ತುಳು ದ್ರಾವಿಡ ಭಾಷಾ ವರ್ಗದ ಸ್ವತಂತ್ರ ಭಾಷೆಯೆಂದು ಭಾಷಾ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಭಾಷಾ ವಿದ್ವಾಂಸರಿಂದ ಪರಿಗಣಿಸಲ್ಪಟ್ಟ ಭಾಷೆ. ಇದು ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿರುವ, ಹಾಗೆಯೇ ಸಾಹಿತ್ಯಕವಾಗಿಯೂ ಬೆಳೆಯುತ್ತಿರುವ ಭಾಷೆಯಾಗಿದೆ. ಇಂತಹ ತುಳು ಪರಿಸರದಲ್ಲಿ ಕಂಡುಬರುವ ಇನ್ನೊಂದು ಭಾಷೆ ಗೌಡ ಕನ್ನಡ. ಇದು ತುಳು ಪರಿಸರದಲ್ಲಿದ್ದರೂ, ಭಾಷಿಕವಾಗಿ ಇದಕ್ಕೆ ತುಳುವಿನೊಂದಿಗಿನ ನಿಕಟತೆ ತೀರ ಕಡಿಮೆ. ಆದರೆ ತುಳುವು ತನ್ನ ಸಾಂಸ್ಕೃತಿಕ ಅನನ್ಯತೆಯನ್ನು ಈ ಗೌಡ ಕನ್ನಡಿಗರ ಮೇಲೆ ಪೂರ್ಣ ಮಟ್ಟದಲ್ಲಿ ಪ್ರಭಾವಿಸಿದೆ. ಈ ಅಂಶಗಳನ್ನು ಪರಿಗಣಿಸಿ ತುಳು ಮತ್ತು ಗೌಡ ಕನ್ನಡಕ್ಕೆ ಇರುವ ಭಾಷಿಕ ಮತ್ತು ಸಾಂಸ್ಕೃತಿಕ ಪರಸ್ಪರತೆಗಳನ್ನು ಕಂಡು ಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಶಿಷ್ಟಮೂಲ ಭಾಷೆಯೊಂದಿಗೆ ಹೋಲಿಸುವಾಗ ಉಚ್ಚಾರಣೆ, ಶಬ್ಧ ಸಮೂಹ, ವ್ಯಾಕರಣ ಪ್ರಕ್ರಿಯೆಗಳಲ್ಲಿ ಕೆಲವೊಂದು ಭಿನ್ನತೆ ತೋರಿ ಬರುವುದೇ ಉಪ ಭಾಷೆಯ ಪ್ರಧಾನ ಗುಣಗಳು. ಈ ದೃಷ್ಟಿಯಿಂದ ಗೌಡ ಕನ್ನಡವನ್ನು ಕನ್ನಡ ಭಾಷೆಯ ಉಪ ಭಾಷೆಯೆಂದು ವೈಜ್ಞಾನಿಕ ವಿಶ್ಲೇಷಣೆ ಸಂದರ್ಭದಲ್ಲಿ ಗುರುತಿಸಲಾಗಿದೆ. ಉಪ ಭಾಷೆಯ ಹುಟ್ಟು ಮುಖ್ಯವಾಗಿ ಅನ್ಯಭಾಷಾ ಸಂಪರ್ಕ, ಪರಿಸರ ಮತ್ತು ಸಂಸ್ಕೃತಿಯ ಪ್ರಭಾವ, ಸಾಮಾಜಿಕ, ಭೌಗೋಳಿಕ, ಕಾರಣಗಳಿಂದಾಗುತ್ತದೆ. ಗೌಡ ಕನ್ನಡ ಶಿಷ್ಟ ಕನ್ನಡದೊಂದಿಗೆ ಶಬ್ಧ ಸಮೂಹ, ವ್ಯಾಕರಣ ಸಂಬಂಧಿ ವಿಚಾರಗಳಲ್ಲಿ ಸಮೀಪವರ್ತಿಯಾಗಿದೆ. ಹಾಗೆಯೆ, ಅನೇಕ ಬಗೆಯಾಗಿ ಭಿನ್ನತೆಯನ್ನು ಹೊಂದಿದೆ. ಈ ಅಂಶಗಳನ್ನು ಪರಿಗಣಿಸಿ ಹೇಳುವುದಾರೆ, ಗೌಡ ಕನ್ನಡ ಭಿನ್ನತೆ ಮತ್ತು ವೈವಿಧ್ಯಗಳಿಂದ ವೈಶಿಷ್ಟ್ಯಪೂರ್ಣವಾಗಿದೆ.

ಗೌಡ ಕನ್ನಡವನ್ನು ಸಾಮಾಜಿಕ ಉಪಭಾಷೆಯ ಹಿನ್ನೆಲೆಯಲ್ಲಿ ಗಮನಿಸಿದಾಗ (ಪ್ರಾದೇಶಿಕವಾಗಿಯೂ) ಈ ಭಾಷೆಯಲ್ಲಿ ವ್ಯಕ್ತಗೊಳ್ಳುವ ಸಾಂಸ್ಕೃತಿಕ ಸಂಗತಿಗಳು ತುಳು ಭಾಷಿಕ- ಸಾಂಸ್ಕೃತಿಕ ಸಂಗತಿಗಳಾಗಿಯೇ ಕಂಡುಬರುತ್ತವೆ. ಭಾಷಿಕ ಸ್ವರೂಪದಲ್ಲಿ ಗೌಡ ಕನ್ನಡಕ್ಕೆ ಶಿಷ್ಟ ಕನ್ನಡದೊಂದಿಗಿರುವ ನಿಕಟತೆ ತುಳುವಿನೊಂದಿಗೆ ಇಲ್ಲ. ಈ ದೃಷ್ಟಿಯಿಂದ ಗೌಡ ಕನ್ನಡ ಶಿಷ್ಟ ಕನ್ನಡದಿಂದ ನಿಷ್ಪನ್ನಗೊಂಡ ಅದರ ಉಪಭಾಷೆಯೆಂದೂ ಭಾಷೆ ಮತ್ತು ಸಂಸ್ಕೃತಿಗಳಿಗಿರುವ ಸಂಬಂಧದ ಹಿನ್ನೆಲೆಯಲ್ಲಿ ತುಳು ಸಂಬಂಧಿಯೆಂದೂ ಗುರುತಿಸಬಹುದು. ಇದು ಗೌಡ ಕನ್ನಡ ಮತ್ತು ಅದನ್ನಾಡುವ ಜನವರ್ಗದ ವೈಶಿಷ್ಟ್ಯವೆಂದು ಗುರುತಿಸಬಹುದಾದ ಮುಖ್ಯ ಅಂಶ.

ತುಳುನಾಡಿನ ಪೂರ್ವ ದಿಕ್ಕಿನಲ್ಲಿ, ಅದರ ಭೌಗೋಳಿಕ ಘಟಕವಾಗಿರುವ ಸುಳ್ಯದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಗೌಡ ಕನ್ನಡಕ್ಕೆ ಶಿಷ್ಟ ಕನ್ನಡದೊಂದಿಗಿನ ಹತ್ತಿರದ ಸಂಬಂಧ ಕುತೂಹಲಕಾರಿಯಾಗಿದೆ. ಬಹುಶಃ ಐತಿಹಾಸಿಕ ಕಾಲಘಟ್ಟವೊಂದರಲ್ಲಿ ವಲಸೆ ಬಂದಿರುವ ಗೌಡರು ತಮ್ಮ ಮೂಲ ಭಾಷೆಯನ್ನು ಕೆಲವೊಂದು ಬದಲಾವಣೆಯೊಂದಿಗೆ ಉಳಿಸಿಕೊಂಡಿರುವ ಸಾಧ್ಯತೆ ಇಲ್ಲಿ ನಿಶ್ಚಲವಾಗಿದೆ. ಸಾಮಾಜಿಕವಾಗಿ ಗೌಡ ಜನಾಂಗದ್ದೇ ಭಾಷೆಯಾಗಿರುವ ಗೌಡ ಕನ್ನಡದ ಮೂಲವನ್ನು ಆ ಜನಾಂಗದ ಮೂಲದಲ್ಲಿ ಕಂಡುಕೊಳ್ಳಬೇಕಾಗುತ್ತದೆ.

ಐತಿಹಾಸಿಕವಾಗಿ ಗೌಡರು ತುಳುನಾಡಿನ ಮೂಲನಿವಾಸಿಗಳಲ್ಲ. ಇವರು ಹಾಸನದ ಐಗೂರು ಸೀಮೆಯಿಂದ ಬಂಗಾಡಿ, ಶಿರಾಡಿ, ಸುಬ್ರಹ್ಮಣ್ಯಗಳ ಮೂಲಕ ಘಟ್ಟದಿಂದ ಇಳಿದು ಈಗಿನ ದ. ಕ. ಜಿಲ್ಲೆಯ ಬೆಳ್ತಂಗಡಿ ಬಂಟ್ವಾಳ,ಪುತ್ತೂರು, ಸುಳ್ಯ ಕಾಸರಗೋಡಿನ ಪೂರ್ವ ಭಾಗದಲ್ಲಿ ಮತ್ತು ಕೊಡಗಿನ ಕರಿಕೆ, ಭಾಗಮಂಡಲಗಳಲ್ಲಿ ನೆಲೆ ನಿಂತವರಾಗಿದ್ದಾರೆ. ಸಂತಾನ ಬೆಳೆದಂತೆ ಹತ್ತು ಕುಟುಂಬ ಹದಿನೆಂಟು ಗೋತ್ರಗಳಾಗಿ ತಳವೂರಿದವರಾಗಿದ್ದಾರೆ. ಗಂಗವಾಡಿಯಿಂದ ಆಳಿದ ಕರ್ನಾಟಕದ ಪ್ರಖ್ಯಾತ ಕನ್ನಡಿಗ ರಾಜವಂಶ ಗಂಗರದ್ದು. ಮೂಲದಲ್ಲಿ ಇವರು ಒಕ್ಕಲಿಗರಾಗಿದ್ದವರು. ಈ ಗಂಗರು ರಾಜಕೀಯವಾಗಿ ನಿಷ್ಕ್ರಿಯರಾದ ತರುವಾಯ ತಮ್ಮ ಮೂಲ ಕಸುಬಾದ ಒಕ್ಕಲುತನಕ್ಕೆ ಮುಖ ಮಾಡುವುದು ಅನಿವಾರ್ಯವಾಗಿತ್ತು. ಇವರು ಮುಂದೆ ಗಂಗಡಿಕಾರರೆಂದು ಹಾಸನ ಪರಿಸರದಲ್ಲಿ ವಿಸ್ತರಿಸಿಕೊಂಡರು. ಹೀಗೆ ವಿಸ್ತರಿಸಿಕೊಂಡ ಗಂಗಡಿಕಾರ ಒಕ್ಕಲಿಗ ಗೌಡರು ತುಳುನಾಡಿಗೆ ಭಿನ್ನ ಕಾರಣಗಳಿಗಾಗಿ ವಿಸ್ತರಿಸಿಕೊಂಡರು. ಗೌಡರು ತುಳುನಾಡಿಗೆ ಸೀಮೋಲ್ಲಂಘನ ಮಾಡಿರಬಹುದಾದ ಕಾಲದ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಅಭಿಪ್ರಾಯಪಡುವಂತೆ, ಅದು ಕ್ರಿ. ಶ. ೧೪೦೦-೧೬೦೦ ಮಧ್ಯದ ಕಾಲಘಟ್ಟ ದಲ್ಲಿ ನಡೆದಿದೆ.

[1]

ಜಾನಪದ ವಿದ್ವಾಂಸರಾದ ಡಿ. ಜಿ. ನಡ್ಕ ‘ಗೌಡ ಜನಾಂಗದ ಐತಿಹಾಸಿಕ ಅವಲೋಕನ’ ಮಾಡುವಾಗ ಕೆಳದಿ ಆರಸರು ಗೌಡರಾಗಿದ್ದರೆಂದು ವಾದಿಸಿ, ಇವರು ಜಾತಿ ಸಂಬಂಧಿಗಳಾದ ಗೌಡರನ್ನು ಅಧಿಕಾರ ಸ್ಥಾನಗಳಿಗಾಗಿ ಕಳುಹಿಸಿದ್ದ ಕಾರಣಗಳಿಗಾಗಿ ತುಳುನಾಡಿಗೆ ಗೌಡರು ಬರುವಂತಾಯಿತು ಎನ್ನುತ್ತಾರೆ. ಕಾಲವನ್ನು ನಿರ್ಧರಿಸುವಾಗ ಅವರು ಕೆಳದಿ ಅರಸರಲ್ಲಿ ಪ್ರಖ್ಯಾತನಾದ ಸದಾಶಿವ ನಾಯಕನ ಕಾಲದಲ್ಲಿ (ಕ್ರಿ. ಶ. ೧೫೧೪-೪೬) ಈ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ.[2]

ಮೂಲತಃ ಗೌಡರು ಕೃಷಿಕಾರರು. ಒಕ್ಕಲು ಮಾಡುವುದು ಅವರ ಕಸುಬು. “ಘಟ್ಟದ ಮೇಲಿಂದ ಬಂದ ಒಕ್ಕಲಿಗ ಗೌಡರು ತುಳುನಾಡಿನಲ್ಲಿ ಗೌಡ ಜಾತಿ ವಾಚಕವನ್ನು ಉಳಿಸಿಕೊಂಡು ಒಕ್ಕಲಿಗ ಪೂರ್ವ ವಿಶೇಷಣವನ್ನು ಬಿಟ್ಟಿದ್ದಾರೆ” (ಎಂ. ಶಿವಣ್ಣ ನೆಲಮನೆ: ೧೯೯೬ ‘ವೀಳ್ಯ’ ಸ್ಮರಣಸಂಚಿಕೆ, ಸುಳ್ಯ). ದಟ್ಟ ಕಾಡು ಪ್ರದೇಶಗಳಿಂದಾವೃತವಾದ, ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿದ್ದ ಸುಳ್ಯ ಪರಿಸರದಲ್ಲಿ ನೆಲೆ ನಿಂತವರು ಗೌಡರಾಗಿದ್ದಾರೆ. ನಿರ್ಜನವಾಗಿದ್ದ ಈ ಪ್ರದೇಶದಲ್ಲಿ ನೆಲೆಯಾದ ಗೌಡರು ಮೂಲತಃ ಕನ್ನಡವನ್ನಾಡುತ್ತಿದ್ದರು. ಇವರು ಅನ್ಯ ಪರಿಸರದ ಸಂಸರ್ಗವಾದಗಲು, ತಮ್ಮದೇ ಆದ ಸ್ವತಂತ್ರ ಗೌಡ ಕನ್ನಡವನ್ನು ರೂಪಿಸಿಕೊಂಡರು. ಭಾಷೆಯ ದೃಷ್ಟಿಯಿಂದ ಯಥಾಸ್ಥಿತಿಯನ್ನು ಇರಿಸಿಕೊಂಡು ಭೌಗೋಳಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಪರಿಸರದ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಸ್ವೀಕರಿಸಿದರು. ತುಳುನಾಡಿಗೆ ಬಂದ ಗೌಡ ಪಂಗಡಗಳಲ್ಲಿ ಸುಳ್ಯ ಪರಿಸರದಲ್ಲಿ ನೆಲೆ ನಿಂತವರು ತರುವಾಯ ಕಾಸರಗೋಡು, ಕೊಡಗು ಪ್ರದೇಶಗಳಲ್ಲಿ ಕೃಷಿ ಭೂಮಿ ಅರಸಿ ವಿಸ್ತರಿಸಿಕೊಂಡರು. ಪಟ್ಟ-ವರ್ಗ ಭೂಮಿಗಳ ಒಡೆಯರಾಗಿ ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಗಟ್ಟಿನೆಲೆ ನಿಂತವರು. ಈ ಬಗೆಯ ಸಬಲತೆ ತಮ್ಮ ಭಾಷೆಯನ್ನುಳಿಸಿಕೊಳ್ಳುವಲ್ಲಿ ಅವರಿಗೆ ಸಹಕಾರಿಯಾಯಿತು.

ಬಂಗಾಡಿ ಮತ್ತು ಶಿರಾಡಿ ಘಟ್ಟಗಳ ಮೂಲಕ ಅಚ್ಚ ತುಳುನಾಡಿಗೆ ಇಳಿದ ಗೌಡ ಪಂಗಡಗಳು ಆ ಮೊದಲೆ ಇಲ್ಲಿ ನೆಲೆಯಾಗಿ ಭೂಮಿಯ ಒಡೆಯರಾಗಿದ್ದ, ಜೈನ ಬಂಟ, ಬಿಲ್ಲವ ಮೊದಲಾದ ಪ್ರಬಲ ಸಮುದಾಯಗಳ ಒಕ್ಕುಲುಗಳಾದರು. ಮಾತೃಮೂಲದಿಂದ ತಮ್ಮೊಂದಿಗೆ ಬಂದಿದ್ದ ಭಾಷೆಯನ್ನು ಕೈಬಿಬಿಟ್ಟು ಇಲ್ಲಿನ ಭಾಷೆಯಾಗಿದ್ದ ತುಳುವನ್ನು ಸ್ವೀಕರಿಸಿರುವುದು ಅವರಿಗೆ ಅನಿವಾರ್ಯವಾಗಿತ್ತು. ತರುವಾಯ ಇವರು ತುಳುಗೌಡರೆಂದು ಗುರುತಿಸಿಕೊಂಡರು. ಭಾಷೆಯ ದೃಷ್ಟಿಯಿಂದ ಒಂದೇ ಮೂಲದ ಗೌಡರಲ್ಲಿ ಭಿನ್ನತೆಗಳಾದವು. ಆದರೆ ಸಾಂಸ್ಕೃತಿಕವಾಗಿ ಯಾವುದೇ ಬಗೆಯ ವ್ಯತ್ಯಾಸಗಳು ಇವರೊಳಗೆ ಏರ್ಪಡಲಿಲ್ಲ.

ಬೌಗೋಳಿಕ ಮತ್ತು ಸಂಸ್ಕೃತಿ ನೆಲೆಗಳಲ್ಲಿ ಸುಳ್ಯ ಪರಿಸರವನ್ನು ತುಳುನಾಡಿನಿಂದ ಪ್ರತ್ಯೇಕಿಸುವುದು ಅಸಾಧ್ಯ. ತುಳುನಾಡಿನಲ್ಲಿರುವ ಎಲ್ಲಾ ಜಾತಿ ಸಮುದಾಯಗಳು ಸುಳ್ಯ ಪರಿಸರದಲ್ಲೂ ಇವೆ. ಗೌಡರದ್ದೇ ಎಂದು ಸುಳ್ಯವನ್ನು ಪರಿಗಣಿಸುವುದು ಸಾಧ್ಯವಿಲ್ಲ. ಆದರೆ ಸಂಖ್ಯಾದೃಷ್ಟಿಯಿಂದ ಈ ಪ್ರದೇಶ ಬಹುಪಾಲು ಗೌಡ ಸಮುದಾಯದಿಂದ ಕೂಡಿದೆ. ಸಾಮಾಜಿಕವಾಗಿ ತುಳುವೇ ಇಲ್ಲಿನ ಸಂಹವನ ಭಾಷೆ. ಜೊತೆಗೆ ಕೌಟುಂಬಿಕ ನೆಲೆಯಲ್ಲಿ ಮತ್ತು ಜನಾಂಗದ ನೆಲೆಯಲ್ಲಿ ಗೌಡ ಕನ್ನಡ ಚಾಲ್ತಿಯಲ್ಲಿದೆ. ಹಾಗೆಂದು ಅದನ್ನು ಇತರ ಜನಾಂಗದವರು ಮಾತನಾಡುವುದಿಲ್ಲವೆಂದು ಹೇಳಲಾಗದು. ಗೌಡರ ಸಂಸರ್ಗದಿಂದಾಗಿ ಇತರರು ಮಾತಾಡುತ್ತಾರೆ. ಆದರೆ ಅವರಿಗೆ ಅದು ಅಧಿಕೃತ ಭಾಷೆಯಲ್ಲ. ಇಡಿ ಸುಳ್ಯ ಪರಿಸರ ಸಾಂಸ್ಕೃತಿಕ ಮತ್ತು ಭಾಷಿಕ ಸಾಮರಸ್ಯಕ್ಕೆ ಒಂದು ಅತ್ಯುತ್ತಮ ಉದಾಹರಣೆ. ಒಂದೇ ಸಂದರ್ಭದಲ್ಲಿ ಇಲ್ಲಿನವರು ಪರಸ್ವರ ಒಂದಕ್ಕಿಂತ ಹೆಚ್ಚು ಭಾಷೆಗಳನ್ನಾಡುತ್ತಾರೆ. ಕಾಸರಗೋಡು ಮತ್ತು ಕೊಡಗಿಗೆ ಹೊಂದಿಕೊಂಡಿರುವ ಸುಳ್ಯ ಪ್ರದೇಶ. ಇದರಿಂದ ಸುಳ್ಯ ಪ್ರದೇಶ ಮಲೆಯಾಳ ಮತ್ತು ಕೊಡವ ಭಾಷಾ ಸಂಸ್ಕೃತಿಗಳ ಸಂಸರ್ಗಕ್ಕೆ ಒಳಗಾಗಿರುವುದು ಸಹಜವಾಗಿದೆ. ಜೊತೆಗೆ ಇಲ್ಲಿ ಇಂಡೊ-ಆರ್ಯನ್‌ ಭಾಷಾ ವರ್ಗಕ್ಕೆ ಸೇರುವ, ಕೊಂಕಣಿ ಮಾತಾಡುವ ಕೊಂಕಣಿಗರಿದ್ದಾರೆ. ಮರಾಠಿ ಮಾತಾಡುವ ನಾಯ್ಕ ಜನವರ್ಗದವರಿದ್ದಾರೆ. ಬ್ಯಾರಿ ಭಾಷೆ ಮಾತನಾಡುವ ಇಸ್ಲಾಮಿಯರಿದ್ದಾರೆ. ತುಳುವನ್ನೇ ಮಾತೃ ಭಾಷೆಯನ್ನಾಡುವ ಬಂಟ, ಬಿಲ್ಲವ, ತುಳುಗೌಡ, ಮನ್ಸ, ಮೇರ, ಇವರೆಲ್ಲದರೊಟ್ಟಿಗೆ ‘ಅರೆ ಬಾಸೆ’ ಯೆಂದು ಕರೆಯಿಸಿಕೊಳ್ಳುವ ‘ಗೌಡರು’ ಮಾತಾಡುವ ‘ಗೌಡ ಕನ್ನಡ’ ನೆಲೆಗೊಂಡಿದೆ. ಅಲ್ಲದೆ ಇತ್ತೀಚೆಗೆ ಇಂಜಿನೀಯರ್‌ ಮೆಡಿಕಲ್‌ ಕಾಲೇಜುಗಳ ಸ್ಥಾಪನೆಯೊಂದಿಗೆ ದೇಶದ ಇತರ ಭಾಷೆಗಳನ್ನಾಡುವವರು ಈ ಚಿಕ್ಕ ಪ್ರದೇಶ ಜಮಾಯಿಸುತ್ತಿದ್ದಾರೆ.

ಗೌಡ ಕನ್ನಡವನ್ನು ಮಾತಾಡುವ ಗೌಡ ಕನ್ನಡಿಗರು ಸುಳ್ಯದಲ್ಲಿ ಮಾತ್ರವಲ್ಲದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದಡ್ಕ, ಕಲ್ಪಪಳ್ಳಿಗಳಲ್ಲಿ ಮತ್ತು ಕೊಡಗು ಜಿಲ್ಲೆಯ ಮಡಿಕೇರಿ, ಕರಿಕೆ ಭಾಗಮಂಡಲ ಭೂಪ್ರದೇಶಗಳಲ್ಲಿಯೂ ಹರಡಿದ್ದಾರೆ. ಗೌಡ ಕನ್ನಡ ಶಿಷ್ಟ ಕನ್ನಡದ ಉಪ ಭಾಷೆಯಾಗಿದೆ. ತನ್ನೊಳಗೆಯೇ ಪ್ರಾದೇಶಿಕ ಭಿನ್ನತೆಯನ್ನು ಕೂಡ ಹೊಂದಿದೆ. ಸುಳ್ಯ ಪಟ್ಟಣ ಪರಿಸರದಲ್ಲಿ ಈ ಭಾಷೆ ಗಡುಸಾದ ಅಭಿವ್ಯಕ್ತಿಯನ್ನು ಹೊಂದಿದ್ದರೆ, ಮಡಿಕೇರಿ ಸುತ್ತಲಿನ ಗೌಡ ಕನ್ನಡ ಲಾಲಿತ್ಯದಿಂದ ಕೂಡಿದೆ. ಸುಳ್ಯ ತಾಲ್ಲೂಕಿನಲ್ಲಿಯೇ ವಾಕ್ಯ. ಶಬ್ಧಗಳ ಬಳಕೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಉದಾಹರಣೆಗಾಗಿ ಹೋಗುತ್ತಿಯಾ? ಎನ್ನುವ ಪ್ರಶ್ನಾರ್ಥಕ ಕ್ರಿಯಾವಾಕ್ಯ ಗುತ್ತಿಗಾರು ಪ್ರದೇಶದಲ್ಲಿ ‘ಹೋದಿಗನಾ?’ ಎಂದಾಗುತ್ತದೆ. ಮಂಡೆಕೋಲು ಪ್ರದೇಶದಲ್ಲಿ ‘ಹೋದ್ಯನಾ?’ ಎಂದು ಪ್ರಯೋಗವಾಗುತ್ತದೆ. ಹಾಗೆಯೆ ‘ಗಡ’ ಎನ್ನುವ ಪದ ಗುತ್ತಿಗಾರು ಪ್ರದೇಶದಲ್ಲಿ ಹೆಚ್ಚು ಬಳಕೆಯಾಗುತ್ತದೆ. ಕೇರಳದ ಗಡಿಭಾಗದಲ್ಲಿ ಮಲೆಯಾಳದ ಪ್ರಭಾವವಿದ್ದರೆ ಮಡಿಕೇರಿಯಲ್ಲಿ ಕೊಡವದ ಪ್ರಭಾವ ಎದ್ದು ಕಾಣುತ್ತದೆ. ಹವ್ಯಕ ಭಾಷೆಯಿಂದಲೂ ಪ್ರಭಾವಕ್ಕೊಳಗಾಗಿದೆ. ಉದಾಹರಣೆಗೆ, ‘ಅಂವ ಹೊತ್‌ಗಡ’ (ಅವನು ಹೋದಂತೆ) ಎನ್ನುವ ವಾಕ್ಯದ ‘ಹೋತ್‌’ ಎನ್ನುವ ಪದ ಹವ್ಯಕ ಭಾಷೆಯಿಂದ ಸ್ವೀಕಾರವಾದುದಾಗಿದೆ. ಹೆರ್ಕು (ಹೆಕ್ಕು), ಕೂಸು ಇತ್ಯಾದಿ ಅನೇಕ ಪದಗಳು ಹವ್ಯಕದಿಂದ ಬಂದವುಗಳಾಗಿವೆ. ಆದರೆ ಹವ್ಯಕದ ಈ ಪದಗಳು ಹಳಗನ್ನಡ ಪದಗಳು ಕೂಡ ಆಗಿವೆಯಾದ್ದರಿಂದ ಗೌಡ ಕನ್ನಡಕ್ಕೆ ಅವು ನೇರ ಹಳೆಗನ್ನಡದಿಂದ ಬಂದಿರುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ.

ಭಾಷಾಧ್ಯಯನದಲ್ಲಿ ‘ಗೌಡ ಕನ್ನಡದ’ ಉಲ್ಲೇಖ ಆಗಿರುವುದೇ ಕಡಿಮೆ. ಈ ಭಾಷೆಗೆ ‘ಗೌಡ ಕನ್ನಡ’ ವೆಂದು ಮೊದಲು ಹೆಸರಿಸಿದವರು ಎಂ. ಮರಿಯಪ್ಪ ಭಟ್ಟರಾಗಿದ್ದಾರೆ. ಇವರು Annual of Oriental Reserarch Institute, Madras ನಲ್ಲಿ ಜರಗಿದ ಭಾಷಾಧ್ಯಯನ ಸಂದರ್ಭವೊಂದರಲ್ಲಿ ಪ್ರಾಸ್ತಾವಿಕವಾಗಿ ಪ್ರಸ್ತಾಪಿಸಿದ್ದನ್ನು, ಭಾಷಾ ವಿಜ್ಞಾನಿ ಪ್ರೊ. ಕೆ. ಕುಶಾಲಪ್ಪ ಗೌಡರು ದಾಖಲಿಸಿದ್ದಾರೆ. “ಹವ್ಯಕ ಆಡುನುಡಿಯನ್ನು ಹವ್ಯಕ ಕನ್ನಡ, ಕೋಟದವರ ಕನ್ನಡವನ್ನು ಕೋಟ ಕನ್ನಡ ಎಂದು ಒಂದು ಜಾತಿಗೆ ಸೀಮಿತವಾದ ಕನ್ನಡದ ಪ್ರಭೇದವನ್ನು ಆಯಾ ಜಾತಿಯ ಹೆಸರಿನಿಂದ ಗುರುತಿಸುವ ರೂಢಿ ಭಾಷಾ ವಿಜ್ಞಾನದ ಕ್ಷೇತ್ರದಲ್ಲಿ ಬಳಕೆಗೆ ಬಂದ ಕಾರಣ ‘ಗೌಡ ಕನ್ನಡ’ ಮಾತಿನ ಪ್ರಭೇದವನ್ನು ‘ಗೌಡ ಕನ್ನಡ’ ವೆಂದು ಮೊದಲು ಪ್ರೊ. ಮರಿಯಪ್ಪ ಭಟ್ಟರು ಅಂಕಿತಗೊಳಿಸಿದರು. ಅವರನ್ನನುಸರಿಸಿ ಮುಂದೆ ಭಾಷಾ ವಿಜ್ಞಾನ ರೀತಿಯಲ್ಲಿ ಈ ಪ್ರಭೇಧವನ್ನು ಅಧ್ಯಯನಕ್ಕೊಳಪಡಿಸದ ಲೇಖನಗಳಲ್ಲಿ ನಾನೂ ಇದನ್ನು ಗೌಡ ಕನ್ನಡವೆಂದೇ ಗುರುತಿಸಿದೆ” (ಕೆ. ಕೆ. ಗೌಡ, ೧೯೯೬ ‘ವೀಳ್ಯ’ ದ. ಕ. ಮತ್ತು ಕೊಡಗು ಜಿಲ್ಲಾ ಗೌಡ ಸಮ್ಮೇಳನದ ಸ್ಮರಣ ಸಂಚಿಕೆ ಸುಳ್ಯ). ಹೀಗೆ ದಾಖಲಿಸುವ ಅವರು ‘ಗೌಡ ಕನ್ನಡ’ ವೆಂದು ಪರಿಗಣಿಸುವಲ್ಲಿ ಇರುವ ಸಂಧಿಗ್ಧತೆಯನ್ನು ಕೂಡ ಪ್ರಸ್ತಾಪಿಸುತ್ತಾರೆ. “ಈ ಹೆಸರಿಗೆ ಒಂದು ತೊಡಕಿದೆ. ಅಂದರೆ ಸಾಮಾಜಿಕವಾಗಿ ಒಂದೇ ಆಗಿರುವ ಗೌಡರು ಎಲ್ಲರೂ ಈ ಮಾತಿನವರಲ್ಲ. ಹಲವರು ತುಳು ಮಾತೃ ಭಾಷೆಯವರಾಗಿದ್ದಾರೆ. ಒಂದೇ ಕುಟುಂಬದಲ್ಲಿ ಒಂದು ತಂದೆ ತಾಯಿಯ ಮಕ್ಕಳು ತುಳು ಮಾತಾಡುವವರು, ಮತ್ತೊಂದು ತಂದೆ ತಾಯಿಯ ಮಕ್ಕಳು ಕನ್ನಡ ಮಾತಾಡುವವರು ಆಗಿರುವ ಉದಾಹರಣೆಗಳಿವೆ. ಗಂಡನಿಗೆ ತುಳು ಹೆಂಡತಿಗೆ ಕನ್ನಡ ಇಲ್ಲವೇ ಗಂಡನಿಗೆ ಕನ್ನಡ ಹೆಂಡತಿಗೆ ತುಳು ಮಾತೃ ಭಾಷೆಯಾಗಿರುವ ಉದಾಹರಣೆಗಳು ಬೇಕಾದಷ್ಟಿವೆ. ಆದುದರಿಂದ ಇದನ್ನು ಅಧಿಕೃತವಾಗಿ ಇದು ಗೌಡರ ಭಾಷೆ ಎನ್ನುವಂತಿಲ್ಲ. ಹವ್ಯಕ ಮುಂತಾದ ಪ್ರಭೇದಗಳಲ್ಲಿ ಆ ಸಾಮಾಜಕ್ಕೆ ಸೇರಿದ ಎಲ್ಲರೂ ಒಂದೇ ಮಾತನ್ನು ಆಡುತ್ತಾರೆ. ಈ ಪರಿಮಿತಿಯಲ್ಲಿ ಗೌಡ ಕನ್ನಡವೆಂದು ಹೆಸರನ್ನು ಬಳಸಬಹುದು.” ಎಂದು ತೀರ್ಮಾನಿಸುತ್ತಾರೆ. (ಕೆ. ಕೆ. ಗೌಡ, ೧೯೯೬ ‘ವೀಳ್ಯ’ ದ. ಕ. ಮತ್ತು ಕೊಡಗು ಜಿಲ್ಲಾ ಗೌಡ ಸಮ್ಮೇಳನದ ಸ್ಮರಣ ಸಂಚಿಕೆ ಸುಳ್ಯ).

ಡಾ. ಪ್ರಭಾಕರ ಶಿಶಿಲರಂತವರು ಇದನ್ನು ‘ಸುಳ್ಯ ಕನ್ನಡ’ ವೆಂದು ಕರೆಯಬಹುದೆನ್ನುತ್ತಾ ‘ಕುಂದಾಪುರ ಕನ್ನಡ’ ನಿರ್ದಿಷ್ಟ ಸಮುದಾಯ ಮಾತಾಡುವ ಭಾಷೆಯಾಗಿರದೆ ಒಂದು ಪ್ರದೇಶದ ಭಾಷೆಯಾಗಿ ಎಲ್ಲಾ ಸಾಮಾಜಿಕರಿಂದಲೂ ಬಳಕೆಯಾಗುವ ಭಾಷೆಯಾಗಿದೆ. ಗೌಡ ಕನ್ನಡ ಈ ದೃಷ್ಟಿಯಿಂದ ಭಿನ್ನವಾಗಿದೆ. ಇದು ಒಂದು ನಿರ್ದಿಷ್ಟ ಪ್ರದೇಶ ಮತ್ತು ಗೌಡ ಜನಾಂಗದಲ್ಲಿ ಮಾತ್ರ ಬಳಕೆಯಲ್ಲಿರುವ ಭಾಷೆಯಾಗಿ, ಇದು ಏಕ ಕಾಲದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಭಾಷೆಯಾಗಿ ಗುರುತಿಸಿಕೊಳ್ಳುತ್ತದೆ. ಪ್ರೊ. ಕೆ. ಕುಶಾಲಪ್ಪ ಗೌಡರು ಉಲ್ಲೇಖಿಸುವ ಹವ್ಯಕದಲ್ಲೂ ಕೂಡ ತುಳು ಮಾತಾಡುವ ಅಥವಾ ಹವ್ಯಕ ಮಾತಾಡುವ ‘ಸಮಿಶ್ರ ಭಾಷಾ ದಾಂಪತ್ಯ’ ಸಾಮಾನ್ಯವಾಗಿದೆ. ಇದು ಹಿಂದಿನ ಜಾತಿ ಭಾಷೆಗಳ ನಿರಂತರತೆಗೆ ಕಾರಣವಾಗಿದೆ. ಈ ದೃಷ್ಟಿಯಿಂದ ಹವ್ಯಕ ಕನ್ನಡವನ್ನು ಹೆಸರಿಸುವಂತೆ, ಗೌಡ ಕನ್ನಡವನ್ನು ಕೂಡ ಪ್ರತ್ಯೇಕವಾಗಿ ಹೆಸರಿಸುವಲ್ಲಿ ಅನ್ವಯಿಕ ಅರ್ಥವಂತಿಕೆ ಇದೆ.

(ವಿದ್ವಾಂಸರಲ್ಲಿ) ಗೌಡ ಕನ್ನಡವೆಂದು ಕರೆಯಬಹುದಾದ ಈ ಭಾಷೆ, ಇಂದು ಜನರಲ್ಲಿ ‘ಅರೆ ಭಾಷೆ’, ‘ಅರೆಗನ್ನಡ’ ವೆಂದು ಬಳಕೆಯಲ್ಲಿದೆ. ಕಳೆದ ಶತಮಾನದ ಆರಂಭದಷ್ಟು ಹಿಂದೆ ಇದು ಕೇವಲ ಗೌಡರ ನಡುವೆ ಮತ್ತು ಅವರ ಮನೆ ವ್ಯವಹಾರದ ನೆಲೆಯಲ್ಲಿ ಮಾತ್ರ ಬಳಕೆಯಲ್ಲಿತ್ತು. ಮೇಲ್ನೋಟಕ್ಕೆ ಇಂದು ಕೂಡ ಅದನ್ನು ಆಡುವಾಗ ಕೇಳುಗರಿಗೆ ಭಿನ್ನ ಭಾಷೆಗಳ ಆರ್ಧ ಸೇರುವಿಕೆಯಿಂದಾದ ಭಾಷೆಯಂತೆ ಕೇಳುತ್ತಿದೆ. ಆ ಭಾಷೆ ಬಾರದವರಿಗೂ ಅರ್ಧಂಬರ್ಧ ಅರ್ಥವಾಗುವಂತಿದೆ. ಬಹುಶಃ ಈ ಕಾರಣಗಳಿಗಾಗಿಯೆ ಅದನ್ನು ‘ಅರೆ ಭಾಷೆ’ ಎಂದು ಕರೆದಿರಬೇಕು. ಭಾಷಾ ವ್ವೈಜ್ಞಾನಿಕತೆಯ ಹಿನ್ನೆಲೆಯಲ್ಲಿ ನೋಡಿದರೆ ಅದನ್ನು ಆ ರೀತಿ ಕರೆಯುವುದು ಬಾಲಿಷವಾಗುತ್ತದೆ. ಅದು ಅರ್ಧ ಭಾಷೆಯಲ್ಲ, ಪೂರ್ಣ ಭಾಷೆ, ಗೌಡ ಕನ್ನಡವೆಂದು ಅದನ್ನು ಗುರುತಿಸುವುದರಿಂದ ಅದರ ವೈಶಿಷ್ಟವನ್ನು ಪರಿಗಣಿಸಿದಂತಾಗುತ್ತದೆ.

ಪ್ರೊ. ಕೆ. ಕುಶಾಲಪ್ಪ ಗೌಡರು ಗೌಡ ಕನ್ನಡದ ಬಗ್ಗೆ ಮೌಖಿಕವಾಗಿ ಸಂವಾದಿಸುವಾಗ ಕನ್ನಡದ ಪ್ರಭೇದವಾದ ನೀಲಗಿರಿ ಬೆಟ್ಟ ಸಾಲುಗಳ ಜನರಾಡುವ ‘ಬಡಗ’ ಭಾಷೆಯನ್ನು ಇದು ಹೋಲುತ್ತದೆನ್ನುತ್ತಾರೆ. ಮತ್ತು ಈ ಮೂಲಕ ಗೌಡ ಕನ್ನಡದ ಮೂಲವನ್ನು ಅಲ್ಲಿಗೆ ಕೊಂಡೊಯ್ಯುತ್ತಾರೆ. ಹಾಗೆಯೇ ಎಸ್‌. ವಿ. ಷಣ್ಮುಗಂ, ಗೌಡ ಕನ್ನಡದ ಲಿಂಗ ವಿವಕ್ಷೆಯನ್ನು ವಿವಕ್ಷಿಸಿ ಇದು ಉತ್ತರ ದ್ರಾವಿಡದ, ಈಗ ಪಶ್ಚಿಮ ಪಾಕಿಸ್ತಾನದ ಕಲತ್‌ಹಾಗೂ ದಕ್ಷಿಣ ಆಘಘಾನಿಸ್ತಾನದ ಇರಾಣಗಳಲ್ಲಿ ಬಳಕೆಯಲ್ಲಿರುವ ಬ್ರಾಹ್ರು ಈ ಭಾಷೆಗೆ ತೀರ ಹತ್ತಿರವಾಗಿದೆಯೆಂದು ಉಲ್ಲೇಖಿಸಿರುವುದನ್ನು ಕೂಡ ಕೆ. ಕುಶಾಲಪ್ಪ ಗೌಡರು ಪ್ರಸ್ತಾವಿಸುತ್ತಾರೆ. ಆದರೆ ಇದನ್ನು ಅವರು ತಮ್ಮ ಬರಹ ಗಳಲ್ಲಿ ದಾಖಲಿಸಿಲ್ಲ.

ಭಾಷಾ ವಿಜ್ಞಾನದ ರೀತಿಯಲ್ಲಿ, ಕನ್ನಡದ ಪ್ರಭೇದವಾದ ಈ ಭಾಷೆಯನ್ನು ಅಧ್ಯಯನಕ್ಕೊಳಪಡಿಸಿ, ೧೯೭೦ರಲ್ಲಿ ಅಣ್ಣಾ ಮಲೈ ವಿಶ್ವವಿದ್ಯಾನಿಲಯದಿಂದ ಇದನ್ನು ‘ಗೌಡ ಕನ್ನಡ’ ಎಂಬ ಶೀರ್ಷಿಕೆಯಲ್ಲಿ ಪ್ರೊ. ಕೆ. ಕುಶಾಲಪ್ಪ ಗೌಡರು ಪ್ರಕಟಿಸಿದ್ದಾರೆ. ಇದು ಗೌಡ ಕನ್ನಡದ ಕುರಿತಾದ ಅಧಿಕೃತ ಆಕರ ಗ್ರಂಥವಾಗಿದೆ. ಇದು ಪ್ರಕಟವಾದ ಬಳಿಕ ಗೌಡ ಕನ್ನಡದ ಕುರಿತಾದ ಬಿಡಿ ಬರಹಗಳು ಬಂದಿವೆ. ಹಾಗೆಯೆ ಕೆಲವು ಕಡೆ ‘ಗೌಡ ಕನ್ನಡ’ ದ ಉಲ್ಲೇಖಗಳಾಗಿವೆ. ಮೈಸೂರು ವಿ. ವಿ. ಯ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆಯ ಮೊದಲನೆಯ ಸಂಪುಟದಲ್ಲಿ ಕನ್ನಡದ ಉಪಭಾಷೆಗಳ ಬಗ್ಗೆ ಬರೆಯುವ ಸಂದರ್ಭದಲ್ಲಿ (೧೯೩೮; ೨೭೦- ೨೭೧) ಎಸ್‌. ಎಸ್‌. ಯದುರಾಜನ್‌ಈ ಗೌಡ ಕನ್ನಡದ ಬಗ್ಗೆ ಪ್ರಸ್ತಾಪಿಸುತ್ತಾರೆ. ಆದರೆ ಅವರು ಗೌಡ ಕನ್ನಡವನ್ನು ಕನ್ನಡದ ಉಪಭಾಷೆಯೆಂದು ಹೆಸರಿಸುತ್ತಾರೆಯೇ ವಿನಾಃ ಆ ಭಾಷೆಯ ಸ್ವರೂಪದ ಕುರಿತು ಏನನ್ನೂ ಹೇಳುವುದಿಲ್ಲ. ಹವ್ಯಕ ಕನ್ನಡದ ಬಗ್ಗೆ ವಿವರಿಸುತ್ತಾರೆ. ಕಾರ್ಕಳದಲ್ಲಿ ನಡೆದ ದ. ಕ. ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆ ‘ಅಕ್ಷಯ’ ದಲ್ಲಿ (ಪುಟ ಸಂಖ್ಯೆ ನಮೂದಿಸಿಲ್ಲ) ಎನ್‌. ಲಲಿತರವರು ‘ಕನ್ನಡದ ಉಭಾಷೆ- ಗೌಡ ಕನ್ನಡ’ ಎಂಬ ಲೇಖನವನ್ನು ಬರೆದಿದ್ದಾರೆ. ಇಲ್ಲಿ ಅವರು ಈ ಭಾಷೆಯ ವೈಶಿಷ್ಟ್ಯಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ೧೯೯೮ರಲ್ಲಿ ಸುಳ್ಯದಲ್ಲಿ ಜರಗಿದ ದ. ಕ. ಕೊಡಗು ಜಿಲ್ಲಾ ಗೌಡ ಸಮ್ಮೇಳನದ ಸ್ಮರಣ ಸಂಚಿಕೆ ‘ವೀಳ್ಯ’ ದಲ್ಲಿ ಪ್ರೊ. ಕೆ. ಕುಶಾಲಪ್ಪ ಗೌಡರು ಮತ್ತೆ ‘ಗೌಡ ಕನ್ನಡ ಎಂಬ ಕನ್ನಡ ಪ್ರಭೇಧ’ ಲೇಖನವನ್ನು ಬರೆದು ಸಾಮಾನ್ಯರಿಗೂ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಈ ಲೇಖನದಲ್ಲಿ ಈ ಭಾಷೆಯ ವೈಶಿಷ್ಟ್ಯವನ್ನು ದಾಖಲಿಸಿದ್ದಾರೆ. ಕನ್ನಡದ ಉಪಭಾಷೆಗಳ ಕಾಲ ಮತ್ತು ವಿಭಕ್ತಿ ವಿವಕ್ಷೆಯನ್ನು ವಿವೇಚಿಸುವ ಸಂದರ್ಭದಲ್ಲಿ ಜೆ. ರಾಮ ಸ್ವಾಮಿಯವರು ತಮ್ಮ ‘ಕನ್ನಡ ಭಾಷಾನುಯೋಗ’ ಕೃತಿಯಲ್ಲಿ ಗೌಡ ಕನ್ನಡವನ್ನು ಪರಿಗಣಿಸಿದ್ದಾರೆ. ಇನ್ನು ಹಲವು ಬಿಡಿ ಲೇಖನಗಳು ಈ ಭಾಷೆಯ ಹಿನ್ನೆಲೆಯಲ್ಲಿ ಬಂದಿವೆ. ಆದರೆ ಅವು ಈ ಭಾಷೆಯ ಅಂತರಿಕ ಸ್ವರೂಪ ವಿಶ್ಲೇಷಣೆಯನ್ನು ಹೊಂದಿರದೆ, ಭಾಷಾಭಿಮಾನ ತುಡಿತವನ್ನೊಳಗೊಂಡವುಗಳಾಗಿವೆ. ಗೌಡ ಕನ್ನಡದ ವ್ಯಾಕರಣ, ಶಬ್ಧಕೋಶ ಮೊದಲಾದ ರಚನೆಗಳು ಇನ್ನೂ ಆಗಿಲ್ಲ. ನಡೆದಿರುವ ಅಧ್ಯಯನಗಳು ಗೌಡ ಕನ್ನಡವನ್ನು ಸಮಗ್ರವಾಗಿ ತಿಳಿಯಲು ಆಕರ ಸಾಮಗ್ರಿಗಳಿಲ್ಲ.

ಸ್ವತಂತ್ರ ಭಾಷೆಯಿಂದ ತುಳುವಿಗೆ ಲಿಪಿ ಇಲ್ಲ. ಆದರೆ ೧೫ನೇ ಶತಮಾನದ ಅನಂತಪುರ ಶಾಸನ ತುಳುವಿಗೆ ಲಿಪಿ ಇತ್ತು ಎನ್ನುವುದನ್ನು ಪುಷ್ಟೀಕರಿಸಿದೆ. ೧೮೮೭ರಲ್ಲಿ ರೆ. ಎ. ಮ್ಯಾನರ್‌ತುಳು -ಇಂಗ್ಲಿಷ್‌ನಿಘಂಟು ರಚಿಸಿ ತುಳುವಿನ ಶಬ್ಧ ಸಂಪತ್ತಿನ ಪರಿಚಯ ಮಾಡಿದ್ದಾರೆ. ೧೮೮೨ ರಲ್ಲಿ ಇಂಗ್ಲಿಷ್‌ನಲ್ಲಿ ‘ಎ ಗ್ರಾಮರ್‌ಆಫ್‌ತುಳು ಲಾಂಗ್ವೆಜ್‌’ ಎಂಬ ವ್ಯಾಕರಣ ಗ್ರಂಥ ಬರೆದು ರೆ. ಜೆ. ಬ್ರಿಗೆಲ್‌ಮತ್ತು ೧೯೩೨ ರಲ್ಲಿ ತುಳುವಿನಲ್ಲಿ ತುಳು ವ್ಯಾಕರಣ ವನ್ನು ಪಣಿಯಾಡಿಯವರು ಬರೆದು ತುಳು ಸ್ವತಂತ್ರ ಭಾಷೆ, ಅದು ಯಾವುದೇ ಭಾಷೆಯ ಉಪಭಾಷೆಯಲ್ಲ, ಅಪಭ್ರಂಶವಂತೂ ಅಲ್ಲವೇ ಅಲ್ಲವೆಂದು ಅಧಿಕೃತಗೊಳಿಸಿದ್ದಾರೆ. ಈ ಬಗೆಯ ಬರವಣಿಗೆಗಳ ಪರಂಪರೆ ತುಳುವಿನಲ್ಲಿ ಇಂದೂ ನಡೆಯುತ್ತಿದೆ. ಐತಿಹಾಸಿಕವಾಗಿ ಗೌಡ ಕನ್ನಡದಲ್ಲಿ ಈ ಬಗೆಯ ಕಾರ್ಯಗಳಾಗಿಲ್ಲ.

ಗೌಡ ಕನ್ನಡ ತನ್ನ ಅಂತರಿಕ ಸಂರಚನೆಗಳಲ್ಲಿ ಹೊಂದಿರುವ ಕೆಲವೊಂದು ವೈಶಿಷ್ಟ್ಯಗಳಿಂದಾಗಿ ಇತರ ಭಾಷೆಗಳಿಗಿಂತ ಭಿನ್ನವಾಗಿದೆ. ಶಿಷ್ಟ ಕನ್ನಡದಲ್ಲಿ ೫ ಸ್ವರಗಳು ಮತ್ತು ಅವುಗಳ ದೀರ್ಘಗಳು ೨ ಸಂಧ್ಯಕ್ಷರಗಳು ಇವೆ. ಅದರ ಉಪ ಭಾಷೆಗಳಲ್ಲಿ ಇವುಗಳಲ್ಲದೆ a,e: o: ಮೂಲದಿಂದ ಕ್ರಮವಾಗಿ ¶, ೬, ¶ ಸ್ವರಗಳು ಬಂದಿವೆ. ತುಳುವಿನಲ್ಲಿ ಉg ಮತ್ತು ಎg ವಿಶೇಷವಾಗಿ ವೈಶಿಷ್ಟ್ಯವನ್ನು ಪಡೆದುಕೊಂಡಿವೆ. ಉದಾಹರಣೆಗಾಗಿ ಮಲ್ತ್‌gದ್‌, ಮರ್ದ gಡ್‌, ಪೋಪೆg, ಬತ್ತೆg ಇತ್ಯಾದಿ ಪದಗಳ ಸ್ವರ ಭೇಧವನ್ನು ಉಚ್ಚಾರ ಧ್ವನಿ ಭೇದಗಳಿಂದಲೇ ಗುರುತಿಸಬೇಕಾಗುತ್ತದೆ. ಬರವಣಿಗೆಯಿಂದ ಕಷ್ಟಸಾಧ್ಯ.

ಕನ್ನಡದ ವರ್ಣಮಾಲೆಯಲ್ಲಿಲ್ಲದ ಕೆಲವು ಸ್ವರಗಳು ಗೌಡ ಕನ್ನಡದ ಧ್ವನಿಮಾಗಳೆಂದು ಪರಿಗಣಿತವಾಗುತ್ತವೆ. ಇವು ತುಳು ಭಾಷೆಯಲ್ಲಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.

t ¶ ೬ ಕೊ. ಟ್ಟ್‌(ಕ್ರಿಯಾಪದ) ಕೊಟ್ಟು (ಹಾರೆ)
t – u ಕ. ರಿ (ಇದ್ದಿಲು) ಕರಿ (ನಾಮ ಪದ)
¶ – a ಹೆ. ರಿ (ಹೆಪ್ಪು) ಹೆರು (ಹಡೆಯು)
೬- e ಮೊ. ರಿ (ಬೊಗಳು) ಮೊರಿ (ಕುನ್ನಿ. ನಾಯಿ ಮರಿ),
¶ – o ಹಂದಿ

ಮೇಲಿನ ಉದಾಹರಣೆಗಳಲ್ಲಿ ಉಚ್ಚಾರಣೆಯ ವ್ಯತ್ಯಯದೊಡನೆ ಅರ್ಥವ್ಯತ್ಯಾಸವು ಆಗುತ್ತದೆ. ಆ ಕಾರಣದಿಂದ ಆಯಾ ಸ್ವರಗಳು ಗೌಡ ಕನ್ನಡದಲ್ಲಿ ಧ್ವನಿಮಾಸ್ಥಾನ ಪಡೆಯುತ್ತವೆ. ಇವುಗಳನ್ನು ಕನ್ನಡ ಲಿಪಿಯಲ್ಲಿ ಬರೆದು ತೋರಿಸಲು ಸುಲಭ ಮಾರ್ಗವಿಲ್ಲ. ಇಂತಹ ಹಲವು ಉದಾಹರಣೆಗಳು ದೊರೆಯುತ್ತವೆ(ಪ್ರೊ.ಕೆ. ಕುಶಾಲಪ್ಪ ಗೌಡ -೧೯೯೬. ‘ವೀಳ್ಯ’).

ಗೌಡ ಕನ್ನಡದಲ್ಲಿ ಅನುನಾಸಿಕ ಙ ಞ ಗಳು ಧ್ವನಿಮಾಗಳಾಗಿ ದ್ವಿತ್ವರೂಪದಲ್ಲಿ ಸಹಜವಾಗಿವೆ. ಉದಾ: ಮಙ ಮಗ ಹಞ (ಸ್ವಲ್ಪ) ನೊಙ (ನೊಗ) ಅವರ್ಗೀಯ ವ್ಯಂಜನಗಳಲ್ಲಿ ಶ. ಷ ಗಳು ತುಳುವಿನ ಸಂದರ್ಭದಲ್ಲಿ ಹೇಗೆ ಕಡಿಮೆ ಬಳಕೆಯಾಗುತ್ತವೆ. ಹಾಗೆಯೇ ಗೌಡ ಕನ್ನಡದಲ್ಲೂ ಇವುಗಳ ಬದಲಾಗಿ ‘ಸ’ ಮಾತ್ರ ಬಳಕೆಯಾಗುತ್ತದೆ. ಓದು ಬರಹ ಬಲ್ಲವರಲ್ಲಿ ಮೂರು ಕೂಡ ಬಳಕೆಯಾಗುತ್ತವೆ. ಉದಾ: ಭಾಸೆ, ಆಸೆ, ಖುಸಿ, ಸಂತೋಸೊ

ಗೌಡ ಕನ್ನಡದಲ್ಲಿ ಕಂಡುಬರುವ ಇನ್ನೊಂದು ವೈಶಿಷ್ಯವೆಂದರೆ ಸ್ತ್ರೀಲಿಂಗ ವಿವಕ್ಷೆ. ಇದರಲ್ಲಿ ಪ್ರ. ಪು. ಸ. ನಾ ಸ್ತ್ರೀಲಿಂಗಕ್ಕೆ ಪ್ರತ್ಯೇಕ ಪದವಿಲ್ಲ. ಪುಲ್ಲಿಂಗ ಮತ್ತು ಪುಲ್ಲಿಂಗೇತರ ಎಂಬ ಎರಡೇ ವಿಭಾಗವಿದೆ. ಉದಾ:

ಅಂವ (ಅವನು) ಇಂವ (ಇವನು) ಆದ್‌(ಅವಳು ಅಥವಾ ಅದು) ಇದ್‌(ಇವಳು ಅಥವಾ ಇದು)

ಪುಲಿ > ಪಿಲಿ. ಕಹಿ > ಕೈಪೆ ಹೀಗೆ ಹಳಗನ್ನಡದ ಮೂಲ ರೂಪ ಪದಗಳು ತುಳುವಿಗೆ ಕೆಲವೊಂದು ವ್ಯತ್ಯಾಸಗಳೊಂದಿಗೆ ಪ್ರಯೋಗವಾದರೆ, ಗೌಡಕನ್ನಡದಲ್ಲಿ ನೇರ ಪ್ರಯೋಗ ಪಡೆಯುತ್ತವೆ. ಉದಾ: ಹೈದ, ಗಡ, ಕೂಸು, ಇಕ್ಕ್, ಹುಗ್ಗೆ, ಕೊತ್ತಿ, ಹಡಪ ಇತ್ಯಾದಿಗಳು ಬಳಕೆಯಲ್ಲಿವೆ. ಉಚ್ಚಾರದ ಸೌಲಭ್ಯಕ್ಕಾಗಿ ಹಳಗನ್ನಡದ ಪದಗಳ ಕೊನೆಯ ಅಕ್ಷರಗಳು ಲೋಪವಾಗಿ ಬಳಕೆಯಾಗುತ್ತವೆ. ಉದಾ:-

ಹಳಗನ್ನಡ ಗೌಡಕನ್ನಡ
ಮಗಳ್ ಮಗ
ಮಕ್ಕಳ್ ಮಕ್ಕ
ಅವನ್‌ ಅಂವ
ಮರಗಳ್‌ ಮರಗ

ಕನ್ನಡ ಪದಗಳು ಗೌಡ ಕನ್ನಡದಲ್ಲಿ ಸ್ವಲ್ಪ ಬದಲಾದ ಅಥವಾ ಸಹಜ ರೂಪಾರ್ಥಗಳನ್ನು ಕೊಡುವಂತೆ ಬಳಕೆಯಲ್ಲಿವೆ. ಉದಾ:

ಕನ್ನಡ ಗೌಡ
ಬಿಳಿಪು ಬೊಳ್ಪು
ಕುಳಿ ಕುಳಿ
ಹುರಿ ಹೊರಿ

ಕನ್ನಡದ ಸಂಯುಕ್ತ ಪದಗಳು ಗೌಡ ಕನ್ನಡದಲ್ಲಿ ಸಂಕ್ಷಿಪ್ತಗೊಂಡು ಬಳಕೆಯಾಗುತ್ತವೆ.

ಉದಾ: ಹೋಗುತ್ತೇನೆ > ಹೋನೆ ಬರುತ್ತೇನೆ >ಬನ್ನೆ
ತರುತ್ತೇನೆ > ತನ್ನೆ ಬರಬೇಕು > ಬರೋಕು

ತುಳು ಮತ್ತು ಗೌಡ ಕನ್ನಡ ಒಂದೇ ಪರಿಸರದಲ್ಲಿ ಬಳಕೆಯಲ್ಲಿರುವ ಭಾಷೆಗಳು. ಆದರೆ ಗೌಡ ಕನ್ನಡಕ್ಕೆ ತುಳುವಿನೊಂದಿಗಿನ ಸಾದೃಶ್ಯ ಕಡಿಮೆಯೆನ್ನಬಹುದು. ಅದು ಶಿಷ್ಟ ಕನ್ನಡದ ನಿಷ್ಪನ್ನ ಭಾಷೆಯಾದ್ದರಿಂದ ಅದರೊಟ್ಟಿಗಿನ ಸಾಮ್ಯ ಸಹಜವಾಗಿಯೇ ಹೆಚ್ಚಾಗಿದೆ. ಗೌಡ ಕನ್ನಡಲ್ಲಿ ಬಳಕೆಯಲ್ಲಿರುವ ಅನೇಕ ಪದಗಳು ತುಳು ಪದಗಳು ಕೂಡ ಆಗಿವೆ. ಇವೆರಡು ಪರಿಸರ ಸಂಬಂಧಿ ಭಾಷೆಗಳಾದ್ದರಿಂದ ಅದು ಸಹಜ ಕೊಳ್ಕೊಡೆಯಾಗಿದೆ. ಶಾಬ್ಧಿಕ ಬಳಕೆಯ ನೆಲೆಯಲ್ಲಿ ತುಳು ಮತ್ತು ಗೌಡ ಕನ್ನಡಗಳಲ್ಲಿ ಕಂಡುಬರುವ ಈ ಕೊಳು- ಕೊಡೆ (ವಿನಿಮಯ) ಮೇಲ್ನೋಟಕ್ಕೆ ಮಾತ್ರ ಕಂಡುಬರುತ್ತದೆ. ಅದು ತುಳುವಿನ ಪದಗಳೇ ಎಂದು ತೀರ್ಮಾನಿಸುವುದು ಕಷ್ಟ. ಯಾಕೆಂದರೆ ತುಳುವು ಕೂಡ ದ್ರಾವಿಡ ಭಾಷೆಯಾದ್ದರಿಂದ ಅದರಲ್ಲಿರುವ ಪದಗಳು ಕೂಡ ಮೂಲದಲ್ಲಿ ಕನ್ನಡವೇ ಮೊದಲಾದ ದ್ರಾವಿಡ ಭಾಷೆಗಳ ಪದಗಳಾಗಿವೆ.

ತುಳು ಮತ್ತು ಗೌಡ ಕನ್ನಡಗಳಲ್ಲಿ ಬಹುಸಂಖ್ಯೆಯ ಪದಗಳು ರೂಪ ಸಾದೃಶ್ಯ ಮತ್ತು ಅರ್ಥ ಸಾದೃಶ್ಯದಿಂದ ಒಂದೇ ಬಗೆಯಾಗಿ ಬಳಕೆಯಲ್ಲಿವೆ.

ಶಿಷ್ಟ ಕನ್ನಡ ತುಳು ಗೌಡಕನ್ನಡ
ಗುದ್ದಲಿ ಗುದ್ದೊಲಿ ಗುದ್ದೊಲಿ
ಇರುವೆ ಪಿಜಿನ್ ಪಿಜಿನ್
ಗೆರೆಟೆ ಚಿಪ್ಪಿ ಚಿಪ್ಪಿ
ಗೆಲ್ಲು ಗೆಲ್ಲ್ ಗೆಲ್ಲ್
ಕಸಪೊರಕೆ ಮಾಯ್ಟು ಮಾಯ್ಟು
ಕಡೆಗೋಲು ಮಂತ್ ಮಂತ್
ಕಂಬ ಕಬೆ ಕಬೆ
ಕಣಜ ಕದಿಕೆ ಕೊದಿಕೆ
ಬೆಳಿಗ್ಗೆ ಬೊಳ್ಳು ಬೊಳ್ಳು
ಉಸುರು ಉಸುಳು ಉಸುಳು
ಅಮಾವಾಸ್ಯೆ ಅಮಾಸೆ ಅಮಾಸೆ
ಅಂದ ಪೊರ್ಲು ಪೊರ್ಲು
ಹೇಲುವುದು ಉರ್ಚು ಉರ್ಚು

ತುಳು ಮತ್ತು ಗೌಡ ಕನ್ನಡದಲ್ಲಿ ಇಂತಹ ಸಾವಿರಾರು ಪದಗಳು ಪರಸ್ಪರವಾಗಿವೆ. ಗೌಡ ಕನ್ನಡವು ಶಿಷ್ಟ ಕನ್ನಡ ನಿಷ್ಪನ್ನ ಭಾಷೆಯಾದರೂ ಶಿಷ್ಟ ಕನ್ನಡದಿಂದ ಅದು ಧ್ವನಿ ಸಮ್ನಾದಲ್ಲಿ ವ್ಯಾಕರಣ ವಾಕ್ಯ ರಚನೆಯಲ್ಲಿ ಗಣನೀಯ ವ್ಯತ್ಯಾಸವನ್ನು ಹೊಂದಿದೆ. ಈ ದೃಷ್ಟಿಯಲ್ಲಿ ತುಳುವಿನಿಂದ ತೀರ ಭಿನ್ನವಾಗಿದೆ.

ಸಾಹಿತ್ಯಕವಾಗಿ ತುಳುವಿನೊಂದಿಗೆ ಗೌಡ ಕನ್ನಡವನ್ನು ಸಮೀಕರಿಸಿ ನೋಡಿದರೆ, ಗೌಡ ಕನ್ನಡದಲ್ಲಿ ಹಳೆಯ ಕಾವ್ಯಗಳಾಗಲಿ, ಆಧುನಿಕ ಕಾವ್ಯಗಳಾಗಲಿ ಕಂಡುಬರುವುದಿಲ್ಲ. ತುಳು ಭಾಷೆಗಿರುವ ಐತಿಹಾಸಿಕ ಹಿನ್ನೆಲೆಯು ಗೌಡ ಕನ್ನಡಕ್ಕಿಲ್ಲ. ಸುಳ್ಯ ಪರಿಸರದಲ್ಲಿ ಈ ಭಾಷೆ ಸುಮಾರು ೪೦೦-೫೦೦ ವರ್ಷಗಳಷ್ಟು ಹಳೆಯದಿರಬಹುದಷ್ಟೆ. ಭೌಗೋಳಿಕವಾಗಿ ತುಳುನಾಡಿನ ಘಟಕವಾಗಿರುವ ಗೌಡ ಕನ್ನಡದ ಪರಿಸರ ಸಾಂಸ್ಕೃತಿಕವಾಗಿಯೂ ಅದರ ಘಟಕವಾಗಿದೆ. ಸಾಮಾಜಿಕವಾಗಿ ತುಳು ಮಾತಾಡುವ ಬಂಟ, ನಾಯ್ಕ, ಬಿಲ್ಲವ, ಮೇರ, ಮನ್ಸ ಸಮುದಾಯಗಳೊಟ್ಟಿಗೆ ಗೌಡ ಕನ್ನಡಿಗರು ನೆಲೆಯಾಗಿದ್ದಾರೆ. ಹೊರನಾಡಿನಿಂದ ವಲಸಿಗರಾಗಿ ಬಂದ ಗೌಡ ಕನ್ನಡಿಗರ ಭಾಷೆ ಇಲ್ಲಿನ ಮೂಲದವರ ಮೇಲೆ ಪರಿಣಾಮ ಬೀರುವಷ್ಟು ಪ್ರಭಾವಶಾಲಿಯಾಗಿರಲಿಲ್ಲ, ಅದು ಗೌಡ ಸಮುದಾಯದ ಭಾಷೆಯಾಗಿ ಮಾತ್ರ ಬಳಕೆಯಾಯಿತು. ಈ ಜನಾಂಗ ಭಾಷೆಯನ್ನು ಉಳಿಸಿಕೊಂಡು ಭೂಮಿ ಸಂಬಂಧಿಯಾಗಿ ಇಲ್ಲಿನ ಸಂಸ್ಕೃತಿಯನ್ನು ಒಪ್ಪಿಕೊಂಡಿತು. ಇದರಿಂದಾಗಿ ಭಾಷೆ ಮತ್ತು ಸಂಸ್ಕೃತಿಗೆ ಇರಬೇಕಾದ ಸಂಬಂಧ ಇಲ್ಲಿ ಪ್ರತ್ಯೇಕಗೊಂಡಿತು. ಸಾಂಸ್ಕೃತಿಕವಾಗಿ ಇವರು ತುಳುವರೇ ಆದರು. ಈ ಕಾರಣಗಳಿಂದಾಗಿ ಗೌಡ ಕನ್ನಡದಲ್ಲಿ ಕಾವ್ಯ ಪರಂಪರೆಯನ್ನು ಸೃಷ್ಟಿಸುವುದು ಸಾಧ್ಯವಾಗಲಿಲ್ಲ ಎನ್ನಬಹುದು. ಗೌಡ ಕನ್ನಡದಲ್ಲಿ ಮೌಖಿಕ ಪರಂಪರೆಯಲ್ಲೂ ಅಭಿಜಾತ ಕಾವ್ಯಗಳಾಗಲಿ ಜಾನಪದ ಮಾಹಾಕಾವ್ಯವೆಂದು ಪರಿಗಣಿತವಾದ ‘ಕೋಟಿ- ಚೆನ್ನಯ’ ಪಾಡ್ದನದ ಅವಳಿವೀರ ನಾಯಕರ ಆಡುಂಬೋಲ ಸುಳ್ಯ ಪರಿಸರವೇ ಆಗಿದೆ. ಆದರೂ ಕೂಡಾ ಆ ಕಾವುದ ಭಾಷೆ ಗೌಡ ಕನ್ನಡವಾಗಿಲ್ಲ. ಗೌಡ ಭಾಷಿಕರು ಭೂತಾರಾಧಕರಾಗಿದ್ದಾರೆ. ಆ ಸಂಬಂಧಿಯಾದ ಭೂತಗಳ ಹುಟ್ಟು ಕಾರಣಿಕ ಪ್ರಸರಣಗಳ ಕಥಾನಕಗಳನ್ನೊಳಗೊಂಡ ಸಂಧಿ ಪಾಡ್ದನಗಳು, ಆರಾಧನೆಯ ಸಂದರ್ಭದಲ್ಲಿ ಹೇಳಿಕೊಳ್ಳುವ ಬಿನ್ನಹ, ಪಾರಿಗಳು, ತುಳುವಿನಲ್ಲಿ ಬಳಕೆಯಾಗುತ್ತವೆ. ಗೌಡ ಕನ್ನಡಿಗರು ತಮ್ಮ ಮನೊಯೊಳಗೆ ಕೌಟುಂಬಿಕವಾಗಿ ಆರಾಧಿಸುವ ಆರಾಧನೆಗಳ ಸಂದರ್ಭದಲ್ಲಿ ಹೇಳುವ ಬಿನ್ನಹಗಳು ಮಾತ್ರ ಗೌಡ ಕನ್ನಡದಲ್ಲಿರುತ್ತವೆ.

ಹೀಗಿದ್ದೂ ಗೌಡ ಕನ್ನಡಕ್ಕೆ ಆದರದ್ದೇ ಆದ ಸಾಂಸ್ಕೃತಿಕ ಅನನ್ಯತೆ ಇದ್ದೆ ಇದೆ. ಅದರ ಮೌಖಿಕ ಪರಂಪರೆಯಲ್ಲಿ ಜನಪದ ಕತೆಗಳು, ಗಾದೆಗಳು, ಒಗಟುಗಳು ಇವೆ. ಇವುಗಳನ್ನು ಸಂಗ್ರಹಿಸಿ ಅಕ್ಷರ ಸಂಸ್ಕೃತಿಯಲ್ಲಿ ದಾಖಲಿಸುವ ಪ್ರಯತ್ನವಾಗಿಲ್ಲ. ತುಳು ಬರವಣಿಗೆಗಾಗಿ ಕನ್ನಡ ಲಿಪಿಯನ್ನು ಉಪಯೋಗಿಸುವಂತೆ ಇದು ಕೂಡ ಉಪಯೋಗಿಸುತ್ತದೆ. ಆದರೆ ಆ ಮೂಲಕ ಅದರ ಉಚ್ಚಾರವನ್ನು ಬರೆಯುವುದು ಇಲ್ಲಿಗೆ ತೊಡಕಾಗಿ ಪರಿಣಮಿಸಿದೆ. ಗೌಡ ಕನ್ನಡದಲ್ಲಿ ಸೋಬಾನೆ, ಗಾದೆ ಒಗಟು ಇತ್ಯಾದಿ ಜನಪದ ಸಾಹಿತ್ಯ ಪ್ರಕಾರಗಳಿವೆ. ಕೆಲವನ್ನು ಇಲ್ಲಿ ಗಮನಿಸಬಹುದು.

ಗಾದೆ

೧. ಐಶ್ವರ್ಯ ಬಾಕನ ಅರ್ಧರಾತ್ರಿಲಿ ಕೊಡೆ ಹಿಡಿದಂಗೆ
೨.
ನಾಯಿ ಬೊಗಳಿರೆ ಮನೆ ಹಾಳದೊ
೩.
ಎಮ್ಮೆ ಮೇಲೆ ಮಳೆ ಹೊಯ್ದಂಗೆ
೪.
ತುಂಬಿದ ಕೊಡ ತುಳುಕ್ಕಿಕ್ಕಿಲೆ
೫.
ಗಿಡವಾಗಿ ಬಗ್ಗದ್ದ್ ಮರವಾಗಿ ಬಗ್ಗಿಕ್ಕಿಲೆ.

ಒಗಟು

೧. ಅವ್ವಕೊಟ್ಟ ಮಂದ್ರಿ ಮಡ್ಚಿಕಾದ್ಲೆ
ಅಪ್ಪ ಕೊಟ್ಟ ದುಡ್ಡು ಲೆಕ್ಕ ಮಾಡಿಕಾದ್ಲೆ
(ತುಳು: ಅಪ್ಪೆ ಕೊರಿ ಪಜೆ ಮಡಿಪರೆ ಬಲ್ಲಿ ಅಮ್ಮೆ ಕೊರಿ ಪಣವು ಲೆಕ್ಕ ಮಲ್ಪರೆ ಬಲ್ಲಿ)
ಉತ್ತರ – ಆಕಾಶ ಮತ್ತು ನಕ್ಷತ್ರ.

ಇಂತಹ ಬಹು ಸಂಖ್ಯೆಯ ಗಾದೆ ಒಗಟುಗಳು ಜನಪದ ಕತೆಗಳು ಇವೆ. ಇವುಗಳಲ್ಲಿ ವ್ಯಕ್ತವಾಗುವ ಅನುಭವ ದ್ರವ್ಯಗಳು ಗೌಡ ಭಾಷಿಕರದ್ದು ಮಾತ್ರವಲ್ಲದೆ, ತುಳು ಭಾಷಿಕ ಪರಿಸರದ ಅನುಭವೂ ಆಗಿ ತುಳು- ಗೌಡ ಕನ್ನಡದೊಂದಿಗಿನ ಅಂತರ್‌ಸಂಬಂಧವನ್ನು ರೂಪಿಸುತ್ತವೆ.

ಗೌಡ ಕನ್ನಡದ ಸಂಶೋಧನೆಯ ಸಂದರ್ಭದಲ್ಲಿ ಪುರುಷೋತ್ತಮ ಬಿಳಿಮಲೆ ಮತ್ತು ಡಾ. ವಿಶ್ವನಾಥ ಬದಿಕಾನ ಇವರು ಮುಖ್ಯರಾಗಿದ್ದಾರೆ. ಸುಳ್ಯ ಪರಿಸರದ ಗೌಡ ಜನಾಂಗ – ಒಂದು ಸಾಂಸ್ಕೃತಿಕ ಅಧ್ಯಯನಕ್ಕಾಗಿ ಬಿಳಿಮಲೆಯವರು ಪಿಎಚ್. ಡಿ ಪದವಿಯನ್ನು ಮತ್ತು ಗೌಡ ಕನ್ನಡದ ಜನಪದ ಕತೆಗಳು ಅಧ್ಯಯನಕ್ಕಾಗಿ ಬದಿಕಾನ ಅವರು ಎಂ. ಫಿಲ್. ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದವರಾಗಿದ್ದಾರೆ.

ಗೌಡ ಕನ್ನಡದ ಪರಿಸರದಲ್ಲಿ ಬಹು ಸಂಖ್ಯೆಯ ಬರಹಗಾರರಿದ್ದಾರೆ. ಅವರು ಕನ್ನಡ ಸಾಹಿತ್ಯದಲ್ಲಿ ಬಲವುಳ್ಳವರಾಗಿ ಅಲ್ಲಿ ಗುರುತಿಸಿಕೊಂಡವಾಗಿದ್ದಾರೆ. ಅದರೂ ತಮ್ಮ ಕನ್ನಡದ ಬರಹಗಳಲ್ಲಿ ಗೌಡ ಕನ್ನಡವನ್ನು ಸಂದರ್ಭೋಚಿತ ಪಾತ್ರೋಚಿತವಾಗಿ ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ಮಜಲು ಕಥಾ ಸಂಕಲನ ಪ್ರಕಟಿಸಿರುವ ಕೆ. ಆರ್. ವಿದ್ಯಾಧರ ಬಿಡ್ಡಡ್ಕ ‘ಹಿರಣ್ಯ ಗರ್ಭ’ ಕಾದಂಬರಿ ಕಾರ ಕೆ. ಆರ್. ತೇಜಕುಮಾರ್‌ ಬಿಡ್ಡಡ್ಕ ‘ಜಂಬರ’ ಕಾದಂಬರಿ ಕರ್ತೃ ವೆಂಕಟ್‌ಮೋಂಟಡ್ಕ ‘ಹಳಬರ ಜೋಳಿಗೆ’ ಸರಣಿ ಕೃತಿಗಳ ಪ್ರಕಾಶಕಿ ಮತ್ತು ಬರಹಗಾರ್ತಿ ಜಯಮ್ಮ ಚಟ್ಟಿಮಾಡ ಇವರುಗಳು ಮುಖ್ಯರು. ಗೌಡ ಕನ್ನಡಿಗ ಪರಿಸರದ ತುಳು ಬಲ್ಲ ಹಿರಿಯ ಬರಹಗಾರರಾದ ಡಿ. ಜಿ. ನಡ್ಕ, ಟಿ. ಜಿ. ಮೂಡೂರು, ಪ್ರಭಾಕರ ಶಿಶಿಲ ತುಳು ಸಾಹಿತ್ಯಕ್ಕೆ ಕವನ, ಕಥೆ ಸಂಶೋಧನೆಗಳ ಮೂಲಕ ತಮ್ಮ ಕೊಡುಗೆಗಳನ್ನಿತ್ತಿದ್ದಾರೆ ಮತ್ತು ತಮ್ಮ ಬರಹಗಳಲ್ಲಿ ಗೌಡ ಬಾಷೆಯನ್ನು ಬಳಸುವ ಪ್ರಯತ್ನ ಮಾಡಿದ್ದಾರೆ. ಇದು ಭಾಷಿಕ ಪರಸ್ಪರತೆಯನ್ನು ಸೂಚಿಸುತ್ತದೆ. ಸಾಂಸ್ಕೃತಿಕವಾಗಿ ತುಳು ಮತ್ತು ಗೌಡ ಭಾಷಿಕರು ಪರಸ್ಪರ ಬೆರೆತಿದ್ದಾರೆ. ತುಳು ನಾಡಿನ ಸಾಂಸ್ಕೃತಿಕ ಬದುಕನ್ನು ಸಮಗ್ರ ಮತ್ತು ಸೂಕ್ಷ್ಮವಾಗಿ ಪರಿಭಾವಿಸಿದಾಗ, ಅಲ್ಲಿನ ಸಂಸ್ಕೃತಿ ಅಂಶಗಳು, ಜೀವನಾವರ್ತನ ಮತ್ತು ವಾರ್ಷಿಕಾವರ್ತನಗಳಲ್ಲಿ ನಡೆಯುವ ಆಚರಣೆಗಳಲ್ಲಿ ವ್ಯಕ್ತಗೊಳ್ಳುವುದು ಸ್ಪಷ್ಟವಾಗುತ್ತದೆ. ತುಳುನಾಡಿನ ಎಲ್ಲಾ ಗೌಡರು ಮೂಲದಲ್ಲಿ ಶಿವಾರಾಧಕರು. ಮಾತೃ ಶಕ್ತಿಗಳಾದ ಹೊಸಕೋಟೆ ಕೆಂಚಮ್ಮ ಬಣಗೂರು ಸುಬ್ಬಮ್ಮ ಇದರೊಟ್ಟಿಗೆ ಕೆಂಚರಾಯ ದೈವವನ್ನು ಮನೆದೇವರಾಗಿ ಆರಾಧಿಸುತ್ತಿದ್ದರು. ತತ್ಸಬಂಧಿ ಪಳೆಯುಳಿಕೆಗಳು ಇಂದು ಕೆಲವು ಗೌಡ ಮನೆತನಗಳಲ್ಲಿ ಕಂಡುಬರುತ್ತದೆ. ಭೂಮಿ ಸಂಬಂಧಿಯಾಗಿ ತುಳುನಾಡಿನ ಭೂತಾರಾಧನೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಪುರುಷ ದೈವ, ಬಚ್ಚನಾಯಕ, ಶಿರಾಡಿ ದೈವ ಉಲ್ಲಾಕುಳು ಇತ್ಯಾದಿ ದೈವಗಳು ಗೌಡ ಕನ್ನಡ ಪರಿಸರದಲ್ಲಿ ಕಂಡುಬರುತ್ತವೆ. ಈ ಪ್ರದೇಶ ಕೇರಳವನ್ನು ಹೊಂದಿಕೊಂಡಿರುವ ಕಾರಣ ಅದರ ಪ್ರಭಾವದಿಂದ, ತುಳುನಾಡಿನ ಕೇಂದ್ರ ಭಾಗಗಳಲ್ಲಿ ನಡೆಯುವ ದೈವಾರಾಧನೆಗಳಲ್ಲಿ ಕಾಣಲಾಗದ, ನಾಯರ್‌, ವಿಷ್ಣಮೂರ್ತಿ, ಬೈನಾಟಿ ದೈವಗಳು ಈ ಪರಿಸರದಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಇವುಗಳ ಆರಾಧನೆಯನ್ನು ಒತ್ತೆ ಕೋಲ, ಬಯಲು ಕೋಲವೆಂದು ಕರೆಯುತ್ತಾರೆ. ತುಳುನಾಡಿನಲ್ಲಿ ಸಾಮಾನ್ಯವಾಗಿ ಕೋಲ, ನೇಮಗಳ ಮೂಲಕ ಆರಾಧನೆಗೊಳ್ಳುವ ಗುಳಿಗ ಕಲ್ಪುರ್ಟಿ, ಪಂಜುರ್ಲಿ, ಕಲ್ಕುಡ ಭೂತಗಳು ಇವೆ. ದೈವಾರಾಧನೆಯ ಪ್ರಭೇದವಾದ ಚಾಲಾಟಗಳು, ಸುಳ್ಯದ ಕಾಯರ್ತೊಡಿ ಮುಂತಾದೆಡೆ ನಡೆಯುತ್ತವೆ. ದೈವ ಕಟ್ಟು ಕಲಾವಿದರು ತುಳು ಭಾಷಿಕ ನಲಿಕೆ, ಪರವರಾಗಿದ್ದು ದೈವದ ಪಾಡ್ದನಗಳು, ಸಂಧಿಗಳು ತುಳುವಿನಲ್ಲಿ ಇರುತ್ತವೆ. ಮಲೆಯಾಳಿ ದೈವಗಳಿಗೆ ಕಲಾವಿದರಾಗಿ ಮಳೆಯಾಳಿ ‘ಬೆಲ್ಚಪ್ಪಾಡ’ ವಣ್ಣಾತನ್‌ಜನಾಂಗದವರು ಭಾಗವಹಿಸುವುದರಿಂದ ಅವರು ಪಾಡ್ದನ ಸಂಧಿಗಳನ್ನು ಮಲೆಯಾಳಿಯಲ್ಲಿಯೇ ಹಾಡುತ್ತಾರೆ. ಕುಲೆ (ಕೊಲೆ) ಯ ಆರಾಧನೆ ಸರ್ವೆಸಾಮಾನ್ಯವಾಗಿದೆ. ಇದು ದೈವಾರಾಧನೆಯ ಉಪಾಂಗವಾಗಿದೆ. ತುಳುವರ ಪ್ರಕಾರ ಸತ್ತವರು ‘ಕುಲೆ’ ಗಳಾಗಿ ತಮ್ಮ ಪೂರ್ವಿಕರೊಂದಿಗೆ ವಾಸಿಸುತ್ತಾರೆ. ಈ ಕುಲೆ ಆರಾಧನೆ ಭಿನ್ನ ಕಾಲ ಮತ್ತು ನೆಲೆಗಳಲ್ಲಿ ನಡೆಯುತ್ತದೆ. ಗೌಡ ಭಾಷಿಕರಲ್ಲಿ ಈ ಆರಾಧನೆಯನ್ನು ವಿಶೇಷವಾಗಿ ನಡೆಸುತ್ತಾರೆ.

ಜೀವನಾವರ್ತನದಲ್ಲಿ ಬರುವ ಹುಟ್ಟು, ಮದುವೆ, ಸಾವುಗಳನ್ನು ಹೊಂದಿಕೊಂಡಂತೆ ಅನೇಕ ನಂಬಿಕೆಗಳು ಜನಪದದಲ್ಲಿ ಇವೆ. ಈ ನಂಬಿಕೆಗಳನ್ನು ಆಚರಣೆಯ ಮೂಲಕ ಕ್ರಿಯೆಯಲ್ಲಿ ಅಭಿವ್ಯಕ್ತಿಸುತ್ತಾರೆ. ಈ ದೃಷ್ಟಿಯಿಂದ ತುಳು ಮತ್ತು ಗೌಡ ಭಾಷಿಕರಲ್ಲಿ ಸಮಾನಾಂಶಗಳು ಕಂಡುಬರುತ್ತವೆ. ಹುಟ್ಟನ್ನು ಹೊಂದಿಕೊಂಡಂತೆ ಸೀಮಂತ, ಅಮೆ ಆಚರಣೆ (ಅಶೌಚ) ಮಗುವನ್ನು ತೊಟ್ಟಿಲಲ್ಲಿಡುವ ಆಚರಣೆಗಳಿವೆ. ತುಳುವರು ಚೊಚ್ಚಲ ಬಸಿರಿಗೆ ಮಾಡುವ ಬಯಕೆ ಸಂಬಂಧಿ ಸಂಸ್ಕಾರವೇ ಸೀಮಂತ.

ಗೌಡ ಭಾಷಿಕ ಗೌಡರು ಕೂಡ ಈ ಸಂಸ್ಕಾರವನ್ನು ‘ಬಯಕೆ ಮದುವೆ’ ಎಂದು ನಡೆಸುತ್ತಾರೆ. ಹೆರಿಗೆಯಾದಾಗ ನಡೆಸುವ ಅಮೆ, ಹುಟ್ಟಿದ ಮಗುವನ್ನು ಪ್ರಥಮತಃ ತೊಟ್ಟಿಲಲ್ಲಿರುವ ಆಚರಣೆಗಳನ್ನು ಕೂಡ ಗೌಡ ಭಾಷಿಕರು ಇತರ ತುಳುವರಂತೆ ನಡೆಸುತ್ತಾರೆ.

ತುಳು ಮತ್ತು ಗೌಡ ಭಾಷಿಕ ಗೌಡರು ಪಿತೃ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಹೊಂದಿದವರಾಗಿದ್ದಾರೆ. ಗೌಡ ಜನಾಂಗದಲ್ಲಿ ಮದುವೆ ‘ಮಳಿ’ ನೋಡುವ ಮೂಲಕ ಶುಭಾರಂಭವಾಗುತ್ತದೆ. ಬ್ರಾಹ್ಮಣರಲ್ಲಿ ಗೋತ್ರ ಪದ್ಧತಿ ಇದ್ದಂತೆ ಗೌಡರಲ್ಲಿ ‘ಬಳಿ’ ಇದೆ. ಈ ‘ಬಳಿ’ ಪದ್ಧತಿ ತುಳುನಾಡಿನ ಇತರ ಜನಾಂಗಗಳಲ್ಲಿಯೂ ಇದೆ. ಬಯಲು ಸೀಮೆಯ ಗೌಡರಲ್ಲಿ ‘ಬಳಿ’ ಪದ್ಧತಿ ಇಲ್ಲ. ಬಹುಶಃ ಗೌಡರಲ್ಲಿರುವ ‘ಬಳಿ’ ಪದ್ಧತಿ ತುಳುನಾಡಿನ ಇತರ ಜನಾಂಗಗಳಿಂದ ದತ್ತವಾದದ್ದೆಂದು ಊಹಿಸಲು ಇಲ್ಲಿ ಅವಕಾಶವಿದೆ. ಗೌಡರಲ್ಲಿ ‘ಬಳಿ’ ಬಂಧುತ್ವವನ್ನು ನಿರ್ಣಯಿಸುವಲ್ಲಿ ನಿರ್ಣಾಯಕವಾಗಿದೆ.[3] ಮೂಲದಲ್ಲಿ ಗೌಡರಿಗೆ ಹತ್ತು ಬಳಿಗಳು ಮಾತ್ರವಿದ್ದು ತರುವಾಯ ಹದಿನೆಂಟು ಬಳಿಗಳಾದುವು ಎನ್ನಲಾಗುತ್ತಿದೆ. ಒಂದೇ ಬಳಿಯವರಲ್ಲಿ ಮದುವೆಯಾಗುವುದನ್ನು ನಿಷೇಧಿಸುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ದಶಕಗಳ ಹಿಂದೆ ಬಹುಶಃ ಮುಖ್ಯವಾಗಿ ಸಂಪರ್ಕದ ಕೊರತೆಯಿಂದಾಗಿ ತುಳು ಗೌಡರಿಗೂ ಗೌಡ ಭಾಷಿಕ ಗೌಡರಿಗೂ ವೈವಾಹಿಕ ಸಂಬಂಧಗಳು ನಡೆಯುತ್ತಿರಲಿಲ್ಲ. ಇಂದು ಆ ಪರಿಸ್ಥಿತಿ ಬಲಾಗಿದೆ. ಈ ಎರಡು ಭಾಷಿಕ ಗೌಡರಿಗೂ ಹತ್ತು ಕುಟುಂಬ ‘ಹದಿನೆಂಟು ಗೋತ್ರದ ಕಟ್ಟಳೆಗಳು’ ಸಮಾನವಾಗಿವೆ. ಮದುವೆಯ ಸಂದರ್ಭದಲ್ಲಿ ಹಾಡುವ ಶೋಭಾನೆ ಹಾಡುಗಳು ಗೌಡ ಕನ್ನಡದಲ್ಲಿ ಹಾಗೆಯೇ ತುಳುವಿನಲ್ಲಿಯೂ ಬಳಕೆಯಾಗುತ್ತದೆ ಅಷ್ಟರಮಟ್ಟಿಗೆ ತುಳು ಮತ್ತು ಗೌಡ ಕನ್ನಡಗಳು ಪರಸ್ಪರವಾಗಿವೆ. ತುಳು ನಾಡಿನಲ್ಲಿನ ‘ಕೈಪತ್ತಾವುನ’ ಮದುವೆ ಗೌಡ ಭಾಷಿಕರಲ್ಲಿ ‘ಕೂಡಿಕೆ’ ಎಂಬ ಹೆಸರಿನಿಂದ ನಡೆಯುತ್ತಿತ್ತು.

ಗೌಡ ಭಾಷಿಕ ಗೌಡರ ಕೆಲವು ಮೂಲ ಮನೆಗಳ ವಾಸ್ತು, ಶೈಲಿಯಿಂದಾಗಿ ತುಳು ನಾಡಿನ ಇತರ ಮನೆಗಳಿಂದ ಭಿನ್ನವಾಗಿ ವೈಶಿಷ್ಟಪೂರ್ಣವಾಗಿವೆ. ಕೂಡು ಕುಟುಂಬವಾಗಿರುವ ಗೌಡರ ಈ ಮನೆಗಳನು ‘ಐನ್‌ಮನೆ’ ಗಳೆಂದು ಪ್ರತ್ಯೇಕವಾಗಿ ಕರೆಯುತ್ತಾರೆ.[4] ಗೌಡ ಭಾಷಿಕ ಗೌಡರ ಮನೆಗಳಲ್ಲಿ ‘ಕನ್ನಿ ಕಂಬ’ (ಕಾಷ್ಠ ಶಿಲ್ಪ) ವಿದೆ. ‘ಕನ್ನಿ ಕಂಬ’ ವಿರುವ ಮನೆಯ ಅಡುಗೆ ಕೋಣೆ ಅವರಿಗೆ ಪವಿತ್ರ ಸ್ಥಳ. ಈ ಸ್ಥಳದಲ್ಲಿಯೇ ಮನೆಯಲ್ಲಿ ಜರಗುವ ಮದುವೆ, ಹಬ್ಬ, ಆಚರಣೆಗಳ ವಿಶೇಷತೆಗಳು ನಡೆಯುತ್ತವೆ ‘ಗುರು ಕಾರ್ನೋರರಿಗೆ (ಕಾರಣಕರ್ತರಾದ ಹಿರಿಯರಿಗೆ) ಹರಕೆ ಸಲ್ಲಿಸುವುದು, ಕುಲೆಗಳಿಗೆ ಎಡೆ ಹಾಕುವುದು, ಎಲ್ಲವೂ ಇಲ್ಲಿಯೇ ನಡೆಯುತ್ತದೆ. ತುಳುವ ಗೌಡ ಮತ್ತು ಇಂತಹ ಮನೆಗಳಲ್ಲಿ ‘ಕನ್ನಿ ಕಂಬ’ ಕಂಡುಬರುವುದಿಲ್ಲ.

ಕೃಷಿ ಪ್ರಧಾನವಾದ ಯಾವುದೇ ಪ್ರದೇಶದ ಜನವರ್ಗ ಕೃಷಿಯನ್ನು ಒಂದು ಆರಾಧಣಾ ದೃಷ್ಟಿಯಿಂದ ಸ್ವೀಕರಿಸುತ್ತದೆ. ಈ ದೃಷ್ಟಿಯಲ್ಲಿ ತುಳುವರು ಕೃಷಿ ಸಂಬಂಧಿ ‘ಫಲಾಪೇಕ್ಷೆಯ’ ಆಶಯಗಳನ್ನುಳ್ಳ ಅನೇಕ ಆಚರಣೆಗಳನ್ನು ನಡೆಸುತ್ತಾರೆ. ವಾರ್ಷಿಕಾವರ್ತನದಲ್ಲಿ ನಡೆಯುವಾ ಆಚರಣೆಗಳಲ್ಲಿ, ಭೂಮಿ ಹೆಣ್ಣಿನ ಮಿಯದ ಹಬ್ಬ ಕೆಡ್ಡಸ, ತರಕಾರಿ ಆಬರಣಗಳನ್ನಿಟ್ಟು ಪ್ರಾರ್ಥಿಸುವ ‘ಬಿಸು’ ಬೆಳೆದ ಪ್ರಥಮ ಬೆಳೆಯನ್ನು ಮನೆಗೆ ತುಂಬಿಸಿಕೊಳ್ಳುವ ಹೊಸತು (ಪುದ್ವಾರ್‌), ಸಮೃದ್ಧ ಬೆಳೆ ಬರಲಿಯೆನ್ನುವ ಹರೈಕೆಯ ಪ್ರತಿನಿಧೀಕರಣವಾದ ಪೂಕರೆ, ಗದ್ದೆ ಕೋರಿಗಳು ಮುಖ್ಯವಾಗಿ ಆಚರಿಸಲ್ಪಡುತ್ತವೆ. ಕಾವೇರಿ ಸಂಕ್ರಮಣ, ಇರಾನಾಮಾಸೆ, ಆಟಿ ಅಮಾಸೆ- ಬಲೀಂದ್ರ ಪೂಜೆ ಹಬ್ಬಗಳು ನಡೆಯುತ್ತವೆ. ತುಳು ಸಂಸ್ಕೃತಿಯಲ್ಲಿರುವ ಈ ಎಲ್ಲವನ್ನು ಗೌಡರು ಭಾಷಿಕರು ಕೂಡ ನಡೆಸುತ್ತಾರೆ. ಗೌಡ ಭಾಷಿಕ ಪರಿಸರದಲ್ಲಿ ವಿಶೇಷವಾಗಿ ಆರಾಧನಾ ಸಂಬಂಧಿ ಅಡ್ಯಾಣ, ಅಂಬುಕಾಯಿಯಂತಹ ಗ್ರಾಮೀಣ ಆಟಗಳು ಕಂಡುಬರುತ್ತವೆ.

ತುಳುನಾಡಿನಲ್ಲಿ ನಡೆಯುವ ಜಾನಪದ ಕುಣಿತಗಳಾದ, ಮಾದಿ ಚೆನ್ನು, ಶಕ್ತಿಯಾರಾಧನೆ ಸಂಬಂಧಿ ಗೋಂಧೋಳು, ಮೇರರ ದುಡಿ, ಮನ್ಸರ ಡೋಲು ಮತ್ತು ಕರಂಗೋಲು, ಕೊರಗರ ಕುಣಿತ, ಕೀಲು ಕುದರೆ, ಆಟಿಕಳೆಂಜ, ಕನ್ಯಾಪು. ಮಾದಿಮಾಯ ಮದಿಮಾಲ್ ಕುಣಿತಗಳು ಗೌಡ ಭಾಷಿಕ ಪರಿಸರದಲ್ಲಿ ನಡೆಯುತ್ತವೆ. ಇದನ್ನು ನಡೆಸಿಕೊಡುವ ಜನವರ್ಗ, ಇಲ್ಲಿನ ಮೂಲ ನಿವಾಸಿಗಳಾದ ಮತ್ತು ಈ ಜಾನಪದ ಸಂಸ್ಕೃತಿಯ ಅಧಿಕೃತ ವಾರಸುದಾರರನ್ನೆ ಬಹುದಾದ ಪರಿಶಿಷ್ಟ ವರ್ಗದವಾಗಿದ್ದಾರೆ. ಹಾಗಾಗಿ ಇವೆಲ್ಲವೂ ತುಳು ಜಾನಪದ ಸಂಸ್ಕೃತಿ ನಿಷ್ಪನ್ನಗಳೆಂದು ಹೇಳಬಹುದು.

ಗೌಡ ಭಾಷಿಕ ಪರಿಸರದಲ್ಲಿ ನಡೆಯುವ ವಿಶೇಷ ಕುಣಿತ ‘ಸಿದ್ಧವೇಶ’ ಇದು ಗೌಡ ಭಾಷಿಕ ಜನವರ್ಗ ತುಳು ಜನಪದಕ್ಕೆ ಕೊಡಮಾಡಿದ ಕುಣಿತ ಪ್ರಧಾನವಾದ ಒಂದು ಕಲಾ ಪ್ರಕಾರ. ಇದರಲ್ಲಿ ಭಾಗವಹಿಸುವರು ಗೌಡರು ಮಾತ್ರವಾಗಿರುತ್ತಾರೆ. ಈ ಕುಣಿತದಲ್ಲಿ ಬ್ರಾಹ್ಮಣ, ದಾಸಯ್ಯ ಮತ್ತು ಸಂನ್ಯಾಸಿ ಪಾತ್ರಗಳು ಪ್ರಧಾನವಾಗಿರುತ್ತವೆ. ಉಳಿದಂತೆ ೬ ರಿಂದ ೮ ಜನ ಗೌಡ ಯುವಕರು ಕುಣಿತದಲ್ಲಿ ಭಾಗವಹಿಸುತ್ತಾರೆ. ಇದು ಸುಗ್ಗಿ ಹುಣ್ಣಿಮೆಯ ಮೊದಲ ಮೂರು ದಿನಗಳಲ್ಲಿ ನಡೆಯುತ್ತದೆ. ಸುಳ್ಯ ಪರಿಸರದಲ್ಲಿ ಈ ಕುಣಿತವನ್ನು ಗೌಡರು ಮಾತ್ರ ಸಿದ್ಧವೇಷ ಎನ್ನುವ ಹೆಸರಿನಿಂದ ನಡೆಸಿದರೆ, ಬೆಳ್ತಂಗಡಿ ತಾಲ್ಲೂಕಿನಲ್ಲಿ ಇದು ಶಿಷ್ಟೇತರ ಎಲ್ಲಾ ಜಾತಿಗಳ ಕೂಡುವಿಕೆಯಿಂದ ‘ಪುರುಸೆರೆ’ ಕುಣಿತವೆಂದು ನಡೆಯುತ್ತದೆ. ಇದು ಮೂಲತಃ ಗೌಡ ಭಾಷಿಕ್ಕರದ್ದಾಗಿದೆ. ತರುವಾಯ ಜಾತಿಯ ಮಿತಿಯನ್ನು ಮೀರಿ ತುಳುನಾಡಿಗೆ ಪಸರಿಸಿದೆ.[5] ರಾತ್ರಿ ಹೊತ್ತು ಮನೆ ಮನೆಗೆ ಹೋಗಿ ಕುಣಿತುವ ಈ ಕುಣಿತಕ್ಕೆ ಹಾಡಿನ ಸೊಲ್ಲು ಕೂಡ ಇದೆ.

ಸಿದ್ದುಲಿಂಗ ಮುದ್ದು ಲಿಂಗ | ಸಿದ್ಧ ವೇಸೋ ||
ನಾವು ಯಾವುದು ಯಾವ ತಳ |ಸಿದ್ಧ ವೇಸೋ ||
ನಾವು ಕಾಶೀಯ ತಳದವು |ಸಿದ್ಧ ವೇಸೋ ||

ಎಂದು ಹಾಡುವಾಗ ಕುಣಿಯುವ ಗುಂಪು ‘ಸಿದ್ಧವೇಸೋ’ ಎಂಬ ಸೊಲ್ಲನ್ನು ಮಾತ್ರ ಪುನರಾವರ್ತಿಸುತ್ತ ನಾಲ್ಕು ಹೆಜ್ಜೆಗಳಲ್ಲಿ ವೃತ್ತಾಕಾರವಾಗಿ ಸುತ್ತಿ ಕುಣಿಯುತ್ತದೆ.

ಸಿದ್ಧ ವೇಷದ ಆಶಯದ ಕುರಿತಾಗಿ ಪುರುಷೋತ್ತಮ ಬಿಳಿಮಲೆಯವರ ಅಧ್ಯಯನ ಅಭಿಪ್ರಾಯಪಡುವುದು ಹೀಗೆ: “ಸಿದ್ಧವೇಷದಲ್ಲಿ ದಾಸಯ್ಯ ಮತ್ತು ಬ್ರಾಹ್ಮಣ್ಯದ ನಿರಾಕರಣೆಯಿದೆ. ಇದು ವೈಷ್ಣವ ಮತ್ತು ಪುರೋಹಿತಶಾಹಿ ಪರಂಪರೆಯ ನಿರಾಕರಣೆಯು ಹೌದು. ಉಚ್ಚ ವರ್ಗದ ಪಾಂಡಿತ್ಯಪೂರ್ಣ ವಿಚಾರ ಪರಂಪರೆಗೆ ವಿರುದ್ಧವಾಗಿ ವಿಜೃಂಭಿಸಿದ ವೈಧಿಕೇತರ ಸಂಪ್ರದಾಯದ ಪಳೆಯುಳಿಕೆಯಾಗಿ ಇಂದು ಸಿದ್ಧವೇಶ ಉಳಿದಿದೆ” (೧೯೯೦;೨೭), ಸಿದ್ಧವೇಶವು ಒಂದು ಧಾರ್ಮಿಕ ವಿಧಿಯಾಗಿ ಮತ್ತು ಪ್ರದರ್ಶನ ಕಲೆಯಾಗಿ ಪ್ರಚಲಿತವಾಗಿದೆ.

ತುಳು ಮತ್ತು ಗೌಡ ಕನ್ನಡಗಳು ಭಾಷಿಕವಾಗಿ ಪರಸ್ಪರ ಪ್ರಭಾವಿತ ವಾಗಿರುವುದು ಅತ್ಯಲ್ಪವೆಂದು ಹೇಳಬಹುದು. ಆದರೆ ಸಾಂಸ್ಕೃತಿಕವಾಗಿ ತುಳು ಅಧಿಕೃತವಾಗಿ ಭಿನ್ನ ಕಾರಣಗಳ ಮೂಲಕ ಗೌಡ ಕನ್ನಡದ ಮೇಲೆ ಪ್ರಭಾವಿಸಿದೆ. ಗೌಡ ಕನ್ನಡ ತನ್ನದೇ ಆದ ಅನನ್ಯತೆಯುಳ್ಳ ಭಾಷೆ, ಈ ಭಾಷೆಯ ಸಾಧ್ಯತೆಗಳು ವ್ಯಾಪ್ತಿಯುಳ್ಳದ್ದಾಗಿವೆ. ಈ ದೃಷ್ಟಿಯಿಂದ ಅಧ್ಯಯನಗಳು ಸಂಶೋಧನೆಗಳು ಮತ್ತು ಸಾಹಿತ್ಯಕವಾದ ಪ್ರಯೋಗಗಳು ನಡೆಯಬೇಕಾಗಿದೆ.

ಆಕರಸೂಚಿ

೦೧. ಡಾ. ಕೆ. ಕುಶಾಲಪ್ಪ ಗೌಡ; ೧೯೭೦ ಗೌಡ ಕನ್ನಡ (ಇಂಗ್ಲಿಷ್‌ನಲ್ಲಿ) ಅಣ್ಣಾಮಲೈ ಯುನಿವರ್ಸಿಟಿ ಮದ್ರಾಸ್‌

೦೨. ಡಾ. ಹಂಪ ನಾಗರಾಜಯ್ಯ; ೧೯೯೪ ದ್ರಾವಿಡ ಭಾಷಾ ವಿಜ್ಞಾನ (೪ ನೇ ಪರಿಶ್ಕೃತ ಮುದ್ರಣ) ಪ್ರಕಾಶಕರು ಕೃಷ್ಣಮೂರ್ತಿ, ಮೈಸೂರು.

೦೩. ಡಾ. ಪುರುಷೋತ್ತಮ ಬಿಳಿಮಲೆ; ೧೯೯೦ ಕರಾವಳಿ ಜಾನಪದ, ಮಂಗಳೂರು ವಿಶ್ವವಿದ್ಯಾಲಯ

೦೪. ದೇವಸ್ಯ ಮನೋಹರ (ಸಂ), ೨೦೦೨, ಕಲ್ಯಾಣ, ಗೌಡ ಸಮಾಜ (ರಿ.) ಪುತ್ತೂರು.

೦೫. ಡಾ. ಕೆ. ವಿ. ರೇಣುಕಾ ಪ್ರಸಾದ್‌, (ಸಂ.), ೧೯೯೬ ವೀಳ್ಯ ಸ್ಮರಣ ಸಂಚಿಕೆ ದ. ಕ. ಮತ್ತು ಕೊಡಗು ಜಿಲ್ಲಾ ಗೌಡ ಸಮ್ಮೇಳನ ಸುಳ್ಯ; ಗೌಡ ಕನ್ನಡ ಎಂಬ ಕನ್ನಡದ ಪ್ರಭೇದ – ಡಾ. ಕೆ. ಕುಶಾಲಪ್ಪ ಗೌಡ.

೦೬. ಸಂ. ಡಾ. ಕೆ. ವಿ. ರೇಣುಕಾ ಪ್ರಸಾದ್‌, (ಸಂ.), ೧೯೯೮ ‘ಅಕ್ಷಯ’ ಸ್ಮರಣ ಸಂಚಿಕೆ. ದ. ಕ. ಜಿಲ್ಲಾ ೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಸುಳ್ಯ.

೦೭. ಸಂ. ಎನ್‌. ಎಸ್‌. ದೇವಿಪ್ರಸಾದ್‌(ಸಂ). ೨೦೦೩; ಕೊಡಗಿನಲ್ಲಿ ಭಾಷಾ ಸಾಂಸ್ಕೃತಿಕ ಸಾಮರಸ್ಯ, ಅಮರ ಕ್ರಾಂತಿ ಉತ್ಸವ ಸಮಿತಿ, ಸುಳ್ಯ ದ. ಕ.

೦೮. ಕನ್ನಡ ಸಾಹಿತ್ಯ ಚರಿತ್ರೆ ಮೊದಲನೆಯ ಸಂಪುಟ. ೧೯೭೮, ಅಧ್ಯಯನ ಸಂಸ್ಥೆ, ಮೈಸೂರು ವಿ. ವಿ

೦೯. ಜಿ. ರಾಮಸ್ವಾಮಿ; ೧೯೮೧, ಕನ್ನಡ ಭಾಷಾನುಯೋಗ, ಸ್ವಂತಿಕಾ ಸಾಹಿತ್ಯ ಪ್ರಕಾಶನ ಸುಳ್ಯ ದ. ಕ.

೧೦. ಡಾ. ಕೆ. ಚಿನ್ನಪ್ಪ ಗೌಡ (ಸಂ), ೨೦೦೩, ಗೌಡ ಜನಾಂಗ, ಇತಿಹಾಸ ಮತ್ತು ಸಂಸ್ಕೃತಿ, ಬೆಳ್ಳಿ ಹಬ್ಬ ಆಚರಣಾ ಸಮಿತಿ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ, ಮಂಗಳೂರು.

 

[1] ಸುಳ್ಯ ಪರಿಸರದ ಗೌಡ ಜನಾಂಗದ ವಿವರವಾದ ಅಧ್ಯಯನವನ್ನು ಮಾಡಿದವರು ಡಾ. ಪುರುಷೋತ್ತಮ ಬಿಳಿಮಲೆಯವರು. ಅವರು ತಮ್ಮ ಪಿಎಚ್‌. ಡಿ. ಪದವಿಗಾಗಿ ‘ಸುಳ್ಯ ಪರಿಸರದ ಗೌಡ ಜನಾಂಗ ಸಾಂಸ್ಕೃತಿಕ ಅಧ್ಯಯನ’ ಎಂಬ ಶೀರ್ಷಿಕೆಯ ಮಹಾಪ್ರಬಂಧವನ್ನು ೧೯೮೪ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದ್ದಾರೆ.

ಈ ಅಧ್ಯಯನದಲ್ಲಿ ಅವರು ಗೌಡರ ಕುಟುಂಬ ಪದ್ಧತಿ ಬಳಿ ಪದ್ಧತಿ, ಇತಿಹಾಸ, ಮನೆಗಳ ರಚನೆ, ಇವುಗಳ ಬಗೆಗೆ ವಿವರಣಾತ್ಮಕವಾಗಿ ಚರ್ಚಿಸಿದ್ದಾರೆ. ಇದು ಅಪ್ರಕಟಿತ ಕೃತಿಯಾಗಿದೆ.

[2] ಪುತ್ತೂರು ಗೌಡ ಸಮಾಜ(ರಿ.) ಇವರು ಪ್ರಕಟಿಸಿರುವ ‘ಕಲ್ಯಾಣ’ ಸ್ಮರಣ ಸಂಚಿಕೆಯಲ್ಲಿ ಡಿ. ಜಿ. ನಡ್ಕರವರು ಬರೆದ ‘ಗೌಡ ಜನಾಂಗ ಒಂದು ಐತಿಹಾಸಿಕ ಅವಲೋಕನ’ ಎಂಬ ಲೇಖನವಿದೆ. ಇದು ಗೌಡ ಜನಾಂಗದ ಮೂಲದ ಕುರಿತಾಗಿ ಕೆಲ ಮಾಹಿತಿಗಳನ್ನು ಒದಗಿಸುತ್ತದೆ. ಮಾಹಿತಿಗಾಗಿ ಲೇಖನದ ವಿವರಗಳನ್ನು ನೋಡಬಹುದು.

[3] ೧೯೯೦ ಡಾ. ಪುರುಷೋತ್ತಮ ಬಿಳಿಮಲೆಯವರು ಬರೆದು ಪ್ರಕಟಿಸಿರುವ ಕರಾವಳಿ ಜಾನಪದ ಕೃತಿಯಲ್ಲಿನ ‘ಗೌಡರ ಮದುವೆ -ಹಸಿವು ಕಾಮಗಳ ಸಮನ್ವಯ’ ಎಂಬ ಭಾಗವು ಗೌಡರ ಮದುವೆಯ ವಿವರಗಳನ್ನು ಹಾಗೂ ‘ಬಳಿ’ ಪದ್ಧತಿಯ ಕುರಿತಾದ ಸಮಗ್ರ ವಿವರಗಳನ್ನು ನೀಡುತ್ತದೆ. ವಿವರಗಳಿಗಾಗಿ ಅದನ್ನು ಗಮನಿಸಬಹುದು.

[4] ೨೦೦೩ರಲ್ಲಿ ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಬೆಳ್ಳಿ ಹಬ್ಬ ಆಚರಣಾ ಸಮಿತಿ. ಕೆ. ಚಿನ್ನಪ್ಪ ಗೌಡರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ಗೌಡ ಜನಾಂಗ -ಇತಿಹಾಸ ಮತ್ತು ಸಂಸ್ಕೃತಿ’ ಕೃತಿಯಲ್ಲಿ ಪೂವಪ್ಪ ಕಣಿಯೂರು ಬರೆದಿರುವ ‘ದ. ಕ. ಜಿಲ್ಲಾ ಗೌಡರ ಐನ್‌ಮನೆಗಳು’ ಎಂಬ ಲೇಖನವಿದೆ. ಇದು ಗೌಡರ ಮನೆಗಳ ವಾಸ್ತು ಶೈಲಿ ವೈಶಿಷ್ಟ್ಯಗಳ ವಿವರಗಳನ್ನೊಳಗೊಂಡಿದೆ. ವಿವರಗಳಿಗಾಗಿ ನೋಡಬಹುದು.

[5] ಗೌಡ ಭಾಷಿಕರ ವಿಶಿಷ್ಟ ಕುಣಿತವಾದ ಸಿದ್ಧವೇಷದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಡಾ. ಪುರುಷೋತ್ತಮ ಬಿಳಿಮಲೆಯವರು ಕರಾವಳಿ ಜಾನಪದ ಕೃತಿಯಲ್ಲಿ ಬರೆದಿರುವ ‘ಸಿದ್ಧವೇಶ: ಪ್ರತಿಭಟನೆ ಮತ್ತು ನಿರಸನ’ ಲೇಖನವನ್ನು ನೋಡಬಹುದು. ಹಾಗೆಯೇ ಕುಣಿತದ ವಿವವರಗಳಿಗಾಗಿ ಪೂತ್ತೂರು ಗೌಡ ಸಮಾಜ (ರಿ.) ಇವರು ಪ್ರಕಟಿಸಿರುವ ‘ಕಲ್ಯಾಣ’ ಸ್ಮರಣ ಸಂಚಿಕೆಯಲ್ಲಿ ಪೂವಪ್ಪ ಕುಣಿಯೂರು ಬರೆದಿರುವ ‘ಜನಪದ ರಂಗಭೂಮಿಗೆ ಗೌಡ ಜನಾಂಗದ ಕೊಡುಗೆ – ‘ಪುರುಷರ ಕುಣಿತ’ ಲೇಖನವನ್ನು ನೋಡಬಹುದು.