[ಶಾತವಾಹನ ರಾಜರ ಎರಡನೆಯ ಶತಮಾನದ ಒಂದು ಪ್ರಾಕೃತ ಶಾಸನದಲ್ಲಿ ತುಳುನಾಡಿಗೆ ಅನೂಪದೇಶವೆಂಬ ಹೆಸರೇ ಆ ಕಾಲದಲ್ಲಿದಿರಬಹುದೆಂಬ ಊಹೆಗೆ ಅವಕಾಶವಿದೆ. (ಕನ್ನಡ ಲಿಪಿಯ ಉಗಮ ಮತ್ತು ವಿಕಾಸ’ – ಪುಟ ೧೨೩, ಚಿತ್ರ ೬೦) ಆ ರಾಜನ ಅಧೀನತೆಯಲ್ಲಿದ್ದ ಹಲವು ದೇಶಗಳನ್ನು ಕ್ರಮಶಃ ಹೆಸರಿಸುವ ಸಂದರ್ಭದಲ್ಲಿ ‘ಅಪರಂತ’ (=ಕೊಂಕಣ) ವನ್ನು ಹೇಳಿದೊಡನೆ ‘ಅನುಪ’ವನ್ನು ಹೇಳಲಾಗಿದೆ. (ಸಂಸ್ಕೃತದ ‘ಅಪರಾಂತ’ ‘ಅನೂಪ’ ಎಂಬು ರೂಪಗಳು ಪ್ರಾಕೃತದಲ್ಲಿ ‘ಅಪರಂತ’ ‘ಅನುಪ’ ಎಂದಾಗಿರುತ್ತವೆ. ಅನಂತರ ‘ವಿದಭ’ ಎಂದರೆ ವಿದರ್ಭದ ಹೆಸರು ಬಂದಿದೆ. ನರ್ಮದಾ ತೀರದ ಒಂದು ದೇಶಕ್ಕೂ ಆ ಕಾಲದಲ್ಲಿ ಅನೂಪ ಎಂಬ ಹೆಸರಿತ್ತು. (ರಘು – ಸರ್ಗ ೬-೩೩) ಸುತ್ತಮುತ್ತಣ ಜಾಂಗಲಪ್ರಾಯವಾದ ದೇಶಗಳಂತಲ್ಲದೆ ಜಲ ಸಮೃದ್ಧವಾಗಿದ್ದುದರಿಂದ ಆ ಭೂಭಾಗಕ್ಕೂ ‘ಅನೂಪ’ ವೆಂಬ ಹೆಸರಾಯಿತೆಂದು ಸ್ಪಷ್ಟ. ಆದರೆ ಅದು ಅಪರಾಂತಕ್ಕೂ ವಿದರ್ಭಕ್ಕೂ ಮಧ್ಯದಲ್ಲಿಲ್ಲದೆ, ಬಹಳ ಉತ್ತರಕ್ಕಿದೆ. ಅಪರಾಂತ (ಕೊಂಕಣ)ದ ನೆರೆಯ ತುಳುನಾಡಿಗೆ, ಅನೂಪ ಎಂಬ ಶಬ್ದದ ತದ್ಭವ ರೂಪವೆಂಬುದರಲ್ಲಿ ಸಂದೇಹ ತೋರದಿರುವ ಆಲುವ – ಆಳುವ ಇತ್ಯಾದಿ ಹೆಸರು ಆ ಕಾಲದಲ್ಲಿತ್ತೆಂಬುದರಲ್ಲಿ ಮತ ಭೇದವಿಲ್ಲ. ಆದುದರಿಂದ ಆ ಶಾಸನದ ಪ್ರಾಕೃತ ಭಾಷೆಯಲ್ಲಿ ‘ಅನುಪ’ ಎಂದು ಹೆಸರಿಸಿದುದು ನಮ್ಮ ತುಳುನಾಡನ್ನೇ ಆಗಿರಬಹದೆಂದು ತೋರುತ್ತದೆ]

ಹೊಯ್ಸಳರ ಶಾಸನಗಳಲ್ಲಿ ಈ ನಾಡನ್ನು ‘ಆಳ್ವಖೇಡ’ ಎಂದೂ, (ಖೇಡ-ಬೆಟ್ಟದ ತಪ್ಪಲು-ಕಿಟ್ಟೆಲ್. ಈ ನಾಡು ಘಟ್ಟಗಳ ಮಗ್ಗುಲೆ ಆಗಿರುವುದರಿಂದ, ಘಟ್ಟದ ಮೇಲಿನವರು ಆ ಹೆಸರು ಕೊಟ್ಟುದು ಉಚಿತವೇ ಸರಿ) ‘ತುಳು ದೇಶ’ ವೆಂದೂ ಸಮಕಾಲದಲ್ಲಿ ಹೇಳಲಾಗಿದೆ ಎಂದು ಪೈಗಳು ತಿಳಿಸಿದ್ದಾರೆ (ತೆಂಕನಾಡು, ಪುಟ ೧೯). ತುಳು ಮತ್ತು ಆಳ್ವ ಎಂಬೀ ಎರಡು ಶಬ್ದಗಳ ಮೂಲಾರ್ಥವನ್ನು ಕಂಡುಕೊಂಡಿರುವ ನಮಗೆ ಇದರಲ್ಲಿ ಸೋಜಿಗವೇನೂ ಕಾಣುವಂತಿಲ್ಲ. ಅವರೆಡೂ ಏಕಾರ್ಥಕಗಳಾಗಿದ್ದು ಒಟ್ಟೊಟ್ಟಿಗೆ ಬೆಳೆದ ಹೆಸರುಗಳಾದುದರಿಂದ, ಶಾಸನಾದಿಗಳಲ್ಲಿ ಸಮಕಾಲದಲ್ಲಿ ಅಂಕಿತವಾಗಲೂ ಕಾರಣವಾಯಿತು. ಒಂದು ದೇಶೀಯ ಶಬ್ದ. ಇನ್ನೊಂದು ಸಂಸ್ಕೃತ ಮೂಲದಿಂದ ಬಂದ ಶಬ್ದ; ಎರಡರ ಅರ್ಥವೂ ಒಂದೇ; ಎರಡೂ ಅನ್ವರ್ಥನಾಮಗಳೇ.

ಹನ್ನೆರಡನೆಯ ಶತಮಾನದ ಹೊಯ್ಸಳ ವಿಷ್ಣುವರ್ಧನನ ಒಂದು ಶಾಸನದಲ್ಲಿ ‘ ಏಳು ತುಳು ದೇಶಗಳು’ ಎಂಬ ಉಲ್ಲೇಖವಿದೆಯೆಂದೂ, ‘ಸಪ್ತ ಕೊಂಕಣ’ ವೆಂದೂ ಬೇರೆಡೆಯಲ್ಲಿ (ಪ್ರಪಂಚ ಹೃದಯ) ಹೇಳಿದ್ದನ್ನೇ ಏಳು ತುಳು ದೇಶಗಳೆಂದು ಇಲ್ಲಿ ಹೇಳಿದ್ದಿರಬಹುದೋ ಏನೋ ಎಂದೂ ಪೈಗಳು ಹೇಳುತ್ತಾರೆ (ತೆಂಕನಾಡು – ಪುಟ ೧೬). ‘ಪರಶುರಾಮ ಕ್ಷೇತ್ರ’ವೆಂದು ಪ್ರಸಿದ್ಧವಾದ ಈ ಭೂಭಾಗದಲ್ಲಿ ಏಳು ದೇಶಗಳು ಅಡಕವಾಗಿದ್ದುವೆಂದು ಹಳೆಯ ಗ್ರಂಥಗಳು ಹೇಳುತ್ತವೆ. ಆ ಏಳನ್ನೂ ಒಂದೇ ಹೆಸರಿನಿಂದ ಹಾಗೂ ಏಳು ಬೇರೆ ಬೇರೆ ಹೆಸರುಗಳಿಂದ ಅವುಗಳಲ್ಲಿ ನಿರ್ದೇಶಿಸಲಾಗಿದೆ. ಈ ಸಪ್ತ ಕೊಂಕಣವನ್ನೇ ‘ಸಪ್ತ ಕೇರಳ’ವೆಂದೂ ಹೇಳಲಾಗಿದೆ ಎಂದು ಎಲ್ಲಿಯೋ ಓದಿದ ನೆನಪು ನನಗಿದೆ. ವಿಷ್ಣುವರ್ಧನನ ಶಾಸನದಲ್ಲಿ ಹೇಳಿದ ‘ಏಳು ತುಳು ದೇಶಗಳು’ ಎಂಬುವು ಸಹ ಅವೇ ಆಗಿರಬೇಕೆಂದು ಪೈಗಳು ಊಹಿಸಿದ್ದು ಸರಿಯೆಂದೇ ನನಗೆ ತೋರುತ್ತದೆ. ಹೀಗೆ ಒಮ್ಮೆ ‘ಕೊಂಕಣ’ವೆಂದೂ ಇನ್ನೊಮ್ಮೆ ‘ಕೇರಳ’ವೆಂದೂ ‘ತುಳು’ ಎಂದೂ ಇಡೀ ಪರಶುರಾಮ ಕ್ಷೇತ್ರಕ್ಕೆ ಹೆಸರು ಬರಲು ಕಾರಣವೇನೆಂಬುದನ್ನು ಕಂಡುಹಿಡಿಯಬೇಕಾದರೆ ಕೊಂಕಣ, ಕೇರಳ, ತುಳು ಎಂಬೀ ಮೂರು ಶಬ್ದಗಳ ಮೂಲಾರ್ಥಗಳನ್ನು ಮೊದಲು ತಿಳಿದುಕೊಳ್ಳುವುದು ಅವಶ್ಯ.

ಕೇರಳವೆಂದು ಇಂದೂ ಪ್ರಸಿದ್ಧವಾಗಿರುವ ಭೂಭಾಗವು ಪುರಾತನ ಕಾಲದಲ್ಲಿ ತಮಿಳುನಾಡಿನ ಒಂದು ಭಾಗವೇ ಆಗಿದ್ದು ತಮಿಳಿನಲ್ಲಿ ಚೇರ ಎಂಬ ಹೆಸರನ್ನು ಪಡೆದಿತ್ತೆಂಬುದು ಇತಿಹಾಸ ಪ್ರಸಿದ್ಧವಾದ ಸಂಗತಿ. ಈ ಚೇರ ಎಂಬ ಶಬ್ದದಲ್ಲಿರುವ ರಕಾರವು ರೇಫ, ಎಂದರೆ ಅಱವಲ್ಲ, ಶುದ್ಧ ರಕಾರ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಪುರಾತನ ಗ್ರಂಥಗಳಲ್ಲಿಯೂ, ಆಧುನಿಕ ಕೋಶಗಳಲ್ಲಿಯೂ, ಕಿಟ್ಟೆಲರ ಕೋಶದಲ್ಲಿ ಸಹ ಇದು ಚೇರ ಎಂದು ರೇಫ ರೂಪದಲ್ಲಿಯೇ ಇದೆ. ಆದರೆ ಗೋವಿಂದ ಪೈಗಳು ಇದನ್ನು ‘ಚೇಱ’ ಎಂದು ತಮ್ಮ (ತೆಂಕನಾಡು- ಪು ೧೯) ಲೇಖನದಲ್ಲಿ ಅಱವಾಗಿಯೆ ಬರೆದು ಅರ್ಥಯಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಇಲ್ಲಿ ಯಾವ ಆಧಾರವನ್ನು ಅವರು ಕಂಡರೋ ನಾನು ಹೇಳಲಾರೆ! ಕೆಸರು ಎಂಬರ್ಥದ ‘ಚೇಱು’ ಎಂಬ (ತಮಿಳೋ, ಮಲಯಾಳವೋ)ಶಬ್ದದಿಂದ ಚೇಱ ಎಂಬ ಹೆಸರು ಹುಟ್ಟಿತೆಂದು ಅವರ ಪ್ರತಿಪಾದನೆ. ವರ್ಣಪಲ್ಲಟ ಸಂದರ್ಭಗಳಲ್ಲಿ ಅವರು ಅಱ ರೇಫಗಳ ಹಾಗೂ ಱೞ ಕುಳಗಳ ಭೇದಕ್ಕೆ ಮಹತ್ವವನ್ನು ಕೊಡುತ್ತಿರಲಿಲ್ಲವೆಂಬುದು ಅವರ ಲೇಖನಗಳಿಂದ ಗೊತ್ತಾಗುತ್ತದೆ. ಆದರೆ ಆ ಭೇದಗಳನ್ನು ಲಕ್ಷಿಸದೆ ದ್ರಾವಿಡ ಭಾಷಾ ಶಬ್ದಗಳಲ್ಲಿ ಮಾಡುವ ಅನುಸಂಧಾನವು ಸತ್ಯದ ಗುರಿಗೆ ನಮ್ಮನ್ನು ಕರೆದೊಯ್ಯಲಾರದೆಂಬುದನ್ನು ಈ ಮೊದಲೇ ಸವಿವರವಾಗಿ ನಿರೂಪಿಸಿದ್ದೇನೆ. ಆದುದರಿಂದ ಚೇರ ಶಬ್ದಾರ್ಥ ವಿಚಾರದಲ್ಲಿ ಪೈಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಸತ್ಯಾನ್ವೇಷಣಕ್ಕೆ ಸಾಹಾಯ್ಯವೇನೂ ದೊರೆಯುವಂತಿಲ್ಲವೆಂದು ವಿನಮ್ರವಾಗಿ ನಿವೇದಿಸುತ್ತೇನೆ.

ತುಳು ಶಬ್ದಕ್ಕೆ ಈ ವರೆಗೂ ಹೇಗೂ ‘ಚೇರ’ ಎಂಬೀ ಶಬ್ದಕ್ಕೂ ನಿಷ್ಪತ್ತಿ ಏನೆಂಬುದನ್ನು ಯಾರೂ ಸಮಂಜಸವಾಗಿ ಹೇಳಿದಂತಿಲ್ಲ. ಚೇರ ಎಂಬ ಭೂಭಾಗಕ್ಕೆ ಕೇರಲ-ಕೇರಳ ಎಂಬ ಇನ್ನೊಂದು ಹೆಸರೂ ಅತಿ ಪುರಾತನ ಕಾಲದಿಂದ ರೂಢಿಯಲ್ಲಿದೆ. ಅಶೋಕನ ಶಾಸನಗಳಲ್ಲಿ ಅದನ್ನು ‘ಕೇರಲ’ ಎಂದೇ ನಿರೂಪಿಸಲಾಗಿದೆ. ಪುರಾತನ ತಮಿಳು ಗ್ರಂಥವಾದ ‘ಶಿಲಪ್ಪದಿಕಾರ’ದಲ್ಲಿ ಕೇರಳವೆಂಬ ಹೆಸರಿಲ್ಲವೆಂದೂ ಮತ್ತು ಆ ದೇಶದ ಹೆಸರನ್ನು ಕೇವಲ ‘ಚೇರ’ ಎಂದಿಷ್ಟೇ ಹೇಳದೆ ‘ಚೇರನಾಟ್ಟ್’ ಎಂದೇ ಹೇಳಲಾಗಿದೆ ಎಂದೂ ಅದನ್ನು ಪಠಿಸಿದವರು ಹೇಳುತ್ತಾರೆ. ಆದರು ಈ ಚೇರ – ಕೇರಲ ಎಂಬ ಎರಡು ಹೆಸರುಗಳೊಳಗೆ ಒಂದು ಮತ್ತೊಂದರ ರೂಪಾಂತರವೆಂಬುದು ಸ್ಪಷ್ಟವೆಂದೇ ನನಗೆ ತೋರುತ್ತದೆ. ಏಕೆಂದರೆ ದ್ರಾವಿಡ ಭಾಷೆಗಳೊಳಗೆ ಒಂದರಲ್ಲಿ ವಿಶಿಷ್ಟ ಶಬ್ದಾರಂಭವು ಕಕಾರವಾಗಿರುವಾಗ ಮತ್ತೊಂದರಲ್ಲಿ ಚಕಾರವು ಈ ಶಬ್ದಾರಂಭದಲ್ಲಿರುತ್ತದೆ. ಉದಾ: ಚೇರಿ, (ತಮಿಳು, ಮಲಯಾಳ) ಕೇರಿ (ಕನ್ನಡ) ಅಷ್ಟು ಮಾತ್ರವಲ್ಲ: ಒಂದೇ ಭಾಷೆಯಲ್ಲಿ ಅದು ಒಮ್ಮೆ ಕಕಾರವಾಗಿಯೂ ಇನ್ನೊಮ್ಮೆ ಚಕಾರವಾಗಿಯೂ ಕಾಣಿಸಿಕೊಳ್ಳುತ್ತದೆ. ಉದಾ: (ಕನ್ನಡದ)ಚೆಂದೆಂಗು – ಕೆಂದೆಂಗು (ಚೆನ್=ಕೆನ್) ಆದುದರಿಂದ ‘ಕೇರಲ’ ಎಂಬುದರಲ್ಲಿರುವ ಲಕಾರವನ್ನು ಬಿಟ್ಟರೆ ಅವೆರಡೂ ಒಂದೇ ಶಬ್ದದ ಎರಡು ರೂಪಗಳೆನ್ನಬಹುದಾಗಿದೆ. ಈ ಕಾಲವು ಕೇರ ಎಂಬ ಶಬ್ದಕ್ಕೆ ಸೇರಿಕೊಂಡಿತೆಂಬುದು ಮಾತ್ರ ಇಲ್ಲಿ. ವಿಚಾರಸರಣೀಯವಾಗಿದೆ. ಅದೇನೂ ದುರೂಹ್ಯವಲ್ಲವೆಂದು ನನಗೆ ಕಾಣುತ್ತದೆ.

ಕೇರಲ ಎಂಬ ರೂಪವು ಮೂಲತಃ ನಮಗೆ ಕಂಡುಬರುವುದು ಸಂಸ್ಕೃತದಲ್ಲಿ ಹಾಗೂ ಪ್ರಾಕೃತಗಳಲ್ಲಿ. ಹಳೆಯ ತಮಿಳಿನಲ್ಲಿ ಕಾಣುವುದು ‘ಚೇರ’ವೆಂದೇ ಆಗಿದೆ. (ಮಲಯಾಳವು ತಮಿಳಿನಿಂದ ಹುಟ್ಟಿದ, ಅತಿ ಪುರಾತನವಲ್ಲದ ಭಾಷೆಯಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಇಲ್ಲಿ ಪರಿಗಣಿಸುವ ಅವಶ್ಯಕತೆ ಇಲ್ಲ) ಹಾಗಾದರೆ ‘ಕೇರಲ’ ಎಂಬುದು ದ್ರಾವಿಡ ‘ಚೇರ’ದ ಸಂಸ್ಕೃತ ರೂಪವೆಂದು ಭಾವಿಸಬೇಕಾಗುತ್ತದೆ. ಅನೇಕ ಪುರಾತನ ದೇಶನಾಮಗಳು ಸಂಸ್ಕೃತ ರೂಪಗಳಲ್ಲಿ ಕೊನೆಗೊಂದು ಲಕಾರವಿರುವುದನ್ನು ನೋಡಬಹುದು. ಉದಾ: ಕೋಸಲ -ಕೋಶಲ, ಕುಂತಲ, ಉತ್ಕಲ, ಸಿಂಹಲ ಇತ್ಯಾದಿ. ಈ ಲಕಾರವು ಮೂಲ ಶಬ್ದಕ್ಕೆ ಸೇರಿದ ಪ್ರತ್ಯಯವೆಂದೆ ಭಾವಿಸುವುದು ಉಚಿತ. ಈ ಪ್ರತ್ಯಯವು, ಶ್ಮಶ್ರುಲ (ಶ್ಮಶ್ರುಗಳುಳ್ಳ ಎಂದರೆ ಗಡ್ಡ ಮೀಸೆ ತುಂಬಿದ) ಮಾಂಸಲ (ಮಾಂಸ ತುಂಬಿದ) ವಾತಲ (ವಾತದೋಷವುಳ್ಳ) ಇತ್ಯಾದಿಗಳಲ್ಲಿರುವ ಪ್ರತ್ಯಯವೇ ಆಗಿದ್ದು, ತತ್ಸಮಾನವಾದ ಅರ್ಥದ್ಯೋತಕವಾಗಿದೆ. ಹಾಗಾದರೆ ಕೋಶ, ಕುಂತ, ಸಿಂಹ ಇತ್ಯಾದಿ ಶಬ್ದಗಳ ಅರ್ಥವೇನಿದೆಯೋ ಅದು ವಿಶಿಷ್ಟ ಲಕ್ಷಣವಾಗಿರುವ ದೇಶಗಳು ಕೋಶಲ, ಕುಂತಲ, ಸಿಂಹಲ ಇತ್ಯಾದಿಗಳೆಂದಾಗುತ್ತದೆ. ಇದನ್ನನುಸರಿಸಿ ಹೇಳುವುದಾದರೆ ಕೇರಲ ಎಂಬ ಶಬ್ದದ ಅರ್ಥವು ‘ಚೇರ’ವೂ ಒಂದೇ. ಹಾಗಾದರೆ ಚೇರ – ಕೇರ ಎಂಬೆರಡು ರೂಪವುಳ್ಳ ಈ ಶಬ್ದ ಮೂಲಾರ್ಥವೇನಾಗಿರಬಹುದು? ತಮಿಳಿನಲ್ಲಾಗಲಿ ಕನ್ನಡದಲ್ಲಾಗಲಿ ಈ ಶಬ್ದಕ್ಕೆ ಆ ಹೆಸರಿನ ದೇಶ ಎಂಬುದಲ್ಲದೆ, ಬೇರಾವ ಅರ್ಥವೂ ದೊರಕಿಲ್ಲ.

ಇದರ ಅರ್ಥವನ್ನು ತುಳುನುಡಿ ನಮಗೆ ತಿಳಿಸುತ್ತದೆ. ತುಳುವಿನಲ್ಲಿ ಕಡಿದಾದ ಗುಡ್ಡವನ್ನು ‘ಜೇರ’ ಎನ್ನುತ್ತಾರೆ. ತುಳುನಾಡಿನಲ್ಲಿ ‘ಮಾಯಿಲ’ ಎಂಬ ಒಂದು ಗಿರಿಜನ ಪಂಗಡವಿದೆ. ಅವರು ಆಡುವ ಮಾತು ಮಲಯಾಳ. ಮೊನ್ನೆ ಮೊನ್ನೆಯವರೆಗೂ ಅವರು ಎತ್ತರವಾದ ಗುಡ್ಡಗಳಲ್ಲೆ ವಾಸಿಸುತ್ತಿದ್ದರು. ಅವರು ವಾಸಿಸುವ ಗುಡ್ಡವನ್ನು ತುಳುವರು ‘ಮಾಯಿಲೆರ ಚೇರ’ (ಮಾಯಿಲೆರೆ =ಮಾಯಿಲರ) ಎನ್ನುತ್ತಾರೆ. ತುಳುವಿನ ಈ ಚೇರ – ಜೇರಗಳು ಒಂದೇ ಶಬ್ದದ ಭಿನ್ನ ರೂಪಗಳೆನ್ನುವುದರಲ್ಲಿ ಸಂದೇಹವಿರಲಾರದು.

ತಮಿಳಿನಲ್ಲಿ ‘ಚೇರಿ’ ಎಂಬದಕ್ಕೆ ಬೀದಿ. ಗ್ರಾಮ (ಎಂದರೆ ಮನೆಗಳ ಗುಂಪು) ಕಾಡುಭೂಮಿ ಇತ್ಯಾದಿ ಹಲವು ಅರ್ಥಗಳಿವೆಯೆಂದು ತಮಿಳು ಕೋಶಗಳಿಂದ ತಿಳಿದು ಬರುತ್ತದೆ. ಕನ್ನಡದಲ್ಲಿ ಇದರ ಪ್ರತಿರೂಪವಾದ ‘ಕೇರಿ’ ಎಂಬುದಕ್ಕೆ ಹಲವು ಅರ್ಥಗಳು ಕಾಣುವುದಿಲ್ಲ; ‘ಮನೆಗಳು ನಿಬಿಡವಾಗಿರುವ ಬೀದಿ’ ಎಂಬ ಒಂದೇ ಅರ್ಥವಿದೆ. ಕನ್ನಡದ ಈ ‘ಕೇರಿ’ಯ ಮೂಲ ಯಾವುದೆಂದು ಶೋಧಿಸಿದರೆ ‘ಕೇರ್’ ಎಂಬುದಾಗಿರಬೇಕೆಂದು ತೋರುವುದು. ಹಳಗನ್ನಡದಲ್ಲಿ ಕೇರ್ ಎಂದರೆ ಗೋಡೆ ಎಂದರ್ಥ. ಕೇರಿ ಎಂದರೆ ಕಟ್ಟಡಗಳ ಸಾಲು, ಎಂದರೆ (ಕಟ್ಟಡದ) ಗೋಡೆಗಳ ಸಂತತಿ – ಈ ಅರ್ಥದಲ್ಲಿ ‘ಕೇರ್’ ಎಂಬ ಶಬ್ದದಿಂದ ‘ಕೇರಿ’ ಹುಟ್ಟಿರಬೇಕು. ತುಳುವಿನಲ್ಲಿ ಕೇರ್ ಎಂಬೊಂದು ಧಾತುವಿದೆ. ಅಲ್ಲಿ ‘ಕೇರ್ಪು’ ಎಂಬ ಕ್ರಿಯಾರೂಪಕ್ಕೆ ‘ಮೇಲೇರಿಸು’ ಎಂದೂ ‘ಕೇರ್ಪು’ ಎಂಬ ನಾಮಕ್ಕೆ ಮೇಲೇರುವ ಏಣಿ ಎಂದೂ ಅರ್ಥ. ಇದರಿಂದ ತುಳುವಿನ ಕೇರಂ ಎಂಬ ಧಾತುವಿಗೆ ‘ಮೇಲಕ್ಕೇರು’ ಎಂಬುದೇ ಅರ್ಥವೆಂದಾಯಿತು. ಕನ್ನಡದಲ್ಲಿ ಕೇರ್ ಎಂಬುದಕ್ಕೆ ಕ್ರಿಯಾರ್ಥಕ ಪ್ರಯೋಗ ಕಾಣುವುದಿಲ್ಲವಾದರೂ, ‘ಏರಲ್ಪಡಬೇಕಾದುದು’ ಅಥವಾ ‘ಏರಿಸಲ್ಪಟ್ಟುದು’ ಎಂಬರ್ಥದಿಂದಲೇ ಗೋಡೆಗೆ ಕೇರ್ ಎಂಬ ಹೆಸರು ಬಂದುದಾಗರಿಬೇಕೆಂದು ಹೇಳಬಹುದು. (ಆದಿಮಾನವನ ಗೋಡೆ ಎಂದರೆ, ಕಲ್ಲುಗಳನ್ನು ಸಾಲಾಗಿ ಒಂದರ ಮೇಲೊಂದನ್ನು ಏರಿಸುತ್ತ ಹೋದುದೇ ಸೈ) ಕೇರ – ಚೇರಗಳೂ ಜೇರ – ಚೇರಗಳೂ ಏಕಾರ್ಥಗಳಾದ ಏಕಮೂಲದ ರೂಪಯುಗ್ಮಗಳೆಂದು ಈ ಮೊದಲೇ ಕಂಡುಕೊಂಡಿದ್ದೇವೆ. ‘ಜೇರ’ ಎಂಬ ಶಬ್ದಕ್ಕೆ ‘ಗುಡ್ಡ’ ಎಂಬರ್ಥವು (ತುಳುವಿನಲ್ಲಿ) ರೂಢವಾಗಿರುವುದನ್ನೂ ತಿಳಿದಿದ್ದೇವೆ. ಹಾಗಾದರೆ ಚೇರ ಎಂಬ ಶಬ್ದಕ್ಕೂ ಕೇರಲ ಶಬ್ದದ ಪ್ರಧಾನ ಘಟಕವಾದ ‘ಕೇರ’ ಎಂಬುದಕ್ಕೂ (ಏರಬೇಕಾಗಿರುವ) ಗುಡ್ಡ, ಬೆಟ್ಟ, ಪರ್ವತ ಎಂಬರ್ಥವಿರಬೇಕೆಂದು ಸಿದ್ಧವಾಗುತ್ತದೆ. ಆಗ ‘ಕೇರಲ’ ಎಂಬ ಶಬ್ದವು, ಗುಡ್ಡಗಳಿಂದ ತುಂಬಿದ – ಪರ್ವತ ಪ್ರಾಯವಾದ – ದೇಶ ಎಂಬರ್ಥವನ್ನು ನೇರಾಗಿ ಕೊಡುವುದು ನಮಗೆ ಗೋಚರವಾಗುತ್ತದೆ. (ತಮಿಳಿನಲ್ಲಿ ಇಂದೂ ‘ಚೇರಿ’ ಎಂಬುದಕ್ಕೆ ‘ಕಾಡುಭೂಮಿ’ ಎಂಬರ್ಥವಿರುವುದು ನಮ್ಮ ಅಭಿಪ್ರಾಯಕ್ಕೆ ಪೋಷಕವೇ ಆಗಿದೆ.) ಶಿಲಪ್ಪದಿಕಾರದಲ್ಲಿ ಚೇರದೇಶಕ್ಕೆ ಚೇರನಾಟ್ಟ್ ಎಂಬುದಲ್ಲದೆ, ‘ಕುಡನಾಟ್ಟ್‌’ ಎಂಬ ಇನ್ನೊಂದು ಹೆಸರೂ ಕಂಡುಬರುತ್ತದೆ. ಆ ದೇಶದವರನ್ನು ಆ ಗ್ರಂಥದಲ್ಲಿ ‘ಕುಡವರ್’ ಎಂದೂ ‘ಕುಡನಾಟ್ಟವರ್’ ಎಂದೂ ಕರೆಯಲಾಗಿದೆ. ‘ಕುಡ’ ಎಂದರೇನು? ‘ಕುಡು’ ಎಂದರೂ ‘ಕೊಂಕು’ ಎಂದರೂ ಒಂದೇ ಎಂದೂ, ಅವರು ಆ ದೇಶಸ್ಥಾನಿಗಳೆಂದ ಶಬ್ದಮಣಿದರ್ಪಣಕಾರನು ಹೇಳುತ್ತಾನೆ. ಕೊಂಕು ಎಂದರೆ ಡೊಂಕು – ವಕ್ರ ಎಂಬರ್ಥ ಪ್ರಸಿದ್ಧವಾಗಿದೆ. ‘ಕುಡುಗೋಲು’ ಇತ್ಯಾದಿ ಶಬ್ದಗಳಲ್ಲಿ ಇದರರ್ಥ ಸುಸ್ಪಷ್ಟ. ‘ವಕ್ರ’ ಎಂಬರ್ಥವನ್ನು ತಳಕ್ಕೆ (Surface) ಎಂದರೆ ನೆಲಕ್ಕೆ ಅನ್ವಯಿಸುವಾಗ ಅದು ಎತ್ತರ ತಗ್ಗಾದ – ನಿಮ್ನೋನ್ನತ ಎಂದಾಗುತ್ತದೆ. (ಕುಡ ಎಂದರೆ ಏರುತಗ್ಗಾದ ಪ್ರದೇಶವೆಂಬ ಊಹೆಯನ್ನು ಕಿಟ್ಟೆಲರೂ ಮಾಡಿದ್ದಾರೆ ಮತ್ತು ಕೊಡಗು ಎಂಬ ಶಬ್ದಕ್ಕೆ ಅದುವೇ ಮೂಲವಾಗಿರಬೇಕೆಂದೂ ಊಹಿಸಿದ್ದಾರೆ.) ಆಗ ‘ಕುಟ್ಟನಾಟ್ಟ್ ಎಂದರೆ ಎತ್ತರ ತಗ್ಗಾದ ಎಂದರೆ ಗುಡ್ಡಗಳಿಂದ ತುಂಬಿದ ನಾಡು, (ಈ ‘ಕುಡ’ ವೇ ‘ಗುಡ್ಡ’ ಎಂಬ ಶಬ್ದದ ಮೂಲವಾಗಿರಬೇಕೆಂದು ನನಗೆ ತೋರುತ್ತದೆ.) ಎಂದರೆ ‘ಮಲೆನಾಡು’ (ಮಲೆ = ಪರ್ವತ) ಎಂಬರ್ಥವೂ ಸ್ಫುಟವಾಗಿ ಕಂಡುಬರುತ್ತದೆ. ಹಾಗಾದರೆ ‘ಚೇರ’ ಎಂದರೆ ಗುಡ್ಡ, ಪರ್ವತ ಎಂದು ನಾವು ಈ ಹಿಂದೆ ಕಂಡುಕೊಂಡ ಅರ್ಥಕ್ಕೆ ಇದು ಪ್ರಬಲವಾದ ಸಮರ್ಥನೆಯಾಗಿದೆ. ಇದರಿಂದ ‘ಚೇರನಾಟ್ಟ್’ ಮತ್ತು ‘ಕುಟನಾಟ್ಟ್’ ಎಂಬ ಎರಡು ಶಬ್ದಗಳ ಮೂಲಾರ್ಥವೂ ಒಂದೇ ಎಂಬುದು ಸಿದ್ಧವಾಗುತ್ತದೆ. ಕೇರಳ ಪ್ರದೇಶ ಎಂಬರ್ಥದಲ್ಲಿ ನಮ್ಮಲ್ಲಿ ರೂಢವಾಗಿರುವ ‘ಮಲೆಯಾಳ’ (ಹಾಗೂ ಮಲಬಾರು) ಎಂಬುದರಲ್ಲಡಗಿರುವ ‘ಮಲೆ’ ಎಂಬುದೂ ಅಲ್ಲಿಯ ಭೂಮಿ ಪರ್ವತಪ್ರಾಯವೆಂಬುದನ್ನೇ ಸೂಚಿಸುವುದಾಗಿದೆ. ಚೇರ, ಕೇರ, ಮಲೆ ಎಂಬ ಮೂರಕ್ಕೂ ಗುಡ್ಡವೆಂಬುದೇ ಅರ್ಥ. ‘ಕೇರಲ’ ಅಥವಾ ‘ಕೇರಳ’ ಎಂದರೂ (ಕೇರಲ ಎಂಬುದರಲ್ಲಿರುವ ಲಕಾರವು ಸಂಸ್ಕೃತವಾದುದರಿಂದ – ದಾಕ್ಷಿಣಾತ್ಯ ಭಾಷೆಗಳಲ್ಲಿ ಅದು ಐಚ್ಛಿಕವಾಗಿ ಳಕಾರವಾಗಿರುವುದರಿಂದ – ಕೇರಳ ಎಂಬ ರೂಪವೂ ಉಂಟಾಗಿದೆ) ‘ಗುಡ್ಡಗಳಿಂದ ತುಂಬಿದ’ ಎಂಬರ್ಥವೇ ಬರುತ್ತದೆ. ಹೀಗೆ, ಆ ಭೂಭಾಗಕ್ಕೆ ಪ್ರಸಿದ್ಧವಾಗಿರುವ ಎಲ್ಲ ಹೆಸರುಗಳೂ ಅಲ್ಲಿಯ ಭೂ ಸ್ವರೂಪವನ್ನು ಅವಲಂಬಿಸಿ ಹುಟ್ಟಿದವುಗಳೆಂಬುದು ಸ್ಪಷ್ಟವಾಗುತ್ತದೆ. ( ಶೀಲಪ್ಪದಿಕಾರದಲ್ಲಿ ಈ ದೇಶದ ಹೆಸರು ಕೇವಲ ಚೇರ ಎಂದಿರದೆ ‘ಚೇರ ನಾಟ್ಟ್’ ಎಂದೇ ಇರುವುದರಿಂದ, ಆದಿಯಲ್ಲಿ ಎಂಬರ್ಥದ ‘ಚೇರ’ ಎಂಬಿಷ್ಟೇ ಶಬ್ದ ರೂಪಕ್ಕೆ ದೇಶವೆಂಬರ್ಥವಿರಲಿಲ್ಲವೆಂದು ತಿಳಿಯಬೇಕಾಗುತ್ತದೆ. ಹೀಗಾದ ಬೇರೆ ನಿದರ್ಶನಗಳೂ ಇವೆ. ಉದಾ: ಸಿಂಧುನದಿಯ ತೀರದ ಭೂಭಾಗವು ‘ಸಿಂಧು’ ಎಂದು ಇಷ್ಟೇ ಆಗಿರದೆ, ‘ಸಿಂಧುದೇಶ’ ಎಂದೇ ಪುರಾತನ ಕಾಲದಲ್ಲಿ ಕರೆಯಲ್ಪಡುತ್ತಿದ್ದು, ಅದೀಗ ಬರಿಯ ಸಿಂಧ್ (=ಸಿಂಧೂ) ಎಂದಾಗಿರುವುದನ್ನು ನೋಡಬಹುದು. ಹೀಗೆಯೇ ಕೇವಲ ‘ಚೇರ’ ಎಂಬುದೇ ‘ಚೇರನಾಟ್ಟ್’ ಎಂಬಷ್ಟು ಅರ್ಥವನ್ನು ಮತ್ತೆ ಕೊಡತೊಡಗಿತೆಂದು ತಿಳಿಯಬೇಕಾಗುತ್ತದೆ.)

ಚೇರ ಶಬ್ದದ ಮೂಲಾರ್ಥವನ್ನು ನಾವೀಗ ತಿಳಿದೆವು. ಇನ್ನು ಕೊಂಕಣ ಶಬ್ದದ ಮೂಲಾರ್ಥವನ್ನು ನಾವೀಗ ತಿಳಿದೆವು. ಇನ್ನು ಕೊಂಕಣ ಶಬ್ದದ ಮೂಲಾರ್ಥವನ್ನು ತಿಳಿಯಲು ಪ್ರಯತ್ನಿಸೋಣ. ಚೇರ ಶಬ್ದಕ್ಕೆ ಹೇಗೋ ಹಾಗೆ, ಕೊಂಕಣ ಎಂಬ ದೇಶವಾಚಕ ಶಬ್ದಕ್ಕೂ ಸರಿಯಾದ ನಿಷ್ಪತ್ತಿಯನ್ನು ಯಾರಾದರೂ ಈವರೆಗೆ ಹೇಳಿದುದು ನನ್ನ ತಿಳಿವಿಗೆ ಬಂದಿಲ್ಲ. ನನಗೆ ತೋರುವುದೇನೆಂದರೆ – ‘ಕುಡನಾಟ್’ ಎಂಬ ಶಬ್ದದಿಂದ ಯಾವ ಅರ್ಥವೂ ಪ್ರಕಟವಾಗುತ್ತದೋ ಅದೇ ಅರ್ಥವು ‘ಕೊಂಕಣ’ ಶಬ್ದದಲ್ಲಿಯೂ ಇರುವುದಾಗಿದೆ (ಕುಡು-ಕೊಂಕು).

ಕೇರಳದ ಹಾಗೂ ತಮಿಳುನಾಡಿನ ಭಾಗಗಳನ್ನೊಳಕೊಂಡ ಮಲೆನಾಡಿನ ಪ್ರದೇಶಕ್ಕೆ – ಕೊಯಂಬತ್ತೂರು ಮತ್ತು ಸುತ್ತುಮುತ್ತಣ ಪ್ರದೇಶಗಳಿಗೆ – ತಮಿಳಿನಲ್ಲಿ ಕೊಂಗುನಾಡು ಎಂಬ ಹೆಸರಿದೆಯಷ್ಟೆ. (ಚೇರದೇಶಕ್ಕೆ ಕೊಂಗುನಾಡೆಂಬ ಹೆಸರಿತ್ತೆಂದು ಕಿಟ್ಟೆಲರ ಕೋಶ ಹೇಳುತ್ತದೆ.) ‘ಕೊಂಗು’ ಎಂದರೆ ‘ಕೊಂಕು’ ಹೊರತು ಬೇರೇನೂ ಅಲ್ಲ. ‘ಕೊಂಗು’ ಎಂಬುದನ್ನು ತಮಿಳಿನಲ್ಲಿ ಕೊಂಕು ಎಂದೇ ಬರೆಯುವುದಾಗಿದೆ; ಹಾಗೆ ಬರೆದರೂ ಉಚ್ಚರಿಸುವುದು ಮಾತ್ರ ‘ಕೊಂಗು’ ಎಂದೇ ಸೈ. ಆದುದರಿಂದ ಕೊಂಗು ನಾಡೆಂದರೂ ಕೊಂಕುನಾಡೆಂದರೂ ಯಾವ ಭೇದವೂ ಇಲ್ಲ, ಅದೂ ಒಂದೇ ಆಗಿದೆ. ಈ ಕೊಂಗುನಾಡು ಎಂಬ ಭೂಭಾಗವು ತಮಿಳು ಬಯಲು ಭೂಮಿಯ ಮೇಲಣ ನಿಮ್ನೋನ್ನತವಾದ ಮಲೆನಾಡು. ಆದುದರಿಂದಲೇ ಅದಕ್ಕೆ ಆ ಹೆಸರು ಬಂದಿರಬೇಕು. ನಿಮ್ನೋನ್ನತವೆಂಬರ್ಥವುಳ್ಳ ಕುಡು – ಕುಡ ಎಂಬುದರಿಂದ ಕೊಡಗು ಎಂಬ ಶಬ್ದವುಂಟಾಯಿತೆಂದು ಕಿಟ್ಟೆಲರ ಊಹೆಯನ್ನು ಈ ಮೊದಲೇ ತಿಳಿಸಿದ್ದೇನೆ. ಪೂರ್ವ ಸಮುದ್ರದ ತೀರದ ಬಯಲು ಭೂಮಿಯ ಜನರಿಗೆ ಅಥವಾ ಕರ್ಣಾಟಕದ ಪೀಠಭೂಮಿಯ ಜನರಿಗೆ ಕೊಡಗಿನಲ್ಲಾಗಲಿ, ಕೊಂಗುನಾಡಿನಲ್ಲಾಗಲಿ, ಕೊಂಕಣದಲ್ಲಾಗಲಿ ಮೊದಲಾಗಿ ಕಾಣುವ ವಿಶೇಷವೆಂದರೆ, ಅವರು ಕಂಡರಿಯದ ವಿಚಿತ್ರವಾದ ನಿಮ್ನೋನ್ನತತ್ವ (ಏರುತಗ್ಗು) ಆದುದರಿಂದ ಅವರು ಈ ನಾಡುಗಳನ್ನು ಆಯಾ ಹೆಸರಿನಿಂದ ಕರೆದುದು ಉಚಿತವೇ ಸೈ. ಯಾವುದೊಂದು ದೇಶಕ್ಕೆ, ಮನುಷ್ಯರಿಗೆ ಹೇಗೋ ಹಾಗೆ, ಮೊದಲು ಹೆಸರಿಡುವುದು ಹೆಚ್ಚಾಗಿ ಇತರರು.

ಕೊಂಕಣ ಎಂಬೀ ಶಬ್ದದ ಆದ್ಯಕ್ಷರವನ್ನು ಕನ್ನಡದಲ್ಲಿ ನಾವು ‘ಕೊಂಕಣ’ ಎಂದು ಹ್ರಸ್ವವಾಗಿ ಬಳಸುವೆವಾದರೂ ಸಂಸ್ಕೃತದಲ್ಲಿ ಹಾಗೂ ತಜ್ಜನ್ಯ ಭಾಷೆಗಳಲ್ಲಿ ‘ಕೊಂಕಣ’ ಎಂದು ದೀರ್ಘವಾಗಿ ಬಳಸುವುದಾಗಿದೆ. ಸಂಸ್ಕೃತಾದಿ ಭಾಷೆಗಳಲ್ಲಿ ಹ್ರಸ್ವ ಒಕಾರವು ಇಲ್ಲದಿರುವುದರಿಂದ, ದ್ರಾವಿಡ ಮೂಲದ ‘ಕೊಂಕಣ’ ಎಂಬ ಈ ಶಬ್ದದ ಆದ್ಯಕ್ಷರವು ಸಹಜವಾಗಿ ಅಲ್ಲಿ ದೀರ್ಘವಾಗಿರಬೇಕೆಂದು ಯಾರಿಗಾದರೂ ಸಕೃದ್ದರ್ಶನಕ್ಕೆ ಕಂಡುಬಾರದಿರದು. ಆದರೆ ‘ಕೋಂಕಣ’ ಎಂಬ ಹೆಸರು ಇದೆ. ಪುರಾತನ ಕಾಲದಲ್ಲಿಯೇ ಈ ಶಬ್ದವು ಸಂಸ್ಕೃತದಲ್ಲಿರುವುದರಿಂದ – ಸಂಸ್ಕೃತದಲ್ಲಿ ‘ಕೋಂಕಣ’ವೆಂದಿದ್ದುದೇ ಕನ್ನಡದಲ್ಲಿ ಕೊಂಕಣವೆಂಬ ರೂಪವನ್ನು ಪಡೆದಿರಬಹುದೇ? ಕೋಂಕಣವೆಂಬುದೇ ಮೂಲವಾಗಿದ್ದರೆ ನಾವು ಈ ಮೊದಲು ಭಾವಿಸಿದ್ದ ‘ನಿಮ್ನೋನ್ನತ ಪ್ರದೇಶ’ ಎಂಬ ಅರ್ಥವು ಅದಕ್ಕೆ ಅನ್ವಯಿಸುವುದಾದರೂ ಹೇಗೆ? ಇತ್ಯಾದಿ ಸಂದೇಹಗಳು ಇಲ್ಲಿ ಹುಟ್ಟುತ್ತವೆ.

ಹ್ರಸ್ವರೂಪವಾದ ಓ ಕಾರವಿರುವ ದ್ರಾವಿಡ ಭಾಷಾ ಶಬ್ದವು ಸಂಸ್ಕೃತ ಭಾಷಾ ಲಿಪಿಯಲ್ಲಿ ಬರೆಯಲ್ಪಟ್ಟಾಗ ಸಹಜವಾಗಿ ದೀರ್ಘವಾಗುವುದಾದರೂ, ಉಚ್ಚಾರದಿಂದ ಆ ಶಬ್ದವನ್ನು ಗ್ರಹಿಸಿ ಸಂಸ್ಕೃತದಲ್ಲಿ ಬಳಸುವಾಗ ಅದು ದೀರ್ಘವಾಗುವ ಬದಲಾಗಿ ಉಕಾರವಾಗುವ ಸಂಭಾವ್ಯತೆ ಹೆಚ್ಚು. ಇದಕ್ಕೆ ನಿದರ್ಶನಗಳಿವೆ. ಉದಾ: ಕೊತ್ತಂಬರಿ ಎಂಬ ದ್ರಾವಿಡ ಶಬ್ದವು ಸಂಸ್ಕೃತದಲ್ಲಿ ಕುಸ್ತುಂಬರೀ ಎಂಬ ರೂಪವನ್ನು ಪಡೆದಿದೆ. ಇದರಿಂದ, ಆದ್ಯಕ್ಷರವು ದೀರ್ಘವಾಗಿರುವ ಕೋಂಕಣ ಎಂಬ ಸಂಸ್ಕೃತ ರೂಪವೇ ಮೂಲವಾಗರಿಬೇಕೆಂಬ ಅಭಿಪ್ರಾಯಕ್ಕೆ ಒಂದಿಷ್ಟು ಪುಷ್ಟಿಯೊದಗುತ್ತದೆ. ಆದರೆ ‘ಕೋಂಕಣ’ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ಆ ದೇಶ ಎಂಬ ಒಂದೇ ಅರ್ಥವಲ್ಲದೆ ಬೇರೆ ಯಾವ ಅರ್ಥವೂ ಕಂಡುಬರುವುದಿಲ್ಲ. ಮತ್ತು ಅದರ ನಿಷ್ಪತ್ತಿಯೂ ಸಂಸ್ಕೃತದಲ್ಲಿ ಲಭಿಸುವುದಿಲ್ಲ. ಆದುದರಿಂದ ಅದು ಸಂಸ್ಕೃತ ಮೂಲದ ಶಬ್ದವಲ್ಲವೆಂದೇ ಹೇಳಬೇಕಾಗುತ್ತದೆ. ಹಾಗಾದರೆ ಅದರ ಮೂಲವೆಲ್ಲಿ?

ತುಳು ಭಾಷೆಯು ನಮ್ಮೀ ಸಂದೇಹವನ್ನು ಪರಿಹರಿಸುತ್ತದೆ. ತುಳುವಿನಲ್ಲಿ ‘ಕೋಂಟು’ ಎಂದರೆ ಮೂಲೆ ಎಂದರ್ಥ. ಕನ್ನಡದಲ್ಲಿ ಈ ಶಬ್ದವು ‘ಗೋಂಟು’ ಎಂಬ ರೂಪವನ್ನಲ್ಲದೆ ‘ಗೋಂಟು’ ಎಂಬ ಹ್ರಸ್ವರೂಪವನ್ನೂ ಪಡೆದಿದ್ದು ಮೂಲೆ, ಮೂಡ ಪಡುವ ಇತ್ಯಾದಿ ದಿಕ್ಕು, ವಕ್ರತೆ ಮೊದಲಾದ ಅರ್ಥಗಳನ್ನು ಕೊಡುತ್ತದೆ. ಚತುರಸ್ರವಾಗಿಲ್ಲದೆ ಅಂಕುಡೊಂಡಾಗಿರುವ ಗದ್ದೆಯನ್ನು ತುಳುವಿನಲ್ಲಿ ‘ಕೋಂಕ’ ಎನ್ನುತ್ತಾರೆ. ಸಹಜವಾಗಿ ವಕ್ರವಾಗಿರುವ ಕೋಳಿಯ ಕೊರಳಿಗೆ ತುಳುವಿನಲ್ಲಿ ‘ಕೋಂಕನಾಳಿ’ (ನಾಳಿ=ಕೊರಳು) ಎಂದು ಹೆಸರು. ಮೇಲೆ ಹೇಳಿದ ‘ಕೋಂಟು’ ಎಂಬ ಶಬ್ದವೂ ‘ಕೋಂಕ’ ಎಂಬೀ ಶಬ್ದವೂ ಒಂದೇ ಮೂಲದವುಗಳೆಂಬುದು ಸುಸ್ಪಷ್ಟ. ತಿರುಗಣಿಯಾಕಾರದ, ಶಂಖಜಾತಿಗೆ ಸೇರಿದ ಸುಂದರವಾದ ಒಂದು ಚಿಪ್ಪನ್ನು ಕನ್ನಡದಲ್ಲಿ ‘ಕೊಂಗ’ ಎಂದು ಕರೆಯುತ್ತಾರೆ. ಈ ಕೊಂಗ ಎಂಬುದಕ್ಕೆ ಕೊಂಕುಳ್ಳ ವಸ್ತು ಎಂಬುದೇ ಅರ್ಥ. ಇದರಂತೆಯೇ ತುಳುವಿನ ಕೋಂಕ ಎಂಬ ಶಬ್ದಕ್ಕೂ ಕೊಂಕುಳ್ಳದ್ದು ಎಂಬುದೇ ಅರ್ಥವೆಂಬುದು ಮೇಲೆ ಕೊಟ್ಟ ನಿದರ್ಶನಗಳಿಂದ ವ್ಯಕ್ತವಾಗದಿರದು. ಈ ಸಂದರ್ಭಗಳಲ್ಲೆಲ್ಲ ಕನ್ನಡದಲ್ಲಿ ಗೊಂಟು, ಕೊಂಗ ಹೀಗೆ ಆದ್ಯಕ್ಷರವು ಹ್ರಸ್ವವಾಗಿರುವಲ್ಲಿ, ತುಳುವಿನಲ್ಲಿ ಕೋಂಟು, ಕೋಂಕ ಇತ್ಯಾದಿಯಾಗಿ ದೀರ್ಘವಿದ್ದರೂ ಆ ಕನ್ನಡ ಮತ್ತು ತುಳುರೂಪಗಳ ಮೂಲವು ಒಂದೇ ಎಂಬುದರಲ್ಲಿ ಸಂಶಯವಿಲ್ಲ. ಆದುದರಿಂದ, ಕೋಂಕಣ ಎಂಬ ಶಬ್ದ ರೂಪವು ಸಂಸ್ಕೃತ ಮೂಲದ್ದಲ್ಲವೆಂದೂ ಕೊಂಕಣ-ಕೋಂಕಣ ಎಂಬೀ ಎರಡು ರೂಪಗಳೂ ಒಂದೇ ಅರ್ಥವನ್ನು ಕೊಡುವ ದ್ರಾವಿಡ ಮೂಲದ ಶಬ್ದಗಳೆಂದು ಸಿದ್ಧವಾಗುತ್ತದೆ. ಮತ್ತು ಮೂಲತಃ (ಕೊಂಕುಳ್ಳದ್ದು ಎಂಬ) ಒಂದೇ ಅರ್ಥದ ಶಬ್ದಕ್ಕೆ ಕೋಂಕ – ಕೊಂಗ ಎಂದು ಎರಡು ದ್ರಾವಿಡ ಭಾಷಾ ರೂಪಗಳೂ ಇಂದೂ ಬಳಕೆಯಲ್ಲಿರುವಂತೆಯೇ ಹೇಳಬೇಕಾಗುತ್ತದೆ. ಹಳೆಯ ತಮಿಳಿನಲ್ಲಿಯೂ ‘ಕೊಂಕ’ ಎಂಬೊಂದು ಶಬ್ದವಿತ್ತೆಂದು ತಿಳಿದುಬರುತ್ತದೆ. ಯಾವುದಾದರೊಂದು ‘ಉಬ್ಬಿ ಕಾಣುವಸ್ತು’ವಿಗೆ ಈ ಹೆಸರನ್ನು ಅಲ್ಲಿ ಬಳಸಲಾಗಿದೆ. (ಉದಾ: ಮೊಲೆ,ಮರದಲ್ಲಿ ಮೂಡಿ ಬಂದ ಮುರುಡು ಅಥವಾ ಗಂಡು ಇತ್ಯಾದಿ) ಸ್ತ್ರೀಯರ ‘ಮೊಲೆ’ ಎಂಬರ್ಥದಲ್ಲಿ ಇದು ಹೆಚ್ಚಾಗಿ ಪ್ರಯುಕ್ತವಾಗಿದೆಯೆಂದೂ ಈ ಶಬ್ದಕ್ಕೆ ‘ಕೋಂಕ’ ಎಂದು ದೀರ್ಘಾದಿಯಾದ ರೂಪವೂ ಇರುವುದನ್ನು ‘ಶಿಲಪ್ಪದಿಕಾರ’ ದಲ್ಲಿ ಕಾಣಬಹುದೆಂದೂ ತಮಿಳನ್ನು ಬಲ್ಲವರು ಹೇಳುತ್ತಾರೆ. ಹಾಗಾದರೆ ಪುರಾತನ ಕಾಲದಲ್ಲಿಯೇ ಈ ಶಬ್ದಕ್ಕೆ ಕೊಮಖ-ಕೋಂಕ ಎಂಬ ಎರಡೂ ರೂಪಗಳೂ ಒಂದೇ ಅರ್ಥದಲ್ಲಿ ಬಳಕೆಯಾಗುತ್ತಿದ್ದುವೆಂಬುದು ನಿಸ್ಸಂಶಯವಾಗಿ ತಿಳಿದಂತಾಯಿತು; ಮತ್ತು ಮೇಲೆ ನಿರೂಪಿಸಿದ ಕನ್ನಡ ಹಾಗೂ ತುಳು ನುಡಿಯ ರೂಪಗಳು ಮೂಲತಃ ಒಂದೇ ಎಂಬುದೂ, ಅವೆರಡೂ ದ್ರಾವಿಡ ಮೂಲದ ಶಬ್ದಗಳೇ ಎಂಬುದೂ ತಮಿಳಿನ ನಿದರ್ಶನಗಳಿಂದ ಮತ್ತಷ್ಟು ದೃಢವಾದಂತಾಯಿತು. ಅಷ್ಟು ಮಾತ್ರವಲ್ಲ, ಇನ್ನೊಂದು ತಥ್ಯವೂ ಇದರಿಂದ ವ್ಯಕ್ತವಾಗುವ ಹಾಗೆ ಕಾಣುತ್ತದೆ. ಅದೇನೆಂದರೆ – ಮೊಲೆ ಮತ್ತು ಅಂತಹ ‘ಉಬ್ಬಿ ಕಾಣುವ ವಸ್ತು’ಗಳಿಗೆ ತಮಿಳಿನಲ್ಲಿ ಈ ಹೆಸರು ಬಳಸಲ್ಪಟ್ಟಿರುವುದರಿಂದ, ಕೊಂಕ-ಕೋಂಕ ಎಂಬುದಕ್ಕೆ ಕೊಂಕುಳ್ಳದ್ದು ಎಂಬ ಅರ್ಥವೂ ಮಾತ್ರ ಇರುವುದಾಗಿರದೆ, ನೇರವಾಗಿ ಗುಡ್ಡ ಎಂಬರ್ಥವೂ ಇದ್ದಿರುವಂತೆ ತೋರುತ್ತದೆ. ಇನ್ನೊಂದು ದ್ರಾವಿಡ ಭಾಷೆಯೆ ಆದ ತೆಲುಗಿನಲ್ಲಿ ಗುಡ್ಡ ಎಂಬರ್ಥವನ್ನು ಹೇಳುವ ‘ಕೊಂಡ’ ಎಂಬ ಶಬ್ದವೂ ಈ ಅಭಿಪ್ರಾಯವನ್ನು ಸಮರ್ಥಿಸುವಂತಿದೆ. ಕುಡ-ಕೊಂಕ-ಕೊಂಡ- ಗುಡ್ಡ ಎಂಬ ರೂಪಗಳು ಏಕಮೂಲದವೇ ಸೈ.

ಕೊಂಕಣ ದೇಶವನ್ನು ಕೇವಳ ‘ಕೋಂಕ’ ಎಂದೂ ಹೇಳುವುದಿತ್ತೆಂದು ಸಂಸ್ಕೃತ ಕೋಶ ಮತ್ತು ಇತರ ಗ್ರಂಥಗಳಿಂದ ತಿಳಿದುಬರುತ್ತದೆ. ಭಾಗವತ ಪುರಾಣದಲ್ಲಿ ಕೊಂಕಣ ಪ್ರದೇಶವನ್ನು ಕೋಂಕ ಎಂದು ಕರೆಯಲಾಗಿದೆ. ಇದನ್ನು ಪರಿಭಾವಿಸುವಾಗ, ಕೊಂಕಣ ಅಥವಾ ಕೋಂಕಣ ಶಬ್ದದಲ್ಲಿರುವ ಣಕಾರವು ಆ ಶಬ್ದದ ಅಮುಖ್ಯ ಭಾಗವೆಂದು ಸ್ಪಷ್ಟವಾಗುತ್ತದೆ. ಹಾಗಾದರೆ ಆ ಣಕಾರವು ಒಂದು ಪ್ರತ್ಯಯವಾಗಿಬಹುದೇ? ಚೇರ ಶಬ್ದಕ್ಕೆ ಕೇರಳವೆಂಬ ಇನ್ನೊಂದು ರೂಪವು ಬಂದಂತೆ ಇಲ್ಲಿಯೂ ಆಗಿರಬಹುದೇ?

ಚೇರ ಶಬ್ದಕ್ಕೆ ಪ್ರತಿರೂಪವಾದ ಕೇರ ಎಂಬುದಕ್ಕೆ ಸಂಸ್ಕೃತದ ಲಕಾರವು ಪ್ರತ್ಯಯವಾಗಿ ಸೇರಿ ಕೇರಲವೊಂದು ಮತ್ತೆ ಅದುವೇ ಕೇರಳವೊಂದು ರೂಪುಗೊಂಡಂತೆ, ‘ಏರುತಗ್ಗುಳ್ಳದ್ದು’ (ಅಥವಾ ಗುಡ್ಡ) ಎಂಬ ಅರ್ಥವನ್ನು ಕೊಡುತ್ತದೆಂದು ನಾವೀಗ ಕಂಡುಕೊಂಡ ಕೊಂಕ – ಕೋಂಕ ಎಂಬ ದ್ರಾವಿಡ ನಾಮಶಬ್ದಕ್ಕೆ ಸಂಸ್ಕೃತದ ‘ಲ’ ಕಾರವು ಮತ್ತೆ ‘ಳ’ ಕಾರವಾಗಿ, ಕೊನೆಗೆ ‘ಣ’ ಕಾರವಾಗಿ ಪರಿಣಮಿಸಿತೆಂದೂ ನನಗೆ ತೋರುತ್ತದೆ. ಸಂಸ್ಕೃತದ ಲಕಾರವು ದ್ರಾವಿಡ ಭಾಷೆಗಳಲ್ಲಿ ಎಚ್ಚಾಗಿ ‘ಳ’ ಕಾರವಾಗಿಯೇ ಉಚ್ಚರಿಸಲ್ಪಡುತ್ತದೆಂಬುದು ಸರ್ವವಿದಿತ. ಉದಾ: ಕಾಳಿದಾಸ; ಶಕುಂತಳೆ, ಕನ್ನಡದಲ್ಲಿ ಳಖಾರವು (ಕುಳ) ಣಕಾರೋಚ್ಚಾರವನ್ನು ಪಡೆಯುವುದೆಂಬುದನ್ನು ಹಿಂದೆಯೆ ನಿರೂಪಿಸಿದ್ದೇನೆ. ದೇಶ್ಯ ಶಬ್ದಗಳಾಗದ ಗಿಳಿ, ಕೆಳೆ ಮೊದಲಾದವುಗಳಲ್ಲಿ ಮಾತ್ರ ಈ ಬದಲಾವಣೆ (ಗಿಣಿ, ಗೆಣೆ) ಆಗುವುದಿಲ್ಲ. ಸಂಸ್ಕೃತ ಮೂಲದ ಳಕಾರಗಳೂ ಣಕಾರವಾದ ನಿದರ್ಶನಗಳು ಕಾಣುತ್ತವೆ. ಉದಾ: ಆಲಾಪ ಎಂಬರ್ಥದ ‘ಆಲಪ್ತಿ’ ಎಂಬ ಸಂಸ್ಕೃತ ಶಬ್ದವೂ ತದ್ಭವವಾಗಿ ‘ಆಳತಿ’ ಎಂಬ ರೂಪವನ್ನು ಪಡೆದು, ಮತ್ತೆ ‘ಅಣತಿ’ ಎಂದು ಪರಿಂನಿಸಿದೆ. ಕನ್ನಡ ಕವಿಗಳು ಳಕಾರಕ್ಕೆ ಪ್ರಾಸವಾಗಿ ಣಕಾರವನ್ನು ಬಳಸಿದ ನಿದರ್ಶನಗಳೂ ಇವೆ. ಉದಾ- ಅಗ್ಗಳ ಚಂ. ಪ್ರ. ೭-೯೬ ಆದುದರಿಂದ ಕನ್ನಡಗಿರ ಉಚ್ಚಾರದಲ್ಲಿ ಣಕಾರ ಳಕಾರಗಳು ಅತಿ ಸಮಿಪದವುಗಳೆಂದು ತಿಳಿಯಬೇಕಾಗುತ್ತದೆ. ಈ ಕಾರಣದಿಂದಲೇ ಕೋಂಕುಲ-ಕೋಂಕಳ ಎಂದಿದ್ದಿರಬಹುದಾದ ಶಬ್ದರೂಪವೇ ‘ಕೋಂಕಣ’ ವೆಂಬ ರೂಪವನ್ನು ಪಡೆದಿರಬೇಕೆಂದು ಊಹಿಸಬಹುದು. ದ್ರಾವಿಡ ಭಾಷೆಗಳು ವಿಕಾಸ ಹೊಂದದೆ ಶೈಶವಾಸ್ಥೆಯಲ್ಲಿದ್ದಾಗಲೇ ಎಂದರೆ ಕ್ರಿಸ್ತಪೂರ್ವದ ಎಷ್ಟೋ ಶತಮಾನಗಳ ಹಿಂದಿನ ಕಾಲದಲ್ಲಿಯೇ ಅವುಗಳಿಗೆ ಸಂಸ್ಕೃತದ ಸಂಪರ್ಕವಾಗಿತ್ತೆಂಬುದನ್ನೂ, ಇಂದು ಕೊಂಕಣವೆಂದು ಕರೆಯಲ್ಪಡುವ ಪ್ರದೇಶವನ್ನು ಸುತ್ತುವರಿದಿರುವ ನಾಡಿನಲ್ಲೆಲ್ಲಾ ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ದ್ರಾವಿಡ ಭಾಷೆ ಕನ್ನಡವೆಂಬುದನ್ನೂ , ಕೊಂಕ ಎಂಬ ದ್ರಾವಿಡ ಶಬ್ದದ ಇನ್ನೊಂದು ರೂಪವಾದ ಕೋಂಕ ಎಂಬುದು ಇಂದೂ ತನ್ನ ನಿಜಾರ್ಥದಲ್ಲಿ ಬಳಕೆಯಲ್ಲಿರುವ ತುಳುನಾಡು ಕೊಂಕಣ ಪ್ರದೇಶಕ್ಕೆ ಹೆಚ್ಚು ಕಡಮೆ ನೆರೆನಾಡು ಎಂಬುದನ್ನೂ ಲಕ್ಷಿಸಿದರೆ ನನ್ನ ಪ್ರತಿಪಾದನೆಯ ಔಚಿತ್ಯವೂ ಹೊಳೆಯದಿರದು.

ಜಟಿಲವೆಂದು ತೋರಬಹುದಾದ ಈ ಮೇಲಿನ ಪ್ರತಿಪಾದನೆಯ ತಾತ್ಪರ್ಯ ಇದು: ಕೊಂಕ ಹಾಗೂ ಕೋಂಕ ಎಂಬಿವು ಒಂದು ಶಬ್ದದ ಎರಡು ರೂಪಗಳು; ಅವೆರಡೂ ದ್ರಾವಿಡ ರೂಪಗಳೇ ಆಗಿವೆ; ಅವೆರಡರ ಅರ್ಥವೂ ಅಭಿನ್ನ; ಅವೆರಡಕ್ಕೂ ವಕ್ರ, ನಿಮ್ನೋನ್ನತ ಎಂಬ ವಿಶೇಷಣಾರ್ಥಗಳೂ, ‘ಅಂಕುಡೊಂಕಾದ ವಸ್ತು’ ಮತ್ತು ‘ಉಬ್ಬಿದ ವಸ್ತು’ (ಉದಾ ಮೊಲೆ ಇತ್ಯಾದಿ) ಎಂಬ ನಾಮಾರ್ಥಗಳೂ ಇವೆ; ಅಷ್ಟು ಮಾತ್ರವಲ್ಲ, ನೇರವಾದಗಿ ಗುಡ್ಡ ಎಂಬಂರ್ಥವೂ ಇದ್ದಿರುವಂತಿದೆ. ‘ಕೇರ’ ಎಂಬುದಕ್ಕೆ ಸಂಸ್ಕೃತದ ಲ-ಪ್ರತ್ಯಯ ಸೇರಿ ಕೇರಲ – ಕೇರಳವಾದಂತೆಯೇ, ‘ಕೋಂಕ’ಕ್ಕೂ ಸೇರಿ, ಕೋಂಕಲ – ಕೋಂಕಳ, ಕೊನೆಗೆ ‘ಕೋಂಕಣ’ ಎಂದು ಪರಿಣಮಿಸಿದೆ. ಅದುವೇ ‘ಕೋಂಕಣ’ ಎಂದು ತದಭಿನ್ನವಾಗಿ ಕನ್ನಡದಲ್ಲಿ ರೂಢವಾಗಿದೆ. ಕೊಂಕಣ – ಕೋಂಕಣ ಎಂಬ ಶಬ್ದದ ಅರ್ಥವೂ ಕೇರಳ ಎಂಬ ಶಬ್ದದ ಮೂಲಾರ್ಥ ದಂತೆಯೇ ‘ಪರ್ವತಪ್ರಾಯ’ ಎಂದಾಗಿದೆ. (ಕೋಂಕ ಶಬ್ದಕ್ಕೆ ಸೇರಿದ ಲ-ಳ ಪ್ರತ್ಯಯವೂ ಣ-ಕಾರವಾಗಿ ಪರಿಣಮಿಸುವುದಕ್ಕೆ ‘ಕೋಂಕ’ ಎಂಬುದರಲ್ಲಿ ಅಡಕವಾಗಿರುವ ಅನುನಾಸಿಕ ವರ್ಣವೂ ಒಂದು ಕಾರಣವಾಗಿದಿರುವುದು ಸಂಭವನೀಯ.)

ಒಂದಾನೊಂದು ಕಾಲದಲ್ಲಿ ಏಳು ದೇಶಗಳ ಕೂಟವಾಗಿ ಭಾವಿಸಲ್ಪಟ್ಟಿದ್ದ ಪರಶುರಾಮ ಕ್ಷೇತ್ರವು ಒಮ್ಮೆ ‘ಸಪ್ತ ಕೊಂಕಣ’ವೆಂದೂ ಇನ್ನೊಮ್ಮೆ ‘ಸಪ್ತ ಕೇರಳ’ವೆಂದು ಮಗುದೊಮ್ಮೆ ‘ಏಳು ತುಳುದೇಶ ಗಳೆಂದೂ’ ಗ್ರಂಥಗಳಲ್ಲಿ ಮತ್ತು ಶಾಸನದಲ್ಲಿ ಏಕೆ ಹೇಳಲ್ಪಟ್ಟಿತೆಂಬುದರ ರಹಸ್ಯವನ್ನು ತಿಳಿದುಕೊಳ್ಳಲು ಈಗ ನಮಗೆ ಕಷ್ಟವಾಗಲಾರದು. ಪರಶುರಾಮ ಕ್ಷೇತ್ರವೆಲ್ಲ ಘಟ್ಟದ ಮೇಗಣ ಪೀಠಭೂಮಿಯಂತೆ ಸಪಾಟವಾಗಿರದೆ, ಎರು ತಗ್ಗಾದ ಪ್ರದೇಶ ವಾಗಿರುವುದರಿಂದ ಆ ಏಳು ದೇಶಗಳಿಗೆ ‘ಕೊಂಕಣ’ ಶಬ್ದದ ಮೂಲಾರ್ಥ ವಿವಕ್ಷೆಯಿಂದ (ಏರುತಗ್ಗು ಅಥವಾ ಪರ್ವತ ಪ್ರಾಯ ‘ಸಪ್ತಕೊಂಕಣ’ವೆಂಬ ಹೆಸರು ಅನ್ವರ್ಥವೇ ಆಗಿದೆ. ಹಾಗೆಯೇ ಪಶ್ಚಿಮ ಘಟ್ಟಗಳು ಪರಶುರಾಮ ಕ್ಷೇತ್ರದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ವ್ಯಾಪಿಸಿದ್ದು,ಅದರ ಮೂಡಲ ಮೇರೆಯೂ ಆಗಿರುವುದರಿಂದ ಆ ಏಳು ದೇಶಗಳು’ಕೇರಳ’ ಶಬ್ದದ ಮೂಲಾರ್ಥ ವಿವಕ್ಷೆಯಿಂದ (ಬೆಟ್ಟಗಳಿಂದ ತುಂಬಿದುದು) ಸಪ್ತಕೇರಳ ವೆಂದು ಹೇಳವುದು ಯುಕ್ತವೇ ಸರಿ. ಇವುಗಳಂತೆಯೇ ಪರಶುರಾಮ ಕ್ಷೇತ್ರವೆಲ್ಲ ಹೆಚ್ಚು ಕಡಮೆ ಅನೂಪದೇಶವೇ ಆಗಿರುವುದರಿಂದ, (ಹಿಂದೆ ಕೊಟ್ಟಿರುವ ಅನೂಪದೇಶ ಲಕ್ಷಣವನ್ನು ಅವಲೋಕಿಸಿರಿ) ತುಳು ಎಂದರೆ ಅನೂಪ – ಎಂದರೆ ಜಲಭರಿತ ಎಂದೇ ಅರ್ಥವೆಂಬುದು ನಮಗೀಗ ನಿಸ್ಸಂದಿಗ್ಧವಾಗಿ ತಿಳಿದು ಬಂದಿರುವುದರಿಂದ, ಆ ಏಳು ದೇಶಗಳನ್ನು ‘ತುಳು’ ಶಬ್ದದ ಮೂಲಾರ್ಥ ವಿವಕ್ಷೆಯಿಂದ (ಜಲಭರಿತ)’ಏಳು ತುಳು ದೇಶಗಳು’ ಎಂದು ಶಾಸನದಲ್ಲಿ ಹೆಸರಿಸಿದುದು ಸಮಂಜಸವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಏಳು ತುಳುದೇಶಗಳು ಎಂಬ ವಕ್ಕಣೆಯಲ್ಲಿ ಅಖಿಲ ಪರಶುರಾಮ ಕ್ಷೇತ್ರವನ್ನೂ ತುಳು ಎಂದು ಆ ಶಾಸನದಲ್ಲಿ ಹೇಳಿದುದರಿಂದ, ಹನ್ನೆರಡನೆಯ ಶತಮಾನದಲ್ಲಿ ತುಳು ಶಬ್ದದ ನಿಜಾರ್ಥವು (ಜಲಭರಿತ) ಕಣ್ಮರೆಯಾಗಿರಲಿಲ್ಲವೆಂದುದು ಸ್ಪಷ್ಟವಾಗಿ ಗೊತ್ತಾಗುತ್ತದೆ.*

* ಈ ಲೇಖನದ ತುಳು ಶಬ್ದಾರ್ಥ ಭಾಗವು ( ಉದಯವಾಣಿ ಪತ್ರಿಕೆಯಲ್ಲಿ) ಪ್ರಕಟವಾದ ಮೇಲೆ, ತಮಿಳಿನಲ್ಲಿ ‘ತುಳಿ’ ಎಂದರೆ ‘ನೀರಿನ ಹಾನಿ’ ಎಂದೂ ಮಲಯಾಳದಲ್ಲಿಯೂ ಇದು ‘ತುಳ್ಳಿ’ ಎಂಬ ರೂಪದಲ್ಲಿ ಬಳಕೆಯಲ್ಲಿದೆಯೆಂದೂ ನನಗೆ ತಿಳಿದುಬಂತು. ‘ತುಳು’ ಶಬ್ದಕ್ಕೆ ನಾನು ಊಹಿಸಿದ ಅರ್ಥವು ಸರಿ ಎಂಬುದನ್ನು ಈ ನಿದರ್ಶನಗಳು ತೋರಿಸಿಕೊಡಬಲ್ಲುವು.