ಕೊರಗರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಇವರು ಮುಖ್ಯವಾಗಿ ದಕ್ಷಿಣ ಕನ್ನಡ ಹಾಗೂ ಉಡಪಿ ಜಿಲ್ಲೆಗಳಲ್ಲಿ ಒಂದೊಂದು ಕಡೆ ಗುಂಪುಗಳಾಗಿ (ಕೊರಗ ಕಾಲನಿಯೆನ್ನಬಹುದು) ವಾಸಿಸುತ್ತಿದ್ದಾರೆ. ೧೯೦೧ರ ಜನಗಣತಿಯಂತೆ ಕೊರಗರ ಸಂಖ್ಯೆ ೧೯೨ ಇದೆ. ೧೯೭೧ ರ ಜನಗಣತಿ ಪ್ರಕಾರ ಕೊರಗರ ಸಂಖ್ಯೆ ೭೬೨೦ ಇದೆ. (From: DLA News) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತು ಹಾಗೂ ಉಡಪಿ ಜಿಲ್ಲಾ ಪಂಚಾಯತು ಒದಗಿಸಿರುವ ಮಾಹಿತಿ ಪ್ರಕಾರ ಈಗಿನ ಕೊರಗರ ಜನಸಂಖ್ಯೆಯ ವಿವರ ಈ ರೀತಿ ಇದೆ:

ದಕ್ಷಿಣ ಕನ್ನಡ ಜಿಲ್ಲೆ
ತಾಲೂಕು ಜನಸಂಖ್ಯೆ ಕಾಲನಿಗಳ ಸಂಖ್ಯೆ ಕುಟುಂಬಗಳ ಸಂಖ್ಯೆ
೧ ಮಂಗಳೂರು ೩೮೩೬ ೧೧೩ ೦೭೧೮
೨. ಬಂಟ್ವಾಳ ೧೭೪೦ ೦೩೧ ೦೧೭೩
೩. ಪುತ್ತೂರು ೦೨೦೫ ೦೪೧ ೦೧೧೪
೪. ಸುಳ್ಯ ೦೦೮೨ ೦೦೯ ೦೦೫೩
೫. ಬೆಳ್ತಂಗಡಿ ೦೪೭೪ ೦೧೫ ೦೦೯೬
ಒಟ್ಟು ೬೩೩೭ ೨೦೯ ೧೧೫೪

 

ಉಡಪಿ ಜಿಲ್ಲೆ
೧. ಉಡಪಿ ೦೫,೩೩೨ ೨೦೧ ೦೮೮೭
೨. ಕಾರ್ಕಳ ೦೧,೪೧೨ ೦೮೩ ೦೩೭೩
೩. ಕುಂದಾಪುರ ೦೪,೩೪೧ ೦೭೪ ೦೫೭೬
ಒಟ್ಟು ೧೧,೧೮೫ ೩೫೮ ೧೮೩೬

ಹೆಚ್‌. ಎ. ಸ್ಟುವಾರ್ಟ್ ಎಂಬುವರು ೧೮೯೧ ಜನಗಣತಿ ವರದಿ (ಮಾದ್ರಾಸ್‌) ಯಲ್ಲಿ ‘ಕೊರಗರು ದಕ್ಷಿಣ ಕನ್ನಡದಲ್ಲಿ ಬುಟ್ಟಿ ಹೆಣೆದು ಜೀವನ ನಡೆಸುತಿರುವ ಅಸಂಸ್ಕೃತ ಹಾಗೂ ಬುಡಕಟ್ಟಿಗೆ ಸೇರಿದ ಒಂದು ಜನಾಂಗವಾಗಿದ್ದು ಅವರ ಅಡುನುಡಿಯು ತುಳು ಭಾಷೆಯ ಉಪಭಾಷೆಯಾಗಿದೆ’ ಎಂದು ತಿಳಿಸಿದ್ದಾರೆ. ಬುಟ್ಟಿ ಹೆಣೆಯುವುದು, ಹಗ್ಗ ನೇಯುವುದು, ಜಾನುವಾರುಗಳು ಸತ್ತರೆ ಅವುಗಳ ಚರ್ಮ ತೆಗೆದು ಒಣಗಿಸಿ ಅದನ್ನು ಮಾರುವುದು ಇತ್ಯಾದಿ ಇವರ ಜೀವನದ ಮುಖ್ಯ ಕಸುಬುಗಳಾಗಿವೆ. ಇವರು ಅಸ್ಪೃಶ್ಯರಾಗಿದ್ದು ನಮ್ಮ ಸಮಾಜದಲ್ಲಿ ಬಹಳ ಕೆಳಮಟ್ಟದಲ್ಲಿದ್ದ ಗಿರಿಜನರೆಂದೂ ಕರೆಯಲ್ಪಡುತ್ತಾರೆ. ಸರಕಾರವು ಕೊರಗರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ತರುತ್ತಿದೆ. ಕಾಪುವಿನಲ್ಲಿ ಶ್ರೀ ದೇವದಾಸ ಶೆಟ್ಟಿಯವರು ಸಮಗ್ರ ಗ್ರಾಮೀಣ ಆಶ್ರಮ ಒಂದನ್ನು ಸ್ಥಾಪಿಸಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಜನಾಂಗದ ಉನ್ನತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾದ ಕೆಲಸವಾಗಿದೆ. ಗೋಕುಲ್‌ದಾಸ್‌, ಮಂಗಳೂರು ಅಲ್ಲದೆ ದಕ್ಷಿಣ ಕನ್ನಡ ಹಾಗೂ ಉಡಪಿ ಜಿಲ್ಲಾ ಪಂಚಾಯತು ಗಳಲ್ಲಿ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಗಿರಿಜನರ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಈ ಕೊರಗ ಜನಾಂಗದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಕುಂದಾಪುರದ ‘ಸ್ಪೂರ್ತಿ’ ಸಂಸ್ಥೆ ಕೊರಗ ಸಮುದಾಯದ ವಿಶೇಷವಾಗಿ ಕೊರಗ ಬಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿಯುತ್ತಿದೆ. ನೂರು ವರ್ಷಗಳ ಹಿಂದೆ ಇದ್ದ ಕೊರಗರಿಗೂ ಈಗಿನ ಪೀಳಿಗೆಗೂ ಅವರ ಜೀವನ ವಿಧಾನದಲ್ಲಿ ತುಂಬಾ ಬದಲಾವಣೆಯಾಗಿದೆ. ಆದರೆ ಅವರಿನ್ನೂ ಅಸ್ಪೃಶ್ಯರಾಗಿಯೇ ಉಳಿದಿರುವುದು ಶೋಚನೀಯ ಸಂಗತಿಯಾಗಿದೆ.

ಇವರು ತಮ್ಮ ಅಡುನುಡಿಯನ್ನು ತಮ್ಮ ಜನರೊಡನೆ ಮಾತ್ರ ಬಳಸುತ್ತಿದ್ದು ಬೇರೆ ಜಾತಿಯ ಜನರನ್ನು ಸಂಪರ್ಕಿಸಿದಾಗ ಆ ಪರಿಸರದ ಭಾಷೆಯನ್ನು ಉಪಯೋಗಿಸುತ್ತಿದ್ದಾರೆ. ಎಡ್ಗರ್‌ ಥರ್ಸ್ಟಸ್‌ ಎಂಬವರು ಅವರ ೧೯೭೫ರಲ್ಲಿ ಮರುಪ್ರಕಣೆಗೊಂಡಿರುವ ‘Castes and Tribes of Southern India’ (VoI. III-k) ದಲ್ಲಿ ಕೊರಗರನ್ನು ಅಂಡೆಕೊರಗ, ವಸ್ತ್ರದ (ಕಪ್ಪಾಡ ಕೊರಗ), ತಿಪ್ಪಿಕೊರಗ ಹಾಗೂ ವಂಟಿ ಕೊರಗರೆಂದು ವಿಭಾಗಿಸಿದ್ದಾರೆ. ಡಿ. ಎನ್. ಶಂಕರ ಭಟ್ಟರು ಅವರ ‘Koraga Lanugage’ ೧೯೭೧ ಎಂಬ ಪುಸ್ತಕದಲ್ಲಿ ಒಂಟಿ ಕೊರಗ, ತಪ್ಪು ಕೊರಗ, ಮೂಡು ಕೊರಗ (ಇದನ್ನು ಥರ್ಸ್ಟಸ್‌ ಅವರು ತಿಳಿಸಿಲ್ಲ) ಮತ್ತು ಅಂಡೆಕೊರಗ ಎಂದು ವಿಭಾಗಿಸಿದ್ದಾರೆ. ಆದರೆ ಥರ್ಸ್ಟಸ್‌ ಅವರು ತಿಳಿಸಿರುವ ‘ತಿಪ್ಪಿಕೊರಗ’ ಬಗ್ಗೆ ಡಿ. ಎನ್. ಶಂಕರ ಭಟ್ಟರು ತಿಳಿಸಿಲ್ಲ. ನಾನೊಮ್ಮೆ ಮಂಗಳೂರಿನಲ್ಲಿ ಅವರ ಆಡುನುಡಿ ಬಗ್ಗೆ ಮಾಹಿತಿ ಸಂಹ್ರಹಣೆಗೆ ಹೋಗಿದ್ದಾಗ ಅವರು ತಿಪ್ಪಿಕೊರಗ ಕುಂಟುಕೋರಗ, ತಪ್ಪು ಕೊರಗ ಅಲ್ಲದೆ ಅಂಡೆ ಕೊರಗರ ಬಗ್ಗೆ ಹೇಳಿದ್ದರು. ಡಾ. ಅರವಿಂದ ಮಾಲಗತ್ತಿ ಹಾಗೂ ಡಾ. ಒಡೆಯರ್‌ಡಿ. ಹೆಗ್ಗಡೆ ಅವರ ‘ಕೊರಗ ಜನಾಂಗ ವಿಶ್ಲೇಷಣಾತ್ಮಕ ಅಧ್ಯಯನ’ ಎಂಬ ಪುಸ್ತಕದಲ್ಲಿ ಕೊರಗ ಜನಾಂಗದ ಒಳಪಂಗಡಗಳನ್ನೂ ಈ ರೀತಿ ಗುರುತಿಸಿದ್ದಾರೆ. ಸೊಲ್ಲು ಕೊರಗರು, ಚಿಪ್ಪೆ ಕೊರಗರು, ಅಂಡೆ ಕೊರಗರು, ಮುಂಡುಕೊರಗರು ಹಾಗೂ ಬಾಕುಡೆ ಕೊರಗರು ಎಂದು ಈ ಹೆಸರುಗಳನ್ನು ಅವರ ಒಂದೊಂದು ವಿಶೇಷ ಲಕ್ಷಣಗಳನ್ನು ಗುರುತಿಸಿ ಕರೆದಿದ್ದಾರೆ.

ಕೊರಗರು ಬೇರೆ ಜಾತಿಯ ಜನರನು ಸಂಪರ್ಕಿಸಿದಾಗ ಆ ಪರಿಸರದ ಭಾಷೆಯನ್ನು ಬಳಸುತ್ತಿರುವುದರಿಂದ ಕೊರಗ ಭಾಷೆಯ ಉಪಭಾಷೆಗಳ ಮೇಲೆ ಪರಿಸರದ ತುಳು ಹಾಗೂ ಕನ್ನಡ ಭಾಷೆಗಳ ನೇರ ಪ್ರಭಾವ ಬಿದ್ದಂತೆ ಕಾಣುತ್ತದೆ. ಮೊದಲು ಕೊರಗರ ಭಾಷೆಯನ್ನು ತುಳು ಭಾಷೆಯ ಉಪಭಾಷೆ ಎಂದು ಪರಿಗಣಿಸಲಾಗಿತ್ತು. ತುಳು ಹಾಗೂ ಕೊರಗ ಭಾಷೆಗಳ ಮೇಲು ನೋಟಕ್ಕೆ ಸಂಬಂಧ ಹೊಂದಿದ್ದರೂ ಇವುಗಳ ವ್ಯಾಕರಣ ರಚನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದ್ದರಿಂದ ಈ ಭಾಷೆಯ ಪ್ರತ್ಯೇಕ ಭಾಷೆಯಾಗಿದೆಯೆಂದು ಹೇಳಬಹುದು. ಇದುವರೆಗೆ ನಡೆದಿರುವ ಅಧ್ಯಯನ ಬೇರೆ ಬೇರೆ ದ್ರಾವಿಡ ಭಾಷೆಗಳೊಟ್ಟಿಗೆ ಪರಿಶೀಲಿಸಿದಾಗ ಅವುಗಳ ವೈಶಿಷ್ಟ್ಯಗಳಿಂದ ಈ ಭಾಷೆಯು ದಕ್ಷಿಣ ದ್ರಾವಿಡ ಭಾಷೆಗಳಿಗೆ ಹತ್ತಿರವಿದ್ದಂತೆ ಕಾಣುತ್ತದೆ. ಕೆಲವೊಂದು ವೈಶಿಷ್ಟ್ಯಗಳಲ್ಲಿ ಕೊರಗ ಭಾಷೆಯು ಉತ್ತರ ದ್ರಾವಿಡ (ಡಿ. ಎನ್‌. ಶಂಕರ ಭಟ್‌ ಅವರ Koraga Language’ ನಲ್ಲಿ ತಿಳಿಸಿದ್ದಾರೆ) ಹಾಗೂ ಮಧ್ಯ ದ್ರಾವಿಡ ಭಾಷೆಗಳ ಕಡೆಗೆ ಒಲವನ್ನು ತೋರಿಸಿದೆಯಾದರೂ ಹೆಚ್ಚಿನ ವೈಶಿಷ್ಟ್ಯಗಳ ವಿಷಯದಲ್ಲಿ ಈ ಭಾಷೆಯು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದೆ.

ಕೊರಗ ಭಾಷೆಯು ತುಳು ಭಾಷೆಯ ಉಪ ಭಾಷೆ ಎಂದು ಕೆಲವರು ಪರಿಗಣಿಸಬಹುದೇನೋ ತುಳು ಮಾತಾಡುವ ಪರಿಸರದಲ್ಲಿ ಕೊರಗ ಭಾಷೆಯನ್ನು ಬಳಸುತ್ತಿರುವುದರಿಂದ ಇದು ತುಳು ಭಾಷೆಯ ಉಪ ಭಾಷೆ ಎಂಬ ಸಂದೇಹವೇರ್ಪಡುವುದು ಸಹಜ. ಹಾಗಾದರೆ ಕನ್ನಡ ಮಾತಾಡುವ ಪರಿಸರದಲ್ಲಿ ಕೊರಗ ಭಾಷೆಯ ಉಪ ಭಾಷೆಯು ಬಳಸಲ್ಪಡುವುದರಿಂದ ಅದನ್ನು ಕನ್ನಡ ಭಾಷೆಯ ಉಪ ಭಾಷೆಯೆಂದು ಕರೆಯುವುದೇ? ಕೆಲವೆಡೆ ಕನ್ನಡ ಹಾಗೂ ತುಳು ಎರಡೂ ಭಾಷೆಗಳನ್ನೂ ಮಾತಾಡುವ ಪರಿಸರದಲ್ಲೂ ಕೊರಗ ಭಾಷೆಯನ್ನಾಡುತ್ತಾರೆ. ಆಗ ಇದನ್ನು ಹೇಗೆಂದು ಕರೆಯುವುದು? ಆದ್ದರಿಂದ ಅ ಪರಿಸರದಲ್ಲಿ ಮಾತಾಡುವ ಭಾಷೆಗಳ ಪ್ರಭಾವ ಜಾಸ್ತಿ ಬೀಳಬಹುದೇ ವಿನಾ, ಕೊರಗ ಭಾಷೆಯು ಆ ಭಾಷೆಗಳ ಉಪ ಭಾಷೆ ಎಂದು ಕರೆಯುವುದು ಸರಿಯಲ್ಲವೆನಿಸುತ್ತದೆ. ದಕ್ಷಿಣ ದ್ರಾವಿಡ ಭಾಷೆಗಳ ಸಾಮಾನ್ಯ ವೈಶಿಷ್ಟ್ಯಗಳಾದ *ಮ್‌> f *ಚ್‌> *ಸ್‌> f *ವ್‌ > ಬ್‌, *ಉ > ಹಾಗೂ ಅ್, *ಇ > ಉ1 * ಎ > ಒ*ಲ್‌> ತ ಹಾಗೂ ಕ*ಣ್ > ನ್ ಮುಂತಾದ ಧ್ವನಿಮಾ ಪ್ರಕ್ರಿಯೆಗಳಲ್ಲಿ ಕೊರಗ ಭಾಷೆಯು ದಕ್ಷಿಣ ದ್ರಾವಿಡ ಭಾಷೆಗಳಿಗಳೊಡನೆ ಹತ್ತಿರದ ಸಂಬಂಧವಿರಿಸಿ ಕೊಂಡಿರುವುದನ್ನು ಗಮನಿಸಬಹುದು. ಮಧ್ಯ ದ್ರಾವಿಡ ಹಾಗೂ ಉತ್ತರ ದ್ರಾವಿಡ ಭಾಷಾ ಉಪಗುಂಪುಗಳ ಕೆಲವೊಂದು ವೈಶಿಷ್ಟ್ಯಗಳನ್ನು ಇಲ್ಲಿ ಕೊರಗ ಭಾಷೆಯು ಹೊಂದಿಲ್ಲ. ಎಲ್ಲಾ ಮಧ್ಯದ್ರಾವಿಡ ಹಾಗೂ ಉತ್ತರ ದ್ರಾವಿಡ ಭಾಷೆಗಳಲ್ಲಿ ಲಿಂಗ ವಿವಕ್ಷೆ ಪುಲ್ಲಿಂಗ -ಪುಲ್ಲಿಂಗೇತರ ಎಂಬುದಾಗಿ ಇದ್ದರೆ, ಕೊರಗರಲ್ಲಿ ಏಕವಚನದಲ್ಲಿ ಮಾತ್ರ ಈ ರೀತಿಯ ವೈಶಿಷ್ಟ್ಯಗಳನ್ನು (ಇದು ತುಳುವಿನಲ್ಲಿಲ್ಲ) ಇಟ್ಟುಕೊಂಡು ಬಹುವಚನದಲ್ಲಿ ಮಹತ್‌-ಅಮಹತ್‌ (ಮಾನವ -ಮಾನವೇತರ) ಎಂಬ ವಿವಕ್ಷೆಯನ್ನು ಹೊಂದಿಕೊಂಡಿದೆ. ಆದ್ದರಿಂದ ಕೊರಗರ ಅಡುನುಡಿಯು ತುಳುವಿನ ಉಪಭಾಷೆಯಾಗಿರದೆ ಪ್ರತ್ಯೇಕ ಒಂದು ದ್ರಾವಿಡ ಭಾಷೆಯಾಗಿದೆ. ತುಳುವಿಗೆ ಕೆಲವೊಂದು ವೈಶಿಷ್ಟ್ಯಗಳಲ್ಲಿ ಸಂಬಂಧ ಇರಿಸಿಕೊಂಡಿದ್ದರೂ ಕೆಲವೊಂದು ವ್ಯಾಕರಣಾಂಶಗಳ ರಚನೆಯಲ್ಲಿ ಭಿನ್ನತೆಯನ್ನಿಟ್ಟುಕೊಂಡಿದೆ. ಇದನ್ನು ಖಚಿತಪಡಿಸಲಿಕ್ಕಾಗಿ ಕೆಲವೊಂದು ನಿದರ್ಶನಗಳನ್ನು ಉದಾಹರಣೆ ಸಹಿತ ವಿವರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.

ನಾನು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ‘ಕೊರಗ ಒಂದು ಪ್ರತ್ಯೇಕ ದ್ರಾವಿಡ ಭಾಷೆ’ ಎಂಬ ಪ್ರಬಂಧವೊಂದನ್ನು ವಿಚಾರಗೋಷ್ಠಿಯಲ್ಲಿ ಇಂಗ್ಲಿಷ್‌ನಲ್ಲಿ ಮಂಡಿಸಿದ್ದೆ. ಡಾ. ಭದ್ರಿರಾಜು ಕೃಷ್ಣಮೂರ್ತಿ ಅವರು ತುಳುವಿಗೂ ಕೊರಗ ಭಾಷೆಗೂ ಇರುವ ಭಿನ್ನತೆಗಳನ್ನು ಗಮನಿಸಿ ಒಂದು ಉಪ ಭಾಷೆಯು ಈ ರೀತಿಯ ವ್ಯತ್ಯಾಸಗಳಿಂದ ಪ್ರತ್ಯೇಕ ಭಾಷೆಯೇ ಅಗಲು ಸಾಧ್ಯ. ಆದ್ದರಿಂದ ಇದು ಪ್ರತ್ಯೇಕ ಭಾಷೆಯೆಂಬ ನನ್ನ ಅಭಿಪ್ರಾಯಕ್ಕೆ ಒತ್ತು ನೀಡಿದರು. ತುಳು ಭಾಷೆಯ ಬಗ್ಗೆ ಒಮ್ಮೆ ಅವರು ನನ್ನನ್ನು ತುಳು ಮಧ್ಯದ್ರಾವಿಡರ ಲಕ್ಷಣಗಳನ್ನು ಜಾಸ್ತಿ ಹೊಂದಿಕೊಂಡಿದೆಯಾದ, ಕಾರಣ ಇದನ್ನು ಮಧ್ಯ ದ್ರಾವಿಡ ಭಾಷಾ ಉಪರ್ಗಕ್ಕೆ ಸೇರಿಸಬದೆಂದು ಚರ್ಚಿಸಿದರು. ಆದರೆ ಆ ಹೊತ್ತಿಗೆ ಡಾ. ಪಿ. ಎನ್‌. ಸುಬ್ರಹ್ಮಣಂ ಅವರು ಈ ಭಾಷೆಯು ದಕ್ಷಿಣ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದೆಯೆಂದು ಸ್ಪಷ್ಟಪಡಿಸಿದರು. ಮೂಲ ದಕ್ಷಿಣ ದ್ರಾವಿಡ ಭಾಷೆ ಬೇರೆ ಬೇರೆ ಭಾಷೆಗಳಾಗಿ ವಿಕಾಸ ಆಗುವುದರ ಮೊದಲೇ ಈ ಕವಲಿನಿಂದ ಬೇರೆಯಾಗಿ ಚಿಗುರಿ ಬಂದ ಶಾಖೆಯೇ ತುಳುವೆಂದು ಇವರು ಹೇಳಿದ್ದಾರೆ. ಇದನ್ನು ಅವರು ಒಂದು ರೇಖಾಚಿತ್ರದ ಮೂಲಕವೂ ತೋರಿಸಿಕೊಟ್ಟಿದ್ದಾರೆ. ಈ ರೇಖಾ ಚಿತ್ರದಲ್ಲಿ ಕಾಣಿಸಿದಂತೆ, ಮೂಲ ದಕ್ಷಿಣ ದ್ರಾವಿಡರಿಂದ ಕವಲೊಡೆದ ಭಾಷೆಯಾಗಿ ತುಳುವಿನ ಸ್ಥಾನವು ಸ್ಪಷ್ಟವಾಗಿದೆ. ಮತ್ತು ಈ ಅಭಿಪ್ರಾಯವನ್ನು ಅಧುನಿಕ ಭಾಷಾ ವಿಜ್ಞಾನಿಗಳು ಸಾಧಾರ ನಿರೂಪಣೆಯೆಂದು ಮಾನ್ಯ ಮಾಡಿರುತ್ತಾರೆ. ಆದ್ದರಿಂದ ಕೊರಗ ಮತ್ತು ತುಳು ಭಾಷೆಗಳು ದಕ್ಷಿಣ ದ್ರಾವಿಡ ಉಪವರ್ಗಕ್ಕೆ ಸೇರಿದ ಪ್ರತ್ಯೇಕ ಭಾಷೆಗಳಾಗಿವೆಯೆಂದು ಹೇಳಬಹುದು. ಆದ್ದರಿಂದ ಕೊರಗ ಭಾಷೆ ಮತ್ತು ತುಳು ಭಾಷೆಗಿರುವ ಸಂಬಂಧ ಬಹಳ ಕ್ಷೀಣವಾದುದೆಂದೇ ಹೇಳಬಹುದು.

ವರ್ನರ್‌ ಬ್ರೂಡಿ ಅವರು ಕೊರಗ – ತುಳು ಭಾಷಿಕ ಸಂಬಂಧವು ತುಳು ಕನ್ನಡದೊಂದಿಗೆ ಅಥವಾ ಮಲಯಾಳ ಮತ್ತು ತಮಿಳು ನಡುವಣ ಸಂಬಂಧಗಳಿಗಿಂತ ಮಿಗಿಲಾದುದೇನಲ್ಲ. ಆದ್ದರಿಂದ ಕೊರಗ ಭಾಷೆಯನ್ನು ಒಂದು ಸ್ವತಂತ್ರ ದ್ರಾವಿಡ ಭಾಷೆಯಾಗಿಯೇ ಪರಿಗಣಿಸಬೇಕು ವಿನಾ ತುಳುವಿನ ಅಥವಾ ಬೇರೆ ಯಾವುದೇ ಭಾಷೆಯ ಉಪಭಾಷೆಯೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ. ಡಿ. ಎನ್‌. ಎಸ್. ಭಟ್ಟರು ಅವರ ‘Koraga Languages’ (೧೯೭೧) ಎಂಬ ಪುಸ್ತಕದಲ್ಲಿ ಕೊರಗ ಭಾಷೆಯಲ್ಲಿ ನಾಲ್ಕು ಉಪಭಾಷೆಗಳಿವೆ ಎಂದಿದ್ದಾರೆ. ಅವು ಯಾವುದೆಂದರೆ ಒಂಟಿ, ತಪ್ಪು, ಮೂಡು ಹಾಗೂ ಅಂಡೆ ಕೊರಗ ಮೊದಲ ಮೂರು ಭಾಷೆಗಳ ವರ್ಣನಾತ್ಮಕ ಹಾಗೂ ತೌಲನಿಕ ವ್ಯಾಕರಣವನ್ನು ಬಹಳ ಸಂಕ್ಷಿಪ್ತವಾಗಿ ಕೊಟ್ಟಿದ್ದಾರೆ. ಕೊನೆಯ ಉಪಭಾಷೆಯಾದ ಅಂಡೆ ಕೊರಗದ ಮೇಲೆ ವಿಸ್ತಾರವಾಗಿ ವರ್ಣನಾತ್ಮಕ ವ್ಯಾಕರಣವನ್ನು ಬರೆದು ಅದನ್ನು ಪ್ರಬಂಧ ರೂಪದಲ್ಲಿ ಪಿಎಚ್‌. ಡಿ ಪದವಿಗಾಗಿ ೧೯೭೮ರಲ್ಲಿ ನಾನು ಪೂನಾ ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ್ದೆ. ಉಡಪಿಯಲ್ಲಿ ಒಂಟಿ ಕೊರಗ ಉಪಭಾಷೆಯನ್ನು ಮಾತಾಡುತ್ತಿದ್ದು ತುಳು ಭಾಷೆಯನ್ನು ವ್ಯಾವಹಾರಿಕ ಭಾಷೆಯನ್ನಾಗಿ ಬಳಸುತ್ತಿದ್ದಾರೆ. ತಪ್ಪು ಕೊರಗ ಉಪಭಾಷೆಯನ್ನು ಹೆಬ್ರಿಯಲ್ಲಿ ಮಾತಾಡುತ್ತಿದ್ದು ಇವರು ತುಳು, ಕನ್ನಡ ಎರಡೂ ಭಾಷೆಗಳನ್ನೂ ಬಲ್ಲವರಾಗಿದ್ದಾರೆ. ಕುಂದಾಪುರದಲ್ಲಿ ಮೂಡು ಕೊರಗ ಉಪ ಭಾಷೆಯನ್ನು ಅಲ್ಲದೆ ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನೂ ಬಳಸುತ್ತಿದ್ದಾರೆ. ಮಂಗಳೂರು ಕಡೆ ಅಂಡೆ ಕೊರಗ ಉಪಭಾಷೆಯನ್ನು ಮಾತಾಡುತ್ತಿದ್ದು ತುಳು ಭಾಷೆಯನ್ನು ವ್ಯಾವಹಾರಿಕ ಭಾಷೆಯನ್ನಾಗಿ ಬಳಸುತ್ತಿದ್ದಾರೆ. ಅರವಿಂದ ಮೂಲಗತ್ತಿ ಹಾಗೂ ಒಡೆಯರ ಡಿ. ಹೆಗ್ಗಡೆ ಅವರ ‘ಕೊರಗ ಜನಾಂಗ: ವಿಶ್ಲೇಷಣಾತ್ಮಕ ಅಧ್ಯಯನ’ ದಲ್ಲಿ ಈ ರೀತಿ ಕೊಟ್ಟಿದ್ದಾರೆ. (ಪುಟ ೪೫). ‘ಕುಂದಾಪುರ ತಾಲ್ಲೂಕಿನ ಉತ್ತರ ಭಾಗದ ಕಾಡುಗಳಲ್ಲಿ ಮತ್ತು ಕಣಿವೆಯಂಥ ಪ್ರದೇಶ ಬೆಟ್ಟ ಗುಡ್ಡಗಳ ಇಳಿಜಾರು ಪ್ರದೆಶಗಳಲ್ಲಿ ವಾಸಿಸಿರುವ ಕೊರಗರನ್ನು ಸಂಪರ್ಕಿಸಲು ಕ್ಷೇತ್ರಕಾರ್ಯ ನಡೆಸಿದರೆ ಕೊರಗ ಭಾಷೆಯ ಇನ್ನೂ ಬೇರೆ ಬೇರೆ ಬಗೆಗಳು ಕಂಡು ಬರುಬಹುದಾಗಿದೆ’. ಈ ಬಗೆಗಿನ ಆಳವಾದ ಅಧ್ಯಯನ ಇನ್ನೂ ನಡೆಯಬೇಕಾಗಿದೆ.

ತಮಿಳು ಹಾಗೂ ಕೊರಗ ಭಾಷೆಗಳು ಮೇಲುನೋಟಕ್ಕೆ ಹೋಲಿಕೆ ಹೊಂದಿದ್ದರೂ ಇವುಗಳ ವ್ಯಾಕರಣ ರಚನೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಕೊರಗ ಭಾಷೆಯು ತುಳುವಿನ ಉಪಭಾಷೆಯಲ್ಲ. ಅದೊಂದು ಪ್ರತ್ಯೇಕ ಭಾಷೆ ಎಂಬುದನ್ನು ತೋರಿಸಲು ಅವೆರಡೂ ಭಾಷೆಗಳ ವ್ಯಾಕರಣ ರಚನೆಗಳಲ್ಲಿ ಕಂಡುಬರುವ ಕೆಲವೊಂದು ಮುಖ್ಯ ವ್ಯತ್ಯಾಸಗಳನ್ನು ಮಾತ್ರ ಕೆಳಗೆ ಕೊಡಲು ಪ್ರಯತ್ನಿಸಿದ್ದೇನೆ.

೧. ಕೊರಗ ಭಾಷೆಯ ಬಹುವಚನ ಪ್ರತ್ಯಯಗಳಾದ -ಲ್ಲ್, ಕಲ್ ಮತ್ತು -ಲ್‌ತುಳುವಿನಲ್ಲಿ ಕಂಡುಬರುವುದಿಲ್ಲ. ಅದರ ಬದಲು -ಲ್ಲು, -ಕುಲು, -ಗುಲು- ರ್‌ಮತ್ತು -ಲು ವಚನ ಪ್ರತ್ಯಯಗಳು ತುಳುವಿನಲ್ಲಿ ಕಂಡುಬರುತ್ತವೆ. ಉದಾಹರಣೆಗಾಗಿ

ಕೊರಗ ತುಳು ಅರ್ಥ (ಕನ್ನಡ)
ಕೋರ್ತಿ-ಕೊರ್ತಿಲ್ಲ್ ಬುಡೆದಿ-ಬುಡೆದ್ಯಲ್ಲು ‘ಹೆಂಡತಿಯರು’
ಕೊರಾಯಿ-ಕೊರಾಯಿಲ್ಸ್ ಕಂಡನೆ -ಕಂಡನಲ್ಲು  ‘ಗಂಡಂದಿರು’
ಪಾರ್ನೆ-ಪಾರ್ನನಕಲ್ ಬ್ರಾಣೆ-ಬ್ರಾಣೆರ್‌  ‘ಬ್ರಾಹ್ಮಣರು’
ಕೊಡಂಕ್ರೆ-ಕೊಂಡಂಕ್ರನಕ್‌ಲ್‌  ಅಚಾರಿ-ಆಚಾರ್ಲು ‘ಆಚಾರಿಗಳು’
ಮಂದರ -ಮಡರಲ್ ಮುಂಡ -ಮುಂಡೊಲು ‘ಹಣೆಗಳು’

೨. ಕೊರಗ ಭಾಷೆಯಲ್ಲಿ ದ್ವಿತೀಯ (ಕರ್ಮ) ವಿಭಕ್ತಿ ಪ್ರತ್ಯಯ- ನ್‌ವು ಆಗಮ ಪ್ರತ್ಯಯ -ತ್‌ಅಲ್ಲದೆ -ದ್‌ಆಗಮ ಪ್ರತ್ಯಯದ ನಂತರ ಕಂಡುಬಂದರೆ -ನು ದ್ವಿತೀಯ (ಕರ್ಮ) ವಿಭಕ್ತಿ ಪ್ರತ್ಯಯವು -ತು ಅಲ್ಲದೆ -ದು ಆಗಮ ಪ್ರತ್ಯಯಗಳ ನಂತರ ಕಂಡುಬರುತ್ತದೆ. ಆದರೆ ತುಳುವಿನಲ್ಲಿ ಈ ರೀತಿ ಆಗಮ ಪ್ರತ್ಯಯ ಕಂಡುಬರುವುದಿಲ್ಲ.

ಕೊರಗ ತುಳು ಅರ್ಥ (ಕನ್ನಡ)
ಚಯಿ-ಚಯಿತ್‌ನ್‌ ತಯಿ-ತಯಿನ್‌ ‘ಗಿಡವನ್ನು’
ತೋರು-ತೋರ್ತುನು ಚರ್ಮ-ಚರ್ಮೊನು ‘ಚರ್ಮವನ್ನು’
ಬತ್ತ -ಬತ್ತದ್‌ನ್‌ ಬಾರ್‌ಬಾರ್‌ನ್‌ ‘ಭತ್ತವನ್ನು’
ಬಿರ್ದ- ಬಿರ್ದದನ್‌ ಮದ್ಮ್‌ಮದ್ಮೆನ್‌ ‘ಮದುವೆಯವನ್ನು’
ಕೊಂಗರ -ಕೊಂಗರ್ದನ್‌ ಕಕ್ಕೆ್-ಕಕ್ಕೆನ ‘ಕಾಗೆಯನ್ನು’
ಕೊಂಗು- ಕೊಂಗುವನು ನಾಯಿ -ನಾಯಿನ್ ‘ನಾಯಿಯನ್ನು’

೩. ಕೊರಗ ಭಾಷೆಯಲ್ಲಿ ಚತುರ್ಥೀ (ಸಂಪ್ರದಾನ) ವಿಭಕ್ತಿ ಪ್ರತ್ಯಯಗಳು, -ಕ ಮತ್ತು -ದಗ ಮಾತ್ರ ಕಂಡುಬರುತ್ತದೆ. ಆದರೆ ಇದರ ಬದಲು ತುಳುವಿನಲ್ಲಿ -ಕ್, -ಕು, -ಗ್‌ಮತ್ತು -ಗು ಪ್ರತ್ಯಯಗಳು ಕಂಡುಬರುತ್ತವೆ. ಉದಾಹಣೆಗಾಗಿ,

ಕೊರಗ ತುಳು ಅರ್ಥ (ಕನ್ನಡ)
ಚಯ-ಚಯಿಕ ತಯಿ-ತಯಿಕ್‌ ‘ಗಿಡಕ್ಕೆ’
ಪೂ- ಪೂಕ ಪೂ-ಪೂಕು ‘ಹೂವಿಗೆ’
ಜಾಜಿ-ಜಾಜಿಗ ತಾದಿ-ತಾದಿಗ ‘ದಾರಿಗೆ’
ಕೊರ್ತಿ-ಕೊರ್ತಿಗ ಬುಡೆದಿ-ಬುಡೆದಿಗ್‌ ‘ಹೆಂಡತಿಗೆ’
ಕೊಂಘು- ಕೊಂಗುಗ ನಾಯಿ-ನಾಯಿಗ್‌ ‘ನಾಯಿಗೆ’
ಕೊದೊಲು-ಕೊದೊಲ್ಲ ಕಕ್ಕೆ್-ಕಕ್ಕೆಗ್‌ ‘ಕಾಗೆಗೆ’
ಯಾನ್‌ಅಂಗ್ ಯಾನ್‌ಎಂಕ್ ‘ನನಗೆ’
ಇಜ್ಜಿ-ನಿಂಗ ಈ-ನಿಕ್ಕ್ ‘ನಿನಗೆ’
ತಾನ್‌ತಂಗ ತಾನ್‌ತನಕ್ ‘ತನಗೆ’

೪. ಕೊರಗ ಭಾಷೆಯಲ್ಲಿ ಪಂಚಮೀ (ಅಪಾದಾನ) ವಿಭಕ್ತಿ ಪ್ರತ್ಯಯಗಳು ಯಾವುದೆಂದರೆ – ಅಂಟ, ನ್ಟ ಮತ್ತು ಅಂಟಿ, ಆದರೆ ತುಳುವಿನಲ್ಲಿ -ಡ್ದ್ ಮತ್ತು -ಡ್ದು ಪ್ರತ್ಯಯಗಳು ಕಂಡುಬರುತ್ತವೆ. ಕೊರಗದ -ಅಂಟ ಪ್ರತ್ಯಯವು ಆಗಮ ಪ್ರತ್ಯಯ -ತ -ದ ನಂತರ ಕಂಡುಬರುತ್ತದೆ. ಆದರೆ ತುಳುವಿನಲ್ಲಿ ಈ ರೀತಿ ಆಗಮ ಪ್ರತ್ಯಯಗಳು ಕಂಡುಬರುವುದಿಲ್ಲ. ಉದಾಹರಣೆಗಾಗಿ

ಕೊರಗ ತುಳು ಅರ್ಥ (ಕನ್ನಡ)
ಗಡಿ-ಗಡಿತಾಂಟ ಗಾಯ-ಗಾಯೊಡ್ಡು  ‘ಗಾಯದಿಂದ’
ಕೊಟ್ಟ-ಕೊಟ್ಟದಾಂಟ ಇಲ್ಲ್ -ಇಲ್ಲ್ ಡ್ದ್ ‘ಮನೆಯಿಂದ’
ಕೊರ್ತಿ- ಕೊರ್ತಿಂಟ ಬುಡೆದಿ-ಬುಡೆದಿಡ್ದ್  ‘ಹೆಂಡತಿಯಿಂದ’
ಮಾಮೆ- ಮಾಮಂಟ ತಮ್ಮಲೆ-ತಮ್ಮಲೆಡ್ದ್ ‘ಮಾವನಿಂದ’
ಇಕ್ಕೆ -ಇಕ್ಕೆಂಟ ಇಂಬೆ-ಇಂಬ್ಯಡ್ದ ‘ಇವನಿಂದ’
ಯಾನ್‌-ಅನಂಟ ಯಾನ್‌-ಎನಡ್ದ್ ‘ನನ್ನಿಂದ’
ಇಜ್ಜಿ-ನಿನಂಟ ಈ -ನಿನಡ್ದ್ ‘ನಿನ್ನಿಂದ’
ತಾನ್‌-ತನಂಟ ತಾನ್‌-ತನಡ್ದ್ ‘ತನ್ನಿಂದ’

೫. ಕೊರಗ ಹಾಗೂ ತುಳುವಿನಲ್ಲಿ ಹೆಚ್ಚಾಗಿ ಬೇರೆ ಬೇರೆ ಸರ್ವನಾಮಗಳು ಕಂಡುಬರುತ್ತವೆ. ಅವೆಲ್ಲವುಗಳು ಈ ಇತಿ ಇವೆ.

ಕೊರಗ ತುಳು ಅರ್ಥ (ಕನ್ನಡ)
ಯಾನ್‌ ಯಾನ್‌ ‘ನಾನು’
ಎಂಕ್‌ಲ್‌ ಎಂಕುಲು ‘ನಾವು’
ನಕ್‌ಲ್‌ ನಮ ‘ನಾವು’
ಇಜ್ಜಿ ‘ನೀನು’
ನಿಕಲ್‌ ನಿಗುಲು ‘ನೀವು’
ಇಕ್ ಇಂಬೆ / ಉಂಬೆ ‘ಇವನು’
ಇಕ್ಕೆತ ಮೊಗಲು ‘ಇವರು’ (ನಪುಂಸಕೇತರ)
ಉತ್ತು ಮೋಲು ‘ಇವಳು’
ಉತ್ತು ಉಂದು ‘ಇದು’
ಉತೆರ್‌ಕಲ್‌ ಉಂದೆಕುಲು / ನೆಕ್ಕಲು ‘ಇವುಗಳು’ (ನಪುಂಸಕ)
ಆಯಿ ಆಯೆ ‘ಅವನು’
ಅದ್ದ್‌ ಆಲ್‌ ‘ಅವಳು’
ಅದ್ದ್‌ ಅವು ‘ಅದು’
ಅದೆಕ್‌ಲ್‌ ಅಯಿಕಲ್‌ ‘ಅವುಗಳು’ (ನಪುಂಸಕ)
ಅಕಲ್‌ ಅಗುಲು ‘ಅವರು’ (ನಪುಂಕೇತರ)
ಒದ್ದು ಒವು ‘ಯಾವುದು’
ಒದೆಕಲ್‌ ಒಯಿಕಲು ‘ಯಾವುವು’

ಮೊಲದಲೇ ತಿಳಿಸಿದಂತೆ ಹಾಗೆ ಕೊರಗ ಭಾಷೆಯಲ್ಲಿ ಏಕವಚನದಲ್ಲಿ ಪುಲ್ಲಿಂಗ-ಪುಲ್ಲಿಂಗೇತರ (ಇದು ತುಳುವಿನಲ್ಲಿಲ್ಲ) ಹಾಗೂ ಬಹುವಚನದಲ್ಲಿ ಮಾನವ-ಮಾನವೇತರ ಎಂಬ ಲಿಂಗವಿವಕ್ಷೆಯನ್ನು ಹೊಂದಿಕೊಂಡಿದೆ.

೬. ಕೊರಗ ಭಾಷೆಯಲ್ಲಿ -ಕ- ಮತ್ತು – ಗ್‌ಎಂಬ ಭೂತಕಾಲ ಪ್ರತ್ಯಯಗಳು ಕಂಡುಬಂದರೆ ತುಳುವಿನಲ್ಲಿ -ಯ್‌ತ- ಮತ್ತು – ಣ್‌ಪ್ರತ್ಯಯಗಳು ಕಂಡುಬರುತ್ತವೆ. ಉದಾಹರಣೆಗಾಗಿ

ಕೊರಗ ತುಳು ಅರ್ಥ (ಕನ್ನಡ)
ಪೋ – ಪುಕ್ಕೆ್ ಪೋ – ಪೋಯೆ್ ‘ಹೋದೆನು’
ಬಾ – ಬಕ್ಕೆ್ ಬರ್‌-ಬತ್ತೆ್ ‘ಬಂದೆನು’
ಜೂ – ಜೂಕ್ಕೆ್ ದೀ – ದೀಯೆ್ ‘ಇಟ್ಟೆನು’
ಕಲ – ಕಲಕ್ಕೆ್ ಕನ – ಕನತೆ್ ‘ತಂದೆನು’
ಕೊರು – ಕೊರ್ಕೆ್ ಕೆರ್‌ಕೆರ್ಯೆ್ ‘ಕೊಂದೆನು’
ನೇಕ್‌ಲ್‌-ನೇಕಲ್ಲೆ್ ಪೋಡಿ – ಪೋಡ್ಯೆ್ ‘ಹೆದರಿದೆನು’

೭. ಕೊರಗ ಭಾಷೆಯಲ್ಲಿ -ನ್‌-ಣ್‌ಮತ್ತು -ಞ- ಗಳು ಅಭೂತ ಕಾಲ ಪ್ರತಯ್ಯಗಳಾಗಿ ಕಂಡುಬರುತ್ತವೆ. ಆದರೆ ತುಳುವಿನಲ್ಲಿ -ಪ್‌-ಮತ್ತು -ಮ್‌ಗಳು ಅಭೂತ ಕಾಲ ಪ್ರತ್ಯಗಳಾಗಿ ಕಂಡುಬರುತ್ತವೆ. ಉದಾಹರಣೆಗಾಗಿ

ಕೊರಗ ತುಳು ಅರ್ಥ (ಕನ್ನಡ)
ರಾ – ರನ್ನೆ್ ಉಪ್ಪು – ಉಪ್ಪುವೆ್ ‘ಇರುತ್ತೇನೆ’
ಆರ್ಟ್‌-ಆಟ್ಣೆ್ ದಕ್ಕ್‌-ದಕ್ಕುವೆ್ ‘ಬಿಸಾಡುತ್ತೇನೆ’
ಪುಡ್ಡು – ಪುಡ್ಣೆ್ ಪತ್ತ್‌ಪತ್ತವೆ್ ‘ಹಿಡಿಯುತ್ತೇನೆ’
ನೂ – ನೂನೆ್ ಪನ್‌-ಪನ್ಪೆ್ ‘ಹೇಳುತ್ತೇನೆ’
ಬೊಡು – ಬೊನ್ನೆ್ ಬುಡು – ಬುಡ್ಪೆ್ ‘ಬಿಡುತ್ತೇನೆ’
ತಾ – ತಂಜಿ ಕೊರು – ಕೊರ್ಪುಜಿ ‘ಕೊಡುವುದಿಲ್ಲ’

೮. ಕೊರಗ ಭಾಷೆಯಲ್ಲಿ -∅- (ಶೂನ್ಯ) ಮತ್ತು – ಅ – ಪೂರ್ಣವರ್ತಮಾನ ಪ್ರತ್ಯಯವಾಗಿ ಕಂಡು ಬಂದರೆ ತುಳುವಿನಲ್ಲಿ – ತ್‌ಅದ್‌ಮತ್ತು – ದ್‌ಪೂರ್ಣ ವರ್ತಮಾನ ಪ್ರತ್ಯಯಗಳಾಗಿ ಕಂಡುಬರುತ್ತವೆ. ಉದಾಹರಣೆಗಾಗಿ :

ಕೊರಗ ತುಳು ಅರ್ಥ (ಕನ್ನಡ)
ಊ – ಓಕೆ್ ಉಪ್ಪು – ಇತ್ತ್‌ದೆ್ ಇದ್ದೆನು
ಚೂ – ಚಾಕೆ್ ತೂ – ತೂತೆ್ ನೋಡಿದ್ದೇನೆ
ಪೋ – ಪಾಕೆ್ ಪೋ – ಪೋತೆ್ ಹೋಗಿದ್ದೆನು
ತಾ – ತರಕ್‌ ಕೊರು – ಕೊರ್ತೆ್ ಕೊಟ್ಟಿದೇನೆ
ಬೂರು – ಬೂರಗೆ ಜೆಪ್ಪು – ಜೆಯ್ದೆ್ ಮಲಗಿದ್ದೆನು.

೯. ಕೊರಗ ಭಾಷೆಯಲ್ಲಿ – ಪೆಯಿ ಮತ್ತು – ಎಯಿಗಳು ಪ್ರೇರಣಾರ್ಥಕ ಪ್ರತ್ಯಯಗಳಾಗಿ ಕಂಡುಬಂದರೆ ತುಳುವಿನಲ್ಲಿ – ಪಾವು ಮತ್ತು ಅವುಗಳು ಪ್ರೇರಣಾರ್ಥಕ ಪ್ರತ್ಯಯಗಳಾಗಿ ಕಂಡುಬರುತ್ತವೆ. ಉದಾಹರಣೆಗಾಗಿ

ಕೊರಗ ತುಳು ಅರ್ಥ
ನನಿ – ನನೆಪೆಯಿ ನನೆ – ನನೆಪಾವು ನನೆಯಿಸು
ಪಕ – ಪರ್ಪೆಯಿ ಪಕ – ಪರ್ಪಾವು ಕುಡಿಯಿಸು
ಪಿಜ್ಜಿ – ಪಿಜ್ಜೆಯಿ ಪೆಜ್ಜಿ – ಪೆಜ್ಜಾವು ಹೆಕ್ಕಿಸು
ಲಾಕ್‌ಲಾಕೆಯಿ ಲಕ್ಕ್‌ಲಕ್ಕಾವು ಎಬ್ಬಿಸು
ನೇಕಲ್‌ನೇಕ್‌ಲೆಯೆ ಪೋಡಿ – ಪೋಡ್ಯಾವು ಹೆದರಿಸು

೧೦. ಕೊರಗ ಹಾಗೂ ತುಳು ಭಾಷೆಗಳಲ್ಲಿ ಕ್ರಿಯಾ ಮೂಲದ ಮೂಲಕವೂ ವಿಧ್ಯರ್ಥಕವನ್ನು ಸೂಚಿಸುತ್ತದೆ. ಇದು ಉಭಯ ಲಿಂಗಕ್ಕೂ ಅನ್ವಯಿಸುತ್ತದೆ. ಆದರೆ ಲಿಂಗ ಭೇದಕ್ಕೆ ಅನ್ವಯಿಸಿದಾಗ ಕೊರಗ ಭಾಷೆಯಲ್ಲಿ ಪುಲ್ಲಿಂಗ ಏಕವಚನದಲ್ಲಿ – ಡ ಪ್ರತ್ಯಯವೂ, ಸ್ತ್ರೀಲಿಂಗ ಏಕವಚನದಲ್ಲಿ – ನ್‌ಪ್ರತ್ಯಯವು ಕಂಡುಬರುತ್ತವೆ. ಆದರೆ ತುಳುವಿನಲ್ಲಿ ಒಂದೇ ಪ್ರತ್ಯಯ – ಲವು ಉಭಯ ಲಿಂಗಕ್ಕೂ ಅನ್ವಯಿಸಲ್ಪಡುತ್ತದೆ. ಕ್ರಿಯಾ ಮೂಲದ ಮೂಲಕವೂ ವಿಧ್ಯರ್ಥಕವನ್ನು ಸೂಚಿಸುವುದರಿಂದ ಮೇಲೆ ತಿಳಿಸಿರುವ ಕೊರಗ ಭಾಷೆಯ ಹಾಗೂ ತುಳು ಭಾಷೆಯ ವಿಧ್ಯರ್ಥಕ ಪ್ರತ್ಯಯಗಳು ಐಚ್ಛಿಕವಾಗಿಯೂ ಬಳಸಲ್ಪಡುತ್ತವೆ. ಉದಾಹರಣೆಗಾಗಿ

ಕೊರಗ ಪುಲ್ಲಿಂಗ ಸ್ತ್ರೀಲಿಂಗ
ಚೂ ನೋಡು! ಚೂಡ ಚೂನ್‌ನೋಡು!
ಪೋ ಹೋಗು ಪೋಡ ಪೋನೆ ಹೋಗು!
ತಾ ಕೊಡು! ತಾಡ ತಾನೆ ಕೊಡು!
ದತ್ತ್‌ ನಿಲ್ಲು! ದತ್ತಡ್‌ ದತ್ತನೆ ನಿಲ್ಲು!

 

ತುಳು ಪುಲ್ಲಿಂಗ ಹಾಗೂ ಸ್ತ್ರೀಲಿಂಗ
ಕೊರು ಕೊಡು! ಕೊರ್ಲ ಕೊಡು!
ಓದು ಓದು! ಓದುಲ ಓದು!
ಕಲ್ಪು ಕಲಿ! ಕಲ್ಪುಲ ಕಲಿ!