ತುಳು ಮತ್ತು ಕರಾಡ ಒಂದೇ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಭಾಷೆಗಳು. ತುಳು ಒಂದು ಪ್ರಾದೇಶಿಕ ಭಾಷೆಯಾಗಿ ಎಲ್ಲಾ ವರ್ಗ – ವರ್ಣಗಳಲ್ಲೂ ಪ್ರಚಲಿತವಿದ್ದರೆ ಕರಾಡ ಒಂದು ಉಪ ಭಾಷೆಯಾಗಿ ನಿರ್ದಿಷ್ಟ ಬ್ರಾಹ್ಮಣ ವರ್ಗದಲ್ಲಿ ಮಾತ್ರ ಪ್ರಚಲಿತವಿದೆ. ಆದ್ದರಿಂದ ತುಳುವಿಗಿರುವ ವಿಶಾಲ ವ್ಯಾಪ್ತಿಯಾಗಲಿ, ಹಲವು ಕ್ಷೇತ್ರಗಳ ಸ್ಪರ್ಶವಾಗಲಿ ಕರಾಡ ಭಾಷೆಗೆ ಇಲ್ಲ.

ಕರಾಡ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಒಂದು ಪ್ರದೇಶ. ಹಿಂದೆ ಇದು ಹಲವು ಕಾರಣಗಳಿಗೆ ಪ್ರಸಿದ್ಧವಾಗಿತ್ತು. ಇಕ್ಕೇರಿಯ ಶಿವಪ್ಪನಾಯಕನ ಕಾಲದಲ್ಲಿ ಆಡಳಿತದ ಕಾರಣ ಕಾಸರಗೋಡು ಹಾಗೂ ಪರಿಸರ ಪ್ರದೇಶಗಳಿಗೆ ವಲಸೆಯಾಗಿ – ರಾಮಕ್ಷತ್ರಿಯರೊಂದಿಗೆ ಕರಾಡದ ಬ್ರಾಹ್ಮಣ ಪಂಗಡವೂ ಬಂದಿರಬೇಕೆನ್ನುವುದಕ್ಕೆ ದಾಖಲೆಗಳಿವೆ. ಹೀಗೆ ಬಂದ ಬ್ರಾಹ್ಮಣ ಪಂಗಡವನ್ನು ಇಲ್ಲಿ ಕರಾಡ ಬ್ರಾಹ್ಮಣ ಎಂದು ಗುರುತಿಸಲಾಯಿತು. ಇವರು ಮಾತನಾಡುವ ಮರಾಠಿ ಭಾಷೆಯ ಉಪಭಾಷೆಯನ್ನು ಕರಾಡ ಭಾಷೆ ಎಂದು ಕರೆಯಲಾಯಿತು.

ಸುಮಾರು ೫೦೦ ವರ್ಷಗಳಿಂದ ಕರಾಡರು ತುಳು ಭಾಷಾ ಪರಿಸರದಲ್ಲಿ ವಾಸಿಸುತ್ತಿದ್ದಾರೆ. ಈ ಕಾಲಘಟ್ಟದಲ್ಲಿ ಕರಾಡರ ಸಂಸ್ಕೃತಿಯ ಮೇಲೂ ಭಾಷೆಯ ಮೇಲೂ ತುಳು ಸಾಕಷ್ಟು ಪ್ರಭಾವ ಬೀರಿದೆ. ಯಾವಾಗಲೂ ಹೆಚ್ಚು ವ್ಯಾಪ್ತಿ ಮತ್ತು ಪ್ರಸರಣಗಳುಳ್ಳ ಭಾಷೆ ಕಡಿಮೆ ವ್ಯಾಪ್ತಿಯುಳ್ಳ ತನ್ನ ಪರಿಸರದ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ ಕಡಿಮೆ ವ್ಯಾಪ್ತಿಯುಳ್ಳ ಭಾಷೆಯಿಂದ ಪ್ರಭಾವಿತವಾಗುವುದು ವಿರಳ. ತುಳು ಭಾಷೆ-ಸಂಸ್ಕೃತಿಗಳ ಮೇಲೆ ಕರಾಡ ಭಾಷೆ-ಸಂಸ್ಕೃತಿಗಳು ಬೀರಿದ ಪ್ರಭಾವ ಗುರುತಿಸುವಷ್ಟಿಲ್ಲ. ಕರಾಡದ ಮೇಲೆ ತುಳುವಿನ ಪ್ರಭಾವವನ್ನು ಮಾತ್ರ ಟಿಪ್ಪಣಿಗಳ ರೂಪದಲ್ಲಿ ಗುರುತಿಸಿ ದಾಖಲಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

೧. ತುಳು ಸಂಸ್ಕೃತಿಯ ಜೀವಾಳವಾಗಿರುವ ಭೂತಾರಾಧನೆಯನ್ನು ಕರಾಡ ಸಂಸ್ಕೃತಿ ಸ್ವೀಕರಿಸಿಕೊಂಡಿದೆ. ಕೊಂಗುರು, ಬಾಯರು, ಪಡ್ರೆ, ಅಗಲ್ಪಾಡಿ, ನಿಡ್ಪಳ್ಳಿ – ಮುಂತಾದೆಡೆ ಕಾಲನಿ (ವಸತಿ)ಗಳಾಗಿ ನೆಲೆನಿಂತ ಕರಾಡರು ಆ ಪ್ರದೇಶದ ಭೂತಾರಾಧನೆಯಲ್ಲಿ ತುಳುವರಂತೆಯೇ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಪಡ್ರೆಯ ಪ್ರಖ್ಯಾತ ಜಟಾಧಾರಿ ದೈವ ಕರಾಡರ ದೈವವಾಗಿಯೇ ಪ್ರಸಿದ್ಧವಾಗಿದೆ. ಇದರ ‘ಮಹಿಮೆ’ಯನ್ನು ಕರಾಡರೇ ನಡೆಸುತ್ತಾರೆ. ಗುಳಿಗನ ಕೋಲ, ಕಲಯ ಇಡುವುದು – ಮುಂತಾಗಿ ಇತರ ತುಳುನಾಡಿನ ವಿಶಿಷ್ಟ ಆರಾಧನೆಗಳು ಕರಾಡರ ಮನೆಗಳಲ್ಲೂ ನಡೆಯುತ್ತವೆ. ವಿಷು, ಬಲಿಯೇಂದ್ರ ಪೂಜೆ, ಕೆಡ್ಡೆಸೆ – ಇತ್ಯಾದಿ ಸ್ಥಳೀಯ ಪಾರಂಪರಿಕ ಆಚರಣೆಗಳನ್ನು ತುಳುವರಂತಯೇ ಕರಾಡರೂ ಆಚರಿಸುತ್ತಾರೆ. ತುಳುನಾಡಿನ ಸಂಸ್ಕೃತಿಯಲ್ಲಿ ಕರಾಡರು ಸಂಪೂರ್ಣ ಬೆರೆತು ಹೋಗಿರುವುದು ಕಂಡುಬರುತ್ತದೆ.

೨. ಆಹಾರ ಪದ್ಧತಿಯಲ್ಲೂ ಪಾಕಪದ್ಧತಿಯಲ್ಲೂ ಕರಾಡರು ತುಳುವರಿಂದ ಪ್ರಭಾವಿತರಾಗಿದ್ದಾರೆ. ಮಲಯಾಳೀ ಮೂಲದ ವೇಳ್‌ಶ್ಯಯರಿ, ಕಾಳಂ, ವಿರಿಶಗಳಂತಯೇ ತುಳುನಾಡಿನ ಕೊದ್ದೆಲ್‌, ಪಸೆಂಗರಿ, ಪುಂಡಿ – ಮುಂತಾದವು ಕರಾಡರ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಕೊಂಡಿವೆ.

. ಕಾಸರಗೋಡಿಗೆ ವಲಸೆ ಬಂದ ಮೇಲೆ ಕಾನಿಗಳಾಗಿ ನೆಲೆನಿಂತು ಇಲ್ಲಿನ ಕೃಷಿ ಪ್ರಧಾನ ಸಂಸ್ಕೃತಿಯಲ್ಲಿ, ಬೆರೆತ ಕರಾಡರು ಅಡಿಕೆ, ತೆಂಗು, ಭತ್ತ – ಇತ್ಯಾದಿ ಬೆಳೆಯತೊಡಗಿದರು. ಕೂಲಿ ಕೆಲಸಕ್ಕಾಗಿ ಸ್ಥಳೀಯ ತುಳುವರನ್ನೂ, ತಮ್ಮೊಂದಿಗೆ ವಲಸೆ ಬಂದ ಮರಾಠಿ ನಾಯ್ಕರನ್ನೂ ಬಳಸಿಕೊಂಡರು. ಇದರ ಪರಿಣಾಮವಾಗಿ ಅಧ್ಯಯನ, ಅಧ್ಯಾಪನ, ಆಡಳಿತ ವ್ಯವಹಾರಗಳನ್ನು ಬಿಟ್ಟರೆ ತುಳು ಭಾಷೆ ಕರಾಡರ ಮುಖ್ಯ ವ್ಯಾವಹಾರಿಕ ಭಾಷೆಯಾಗಿ ರೂಪುಗೊಂಡಿತು. ಬರವಣಿಗೆಗೂ, ಇತರ ಬ್ರಾಹ್ಮಣರೊಂದಿಗಿನ ವ್ಯವಹಾರಕ್ಕೂ ಕನ್ನಡ, ಮನೆಬಳಕೆ ಹಾಗೂ ಸ್ವಜಾತಿಯವರೊಂದಿಗಿನ ವ್ಯವಹಾರಕ್ಕಾಗಿ ಕರಾಡ, ಕೃಷಿ ಹಾಗೂ ಇತರ ವ್ಯವಹಾರಗಳಿಗಾಗಿ ತುಳು ಎಂಬ ಅಘೋಷಿತ ನಿಯಮ ನೆಲೆ ನಿಂತಿತು. ಈ ಎಲ್ಲದರ ಪರಿಣಾಮವೆಂದರೆ ಕರಾಡ ಭಾಷೆಯ ಮೇಲೆ ಕನ್ನಡ-ತುಳುಗಳ ಪ್ರಭಾವ.

ಕೃಷಿ, ಸಾಂಸ್ಕೃತಿಕ ಹಾಗೂ ಆಡಳಿತಾತ್ಮಕ ನೆಲೆಗಳಲ್ಲಿ ಕರಾಡ ಭಾಷೆ ತುಳುವಿನಿಂದ ಪ್ರಭಾವಿತವಾಗಿದೆ. ಇದನ್ನು ವ್ಯಾಕರಣ ವಿವರಗಳಲ್ಲೂ ಶಬ್ದಕೋಶದಲ್ಲಿ ಗುರುತಿಸಬಹುದು.

ಈಗ ಲಭ್ಯವಿರುವ ಕರಾಡ ಉಪ ಭಾಷಾ ಶಬ್ದಕೋಶದಲ್ಲಿ ಅರ್ಧಕ್ಕಿಂತ ಹೆಚ್ಚು ದ್ರಾವಿಡ ಶಬ್ದಗಳೇ ತುಂಬಿಕೊಂಡಿವೆ. ಕನ್ನಡದಿಂದ ತತ್ಸಮಗಳಾಗಿ ಅಥವಾ ತದ್ಭವಗಳಾಗಿ ಬಂದ ಶಬ್ದಗಳೇ ಅಧಿಕ ಸಂಖ್ಯೆಯಲ್ಲಿದ್ದು, ತುಳು ಎರಡನೇ ಸ್ಥಾನದಲ್ಲೂ ಮಲಯಾಳ ಮೂರನೇ ಸ್ಥಾನದಲ್ಲೂ ನಿಲ್ಲುತ್ತದೆ.

ತುಳುವಿನಿಂದ ಕರಾಡ ಭಾಷೆಗೆ ಎರವಲಾದ ಅಧಿಕ ಸಂಖ್ಯೆಯ ಶಬ್ದಗಳೂ ಕೃಷಿಯೊಂದಿಗೆ ಸಂಬಂಧ ಹೊಂದಿವೆ. ಕೃಷಿ ಉಪಕರಣ, ಕೃಷಿ ಪಾರಿಭಾಷಿಕ ಶಬ್ದಗಳು, ಸಸ್ಯಗಳ ಹಸೆರು – ಇತ್ಯಾದಿ – ಉದಾಹರಣೆ :

ಕೊಳಕೆ ಭತ್ತದ ಮೂರನೇ ಬೆಳೆ
ಪುಣಿ ಗದ್ದೆಯ ಬದು
ಬೊಂಡೆ ಸೀಯಾಳ
ಪಾದೆ, ಪಾರೆ ಕಲ್ಲುಬಂಡೆ
ಮುಂಗೊ ಮೊಳಕೆ
ಎಗೆ ಗಿಡಗಳಿಗೆ ಬರುವ ಗೆಲ್ಲು
ಮಾತೊ ಎತ್ತುಗಳನ್ನು ಹೂಡುವಾಗ ಎಡಬದಿಗೆ ನಿಲ್ಲುವ ಎತ್ತು
ಜಾತಿ ತೇಗದ ಮರ
ಬಣಪ್ಪು ಮತ್ತಿ ಮರ
ಮಡ್ಡಿ ಹಸುಗಳಿಗಾಗಿ ಬೇಯಿಸಿದ ಹಲಸಿನಕಾಯಿ, ಹುರುಳಿ, ಅಕ್ಕಿ ಇತ್ಯಾದಿ
ಪರೆ ಅಳತೆ ಮಾನಗಳು
ಕಳಸಿ ಅಳತೆಯ ಪಾತ್ರೆ, ನೀರು ಕೊಡ

ಇವು ತತ್ಸಮಗಳಾಗಿ ಎರವಲುಗೊಂಡ ಶಬ್ದಗಳು, ತದ್ಭವಗಳಾಗಿ ಎರವಲಾದ ಶಬ್ದಗಳೂ ಸಾಕಷ್ಟಿವೆ. ಉದಾಹರಣೆಗೆ –

ಕಳಂಗ < ಕೆರಂಗ್‌  ಗೆಣಸು
ಕೂಡ್ದು < ಕುಡು  ಹುರುಳಿ
ಕೊಂಬೊ < ಕೊಂಬ  ಆನೆಕತ್ತಾಳೆ ಮರ
ನಂಗರು < ನಾಯರ್‌  ನೇಗಿಲು

ಕೃಷಿಯೇತರವಾಗಿ ತುಳುವಿನಿಂದ ಎರವಲಾದ ಶಬ್ದಗಳು ತತ್ಸಮಕ್ಕೆ ಉದಾಹರಣೆ

ಪರಪ್ಪು  ತೆವಳು
ಕುಡಾರಿ  ಕೊಡಲಿ
ಕರು  ಮುಳಿಮಾಡಿಗೆ ಬಳಸುವ ಬಿದಿರಿನ ಪಕ್ಕಾಸು
ಮೂಟ್ಯ  ಸುತ್ತಿಗೆ

ತದ್ಭವಗೊಂಡ ಶಬ್ದಗಳಿಗೆ ಉದಾಹರಣೆ :

ಅಚ್ಛಿಂಗಿ < ಸಿಂಗಿ  ಸೀನು
ಆಯಿಂತ್ಸಿಳ < ಅಳಂಚ್‌  ತುಳುಕು
ಶೆನ್ಪುರು < ಸೇನೆರ್‌  ಶಾನುಬೋಗ
ಸುನ್ನಾಳ < ಸುಣ್ಣಾಜೆ  ಸುಣ್ಣ ಹಾಕಿಡುವ ತಾಂಬೂಲದ ಕರಡಿಗೆ
ಹೋಡಂ < ಓಡೊ  ದೋಣಿ
ಪಾಲಿ < ಪಲ್ಲಿ  ಹಲ್ಲಿ
ಪುಲುಸು < ಪುಲ್ಸ್‌  ಬೈಯು
ಪೇಂಡಿ < ಪುಂಡಿ  ಹಿಂಡಿ
ಫೂದಿ < ಪೂಟಿ  ಯೋಗಿ
ಫರಿಕ್ಕಟ < ಪರಿಕ್ಕೊಡೆ  ಹರಕಲು

ಒಂದು ಮುಖ್ಯ ಅರ್ಥವಿದ್ದು ಇನ್ನೊಂದು ಪಾರಿಭಾಷಿಕ ಅರ್ಥವಿರುವ ತುಳು ಶಬ್ದಗಳನ್ನು ಮುಖ್ಯ ಅರ್ಥದಲ್ಲಿ ಅನುವಾದಿಸಿ, ಅದೇ ಪದವನ್ನು ಪಾರಿಭಾಷಿಕವಾಗಿಯೂ ಬಳಸುವುದಕ್ಕೆ ಉದಾಹರಣೆಗಳಿವೆ.

ತುಳುವಿನಲ್ಲಿ ‘ಕಟ್ಟ’ ಎಂದರೆ ಕಟ್ಟಿದ್ದು, ಹೊರೆ ಮುಂತಾದ ಅರ್ಥಗಳಿವೆ. ಕಟ್ಟಿದ್ದು ಎನ್ನುವುದು ಇದರ ಮುಖ್ಯ ಅರ್ಥ. ‘ಬಂದಣೊ’ ಎಂಬುದು ಕರಾಡ ಸಮಾನಾರ್ಥಕ ಪದ. ತೋಡಿಗೆ ಅಡ್ಡಗಟ್ಟಿ ನೀರು ತುಂಬಿಸಿ ಕೃಷಿಗಾಗಿ ಬಳಸುವ ವ್ಯವಸ್ಥೆಗೆ ಪಾರಿಭಾಷಿಕವಾಗಿ ತುಳುವಿನಲ್ಲಿ ‘ಕಟ್ಟ’ ಎನ್ನುತ್ತಾರೆ. ಅದನ್ನು ಹಾಗೆಯೇ ಅನುವಾದಿಸಿ ಕರಾಡ ಭಾಷೆಯಲ್ಲೂ ಅದೇ ಅರ್ಥದಲ್ಲಿ ‘ಬಾಂದು’ ಎಂಬ ಶಬ್ದಗಳನ್ನು ಬಳಸಲಾಗುತ್ತದೆ.

ನಾಗರ ಹಾವನ್ನು ಹಾಗೆ ಹೇಳದೆ ‘ಎಡ್ಡ್‌ಂತ್‌ನವು’ – ಅಂದರೆ ಒಳ್ಳೆಯದು – ಎಂದು ಹೇಳುವುದು ತುಳುವಿನ ರೂಢಿ. ಕರಾಡನಲ್ಲೂ ಒಳ್ಳೆಯದು ಎಂಬರ್ಥದ ‘ರೊಕ್ಕಲ್ಲೊ’ ಎಂಬ ಶಬ್ದವನ್ನು ನಾಗರ ಹಾವಿಗೆ ಬಳಸಲಾಗುತ್ತದ.

‘ಅಜಾವುನೆ’ ಎಂದರೆ ತುಳುವಿನಲ್ಲಿ ನೀರು ಬತ್ತಿಸುವುದು. ಒಣಗಿಸುವುದು ಎಂದರ್ಥ. ‘ಸುಕ್ಕೋಪ’ ಎಂಬುದು ಕರಾಡ ಸಮಾನಾರ್ಥಕ ಪದ. ಪಲ್ಯವನ್ನು ನೀರು ಬತ್ತಿಸಿ ತಯಾರಿಸುವುದರಿಂದ ಅದಕ್ಕೆ ‘ಅಜಾಯಿನವು’ ಎಂಬ ಹೆಸರಿದೆ. ಕರಾಡ ಭಾಷೆಯಲ್ಲೂ ಅದೇ ಅರ್ಥದಲ್ಲಿ ‘ಸುಕ್ಕೆ’ ಎಂಬ ಶಬ್ದವನ್ನು ಬಳಸಲಾಗುತ್ತದೆ.

ತುಳುವಿನ ಸಮಸ್ತ ಪದಗಳೂ ಕರಾಡ ಭಾಷೆಗೆ ಎರವಲುಗೊಂಡಿವೆ. ಉದಾಹರಣೆಗೆ:

ನೆಲ + ಗುರಿ – ನೆಲಕ್ಕುರಿ > ನೆರಕ್ಕುಳಿ – ಭತ್ತ ಕುಟ್ಟುವುದಕ್ಕಾಗಿ ನೆಲದಲ್ಲಿ ಮಾಡಿದ ಹೊಂಡ
ಕೊಯ್‌+ ಕತ್ತಿ – ಕೊಯ್ಕತ್ತಿ > ಕೊಯಿತ್ತಿ – ಕತ್ತಿ
ಕುತ್ತ + ಅಟ್ಟೊ – ಕುತ್ತಟ್ಟೊ > ಕುತ್ತಟ – ಒಲೆಯ ಮೇಲೆ, ಅಟ್ಟಕ್ಕಿಂತ ತಗ್ಗಿನಲ್ಲಿ ಮಾಡಿದ ಸಣ್ಣ ಅಟ್ಟ
ಬಯಲ್‌+ ಕೋಡಿ – ಬಯಲ್‌ಕೋಡಿ > ಬಯಲೋಡಿ – ಬಯಲ ಬದಿ.
ಪೆರ್‌+ ಮಾರಿ – ಪೆರ್ಮಾರಿ > ಪೆರ್ಮಾರಿ – ಹೆಬ್ಬಾವು

ತುಳುವಿನ ಶಬ್ದಗಳು ಕರಾಡ ಶಬ್ದಗಳೊಂದಿಗೆ ಸೇರಿ ಸಂಧಿಯಾಗುತ್ತದೆ. ಉದಾಹರಣೆಗೆ –

ಕುತ್ತಟ್ಟ + ಓರಿ (ಮೇಲೆ) – ಕುತ್ತಟಾರಿ
ಕರ್ಕ್‌+ ಅಂಬೊ – ಕರ್ಕಂಬೊ – ತೆಂಗಿನ ಎಳೆಗಾಯಿ
ಕಾಟ್‌+ ತ್ಸೂರ್ನು – ಕಾಟ್‌ತ್ಸೂರ್ನು – ಒಂದು ಜಾತಿಯ ಗಿಡ.

ದ್ರಾವಿಡ ಶಬ್ದಗಳ ಆದಿಯ ಅಕಾರ ಕನ್ನಡದಲ್ಲಿ ಸಂವೃತವಾಗಿದ್ದು ತುಳುವಿನಲ್ಲಿ ವಿವೃತವಾಗಿದ್ದರೆ ಅಂತಹ ಶಬ್ಧಗಳನ್ನು ಸ್ವೀಕರಿಸುವಾಗ ಕರಾಡ ಭಾಷೆ ತುಳುವನ್ನೇ ಅನುಸರಿಸಿದಂತೆ ಕಂಡುಬರುತ್ತದೆ. ಉದಾಹರಣೆಗೆ:

Ç
ಪಚ್ಚೆ – ಕ,
È
ಪಚ್ಚೆ – ತು,
È
ಪಚ್ಚೆ – ಕರಾಡ
Ç
ಮಣೆ – ಕ,
È
ಮಣೆ – ತು,
È
ಮಣಯಿ – ಕರಾಡ
Ç
ಗಲ್ಲ – ಕ,
È
ಗೆಲ್ಲೆ – ತು,
È
ಗಲ್ಲ – ಕರಾಡ
Ç
ಪಟ್ಟೆ – ಕ,
È
ಪಟ್ಟೆ – ತು,
È
ಪಟ್ಟವು – ಕರಾಡ

ಇಲ್ಲೆಲ್ಲ ಕನ್ನಡ ಶಬ್ದಗಳ ಮೊದಲಕ್ಷರ ಸಂವೃತ. ತುಳು ಮತ್ತು ಕರಾಡದಲ್ಲಿ ವಿವೃತ.

ಕನ್ನಡ ಮತ್ತು ತುಳುಗಳೆರಡೂ ಕರಾಡ ವ್ಯಾಕರಣವನ್ನು ಪ್ರಭಾವಿಸಿವೆ. ಇಂಡೋ ಆರ್ಯನ್‌ವರ್ಗದ ಭಾಷೆಯಾದ ಕರಾಡ ಕಾಸರಗೋಡಿಗೆ ಬಂದ ಮೇಲೆ ಸ್ವೀಕರಿಸಿದ ದ್ರಾವಿಡ ಭಾಷಾ ಪ್ರಭಾವವಾಗಿ ಇದನ್ನು ಗುರುತಿಸಬೇಕು. ಏಕೆಂದರೆ ಕರಾಡ ವ್ಯಾಕರಣದ ಮೇಲುಂಟಾದ ಪ್ರಭಾವವನ್ನು ನಿಶ್ಚಿತವಾಗಿ ಕನ್ನಡದಿಂದ ಉಂಟಾದುದು ಅಥವಾ ತುಳುವಿನಿಂದ ಉಂಟಾದುದು ಎಂದು ದೃಢಪಡಿಸಿ ಹೇಳುವುದು ಅಸಾಧ್ಯ.

ಮೂಲವಾಗಿ ಕರಾಡ ಭಾಷೆಯ ವಾಕ್ಯರಚನೆಯ ಮೇಲೆ ಕನ್ನಡ-ತುಳು ಭಾಷೆಗಳು ಪ್ರಭಾವ ಬೀರಿವೆ. ಇಂಡೋ-ಆರ್ಯನ್‌ಪರಿವಾರದ ಇತರ ಭಾಷೆಗಳಂತೆ ಕರಾಡ ಭಾಷೆಯಲ್ಲೂ ಕ್ರಿಯಾರಹಿತ ವಾಕ್ಯಗಳಿಲ್ಲ. ‘ಆಗಿದೆ’ ಎಂಬ ಅರ್ಥಕೊಡುವ ‘ದವುಂತ್ಸರ’ ಎಂಬ ಶಬ್ದ ವಾಕ್ಯದ ಕೊನೆಯಲ್ಲಿ ಬರುವುದು ಕರಾಡದ ರೂಢಿ. ಇದು ಭೂತಕಾಲದ ಕ್ರಿಯಾರ್ಥವನ್ನು ಸೂಚಿಸುತ್ತದೆ. ಉದಾಹರಣೆಗೆ:

ತೊ ರುಖು ದವುಂತ್ಸರ (ಅದು ಮರ ಆಗಿದೆ)
ತಿ ಸುಮನ ದವುಂತ್ಸರ (ಅವಳು ಸುಮನಾ ಆಗಿದ್ದಾಳೆ)

ಕನ್ನಡ-ತುಳು ಮುಂತಾದ ದ್ರಾವಿಡ ಭಾಷೆಗಳಲ್ಲಿ ಕ್ರಿಯಾರಹಿತ ವಾಕ್ಯಗಳಿವೆ. ಕ್ರಿಯಾರಹಿತ ವಾಕ್ಯದ ಕೊನೆಯಲ್ಲಿ ‘ಆಗಿದೆ’ ಎಂಬ ಭೂತಕಾಲ ಕ್ರಿಯಾಪದ ಅಂಟಿಸುವ ಕ್ರಮ ದ್ರಾವಿಡದಲ್ಲಿಲ್ಲ.

ಕನ್ನಡ-ತುಳುಗಳ ಸಂಪರ್ಕದಿಂದಾಗಿ ಕರಾಡ ಭಾಷೆಯಲ್ಲಿ ಕ್ರಿಯಾರಹಿತ ವಾಕ್ಯಗಳ ರಚನೆ ಆರಂಭವಾಗಿದೆ. ಇತ್ತೀಚೆಗಂತೂ ಕರಾಡರು ಕ್ರಿಯಾರಹಿತ ವಾಕ್ಯಗಳನ್ನು ಧಾರಾಳ ಉಪಯೋಗಿಸುತ್ತಿದ್ದಾರೆ.

ತೊ ರುಖು (ಅದು ಮರ)
ತಿ ಸುಮನ (ಅವಳು ಸುಮನಾ)
ತೊ ರಮೇಶ (ಅವನು ರಮೇಶ)
ತಿ ಗಾಯ (ಅದು ದನ)

ವಿಶೇಷಣಗಳಿಗೂ ವಚನ ಪ್ರತ್ಯಯವನ್ನು ಅಂಟಿಸುವುದು ಇಂಡೋ-ಆರ್ಯನ್‌ಭಾಷೆಗಳ ರೂಢಿ. ಕರಾಡ ಭಾಷೆಯಲ್ಲೂ ವಿಶೇಷಣಗಳಿಗೆ ವಚನ ಪ್ರತ್ಯಯ ಅಂಟಿಸಲಾಗುತ್ತಿದೆ. ಉದಾ:

ತೀ ಸಾನಿ ಮೇಳುಸ (ಅವಳು ಸಣ್ಣವಳು ಹೆಂಗಸು)
ತೀ ಸನ್ನೆ ಮೇಳುಸ (ಅವರು ಸಣ್ಣವರು ಹೆಂಗಸರು)
ತೇಂ ತಂಬಿಡಂ ಫೂಲ (ಅದು ಕೆಂಪಾದುದು ಹೂವು)
ತೀಂ ತಂಬಿಡಿಂ ಪುಲ್ಲಂ (ಅವು ಕೆಂಪಾದವು ಹೂವುಗಳು)

ತುಳು ಕನ್ನಡಗಳ ಸಂಪರ್ಕದಿಂದ ವಿಶೇಷಣಗಳಿಗೆ ವಚನ ಪ್ರತ್ಯಯವನ್ನು ಅಂಡಿಸದೆಯೇ ಬಳಸುವ ಕ್ರಮ ಬೆಳೆದು ಬರುತ್ತಿದೆ. ಉದಾ:

ತೇ ಸಾನಿ ಮೇಳುಸ
ತೀಂ ತಂಬಿಡಂ ಫುಲ್ಲಂ
– ಮುಂತಾಗಿ

ಇತರ ಇಂಡೋ ಆರ್ಯನ್‌ಭಾಷೆಗಳಂತೆಯೇ ಕರಾಡದಲ್ಲೂ ಸಾಮಾನ್ಯ ಭೂತಕಾಲವನ್ನು ಹೇಳುವಾಗ ಕರ್ಮಣೀ ಪ್ರಯೋಗವನ್ನೇ ಬಳಸಲಾಗುತ್ತಿತ್ತು. ಉದಾ:-

ಗೋಪಾಲೇನ ಮಳ್ಳಂ (ಗೋಪಾಲನಿಂದ ಹೇಳಲ್ಪಟ್ಟಿತು)
ಖೆದಾಂ ಯವುಪದಲ್ಲಂ (ಯಾವಾಗ ಬರುವುದಾಯಿತು)

ದ್ರಾವಿಡ ಭಾಷೆಗಳಲ್ಲಿ ಕರ್ಮಣೀ ಪ್ರಯೋಗವಿಲ್ಲ. ತುಳು ಕನ್ನಡಗಳ ಸಂಪರ್ಕದಿಂದಾಗಿ ಕರಾಡ ಭಾಷೆಯೂ ಕರ್ಮಣೀ ಪ್ರಯೋಗವನ್ನು ಕೈಬಿಡಲಾರಂಭಿಸಿದೆ. ಹಳೆ ತಲೆಮಾರಿನವರು ಕರ್ಮಣೀ ಪ್ರಯೋಗವನ್ನು ಬಳಸುತ್ತಿದ್ದರೂ ಹೊಸ ತಲೆಮಾರು ಕರ್ತರಿ ಪ್ರಯೋಗದ ವಾಕ್ಯಗಳನ್ನೇ ಹೆಚ್ಚು ಹೆಚ್ಚು ಉಪಯೋಗಿಸುತ್ತಿದರುವುದು ಕಂಡುಬಂದಿದೆ.

ನಿಷೇಧಾರ್ಥಕ ಪ್ರತ್ಯಯವನ್ನು ಕ್ರಿಯಾಪದದ ಹಿಂದೆ ಬಳಸುವುದು ಇಂಡೋ ಯುರೋಪಿಯನ್‌ಭಾಷಾ ವರ್ಗದ ಸಾಮಾನ್ಯ ಲಕ್ಷಣ. ದ್ರಾವಿಡ ಭಾಷೆಗಳಲ್ಲಿ ನಿಷೇಧಾರ್ಥಕ ಪ್ರತ್ಯಯ ಕ್ರಿಯಾಪದದ ಮುಂದೆ ಬರುತ್ತದೆ. ಕರಾಡ ಭಾಷೆಯಲ್ಲಿ ಇತ್ತೀಚಿನವರೆಗೂ ಕ್ರಿಯಾ ಪದದ ಹಿಂದೆಯೇ ನಿಷೇಧಾರ್ಥಕ ಪ್ರತ್ಯಯ ‘ನ’ ವನ್ನು ಬಳಸಲಾಗುತ್ತಿತ್ತು. ಈಗಲೂ ಬೆರಳೆಣಿಕೆಯಷ್ಟು ಮಂದಿ ಹಾಗೆಯೇ ಬಳಸುತ್ತಿದ್ದಾರೆ. ಆದರೆ ಕ್ರಿಯಾ ಪದದ ಮುಂದೆ ನಿಷೇಧಾರ್ಥಕ ಪ್ರತ್ಯಯ ಬಳಸುವ ಕ್ರಮ ತುಳು ಕನ್ನಡಗಳ ಸಂಪರ್ಕದಿಂದ ಇತ್ತೀಚೆಗೆ ಕರಾಡದ ಭಾಷೆಯಿಂದ ಸ್ವೀಕರಿಸಲ್ಪಟ್ಟಿದೆ.

ಉದಾಹರಣೆಗೆ – ಕ್ರಿಯಾ ಪದದ ಹಿಂದೆ ನಿಷೇಧಾರ್ಥಕ ಪ್ರತ್ಯಯವಿರುವುದಕ್ಕೆ –

ತೇಂದ ಕೆಲಸ ಹಾವಂ ನಕ್ಕರ (ಆ ಕೆಲಸ ನಾನು ಮಾಡಲಾರೆ)
ತೇಂ ಬಸ್ಸ ನಮ್ಮೇಳ (ಆ ಬಸ್ಸು ಸಿಗಲಾರದು)

ತುಳು – ಕನ್ನಡಗಳ ಪ್ರಭಾವಕ್ಕೆ ಒಳಗಾಗಿರುವುದಕ್ಕೆ –

ತೇಂ ಕೆಲಸ ಹಾವಂ ಕರ್ಯಾನ (ಆ ಕೆಲಸ ನಾನು ಮಾಡುವುದಿಲ್ಲ)
ತೇಂ ಬಸ್ಸ ಮೇಳಾನ (ಆ ಬಸ್ಸು ಸಿಗಲಾರದು)

ಇದೇ ರೀತಿ ಕರಾಡ ಭಾಷೆಗೆ ಅರಬ್ಬೀ, ಫಾರ್ಸಿ, ಪೋರ್ಚುಗೀಸ್‌ಭಾಷೆಗಳಿಂದ ಎರವಲಾದ ಶಬ್ದಗಳೂ ಕನ್ನಡ ಅಥವಾ ತುಳುಗಳ ಮೂಲಕವೇ ಎರವಲಾಗಿದೆ.

ಕಾಸರಗೋಡಿನಲ್ಲಿ ಬಳಕೆಯಲ್ಲಿರುವ ಕರಾಡ ಭಾಷೆಯಂತೆಯೇ ಮರಾಠಿಯ ಇನ್ನೊಂದು ಉಪಭಾಷೆ ಪರಿಶಿಷ್ಟ ವರ್ಗದ ನಾಯ್ಕರು ಮಾತನಾಡುವ ಮರಾಠಿ, ನಾಯ್ಕರು ಕರಾಡರೊಂದಿಗೇ ಮಹಾರಾಷ್ಟ್ರದಿಂದ ವಲಸೆ ಬಂದು ಕರಾಡರೊಂದಿಗೆ ನೆಲೆನಿಂತವರು. ಈ ಭಾಷೆ ಕರಾಡಭಾಷೆಗಿಂತ ಹೆಚ್ಚು ತುಳುವಿನ ಪ್ರಭಾವಕ್ಕೆ ಒಳಗಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ.

ಒಟ್ಟಿನಲ್ಲಿ ಕರಾಡ ಉಪಭಾಷೆ ತುಳುವಿನ ಮೇಲೆ ಬೀರಿದ ಪ್ರಭಾವ ಗುರುತಿಸಲು ಬರುವಷ್ಟಿಲ್ಲ. ಹೆಚ್ಚು ವ್ಯಾಪ್ತಿಯುಳ್ಳ ಸ್ಥಳೀಯ ಭಾಷೆಯ ಮೇಲೆ ಆಗುಂತಕ ಭಾಷೆಯೊಂದು ತನ್ನ ಸೀಮಿತ ವ್ಯಾಪ್ತಿಯಲ್ಲಿ ಪ್ರಭಾವ ಬೀರುವುದು ಅಸಾಧ್ಯ. ಆದರೆ ತುಳು ಕರಾಡ ಉಪಭಾಷೆಯ ಮೇಲೆ ಗಾಢ ಪ್ರಭಾವ ಬೀರಿದೆ. ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ.