ತುಳುನಾಡಿನಲ್ಲಿ ಪ್ರಚಲಿತವಾಗಿರುವ ಸಾವಿರಾರು ತಾಡವಾಲೆಗಳಲ್ಲಿ ತನ್ನ ಅಸ್ತಿತ್ವವನ್ನು ಸಾರಿದ ತುಳು ಲಿಪಿಯು ಒಂದು ದೀರ್ಘ ಕಾಲದ ಚರಿತ್ರೆಯ ಕಗ್ಗತ್ತಲಲ್ಲಿ ಕಣ್ಮರೆಯಾಗಿದ್ದುದು ಸೋಜಿಗದ ವಿಷಯ. ತುಳುವಿಗೊಂದು ಗಟ್ಟಿಯಾದ ರಾಜಾಶ್ರಯ ದೊರೆಯದೇ ಇದ್ದುದು ಅದಕ್ಕೆ ಕಾರಣವಿರಲೂಬಹುದು. ಎಲ್ಲೋ ಅರುಣಾಬ್ಜನಂಥಾ ಒಬ್ಬ ಕವಿ ಚಿಟ್ಟುಪಾಡಿ ಬೀಡಿನ ಮೂಡಿಲ್ಲಾರ್ ಮತ್ತು  ನಿಡಂಬೂರು ಬೀಡಿನ ನಿಡುಂಬುರಾ ಬೀಡಿನ ನಿಡುಂಬುರಾರ್ ದೊರೆಗಳ ಮೊರೆಹೊಕ್ಕು, ತನ್ನ ‘ಕಾವ್ಯವನುರುಹೊ ವಿಕಸೀಪೊಡುನ ಲೋಕೊಂಟ್‌’ ಎಂದು ಪ್ರಾರ್ಥಿಸಿಕೊಂಡರೂ ತುಳುಲಿಪಿಯ ಸಾರ್ವತ್ರಿಕತೆಗೆ ಆ ಪ್ರಯತ್ನ ಸಾಕಾಗಲಿಲ್ಲವೆಂದೇ ಹೇಳಬೇಕಷ್ಟೆ. ಮಾತ್ರವಲ್ಲ ತುಳುನಾಡು ಒಂದು ಚಿಕ್ಕ ಭೂಪ್ರದೇಶ. ವಿಶಾಲ ಕರ್ನಾಟಕದ ಮಡಿಲಲ್ಲಿ ಅದರ ಅಸ್ತಿತ್ವ ಬಹಳ ಚಿಕ್ಕದು. ಆದರೆ ತನ್ನದೇ ಆದ ಒಂದು ಸಾಂಸ್ಕೃತಿಕ ನೆಲೆಗಟ್ಟು ಭದ್ರವಾಗಿ ಇರುವ ಕಾರಣ ತುಳು ಭಾಷೆಯು ಒಂದು ವಿಶಾಲ ವ್ಯಾಪ್ತಿಯಲ್ಲಿ ಬೆಳೆಯುತ್ತ ಬಂತು. ಭೂತಾರಾಧನೆಯಂತಹ ಸಾಂಸ್ಕೃತಿಕ ಪರಂಪರೆಯಿಂದಾಗಿ ಅದು ‘ದೈವ’ ಭಾಷೆಯಾಗಿ ಪರಿಣಮಿಸಿ ದೈವ – ಮಾನವರೊಳಗಿನ ಸಂಪರ್ಕಭಾಷೆಯಾಗಿಯೂ ಪ್ರಸಿದ್ಧಿಯನ್ನು ಪಡೆಯಿತು. ಇಂದಿಗೂ ಭೂತದ ನುಡಿಗಟ್ಟುಗಳಲ್ಲಿ ಕಂಡುಬರುವ ಆ ಚೆಲುವು ಯಾವುದೇ ಕಾವ್ಯಭಾಷೆಗೂ ಕಡಮೆಯಲ್ಲಿ ಎಂಬುದು ಸತ್ಯ. ಹೀಗೆ ಒಂದೆಡೆ ಜಾನಪದೀಯವಾಗಿ ತುಳು ಭಾಷೆ ಬೆಳೆದರೆ, ಇನ್ನೊಂದೆಡೆ ಶಿಷ್ಟಕಾವ್ಯ ರೂಪವಾಗಿಯೂ ಅದೂ ವಿಕಾಸಗೊಂಡಿದೆ. ಅರುಣಾಬ್ಜ, ವಿಷ್ಣುತುಂಗರಂಥಾ ಕವಿಗಳು ತಮ್ಮ ಪ್ರತಿಭೆ ಮತ್ತು ಪಾಂಡಿತ್ಯಗಳಿಂದ ತುಳು ಸಾಹಿತ್ಯ ಚರಿತ್ರೆಯನ್ನು ಶ್ರೀಮಂತಗೊಳಿಸಿದ್ದಾರೆ. ತುಳುವಿನ ಪ್ರಾಚೀನ ಶಬ್ದ ಸಂಪತ್ತನ್ನು ನಮಗಾಗಿ ಉಳಿಸಿಕೊಟ್ಟಿದ್ದಾರೆ. ಅಂತೂ ಜಾನಪದೀಯವಾಗಿ ಅದರ ‘ಶಾಬ್ದ’ ರೂಪವೂ ಶಿಷ್ಟ ಕಾವ್ಯಗಳಿನ್ನು ಲಿಪಿಕರಿಸುವ ಮೂಲಕ ಅದರ ‘ಚಾಕ್ಷುಷ’ ರೂಪವು ಉಳಿದುಕೊಂಡಬಂದಿದೆಯೆಂಬುದು ಹೆಮ್ಮೆಯ ವಿಷಯ.

ಕ್ರಿ.ಶ. ಸಮಾರು ಐದನೆಯ ಶತಮಾನದ ವೇಳೆಗೆ ಕೇರಳದಲ್ಲಿದ್ದ ಅನೇಕ ಜೈನಕ್ಷೇತ್ರಗಳೂ, ಬೌದ್ಧ ಮತ ವಿಹಾರಗಳೂ ದೇವಾಲಯಗಳಾಗಿ ಮಾರ್ಪಾಡು ಹೊಂದಿದುವು ಎಂದು ಚರಿತ್ರೆಗಳಿಂದ ತಿಳಿದುಬರುತ್ತದೆ. ಇದೇ ಸಂದರ್ಭದಲ್ಲಿ ಕೇರಳದಾದ್ಯಂತ ಅನೇಕ ಹೊಸ ದೇವಾಲಯಗಳೂ ನಿರ್ಮಾಣಗೊಂಡುವು. ಈ ದೇವಾಲಯಗಳಲ್ಲಿ ಪೂಜೆ ಮಾಡಲು ಯೋಗ್ಯ ಅರ್ಚಕರ ಅವಶ್ಯವಿತ್ತು. ತುಳುನಾಡಿನ ಬಹುಮಂದಿ ಬ್ರಾಹ್ಮಣ ಕುಟುಂಬಗಳು ಈ ಪೂಜಾ ವೃತ್ತಿಗಾಗಿ ಕೇರಳಕ್ಕೆ ವಲಸೆ ಹೋದರು. (ತುಳುವಿನ ಮೂಕಾಂಬಿ ಗುಳಿಗ ಪಾಡ್ದನದಲ್ಲಿ ಕೊಲ್ಲೂರಿನ ವಾಸುಭಟ್ಟರು ಶಾಂತಿ ಪೂಜೆಗಾಗಿ ಕೇರಳಕ್ಕೆ ಹೋದರೆಂಬ ಪ್ರಸ್ತಾಪವಿದೆ.)

ಹೀಗೆ ತುಳುನಾಡಿಂದ ಬಂದ ಈ ಬ್ರಾಹ್ಮಣರನ್ನು ಕೇರಳೀಯರು ‘ತುಳು ನಂಬಿ’ಗಳೆಂದು ಕರೆದರು. ತುಳು ನಂಬಿಗಳಲ್ಲಿ ಅನೇಕರು ‘ಎನ್‌ಬ್ರಾಂದಿರಿ’ಗಳಾಗಿಯೂ, ‘ಪೋತ್ತಿ’ ಗಳಾಗಿಯೂ ಪ್ರಸಿದ್ಧಿ ಹೊಂದಿದರು. ತುಳು ನಂಬಿಗಳು ತಮಗೆ ಬೇಕಾದ ವೇದ ಮಂತ್ರಗಳನ್ನು ಮತ್ತು ಆಚಾರ ವಿಚಾರಗಳನ್ನು ಬರೆದಿಟ್ಟುಕೊಳ್ಳಲು ಬಳಕೆಗೆ ತಂದ ಲಿಪಿ ಸಂಪ್ರದಾಯವೇ ತುಳುಲಿಪಿಯೆಂದು ಪ್ರಸಿದ್ಧಿ ಪಡೆಯಿತು.

ತುಳು ಲಿಪಿಯು ಕೇರಳದಲ್ಲಿ ‘ತುಳು ಮಲೆಯಾಳಂ ಲಿಪಿ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಒಂದು ಕಾಲದಲ್ಲಿ ಈ ಲಿಪಿಯು ಕೇರಳದಲ್ಲಿ ತುಳುನಾಡಿನಲ್ಲಿ ಸಮಾನವಾಗಿ ಪ್ರಚಾರದಲ್ಲಿದ್ದುದರಿಂದ ಇದಕ್ಕೆ ತುಳುಮಲೆಯಾಳಂ ಲಿಪಿ ಎಂಬ ಹೆಸರು ಬಂದಿದೆ. ಇದನ್ನು ಹೋಲುವ ಇನ್ನೊಂದು ಲಿಪಿ ಶೈಲಿಯು ‘ತಿಗಳಾರಿ ಲಿಪಿ’ ಎಂಬ ಹೆಸರಿನಿಂದ ಉತ್ತರ ಕನ್ನಡ ಜಿಲ್ಲೆ ಮತ್ತು ಗಟ್ಟದ ಮೇಲೆ ಸಹ ಪ್ರಚಾರದಲ್ಲಿದೆ. ತುಳು ತಿಗಳಾರಿ ಮತ್ತು ಮಲೆಯಾಳ ಲಿಪಿಗಳ ಮೂಲವು ತಮಿಳು ಗ್ರಂಥ ಲಿಪಿ ಅಥವಾ ಆರ್ಯಲಿಪಿಯಾದುದರಿಂದ ಇವುಗಳೊಳಗೆ ಪರಸ್ಪರ ಹೋಲಿಕೆಯಿರುವುದು ಸಹಜವಾಗಿದೆ.

02_42_TSC-KUH

ತುಳು ಮಲಯಾಳ ಲಿಪಿಯನ್ನು ‘ಆರ್ಯ ಲಿಪಿ’ ಪರಿಷ್ಕೃತ ರೂಪ ಎನ್ನಬಹುದು. ಕೇರಳದಲ್ಲಿ ಒಟ್ಟು ನಾಲ್ಕು ತರದ ಲಿಪಿಗಳು ರೂಢಿಯಲ್ಲಿದ್ದುವು. ವಟ್ಟೆಳುತ್ತು, ಕೋಲೆಳುತ್ತು ಮಲೆಯಾಣ್ಮ ಮತ್ತು ಆರ್ಯ ಎಳುತ್ತು- ಇವುಗಳಲ್ಲಿ ಅತ್ಯಂತ ಪ್ರಾಚೀನವಾದುದು ‘ವಟ್ಟೆಳುತ್ತು’. ಕ್ರಿ.ಶ. ೯ನೇ ಶತಮಾನ ದಿಂದ ೧೨ನೇ ಶತಮಾನದವರೆಗಿನ ಕಾಲಘಟ್ಟದಲ್ಲಿ ಮಲೆಯಾಳದ ಮೇಲೆ ಸಂಸ್ಕೃತದ ಪ್ರಭಾವವು ಹೆಚ್ಚು ಹೆಚ್ಚು ಆಗತೊಡಗಿತು. ಸಂಸ್ಕೃತ ಮಲೆಯಾಳ ಮಿಶ್ರವಾದ ‘ಮಣಿ ಪ್ರವಾಳ’ ವೆಂಬ ಹೊಸ ಭಾಷಾ ಶೈಲಿಯು ಬಳಕೆಗೆ ಬಂತು. ವಟ್ಟೆಳುತ್ತಿನ ಮೂವತ್ತು ಅಕ್ಷರಗಳು ಮಣಿ ಪ್ರವಾಳ ಬರಹಗಳಿಗೆ ಅಪರ್ಯಾಪ್ತವಾದುವು. ಇದೇ ವೇಳೆಗೆ ವೈದಿಕ ಮಂತ್ರಗಳನ್ನೂ ಸಂಸ್ಕೃತ ಕಾವ್ಯಗಳನ್ನೂ ಬರೆಯಲು ತುಳೂ ನಂಬಿಗಳು ಉಪಯೋಗಿಸುತ್ತಿದ್ದ (ಐವತ್ತು ಅಕ್ಷರಗಳುಳ್ಳ) ಗ್ರಂಥ ಲಿಪಿ ಅಥವಾ ಆರ್ಯ ಲಿಪಿಯು ಆಸ್ಥಾನಗಳಲ್ಲಿ ರಾಜರಿಂದ ಸ್ವೀಕೃತವಾಯಿತು. ಗ್ರಂಥಾಕ್ಷರವು ಆರ್ಯಲಿಪಿಯ ಒಂದು ಪರ್ಯಾಯ  ನಾಮವಾಗಿ ವ್ಯವಹರಿಸಲ್ಪಡುತ್ತಿತ್ತೆಂದು ಅಂಬಲತ್ತರ್ ಉಣ್ಣಿಕೃಷ್ಣ ನಾಯರ್ ಸರ್ವ ವಿಜ್ಞಾನಕೋಶ (ಸಂಪುಟ – ೩)ದಲ್ಲಿ ಉಲ್ಲೇಖಿಸಿದ್ದಾರೆ. ಎಲ್. ಎ. ರವಿವರ್ಮ ಅವರು ‘ಆರ್ಯ ದ್ರಾವಿಡ ಭಾಷೆಗಳುಡೆ ಪರಸ್ಪರ ಬಂಧಂ’ ಎಂಬ ಗ್ರಂಥದಲ್ಲಿ ಪು. ೩೦-೧೧ ಆರ್ಯಲಿಪಿ ಹಾಗೂ ತುಳು ಮಲೆಯಾಳ ಲಿಪಿಗಳ ಅಭೇದವನ್ನು ತಿಳಿಸಿ ಅವು ಹೇಗೆ ಕಾಲಾನುಗತವಾಗಿ ರೂಪಾಂತರವನ್ನು ಹೊಂದುತ್ತಾ ಬಂದುವು ಎಂಬುದನ್ನು ಶಿಲಾಶಾಸನಗಳ ಆಧಾರದಿಂದ ಪಟ್ಟಿಮಾಡಿ ತೋರಿಸಿದ್ದಾರೆ. ಈಗಿನ ಮಲೆಯಾಳ ಲಿಪಿಗೆ ಹಿಂದೆ ಆರ್ಯ ಎಳುತ್ತು ಎಂಬ ಹೆಸರಿತ್ತು ಎಂಬುದಾಗಿ ಶ್ರೀಕಂಠಪುರಂ ಜೆ. ಪದ್ಮನಾಭ ಪಿಳ್ಳೆಯವರು ತಮ್ಮ ‘ಶಬ್ದ ತಾರಾವಲಿ’ ಯಲ್ಲಿ ಉಲ್ಲೇಖಿಸಿದ್ದಾರೆ.

ಪಾಶ್ಚಾತ್ಯ ಸಂಶೋಧಕನಾದ ಬರ್ನೆಲನು ‘Elements of South Indian Palaeogrphy’  ಎಂಬ ಗ್ರಂಥದಲ್ಲಿ ತುಳು ಅಕ್ಷರ ಮಾಲೆಯ ಸಂಪೂರ್ಣ ಚಿತ್ರವನ್ನು ಸಂಗ್ರಹಿಸಿ ಪ್ರಕಟಿಸಿರುವನು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜರ್ಷಿ ಡಾ| ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರೂಪುಗೊಂಡಿರುವ  ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕಿದ ತುಳು ಲಿಪಿಯ ತಾಡವಾಲೆಗಳಿವೆ. ತುಳುನಾಡಿನಲ್ಲಿ ಪ್ರಚಾರದಲ್ಲಿದ್ದ ತುಳುಲಿಪಿಯ ವಿಶಾಲ ವ್ಯಾಪ್ತಿಗೆ ಇದಕ್ಕಿಂತ ಹೆಚ್ಚಿನ ದಾಖಲೆ ಬೇಕಾಗಿಲ್ಲ.

ಸುಮಾರು ಮೂರು ಸಂದರ್ಭಗಳಲ್ಲಿ ತುಳುನಾಡಿನಿಂದ ಶಿವಳ್ಳಿ ಬ್ರಾಹ್ಮಣರು ಅರ್ಚಕವೃತ್ತಿಗಾಗಿ ಕೇರಳಕ್ಕೆ ಹೋದ ಉದಾಹರಣೆಗಳಿವೆ. ಮೊತ್ತ ಮೊದಲಾಗಿ ತುಳುನಾಡಿನಿಂದ ಕೇರಳಕ್ಕೆ ಹೋದ ಬ್ರಾಹ್ಮಣ ಕುಟುಂಬಗಳನ್ನು ಕಾಲಾಂತರದಲ್ಲಿ ‘ಇಕ್ಕರದೇಶಿ’ಗಳೆಂದು ಕರೆಯಲಾಯಿತು. ತಿರುವನಂತಪುರದಲ್ಲಿ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನವು ಸ್ಥಾಪನೆಗೊಂಡ ಬಳಿಕ ಅಲ್ಲಿ ಪೂಜಾವೃತ್ತಿಗಾಗಿ, ಆ ದೇವಾಲಯವನ್ನು ಸ್ಥಾಪನೆಗೊಂಡ ಬಳಿಕ ಅಲ್ಲಿ ಪೂಜಾವೃತ್ತಿಗಾಗಿ, ಆ ದೇವಾಲಯವನ್ನು ಸ್ಥಾಪಿಸಿದ ದಿವಾಕರ ಮುನಿಯ ವಂಶಸ್ಥರೆಂಬ ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬ ಪ್ರದೇಶದಿಂದ ಬ್ರಾಹ್ಮಣ ಕುಟುಂಬಗಳನ್ನು ತಿರುವನಂತಪುರಕ್ಕೆ ಕರೆಸಲಾಯಿತು. ಅವರು ಪಯಸ್ವಿನಿಯ ಆಚೆಗಿಂದ ಅಥವಾ ನೇತ್ರಾವತೀ ನದಿಯ ಆಚೆಗಿಂದ ಬಂದವರು ಎಂಬ ಅರ್ಥದಲ್ಲಿ ಅವರನ್ನು ಅಕ್ಕರದೇಶಿಗಳು ಎಂದು ಕರೆಯಲಾಯಿತು. ತಿರುವನಂತಪುರ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಅಕ್ಕರ ದೇಶಿ ಮತ್ತು ಇಕ್ಕರ ದೇಶಿಗಳಿಗೆ ಸಮಾನ ಪೂಜಾಧಿಕಾರವನ್ನು ಕೊಡಲಾಗಿದೆ. ದೇವಸ್ಥಾನದಲ್ಲಿ ಇಷ್ಟು ಸಮಯ ಅಕ್ಕರದೇಶಿಗಳು – ಇಷ್ಟು ಸಮಯ ಇಕ್ಕರ ದೇಶಿಗಳು ಪೂಜೆ ಮಾಡಬೇಕು ಎಂಬ ನಿಯಮವಿದೆ.

ಕ್ರಿ.ಶ ಸುಮಾರು ೧೩ನೇ ಶತಮನದ ಬಳಿಕ ತುಳುನಾಡಿನಲ್ಲೂ ಕೇರಳದಲ್ಲೂ ವೈಷ್ಣವ ಮತವು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂತು. ಈ ಸಂದರ್ಭದಲ್ಲಿ ಕರಾವಳಿ ಕನ್ನಡ ಜಿಲ್ಲೆಯ ಇಡುಗುಂಜಿ, ಬಳ್ಕೂರು, ಗುಣವಂತೆ ಮತ್ತು ಶಿವಳ್ಳಿ ಎಂಬೀ ನಾಲ್ಕು ಗ್ರಾಮಗಳಿಂದ ಮತ್ತೆ ಬ್ರಾಹ್ಮಣ ಕುಟುಂಬಗಳನ್ನು ಕೇರಳಕ್ಕೆ ಕರೆಸಲಾಯಿತು ಎಂದು ಚರಿತ್ರೆಗಳಿಂದ ತಿಳಿದುಬರುತ್ತದೆ.

ಇಡುಗುಂಜಿ ವಳಕ್ಕೂರು
ಗುಣವತ್ಯಾಖ್ಯ ಗ್ರಾಮೀಣಃ
ಶಿವಳ್ಳೀ ಗ್ರಾಮೀಣ ಶ್ಚೈವ
ಕೇರಳೇ ಪೂಜಕಾಃ ಹರೆಃ
(ಉದಯವರ್ಮ ಚರಿತಂ)

ಇವರಲ್ಲಿ ಮೊದಲ ಮೂರು ಬ್ರಾಹ್ಮಣ ಸಮುದಾಯಗಳ ಮೂಲಕ ತಮಿಳು ಗ್ರಂಥ ಲಿಪಿ ಅಥವಾ ಆರ್ಯಲಿಪಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ತಿಗಳಾರಿ ಲಿಪಿ ಎಂಬ ಹೆಸರಿನಿಂದ ಪ್ರಚಾರಕ್ಕೆ ಬಂತು.

ತಿಗಳರು ಎಂದರೆ ತಮಿಳರು. ತಿಗಳರ ಲಿಪಿಯಲ್ಲಿ ಆರ್ಯ ಭಾಷೆಯಾದ  ಸಂಸ್ಕೃತವನ್ನು ಅಥವಾ ಮಂತ್ರಗಳನ್ನು ಬರೆಯಲು ಉಪಕ್ರಮಿಸಿದಾಗ ತಿಗಳ + ಆರ್ಯ>ತಿಗಳಾರ್ಯ <ತಿಗಳಾರಿ ಲಿಪಿ – ಎಂಬ ಹೆಸರು ಬಂದಿರಬೇಕು ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಮಧ್ಯಾಚಾರ್ಯರ ಕಾಲಕ್ಕಾಗುವಾಗ ತುಳು ಲಿಪಿಯು ತುಳುನಾಡಿನಲ್ಲಿ ಸಾಕಷ್ಟು ಪ್ರಚಾರವನ್ನು ಪಡೆಯಿತು. ಮಧ್ವಾಚಾರ್ಯಕೃತವಾದ ಗ್ರಂಥಗಳೆಲ್ಲವೂ ತುಳು ಲಿಪಿಯಲ್ಲಿ ಬರೆಯಲ್ಪಟ್ಟವು. ಸ್ವತಃ ಮಧ್ವಾಚಾರ್ಯರೇ ತುಳು ಲಿಪಿಯಲ್ಲಿ ಸಹಿ ಮಾಡುತ್ತಿದ್ದರು. ಅಂತೂ ಸುಮಾರು ೧೧-೧೨ನೇ ಶತಮಾನದ ಅನಂತರದ ಕಾಲಘಟ್ಟವನ್ನು ತುಳು ಲಿಪಿಯ ವಿಕಾಸದ ಕಾಲವೆನ್ನಬಹುದು. ಈ ಲಿಪಿಯ ಹೆಚ್ಚಿನ ಅಕ್ಷರಗಳು ಪ್ರದಕ್ಷಿಣಾಕಾರವಾಗಿ ಬರೆಯಲ್ಪಡುವುದರಿಂದ, ಇದರ ಬಗ್ಗೆ ನಮ್ಮ ಜನರಿಗೆ ಒಂದು ಪೂಜ್ಯ ಭಾವನೆಯೂ ಇತ್ತು. ಮಂತ್ರಗಳನ್ನು ತುಳು ಲಿಪಿಯಲ್ಲಿಯೇ ಬರೆಯಬೆಕು ಎಂಬ ದೃಢ ಸಂಕಲ್ಪವೂ ಇತ್ತು.

ತುಳುವಿನಲ್ಲಿ ರಳಾಕ್ಷರ

ಕನ್ನಡದಲ್ಲಿ ಸುಮರು ೧೧ನೆಯ ಶತಮಾನದವರೆಗೆ ರಳಾಕ್ಷರದ ಬಳಕೆಯಿತ್ತು. ತಮಿಳು ಮಲೆಯಾಳಗಳಲ್ಲಿ ಈಗಲೂ ಇದೆ. ತುಳುವಿನಲ್ಲೂ ಅದು ಇತ್ತೆಂಬುದು ತುಳು ಕಾವ್ಯದ ತಾಡವಾಲೆಗಳಿಂದ ತಿಳಿದುಬರುತ್ತದೆ ಕನ್ನಡದಲ್ಲಿ ೧೧ನೇಯ ಶತಮಾನದವರೆಗೆ ಮಾತ್ರ ಇದ್ದ ರಳಾಕ್ಷರವು ತುಳುವಿನಲ್ಲಿ ೧೭ನೆಯ ಶತಮಾನದವರೆಗೂ ಉಳಿದುಬಂದಿದೆ. ತುಳು ಕಾವ್ಯಗಳಲ್ಲಿ ಪ್ರಯುಕ್ತವಾದ ರಳಾಕ್ಷರವನ್ನೊಳಗೊಂಡ ಕೆಲವು ಪದಗಳು ಹೀಗಿವೆ.

ಏೞಿ-ಏಳು, ಓೞಲ -ಎಲ್ಲಿಯಾದರೂ, ಜಾನೊೞಿ – ಏನು ಉಳಿಯಿತು, ತಾವುೞಿ- ಜಿಗಣೆ, ತಿಂಗೞಿ – ತಿಂಗಳು, ಘೞಿಯೆ – ಗಳಿಗೆ, ಎಬುೞೊ – ಉಜ್ಜು, ಮೈದಡವು ಇತ್ಯಾದಿ.

ಕನ್ನಡದಲ್ಲಿ ಭಾಗವತ ಮಹಾಭಾರತಗಳ ರಚನೆಯ ಕಾಲಕ್ಕೆ ರಳಾಕ್ಷರದ ಬಳಕೆ ಬಿದ್ದು ಹೋದರೂ, ತುಳುವಿನಲ್ಲಿ ಅದು ಪ್ರಚಾರದಲ್ಲಿ ಇದ್ದುದರಿಂದ ತುಳು ಕವಿಗಳಿಗೆ ಅದನ್ನು ಬಳಸದೆ ನಿರ್ವಾಹವಿಲ್ಲದಾಯಿತು. ಅದಕ್ಕೋಸ್ಕರ ಪ್ರತ್ಯೇಕವಾದ ಒಂದು ಅಕ್ಷರ ಸಂಕೇತವನ್ನು ಅವರು ಕಂಡುಕೊಂಡರು. ಈ ಅಕ್ಷರ ಸಂಕೇತವು ಕನ್ನಡ, ತಮಿಳು, ಮಲೆಯಾಳಗಳ ರಳಸಂಕೇತಕ್ಕಿಂತ ಭೀನ್ನವಾಗಿರುವುದು ಇಲ್ಲಿನ ವಿಶೇಷತೆ.

ಕಾಸರಗೋಡು ತಾಲೂಕಿನ ಅನಂತಪುರ ಎಂಬಲ್ಲಿರುವ ತುಳು ಲಿಪಿಯ ಶಾಸನದಲ್ಲಿ ರಳಾಕ್ಷರದ ಬಳಕೆಯಿರುವುದನ್ನು ಕೊ.ವ್ಯಾ. ರಮೇಶರು ಪತ್ತೆ ಹಚ್ಚಿದ್ದಾರೆ. ಅದು ಮಲೆಯಾಳದ ರಳವನ್ನು ಹೋಲುತ್ತದೆ. ತುಳು ಲಿಪಿಯು ಅನೇಕಾಂಶಗಳಲ್ಲಿ ಮಲೆಯಾಳವನ್ನೇ ಹೋಲುವುದರಿಂದ ಅಥವಾ ಮಲೆಯಾಳದ ಸಗೋತ್ರ ಲಿಪಿಯಾದುದರಿಂದ ತುಳು ಕವಿಗಳು, ‘ರಳ’ವನ್ನು ರೂಢಿಯ ಮಲೆಯಾಳದಿಂದಲೇ ಎರವಲು ಪಡೆಯಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಹಾಗಾದರೆ ಈ ಹೊಸ ಅಕ್ಷರ ಸಂಕೇತವನ್ನು ಅವರು ಎಲ್ಲಿಂದ ತಂದರು? ತಾವೇ ಹೊಸತಾಗಿ ಕಂಡುಕೊಂಡರೆ? ಅಥವಾ ಅವರಿಗಿಂತಲೂ ಹಿಂದೆ ತುಳುವಿನಲ್ಲಿ ಈ ಅಕ್ಷರದ ಬಳಕೆಯಿತ್ತೇ? ಅಕ್ಷರದ ಬಳಕೆ ಇರಬೇಕಾದರೆ  ಸಾಹಿತ್ಯವೂ ಇದ್ದಿರಬೇಕಷ್ಟೇ? ಅಂತೂ ಈ ವಿಚಾರವಾಗಿ ನಾವು ಇನ್ನಷ್ಟು ಪರಿಶೋಧಿಸಬೇಕಾದದ್ದಿದೆ.

ರಳಾಕ್ಷರ

03_42_TSC-KUH

ಹೀಗೆ ತಮಿಳಿನ ಗ್ರಂಥಲಿಪಿಯು ಆರ್ಯಲಿಪಿಯಾಗಿ ತುಳು ಮಾಲೆಯಾಳಂ ಲಿಪಿಯಾಗಿ ತುಳು ಲಿಪಿಯಾಗಿ, ತಿಗಳಾರ ಲಿಪಿಯಾಗಿ, ಆಯಾ ಕಾಲಕ್ಕೆ ರೂಪಾಂತರಗಳನ್ನು ಹೊಂದುತ್ತಾ ಬಂದು ಈಗಿನ ತುಳು ಲಿಪಿಯ ಸ್ವರೂಪವನ್ನು ಪಡೆದಿದೆ.

04_42_TSC-KUH