾಳೆ ಪಾಳೆ ಪಾಲೆ
ಮಗಳು ಮಗಳ್ ಮಗಲ್
ಒಳಗೆ ಉಳಾಯಿ ಉಲಾಯಿ

ಇತ್ಯಾದಿ, ಇತ್ಯಾದಿ

ದ್ರಾವಿಡ ಭಾಷೆಗಳ ಸಂಶೋಧನ ಪ್ರಯತ್ನದಲ್ಲಿ ವರ್ಣಪಲ್ಲಟಗಳನ್ನು ಊಹಿಸುವಾಗ ಱೞ, ಕುಳ;ಅಱ, ರೇಫ (ರ) ಈ ನಾಲ್ಕು ವ್ಯಂಜನಗಳ ಕುರಿತು ಬಹಳ ಎಚ್ಚರವಿರುವುದು ಅವಶ್ಯ. ಈ ಭೇದಗಳು ಇಂದಿನ ಕನ್ನಡದಲ್ಲಿ ಇಲ್ಲದಿರುವುದರಿಂದ, ಅವುಗಳ ಸ್ವಭಾವಮಹತ್ವನ್ನು ಕಡೆಗಣಿಸಿ, ಹಾಗೂ ಹೀಗೂ ಹೇಗೂ ಅವು ಪಲ್ಲಟವಾಗಬಲ್ಲ ವರ್ಣಗಳೆಂದು ಪ್ರಾಮಾಣಿಕ ಬುದ್ಧಿಯಿಂದಲೇ ಭಾವಿಸಿ, ನಮ್ಮ ವಿಖ್ಯಾತ ಸಂಶೋಧಕರಲ್ಲಿ ಅನೇಕರು ಪ್ರಕೃತೋಪಯೋಗಿತ್ವ ದೃಷ್ಟಿಯಿಂದ ವರ್ಣಪಲ್ಲಟಗಳನ್ನು ಸಂಭಾವಿಸಿ, ಯಥಾರ್ಥವಲ್ಲದ ಎಷ್ಟೋ ತೀರ್ಮಾನಗಳನ್ನು ಮಾಡಿಬಿಟ್ಟಿದ್ದಾರೆಂಬುದು ವಿಷಾದಕರವಾಗಿದೆ. ಯಾವ ವರ್ಣಪಲ್ಲಟ ಸ್ವರೂಪವೂ ಎಲ್ಲಾ ಭಾಷೆಗಳಲ್ಲಿ ಒಂದೇ ವಿಧವಾಗಿರುವುದಿಲ್ಲ. (ಏಕೋದರ ಭಾಷೆಗಳಾದ ಕನ್ನಡ ತುಳುಗಳಲ್ಲಿಯೇ ಱಕಾರ ೞಕಾರಗಳ ಪಲ್ಲಟಗಳ ಸ್ವರೂಪ ಬೇರೆ ಬೇರಾಗಿದೆ) ಈ ನಾನಾತ್ವವನ್ನು ಹಾಗೂ ಆಯಾ ಭಾಷೆಯ ವೈಶಿಷ್ಟ್ಯವನ್ನು ಸಾಕಷ್ಟು ಗ್ರಹಿಸದೆ ಲಘುವಾಗಿ ಬಗೆದು, ಮಾಡಿಬಿಟ್ಟ ಸಿದ್ಧಾಂತಗಳಿಂದಾಗಿಯೆ ಕನ್ನಡಿಗರಾದ ನಾವಿಂದು ಕನ್ನರೋ, ಕಣ್ಣರೋ, ಕಳ್ಳರೋ ಆಗಿಬಿಟ್ಟಿದ್ದೇವೆ! ನಮ್ಮ ನಾಡು ‘ಕರುನಾಡು’- ಎಂದರೆ ಎತ್ತರದ ನಾಡು (ಪೀಠಭೂಮಿ) ಅಥವಾ ದೊಡ್ಡ ನಾಡು (ಕರು-ಎತ್ತರ, ದೊಡ್ಡ ಇತ್ಯಾದಿ -ಕಿಟ್ಟೆಲ್) ಎಂಬ ಕಾರಣದಿಂದಲೇ ‘ಕರುನಾಡಗ’ (ತಮಿಳು) ಕರ್ಣಾಟ-ಕರ್ಣಾಟಕ (ಸಂಸ್ಕೃತ) ಎಂದು ಪುರಾತನ ಕಾಲದಲ್ಲಿಯೇ ಹೆಸರಾಗಿದ್ದರೂ ಕಣ್ಣರೋ, ಕಳ್ಳರೋ ಈ ನಾಡಿನಲ್ಲಿ ತುಂಬಿದ್ದು, ಅವರ ಹೆಸರಿಂದಲೇ ನಮ್ಮ ನಾಡುನುಡಿಗಳ ಹೆಸರುಗಳು ರೂಪುಗೊಂಡವೆಂದು ನಮ್ಮ ಸಂಶೋಧಕ ಮಹನೀಯರು ನಿಃಶಂಕೆಯಿಂದ ತೀರ್ಪು ಕೊಡುವುದಕ್ಕೂ, ಅದನ್ನು ಅವಲಂಬಿಸಿ ಕಂನುಡಿ, ಕಂನಾಡು ಎಂಬ ಅಪಾರ್ಥಕ ಶಬ್ದಗಳನ್ನೂ ಸೃಷ್ಟಿಸಿರುವುದಕ್ಕೂ ವರ್ಣಪಲ್ಲಟ ತಥ್ಯಗಳ ಮತ್ತು ಪ್ರಮಾಣ ಶುದ್ಧಿಯ ಅಸಮಗ್ರವಾದ ಗ್ರಹಿಕೆಯೇ ಮುಖ್ಯಕಾರಣವಾಗಿದೆ ಎಂದು ಖೇದಪೂರ್ವಕವಾಗಿ ಹೇಳಬೇಕಾಗುತ್ತದೆ.

ತುಳು ಎಂಬೀ ಶಬ್ದದಲ್ಲಿರುವ ಳಕಾರವು ಮೂಲತಃ ಯಾವ ವ್ಯಂಜನವೆಂಬುದನ್ನು ನಿರ್ಣಯಿಸಿಕೊಳ್ಳದೆ ಅದರ ಅರ್ಥ ವಿಚಾರ ಮಾಡುವುದು ವ್ಯರ್ಥ. ತುಳು ಎಂಬ ಶಬ್ದವನ್ನು ಹೇಳುವಾಗ ತುಳುವರು ಕೆಲವರು ತುಲು ಎಂದು ಲಕಾರೋಚ್ಚಾರ ಮಾಡುವುದು ಕೇಳಿಬರುತ್ತಿದೆಯಾದರೂ, ಅದು ಮೂಲತಃ ಲಕಾರವಲ್ಲವೆಂಬುದನ್ನು ತಿಳಿದುಕೊಳ್ಳಲು ಕಷ್ಟವಿಲ್ಲ. ತುಲು ಎಂದು ಹೇಳುವವರು ‘ಳಲಯೋರಭೇದ’ದ ಕರೆನಾಡಿನವರು ಹೊರತು ಒಳನಾಡಿನವರಲ್ಲ. ಒಳನಾಡಿನ ತುಳುವರು ಅದನ್ನು ತುಳು ಎಂದೇ ಹೇಳುತ್ತಾರೆ. ಹಳೆಯ ಶಾಸನಗಳಲ್ಲೆಲ್ಲ ತುಳು ಎಂದೇ ಇದೆ. ಗೋವಿಂದ ಪೈಗಳು (ತೆಂಕ ನಾಡು ಪುಟ ೧೬-೧೭) ಅನೇಕ ಶಾಸನಗಳಲ್ಲಿ ಈ ಶಬ್ದವು ಕುಳವಾಗಿಯೇ ಉಲ್ಲೇಖಿತವಾದುದನ್ನು ಎತ್ತಿ ತೋರಿಸಿದ್ದಾರೆ. ಕೊಂಗಾಳ್ವರ ಒಂದು ಶಾಸನದಲ್ಲಿ ಮಾತ್ರ ತುೞುವ ಎಂದು ಱೞ ರೂಪವಿದೆ. ಎಂದು ಅವರು ಹೇಳುತ್ತಾರೆ. ನಮ್ಮ ಶಾಸನಗಳಲ್ಲಿ ಅಕ್ಷರ ಸ್ಖಾಲಿತ್ಯಗಳು ಅಪೂರ್ವವೇನೂ ಅಲ್ಲ. ಒಂದು ಸ್ಖಾಲಿತ್ಯವಿಲ್ಲದ ಶಾಸನವು ಕಾಣಸಿಕ್ಕುವುದೇ ದುರ್ಲಭವೆಂದು ಹೇಳುವಷ್ಟು ಅದು ಸಾಮಾನ್ಯವಾಗಿದೆ. ಕಾರಣವೇನೆಂದರೆ, ಹಿಂದಿನ ಕಾಲದಲ್ಲಿ ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಿದ್ಯೆ ಮಾತ್ರ ಮಿಸಲು ಎಂಬಂತಿತ್ತು. ಶಿಲ್ಪಿಗಳಿಗೆ ಶಿಲ್ಪವೆ ವಿದ್ಯೆಯಾಗಿತ್ತು ಹೊರತು ಬರಹವಲ್ಲ. ಬರಹಗಾರರಿಗೆ ಕಲ್ಲಿನಲ್ಲೋ ತಾಮ್ರದಲ್ಲೋ ಅಕ್ಷರ ಕೊರೆಯಲು ಬರುವಂತಿಲ್ಲ. ಬರಹಗಾರರಿಗೆ ಕಲ್ಲಿನಲ್ಲೋ ತಾಮ್ರದಲ್ಲೋ ಅಕ್ಷರ ಕೊರೆಯಲು ಬರುವಂತಿಲ್ಲ. ಇದರಿಂದಾಗಿ ನಮ್ಮ ಶಾಸನಗಳಲ್ಲಿ ಅಷ್ಟು ತಪ್ಪುಗಳು ಕಾಣಬರುತ್ತವೆ. ಅಲ್ಲದೆ ತುೞುವ ಎಂದು ಬರೆದಿದೆ ಎಂದು ಪೈಗಳು ಹೇಳುವ ಶಾಸನ ಕಾಲದಲ್ಲಿ (೧೧ನೆಯ ಶತಮಾನ) ಱೞ ಕುಳಗಳ ಉಚ್ಚಾರವು ಕನ್ನಡಿಗರಲ್ಲಿ ವೈಶಿಷ್ಟ್ಯವನ್ನು ಕಳೆದುಕೊಳ್ಳತೊಡಗಿತ್ತು. ಮತ್ತೆ ಒಂದೇ ಶತಮಾನದಲ್ಲಿ ಆ ಎರಡರೊಳಗೆ ಉಚ್ಚಾರ ಭೇದವು ವಿದ್ವಾಂಸರಲ್ಲಿಯೂ ಸಂಪೂರ್ಣ ಮಾಯವಾಗಿತ್ತೆಂಬುದು ಹರಿಹರ ಕವಿಯ ಮಾತಿನಿಂದ ಗೊತ್ತಾಗುತ್ತದೆ. ಆದುದರಿಂದ ಹತ್ತಾರು ಹಲವು ಶಾಸನಗಳಲ್ಲಿ ಕುಳವೇ ಕಾಣುತ್ತಿರಲಾಗಿ, ಒಂದೇ ಒಂದು ಶಾಸನದಲ್ಲಿ ಅದು ಱೞವಾಗಿ ಕಾಣಿಸಿಕೊಂಡುದಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ತಾತ್ಪರ್ಯವೇನೆಂದರೆ – ತುಳು ಶಬ್ದದಲ್ಲಿರುವ ಳಕಾರವು ಕುಳವೆಂಬುದುರಲ್ಲಿ ಸಂದೇಹಕ್ಕೆಡೆಯಲ್ಲ.

ಅದು ಕುಳವೇ ಎಂದು ನಿರ್ಧರಿಸಲು ತುಳುನಾಡಿನಲ್ಲಿಯೇ ಬಲವತ್ತಾದ ಆಧಾರವಿದೆ.

ಹಳಗನ್ನಡ ತಮಿಳು ಮೊದಲಾದ ಇತರ ದ್ರಾವಿಡ ಭಾಷೆಗಳ ಶಬ್ದಗಳಲ್ಲಿ ಎಲ್ಲೆಲ್ಲಿ ಱೞವಿದೆಯೋ ಅಲ್ಲೆಲ್ಲವೆಂಬಂತೆ ತುಳುವಿನಲ್ಲಿಂದು ರೇಫವಿದೆ. ಈ ಲೇಖನಲ್ಲಿ ಹಿಂದೆ ಉದಾಹರಿಸಿದ ಬಾೞಿ – ಬಾರೆ ಇತ್ಯಾದಿಗಳಿಂದ ಇದು ಸ್ಫುಟವಾಗಿರಬಹುದು. ಅದು ಸಾಲದಿದ್ದರೆ ನೋಡಿರಿ : ಬೀೞ್ – ಬೂರು, ಪೞ – ಪರ, ಬೋೞು- ಬೋರು ಇತ್ಯಾದಿ, ಇತ್ಯಾದಿ. ಈ ಸಾಧಾರಣ ನಿಯಮಕ್ಕೆ ಅಪವಾದಗಳು ಅತ್ಯಲ್ಪ. ಒಂದನ್ನು ಉದಾಹರಿಸುವುದಾದರೆ ಏಳ್ ಎಂಬ ಸಂಖ್ಯಾವಾಚಕ. ಇದು ಹಳಗನ್ನಡದಲ್ಲಿ ಏೞ್ ಎಂದು ಱೞ ಶಬ್ದವಾಗಿತ್ತು. ತಮಿಳು ಮೊದಲಾದುವಲ್ಲಿಯೂಇದು ಱೞವೇ. ಸಾಧಾರಣ ನಿಯಮದಂತೆ ಅದು ತುಳುವಿನಲ್ಲಿ ರೇಫವಾಗಿ ಏರ್ ಎಂದಾಗಬೇಕಿತ್ತು. ಹಾಗಾಗದೆ ಕನ್ನಡದಲ್ಲಿಂದು ಇರುವಂತೆಯೇ ಏಳ್ ಎಂದು ಆಗಿಬಿಟ್ಟಿದೆ. ಇದಕ್ಕೆ ಈ ಅಪವಾದ ರೂಪ ಬದಲು ಸಮಂಜಸವಾದ ಕಾರಣವಿದೆ. ‘ಏರ್’ ಎಂಬುದು ತುಳುವಿನಲ್ಲಿ ‘ಯಾರು’ ಎಂಬರ್ಥವನ್ನು ಕೊಡತಕ್ಕ ಏಕೈಕ ಸರ್ವನಾಮವಾಗಿರುತ್ತದೆ. ಸರ್ವನಾಮಗಳೂ ಸಂಖ್ಯಾವಾಚಕಗಳೂ ಯಾವುದೊಂದು ಭಾಷಾ ಶರೀರದ ಕೈಕಾಲುಗಳೆಂಬಂತಿರುವ ಶಬ್ದಗಳಾದುದರಿಂದ, ಬಳಕೆಯಲ್ಲಿ ಅವೆರಡರಲ್ಲಿ ಏಕರೂಪತೆ ಇದ್ದರೆ ಮಾತಿನ ಅರ್ಥವು ಅನ್ಯಥಾ ಆಗದುಳಿಯುದು. ಆದುದರಿಂದ ಅವುಗಳ ಸ್ವರೂಪಭೇದವನ್ನು ಸ್ಪುಟವಾಗಿ ಇಟ್ಟುಕೊಳ್ಳುವುದಕ್ಕಾಗಿ, ಏೞ್ ಎಂಬ ಹಳೆಯ ರೂಪವು ಏರ್ ಎಂದು ರೇಫವಾಗಿದೆ, ಱೞದ ಉಚ್ಚಾರವು ತುಳುವಿನಲ್ಲಿ ಲುಪ್ತವಾಗಿ ಹೋಗುತ್ತಿದ್ದ ಕಾಲದಲ್ಲಿ, ಏಳ್ ಎಂದು ಕುಳರೂಪಕ್ಕೆ ತಿರುಗಬೇಕಾಯಿತು. ಇನ್ನು ತುಳುನಾಡಿನ ಕೆಲವು ಭಾಗಗಳವರು ಅಣ್ಣ, ಅಕ್ಕ (ಕನ್ನಡ) ಎಂಬುದನ್ನು ‘ಪಳಯೆ’, ‘ಪಳಿ’ ಎಂದು ಹೇಳುತ್ತಾರೆ. ಪಳಯೆ, ಪಳಿ ಎಂಬವು ಮೂಲತಃ ‘ಪೞ’ ಎಂಬುದರಿಂದ ಹುಟ್ಟಿದುವಾದರೂ ಕುಳರೂಪವನ್ನು ಪಡೆದಿರುವುದು ಸಾಮಾನ್ಯ ನಿಯಮಕ್ಕೆ ಅಪವಾದವೆಂದು ತೋರಬಹುದು. ಆದರೆ ತುಳುನುಡಿಯ ಮೂಲಪ್ರತ್ಯಯಾದಿಗಳು ಇನ್ನೂ ಸ್ಪೂಟರೂಪದಲ್ಲಿಯೇ ಗೋಚರಿಸುವ (ಉದಾ: ಬೂತೊಗ್‌ಳು ಇತ್ಯಾದಿ)ಕೆಲವು ಪ್ರದೇಶಗಳಲ್ಲಿ ಅಣ್ಣ, ಅಕ್ಕ ಎಂಬುದನ್ನು ‘ಪರಯೆ’ ‘ಪರ್ದಿ’ ಎಂದೇ ರೇಫ ಶಬ್ದಗಳಾಗಿ ಉಚ್ಚರಿಸುವರೆಂಬುದನ್ನು ಲಕ್ಷಿಸಿದರೆ ಪಳಯೆ, ಪಳಿ – ಪಲಿ ಇತ್ಯಾದಿ ವಿಕೃತಿಗಳೆಲ್ಲ ಆಧುನಿಕ ರೂಪಗಳೆಂಬುದು ಸ್ಪಷ್ಟವಾಗದಿರದು. ಇನ್ನು ಕೆಲವೆಡೆ ಪುರಾತನ ಱೞ ಸ್ಥಾನಗಳಲ್ಲಿಂದು ಕುಳವು ತುಳುವಿನಲ್ಲಿ ಕಾಣುವುದಿದ್ದರೆ, ಅದು ಕನ್ನಡದಿಂದ – ಱೞವು ಕನ್ನಡದಲ್ಲಿ ಕುಳವಾಗಿ ರೂಪಾಂತರಗೊಂಡ ಮೇಲೆ – ತೆಗೆದುಕೊಂಡ ಶಬ್ದಗಳಲ್ಲಾಗಿರುತ್ತದೆ. ಉದಾ : ಹಳಗನ್ನಡದ ‘ಪಾೞ್’ ಹೊಸಗನ್ನಡದಲ್ಲಿ ‘ಹಾಳು’ ತುಳುವಿನಲ್ಲೀಗ ಅದು ‘ಹಾಳ್ – ಹಾಲ್ – ಆಲ್’ ಎಂದು ಕಿವಿಗೆ ಬೀಳುತ್ತದೆ. ಇದು ತುಳುವಿನಲ್ಲಿದ್ದ ಮೂಲ ಶಬ್ದವಾಗಿದ್ದಿದ್ದರೆ, ಪಕಾರ ಬದಲಾಗಿ ಅಲ್ಲಿ ಹಕಾರವು ಬರುತ್ತಿದ್ದಿಲ್ಲವೆಂಬುದು ಸ್ಪಷ್ಟ. ಏಕೆಂದರೆ ಕನ್ನಡದಲ್ಲಾದಂತೆ, ಹಳೆಯ ಪಕಾರಗಳು ತುಳುವಿನಲ್ಲಿ ಎಲ್ಲಿಯೂ ಹಕಾರವಾಗಿಲ್ಲ; ಪಕಾರವೇ ಅಲ್ಲಿ ಉಳಿದಿದೆ. ಉದಾ : ಪಾಲ್ – ಪೇರ್, ಪುರುಳ್ – ಪೊರ್ಳು ಅಥವಾ ಪೊರ್ಲು, ಪಲಸು – ಪೆಲ ಇತ್ಯಾದಿ. ಸಾರಾಂಶವೇನೆಂದರೆ: ‘ತುಳು’ ಎಂಬುದು ಮೂಲದಲ್ಲಿ ಱೞಶಬ್ದವಾಗಿದ್ದಿದ್ದರೆ, ತುಳುವಿನಲ್ಲಿ ಅದಿಂದು ‘ತುರು’ ಎಂದಾಗಬೇಕಿತ್ತು ಹೊರತು ತುಳು ಎಂದಿರುತ್ತಿರಲಿಲ್ಲ. ಆದುದರಿಂದ (ಒಂದನ್ನು ಬಿಟ್ಟು) ಎಲ್ಲ ಶಾಸನಗಳಲ್ಲಿ ಕಾಣುವಂತೆಯೇ, ಹಳೆಯ ಕನ್ನಡ ತಮಿಳು ಗ್ರಂಥಗಳಲ್ಲಿ ಬರೆದಿರುವಂತೆಯೇ, ಇಂದೂ ಸರ್ವತ್ರ ಉಚ್ಚರಿಸಲ್ಪಡುತ್ತಿರುವಂತೆಯೇ ಅದೊಂದು ಸಹಜ ಕುಳಶಬ್ದವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಈ ವಿಚಾರ ಮಾಡಿದವರಿಗೆಲ್ಲ ತುಳು ಎಂಬುದು ಕುಳಶಬ್ದವೆಂದು ಖಚಿತವಾಗಿ ಮನವರಿಕೆಯಾಗಿದ್ದರಬೇಕಾದರೂ, ಆ ಶಬ್ದದ ಅರ್ಥವೇನೆಂದು ಗೊತ್ತಾಗದಿರುವುದರಿಂದ ಅದು ಬೇರಾವುದೋ ಒಂದು ಶಬ್ದವು ವಿಕೃತಿಯಾಗಿರಬೇಕೆಂದು ಭಾವಿಸಿ ಕೆಲವರು ಸಂಶೋಧಕ ಮಹನೀಯರು, ಗೋವಾಚಕವಾದ ‘ತುರು’ (ವಸ್ತುತಃ ಇದು ತುರುವಲ್ಲ ‘ತುಱು’) ಎಂಬ ಶಬ್ದದ ರೂಪಾಂತರವಿದು ಎಂದು ಹೇಳತೊಡಗಿದ್ದಾರೆ. ಮತ್ತು ಈ ನಾಡಿನಲ್ಲಿ ‘ತುರುಕಾರರು’ ಎಂದರೆ ಗೋವಳರು ಒಂದು ಕಾಲದಲ್ಲಿ ತುಂಬಿದ್ದರೆಂದೂ ಅವರು ಭಾವಿಸುತ್ತಾರೆ. ಆದರೆ ಎಂತಹ ಮೂಢನಾದ ಗೋವಳನಾದರೂ ತನ್ನ ತುರು ಹಿಂಡನ್ನು ಮಾರುವುದಕ್ಕೆ ಹೊರತು – ಸಾಕಿ ಸಲಹಿ ತನ್ನ ಗೋಸಂಪತ್ತನ್ನೂ ಹೆಚ್ಚಿಸುವುದಕ್ಕಾಗಿ ಈ ನಮ್ಮ ತುಳುನಾಡಿಗೆ ಎಂದೂ ತರಲಾರನು. ಇಂಥ ನಿಮ್ನೋನ್ನತ ಭೂಮಿಗೆ, ಮಳೆಗಾಲದಲ್ಲಿ ಮಾಡುಗೋಡೆಗಳೊಳಗಲ್ಲದೆ ಹೊರಗೆ ಗೋವು ಬದುಕುವುದೆ ಅಸಾಧ್ಯವಾದ ನಾಡಿಗೆ, ಆ ಪುರಾತನ ಕಾಲದಲ್ಲಂತೂ ನಿಬಿಡವಾದ ಕಾಡುಗಳಿಂದ ತುಂಬಿದ್ದ ಈ ಹುಲಿಚಿರತೆಗಳ ರಾಜಧಾನಿಗೆ, ಬೇಸಗೆಯಲ್ಲಿ ಹಸಿಹುಲ್ಲು ದುರ್ಲಭವಾಗಿದ್ದು, ಕೃಷಿ ಇತ್ತೊ ಇಲ್ಲವೋ ಎಂದಿದ್ದ ಹಿಂದಿನ ಕಾಲದಲ್ಲಿ ನಿಸ್ಸಾರವಾದ ಒಣ ಮುಳಿಹುಲ್ಲು ಹೊರತು ಬೈಹುಲ್ಲು ಕೂಡ ಸಿಕ್ಕುವಂತಿಲ್ಲದಿದ್ದ ಈ ಊರಿಗೆ ತುರುಕಾರರು ಹಿಂಡುಹಿಂಡಾಗಿ ಬಂದು ನೆಲಸಿ ಈ ನಾಡನ್ನು ‘ತುರುನಾಡಾಗಿ’ಗಿ ಮಾಡಿದರು ಎಂಬ ಉಜ್ವಲವಾದ ಊಹೆಯು ನಿಜವಾಗಿಯೂ ಈ ನಮ್ಮ ಪುರಾತತ್ವ ಸಂಶೋಧನ ಯುಗದ ಒಂದು ಚೋದ್ಯವೆಂದೇ ನನ್ನ ಅಲ್ಪಮತಿಗೆ ತೋರುತ್ತದೆ.

ಎಷ್ಟೋ ಶತಮಾನಗಳಿಂದ ಇಂದಿನವರೆಗೂ ಈ ನಾಡಿಗೆ ಘಟ್ಟದ ಮೇಲಿನ ಬಯಲುಸೀಮೆಯಿಂದ ಪ್ರತಿವರ್ಷ ಇಪ್ಪತ್ತು ಮೂವತ್ತು ಸಾವಿರಕ್ಕೆ ಕಡೆಮೆಯಿಲ್ಲದೆ ಗೋಮಹಿಷ ವೃಂದಗಳು ಇಲ್ಲಿಯ ಜಾನುವಾರು ಸಂತೆಗಳಿಗೆ ಬಂದಿಳಿಯುತ್ತಾ ಇರುವುದು ಹೊರತು – ಅವು ಇಲ್ಲಿಂದ ನೇರಾಗಿ ಪರಲೋಕಕ್ಕೆ ಹೊರತು ಬೇರೆ ಯಾವ ನಾಡಿಗೂ ಹೋಗುವುದಿಲ್ಲವಾದರೂ – ಅವುಗಳ ಸಂತತಿ ಇಲ್ಲಿ ವರ್ಷವರ್ಷಕ್ಕೆ ಬೆಳೆಯುತ್ತ ಹೋಗುವುದೇಕೆ ಕಾಣುವುದಿಲ್ಲ? ಏಕೆಂದರೆ ಇದು ತುರುನಾಡಲ್ಲ; ಇಲ್ಲಿ ದನಗಳು ಬದುಕುವುದು ಕೇವಲ ಕೈತೀನಿಯಿಂದ: ಕೈತೀನಿಗೆ ಅನುವಿಲ್ಲದವುಗಳೆಲ್ಲ ಇಲ್ಲಿ ಬಡವಾಗಿ, ನಿರ್ಜೀವವಾಗಿ ಕೊನೆಗೆ ಕಣ್ಮರೆಯಾಗಿ ಹೋಗುತ್ತವೆ ಅಷ್ಟೆ. ಇನ್ನು ಈ ‘ತುರು’ ಎಂಬ ಶಬ್ದವು ‘ತುಳು’ ಎಂದು ರೂಪಾಂತರ ಹೊಂದುವುದಾದರೂ ಹೇಗೋ ! ತುರು ಎಂಬುದು ಮೂಲತಃ ರೇಫ ಶಬ್ದವಲ್ಲ; ಅಱ ಶಬ್ದ. ಅದರ ನಿಜ ರೂಪ ‘ತುಱು’ ಎಂದಾಗಿದೆ. ಅಱಯುಕ್ತವಾದ ಮೂಲ ಶಬ್ದಗಳು ತುಳುವಿನಲ್ಲಿ ಪಡೆದಿರುವ ರೂಪಗಳನ್ನು ಪರೀಕ್ಷಿಸಿದರೆ, ‘ತುಱು ಎಂಬುದು ತುಳುವಾಯಿತು’ ಎಂದು ಹೇಳುವ ಮಾತಿನಲ್ಲಿ ಅರ್ಥವೇನೂ ಇಲ್ಲವೆಂಬುದು ತಿಳಿದು ಬಾರದಿರದು.

ಉದಾ:

ಹೊಸಗನ್ನಡ ಹಳಗನ್ನಡ  ತುಳು
ಬರಿ ಬಱಿ ಬಜಿ
ತೊರೆ ತೊಱೆ ತುದೆ-ಸುದೆ(ನದಿ)
ಮೂರು ಮೂಱು ಮೂಜಿ
ನೂರು ನೂಱು ನೂದು
ಆರು ಆರು ಆಜಿ
ಅರೆ ಅಱೆ ಅದೆ(ಕೋಣೆ)
ಮರೆ ಮಱೆ ಮದೆ
ತೋರು ತೋಱು ತೋಜು

ಇತ್ಯಾದಿ, ಇತ್ಯಾದಿ

ಸಂಖ್ಯಾತವಾಚಕವಾದ ಒನ್‌ಱು (ತಮಿಳು) ಎಂಬುದು ತುಳುವಿನಲ್ಲಿ ಒಂಜಿ ಎಂದಾಗಿರುವುದನ್ನೂ ನೋಡಬಹುದಾಗಿದೆ. ಆದುದರಿಂದ ತುಱು ಎಂಬುದು ತುಳುವಿನ ಮೂಲವೆನ್ನುವುದು ಕೇವಲ ಅಸಂಗತ. ಈ ರೀತಿಯ ಭ್ರಮಕ್ಕೆ ನಮ್ಮ ದೊಡ್ಡ ದೊಡ್ಡ ವಿದ್ವಾಂಸರೂ ತುತ್ತಾಗಲು ಕಾರಣವು ಱೞ ಕುಳಗಳ ಹಾಗೂ ಅಱ ರೇಫಗಳ ಭಿನ್ನತೆಯ ಕಡೆಗೆ ಅವರು ತೋರಿದ ಅವಜ್ಞೆಯೇ ಆಗಿದೆ. ಸಾಮಾನ್ಯ ತುಳುವಿನಲ್ಲಿ ಇಂದು ರೇಫವಿರುವ ಕುಳವು ಗೋಚರಿಸುತ್ತಿರುವುದೇ (ಉದಾ: ತಾರೆ -ತಾಳೆ, ಪರತ್ತ್ – ಪಳತ್ತ್ ಇತ್ಯಾದಿ) ತುರು ಎಂಬುದು ತುಳು ಎಂದಾಗಬಲ್ಲುದೆಂಬ ಭ್ರಮೆಯನ್ನು ಹುಟ್ಟಿಸಿರಬಹುದೆಂದು ನನಗೆ ತೋರುತ್ತದೆ. ಆದರೆ ಆ ರೇಫಗಳೂ ಸಹಜ ರೇಫಗಳಲ್ಲ; ಆ ರೇಫಗಳ ರೂಪಾಂತರವಾಗಿ ಆ ಕುಳಗಳೂ ಹುಟ್ಟಿದುವಲ್ಲ; ಅವೆಲ್ಲ ಮೂಲತಃ ಱೞಗಳು. ಸಾಮಾನ್ಯ ತುಳುವಿನಲ್ಲಿ ಱೞಕ್ಕೆ ರೇಫಾದೇಶ ಬಂದಿರುತ್ತದೆ; ಬ್ರಾಹ್ಮಣರು ತುಳು ಪ್ರಭೇದದಲ್ಲಿ ಹೊಸಗನ್ನಡದಲ್ಲಾದ ಹಾಗೆ ಱೞಕ್ಕೆ ಕುಳಾದೇಶವಾಗಿರುತ್ತದೆ. ಈ ಸತ್ಯದ ಅರಿವಾಗಿದ್ದರೆ ಆ ಮಹನೀಯರುಗಳು ತುಱು-ತುರು-ತುಳು ಎಂದು ರೂಪಾಂತರವಾಯಿತೆಂಬ ನಿರಾಧಾರವೂ ಏತದ್ಭಾಷಾ ನಿಯಮ ವಿರುದ್ಧವೂ ಆದ ಅಭಿಪ್ರಾಯವನ್ನು ತಳೆಯುತ್ತಿರಲಿಲ್ಲವೆಂಬುದರಲ್ಲಿ ಸಂಶಯವಿಲ್ಲ. ನಾನು ಪರೀಕ್ಷಿಸಿದ ಮಟ್ಟಿಗೆ ಹೇಳುವುದಾದರೆ ಪುರಾತನವಾದ ಯಾವ ಅಱ ಶಬ್ದವೂ ತುಳುವಿನಲ್ಲಿ ಕುಳ ಶಬ್ದವಾಗಿ ಪರಿಣಮಿಸಿಲ್ಲ. ಅಱಗಳೆಲ್ಲ ದಕಾರವಾಗಿಯೋ ಜಕಾರವಾಗಿಯೋ ಮಾರ್ಪಟ್ಟಿವೆ. ಒಮ್ಮೊಮ್ಮೆ ಅದು ರೇಫವಾದಂತೆ ತೋರುವುದುಂಟು. ಉದಾ: ವಿಸ್ತೃತರ್ಥಕವಾದ ‘ಮಱೆ’ (ಕನ್ನಡದಲ್ಲಿ ಅಱಗಳೆಲ್ಲ ರೇಫಗಳಾಗಿವೆಯಷ್ಟೆ) ಇದು ವಸ್ತುನಾಮವಾದಾಗ ಇಂದಿನ ತುಳುವಿನಲ್ಲಿ ಮದೆ, ಮದೆಪ್ಪು ಎಂದೇ ಸರ್ವತ್ರ ರೂಢಿಯಲ್ಲಿರುವುದಾದರೂ, ವಿಸ್ಮೃತಿಯನ್ನು ಹೇಳುವ ಕ್ರಿಯೆಯಾದಲ್ಲಿ ರೇಫವೂ ಕೇಳಿಬರುತ್ತದೆ. ಉದಾ: ಮರಪ್ಪಡ (ಮರೆಯಬೇಡ) ಆದರೆ ಇದು ಆಧುನಿಕ ರೂಪವೇ ಸರಿ. ಏಕೆಂದರೆ ಹಳೆಯ ತುಳುವಿನ ಸ್ವರೂಪವನ್ನುಳಿಸಿಕೊಂಡ ತುಳುನಾಡಿನ ಭಾಗಗಳಲ್ಲಿ ಇದನ್ನು ದಕಾರ ಶಬ್ದವಾಗಿಯೆ ಉಚ್ಚರಿಸುತ್ತಾರೆ. ‘ಮರೆಯಬೇಡ’ ಎಂಬುದನ್ನವರು ‘ಮದಪ್ಪಡ’ ಎಂದೇ ಹೇಳುವುದನ್ನೂ ಇಂದೂ ಕೇಳಬಹುದಾಗಿದೆ. ಮಥಿತಾರ್ಥವೇನೆಂದರೆ -ತುಳುವಿನಲ್ಲಿ ಅಱವು ಕುಳವಾಗಿ ಪರಿಣಮಿಸಿದುದು ಎಲ್ಲಿಯೂ ಕಂಡುಬರುವುದಿಲ್ಲ. ಆದುದರಿಂದ ‘ತುಳುವಿನ’ ಮೂಲರೂಪ ತುಱು ಎಂದು ಹೇಳುವುದು ಆಧಾರವಿಲ್ಲದ ಬರಿಯ ವಚೋವಿಲಾಸ.

ಇದುವರೆಗಿನ ದೀರ್ಘವಾದ ವಿವರಣೆಯಿಂದ ತುಳು ಎಂಬ ಶಬ್ದದಲ್ಲಿರುವ ಳಕಾರವು ಬೇರೆ ಯಾವೊಂದು ವರ್ಣದ ವಿಕೃತಿಯಾಗಿರದೆ ಜನ್ಮತಃ ಕುಳವೆಂಬುದು ಸಿದ್ಧವಾದಂತಾಯಿತು. ಇನ್ನು ಈ ಶಬ್ದದ ಅರ್ಥವನ್ನು ತಿಳಿಯುವುದಕ್ಕೆ ತುಳು ಭಾಷೆಯಲ್ಲಿಯೆ ಏನಾದರೂ ಆಧಾರವಿದೆಯೇ ಎಂದು ನೋಡೋಣ.

ತುಳುನಾಡಿಯಲ್ಲಿಯೂ ತುಳುನಾಡಿನಲ್ಲಿ ನೆಲಸಿರುವ ಹವೀಕರ ಕನ್ನಡ ನುಡಿಯಲ್ಲಿಯೂ ತುಳು ಎಂಬೀ ಶಬ್ದವು ದೇಶವಾಚಕವಾಗಿ ಹಾಗೂ ಭಾಷಾವಾಚಕವಾಗಿ ಮಾತ್ರವಲ್ಲ, ಬೇರೊಂದು ಅರ್ಥದಲ್ಲಿ ಸಹ ಒಂದೆರಡು ಸಂದರ್ಭಗಳಲ್ಲಿ ಪ್ರಯುಕ್ತವಾಗುವುದಿದೆ. ಅದೇನೆಂದರೆ – ಹಲಸಿನ ಹಣ್ಣಿನಲ್ಲಿ ಎರಡು ಜಾತಿಗಳಿವೆಯಷ್ಟೆ. ಅವುಗಳೊಂದಿಗೆ ಮೆತ್ತಗಿದ್ದು ದ್ರವಾಂಶವು ಅಧಿಕಾಗಿರುವ ಒಂದು ಜಾತಿಯನ್ನು ‘ತುಳುವ’ ಎಂದೂ, ಅಷ್ಟು ಮೆತ್ತಗಿಲ್ಲದೆ ದ್ರವಾಂಶವು ಕಡಿಮೆಯಾಗಿರುವುದನ್ನು ‘ಬರಿಕ್ಕೆ’ ಎಂದೂ ತುಳುವಿನಲ್ಲಿ ಹೇಳುತ್ತಾರೆ (ಇವುಗಳನ್ನು ಹವೀಕರು ಅನುಕ್ರಮವಾಗಿ ತುಳುವ, ಬಕ್ಕೆ ಎನ್ನುತ್ತಾರೆ). ಈ ಶಬ್ದಗಳನ್ನು ವಿಶೇಷ್ಯವಾದ ಹಲಸಿನೊಡನೆ ವಿಶೇಷಣ ವಾಗಿಯೂ ಬಳಸುತ್ತಾರೆ. ಆಗ ತುಳುವಿನಲ್ಲಿ ಅವು ಹೀಗಾಗುತ್ತೆ; ತುಳುವ ಪೆಲಕ್ಕಾಯಿ, ಬರಿಕ್ಕ ಪೆಲಕ್ಕಾಯಿ. ಹಲಸಿಗೆ ಮಾತ್ರವಲ್ಲ, ಮಾವಿಗೂ ಈ ವಿಶೇಷಣಗಳನ್ನು ಬಳಸುವುದುಂಟು. (ಉಪ್ಪಿನಕಾಯಿಗೆ ಯಾವುದೊಂದು ಮಾವಿನಕಾಯಿಯ ಉಪಯುಕ್ತತೆಯನ್ನು ವಿಮರ್ಶಿಸುವ ಸಂದರ್ಭದಲ್ಲಿ ಹಳ್ಳಿಯ ಹೆಂಗುಸರು ಈ ವಿಶೇಷಣಗಳಿಂದ ಬಳಸುವುದನ್ನು ಕೇಳಬಹುದಾಗಿದೆ) ಈ ವಿಶೇಷಣ ಪ್ರಯೋಗಗಳಿಂದ ಆ ಶಬ್ದಾರ್ಥದ ಕಿರು ಬೆಳಕೊಂದು ನಮಗೆ ಕಾಣುವಂತಿದೆಯಾದರೂ, ಅದರು ಹಣ್ಣಿನ ಮೃದುತ್ವವನ್ನು ಹೇಳುತ್ತದೋ ಅಥವಾ ದ್ರವಾಧಿಕ್ಯವನ್ನು ತಿಳಿಸುತ್ತದೋ ಎಂಬುದು ಖಚಿತವಾಗಿ ಗೊತ್ತಾವುವುದಿಲ್ಲ. ಆದರೆ ಆ ಎರಡು ಅರ್ಥಗಳೊಳಗೆ ಒಂದನ್ನು ಅದು ಹೇಳುವುದು ಖಂಡಿತ. ಅದು ಮೃದುತ್ವವನ್ನೇ ಸೂಚಿಸುತ್ತದೆಂದು ಭಾವಿಸಿ, ಇಲ್ಲಿಯ ಜನರು ಮೃದು ಸ್ವಭಾವದಿಂದಾಗಿ ಈ ನಾಡಿಗೆ ತುಳುನಾಡು ಎಂಬ ಹೆಸರು ಬಂತೆಂದು ಏನೇನೋ ಊಹೆ ಮಾಡಿದವರಿದ್ದಾರೆ. ದಿ |ಪೈಗಳು ಜನರ ಸ್ವಭಾವದ ಮೃದುತ್ವವನ್ನದು ಸೂಚಿಸುವಂತಿಲ್ಲವೆಂದೂ, ಒಂದು ವೇಳೆ ಸಮುದ್ರ ತೀರದ ಮಣ್ಣಿನ ಮೃದುತ್ವವನ್ನನುಲಕ್ಷಿಸಿ ಆ ಹೆಸರು ಬಂದಿರಲೂಬಹುದೋ ಏನೋ ಎಂದೂ ಹೇಳುತ್ತಾರೆ (ತೆಂಕನಾಡು – ಪುಟ ೧೯).