ಒಂದೇ ಪ್ರದೇಶದಲ್ಲಿ ಹಲವು ಭಾಷೆಗಳನ್ನಾಡುವ ಜನರಿದ್ದಾಗಲೂ ಅಲ್ಲಿನ ಸಂಸ್ಕೃತಿ ಪ್ರತಿಬಿಂಬಿಸುವ ಒಂದು ಭಾಷೆಯನ್ನು ಲಾಕ್ಷಣಿಕವಾಗಿ ಅಥವಾ ಅನುಕೂಲಕ್ಕಾಗಿ ಗುರುತಿಸುವುದಿದೆ. ಭಾಷಾವಾರು ವಿಂಗಡಣೆಯ ನಂತರದ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾಸರಗೋಡಿನಲ್ಲಿ ತುಳು ಬಹುಜನರ ಮನೆಮಾತು ಎಂಬ ಕಾರಣಕ್ಕಾಗಿಯೋ ಅಥವಾ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು ಜಿಲ್ಲೆ ಈ ಪ್ರದೇಶಗಳು ಸೇರಿದ ಭೂಭಾಗ ಬಹಳ ಕಾಲದಿಂದಲೇ ತುಳು ಪ್ರದೇಶವೆಂದು ಸಾಂಸ್ಕೃತಿಕ – ಸಾಮಾಜಿಕ ಕಾರಣಗಳಿಗಾಗಿ ಗುರುತಿಸಲ್ಪಟ್ಟಿರುವುದರಿಂದಲೋ ಈ ಪ್ರದೇಶವನ್ನು ‘ತುಳುನಾಡು’ ಎಂದು ಹೇಳಲಾಗುತ್ತದೆ. ಭಾಷೆಯೊಂದಿಗೆ ಒಂದು ಸಂಸ್ಕೃತಿಯೂ ಮೆತ್ತಿಕೊಳ್ಳುತ್ತದೆಯಾದ್ದರಿಂದ ಈ ಭಾಷಿಕರ ನೆಲೆಮನೆಯ ಎಲ್ಲರ ಸಂಸ್ಕೃತಿಯನ್ನು ಒಟ್ಟಾಗಿ ತುಳು ಸಂಸ್ಕೃತಿಯೆಂದು ಗುರುತಿಸಲಾಗಿದೆ.

ಈ ಪೈಕಿ ದಕ್ಷಿಣ ಕನ್ನಡಕ್ಕೆ ಮುಟ್ಟಿಕೊಂಡು ಕೊಡಗು ಜಿಲ್ಲೆಯಿದೆ. ಕೊಡವರು ವಾಸಿಸುವ ಅಥವಾ ಕೊಡಗು / ಕೊಡವ ಭಾಷೆ ಮಾತನಾಡುವ ಪ್ರದೇಶ ಇದಾಗಿರುವುದರಿಂದ ಮತ್ತು ಜನಾಂಗ ಮತ್ತು ಭಾಷೆಯನ್ನು ಆಧರಿಸಿ ಯಾವುದೇ ಸಂಸ್ಕೃತಿಯನ್ನು ಗುರುತಿಸುವುದರಿಂದ ಕೊಡಗು / ಕೊಡವ ಎಂಬ ಅಸ್ತಿತ್ವ ತುಳುವಿನಷ್ಟೇ ಸಹಜವಾಗಿದೆ.

ಇದನ್ನು ಹೇಳುವಾಗ ಒಂದು ವಿಷಯವನ್ನು ಗಮನಿಸಬೇಕು : ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಜನರು ಕನ್ನಡ ಹಾಗೂ ಕೊಂಕಣಿಯನ್ನು ಮಾತೃಭಾಷೆಯಾಗಿ ಹೊಂದಿದ್ದಾರೆ. ಇವಲ್ಲದೆ ಮರಾಠಿ ಮತ್ತಿತರ ಭಾಷೆಗಳನ್ನಾಡುವ ಜನರೂ ಇದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಮಲೆಯಾಳ ಭಾಷಿಕರು ಹಿಂದಿನಿಂದಲೂ ಅಂದರೆ ಕಾಸರಗೋಡು ಜಿಲ್ಲೆ ಕೇರಳಕ್ಕೆ ಸೇರುವ ಮೊದಲೇ ಇದ್ದರು. ಕಾಸರಗೋಡನ್ನು ಕನ್ನಡನಾಡು ಎಂದು ನಾವು ಹೇಳುತ್ತೇವಾದರೂ ಕರ್ನಾಟಕ ಏಕೀಕರಣವಾಗಲು ಯತ್ನ ನಡೆಯುತ್ತಿದ್ದಾಗಲೇ ಕೇರಳ ಏಕೀಕರಣದ ಯತ್ನಗಳೂ ನಡೆಯುತ್ತಿತ್ತು. ಕೇರಳ ಏಕೀಕರಣ ಪರಿಷತ್ತಿನ ಅಧ್ಯಕ್ಷಸ್ಥಾನದಿಂದ ಶ್ರೀ ಕೇಳಪ್ಪನ್‌ಅವರು ದಕ್ಷಿಣ ಕನ್ನಡ, ಕೊಡಗು ಮತ್ತು ನೀಲಗಿರಿ ಜಿಲ್ಲೆ (ಇದೀಗ ತಮಿಳುನಾಡಿನ ಭಾಗ)ಗಳನ್ನು ಏಕೀಕೃತ ಕೇರಳದಲ್ಲಿ ಸೇರಿಸಿಕೊಳ್ಳಬೇಕೆಂದು ಪ್ರಸ್ತಾವಿಸಿದ್ದರು. ಅನಂತರ ನಡೆದದ್ದು ಈಗ ಇತಿಹಾಸ. ದಕ್ಷಿಣ ಕನ್ನಡ, ಕೊಡಗು ಇವೆರಡೂ ೧೯೫೬ರಲ್ಲಿ ಕರ್ನಾಟಕದಲ್ಲಿ ಸೇರಿ ಒಂದಾದವು.

ಈ ಅಂಶಗಳನ್ನು ಹೇಳುವುದರ ಉದ್ದೇಶವೇನೆಂದರೆ ಯಾವುದೇ ಭಾಷೆಯಾಗಲಿ ಭಾಷೆಯ ಕಲಾಭಿವ್ಯಕ್ತಿಯಾದ ಸಾಹಿತ್ಯವಾಗಲೀ ಈ ಪ್ರದೇಶದಿಂದಲೇ ಆರಂಭವಾಗಿದೆ ಅಥವಾ ಈ ಪ್ರದೇಶದಲ್ಲೇ ಕೊನೆಗೊಳ್ಳುತ್ತದೆ ಎಂಬ ಹಾಗೆ ತಾಂತ್ರಿಕ ಅಥವಾ ಭೌಗೋಳಿಕ ಕೃತಕ ಗಡಿ, ವಿಸ್ತಾರಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಅದು ಒಂದು ರೀತಿಯಲ್ಲಿ ಬೆಳಗಾಗುವ ಹಾಗೆ; ಕತ್ತಲಾಗುವ ಹಾಗೆ. ಯಾವುದೇ ಒಂದು ಪ್ರದೇಶದಲ್ಲಿ ಒಂದು ಭಾಷೆಯ ಇತರ ಭಾಷೆಗಳಿಗಿಂತ ಆತ್ಮೀಯವಾಗಿ ಸಾಹಿತ್ಯವನ್ನು ಸ್ವಾಗತಿಸುತ್ತದೆ ಅಥವಾ ಸಾಹಿತ್ಯದೊಂದಿಗೆ ಹೊಂದಿಕೊಳ್ಳುತ್ತದೆ. ಇಂಥಲ್ಲಿ ಇತರ ಭಾಷೆಗಳ ಸೊಗಡೂ ಸೇರಿ ಒಂದು ರೀತಿಯ ಮಿಶ್ರ ಮಾಧುರ್ಯವೂ ಇರುತ್ತದೆ. ಕರ್ನಾಟಕದ ಗಡಿ ಭಾಗಗಳಾದ ದಕ್ಷಿಣ ಕನ್ನಡ ಹಾಗೂ ಕೊಡಗು ಇವು ಭಾಷೆಯ ಮತ್ತು ಸಾಹಿತ್ಯದ ದೃಷ್ಟಿಯಿಂದ ಕನ್ನಡ ಸಂಸ್ಕೃತಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದವುಗಳು.

ಇದನ್ನು ಹೀಗೆ ನಿರೂಪಿಸಬಹುದು : ದಕ್ಷಿಣ ಕನ್ನಡ – ಅಥವಾ ಅನುಕೂಲಕ್ಕಾಗಿ ತುಳುನಾಡು – ಎಂದು ಕರೆಯುವ ಪ್ರದೇಶದಲ್ಲಿ ತುಳು ಭಾಷಿಕರೇ ಹೆಚ್ಚಿದ್ದರೂ ಇಲ್ಲಿನ ಗ್ರಂಥಸ್ಥ ಭಾಷೆಯಾಗಿ ಅನಾದಿಯಿಂದಲೂ ಕನ್ನಡವೇ ವಿಜೃಂಭಿಸಿತು. ತುಳುವಿನ ಮೌಖಿಕ ಮಹಾಕಾವ್ಯಗಳಾಗಲೀ ಜನಪದ ಸಾಹಿತ್ಯಗಳಾಗಲೀ ಹೊರ ಜಗತ್ತಿಗೆ ಮುಖ ಮಾಡಿದ್ದು ತೀರ ಇತ್ತೀಚೆಗೆ. ಸಂಶೋಧನಕಾರರು ತುಳುಲಿಪಿಯ ಪ್ರಾಚೀನತೆಯನ್ನು ಅಗೆದು ತೆಗೆದಿದ್ದಾರಾದರೂ (ತುಳುವಿನಿಂದಲೇ ಮಲೆಯಾಳ ಲಿಪಿಯೂ ಹುಟ್ಟಿರಬಹುದು ಎಂಬ ವಿವಾದಾಸ್ಪದ ಸಿದ್ಧಾಂತವೂ ಇದೆ; ಅದು ಇಲ್ಲಿ ವಿವರಣೆಗೆ ಅಪ್ರಸ್ತುತ) ಇನ್ನು ತುಳುಲಿಪಿಯಲ್ಲಿ ತುಳು ಸಾಹಿತ್ಯಗಳು ಪ್ರಕಾಶಗೊಳ್ಳದಿರುವುದನ್ನು ಗಮನಿಸಿದರೆ ತುಳುಭಾಷೆ ವಿದ್ವತ್ತಿನಂತೆ ಒಳಗೇ ಪ್ರವಹಿಸಿ ಕನ್ನಡವೆಂಬ ತಂತಿಯ ವಾಹಕದಲ್ಲಿ ವಿದ್ಯುತ್ತಾಗಿ ಹರಿಯಬೇಕಾದ ಅನಿವಾರ್ಯತೆಯಿದೆ ಎಂದೆನಿಸುತ್ತದೆ. ಈ ಪರಿಸ್ಥಿತಿಗೆ ಐತಿಹಾಸಿಕ ಕಾರಣಗಳನ್ನು ಹುಡುಕುವುದರಿಂದ ಮತ್ತು ಕನ್ನಡದ ಯಾಜಮಾನ್ಯವನ್ನು ಆರೋಪಿಸುವುದರಿಂದ ವಾಸ್ತವ ಸತ್ಯದ ದರುಶನವಾಗಲಾರದು. ಬದಲು ಭಾಷೆಯೊಂದು ತನ್ನನ್ನು ತಾನು ನಿರೂಪಿಸಿಕೊಳ್ಳುವುದಕ್ಕಾಗಿ, ಅಭಿವ್ಯಕ್ತಿಗೊಳಿಸುವುದಕ್ಕಾಗಿ ಒರತೆಯ ನೀರಿನಂತೆ ತನ್ನ ಹಾದಿಯನ್ನು ತಾನೇ ನಿರ್ಮಿಸಿಕೊಳ್ಳುತ್ತದೆ ಎಂದು ನಂಬುವುದು ಒಳ್ಳೆಯದು. ಹೀಗೆ ತುಳು ಭಾಷೆ ಕನ್ನಡದೆದರು ತನ್ನ ಪ್ರತಿಸಂಸ್ಕೃತಿಯನ್ನು ಕನ್ನಡದ ಮೂಲಕವೇ ಹೊರಹೊಮ್ಮಲು ಶಕ್ತವಾಗಿದೆಯೆನ್ನುವುದನ್ನೀಗ ಕಾಣಬಹುದಾಗಿದೆ.

ಇದನ್ನೇ ಬೆಳೆಸಿ ಹೇಳುವುದಾದರೆ, ಭಾಷೆಯ ಮತ್ತು ಸಾಹಿತ್ಯದ ವಿಕಾಸಕ್ಕೆ ಲಿಪಿಯ ಅಗತ್ಯವಾದರೂ ಅನಿವಾರ್ಯವಲ್ಲ. ಎಂದೂ ಲಿಖಿತ ಪ್ರಪಂಚಕ್ಕಿಳಿಯದೆಯೇ ಎಲ್ಲಾ ಭಾಷೆಯ ಜಾನಪದಗಳು ಲಾಗಾಯ್ತಿನಿಂದ ನಮ್ಮ ನಡುವೆ ಉಳಿದು ಬರಲಿಲ್ಲವೇ? ‘ಕೊಡಗು ಭಾಷೆಗೆ ಸ್ವಂತ ಲಿಪಿ ಇಲ್ಲದಿದ್ದರೂ ಆ ಪ್ರದೇಶದ ನಮ್ಮ ಸೋದರ ಸೋದರಿಯರು ಮೌಖಿಕ ಪರಂಪರೆಯಲ್ಲಿಯೇ ತಮ್ಮ ಸಾಂಸ್ಕೃತಿಕ ಭಾಗ್ಯವನ್ನು ಬೆಳೆಸಿಕೊಂಡು ಬಂದಿದ್ದಾರೆ’ ಎಂದು ಎಲ್‌. ಎಸ್‌. ಶೇಷಗಿರಿ ರಾವ್‌ಹೇಳಿದ್ದಾರೆ.

ವಿರೋಧಾಭಾಸವೆಂದರೆ, ಎಂದು ನಾವಿದನ್ನು ಲಿಪಿಯ ಮುಖಾಂತರ ಲಿಖಿತಕ್ಕಿಳಿಸುತ್ತೇವೆಯೋ ಆಗ ಅದು ಜನಪದದಿಂದ ದೂರವಾಗಿದೆ. ನಾವೀಗ ಮಾಡುತ್ತಿರುವ ಕೆಲಸ ಜನಪದವನ್ನು ಅಥವಾ ಮೌಖಿಕ ಸಾಹಿತ್ಯ – ಸಂಸ್ಕೃತಿಯನ್ನು ಉಳಿಸುವುದು; ಬೆಳೆಸುವುದಲ್ಲ. ಬರೆಹಕ್ಕಿಳಿದ ತಕ್ಷಣ ಭಾಷೆ ಮತ್ತು ಸಾಹಿತ್ಯ ನಾಲಿಗೆಯಲ್ಲಿ ನಲಿದಾಡದೆ ನೇರ ಮಿದುಳನ್ನು ಪ್ರವೇಶಿಸುತ್ತದೆ. ಮಿದುಳಿನ ಪ್ರಪಂಚ ಬುದ್ಧಿಯದ್ದು; ಹೃದಯದ್ದಲ್ಲ. ಹೃದಯಗಮ್ಯವಾಗದೆ ಯಾವುದೇ ಭಾಷೆಯಾಗಲೀ ಸಾಹಿತ್ಯವಾಗಲೀ ಭಾವಕ್ಕೆ ನಿಲುಕದು. ಭಾವಕ್ಕೆ ನಿಲುಕದೆ ನೆನಪಿನಲ್ಲಿಳಿಯದು. ಆದ್ದರಿಂದಲೇ ಲಿಪಿರಹಿತ ಬಡಭಾಷೆಗಳು ಸಹಜವಾಗಿಯೇ ‘ಹಲಗೆಬಳಪವ ಪಿಡಿಯದ ಅಗ್ಗಳಿಕೆ’ಯನ್ನು ಹೊಂದಿವೆ.

ತುಳು ಹೇಳಿ-ಕೇಳಿ ಪಂಚ ದ್ರಾವಿಡ ಭಾಷೆಗಳಲ್ಲಿದ್ದರೂ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳ ಭಾಷೆಗಳಿಗಿರುವ ಸ್ಥಾನ, ವರ್ಚಸ್ಸು ತುಳುವಿಗೆ ಇತ್ತೀಚಿನವರೆಗೂ ದಕ್ಕಿರಲಿಲ್ಲ. ದಕ್ಷಿಣ ಭಾರತದಲ್ಲಿ ಭಾಷಾವಾರು ರಾಜ್ಯಗಳ ನಿರ್ಮಾಣವಾದಾಗ ಭಾಷೆಗೊಂದು ರಾಜ್ಯವಾಗುವುದಿದ್ದರೆ ತುಳುವಿಗೂ ಒಂದು ರಾಜ್ಯ ಸಿಗಬೇಕಾಗಿತ್ತು. ಆದರೆ ಸಹಜವಾಗಿಯೇ ಹಾಗಾಗಲಿಲ್ಲ. ತುಳು ಆಂತರ್ಯ ಸಂಸ್ಕೃತಿಯನ್ನು ಹೊಂದಿಯೂ ಕನ್ನಡದ ಒಳಹೊರಗಿನಲ್ಲೇ ತನ್ನ ಸಂಸ್ಕೃತಿಯನ್ನು ಬಿಂಬಿಸುತ್ತಿತ್ತು. ಕನ್ನಡ ಮಾತ್ರವೇ ಅಲ್ಲ; ಮಲೆಯಾಳದಲ್ಲೂ. ಉದಾಹರಣೆಗೆ ತುಳುವಿಗೆ ವಿಶಿಷ್ಟವಾದ ಭೂತಾರಾಧನೆಯಲ್ಲಿ ಭೂತ ಕಟ್ಟುವ ವ್ಯಕ್ತಿ ಮಲೆಯಾಳದಲ್ಲಿ ತನ್ನ ಹರಕೆ-ಹಾರೈಕೆಗಳನ್ನು ಹೇಳುತ್ತಾನೆ. ಮಲೆಯಾಳ ಗೊತ್ತಿಲ್ಲದ ವ್ಯಕ್ತಿ ತನ್ನ ಭಾಷೆಯನ್ನೇ ಆಡಬೇಕಾಗುತ್ತದೆ. ತುಳುವನಾದರೆ ತುಳು ಮಾತಾಡುತ್ತಿದ್ದನೇನೋ?

ಇತರ ನಾಲ್ಕು ದ್ರಾವಿಡ ಭಾಷೆಗಳಿಗೆ ಈ ಹೆದ್ದಾರಿಯ ಅನುಕೂಲವಿತ್ತು. ಆದ್ದರಿಂದಲೇ ಮಂಗಳೂರಿನಲ್ಲಿ ನೆಲೆನಿಂತ ಕೊಂಕಣಿ ಮಾತೃಭಾಷೆಯಾದ ಪಂಜೆಯವರು, ಗೋವಿಂದ ಪೈಗಳು, ತುಳು ಮಾತೃ ಭಾಷೆಯಾದ ಕಯ್ಯಾರರು ಕನ್ನಡದಲ್ಲೇ ಬರೆದರು. ತೆಲುಗು ಮರಾಠಿ ಮಾತೃ ಭಾಷೆಯಾದವರೂ (ಮಾಸ್ತಿ, ಡಿ.ವಿ.ಜಿ. ಬೇಂದ್ರೆ ಮುಂತಾದವರು) ಕನ್ನಡ ಸಂಸ್ಕೃತಿಯೊಳಗೆ ಉಸಿರಾಡಿ ಕನ್ನಡದಲ್ಲೇ ಬರೆದರು. ಆದ್ದರಿಂದ ಮಾತೃ ಭಾಷೆ ಅಭಿವ್ಯಕ್ತಿಯ ಭಾಷೆಯೂ ಆಗಬೇಕಾಗಿಲ್ಲ; ಮತ್ತು ಹಾಗಾಗದೇ ಇದ್ದಾಗ ಮಾತೃ ಭಾಷೆಯ ಸಂಸ್ಕೃತಿ ಮನೆಯೊಳಗೇ ಉಳಿಯುತ್ತದೆ, ತುಳುವಿನ ಹಾಗೆ. ಸಾಹಿತ್ಯದ ಲಾಭ ಹೆದ್ದಾರಿಯ ಭಾಷೆಗಳಿಗಾಗುತ್ತದೆ.

ತುಳು ಮತ್ತು ಕೊಡವ ಭಾಷೆಗಳ ಕುರಿತು ಬರೆಯುವಾಗ ಈ ಅಂಶಗಳು ನೆನಪಿನಲ್ಲಿರಬೇಕೆಂಬುದಕ್ಕಾಗಿ ಈ ವಿಚಾರಗಳನ್ನು ಪ್ರಸ್ತಾವಿಸಲಾಗಿದೆ.

ದಕ್ಷಿಣ ಕನ್ನಡಕ್ಕೆ ಅಂಟಿಕೊಂಡ ಭೂಭಾಗ ಕೊಡಗು ಆಗಿದ್ದರೂ ಯಾಜಮಾನ್ಯ ವ್ಯವಹಾರದಲ್ಲಿ ದೂರದ ಊರು. ಮಂಗಳೂರು, ಧಾರವಾಡ, ಮೈಸೂರು, ಬೆಂಗಳೂರು – ಈ ಊರುಗಳ ನಡುವೆ ಸಂಪರ್ಕಿಸಿ ಕನ್ನಡ ಭಾಷೆ – ಸಾಹಿತ್ಯದ ದೃಷ್ಟಿಯಿಂದ ಸಮೃದ್ಧ ಸಂವಹನವನ್ನು ಮಾಡಿದವರೂ, ಕೊಡಗಿನದ್ದೇ ಆದ, ಇನ್ನೆಲ್ಲೂ ಕಾಣಸಿಗದ, ಕೊಡಗು / ಕೊಡವ ಭಾಷೆ ಮತ್ತು ಸಾಹಿತ್ಯದ ಸಂಪರ್ಕವನ್ನು ತುಳುನಾಡು ಮಾತ್ರವಲ್ಲ ಇಡಿಯ ಕನ್ನಡ ನಾಡು ಮಾಡಿರಲಿಲ್ಲ; ಮಾತ್ರವಲ್ಲ ಇಂದಿಗೂ ಮಾಡುತ್ತಿಲ್ಲ. ತುಳುವಿಗೆ ಈ ಸಮಸ್ಯೆ ಇತ್ತೀಚಿನವರೆಗೂ ಇತ್ತು; ಪ್ರಾಯಶಃ ಈಗಿಲ್ಲ.

ದಕ್ಷಿಣ ಭಾರತದ ತಮಿಳು, ತೆಲುಗು, ಕನ್ನಡ ಹಾಗೂ ಮಲೆಯಾಳಂ ಭಾಷೆಗಳನ್ನು ಬಿಟ್ಟರೆ ಇನ್ನುಳಿದ ಯಾವ ದ್ರಾವಿಡ ಭಾಷೆಗಳಿಗೂ ಲಿಪಿಯಿಲ್ಲ. ಗ್ರಂಥಸ್ಥವಲ್ಲದ ೧೮ ದ್ರಾವಿಡ ಭಾಷೆಗಳನ್ನೂ ೧೧ ಉಪಭಾಷೆಗಳನ್ನೂ ಈವರೆಗೆ ಕಂಡುಹಿಡಿದಿದ್ದಾರೆ. ೧೮ನೆಯ ಶತಮಾನದಿಂದಲೇ ಈ ಭಾಷೆಗಳಿಗೆ ಸಂಬಂಧಿಸಿದ ಸಾಮಗ್ರಿಯನ್ನು ವಿದ್ವಾಂಸರು ಸಂಗ್ರಹಿಸತೊಡಗಿದ್ದರೂ ೧೯ನೆಯ ಶತಮಾನದಲ್ಲಿಯೇ ಇವು ಬೆಳಕಿಗೆ ಬರಲು ತೊಡಗಿದವು.

ಕೊಡಗು ಹಾಗೂ ತುಳುಭಾಷೆಗಳನ್ನು ಕ್ರಿ.ಶ. ೧೮೮೯ರಲ್ಲಿ ಗುರುತಿಸಲಾಗಿದೆ. ತುಳುವನ್ನು ಗ್ರಂಥಸ್ಥ ಭಾಷೆ ಎಂಬ ತಿಳುವಳಿಕೆ ಇಲ್ಲದಿದ್ದ ಕಾಲದಲ್ಲಿ ಇವನ್ನು (ಮತ್ತು ಇಂತಹ ಇತರ ಭಾಷೆಗಳನ್ನು) ‘ಶ್ರಾವಕ ದ್ರಾವಿಡ ಭಾಷೆಗಳು’ ಎಂದು ಉಲ್ಲೇಖಿಸಲಾಗಿದೆ.

ಮೂಲ ದಕ್ಷಿಣ ದ್ರಾವಿಡದಿಂದ ತುಳು ಮೊಟ್ಟ ಮೊದಲು ಸ್ವತಂತ್ರವಾಯಿತು. ಅನಂತರ ಮೂಲ ತಮಿಳು – ಕನ್ನಡ ಶಾಖೆಯಿಂದ ಕನ್ನಡವು ಬೇರಾಯಿತು. ತೋದ – ಕೋತ – ಕೊಡಗು ಈ ಗುಂಪಿನಲ್ಲಿ ಮೂಲ ತೋದ – ಕೋತ ಉಪಶಾಖೆಯ ಭಾಷೆಗಳು ತಮಿಳಿನಿಂದ ಬೇರ್ಪಟ್ಟವು. ಆಮೇಲೆ ತಮಿಳು – ಕೊಡಗು ಶಾಖೆಯಿಂದ ಕೊಡಗು ಭಾಷೆಯೂ ಸ್ವತಂತ್ರವಾಯಿತು. ಮೂಲ ತಮಿಳು – ಮಲೆಯಾಳಂ ಇರುಳ ಶಾಖೆಯಲ್ಲಿಂದ ಮಲೆಯಾಳಂ ಹೊರಬಂದು ನಿಂತ ಕೆಲ ಕಾಲಾನಂತರ ಇರುಳ ಭಾಷೆಯೂ ಸ್ವತಂತ್ರಗೊಂಡಿತು. ಹೀಗೆ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಮೂಲ ದಕ್ಷಿಣ ದ್ರಾವಿಡ ಶಾಖೆಯಿಂದ ಮೊದಲು ತುಳು, ಆಮೇಲೆ ಅನುಕ್ರಮವಾಗಿ ಕನ್ನಡ, ತೊದ, ಕೋತ – ಕೊಡಗು, ಮಲೆಯಾಳಂ, ಇರುಳ ಇವು ಬಂದಿವೆಯೆಂದು ನಂಬಲಾಗಿದೆ. ದಕ್ಷಿಣ ದ್ರಾವಿಡ ಭಾಷೆಗಳಿಗೆ ಕೊಡಗು ಮತ್ತು ತುಳು ಸೇರುತ್ತದೆಂಬ ಈ ಸಿದ್ಧ ನಿಲುವಿಗೆ ಬದ್ಧವಾಗಿಯೇ ಮುಂದಿನ ಮಾತುಗಳನ್ನು ಹೇಳುತ್ತಿದ್ದೇನೆ.

ತುಳು ಭಾಷೆಯ ಕುರಿತು ಈ ಅಧ್ಯಯನಕ್ಕೆ ಆಧಾರವಾಗಿ ಒಂದೆರಡು ಅಂಶಗಳನ್ನು ಹೇಳಬಹುದು. ತುಳುವಿನ ಸಂಬಂಧ ಕನ್ನಡದೊಡನಲ್ಲದೆ ತೆಲುಗಿನೊಂದಿಗೂ ಇದೆ. ತುಳು ಮಾತನಾಡುವ ತುಳುವರ ಸಂಖ್ಯೆ ಸುಮಾರು ಒಂಬತ್ತು ಲಕ್ಷ ಐವತ್ತು ಸಾವಿರದಷ್ಟಿದೆ. ತುಳು ಭಾಷೆಗೂ ಹನ್ನೆರಡನೆಯ ಶತಮಾನದಿಂದಲೇ ಅಸ್ತಿತ್ವವಿದೆಯೆಂದು ಶಾಸಾಧಾರದಿಂದ ತಿಳಿದುಬರುತ್ತದೆ. ತುಳು ಭಾಷೆಗೂ ಕನ್ನಡ ಲಿಪಿ ಬಳಸುವ ರೂಢಿ ಇದೆ. ಇತ್ತಿತ್ತಲಾಗಿ ಈ ಭಾಷೆಯಲ್ಲಿ ಒಳ್ಳೆಯ ಸಾಹಿತ್ಯವು ರಚನೆಯಾಗುತ್ತಿದೆ. ತುಳು ಭಾಷೆಯಲ್ಲಿ ಮಂಗಳೂರು, ಪುತ್ತೂರು ಎಂದು ಪ್ರಾದೇಶಿಕವಾಗಿ ಹಾಗೂ ಬ್ರಾಹ್ಮಣ, ಬ್ರಾಹ್ಮಣೇತರ ತುಳು ಎಂದು ಸಾಮಾಜಿಕವಾಗಿ ಪ್ರಭೇದವನ್ನು ಗಮನಿಸಬಹುದು. ತುಳು ಭಾಷೆಯ ಮೇಲೆ ಕನ್ನಡದ ಪ್ರಭಾವ ಸಾಕಷ್ಟು ಆಗಿದೆ. ತುಳುವಿನ ಶಿಷ್ಟ ಕಾವ್ಯಗಳಾದ ವಿಷ್ಣುತುಂಗನ ಭಾಗವತೊ, ಅರುಣಾಬ್ಜ ಕವಿಯ ಮಹಾಭಾರತ, ಕಾವೇರಿ ಕಾವ್ಯಗಳ ಮೇಲೆ ಕನ್ನಡ ಕಾವ್ಯಗಳ ಪ್ರಭಾವ ಆದಂತೆ ಕಾಣಿಸುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ತುಳು ಬಳಕೆಯಲ್ಲಿದ್ದರೂ ಉತ್ತರ, ಮಧ್ಯ ದ್ರಾವಿಡ ಭಾಷೆಗಳ ಅಂಶಗಳನ್ನು ಹೊಂದಿರುವುದು ವಿದ್ವಾಂಸರ ಆಸಕ್ತಿಯನ್ನು ಕೆದಕಿದೆ. ತುಳುವನ್ನು ವರ್ಣಿಸುವ ವ್ಯಾಕರಣ ಗ್ರಂಥ ಹಾಗೂ ಅನೇಕ ಲೇಖನಗಳು ಬಂದಿದೆ.

ಈ ಸ್ಥಿತಿಗೆ ಮತ್ತೆ ತೌಲನಿಕವಾಗಿ ತುಳುವಿನ ಹಾಗೂ ಕೊಡಗಿನ ವಿಭಿನ್ನ ಸೈದ್ಧಾಂತಿಕ ಕಾರಣಗಳನ್ನು ಶೋಧಿಸಬಹುದು; ತುಳುನಾಡು ನಡುಗನ್ನಡ ಸಾಹಿತ್ಯ ಕಾಲದ ನಂತರದ ಯುಗದೃಷ್ಟಿಯಲ್ಲಿ ಕರ್ನಾಟಕದ ಇತರ ಯಾವುದೇ ಪ್ರದೇಶಕ್ಕೂ ಹಿಂದಿಲ್ಲ. ರತ್ನಾಕರವರ್ಣಿಯಿಂದ ಆರಂಭಿಸಿ, ಮುದ್ದಣನವರೆಗಿನ ನಡುಗನ್ನಡ ಸಾಹಿತ್ಯದ ಪೈರು ತಯಾರಿಸಿ ಲಭಿಸಿದ ನಾಡು ತುಳು. ಹೊಸಗನ್ನಡ ಸಾಹಿತ್ಯದಲ್ಲಂತೂ ಪಂಜೆ, ಮುಳಿಯ, ಗೋವಿಂದ ಪೈ, ಕಡೆಂಗೋಡ್ಲು, ಸೇಡಿಯಾಪು, ಶಿವರಾಮ ಕಾರಂತ ಮುಂತಾದ ಶ್ರೇಷ್ಠರನ್ನು ನೀಡಿದ ತುಳುನಾಡಿನ ಭಾಷಿಕ ಸಾಂಸ್ಕೃತಿಕ ವೈವಿಧ್ಯವನ್ನು ಇವೆರೆಲ್ಲರೂ ಬಲ್ಲವರೇ ಆಗಿದ್ದರು. ತುಳು ಸಂಸ್ಕೃತಿಯನ್ನು ಬಿಟ್ಟುಕೊಡದೆಯೇ ಕನ್ನಡ ಸಂಸ್ಕೃತಿಯನ್ನು ಪರಿಭಾವಿಸಿದ ಇವೆರೆಲ್ಲರೂ ತುಳು ಸಂಸ್ಕೃತಿಯನ್ನು ಕರಾರುವಕ್ಕಾಗಿ ಮನದಟ್ಟು ಮಾಡಬಲ್ಲವರಾಗಿದ್ದರು.

ತುಳುನಾಡಿನ ಪ್ರಾತಿನಿಧಿಕ ಕಲೆಯಾದ ಯಕ್ಷಗಾನವನ್ನೇ ಗಮನಿಸಿ. ಅದು ಸುಶಿಕ್ಷಿತ ಕಲೆಯಾಗಿರುವುದು ಇತ್ತೀಚೆಗೆ. ಶುದ್ಧ ಜಾನಪದದ ಕ್ಷೇತ್ರವಾದ ಯಕ್ಷಗಾನ ತನ್ನ ಮಾಧ್ಯಮವಾಗಿ ಕನ್ನಡವನ್ನೇ ಸ್ವೀಕರಿಸಿತ್ತೇ ಹೊರತು ತುಳುವನ್ನಲ್ಲ. ಕನ್ನಡದಲ್ಲಿ ಬರೆದರೆ ವರ್ಚಸ್ಸು ಹೆಚ್ಚುತ್ತದೆ; ಸ್ಥಾನ ಹಿಗ್ಗುತ್ತದೆಯೆಂಬುದು (ಇಂದು ನಮ್ಮ ಅನೇಕ ಲೇಖಕರು ಇಂಗ್ಲಿಷಿಗೆ ಮಾರುಹೋದ ಹಾಗೆ) ಪರೋಕ್ಷ ಕಾರಣವಾದರೂ ಹಾಗೆ ಹೇಳುವುದು ಸೃಜನಶೀಲರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದಂತಾಗುತ್ತದೆ. ಕನ್ನಡದಲ್ಲಿ ಕಾವ್ಯ ಬರೆದ ಎಷ್ಟು ಜನ ಕನ್ನಡ ಲಿಪಿಯಲ್ಲೇ ತುಳು ಸಾಹಿತ್ಯವನ್ನು ನಿರ್ಮಿಸಿದರು? ಅಂತರಂಗವನ್ನು ಕೆದಕಿ ಸೃಷ್ಟಿಯಾಗುವ ಸಾಹಿತ್ಯದಲ್ಲಿ ಪರರ ಓಲೈಕೆಯ ಪ್ರಮಾಣವನ್ನು ಪಣಕ್ಕಿಡುವುದು, ಭಾಷೆ – ಸಾಹಿತ್ಯವನ್ನೊಳಗೊಂಡ ಸಂಸ್ಕೃತಿಯ ಉದಾತ್ತತೆಯ ಚಲನಶೀಲತೆಯನ್ನು ಕಡೆಗಣಿಸಿದಂತಾದೀತು. ಒಂದು ಭಾಷೆ ಇನ್ನೊಂದರ ಪ್ರಭಾವಕ್ಕೊಳಗಾಯಿತು ಎಂದರೆ ಅದು ಸ್ವೀಕರಿಸುವುದಕ್ಕೆ ಶಕ್ತವಾಯಿತು ಎಂದಷ್ಟೇ ಅರ್ಥ. ತನ್ನತನವನ್ನು ಕಳದುಕೊಂಡಿತು ಅಥವಾ ತನಗೆ ತಾನೇ ವಂಚಿಸಿಕೊಂಡಿತು ಎಂದರ್ಥವಲ್ಲ. ಎಷ್ಟೇ ನೀರು ಹರಿದುಬಂದರೂ ಸಮುದ್ರ ತನ್ನ ಮಟ್ಟವನ್ನು ಕಾಯ್ದುಗೊಳ್ಳುತ್ತದೆ. ಹಾಗೆಯೇ ಇನ್ನೊಂದು ಭಾಷೆಯಿಂದಾಗಿ ಒಂದು ಭಾಷೆ ಕೆಳಕ್ಕೆ ತಳ್ಳಲ್ಪಟ್ಟಿತು ಎಂಬುದೂ ಆ ಭಾಷೆಯ ಜೀವಂತಿಕೆಗೆ ದೊರಕಬಹುದಾದ ಅಪವಾದ.

ನೈಜ ಕಾರಣ ಬೇರಲ್ಲೋ ಅಡಗಿರುತ್ತದೆ. ಅದು ತಳುವಿನ ಸಂದರ್ಭದಲ್ಲಿ ಅದರ ದೇಶೀ ಅಥವಾ ಮೌಖಿಕ ಗುಣದಿಂದಾಗಿಯೇ ಇರಬಹುದೆಂಬುದು ನನ್ನ ವಾದೆ. ತುಳು ಮಾತೃ ಭಾಷೆಯಾಗಿದ್ದು, ಕನ್ನಡದ ಶಿಕ್ಷಣವೇ ಇಲ್ಲದಿರುವವನೂ ಯಕ್ಷಗಾನ ರಂಗಭೂಮಿಯಲ್ಲಿ ಕನ್ನಡ ಪದಗಳನ್ನು ಹಾಡುವುದು, ಕನ್ನಡ ಗದ್ಯವನ್ನು ಮಾತನಾಡುವುದು ಅಭಿವ್ಯಕ್ತಿಯ ಒಂದು ಹಂತದಲ್ಲಿ ಎಷ್ಟು ಸಹಜವೋ, ಅದರಿಂದಾಚೆಗಿನ ಹಂತದಲ್ಲಿ ತುಳು ಮನಸ್ಸು ನಿಸ್ವಾರ್ಥವಾಗಿ ಯೋಚಿಸಿ ತನ್ನ ಸಂಸ್ಕೃತಿಯನ್ನು ಕನ್ನಡ ಮುಖೇನ ಹೊರಹಾಕಿತೆಂಬುದೂ ಅಷ್ಟೇ ಸಹಜ. ಮೇಲೆ ನೀರು ಆವಿಯಾಗಿ ಹೋಗುತ್ತಿರುವಾಗಲೂ ಸಮುದ್ರದ ನೀರು ತಣ್ಣಗಿರುತ್ತದಲ್ಲವೇ? ತುಳುವಿನ ಶ್ರೀಮಂತಿಕೆಯೂ ಹೀಗೆ : ರತ್ನಗರ್ಭ. ಅಲ್ಲಿನ ಸಂಪತ್ತನ್ನು ಕಾಣಬೇಕಾದರೆ ಸ್ವಲ್ಪಮಟ್ಟಿಗೆ ನಾವು ಅಂತಗಾರ್ಮಿಗಳಾಗಬೇಕು.

ಕೊಡಗಿನ ಸಮಸ್ಯೆ ಇನ್ನೊಂದು ತರದ್ದು; ಇದು ತುಳುವಿಗೆ ತೀರ ಭಿನ್ನವಾದದ್ದು. ಇಲ್ಲಿ ಎಲ್ಲ ಜಾತಿಯವರು ಮಾತನಾಡುವ ಕೊಡಗು ಭಾಷೆಯೂ ಒಂದೇ ತೆರನದ್ದು. ಭಾಷೆಯ ಹೆಸರಾದರೂ ಅಷ್ಟೇ : ಆದಿಯಲ್ಲಿ ಈ ಭಾಷೆಯನ್ನು ‘ಕೊಡಗು ಭಾಷೆ’ ಎಂದೇ ಹೇಳುತ್ತಿದ್ದರು. ಆದರೆ ಕೊಡವ ಭಾಷೆಯನ್ನೇ ಮಾತೃಭಾಷೆಯನ್ನಾಗಿ ಪಡೆದವರನ್ನು ಕೊಡಗರು ಎಂದು ಗುರುತಿಸಲಾರಂಭಿಸಿದ ನಂತರ ಕೊಡಗರಾಡುವ ಭಾಷೆಯನ್ನು ಕೊಡಗು ಭಾಷೆಯೆಂದೇ ಗುರುತಿಸುವುದು ಸಹಜವಾಗಿದ್ದರೂ ಕೊಡಗ ಜನಾಂಗದವರು ತಮ್ಮನ್ನು ಕೊಡವರು ಎಂದು ಹೇಳಿಕೊಳ್ಳಲಾರಂಭಿಸಿದ ಕಾರಣವೋ ಏನೋ, ಕೊಡಗು ಭಾಷೆಯನ್ನು ‘ಕೊಡವ ಭಾಷೆ’ಯೆಂದು ಕರೆಯಲು ಆರಂಭವಾಯಿತು. ಈ ಪ್ರಬಂಧದುದ್ದಕ್ಕೂ ಈ ಭಾಷೆಯನ್ನು ಸಂದರ್ಭಾನುಸಾರ ಕೊಡಗು ಮತ್ತು ಕೊಡವ ಎಂದು ತಾರತಮ್ಯವಿಲ್ಲದೆ ಉಪಯೋಗಿಸಲಾಗಿದೆ.

ಕೊಡಗು – ಕೊಡವ ಮಾತೃಭಾಷೆಯಿರುವವರು ಕನ್ನಡದಲ್ಲಿ ಬರೆದದ್ದು ಕಡಿಮೆ / ಅಪರೂಪ. ಕನ್ನಡದಲ್ಲಿ ಬರೆದ ಕೊಡಗಿನ ಶಕ್ತ ಸಾಹಿತಿಗಳ ಮಾತೃಭಾಷೆಯೂ ಕನ್ನಡವೇ ಆಗಿತ್ತು. ತಕ್ಕ ಮಟ್ಟಿನ ಉದಾಹರಣೆಯೆಂದರೆ ನವೋದಯ ಕನ್ನಡದ ಕಥೆಗಾರ್ತಿ ಗೌರಮ್ಮ ಮತ್ತು ಪ್ರಗತಿಶೀಲ ಚಳುವಳಿಯ ಕಾದಂಬರಿಕಾರ ಭಾರತೀಸುತ. ತುಳುನಾಡಿಗಾಗಲೀ, ಕರ್ನಾಟಕದ ಇತರ ಪ್ರದೇಶಗಳಿಗಾಗಲೀ ಹೋಲಿಸಿದರೆ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೊಡಗಿನ ಕೊಡುಗೆ ಗಣನೀಯ ಪ್ರಮಾಣದಲ್ಲಿಲ್ಲ. ಆದ್ದರಿಂದ ಕೊಡಗು ಭಾಷೆ ಪ್ರತಿಬಿಂಬಿಸುತ್ತಿದ್ದ ಸಂಸ್ಕೃತಿ ಕನ್ನಡದಲ್ಲಿ ಅಭಿವೃದ್ಧಿ ಹೊಂದಿದೆಯೆಂದು ಅಥವಾ ಪ್ರತಿಬಿಂಬಿತವಾಗಿದೆಯೆಂದು ತಿಳಿದರೆ ತಪ್ಪಾಗುತ್ತದೆ.

ಗಂಗರ ಕಾಲದಲ್ಲಿ ಕೊಡಗು ಕನ್ನಡದ ಅಡಿಯಳಾಗಿಯೇ ಇತ್ತು. ಲಿಂಗಾಯತ ದೊರೆಗಳ ಕಾಲದಲ್ಲಿ ಕನ್ನಡವೇ ಕೊಡಗಿನಲ್ಲೂ ಆಡಳಿತ ಭಾಷೆಯಾಗಿತ್ತು. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಕೆಲವು ಕಾಲ ಮೈಸೂರು ಸಂಸ್ಥಾನದ ಹಾಗೂ ಹೈದರಾಲಿ – ಟಿಪ್ಪುಗಳ ಒಡೆತನದಲ್ಲಿತ್ತದು. ಟಿಪ್ಪೂವಿನ ಮರಣಾನಂತರ ಕೊಡಗು ಸುಲಭವಾಗಿಯೇ ಬ್ರಿಟಿಷರ ಕೈವಶವಾಯಿತು. ೧೮೩೪ರ ವರೆಗೆ ಹೆಸರಿಗಾದರೂ ಲಿಂಗಾಯತ ದೊರೆಗಳಿದ್ದರು. ಈ ಸಮಯದಲ್ಲಿ ಕೊಡಗಿಗೆ ಕನ್ನಡ ಭಾಷೆ – ಇಂಗ್ಲಿಷ್‌ಸಂಸ್ಕೃತಿ ಎಂಬ ಮಿಶ್ರಲೋಹ ಪ್ರಾಪ್ತವಾಯಿತು. ಇಂದಿಗೂ ಕೊಡವ ಭಾಷೆಯನ್ನಾಡುವವರು ಸಾಕಷ್ಟು ಇಂಗ್ಲೀಷ್‌ಪದಗಳನ್ನು ಉಪಯೋಗಿಸುತ್ತಾರೆ. ಇತ್ತೀಚೆಗೆ ಪ್ರಕಟವಾದ ಕೊಡವ ಕಾದಂಬರಿಯೊಂದರ ಕುರಿತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹೀಗೆ ಬರೆದಿದೆ:

ಈ ಕಥೆಲ್‌ ಪ್ರತಿ ಪಾಳೆಲೂ ದುಂಬ ಇಂಗ್ಲೀಷ್‌ಪೆದ ಉಳ್ಳಾನಕೊಂಡ್‌
ಚನ್ನಂಗಾನ ಮಾತ್ರ ಪರಿಪಡ್‌ತ್‌ವಕ್‌ ಆಯೆ

(ಈ ಕಥೆಯಲ್ಲಿ ಪ್ರತಿ ಹಾಳೆಯಲ್ಲೂ ತುಂಬ ಇಂಗ್ಲಿಷ್‌ ಹೆಸರು ಇದ್ದರೂ ಕೆಲವನ್ನೂ ಮಾತ್ರ ಸರಿಪಡಿಸಲು ಆಯಿತಷ್ಟೆ)

ಕ್ರಿ.ಶ. ೧೨ನೇ ಶತಮಾನದಿಂದಲೇ ಕೊಡಗು ಭಾಷೆ ಅಸ್ತಿತ್ವದಲ್ಲಿತ್ತೆಂದು ಶಾಸನಗಳಿಂದ ತಿಳಿದುಬರುತ್ತದೆ. ಕೊಡಗು, ಕನ್ನಡ ಭಾಷೆಗೆ ಸಮೀಪದ ಸಂಬಂಧಿಯಾಗಿದೆ. ಇದು ಹಳೆಗನ್ನಡ ಹಾಗೂ ತುಳುಭಾಷೆಗಳ ಮಧ್ಯೆ ನಿಲ್ಲುತ್ತದೆ ಎಂದು ಕಾಲ್ಡವೆಲ್‌ರ ಅಭಿಪ್ರಾಯ. ಕೊಡಗು ಹಾಗೂ ತುಳು ಭಾಷೆಗಳನ್ನೂ ಗ್ರಾಂಥಿಕ ದ್ರಾವಿಡ ಭಾಷೆಗಳೊಡನೆಯೂ ಪರಿಗಣಿಸುತ್ತಾರೆ. ಈ ಭಾಷೆಗಳು ಕನ್ನಡ ಲಿಪಿಯನ್ನು ಬಳಸಿ ಸಾಹಿತ್ಯ ರಚನೆ ಮಾಡಿರುವುದೇ ಇದಕ್ಕೆ ಕಾರಣವಿರಬೇಕು.

ಹದಿನೇಳನೇ ಶತಮಾನದವರೆಗೆ ಕೊಡವ ಭಾಷೆಯೇ ಪ್ರಧಾನ ಭಾಷೆಯಾಗಿದ್ದಿರಬಹುದು. ಆದರೆ ಅದು ಅನಧಿಕೃತ ಮಾಧ್ಯಮದ ಭಾಷೆಯಾಗಿತ್ತೆನ್ನುವುದಕ್ಕೆ ಸಾಕಷ್ಟು ಸಮರ್ಥನೆಗಳಿಲ್ಲ. ಮಲೆಯಾಳಂ ಸಾಕಷ್ಟು ಪ್ರಚಲಿತವಿತ್ತು. ಕೊಡವ ಭಾಷೆಗೆ ಪ್ರತ್ಯೇಕ ಲಿಪಿಯನ್ನು ಒದಗಿಸುವ ಪ್ರಯತ್ನವನ್ನು ದಿ. ಡಾ. ಕೊರವಂಡ ಅಪ್ಪಯ್ಯನವರು ೧೯೦೨ರಲ್ಲಿ ಮಾಡಿದರು. ಆದರೆ ಅದು ಯಶಸ್ಸನ್ನಾಗಲೀ, ಮಾನ್ಯತೆಯನ್ನಾಗಲೀ ಪಡೆಯಲಿಲ್ಲ. ಪರಿಣಾಮವಾಗಿ ಇಂದಿಗೂ ಕೊಡವ ಭಾಷೆಗೆ ಕನ್ನಡ ಲಿಪಿಯನ್ನೇ ಬಳಸುತ್ತಾರೆ. ಇದರಿಂದಾಗಿ ಕೊಡಗಿನಲ್ಲಿ ಕೊಡವ ಭಾಷೆ ಬೆಳೆಯಲು ನಿಜಕ್ಕೂ ಅನುಕೂಲಕರ ವಾತಾವರಣ ಸೃಷ್ಟಿಯಾಗಲೇ ಇಲ್ಲ. ಕೊಡಗು ಮಾತೃ ಭಾಷೆಯಾಗಿದ್ದವರು ಯಾರೂ ಕೊಡಗನ್ನು ಆಳಿರಲಿಲ್ಲ. ಈ ಕಾರಣದಿಂದ ಕೊಡಗು ಭಾಷೆಗೆ ಲಿಪಿ ಲಭ್ಯವಾಗದಿರಲಿಕ್ಕೂ ಸಾಕು.

ರಿಟ್ಟರ್‌ ಕೊಡಗಿನ ನಾಡು – ನುಡಿ, ಅಚಾರ – ವಿಚಾರ, ಇತಿಹಾಸ – ಸಂಸ್ಕೃತಿಯ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದಾನೆ. ಕೊಡಗಿನಲ್ಲಿ ಕೊಡವರೂ ಸೇರಿದಂತೆ ಸುಮಾರು ೧೮ ಸಮುದಾಯದವರು ಕೊಡವ ಭಾಷೆಯನ್ನಾಡುತ್ತಾರೆಂಬ ಐತಿಹ್ಯ ರಿಟ್ಟರ್‌ನ ‘ಕೂರ್ಗ್‌ ಗಜೆಟೀರ್‌’ (೧೮೫೪)ನಿಂದ ಲಭಿಸುತ್ತದೆ. ಕೊಡಗು ಭಾಷೆಯ ಲಕ್ಷಣಗಳನ್ನು ಆತ ಸಂಗ್ರಹಿಸಿದ್ದಾನೆ. ಕೊಡವ ಭಾಷೆಯನ್ನು ಆತ ‘ದ್ರಾವಿಡ ಭಾಷೆಗಳ ಮಿಶ್ರಣ’ (a mixture of Dravidian tongues) ಎಂದಿದ್ದಾನೆ. ಈ ಕುರಿತು ಆತ “ಕೊಡಗಿನಲ್ಲಿ ರೂಢಿಯಲ್ಲಿರುವ ಮತ್ತು ಅಧಿಕೃತ ಭಾಷೆ ‘ಕ್ಯಾನರೀಸ್‌’ (The prevalent and official language in Coorg is Canarese)” ಎಂದಿದ್ದಾನೆ. ಆತ ತನ್ನ ತರ್ಕವನ್ನು ವಿಸ್ತರಿಸುತ್ತಾ (ಆದರೆ ಈ ಚಿಕ್ಕ ಗಿರಿ ಜನಾಂಗ, ಕೊಡಗರು, ತಮ್ಮ ಹಳೆಯ ಗುಲಾಮರಾದ ಹೊಲೆಯರೊಂದಿಗೆ, ತಮ್ಮದೇ ಆದ ಭಾಷೆಯನ್ನು ಹೊಂದಿದ್ದು ಅದು ಅವರಿಗೆ ಮಾತ್ರ ಅರ್ಥವಾಗುವಂತಿದೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ, ಕೊಡಗು ಭಾಷೆಯೂ ಪಂಚದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳ ಮತ್ತು ತುಳುಗಳಿಗೆ ಸಂಬಂಧಿಸಿದ ಭಾಷೆಯೆಂದು ತಿಳಿಯುತ್ತದೆ; ಆದರೆ ಈ ಭಾಷೆಗಳ ಆದಿಮ ರೂಪಗಳೊಂದಿಗೆ ಕೊಡಗು ಭಾಷೆ ಸಂಬಂಧಪಟ್ಟಿರಬೇಕು). ‘ಕೊಡಗು ಭಾಷೆಯ ಕನ್ನಡ ಭಾಷೆಗಿಂತ ಸಂಕ್ಷಿಪ್ತವೂ ಸರಳವೂ ಒರಟೂ ಆಗಿದೆ. ಆದರೆ ಮಾತನಾಡಲು ಅನುಕೂಲವಾಗಿದೆ; ಅದರ ಸಂಕೋಚಗೊಳ್ಳುವ ಉರುಟು ಕೊನೆ ಮತ್ತು ಅರ್ಥಸ್ವರಗಳಿಂದಾಗಿ ಅದು ವಿಶೇಷ ಸ್ವರಭಾರ ವನ್ನಪೇಕ್ಷಿಸುವುದಿಲ್ಲ ಹಾಗೂ ವೀಳ್ಯದೆಲೆ ಮೆಲ್ಲುತ್ತಾ ರಸವನ್ನು ಇಟ್ಟುಕೊಂಡು ನಿರರ್ಗಳವಾಗಿ ಮಾತನಾಡಲು ಅನುವು ಮಾಡಿಕೊಡುವಂತಿದೆ ….’. ‘ಕೊಡಗು ಭಾಷೆಗೆ ಕನ್ನಡದ ಶಕ್ತಿ ಮತ್ತು ಅಭಿವ್ಯಕ್ತಿ ಸಾಮರ್ಥ್ಯವಿಲ್ಲವಾದರೂ ಅದು ತುಟಿಗಳಲ್ಲಿ ಸುಲಭವಾಗಿ ಜಾರುತ್ತದೆ. ಅದು ಪದ ಹಾಗೂ ಆಕಾರದಲ್ಲಿ ಸಂಪನ್ನವಾಗಿದೆ. ಮತ್ತು ಕೊಡಗು ಹಾಡುಗಳು ಸಾಬೀತು ಮಾಡುವಂತೆ ಹಾಸ್ಯ ಅಥವಾ ವಿಷಾದದ ಗೇಯ ಪದ್ಯಗಳ ಅಭಿವ್ಯಕ್ತಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ’ ಎಂದಿದ್ದಾನೆ.

ಡೆರ್ವ್ಲಾ ಮರ್ಫಿ ಎಂಬ ಐರಿಷ್‌ಲೇಖಕಿ ಹೀಗೆ ಬರೆಯುತ್ತಾಳೆ : Kodagu and Tulu – the language of South Kanara – both use the Kannada script but each of the other languages has its own script, though Old Kannada and Tamil are so alike they were once thought to be dialects of the same language.

ಸಾಮಾನ್ಯ ಎಂದು ಕಾಣಬಹುದಾದ ಈ ಪದಗಳ ಬಗ್ಗೆ ಕುತೂಹಲವುಂಟಾಗುವುದು ಸಹಜ. ಉದಾಹರಣೆಗೆ ಕೊಡವ ಭಾಷೆಯನ್ನು ಕೊಡಗು ಭಾಷೆಯೆಂದೇ ಉಲ್ಲೇಖಿಸಲಾಗುತ್ತಿತ್ತು. ಕೊಡವ ಎಂಬುದು ಕೊಡಗಿನ ಮೂಲಜನಾಂಗವನ್ನು ಲಕ್ಷಿಸುವ ಪದವಾಗಿತ್ತು. ಆದರೆ ಇಂದು ಈ ಉಲ್ಲೇಖ ಜನಾಂಗಕ್ಕೂ ಭಾಷೆಗೂ ಏಕರೂಪವಾಗಿ ಬಂದಿದೆ. ಪ್ರಾಯಶಃ ಕೊಡಗರು ಎಂದರೆ ಕೊಡಗಿನಲ್ಲಿ ವಾಸಿಸುವವರು ಎಂಬುದು ಮಾತ್ರವಲ್ಲ, ಕೊಡಗಿಗೇ ವಿಶಿಷ್ಟವಾದ ಭಾಷೆಯನ್ನಾಡುವವರು ಎಂದೂ ಅರ್ಥವಿತ್ತು.

ಈಗ ತೌಲನಿಕ ವಿವರಗಳ ಕಡೆಗೆ ಗಮನ ಹರಿಸೋಣ. ಈಗ ಕೊಡಗು ಭಾಷೆಯನ್ನಾಡುವ ಜನ ಸುಮಾರು ೮೦,೦೦೦.

ಕೊಡಗಿನಲ್ಲಿ ವಿವಿಧ ಭಾಷೆಗಳನ್ನಾಡುತ್ತಿದ್ದವರ ವಿವರ ಹೀಗಿದೆ:

೧೯೮೧ರ ಜನಗಣತಿಯ ಅಂಕಿ – ಅಂಶದಂತೆ ಕೊಡಗಿನಲ್ಲಿ ಒಟ್ಟು ೪,೬೧,೮೮೮ ಜನರಿದ್ದು ಅವರಲ್ಲಿ ಕನ್ನಡ, ಕೊಡಗು, ತುಳು ಭಾಷೆಗಳನ್ನಾಡುವವರ ಸಂಖ್ಯೆ ಹೀಗಿದೆ.

ಕನ್ನಡ ೧,೬೫,೩೪೫ ೩೫.೮೦%
ಕೊಡವ  ೮೧,೫೬೪ ೧೭.೬೬%
ತುಳು  ೩೯,೮೧೪ ೦೮.೬೨%
ಮಲೆಯಾಳ ೧,೦೪,೩೪೪ ೨೨.೫೯%
ತಮಿಳು  ೩೨,೯೩೦ ೦೭.೧೩%
ಉರ್ದು  ೧೨,೦೩೧ ೦೨.೬೦%

ಈ ಅಂಕಿ ಅಂಶಗಳನ್ನು ತಾಲೂಕುವಾರು ಗಮನಿಸುವುದರಿಂದ ಕೊಡಗು – ತುಳು ಭಾಷೆಯ ಪ್ರಭಾವದ ಏರುಪೇರನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಬಹುದು.

ಭಾಷೆ ತಾಲ್ಲೂಕು
ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ
ಕನ್ನಡ ೯೨,೩೮೭ ೩೭,೪೫೮ ೩೫,೫೦೦
ಕೊಡವ  ೬,೮೧೯ ೨೬,೨೯೨ ೪೮,೪೫೩
ತುಳು ೧೪,೯೭೭ ೧೪,೮೨೩ ೧೦,೦೧೪

ತುಳು ಭಾಷೆಯು ಕೊಡಗಿನ ಮೂರೂ ತಾಲೂಕುಗಳಲ್ಲಿ ಹರಡಿದೆ. ಕೊಡಗು ಭಾಷೆ, ವಿರಾಜಪೇಟೆ ತಾಲೂಕಿನಲ್ಲಿ ಕನ್ನಡಕ್ಕಿಂತಲೂ ಮುಂದಿದ್ದರೆ ಸೋಮವಾರಪೇಟೆ ತಾಲೂಕಿನಲ್ಲಿ ತುಳುವಿಗಿಂತಲೂ ಹಿಂದಿದೆ. ತುಳು ಭಾಷಿಕರು ಕೊಡಗಿನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿದ್ದರೂ ಭಾಷೆ ಮತ್ತು ಸಾಹಿತ್ಯದ ನೆಲೆಯಲ್ಲಿ ನಿರೀಕ್ಷಿತ ಸಂವಹನ ನಡೆಯಲಿಲ್ಲವೆಂದು ವಿಷಾದಪೂರ್ವಕವಾಗಿ ಹೇಳಬೇಕಾಗಿದೆ. ಇದಕ್ಕೆ ಕಾರಣಗಳಿವೆ : ಬಹುಪಾಲು ತುಳು ಜನರು ಕಾಫಿ ಮತ್ತು ಯಾಲಕ್ಕಿ ತೋಟದಲ್ಲಿ ಕೂಲಿ ಮಾಡಲೆಂದು ಬಂದವರು. ಮೊದಮೊದಲು ಅಂದರೆ ಕಾಫಿ ಕೊಡಗಿಗೆ ಬರುವ ಮುನ್ನ ಯಾಲಕ್ಕಿ ಮಾತ್ರ ಇದ್ದಾಗ ಯಾಲಕ್ಕಿ ಮಲೆಗೆ ಸೀಸನ್‌ನಲ್ಲಿ ಬಂದು ಹೋಗುತ್ತಿದ್ದವರು ನಂತರ ಕಾಫಿ ಬೆಳೆ ಆರಂಭವಾದ ನಂತರ ಕಾಫಿ ತೋಟಗಳಲ್ಲೇ ವಾಸ ಮಾಡುವುದಕ್ಕಾಗಿ ಬಂದು ನೆಲೆನಿಂತರು. ಬದುಕಿನ ಮೂಲಭೂತ ಅವಶ್ಯಕತೆಗಳೇ ಸವಾಲುಗಳಿದ್ದಾಗ ಭಾಷೆಯನ್ನು ಸಾಹಿತ್ಯ – ಸಂಸ್ಕೃತಿಯ ಮೂಲಕ ವಿಕಾಸಗೊಳಿಸುವುದಕ್ಕೆ ಈ ತುಳು ಜನಕ್ಕೆ ಬಿಡುವಾದರೂ ಎಲ್ಲಿ ಸಿಗಬೇಕು? ತಮಿಳು – ಮಲೆಯಾಳ ಭಾಷಿಕರದ್ದೂ ಇದೇ ಸ್ಥಿತಿ. ಮೇಲ್ವರ್ಗದ ಜನರು ಇಂಗ್ಲೀಷಿಗೆ ಮಾರುಹೋದರು. ಮಧ್ಯಮ ವರ್ಗದ ಜನರು ಕನ್ನಡವನ್ನೇ ಆಶ್ರಯಿಸಿದರು. ಬಡವರ್ಗಕ್ಕೆ ತಮ್ಮ ಮಾತೃಭಾಷೆ ಮಾತಿನ ಮಟ್ಟದಲ್ಲೇ ಉಳಿಯಿತು. ಆದರೆ ಈ ಮಂದಿ ತಾವು ವಾಸವಿರುವಲ್ಲಿ ಉಳಿದು ತಮ್ಮದೇ ಆದ ಸಾಂಸ್ಕೃತಿಕ ಸಾಮುದಾಯಿಕ ಹಿನ್ನೆಲೆಯನ್ನುಳಿಸಿಕೊಂಡಿದ್ದಾರೆ. ತಲೆಮಾರುಗಳಿಂದ ವಾಸವಿರುವವರು ವೇಷಭೂಷಣಗಳಲ್ಲಿ ಆಹಾರಗಳಲ್ಲಿ ಕೊಡಗಿನ ಜನರನ್ನು ಅನುಕರಿಸಿದರೂ ತುಳುವನ್ನು ಯಥಾವತ್ತಾಗಿ ಮುಂದುವರಿಸಿದ್ದಾರೆ. ತಮ್ಮ ದೈವಗಳಾದ ಗುಳಿಗ, ಕಲ್ಲುರ್ಟಿಗಳನ್ನು ಆರಾಧಿಸುತ್ತಾರೆ.

ಸಾಮಾನ್ಯವಾಗಿ ಯಕ್ಷಗಾನ ಬಯಲಾಟಗಳು ಪ್ರಾಯೋಜಕತ್ವ ವಿಲ್ಲದಿದ್ದರೆ ಕೊಡಗಿನಲ್ಲಿ ಪ್ರವಾಸ ಕೈಗೊಂಡು ಯಶಸ್ಸನ್ನು ಪಡೆಯುವುದು ಅಪರೂಪ. ಕೊಡಗಿನ ಮಳೆ, ಚಳಿ ಹಾಗೂ ಯಕ್ಷಗಾನ ಸಂಸ್ಕೃತಿಯ ಅಭಾವ ಮತ್ತು ಒಂದೇ ಕಡೆ ತುಳುಪ್ರೇಕ್ಷಕರ ಅಲಭ್ಯತೆ ಇವುಗಳಿಂದಾಗಿ ಯಕ್ಷಗಾನವಾಗಲೀ ಭೂತಾರಾಧನೆಯಾಗಲೀ ಕೊಡಗಿನಲ್ಲಿ ತಳವೂರಿಲ್ಲ. ತುಳುವರೇ ಹೆಚ್ಚಿರುವ ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ದಕ್ಷಿಣ ಕನ್ನಡದ ಸಾಂಸ್ಕೃತಿಕ ಕಲೆಗಳು ಇಂದಿಗೂ ಜನಪ್ರಿಯವಾಗಿ ಆಕರ್ಷಣೆಯನ್ನು ಹೊಂದಿವೆ.

ತುಳುವರನೇಕರು ಸೊಗಸಾಗಿ ಕೊಡಗು / ಕೊಡವ ಭಾಷೆಯನ್ನಾಡುತ್ತಾರೆ. ಹಾಗೆಯೇ ಕೊಡವರನೇಕರು ಸೊಗಸಾಗಿ ತುಳು ಭಾಷೆಯನ್ನಾಡುತ್ತಾರೆ. ಈ ಬಾಷಾ ವಿನಿಮಯ ಒಂದು ಹಂತಕ್ಕೆ ಬಂದು ನಿಂತಿದೆ. ಅನೇಕ ಗಾದೆಗಳು ಮತ್ತು ಉಕ್ತಿಗಳು ತುಳು ಮತ್ತು ಕೊಡವ ಭಾಷೆಗಳೆರಡರಲ್ಲೂ ಪ್ರಚಲಿತವಿವೆ.

ಉದಾ: ೧. ಊದುವ ಶಂಖ ಊದ್‌ನೆ, ೨. ಎಣ್‌ನಾನ ಮರಪಕಾಗ, ಪೊಣ್ಣಾಳ್‌ನ ಪೊಯ್ಯವಕಾಗ, ೩. ಉಪ್ಪ್‌ ತಿಂದವನ್‌ ನೀರ್‌ ಕುಡಿಕು, ೪. ಕಳ್ಳ ದೇವಕ್‌ ಕೊಳ್ಳಿ ಪೂಜಾರಿ.

ಕೊಡಗು ಭಾಷೆಯಲ್ಲಿ ಒಟ್ಟು ೩೨ ವರ್ಣಗಳಿವೆಯೆಂದು ಹೇಳುತ್ತಾರೆ. ಈ ಭಾಷೆಯಲ್ಲಿ ಮಹಾಪ್ರಾಣಗಳು ಇಲ್ಲ. ಕೊಡಗು ಭಾಷೆಯಲ್ಲಿ ಮೊಟ್ಟ ಮೊದಲ ವ್ಯಾಕರಣವನ್ನು ಕೋಲ್‌ (Cole) ಎಂಬ ವಿದ್ವಾಂಸರು ರಚಿಸಿದ್ದಾರೆ. ‘ಕ್‌’ ಕಾರದಿಂದ ಆಗಿರಬಹುದಾದ ಚ್‌ಸ್‌, ಪ್‌ಹ್‌ಬದಲಾವಣೆಗಳು ಕೊಡಗು ಭಾಷೆಯಲ್ಲಿ ನಡೆದಿಲ್ಲ. ವ್ಯಂಜನಾಂತ ಪದಗಳಲ್ಲಿ ಅನುನಾಸಿಕ ಉಚ್ಚಾರ ತಮಿಳು – ಮಲೆಯಾಳಂ ಪ್ರಭಾವದಿಂದ ಉಂಟಾಗಿದೆ.

ಕೊಡವ ಭಾಷೆಯ ಧ್ವನಿರಚನಾ ಲಕ್ಷಣವು ಭಾಷಾ ಸಮೂಹದ ಇತರ ಭಾಷೆಗಳಿಗಿಂತ ಭಿನ್ನವಾಗಿದೆ. ಮೂಲದ್ರಾವಿಡದ ಧ್ವನಿವ್ಯವಸ್ಥೆ / ಸ್ವರವ್ಯವಸ್ಥೆ ಕೊಡಗು ಭಾಷೆಯಲ್ಲಿ ಹೀಗಿದೆ:

ಕೊಡವ ಭಾಷಾ ಅಕ್ಷರಮಾಲೆಯ ಮುವತ್ತೆಂಟು ಅಕ್ಷರಗಳಿಂದ ಕೂಡಿದ್ದು, ಅವುಗಳಲ್ಲಿ ಹದಿನಾಲ್ಕು ಸ್ವರಾಕ್ಷರಗಳು, ಒಂದು ಅರ್ಧ ಸ್ವರಾಕ್ಷರ ಮತ್ತು ಇಪ್ಪತ್ತುನಾಲ್ಕು ವ್ಯಂಜನಗಳಿವೆ. ಅ, ಇ, ಉ, ಎ ಮತ್ತು ಒಳಗೂಡಿದ ಏಳು ದೀರ್ಘ ಮತ್ತು ಹ್ರಸ್ವ ಸ್ವರಾಕ್ಷರಗಳಿವೆ. ಋ, ೠಗಳು ಕೊಡವ ಭಾಷೆಯಲ್ಲಿಲ್ಲ. ಮತ್ತು ಐ, ಔ, ಅಂ ಮತ್ತು ಅಃ ಇವುಗಳನ್ನು ಎರಡು ಸಂಯುಕ್ತ ವ್ಯಂಜನಗಳೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ಕೊಡವ ಭಾಷೆಯಲ್ಲಿ ಇ ಮತ್ತು ಎಗೆ ಹತ್ತಿರದ ನಾಲ್ಕು ಅರ್ಧ ಸ್ವರಾಕ್ಷರಗಳು ಇದ್ದು ಇದು ಈ ಭಾಷೆಯ ವಿಶಿಷ್ಟತೆಯಾಗಿದೆ. ಕೊಡವ ಭಾಷೆಯಲ್ಲಿ ಮಹಾಪ್ರಾಣ ಅಕ್ಷರದಲ್ಲಿದ್ದ ೧೫ ವ್ಯಂಜನ (ಕಂಠ, ತಾಲವ್ಯ, ಮೂರ್ಧನ್ಯ, ದಂತ್ಯ ಮತ್ತು ಓಷ್ಟ್ಯಗಳಲ್ಲಿ ಉಚ್ಚರಿಸುವ) ಗಳಿದ್ದು ಐದು ಮೃದು ವ್ಯಂಜನಗಳು ಮತ್ತು ಐದು ಘರ್ಷಣ ವ್ಯಂಜನಗಳು ಅಂದರೆ ಯ, ರ, ಲ, ವ, ಳ ಮತ್ತು ಸ, ಶ, ಷ, ಹಗಳಿಂದ ಕೂಡಿದೆ. ಕೊಡವ ಭಾಷೆಯಲ್ಲಿ ಮಹಾಪ್ರಾಣ ಅಕ್ಷರ ಪ್ರಯೋಗವಿಲ್ಲ.

ಕೊಡವ, ತುಳು ಮತ್ತು ಕನ್ನಡದಲ್ಲಿ ಪದಗಳ ಮಾರ್ಪಾಡನ್ನು ಗಮನಿಸುವುದಕ್ಕೋಸ್ಕರ ಕೆಲವು ಪದಗಳನ್ನು ಉದಾಹರಣೆಗೆ:

  ಕನ್ನಡ ತುಳು ಕೊಡವ
  ಹಾಡು ಪಾಡ್‌ ಪಾಟ್ಟ್‌  
  ಆಗುವುದು ಅಕ್ಕಂ ಅಕ್ಕು
  ಅರಿಯದೆ   ಅರಿಯುತ್ತೆ
  ಸಾವು ಸಾವು ಚಾವು
  ಹೋಯ್‌ ಪೋಯ್‌  
Leave ಬಿಡು ಬುಡ್‌  
Go ಹೋಗು (ಪೋಗು) ಪೋ  
  ಯಾವಾಗ ಏಪ ಎಕ್ಕ
  ಎಲ್ಲಿ ಓಳು ಎಲ್ಲಿ
  ಎಲ್ಲಿಗೆ ಓಡೆಗ್‌ ಇಲ್ಲಿಕ್ಕ್‌

 

ತುಳು ಕೊಡಗು ಕನ್ನಡ ತಮಿಳು ತೆಲುಗು ಮಲೆಯಾಳ
ಇಂದ್‌ ಇದ್‌ ಇದು ಇದ್‌ ಇದಿ ಇದ್‌
ಪೋಪೆ ಪೋರ್ಪಿ ಹೋಗುವೆ ಪೋರೆ ಪೋತಾನು ಪೋನು
ಬರ್ಪೆ ಬಪ್ಪಿ ಬರವೆ ವರೆ ವಸ್ತಾನು ವರುಂ
ಉಂಡು ಉಂಟು ಉಂಟು ಉಂಡ್‌ ಉಂದಿ ಇಂಡ್‌
ನಾಲ್‌ ನಾಲ್‌ ನಾಲ್ಕು ನಾಲ್‌ ನಾಲ್ಗು ನಾಲ್‌
ದಿಂಜ / ಮಸ್ತ್‌ ದುಂಬು ತುಂಬ ರುಂಬ ಅನೇಕಂ ಕೋರೇ

ಕನ್ನಡದ ‘ಇದು’ ತುಳುವಿನ ‘ಇಂದ್‌’ ಕೊಡಗಿನಲ್ಲಿ ‘ಇದ್‌’ ಆಗಿದೆ. ಕನ್ನಡದ ‘ಮಾಡುವುದಕ್ಕೆ’ ತುಳುವಿನಲ್ಲಿ ‘ಮಲ್ಪಿಯೇರ’, ಆದರೆ ಕೊಡಗಿನಲ್ಲಿ ‘ಮಾಡೋಕ್‌’ ಆಗಿದೆ. ಕನ್ನಡದ ‘ಮನಸ್ಸಿನಲ್ಲಿ’ ತುಳುವಿನಲ್ಲಿ ‘ಮನಸ್ಸ್‌ಡ್‌’ ಆದರೆ ಕೊಡಗಿನಲ್ಲಿ ‘ಮನಸ್ಸ್‌ಲ್‌’ ಆಗಿದೆ. ಕನ್ನಡದ ‘ನಾನು’ ತುಳುವಿನಲ್ಲಿ ‘ಯಾನ್‌’ ಆದರೆ ಕೊಡಗಿನಲ್ಲಿ ‘ನಾನ್‌’ ಆಗಿದೆ. (ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.) ಕೊಡಗು ಭಾಷೆಯ ಅನೇಕ ಪದಗಳು ಇತರ ದ್ರಾವಿಡ ಭಾಷೆಗಳ ಸ್ವರೂಪವನ್ನು ಉಳಿಸಿಕೊಂಡರೆ ಇನ್ನು ಕೆಲವು ತಮ್ಮ ಮೂಲದಿಂದ ಕಳಚಿಕೊಂಡು ಹೊಸರೂಪವನ್ನು ಪಡೆದಿವೆ.

ಕನ್ನಡ ಲಿಪಿಯಲ್ಲಿ ಕೊಡಗನ್ನು ಬರೆಯುವಾಗ ಅಲ್ಲಿ ಅರ್ಧಾಕ್ಷರಗಳ ಬಳಕೆ ಪದೇ ಪದೇ ಆಗುತ್ತಿದೆ. ಗಮನಿಸಬೇಕಾದ ಅಂಶವೆಂದರೆ ಇಂತಹ ಅರ್ಧಾಕ್ಷರಗಳ ವ್ಯವಸ್ಥೆ ತುಳು, ತಮಿಳು ಮತ್ತು ಮಲೆಯಾಳದಲ್ಲೂ ಇದೆ; ತುಳು ಭಾಷೆಯಲ್ಲೂ ಕೆಲವು ವಿಶಿಷ್ಟ ನಿಯಮಗಳಿವೆ. ಮುಖ್ಯವಾಗಿ ಅಲ್ಲಿ ‘ಎ’ ಕಾರವು ಕೆಲವೆಡೆ ಸಂವೃತ ಸ್ವರವಾಗಿಯೂ, ಕೆಲವೆಡೆ ವಿವೃತ ಸ್ವರವಾಗಿಯೂ ಉಚ್ಚಾರಣೆಗೊಳ್ಳುತ್ತದೆ. ಈ ವ್ಯತ್ಯಾಸವನ್ನು ಸೂಚಿಸಲು ಕನ್ನಡ ಲಿಪಿಯಲ್ಲಿ ಪ್ರತ್ಯೇಕ ಸಂಜ್ಞೆಗಳಿಲ್ಲ. ತುಳುವಿನಲ್ಲಿ ಪದಾಂತ್ಯದ ಸ್ವರರಹಿತ ವ್ಯಂಜನಗಳು (ಅರ್ಧಾಕ್ಷರಗಳು) ಪೂರ್ಣ ಮಾತ್ರಾಮೌಲ್ಯವನ್ನು ಹೊಂದಿರುತ್ತವೆ. ಹಾಗಾಗಿ ಅವುಗಳ ಮಾತ್ರಾಮೌಲ್ಯ ಬರುವ ಹಾಗೆಯೇ ಉಚ್ಚರಿಸಬೇಕಾಗುತ್ತದೆ.

ಸ್ವರಾಕ್ಷರಗಳಿಲ್ಲದ ಹಳೆಗನ್ನಡ ಹಾಗೂ ವ್ಯಂಜನಗಳಿಂದ ತುಂಬಿದ ಹೊಸಗನ್ನಡಗಳ ನಡುವಣ ಮಧ್ಯಮ ಮತ್ತು ಸಂಕ್ರಮಣ ಸ್ಥಿತಿಯಲ್ಲಿ ತುಳು ಮತ್ತು ಕೊಡಗು ಇವೆರಡೂ ಇದೆಯೆಂದೆನ್ನಿಸುತ್ತದೆ.

ಕೊಡವ ಭಾಷೆಯ ಕೆಲವು ಪದಗಳಿಗೆ ಇತರ ದ್ರಾವಿಡ ಭಾಷೆಗಳ ಸಮಾನಪದಗಳನ್ನು ನೀಡಿದರೆ ಈ ಸಂಬಂಧ ಸರಿಯಾಗಿ ಅರ್ಥವಾದೀತು:

ಪೆಣ್‌(ಕ) ಪೊಣ್ಣು (ಕೊಡವ ಹಾಗೂ ತುಳು)
ಬೇಟೆ (ಕ) ಬೋಂಟೆ (ತುಳು) ಬೋಟೆ (ಕೊ)
ಬೀಡು (ಕ) ಬೂಡು (ತುಳು) ವೀಡು)ಕೊ)

ತುಳು ಕೊಡವ ಕನ್ನಡ  ಹವ್ಯಕ ಕನ್ನಡ
ಪಂಜಿ ಪಂದಿ ಹಂದಿ ಹಂದಿ
ಪುಳು ಪುಳು ಹುಳು ಹುಳು
ಪೂ ಪೂವ ಪೂವು ಹೂವು
ಕೆಬಿ ಕೆಮಿ ಕಿವಿ ಕೆಮಿ

ಕೊಡಗು ಸಾಹಿತ್ಯದಲ್ಲಿ ಕೊಡವ ಭಾಷೆಯ ಕುರಿತಾದ ಮಾತುಗಳನ್ನು ಸ್ವಲ್ಪ ಗಮನಿಸಬಹುದು. ಕೊಡಗು ಭಾಷೆಯ ಮೊದಲ ಸಾಹಿತ್ಯವಾಗಿ ಲಭ್ಯವಿರುವುದು ಹರಿದಾಸ ಅಪ್ಪಚ್ಚು ಕವಿಯ ನಾಟಕಗಳು. ಇದಕ್ಕೂ ಮೊದಲು ಬರೆದಿರಬಹುದಾದ ಪಟ್ಟೋಲೆ ಪಳಮೆ (ನಡಿಕೇರಿಯಂಡ ಚಿನ್ನಪ್ಪ) ಕೊಡವರ ಭಾಷೆ, ಸಂಸ್ಕೃತಿ ಇವುಗಳ ಕುರಿತೇ ಇದ್ದರೂ ಕೊಡಗು ಭಾಷೆಯ ಸಾಹಿತ್ಯವೆನ್ನಲಾಗದು. ಅದು ಕನ್ನಡವನ್ನು ಉಪಯೋಗಿಸಿದ ಸಾಹಿತ್ಯ. ‘ರಾಜೇಂದ್ರನಾಮೆ’ (೧೮೦೭)ರಲ್ಲಿ ರಚನೆಗೊಂಡರೂ ಅದು ಕನ್ನಡ ಭಾಷೆ – ಲಿಪಿಯದ್ದು. ಹರಿದಾಸ ಅಪ್ಪಚ್ಚುಕವಿ ೧೯೬೮ರಲ್ಲಿ ಹುಟ್ಟಿ ೧೯೪೪ರಲ್ಲಿ ಮರಣ ಹೊಂದಿದನು. ಅಪ್ಪಚ್ಚುಕವಿ ಪುತ್ತೂರು, ಮಂಗಳೂರಿನಲ್ಲೂ ಹರಿಕಥಾ ಕಾಲಕ್ಷೇಪ ಮಾಡಿದ್ದನಂತೆ.

ಆತನ ‘ಯಯಾತಿ ರಾಜಂಡ’ ನಾಟಕ (೧೯೦೬), ಸಾವಿತ್ರಿ, ಸುಬ್ರಹ್ಮಣ್ಯ ನಾಟಕ (೧೯೦೮) ಮತ್ತು ಶ್ರೀ ಕಾವೇರಿ ನಾಟಕ (೧೯೧೮) ಇವೇ ಕೊಡವ ಭಾಷೆಯ ಆದಿಮ ಕೃತಿಗಳು. ಹರಿದಾಸ ಅಪ್ಪಚ್ಚು ಕವಿಗೆ ಕೊಡವ ಭಾಷೆ – ಸಾಹಿತ್ಯದ ಬೆಳವಣಿಗೆಯ ಕುರಿತು ಅರಿವಿತ್ತು ಎಂಬುದು ಆತನ ಈ ಮಾತುಗಳಿಂದ ಗೊತ್ತಾಗುತ್ತದೆ:

‘ನಾಟಕ, ಸಾಹಿತ್ಯ ಕಲೆಕ್‌ ಎಣ್ಣನ್‌ ಊರ್‌ ಇದಲ್ಲಿ. ನಾನ್‌ ಆ ಬಚ್ಚೆಲ್‌ ನಡಪಂಜಿ ಕೈ ಚುಟ್ಟಿಂಡಿಯೆ. ನಾಡ ಪ್ರಯತ್ನರತರ್‌ ವಿಷಯಕ್‌ ನಾಕ್‌ ದುಃಖ ಇಲ್ಲೆ. ದೇವ ಬಟ್ಟೆಕಾಟ್‌ನಾಲೆ ನಡಂದಿಯೆ’. (ನಾಟಕ, ಸಾಹಿತ್ಯ ಕಲೆಗೆ ಹೇಳಿದ ಊರು ಇದಲ್ಲ. ನಾನು ಆ ದಾರಿಯಲ್ಲಿ ನಡೆಯುವಾಗ ಕೈ ಸುಟ್ಟುಕೊಂಡಿದ್ದೇನೆ. ನನ್ನ ಪ್ರಯತ್ನದ ವಿಷಯಕ್ಕೆ ನನಗೆ ದುಃಖವಿಲ್ಲ. ದೇವರು ದಾರಿ ತೋರಿದಲ್ಲಿ ನಡೆದಿದ್ದೇನೆ).

ಮಹಾತ್ಮರೇ, ಶ್ರೀ ಕಾವೇರ್ಯಮ್ಮೆ ದಾರ್‌ಎಲ್ಲಿ ಪುಟ್ಟಿಜಿ, ಪುಟ್ಟುವಕ್‌ ಕಾರಣಯೆನ್ನ್‌, ತೀರ್ಥ ಅವತಾರ ಎಡ್‌ತಂತ ಮೊಳಿಯೆನ್ನ್‌, ಈ ದೇಶ ಎಂಗಡ ಜನ್ಮ ಭೂಮಿ ಎನ್ನನೆ ಆಚೆ, ಕೊಡವದಾರ್‌, ಅಮ್ಮಂಗಳಾರ್‌ ಇನ್ನತದೆಲ್ಲ ಯಂಗಡ ದೇಶಕಾರಕ್‌ ತ್‌ರ ಗೊತ್ತುಳ್ಳದ್‌ ಅನುಮಾನ. ಎನ್ನಂಗ್‌ಂದ್‌ ಎಣ್ಣ್‌ಚೇಂಗಿ ಪಂಡೇತ ಕಾವೇರಿ ಪುರಾಣವುಳ್ಳದ್‌ ಸಂಸ್ಕೃತ ಯೆಳ್‌ತ್‌ಲ್‌, ಈ ದೇಶತ್‌ ಸಂಸ್ಕೃತ ವಿದ್ಯೇವೇ ಸೂನ್ಯಂದೆಣ್ಣುವದ್‌ ಎಲ್ಲಾಕು ಗೊತ್ತು’ (ಮಹಾತ್ಮರೇ, ಶ್ರೀ ಕಾವೇರಿ ತಾಯಿ ಯಾರು, ಎಲ್ಲಿ ಹುಟ್ಟಿದಳು, ಹುಟ್ಟುವುದಕ್ಕೆ ಕಾರಣವೇನು, ತೀರ್ಥದ ಅವತಾರ ತಾಳಿದ ಹಿನ್ನೆಲೆಯೇನು ಈ ದೇಶ ನಮ್ಮ ಜನ್ಮ ಭೂಮಿ ಹೇಗಾಯಿತು, ಕೊಡವರು ಯಾರು ಅಮ್ಮಂದಿರು (ಕೊಡವರು) ಯಾರು, ಇದೆಲ್ಲ ನಮ್ಮ ದೇಶದವರಿಗೆ ಪೂರ್ಣ ಗೊತ್ತಿರುವುದು ಅನುಮಾನ. ಈ ದೇಶದಲ್ಲಿ ಸಂಸ್ಕೃತ ವಿದ್ಯೆಯೇ ಶೂನ್ಯವೆಂದೆನ್ನುವುದು ಎಲ್ಲರಿಗೂ ಗೊತ್ತು.)

ನಂತರ ‘ಎಲ್ಲಾ ಜನಕೂ ಗೊತ್ತಾಪನ್ನನೆ ಕನ್ನಡ ಎಳ್‌ತಾಯಿಂತೂ, ಕೊಡವ ತಕ್ಕಾಯಿತೂ, ನಾಟಕ ರೂಪ್‌ಲ್‌ ಇದೆನ್‌ ತಯ್ಯಾರ್‌ ಮಾಡಿತ್‌ ದೇಶತ್‌ ಜ್ಞಾನ ವೃದ್ಧಂಗಕ್ಕೂ ಕವಿಯಾಯಿ ತಿಂಜಂತ ಮಾ. ಶ್ರೀ ವೆಂಕಟಾದ್ರಿ ಶಾಮರಾವುಕ್ಕೂ …’ ಎನ್ನುತ್ತಾನೆ.

ಕೊಡಗು ಭಾಷೆಗೆ ಲಿಪಿಯಿಲ್ಲವೆಂಬುದನ್ನು ಕವಿ ಹೀಗೆ ಕೊರಗುತ್ತಾನೆ:

ಇನ್ನತ ಕೊಡವರಾನ ಎಂಗಡ ಕೊಡವ ತಕ್ಕ್‌ಕ್‌ಸರಿಯಾನ ಎಳ್‌ತ್‌ಇಲ್ಲತೆ ಪರವಿದ್ಯವಾನಂತ ಕನ್ನಡ ಯೆಳ್‌ತೇ ಎಂಗಕೂ, ಎಂಗಡ ದೇಶಕೂ, ಪ್ರಧಾನ ಆಯಿತ್‌ನಂಡಂದ್‌ಬಪ್ಪ ಕಾಚಿ‘. (ಇಂತಹ ಕೊಡವರಾಗಿರುವ ನಮ್ಮ ಕೊಡವ ಭಾಷೆಗೆ ಸರಿಯಾದ ಲಿಪಿ ಇಲ್ಲದೆ ಪರವಿದ್ಯೆಯಾದಂತ ಕನ್ನಡ ಲಿಪಿಯೇ ನಮಗೂ ನಮ್ಮ ದೇಶಕ್ಕೂ ಪ್ರಧಾನ ಆಗಿ ನಡೆದು ಬರುವಂತಾಯಿತು).

ಒಂದೇ ಮೂಲದಿಂದ ಹೊರಟ ಭಾಷೆಗಳಲ್ಲಿ ಪರಸ್ಪರ ಸಂಬಂಧವಿರುತ್ತದೆ. ಕಾಲಾಂತರದಲ್ಲಿ ಇವು ವಿವಿಧ ಕಾರಣಗಳಿಂದಾಗಿ ಮತ್ತು ಭಿನ್ನ ಪ್ರಭಾವಗಳಿಂದಾಗಿ ತೆಳುವಾಗಿ ದೂರವಾಗಬಹುದು; ಅಥವಾ ವ್ಯತ್ಯಾಸವೇ ಇಲ್ಲದಂತೆ ಒಂದಾಗಬಹುದು. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದೆನ್ನಲಾದ ತುಳುವಿಗೂ ದ್ರಾವಿಡ ಮೂಲದ ಉಪಭಾಷೆಯನ್ನಿಸಿಕೊಂಡ ಕೊಡವು ಭಾಷೆಗೂ ಇರಬಹುದಾದ (ಅಥವಾ ಇಲ್ಲದಿರಬಹುದಾದ) ಸಂಬಂಧದ ಕುರಿತ ಇಂತಹ ಚರ್ಚೆ ಎರಡೂ ಭಾಷೆಗಳಿಗೂ ಶ್ರೇಯಸ್ಕರವಾದದ್ದು.

ಭಾಷೆಗಳ ತೌಲನಿಕ ಅಧ್ಯಯನದ ಚರಿತ್ರೆಯಲ್ಲಿ ಉಳಿದ ದ್ರಾವಿಡ ಭಾಷೆಗಳೊಂದಿಗೆ ಹೋಲಿಸಿ ಕೊಡಗು ಭಾಷೆಯ ಅಧ್ಯಯನ ಅಷ್ಟಾಗಿ ನಡೆದಿಲ್ಲ. ಇತರ ಭಾಷೆಗಳು ‘ಕೊಡಗು ಭಾಷೆಯೊಂದಿಗೆ ಅಷ್ಟಾಗಿ ಸಾಮೀಪ್ಯವನ್ನು ಕಡೆಗಣಿಸುವಂತಿಲ್ಲ’ ಎಂದು ಹಂಪ ನಾಗರಾಜಯ್ಯ ತಮ್ಮ ‘ದ್ರಾವಿಡ ಭಾಷಾ ವಿಜ್ಞಾನ’ದಲ್ಲಿ ಹೇಳಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಸ್ಥಾಪನೆಯಾದ ನಂತರ ಈ ಕುರಿತು ಹಲವರು ಆಸ್ಥೆ ತಳೆದಿದ್ದಾರೆ. ಅಕಾಡೆಮಿಯು ಈ ನಿಟ್ಟಿನಲ್ಲಿ ಸ್ಥಿರಹೆಜ್ಜೆ ಹಾಕುತ್ತಿದೆಯೆಂದು ನಿರೀಕ್ಷಿಸಲಾಗಿದೆ. ದ್ರಾವಿಡ ಭಾಷಾ ನಿಘಂಟನ್ನು ಪ್ರಕಟಿಸುವವರು ಕೊಡಗು ಭಾಷೆಯನ್ನು ಸೇರಿಸಿಕೊಂಡರೆ ತುಳು ಕನ್ನಡದ ಹಿರಿಮೆ-ಗರಿಮೆಗಳು ಹೆಚ್ಚಾಗಬಹುದು.

ಕೊಡಗಿನಲ್ಲೇ ವಾಸವಾಗಿದ್ದು ತುಳು ಮಾತೃ ಭಾಷೆಯಾಗಿರುವ ಅನೇಕ ಬರಹಗಾರರು ಕೊಡಗು / ಕನ್ನಡ / ಇಂಗ್ಲೀಷ್‌ಭಾಷೆಯಲ್ಲಿ ಬರೆದಿದ್ದಾರೆಯೇ ವಿನಾ ತುಳುವಿನಲ್ಲಲ್ಲ. ತುಳು ಸಾಹಿತ್ಯ ಅಕಾಡಮಿ ಮಡಿಕೇರಿಯಲ್ಲಿ ಕಮ್ಮಟವನ್ನು ನಡೆಸಿದೆ. ಆದರೆ ಕೊಡಗು – ತುಳು ಭಾಷಾ / ಸಾಹಿತ್ಯಕ ತುಳು ಕೃತಿಗಳನ್ನು ಕೊಡಗಿಗೂ ಅನುವಾದಿಸುವ ಕೆಲಸ ನಡೆಯುವುದು ಉಚಿತ. ಇಂತಹ ಸಂಪರ್ಕ ಸೇತುವಿನಿಂದಷ್ಟೇ ಸಂಸ್ಕೃತಿ ಬೆಳೆದೀತು.

ಆಕರಸೂಚಿ

೧. ಯು.ಪಿ. ಉಪಾಧ್ಯಾಯ, ೧೯೯೪, ತುಳು ನಿಘಂಟು – ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡಪಿ, ೧೯೯೪

 ೨. ಭಾರತದ ಗ್ಯಾಸೆಟಿಯರ್‌ / ಕರ್ನಾಟಕ ರಾಜ್ಯ / ಕೊಡಗು ಜಿಲ್ಲೆ ೧೯೯೨

 ೩. Gazetteer of Coorg / G. Richter 1870

 ೪. Elementary Coorg Grammar / Capt. Cole

 ೫. ವೀರರಾಜೇಂದ್ರ ವಿಜಯ – ಬಿ. ವಿ. ರಮಣ, ೧೯೯೮

 ೬. On a Shoestring to Coorg – Dervla Murphy / Flamingo 1995

 ೭. ದ್ರಾವಿಡ ಭಾಷಾ ವ್ಯಾಸಂಗ ಸಂಗಮೇಶ ಸವದತ್ತಿ ಮಠ, ೧೯೭೬

 ೮. ದ್ರಾವಿಡ ನಿಘಂಟು – ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೦೧

 ೯. ದ್ರಾವಿಡ ಭಾಷಾ ವಿಜ್ಞಾನ / ಹಂಪ ನಾಗರಾಜಯ್ಯ

೧೦. Phonology of Kodagu with Vocabulary / Dr. R. Balakrishnan / Annamalai Univsersity

೧೧. A Grammar of Kodagu / Dr. R. Balakrishnan / Annamalai Univsersity

೧೨. ಹರಿದಾಸ ಅಪ್ಪಚ್ಚ ಕವಿರ ನಾಲ್‌ನಾಟಕ / ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ

೧೩. ಪ್ರತಿಜ್ಞೆ / ಅಜ್ಜಮಾಡ ಪ್ರಮೀಳ ಕರುಂಬಯ್ಯ / ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ

೧೪. ಪಟ್ಟೋಲೆ ಪಳಮೆ / ನಡಿಕೇರಿಯಂಡ ಚಿನ್ನಪ್ಪ / ಕನ್ನಡ ಪುಸ್ತಕ ಪ್ರಾಧಿಕಾರ

೧೫. ಕರ್ನಾಟಕ ಏಕೀಕರಣ ಇತಿಹಾಸ / ಎಚ್‌. ಎಸ್‌. ಗೋಪಾಲ ರಾವ್‌