ದಕ್ಷಿಣ ಕನ್ನಡ ಜಿಲ್ಲೆಯ ಕಲ್ಯಾಣಪುರ ಹೊಳೆ ಅಥವಾ ಸೀತಾನದಿಯಿಂದ ತೊಡಗಿ ತೆಂಕಲಿನ ಚಂದ್ರಗಿರಿ ಹೊಳೆಯ ತನಕದ ಪ್ರದೇಶ ತುಳುನಾಡೆಂದೂ, ಬಡಗಿನ ಉಡುಪಿ ತಾಲೂಕಿನ ಕೆಲವು ಊರುಗಳು ಹಾಗೂ ಕುಂದಾಪುರ ತಾಲೂಕಿನ ಪೂರ್ತಿ ಪ್ರದೇಶ ಹೈಗ (ವ) ನಾಡೆಂದೂ ಇತಿಹಾಸದಲ್ಲಿ ದಾಖಲಾಗಿದೆ. ಈ ಪ್ರದೇಶದಲ್ಲಿ ಶಾಲೆ-ಕಚೇರಿಗಳಲ್ಲಿ ಮಾತನಾಡುವ ಕನ್ನಡಕ್ಕಿಂತ ಬೇರೆಯಾದ ಕನ್ನಡವೊಂದು ಬಳಕೆಯಲ್ಲಿರುವುದು ಎಲ್ಲರೂ ತಿಳಿದ ಸಂಗತಿ. ಆ ಕನ್ನಡವನ್ನು ನಾವಿಂದು ಕುಂದಾಪುರ ಕನ್ನಡ ಅಥವಾ ಕೋಟಗನ್ನಡವೆಂದು ಕರೆಯುತ್ತೇವೆ. ಕೋಟ, ಕುಂದಾಪುರ, ಬೈಂದೂರುಗಳಂತಹ ಊರುಗಳನ್ನು ಒಳಗೊಂಡ ನಗಿರೆ ರಾಜ್ಯ ತುಳು ರಾಜ್ಯ ಆಗಿತ್ತೆಂಬ ವಿಚಾರ. ಬೈಂದೂರು ತುಳು ದೇಶದ ಭಾಗವಾಗಿತ್ತೆಂದು ಕೋಟೇಶ್ವರ ಕವಿ (ಜೀವಂಧರ ಚರಿತೆ) ಹೇಳಿದ ಸಂಗತಿ. ಆಲುಪರು ಬನವಾಸಿಯನ್ನು ರಾಜಧಾನಿಯನ್ನಾಗಿಸಿಕೊಂಡ ವಿಚಾರಗಳಿಂದ ಕೆಲವರು ವಿಶಾಲ ತುಳುನಾಡಿನ ಕಲ್ಪನೆ ಮಾಡಿದ್ದುಂಟು. ಆದರೆ ವಾಸ್ತವವಾಗಿ ಸೀತಾನದಿಯ ಬಣಗಣ ನೆಲ ಯಾವತ್ತೂ ತುಳು ಮಾತಾಡುವ ಪ್ರದೇಶವಾಗಿರಲಿಲ್ಲ. ಹಾಗಿದ್ದರೂ ತುಳುನಾಡಿನ ಗಡಿಸೀಮೆ ಆಗಿದ್ದ ಬಾರ್ಕೂರು, ಕೋಟ, ಕುಂದಾಪುರ, ಹಾಲಾಡಿ ಈ ಜಾಗಗಳಲ್ಲಿನ ಕೋಟಗನ್ನಡದ ಮೇಲೆ ತುಳುಭಾಷೆಯ ಚಹರೆ ಬಿದ್ದುದನ್ನು ನೋಡಬಹುದು. ಕಲ್ಯಾಣಪುರ ಹೊಳೆಯ ಇಕ್ಕೆಲದ ಪ್ರದೇಶದ ಮಂದಿ ದ್ವಿಭಾಷಿಕರು. ಹಾಗೇನೇ ತುಳುಪ್ರದೇಶದಲ್ಲಿ ವಾಸಿಸುವ ಕೊಂಕಣಿಗರು, ಕೋಟ ಬ್ರಾಹ್ಮಣರು, ಹವ್ಯಕರು, ಚಿತ್ಪಾವನ ಬ್ರಾಹ್ಮಣ ಮುಂತಾದ ಸಮುದಾಯದ ಮನೆಮಾತಿನ ಮೇಲೆ (ಕನ್ನಡ, ಕೊಂಕಣಿ, ಮರಾಠಿ) ತುಳುವಿನ ಪ್ರಭಾವವಾಗಿರುವುದನ್ನು ಗಮನಿಸಬೇಕು. ಹಾಗೇನೇ ತುಳುನಾಡಿನಿಂದ ಹೋದ ಕೆಲವು ಭೂತಗಳು ಕನ್ನಡ ಸೀಮೆಯಲ್ಲಿ ತುಳು ನೆಲೆಯ ರೀತಿ ರಿವಾಜುಗಳಲ್ಲೇ ಆರಾಧನೆ ಸ್ವೀಕರಿಸುವ ಸಂಗತಿ ತುಳುಪಾಡ್ದನಗಳು ಕನ್ನಡ ಭೂತಾರಾಧನೆಯ ಪಾಣಾರಾಟದ ಕಳದಲ್ಲೇ ಕನ್ನಡ ‘ಹೊಗಳಿಕೆ’ಗಳಾಗಿ ಭಾಷಾಂತರಗೊಳ್ಳುವ ಪ್ರಕ್ರಿಯೆ – ಇವೆಲ್ಲಾ ತುಳು ಬಹುಬಗೆಯಲ್ಲಿ ಕನ್ನಡ ಪ್ರದೇಶದೊಳಗೆ ಹೀರಣೆಗೊಂಡ ಸ್ಥಿತಿಯಾಗಿದೆ.

ಈ ಲೇಖನದ ಮೊದಲ ಭಾಗದಲ್ಲಿ ತುಳುವಿಗೂ ಕೋಟಗನ್ನಡಕ್ಕೂ ಇರುವ ಅಂಟುನೆಂಟುಗಳನ್ನು ಬಗೆಯುತ್ತೇನೆ. ಎರಡನೆಯ ಭಾಗದಲ್ಲಿ ತುಳು-ಕನ್ನಡ ಭಾಷಾಸೀಮೆಗಳಲ್ಲಿ ಏರ್ಪಟ್ಟ ಸಾಂಸ್ಕೃತಿಕ ಪ್ರಸರಣವನ್ನು ತಿಳಿಸುತ್ತೇನೆ. ತುಳುನಾಡಿನ ಬಂಟ, ಬಿಲ್ಲವ, ಮೊಗವೀರರಿಗೂ ಬಡಗಣ ನಾಡವ, ಹಳೆಪೈಕ, ಮರಕಾಲ ಸಮುದಾಯಗಳಿಗೂ ಇತಿಹಾಸ ಕಾಲದಿಂದಲೂ ಸಾಮಾಜಿಕ, ರಾಜಕೀಯ, ಸಂಬಂಧ (ಅನ್ನಕನ್ಯಾ ಸಂಬಂಧವೂ ಸೇರಿದಂತೆ) ಬೆಳೆದುಬಂದಿದೆ.

ಕೋಟಿ ಚೆನ್ನಯ್ಯ, ಕಲ್ಕುಡ, ಬೊಬ್ಬರ್ಯ, ಜುಮಾದಿ, ಅಬ್ಬಗದಾರಗ, ಬೆರ್ಮೆರ ಆರಾಧನೆ, ಕೋಟಗನ್ನಡದ ಸೀಮೆಯಲ್ಲೂ ತೋರಿಬರುತ್ತದೆ. ಕೋಟ-ಸಾಲಿಗ್ರಾಮದ ಕನ್ನಡ ಪ್ರದೇಶಗಳಿಂದ ಸುಮಾರು ವರ್ಷಗಳ ಹಿಂದೆ ಕೋಟ ಬ್ರಾಹ್ಮಣರ ಸಮೂಹ ತುಳುನಾಡಿಗೆ ಬಂದು ನೆಲೆಸಿ, ಅವರು ಇಂದು ಮನೆಯೊಳಗೆ ಮಾತನಾಡುವ ಕೋಟಗನ್ನಡಕ್ಕೆ ತುಳುವಿನಿಂದ ಅನೇಕ ಭಾಷಿಕಾ ಸಾಮಗ್ರಿಗಳನ್ನು ಕಡ ತೆಗೆದುಕೊಂಡಿದ್ದಾರೆ.

ಕನ್ನಡ ಒಂದು ಉಪಭಾಷೆಗಿರುವ ಕೋಟಗನ್ನಡದಲ್ಲಿ ಕನ್ನಡದ ಬೇರೆ ಭಾಷೆಗಳಲ್ಲಿ ಕಾಣಿಸಿದ ಕೆಲವು ವಿಶಿಷ್ಟಾ ಧ್ವನಿಮಾಗಳು ಕಂಡುಬರುತ್ತವೆ. ಆ ಧ್ವನಿಮಾಗಳು ತುಳು ಭಾಷೆಯಲ್ಲಿ ಇವೆ. ಇದು ಆ ಎರಡು ಭಾಷೆಗಳ ನಡುವೆ ಏರ್ಪಟ್ಟ ಸಂಪರ್ಕದ ಮಾರಣವಿರಬಹುದು. ಕೋಟಗನ್ನಡದಲ್ಲಿ ಇ, ಉ, ಅ ಸ್ವರಗಳ ಗುಣ ಧರ್ಮಗಳನ್ನು ಸ್ಪಲ್ಪ ಮಟ್ಟಿಗೆ ಪಡೆದಿರುವ ಒಂದು ಮಧ್ಯಸ್ವರ ಕೇಳಿಬರುತ್ತದೆ. ಇದನ್ನು ಸಾಮಾನ್ಯವಾಗಿ ಮಾತನಾಡುವಾಗ ಅರ್ಧ ಉಕಾರವೆಂದು ಹೇಳುವುದುಂಟು. ಉಚ್ಚ, ಮಧ್ಯ, ವಿವೃತಸ್ವರ (high central closed vowel) ವಾಗಿರುವ ಇದು ಹ್ರಸ್ವ ಹಾಗೂ ದೀರ್ಘರೂಪದಲ್ಲಿ ಬಳಕೆಯಾಗುತ್ತಿದೆ. ಈ ಧ್ವನಿಮಾ ಪದ್ಯಾಂತ್ಯದಲ್ಲಿ ಹಾಗೂ ಎರಡಕ್ಕಿಂತ ಹೆಚ್ಚು ಅಕ್ಷರಗಳುಳ್ಳ ಶಬ್ಧಗಳ ನಡುವೆ ಕೇಳಿಬರುತ್ತದೆ. ಉದಾ;

ಕೋಟಗನ್ನಡ ತುಳು ಅರ್ಥ
ಆಡ್‌ ಗೊಬ್ಬು ಆಡು (ಕ್ರಿಯೆ)
ಬದ್‌ಕ್‌ ಬದ್‌ಕ್‌ ಸಂಪತ್ತು
ನೆರ್‌ಲ್‌ ನಿರೆಲ್‌ ನೆರಳು
ಅದ್‌ರ್‌ ಅದ್‌ರ್‌ ಅದುರು (ಕ್ರಿಯೆ)
ನೋವ್‌ ಬೇನೆ ನೋವು
ಏಳ್‌ ಏಳ್‌ ಏಳು(ನಾ)
ಚೆಂಡ್‌ ಚೆಂಡ್‌ ಚೆಂಡು
ನಡ್‌ಗ್‌ ನಡ್‌ಗ್‌  ನಡುಗು
ಬೆದ್‌ರ್‌ ಬೆದ್‌ರ್‌ ಬಿದಿರು

ತುಳು ಭಾಷೆಯ ಅಕಾರಾಂತ ನಪುಂಸಕ ಲಿಂಗ ಪದಗಳು ಕೆಲವೊಂದು ಪ್ರಾದೇಶಿಕ ಉಪಭಾಷೆಗಳಲ್ಲಿ ಒಕಾರಾಂತವಾಗಿ ಮಾರ್ಪಡುತ್ತವೆ. ಕೋಟಗನ್ನಡದಲ್ಲೂ ಇದೇ ಪರಿವರ್ತನೆಯನ್ನು ಗುರುತಿಸಬಹುದಾಗಿದೆ. ಉದಾ:

ಮರ > ಮರೊ ಜ್ವರ > ಜರ > ಜರೊ
ಸರ > ಸರೊ ಅರ > ಅರೊ

ಅವನತ ಮಧ್ಯ ವಿತೃತ ಸ್ವರ ಒ(È) ಸಾಮಾನ್ಯ ತುಳುವಿನಲ್ಲಿ ಕಾಣಿಸಿದ ಧ್ವನಿಮಾ. ಕುಂದಾಪುರದ ಕೋಟದವರಲ್ಲಿ (ಕುಂದಾಪುರದ ಒಟ್ಟಿನ ಉಪಭಾಷೆಯಲ್ಲಿ) ವ್ಯಾಪಕವಾಗಿರುವ ಈ ಧ್ವನಿಮಾ ಮಂಗಳೂರು ಕೋಟದವರ ಮಾತಿನಲ್ಲಿ ಕಾಣಿಸದೆ, ಮಧ್ಯಪಶ್ಚ ಸಂವೃತ ಒ(o) ದೊಂದಿಗೆ ಐಕ್ಯವಾಗಿರುವುದು ತುಳುವಿನ ಪ್ರಭಾವವಿರಬೇಕು.

ಕುಂದಾಪುರ ಕೋಟ ಮಂಗಳೂರು ಕೋಟ
ಕೋಟ (Kota) ಕೋಟ (Kota)
ಹೋಪ(hopa) ಹೋಪ (hopa)

ಕುಂದಾಪುರ ಕನ್ನಡದಲ್ಲಿ ಧಾರವಾಡದ ಕನ್ನಡದಂತೆ ಎಕಾರಾಂತ ಪದಗಳು ಇಕಾರಾಂತವಾಗುವುದು ಸಾಮಾನ್ಯ ಸಂಗತಿ. ಉದಾಹರಣೆಗೆ ಮನೆ > ಮನಿ, ಎದೆ > ಬೇಳೆ > ಬ್ಯಾಳಿ, ಗೋಡೆ > ಗ್ವಾಡಿ ಆದರೆ ಈ ಬದಲಾವಣೆ ಮಂಗಳೂರು ಕೋಟದವರಲ್ಲಿ ಕಾಣಿಸದಿರುವುದಕ್ಕೆ ಸುತ್ತಲಿನ ತುಳುವಿನಲ್ಲಿ ಈ ಪರಿರ್ವತನೆ ನಡೆಯದಿರುವುದು ಕಾರಣವಾಗಿರಬೇಕು.

ಕುಂದಾಪುರ ಆಡುಮಾತಿನಲ್ಲಿ ಇಲ್ಲದೆ, ಆದರೆ ಮಂಗಳೂರು ಕೋಟದವರಲ್ಲಿ ಕಾಣಿಸುವ / ಞ ಮತ್ತು / ಙ / ಗಳು ತುಳುವಿನ ಪ್ರಭಾವದಿಂದಲೇ ಬಂದಿರಬೇಕು. ಈ ಎರಡು ವರ್ಣಗಳಿಗೆ ಇವರ ಅಡುನುಡಿಯಲ್ಲಿ ವರ್ಣಾತ್ಮಕ ನೀಡಬೇಕಾಗುತ್ತದೆ.

ಮಂಗಳೂರು ಕೋಟ ಕುಂದಾಪುರ ಕೋಟ ಅರ್ಥ
ಞೋಳಿ ಲೋಳಿ ಲೋಳೆ
ಞಕ್ಕ್‌ ನೆಗ್ಗ್‌ ಅಪ್ಪಚ್ಚಿಯಾಗು
ಬಂಙ  – ಕಷ್ಟ
ಕೊಂಞೆ ಕೊಜಲ್ ತೊದಲು
ಅಂಙಣ ಅಂಗಳ ದೇವಾಲಯದ ಅಂಗಳ

ಅಕಾರಾಂತ ನಪುಂಸಕ ಲಿಂಗದ ಪದಗಳು ತುಳುವಿನ ಕೆಲವು ಉಪಭಾಷೆಯಲ್ಲಿ ಸಾಮಾನ್ಯವಾಗಿ ಒಕಾರಾಂತವಾಗಿ ಕಂಡುಬರುತ್ತವೆ. ಉದಾ : ಮರ > ಮರೊ > ಸರ > ಸರೊ ಇತ್ಯಾದಿ. ಆದರೆ ಕರಾವಳಿಯ ತುಳುವಿನಲ್ಲಿ ಇಂತಾಗದೆ ಕನ್ನಡದಲ್ಲಿನಂತೆ ಮರ, ಸರ ಎಂದೇ ಉಚ್ಚರಿಸಲಾಗುತ್ತದೆ. ಕುಂದಾಪುರ ಕನ್ನಡದಲ್ಲಿ ಮರೊ, ಸರೊ ಎಂದೇ ಹೇಳಲಾಗುತ್ತಿದ್ದು ಮಂಗಳೂರು ಕೋಟಗನ್ನಡದಲ್ಲಿ ಪರಿಸರದ ತುಳುವಿನಿಂದಾಗಿ ಮರ, ಸರ ಎಂದೇ ಉಚ್ಚರಿಸಲಾಗುತ್ತಿದೆ.

ಮಂಗಳೂರು ಕೋಟ ಆಡುನುಡಿಯ ಕೆಲವು ಪದಗಳಲ್ಲಿ ಕನ್ನಡದ ಸರಳ ಧ್ವನಿಮಾಗಳು ಪರುಷಧ್ವನಿಮಾಗಳಾಗಿ ಮಾರ್ಪಟ್ಟಿರುವುದು ಸುತ್ತಲಿನ ತುಳುವಿನ ಪ್ರಭಾವವಿರಬೇಕು.

ಕುಂದಾಪುರ ಕೋಟ ಮಂಗಳೂರು ಕೋಟ ತುಳು
ಕಾಗಿ > ಕಾಗಿ ಕಾಕೆ ಕಕ್ಕೆ
ಮೂಗು ಮೂಂಕು ಮೂಂಕು
ಮೊಗ್ಗೆ > ಮುಗ್ಗೆ ಮುಕ್ಕೆ ಮುಕ್ಕೆ
ತೂಂಗು ತೂಕು ತೂಕು
ಮಲಗು ಮಲ್ಕ  –

ಪ > ಹ ಪರಿವರ್ತನೆ ಕನ್ನಡದ ವಿಲಕ್ಷಣ ಗುಣ. ಮಂಗಳೂರು ಕೋಟ ನುಡಿಯು ತುಳುವಿನಿಂದ ಸ್ವೀಕರಿಸದ ಪದಗಳನ್ನೂ ಪ > ಹ ವಾಗಿ ಮಾರ್ಪಡಿಸಿಕೊಳ್ಳುತ್ತದೆ.

ತುಳು ಮಂಗಳೂರು ಕೋಟ ಕುಂದಾಪುರ ಕೋಟ
ಪೊಗ್ಗು (ಸಂಭಾವನಾರ್ಥ) ಹೊಗ್ಗು  –
ಪುಡೆಪು ಹೊಡಪು (ಧಾನ್ಯವನ್ನು) ಗೇರು
ಪುಚ್ಚೆ ಹುಚ್ಚೆ ಬೆಕ್ಕು
ಪುಡಾಡ್‌ ಹೊಡಾಡ್‌ ವಂದಿಸು
ಪುಣಿ ಹುಣಿ ಕಟ್ಟ (ಗದ್ದೆ ಅಂಚು)
ಪಗರ ಹಗರ ವಿನಿಮಯ
ಪರ್‌ಂಕ್‌ ಹರ್‌ಂಕ್‌  –
ಪೊಜಂಕ್‌ ಹಿಜ್‌ಕ್‌ ಹಿಸ್ಕ್‌

ಆದರೆ ಕೆಳಗೆ ಸೂಚಿಸಿದ ಕೆಲವು ತುಳು ಪದಗಳು (ಕನ್ನಡದಲ್ಲಿ ಇವುಗಳಿಗೆ ಜ್ಞಾತಿ ದೊರೆಯುವುದಿಲ್ಲ) ಅದೇ ರೂಪದಲ್ಲಿ ಮಂಗಳೂರಿನ ಕೋಟಗನ್ನಡಲ್ಲಿ ಬಳಕೆಯಾಗುತ್ತವೆ. ಆ ಪದಗಳು ಕುಂದಾಪುರದ ಕೋಟದವರಲ್ಲಿ ಇಲ್ಲ.

ಪನೋರು (= ಕುಳ) ಪಾಪು (=ತೋಡಿಗೆ ಹಾಕಿದ ಅಡ್ಡ ಮರ)
ಪಿಜಿರ್‌(=ಹಿಂದಿರುಗು) ಪೆದಂಬು (= ವಕ್ರಬುದ್ಧಿ)
ಪಿಸ್‌ಂಟ (=ಶೀಘ್ರಕೋಪಿ) ಪುಂಡು (=ಬಳಗ, ಗುಂಪು)
ಪೂಕರೆ (= ಕಂಬಳದ ಗದ್ದೆಯಲ್ಲಿ ನಿಲ್ಲಿಸುವ ಅಲಂಕೃತ ಕಂಬ) ಪುರಂಗ (=ಹಾಳಾಗು)
ಪೊಟ್ಟ (=ಕಿವುಡ) ಪೊಟ್ಳ (=ಗುಳ್ಳೆ)
ಪೊಡೆಸ್‌(ಒಂದು ಬಗೆಯ ಕೆಟ್ಟ ವಾಸನೆ) ಪೊಡುಂಬ (=ಬುದ್ಧಿಗೇಡಿ)
ಪೋಕ (=ತಂಟೆಗಾರ) ಪೊಳಿಂಕೆ (=ತೊಗಟೆ)

ಇಲ್ಲಿ ಪ > ಗ ಧ್ವನಿ ಪರಿವರ್ಥನೆ ನಡೆಯದಿರುವುದಕ್ಕೆ ಇನ್ನೂ ಹಲವಾರು ಪದಗಳನ್ನು ತೆಗೆದುಕೊಂಡು ನಿಯಮಗಳನ್ನು ರೂಪಿಸಬಹುದು.

ಪಕಾಸ್‌, ಪಟ್ಲಾಮು, ಪಾಗಾರ. ಪಕ್ಕಿ, ಪಂಚಾಂಗ, ಪಂಚಗವ್ಯ, ಪತ್ರೊಡೆ ಈ ಪದಗಳು ಅನ್ಯ ದೇಶೀಯವಾದುದರಿಂದ ಬಹುಶಃ ಧ್ವನಿ ಪರಿವರ್ತನೆಗೊಳ್ಳದೆ ಬಳಕೆಗೊಳ್ಳುತ್ತಿರಬೇಕು.

ಮೂಲ ದ್ರಾವಿಡ ‘ತ’ ವು ತುಳುವಿನಿಂದ ಸ್ವೀಕರಿಸಿದ ಪದಗಳಲ್ಲಿ ಮಂಗಳೂರು ಕೋಟದವರಲ್ಲಿ ಸಕಾರವಾಗಿ ಮಾರ್ಪಡುತ್ತದೆ.

ತುಳು ಮಂಗಳೂರು ಕೋಟ ಅರ್ಥ
ತಜಪ್ಪು ಸಜಪ್ಪು ಕೊಚ್ಚು (ಕ್ರಿ. ಪದ)
ತಗುಲೆ ಸಕುಳೆ ತಗಣೆ
ತೀಪೆ ಸೀಪೆ ಸಿಹಿ
ತುಂಬಿಲ್ ಸೀಂಪಿಲ್ ಸೀನು

ಆತ್ಯಾರ್ಥಕ ರೂಪಗಳನ್ನು ಪ್ರಕೃತಿಗೆ ಆಣ್‌ಹಾಗೂ ಇಣ್‍ಗಳನ್ನು ಸೇರಿಸುವ ಮೂಲಕ ಸಿದ್ಧಿಸಿಕೊಳ್ಳಲಾಗುತ್ತದೆ. ತುಳುವಿನಲ್ಲಿ ‘ಒಣು’ ಪ್ರತ್ಯಯ ಸೇರುವುದನ್ನು ಇಲ್ಲಿ ಗಮನಿಸಬಹುದು. ಕುಂದಾಪುರ ಕನ್ನಡದಲ್ಲಿ ಪ್ರಮಾಣ ಕನ್ನಡದಲ್ಲಿರುವಂತೆಯೇ ‘ಕೊಳ್ಳು’ ಪ್ರತ್ಯಯವನ್ನೇ ಸೇರಿಸಿಕೊಳ್ಳಲಾಗುವುದು.

ಧಾತು ಮಂ. ಕೋಟ ತುಳು ಕುಂದಾ, ಕೋಟ
ಕೊಯ್‌ ಕೊಯ್‌ಕಣ್‌ ಕೊಯ್ಯೊಣು ಕೊಯ್ದುಕೊಳ್ಳು
ಮೀ ಮಿನ್ನಣ್‌ ಮಿಯೋಣು  –
ಕಟ್ಟ್ ಕಟ್ಟಿಣ್‌ ಕಟ್ಟೊಣು ಕಟ್ಕೊಳ್ಳು
ಓದು ಓದಿಣ್‌ ಓದೋಣು ಓದ್ಕೊಳ್ಳು

ವಿಧ್ಯರ್ಥದ ವಿಧಿನಿಷೇಧದಲ್ಲಿ ಧಾತುವಿನ ಮುಂದೆ ‘ಆಡ’ ಎನ್ನುವ ಪ್ರತ್ಯಯ ಸೇರುತ್ತಿದ್ದು ಮಧ್ಯಮಪುರುಷ ಏಕವಚನ, ಬಹುವನಚನಗಳಲ್ಲಿ ಈ ಪ್ರತ್ಯಯವು ಧಾತುವಿನ ಮೇಲೆ ಹತ್ತುತ್ತದೆ.

ಮಂ. ಕೋಟ ಪ್ರ. ಕನ್ನಡ ಕುಂ.ಕೋಟ
ಏ.ವ. ಬ.ವ. ಏ.ವ. ಬ.ವ. ಏ.ವ. ಬ.ವ.
ಬರಡ ಬರಡೆ ಬರಬೇಡ ಬರಬೇಡಿ ಬರ್ಬೇಡ ಬರ್ಬೇಡಿ
ಹೋಗಡ ಹೋಗಡೆ ಹೋಗಬೇಡ ಹೋಗಬೇಡಿ ಹೋಗ್ಬೇಡ ಹೋಗ್ಬೇಡಿ

ತಿನಡ, ಬರಡ, ತಿನಡೆ, ಬರಡೆ ಎನ್ನುವ ತುಳವನ್ನು ಇದು ನೇರವಾಗಿ ಹೋಲುತ್ತದೆ. ಕುಂದಾಪುರ ಕಡೆ ತಿನ್ಬೇಡ, ಬರ್ಡೇಡ ಎಂಬ ರೂಪವೇ ಇದೆ.

ವಿಧ್ಯರ್ಥ ರೂಪದಲ್ಲಿ ತುಳುವಿನ ‘ಅಡ್‌’ ಎನ್ನುವ ಪ್ರತ್ಯಯವೇ ಮಂಗಳೂರು ಕೋಟದವರಲ್ಲಿ ಕಾಣಿಸುತ್ತದೆ.

  ಮಂಗಳೂರು ತುಳು
  ಏ.ವ. ಬ.ವ. ಏ.ವ. ಬ.ವ.
ಪ್ರ.ಪು. ಮಾಡಡ್‌ ಮಾಡಡ್‌ ಮಲ್ಪಡ್‌ ಮಲ್ಪಡ್‌

ಕುಂಪಾಪುರ ಪರಿಸರದಿಂದ ಮಂಗಳೂರು ಪರಿಸರಕ್ಕೆ ಬಂದಾಗ ತಮ್ಮ ಮೂಲ ಮಾತಿನ ಪದಗಳಿಂದ ಭಿನ್ನವಾಗಿ ತುಳುವಿನಿಂದ ಎರವಲು ಪಡೆದುಕೊಂಡ ಪದಕೋಶಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ. ಈ ಪದಗಳು ಕುಂಪಾಪುರ ಕೋಟದವರ ಆಡುಮಾತಿನಲ್ಲಿ ಇಲ್ಲ.

ಪದ  ಅರ್ಥ
ಅಗರ್‌ ಪಾಗಾರದಂತಿರುವ ಮಣ್ಣಿನ ಗೋಡೆ
ಅಂಗಲಾಪು ಅತಿಯಾಶೆ, ದುರಾಶೆ
ಆಡರ್‌ ಒಣ ಗೆಲ್ಲು
ಅಮರ್‌ ಗದ್ದೆಗೆ ಹಾಕುವ ಗಡಿರೇಖೆ
ಅಂಬೆರ್ಪು ಅವಸರ
ಅಲೆಪಾಯಿ ಹಾಲುಕರೆವ ಸಲುವಾಗಿ ದನವನ್ನು ಬಾಡಿಗೆಗೆ ಕೊಡುವುದು
ಎಡೆನಾಳಿ ದೇವಾಲಯದ ಒಳಭಾಗದ ಅಗಲ ಕಿರಿದಾದ ಜಾಗ
ಎಕ್ಕ್‌ ಎಟಕು
ಒರುಂಕು ಎರಡು ಗೋಡೆಗಳ ನಡುವಣ ಅಗಲ ಕಿರಿದಾದ ದಾರಿ
ವೊರ್ದ ಓರೆ
ಒಳಚ್ಚಿಲ್‌ ಕುರುಚಲು ಹುಲ್ಲುಗಾವಲು
ಓಂತಿ ಓತಿಕ್ಯಾತ
ಕಿರಿಂಚಿ ಕೊಚ್ಚೆ, ಕೆಸರು
ಕುಚ್ಚಿ ತಲೆಗೂದಲು
ಕುಚ್ಚಿಗುಡ್ಡೆ ಚಿಕ್ಕ ಚಿಕ್ಕ ಪೊದೆಗಳಿಂದ ಕೂಡಿದ ಗುಡ್ಡ
ಕುಜ್ಜೆ / ಗುಜ್ಜೆ ಹಲಸಿನ ಕಾಯಿ
ಕುಮ್ಮಾಯಿ ಸಾರಣೆಗೆ ಅಣಿಗೊಳಿಸಿದ ಸುಣ್ಣ
ಕುತ್ತಿ / ಗುತ್ತಿ ಮರದ ಬುಡ
ಕುರುಡಾಯಿ ತೆಂಗಿನ ಮರಕ್ಕೆ ಕೀಟಲೆ ಕೊಡುವ ಕಪ್ಪು ಹುಳ
ಕೆಡೆಂಜೊಳು ತೆಂಗಿನ ಹೆಣೆದ ಮಡಲಿಂದ ತಯಾರಿಸಿದ ರಕ್ಷಣಾ ಹೊದಿಕೆಯಂಗಿ
ಕುಂಟಾಲ ಮಳೆಗಾಲದಲ್ಲಿ ಬೆಳೆವ ನೇರಳೆಬಣ್ಣದ ಹಣ್ಣಿನ ಮರ
ಕುಬಳ್‌ ಮನೆಯ ಮಾಡಿನ ತುದಿ
ಕುಬೆ ಮರದ ತುದಿ
ಕಂಚಾಲ್‌ ಹಾಗಲ್ಕಾಯಿ
ಕಟಾರ ಒಂದು ಬಹೆಯ ಪಾತ್ರೆ
ಕಟ್ಟೋಣ ಕಟ್ಟಡ
ಕಟಣ ಬಾವಿಯೊಳಗಿನ ಅಂತಸ್ತು
ಕಟ್ಟಪುಣಿ ಗದ್ದೆಯ ಅಗಲವಾದ ಅಂಚು
ಕೆತ್ತೆ ತೊಗಟೆ
ಕೆಪ್ಪೆಡೆ ಕೆನ್ನೆ
ಕೆಮಿ ಕಿವಿ
ಗೊಡವೆ ಲಕ್ಷ್ಯ
ಚಬುಕು ಗಾಳಿಮರ
ಚಿಳ್ಳಿ ಎಲೆಯನ್ನು ಚಮಚದ ಆಕೃತಿಗೆ ತಿರುಗಿಸಿದ ಉಪಕರಣ
ಕೇಪು ಬಿದಿರಿನ ಮುಳ್ಳ ಏಣಿ
ಕೇಕ ಖಾಯಂ ಆಗಿ ಒಂದು ವಸ್ತುವನ್ನು ಕೊಡುವ ಹಾಗೂ ತೆಗೆದುಕೊಳ್ಳುವ ಎರ್ಪಾಡು
ಸಜಪು ತುಂಡು ತುಂಡಾಗಿ ಕೊಚ್ಚು
ತಣ್ಣಸ್‌ ನೆಲಕ್ಕೆ ಬರುವ ಥಂಡಿ
ತಂಪಡ ಬಿದಿರಿನ ಅಥವಾ ಅಡಿಕೆ ಮರದ ಸಲಿಕೆಯನ್ನು ಬೇಲಿಗೆ ಅಡ್ಡವಾಗಿ ಕಟ್ಟಿದ್ದು
ಕೊಜಂಟಿ ರಸಹೀನವಾದ ಸಿಪ್ಪೆ
ಗಜ್ಜಿ ಕಜ್ಜಿ
ಗಂಜಪ್ಪು ಶುದ್ಧೀಕರಿಸಿದ ಹರಳುಪ್ಪು
ಸೊಯ್ದು ಬಟ್ಟೆಒಗೆ
ಗಡು ನಿಶ್ಚಿತ ಕಾಲಾವಧಿ
ಜಜಂಟು ಬೆರಣಿ
ಗಂಡಿ ಹೊಂಡ
ಬಾಡಂಗೇಲ್‌ ಒಣಗಿ ಬಾಡಿದ್ದು
ಗರ್ಪು ಅಗೆಯು
ಬೈಪಣೆ ಗೋದಲಿ
ಗಿಡ್ಟ ಒತ್ತೊತ್ತಾಗಿರುವಿಕೆ
ಮಂತ್‌ ಕಡೆಗೋಲು
ಗುಗ್ಗುರು ಅಕ್ಕಿ ಮುಂತಾದ ಧಾನ್ಯಗಳಲ್ಲಿ ಆಗುವ ಕಪ್ಪು ಬಣ್ಣದ ಹುಳು
ಮಟ್ಟಾಳ ಹಾಳೆ ಟೊಪ್ಪಿಗೆ
ಮುಡಿನಾಳ ಧಾನ್ಯಗಳ ಮಾದರಿಯನ್ನು ಪರೀಕ್ಷೀಸಲು ಬಳಸುವ ಲೋಪದ ಹರಿತವಾದ ಅಯುಧ
ಗುಯಿಲ್‌ ಬಾವಿ
ಗೆಜೆಲ್ ತೀವ್ರಗೊಳ್ಳು (ವಿಶೇಷವಾಗಿ ತುರಿಗಜ್ಜಿಗೆ ಸಂಬಂಧಿಸಿದಂತೆ)

ಸಾಂಸ್ಕೃತಿಕ ತುಳುನಾಡು

ಕೋಟ-ಕುಂದಾಪುರದ ಕನ್ನಡ ಮಣ್ಣಿನಲ್ಲಿ ಒಂದು ಸಾಂಸ್ಕೃತಿಕವಾದ ತುಳುನಾಡಿನ ಛಾಪು ತೋರಿ ಬರುತ್ತಿರುವುದು ಒಂದು ವಿಶಿಷ್ಟ ಸಂಗತಿ. ಬಡಗಿ ನಜನರಿಗೆ ತುಳು ಗೊತ್ತಿಲ್ಲವಾದರೂ ತುಳುವರ ಪಂಜುರ್ಲಿ, ಕೋಟಿ ಚೆನ್ನಯ್ಯಾಬ್ಬಗ ದಾರಗ, ಕಲ್ಕುಡರ ಆರಾಧಾನೆ ಅವರಿಗೆ ಬೇಕು. ತಾವು ನಂಬುವ ಸ್ವಾಮಿ, ಹಾಯ್ಗುಳಿ, ಮಾಸ್ತಿಯಮ್ಮ, ಚಿಕ್ಕು ಮುಂತಾದ ದೈವಗಳಿಗೆ ಢಕ್ಕೆ ಬಲಿ ಮಾಡಿದರೆ ತುಳುನಾಡಿನಿಂದ ಬಂದ ದೈವಗಳಿಗೆ ಅಣಿಕಟ್ಟಿ ಬೀರ ಕರೆದು ಕನ್ನಡ ಪಾಡ್ಡನ (ಹೊಗಳಿಕೆ) ಹೇಳಿ ಕೋಲ ಕೊಡುತ್ತಾರೆ. ಇಂತಹ ಕೋಲ ನಡೆಸಿಕೊಡುವ ಪಾಣ ಸಮುದಾಯದವರು ತುಳು-ಕನ್ನಡ ಎರಡರಲ್ಲೂ ವ್ಯವಹರಿಸಬಲ್ಲರು (ತುಳುನಾಡಿನಲ್ಲಿ ಇವರನ್ನು ನಲ್ಕೆಯವರು ಎಂದು ಕರೆಯಲಾಗುತ್ತದೆ.) ಬಾರ್ಕೂರು, ಹಾಲಾಡಿ, ಕುಂದಾಪುರ, ಬೈಂದೂರು ಪರಿಸರಗಳಲ್ಲಿ ಕೋಲ, ಢಕ್ಕೆ ಬಲಿಗಳನ್ನು (ಸಂಕೀರ್ಣ ಆರಾಧನೆಗೆ ಪಾಣಾರಾಟ ಎಂದು ಹೆಸರು) ನಡೆಸುವಾಗ ಇವರು ಮೊದಲಿಗೆ ತುಳುವಿನಲ್ಲಿ ಆರಂಭಿಸಿ ಬಳಿಕ ಕನ್ನಡದಲ್ಲಿ ಆರಾಧನಾ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ. ಗೆಂಡ, ಢಕ್ಕೆಬಲಿ, ಕೋಲ ಎಲ್ಲವೂ ಕನ್ನಡ ಭಾಷೆಯಲ್ಲಿ ನಡೆದರೂ ಆಚರಣೆಯ ಮೊದಲಿಗೆ ಗುಡಿ (ದೈವದ ಮನೆ) ಯ ಬಾಗಿಲಲ್ಲಿ ಪಾಣ ಮಹಿಳೆಯರು ದೇವರ ಸ್ತುತಿಯನ್ನು ತುಳುವಿನಲ್ಲೇ ಮಾಡುವುದನ್ನು ಗಮನಿಸಬೇಕು. ಕನ್ನಡ ಸೀಮೆಯ ಎಲ್ಲಾ ದೈವಗಳು ತುಳುನಾಡಿನ ಒಳಹಾಳ (ಉಳ್ಳಾಳ?) ದಿಂದ ನದಿ ದಾಟಿಕೊಂಡು ಬಂದವೆಂದು ‘ಹೊಗಳಿಕೆ’ ಗಳಲ್ಲಿ ಹೇಳಲಾಗುತ್ತಿದೆ.

ಪಾಣರು ಹಾಡುವ ತುಳು ಭೂತಗಳ ಕನ್ನಡ ಹೊಗಳಿಕೆಗಳು ತುಳು ಪಾಡ್ಡನಗಳ ಯಥಾನುವಾದ ಅಲ್ಲ. ಕೋಲದ ಪ್ರದರ್ಶನ ಸಂದರ್ಭದಲ್ಲಿ ಪಾಣರು ತುಳು ಭೂತಗಳ ಪಾಡ್ದನಗಳನ್ನು ಕನ್ನಡಕ್ಕೆ ಭಾಷಾಂತರಗೊಳಿಸಿ ಒಪ್ಪಿಸುವ ಕ್ರಮ ಕುತೂಹಲದಾಯಕವಾಗಿದೆ. ಇದು ಹಲಗೆ-ಬಳಪವ ಹಿಡಿದು ಮಾಡಿದ ಭಾಷಾಂತರವಲ್ಲ. ಅನಕ್ಷರಸ್ಥ ಪಾಣರು ಕನ್ನಡ ಸಂದರ್ಭದಲ್ಲಿ ತುಳು ಪಾಡ್ದನದ ಧಾಟಿ ಬಿಟ್ಟು ‘ಹೊಗಳಿಕೆ’ ಯ ಧಾಟಿಯಲ್ಲಿ ಕತೆ ಹೆಣೆದುಕೊಂಡು ಹೋಗುತ್ತಾರೆ. ಈ ‘ಹೊಗಳಿಕೆ’ ಎನ್ನುವುದು ಕೋಲದ ಸಂದರ್ಭದಲ್ಲಿ ಆರಾಧನೆಯನ್ನು ಸ್ವೀಕರಿಸುವ ದೈವದೆದುರು ಅರ್ಧನಾರಿ ವೇಷದ ಪಾಣ, ಕಥನ ನಿರೂಪಣೆಯ ಮಾದರಿಯಲ್ಲಿ – ಮಾಧ್ಯಮ ಪುರುಷ ಭಾಷಾರೂಪದಲ್ಲಿ ನಿರೂಪಿಸುತ್ತಾ ಹೋಗುತ್ತಾನೆ. ತುಳಿವಿನ ಭೂತ (ದೈವ) ವನ್ನು ಮೈದುಂಬಿಕೊಂಡ ಭೂತ ಮಾಧ್ಯಮನು ನೇಮ ಕೋಲಗಳ ಸಂದರ್ಭಗಳಲ್ಲಿ ಉತ್ತಮ ಪುರುಷ ಧಾಟಿಯಲ್ಲಿ ನಿರೂಪಿಸುವುದಿದೆ. ನಾಟಿ ಗದ್ದೆಗಳಲ್ಲಿ ಮಹಿಳೆಯರು ಪಾಡ್ಡನ ಹಾಡುವಾಗ ಅದು ಪ್ರಥಮ ಪುರುಷ ಧಾಟಿಯಲ್ಲಿ ಇರುತ್ತದೆ. ತುಳು ಪಾಡ್ಡನಗಳಲ್ಲಿರುವಂತೆ ಭೂತಗಳ ಸಂಚಾರ ಈ ಹೊಗಳಿಕೆಗಳಲ್ಲಿ ಇದ್ದು ಅದು ತುಳುನಾಡನ್ನು ದಾಟಿ ಕನ್ನಡ ಪ್ರದೇಶಕ್ಕೆ ವಿಸ್ತರಿಸುತ್ತದೆ. ಮರ್ಲ್‌ಚಿಕ್ಕುವಿನ ಹೊಗಳಿಕೆ ತುಳುನಾಡಿನ ಅಬ್ಬಗದಾರಗರ ಕಥೆಯನ್ನು ನೇರವಾಗಿ ಹೋಲುತ್ತದೆ. (ನೋಡಿ: ಅನುಬಂಧ). ಕನ್ನಡ ಪ್ರದೇಶದ ದೈವ ಮರ್ಲ್‌‌ಚಿಕ್ಕುವಿನ ಹೊಗಳಿಕೆ ತುಳುನಾಡಿನ ಅಬ್ಬಗ ದಾರಗರ ಕತೆಯನ್ನು ಹೋಲುತ್ತದೆ (ನೋಡಿ : ಅನುಬಂಧ).

ಅನುಬಂಧ

ಮರ್ಲ್‌ಚಿಕ್ಕುವಿನ ಹೊಗಳಿಕೆ
ಅಕ್ಕಿ ತಂಗಿಯರು ನೀವು ನಿಜವೇನೆಂದರೆ
ಆ ಮರಳಮ್ಮನೆ ನೀವು ಇರುವಾಗ್ಳಿಗೆ
ಬೆಳ್ಳಿ ಮೂಡಿತು ಬೆಳಗಿನ ಜಾವ
ಆ ಶಿರಮುಡಿಯ ಬಾಚಿ ಕಟ್ಟಿದಳಮ್ಮ
ಆ ಅಕ್ಕತಂಗಿಯರೆ ಮಾತನಾಡುತ್ತೇನಂದೆ
ಮಲ್ಲು ಮಲ್ಲಿಗೆ ಹೂವ ಮುಡಿದಾಳಮ್ಮ
ಕಣ್ಣಿಗಾಗಿ ಕಪ್ಪ ಇಡುವಾಳಮ್ಮ
ಹಣಿಗೆ ಬೊಟ್ಟು ಅವಳು ಇಡುತ್ತೇನಂದೆ
ಲಾವಂಗದ ಚಿನ್ನ ತೊಡುವಾಳಮ್ಮ
ದೇವಾಂಗದ ಶಾಲೆ ಸಿರಿದುಟ್ಟವ್ಳೆ
ಆ ಅಕ್ಕತಂಗಿಯವ್ರೆ ಮಾತನಾಡುತೇನಂದೆ
ಚೆನ್ನೆಯಾಟವ ನಾವು ಆಡಲಬೇಕೆ
ತಾಯಿಯಾದರೆ ಮನೆಯಲ್ಲಿಲ್ಲ ವೇನಂದೆ
ಚೆನ್ನೆಮಣೆಯೆ ತಮಗೆ ಇಲ್ಲದೇನಂದೆ
ಆ ಆಲುಂಚನಿ ನೀವು ಮಾಡುವಾಗ್ಳಿಗೆ
ಭಿಕ್ಷಕಾಗಿ ಜೋಯಿಸ್ರು ಬರುತೇನಂದೆ
ಆ ಮೂರು ಮಾತನೆ ನೀನು ಹೇಳುತೇನಂದೆ
ಭಿಕ್ಷುವ ನಿಮಗೆ ಕೊಡಲೇಬೇಕಾದರೆ
ನಿಮಗೊಂದು ಸಾಮಕ್ಷ ಹೇಳಲೇಬೇಕೆ
ಚೆನ್ನಿಮಣೆಯ ನಮಗೆ ಇಲ್ಲವೇನಂದೆ
ಯಾವ ಸ್ಥಳದಲ್ಲೆ ಸ್ವಾಮಿ ಇರುವಾದಂದೆ
ಆ ಮೂರು ಮಾತನೆ ನೀನು ಹೇಳಲೆಬೇಕೆ
ಆಲಂಚನೆ ಜೋಯಿಸ್ರು ಮಾಡುತೇನಂದೆ
ಆ ತೆಂಕಾನ ಅರಿಯಲ್ಲೆ ಇರುವಾದಂದೆ
ಆ ಕಂಚಿನ ಕಲುಬಿಲ್ಲೆ ಇರುವಾದಂದೆ
ಸಾಮಕ್ಷನೆ ಜೋಯಿಸ್ರು ಇಡುತೇನಂದೆ
ಆ ತೆಂಕಣ ಅರಿಯಲ್ಲೇ ಇರುವಾದಂದೆ
ಆ ಕಂಚಿನ ಕಲುಬಿಲ್ಲೆ ಇರುವಾದಂದೆ
ಸಾಮಕ್ಷನೆ ಜೋಯಿಸ್ರು ಹೇಳುವಾಗ್ಳಿಗೆ
ಭಿಕ್ಷುವ ಜೋಯಿಸ್ರಿಗೆ ಕೊಡುವಾಗ್ಳಿಗೆ
ಅಕ್ಕತಂಗಿಯವ್ರೆ ಕೂಡಿ ನಡೆದರಮ್ಮ
ತೆಂಕಣ ಅರಿಯಗಾಗಿ ಹೋಗುತೇನಂದೆ
ಕಂಚಿನ ಕಲುಬಿನ ಬೀಗ ಮುರಿತೇನಂದೆ
ಆ ಬೆಳ್ಳಿ ಚೆನ್ನೆಮಣೆಯ ತೆಗೆದುಕೊಂಡೆ
ಕವುಡಿಗಿ ಹರಳನ್ನ ಹಿಡಿದುಕೊಂಡೆ
ಆ ಬಣ್ಣದ ಚಾವಡಿಗೆ ಬರುವರಲ್ಲ
ಅಕ್ಕ ತಂಗಿಯವ್ರೆ ಮಾತನಾಡುತೇನಂದೆ
ಆ ನಾವಂದು ಆರತಿಯ ಮಾಡಲೆಬೇಕೆ
ಆ ಚೆನ್ನೆಯಾಟವೆ ಮೂರ್ತ ಮಾಡುತೇನಂದೆ
ಗೇಲ್‌ಮೈಯಲ್ಲೆ ನಮ್ಮ ಮರುಳುನೆ ಕೂರುತೇನಂದೆ
ಸೋಲು ಮೈಇಯಲ್ಲೆ ಅಕ್ಕ ಕೂರುತೇನಂದೆ
ಹತ್ತೆಂಟಾದರೆ ಆಟ ಆಡುವಾಗ್ಳಿಗೆ
ಆ ಮರುಳಮ್ಮನೆ ಆಟ ಗೆಲುತೇನಂದೆ
ಮಾಸಿಟ್ಟಾದರೆ ಅಕ್ಕನಿಗೆ ಬರುತೇನಂದೆ
ಅಕ್ಕ ತಂಗಿಯವ್ರೆ ಜಗಳ ಮಾಡುತ್ತೇನಂದೆ
ಬಹುಸಿಟ್ಟಾದರೆ ಅಕ್ಕನಿಗೆ ಬರುವಾಗ್ಳೀಗೆ
ಆ ಚೆನ್ನೆಮಣೆಯನೆ ಒಯಿದು ಕಸಿದಳಕ್ಕ
ಆ ಮರಳಿಯ ತಲೆಯ ಮೇಲೆ ಹೊಡೆವಾಗ್ಳಿಗೆ
ತಲೆ ಒಡೆದು ಮರಳಿ ಬಿಡುತೇನಂದೆ
ಆ ಭೂಮಿಗಾಗಿ ಮರಳಿ ಬೀಳುತಾಗಳಂದೆ
ರಕ್ತಗಳೆ ಹರಿದು ಹೋಗುವಾಗ್ಳಿಗೆ
ಅಕ್ಕನಾದರೆ ನಿಂತು ನೋಡುವಾಗ್ಳಿಗೆ
ಆ ಮಾ ದುಃಖ ಅಕ್ಕ ಬಿಡುತೇನಂದೆ
ಆ ಬಂಗಾರದ ತಂಗಿ ಮಹಾ ಒಳ್ಳೆಯವ್ಳೆ
ಆ ತಂಗಿ ಸತ್ತು ನಾ ಇದ್ದು ಫಲವೇನಂದೆ
ಆ ಮರುಳಮ್ಮ ನ ಬಾಚಿ ಚಂಚಕೊಂಡೆ
ಉರ್ಕಿತೋಟದ ಬಾಮಿಗೆ ನಡೆದಳಕ್ಕ
ಆ ಬಾಮಿಗೆ ಬೀಳುತೇನಂದೆ
ಆ ಮನಿಗಾದರೆ ತಾಯಿ ಬರುವಾಗಳಮ್ಮ
ಮಗಳು ಮರಳೀನ ತಾಯಿ ಕರಿತೇನಂದೆ
ಈ ನನ್ನ ಮಕ್ಕಳು ಮನೆಯಲ್ಲಿ ಇಲ್ಲದೇನಂದೆ
ಬಣ್ಣದ ಚಾವಡಿಲಿ ನೋಡುವಾಗ್ಳೀಗೆ
ಚೆನ್ನೆಮಣೆಯ ಕೌಚಿ ಬೀಳುತೇನಂದೆ
ರಕ್ತಗಳೆ ಹರಿದು ಹೋಗುತೇನಂದೆ
ಆ ಮಹಾ ದುಃಖ ತಾಯಿ ಹೊರುತೇನೆಂದೆ
ಆ ಉರ್ಕಿತೋಟದ ಬಾಮಿಗೆ ಬಂದಳಮ್ಮ
ಬಾಮಿಯಲಲೆ ನಿಂತು ನೋಡುವಳಮ್ಮ
ಆ ಅಕ್ಕಿತಂಗಿಯವ್ರೆ ಬಾಮಿಗೆ ಬೀಲುತೇನಂದೆ
ಆ ಮಾದುಃಖವ ತಾಯಿ ಬಿಡುತೇನಂದೆ
ಊರ ಜನರೇ ಓಡಿ ಬರುತಾರಂತೆ
ಸಮಾಧಾನವೆ ತಾಯಿಗೆ ಹೇಳುವಗ್ಳೀಗೆ
ಆ ಪತಿವ್ರತೆಯ ನಾನು ನಿಜವಾಗಿ
ಆ ಕಂತಿದ ಹೆಣಗಳು ಬಳಿಯಬೇಕು
ತನ್ನ ಮುದ್ರದುಂಗುರವ ಆ ತಾಯಿ ಕಳಚಿಕೊಂಡಳೆ
ಆ ಬಾಮಿಗಾಗಿ ಉಂಗ್ರ ಬಿಡುವವಳಿಗೆ
ಆ ಕಂತಿದ ಜೋಡು ಹೆಣಗಳು ……….
ಆ ಬಾಯಿಯಿಂದ ನಿಮ ನೆಗಿದರಲ್ಲ
ಜೋಡು ಹೆಣಗಳು ನಿಜವೇನಂದೆ
ಉಳುಹಾಲ (ಉಳ್ಳಾಲ) ದ ಮಲಗದ್ದೆಗೆ ತರುತನಂದೆ
ಆ ಗಂಧದ ಚೆಕ್ಕೆಯಲ್ಲಿ ಸುಡುವಾಗೆ
ಆ ಪತಿವ್ರತೆ …….
ಜೈನ ಕುಲದ ಹೆಣ್ಣು ನೀನು
ಮೈ ಸುದ್ದಾನೆ ಮರಳಿ ಮುಗಿ ……
ಧರ್ಮಸ್ಥಳದಲ್ಲೆ ಹೋಗಿ ನಿಲ್ಲ …..
ಆ ಮುಂಜುನಾಥನಿಗೆ ವಂದ್ನಿ
ವರವ ಕೊಡೊ ದೇವ್ರೆ ……..
ಆ ಬಡರಾಜ್ಯಕ್ಕೆ ನಾನು ಹೋ …….
ಕಪ್ಪ ಕಾಣಿಕೇನ ನಾ ಸೆಳಿತೇನಂದೆ

ಬಬ್ಬರ್ಯನ ಹೊಗಳಿಕೆ

ಬಬ್ಬರ್ಯರೇ ನಿಮ್ಮ ನಿಜವೇನೆಂದು
ಏಳು ಜನ ಅಣ್ಣತಮ್ಮರು ಹುಟ್ಟುತೇನೆಂದೆ
ತಂದೆ ಹತ್ರನೇ ಮಕ್ಕಳು ಹೇಳುತೇನೆಂದೇ
ಬರವು-ಸರವು ನಾವು ಕಲಿಲೇಬೇಕು
ಆ ಮಾತನ್ನೇ ತಂದೆ ಕೇಳಿಸಿಕೊಂಡು
ಬರವು ಮಠವ ನಿಮಗೆ ಕಟ್ಟುತೇನೆಂದೆ
ಐಗಳನೇ ಕರೆದುಕೊಂಡು ಹೊಯಿಗೆ ಮೂರ್ತವ ಮಾಡುತ್ತೇನೆಂದೆ
ಕೈಯ ಅಕ್ಷರ ಬಾಯಿಗೆ ಬರುತ್ತೇನೆಂದೆ
ಬಾಯಿ ಅಕ್ಷರ ಕೈಗೆ ಸಿಗುತೇನೆಂದೆ
ಹೊಯಿಗೆ ಬರವ ನೀವು ಕಲಿತ ಮೇಲೆ
ಹಲಗಿ ಬರುವ ಮೂರ್ತ ಮಾಡುತೇನಂದೆ
ಹಲಗಿ ಬರವ ನೀವು ಕಲಿತ ಮೇಲೆ
ವಾಲೀ ಬರವ ಮೂರ್ತ ಮಾಡುತ್ತೇನಂದೆ
ಬರಸವ ಸುದ್ದ ಕಲಿತ ಮೇಲೇ
ತಂದೇ ಹತ್ರನೇ ಮಕ್ಕಳು ಹೇಳುತೆನಂದೆ
ಯಾಪಾರ ಸಾಪಾರ ಮಾಡಲೇಬೇಕೇ
ಯೇಳು ಜನ ಅಣ್ಣತಮ್ಮರು ಇರುವಾಗಳಿಕೆ
ಯೇಳಂಗಡಿನೆ ನೀವು ಕಟ್ಟುತೇನಂದೆ
ರಾಗಿ ನವಣಿಯ ಪಾಪಾರ ನೀವು ಮಾಡುತೇನಂದೆ
ಜವಳಿ ಜಟ್ಟಿಯ ಯಾಪಾರ ಮಾಡುತೇನಂದೆ
ಹಾರಿ ಹತ್ತಿಯ ಯಾಪಾರ ಮಾಡುತೇನಂದೆ
ಯಾಪಾರ ಸಾಪಾರ ನಡೆವಾಗಳಿಕೆ
ಹಣವಂತರು ನೀವು ಆದ ಮೇಲೆ
ಪರಬಂದ್ರದ ಯಾಪಾರ ಮಾಡಲೇ ಬೇಕು
ಹಡಗುಗಳ ಅಣ್ಣ ಹೂಡಲೇಬೇಕು
ಹಡಗಿಗಾಗುವ ಮರವ ತರಲೇಬೇಕು
ಹಡಗಿಗಾಗುವ ಮರ ಇಲ್ಲಾನಂದೆ
ಆಲೋಚನೆ ನೀವು ಮಾಡುವಾಗಳಿಕೆ
ಗಂಗೆ ಗೌರಿ ಎಂಬ ಮರವಾದರೆ ಕಣಜಾರಲ್ಲೆ ಇರುವುದೆಂದೆ
ಯೇಳು ಜನ ಮೊಗೇರರ ನೀ ಕರೆದುಕೊಂಡೆ
ತುಳುನಾಡ ಆಚಾರಿನ ಕರುದುಕೊಂಡೆ
ಯೇಳು ಜನ ಅಣ್ಣ ತಮ್ಮರು ಹೊರಟಾರಲ್ಲ
ಕಣಜಾರಲ್ಲೇ ಹೋಗಿ ನಿಲ್ಲುತ್ತೇನಂದೆ
ಮರ ಅರ್ಸೀ ಮರ ಮೂರ್ತ ಮಾಡುವಾಗಳಿಕೆ
ತುಳುನಾಡ ಆಚಾರಿ ಇರುವಾಗಳಿಕೆ
ಮರಕ್ಕಾದರೆ ಮಚ್ಚು ಬಿಡುತೇನಂದೆ
ತೆಂಕರಾಜ್ಯಕ್ಕೆ ಮರಬೀಳುತೇನಂದೆ
ಏಳು ಜನ ಅಣ್ಣ ತಮ್ಮರು ಹೇಳುತೇನಂದೆ
ತಲೆತುಂಡು ಕಾಂತೇಸ್ವರದ ದೇವರಿಗಂದೆ
ಬಡತುಂಡು ಕೋಟಿಸ್ವರದ ತೇರಿಗೆಂದೆ
ಯೇಳು ಜನ ಮೊಗೇರರು ಇರುವಾಗಳಿಕೆ
ಕಡಲ ಬದಿಗೆ ಮರ ಎಳೆದಾರಲ್ಲ
ತುಳುನಾಡ ಆಚಾರಿ ಇರುವಾಗಳಿಕೆ
ಹಡಗುಗಳ ನೀ ಹೂಡುತ್ತೇನಂದೆ
ಹಡಗಿಗಾಗುವ ಹಾರ ಕೊಡುತ್ತೇನಂದೆ
ಕೋಲಿಯನ್ನ ಕುರಿಯನ್ನ ಕಡಿದಾರಲ್ಲ
ಸಮುದ್ರಕ್ಕಾಗಿ ಹಡಗು ಮಾಢುವಾಗಳಿಕೆ
ಜೀನಸ್‌ವಗೈರಿ ಹಡಗಿಗೆ ತುಂಬುತ್ತೇನಂದೆ
ಯೇಳು ಜನ ಅಣ್ಣ ತಮ್ಮರ್ರು ಹತ್ತುತೇನಂದೆ
ಪರಬಂದರಕ್ಕೆ ಹಡಗು ಬಿಡುತ್ತೇನಂದೆ
ಗೂವ (ಗೋವ) ಕುಚ್ಚಿಗೆ (ಕೊಚ್ಚಿ) ಹಡಗು ಬಿಡುವಾಗ್ಳಿಕೆ
ಸುಳಿನೀರಲ್ಲೆ ಹಡಗು ಇರುವಾಗಳಿಕೆ
ಗಾಳಿ ತುಪಾನಿಗೆ ಹಡಗು ಸಿಗುತ್ತನಂದೆ
ಹಡಗು ಒಡೆದು ನೀವು ಮಾಯವಾದರೆ
ಉದಿಯವರ (ಉದ್ಯಾವರ) ದಲ್ಲೆ ಅಣ್ಣ ಉದಿಯಾದನೆ
ಕಾಪು ಕಟ್ಟುಪಾಡಿ ದಾಟಿಕೊಂಟೆ
ಹೊನ್ನಾವರಕ್ಕೆ ಹೋದಿ ನೀನು ಹೆರಿ ಬಬ್ಬರ್ಯ
ಕಾಸನ ಅಡಿಯಲ್ಲೇ ನೀನು ಅದಿ ಕಿರಿ ಹಬ್ಬರ್ಯನೆ
ಮಾರಸ್ವಾಮಿಯಲ್ಲೆ ಬಂದು ನಿಲ್ಲುತ್ತೇನೆಂದೆ
ಅರವತ್ತಾರು ಗರಡಿ ಪಡೆದುಕೊಂಡೆ
ನೂರೊಂದು ತುಂಡು ಸ್ಥಳವ ಪಡೆದುಕೊಂಡೆ
ಬಾಗಲ ಬಂಟನೆಂದೆ ಅನ್ನಿಕೊಂಡೆ
ಗಡಿಗಡಿಯಲ್ಲೆ ಬಂದು ನಿಲ್ಲುತ್ತೇನಂದೆ
ಗಡಿ ಬಬ್ಬರ್ಯನಂದೆ ಅನ್ಸಿಕೊಂಡೆ
ನೀನು ಈ ಸ್ಥಳದಲ್ಲಿ ಬಂದು ನಿಲ್ಲುತ್ತೇನಂದೆ
ಆ ಸ್ಥಳದಲ್ಲೇ ಸ್ಥಿರವಾಗಿ ನಿಲ್ಲುವಂತ ಬಬ್ಬರ್ಯ