ಭಾಷಾವಿಜ್ಞಾನಿಗಳ ಪ್ರಕಾರ ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಈ ಭಾಷೆಗಳನ್ನು ಇಂಡೋ ಆರ್ಯನ್, ದ್ರಾವಿಡ, ಆಸ್ಟ್ರಿಕ್ ಹಾಗು ಟಿಬೆಟೊ – ಬರ್ಮನ್ ಎಂಬುದಾಗಿ ನಾಲ್ಕು ಮುಖ್ಯ ಭಾಷಾ ಕುಟುಂಬಗಳಾಗಿ ವಿಂಗಡಿಸಿದ್ದಾರೆ. ಹೀಗೆ ವರ್ಗೀಕರಣಗೊಂಡ ಭಾಷೆಗಳಲ್ಲಿ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಪ್ರಚಲಿತವಿವೆ. ಹೀಗಾಗಿ ಭಾರತೀಯ ಭಾಷೆಗಳಲ್ಲಿ ದ್ರಾವಿಡ ಭಾಷಾ ಕುಟುಂಬ ಒಂದು ಪ್ರಮುಖ ಭಾಷಾ ಸಮುದಾಯ. ಇಂತಹ ಒಂದು ಪ್ರಮುಖ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಗಳಲ್ಲಿ ತುಳುವೂ ಒಂದು.

ದಕ್ಷಿಣ ಭಾರತದ ಭಾಷೆಗಳು ಎಂದೊಡನೆ ಸಾಮಾನ್ಯವಾಗಿ ನಮ್ಮ ಗಮನಕ್ಕೆ ಬರುವ ಭಾಷೆಗಳು ತಮಿಳು, ಮಲಯಾಳಂ, ಕನ್ನಡ ಹಾಗೂ ತೆಲುಗು ಮಾತ್ರ. ಏಕೆಂದರೆ ಇವೆಲ್ಲವೂ ಗ್ರಾಂಥಿಕ ಭಾಷೆಗಳು ಮತ್ತು ಹಿಂದೆ ರಾಜಾಶ್ರಮ ಪಡೆದು ಚೆನ್ನಾಗಿ ಬೆಳೆದ ಭಾಷೆಗಳು. ಆದರೆ ಈ ಭಾಷೆಗಳಷ್ಟೇ ಸಂಪದ್ಭರಿತವೂ, ಪ್ರಾಚೀನವೂ, ದೈನಂದಿನ ವ್ಯಾವಹಾರಿಕ ಮಾಧ್ಯಮವಾಗಿಯೂ ಇರುವ ಕೆಲವು ಭಾಷೆಗಳು ಇಲ್ಲಿ ಪ್ರಚಲಿತವಿವೆ. ಇಂತಹ ರಾಜಾಶ್ರಮ ಪಡೆಯದ ಭಾಷೆಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ (ಅವಿಭಜಿತ)ಯಲ್ಲಿ ಪ್ರಚಲಿತವಿರುವ ತುಳುಭಾಷೆ ತುಂಬಾ ಪ್ರಮುಖವಾದುದು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ‘ತುಳುನಾಡು’ ಎಂಬ ಹೆಸರು ಹಿಂದೆ ರೂಢಿಯಲ್ಲಿತ್ತು. ಬಹಳ ಹಿಂದಿನಿಂದಲೂ ಈ ತುಳುನಾಡಿನ ಆಡಳಿತ ಕರ್ನಾಟಕದ ರಾಜಕೀಯ ಪ್ರಭಾವಕ್ಕೆ ಒಳಪಟ್ಟಿತ್ತು. ತುಳುವ ರಾಜರುಗಳಾದ ಅಳುಪರು, ಬಂಗರು, ಚೌಟರು, ಬಲ್ಲಾಳರು ತುಳುನಾಡನ್ನು ಅನೇಕ ಶತಮಾನಗಳವರೆಗೆ ಆಳಿದರು. ವಿಜಯ ನಗರದವರ ಆಳ್ವಿಕೆಯಲ್ಲಿಯೂ ತುಳುವ ರಾಜರ ಪರಂಪರೆಯೊಂದಿತ್ತು. ವಿಜಯ ನಗರದ ಅರಸರು ಆಳುವವರೆಗೆ ಈ ಪ್ರಾಂತ್ಯಕ್ಕೆ ತುಳು ದೇಶ ಎಂಬ ಹೆಸರೇ ರೂಢಿಯಲ್ಲಿತ್ತು. ಮುಂದೆ ಕೆಳದಿ ನಾಯಕರ ಕಾಲದಲ್ಲಿ ತುಳು ದೇಶ ಎಂಬ ಹೆಸರು ಹೋಗಿ

‘ಕನ್ನಡ ಜಿಲ್ಲೆ’ ಎಂಬ ಹೆಸರು ಚಾಲ್ತಿಗೆ ಬಂತು. ತುಳುವರು ಕನ್ನಡ ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಕಾರಣ ತುಳುನಾಡಿನುದ್ದಕ್ಕೂ ಕನ್ನಡವೇ ಕಛೇರಿ ಭಾಷೆಯಾಗಿ ವ್ಯವಹಾರದಲ್ಲಿತ್ತು. ಈ ಪ್ರದೇಶದ ಕೋರ್ಟು, ಕಛೇರಿಗಳ ಶಾಲೆ, ಕಾಲೇಜುಗಳ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳ ವ್ಯವಹಾರದ ಭಾಷೆ ಕನ್ನಡ, ಆದರೆ ಮಾರ್ಕೆಟ್‌ನ ಭಾಷೆ ಜನಸಾಮಾನ್ಯರು ಪರಸ್ಪರ ಮಾತಾಡಿಕೊಳ್ಳುವ ಭಾಷೆ ‘ತುಳು’.

‘ತುಳು’ ತುಳುನಾಡಿಗಷ್ಟೇ ಸೀಮಿತವಾದ ಭಾಷೆಯಾಗಿದ್ದರೂ ವಿಸ್ತಾರವಾಗಿ ವ್ಯಾಪಿಸಿರುವ ಯಾವುದೇ ಬೇರೆ ಭಾಷೆಯ ಲಕ್ಷಣಗಳಿಗೆ ಇಲ್ಲಿ ಕೊರತೆ ಇಲ್ಲ. ಯಾವುದೇ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಸರಳವಾಗಿ, ಸುಸ್ಪಷ್ಟವಾಗಿ ನಿರೂಪಿಸಬಲ್ಲ ಸಾಮರ್ಥ್ಯ ಈ ಭಾಷೆಗಿದೆ. ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳ ಸಂಮಿಲನ, ಸಶಕ್ತವಾದ ಸಂಪರ್ಕ ಮಾಧ್ಯಮ, ಇಂದಿಗೂ ಬೇರೆ ಯಾವ ಭಾಷೆಯನ್ನೂ ಅರಿಯದ ಕೆಲವು ತುಳುವರು – ಇವೆಲ್ಲವೂ ಅದಕ್ಕೊಂದು ಉತ್ತಮ ಉದಾಹರಣೆ ಎನ್ನಬಹುದು. ಹೀಗಿರುವ ತುಳು ಭಾಷೆಯನ್ನು ದಕ್ಷಿಣ ದ್ರಾವಿಡ ಭಾಷೆಗಳ ಉಪವಿಭಾಗದಲ್ಲಿ ಸೇರಿಸುತ್ತಾರೆ.

ದ್ರಾವಿಡ ಭಾಷೆಗಳನ್ನು ಪ್ರಮುಖವಾಗಿ ಮೂರು ಉಪವಿಭಾಗಗಳಾಗಿ ವಿಂಗಡಿಸುತ್ತಾರೆ. ಇವುಗಳಲ್ಲಿ ತುಳು, ತಮಿಳು, ಮಲಯಾಳಂ, ಕನ್ನಡ, ಕೊಡಗು, ಕೋಟ, ತೋಡ, ಬಡಗ ಹಾಗೂ ತುಳು ಭಾಷೆಗಳು ದಕ್ಷಿಣ ದ್ರಾವಿಡವೆಂದೂ, ತೆಲುಗು, ಗೋಂಡಿ, ಕೊಂಡ, ಪೆಂಗೊ, ಮಂಡ, ಕುಈ, ಕುವಿ, ಕೋಲಾಮಿ ಪರ್ಜಿ, ನಾಯ್ಕಿ, ಗದಬ ಭಾಷೆಗಳು ಮಧ್ಯ ದ್ರಾವಿಡ ಭಾಷೆಗಳೆಂದೂ ಕೂಡುಖ್, ಮಲ್ತೊ, ಬ್ರಾಹೂಯೀಗಳು ಉತ್ತರ ದ್ರಾವಿಡ ಭಾಷೆಗಳೆಂದೂ ವಿಭಾಗಿಸಿರುವರು. ಈ ಭಾಷೆಗಳಲ್ಲಿ ತುಳು ದಕ್ಷಿಣ ದ್ರಾವಿಡ ಭಾಷಾ ವಿಭಾಗಕ್ಕೆ ಸೇರಿದ್ದರೂ ಸಹ ಮಧ್ಯದ್ರಾವಿಡ ಭಾಷೆಗಳ ಕೆಲವು ಲಕ್ಷಣಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು ತನ್ನದೇ ಆದ ಕೆಲವು ವಿಶಿಷ್ಟತೆಗಳನ್ನು ಹೊಂದಿದೆ.

ದಕ್ಷಿಣ ದ್ರಾವಿಡ, ಮಧ್ಯ ದ್ರಾವಿಡ ಮತ್ತು ಉತ್ತರ ದ್ರಾವಿಡ ಭಾಷಾ ಗುಂಪುಗಳ ಲಕ್ಷಣಗಳು ಈ ಕೆಳಗಿನವು ಎಂಬುದು ಭಾಷಾ ವಿಜ್ಞಾನಿಗಳ ಅಭಿಪ್ರಾಯ.

ದಕ್ಷಿಣ ದ್ರಾವಿಡ ಭಾಷೆಗಳ ಲಕ್ಷಣಗಳು

೧. ಪದಾದಿಯ *ಚ – ಕಾರದ ಲೋಪ

೨. ಮೂಲ ದ್ರಾವಿಡದ *ಉ ಕಾರವು ಉ ಮತ್ತು ಉ (+) ಎಂಬ ಎರಡು ಸ್ವರಗಳಾಗಿ ರೂಪುಗೊಂಡಿರುವುದು.

೩. ಇ / ಎ ಮತ್ತು ಉ / ಒ ಸ್ವರಗಳ ಬದಲಾವಣೆ

೪. ಸ್ತ್ರೀಲಿಂಗದ ಸೃಷ್ಟಿ ಮತ್ತು ಬಳಕೆ

೫. ಮೂಲ ದ್ರಾವಿಡದ *ಯ – ಏ ಆಗಿ ಬದಲಾಗಿರುವುದು.

೬. ನಿಷೇಧ ಕೃದ್ವಾಚಕಗಳಿಗೆ ದಂತ್ಯ ವ್ಯಂಜನದ ಸೇರ್ಪಡೆ

೭. ನಪುಂಸಕ ಲಿಂಗ ಬಹುವಚನದ ಐಚ್ಛಿಕ ಬಳಕೆ

೮. ಮೂಲ ದ್ರಾವಿಡ ನಾಲ್ಕೂ ಭೂತಕಾಲದ ಕ್ರಿಯಾಪ್ರಾತಿಪದಿಕದ ಪ್ರಚಲಿತತೆ

೯. ಅಭೂತ ಕಾಲದ ರೂಪದಲ್ಲಿ -ಪ್ಪ ಪ್ರತ್ಯಯದ ವ್ಯಾಪಕ ಬಳಕೆ.

೧೦. ಇಚ್ಛಾರ್ಥಕ ಪ್ರತ್ಯಯದ ಬಳಕೆ

೧೧. *ವೇಂಡ್ – (ಬೇಕು / ಬೇಡ) ರೂಪಗಳ ಜೊತೆ ವಾಕ್ಯ ರಚನೆ

೧೨. *ಣ ಮತ್ತು *ಳ ಕಾರಗಳನ್ನು ಉಳಿಸಿಕೊಂಡಿರುವುದು.

೧೩. ಕೆಲವು ಪ್ರತ್ಯೇಕ ಪದಗಳ ಪ್ರಚಲಿತತೆ.

ಮಧ್ಯ ದ್ರಾವಿಡ ಭಾಷೆಗಳ ಲಕ್ಷಣಗಳು

೧. ಲಿಂಗ ಭೇದಗಳು

೨. *ಆಳ್ ಪ್ರತ್ಯಯದಿಂದೊಡಗೂಡಿದ ಸ್ತ್ರೀ ಸಂಬಂಧವಾಚಕ ಪದಗಳ ಬಳಕೆ

೩. ನಪುಂಸಕ ಲಿಂಗ ಬಹುವಚನದ (ಪ್ರತ್ಯಯದ) ಕಡ್ಡಾಯ ಬಳಕೆ

೪. ಮೂಲ ದ್ರಾವಿಡದ *ಯ, ಅ ಆಗಿ ಬದಲಾಗುವುದು.

೫. ದ್ವಿತೀಯ ಪುರುಷ ಸರ್ವನಾಮಗಳಲ್ಲಿ *ನ – ಕಾರದ ಲೋಪ

೬. ತೃತೀಯ ಪುರುಷ ಪುಲ್ಲಿಂಗ ಏಕವಚನ ಸರ್ವನಾಮ ದಕ್ಷಿಣ ದ್ರಾವಿಡದ ‘ಅವನ್‌’ಗೆ ಬದಲಾಗಿ ‘ಅವಂತ್’ ರೂಪದ ಬಳಕೆ

೭. *ಚಿಯಿಂದ ಕೊನೆಗೊಳ್ಳುವ ಭೂತ ಕ್ರಿಯಾ ವಿಶೇಷಣಗಳು

೮. ಭೂತಕಾಲ ನಿಷೇಧದ ವಿಶಿಷ್ಟತೆ

೯. ನಿಷೇಧ ಕ್ರಿಯಾವಾಚಕ *ಅಕ್‌ನ ಬಳಕೆ

೧೦. ಅಭೂತ ಕಾಲ ಪ್ರತ್ಯಯ *ತ್ತ್ ( ಹಿ + ತ್‌)ದ ವ್ಯಾಪಕ ಬಳಕೆ

೧೧. ಕೆಲವು ಪ್ರತ್ಯೇಕ ಪದಗಳ ಪ್ರಚಲಿತತೆ

ಉತ್ತರ ದ್ರಾವಿಡ ಭಾಷೆಗಳ ಲಕ್ಷಣಗಳು

೧. *ಇ, *ಈ ಹೊರತಾದ ಸ್ವರಗಳ ಮುಂದೆ *ಕ – ಕಾರ ಖ ಆಗಿ ಬದಲಾಗುವುದು.

೨. *ವ-, ಬ-ಕಾರವಾಗಿ ಬದಲಾಗುವುದು.

೩. *ಉ ಮತ್ತು *ಎಗಳ ಮುಂದೆ *ಚ-, ಕ- ಗಿ ಬದಲಾಗುವುದು.

೪. ಪ್ರಥಮ ಮತ್ತು ದ್ವಿತೀಯ ಪುರುಷ ಏಕವಚನ ಸರ್ವನಾಮಗಳ ವಿಶೇಷತೆ.

೫. ಭೂತಕಾಲ ವಾಚಕ ಪ್ರತ್ಯಯ *ಕ್‌ದ ಬಳಕೆ

೬. ಭವಿಷತ್‌ಕಾಲ ವಾಚಕ ಪ್ರತ್ಯಯ *ಒದ ಬಳಕೆ

೭. ವಿನಯಪೂರ್ವಕ ವಿಧ್ವರ್ಥಕದ ಬಳಕೆ

೮. ‘ಹೋಗು’ ಎಂಬರ್ಥದ ಸಹಾಯಕ ಕ್ರಿಯಾಪದದ ವಿಶೇಷ ಬಳಕೆ

೯. ಭೂತಕಾಲ ವಾಚಕ ಪ್ರತ್ಯಯ * ಚ್‌ದ ಬಳಕೆ

೧೦. ಪ್ರಶ್ನಾರ್ಥಕ ಸರ್ವನಾಮದ ಪ್ರತ್ಯೇಕತೆ

೧೧. ಕೆಲವು ಪದಗಳಲ್ಲಿ ಮೂಲಾರ್ಥದ ಬದಲಾವಣೆ

೧೨. ಹೊಸ ನಿಷ್ಪನ್ನ ಪ್ರತ್ಯಯಗಳ ಬಳಕೆ

೧೩. ಕೆಲವು ಪ್ರತ್ಯೇಕ ಪದಗಳ ಬಳಕೆ

ಈ ಮೊದಲೇ ಹೇಳಿದಂತೆ ತುಳುಭಾಷೆ ತನ್ನದೇ ಆದ ಕೆಲವು ವಿಶಿಷ್ಟತೆಗಳನ್ನು ಹೊಂದಿದೆ. ಉದಾಹರಣೆಗೆ ತುಳುವಿನ ‘ಇಲ್ಲ್’ ಎಂಬ ಪದಕ್ಕೆ ಸಂವಾದಿಯಾಗಿ ಕನ್ನಡ ಹಾಗೂ ಬೇರೆ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ‘ಮನೈ; ವೀಡು’ ಈಳಂ ಎಂಬ ಪದಗಳು ಬಳಕೆಯಲ್ಲಿದ್ದು ತುಳು ಹಾಗೂ ಬೇರೆ ಕೆಲವು ಮಧ್ಯದ್ರಾವಿಡ ಭಾಷೆಗಳಲ್ಲಿ ‘ಇಲ್ಲ್’ ಎಂಬ ಪದವೇ ಚಾಲ್ತಿಯಲ್ಲಿದೆ. ಮನೈ, ವೀಡು (ಕನ್ನಡದ ಮನೆ, ಬೀಡು) ಶಬ್ದಗಳಿಗೆ ಸಂವಾದಿಯಾಗಿ ತುಳುವಿನಲ್ಲಿ ಸ್ವತಂತ್ರ ಪದ ಬಳಕೆಯಲ್ಲಿ ಕಂಡುಬರುವುದಿಲ್ಲ. ಸಂಯುಕ್ತ ಪದಗಳಲ್ಲಿ ‘ಬೀಡು’- ಎಂಬುದಕ್ಕೆ ಸಂವಾದಿಯಾಗಿ ‘ಬೂಡು’ ಪದ ಚಾಲ್ತಿಯಲ್ಲಿದೆ. ಉದಾಹರಣೆಗೆ ‘ಪಂಜುರ್ಲಿ ಬೂಡು’, ‘ದೈವದ ಬೂಡು’ – ಇವುಗಳನ್ನು ಗಮನಿಸಬಹುದು.

ಜಗತ್ತಿನ ಹಿರಿಯ ಭಾಷಾವರ್ಗಗಳ ಸಾಲಿನಲ್ಲಿ ದ್ರಾವಿಡ ಭಾಷಾವರ್ಗಕ್ಕೆ ಪ್ರಮುಖ ಸ್ಥಾನವಿದೆ. ಇಪ್ಪತ್ತೊಂದಕ್ಕೂ ಹೆಚ್ಚು ಭಾಷೆ ಯನ್ನೊಳಗೊಂಡ ದ್ರಾವಿಡ ಭಾಷಾವರ್ಗದಲ್ಲಿ ‘ಪಂಚ ದ್ರಾವಿಡ’ವೆಂದು ಪ್ರಖ್ಯಾತವಾದವು – ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ತುಳು ಭಾಷೆಗಳು. ಇವೆಲ್ಲಾ ಮೂಲದ್ರಾವಿಡವೆಂಬ ಒಂದೇ ಭಾಷೆಯಿಂದ ಕವಲೊಡೆದು ಬಂದ ಭಾಷೆಗಳು.

ಜಗತ್ತಿನ ಎಲ್ಲ ಭಾಷೆಗಳೂ ತಮ್ಮದೇ ಆದ ಮೂಲಾಕ್ಷರಗಳನ್ನು ಹೊಂದಿರುತ್ತವೆ. ಇಂತಹ ಅಕ್ಷರಗಳಿಂದಲೇ ಆ ಭಾಷೆ ರಚಿತವಾಗಿರುವುದು ಮತ್ತು ವ್ಯವಹರಿಸುವುದು. ಈ ಮೂಲಾಕ್ಷರಗಳನ್ನೇ ‘ಧ್ವನಿಮಾ’ ಎನ್ನುವರು. ಈ ಧ್ವನಿಮಾಗಳ ಗುಂಪಿಗೆ ವರ್ಣಮಾಲೆ ಎನ್ನುತ್ತೇವೆ. ತುಳು ವರ್ಣಮಾಲೆಯ ಕೆಲವು ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಕನ್ನಡ ವರ್ಣಮಾಲೆಯಂತೆಯೇ ಇದೆ. ಇಂದು ಕನ್ನಡ ಲಿಪಿಯನ್ನೇ ತುಳು ಬರವಣಿಗೆಗೂ ಉಪಯೋಗಿಸುತ್ತಿದ್ದೇವೆ. ಆದರೆ ತುಳುವಿನಲ್ಲಿ ದೊರಕಿರುವ ಭಾಗವತೊ, ಕಾವೇರಿ, ಮಹಾಭಾರತ ಮುಂತಾದ ಕನ್ನಡ ವರ್ಣಮಾಲೆಯಲ್ಲಿಲ್ಲದ ಒಂದು ಅನಿರ್ದಿಷ್ಟ ಸ್ವರ ಉ, ಉ್ ತುಳುವಿನಲ್ಲಿವೆ. ಸಹಜ ‘ಉ’ಕಾರಕ್ಕಿಂತ ಭಿನ್ನವಾದ ಅರ್ಧ ‘ಉ’ಕಾರ (unrounded) ಇದು. ಈ ವಿಶಿಷ್ಟ ಉಕಾರ ತಮಿಳು, ಮಲಯಾಳ, ಗೌಡ ಕನ್ನಡ ಹಾಗೂ ಕೋಟ ಕನ್ನಡ ಭಾಷೆಗಳಲ್ಲೂ ಕಂಡುಬರುತ್ತದೆ. ಕನ್ನಡದ ಉಂಟು, ಕಪ್ಪು, ಮುಪ್ಪು, ಮೊದಲಾದ ಪದಗಳಲ್ಲಿರುವ ‘ಉ’ಕಾರ ತುಳುವಿನಲ್ಲೂ ಇದೆ. ಇದರ ಜೊತೆಗೆ ಮೇಲೆ ಹೇಳಲಾದ ವಿಶಿಷ್ಟ ‘ಉ’ಕಾರವೂ ಇದೆ. ಮಲ್ತ್‌ದ್, ತೂದ್ – ಮುಂತಾದ ಪದಗಳ ಉಚ್ಚಾರದಲ್ಲಿ ಈ ವಿಶಿಷ್ಟ ಉಕಾರವನ್ನು ಗಮನಿಸಬಹುದು. ಅಏ ರೀತಿ ಈ ಸಹಜ ಉ ಮತ್ತು ವಿಶಿಷ್ಟ ಉಗಳಲ್ಲಿ ಸ್ಪಷ್ಟ ವ್ಯತ್ಯಾಸವಿರುವುದನ್ನು ಕೆಳಗಿನ ಉದಾಹರಣೆಯಿಂದ ಗಮನಿಸಬಹುದು.

ತು.ಕೆರು ಕನ್ನಡ ‘ಕೊಂದೀತು’ ಕೆರ್-ಕೊಲ್ಲು
ತು.ತಿನು ಕನ್ನಡ ತಿಂದೀತು ತಿನ್ – ತಿನ್ನು

ಇದೇ ರೀತಿಯಲ್ಲಿ ತುಳುವಿನಲ್ಲಿ ಎಕಾರವೊಂದಿದೆ. ಸಹಜ ಎ ಮತ್ತು ತುಳುವಿಗೇ ವಿಶಿಷ್ಟವಾದ ಎಗಳ ಸ್ಪಷ್ಟ ವ್ಯತ್ಯಾಸವನ್ನು ಕೆಳಗಿನ ಉದಾಹರಣೆಯಿಂದ ಗಮನಿಸಬಹುದು.

ಯಾನ್‌ಪೋಯೆ ನಾನು ಹೋದೆನು
ಆಯೆ ಪೋಯೆ ಅವನು ಹೋದನು

ತುಳುವಿನಲ್ಲಿ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮೊದಲಾದ ಅನೇಕ ಭಾಷೆಗಳ ಶಬ್ದವು ಹೇರಳವಾಗಿ ಸೇರಿಕೊಂಡಿದೆ. ಈ ಕಾರಣದಿಂದ ತುಳು ವರ್ಣಮಾಲೆಯಲ್ಲಿ ಇಷ್ಟೇ ಧ್ವನಿಮಾಗಳಿರಬೇಕೆಂದು ಹೇಳುವುದು ಸರಿಯೆನಿಸದು.

ಸರ್ವನಾಮಗಳು

ಸರ್ವನಾಮಗಳು ಭಾಷೆಯಲ್ಲಿ ಸ್ಥಿರವಾಗಿರುವ ಪದಗಳು. ದ್ರಾವಿಡ ಭಾಷೆಗಳಲ್ಲಿ ಸರ್ವನಾಮಗಳು ಲಿಂಗ, ವಚನ ಎರಡನ್ನೂ ತೋರಿಸುತ್ತವೆ. ತುಳುಭಾಷೆಯ ಸರ್ವನಾಮಗಳನ್ನು ಉಳಿದ ಮುಖ್ಯವಾದ ದ್ರಾವಿಡ ಭಾಷೆಗಳ ಸರ್ವನಾಮಗಳೊಂದಿಗೆ ಹೋಲಿಸಿದಾಗ ತುಳುವಿನ ವಿಶಿಷ್ಟತೆ ತಿಳಿಯುವುದು.

  ಕನ್ನಡ ತಮಿಳು ತೆಲುಗು ತುಳು
ಉತ್ತಮ ಪುರುಷ
ಏಕವಚನ ನಾನುಟ ನಾನ್, ಯಾನ್ ನೇನು ಯಾನ್,ಏನ್
ಬಹುವಚನ ನಾವು ನಾಮ್, ನಾಂಗಳ್ ನೇಮು ಎಂಕುಲು, ನಮ
ಮಧ್ಯಮ ಪುರುಷ
ಏಕವಚನ ನೀನು ನೀ ನೀವ
ಬಹುವಚನ ನೀವು ನೀಂಗಳ್ ಮೀರ್ ಈರ್,ನಿಕುಳು
ಪ್ರಥಮ ಪುರುಷ
ಏಕವಚನ ಅವನು ಅವನ್ ವಾಡ್ ಅಯೆ
  ಅವಳು ಅವಳ್ ಆವಿಡ ಆಳ್
  ಅದು ಅದು ಅದಿ ಅವು
ಬಹುವಚನ ಅವರು ಅವರೂಳ್ ವಾರ್ ಅಕುಳು
ಅವು ಅವೈಗಳ್ ಅವಿ ಅವು      

ವ್ಯಾವರ್ತಕ (Exclusive pronoun) ಸರ್ವನಾಮ ಮತ್ತು ಅಭಿವ್ಯಾಪಕ ಸರ್ಮನಾಮ (Inclusive pronoun) ಇವು ದ್ರಾವಿಡ ಭಾಷೆಯ ವೈಶಿಷ್ಟ್ಯಗಳು. ವ್ಯಾವರ್ತಕ ಸರ್ವನಾಮದಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಅವರನ್ನು ಬಿಟ್ಟು ಹೇಳಿದರೆ, ಅಭಿವ್ಯಾಪಕ ಸರ್ವನಾಮದಲ್ಲಿ ಯಾರೊಂದಿಗೆ ಮಾತನಾಡುತ್ತೇವೋ ಅವರನ್ನು ಸೇರಿಸಿ ಹೇಳಲಾಗುತ್ತದೆ. ತುಳುವಿನಲ್ಲಿ ಈ ಎರಡೂ ರೂಪಗಳಿವೆ. ಉದಾ:

  ವ್ಯಾವರ್ತಕ ಅಭಿವ್ಯಾಪಕ
ತಮಿಳು ನಾಂಗಳ್ ನಾಮ್
ತೆಲುಗು ಮೇಮು ಮನಮ
ತುಳು ಯೆಂಕುಳು ನಮ

ದ್ರಾವಿಡ ಭಾಷೆಗಳಲ್ಲಿ ಕಂಡುಬರುವ ವ್ಯಾವರ್ತಕ ಮತ್ತು ಅಭಿವ್ಯಾಪಕ ಸರ್ವನಾಮಗಳ ಕುರಿತು ಭಾಷಾವಿಜ್ಞಾನಿ ಟಿ.ಬರ್ರೋ‍ಹೀಗೆ ಹೇಳುತ್ತಾರೆ, ” This full correspondence of form and meaning cannot be mere coincidence, and can definitely be held to indicate the existence of the distinction in primitive Dravidian”. ಟಿ.ಬರ್ರೋ‍ರ ಈ ಮಾತು ಗಮನಾರ್ಹವಾದುದು.

ಕನ್ನಡದಲ್ಲಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ರೂಪಗಳನ್ನು ಶಾಸನ ಹಾಗೂ ಗ್ರಂಥಗಳ ಮೂಲಕ ತಿಳಿಯುತ್ತೇವೆ. ತುಳು ಭಾಷೆಯಲ್ಲಾಗಿರಬಹುದಾದ ವ್ಯತ್ಯಾಸಗಳು ನಮಗೆ ತಿಳಿಯವು. ತಿಳಿಯುವ ಸೌಲಭ್ಯವೂ ಇಲ್ಲ. ತುಳು ಜನಪದ ಸಾಹಿತ್ಯದಲ್ಲಿ ತುಳುವಿನ ಹಳೆಯ ಕೆಲವೊಂದು ರೂಪಗಳನ್ನು ತಿಳಿಯಬಹುದಾದರೂ ಆ ಭಾಷೆಯ ಬೆಳವಣಿಗೆ, ಬದಲಾವಣೆಗಳ ನಿಗದಿತ ಘಟ್ಟಗಳನ್ನೂ ನಿರ್ದಿಷ್ಟವಾಗಿ ಗುರುತಿಸಲಾಗುವುದಿಲ್ಲ. ಕನ್ನಡದ ಪ್ರಭಾವ ತುಳುವಿನ ಮೇಲೆ ಸಾಕಷ್ಟಿದೆಯಾದರೂ ಕನ್ನಡದಲ್ಲಾಗಿರುವಷ್ಟು ಬದಲಾವಣೆ ತುಳುವಿನಲ್ಲಾಗಿಲ್ಲ. ಉದಾ: ತುಳುವಿನಲ್ಲಿ ‘ಪ’

ಕಾರ ‘ಹ’ ಕಾರವಾಗಿಲ್ಲ. ಕರ್ಮಣಿ ಪ್ರಯೋಗ ತುಳುವಿನಲ್ಲಿಲ್ಲ. ‘ಕರ್ಮಣಿ ಪ್ರಯೋಗ ದ್ರಾವಿಡ ಭಾಷೆಗಳಿಗೆ ಸಹಜವಲ್ಲ’ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ತುಳುವಿನಲ್ಲಿ ಪಕಾರ ಹಕಾರವಾಗಿಲ್ಲ ಎಂಬುದಕ್ಕೆ ಈ ಕೆಳಗಿನ ಉದಾಹರಣೆಳನ್ನು ಗಮನಿಸಬಹುದು.

ಕನ್ನಡ ತುಳು
ಹೀರೆ ಪೀರೆ
ಹುಂಜ ಪೂಂಜ
ಹೇಂಟೆ ಪೆರಡೆ
ಹಾಲು ಪೇರ್
ಹಂದಿ ಪಂಜಿ
ಹುತ್ತ ಪುಂಚ

ಇತ್ಯಾದಿ.

ಮೂಲ ದ್ರಾವಿಡದ ‘ಳ’ ಕಾರ ‘ಣ’ಕಾರಗಳು ತೆಲುಗು, ತುಳು ಹಾಗೂ ಕೆಲವು ಮಧ್ಯ ದ್ರಾವಿಡ ಭಾಷೆಗಳಲ್ಲಿ ಮೂರ್ಧನ್ಯತ್ವವನ್ನು ಕಳೆದುಕೊಂಡು ಲ, ನ ಆಗಿ ಬದಲಾಗಿರುವುದನ್ನು ಈ ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.

ತಮಿಳು ‘ವಿಳಂಗು’ ತಮಿಳು ‘ಕಣ್’
ತೆಲುಗು ‘ವೆಲ್ಲುಗು’ ಕನ್ನಡ ‘ಕಣ್’, ಕಣ್ಣು
ಕುವಿ ‘ವೆಲ್ಲ’ ತೆಲುಗು ‘ಕನ್ನು’
ಕನ್ನಡ ‘ಬೆಳಕು’ ತುಳು ‘ಕನ್’
ತುಳು ‘ಬೊಲ್ಚ’    

ತುಳು ಭಾಷಾಧ್ಯಯನ ಮಾಡುವಾಗ ತುಳುವಿಗೆ ಅದರದೇ ಆದ ವಿಶಿಷ್ಟತೆಗಳಿದ್ದು ಆ ವಿಶಿಷ್ಟತೆಗಳನ್ನುಳಿದು ಬಹಳ ಸಮಯದಿಂದ ಹಾಗೇ ಕಾಯ್ದುಕೊಂಡು ಬಂದಿರುವುದು ಸ್ಪಷ್ಟವಾಗುತ್ತದೆ. ಉದಾ: ತುಳುವಿನಲ್ಲಿ ಯಾವುದೇ ಒಂದು ನಾಮಪದದಲ್ಲಿ ಪೂರ್ವಸ್ವರ ದೀರ್ಘವಾಗಿದ್ದರೆ ಅಥವಾ ಆ ಪದದಲ್ಲಿ ಒತ್ತಕ್ಷರವಿದ್ದರೆ -ಉ ಪ್ರತ್ಯಯವೂ, ಬೇರೆಡೆಯಲ್ಲೆಲ್ಲಾ -ಕುಲು ಪ್ರತ್ಯಯವೂ ಪ್ರಯೋಗವಾಗುತ್ತದೆ. ಉದಾ:-

ಬೋರಿ-ಲು ಎತ್ತುಗಳು ಕೈ-ಕುಲು ಕೈಗಳು
ನಾಯಿ-ಲು ನಾಯಿಗಳು ಮರ-ಕುಲು ಮರಗಳು
ಪೆತ್ತೊ-ಲು ಹಸುಗಳು ಕೆದು-ಕುಲು ಕೆರೆಗಳು
ಕಂಜಿ-ಲು ಹಸುಗಳು ಕೆದು-ಕುಲು ತೊರೆಗಳು

ಬೇರೆ ದ್ರಾವಿಡ ಭಾಷೆಗಳೆಲ್ಲಾ ‘ಕಳ್’ ಪ್ರತ್ಯಯವೇ ಮಾನವೇತರ ಬಹುವಚನ ಪ್ರತ್ಯಯವಾಗಿ ಬಳಕೆಯಲ್ಲಿದೆ. ಆದರೆ ಮಧ್ಯ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದ ಕೋಲಾಮಿ, ಪರ್ಜಿ ಮುಂತಾದ ಭಾಷೆಗಳಲ್ಲಿ ತುಳುವಿನಂತೆಯೇ ಎರಡು ಪ್ರತ್ಯಯಗಳಿವೆ. ಹೀಗಾಗಿ ಭಾಷಾವಿದ್ವಾಂಸರು ಮೂಲದ್ರಾವಿಡ ಭಾಷೆಯಲ್ಲಿ ಮಾನವೇತರ ಬಹುವಚನ ಪ್ರತ್ಯಯಗಳು ಎರಡಿದ್ದವು. ಅವು ತುಳು ಮತ್ತು ಕೋಲಾಮಿ, ಪರ್ಜಿ ಗುಂಪಿನ ಭಾಷೆಗಳಲ್ಲಿ ಹಾಗೆಯೇ ಉಳಿದು ಬಂದಿವೆ ಎಂದು ಅಭಿಪ್ರಾಯಪಡುತ್ತಾರೆ.

ತುಳುವಿನಲ್ಲಿ ನಿಷೇದಾರ್ಥಕ ಪ್ರತ್ಯಯ – ಅ ಇದ್ದು ಇದು ಕ್ರಿಯಾ ಧಾತುವಿಗೆ ಪುರುಷವಾಚಕ ಪ್ರತ್ಯಯ ಸೇರುವ ಮೊದಲು ಸೇರುವುದು.

ಉದಾ:

    ಏಕವಚನ   ಬಹುವಚನ  
ಉತ್ತಮ ಪುರುಷ ತು ತಿನಯೆ ತಿನ್ನೇನು ತಿನಯೊ ತಿನ್ನೆವು
ಮಧ್ಯಮ ಪುರುಷ   ತಿನಯ ತಿನ್ನಲಾರೆ ತಿನಯರ್ ತಿನ್ನ
ಪ್ರಥಮ ಪುರುಷ ಪು. ತಿನಯೆ ತಿನ್ನಲಾರ ತಿನಯೆರ್ ತಿನ್ನರು
  ಸ್ತ್ರೀ ತಿನ್ನಯಳ್ ತಿನ್ನಳು ತಿನಯೆರ್ ತಿನ್ನರು
  ನ.ಪುಂ. ತಿನನ್ದ್ ತಿನ್ನದು ತಿನಯ ತಿನ್ನವು

ಮೇಲಿನ ಉದಾಹರಣೆಗಳಲ್ಲಿ ಪ್ರಥಮ ಪುರುಷ ನಪುಂಸಕ ಲಿಂಗ ಏಕವಚನ ರೂಪ ‘ತಿನ್-ಅ-ನ್ ಹೊರತುಪಡಿಸಿ ಬೇರೆಲ್ಲ ಕಡೆಯೂ ‘ಯ್’ ಕಾ ಬರುವುದನ್ನು ಕಾಣುತ್ತೇವೆ. ಈ ‘ಯ್’ ಕಾರ ಉಚ್ಚಾರದ ಸಹಾಯಕ್ಕಾಗಿ ಬರುವ ಧ್ವನಿ. ಎರಡು ಸ್ವರಗಳು ಒಂದರ ಮುಂದೊಂದು ಬಂದಾಗ ‘ಯ’ ‘ವ’ ಕಾರಗಳು ಆಗಮವಾಗಿ ಬರುವುದು ಎಲ್ಲವೂ ದ್ರಾವಿಡ ಭಾಷೆಗಳಲ್ಲೂ ಕಂಡುಬರುವ ಸಾಮಾನ್ಯ ಪ್ರಕ್ರಿಯೆ. ಹೀಗಾಗಿ ಮೇಲಿನ ಉದಾಹರಣೆಯಲ್ಲಿ ಪ್ರಥಮ ಪುರುಷ ನಪುಂಸಕಲಿಂಗ ಏಕವಚನ ‘ತಿನ್-ಅ-ನ್’ ರೂಪವನ್ನು ಬೇರೆ ರೂಪಗಳೊಂದಿಗೆ ಹೋಲಿಸಿ ನೋಡಿದರೆ ‘ಯ್‌’ಕಾರ ಉಳಿದೆಡೆ ಯಲ್ಲೆಲ್ಲಾ ಆಗಮವಾಗಿ ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ತಿನ್-ಅ-ನ್ ಎಂಬ ತುಳುರೂಪ ಕನ್ನಡದ ತಿನತ್ -ಆರ್-ಎ ಎಂಬ ರೂಪಕ್ಕೆ ಸಮಾನವಾಗಿದೆ ಎಂಬುದನ್ನು ಗಮನಿಸಬಹುದು.

ಮೂಲದ್ರಾವಿಡದ * ನ್‌ಱ್ ಮತ್ತು * ಱ್‌ಗಳು ತುಳುವಿನಲ್ಲಿ ಂಜ್ ಮತ್ತು ಜ್ ಆಗಿವೆ. ತುಳುವಿನಲ್ಲಿರುವ ಂಜ್ ಮತ್ತು ಜ್ ಗಳಿಗೆ ಸಮನಾದ ರೂಪಗಳು ಕುಈ, ಕುವಿ, ಪೆಂಗೊ, ಮಂಡ ಮುಂತಾದ ಮಧ್ಯದ್ರಾವಿಡ ಭಾಷೆಗಳಲ್ಲೂ ಕಂಡುಬರುತ್ತವೆ. ಉದಾ:

ತುಳು ಒಂಜಿ ತಮಿಳು ಒನ್ಱ್ರು DED 834
ಕಂಜಿ ತಮಿಳು ಕನ್ಱ್ರು DED 1187
ಪಂಜಿ ತಮಿಳು ಪನ್ಱ್ರಿ DED 3326
ಕಜಿಪು ತಮಿಳು ಕಱಿ DED 1171
ಪೆಜಿ ತಮಿಳು ಪೆಱುಪ DED 3626
ಬಿಜಿಕ್ರೆ ತಮಿಳು ವೆಱಕು DED 4467
ಬೆಜಂಟ್ ಕನ್ನಡ ಬೆರಣಿ DED 4356

ಮೇಲಿನ ಉದಾಹರಣೆಗಳಲ್ಲಿರುವ – ಜ ಕಾರಕ್ಕೆ ಸಮನಾಗಿ ಮಧ್ಯದ್ರಾವಿಡ ಭಾಷೆಗಳಲ್ಲಿನ ರೂಪಗಳಲ್ಲೂ -ಜ, -ಯ ಅಥವಾ -ಸಕಾರಗಳು ಕಂಡುಬರುತ್ತವೆ. ಆದರೆ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಇದಕ್ಕೆ ಸಮನಾಗಿ – ರಕಾರ ಕಂಡುಬರುತ್ತದೆ. ಹೀಗಾಗಿ ತುಳುಭಾಷೆ ಇಲ್ಲಿಯೂ ಮಧ್ಯದ್ರಾವಿಡ ಭಾಷೆಗಳೊಂದಿಗೆ ಹೆಚ್ಚಿನ ಹೊಂದಾಣಿಕೆಯುಳ್ಳ ಲಕ್ಷಣವನ್ನು ತೋರಿಸುವುದು.

ಕೃದಂತ ವಿಶೇಷಣ ಪ್ರತ್ಯಯ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ -ಅ; ಆದರೆ ಇಲ್ಲಿಯೂ ತುಳು ಉಳಿದ ದಕ್ಷಿಣ ದ್ರಾವಿಡ ಭಾಷೆಗಳಿಗಿಂತ ಭಿನ್ನವಾಗಿ -ಇ ಪ್ರತ್ಯಯವನ್ನು ಹೊಂದಿದೆ. ಮಧ್ಯ ದ್ರಾವಿಡ ಭಾಷೆಗಳಲ್ಲೂ ತುಳುವಿನಂತೆ – ಇ ಪ್ರತ್ಯಯವೇ ಬಳಕೆಯಲ್ಲಿದೆ. ಉದಾ:

ತುಳು ಮಲ್ಪಂದೀ ಮಾಡದ
ತೆಲುಗು ಚೆಯ್ಯನೀ ಮಾಡದ
ತಮಿಳು ಸೆಯ್ಯಾದ ಮಾಡದ

ಇದೂ ತುಳುವಿನ ಒಂದು ವಿಶೇಷತೆ ಎನ್ನಬಹುದು.

ಮೂಲ ದ್ರಾವಿಡದ * ಇ ಮತ್ತು * ಎ ಸ್ವರಗಳ ಕ್ರಮವಾಗಿ ಉ, ಒ ಆಗಿ ಬದಲಾವಣೆ ಹೊಂದುವುದೂ ತುಳುವಿನ ಇನ್ನೊಂದು ವಿಶಿಷ್ಟತೆ ಎನ್ನಬಹುದು. ಇ, ಎ ಸ್ವರಗಳ ಹಿಂದೆ ಉಭಯೋಷ್ಟ್ಯ ವ್ಯಂಜನವೂ ಮುಂದೆ ಮಾರ್ಧನ್ಯ ವ್ಯಂಜನವೂ ಬಂದಾಗ * ಇ, *ಎಗಳು ‘ಉ’ ಹಾಗೂ ‘ಒ’ ಆಗಿರುವುದನ್ನು ಈ ಕೆಳಗಿನ ಉದಾಹರಣೆಗಳನ್ನು ಕಾಣಬಹುದು.

ಉದಾಹರಣೆಗೆ:

ತುಳು ತಮಿಳ್ ಮಲಯಾಳಂ ಕನ್ನಡ
ಪುಣ ಪಿಣಮ್ / ಪುಣಮ್ ಪಿಣಮ್ ಪೆಣ / ಹೆಣ
(D.3420)
ಪುಳ್ಳಿ ಪಿಳ್ಳೈ ಪಿಳ್ಳೆ ಪಿಳ್ಳೆ, ಹಿಳ್ಲೆ
(D.3449)
ಮುಣ್ಚಿ ಮಿಳಕು ಮಿಳಕು ಮೆಣಸು
(D.3986)
ಪೊಣ್ಣು ಪೆಣ್ ಪೆಣ್ ಪೆಣ್ / ಹೆಣ್ / ಹೆಣ್ಣು
ಕೊಡವ= ಪೊಣ್ಣು
(D.3608)
ಬೊಲ್ಪು ವೆಳ್ ವೆಳಿ ಬೆಳ್ / ಬೆಳ್ಳಗೆ
ಕೊಡವ = ಬೊಳಪು
(D.4524)

ಕನ್ನಡದಲ್ಲಿ ‘ಸರಳ’ ಧ್ವನಿಯಾದ ‘ಗ’ ಕಾರದಿಂದ ಪ್ರಾರಂಭವಾಗುವ ಕೆಲವು ಪದಗಳಿಗೆ ಸಮಾನವಾಗಿರುವ ತುಳು ಶಬ್ದಗಳು ‘ಪರುಷ’ ಧ್ವನಿಯಾದ ‘ಕ’ಕಾರದಿಂದ ಮೊದಲಾಗುತ್ತವೆ.

ಕನ್ನಡ ತುಳು
ಗಡ್ಡೆ ಕಂಡೆ
ಗಂಡ ಕಂಡನಿ
ಗದ್ದೆ ಕಂಡೊ
ಗೆಣಸು ಕೆರೆಂಗ್

‘ಗ’ ಕಾರವು ಮಧ್ಯೆ ಅಥವಾ ಅಂತ್ಯದಲ್ಲಿ ಬರುವ ಕೆಲವು ಕನ್ನಡದ ಪದಗಳಿಗೆ ಸಮಾನವಾಗಿ ತುಳುವಿನಲ್ಲಿ ‘ಕ’ಕಾರ ಕಂಡುಬರುತ್ತದೆ.

ಕನ್ನಡ ತುಳು
ಬೇಗೆಟ ಬೇಂಕೆ
ಕಾಗೆ ಕಕ್ಕೆ
ಮೂಗು ಮೂಂಕು
ಬಾಗಿಲು ಬಾಕಿಲ್

ಕನ್ನಡದಲ್ಲಿ ‘ಕ’ಕಾರ ಆದಿಯಾದ ಕೆಲವು ಶಬ್ದಗಳಿಗೆ ಸಂವಾದಿಯಾಗಿ ತುಳುವಿನಲ್ಲಿ ‘ಗ’ಕಾರ ಆದಿಯಾದ ಕೆಲವು ಪದಗಳು ಬಳಕೆಯಲ್ಲಿವೆ.

ಕನ್ನಡ ತುಳು
ಕಡಸು ಗಡಸ್
ಕೋಣ ಗೋಣ
ಕುಪ್ಪೆ ಗುಪ್ಪೆ, ಗುಂಪೆ

‘ಟ’ ಕಾರವು ಅಂತ್ಯದಲ್ಲಿರುವ ಕೆಲವು ಕನ್ನಡ ಪದಗಳಿಗೆ ಸಮಾನವಾಗಿ ತುಳುವಿನಲ್ಲಿ ‘ಡ’ಕಾರವು ಕಂಡುಬರುತ್ತದೆ.

ಕನ್ನಡ ತುಳು
ದಂಟು ದಂಡು
ಹೇಂಟೆ ಪೆರಡೆ
ಉಂಟು ಉಂಡು
ಮುಸುಡು ಡ>ಟ ಮುಸುಟು ಮುಸುಂಟು
ಹೆಂಡತಿ ಪ>ಬ ಪೆಂಡತಿ ಬುಡೆದಿ
  ತ>ದ ಪೆಂಡತಿ ಬುಡೆದಿ

ಮೂಲದ್ರಾವಿಡದ ‘ೞ್’ ಕಾರವು ‘ಳ್‌’ಕಾರವಾಗಿ ತುಳುವಿಗೆ ಬರುವಾಗ ‘ಕ್’ ಕಾರವಾಗಿದೆ. ೞ್ >ಳ>(ತು)- ರ್

ಕನ್ನಡ ತುಳು
ಬಾೞೆ (ಳೆ) ಬಾರೆ
ಕೋೞಿ (ಳೆ) ಕೋರಿ
ಬೀೞ್ (ಳೆ) ಬೂರ್
ಪುೞು (ಳೆ) ಪುರಿ
ಅಗಳು ಅಗರು
ಮಳೆಗಾಲ ಮರಿಯಾಲೊ
ಕೊಳೆ ಕುರಿ

Robert Caldwell ರು ತಮ್ಮ History of South Indian Languages ಪುಸ್ತಕದಲ್ಲಿ In the Dravidian family, the interchange of ‘r’ and ‘t’ is one of the very common occurance ಎಂದು ಹೇಳಿ ‘Tulu generally changes the final ‘t’ of the other Dravidian languages into ‘r’ ಎಂದಿದ್ದಾರೆ.

ಉದಾ:

ಕನ್ನಡ ತುಳು
ಮೊಲ ಮೇರು
ತಲೆ ತರೆ
ಪಲು (ಹಲ್ಲು) ಪರು
ಕಾಲು ಕಾರು
ನೇಗಿಲು ನಾಯೆರ್
ಎಲೆ ಇರೆ
ಪಾಲ್ (ಹಾಲು) ಪೇರು
ಬಿಲ್ಲು ಬಿರು

ಆದರೆ ಕೆಲವೆಡೆ ಕನ್ನಡದ ‘ರ’ ತುಳುವಿನಲ್ಲಿ ‘ಲ’ ಆಗಿದೆ. ಉದಾ :

ಕನ್ನಡ ಪೊದರು ತುಳು ಪುದೆಲು
ಕನ್ನಡ ಉಸಿರು ತುಳು ಉಸುಲು

ಕನ್ನಡದ ಕೆಲವು ಪದಗಳ ಅಂತ್ಯಾಕ್ಷರ ‘ಗ’ಕ್ಕೆ ಬದಲಾಗಿ ತುಳುವಿನಲ್ಲಿ ‘ಯಿ’ ಕಂಡುಬರುತ್ತದೆ. ಉದಾ:

ಕನ್ನಡ ತುಳು
ತಾರಗೆ ದಾರಯಿ
ಸಂಪಿಗೆ ಸಂಪಯಿ
ಕೇದಿಗೆ ಕೇದಯಿ
ನಾಲಗೆ ನಾಲಯಿ
ಮರಿಗೆ ಮರಾಯಿ
ಸುಂಟಿಗೆ ಸುಂಟಾಯಿ…. ಇತ್ಯಾದಿ.