ಪ್ರಸಕ್ತ ಅಧ್ಯಯನ ವಿಭಿನ್ನ ಭಾಷಾವರ್ಗಗಳಿಗೆ ಸೇರಿದ, ಆದರೆ ಒಂದೇ ಪ್ರದೇಶದಲ್ಲಿ ದೀರ್ಘಕಾಲ ಸೋದರಿಯರಂತೆ ಇರುವ, ತುಳು-ಕೊಂಕಣಿಗಳಿಗೆ ಸೀಮಿತ ಎಂಬುದು ಸ್ವಯಂವೇದ್ಯ. ಒಂದು ನಿರ್ದಿಷ್ಟ ಕಾಲ ಪ್ರದೇಶಗಳ ಜನಸಮುದಾಯದ ಜೀವನಾಭಿವ್ಯಕ್ತಿಯ ಮೊತ್ತವೇ ಅದರ ಸಂಸ್ಕೃತಿಯಾಗಿರುತ್ತದೆ. ಈ ಸಂಸ್ಕೃತಿಯ ವಾಚಿಕ ಅಭಿವ್ಯಕ್ತಿಯೇ ಅದರ ಆಡುಮಾತು (la parole). ಈ ಆಡುಮಾತುಗಳ ಅಮೂರ್ತ ಸ್ವರೂಪವೇ ಭಾಷೆ (la langue) ಎಂದು ಆಧುನಿಕ ಭಾಷಾವಿಜ್ಞಾನದ ಪಿತಾಮಹ ಫೆರ್ಡಿನಾಂಡ್‌ದೆ ಸೊಸ್ಯೂರ್ (Ferdinand de Saussure) ಅಭಿಪ್ರಾಯಪಟ್ಟಿದ್ದಾರೆ. ಭಾಷೆಯ ರಸಾತ್ಮಕ / ಕಲಾತ್ಮಕ ಅಭಿವ್ಯಕ್ತಿಯೇ ಸಾಹಿತ್ಯ. ಅದರ ಲಿಖಿತರೂಪವೇ ಲಿಪಿಸಾಹಿತ್ಯ.

ಪ್ರಕೃತ ಅಧ್ಯಯನದಲ್ಲಿ ಭಾಗಗಳು ಎರಡು : ೧. ತುಳು-ಕೊಂಕಣಿ ಭಾಷಿಕ ಸಂಬಂಧ ೨. ತುಳು-ಕೊಂಕಣಿ ಸಾಹಿತ್ಯಕ ಸಂಬಂಧ

೧. ತುಳು – ಕೊಂಕಣಿ ಭಾಷಿಕ ಸಂಬಂಧ

ಚಾರಿತ್ರಿಕ ಮತ್ತು ತೌಲನಿಕ ಭಾಷಾವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಭಾಷಾವಿಜ್ಞಾನಿಗಳು ಭಾರತದ ಎಲ್ಲ ಭಾಷೆಗಳನ್ನು ನಾಲ್ಕು ಭಾಷಾಪರಿವಾರಗಳಲ್ಲಿ ವರ್ಗೀಕರಿಸಿದ್ದಾರೆ:

ಅ) ಇಂಡೊ-ಆರ್ಯನ್‌ ಭಾಷಾಪರಿವಾರ
ಆ) ದ್ರಾವಿಡ ಭಾಷಾಪರಿವಾರ
ಇ) ಆಸ್ಟ್ರೋ-ಏಷ್ಯಾಟಿಕ್‌ ಭಾಷಾಪರಿವಾರ
ಈ) ಟಿಬೆಟೊ-ಬರ್ಮನ್‌ ಭಾಷಾಪರಿವಾರ

ತುಳು, ದ್ರಾವಿಡ ಭಾಷಾಪರಿವಾರಕ್ಕೆ ಸೇರಿದ್ದು. ಪ್ರಾಕ್‌ ದಕ್ಷಿಣ ದ್ರಾವಿಡದಿಂದ ಸ್ವತಂತ್ರವಾಗಿ ಕವಲೊಡೆದ ಪ್ರಥಮ ಭಾಷೆಯಾಗಿದೆ. ಕೊಂಕಣಿ, ಇಂಡೋ-ಆರ್ಯನ್‌ ಭಾಷಾಪರಿವಾರಕ್ಕೆ ಸೇರಿದ ಭಾಷೆ. ಆನುವಂಶೀಯವಾಗಿ ಈ ಎರಡೂ ಭಾಷೆಗಳಿಗೆ ಯಾವುದೇ ಸಂಬಂಧ ಇಲ್ಲದಿದ್ದರೂ ಅವುಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯ ಹಾಲುಜೇನಿನಂತೆ ಸುಮಧುರವಾಗಿದೆ

[1]. ಇದು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯವೂ ಹೌದು[2].

೧.೧. ತುಳುಭಾಷೆ

ಕರ್ನಾಟಕದಲ್ಲಿ ಕನ್ನಡದ ಜೊತೆ, ತುಳು ಸಮಾನ ಸ್ಥಾನೀಯ ಮಾತೃ / ಮನೆ ಭಾಷೆ ಹಾಗೂ ಪ್ರಥಮ ಭಾಷೆ[3]. ತುಳು, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ಕೇರಳ ರಾಜ್ಯದ ಕುಂಬಳೆ, ಕಾಸರಗೋಡು, ಮಂಜೇಶ್ವರ ಮೊದಲಾದ ಪ್ರದೇಶಗಳಲ್ಲಿ ಬ್ರಾಹ್ಮಣ, ಬಂಟ, ಬಿಲ್ಲವ, ಮೊಗವೀರ, ಪರಿಶಿಷ್ಟರು ಮೊದಲಾದವರಲ್ಲಿ ದಟ್ಟವಾಗಿ ಹಬ್ಬಿಕೊಂಡಿದೆ. ಹಿಂದಿನ ಸಪ್ತಕೊಂಕಣದ ಭಾಗ ತುಳುನಾಡು ಎಂಬ ಪ್ರತೀತಿಯೂ ಇದೆ.

ತುಳು, ಸ್ವತಂತ್ರವಾದ ದ್ರಾವಿಡ ಭಾಷೆ ಎಂಬುದನ್ನು ಭಾಷಾವೈಜ್ಞಾನಿಕವಾಗಿ ಸಿದ್ಧಪಡಿಸಿದ ಕೀರ್ತಿ ತೌಲನಿಕ ದ್ರಾವಿಡ ವ್ಯಾಕರಣದ ಪಿತಾಮಹ ನೆನಿಸಿಕೊಂಡ ಬಿಷಪ್‌ ರಾಬರ್ಟ್‌ ಕಾಲ್ಡ್‌ವೆಲ್‌ (೧೮೫೬ : ೩೨) ಅವರಿಗೆ ಸಲ್ಲುತ್ತದೆ. ಆದರೆ ಈ ಭಾಷೆ ಯಾವ ಉಪವರ್ಗಕ್ಕೆ ಸೇರಿದುದು ಎಂಬುದರ ಬಗೆಗೆ ವಾದವಿವಾದಗಳು ಭಾಷಾವಿಜ್ಞಾನಿಗಳಲ್ಲಿದೆ Krishnamurthi (೧೯೬೧), Emeneau (೧೯೬೭); Subrahmanyam (೧೯೬೮). ಆದರೆ ಇತ್ತೀಚೆಗೆ ನಡೆದ ತುಳು ಭಾಷಾವೈಜ್ಞಾನಿಕ ಸಂಶೋಧನೆಗಳನ್ನು ಗಮನಿಸಿದಾಗ ತುಳು ಪ್ರಾಕ್‌-ದಕ್ಷಿಣ ದ್ರಾವಿಡದಿಂದ ಪ್ರಪ್ರಥಮವಾಗಿ ಕವಲೊಡೆದ ಸ್ವತಂತ್ರ ಭಾಷೆ ಎಂಬುದು ಖಚಿತವಾಗುತ್ತದೆ[4].

ಬಿಷಪ್‌ ರಾಬರ್ಟ್‌ ಕಾಲ್ಡ್‌ವೆಲ್‌, ರೆ. ವಿ. ಮ್ಯಾನರ್, ರೆ. ಜೆ. ಬ್ರಿಗಲ್‌ ಮೊದಲಾದ ಕ್ರೈಸ್ತ ಮಿಶನರಿಗಳ ತುಳು ಅಧ್ಯಯನವನ್ನು ಎಲ್‌. ಎ. ರಾಮಸ್ವಾಮಿ ಅಯ್ಯರ್, ಭ. ಕೃಷ್ಣಮೂರ್ತಿ, ಪಿ. ಎಸ್‌. ಸುಬ್ರಹ್ಮಣ್ಯಂ, ಎಂ. ಮರಿಯಪ್ಪ ಭಟ್‌, ಡಿ. ಎನ್‌. ಶಂಕರ ಭಟ್‌, ಬಿ. ರಾಮಚಂದ್ರ ರಾವ್, ಯು. ಪಿ. ಉಪಾಧ್ಯಾಯ, ವಿಲ್ಯಂ ಮಾಡ್ತ, ಎಂ. ರಾಮ, ಮಲ್ಲಿಕಾದೇವಿ, ಸೂಡ ಲಕ್ಷ್ಮೀನಾರಾಯಣ ಭಟ್‌, ಕೆ. ವಿ. ಜಲಜಾಕ್ಷಿ, ರಾಮಕೃಷ್ಣ ಶೆಟ್ಟಿ ಮೊದಲಾದ ಭಾಷಾವಿಜ್ಞಾನಿಗಳು ತುಳು ಪ್ರಭೇದಗಳನ್ನು ಆಧರಿಸಿ, ವಿವರಣಾತ್ಮಕವಾಗಿ ಹಾಗೂ ತೌಲನಿಕವಾಗಿ ತುಳು ಭಾಷಾಧ್ಯಯನವನ್ನು ಮುಂದುವರಿಸಿದ್ದಾರೆ. ಹಳೆಯ ಪೀಳಿಗೆಯ ವಿದ್ವನ್ಮಣಿಗಳಾದ ಸೇಡಿಯಾಪು ಕೃಷ್ಣ ಭಟ್‌, ತೆಕ್ಕುಂಜ ಗೋಪಾಲಕೃಷ್ಣ ಭಟ್‌ಹಾಗೂ ಹೊಸ ಪೀಳಿಗೆಯ ಬಿ. ಎ. ವಿವೇಕ ರೈ, ತಾಳ್ತಜೆ ವಸಂತಕುಮಾರ, ಪದ್ಮನಾಭ ಕೇಕುಣ್ಣಾಯ ಮೊದಲಾದವರು ತಮ್ಮ ಪಾಂಡಿತ್ಯದಿಂದ ತುಳು ಭಾಷಾವಿಜ್ಞಾನಿಗಳು ಗಮನಿಸಬೇಕಾದ ಅಂಶಗಳತ್ತ ಅವರ ಗಮನವನ್ನು ಸೆಳೆದಿದ್ದಾರೆ. ಯು. ಪಿ. ಉಪಾಧ್ಯಾಯರು ಸಂಪಾದಿಸಿದ ತುಳು ನಿಘಂಟು ತುಳು ಭಾಷಾವಿಜ್ಞಾನಕ್ಕೆ ಮಕುಟಪ್ರಾಯವೆನಿಸಿ, ಅವರು ತುಳು ಕಿಟ್ಟೆಲ್‌ರೆನಿಸಿಕೊಳ್ಳಲು ಯೋಗ್ಯ ರೆನಿಸಿದ್ದಾರೆ.

ಮೇಲಿನ ಭಾಷಾವೈಜ್ಞಾನಿಕ ಅಧ್ಯಯನದಿಂದಾಗಿ ಇಂದು ತುಳು ಭಾಷೆಯ ಉಗಮ,-ಬೆಳವಣಿಗೆ, ದ್ರಾವಿಡ ಭಾಷಾಪರಿವಾರದಲ್ಲಿ ಅದರ ಸ್ಥಾನಮಾನ ಮುಂತಾದ ವಿಷಯಗಳಲ್ಲದೆ ಅದರ ಉಪಭಾಷೆಗಳ ವಿವರಣಾತ್ಮಕ ಅಧ್ಯಯನ, ಕೋಶ ರಚನೆ ಇತ್ಯಾದಿಗಳು ನಡೆದ ಹಾಗೂ ನಡೆಯುತ್ತಿರುವ ಸಂಶೋಧನೆಗಳಿಂದ ತುಳುವನ್ನು ಪ್ರಥಮವಾಗಿ ಉತ್ತರ ತುಳು ಮತ್ತು ದಕ್ಷಿಣ ತುಳು ಎಂದು ಮುಖ್ಯ ಎರಡು ಪ್ರಾದೇಶಿಕ ಉಪಭಾಷೆಗಳನ್ನಾಗಿ ವಿಂಗಡಿಸಿ ಅವುಗಳ ಉಪವರ್ಗಗಳೇ ಇತರ ಸಾಮಾಜಿಕ ಪ್ರಭೇದಗಳೆಂದು ತಿಳಿದುಕೊಳ್ಳುವುದು ಹೆಚ್ಚು ಸೂಕ್ತವೆಂದು ತೋರುತ್ತದೆ.

೧.೨. ಕೊಂಕಣಿ ಭಾಷೆ

ಕೊಂಕಣ ಪ್ರದೇಶದ ಭಾಷೆಯೇ ಕೊಂಕಣಿ. ‘ಕೊಂಕಣಿ’ ಬಹು ಪ್ರಾಚೀನ ಶಬ್ದ :

ಕೇರಳಾಶ್ಚ ತುಲಂಗಾಶ್ಚ ತಥಾ ಸೌರಾಷ್ಟ್ರ ವಾಸಿನಃ |
ಕೊಂಕಣಃ ಕರಹಾಟಾಶ್ಚ ಕರುನಾಟಾಶ್ಚ ಬರ್ಬರಾಃ ||

-ಎಂಬ ಉಲ್ಲೇಖ ಸಹ್ಯಾದ್ರಿ ಖಂಡದಲ್ಲಿ ಸಿಗುತ್ತದೆ. ಕ್ರಿ. ಶ. ಎರಡನೆಯ ಶತಮಾನದ ಅರವಲೆಂ (ಗೋವೆ) ಶಾಸನ : “ಸಾಚಿಪುರಾಚಾ ಶಿರಾಚೀ”, ಅಂದರೆ ‘ಸಾಚಿಪುರದ ತುದಿಯಲ್ಲಿ’ ಎಂಬ ಶಾಸನದಲ್ಲಿ ‘ಚಾ’ ಎಂಬುದು ಕೊಂಕಣಿ ಅಂತ್ಯ ಪ್ರತ್ಯಯ (Suffix) ಎಂದು ಗುರುತಿಸಲಾಗಿದೆ. ಕ್ರಿ.ಶ. ೫ನೆಯ ಶತಮಾನದ ಪ್ರಸಿದ್ಧ ಜ್ಯೋತಿಷಿ ಆಚಾರ್ಯ ವರಾಹಮಿಹಿರನ ಬೃಹತ್ಸಂಹಿತೆಯಲ್ಲಿ ‘ಕಂಕಟಟಂಕಣ ವನವಾಸಿ ಶಿವಿಕ ಫಣಿಕಾರಕೊಂಕಣಾಭೇರ’ ಎಂಬ ಉಲ್ಲೇಖವಿದೆ (ಶೆಣೈ, ೫೫). ತಮಿಳಿನ ಪ್ರಾಚೀನ ಸಂಗಂ ಸಾಹಿತ್ಯದಲ್ಲಿ ‘ಕೊಂಗುನಾಡು’ (>ಕೊಂಕಣ) ಎಂಬ ಉಲ್ಲೇಖವಿದ್ದು ಅದು ಈಗಿನ ಸೇಲಂ ಮತ್ತು ಕೊಯಮುತ್ತೂರು ಜಿಲ್ಲೆಗಳು ಮತ್ತು ಹಿಂದಿನ ತುಳುನಾಡನ್ನು ಒಳಗೊಂಡ ಪ್ರದೇಶ ಎಂಬ ವಿವರ ಇದೆ. ೧೨ನೆಯ ಶತಮಾನದ ಅಪರಾದಿತ್ಯ (೧೧೬೭) ಅರಸನ ಶಿಲ್ಹಾರ ಶಾಸನದಲ್ಲಿ ಕೊಂಕಣಿ ವಾಕ್ಯವನ್ನು ಗುರುತಿಸಿದ್ದಾರೆ. ಶ್ರವಣಬೆಳಗೊಳ ಶಾಸನ (೧೧೧೬-೧೭) ದಲ್ಲಿ ‘ಕರವಿಯಾಲೆಂ’ ಅಂದರೆ ‘ಮಾಡಿಸಿತು’ ಎಂಬ ಪದದಲ್ಲಿ ‘ಯಾ’ ಎಂಬ ಪ್ರೇರಣಾರ್ಥಕ (Causative) ಪ್ರತ್ಯಯವಿದ್ದು ಅದು ಕೊಂಕಣಿ ಪ್ರತ್ಯಯ ಎಂದು ಹೇಳಲಾಗಿದೆ. ಚೀನೀ ಪ್ರವಾಸಿ ಹುಯೇನ್‌ತ್ಸ್ಯಾಂಗ್‌ ಉಲ್ಲೇಖಿಸಿದ ಕೊಂಕಣದ ಪ್ರದೇಶಗಳಲ್ಲಿ ಬನವಾಸಿ, ಬೆಳಗಾವಿ, ಧಾರವಾಡ ಸೇರಿದ್ದುವು. “ಮುಂಬಯಿಯ ಉತ್ತರಕ್ಕಿರುವ ಠಾಣೆ, ದಕ್ಷಿಣಕ್ಕಿರುವ ಕುಲಾಬಾ, ರತ್ನಾಗಿರಿ ಮತ್ತು ಗೋಮಂತ -ಈ ನಾಲ್ಕು ಜಿಲ್ಲೆಗಳೇ ಅಚ್ಚ ಕೊಂಕಣ ಪ್ರದೇಶಗಳು” ಎಂಬ ಅಭಿಪ್ರಾಯವಿದೆ(ಗುಲ್ವಾಡಿ ೬೩). ‘ಕೊಂಕಣ’ ಪದಕ್ಕೆ ‘ಅಂಕುಡೊಂಕಾದ’ ಹಾಗೂ ‘ಪರ್ವತಪ್ರಾಯ’ ಎಂಬ ಅರ್ಥಗಳಿವೆ. ಈಗ ಕೊಂಕಣಿ ವ್ಯಾಪಿಸಿರುವ ಪ್ರದೇಶ ಹಾಗೂ ‘ಕೊಂಕಣ’ ಪದದ ಅರ್ಥ ಗಮನಿಸಿದಾಗ, ಭಾರತದ ಪಡುವಣ ಕಡಲತೀರದ ಮುಂಬಯಿಯಿಂದ ಕೊಚ್ಚಿವರೆಗೆ ಹಬ್ಬಿದ ಪ್ರದೇಶವನ್ನು ‘ಕೊಂಕಣ’ ಎನ್ನುತ್ತಿದ್ದರೆಂದು ಇಟ್ಟುಕೊಳ್ಳಬಹುದು. ಕೊಂಕಣ ಹರವಿನ ಬಗೆಗೆ ಅನೇಕ ಅಭಿಪ್ರಾಯಗಳು ಇರಬಹುದಾದರೂ ಕೊಂಕಣ ಭಾಷೆ, ಕೊಂಕಣಿ ಎಂಬ ಅಭಿಪ್ರಾಯ ಜನಜನಿತವಾಗಿದೆ.

ಕೊಂಕಣಿ ಭಾಷೆಯ ಮೂಲ ಪ್ರಕೃತಿಗಳನ್ನು ಗಮನಿಸಿ, ಅದು ಆಸ್ಟ್ರೋ-ಏಷ್ಯಾಟಿಕ್‌ ಭಾಷಾಪರಿವಾರಕ್ಕೆ ಸೇರಿದ ಮುಂಡಾರಿ ಭಾಷೆಯನ್ನು ಹೋಲುತ್ತದೆಂದು ಮುಂಡಾರಿ ವಿಶ್ವಕೋಶವನ್ನು ಸಂಕಲಿಸಿದ ಯೇ. ಸ. ಜಿ. ಹೋಪ್‌ಮನ್‌ (Jesuit G. Hoffman) ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯವೇ ಹೆಚ್ಚು ಸರಿಯಾದುದು ಎಂದು ನನ್ನ ಇತ್ತೀಚೆಗಿನ ನಿಲವು. ಆದರೆ ಡಾ. ಎಸ್‌. ಎಂ. ಕತ್ರೆಯವರು ಕೊಂಕಣಿ ಇಡೋ- ಆರ್ಯನ್‌ ಭಾಷಾಪರಿವಾರದ ದಕ್ಷಿಣ ವರ್ಗಕ್ಕೆ ಸೇರಿದೆ. ಅದು ಮರಾಠಿ, ಗುಜಾರಾತಿಗಳೊಡನೆ ಸಮೀಪದ ಸಂಬಂಧ ಹೊಂದಿದೆ ಎಂಬುದನ್ನು ತಮ್ಮ The Formation of Konkani (೧೯೬೬) ಎಂಬ ಗ್ರಂಥದಲ್ಲಿ ಪ್ರತಿಪಾದಿಸಿದ್ದಾರೆ. ಸುನೀತಿಕುಮಾರ ಚಟರ್ಜಿ ಮೊದಲಾದವರು ಅದನ್ನು ಒಪ್ಪಿಕೊಂಡಿದ್ದಾರೆ.

ಕೊಂಕಣಿ ಎಂದೂ ಸ್ವತಂತ್ರ ರಾಜ್ಯವಾಗಿರಲಿಲ್ಲ ವಾದುದರಿಂದ ಕೊಂಕಣಿಗೆ ಎಂದೂ ರಾಜಾಶ್ರಯ ದೊರಕಲಿಲ್ಲ. ೧೫೮೮ರಲ್ಲಿ (ಕ್ರಿ. ಶ. ೧೫೮೪) ಪೋರ್ಚುಗೀಸರು ಕೊಂಕಣಿಯನ್ನು ಗೋವೆಯಲ್ಲಿ ನಿಷೇಧಿಸಿ ಪೋರ್ಚುಗೀಸ್‌ ಭಾಷೆಯನ್ನು ಅಧಿಕೃತ ಭಾಷೆಯೆಂದು ಘೋಷಿಸಿದ್ದುದರರಿಂದ, ಮತಾಂತರದ ಒತ್ತಾಯದಿಂದಾಗಿ ಹಾಗೂ ಇಂಕ್ವಜಿಷನಿನ (ಹಿಂಸಾತ್ಮಕ ಒತ್ತಡ) (ಜೂನ್‌ ೩೦, ೧೫೪೧) ಎರಡು ಶತಮಾನಗಳ (Katre, ೧೭೪೧) ಹಾವಳಿಯಿಂದಾಗಿ ಕೊಂಕಣಿಗರು ಒಂದೋ ಕಡ್ಡಾಯವಾಗಿ ಕ್ರೈಸ್ತರಾಗ ಬೇಕಾಯಿತು; ಇಲ್ಲವೆ ಗೋವೆಯನ್ನು ಬಿಟ್ಟು ಮಹಾರಾಷ್ಟ್ರ. ಕರ್ನಾಟಕ ಮತ್ತು ಕೇರಳಕ್ಕೆ (ನೋಡಿ: Census India 1961 & 1971) ನಿರಾಶ್ರಿತರಾಗಿ ಹೋಗಬೇಕಾಯಿತು (Pereira ೧೨). ಕೊನೆ ಕೊನೆಗೆ ಕ್ರೈಸ್ತರಿಗೂ ಈ ಪೋರ್ಚುಗೀಸಕರಣದಿಂದಾಗಿ ಗೋವೆಯಲ್ಲಿರುವುದು ತ್ರಾಸದಾಯಕವಾಯಿತು. ಸಹಸ್ರಾರು ಮಂದಿ ತಮ್ಮ ಆಸ್ತಿಪಾಸ್ತಿ ಮನೆ ಮಠಗಳನ್ನು ತೊರೆದು ಓಡಿಹೋಗಬೇಕಾಯಿತು (Katre, ೧೭೭). ಹೀಗೆ ಕೊಂಕಣಿ ಹಲವು ಪ್ರದೇಶಗಳಲ್ಲಿ ಹಂಚಿ ಹರಿದುಹೋದುದರಿಂದ (Shanbhag, ೩೪) ಸ್ಥಳೀಯ ಪ್ರಭಾವದಿಂದಾಗಿ ಅದು ಹಲವು ಪ್ರಾದೇಶಿಕ ಉಪಾಭಾಷೆಗಳಾಗಿ ಮಾರ್ಪಾಡು ಹೊಂದಿತು. ಮೂಲ ಸಾಹಿತ್ಯ ಕೃತಿಗಳನ್ನು ಕಳೆದುಕೊಂಡು ವಾಚಿಕ -ಕಲೆ (Verbal Art) ಸೀಮಿತಗೊಳ್ಳ ಬೇಕಾಯಿತು. ಇಂತಹ ಸಂದಿಗ್ದ ಕಾಲದಲ್ಲಿ ಕೊಂಕಣಿ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬಂದ ಕೀರ್ತಿ ಯೇ. ಸ. ಥಾಮಸ್‌ಸ್ಟೀವನ್ಸ್‌(Jesuit Thomas ೧೫೪೯ -೧೬೧೯) ಮತ್ತು ಯೇ. ಸ. ಕರೆಲ್‌ಪ್ರಿಕ್ರಿಲ್‍‌(Jesuit Karel Prikry ೧೭೧೮ -೮೫) ಮೊದಲಾದವರಿಗೆ ಸಲ್ಲುತ್ತದೆ (Katre, ೧೭೪). ಕೊಂಕಣಿ, ದ್ರಾವಿಡ ಪ್ರದೇಶದಲ್ಲಿಯೇ ಹೆಚ್ಚು ಹಬ್ಬಿರುವುದರಿಂದಾಗಿ ಆದರ ಮೇಲೆ ಸಾಕಷ್ಟು ದ್ರಾವಿಡ ಪ್ರಭಾವವೂ ಆಗಿದೆ; ಕರ್ನಾಟಕದಲ್ಲಿ ತುಳು ಕನ್ನಡಗಳದ್ದೇ ಮೇಲುಗೈ.

ಸುಮಿತ್ರ ಮಂಗೇಶ ಕತ್ರೆ (೧೯೭೭) ಯವರು ೨೦ ಕೊಂಕಣಿ ಉಪಭಾಷೆಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳನ್ನು ಸೇರಿಕೊಂಡಿವೆ. ಈ ಎಲ್ಲ ಉಪಭಾಷೆಗಳನ್ನು ಒಳಗೊಂಡ ಕೊಂಕಣಿಯನ್ನು ೨೦.೦೮.೧೯೯೨ ರಲ್ಲಿ ಭಾರತೀಯ ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ, ಭಾರತೀಯ ರಾಷ್ಟ್ರಭಾಷೆಗಳಲ್ಲಿ ಒಂದು ಎಂದು ನಮೂದಿಸಲಾಯಿತು. ತತ್ಪೂರ್ವದಲ್ಲಿ ಭಾರತೀಯ ಕೇಂದ್ರ ಅಕಾಡೆಮಿಯ ಕೊಂಕಣಿ, ಸ್ವತ್ರಂತ್ರ ಸಾಹಿತ್ಯಕ ಭಾಷೆ ಎಂದು ೧೯೭೫ರಲ್ಲಿಯೇ ಮಾನ್ಯತೆ ನೀಡಿತ್ತು.

೧೯೮೦ ಜನಗಣತಿ ಪ್ರಕಾರ ಸುಮಾರು ೫೦ ಲಕ್ಷ ಕೊಂಕಣಿಗರು ಇದ್ದಾರೆ. ಇದರಲ್ಲಿ ಸಿಂಹಪಾಲು ಕರ್ನಾಟಕಕ್ಕೆ ಸೇರಿದ್ದುದಾಗಿದೆ. ಕರ್ನಾಟಕದಲ್ಲಿ ಸುಮಾರು ೨೫ ಲಕ್ಷ, ಗೋವೆಯಲ್ಲಿ ೯ ಲಕ್ಷ, ಮಹಾರಾಷ್ಟ್ರದಲ್ಲಿ ೮ ಲಕ್ಷ, ಕೇರಳದಲ್ಲಿ ೪ ಲಕ್ಷ, ಉಳಿದೆಡೆ ೪ ಲಕ್ಷ ಕೊಂಕಣಿಗಳು ಇದ್ದಾರೆ. ಅವರು ತಮ್ಮ ಅತಿಥೇಯ ಸಂಸ್ಕೃತಿಳೊಂದಿಗೆ ಹೊಂದಿಕೊಂಡು ಅಯ ರಾಜ್ಯಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲುದಾರರಾಗಿರುವುದು ಗಮನಿಸಬೇಕಾದ ವಿಷಯ.

ಪೋರ್ಚುಗೀಸರು ಕೊಂಕಣಿಯನ್ನು ‘ಕನರಿಂ’ ಎಂದು ಕರೆದುದನ್ನು ಗಮನಿಸಿದಾಗ ಬಹುಶಃ ಅವರು ಅದನ್ನು ಲಿಪಿರೂಪ ನೋಡಿ, ಕನ್ನಡವೆಂದು ತಿಳಿದುಕೊಂಡಿರಬೇಕು. ಅವರ ಆಗಮನದ ಪೂರ್ವದಲ್ಲಿ ಗೋವೆಯಲ್ಲಿ ಕನ್ನಡ ಲಿಪಿಯಲ್ಲಿಯೇ ಕನ್ನಡ ಕೊಂಕಣಿಗಳೆರಡನ್ನೂ ಬರೆಯುತ್ತಿದ್ದರು. (ವಾಲ್ವರ್‌೧೭೪, ಶೆಣೈ ೬, ೫೧, ೫೫). ಈ ವಾಸ್ತವವೇ ಕೊಂಕಣಿಯನ್ನು ‘ಕನರಿಂ’ ಎಂದು ಕರೆಯಲು ಅವಕಾಶ ಮಾಡಿಕೊಟ್ಟಿರಬೇಕು.

ಕೊಂಕಣಿ ಸ್ವತಂತ್ರ ಭಾಷೆಯೋ (In Iangue) ಅಥವಾ ಕೇವಲ ಉಪಭಾಷೆಯೋ (Ia parole) ಎಂಬುದರ ಬಗೆಗೆ ವಾದವಿವಾದಗಳು ಹಿಂದೆ ಸಾಕಷ್ಟು ಎದ್ದು, ಇಂದು ಬಿದ್ದುಹೋಗಿವೆ. ಕೊಂಕಣಿ, ಮರಾಠಿಯ ಉಪಭಾಷೆ ಎಂಬ ವಾದವನ್ನು ಚಾರಿತ್ರಿಕ ಹಾಗೂ ಭಾಷಾವೈಜ್ಞಾನಿಕ ಆಧಾರಗಳಿಂದ ಕಿತ್ತೊಗೆಯಲು ಭಗೀರಥ ಪ್ರಯತ್ನ ನಡೆಸಿದವರಲ್ಲಿ ರೆ. ಜಾನ್‌ ವಿಲ್ಸನ್‌ (೧೮೦೪- ೧೯೦೦), ಯೇ. ಸ. ಆಞೆಲೊ ಸಾವೇರಿಯುಸ್‌ ಮಾಘೇಯೀ (೧೮೪೪-೧೮೯೯)[5], ಜಾರ್ಜ್‌ ಏಬ್ರಾಹಾಂ ಗ್ರಿಯರ್ಸನ್‌ (೧೮೫೧-೧೮೪೧), ಶೆಣೈ ವಾಮನ್‌ ರಘುನಾಥ್‌ ವರ್ದೇ ವಾಲಾವಲಿಕರ್ (ಶೆಣೈ ಗೋಂಯ್‌ ಬಾಬ್‌ (೧೮೭೭-೧೯೪೬), ಸುನೀತಿಕುಮಾರ್ ಚಟರ್ಜಿ ಹಾಗೂ ಸುಮಿತ್ರ ಮಂಗೇಶ್‌ಕತ್ರೆ (೧೯೦೬-೯೮) ಅಗ್ರಗಣ್ಯರು.

ಭಾರತದ ಸಂವಿಧಾನದ ೮ನೆಯ ಅನುಸೂಚಿಯಲ್ಲಿ ಹೇಳಿರುವಂತೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಒಪ್ಪಿಕೊಂಡಿರುವಂತೆ ಕೊಂಕಣಿ ಒಂದು ಸ್ವತಂತ್ರ ರಾಷ್ಟ್ರೀಯ ಭಾಷೆ (ನೋಡಿ : Aguiar; Pai ೨೦೩). ಜನಗಣತಿಯಲ್ಲಿಯೂ ಅದಕ್ಕೆ ಪ್ರತ್ಯೇಕ ಸ್ಥಾನವಿದೆ[6].

ಕೊಂಕಣಿ ಅಲ್ಪಸಂಖ್ಯಾತರ ಭಾಷೆಯಾಗಿ ಉಳಿದಿರುವುದರಿಂದ ಹಾಗೂ ಅದರ ಅಭಿವೃದ್ಧಿಗೆ ಬೇಕಾದಷ್ಟು ಪ್ರೋತ್ಸಾಹ ಸಕಾಲದಲ್ಲಿ ದೊರಕದೆ ಇದ್ದುದರಿಂದ ಅಂತೆಯೇ ಇತರ ಸಾಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಕೆಲವು ಕೊಂಕಣಿಗರು ತಮ್ಮ ಮಾತೃಭಾಷೆಯೊಂದಿಗೆ ಮರಾಠಿ / ಇಂಗ್ಲಿಷ್‌ / ಮಲಯಾಳಂ / ಪೋರ್ಚುಗೀಸ್‌ ಭಾಷೆಯನ್ನು ಮನೆಮಾತನ್ನಾಗಿ ಅಳವಡಿಸಿಕೊಂಡಿದ್ದಾರೆ.

ಗೋವೆಯನ್ನು ಬಿಟ್ಟರೆ (Madtha, ೧೯೭೧: ೯೬) ಉಳಿದೆಡೆ, ಉದಾಹರಣಾರ್ಥವಾಗಿ ಕರ್ನಾಟಕ ಹಾಗೂ ಕೇರಳಗಳಲ್ಲಿ ಅದು ಅಲ್ಪಸಂಖ್ಯಾತರ ಭಾಷೆಯಾಗಿ ಉಳಿದರೂ ಗೋವೆ ಮತ್ತು ಕೊಚ್ಚಿಯೊಳಗೆ ಕೊಂಕಣಿ ಮಾಧ್ಯಮದ ಶಾಲೆಗಳು ನಡೆಯುತ್ತವೆ (Shanbhag, ೧೧-೧೨). ಮಂಗಳೂರಿನಲ್ಲಿ ಕೊಂಕಣಿ ಅಧ್ಯಯನ ಕೆನರಾ ಹೈಸ್ಕೂಲಿನಲ್ಲಿ ಹಾಗೂ ಸಂತ ಅಲೋಶಿಯಸ್‌ ಕೊಂಕಣಿ ಅಧ್ಯಯನ ಸಂಸ್ಥೆಯಲ್ಲಿ ನಡೆಯುತ್ತದೆ. ಮಂಗಳೂರು ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಾಗೆಯೇ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಬಿ.ಎ. ತರಗತಿಗಳಲ್ಲಿ ಐಚ್ಛಿಕವಾಗಿ ಕೊಂಕಣಿ ಅಧ್ಯಯನಕ್ಕೆ ಅವಕಾಶವಿದೆ. ರಾಜ್ಯಭಾಷೆಯೊಂದಿಗೆ ಆಯಾ ರಾಜ್ಯದ ಅಲ್ಪಸಂಖ್ಯಾತ ಭಾಷೆಗಳ ಅಭಿವೃದ್ಧಿ ಆಯಾ ಸರಕಾರಗಳ ಜವಾಬ್ದಾರಿಯಾದುದರಿಂದ ಕನ್ನಡ ವಿಶ್ವವಿದ್ಯಾಲಯದಂತಹ ಸಂಸ್ಥೆಗಳಲ್ಲಿ. ಕೊಂಕಣಿ ಮತ್ತು ತುಳು ಭಾಷೆಗಳ ಅಧ್ಯಯನ, ಅಧ್ಯಾಪನ ಹಾಗೂ ಸಂಶೋಧನೆಗಳಿಗೆ ಸರಿಯಾದ ಸ್ಥಾನಮಾನ ಕೊಡುವುದು ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಗತ್ಯ.

ಕೊಂಕಣಿಯಲ್ಲಿ ಲಿಖಿತ ಹಾಗೂ ವಾಚಕ ಸಾಹಿತ್ಯ ಧಾರಳವಾಗಿದೆ (ಮಾಡ್ತ ೧೯೭೨ :೩೩೯ -೪೧, Shanbhag, ವಾಲ್ಡರ್‌,೧೭೨ -೨೧೨, ಸಲ್ದಾಂಞ). ಕೊಂಕಣಿಗರು ರಾಜಕೀಯವಾಗಿ ಹಂಚಿ ಬೇರೆ ಬೇರೆ ರಾಜ್ಯಗಳಲ್ಲಿರುವುದರಿಂದ ಅವು ಅಲ್ಲಲ್ಲಿಯ ಪರಿಸರಕ್ಕನುಗುಣವಾಗಿ ಉಪಭಾಷೆಗಳಾಗಿಯೇ ಬೆಳೆದಿವೆ, ಸ್ಥಳೀಯ ಲಿಪಿಗಳನ್ನು ಸಾಹಿತ್ಯಕ್ಕಾಗಿ ಬಳಸಿಕೊಂಡಿವೆ. ಇದರಿಂದಾಗಿ ಪ್ರಮಾಣ ಸಾಹಿತ್ಯದ ಅಭಿವೃದ್ಧಿಗೆ ಕೆಲವು ಮಟ್ಟಿಗೆ ತೊಂದರೆ ಇದೆ. ಗೋವೆಯಲ್ಲಿ ಕೊಂಕಣಿಯನ್ನು ಹಿಂದೆ ನಾಗರೀ ಹಾಗೂ ಕನ್ನಡ ಲಿಪಿಗಳಲ್ಲಿ ಬರೆಯುತ್ತಿದ್ದರೆ (Shanbhag, ೨೮), ಈಗ ರೋಮನ್ ಹಾಗೂ ನಾಗರಿ ಲಿಪಿಗಳಲ್ಲಿಯೂ ಬರೆಯುತ್ತಾರೆ. ಕರ್ನಾಟಕದಲ್ಲಿ ಕನ್ನಡ ಲಿಪಿಯೂ, ಕೇರಳದಲ್ಲಿ ಮಲಯಾಳಂ ಲಿಪಿಯಲ್ಲಿಯೂ, ನವಾಯತರು ಅರಬ್ಬಿ ಲಿಪಿಯನ್ನೂ ಕೊಂಕಣಿಗೆ ಬಳಸಿಕೊಂಡಿದ್ದಾರೆ. ಆದರೂ ಈಗ ಅಧಿಕೃತ ಲಿಪಿ, ನಾಗರಿ (ಸಂಸ್ಕೃತ) ಎಂದು ಒಪ್ಪಿಕೊಳ್ಳಲಾಗಿದೆ. ಆದರೆ ಸಾಹಿತ್ಯಕ್ಕೆ ಲಿಪಿ ಒಂದು ಬಾಹ್ಯರೂಪ ಅಷ್ಟೇ.

೧.೩. ತುಳು -ಕೊಂಕಣಿ ಭಾಷಾ ಸ್ವೀಕರಣ

ಕರ್ನಾಟಕದಲ್ಲಿ ತುಳು ಮೊದಲ ಅತಿಥೇಯ ಭಾಷೆಯಾದರೆ, ಕೊಂಕಣಿ ಅತಿಥಿ ಬಾಶೆ. ಈ ಕಾರಣದಿಂದಾಗಿಯೇ ತುಳು, ಶಬ್ಧಸ್ವೀಕರಣ ದೃಷ್ಟಿಯಿಂದ, ದಾನಿ ಭಾಷೆಯಾಗಿದೆ. ಈ ಸ್ವೀಕರಣಗಳಲ್ಲಿ ಹಲವಾರು ಧ್ವನಿಮಾತ್ಮಕ ಹಾಗೂ ವ್ಯಾಕರಣಾತ್ಮಕ ಬದಲಾವಣೆಗಳು ಉಂಟಾಗಿ ಕೊಂಕಣಿ – ಸಂಸ್ಕಾರವನ್ನು ಅವು ಪಡೆದುಕೊಂಡಿವೆ. ಈ ಸ್ವೀಕರಣಗಳು ತುಳು- ಕೊಂಕಣಿಗಳ ಭಾಷಿಕ ಸಂಬಂಧವನ್ನು ತೋರ್ಪಡಿಸುತ್ತವೆ.

೧.೩.೧. ಧ್ವನ್ಮಾತ್ಮಕ ಪ್ರಭಾವ

ಇತರ ದ್ರಾವಿಡ ಭಾಷೆಗಳಂತೆ ತುಳುವಿನಲ್ಲಿರುವ ಪದಾದಿಯಲ್ಲಿಯ ಪೂರ್ವ ಸ್ವರಗಳ ತಾಲವ್ಯೀಕರಣ ಮತ್ತು ಪಶ್ಚಸ್ವರಗಳ ಓಷ್ಠೀಕರಣಗಳನ್ನು ಕರ್ನಾಟಕದ ಕೊಂಕಣಿಯಲ್ಲಿಯೂ ಕಾಣುತ್ತೇವೆ.

ತಾಲವ್ಯೀಕರಣ

೧. (YelubU) << ಎಲಬು >> (DED ೭-೧೪) ‘bone’
೧. (Yekwot) << ಎಕ್ವೊಟ್ >> ‘unity’ (CDIA ೨೪೮೦)
೨. (Yelenchi) << ಎಳಂಚಿ >> (DED ೮೫೬) ‘Iander’
೨. (Yekpavti) >> < ಏಕ್‌ಪಾವ್ಟಿಂ ‘once’ (CDIA ೨೫೩೮)

ಓಷ್ಠೀಕರಣ (Lip – rounding)

೩. (uoḷḷe) << ಒಳ್ಳೆ >>
೩. (uōːk) << ವೋಂಕ್‌>> ‘vomit’
೪. (uoñjl) << ಒಂಜಿ >> (DED ೮೩೪)
೪. (uoːḍil) << ವ್ಹಡಿಲ್‌>> ‘superior’ (n)

೧.೩.೨. ಪದಸ್ವೀಕರಣ

ಕೊಂಕಣಿ ತುಳುವಿನಿಂದ ಪದಸ್ವೀಕರಣ ಮಾಡಿಕೊಳ್ಳುವಾಗ ಕೆಲವನ್ನು ತತ್ಸಮಗಳಾಗಿ ಕೆಲವನ್ನು ತದ್ಭವಗಳನ್ನಾಗಿ ಸ್ವೀಕರಿಸಿಕೊಂಡಿದೆ.

೧) ತತ್ಸಮಗಳು

೫. ಕುಮ್ಬು << ಕುಂಬು >> (DED ೧೪೬೧) ‘dẹcayed’
೬. ಗೊಡ್ಡು (DED ೧೭೩೭) ‘barren’
೭. ಗೋಣಿ (DED ೧೮೩೬) ‘gunny bag’
೮. ಜಲ್ಲಿ (DED ೧೯೬೬) ‘road mettle’
೯. ತುದಿ (DED ೨೭೧೬) ‘tip’
೧೦. ದೊಡ್ಡಿ (DED ೨೮೦೯) ‘stable for stray cattle’
೧೧. ದೊಮ್ಬಿ << ದೊಂಬಿ >> (DED ೨೮೯೨) ‘riot’
೧೨. ಮೊಡ್ಡಿ (DED ೩೮೨೭) ‘sediment, dregs’
೧೩. ಮುಣ್ಡು << ಮುಣ್ಡು >> (DED ೪೦೫೨) ‘short undertied clothware’

ಆ) ತದ್ಭವಗಳು

ತುಳು ಪದಗಳು ತದ್ಭವೀಕರಣಗೊಂಡಾಗ ಹಲವಾರು ವ್ಯತ್ಯಾಸಗಳು ಉಂಟಾಗಿವೆ. ಅವುಗಳಲ್ಲಿ ಕೆಲವನ್ನು ಪ್ರಸ್ತುತ ಗಮನಿಸಲಾಗಿದೆ.

೧. ಮಧ್ವಸ್ವರ ಲೋಪ

# cvc (c) vcv ರೂಪದ ತುಳು ಪದಗಳು ಕೊಂಕಣಿಯಲ್ಲಿ # cvccv ಯಾಗಿ ವ್ಯತ್ಯಾಸಗೊಳ್ಳುತ್ತವೆ.

ತುಳು

೧೪. ಗುರುಗುನ್ಜಿ << ಗುರುಗುಂಜಿ >> (DED ೧೫೪೯)

ಕೊಂಕಣಿ
> ಗುರ್ಗುನ್ಜಿ << ಗುರುಗುಂಜಿ >> ‘crap’s eye’ / ‘seed of Arbus precatorious’

೧೫. ತಕ್ಕಡಿ (DED ೨೪೩೭) > ತಕ್ಡಿ / takḍi / ‘a balance’
೧೬. ತಕ್ಕಲಿ (DED ೫೭೧೭) > ತ̣ಕ್ಲಿ / takli / ‘spindle’
೧೭. ತಿರಗಣೆ (DED ೨೬೫೫) >ತಿ̣ರ್ಗಣೆಂ / tirgane / ‘revolving lid’

೨. ಪದಾಂತ್ಯ ಸ್ವರೂಪ

ತುಳು ಪದಾಂತ್ಯದ / ಇ ಎ ಉ ಅ / ಸ್ವರಗಳು ಕೊಂಕಣಿಯಲ್ಲಿ ಸಾಮಾನ್ಯವಾಗಿ ಲೋಪಗೊಳ್ಳುತ್ತವೆ. ಉದಾಹರಣೆಗೆ:

ಇಕಾರ ಲೋಪ
೧೮. ಅಙ್ಗಡಿ << ಅಂಗಡಿ >> (DED ೩೭) > ಅಂಗಡ್‌ / āgeḍ / ‘shop’
೧೯. ಓಣಿ (DED ೮೯೧) > ಓಣ್‌’lane, alley’
೨೦. ಕೂಲಿ (DED ೧೫೮೬) > ಕೂಲ್‌’wages’
೨೧. ಗೇಣಿ (DED ೧೬೬೪) > ಗೇಣ್‌, rent, contract’
೨೨. ಮೂರಿ (DED ೪೦೦೦) > ಮೂರ್‌’bad smell’

ಎಕಾರ ಲೋಪ
೨೩.
ಒಪ್ಪಿಗೆ (DED ೭೮೧) > ಒಪ್ಪಿಗ್‌’consent’
೨೪. ಬೋಣ್ಟೆ << ಬೋಂಟೆ >> (DED ೪೫೪೭) > ಬೋನ್ಟ್‌<< ಬೋಂಟ್‌>> ‘hunting’

ಉಕಾರ ಲೋಪ
೨೫.
ತೋಡು (DED ೨೯೨೧) > ತೋಡ್‌ / ‘brook’

ಅಕಾರ ಲೋಪ
೨೬.
ಕಟ್ಟೋಣ (DED ೯೬೧) > ಕಟ್ಟೋಣ್‌ / ‘building’
೨೭. ಕಮ್‌ಬ್ಳ << ಕಂಬ್ಳ >> (DED ೧೦೩೭) > ಕಮ್‌ಬೋಳ್‌<< ಕಾಂಬೊಳ್‌>> ‘kāboḷ’ / buffalo race
೨೮. ತೂಕ (DED ೨೭೭೭) > ತೂಕ್‌ ‘weight’
೨೯. ಮಗ್ಗ (DED ೩೭೭೫) > ಮಾಗ್‌ ‘loom’

೩. ಸ್ವರ ವೃತ್ತೀಕರಣ

ಎಕಾರಾಂತ ತುಳು ಪದಗಳು ಪುಲ್ಲಿಂಗಿಗಳಾಗಿ ಕೊಂಕಣಿ ಸ್ವೀಕರಣಗಳಾದರೆ ಅವು ಒ ಕಾರಗೊಳ್ಳುತ್ತವೆ. ಉದಾಹರಣೆ:

೩೦. ದಡ್ಡೆ (DED ೧೯೧೦) > ದೊಡ್ಡೊ / daḍḍo / ‘stupid fellow’
೩೧. ದೊಣ್ಣೆ (DED ೨೮೮೩) > ದೊಣ್ಣೊ / doṇṇo / ‘cudglle’
೩೨. ಮೂಲೆ (DED ೪೧೪೦) > ಮೂಲೊ / mulo / ‘corner’
೩೩. ಶೀಗೆ (DED ೨೧೪೭) > ಸಿಗೊ ‘sigo / ‘soap pod wattle’

೪. ಸ್ವರೋನ್ನತೀಕರಣ

ತುಳು ಪದಗಳಲ್ಲಿ ಆದ್ಯಕ್ಷರೀಯ ಅಕಾರದ ಯಾವುದೇ ಮುಂದಿನ ಅಕ್ಷರದಲ್ಲಿ ಪೂರ್ವೋನ್ನತ ಸ್ವರವಿದ್ದರೆ ಆ ಅಕಾರ, ಅ / ¶ / ಕಾರಗೊಳ್ಳುತ್ತದೆ.

೩೪. ಅಡ್ಡಿ (DED ೭೩) > ಅ̣ಡ್ಡಿ / aḍḍi / ‘obstacle’
೩೫. ಕರಿ (DED ೧೯೭೩) >ಕ̣ರಿ / keri / ‘soot’
೩೬. ತಟ್ಟಿ (DED ೨೪೦೪) >ತ̣ಟ್ಟಿ / teṭṭi / ‘scrren or blind made of split bamboos, plam leaves etc.’
೩೭. ಸರಪಳಿ (DED ೧೯೪೮) >ಸ̣ರ್ಪೋಳಿ / serpoḷi / ‘chain of any metal’

೫. ಸ್ವರಾವನತೀಕರಣ

ತುಳು ಪದಗಳು ಕೊಂಕಣಿಯಲ್ಲಿ ಸೇರಿಕೊಂಡಾಗ, ಕೊಂಕಣಿಯ ಒ / ɔ / , ಅ / a ಕಾರಗಳ ಹಿಂದಿನ ಸ್ವರಗಳನ್ನು ಅವನತೀಕರಿಸುತ್ತವೆ.
೩೮. ತೆಙ್ಕು << ತೆಂಕು>> (DED ೨೮೩೯) > ತ್ಯೆನ್ಕ / tenka / ‘south’
೩೯. ಮೆಚ್ಚು (DED ೩೮೬೫) > ಮ್ಯಚ್ವೊ / mecwɔ / ‘be pleased’
೪೦. ಸೋಗೆ (DED ೨೩೪೮) > ಸೊ ಗೊ sogoɔ / ‘leaf of palms’

೬. ಅನಘರ್ಷೀಕರಣ

ತುಳು ಪದಗಳು ಕೊಂಕಣಿಯಲ್ಲಿ ಸೇರಿಕೊಂಡಾಗ ಅಲ್ಲಿಯ ತಾಲವ್ಯ ವ್ಯಂಜನಗಳಿಗೆ ಮಧ್ಯ / ಪಶ್ಚ ಸ್ವರಗಳು ಪರವಾದರ ಆ ತಾಲವ್ಯಗಳು ಅನಘರ್ಷವಾಗುತ್ತವೆ.

೪೧. ಕಜೆ (DED?) > ಕೊಜೊ̣̣̣ ̣ / kɔjɔ [Kɔdz ɔ ‘unpolished rice’
೪೧. ನೇಜಿ (DED ೩೩೮೦) > ನೇಜ್‌̣ ̣ / ne:j / (ne:dz) ’nursling of paddy’
೪೨. ಪೇಚಾಡು (DED ೩೬೨೮) > ಪ್ಯೆಚಡ್‌̣ ̣ +.. pecad / (petsad) ‘strive’

೭. ಅದ್ವಿತ್ವೀಕರಣ

ತುಳುವಿನಲ್ಲಿ ದ್ವಿತ್ವಗಳು ಕೊಂಕಣಿಯಲ್ಲಿ ಕೆಲವೊಮ್ಮೆ ಅದ್ವಿತ್ವೀಕರಣಗೊಂಡರೆ ಕೆಲವೊಮ್ಮೆ ದ್ವಿತ್ವಗಳಾಗಿಯೇ ಉಳಿಯುತ್ತವೆ. ಉದಾಹರಣೆಗಳು:

ಅ) ಅದ್ವಿತೀಕರಣಕ್ಕೆ
೪೪.
ಗಟ್ಟಿ (DED ೯೬೨) > ಗಟ್‌ / get / ‘firm / hard’
೪೫. ಗುಟ್ಟ (DED ೧೨೯೨) > ಗುಟ್‌ / ‘a secret’
೪೬. ಮುದ್ದ್ಯೆ (DED ೪೦೬೫) > ಮುದೊ / mud / ‘ɔlump’, ‘unshaped mass’

ಆ) ದ್ವಿತ್ವಕ್ಕೆ
೪೭. ಮುಟ್ಟಿ (DED ೪೦೪೦) > ಮುಟ್ಟಿ / ‘small kind of earthen pot equal to a pint, by which toddy is sold to customers’
೪೮. ಕುಮ್ಟು (DED ೧೪೫೧) > ಕುಮ್ಟು << ಕುಂಬು >> ‘dẹcayed’
೪೯. ಗೊಡ್ಡು (DED ೧೭೩೭) > ಗೊಡ್ಡು ‘barren’
೫೦. ಜಲ್ಲಿ (DED ೧೯೬೬) ‘road mettle’
೫೧. ದೊಡ್ಡಿ (DED ೨೮೦೮) ‘stable for stray cattle’
೫೨. ದೊಮ್ಬಿ << ದೊಂಬಿ >> (DED ೨೮೯೨) ‘riot’
೫೩. ಮೊಡ್ಡಿ (DED ೩೮೨೭) ‘sediment, dregs’
೫೪. ಮುಣ್ಡು << ಮುಣ್ಡು >> (DED ೪೦೫೨) > ಮುಣ್ಡು ‘short undertied clothware’

 

[1] ತುಳು -ಕೊಂಕಣಿಗಳ ಸಂಬಂಧ ಚಾರಿತ್ರಿಕವಾಗಿ ಕ್ರಿ. ಶ. ೧೩ನೆಯ ಶತಮಾನದಷ್ಟು ಪ್ರಾಚೀನ (ಭಟ್ ೧೯೬೩ :೭೨; Pereira ೧) ಅಥವಾ ಅದಕ್ಕೂ ಹಿಂದಿನದು (ಅದೇ, ೨೫೯). ತಮಿಳು ಸಂಗಂ ಸಾಹಿತ್ಯ (ಕ್ರಿ, ಪೂ. ೧೦೦-೩೦೦) ದಲ್ಲಿ ‘ತುಳುನಾಟ್‌’ ಎಂಬ ಉಲ್ಲೇಖನವನ್ನು ಗಮನಿಸಬೇಕು (ಅದೇ) ತುಳುನಾಡನ್ನು ಕುರಿತ ಇತರ ಚಾರಿತ್ರಿಕ ದಾಖಲೆಗಳಿಗೆ ನೋಡಿ ಅದೇ ” ೨೫೯ -೭೫.

[2] ಕರಾವಳಿ ಕರ್ನಾಟಕ ಪುರಾತನ ಕಾಲದಿಂದಲೂ ಸುಪ್ರಸಿದ್ಧವಾದ ವಾಣಿಜ್ಯ ಕೇಂದ್ರ ಹಾಗೂ ಅನೇಕ ಸಂಸ್ಕೃತಿಗಳ ಸಂಗಮ ಸ್ಥಾನ. ಅರಬ್ಬಿ ಸಮುದ್ರದ ಮಾರ್ಗವಾಗಿ ಸಿಂಧ್‌, ಬಲೂಚಿಸ್ಥಾನ, ಪರ್ಷಿಯಾ, ಅರೇಬಿಯಾ ಮತ್ತು ಆಫ್ರಿಕೆಯ ಕರಾವಳಿಗಳೊಂದಿಗೆ ಅಂತೆಯೇ ಗ್ರೀಸಿನ ಜೊತೆಗೂ ಅದು ಸಂಪರ್ಕ ವನ್ನು ಪಡೆದಿತ್ತು. ತತ್ಫಲವಾಗಿ ಅಲ್ಲಿಯ ಜನರ ಸಂಸ್ಕೃತಿ ವೃಷ್ಟಿಯಿಂದ ಸಮಷ್ಟಿಯತ್ತ ಹೋಗಿರುವುದನ್ನು ಅಲ್ಲಿಯ ಜನರ ಆಚಾರವಿಚಾರ ಹಾಗೂ ಸಾಮಾಜಿಕ ಪ್ರಕ್ರಿಯೆಗಳಲ್ಲಿ ಗುರುತಿಸಬಹುದು.

[3] ಪ್ರಥಮ ಭಾಷೆಯನ್ನು ಕುರಿತು ನೋಡಿ: ಮಾಡ್ತ (೧೯೭೬)

[4] ನೋಡಿ: Bhat (೧೯೬೬, ೧೯೬೭,೧೯೬೮), Rao (೧೯೬೬), Upadhyaya (೧೯೬೬), Subrahmanyam (೧೯೬೮ &೧೯೭೧), Madtha (೧೯೭೧a).

[5] ಮಾಫೇಯೇ ಅವರು ಕೊಂಕಣಿ ವ್ಯಾಕರಣ ಮತ್ತು ಕೋಶಗಳನ್ನು ಬರೆದಿದ್ದಾರಲ್ಲದೆ, ತುಳು, ಕನ್ನಡ, ಮಲಯಾಳಂ, ತಮಿಳು ಮತ್ತು ಸಂಸ್ಕೃತಗಳ ಪರಿಚಯವನ್ನು ಸಾಕಷ್ಟು ಆಳವಾಗಿ ಮಾಡಿಕೊಂಡಿದ್ದರು. ತುಳು ಕೋಶವನ್ನೂ ತುಳು ಇತಿಹಾಸವನ್ನೂ ಬರೆಯಲಾರಂಭಿಸಿದ್ದರು. ಸ್ಕೆಂಟ್‌ ಎಲೋಶಿಯಸ್‌ ಶಿಕ್ಷಣ ಸಂಸ್ಥೆಗಳ ರೆಕ್ಟರ್‌ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ (೧೮೯೧-೧೮೯೭) ಸೇವೆ ಸಲ್ಲಿಸಿದ್ದಾರೆ. (ನೋಡಿ : Pereira ೫-೨೩).

[6] ಯು. ಎನ್‌. ಒ. ದಲ್ಲಿ ಪ್ರಥಮವಾಗಿ ಕೊಂಕಣಿಯಲ್ಲಿ ಭಾಷಣ ಮಾಡಿದ ಕೀರ್ತಿ ಯೇ. ಸ. ಜೆರಮ್‌ ಡಿ ‘ಸೋಜ (Jesuit Jerome D’ souza) ಅವರಿಗೆ ಸಲ್ಲುತ್ತದೆ. ಇವರು ಭಾರತದ ಪ್ರತಿನಿಧಿಯಾಗಿ ೧೯೬೭ರಲ್ಲಿ ಆ ಭಾಷಣವನ್ನು ಮಾಡಿದ್ದರು (Shanbhag ೧೧) . ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಎಂಬ ಊರಿನವರು.