ಪ್ರಮುಖ ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳುವಿಗೆ ಈಗ ಸುಮಾರು ಎಪ್ಪತ್ತೈದು ಲಕ್ಷಕ್ಕೂ ಮಿಕ್ಕಿ ಜನ ಆಡುಗರಿದ್ದಾರೆ. ತುಳುವಿಗೆ ತನ್ನದೇ ಆದ ದೀರ್ಘ ಮತ್ತು ವಿಪುಲವಾದ ಸಾಹಿತ್ಯ ಚರಿತ್ರೆಯೇನೂ ಸದ್ಯಕ್ಕೆ ಲಭ್ಯವಿಲ್ಲ. ‘ಶ್ರೀ ಭಾಗವತೊ’, ‘ಕಾವೇರಿ’, ‘ದೇವಿ ಮಹಾತ್ಮೆ’ ಎಂದು ಸಿಕ್ಕುವ ಬೆರಳೆಣಿಕೆಯ ಪ್ರಾಚೀನ ತುಳು ಸಾಹಿತ್ಯ ಕೃತಿಗಳನ್ನು ಬಿಟ್ಟರೆ, ತುಳು ಮುಖ್ಯವಾಗಿ ಜನರ ಆಡುಮಾತಿನಲ್ಲಿಯೇ ತನ್ನ ಅಸ್ತಿತ್ವವನ್ನು ಕಂಡಕೊಂಡ ಒಂದು ಭಾಷೆ. ಇದು ಕಛೇರಿಗಳಲ್ಲಿ ವ್ಯವಹಾರ ಭಾಷೆಯಾಗಿಯೋ, ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವಾಗಿಯೋ ಇನ್ನೂ ಸ್ಥಾನ ಪಡೆದಿಲ್ಲ. ‘ತುಳು ಲಿಪಿ’ ಎಂದೇ ಕರೆಯಲ್ಪಡುವ ಒಂದು ಲಿಪಿಯು ಸಹ ಈಗ ಬಳಕೆದಪ್ಪಿದೆ. ಈಗ ಉಪಲಬ್ಧವಿರುವ ಒಂದು ಶಾಸನ ಹಾಗೂ ಕೆಲವು ಸಾಹಿತ್ಯ ಕೃತಿಗಳು ಈ ಲಿಪಿಯಲ್ಲೇ ಬರೆಯಲ್ಪಟ್ಟಿವೆ. ತುಳು ಬ್ರಾಹ್ಮಣರು ಮಂತ್ರಗಳನ್ನು ಬರೆಯಲು ಈ ಲಿಪಿಯನ್ನೇ ಬಳಸುತ್ತಿದ್ದರಲ್ಲದೆ, ಉಡುಪಿಯ ಅಷ್ಟಮಠದ ಸ್ವಾಮಿಗಳು ಈಗಲೂ ತಮ್ಮ ಸಹಿಯನ್ನು ಈ ಲಿಪಿಯಲ್ಲೇ ಹಾಕುತ್ತಾರೆ. ಸುಮಾರಿಗೆ ಮಲಯಾಳಂ ಲಿಪಿಯನ್ನು ಹೋಲುವ ತುಳು ಲಿಪಿಯು ಈಗ ಬಳಕೆಯಿಂದ ದೂರವಾಗಿ ಅದರ ಸ್ಥಾನವನ್ನು ಕನ್ನಡ ಲಿಪಿಯು ಆಕ್ರಮಿಸಿದೆ.

ಇಂತಹ ಕೆಲವು ಕುಂದುಕೊರತೆಗಳು ತುಳುವಿಗಿದ್ದರೂ ಇದು ಹಲವು ಭಾಷಾವೈವಿಧ್ಯಗಳನ್ನು ಹೊಂದಿರುವ ಒಂದು ಪ್ರಮುಖ ದ್ರಾವಿಡ ಭಾಷೆ ಎಂದು ಪರಿಗಣಿತವಾಗಿದೆ. ಭಾರತದ ಒಂದು ಚಿಕ್ಕ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿದ್ದರೂ ತುಳುವಿನ ಶಬ್ದ ಭಂಡಾರ ವಿಪುಲವಾದುದು. ಲಿಖಿತ ಸಾಹಿತ್ಯ ಭಾಷೆಗಿಂತ ಇದು ಆಡುಮಾತಿನಲ್ಲೇ ಹೆಚ್ಚು ಪ್ರಚುರವಾಗಿರುವ ಕಾರಣ ಇದರಲ್ಲಿ ಅನೇಕ ಭಾಷಾ ಪ್ರಭೇದಗಳುಂಟಾಗಿವೆ. ತುಳುನಾಡೆಂದು ಕರೆಯಲ್ಪಡುವ ತುಳು ಭಾಷೆ ಪ್ರಚಲಿತವಾಗಿರುವ ಪ್ರದೇಶವು ಹಲವಾರು ಗುಡ್ಡಬೆಟ್ಟ, ಕಾಡುಕಣಿವೆ, ಹೊಳೆತೋಡು ಮುಂತಾದ ಪ್ರಾಕೃತಿಕ ಅಡೆತಡೆಗಳನ್ನು ಹೊಂದಿದೆ. ಇದರಿಂದಾಗಿ ಹಿಂದಿನ ಕಾಲದಲ್ಲಿ ತುಳುವರಿಗೆ ಪರಸ್ಪರ ಸಂಪರ್ಕ ಕಷ್ಟಸಾಧ್ಯವಾಗಿ ಹೋದುದರಿಂದ ತುಳುವಿನಲ್ಲಿ ಪ್ರಾದೇಶಿಕ ಪ್ರಭೇದಗಳಿಗೆ ಕಾರಣವಾದ ಪ್ರದೇಶಗಳು ಮುಖ್ಯವಾಗಿ ಐದು :-

೧. ದಕ್ಷಿಣ – ಪಶ್ಚಿಮ : ತುಳುನಾಡಿನ ನೈಋತ್ಯ ಭಾಗವಾದ ಕೇರಳದ ಕಾಸರಗೋಡು ತಾಲೂಕು

೨. ದಕ್ಷಿಣ – ಪೂರ್ವ : ತುಳುನಾಡಿನ ಆಗ್ನೇಯ ಭಾಗವಾದ ಸುಳ್ಯ ತಾಲೂಕು (ಕೊಡಗಿನವರೆಗೆ)

೩. ದಕ್ಷಿಣ – ಮಧ್ಯೆ : ದ.ಕ.ಜಿಲ್ಲೆಯ ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳು

೪. ಉತ್ತರ – ಪಶ್ಚಿಮ : ತುಳುನಾಡಿನ (ಈಗಿನ ದ.ಕ.ಜಿಲ್ಲೆಯ) ವಾಯುವ್ಯ ಭಾಗದಲ್ಲಿರುವ ಮಂಗಳೂರು ಮತ್ತು ಉಡುಪಿ ತಾಲೂಕುಗಳು

೫. ಉತ್ತರ – ಪೂರ್ವ : ತುಳುನಾಡಿನ ಈಶಾನ್ಯ ಭಾಗದಲ್ಲಿರುವ ಕಾರ್ಕಳ ತಾಲೂಕು.

ದಕ್ಷಿಣದಲ್ಲಿ ಮಲಯಾಳವೂ ಉತ್ತರದಲ್ಲಿ ಕನ್ನಡವೂ ತುಳುವಿಗೆ ಗಡಿನಾಡ ಭಾಷೆಗಳಾಗಿವೆ. ತುಳುನಾಡಿನ ಬಹುಭಾಗವೂ ಕರ್ನಾಟಕದಲ್ಲಿ ಒಳಗೊಂಡಿರುವುದರಿಂದ ಮತ್ತು ಇಲ್ಲಿಯ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ ತುಳು ಮಾತೃಭಾಷೆಯ ಹೆಚ್ಚಿನ ಜನರು ಕನ್ನಡದಲ್ಲಿಯೂ ನಿರರ್ಗಳವಾಗಿ ಮಾತನಾಡಬಲ್ಲರು. ಹಾಗೆಯೇ ತುಳುನಾಡಿನ ತೆಂಕತುದಿಯಲ್ಲಿಯ ಗಡಿನಾಡ ಭಾಷೆ ಮಲಯಾಳವಾಗಿರುವುದರಿಂದ ಆ ಪ್ರದೇಶದ ತುಳುವರು ಬಹುಸುಲಭಾವಾಗಿ ಮಲಯಾಳದಲ್ಲೂ ವ್ಯವಹರಿಸಬಲ್ಲರು.

ಭೌಗೋಳಿಕ ಅಥವಾ ಪ್ರಾದೇಶಿಕ ವೈವಿಧ್ಯಗಳೊಂದಿಗೆ ತುಳುವಿನಲ್ಲಿ ಕೆಲವು ಸಾಮಾಜಿಕ ಪ್ರಭೇದಗಳನ್ನೂ ಗುರುತಿಸಬಹುದು. ತುಳುವರಲ್ಲಿ ಬ್ರಾಹ್ಮಣ, ಜೈನ, ಬಂಟ, ಬಿಲ್ಲವ, ಗೌಡ, ಕುಂಬಾರ, ಮೇರ, ಮನ್ಸ, ಹರಿಜನ ಮೊದಲಾದ ಸಾಮಾಜಿಕ ಪ್ರಭೇದಗಳು ಪ್ರಚಲಿತವಾಗಿವೆ. ಹಿಂದಿನ ಕಾಲದಲ್ಲಿ (ಇತ್ತೀಚಿನವರೆಗೂ) ಈ ವರ್ಗಗಳೊಳಗೆ ಬಹಳ ಕಟ್ಟುನಿಟ್ಟಾದ ಸಂಪರ್ಕ ನಿಷೇಧವಿದ್ದುದರಿಂದ ಪರಸ್ಪರ ಒಡನಾಡುವ ಅವಕಾಶವಿರಲಿಲ್ಲ. ಹಾಗಾಗಿ ತುಳುವಿನಲ್ಲಿ ಸಾಮಾಜಿಕ ಪ್ರಭೇದಗಳೂ ಉಂಟಾದವು. ಮಾತ್ರವಲ್ಲದೆ, ಈ ವಿವಿಧ ವರ್ಗಗಳ ಜನರ ಸಾಮಾಜಿಕ ಸಂಸ್ಥೆಗಳು, ವಾಡಿಕೆಗಳು, ಅಭ್ಯಾಸಗಳು, ಸಾಮಾಜಿಕ – ಸಾಂಸ್ಕೃತಿಕ ಕಟ್ಟುಕಟ್ಟಳೆಗಳು, ಧಾರ್ಮಿಕ ಆಚರಣೆಗಳು ಮೊದಲಾದುವೆಲ್ಲ ಸಹಜವಾಗಿ ಅವರ ಆಡುನುಡಿಗಳಲ್ಲಿ ಪ್ರತಿಫಲಿತವಾದುವು. ಪ್ರತಿಯೊಂದು ಸಾಮಾಜಿಕ ವರ್ಗವೂ ಅದರದೇ ಆದ ಭಾಷಾಸ್ಪರ್ಧೆಯನ್ನು ಬೆಳೆಸಿತು.

ತುಳುವಿನಲ್ಲಿ ಹೀಗೆ ಉಂಟಾದ ಹಲವಾರು ಸಾಮಾಜಿಕ ಪ್ರಭೇದಗಳನ್ನು ಸ್ಥೂಲವಾಗಿ ಈ ಕೆಳಗಿನಂತೆ ವರ್ಗೀಕರಿಸಬಹುದು:-

(ಅ) ಬ್ರಾಹ್ಮಣ ತುಳು ಭಾಷಾ ಭೇದ : ಈ ವಿಭಾಗದಲ್ಲಿ ಶಿವಳ್ಳಿ ಹಾಗೂ ಶಿವ (ಸ್ಥಾನಿಕ) ಬ್ರಾಹ್ಮಣರ ಆಡುನುಡಿ ಸೇರುತ್ತದೆ.

(ಆ) ಜೈನ ತುಳು ಭಾಷಾ ಭೇದ : ಇದು ಜೈನರ ಆಡುನುಡಿ.

(ಇ) ಸಾಮಾನ್ಯ ತುಳು ಭಾಷಾಭೇದ : ಈ ಗುಂಪಿನಲ್ಲಿ ಬಂಟ, ಬಿಲ್ಲವ, ಗೌಡ, ಮೊಗವೀರ, ಕುಂಬಾರ ಮತ್ತು ಬೇರೆ ವಿಭಾಗಗಳಲ್ಲಿ ಸೇರದ ಇತರ ವರ್ಗದ ಆಡುನುಡಿಗಳು ಒಳಗೊಳ್ಳುತ್ತವೆ.

(ಈ) ಹರಿಜನ, ಗಿರಿಜನರ ತುಳು ಭಾಷಾಭೇದ : ಮೇರ, ಮನ್ಸ ಮತ್ತಿತರ ಹರಿಜನ ವರ್ಗದವರು ಆಡುನುಡಿಗಳು ಈ ಗುಂಪಿನಲ್ಲಿ ಸೇರುತ್ತವೆ.

ಬ್ರಾಹ್ಮಣ ತುಳು

ತುಳುವನ್ನು ಮಾತೃಭಾಷೆಯಾಗುಳ್ಳ ಬ್ರಾಹ್ಮಣರಲ್ಲಿ (ಶಿವ ಅಥವಾ ಸ್ಥಾನಿಕ ಬ್ರಾಹ್ಮಣರಿಗಿಂತ) ಶಿವಳ್ಳಿ ಬ್ರಾಹ್ಮಣರ ಸಂಖ್ಯೆಯೇ ಅತ್ಯಧಿಕವಾಗಿರುವ ಕಾರಣ, ಬ್ರಾಹ್ಮಣ ತುಳು ಭಾಷಾಭೇದವನ್ನು ‘ಶಿವಳ್ಳಿ ತುಳು’ವೆಂದೂ ಕರೆಯುತ್ತಾರೆ. ಈ ತುಳುವಿನ ಮೇಲೆ ಸಂಸ್ಕೃತದ ಪ್ರಭಾವ ಅತ್ಯಧಿಕವಾಗಿದೆ. ಪರಂಪರಾಗತ ಶಿಕ್ಷಣ ಪದ್ಧತಿ, ಶಾಸ್ತ್ರೋಕ್ತ ಧಾರ್ಮಿಕ ಆಚರಣೆಗಳಲ್ಲಿ ತೊಡಗಿರುವಿಕೆ ಮೊದಲಾದ ಕಾರಣಗಳಿಂದಾಗಿ ಇವರು ತಮ್ಮ ಆಡುನುಡಿಯಲ್ಲಿ ತಮ್ಮದೇ ಆದ ಸಂಸ್ಕೃತ ಶೈಲಿಯೊಂದನ್ನು ಅಭಿವೃದ್ಧಿ ಪಡಿಸುವಂತಾಯಿತು. ಕಟ್ಟುನಿಟ್ಟಿನ ಜಾತಿನಿರ್ಬಂಧಗಳಿಂದಾಗಿ ಇವರ ತುಳು ಪ್ರಭೇದದಲ್ಲಿ ಇನ್ನೊಂದು ವರ್ಗದವರ ತುಳುವಿನ ಅಂಶಗಳು ಮಿಶ್ರಣಗೊಳ್ಳುವುದು ಕಡಿಮೆಯಾಯಿತು.

ಬಹಳ ಗಮನಾರ್ಹ ಪ್ರಮಾಣದಲ್ಲಿ ಸಂಸ್ಕೃತ ಶಬ್ದಗಳು ಈ ತುಳುವಿನಲ್ಲಿ ಯಥಾವತ್ತಾಗಿ ಅಥವಾ ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಉದಾರವಾಗಿ ಬಳಕೆಗೊಳ್ಳುತ್ತಿವೆ. ಉದಾ: ‘ಪೋಸ್ರೊ’ (ಸಂ. ‘ಪ್ರಸ್ತಾಪ’ = ಮೂತ್ರ); ‘ಸೃಷ್ಟಿ / ಷಷ್ಟಿ’ (ಸಂ. ‘ಷಷ್ಠೀ’= ತಿಥಿ; ‘ಶಾರ್ದೊ’ (ಸಂ. ‘ಶ್ರಾದ್ಧ’) ಇತ್ಯಾದಿ. ಕೆಲವೊಮ್ಮೆ ಇತರ ವರ್ಗದವರಿಗೆ ಇವರ ತುಳುವನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗುತ್ತದೆ. ಶಿವಳ್ಳಿಯವರು ತಮ್ಮ ತುಳುವಿನಲ್ಲಿ ಬಳಸುವ ಅನ್ಯಭಾಷೆಯ ಶಬ್ದಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅದರ ಮೂಲರೂಪದಲ್ಲೇ (ಉದಾ : ಸಂಸ್ಕೃತದ ಮಹಾಪ್ರಾಣಾಕ್ಷರಗಳನ್ನು ಅದೇ ರೀತಿಯಲ್ಲಿ) ಉಚ್ಚರಿಸಲು ಪ್ರಜ್ಞಾಪೂರ್ವಕ ಪ್ರಯತ್ನಿಸುತ್ತಾರೆ. ಆದರೆ ಅನೌಪಚಾರಿಕ ಸಂದರ್ಭಗಳಲ್ಲಿ ಈ ಪ್ರಯತ್ನ ಸ್ವಲ್ಪಮಟ್ಟಿಗೆ ಸಡಿಲಾಗಿರುತ್ತದೆಯೆನ್ನಬಹುದು. ಮಾತ್ರವಲ್ಲದೆ, ದೇಶ್ಯ ಶಬ್ದಗಳನ್ನು ಉಚ್ಚರಿಸುವಲ್ಲಿ ಸಹ ಮೂರ್ಧನ್ಯ ಮತ್ತು ಮೂರ್ಧನ್ಯೇತರ (Retroflex and non – retroflex) ಧ್ವನಿಗಳೊಳಗೆ ಸ್ಪಷ್ಟ ವ್ಯತ್ಯಾಸವನ್ನು ಕಾಪಾಡಿಕೊಳ್ಳುತ್ತಾರೆ. ಹೀಗೆ, ಅಸಂಖ್ಯಾತ ಸಂಸ್ಕೃತ ಪದಗಳ ಬಳಕೆ ಲ-ಳ, ನ-ಣ, ಶ-ಷ-ಸಗಳೊಳಗೆ ಸ್ಪಷ್ಟ ವ್ಯತ್ಯಾಸ, ಅಲ್ಪ ಪ್ರಾಣ – ಮಹಾಪ್ರಾಣಗಳ ವ್ಯತ್ಯಾಸ ಇತ್ಯಾದಿಗಳು ಬ್ರಾಹ್ಮಣ (ಶಿವಳ್ಳಿ) ತುಳುವಿನ ಪ್ರಮುಖ ಲಕ್ಷಣಗಳು. ಇದುವರೆಗೆ ಉಪಲಬ್ಧವಾಗಿರುವ ತುಳು ಸಾಹಿತ್ಯ ಕೃತಿಗಳೆಲ್ಲವುಗಳಲ್ಲೂ ತುಳುವಿನ ಈ ಪ್ರಭೇದವೇ (ಅದರಲ್ಲೂ ಮುಖ್ಯವಾಗಿ ತುಳುನಾಡಿನ ದಕ್ಷಿಣ ಭಾಗದ ಬ್ರಾಹ್ಮಣರ ತುಳು ಪ್ರಭೇದವೇ) ಉಪಯೋಗಿಸಲ್ಪಟ್ಟಿರುವುದು ಒಂದು ಗಮನಾರ್ಹ ಸಂಗತಿ.

ಜೈನ ತುಳು

ತೌಲನಿಕವಾಗಿ ಜೈನರ ಸಂಖ್ಯೆ ಕಡಮೆಯಾಗಿರುವುದಾದರೂ ಕೆಲವು ವಿಶಿಷ್ಟ ಲಕ್ಷಣಗಳಿಂದಾಗಿ ಇವರ ತುಳವು ಇತರರ ತುಳುವಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತದೆ. ಇವರು ಜೈನಮತಾವಲಂಬಿಗಳಾಗಿರುವುದರಿಂದ ಅದಕ್ಕೆ ಸಂಬಂಧಪಟ್ಟ ಕೆಲವು ಪಾರಿಭಾಷಿಕ ಪದಗಳು ಇವರ ತುಳುವಿನಲ್ಲಿ ಅನಿವಾರ್ಯವಾಗಿ ಸೇರ್ಪಡೆಗೊಂಡಿವೆ. ಉದಾ: ‘ಪೋಸೊ’ (ರಾತ್ರಿಯಾಗುವ ಮೊದಲು ಸೇವಿಸುವ ಆಹಾರ)ಇತ್ಯಾದಿ. ಅವಲ್ಲದೆ, ಇತರ ವರ್ಗದವರು ತುಳುವಿನಲ್ಲಿ ಬಳಕೆಯಾಗುವ ‘ತ’ ಕಾರ, ‘ಸ’ ಕಾರಾದಿಯಾಗುವ ಕೆಲವು ಪದಗಳ ಆದಿಯ ‘ತ / ಸ’ ಗಳು ಇವರ ತುಳುವಿನಲ್ಲಿ ‘ಹ’ ಕಾರಾದಿಯಾಗಿರುವುದು ಕಂಡುಬರುತ್ತದೆ. ಉದಾ:

ತರೆ ತರೆ ‘ತಲೆ’
ತಿಗಲೆ ಹಿಗಲೆ ‘ಎದೆ’
ತಡ್ಪೆ ಹಡ್ಪೆ ‘ಮೊರ, ಗೆರಸೆ’
ಸಪ್ಪು / ತಪ್ಪು ಹಪ್ಪು ‘ಎಲೆ’
ತಡಮೆ ಹಡಮೆ ‘ತೊಡಂಬೆ, ದಾಟುಬೇಲಿ’
ಸಾರ್ ಹಾರ್ ‘ಚಿಕ್ಕ ತೋಡು’
ಸಾದಿ ಹಾದಿ ‘ದಾರಿ’
ಸಾರಗೆ ಹಾರಗೆ ‘ತೆಂಗಿನಕಾಯಿ’

ಇತ್ಯಾದಿ ಜೈನರಾಡುವ ತುಳುವಿನ ಇಂತಹ ವೈಲಕ್ಷಣಗಳೇ ಈ ಪ್ರಭೇದಕ್ಕೆ ಒಂದು ಪ್ರತ್ಯಕ್ಷ ಸ್ಥಾನವನ್ನು ಕಲ್ಪಿಸಲಿಕ್ಕೆ ಮುಖ್ಯ ಕಾರಣ.

ಸಾಮಾನ್ಯ ತುಳು

ಈ ಪ್ರಭೇದವು ಬಂಟ, ಬಿಲ್ಲವ, ಮೊಗವೀರ, ಗೌಡ, ಕುಂಬಾರ ಮೊದಲಾದ ಐದಾರು ವರ್ಗದವರು ತುಳು ಭಾಷಾಭೇದಗಳ ಒಂದು ಗುಂಪೆಂದು ಪರಿಗಣಿಸಲಾಗಿದೆ. ಈ ವರ್ಗದವರ ಆಡುನುಡಿಗಳೊಳಗೆ ಬಹಳ ಸಾಮ್ಯ ಹಾಗೂ ಸಮಾನ ಲಕ್ಷಣಗಳಿರುವುದರಿಂದ ಅವುಗಳನ್ನೆಲ್ಲ ಒಟ್ಟಾಗಿ ‘ಸಾಮಾನ್ಯ ತುಳು’ ಎಂದು ಪರಿಗಣಿಸಲಾಗಿದೆ. ಸಾರ್ವಜನಿಕ ಭಾಷಣಗಳಲ್ಲಿ ಸಮೂಹ ಮಾಧ್ಯಮಗಳಲ್ಲಿ ಈ ಪ್ರಭೇದವು ಬಹು ಸಾಮಾನ್ಯವಾಗಿ ಬಳಕೆಗೊಳ್ಳುತ್ತಿದೆ. ಅದರಿಂದಾಗಿಯೇ ಇದಕ್ಕೆ ‘ಸಾಮಾನ್ಯ ತುಳು’ ಎಂಬ ನಾಮಧೇಯ. ಈ ಪ್ರಭೇದವು ಅನ್ಯದೇಶ, ಮುಖ್ಯವಾಗಿ ಸಂಸ್ಕೃತ ಪದಗಳನ್ನು ಸ್ವೀಕರಿಸಿದುದು ಬಹಳ ಕಡಮೆ. ಒಂದು ವೇಳೆ ಎರವಲು ಪದಗಳನ್ನು ಬಳಸಬೇಕಾದ ಸಂದರ್ಭ ಬಂದರೆ ಅದನ್ನು ತನ್ನ ಸ್ವಭಾವಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ಸ್ವೀಕರಿಸುವುದು ಈ ತುಳು ಪ್ರಭೇದದ ವೈಶಿಷ್ಟ್ಯ. ಉದಾ: ‘ಕಲ್ಜಿಗೊ’ (ಸಂ. ‘ಕಲಿಯು’); ‘ಆಲ್‌ಂಬವೊ’ (ಸಂ. ‘ಅನುಭವ’); ‘ಸೀಯಾನೊ / ಚೀಯೊನೊ’ (ಕನ್ನಡ; ‘ಸಿಹಿ ಅನ್ನ’ = ಪಾಯಸ) ಇತ್ಯಾದಿ. ಲ-ಳ, ನ-ಣ, ಶ-ಷ-ಸ ಗಳೊಗಿನ ವ್ಯತ್ಯಾಸ ಈ ಪ್ರಭೇದದಲ್ಲಿ ಸ್ವಲ್ಪ ಕಡಿಮೆಯೆನ್ನಬಹುದು. ಆದರೂ ತುಳುನಾಡಿನ ಭಾಗದಲ್ಲಿರುವ ಈ ತುಳು ಪ್ರಭೇದವು ಈ ಧ್ವನಿಗಳೊಳಗೆ ಸ್ವಲ್ಪಮಟ್ಟಿಗೆ ವ್ಯತ್ಯಾಸವನ್ನು ಕಾಯ್ದುಕೊಂಡು ಬಂದಿದೆ.

ತುಳುವಿನ ಅತ್ಯಂತ ಪ್ರಮುಖವಾಗಿರುವ ಬಾಯ್ದೆರೆ ಸಾಹಿತ್ಯವು ರಚನೆಯಾಗಿರುವುದು ಸಾಮಾನ್ಯ ತುಳುವಿನಲ್ಲಿ ತುಳುವಿನಲ್ಲಿ ಎಂಬುದು ಗಮನಾರ್ಹ ಸಂಗತಿ. ಅದೇ ರೀತಿ ತುಳು ಪತ್ರಿಕೆಗಳು, ಬಹ್ವಂಶ ತುಳು ಬರವಣಿಗೆಗಳು, ಕಾದಂಬರಿಗಳು, ನಾಟಕಕೃತಿಗಳು, ಕವಿತೆಗಳು ಮುಂತಾದ ಸಾಹಿತ್ಯ ಪ್ರಕಾರಗಳೆಲ್ಲ ಈ ತುಳುವಿನಲ್ಲಿ ರಚನೆಯಾಗುತ್ತಿರುವುದರಿಂದ ಇದನ್ನು ‘ಸಾಮಾನ್ಯ ತುಳು’ ವೆಂದೇ ಹೆಸರಿಸಿದುದು ಸಾರ್ಥಕ.

ಹರಿಜನ ತುಳು

ಹರಿಜನ ಗಿರಿಜನ ವರ್ಗದವರಿಂದ ಆಡಲ್ಪಡುವ ಆಡುಮಾತು ತುಳುವಿನ ಮತ್ತೊಂದು ಪ್ರಭೇದ. ಈ ವರ್ಗದವರು ತುಳುನಾಡಿನೆಲ್ಲೆಡೆ ಇರುವರಾದರೂ ಉತ್ತರ ಭಾಗದಲ್ಲಿ ನೆಲಸಿರುವವರು ‘ಸಾಮಾನ್ಯ ತುಳು’ವನ್ನೇ ತಮ್ಮ ಆಡುನುಡಿಯಾಗಿ ಸ್ವೀಕರಿಸಿರುವುದರಿಂದ ಅವರ ಸಂಸ್ಕೃತಿಗೆ ವಿಶಿಷ್ಟವಾದ ಕೆಲವು ಪಾರಿಭಾಷಿಕ ಪದಗಳ ಹೊರತಾಗಿ ಬೇರೆ ಗಮನಾರ್ಹ ವ್ಯತ್ಯಾಸವನ್ನು ಕಾಣುವುದು ಅವಶ್ಯಕ. ಆದರೆ ತುಳುನಾಡಿನ ದಕ್ಷಿಣ ಭಾಗದಲ್ಲಿರುವ ಹರಿಜನ ಗಿರಿಜನರು ತಮ್ಮ ತುಳುವಿನಲ್ಲಿ ಗಮನಾರ್ಹವಾದ ವೈಶಿಷ್ಟ್ಯಗಳನ್ನು ಕಾಯ್ದುಕೊಂಡು ಬಂದು ಭಾಷಾ ಪ್ರತ್ಯೇಕತೆಯನ್ನು ಉಳಿಸಿಕೊಂಡಿದ್ದಾರೆ. ಇತರ ಪ್ರಭೇದಗಳ ಕೆಲವು ಪದಗಳ ಅದಿಯಲ್ಲಿರುವ ‘ತ’ ಕಾರ, ‘ಸ’ಕಾರ, ‘ಚ’ಕಾರಗಳ ಸ್ಥಾನದಲ್ಲಿ(ಜೈನ ತುಳುವಿನಲ್ಲಿ ‘ಹ’ಕಾರವಿರುವಂತೆ) ಈ ತುಳು ಪ್ರಭೇದದಲ್ಲಿ ‘ಜ’ಕಾರವು ಕಂಡುಬರುತ್ತದೆ. ಉದಾ:

ತರೆ ಚರೆ ‘ಚರೆ’
ತಡ್ಪೆ ಚಡ್ಪೆ ‘ಗೆರಸೆ, ಮೊರ’
ಸಪ್ಪು / ತಪ್ಪು ಚಪ್ಪು -‘ಸೊಪ್ಪು’
ಸಾದಿ ಚಾದಿ ‘ದಾರಿ’
ಸಮ್ಮಾನೊ ಚಮ್ಮಾನೊ ‘ಸಮ್ಮಾನ, ಔತಣ’
ಬರ್ಸೊ ಬರ್ಚೊ ‘ಮಳೆ’
ಮುಂಡಾಸ್ ಮುಂಡಾಣ್ ‘ಮುಂಡಾಸು’
ಒಣಸ್ ಒಣಚ್ ‘ಊಟ’

-ಇತ್ಯಾದಿ. ಹಾಗೆಯೇ ಈ ವರ್ಗಕ್ಕೆ ಸೇರಿದವರು ನ-ಲಗಳ ಸಹಜ ಧ್ವನಿಗಳೊಂದಿಗೆ ಮೂರ್ಧನಾಕ್ಷರಗಳಾದ ಣ-ಳ ಗಳನ್ನು ಸಹ ಪರ್ಯಾಯವಾಗಿ ಬಳಸುವುದನ್ನು ಕಾಣಬಹುದು. ಉದಾ:

ಎಲ್ಲೆ ಎಳ್ಳೆ ‘ನಾಳೆ’
ಕೋಲೊ ಕೋಳೊ ‘ಭೂತಕೋಲ, ದೈವಗಳ ಆರಾಧನೆ’
ಆನಿ ಆಣಿ ‘ಅಂದು ಆವೊತ್ತೂ’
ಇನಿ ಇಣಿ ‘ಇಂದು, ಇವೊತ್ತು’
ಬಾನೊ ಬಾಣೊ ‘ಬಾನು, ಆಕಾಶ’

-ಇತ್ಯಾದಿ ಈ ಧ್ವನಿ ವ್ಯತ್ಯಾಸಗಳಲ್ಲದೆ ಇವರ ವರ್ಗಕ್ಕೆ ವಿಶಿಷ್ಟವಾಗಿರುವ ಅನೇಕ ಸಾಮಾಜಿಕ-ಸಾಂಸ್ಕೃತಿಕ ಪಾರಿಭಾಷಿಕ ಪದಗಳನ್ನು ಈ ಪ್ರಭೇದದಲ್ಲಿ ಕಾಣಬಹುದು. ಉದಾ:

ದಿಕ್ಕೆ, ಮೇರೆ ಕೊರಗೆ ‘ಗಂಡ’
ದಿಕ್ಕಳ್, ಮೇರ್ತಿ, ಕೊರಪ್ಪೊಳು ‘ಹೆಂಡತಿ’
ಜೇರ್ಕುಳು / ಜೇರ್ಲು ‘ಮಕ್ಕಳು’
ತುಳ್ಳೆಲ್ ‘ಮದುವೆ’
ಬಾಣಾರ್ ‘ಬ್ರಾಹ್ಮಣ ಗಂಡುಸು’
ಬಾಣಾರೆ ದೆತ್ತಿ ‘ಬ್ರಾಹ್ಮಣ ಹೆಂಗುಸು’
ಮುಳ್ಳುಮುಟ್ಟುನೆ ‘ಮೈ ನೆರೆಯುವುದು’

ಇತ್ಯಾದಿ.

ತುಳು ಭಾಷೆ ಎನ್ನವುದು ಹಲವು ಪ್ರಾದೇಶಿಕ ಹಾಗೂ ಸಾಮಾಜಿಕ ಪ್ರಭೇದಗಳ ಒಂದು ಗುಂಪು. ಇದುವರೆಗೆ ತುಳುವಿನ ಬಗ್ಗೆ ಅಧ್ಯಯನ ಮಾಡಿದವರು ಮತ್ತು ಲೇಖನಗಳನ್ನು ಬರೆದವರೆಲ್ಲರೂ ತುಳುವಿನ ಯಾವುದಾದರೂ ಒಂದು ಅಥವಾ ಎರಡು ಪ್ರಭೇದಗಳ ಬಗ್ಗೆ ಅಥವಾ ಒಂದೇ ಪ್ರಭೇದದ ಯಾವುದಾದರೊಂದು ಗುಣವಿಶೇಷದ ಬಗ್ಗೆ ಮಾತ್ರ ಲೇಖನ ಬರೆದಿದ್ದಾರೆ. ಹೀಗಾಗಿ ತುಳುವಿನ ಭೌಗೋಳಿಕ ವ್ಯತ್ಯಾಸಗಳು ಅವರ ಗಮನಕ್ಕೆ ಬಾರದೇ ಹೋಯಿತು. ಅವರು ಎರಡು ಪ್ರಭೇದಗಳನ್ನು ತುಲನೆ ಮಾಡುವಾಗ ಭೌಗೋಳಿಕ ಅಂಶಗಳನ್ನು ಪರಿಗಣಿಸದೆ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ (ಸಾಮಾನ್ಯ) ಎಂಬ ಸಾಮಾಜಿಕ ತುಳು ಪ್ರಭೇದಗಳನ್ನು ಮಾತ್ರ ಆಯ್ದುಕೊಂಡು ಅಧ್ಯಯನ ಮಾಡಿದುದರಿಂದ, ತುಳುವಿನಲ್ಲಿ ಕೇವಲ ಎರಡೇ ಪ್ರಭೇದಗಳು (ಅದು ಸಾಮಾಜಿಕ ನೆಲೆಯಲ್ಲಿ ಮಾತ್ರ) ಇವೆ ಎಂಬ ತೀರ್ಮಾನಕ್ಕೆ ಬರುವಂತಾಯಿತು. ಎಂದರೆ, ಇದುವರೆಗೆ ತುಳುವಿನ ಪ್ರಭೇದಗಳ ಅಥವಾ ಉಪಭಾಷೆಗಳ ಕುರಿತಾಗಿ ಮಾತನಾಡುವಾಗ ಎಲ್ಲರೂ ತುಳುವಿನಲ್ಲಿ ಬ್ರಾಹ್ಮಣ ಮತ್ತು ಸಾಮಾನ್ಯ ಎಂಬುದಾಗಿ ಎರಡೇ ಬಗೆಯಿವೆ ಎಂದು ಹೇಳುತ್ತಿದ್ದರು. (ಈಗಲೂ ಸಹ ಕೆಲವರು ಈ ನಂಬಿಕೆಯಿಂದ ಹೊರಬಂದಿಲ್ಲವೆಂಬುದನ್ನು ಧಾರಾಳವಾಗಿ ಹೇಳಬಹುದು) ಪರಿಣಾಮವಾಗಿ, ಅಂತಹವರ ಸಂಶೋಧನ ಲೇಖನವು ಅಪೂರ್ಣವಾಗಿ ಹೋಯಿತು.

ಈ ಪರಿಸ್ಥಿತಿಯನ್ನು ಹೋಗಲಾಡಿಸಲಿಕ್ಕಾಗಿ ತುಳುವಿನ ಎಲ್ಲ ಪ್ರಭೇದಗಳ ಮತ್ತು ಗುಣವಿಶೇಷಗಳ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಸಿಕ್ಕುವಂತೆ ಮಾಡುವ ಅವಶ್ಯಕತೆ ಇದೆ ಮತ್ತು ಹೀಗೆ ಮಾಡಿದರೆ ತೌಲನಿಕ ಭಾಷಾವಿಜ್ಞಾನಕ್ಕೆ ತೌಲನಿಕ ವ್ಯಾಕರಣಕ್ಕೆ ಮತ್ತು ಒಂದು ಭಾಷೆಯ (ಪ್ರಕೃತ ತುಳುವಿನ) ಮೂಲರೂಪದ ಪುನರ್ರ‍ಚನೆಗೆ ಇಂತಹ ಒಂದು ಸಮಗ್ರ ಚಿತ್ರಣ ತುಂಬಾ ಪ್ರಯೋಜನಕಾರಿ. ಈ ಘನ ಉದ್ದೇಶವನ್ನಿಟ್ಟುಕೊಂಡು, ತುಳುವಿನ ವಿವಿಧ ಪ್ರಭೇದಗಳ ಬಗ್ಗೆ ಒಂದು ಬಹುವಿಸ್ತೃತವಾದ ಅಧ್ಯಯನ ಕೈಗೊಳ್ಳಲಾಯಿತು. ‘A comparative study of Tulu dialects’ ಎನ್ನುವ ಮಹಾಪ್ರಬಂಧವು ಅಂತಹ ಒಂದು ಅಧ್ಯಯನದ ಫಲಶ್ರುತಿ.

ಮೇಲೆ ತಿಳಿಸಿರುವಂತೆ ತುಳುವು ಪ್ರಾದೇಶಿಕ ಮತ್ತು ಸಾಮಾಜಿಕ ಪ್ರಭೇದಗಳ ಒಂದು ಒಗ್ಗಟ್ಟು ಅಥವಾ ಮೊತ್ತ. ಆ ಭಾಷೆಯ ಒಂದು ಸಮಗ್ರ ಚಿತ್ರಣ ಸಿಕ್ಕಬೇಕಾದರೆ ಅದರೆಲ್ಲ ಪ್ರಭೇದಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಮೇಲೆ ಹೇಳಿದ ಮಹಾಪ್ರಬಂಧದ ಆಧಾರದಲ್ಲಿ ತುಳುವಿನ ವಿಸ್ತೃತ ಅಧ್ಯಯನದ ಕಾಣಿಕೆಯನ್ನು ಬಹಳ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ಕೊಡುವ ಒಂದು ಪ್ರಯತ್ನವಿದೆ.

ಪ್ರಸ್ತುತ ಅಧ್ಯಯನಕ್ಕೆ ತುಳು ಭಾಷೆ ಪ್ರಚಲಿತವಾಗಿರುವ ಪ್ರಾದೇಶಿಕ ವಿಭಾಗಗಳಾದ ‘ದಕ್ಷಿಣ-ಪಶ್ಚಿಮ’, ‘ದಕ್ಷಿಣ-ಮಧ್ಯ’, ‘ದಕ್ಷಿಣ-ಪೂರ್ವ’, ‘ಉತ್ತರ-ಪಶ್ಚಿಮ’, ‘ಉತ್ತರ-ಪೂರ್ವ’ ಎಂದು ಸಂಪೂರ್ಣ ಪ್ರದೇಶವನ್ನು (ಎಂದರೆ ಅಖಂಡ ತುಳುನಾಡನ್ನು) ಗಣನೆಗೆ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ, ‘ದಕ್ಷಿಣ-ಪಶ್ಚಿಮ’, ‘ದಕ್ಷಿಣ-ಪೂರ್ವ’ಗಳದು ಒಂದು ಗುಂಪು; ‘ಉತ್ತರ – ಪಶ್ಚಿಮ’ ಮತ್ತು ‘ಉತ್ತರ – ಪೂರ್ವ’ಗಳದು ಮತ್ತೊಂದು ಗುಂಪು. ಮೊದಲ ಗುಂಪನ್ನು’ದ’ ಎನ್ನುವ ಸಂಕೇತಾಕ್ಷರದಿಂದಲೂ ಎರಡನೆಯ ಗುಂಪನ್ನು ‘ಉ’ ಎನ್ನುವ ಸಂಕೇತಾಕ್ಷರದಿಂದಲೂ ಗುರುತಿಸಲಾಗಿದೆ. (ಈ ಲೇಖನ ಪೂರ್ತಿ ದಕ್ಷಿಣ ಹಾಗೂ ಉತ್ತರದ ತುಳುವಿನ ಭಾಷಾ ಸಮೂಹವನ್ನು ಸೂಚಿಸಲು ಕ್ರಮವಾಗಿ ಈ ಎರಡು ಸಂಕೇತಾಕ್ಷರಗಳನ್ನು ಬಳಸಿದೆ.) ಈ ಎರಡು ಪ್ರಮುಖ ಪ್ರಾದೇಶಿಕ ವಿಭಾಗಗಳಲ್ಲೂ ಬಹು ಪ್ರಮುಖವಾಗಿರುವ ಎರಡು ಭಾಷಾ ಪ್ರಭೇದಗಳಾದ ‘ಬ್ರಾಹ್ಮಣ ತುಳು’ ಹಾಗೂ ‘ಸಾಮಾನ್ಯ ತುಳು’ಗಳನ್ನು ಅಧ್ಯಯನಕ್ಕೆ ಆರಿಸಲಾಗಿದೆ. ಇವುಗಳಿಗೆ ಕ್ರಮವಾಗಿ ‘ಬ್ರಾ. ತು’ಹಾಗೂ ‘ಸಾ. ತು.’ಎನ್ನುವ ಸಂಕೇತಾಕ್ಷರಗಳನ್ನು ಕೊಟ್ಟಿದೆ. ‘ಸಾ.ತು’ ಎನ್ನುವುದು ಬ್ರಾಹ್ಮಣೇತರ ಪ್ರಭೇದಗಳೆಲ್ಲವನ್ನೂ ಪ್ರತಿನಿಧಿಸುವಂತಹದು. ಈ ಕೆಳಗಿನಂತೆ, ಪ್ರಭೇದಸೂಚಕ ಸಂಕೇತಾಕ್ಷರಗಳ ಜೋಡಿಯನ್ನು ಉಪಯೋಗಿಸಲಾಗಿದೆ;

ದ. ಬ್ರಾತು : ತುಳುನಾಡಿನ ದಕ್ಷಿಣ ಭಾಗದ ಎಂದರೆ ‘ದಕ್ಷಿಣ – ಪಶ್ಚಿಮ’, ‘ದಕ್ಷಿಣ -ಮಧ್ಯ’, ‘ದಕ್ಷಿಣ – ಪೂರ್ವ’ ಪ್ರದೇಶಗಳ ಬ್ರಾಹ್ಮಣ ತುಳು ಪ್ರಭೇದ.

ದ. ಸಾತು : ತುಳುನಾಡಿನ ಉತ್ತರ ಭಾಗದ ಎಂದರೆ ‘ಉತ್ತರ – ಪಶ್ಚಿಮ’, ‘ಉತ್ತರ – ಪೂರ್ವ’, ಪ್ರದೇಶಗಳ ಬ್ರಾಹ್ಮಣ ತುಳು ಪ್ರಭೇದ.

ಉ. ಸಾ.ತು : ತುಳುನಾಡಿನ ಉತ್ತರ ಭಾಗದ ಎಂದರೆ, ‘ಉತ್ತರ – ಪಶ್ಚಿಮ’, ‘ಉತ್ತರ – ಪೂರ್ವ’ ಪ್ರದೇಶಗಳ ಸಾಮಾನ್ಯ (ಬ್ರಾಹ್ಮಣೇತರ) ತುಳು ಪ್ರಭೇದ.

ಈ ಮೇಲೆ ತಿಳಿಸಿದ ಐದು ಪ್ರಾದೇಶಿಕ ವಿಭಾಗಗಳಲ್ಲಿ ವಿಸ್ತೃತವಾದ ಕ್ಷೇತ್ರಕಾರ್ಯ ನಡೆಸಿ ಬೇರೆ ಬೇರೆ ಸಾಮಾಜಿಕ ಸ್ತರಗಳಿಗೆ ಸೇರಿದ ತುಳು ಆಡುಮಾತಿನ ಜನರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಪ್ರಸ್ತುತ ಅಧ್ಯಯನವನ್ನು ಕೈಗೊಳ್ಳಲಾಗಿದೆ.

ಇದುವರೆಗೆ ತುಳುವಿನ ಮೇಲೆ ಅಧ್ಯಯನನ್ನು ನಡೆಸಿದ ವಿದ್ವಾಂಸರು ಬ್ರಾಹ್ಮಣ ತುಳು ಮತ್ತು ಬ್ರಾಹ್ಮಣೇತರ ತುಳು ಎಂಬವು ಮಾತ್ರ ತುಳುವಿನ ಎರಡು ಮುಖ್ಯ ಪ್ರಭೇದಗಳು ಎಂಬ ಭಾವನೆಯಲ್ಲಿದ್ದರು. ಸಾಮಾನ್ಯ ಜನರು ಸಹ ಈ ಅಭಿಪ್ರಾಯವನ್ನೇ ಹೊಂದಿದ್ದಾರೆ. ತಮ್ಮ ವಾದವನ್ನು ಪುಷ್ಟೀಕರಿಸಲು ಅವರು ಈ ಕೆಳಗಿನ ಉದಾಹರಣೆಗಳನ್ನು ಕೊಡುತ್ತಾರೆ :

೧. ಬ್ರಾ.ತುವಿನ ‘ಣ’ – ‘ಳ’ ಧ್ವನಿಗಳು ಸಾ.ತುವಿನಲ್ಲಿ ‘ನ’ – ‘ಲ’ ಗಳಾಗಿ ಕಂಡುಬರುತ್ತದೆ. ಉದಾ :

ಆಣಿ ಆನಿ ‘ಮೊಳೆ, ಆಣಿ’
ಪಣ್ ಪನ್ ‘ಹೇಳು’
ಅಳೆ ಅಲೆ ‘ಮಜ್ಜಿಗೆ’
ಬಳ್ಳ್ ಬಲ್ಲ್ ‘ಹಗ್ಗ’ ಇತ್ಯಾದಿ

೨. ಬ್ರಾ.ತುವಿನ ‘ಎ’ಕಾರ ‘ಒ’ಕಾರಗಳು ಸಾ.ತುವಿನಲ್ಲಿ ‘ಇ’ ಕಾರ ‘ಒ’ಕಾರಗಳಾಗಿ ಕಂಡುಬರುತ್ತದೆ.

ನೆಲ ನಿಲ ‘ನೆಲ’
ಕೆಳೆಂಗ್ ಕಿರೆಂಗ್ ‘ಗೆಣಸು’
ಪೊಸತ್ತ್ ಪುಸತ್ತ್ ‘ಪೊಸತು’ ಇತ್ಯಾದಿ

೩. ಬ್ರಾ.ತು.ವಿನ ಸ್ವರಾದಿಯಾದ ಪದಗಳ ಆದಿಸ್ವರವು ಸಾ.ತು.ವಿನಲ್ಲಿ ಲೋಪವಾಗುತ್ತದೆ. ಉದಾ:

ಅಡಕ್ಕ್ ದಕ್ಕ್ ‘ಎಸೆಯು, ಬಿಸಾಡು’
ಅಡಪ್ಪು ದಪ್ಪು ‘ಉಳು’
ಒಳಚ್ಚಿಲ್ ಲಚ್ಚಿಲ್ ‘ಹಿತ್ತಿಲು’
ಅಳಪ್ಪು ಲಪ್ಪು ‘ಅಳೆಯು’ ಇತ್ಯಾದಿ

೪. ಬ್ರಾ.ತು.ವಿನ ಅಶನ, ಪುರುಷೆ, ರಾಮಣಿ, ಕಸ್ತಲೆ, ಬಳಿ, ಪೊಳ್ತು, ಪಾಪು, ಬೋತ್ರಿ ಮುಂತಾದ ಇತರ ಹಲವಾರು ಪದಗಳಿಗೆ ಪರ್ಯಾಯವಾಗಿ ಸಾ.ತುವಿನಲ್ಲಿ (ಕ್ರಮವಾಗಿ ಉನಸ್, ಕಂಡನಿ, ಕತ್ತಲೆ, ಬರಿ, ಪೊರ್ತು, ಯಾರು / ಯಾವು, ಬೊಡ್ಚಿ, ಮುಂತಾದ ರೂಪಗಳಿರುವುದು – ಇತ್ಯಾದಿ

ಹೌದು, ಇಂತಹ ಅನೇಕ ವ್ಯತ್ಯಾಸಗಳು ಈ ಎರಡು ಪ್ರಭೇದಗಳೊಳಗೆ ಇರುವುದು ನಿಜ. ಆದರೆ ಪ್ರಸ್ತುತ ಅಧ್ಯಯನವು ಈ ಬಗ್ಗೆ ಬೇರೆಯೇ ಆದ ಹೊಸತೊಂದು ಬೆಳಕನ್ನು ಚೆಲ್ಲಿ ಈ ನಿಟ್ಟಿನಲ್ಲಿ ಭಾಷಾ ಪ್ರಭೇದಗಳ ಪುನರ್ವಿಭಾಗೀಕರಣದ ಅವಶ್ಯಕತೆಗೆ ಸಾಕಷ್ಟು ಪುರಾವೆಗಳನ್ನೊದಗಿಸುತ್ತದೆ. ತುಳುನಾಡಿನ ಶಿವಳ್ಳಿ ಬ್ರಾಹ್ಮಣರೆಲ್ಲ ತುಳು ಮಾತೃಭಾಷೆಯವರೇ ಆಗಿರುವರಾದರೂ ದಕ್ಷಿಣ ಭಾಗದ ಬ್ರಾಹ್ಮಣ (ದ.ಬ್ರಾ) ಹಾಗೂ ಉತ್ತರ ಭಾಗದ ಬ್ರಾಹ್ಮಣ (ಉ.ಭಾ)ರ ತುಳು ಪ್ರಭೇದಗಳಲ್ಲಿ ಗಮನಾರ್ಹವಾದ ವ್ಯತ್ಯಾಸಗಳಿರುವುದನ್ನು ಪ್ರಸ್ತುತ ಅಧ್ಯಯನವು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಹಾಗೆಯೇ, ದಕ್ಷಿಣದ ಸಾಮಾನ್ಯ (ದ.ಸಾ.) ಮತ್ತು ಉತ್ತರದ (ಉ.ಸಾ) ತುಳು ಪ್ರಭೇದಗಳ ನಡೆವೆಯೂ ವಿಪುಲವಾದ ವ್ಯತ್ಯಾಸಗಳಿವೆ. ಹಲವಾರು ಅಂಶಗಳಲ್ಲಿ ಉತ್ತರ ಬ್ರಾಹ್ಮಣ ತುಳು (ಉ.ಬ್ರಾ.ತು) ಪ್ರಭೇದವು ದಕ್ಷಿಣ ಭಾಗದ ತುಳು ಪ್ರಭೇದಗಳ ಗುಂಪಿನೊಡನೆ ಸೇರಿ ಉತ್ತರದ ಸಾಮಾನ್ಯ ತುಳು (ಉ.ಸಾ.ತು)ವನ್ನು ಪ್ರತ್ಯೇಕ ಗುಂಪನ್ನಾಗಿ ಮಾಡುತ್ತದೆ. ಉದಾ:

ದ.ಬ್ರಾ.ತು.ದ.ಸಾ.ತು.ಉ.ಬ್ರಾ.ತು ಉ.ಸಾ.ತು ಅರ್ಥ
ಕೂಳಿ ಕೂಲಿ ‘ಹಲ್ಲು’
ಬಳ್ಳ್ ಬಲ್ಲ್ ‘ಹಗ್ಗ’
ಅಡಕ್ಕ್‌ / ಅಡಕ್ ದಕ್ಕ್ ಎಸೆಯು, ಬಿಸಾಡು
ನೆಲ ನಿಲ ‘ನೆಲ’
ಕೆಲೆಂಜಿ ಕಿಲೆಂಜಿ ‘ನೊಣ’

-ಇತ್ಯಾದಿ. ಹಲವು ಅಂಶಗಳಲ್ಲಿ ದ.ಬ್ರಾ. ತು. ಪ್ರಭೇದವು ಸಜಾತೀಯವಾದ ಉ.ಬ್ರಾ.ತು ಪ್ರಭೇದದಿಂದ ದೂರಸರಿದು ದ.ಸಾ.ತು ಹಾಗೂ ಉ.ಸಾ.ತು ಪ್ರಭೇದಗಳೊಂದಿಗೆ ಸೇರುತ್ತದೆ. ಉದಾ:

ದ.ಬ್ರಾ.ತು. ದ.ಸಾ.ತು. ಉ.ಸಾ.ತು.ಉ.ಬ್ರಾ.ತು. ‘ಅರ್ಥ’
ಒಣಸ್
[ಉನಸ್ (ಉ.ಸಾ.ತು)] ಅಶನ
‘ಊಟ’
ಪೊರ್ತ್‌ ಪೊಳ್ತು ‘ಹೊತ್ತು, ಸಮಯ’
ಬರಿ ಬಳಿ ‘ಬಳಿ, ಹತ್ತಿರ, ಸಮೀಪ’

-ಇತ್ಯಾದಿ. ಬೇರೆ ಕೆಲವು ಅಂಶಗಳಲ್ಲಿ ಉ.ಬ್ರಾ.ತುವು ದ.ಸಾ.ತು.ಗಳೊಂದಿಗೆ ಸೇರಿ ದ.ಬ್ರಾ.ತುವನ್ನು ಒಂಟಿಯಾಗಿಸುತ್ತದೆ. ಉದಾ:

ದ.ಬ್ರಾ.ತು ಉ.ಬ್ರಾ.ತು.ದ.ಸಾ.ತು. ಉ.ಸಾ.ತು. ‘ಅರ್ಥ’
ಕುಳ್ಪು ಕುಳ್ಳ್‌ / ಕುಳ್ಳು ಕುಳಿತುಕೊಳ್ಳು’
ಇಂಡ್ ಉಂಡ್ ‘ಉಂಟು, ಇದೆ’

– ಇತ್ಯಾದಿ. ಇವುಗಳ ಜೊತೆಗೆ ಅನೇಕ ವಿಷಯಗಳು ಮತ್ತು ಉದಾಹರಣೆಗಳು ದಕ್ಷಿಣೋತ್ತರ ಬ್ರಾಹ್ಮಣ ತುಳು ಪ್ರಭೇದಗಳು ಒಂದು, ದಕ್ಷಿಣೋತ್ತರ ಸಾಮಾನ್ಯ ತುಳು ಪ್ರಭೇದಗಳು ಒಂದು ಎಂಬುದಾಗಿ ಪರಿಗಣಿಸುವುದಕ್ಕೆ ವಿರುದ್ಧವಾಗಿ, ದ.ಬ್ರಾ.ತು.ಹಾಗೂ ದ.ಸಾ.ತು. ಪ್ರಭೇದಗಳನ್ನು ಒಂದುಗೂಡಿಸಿ ಉ.ಬ್ರಾ.ತು ಪ್ರಭೇದಗಳನ್ನು ಪ್ರತ್ಯೇಕವಾದೊಂದು ಗುಂಪಾಗಿ ಮಾಡುತ್ತವೆ. ಈ ಹೊಸ ವರ್ಗೀಕರಣಕ್ಕೆ ಆಧಾರವಾಗಿರುವ ಕಾರಣಗಳು ಮತ್ತು ಉದಾಹರಣೆಗಳಲ್ಲಿ ಕೆಲವನ್ನು ಈ ಕೆಳಗಿನಂತೆ ಕೊಡಬಹುದು:

೧. (ಕೆಲವು ನಾಮಪದಗಳು ಹೊರತಾಗಿ) ಉ.ಬ್ರಾ.ತು. ಹಾಗೂ ಉ.ಸಾ.ತು. ಪ್ರಭೇದಗಳ ಅಕಾರಾಂತವಾದ ನಾಮಪದಗಳ ಅಂತ್ಯಸ್ವರ (‘ಅ’ಕಾರ) ವು ‘ಒ’ಕಾರವಾಗಿ ಪರಿವರ್ತನೆಗೊಂಡಿರುವುದು ಕಂಡುಬರುತ್ತದೆ. ಉದಾ. :

ಕಂಡ ಕಂಡೊ ‘ಗದ್ದೆ’
ದೀಪ ದಿಪೊ ‘ದೀಪ’
ತೋಟ ತೋಟೊ ‘ತೋಟ’
ಕಂಬ ಕಂಬೊ ‘ಕಂಬ’-ಇತ್ಯಾದಿ

೨. ದ.ಬ್ರಾ.ತು ಹಾಗೂ ದ.ಸಾ.ತು. ಪ್ರಭೇದಗಳ ಷಷ್ಠೀ ವಿಭಕ್ತಿ ಪ್ರತ್ಯಯ ‘ಆ’ಕಾರವು ಉ.ಬ್ರಾ.ತು. ಮತ್ತು ಉ.ಸಾ.ತು ಪ್ರಭೇದಗಳಲ್ಲಿ ‘ಹಿ’ ಕಾರವಾಗಿರುವುದು ಕಂಡುಬರುತ್ತದೆ. ಉದಾ:

ತುಳುತ್ತ ಬೇಲೆ ತುಳುತೊ ಬೇಲೆ ‘ತುಳುವಿನ ಕೆಲಸ’
ಮರತ್ತ ಕಾರ್ ಮರತೊ ಕಾರ್ ‘ಮರದ ಕಾಲು’
ಆಯನ ಮಗೆ ಆಯೊನೊ ಮಗೆ ‘ಆತನ ಮಗ’-ಇತ್ಯಾದಿ

೩. ದ.ಬ್ರಾ.ತು. ಮತ್ತು ದ.ಸಾ.ತು. ಗಳು ವಿಭಕ್ತಿ ಪ್ರತ್ಯಯಗಳು, ಭೂತಕೃದಂತ ಪ್ರತ್ಯಯಗಳು, ಸಂಬಂಧಸೂಚಕ ಕೃದಂತ ಪ್ರತ್ಯಯಗಳು ಮೊದಲಾದವುಗಳಲ್ಲಿರುವ ಅಘೋಷ ವ್ಯಂಜನಗಳು ಉ.ಬ್ರಾ.ತು ಮತ್ತು ಉ.ಸಾ.ತು ಪ್ರಭೇದಗಳಲ್ಲಿ ಘೋಷ ವ್ಯಂಜನಗಳಾಗಿ ಕಂಡುಬರುತ್ತದೆ. ಉದಾ:

ರಾಮಟ ರಾಮಡ ‘ರಾಮನೊಡನೆ’
ಕಾರ್‌ಟ್‌ ಕಾರ್‌ಡ್ ‘ಕಾಲಿನಲ್ಲಿ’
ನೀರ್‌ಟ್ ನೀರ್‌ಡ ‘ನೀರಿನಲ್ಲಿ’
ಪೋಂಟ ಪೋಂಡ ‘ಹೋದರೆ’
ಅಂಟ ಅಂಡ ‘ಆದರೆ’-ಇತ್ಯಾದಿ

೪. ಇದುವರೆಗೆ ಗ್ರಹಿಸಲಾಗಿದ್ದಂತೆ ಆದಿಸ್ವರ ಲೋಪವು ಬ್ರಾಹ್ಮಣೇತರ ತುಳುವಿನ ಸಾಮಾನ್ಯ ಲಕ್ಷಣವೆಂಬುದು ಸರಿಯಲ್ಲ. ಅದು ಉ.ಸಾ.ತು. ಪ್ರಭೇದಕ್ಕೆ ಮಾತ್ರ ಸೀಮಿತ. ಉದಾ:

ಅಡಕ್ಕ್ ದಕ್ಕ್ ‘ಎಸೆಯು, ಬಿಸಾಡು’
ಅಡಪ್ಪು ದಪ್ಪು ‘ಉಳು’
ಅಳಪ್ಪು ಲಪ್ಪು ‘ಅಳೆಯು’-ಇತ್ಯಾದಿ

೫. ಇವುಗಳೊಂದಿಗೆ, ದಕ್ಷಿಣ – ಉತ್ತರ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತೋರಿಸುವ ಸ್ವತಂತ್ರ ಶಾಬ್ದಿಕ ನೆಲೆಯಲ್ಲಿಯೂ ವಿಪುಲ ಸಂಖ್ಯೆಯ ಉದಾಹರಣೆಗಳು ಸಿಕ್ಕುತ್ತವೆ. ಉದಾ :

ದ.ತು ಉ.ತು. ಅರ್ಥ
ಉರಿ ಸಬುಳು / ತಬುರು ‘ಕೆಂಪಿರುವೆ’
ಬಡತ್ತ್ ಮಿತ್ತ್‌ಪೊ / ಮಿತ್ತಾ ‘ಹತ್ತು, ಮೇಲೇರು’
ಓಡ್ ಒಡಿಲ್ ‘ಹೆಂಚು’
ಕೆತ್ತಿ ತೆತ್ತಿ ‘ಮೊಟ್ಟೆ’
ಕಾಂಟ್ಯ ಪುಡಾಯಿ ‘ದೊಡ್ಡ ಬುಟ್ಟಿ’
ಕಯ್ಪೆ ಕಯ್ಕೆ ‘ಕಹಿ’
ಕೊಟ್ಟ್ ಕೊಟ್ಟೆ ‘ಹಾರೆ, ಗುದ್ದಲಿ’
ಓಟೆ ಓಂಟೆ ‘ಓಟೆಬಿದಿರು’
ತೊಟ್ಟೆ / ಚೊಟ್ಟೆ ಪಣೆ ‘ಏತ’
ಓಳ್ಳೆ ದರ ‘ಚಿಕ್ಕ ಕಣಿವೆ’ – ಇತ್ಯಾದಿ

ಇದರ ಜೊರೆಗೆ ಈ ಹೊಸ ವಿಂಗಡಣೆಗೆ ಸಹಾಯಕವೆಂಬಂತೆ ಒಂದು ನಿರ್ದಿಷ್ಟ ಅಭಿಪ್ರಾಯವನ್ನು ವ್ಯಕ್ತಿಪಡಿಸಲು ಹೇಗೆ ಬೇರೆ ಬೇರೆ ಪ್ರಭೇದಗಳು ಬೇರೆ ಬೇರೆ ಶಬ್ಧ ರೂಪಗಳನ್ನು ಉಪಯೋಗಿಸುತ್ತವೆ ಎಂಬುದನ್ನು ವಾಕ್ಯರೂಪದಲ್ಲಿ ಈ ಕೆಳಗಿನಂತೆ ಕೊಡಬಹುದು:

೧. ದ.ಬ್ರಾ. ಆಕ್ಳೆಗ್ ಮದಿಮಾಯೆ ಬುಡೆತ್ತಿಗೇ ಸಮೊ ಇದ್ದಿ
ದ.ಸಾ ಆಕ್‌ಳೆಗ್‌ಕಂಡಾಣಿ ಬುಡೆದಿಗೆ ಸಮೊ ಇದ್ದಿ
ಉ.ಬ್ರಾ ಆಕ್ಳೆಗ್ ಪುರುಷೆ ರಾಮ್ಮಣಿಗೇ ಸಮ ಇದ್ದಿ
ಉ.ಸಾ. ಅಕಲೆಗ್ ಕಂಡನೆ ಬೊಡೆದಿಗೇ ಸಮ ಇಜ್ಜಿ.
‘ಅವರಿಗೆ, ಗಂಡ ಹೆಂಡತಿಗೆ ಸಮ ಇಲ್ಲ’ (ಅವರು ಸಾಮರಸ್ಯದಿಂದಿಲ್ಲ)
೨. ದ.ಬ್ರಾ. ಕಮುಕ್ಕ್ ಬಡತ್ಯರ ತೀರಂತ್ನಾಯಗ್ ಕಾಯಿಕೊಯ್ಯರೆ ತೀರ್ವಾ?
ದ.ಸಾ. ಕಮುಕ್ಕ್ / ಕಂಗ್‌ಗ್‌ಬಡತ್ಯರ ತೀರಂತ್ನಾಯೆಗ್‌ಬಜ್ಜೆಯಿ ಕೊಯ್ಯರೆ ತೀರ್ವಾ?
ಉ.ಬ್ರಾ ಕಂಗ್‌ಗ್‌ಮಿತ್ತೋವರೆ ತೀರಂತ್ನಾಯಗ್ ಕಾಯಿ ಕೊಯ್ಯರೆ ತೀರಾ?
ಉ.ಸಾ ಕಂಗ್‌ಗ್‌ಮಿತೆರ್ಯರೆ ತೀರಂದಿನಾಯಗ್ ಬಜ್ಜೆಯಿ ಕೊಯ್ಯರೆ ತೀರಾ / ‘ಕಂಗಿಗೆ ಹತ್ತಲು (ಏರಲು) ತಿಳಿಯದವನಿಗೆ ಅಡಕೆ ಕೀಳಲು ಸಾಧ್ಯವೇ?’
೩. ದ.ಬ್ರಾ ಆಯೆ ಬೊಳ್ಜಾಂಟ್ ಇಲ್ಲಡೆತ್ತ್ ಪಿದಾಡ್ನಾಯೆ ಕರ್ತಲೆಗ್ ಬತ್ತೆ
ದ.ಸಾ ಆಯೆ ಬೊಳ್ಪುಗ್ ಇಲ್ಲಡೆಟ್ತ್ ಪಿದಾಡ್ನಾಯೆ ಕತ್ತಲೆಗ್ ಬತ್ತೆ
ಉ.ಬ್ರಾ ಆಯೆ ಬೊಕ್ಪಾರೆ ಇಲ್ಲತ್ತ್ ಪಿದಾಡ್ನಾಯೆ ಕಸ್ತಲೆಗ್ ಬರ್ತೆ
ಉ.ಸಾ. ಆಯೆ ಕಾಂಡೆ ಇಲ್ಲಡ್ದ್ ಪಿದಡಿನಾಯೆ ಕತ್ತಲೆಗೆ ಬಯ್ದೆ
‘ಆತ ಬೆಳಗ್ಗೆ ಮನೆಯಿಂದ ಹೊರಟವನು ರಾತ್ರಿಗೆ ಬಂದ’
೪. ದ.ಬ್ರಾ ಆಂದಣಿ, ಮಾಮಗ್ ತೃಷೆಗ್ ಬೋಡಗೆರ್, ಕೊಂಡತ್ತ್‌ಕೊಳ್ಳ
ದ.ಸಾ ಆಂದಂಬೆ, ಸಮ್ಮಲೆಗ್ ಅಂಗತ್ನೆಗ್, ಬೋಡುಗೆ, ಕೊಂಡತ್ತ್ ಕೊರ್ಲ
ಉ.ಬ್ರಾ ಆಂದಣಿ, ಮಾಮಗ್, ತುರ್ಶೆಗ್, ಬೋಡುಕೆರೆ, ಕೊಣತ್ ಕೊಳ್ಳ
ಉ.ಸಾ ಇಂದಂಬೆ, ತಮ್ಮಲೆಗ್ ಅಂಗದನೆಗ್ ಬೋಡುಗೆ, ಕನತ್ ಕೊರ್ಲ’ಇಕೋ (ನಿನ್ನ ಸೋದರ)ಮಾವನಿಗೆ ಬಾಯಾರಿಕೆ ಬೇಕಂತೆ, ತಂದುಕೊಡು’
೫. ದ.ಬ್ರಾ ಎನ್ನ ಮೈತ್ತೆತ್ತಿನ ಸಿದ್ಯ ಬಾಲೆ ವಾ ಲೂಟಿ ಮಾಂಪುಣು, ಗೊಂತಿಂಡಾ?
ದ.ಸಾ. ಎನ್ನ ಮೈತ್ತೆದಿ ಎಲಯ ಬಾಲೆ ವಾ ಲೂಟಿ ಮಾಣ್ಪುಂಡು, ಗೊಂತುಂಡಾ / ಗೊತ್ತುಂಡಾ?
ಉ.ಬ್ರಾ. ಎನ ಮಯ್ತೆಂತಿನ ಕಿನ್ನಿ ಬೆಲೆ ವಾ ಅನ್ನೆಯ ಮಲ್ಪುಂಡುತ, ಗೊತ್ತುಂಡಾ?
‘ನನ್ನ ನಾದಿನಿಯ ಚಿಕ್ಕ ಮಗು ಎಷ್ಟು ತಂಟೆ ಮಾಡುತ್ತದೆ, ಗೊ‌ತ್ತುಂಟೊ?’

ಒಂದು ಅಭಿಪ್ರಾಯವನ್ನು ಸೂಚಿಸಲು ಬೇರೆ ಬೇರೆ ಪ್ರಭೇದಗಳು ಪ್ರತ್ಯೇಕ ಶಬ್ದಗಳನ್ನು ಅಥವಾ ಒಂದೇ ಶಬ್ದದ ವಿಭಿನ್ನ ರೂಪಗಳನ್ನು ಬಳಸುತ್ತವೆ. ಇವು ಸಹ ತುಳುವಿನ ಪುನರ್ವಿಭಾಗೀಕರಣದಲ್ಲಿ ಬಹಳ ಮಹತ್ವವಾದ ಪಾತ್ರವನ್ನು ವಹಿಸುತ್ತದೆ. ಇಂತಹ ಬಹು ಪ್ರಮುಖವಾಗಿರುವ ಕೆಲವು ಶಬ್ದಗಳನ್ನು ಈ ಕೆಳಗೆ ಕೊಡಲಾಗಿದೆ :

ದ.ಬ್ರಾ. ದ.ಸಾ. ಉ.ಬ್ರಾ. ಉ.ಸಾ. ಅರ್ಥ
ಅಗಳ್ ಅಗರ್ ಅಗಳ್ ಅಗರ್ ‘ದರೆ’
ಅಪಳ್ ಎಕ್ಕಟ್ ಎಕ್ಕಡ್ ಎಕಡ್ ‘ಆಗ’
ಅಬರೆ ಅಬರೆ ಅವರೆ ಅವರೆ ‘ಅವರೆ’
ಅರ್ಕಚ್ಚಿ ಅರ್ಕಂಜಿ ಅರ್ತೀರ್ ಅರ್ಕಂಜಿ ‘ಅಕ್ಕಚ್ಚು’
ಅರ್ಪಚ್ಚೆ ದಾಸಾಳೊ ಅರಪುಚ್ಚೆ ದಾಸಾನ್ ‘ದಾಸವಾಳ’
ಇಕ್ಳು ನಿಕ್ಳ್ ನಿಂಕ್ಳು ನಿಗುಲು ‘ನೀವು’
ಇಲ್ಲಡೆ ಇಲ್ಲಡೆ ಇಲ್ಲ್ ಇಲ್ಲ್ ‘ಮನೆ’
ಜೀಡ್ ದೀಡ್ / ದಿಡ್ಡ್ ಇಜಿ ದೀ ‘ಇಡು’
ಉಂಪು ಉಣ್ಪು ಉಂಪು ನುಪ್ಪು ‘ಅನ್ನ’
ಉರಿ ಉರಿ ಸಬುಳು ತಬುರು ‘ಕೆಂಜಿಗ, ಕೆಂಪಿರುವೆ’
ಎಡೆಂಜಿ ಡೆಂಜಿ ಜೆಂಜಿ ದೆಂಜಿ ‘ಏಡಿ’
ಎತ್ತರೊ ಎತ್ತರೊ ಎಪ್ಪುರ ಎಪ್ಪರ ‘ಎತ್ತರ’
ಒವು ಒವು ಎವು ಎವು ‘ಯಾವುದು’
ಓಡ್ ಓಡ್ ಒಡಿಲ್ ಒಡಿಲ್ ‘ಹೆಂಚು’
ಕಡೆ ಕಡೆ ಅರೆಪ್ಪು ಅರೆಪ್ಪು ‘ಅರೆಯು’
ಕಡ್ಯ ಕಡ್ಯ ಕಂದೆಲ್ ಕಂದೆಲ್ ‘ಮಣ್ಣಿನ ಕೊಡ’
ಕಂಟೆ ಕಂಟೆ ಗಂಟೆ ಗಂಟೆ ‘ಜಾಗಂಟೆ’
ಕಂಬಾಯಿ ಕಂಬಾಯಿ ಲುಂಗಿ ಲುಂಗಿ ‘ಲುಂಗಿ’
ಕಯ್ಪೆ ಕಯ್ಪೆ ಕಯ್ಕೆ ಕಯಕೆ ‘ಕಹಿ’
ಕರಡ್ ಆರಿಗೆ ತೇಗ್ ಆರ್ಗೆ ‘ತೇಗು’
ಕಾಂಟ್ಯ ಕಾಂಟ್ಯ ಪುಡಾಯಿ ಪುಡಾಯಿ ‘ದೊಡ್ಡ ಬುಟ್ಟಿ’
ಕುಜ್ಜೆ ಕುಜ್ಜೆ / ಕುಜ್ಜೆ ಗುಜ್ಜೆ ಗುಜ್ಜೆ ‘ಹಲಸಿನ ಎಳೆಗಾಯಿ’
ಕುಂಡಚ್ಚೆ ಕುಂಡಚ್ಚೆ ಚಣಿಲ್ ಚನಿಲ್ ‘ಅಳಿಲು’
ಕೆತ್ತಿ ಕೆತ್ತಿ ತೆತ್ತಿ ತೆತ್ತಿ ‘ಮೊಟ್ಟೆ’
ಕೊಟ್ಟ್ ಕೊಟ್ಟ್ ಕೊಟ್ರೆ ಕೊಟ್ರೆ ‘ಹಾರೆ, ಗುದ್ದಲಿ’
ಕೊಂಡ ಕೊಂಡೆ ಒಳಂಕ ರಂಕ ‘ಕುಡಿತೆ’
ಗಡಸ್ ಗಡಸ್ ಕಡಸ್ ಕಡಸ್ ‘ಕಡಸು’
ಗೆಂಡೊ ಗೆಂಡೊ ಕೆಂಡ ಕೆಂಡ ‘ಕೆಂಡ’
ಜಾಯ್ತೊ ದಾಯ್ತೊ ಜಾದೊ ದಾದ ‘ಏನು’
ತಮಂತ್ರೆ ಬಚ್ಚಿರ್ ತಮಂತ್ರೆ ಬಚ್ಚಿರೆ ‘ವೀಳ್ಯದೆಲೆ’
ತಿಯ ಚಿಯೊ / ಸಿಯೊ ತಿಗ ತಿಗ ‘ಜೇನು’
ತೊಂಡೆ ತೊಂಡೆ ಜಬ್ಬೆ ಜಬ್ಬೆ ‘ಮುದುಕ’
ನೆಡ್ / ನೆವಡ್ ಬೇನೆ ನೇಡ್ ಬೇನೆ ‘ನೋವು’
ಪದೆಂಜಿ ಪದೆಂಜಿ ಪದೆಂಜ ಪದೆಂಗಿ ‘ಪಚ್ಚೆ ಹೆಸರು’
ಪಾಪು ಯಾರು ಪಾಪು ಯಾವು / ಇಯಾವು ‘ಸಾಕು, ಸಾಕಾಗು’
ಪಾವು ಪಾವು ಸಿದ್ಧೆ ಸಿದ್ಧೆ ‘ಪಾವು’
ಪುಸ್ತಕೊ ಬೂಕ್ ಪುಸ್ತಕ ಬೂಕು ‘ಪುಸ್ತಕ’
ಪೋಸ್ರೊ ಪಟ್ಟಿಗೆ ಪೋಸ್ರ ಪಡ್ಕೆ ‘ಉಚ್ಚೆ, ಮೂತ್ರ’
ಬಡತ್ತ್ ಬಡತ್ತ್ ಮಿತ್ತೊ ಮಿತರ್ ‘ಮೇಲೇರು’
ಬುಡೆತ್ತಿ ಬುಡೆದಿ ರಾಮ್ಮಣ್ಣಿ ಬೊಡೆದಿ ‘ಹೆಂಡತಿ’
ಮದಿಮಾಯೆ ಕಂಡಣಿ ಪುರುಷೆ ಕಂಡನಿ ‘ಗಂಡ’
ಮಲ್ಲಪ್ಪೆ ನೇಲ್ಯಪ್ಪೆ ಪೇಪಿ ನೇಲಪ್ಪೆ ‘ದೊಡ್ಡಮ್ಮ’
ಸಪ್ಪು ಸಪ್ಪು ಸೊಪ್ಪು ತಪ್ಪು ‘ಸೊಪ್ಪು’
ಸಾದಿ ಸಾದಿ ಹಾದಿ ತಾದಿ ‘ದಾರಿ’
ಸೂಟೆ ಸೂಟೆ ತೂಟೆ ತೂಟೆ ‘ಮಡಲಿನ ದೊಂದಿ’

ಇಂತಹ ಆಧಾರಗಳೊಂದಿಗೆ ಮಾಡಿದ ತುಳುವಿನ ಪ್ರಭೇದಗಳ ಪ್ರಭೇದಗಳ ಪುನರ್ವಿಭಾಗೀಕರಣವನ್ನು ರೇಖಾಚಿತ್ರದ ಮೂಲಕ ಈ ಕೆಳಗಿನಂತೆ ಸಂಕ್ಷೇಪಿಸಿ ಕೊಡಬಹುದು:

05_42_TSC-KUH

ಈ ನಾಲ್ಕು ಬಗೆಯ ಸಂಭಾವ್ಯ ವರ್ಗೀಕರಣಗಳಲ್ಲಿ ೧ನೆಯದು – ಎಂದರೆ,ದಕ್ಷಿಣ ಮತ್ತು ಉತ್ತರ ಎನ್ನವುದು – ಹಲವಾರು ಪುರಾವೆಗಳ ಆಧಾರದಲ್ಲಿ ಒಂದಕ್ಕೊಂದು ಬಹಳ ವಿಭಿನ್ನವಾಗಿರುವುದರಿಂದ, ಇತರ ವಿಭಾಗಗಳಿಗಿಂತ ಹೆಚ್ಚು ಸಮಂಜಸವಾದ ವಿಭಾಗವೆಂದು ಕಾಣುತ್ತದೆ. ಧ್ವನಿಮಾತ್ಮಕ, ಆಕೃತಿಮಾತ್ಮಕ ಹಾಗೂ ವಿಪುಲವಾದ ಶಾಬ್ದಿಕ ಸಾಕ್ಷ್ಯಾಧಾರಗಳು ಇವೆರಡನ್ನು ತುಳುವಿನ ಅತ್ಯಂತ ಪ್ರಮುಖ ಪ್ರಭೇದಗಳು ಎಂಬುದಾಗಿ ವಿಭಜಿಸಲು ತಕ್ಕ ಸಹಾಯವನ್ನೊದಗಿಸುತ್ತವೆ. ಈ ಎರಡು ಪ್ರಾದೇಶಿಕ ಪ್ರಭೇದಗಳನ್ನು ಮತ್ತೆ -ರೇಖಾಚಿತ್ರ ೨, ೩ ಹಾಗೂ ೪ರಲ್ಲಿ ತೋರಿಸಿದಂತೆ – ಉಪವಿಭಾಗಗಳನ್ನಾಗಿ ಮಾಡಬಹುದು.

ಆದರೆ ಈಗ ಬೇರೆ ಬೇರೆ ಪ್ರದೇಶಗಳ ಹಾಗೂ ವರ್ಗಗಳ ಜನರೊಳಗೆ ಸಂಪರ್ಕ, ಒಡನಾಟಗಳು ಹೆಚ್ಚಿರುವುದರಿಂದ ಭಾಷಾ ಪ್ರಭೇದಗಳೊಳಗಿನ ಇಂತಹ ಒಂದು ಸ್ಪಷ್ಟಭಿನ್ನತೆ ನಿಧಾನವಾಗಿ ಕಡಮೆಯಾಗುತ್ತಿದೆ. ಸಮೂಹ ಮಾಧ್ಯಮಗಳು, ಸಾರ್ವಜನಿಕ ಸಂಪರ್ಕಗಳು, ಪತ್ರಿಕೆಗಳು ಮೊದಲಾದವು ಸಹ ಭಾಷಾ ಪ್ರಭೇದಗಳ ವ್ಯತ್ಯಾಸ ಕಡಮೆಯಾಗಲು ಕಾರಣವಾಗುತ್ತಿವೆ. ವಿಶೇಷತಃ ಈಗಿನ ಹೊಸ ಪೀಳಿಗೆಯ ಜನರೊಳಗೆ ಈ ವ್ಯತ್ಯಾಸ ಬಹಳ ಕನಿಷ್ಠ ಮಟ್ಟಕ್ಕೆ ಇಳಿದಿದೆಯನ್ನಬಹುದು. ಏತನ್ಮಧ್ಯೆ ತುಳುವಿಗೆ ಒಂದು ಸಾಮಾನ್ಯ ಸಾಹಿತ್ಯ (ಶಿಷ್ಟ) ಭಾಷೆಯನ್ನು ಅಭಿವೃದ್ಧಿಪಡಿಸಲು ಸಹ ಪ್ರಯತ್ನಗಳು ಸಾಗುತ್ತಿವೆ. ತತ್ಪರಿಣಾಮವಾಗಿ ‘ಸಾಮಾನ್ಯ ತುಳು’ ಪ್ರಭೇದವೇ ಬಹುಶಃ ಸಮೂಹ ಮಾಧ್ಯಮಗಳ ಸಾಹಿತ್ಯಭಾಷೆ (ಶಿಷ್ಟಭಾಷೆ) ಆಗಿ ಸ್ವೀಕೃತವಾಗುತ್ತದೆ.