ತುಳುನಾಡು ಹಲವು ಭಾಷೆಗಳ ಆಡುಂಬೊಲ. ತುಳು ಭಾಷೆಯು ಇಲ್ಲಿನ ಬಹುಸಂಖ್ಯಾತರ ತಾಯಿನುಡಿಯೂ ಹೌದು. ಪ್ರಧಾನವಾದ ವ್ಯಾವಹಾರಿಕ ಭಾಷೆಯೂ ಹೌದು. ಭಾಷಾವಾರು ಪ್ರಾಂತ ಪುನಾರಚನೆಯ ಮೊದಲು ಕಾಸರಗೋಡು ಪ್ರದೇಶದಲ್ಲೂ ವಿವಿಧ ಸಾಮಾಜಿಕ ಸಮುದಾಯಗಳ ನಡುವಿನ ಸಂಪರ್ಕ ಭಾಷೆಯು ತುಳುವೇ ಆಗಿತ್ತು. ಈಗ ಆ ಜಾಗವನ್ನು ಮಲೆಯಾಳಂ ಭಾಷೆಯು ಆಕ್ರಮಿಸತೊಡಗಿದೆ. ಆದರೆ ಕುಂಬಳೆಯಿಂದ ಉತ್ತರಕ್ಕೆ ಸಾಗಿದಂತೆ ಜನಸಾಮಾನ್ಯರ ಸಂಪರ್ಕ ಭಾಷೆಯಾಗಿ ತುಳುವೇ ಮುಂದುವರಿಯುತ್ತಿರುವುದನ್ನು ಕಾಣಬಹುದಾಗಿದೆ. ತುಳುನಾಡಿನಲ್ಲಿ ತುಳು ಭಾಷೆಯೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಇತರ ಭಾಷೆಗಳಲ್ಲಿ ಕನ್ನಡ, ಕೊಂಕಣಿ, ಮರಾಠಿ ಮೊದಲಾದವು ಮುಖ್ಯವಾದವು. ತಲಪಾಡಿಯಿಂದ ತೆಂಕು ದಿಕ್ಕಿಗೆ ಸರಿದಂತೆ ಮಲೆಯಾಳವು ತುಳು ಕನ್ನಡಗಳೊಂದಿಗೆ ಬಳಕೆಗೊಳ್ಳುತ್ತಿದೆ. ಕನ್ನಡದಲ್ಲಿಯೂ ಬೈರ ಕನ್ನಡ, ಕೋಟ ಕನ್ನಡ, ಹವ್ಯಕ ಕನ್ನಡ ಎಂಬಿತ್ಯಾದಿ ಸಾಮಾಜಿಕ ಪ್ರಭೇದಗಳಿದ್ದು ಇವೆಲ್ಲವುಗಳ ಮೇಲೆ ತುಳು ಭಾಷೆಯ ದಟ್ಟವಾದ ಪ್ರಭಾವವನ್ನು ಕಾಣಬಹದಾಗಿದೆ.

ಹವಿಕ, ಹವೀಕ, ಹೈಗ, ಹೈವ, ಹವ್ಯಕ ಮೊದಲಾದ ವಿಭಿನ್ನ ಹೆಸರುಗಳಿಂದ ಗುರತಿಸಿಕೊಂಡಿರುವ ಬ್ರಾಹ್ಮಣ ಸಮುದಾಯದವರು ಕದಂಬ ಅರಸರ ಕಾಲದಲ್ಲಿ ಉತ್ತರ ಭಾರತದ ‘ಅಹಿಚ್ಛತ್ರ’ದಿಂದ ದಕ್ಷಿಣಕ್ಕೆ ವಲಸೆ ಬಂದವರೆಂದು ತಿಳಿಯಲಾಗಿದೆ. ಹೆಚ್ಚು ಕಡಿಮೆ ಕ್ರಿಸ್ತ ಶಕ ಸುಮಾರು ಎರಡನೇ ಶತಮಾನದಲ್ಲಿ ವಲಸೆ ಬಂದ ಈ ಬ್ರಾಹ್ಮಣ ಪಂಗಡವು ಮೊದಲಿಗೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ವಿವಿಧೆಡೆಗಳಲ್ಲಿ ನೆಲೆಗೊಂಡಿರಬೇಕೆಂದು ಹೇಳಲಾಗಿದೆ. ‘ಅಹಿಚ್ಛತ್ರ’ದಲ್ಲಿ ಇವರ ಮಾತೃಭಾಷೆ ಕನ್ನಡವಾಗಿರಲೆಡೆಯಿಲ್ಲ. ಇಲ್ಲಿ ಬಂದು ತಳವೂರಿದ ಬಳಿಕ ಕಾಲಾನಂತರದಲ್ಲಿ ಇವರು ಪ್ರಾದೇಶಿಕ ಭಾಷೆಯಾದ ಕನ್ನಡವನ್ನೇ ತಮ್ಮ ಮಾತೃ ಭಾಷೆಯನ್ನಾಗಿ ಸ್ವಿಕರಿಸಕೊಂಡು ಇರಬೇಕೆಂಬುದರಲ್ಲಿ ಅನುಮಾನವಿಲ್ಲ. ಹವ್ಯಕರ ಆಡುನುಡಿ ಅರ್ಥಾತ್‌ಹವ್ಯಕ ಇರುವುದು ಕನ್ನಡದಲ್ಲಿ. (ಹವ್ಯಕ ಕನ್ನಡವನ್ನು ಇತ್ತೀಚೆಗೆ ‘ಹವಿಗನ್ನಡ’ ಎಂದು ಕರೆಯಲಾಗುತ್ತಿದೆ). ಕನ್ನಡ ಭಾಷೆಯ ಹಲವು ಹಳೆಯ ರೂಪುಗಳು ಇನ್ನೂ ಜೀವಂತವಾಗಿವೆ. ಪೂರ್ವದ ಹಳಗನ್ನಡದ ಶಾಸನಗಳಲ್ಲಿ, ಪಂಪ ಭಾರತ, ವಡ್ಡಾರಾಧನೆ ಮೊದಲಾದ ಸಾಹಿತ್ಯ ಕೃತಿಗಳಲ್ಲಿ ಕಂಡುಬರುವ ಮತ್ತು ಈಗ ರೂಢಿಯಲ್ಲಿಲ್ಲದ ಎಷ್ಟೋ ಕನ್ನಡ ಶಬ್ದಗಳು ಹವ್ಯಕ ಕನ್ನಡದಲ್ಲಿ ಈಗಲೂ ಜೀವಂತವಾಗಿದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಇವರ ಕೆಲವು ಗುಂಪುಗಳು ಕಾಲಾನುಕ್ರಮದಲ್ಲಿ ತುಳುನಾಡನ್ನು ಪ್ರವೇಶಿಸಿದವು. ಕೋಳ್ಯೂರು, ಕುಂಬ್ಳೆ, ವಿಟ್ಲ, ಪುತ್ತೂರು ಮತ್ತು ಪಂಜ ಸೀಮೆಗಳು ಇವರ ಇಲ್ಲಿನ ಮುಖ್ಯ ನೆಲೆಗಳಾದವು. ಈ ವಲಸೆಯು ಯಾವಾಗ ನಡೆಯಿತು ಎಂಬುದಕ್ಕೆ ಖಚಿತವಾದ ದಾಖಲೆಗಳಿಲ್ಲ. ಸಾಕಷ್ಟು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಇವರು ಬಂದಿರಬೇಕೆಂದು ತೋರುತ್ತದೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಹವ್ಯಕರ ಆಡುನುಡಿಗೂ ತುಳುನಾಡಿನ ಹವ್ಯಕರ ಆಡುನುಡಿಗೂ ಇರುವ ಅಂತರವು ಈ ಊಹೆಯನ್ನು ದೃಢೀಕರಿಸುತ್ತದೆ. ವಲಸೆ ಬರುವ ಕಾಲಕ್ಕೆ ತಮ್ಮೊಂದಿಗೆ ಒಯ್ದಿದ್ದ ಎಷ್ಟೋ ಪದಗಳನ್ನು ಇವರು ಇನ್ನೂ ಬಳಸುತ್ತಿದ್ದಾರೆ. ಆದರೆ ಶಿಷ್ಟ ಕನ್ನಡಕ್ಕೆ ಹತ್ತಿರವಾಗಿರುವ ಅಲ್ಲಿನವರ ಆಡುನುಡಿಯಲ್ಲಿ ಈ ಪದಗಳಿಲ್ಲ. ಹೆಚ್ಚಿನವು ಮಾಯವಾಗಿರುವುದನ್ನು ಕಾಣಬಹುದಾಗಿದೆ. ಕುಂಬಳೆ ಸೀಮೆಯ ಹವ್ಯಕ ಕನ್ನಡದಲ್ಲಿ ಹಳೆಯ ರೂಪಗಳ ಸಂಖ್ಯೆ ತುಸು ಹೆಚ್ಚೆಂದೇ ಹೇಳಬಹುದಾಗಿದೆ.

ಹವ್ಯಕರು ಮುಖ್ಯವಾಗಿ ಕೃಷಿಯನ್ನು ಅವಲಂಬಿಸಕೊಂಡವರು. ಕಂಗು, ತೆಂಗು, ಭತ್ತ ಮೊದಲಾದ ಕೃಷಿಗಳಿಗೆ ಅಂಟಿಕೊಂಡವರು. ತುಳುನಾಡಿನಲ್ಲಿ ಮುಖ್ಯ ಧಾರೆಯೊಂದಿಗೆ ಸೇರಿಕೊಂಡು ಇಲ್ಲಿನ ವಿಶಿಷ್ಟ ಸಂಸ್ಕೃತಿಯನ್ನು ಸ್ವೀಕರಿಸಿಕೊಂಡರು ಎಂಬುದು ಇವರ ಮಾತೃಭಾಷೆಯನ್ನು ನೋಡಿದರೆ ಸ್ಫುಟವಾಗುತ್ತದೆ.

ಭೂತಾರಾಧನೆ, ತಂಬಿಲ, ಕೋಲಗಳನ್ನು ಇವರು ಒಪ್ಪಿಕೊಂಡರು ಕೆಡ್ಡಸ, ಪತ್ತನಾಜೆ, ವಿಷು, ಬಲೀಂದ್ರ ಪೂಜೆ ಮೊದಲಾದವನ್ನು ಆಚರಿಸಿತೊಡಗಿದರು. ಇದರ ಪರಿಣಾಮವಾಗಿ ಈ ಆಚರಣೆಗೆ ಸಂಬಂಧಿಸಿದ ಪದಗಳೆಲ್ಲವನ್ನೂ ತುಳು ಭಾಷೆಯಿಂದಲೇ ಎತ್ತಿಕೊಂಡರು. ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ‘ಕಾನ’ ಎಂಬ ಹಳ್ಳಿ ಹವ್ಯಕರ ಒಂದು ಪ್ರಧಾನ ಕೇಂದ್ರ. ಇಲ್ಲಿ ತಂಬಿಲ, ಧೂಮಾವತಿ ದೈವದ ಕೋಲ, ಮಠದ ಪೂಜೆ ಮೊದಲಾದ ಸಂದರ್ಭಗಳಲ್ಲಿ ಭೂತದ ಆವೇಶವನ್ನು ತಾಳಿ ‘ಬೆಳ್ಚಪ್ಪಾಡ’ರಾಗಿ ವ್ಯವಹರಿಸುವವರು ಹವ್ಯಕ ಬ್ರಾಹ್ಮಣರು. ಆವೇಶಗೊಂಡ ಬೆಳ್ಚಪ್ಪಾಡನ ನುಡಿಕಟ್ಟು ಮತ್ತು ಆರಾಧಕರಾದ ಹವ್ಯಕ ಬ್ರಾಹ್ಮಣರ ‘ಮುದಿಪು’ ಇವೆರಡೂ ತುಳುಭಾಷೆಯಲ್ಲೇ ನಡೆಯುತ್ತಿರುವುದು ಗಮನಾರ್ಹ.

ತುಳುನಾಡಿನಲ್ಲಿ ನೆಲೆಗೊಂಡ ಹವ್ಯಕರಿಗೆ ತುಳುವರಾದ ಅಥವಾ ತುಳುಭಾಷಾ ಮಾಧ್ಯಮದಲ್ಲಿ ವ್ಯವಹರಿಸುವ ಕೃಷಿ ಕಾರ್ಮಿಕರೊಂದಿಗೆ ಒಡನಾಟವು ತೀವ್ರ ಅನಿವಾರ್ಯ. ಇದರ ಫಲವಾಗಿ ಹವ್ಯಕ ಕನ್ನಡ ಮತ್ತು ತುಳು ಭಾಷೆಗಳೊಳಗೆ ಗಾಢವಾದ ಸಂಪರ್ಕವೇರ್ಪಟ್ಟಿತು. ಕೃಷಿ ಕಾರ್ಮಿಕರ ನಿತ್ಯ ಬಳಕೆಯ ಪದಗಳಾಗಲೀ ವೃತ್ತಿಪದಗಳಾಗಲೀ ಗಣನೀಯ ಪ್ರಮಾಣದಲ್ಲಿ ಹವ್ಯಕ ಕನ್ನಡವನ್ನು ಪ್ರವೇಶಿಸಿದವು. ತುಳುವನಿಂದ ಹವ್ಯಕಕ್ಕೆ ಬಂದ ಪದಗಳನ್ನು ಹೀಗೆ ಗುರುತಿಸಬಹುದು.

ಕೃಷಿ ಸಂಬಂಧೀ ಪದಗಳು

೧. ವಸ್ತುಗಳು / ಉಪಕರಣಗಳು : ನಾಯರು (ನೇಗಿಲು), ಪನ್ನೊಳು (ನೇಗಿಲ ಗುಳ), ಮಡು (ಕೊಡಲಿ), ಕಿಡಿಂಜಲು (ಗೊರಬು), ಕುರುಂಟು (ಕೆಸರು ಗದ್ದೆಯಲ್ಲಿ ಬೀಜ ಬಿತ್ತುವ ಮೊದಲು ನೀರು ಸರಿಯಾಗಿ ಹರಿದು ಹೊಗಲಿಕ್ಕಾಗಿ ಚಿಕ್ಕ ಕಾಲುವೆಗಳನ್ನು ಮಾಡಲು ಉಪಯೋಗಿಸುವ ಗುಂಡಗಿನ ಕಲ್ಲು), ತಳೆ (ಕಂಗು, ತಾಳೆ, ತೆಂಗು ಮೊದಲಾದ ಮರಗಳನ್ನು ಏರುವುದಕ್ಕಾಗಿ ಎರಡೂ ಕಾಲುಗಳಿಗೆ ಸಿಕ್ಕಿಸಲು ಹಗ್ಗದಿಂದ ಮಾಡಿದ ಬಳೆಯಂತಹ ರಚನೆ), ಕಡ್ಪ ಕತ್ತಿ (ದೊಡ್ಡ ಕುಡುಗೋಲು), ಪರ್ಕತ್ತಿ (ಪೈರು ಕೊಯ್ಯಲು ಉಪಯೋಗಿಸುವ ಗರಗಸದಂತೆ ಸಣ್ಣ ಹಲ್ಲುಗಳಿರುವ ಕತ್ತಿ) ಇತ್ಯಾದಿ.

೨. ಬೆಳೆಗಳು : ಏಣೆಲು, ಸುಗ್ಗಿ, ಕೊಳಕೆ (ವರ್ಷದ ಮೂರು ಭತ್ತದ ಬೆಳೆಗಳು), ನೇಜಿ (ಕಿತ್ತು ನೆಡಲಿಕ್ಕಾಗಿ ಬೀಜ ಹಾಕಿ ಬೆಳೆಸಿದ ಭತ್ತದ ಸಸಿ), ದಡ್ಡು (ಜಳ್ಳು) ಇತ್ಯಾದಿ.

ಪರಿಸರದ ಪ್ರಾಣಿ, ಪಕ್ಷಿಗಳು

ಪಚ್ಚೆ (ಬೆಕ್ಕು), ಬೊಗ್ಗ (ಗಂಡುನಾಯಿ), ಬೊಗ್ಗಿ (ಹೆಣ್ಣುನಾಯಿ), ಗೋಣ (ಕೋಣ), ಕಂಜಿ (ಕರು), ಪಾರೊಳು (ಎಮ್ಮೆಯ ಬೆಳೆದ ಹೆಣ್ಣು ಕರು), ಕುದಕ್ಕ (ನರಿ), ಕೊಂರ್ಗು (ಕೊಕ್ಕರೆ), ಕುಪ್ಪುಳು (ಕೆಂಬೋತ), ಮೈರ್‌(ನಸುಗೆಂಪು ಬಣ್ಣದ ಎತ್ತು), ಕಾರಿಚ್ಚಿ (ಕಪ್ಪು ಬಣ್ಣದ ಹಸು), ಗೆಂದ (ಕಪಿಲ ವರ್ಣದ ಎತ್ತು), ಫೇರಿಯ (ಹೆಜ್ಜೇನು), ಕುಯಿಂಪ (ದೊಡ್ಡ ಗಾತ್ರದ ಕಪ್ಪು ಇರುವೆ) ಇತ್ಯಾದಿ.

ಫಲವಸ್ತುಗಳು

ಬೊಂಡ (ಸೀಯಾಳ), ದೀಗುಜ್ಜೆ (ದೀವಿ ಹಲಸು), ಗುಜ್ಜೆ (ಬಲಿಯದ ಹಲಸಿನಕಾಯಿ), ಕಜಿಪ್ಪು ಬಾಳಿ (ಕಜಿಪ್ಪು = ಪದಾರ್ಥ) (ತು), ಬಚ್ಚಂಗಾಯಿ (ಕಲ್ಲಂಗಡಿ ಹಣ್ಣು), ಅಳತ್ತಂಡೆ (ಅಲಸಂಡೆ), ನಳ್ಳಿ (ಅತ್ಯಂತ ಎಳೆಯ ಅಡಿಕೆ), ಉರುವೆ (ಇನ್ನೂ ಬಲಿಯದ ಅಡಿಕೆ), ನೆಟ್ಟಿಕಾಯಿ (ತರಕಾರಿ), ಚೆಂಡುಪ್ಪೈಲು (ತೆಂಗಿನ ಹೀಚು) ಇತ್ಯಾದಿ.

ಇನ್ನಿತರ ಕೆಲವು ಪದಗಳನ್ನು ತುಳುಮೂಲದೊಂದಿಗೆ ಹೋಲಿಸಿ ನೋಡಬಹುದು.

ತುಳು ಹವ್ಯಕ ಕನ್ನಡ ಅರ್ಥ
ಅಜಪ್ಪು ಅಜಪ್ಪು ಆಯ್ಕೆ
ಅಂಬೆರ್ಪು ಅಂಬೆರ್ಪು ಅವಸರ / ಆತುರ
ಅರ್ಕಿಲ್‌ ಅರಿಕ್ಕುಲು ಹುಲ್ಲು, ಸೌದೆ, ಸೊಪ್ಪು ಮೊದಲಾದವುಗಳ ಒಂದು ನಿಶ್ಚಿತ ಪ್ರಮಾಣ
ಅಂಡಪಿರ್ಕಿ ಅಂಡಪಿರ್ಕಿ ಅರೆಹುಚ್ಚ
ಅರೆಮಡಲ್‌ ಅರೆಮಡಲ್‌ ತಾಳೆ ಮರದ ಗರಿ
ಅರಿಕುರ್ವೆ ಅರಿಕುರ್ವೆ ಅಕ್ಕಿ / ಭತ್ತ ಸಾಗಿಸುವ ಬುಟ್ಟಿ
ಅರ್ಗಂಟ್‌ ಅರ್ಗೆಂಟು ಮೊಂಡುತನ
ಅಳಂಬು ಅಳಂಬು ಅಣಬೆ
ಇಟ್ಟೇಣಿ ಇಟ್ಟೇಣಿ ಏಣಿ
ಉಂಗಿಲೊ ಉಂಗಿಲು ಉಂಗುರ
ಉರುವೊಲು / ಉರುವೆಲ್‌ ಉರವೆಲು ಉಣಿಗೋಲು
ಏಡ್‌ ಏಡು ಆಡು
ಒತ್ತರೆ ಒತ್ತರೆ ಅಚ್ಚುಕಟ್ಟು
ಓಂಗಲೆ ಓಂಗೇಲ ಹೊಂಚು ಹಾಕುವವ
ಕಟ್ಟಪುಣಿ ಕಟ್ಟಪ್ಪುಣಿ ಎತ್ತರವಾದ, ಅಗಲವಾದ ಬದು
ಕಣಿ ಕಣಿ ಸೌರ ಯುಗಾದಿಯಂದಿನ ಬೆಳಗ್ಗಿನ ದರ್ಶನ
ಕಬರ್‌ ಕಬರು ಕವಲು
ಕರೆಂಚ್‌ ಕರಂಚು ಸೀದುಹೋಗು
ಕಸಂಟ್‌ ಕಸಂಟು ಕಮಟುವಾಸನೆ
ಕಿರಿಂಚಿ ಕಿರಿಂಚಿ ಕೆಸರು
ಕಳ್ಳಿಗೆÈ ಕಳ್ಳಿಗೆ ಹಲಸಿನ ಹೀಚು
ಕುಡೆÈ ಕುಡೆ ಬಿಲ
ಕುಚ್ಚಿ ಕುಚ್ಚಿ ತಲೆಗೂದಲು
ಕುತ್ತಿ ಕುತ್ತಿ ಮೋಟು
ಗರ್ಪು ಗರ್ಪು ಅಗೆ
ಚಕ್ಕಣ ಚಕ್ಕಣ ಚಿಕ್ಕಚಾಪೆ
ಚಾಂಬಾರ್‌ ಚಾಂಬಾರು ಗಿಡದಲ್ಲೇ ಒಣಗಿದ ಬಾಳೆ ಎಲೆ
ಚಿತ್ತ್‌ಪುಳಿ ಚಿತ್ತುಪುಳಿ ಕಿತ್ತಳೆ
ಚೋರ್‌ / ಚೋಳ್‌ ಚೋರು ಕೆಸರು
ಚೋರೆÈ ಚೋರೆ ಎಳೆಯ ಮಿಡಿ
ತಳ್ಳೆÈ ತಳ್ಳೆ ಕಾವು
ತೊಂಡೆ ತೊಂಡ ಮುದುಕ
ತೊಂಡಿ ತೊಂಡಿ ಮುದುಕಿ
ತಡೆ ತಡೆ ಸಹಿಸು
ದೊಂಡೆÈ ದೊಂಡೆ ಗಂಟಲು
ನೆತ್ತಿಕಂಡೆÈ ನೆತ್ತಿಗೆಂಡೆ ಅಮಶಂಕೆ
ಪಗರ ಪಗರ ಬದಲು
ಪಗರ್‌ ಪಗರ್‌ ಹರಡು
ಪಗೆಲೆ ಪಗೆಲ ವಿಷವಿಲ್ಲದ ಒಂದು ಜಾತಿಯ ಚಿಕ್ಕಹಾವು
ಪರಡ್‌ ಪರಡು ತಡಕಾಡು
ಪೀಂಕ್‌ ಪೀಂಕು ಕಳಚಿಕೊಳ್ಳು
ಪೊಜಂಕ್‌ ಪೊಜಂಕು ಹಿಸುಕು
ಪೊರ್ಪು ಪೊರ್ಪು ಬುಡಸಹಿತ ಕೀಳು
ಬಚ್ಚೆಲ್‌ ಬಚ್ಚಲು ಆಯಾಸ
ಬಜಂಟ್‌ ಬಜಂಟು ಬೆರಣಿ
ಬಯ್ಪಣಿ ಬಯ್ಪಣಿ ಗೋದಲೆ
ಬೆಡಿ ಬೆಡಿ ಕೋವಿ / ಸಿಡಿಮದ್ದು
ಬಲಿಪು ಬಲಿಪ್ಪು ಪಲಾಯನ ಮಾಡು
ಮುಟ್ಟೆÈ ಮುಟ್ಟೆ ಒಣಹುಲ್ಲನ್ನು ಪೇರಿಸಿ ಇಟ್ಟ ರಾಶಿ
ಸಾಂತಾಣಿ ಸಾಂತಾಣಿ ಬೇಯಿಸಿ ಒಣಗಿಸಿದ ಹಲಸಿನ ಬೀಜ

ತುಳುವರು ಸೌರಮಾನ ತಿಂಗಳನ್ನು ಅನುಸರಿಸುವರು. ಹವ್ಯಕರು ಮೂಲಭೂತವಾಗಿ ಚಾಂದ್ರಮಾನ ತಿಂಗಳುಗಳನ್ನು ಗಣನೆಗೆ ತೆಗೆದುಕೊಳ್ಳುವರು. ತುಳುನಾಡಿಗೆ ಬಂದ ಹವ್ಯಕರು ಈ ವಿಚಾರದಲ್ಲಿ ತುಳುವರನ್ನೇ ಅನುಸರಿಸುವುದನ್ನು ಕಾಣಬಹುದು. ತುಳುವರು ಚಾಂದ್ರಮಾನ ತಿಂಗಳುಗಳ ಹೆಸರಿನಿಂದ ಕೆಲವು ಸೌಮಾನ ತಿಂಗಳುಗಳನ್ನು ಹೆಸರಿಸುವುದುಂಟು. ಬೇಸ್ಯ (<ವೈಶಾಕ) ಎಂದು ವೃಷಭ ಮಾಸವನ್ನು, ಆಟಿ (< ಆಷಾಢ) ಎಂದು ಕರ್ಕಟಕ ಮಾಸವನ್ನೂ, ಸೋಣೊ (<ಶ್ರಾವಣ) ಎಂದು ಸಿಂಹಮಾಸವನ್ನೂ ಮಾಯಿ (< ಮಾಘ) ಎಂದು ಕುಂಭಮಾಸವನ್ನೂ ಕರೆಯುತ್ತಾರೆ. ಇವುಗಳಲ್ಲಿ ಕೊನೆಯದೊಂದನ್ನು ಬಿಟ್ಟು ಉಳಿದ ತಿಂಗಳುಗಳನ್ನು ಅನುಕ್ರಮವಾಗಿ ಬೇಸಗೆ, ಆಟಿ, ಸೋಣೆ ಎಂದು ಹವ್ಯಕರು ಹೇಳುವಲ್ಲಿ ತುಳುವಿನ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಹವ್ಯಕರಲ್ಲಿ ತುಳುವರಂತೆ ಸೌರಮಾನ ಯುಗಾದಿಯನ್ನು ‘ವಿಷುಕಣಿ’ಯಾಗಿ ಆಚರಿಸುವ ಸಂಪ್ರದಾಯ ಕೆಲವೆಡೆ ಕಂಡುಬರುತ್ತಿದೆ.

ಸಾಧಾರಣವಾಗಿ ಒಂದು ಭಾಷೆಯು ಮತ್ತೊಂದು ಭಾಷೆಯಿಂದ ಸರ್ವನಾಮ, ಸಂಖ್ಯಾವಾಚಕ ಮತ್ತು ಧಾತುಗಳನ್ನು ಸ್ವೀಕರಿಸುವುದ ಕಡಿಮೆ. ಸಂಪರ್ಕ ಗಾಢವಾದಾಗ ಮಾತ್ರವೇ ಈ ವರ್ಗದ ಪದಗಳು ಎರವಲಾಗಿ ಬರುತ್ತವೆ. ಹವ್ಯಕ ಭಾಷೆಯಲ್ಲಿ ತುಳುವಿನಿಂದ ಬಂದ ಕೆಲವು ಧಾತುಗಳು ಈ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತವೆ.

ಅಜಪ್ಪು (ಆಯ್ಕೆ ಮಾಡು), ಉರುಡು (ಹೋರಾಡು), ಎರ್ಕು (ತುಂಬಿಕೊಳ್ಳು), ಎತ್ತು (ತಲಪು), ಓಂಗು (ಆಸೆಯಿಂದ ನೋಡುತ್ತಾ ಒಂದೆಡೆ ನಿಲ್ಲು), ನೀಂದು (ಈಜು), ಪರಡು (ತಡಕಾಡು), ಪರಂಚು (ಗೊಣಗು), ಬಲಿಪ್ಪು (ಪಲಾಯನ ಮಾಡು), ಬೊಡಿ (ಸಾಕಾಗು) ಇತ್ಯಾದಿ.

ತುಳು ಸ್ವೀಕಾರಗಳ ಮೂಲಕ ಙ ಮತ್ತು ಞ ಎಂಬ ಎರಡು ಧ್ವನಿಮಾಗಳು ಹವ್ಯಕ ಕನ್ನಡದಲ್ಲಿ ನೆಲೆಕಂಡಿವೆ.

ತುಳು ಹವ್ಯಕ ಕನ್ನಡ ಅರ್ಥ
ಅಙ್ಙಣೊ ಅಙ್ಙಣ ದೇವಾಲಯದ ಅಂಗಳ
ಬಙ್ಙೊ ಬಙ್ಙ ಕಷ್ಟ
ಕೊಞ್ಞೆ ಕೊಞ್ಞೆ ಅಸ್ಪಷ್ಟ ಮಾತು
ಞೋಣೆ ಞೋಣ ಎಮ್ಮೆಯ ಗಂಡು ಕರು

ತುಳುವಿನಿಂದ ಪದಗಳನ್ನು ಸ್ವೀಕರಿಸುವಾಗ ನಡೆದಿರುವ ಕೆಲವು ಧ್ವನಿ ವ್ಯತ್ಯಾಸಗಳು ಗಮನಾರ್ಹವಾಗಿವೆ.

(i) ತುಳುವಿನ ವಿಶಿಷ್ಟ ಧ್ವನಿಮಾ ‘ಎÈ‘ (Front Low Vowel) ಹವ್ಯಕದಲ್ಲಿ ‘ಎ’ ಕಾರವಾಗಿ ಪರಿವರ್ತನೆ ಹೊಂದಿದೆ.

ಕುಡೆÈ ಕುಡೆ ಬಿಲ
ಕೊಣಲೆÈ ಕೊಣಲೆ ಭತ್ತದ ಗದ್ದೆಯಲ್ಲಿ ಬೆಳೆಯುವ ಒಂದು ಬಗೆಯ ಕಳೆ
ಚೋರೆÈ ಚೋರೆ ಎಳೆಯ ಮಿಡಿ
ಮೊಂಟೆÈ ಮೊಂಟೆ ಮಿಡತೆ
ಸೂಟೆÈ ಸೂಟೆ ತೆಂಗು, ತಾಳೆ ಮೊದಲಾದವುಗಳ ಒಣಗರಿಗಳನ್ನು ಕಟ್ಟಿ ಮಾಡಿದ ಪಂಜು (ಉರಿ)

(ii) ವ್ಯಂಜನಾಂತಗಳು ಉಕಾರಾಂತವಾಗುತ್ತವೆ.

ತುಳು ಹವ್ಯಕ ಕನ್ನಡ ಅರ್ಥ
ಅರ್ಗಂಟ್‌ ಅರ್ಗೆಂಟು ಮೊಂಡುತನ
ಉರುವೆಲ್‌ ಉರವೆಲು ಉಣಿಗೋಲು
ಊಜ್‌ ಊಜ್‌ ಜಿನುಗು
ಕಬರ್‌ ಕಬರು ಕವಲು
ಸಮೆಲ್‌ ಸಮಲು ಹೊರಹರಿಯು

(iii) ಪದವೊಂದರ ಎರಡೇ ಸ್ವರದ ಸ್ಥಾನದಲ್ಲಿ ಬಂದ ಎಕಾರವು ಹೆಚ್ಚಾಗಿ ಅಕಾರವಾಗುವುದು.

ಅಳೆಂಜಿ ಅಳಂಜು ನೀರು ಕಲಕಿದಾಗ ಅದರ ತಳದಿಂದ ಎದ್ದು ನೀರಿನಲ್ಲಿ ಬೆರೆಯುವ ಕೆಸರು, ಕೊಳೆ ಇತ್ಯಾದಿ
ಕರೆಂಚ್‌ ಕರಂಚು ಸೀದುಹೋಗು
ಕಾಚೆಲ್‌ ಕಾಚಲು ಬೇಗೆ
ಕೊಳೆಂಜಿ ಕೊಳಂಜಿ ಸಣ್ಣ ಗದ್ದೆ
ನಾಯೆರ್‌ ನಾಯರು ನೇಗಿಲು
ಪರೆಂಚ್‌ ಪರಂಚು ಗೊಣಗು
ಪೊಜೆಂಕ್‌ ಪೊಜಂಕು ಹಿಸುಕು
ಬಚ್ಚೆಲ್‌ ಬಚ್ಚಲು ಆಯಾಸ
ಸಮೆಲ್‌ ಸಮಲು ಹೊರಹರಿಯು
ಸೀಂತೆಲ್‌ ಸೀಂತಲು ಕೊಳೆತ ವಾಸನೆ

(iv) ಪದಾದಿಯ ಇ > ಎ, ಉ > ಒ ಪರಿವರ್ತನೆ ಕೆಲವೆಡೆಗಳಲ್ಲಿ ಕಂಡುಬರುತ್ತದೆ.

ಕಿದೆ ಕೆದೆ ಹಟ್ಟಿ
ನಿಣೆ ನೆಣೆ ಕಸುಗಾಯಿ
ಕುಬಳ್‌ ಕೊಬಳು ಛಾವಣಿಯ ಮೇಲ್ಭಾಗ
ಕುಬೆ ಕೊಬೆ ತಾಳೆ ಜಾತಿಯ ಮರದ ತುದಿ

(v) ಒಕಾರಾಂತಗಳು ಉ / ಅ ಕಾರಾಂತಗಳಾಗುತ್ತವೆ

ಅಙ್ಙಣೊ ಅಙ್ಙಣ ದೇವಾಲಯದ ಅಂಗಳ
ಉಂಗಿಲೊ ಉಂಗಿಲು ಉಂಗುರ
ಕವಂಗೊ ಕವಂಗ ಪದಾರ್ಥಗಳನ್ನು ಬಡಿಸಲು ಉಪಯೋಗಿಸುವ ಬಾಗಿದ ಹಿಡಿಯುಳ್ಳ ಒಂದು ಬಗೆಯ ಪಾತ್ರೆ
ಚಂಬಾರೊ ಜೆಂಬಾರ ಕೆಲಸ / ಶುಭ ಕಾರ್ಯ
ದಾಸನೊ ದಾಸನ ದಾಸವಾಳ

(vi) ‘ಎಲೆ’ ಎಂಬ ತದ್ಧಿತ ಪ್ರತ್ಯಯವು ‘ಏಲ’ ಎಂದಾಗುವುದು.

ಎಂಗೆಲೆ ಏಂಗೇಲ ಆಸೆಬುರುಕ
ಒಂಗೆಲೆ ಒಂಗೇಲ ಆಸೆಯಿಂದ ಒಂದೇ ಕಡೆಯಲ್ಲಿ ಅತ್ತಿತ್ತ ಅಲೆಯುವವನು
ಬಳ್ಪೆಲೆ ಬುಳ್ಪೇಲ ಅಳುಬುರುಕ

ಗಾದೆಗಳು

ಹವ್ಯಕ ಭಾಷೆಯಲ್ಲಿ ಕೆಲವು ತುಳುಗಾದೆಗಳೂ ಧರಾಳವಾಗಿ ಬಳಕೆಗೊಳ್ಳುತ್ತವೆ.

ಅಡ್ಕದ ಪಂತಿನ್‌ ಒಡ್ಕೊಗ್‌ಪಿರೆಯೊಡು
ಕಂಚೋಳು ಇತ್ತ್ಂಡ ಎಂಚಾಂಡಲಾ ಉಣೊಳಿ
ಕೇಂಕಾಣ್‌ಗ್‌ ಡೀಡ್ಲ ಪೀಂಕಾಣ್‌ಗಾಂಡ್‌
ನಲಿಪ್ಪಿಯರ ನಲಿತ್ತಿತ್ತುವೆನೇ ಜಾಲು ಡೊಂಕಾಂಡೆ
ಬದುಕ್ಕುನ ಬಾಲೆತ ಪೀ ತೂನಾಗ ತೆರಿಯಾಂದ
ಬೇಲೆತ ಕಳುವೆತ್ತಿಗ್‌ ಬಾಲೆತಡ್ಡಿ
ಬಾರ್‌ ಬಲ್ಲಾಳಗ್‌ ದೂರ್‌ ಕುಂಡೇಚಾಗ್‌
ಲಕ್ಕು ಪೀಂಕಾಣ್‌ ನಡುಪ್ಪು ಕಾರ್‌
ರಾಗ ಬನ್ನಾಗ ತಂತಿ ಕಡಿಂಡ್‌

ಕೆಲವೊಂದು ಗಾದೆಗಳನ್ನು ಹವ್ಯಕ ಕನ್ನಡಕ್ಕೆ ಭಾಷಾಂತರಿಸಿ ಬಳಸುವುದುಂಟು.

ತುಳು : ಕಂಜಿ ಪಾಡ್‌ಂಡ ಯಾರಂದ್‌, ನಕ್ಕ್‌ದ್‌ಲ ಗೊಂತು ಬೋಡು
ಹವ್ಯಕ ಕನ್ನಡ : ಕಂಜಿ ಹಾಕಿರೆ ಸಾಲ ನಕ್ಕಿಯೂ ಗೊಂತು ಬೇಕು

ತುಳು : ಕಡಿನೀರ್‌ಕಟ್ಟಗ್‌ಬರಂದ್‌
ಹವ್ಯಕ ಕನ್ನಡ : ಕಡಿದ ನೀರ್‌ಕಟ್ಟಕ್ಕೆ ಬಾರ

ತುಳು : ಕಾಟ್‌ಕೋರಿಗ್‌ಸಂಕ್ರಾಂತಿ ಉಂಡೋ?
ಹವ್ಯಕ ಕನ್ನಡ : ಕಾಟು ಕೋಳಿಗೆ ಶಕ್ರಾಂತಿ ಇದ್ದೋ?

ತುಳು : ಕೋರಿ ಒಕ್ಕುನಿ ತನ ಕಾರಡಿಕೆ
ಹವ್ಯಕ ಕನ್ನಡ : ಕೋಳಿ ಒಕ್ಕುವುದು ತನ್ನ ಕಾಲಡಿಗೇ

ತುಳು ಭಾಷೆಯ ಪದಗಳು ಹವ್ಯಕರ ಆಡುನಿಡಿಗಷ್ಟೇ ಅಲ್ಲ, ವಿರಳವಾಗಿಯಾದರೂ ಜನಪದ ಗೀತೆಗಳೊಳಗೆ ಪ್ರವೇಶಿಸಿರುವುದನ್ನು ಕಾಣಬಹುದು.

ಒಂದ ಕೊಟ್ಟರೆ ದೇವ ಒಂದ ಕೊಡೆನೆಂಬ
ಗೆಂದೆಯ ಹಾಲು ಸೆರಹೊನ್ನು | ಕೊಟ್ಟರೆ
ಗೆಂಡು ಸಂತಾನ ಕೊಡೆನೆಂಬ||

ಈ ತ್ರಿಪದಿಯ ಎರಡನೇ ಸಾಲಲ್ಲಿ ಬರುವ ‘ಗೆಂದೆಯ ಹಾಲು’ ಎಂಬುದು ಗಮನಾರ್ಹ. ಇಲ್ಲಿ ಗೆಂದೆ ಎಂದರೆ ಕಂದು ಬಣ್ಣದ ಹಸು ಎಂದರ್ಥ. ತುಳುವಿನಲ್ಲಿ ಗೆಂದ ಎಂದರೆ ಕಂದು ಬಣ್ಣದ ಹೋರಿ. ಆ ‘ಗೆಂದ’ ಸ್ತ್ರೀಲಿಂಗ ರೂಪವೆ ‘ಗೆಂದೆ’.

ಹವ್ಯಕರಿಗೆ ತುಳುವರೊಂದಿಗೆ ನಿಕಟ ಸಂಪರ್ಕದ ಪಲವಾಗಿ ತುಳು ಭಾಷಾ ಪದಗಳು ಗಣನೀಯ ಪ್ರಮಾಣದಲ್ಲಿ ಹವ್ಯಕ ಕನ್ನಡ ಸ್ವೀಕರಿಸುವಂತಾಗಿದೆ. ಈ ಸ್ವೀಕರಣ ಕಾರ್ಯವು ಮುಖ್ಯವಾಗಿ ದಿನಬಳಕೆಯ ಪದಗಳಿಗೆ ಸಂಬಂಧಿಸಿದಂತೆ ನಡೆದಿದೆ. ವಿರಳವಾಗಿಯಾದರೂ ಙ, ಞ ಎಂಬೆರಡು ಧ್ವನಿಮಾಗಳು ಹವ್ಯಕ ಕನ್ನಡವನ್ನು ಪ್ರವೇಶಿಸಿವೆ. ಗಾದೆಗಳೂ, ನುಡಿಗಟ್ಟುಗಲೂ ಸ್ವೀಕೃತಗೊಂಡಿವೆ. ದೀರ್ಘ ಕಾಲದ ಸಂಪರ್ಕವಿದ್ದರೂ ಹವ್ಯಕ ಕನ್ನಡದ ಪ್ರಭಾವವು ತುಳುವಿನ ಮೇಲೆ ಹೆಚ್ಚು ಬಿದ್ದಂತೆ ತೋರುವುದಿಲ್ಲ. ಇದಕ್ಕೆ ಕಾರಣವುಂಟು. ಹವ್ಯಕ ಕನ್ನಡವು ಆ ಸಮುದಾಯದಲ್ಲಷ್ಟೇ ವ್ಯವಹಾರದಲ್ಲಿರುವುದಾಗಿದೆ. ಇನ್ನೊಂದು ಸಮುದಾಯದೊಂದಿಗೆ ಹವ್ಯಕ ಕನ್ನಡದಲ್ಲಿ ವ್ಯವಹರಿಸುವುದಿಲ್ಲ. ಆದ್ದರಿಂದ ಹವ್ಯಕ ಕನ್ನಡವು ಎಂದೂ ವಿಭಿನ್ನ ಸಮುದಾಯಗಳಲ್ಲಿ ಸಂಪರ್ಕ ಮಾಧ್ಯಮವಾಗಲು ಸಾಧ್ಯವಾಗಿಲ್ಲ.

ಹವ್ಯಕರು ಪ್ರಧಾನವಾಗಿ ನೆಲೆಯೂರಿರುವ ಕೋಳ್ಯೂರು, ಕುಂಬಳೆ, ವಿಟ್ಲ, ಪುತ್ತೂರು ಮತ್ತು ಪಂಜ ಸೀಮೆಯ ಪರಿಸರಗಳಲ್ಲಿ ಬಳಕೆಯಲ್ಲಿರುವ ಸಾಮಾನ್ಯ ತುಳು (common dialect) ವಿನ ಪ್ರಭಾವವನ್ನು ಮಾತ್ರವೇ ಹವ್ಯಕ ಕನ್ನಡದಲ್ಲಿ ಕಾಣಬಹುದಾಗಿದೆ. ಇತರತ್ರ ಕಾಣುವ ತುಳುವಿನ ಇತರ ಉಪಭಾಷಾ ಪ್ರಯೋಗಗಳು ಹವ್ಯಕ ಕನ್ನಡವನ್ನು ಪ್ರವೇಶಿಸಿಲ್ಲ. ಅಂತೆಯೇ ಪಂಜ ಸೀಮೆಯ ಹವ್ಯಕ ಕನ್ನಡದ ಮೇಲೆ ಗೌಡ ಕನ್ನಡದ ಮತ್ತು ಕುಂಬಳೆ ಸೀಮೆಯ ಹವ್ಯಕ ಕನ್ನಡದ ಮೇಲೆ ಮಲೆಯಾಳ ಪ್ರಭಾವವನ್ನು ಕಾಣಬಹುದಾಗಿದೆ. ಕೆಲವು ದೇಶ್ಯ ಪದಗಳು ಆ ಭಾಷೆಗಳ ಮೂಲಕವೂ ಹವ್ಯಕ ಕನ್ನಡವನ್ನು ಪ್ರವೇಶಿಸಿರಲೆಡಯಿದೆ.

ಆಕರಸೂಚಿ

೧. ತುಳುನಾಡು, ೧೯೬೩, ಪಿ. ಗುರುರಾಜ ಭಟ್‌

೨. ತುಳುನಾಡು ಗತವೈಭವ್ : ಉದಯವರ್ಮ ರಾಜ, ೧೯೯೮

೩. ಹವ್ಯಕರ ಶೋಭಾನೆಗಳು : ಟಿ. ಕೇಶವ ಭಟ್ಟ, ೧೯೮೬

೪. ಸಹಸ್ರಾರ್ಧ ತುಳು ಗಾದೆಗಳು : (ಸಂ.) ಶ್ರೀ ಕೃಷ್ಣ ಭಟ್‌ಅರ್ತಿಕಜೆ, ೧೯೮೩

೫. ಹವ್ಯಕ – ಇಂಗ್ಲೀಷ್‌ನಿಘಂಟು : ಎಂ. ಪರಿಯಪ್ಪ ಭಟ್ಟ, ೧೯೮೩

೬. ತುಳು ನಿಘಂಟು (೬ ಸಂಪುಟಗಳು) : ರಾ. ಗೋ. ಪೈ. ಸಂಶೋಧನ ಕೇಂದ್ರ, ಉಡುಪಿ.