ಮಾನವ ಸಮುದಾಯಕ್ಕೆ ಭಾಷೆ ಒಂದು ವ್ಯಾವಹಾರಿಕ ಸಾಧನ ಮಾತ್ರವಲ್ಲ, ಒಂದು ಮಾಧ್ಯಮವೂ ಹೌದು. ಪ್ರತಿಯೊಂದು ಜನಾಂಗಕ್ಕೆ ತಮ್ಮದೇ ಆದ ಭಾಷೆ, ಆಡು ಭಾಷೆಯಾದರೂ ಸರಿ ಒಂದಿದ್ದರೆ, ‘ನಮ್ಮ ಭಾಷೆ’ ಎನ್ನುವ ಪ್ರೀತಿ ಬೆಳೆಯುತ್ತದೆ. ಈ ರೀತಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ತುಳು, ಕೊಂಕಣಿ, ಬ್ಯಾರಿ ಮತ್ತು ‘ಮೋಯ’ ಭಾಷೆಗಳು ಬೆಳೆದು ನಿಂತಿವೆ. ವಿಶೇಷವೆಂದರೆ ತುಳುವರು, ಕೊಂಕಣಿಗಳು, ಬ್ಯಾರಿಗಳು ಹಾಗೂ ಮೋಯರು ಎಂಬ ಭಾಷಾ ಪ್ರಧಾನ ನಾಮಗಳಿಂದಲೇ ಈ ಜನರು ಗುರುತಿಸಿಕೊಂಡಿರುವುದು ಒಂದು ಗಮನಾರ್ಹ ವಿಚಾರ. ಉಡುಪಿ, ದ.ಕ. ಸೇರಿದ ಅವಿಭಜಿತ ದ.ಕ. ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆ ಒಟ್ಟಾಗಿ ಬ್ರಿಟಿಷರ ಕಾಲದ ದ.ಕ. ಪ್ರಾಂತ್ಯವು ಈ ನಾಲ್ಕು ಆಡು ಭಾಷೆಗಳ ಹೃದಯ ಕೇಂದ್ರವಾಗಿದೆಯೆಂದರೆ ಅತಿಶಯವಾಗದು.

ಭಾಷೆಗೂ, ಅದನ್ನಾಡುವ ಜನರ ಸಂಸ್ಕೃತಿಗೂ ಒಂದು ಸಂಬಂಧವಿರುತ್ತದೆ. ಭಾಷೆಯನ್ನು ಸ್ಥೂಲವಾಗಿ ಪರಿಶೀಲಿಸಿದಾಗ, ಆ ಜನರ ಪರಂಪರೆ, ಸಂಸ್ಕೃತಿ, ಇತಿಹಾಸವೇ ಬೆಳಕಿಗೆ ಬರುತ್ತದೆ. ಅವರ ನಂಬಿಕೆ, ಆಚಾರ, ವಿಚಾರಗಳು ಮತ್ತು ವ್ಯವಹಾರಗಳು ಭಾಷೆಯ ಮೂಲಕ ಬಿಂಬಿಸಲ್ಪಡುತ್ತವೆ. ತುಳುನಾಡೆಂದೇ ಸುಪ್ರಸಿದ್ಧವಾಗಿದ್ದ ಕರಾವಳಿ ಜಿಲ್ಲೆಗಳಲ್ಲಿ, ಪ್ರಾಯಶಃ ತುಳುವಿನ ಉಪಭಾಷೆಯಾಗಿಯೂ, ಒಂದು ವಿಭಿನ್ನ ಜನಾಂಗದ ಭಾಷೆಯಾಗಿಯೂ ಬೆಳೆದು ಬಂದ ಭಾಷೆಯೇ ಬ್ಯಾರಿ ಭಾಷೆಯು. ಸಾಮಾನ್ಯ ಎಲ್ಲಾ ಭಾಷೆಗಳಲ್ಲೂ ಆಡುನುಡಿಯಲ್ಲಿ ವೈವಿಧ್ಯಗಳಿರುತ್ತವೆ. ಪ್ರಾದೇಶಿಕವಾಗಿಯೂ, ಜನಾಂಗೀಯವಾಗಿಯೂ, ಇತಿಹಾಸದಲ್ಲಿ ಕಾಲೋಚಿತ ಬದಲಾವಣೆಯಾಗಿ ಆಡುವ ಭಾಷೆ ಬದಲಾವಣೆಗೊಳ್ಳುತ್ತದೆ. ಮೂಲತಃ ಒಂದು ಪಂಗಡ ಅಥವಾ ಜನಾಂಗದ ಭಾಷೆಯಾಗಿ, ಕಾಲಾಂತರಗಳಿಂದ ಕಾಲೋಚಿತ ಬದಲಾವಣೆಗೊಳಗಾಗಿ ಸಾಹಿತ್ಯ ಬೆಳೆಯದಿದ್ದರೂ, ಜೀವಂತವಾಗಿ ಇಂದಿಗೂ ದ.ಕ. ಜಿಲ್ಲೆಯ ಬ್ಯಾರಿ ಸಮುದಾಯದಲ್ಲಿ ಉಳಿದಿರುವ ಮಾತಾಡುವ ಭಾಷೆ ‘ಬ್ಯಾರಿ ಭಾಷೆ’. ಈ ಬ್ಯಾರಿ ಭಾಷೆಯನ್ನು ಇಂತಹ ಒಂದು ಉಪಭಾಷೆ ಎಂದು ತಿಳಿಯಲಾಗುತ್ತದೆ. ಅದಕ್ಕೆ ಮೂಲ ಭಾಷೆಯೊಂದಿರಬೇಕಾಗುತ್ತದೆ. ಆ ತಾಯಿ ಭಾಷೆ ಕೂಡಾ, ಬಹುಮಟ್ಟಿಗೆ ಪ್ರಭಾವವಿರಬಹುದಾದ ‘ಉಪಭಾಷೆ’ ಆಗಿರಬಹುದು. ಬ್ಯಾರಿಭಾಷೆಯ ತಾಯಿ ‘ಭಾಷೆ’ ತುಳು ಎಂದೇ ಖಚಿತವಾಗಿ ಹೇಳಬಹುದು. ಸುಶೀಲಾ ಉಪಾಧ್ಯಾಯರವರು ‘ಬ್ಯಾರಿ ಭಾಷೆ’ಯ ಜನಾಂಗೀಯ ಪ್ರಾಧಾನ್ಯತೆಯನ್ನು ಗುರುತಿಸಲಾರದೆ ಹೋದರೂ, ಮಾಪ್ಲಾಭಾಷೆ ಎಂದು ಹೆಸರಿಸಿದ್ದರೂ, ಈ ಭಾಷೆ ಮೂಲ ತಾಯಿ ಭಾಷೆ ತುಳು ಎಂಬುದನ್ನು ಸಾಧಾರವಾಗಿ ಸಮರ್ಥಿಸಿದ್ದಾರೆ. ಬ್ಯಾರ ಭಾಷೆ ಎಂಬ ಈ ಉಪಭಾಷೆಗೆ ಸಾಹಿತ್ಯಿಕ ಪ್ರಧಾನ್ಯ ಇಲ್ಲ. ಸಾಹಿತ್ಯ ಬೆಳೆಯಲಿಲ್ಲ. ಆದರೆ ವ್ಯವಹಾರ ಕಲೆ, ಪ್ರಾದೇಶಿಕತೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ತುಳು ಪಾಡ್ದನಗಳಿಂದ ಹಿಡಿದು, ಯಕ್ಷಗಾನಗಳ ವರೆಗಿನ ತುಳು ಸಾಂಸ್ಕೃತಿಕ ಪ್ರಭೇದಗಳಲ್ಲಿ ಬ್ಯಾರಿಗಳು ಮತ್ತು ಬ್ಯಾರಿ ಸಂಸ್ಕೃತಿಯ ಕುರಿತು ಧಾರಾಳ ಉಲ್ಲೇಖಗಳಿವೆ. ಸಮೀಪದ ನೆರೆರಾಜ್ಯವಾದ ಕೇರಳದ ಮಲೆಯಾಳ ಭಾಷೆಗೆ ಸಮೀಪ ಹೋಲಿಕೆ ಇದ್ದರೂ, ಈ ಭಾಷೆಯಲ್ಲಿ ಸಂಸ್ಕೃತ ಪದಗಳ ಬಳಕೆ ತೀರಾ ಕಡಿಮೆಯಾಗಿರುವುದಾದರೂ, ಅರಬಿ ಪದಗಳ ಜತೆಗೆ ಧಾರಾಳ ತುಳು ಪದಗಳು ಬಳಕೆಯಾಗಿರುವುದೂ, ಮಲೆಯಾಳ ಭಾಷೆಯ ವ್ಯಾಕರಣ ವಿಧಾನಗಳಾವುದೂ ಇದರಲ್ಲಿಲ್ಲದಿರುವುದೂ, ಉಚ್ಚಾರದಲ್ಲಿ ಕೂಡಾ ವ್ಯತ್ಯಸ್ತವಾಗಿರುವುದೂ, ಇದು ಮಲೆಯಾಳದ ‘ಉಪಭಾಷೆ’ಯಲ್ಲ, ತುಳುವಿನ ಉಪಭಾಷೆ ಎಂದೇ ಸಮರ್ಥಿಸಲು ಸಹಕಾರಿಯಾಗುವ ಆಧಾರಗಳಾಗಿವೆ.

ಕಾಸರಗೋಡಿನಿಂದ ಮಂಗಳೂರಿನ ಉತ್ತರಕ್ಕಿರುವ ಮೂಲ್ಕಿಯವರೆಗಿನ ಕರಾವಳಿಯಲ್ಲಿ ತುಳು ಭಾಷೆಯು ಪ್ರಭಾವಶಾಲಿಯಾಗಿದೆ. ಇದರ ಜತೆಯಾಗಿಯೇ ಬ್ಯಾರಿ, ಮೋಯ, ಕೊಂಕಣಿ ಭಾಷೆಗಳೂ ಇವೆ. ಇದರಲ್ಲಿ ಬ್ಯಾರಿಗಳು ಆಡುವ ಭಾಷೆಗೆ ಅತಿ ಸಮೀಪವಾಗಿರುವ ಭಾಷೆ ಮೋಯ ಭಾಷೆ. ಮೋಯ ಭಾಷೆ ಮಲೆಯಾಳದ ಉಪಭಾಷೆಯೆಂದೇ ಹೇಳಲಾಗುತ್ತದೆ. ತೀಯರು, ಬಲ್ಯಾಯರು, ಮೋಯರು ಮುಂತಾದ ಜನವರ್ಗಗಳೂ ಮಲೆಯಾಳದ ಉಪಭಾಷೆಗಳನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಇವರ ಆಡುನುಡಿಗಳು ಮಲೆಯಾಳಕ್ಕೆ ಸಮೀಪವಾಗಿದ್ದು, ತುಳು ಭಾಷೆಗೆ ದೂರವಾಗಿರುತ್ತದೆ. ಉಚ್ಚಾರಗಳಲ್ಲಿ ಕೂಡಾ ಭಿನ್ನತೆ ಎದ್ದು ಕಾಣುತ್ತದೆ.

ಬ್ಯಾರಿ ಭಾಷೆಯನ್ನಾಡುವ ‘ಬ್ಯಾರಿ ಜನಾಂಗ’ ಈಗ ಮಲೆಯಾಳಿಗಳಂತೆ, ವಿಸ್ತಾರವಾಗಿ ಹಬ್ಬಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲೂ ಸಾಕಷ್ಟು ಜನ ಬ್ಯಾರಿಗಳಿದ್ದಾರೆ. ಆದರೆ, ಅವರ ಮೂಲ ಕೇಂದ್ರ ಸ್ಥಾನ ತುಳುನಾಡು, ಅರ್ಥಾತ್‌ ದ.ಕ. ಜಿಲ್ಲೆ. ಇವರು ವ್ಯಾಪಾರವನ್ನೇ ಪ್ರಧಾನವಾಗಿರಿಸಿಕೊಂಡಿರುವುದರಿಂದ, ತುಳು ಭಾಷೆಯ ‘ಬ್ಯಾರಿ’ಗಳಾಗಿದ್ದಾರೆ. ವ್ಯಾಪಾರಕ್ಕಾಗಿ ಯಾವ ಮೂಲೆಗೆ ಬೇಕಾದರೂ ಸಂಚರಿಸಬಲ್ಲ, ನಲೆಯೂರಬಲ್ಲ ಸ್ವಭಾವವನ್ನು ಬ್ಯಾರಿ ಸಮುದಾಯ ಹೊಂದಿದೆ.

ಶ್ರೀಮತಿ ಸುಶೀಲಾ ಉಪಾಧ್ಯಾಯರು, ‘ಮಾಪಿಲ್ಲ ಮಲೆಯಾಳಂ’ ಎಂಬ ಹೆಸರಿನಲ್ಲಿ ಬ್ಯಾರಿ ಭಾಷೆಯ ಕುರಿತು ಅಧ್ಯಯನ ನಡೆಸಿದ್ದಾರೆ. ಅವರು ಮುಖ್ಯವಾಗಿ ಕೆಲವು ವಿಚಾರಗಳನ್ನು ಹೊರಗೆಡಹಿದ್ದಾರೆ.

೧. ಈ ಭಾಷೆಯು ತುಳುನಾಡಿನ ಬ್ಯಾರಿಗಳಿಂದ ಮಾತ್ರ ಆಡಲ್ಪಡುತ್ತದೆ. ತೋರಿಕೆಗೆ ಇದು ಮಲೆಯಾಳದ ಉಪಭಾಷೆಯಂತಿದೆ. ಆದರೆ, ಧಾರಾಳ ಅರಬಿ – ಪರ್ಸಿಯನ್‌ಪದಗಳ ಬಳಕೆಯಾಗಿವೆ. ಅಲ್ಲದೆ, ಕೇರಳದ ಮಲೆಯಾಳಿ ಭಾಷೆಗಿಂತ ಭಿನ್ನವಾಗಿದೆ.

೨. ಈ ಭಾಷೆಯಲ್ಲೂ ಬಹಳಷ್ಟು ತುಳು ಪದಗಳು ಬಳಕೆಯಾಗಿವೆ. ತುಳು ಭಾಷೆಯ ಪ್ರಭಾವ ಎದ್ದು ಕಾಣುತ್ತದೆ. ಇದರಲ್ಲಿ ತುಳು ಭಾಷೆಯ ಉಚ್ಚಾರ, ವ್ಯಾಕರಣ ಮತ್ತು ಪದಗಳ ಬಳಕೆಯಾಗಿವೆ. ಇದನ್ನು ಮಾಪಿಳ್ಳೆ ಭಾಷೆಯ ಉಪಭಾಷೆಯನ್ನುವುದಕ್ಕಿಂತ ತುಳು ಭಾಷೆಯ ಉಪಭಾಷೆ ಎನ್ನಬಹುದಾಗಿದೆ.

ಬ್ಯಾರಿ ಭಾಷೆಯ ಕೆಲವು ಲಕ್ಷಣಗಳು

೧. ತುಳು ಪದಗಳ ಉಚ್ಚಾರಕ್ಕೂ, ಬ್ಯಾರಿ ಭಾಷೆಗೂ ಸಮೀಪ ಸಂಬಂಧವಿದೆ. (Phonologiczl Relation) ಮಲೆಯಾಳದಲ್ಲಿರುವ ಹಲವಾರು ಮುಖ್ಯ ಉಚ್ಚಾರಗಳೇ ಈ ಭಾಷೆಯಲ್ಲಿಲ್ಲ. ರ, ಟ, ಣ ಉಚ್ಚಾರಗಳು ಬಹಳಷ್ಟು ಭಿನ್ನವಾಗಿದೆ. ‘ಏ’ ಉಚ್ಚಾರವೂ ‘ಬ’ ಆಗಿಯೂ, ‘ಆ’ ‘ಇ’ ಆಗಿಯೂ ಬದಲಾವಣೆಗೊಂಡಿದೆ. ಅಲ್ಲದೆ, ಅನುನಾಸಿಕ ಮಾದರಿಯು ಈ ಭಾಷೆಯಲ್ಲಿಲ್ಲ.

೨. ಅರಬಿ ಉಚ್ಚಾರಗಳ ಪ್ರಭಾವವು ಕಾಣಿಸಿಕೊಳ್ಳುವಷ್ಟಿದೆ. ‘ಫ’, ‘ಜ’ ಉಚ್ಚಾರ ಬಳಕೆಗಳಿವೆ.

೩. ವ್ಯಾಕರಣದಲ್ಲಿ ಗಮನಾರ್ಹ ವ್ಯತ್ಯಾಸವಿದೆ. ಮಲೆಯಾಳದ ವ್ಯಾಕರಣ ವಿಧಾನ ಇದರಲ್ಲಿಲ್ಲ. ಸಂಸ್ಕೃತ ಪದಗಳ ಬಳಕೆ ತೀರಾ ಕಡಿಮೆ. ಮಲೆಯಾಳದಲ್ಲಿ ೬೦%ಕ್ಕಿಂತ ಹೆಚ್ಚು ಸಂಸ್ಕೃತ ಪದಗಳಿವೆ. ಪುರುಷ, ಲಿಂಗ, ವಚನಗಳಲ್ಲಿ ಸ್ಪಷ್ಟವಾದ ವ್ಯತ್ಯಾಸಗಳನ್ನು ಗುರುತಿಸಬಹುದು. ಬ್ಯಾರಿಯಲ್ಲಿ ಮಲೆಯಾಳಕ್ಕಿಂತ ಭಿನ್ನ ರೂಪಗಳೇ ಹೆಚ್ಚು.

೪. ಇದರಲ್ಲಿ ಸೇರ್ಪಡೆಗೊಳ್ಳುವ ವ್ಯತ್ಯಯಾಕ್ಷರಗಳು ಮತ್ತು ಪದಗಳು, ತುಳುವಿನಂತಿದೆ ಹೊರತು ಮಲೆಯಾಳದಂತಿಲ್ಲ. ಉದಾ: ಬಾಲ, (ಬಲ – ತು) ಬಾ. ಪೋಲ (ಪೋಲ-ತು) ಹೋಗು.

೫. ಮಲೆಯಾಳದಲ್ಲಿ ಪೂರ, ಪೋಡ ಇತ್ಯಾದಿ ಬಳಕೆಯಲ್ಲಿದೆ. ಋಣಾತ್ಮಕ ಸೂಚ್ಯ ಪದಗಳ ಬಳಕೆ ಮಲೆಯಾಳದಲ್ಲಿ ಕಮ್ಮಿ (Negative Gerundeal suffixes) ಉದಾ: ಪೋವಾಂತೆ (ಹೋಗುತ್ತಿದ್ದ – ಆದರೆ ಹೋಗಿಲ್ಲ), ಬರಾಂತೆ (ಬರುತ್ತಿದ್ದೆ – ಆದರೆ ಬಂದಿಲ್ಲ). ಬ್ಯಾರಿ ಭಾಷೆಯಲ್ಲಿ ಬಳಕೆಯಲ್ಲಿರುವ ಅನೇಕ ಶಬ್ದಗಳು ಮಲೆಯಾಳದಲ್ಲಿಲ್ಲ. ಇದ್ದರೂ ಅದರ ಅರ್ಥವೇ ಬೇರೆ ಇರುತ್ತದೆ. ಉದಾ : ಚೆಮ್ಮೆ (ಹೆಚ್ಚು) ಪೆಂಞಾಯಿ (ಹೆಂಡತಿ) ಚೇಗಲೆ (ಹುಂಜ) ದೆಯ್‌(ಕುಳಿತುಕೋ) ಅಘ (ಮನೆ) ಅದಿಸ್ಸ (ಆಶ್ಚರ್ಯ) ಲಾಯಿಕರೆ (ಹಾರುವುದು), ಪತ್ತ್‌(ಏರು) ಇತ್ಯಾದಿ.

೬. ವ್ಯಾಕರಣವು ಹೊಸ ರೀತಿಯಲ್ಲಿ ಸಂಯೋಜಿಸಲ್ಪಟ್ಟಿದೆ. ಕ್ರಿಯಾ ಪದವು ವೈವಿಧ್ಯಪೂರ್ಣವಾಗಿ ಬಳಸಲ್ಪಡುತ್ತದೆ. ಉದಾ: ಚೊಲ್ಲು (ಹೇಳು)

೦೧. ಚೊಲ್ಲುರೆ (ಡೆ ಬಹು) ಹೇಳುತ್ತೇನೆ.
೦೨. ಚೊನ್ನೆ ಹೇಳಿದೆ
೦೩. ಚೊಲ್ಲುವೆ ಹೇಳುವೆ
೦೪. ಚೊಲ್ಲಾತೆ ಹೇಳಬಹುದಿತ್ತು
೦೫. ಚೊಲ್ಲು ಹೇಳು
೦೬. ಚೊಲ್ಲಾನ್‌ ಹೇಳಬೇಕು
೦೭. ಚೊಲ್ಲಂಡ ಹೇಳಬೇಡ
೦೮. ಚೊನ್ನಂಗಿ ಹೇಳಿದರೆ
೦೯. ಚೊಲ್ಲೊ ಹೇಳಲು
೧೦. ಚೊಲ್ಲಾಂತೆ ಹೇಳುತ್ತಿದ್ದೆ
೧೧. ಚೊಲ್ಲುಡಾರೆ? (ಬಹು) ಹೇಳುತ್ತೀರಾ?
೧೨. ಚೊನ್ನಾರಾ? (ಬಹು) ಹೇಳಿದ್ದೀರಾ?
೧೩. ಚೊಲ್ಲುವಾರ್‌ (ಬಹು) ಹೇಳುವರು
೧೪. ಚೊಲ್ಲುರು (ಬಹು) ಹೇಳಿ
೧೫. ಚೊಲ್ಲುಣು (ಬಹು) ಹೇಳಬೇಕು.

. ಕೆಲವು ಸರಳ ಉಪಯೋಗಗಳನ್ನು ಗಮನಿಸಬಹುದು.

ಬ್ಯಾರಿ ತುಳು ಬ್ಯಾರಿ ತುಳು
ಬೇಣು ಬೋಡು (ಬೇಕು) ಬೇಂಡ ಬೊಡ್ಚಿ
ತೀರು ತೀರು (ಸಾಧ್ಯ) ತೀರ ತೀರ (ಅಸಾಧ್ಯ)
ಒಕ್ಕು ಅಂದ್‌(ಹೌದು) ಅಲ್ಲೇ? ಅತ್ತಾ (ಅಲ್ಲವಾ?)
ಉಳ್ಳೆ ಉಳ್ಳೆ (ಇದ್ದೇನೆ) ಉಳ್ಳಾರಾ ಉಳ್ಳೇರಾ? (ಇದ್ದಾರಾ?)
ಉಳ್ಳಾಳಾ? ಉಳ್ಳಾಲಾ (ಇದ್ದಾಳಾ) ಉಂಡಾ? ಉಂಡಾ? (ಇದೆಯಾ?)

೮. ತುಳು ಪ್ರಯೋಗಗಳನ್ನು ನೋಡಿ. (ಬ್ಯಾರಿ ಭಾಷೆಯಲ್ಲಿ) ಏಣ್‌(ತು) ನಂಕ್‌ತು (ನಂಕ್‌) (ತಮಗೆ) ಪೊಸಬೆ (ತು) ಪೊಸಬ ಪರಬೆ (ತು), ಪರಬ (ಬೈ) ಪೊಸಬಳು (ಹೊಸಬಳು)

೯. ಕೆಲವು ವಾಕ್ಯಗಳಿವು

೧. ಈ ಔತುರೆ ಬಾಕಿಲ್ ಚೆರಿಯೆ
ಈ ಇಲ್ಲ್‌ದ ಬಾಕಿಲ್‌ ಎಲ್ಯ
ಈ ಮನೆಯ ಬಾಗಿಲು ಚಿಕ್ಕದು

೨. ನಿಙ ಅಬ್ಬಡೆ ಮುಟ್ಟ ಚೊಲ್ಲುರು
ಈರ್‌ ಅಪ್ಪೆಡ ಮುಟ್ಟ ಪನ್ನಲೆ
ನಿಮ್ಮ ಅಪ್ಪನ ಬಳಿ ಹೇಳಿ

೩. ಅಂಗೈ ಪುಣ್ಣುಕ್‌ ಕನ್ನಡಿ ಬೇಂಡ (ಗಾದೆ)
ಅಂಗೈ ಪುಣ್ಣುಗ್‌ ಕನ್ನಡಿ ಬೊಡ್ಚಿ
ಅಂಗೈ ಹುಣ್ಣಿಗೆ ಕನ್ನಡಿ ಬೇಡ

೪. ಮೀಸೆ ಬರುಂಬಕ್‌ ದೇಶ ಕಾಣಲೆ. ಮೊಲೆ ಬರುಂಬಕ್‌ ನೆಲ ಕಾಣಲೆ (ಗಾದೆ)
ಮೀಸೆ ಬನ್ನಗ ದೇಶ ತೋಜುಜಿ. ಮಿರೆ ಬನ್ನಗ ನೆಲ ತೋಜುಜಿ
ಮೀಸೆ ಬರುವಾಗ ದೇಶ ಕಾಣದು. ಮೊಲೆ ಬರುವಾಗ ನೆಲ ಕಾಣದು.

೧೦. ತುಳುವಿನಲ್ಲಿರುವಂತೆಯೇ ಅನೇಕ ಅನ್ಯ ಭಾಷಾ ಪದಗಳು ಬ್ಯಾರಿ ಭಾಷೆಯಲ್ಲಿವೆ. ಉದಾ:

ಅಂದಾಜ್‌- ಅಂದಾಜು ಅಲಾಕ್‌- ನಾಶ
ಅಕಲ್‌- ಬುದ್ಧಿ ಇಲಾಳ್‌- ಅರ್ಧಚಂದ್ರ
ಅಜನ – ಶಬ್ದ ಅಣ್‌- ಪೆಣ್ಣ್‌
ಅಬುರು – ಎಚ್ಚರ ಇಮ್ಮತ್‌- ಶಕ್ತಿ
ಅಲಾಮು – ಹೇಳಿಕೆ ಕಂಜೂಸು – ಲೋಭಿ

೧೧. ಬ್ಯಾರಿ – ತುಳು ಪದ ಬಳಕೆಯ ಉದಾಹರಣೆಗಳು. ಬ್ಯಾರಿ ಭಾಷೆಯಲ್ಲಿ ಬಳಕೆಯಲ್ಲಿರುವ ಕೆಲವು ತುಳುಪದಗಳು. ಕನ್ನಡದಲ್ಲಿ ಅರ್ಥ ಕೊಡಲಾಗಿದೆ.

ಆಯನ  ಜಾತ್ರೆ
ಅಮಸರ  (ಅಮಸರೋ) ಅವಸರ
ಅಂಗಳ್ಪು  ಅಭಿಲಾಷೆ
ಅಮುಕು  ಅಮುಕುವುದು
ಅಂಜಳ  ಮೀನಿನ ಹೆಸರು
ಅಯಿಂಬೊ  (ಆಯಿವೊ) ಅಯಿವತ್ತು
ಅಂಟ್‌ಮಣ್ಣು  ಅಂಚು ಮಣ್ಣು
ಅರವುಲೆ  ಬೊಬ್ಬೆ
ಅಂಡಪಿರ್ಕಿ  ಅರೆಹುಚ್ಚ
ಅರಮೆ  ಸರ್ವಥಾ
ಅಂಡಿಕುಂಡಿ  ತಲೆಬುಡ
ಅರಿಪೊಡಿ  ಅರಿಹುಡಿ
ಅಂಬಟೆ ಕೊರಂಟಿ  ಅಂಬಟೆ ಬೀಜ
ಅವಕಾಸೇ  ಅವಕಾಶ
ಅಂಬಟೆ ಚೂಡಿ  ತಲೆಗೂದಲ ಗಂಟು
ಅಂಡ್‌  ವರ್ಷ
ಅಂಬರ್ಪು  ಅವಸರ
ಅಚಾರಿ  ಆಚಾರಿ
ಅಂಸಾನಿ  ಅಹಂ, ದುರಭಿಮಾನ
ಅಣ್‌, ಅಣ್‌  ಗಂಡಸು
ಅಕಳ ಜಾತ  ಬುದ್ದಿವಂತಿಕೆ
ಇರಿವೊ  ಇಪ್ಪತ್ತು / ಇರ್ವ
ಅಜಕ  (ಅಜಕೆ) ಹರಟೆ
ಇಬ್ಬಾಯಿ  ಎರಡು ಬಾಯಿ
ಅಜ್ಜ- ಅಜ್ಜಿ ಅಜ್ಜಿ- ಅಜ್ಜೆ
ಈಸ್‌  ಮೆಲ್ಲನೆ ಜಾರಿಸು
ಅಜ್ಜಂ ಬಿಲ್ಲ್‌  ಕಾಮನ ಬಿಲ್ಲು
ಅಮೊಡ ಪೊನ್ನು  ಪುತ್ತಳಿ ಚಿನ್ನ
ಅಡಂಗ್‌  ಅಡಗಿಕೂತುಕೋ
ಅಳಂಬು  ಅಳಾಂಬು
ಅಡಿಪೊಡಿ  ಪೆಟ್ಟು ಜಗಳ
ಇಚಿತ್ರೊ  ವಿಚಿತ್ರ
ಅಡ್ಪು  ಒಲೆ
ಇಡಿಪೊಡಿ  ಜಗಳ
ಇಸ್ಮರ್ಯ  ವಿಸ್ಮಯ
ಕುಚ್ಚಿ  ತಲೆಗೂದಲು
ಈಂದ್‌  ಈಜು
ಕುಜುಂಬು  ಮಕ್ಕಳ ತಲೆಗೂದಲು
ಈರ್‌  ಸಿಗಿಯು
ಕುತ್ತೂ  ಚುಚ್ಚು
ಉಂಡು  ಇದೆ
ಕೆಡಂಬಿಲ್‌  ಗೊರಬೆ
ಉಜುಂಬು  ಚೀಪು
ಕೆಪ್ಪ  ಕುವುಡ
ಉಗುರುಬೆಪ್ಪು  ಉಗುರುಬೆಪ್ಪು
ಕೈಪಲಿಪು  ಕೈಗುಣ
ಉಡುಂಬ  ಉಡು
ಕೈಮಾಸ  ಮಾಟ ಮದ್ದು
ಉಪ್ಪುಡೆ ಕಲ್ಲ್‌  (ಉಪ್ಪುದ ಕಲ್‌) ಉಪ್ಪಿನ ಹರಳು
ಕೋಸ್‌ಕಣ್ಣ್‌  ಓರೆಕಣ್ಣು
ಉಪ್ಪುಡೆ ಸಿಂಗಿ  (ಉಪ್ಪುದ ಸಿಂಗಿ) ಉಪ್ಪು ಹೆಚ್ಚು
ಗಪ್ಲಾಸ್‌  ಪೊಳ್ಳು ಮಾತು
ಉರಿ  ಉಯ್ಯಾಲೆಯಂತಿರುವ ಪಾತ್ರೆ ಇಡುವ ಸಾಧನ
ಗಾಯೊ  ಗಾಯ
ಉರುಂಟು  ಉರುಟು
ಗುಡ್ಡೆ  ಗುಡ್ಡ
ಉರ್ಕು  ತಾಯತ, ಆಭರಣ
ಗುರ್ಬಿ  ಗುಬ್ಬಿ
ಉಳ್ಕು  ಉಳುಕುವುದು
ಗೋಸ್ಟಿ  ಗೊಡವೆ
ಉಳ್ಳಿ  ನೀರುಳ್ಳಿ
ಚಂಡಿಪುಡ್ಕ  ಪುಕ್ಕ
ಊಂಚಿ  ಮೇಲ್ತರದ
ಚದಿ  ಮೋಸ
ಊದುಬತ್ತಿ  ಅಗರಬತ್ತಿ
ಚೂಡು  ತಲೆಬಿಸಿ
ಅಡಕತ್ತರಿ  ಅಡಕೆ ಕತ್ತರಿಸುವ ಕತ್ತರಿ
ಜೋಸು  ಉತ್ಸಾಹ
ಎಡಬಿಡಾರೊ  ತಾತ್ಕಾಲಿಕ ಬಿಡಾರ
ಡೋಂಗಿ  ಡೋಂಗಿ
ಎಡವಟ್ಟ್‌  ತೊಂದರೆ
ತಳುವಾರ್‌  ಬಾಳು, ಕತ್ತಿ
ಎರಂದ್‌  ಒತ್ತಾಯಿಸು
ತಿಂಬಟ್ಟು  ತಿಂಡಿಪೋಕ
ಎರ್ಮೆ  ಎಮ್ಮೆ
ತಿರ್ಪಾಲ  ತ್ರಿಪಲ ಮದ್ದು ಲೇಪ
ಎರ್ದ್‌  ಹೋರಿ
ತೇಜಿ  ಚುರುಕು
ಎಳಮ  ಎಳೆಯದು
ತೋಕ್‌  ಕೋವಿ
ಒಟ್ಟಾರೊ  ದಷ್ಟಪುಷ್ಟ
ದಡಿಕೆ  ತುರಿಕೆಯಿಂದ ಚರ್ಮ ಉಬ್ಬು
ಎಪ್ಪೊ  (ಏಪೊ) ಯಾವಾಗ?
ದಮ್ಮು  ಉಬ್ಬಸ
ಐಸಿರೊ  ಶ್ರೀಮಂತಿಕೆ
ದೀಪ  ಬೆಳಕು
ಒಟ್ಟೆ  ತೂತು
ದೊಣ್ಣಪ್ಪ  ಅಧಿಕಾರ ನಡೆಸುವಾತ
ಒಟ್ಟೆ ಓಡು  ತೂತಾದ ಮಡಿಕೆ
ನಂಜಿನರಕಾ  ಅಸೂಯೆ
ಒಟ್ಟೆಕಿಚ್ಚಿ  ಅಸೂಯೆ
ನೈಪು  ದುಡಿಮೆ
ಓಂತಿ  ಓತಿ
ನಾರಾಸ್‌  ದಬ್ಬಳ (ಸೂಜಿ)
ಕಂಟಪೂಜೆ  (ಕಂಡಪುಚ್ಚೆ) ಗಂಡು ಬೆಕ್ಕು
ಪಚ್ಲಾಮು  ಸೇನೆ
ಕಂಡಾ ಬಟ್ಟೆ  ಸಿಕ್ಕಾ ಬಟ್ಟೆ
ಪರ್ತಿ  ಹತ್ತಿ
ಕಟ್ಟಪುಣಿ  ವಂಚಕ
ಪಿಂಡಿ  ಕಡುಬು
ಕುರುಂಬು  ಕಬ್ಬು
ಪಿಂಡ್‌  ಒಂದು ಗುಂಪು
ಕಲ್ಲೆಂಬಿ  ಮರದ ಪೆಟ್ಟಿಗೆ
ಪಿರಾಂದ್‌  ಭ್ರಾಂತಿ
ಕುಂಬಟ್ಟ್‌  ಕುಂಬಾದ
ಪೊಡಿ  ನಶ್ಯ
ಲಂಡ್‌ಪುಸ್ಕ್‌  ಅಪ್ರಯೋಜಕ
ಪೊಟ್ಟ  ಮೂಕ
ಲಗಾಡಿ  ಸರ್ವನಾಶ
ಬಂಜಳ  ಹೊಟ್ಟೆಬಾಕ
ಲಟಾರಿ  ಗುಜರಿ
ಬಸೊ  ಶಕ್ತಿ
ಲಟ್ಟಾಸ್‌  ಹಾಳಾದ್ದು
ಬೀಲ  (ಬಿಲ) ಬಾಲ
ಲಡಾಯಿ  ಜಗಳ
ಬೊಂಡು  ತಿರುಳು, ಮೆದುಳು
ಲಾಟ್‌ಪೋಟ್‌  ಕ್ಷುಲ್ಲಕ ಹರಟೆ
ಬೊಂದ್ಯ  ಬೆಂಕಿ
ಬೊಂತೆ ಲಾಚಾರ್‌  ದೈಹಿಕ ಸವೆತ
ಮಕ್‌ಮರ್ಲ್‌  ಹುಚ್ಚುಹುಚ್ಚಾಗಿ
ವದರ್ಪು  ಮುಖ ಬೀಗುವಿಕೆ
ಮಂಡೆಕುತ್ತು  ತೆಲೆನೋವು
ಸೀಂತ್ರಿ  ಮೋಸತಂತ್ರ
ಮಚ್ಚಿನ  ಮೈದುನ
ಸೊಯೊ  ಸೊಯ (ಸ್ವಂತ ಬುದ್ದಿ)
ಮಿಲಾವು  ಉಕ್ಕು
ಸೋಂಟ  ಬಡಿಗೆ
ಮುಂಡಾಸ್‌  ಮುಂಡಾಸು
ಅರೆಮಡಲ್‌  ತೆಂಗಿನ ಓಲೆ ಮಡಲು
ಯೇಸ  ವೇಷ
ಉಪ್ಪಾಡ್‌ಪಚ್ಚಿಳ  ಹಸಲಿನ ತೊಳೆ ಉಪ್ಪಿನಲ್ಲಿ ಹಾಕಿದ್ದು
ಯತೆ  ವ್ಯಥೆ
ಕುಡುಗು  ಹುರುಳಿ
ರವುಸ  ರಭಸ
ಅಡರ್‌  ಮರದ ಕೊಂಬೆ
ರಾವು  ಅತಿ ತಿನ್ನುವುದು
ಕುಪ್ಪುಳು  ಕೆಂಬೋತ
ರೋಂದು  ಸುತ್ತಾಟ

ಈ ಪದಗಳಾವುವೂ ಮಲೆಯಾಳದಲ್ಲಿಲ್ಲ.

೧೨. ತುಳು ಭಾಷೆಯಲ್ಲಿ ಪ್ರಾದೇಶಿಕ ಭಿನ್ನತೆಗಳಿವೆ. ೧. ಉಡುಪಿ, ಕುಂದಾಪುರ ಪ್ರದೇಶದ ಜನರ ಆಡುವ ತುಳು, ೨. ಮಂಗಳೂರಿನಿಂದ ಬಂಟ್ವಾಳದವರೆಗೆ, ೩. ಪುತ್ತೂರು, ಸುಳ್ಯ ಮತ್ತು ೪. ಕಾಸರಗೋಡಿನ ಜನರು ಆಡುವ ತುಳು ಭಾಷೆಯಲ್ಲಿ ಉಚ್ಚಾರ ವ್ಯತ್ಯಾಸಗಳನ್ನು ಕಾಣಬಹುದು. ಇದು ಪ್ರಾದೇಶಿಕ ಹಿನ್ನೆಲೆಯಿಂದುಂಟಾದವುಗಳು. ಇದೇ ಪ್ರಭಾವವನ್ನು ಬ್ಯಾರಿ ಭಾಷೆಯಲ್ಲೂ ಕಾಣಬಹುದು. ೧. ಸುರತ್ಕಲ್‌, ಬಜಪೆ ಮತ್ತು ಉತ್ತರದ ಭಾಗ ೨. ಮಂಗಳೂರು, ಬಂಟ್ವಾಲ ಪ್ರದೇಶ ೩. ಪುತ್ತೂರು, ಸುಳ್ಯ ಮತ್ತು ೪. ಕಾಸರಗೋಡು ಪ್ರದೇಶದ ಬ್ಯಾರಿ ಭಾಷೆಯಲ್ಲಿ ಗಮನೀಯ ಉಚ್ಚಾರ ಮತ್ತು ಪದಗಳಲ್ಲಿ ವ್ಯತ್ಯಾಸಗಳಿವೆ. ಇವುಗಳಲ್ಲಿ ತುಳು ಭಾಷೆಯ ಕೇಂದ್ರಿಯ ಭಾಗ ಮಂಗಳೂರು ಮತ್ತು ಸುತ್ತವಲಯವೆಂದು ಹಲವರು ಸಮರ್ಥಿಸಿದ್ದಾರೆ. ಬ್ಯಾರಿ ಭಾಷೆಯ ತವರೂರೆಂದೇ ಕರೆಯಬಹುದಾದ ಪ್ರದೇಶ ಮಂಗಳೂರು ಮತ್ತು ಸುತ್ತಮುತ್ತವೆಂಬುದನ್ನೂ ಸ್ಪಷ್ಟವಾಗಿ ಹೇಳಬಹುದು. ಹಾಗಾಗಿ, ಬ್ಯಾರಿ ಸಾಹಿತ್ಯವೂ ಇಲ್ಲಿಂದಲೇ ಬೆಳೆಯತೊಡಗಿದೆ.

ತುಳು ಭಾಷೆಗೆ ಲಿಪಿಯಲ್ಲ. ಪುರಾತನ ಲಿಪಿಯೊಂದು ಮಲೆಯಾಳ ಬರಹಕ್ಕೆ ಹೋಲಿಕೆಯಿದ್ದು, ಆ ಲಿಪಿಯನ್ನೇ ತುಳು ಲಿಪಿಯಾಗಿ ಬಳಸುತ್ತಿದ್ದರೆಂದು ಕೆಲವು ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಅದೇ ರೀತಿ ಬ್ಯಾರಿ ಭಾಷೆಗೆ ಬಟ್ಟೆಬರಹ ಎಂಬ ಲಿಪಿ ಬಳಕೆಯಾಗುತ್ತಿತ್ತು. ಈಗ ಇತಿಹಾಸವಾಗಿರುವ ಈ ಬರಹ ಸಾಮಾನ್ಯವಾಗಿ ಬಳಸಲಾಗುತ್ತಿತ್ತು. ನಾನು ಸಂಗ್ರಹಿಸಿದ ಹಲವಾರು ದಾಖಲೆಗಳಲ್ಲಿ ಈ ಬರಹ ಇದೆ. ಆದರೆ ಅದನ್ನು ಪರಿಚಯ ಮಾಡಿಸಿಕೊಳ್ಳಲಾರದೆ ಓದಲಾಗಲಿಲ್ಲ. ಮತ್ತಷ್ಟು ಸಂಶೋಧನೆ ನಡೆದಲ್ಲಿ ಇದನ್ನು ಓದಲು ಸಾಧ್ಯ.

ಬ್ಯಾರಿ ಭಾಷೆಯಲ್ಲಿ ಬಹಳಷ್ಟು ಮೌಖಿಕವಾಗಿ ಇಳಿದುಬಂದ ಹಾಡುಗಳು, ಕತೆಗಳು, ಹಲವಾರು ಇವೆ. ಅಫೆಂಡಿ ರಾಜಾವು, ಬಂಗಾರ್ದೆ ತೂಸಿ, ನಾಗರಾಜ ಮೊದಲಾದ ಕೆಲವು ಕತೆಗಳು ಡಾ | ಸುಶೀಲಾ ಉಪಾಧ್ಯಾಯರ ಸಂಗ್ರಹದಲ್ಲಿದೆ. ಇತ್ತೀಚೆಗೆ ಬ್ಯಾರಿ ಸಾಹಿತ್ಯ ಬೆಳೆಯಲಾ ರಂಭಿಸಿದೆ. ಕತೆಗಳೂ, ಕವನಗಳೂ, ಕಾದಂಬರಿಗಳೂ ಪ್ರಕಟವಾಗುತ್ತಿವೆ.

ತುಳು ಭಾಷೆ ದ್ರಾವಿಡ ಭಾಷೆಯಲ್ಲಿ ಅದು ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಬ್ಯಾರಿ ಭಾಷೆ ತುಳು ಭಾಷೆಯಿಂದಲೇ ಪ್ರಭಾವಿತವಾದ, ಒಂದು ಆಡು ಭಾಷೆ ಎಂದು ಸಂದೇಹಾತೀತವಾಗಿ ಹೇಳಬಹುದು. ಈ ಭಾಷೆಯಲ್ಲಿ ಧಾರಾಳ ಬಳಕೆಯಾಗುವ ತುಳು ಪದಗಳು, ಉಚ್ಚಾರ ಮತ್ತು ಮಲೆಯಾಳದಿಂದ ಭಿನ್ನವಾದ ವ್ಯಾಕರಣ ಹಾಗೂ ಸಾಕಷ್ಟು ಅರಬಿ, ಪಾರ್ಸಿ ಪದಗಳು ಈ ಭಾಷೆಯ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತದೆ. ಇದೊಂದು ಜನಾಂಗೀಯ ಪ್ರಾದೇಶಿಕ ಭಾಷೆ ಮತ್ತು ದ್ರಾವಿಡ ಭಾಷೆಗಳ ಸಾಲಿನಲ್ಲಿ ಇದೂ ಒಂದೆಂದು ಪರಿಗಣಿಸಬಹುದು.