ತುಳು – ಮಲೆಯಾಳಂ ಭಾಷೆಗಳೆರಡೂ ದ್ರಾವಿಡ ಭಾಷೆಗಳು. ಇವೆರಡೂ ಮೂಲ ದ್ರಾವಿಡ. ಆದರೆ ಇವೆರಡೂ ಮೂಲ ದ್ರಾವಿಡದಿಂದ ಬೇರ್ಪಟ್ಟು ಸ್ವತಂತ್ರ ಭಾಷೆಗಳಾದ ಕಾಲವು ಬೇರೆ ಬೇರೆಯಾಗಿದೆ. ಕ್ರಿ. ಪೂ. ೨ನೇ ಶತಮಾನದಲ್ಲಿ ತುಳು ಮೂಲ ದ್ರಾವಿಡದಿಂದ ಬೇರ್ಪಟ್ಟರೆ ಮಲೆಯಾಳವು ಸಾಧಾರಣ ಕ್ರಿ. ಶ. ೮ನೇ ಶತಮಾನದಲ್ಲಿ ಮೂಲ ದ್ರಾವಿಡದಿಂದ ಬೇರ್ಪಟ್ಟಿತು ಎಂದು ಹೇಳಬಹುದು. ಈ ನಿಟ್ಟಿನಿಂದ ಇವುಗಳೊಳಗೆ ಸಾಮ್ಯಕ್ಕಿಂತ ವ್ಯತ್ಯಾಸವೇ ಅಧಿಕವೆಂದು ಹೇಳಬಹುದು. ಇದನ್ನು ಸಮೇತ ಪರಿಗಣಿಸಿಕೊಂಡಾಗಿರಬೇಕು ಡಾ. ಕಾಲ್ಡ್‌ವೆಲ್ಲರು ತಮಿಳು ಮಲೆಯಾಳಗಳಲ್ಲಿರುವಷ್ಟು ನಿಕಟ ಸಂಬಂಧವು ತುಳು ಮಲೆಯಾಳಗಳಲ್ಲಿ ಇಲ್ಲ ಎಂದು ಹೇಳಿದುದು.

ಒಂದು ಭಾಷೆಯ ಬೆಳವಣಿಗೆಯ ಹಂತದಲ್ಲಿ ಆ ಭಾಷೆಯನ್ನಾಡುವ ಪ್ರದೇಶದ ವ್ಯಾಪ್ತಿಯೂ, ಅಲ್ಲಿಯ ರಾಜಿಕೀಯ ಸಾಮಾಜಿಕ ಸ್ಥಿತಿಗಳು, ಪರಭಾಷೆ ಸಂಪರ್ಕ ಮುಂತಾದವುಗಳೂ ಕಾರಣಗಳಾಗುತ್ತವೆ. ರಾಜಕೀಯವಾಗಿ ಇಂದು ತುಳುನಾಡು ಎಂಬ ಒಂದು ಪ್ರತ್ಯೇಕ ರಾಜ್ಯವಿಲ್ಲವಾದರೂ, ಭಾಷೆಯನ್ನು ಆಡುವ ಅತಿ ಪ್ರಸಾರವನ್ನು ಪರಿಗಣಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಭೂಭಾಗವನ್ನು ತುಳುನಾಡು ಎಂದು ಪರಿಗಣಿಸಲಾಗುತ್ತದೆ. ಆದರೆ ಹಿಂದೆ ತುಳುನಾಡಿನ ವ್ಯಾಪ್ತಿಯು ಕುಂದಾಪುರದ ಕಲ್ಯಾಣಪುರ ಹೊಳೆಯಿಂದ ದಕ್ಷಿಣಕ್ಕೆ ಕೇರಳದ ತ್ನಿಕ್ಕರ್‌ಪುರದವರೆಗೆ ವ್ಯಾಪಿಸಿತ್ತು. ಯಾವುದೇ ಭಾಷೆಯು ಸ್ವಂತವಾಗಿ ಬೆಳೆಯುವ ಹಂತದಲ್ಲಿ ಅದಕ್ಕೆ ರಾಜಾಶ್ರಯ ದೊರಕಿದರೆ ಒಂದು ಸಂಪನ್ನ ಭಾಷೆಯಾಗಿ ಬೆಳೆಯುತ್ತದೆ. ತುಳು ಭಾಷೆಗೆ ರಾಜಾಶ್ರಯದ ಭಾಗ್ಯ ದೊರಕಲಿಲ್ಲ. ಭಾಷೆಯ ಅಸ್ತಿತ್ವವು ಅತಿ ಪುರಾತನವಾದರೂ ಅದರಲ್ಲಿ ಹಿಂದಿನ ಕಾಲದಲ್ಲಿ ಲಿಖಿತ ಶಿಷ್ಟಸಾಹಿತ್ಯ ನಿರ್ಮಾಣವಾಗಲಿಲ್ಲ. ಆದರೆ ಆಡುನುಡಿಯ ಮಟ್ಟದಲ್ಲಿ ಸಾಕಷ್ಟು ಅಭಿವೃದ್ಧಿಗೊಂಡ ಭಾಷೆಯಾಗಿ ಸಾಮಾನ್ಯ ಎಲ್ಲ ವ್ಯವಹಾರಗಳ ಜನಪ್ರಿಯ ಭಾಷೆಯಾಗಿ ಬಳಸಲ್ಪಡುತ್ತಾ ಬಂದಿದೆ. ತುಳು ಭಾಷೆಯಲ್ಲಿ ಸಮೃದ್ಧವಾದ, ವೈವಿಧ್ಯಪೂರ್ಣವಾದ ಧಾರಾಳ ಜನಪದ ಸಾಹಿತ್ಯವಿದೆ. ಅದು ತುಳುನಾಡಿನ ನಾನಾ ಸಂಸ್ಕೃತಿಕ ಮುಖಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವಷ್ಟು ಶಕ್ತವೂ ಸಂಪನ್ನವೂ ಆಗಿದೆ. ಅಲ್ಲದೆ ಮಾನವನ ಅತಿ ಸೂಕ್ಷ್ಮ ಭಾವನೆಗಳನ್ನು ಕೂಡ ಅರ್ಥವತ್ತಾಗಿ ಪ್ರತಿಚ್ಛಾಯೆಗೊಳಿಸಲು ಸಮರ್ಥವಾಗಿದೆ. ಸಂಪನ್ನ ಭಾಷೆಗಳಿಗಿರುವಂತೆ, ಸಂಪೂರ್ಣವಾದ ವ್ಯಾಕರಣವೂ ವ್ಯಾಪಕವಾದ ಶಬ್ದ ಭಂಡಾರವೂ ನುಡಿಗಟ್ಟು ಗಾದೆಗಳೂ ಈ ಭಾಷೆಯ ಸಂಪತ್ತಾಗಿದೆ. ಇತರ ದ್ರಾವಿಡ ಭಾಷೆಗಳಿರುವಂತೆ ತುಳುವಿನಲ್ಲಿಯೂ ಜ್ಞಾತಿಪದಗಳಿವೆ. ವಿಶಿಷ್ಟಾರ್ಥಗಳನ್ನು ವ್ಯಂಜಿಸುವ ಜೋಡುನುಡಿ, ಕೂಡುನುಡಿಗಳೂ, ಪ್ರತಿಧ್ವನಿ ಪದಗಳೂ ಒಗಟು ಉಲ್ಲಾಸಗಳೂ ತುಳುವಿಗಿದೆ. ಸಂಸ್ಕೃತ, ಪ್ರಾಕೃತ, ಪರ್ಶಿಯನ್‌, ಅರೆಬಿಕ್‌, ಉರ್ದು, ಪೋರ್ಚುಗೀಸ್‌, ಇಂಗ್ಲಿಷ್‌ಮೊದಲಾದ ಅನ್ಯಭಾಷೆಗಳ ಪದಗಳನ್ನು ಮುಕ್ತವಾಗಿ ಸ್ವೀಕರಿಸಿ ತುಳುವೀಕರಣಗೊಳಿಸಿ ಅದು ಇಟ್ಟುಕೊಂಡಿದೆ. ಹಲವಾರು ವರ್ಷಗಳಿಂದ ಅನ್ಯಭಾಷೆಗಳ ಸಂಪರ್ಕವೂ ಅಧಿಪತ್ಯವೂ ತುಳುವಿನ ಮೇಲೆ ಆಗಿದ್ದರೂ, ಅದು ತನ್ನ ಸ್ವಂತಿಕೆಯನ್ನೂ ಸಂಪನ್ನತೆಯನ್ನೂ ಉಳಿಸಿಕೊಂಡು ಬಂದಿದೆ. ಆಧುನಿಕ ಕಾಲದ ತುಳುವಿನಲ್ಲಿ, ಸಂಪರ್ಕ ಹಾಗೂ ಜ್ಞಾತಿ ಭಾಷೆಗಳಾದ ಕನ್ನಡ, ತಮಿಳು, ಮಲೆಯಾಳ ಭಾಷೆಗಳಲ್ಲಿದ್ದಂತೆ ವ್ಯಾಕರಣ, ಸಂಶೋಧನಾ ಪ್ರಬಂಧಗಳೂ ಸಾಹಿತ್ಯವೂ ನಿರ್ಮಾಣವಾಗಿವೆ. ತುಳು – ಮಲೆಯಾಳ ಲಿಪಿಯೆಂದು ಕರೆಯಲ್ಪಡುವ ಗ್ರಂಥ ಲಿಪಿಯಲ್ಲಿ ೧೬ನೇ ಶತಮಾನದಿಂದೀಚೆ ನಿರ್ಮಾಣಗೊಂಡ ತುಳುಭಾಗವತೊ, ಕಾವೇರಿ, ದೇವೀ ಭಾಗವತೊ ಮೊದಲಾದ ಕೃತಿಗಳು ದೊರಕಿವೆ ಹಾಗೂ ಅವುಗಳ ಪ್ರಕಾಶನ ಕಾರ್ಯಗಳು ನಡೆದಿವೆ. ಮಂದಾರ ರಾಮಾಣದಂತಹ ಹೊಸ ಮಹಾಕಾವ್ಯವೂ ಸೃಷ್ಟಿಯಾಗಿದೆ. ನಾಟಕ ರಚನೆ ಮತ್ತು ಪ್ರದರ್ಶನದಲ್ಲಿ ತುಳು ತನ್ನದೇ ಆದ ಹಿರಿಮೆಯನ್ನು ತೋರಿದೆ. ಚಲನಚಿತ್ರ ನಿರ್ಮಾಣ ಮತ್ತು ಪ್ರದರ್ಶನದಲ್ಲಿಯೂ ತುಳು ಹಿಂದಾಗಿಲ್ಲ. ಇಂತಹ ಒಂದು ಭಾಷೆಗೆ ಮಲೆಯಾಳದೊಂದಿಗಿನ ಸಂಬಂಧವನ್ನು ತಿಳಿಯುವುದು ಉಚಿತವಾಗಿದೆ.

ಮಲೆಯಾಳ ಭಾಷೆಯು ಸಾಧಾರಣ ಕ್ರಿ.ಶ. ೮ನೇ ಶತಮಾನದಲ್ಲಿ ಮೂಲ ದ್ರಾವಿಡದಿಂದ ಬೇರ್ಪಟ್ಟು ಆದಿಯಲ್ಲಿ ತಮಿಳಿನ ಒಂದು ಪ್ರಭೇದದಂತೆ ಕಾಣಿಸಿಕೊಂಡಿತು ಮಲೆಯಾಳವು ಒಂದು ಸಂಸ್ಕೃತಿಜನ್ಯ ಭಾಷೆಯೆಂದು ಪಂಡಿತರು ವಾದಿಸುವಷ್ಟರ ಮಟ್ಟಿನಲ್ಲಿ ಸ್ವತಂತ್ರ ಭಾಷೆಯಾಗಿ ಬೆಳೆದು ನಿಂತಿತು. ಮಲೆಯಾಳಕ್ಕೆ ರಾಜಾಶ್ರಯವೂ ಪಂಡಿತ ಮನ್ನಣೆಯೂ ದೊರಕಿ ಅದರಲ್ಲಿ ಧಾರಾಳ ಸಾಹಿತ್ಯ ನಿರ್ಮಾಣವಾಗಿ ತಮಿಳು, ಕನ್ನಡ, ತೆಲುಗು ಭಾಷೆಗಳಂತೆ ಸಂಪನ್ನ ಸಾಹಿತ್ಯಕ ಭಾಷೆಯಾಯಿತು.

ತುಳು ಮಲೆಯಾಳಗಳೊಳಗೆ ಭಾಷಿಕವಾಗಿ ಸಂಬಂಧವನ್ನು ಕಂಡುಕೊಳ್ಳಬಹುದಾದರೂ ಸಾಹಿತ್ಯಕ ಸಂಬಂಧ ತೀರಾ ಇಲ್ಲವೆಂದೇ ಹೇಳಬೇಕಾಗಿದೆ. ಇದಕ್ಕೆ ಕಾರಣವನ್ನೂ ಊಹಿಸಬಹುದಾಗಿದೆ. ಆದಿಕಾಲದಲ್ಲಿ ತುಳುವಿನಲ್ಲಿ ಸಾಹಿತ್ಯದ ನಿರ್ಮಾಣವೇ ಆಗಿಲ್ಲ. ಆಗಿರುವ ಕೆಲವು ಕೃತಿಗಳು ಹೆಚ್ಚು ಕಡಿಮೆ, ಕನ್ನಡ, ತಮಿಳು, ತೆಲುಗು, ಮಲೆಯಾಳ ಭಾಷೆಗಳಲ್ಲಿ ನಡೆದಂತೆ, ಸೃಜನಶೀಲ ಭಾಷಾಂತರವೆಂದೇ ಹೇಳಬಹುದು. ಈ ನಿಟ್ಟಿನಲ್ಲಿ ಅವು ಪರಸ್ಪರ ಪ್ರಭಾವ ಬೀರುವಂತಿಲ್ಲ. ಆಧುನಿಕ ಕಾಲದ ತುಳು ಸಾಹಿತ್ಯವೆಂದರೆ ಅದು ವಸ್ತು ಮತ್ತು ಪ್ರಕಾರಗಳ ದೃಷ್ಟಿಯಿಂದ ಕನ್ನಡಕ್ಕೆ ಸಮಾನಾಂತರವಾದ ಸಾಹಿತ್ಯವೇ ಹೊರತು, ಅದರಿಂದ ಬೇರೆಯಾಗಿ ಇತರ ಭಾಷೆಯವರು ಹೌದು ಹೌದು ಎಂದು ಮೆಚ್ಚಕೊಂಡು ತಮ್ಮ ಭಾಷೆಗೆ ಬರಿಸಿಕೊಳ್ಳುವಷ್ಟು ಉತ್ತಮ ಮಟ್ಟದ ಸಾಹಿತ್ಯ ನಿರ್ಮಾಣವಾಗಿಲ್ಲವೆಂದೇ ಹೇಳಬೇಕು. ತುಳು ಸಾಹಿತ್ಯವೂ ಈಗ ಬೆಳೆಯುತ್ತ ಬರುತ್ತಿದೆಯಾದ್ದರಿಂದ ಉತ್ತಮ ಮಟ್ಟದ ಸಾಹಿತ್ಯ ನಿರ್ಮಾಣವಾಗಬಹುದೆಂಬ ನಿರೀಕ್ಷೆಯಿಂದ ತುಳು ಸಾಹಿತ್ಯದಲ್ಲಿ ಹೆಚ್ಚು ಪ್ರಕಾಶಮಾನವಾಗಿ ಎದ್ದು ತೋರುವ ನಾಟಕರಂಗದಲ್ಲಿ ಈ ಒಂದು ಪರಿಶ್ರಮ ಮೊದಲಿಟ್ಟಿದೆ. ಅಂದರೆ ಮಲಯಾಳದ ಸಿ. ಎಲ್‌. ಜೋಸ್‌ಅವರ ‘ಜ್ವಲನಂ’ ಎಂಬ ನಾಟಕವು ತುಳುವಿಗೆ ‘ಚಕ್ರವ್ಯೂಹ’ ಎಂಬ ಹೆಸರಿನಲ್ಲಿ ಭಾಷಾಂತರ ಗೊಂಡು ಕೃತಿರೂಪದಲ್ಲಿ ಪ್ರಕಟವಾಗದಿದ್ದರೂ ಸಾಧಾರಣ ಇಪ್ಪತ್ತರವರೆಗೆ ಪ್ರದರ್ಶನ ಕಂಡಿದೆಯೆಂಬುದು ಸಂತಸದ ಸುದ್ಧಿ.

ತುಳು – ಮಲೆಯಾಳಗಳ ಸಂಬಂಧವೂ ಜನಪದ ಸಾಹಿತ್ಯದಲ್ಲಿ ಧಾರಾಳ ಕಂಡುಬರುತ್ತದೆ. ಮಲೆಯಾಳ ಭಾಷೆಯ ಶಿಷ್ಟ ಸಾಹಿತ್ಯದಂತೆ ಜನಪದ ಸಾಹಿತ್ಯವೂ ಸಾಕಷ್ಟು ಬೆಳೆದಿದೆ. ಕೇರಳದ ನಾಡೋಡಿ ಪಾಟ್ಟ್‌ಗಳಲ್ಲಿ ಉತ್ತರ ಮಲಬಾರಿನ ವಡಕ್ಕನ್‌ ಪಾಟ್ಟ್‌ಗಳು ಪ್ರಮುಖವಾದವುಗಳಾಗಿವೆ. ಅವುಗಳಲ್ಲಿ ಬರುವ ನಾಯಕಿಯರು ‘ತುಳುನಾಡನ್‌ ಪಟ್ಟುಡತ್ತ’ ತುಳುನಾಡಿನ ಪಟ್ಟೆ ವಸ್ತ್ರವನ್ನುಟ್ಟು ಶೊಭಿಸುತ್ತಿದ್ದರೆಂದೂ, ಆ ಸುಂದರಿಯರ ಮೈಬಣ್ಣವೂ ‘ತುಳುನಾಡನ್‌ಮಂಞಳ್‌ಮುರಿಚ್ಚ ಪೋಲೆ’ ತುಳುನಾಡಿನ ಕೊಯ್ದ ಅರಸಿನ ತುಂಡಿನ ಬಣ್ಣದಂತೆ ಎಂದು ವರ್ಣಿತವಾಗಿದೆ. ಇವುಗಳಿಗಿಂತಲೂ ವಿಶೇಷವಾದ ಇನ್ನೊಂದು ಪ್ರಸ್ತಾಪವೆಂದರೆ ವಡಕ್ಕಂ ಪಾಟಿನ ವೀರರು ತುಳುನಾಡಿಗೆ ಹೋಗಿ ‘ಕಳರಿ’ ಗಡರಿ ವಿದ್ಯೆಯಲ್ಲಿ ಪರಿಣತರಾಗುತ್ತಿದ್ದರೆಂಬುದು. ವಡಕ್ಕನ್‌ ಪಾಟ್‌ಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ‘ತಚ್ಚೋಳಿ ಚಂದು’ ಎಂಬ ವೀರಗಾಥೆ. ಅದರಲ್ಲಿ ತುಳುನಾಡಿನ ವೀರನೊಬ್ಬನ ಪ್ರಸ್ತಾಪ ಬರುತ್ತದೆ. ತಚ್ಚೋಳಿ ಚಂದುವಿನ ಸೌಂದರ್ಯ ಸಂಪನ್ನೆಯಾದ ಮಡದಿ ‘ಮಾತುಕುಟ್ಟಿ’ಯಲ್ಲಿ ತುಳುನಾಡಿನ ಪ್ರಿಯಪುತ್ರನಾದ ‘ಕಂಡರ್‌ ಮೇನೋನ್‌’ ಎಂಬ ವೀರ ಅಪಹರಿಸಿದನು. ಚಂದು ಇದನ್ನು ತಿಳಿದು ಚಿಂತಿಸುತ್ತಾನೆ.

ತುಳುನಾಡನ್‌ ಕೋಟೋಡು ಮಲ್ಲಡಿಪ್ಪಾನ್‌
ಉಲಗತ್ತಿಲಾರುಮೆ ಇಲ್ಲವೇರೇ
ಎನ್ನುಡೆ ಅಮ್ಮಾವನ್‌ ಕುಂಞಮ್ಮಾವನ್‌
ತುಳುನಾಡ್‌ ಕೋಟೋಡು ತೋಟ್ಟು ಪೋಯಿ
ಕಳ್ಳಚದಿಯಾಲೆ ಪೋಗವೇಣಂ
ನೇರಿಟ್ಟ್‌ಚೆನ್ನಾಲ್‌ಕಡನ್ನು ಕೂಡಾ

(ತುಳುನಾಡು ಕೋಟೆಯೊಡನೆ ಕಾಳಗ ಮಾಡುವವರು ಈ ಲೋಕದಲ್ಲಿ ಯಾರೂ ಇಲ್ಲ. ನನ್ನ ಮಾವನಾದ ಕುಂಞಮ್ಮಾವನೇ ತುಳುನಾಡು ಕೋಟೆಯ ಮುಂದೆ ಯುದ್ಧ ಮಾಡಿ ಸೋತು ಹೋದನು. ಈಗ ನಾನು ಕಪಟೋಪಾಯದಿಂದಲೇ ಹೋಗಬೇಕು. ನೇರವಾಗಿ ಹೋದರೆ ಒಳದಾಟುವುದೇ ಕಷ್ಟ).

ಹಾಗೆ ಹೋಗಲು ಸಿದ್ಧನಾಗುತ್ತಾನೆ. ಅದನ್ನು ಅವನ ತಾಯಿ ಅರಿತು ಹೀಗೆ ಹೇಳುತ್ತಾಳೆ –

ಪೆಣ್ಣೆನ್ನ್‌ ಚೊಲ್ಲಿ ಮರಿಪ್ಪಾನ್‌ ಪೋಂಡಾ
ತುಳುನಾಡನ್‌ ಕೋಟೋಡು ಜಯಿಚ್ಚೋರಾರುಂ
ಈ ಲೋಗತ್ತೆಂಙುಮೆಯಿಲ್ಲ ಪುತ್ರಾ
|”

(ಹೆಣ್ಣೆಂದು ಹೇಳಿ ಸಾಯಲು ಹೋಗಬೇಡ. ತುಳುನಾಡ ಕೋಟೆಯನ್ನು ಗೆದ್ದವರು ಈ ಲೋದಲ್ಲಿ ಯಾರೂ ಇಲ್ಲ ಮಗನೆ)

ತಚ್ಚೋಳಿ ಚಂದು ಎಂಬ ವೀರಗಾಥೆಯಲ್ಲಿ ಬರುವ ‘ಕುಂಞಕೊಂಕಿ’ ಎಂಬವಳ ಗಂಡನ ಹೆಸರು ‘ಓಲತ್ತುಳುನಾಡನ್‌ಕಣ್ಣನ್‌’ ಎಂದಿದೆ. ಆತನು ಮಹಾ ಪರಾಕ್ರಮಿಯೆಂದೂ ಆತನಿಗೆ ಮೋಹನಾಸ್ತ್ರ ಮೊದಲಾದ ಅಸ್ತ್ರ ಪ್ರಯೋಗಗಳೂ ತಿಳಿದಿತ್ತೆಂದು ವರ್ಣನೆಯಿದೆ.

‘ವಲಿಯ ಆರೋಮಲ್‌ ಚೇಗವರ್‌’ ಎಂಬ ಹಾಡಿನಲ್ಲಿ ಚೇಗವರು ತುಳುನಾಡಿಗೆ ಹೋಗಿ ಗರಡಿ ವಿದ್ಯೆಯನ್ನು ಕಲಿತು ಬಂದಿದ್ದಾರೆಂದು ವರ್ಣಿಸಲಾಗಿದೆ. ಅಲ್ಲದೆ ಕೀಯೂರಿನ ‘ವಾಳುನೋರು’ ತಮ್ಮ ಸಹಾಯಕ್ಕಾಗಿ ಪುತ್ತೂರಿನ ಆರೋಮಲ್‌ ಚೇಗವರನ್ನು ಆಮಂತ್ರಿಸಲು ಹೋದ ಪ್ರಸ್ತಾಪವೂ ಬರುತ್ತದೆ.

‘ಚೆರಿಯ ಆರೋಮಲುಣ್ಣಿ’ ಎಂಬ ಹಾಡಿನಲ್ಲಿ ‘ಉಣ್ಣಿಯಾರ್ಚ’ ಎಂಬಾಕೆ ತನ್ನ ಮಗನೊಡನೆ ಹೀಗೆ ಹೇಳುತ್ತಾಳೆ:

ಮಗನೇ ನಿನಗೆ ಕ್ಷೌರಕರ್ಮ, ಕಿವಿತೂತು, ಅಕ್ಷರಾಭ್ಯಾಸ ಎಲ್ಲ ಮಾಡಿಸಿದೆ. ಮಲ್ಲಯುದ್ಧದ ಮರ್ಮ ತಿಳಿಸಿದೆ. ಅದೂ ಸಾಲದೆಂದು –

ತುಳುನಾಟ್ಟಿನಲ್‌ನಲ್ಲ ತುಳುಕ್ಕುರುಕ್ಕಳ್‌
ಕುರುಕ್ಕಳೇತನ್ನೆ ವರುತ್ತಿ ಞಾನುಂ
ಮುವ್ವಾಂಡಿತ್ತೀ ಞಾನಭ್ಯ ಸಿಚ್ಚು
ತುಳುನಾಡನ್‌ ವಿದ್ಯ ಗ್ರಹಿಚ್ಚು ತಾನುಂ

(ತುಳುನಾಡಿನಿಂದ ಉತ್ತಮ ಗುರುಗಳನ್ನು ಬರಿಸಿದೆ. ಮೂರು ವರ್ಷ ಕೂರಿಸಿ ಅಭ್ಯಾಸ ಮಾಡಿಸಿದೆ. ತುಳುನಾಡ ವಿದ್ಯೆಯೆಲ್ಲವನ್ನು ನೀನು ಕಲಿತೆ.)

‘ವಲಿಯ ಆರೋಮಲೇ ಚೇಗವ್‌’ ಹಾಡಿನಲ್ಲಿ ಚೇಗವರ್‌ ತನ್ನ ಮಗನು ತುಳುನಾಡಿಗೆ ಹೋಗಿ ಉಚ್ಚ ಶಿಕ್ಷಣವನ್ನು ಪಡೆದು ಬಂದುದರಿಂದ ತನ್ನ ರಾಜ್ಯದಲ್ಲಿ ಅವನಿಗೆ ಪ್ರತ್ಯೇಕ ಗೌರವ ಕೊಡಲಾಗಿದೆಯೆಂದು ಹೇಳಲಾಗಿದೆ.

‘ಕಪ್ಪುಳ್ಳಿ ಪಾಲಾಟ್‌ ಕೋಮನ್‌’ ಪಾಟ್‌ನಲ್ಲಿಯೂ ಇತರ ನಾಡನ್‌ ಪಾಟ್‌ಗಳಲ್ಲಿಯೂ ತುಳುನಾಡಿನ ಪ್ರಸ್ತಾವ ಬರುತ್ತದೆ.

ಹೀಗೆ ಮಲೆಯಾಳಂ ಜಾನಪದ ಸಾಹಿತ್ಯದಲ್ಲಿ ತುಳುನಾಡು, ಜನ, ಸಂಸ್ಕೃತಿ ಬಗ್ಗೆ ಮಾಹಿತಿಗಳು ದೊರಕುತ್ತವೆ. ಹೀಗೆಯೆ ತುಳು ಪಾಡ್ದನಗಳಲ್ಲಿಯೂ ಮಲೆಯಾಳದ ಉಲ್ಲೇಖವೂ ಬರುತ್ತದೆ. ಒಂದು ಉದಾಹರಣೆಳ

‘ಬಡಕ್ಕಾಯಿ ಗಂಗೆಡ್ದ್‌ ತೆನ್ಕಾಯಿ ಮಲ್ಯಲ ಮುಟ್ಟ’ (ಬಡಗಿನ ಗಂಗೊಳ್ಳಿಯಿಂದ ತೆಂಕು ಮಲೆಯಾಳದವರೆಗೆ)

ಯಾವನೋ ಒಬ್ಬ ಜನಪದ ಕವಿಯು ತುಳು ಮಲೆಯಾಳ ಪದಕೋಶ ತಯಾರಿಸುವ ವಿಚಾರಕ್ಕೆ ಹೊರಟಿದ್ದ. ಅವನು ನಡೆಸಿದ ಶ್ರಮವು ಜನರ ಬಾಯಿಯಿಂದ ಹೀಗೆ ದೊರಕುತ್ತದೆ, ಅಳೆ-ಮೋರ್‌, ಅಂಬಿ-ಚಾಣಕಂ, ಕುಕ್ಕು-ಮಾಂಙ, ಕೊರಂಟ್‌-ಅಂಡಿ, ಎರಡು-ಎರ್ದ್‌, ನೀರ್‌ವೆಳ್ಳ, ಬಾಕಿಲ್‌ವಾದಿಲ್‌, ಪೇರ್‌ಪಾಲ್‌, ಬಾರ್‌ನೆಲ್ಲ್‌, ಕಳಿ-ಕಳ್ಳ್‌, ಪೆತ್ತ-ಪಶು.

ತುಳುವಿನ ಭೂತಾರಾಧನೆ ಮತ್ತು ಮಲೆಯಾಳದ ತೆಯ್ಯಂ ಆರಾಧನೆಗಳಲ್ಲಿ ತುಳು ಮಲೆಯಾಳಗಳ ಸಂಬಂಧವನ್ನು ಕಂಡುಕೊಳ್ಳಬಹುದು. ತುಳುನಾಡಿನಿಂದ ಕೇರಳಕ್ಕೆ ಹೋದ ನರಸಿಂಹ ಶಕ್ತಿಯನ್ನು ಒತ್ತೆಕೋಲದ ರೂಪದಲ್ಲಿ ಉತ್ತರ ಮಲಬಾರಿನಲ್ಲಿಯೂ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಆರಾಧಿಸುತ್ತಾರೆ. ಈ ಒತ್ತೆಕೋಲದಲ್ಲಿ ಪ್ರಧಾನವಾಗಿ ಭಾಗವಹಿಸುವವರು ಮಲೆಯಾಳ ಮಾತನಾಡುವವರಾದರೂ, ತುಳು ಮಾತನಾಡುವವರೂ ಅದರಲ್ಲಿ ಭಾಗವಹಿಸುತ್ತಾರೆಂಬುದು ಗಣನೀಯ ವಿಷಯವಾಗಿದೆ.

ಕುಂಡೋರ ಚಾಮುಂಡಿ ತೆಯ್ಯಂವು ಕುಂಬ್ಳೆ ಸೀಮೆಯ ಕುಂಟಾರಿನಲ್ಲಿ ನೆಲಸಿದೆ. ಅದರ ತೋಟ್ಟಂದಲ್ಲಿ ಕುಂಬ್ಳೆ ಸೀಮೆ ಮತ್ತು ಮಂಗಳೂರಿನ ಪ್ರಸ್ತಾಪವಿದೆ.

ಕೇರಳದ ಕಣ್ಣಾನ್ನೂರು ಜಿಲ್ಲೆಯಲ್ಲಿ ಒಂದು ಸ್ಥಳಕ್ಕೆ ತುಳುಮನ್ನೂರ್‌ ಎಂಬ ಹೆಸರಿದೆ. ಅಲ್ಲಿ ನೆಲಸಿರುವ ಭಗವತಿಗೆ ತುಳುವನತ್ತು ಭಗವತಿಯೆಂದೇ ಹೆಸರು. ಪುಲ್ಲೂರ್ಣ ದೈವದ ತೋಟ್ಟಂ ಪಾಟ್ಟಿನಲ್ಲೂ ಕೈಲಾಸದಿಂದ ಶಿವಪಾರ್ವತಿಯರು ತುಳುವನಕ್ಕೆ ಬಂದು ಹುಲಿರೂಪದಲ್ಲಿ ಸಂಚರಿಸಿ ಹುಲಿ ಮಕ್ಕಳನ್ನು ದೇವಿ ಪ್ರಸವಿಸಿದಳೆಂದೂ ಪ್ರಸ್ತಾಪವಿದೆ.

ಕುಂಬ್ಳೆಯ ಸಮೀಪ ಪಾರೆಸ್ಥಾನದಲ್ಲಿ ‘ಆಲಿ ತೈಯಂ’ ಇದೆ. ಇಲ್ಲಿ ಆಸ್ತಿಕನಾದ ಮುಸ್ಲಿಮನೊಬ್ಬನು ಚಾಮುಂಡಿ ದೇವಿಯರಲ್ಲಿ ಐಕ್ಯನಾದ ಕಥೆಯನ್ನು ಹೇಳುತ್ತಾರೆ. ಇದು ತೀಯ (ಮಲೆಯಾಳ ಬಿಲ್ಲವ)ರ ಸ್ಥಾನವಾದರೂ ಆ ದೈವದ ಮಹಿಮೆಯನ್ನರಿತ ಊರ ಪರವೂರ ತುಳುವರು ಸಾವಿರಗಟ್ಟಲೆಯಲ್ಲಿ ಅಲ್ಲಿ ಬಂದು ಆರಾಧಿಸುತ್ತಾರೆ. ಮೂವಾಳಂ ಕುಳಿ ಚಾಮುಂಡಿಯ ಕಥೆಯಲ್ಲಿ ಕೇರಳದ ‘ಅರವತ್ತ್‌ಎಡಮನೆ’ ತಂತ್ರಿಗಳಿಗೂ ತುಳುನಾಡಿನ ಮಧೂರಿಗೆ ಸಮೀಪದ ‘ಉಳಿಯ’ ಮನೆತನದ ತಂತ್ರಿಗಳಿಗೂ ಜರಗಿದ ಮಂತ್ರ ತಂತ್ರದ ಯುದ್ಧದ ಪರಿಣಾಮವಾಗಿ, ಮೂವಾಳಂ ಕುಳಿ (ಮೂರಾಳು ಹೊಂಡ) ಚಾಮುಂಡಿಯ ಅದ್ಭುತಕರವಾದ ಉದ್ಭವವಾಯಿತೆಂದು ಕಥೆಯಿದೆ. ತುಳುವೀರನ್‌ ತೊಟ್ಟಂ ಪಾಟ್ಟಿನಲ್ಲಿ ತುಳುನಾಡಿನ ಹಲವು ಊರುಗಳ ಹೆಸರುಗಳಿವೆ. ಬಡಗು ರಾಜ್ಯದಲ್ಲಿ ಉತ್ಪತ್ತಿಯಾದ ತುಳುವೀರನ್‌ ಭೂತವು ಉಡುಪಿಯ ಶ್ರೀ ಕೃಷ್ಣನನ್ನೂ ಭಗವತಿಯನ್ನೂ ಶಾಸ್ತಾರನನ್ನೂ ನೋಡಿ ನೆಲಸಿದೆಯೆಂಬ ಪ್ರಸ್ತಾಪ ಮಾತ್ರವಲ್ಲದೆ, ಮುಂದೆ ಕುಂಬ್ಳೆ ಸೀಮೆಯಲ್ಲಿ

ಅನ್ನು ಅಡೂರು ದೇವನ್‌ ಮಧೂರು ದೇವನ್‌
ಕಾವಿಲ್‌ ದೇವನಂ ಕನ್ನಪುರತ್ತ್‌ ದೇವನ್‌
ಓರಂಕುಳತ್ತ್‌ ಶಾಸ್ತಾವ್‌ ಕಿನ್ನಿಮಾಲ ಪೂಮಾಲ
ಅನಂತಪುರತ್ತು ಪೆರುಮಾಳೇ
ತಿರುವಳ್ಳಂ ವಿಶ್ವಸಿಚ್ಚು ಕಂಡು
ನಾಂಗುಳಿ ದೇವರೆಯುಂ, ಇರುವರ್‌ ಭೂತಂಙಳೆಯು ಕಂಡು ವಂದಿಚ್ಚು
ಎಂಬ ಹೇಳಿಕೆಯೂ ಇದೆ.

ಪುಳ್ಳಿಕುರತ್ತಿ ಪಾಟ್ಟಿನಲ್ಲಿ ಕುರತ್ತಿ ಮೊದಲಾಗಿ ಬಂದು ನೆಲಸಿದ ಸ್ಥಳವೇ ತುಳುನಾಡು ಎಂದಿದೆ. ಕುಂಞಾರ್‌ಕುರುತ್ತಿ ಪಾಟ್ಟಿನಲ್ಲಿ ಮಂಗಲಪುರಂ (ಮಂಗಳೂರು) ಮಂಜುಚ್ಚಿರ ಪಾಲಂ (ಮಂಜೇಶ್ವರ ಸೇತುವೆ) ಕಾಂಞಾರೋಟ್‌ (ಕಾಸರಗೋಡು) ಎಂಬ ಪ್ರಸ್ತಾಪವಿದೆ. ಇವೆಲ್ಲವೂಗಳೂ ತುಳುವರ ಮತ್ತು ಮಲೆಯಾಳೀಗಳ ಸಹಬಾಳ್ವೆಯನ್ನು ಸೂಚಿಸುವ ಅಂಶಗಳೇ ಆಗಿವೆ. ಕಣ್ಣಾನೂರಿನಿಂದ ಉತ್ತರಕ್ಕೆ ವಳಪಟ್ಟಣಂ, ನೀಲೇಶ್ವರ, ಚೆರುವತ್ತೂರು ಮೊದಲಾದೆಡೆ ಗಳಲ್ಲಿ ತುಳು ಭೂತಗಳಿಗೂ ಸ್ಥಾನ, ಗುಡಿಗಳನ್ನು ಕಟ್ಟಿ ಆರಾಧಿಸುತ್ತಾರೆ. ಆ ಪ್ರದೇಶಗಳಲ್ಲಿ ಭೂತ ಕಟ್ಟುವವರೆಂದರೆ ಪರವರು, ಕೋಪಾಳರು, ಮಲಯರು ಮತ್ತು ನೆಕ್ಕಾರರು. ಸಾಂಸ್ಕೃತಿಕವಾಗಿ ಇಲ್ಲಿ ತುಳು ಮಲೆಯಾಳ ಭೂತಗಳು ಒಂದಾಗಿವೆ. ಗುಳಿಗ ಇಲ್ಲಿ ದ್ವಿಭಾಷಿಕನು. ಆತನ ಕುರಿತಾದ ಪಾಡ್ದನ ತುಳುವಿನದು. ಭೂತಾವೇಶದ ನಂತರ ನುಡಿಗಳೆಲ್ಲ ಮಲಯಾಳದಲ್ಲಿ. ನಾಡಿನ ಸಂಪತ್ತಿಗೂ ಕ್ಷೇಮಕ್ಕೂ ಕಣ್ಣೂರು ಜಿಲ್ಲೆಯ ಪಾಣತ್ತೂರ್‌ನಲ್ಲಿಯೂ ಇತರೆಡೆಗಳಲ್ಲಿಯೂ ಕೊರಗಜ್ಜನ ವೇಷ ಕಟ್ಟಿ ಆಡುತ್ತಾರೆ. ವೇಷ ವಿಧಾನ ಮಾತು ಎಲ್ಲಾ ಮಲೆಯಾಳ ತೆಯ್ಯಂಗಳಿಗಿಂತ ಭಿನ್ನವಾಗಿದೆ. ಈ ಭೂತ ಕಟ್ಟುವವರು ಕೋಪಾಳರು. ಕಾಸರಗೋಡಿನಿಂದ ದಕ್ಷಿಣ ಮತ್ತು ಕಣ್ಣೂರಿನಿಂದ ಉತ್ತರದ ಪ್ರದೇಶಗಳಲ್ಲಿ ತುಳು ಭೂತಗಳನ್ನು ಕಟ್ಟಲು ಪರವರನ್ನು ಸುಳ್ಯ, ಪುತ್ತೂರು ಭಾಗದಿಂದ ತರಿಸುತ್ತಾರೆ. ಕೋಪಾಳರು ಆ ಪ್ರದೇಶದಲ್ಲಿಯೇ ಇದ್ದಾರೆ. ಅವರು ಮನೆಯೊಳಗೆ ಮಾತ್ರ ತುಳು ಮಾತನಾಡುತ್ತಾರೆ. ಮನೆಯಿಂದ ಹೊರಗೆ ವ್ಯವಹಾರ ಮಾಡುವುದು ಮಲೆಯಾಳದಲ್ಲಿ. ಭೂತ ಕಟ್ಟಿದಾಗ ಮಲಯಾಳ ಮಿಶ್ರಿತ ತುಳುವಿನಲ್ಲಿ ನುಡಿಸುತ್ತಾರೆ.

ಕುಂಬ್ಳೆಯ ಸಮೀಪ ಶ್ರೀ ಪೆರ್ಣೆ ಭಗವತಿ ಕ್ಷೇತ್ರದಲ್ಲಿ ಒಟ್ಟು ಏಳು ದೈವಗಳ ಸ್ಥಾನಗಳಿವೆ. ಇವುಗಳಲ್ಲಿ ಐದು ಮಲೆಯಾಳ ದೈವಗಳು ಮತ್ತು ಎರಡು ತುಳು ದೈವಗಳು. ಮಲೆಯಾಳ ಮಾತೃಭಾಷೆಯ ವಾಣಿಯ ಸಮುದಾಯದವರು ಆಸ್ಥಾನದ ದೈವಗಳು ಕೋಮರರು (ದರ್ಶನದ ಪಾತ್ರಿಗಳು) ಮಲೆಯಾಳ ಮಾತೃಭಾಷೆಯ ಈ ಕೋಮರರಲ್ಲಿ ಉತ್ಸವ ಹಾಗೂ ಪರ್ವಗಳ ವೇಳೆ ತುಳು ದೈವದ ಕೋಮರರು ತುಳುವಿನಲ್ಲೇ ‘ಅರುಳ್ಪಾಡ್‌’ (ದೈವದ ನುಡಿ) ನಡೆಸುತ್ತಾರೆ. ಇವುಗಳಿಂದೆಲ್ಲ ಬಹು ಹಿಂದಿನ ಕಾಲದಿಂದಲೇ ತುಳುನಾಡು ಮತ್ತು ಮಲಯಾಳ ನಾಡುಗಳೊಳಗೆ ತುಳುವರು ಮತ್ತು ಮಲೆಯಾಳಿಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧ ಸಮನ್ವಯವಿತ್ತು ಎಂದು ತಿಳಿದು ಬರುತ್ತದೆ.

‘ನಂದರಾಯನ ಬದುಕು ನರಿನಾಯಿ ತಿಂದು ಹೋಯಿತು’ ಎಂಬ ನಾಣ್ನುಡಿಯಿದೆ. ಹಿಂದೆ ತುಳುನಾಡಿನಲ್ಲಿ ನಂದರಾಯ ಎಂಬ ಒಬ್ಬ ಆದಿವಾಸಿ ರಾಜನು ಆಳುತ್ತಿದ್ದ ವಿಚಾರ ‘ಗ್ರಾಮ ಪದ್ಧತಿ’ಯಲ್ಲಿ ದಾಖಲೆಯಿದೆಯೆಂದು, ಇತಹಾಸ ತಜ್ಞ ಸಿ. ರಾಘವನ್‌ಕಾಸರಗೋಡು ಚರಿತ್ರೆಯಲ್ಲಿ ಪ್ರಸ್ತಾಪಿಸಿರುವರು. ಈ ಎರಡು ನಾಡುಗಳಲ್ಲಿ ರೂಢಿಯಲ್ಲಿದ್ದ ‘ಮರುಮಕ್ಕತ್ತಾಯ’ ಅಳಿಯ ಕಟ್ಟು ಪದ್ಧತಿಯು ಈ ಸಮನ್ವಯವನ್ನು ಸೂಚಿಸುತ್ತದೆ.

ಇನ್ನು ತುಳು ಮಲೆಯಾಳ ಭಾಷಿಕ ಸಂಬಂಧವನ್ನು ಪ್ರಸ್ತಾಪಿಸುವಾಗ ಅಲ್ಲಿಯ ಜನರ ಭಾಷಾ ವ್ಯವಹಾರವನ್ನು ಪರಿಗಣಿಸಿಕೊಳ್ಳಬೇಕಾಗುತ್ತದೆ. ಬಹುಭಾಷಾ ಪ್ರದೇಶವಾದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಪ್ರದೇಶಗಳಲ್ಲಿ ತುಳು, ಕೆಲವು ಸಮುದಾಯದವರ ಮಾತೃಭಾಷೆ ಹೊರತು ಆ ಪ್ರದೇಶಗಳಲ್ಲಿಯ ಯಾವುದೇ ಭಾಷೆಗಳನ್ನಾಡುವ ಜನರ ವ್ಯವಹಾರ ಭಾಷೆಯೂ ಆಗಿದೆ. ಮಲೆಯಾಳ ಮಾತನಾಡುವ ಮುಸ್ಲೀಮರು ಸಮೇತ ಇತರ ಎಲ್ಲಾ ಮಲೆಯಾಳ ಮಾತನಾಡುವವರೂ, ತಮ್ಮೊಳಗೆ ಹೊರತು, ಇತರ ಎಲ್ಲರೊಡನೆ ತುಳುವಿನಲ್ಲಿ ವ್ಯವಹರಿಸುತ್ತಾರೆ. ಕಾಸರಗೋಡಿಗೆ ಸಂಬಂಧಿಸಿದಂತೆ ತುಳುವಿನಂತೆ ಮಲೆಯಾಳವು ವ್ಯವಹಾರ ಭಾಷೆಯಾಗಿ ವರ್ತಿಸುತ್ತದೆ. ಇಲ್ಲಿ ಮಲೆಯಾಳ ಮಾತನಾಡುವ ವಿವಿಧ ಸಮುದಾಯದವರ ಆಡುನುಡಿಗಿಂತ ಭಿನ್ನವಾಗಿ, ಶಿಷ್ಟ ಮಲಯಾಳ ಭಾಷಾ ಪ್ರಯೋಗವೂ ಕಂಡುಬರುತ್ತದೆ.

ತುಳು ಮಲೆಯಾಳಗಳ ಸಂಬಂಧವನ್ನು ಹೇಳುವಾಗ ತುಳು ಲಿಪಿಯ ಬಗ್ಗೆ ಪ್ರಸ್ತಾಪಿಸುವುದೂ ಉಚಿತವೆಂದು ತೋರುತ್ತದೆ. ತುಳುವಿಗೆ ಲಿಪಿ ಉಂಟು – ಇಲ್ಲ ಎಂಬ ಭಿನ್ನಾಭಿಪ್ರಾಯಗಳು ನೆಲೆನಿಂತಿದ್ದ ಕಾಲದಲ್ಲಿ ೧೭ನೇ ಶತಮಾನದಲ್ಲಿ ರಚಿತವಾದದ್ದು ಎನ್ನಲಾದ ಮಲೆಯಾಳ ಲಿಪಿಗೆ ಸ್ವಾಮ್ಯವಿರುವ ಲಿಪಿಯೊಂದರಲ್ಲಿ ವಿಷ್ಣು ಕವಿ ರಚಿಸಿದ ‘ಭಾಗವತ’ ಗ್ರಂಥವೊಂದು ದೊರಕಿತು. ತುಳುಭಾಷೆಯಲ್ಲಿ ರಚನೆಗೊಂಡ ಈ ಗ್ರಂಥವು ಉಪಯೋಗಿಸಿದ ಲಿಪಿಯ ಬಗ್ಗೆ ವಿದ್ವಾಂಸ, ವೆಂಕಟರಾಜ ಪುಣಿಂಚತ್ತಾಯರು ಸೂಕ್ತ ಜಿಜ್ಞಾಸೆ ನಡೆಸಿದರು. ಸಂಸ್ಕೃತ ಸಾಹಿತ್ಯವನ್ನೂ ವೇದ ಮಂತ್ರಗಳನ್ನೂ ಬರೆಯಲು ಗ್ರಂಥ ಲಿಪಿಯನ್ನು ಉಪಯೋಗಿಸುತ್ತಿದ್ದ ‘ಆರ್ಯ ಎಳುತ್ತ್‌’ ಎಂದು ಕರೆಯಲ್ಪಟ್ಟ ಆ ಲಿಪಿಯೇ ಮುಂದೆ ತುಳು ಮಲೆಯಾಳ ಲಿಪಿಯೆಂದು ಕರೆಯಲ್ಪಟ್ಟು ಅದು ಈಗ ಚಾಲ್ತಿಯಲ್ಲಿರುವ ಮಲಯಾಳ ಲಿಪಿಯ ಒಂದು ಪ್ರಭೇದವೇ ಆಗಿದೆ ಎಂದು ಹೇಳಿದರು. ಅಲ್ಲದೇ ಆ ಗ್ರಂಥದಲ್ಲಿ ಉಪಯೋಗಿಸಿರುವ ‘ಸ್ಟ್‌’ ಎಂಬ ಪ್ರತ್ಯೇಕ ಧ್ವನಿಮಾಕ್ಕೆ ಮಲಯಾಳದ ‘ಟ್ಟ್‌’ ಧ್ವನಿಮಾದೊಂದಿಗೆ ಸಾಮ್ಯವನ್ನು ಕಲ್ಪಿಸಿರುವರು.

ತುಳು ಮಲೆಯಾಳಗಳೊಳಗಿನ ಭಾಷಿಕ ಸಂಬಂಧವನ್ನು ಹೇಳುವಾಗ ಅದನ್ನು ಎರಡು ಬಗೆಯಾಗಿ ಪರಿಗಣಿಸಬೇಕಾಗುತ್ತದೆ.

೧. ಮೂಲ ದ್ರಾವಿಡದಿಂದ ಬೇರ್ಪಟ್ಟು ಸ್ವತಂತ್ರ ಭಾಷೆಯಾಗಿ ಬೆಳೆದಾಗ ಮೂಲದಿಂದ ಉಳಿಸಿಕೊಂಡ ಅಂಶಗಳು.

. ಎರಡು ಭಾಷೆಗಳ ಸಂಪರ್ಕದಿಂದ ತರುವಾಯ ಸ್ವೀಕರಿಸಿದ ಪದಗಳು

ಮೂಲ ದ್ರಾವಿಡದಿಂದ ಉಳಿಸಿಕೊಂಡು ಬಂದ ಅಂಶವನ್ನು ಧ್ವನಿಮಾ ಇಲ್ಲವೇ ಆಕೃತಿಮಾ ಹಂತಗಳಲ್ಲಿಯೂ ಎರಡು ಭಾಷೆಗಳ ಸಂಪರ್ಕದಿಂದ ತರುವಾಯ ಸ್ವೀಕರಿಸಿದ ಅಂಶಗಳನ್ನು ಪದಗಳ ತಾರ್ಕಿಕ ಹಂತ (Logical level) ದಲ್ಲಿಯೂ ಗುರುತಿಸಕೊಳ್ಳಬಹುದು.

‘ಅಣ್ತ್‌’, ‘ಕೈ’, ‘ಪತ್ತ್‌’ ಮೊದಲಾದ ಮೂಲದ್ರಾವಿಡ ಪದಗಳು ಯಾವುದೇ ಬದಲಾವಣೆಯಿಲ್ಲದೆ ಎರಡು ಭಾಷೆಗಳಲ್ಲಿಯೂ ಉಳಿದುಕೊಂಡಿವೆ.

ಅದೇ ರೀತಿ ಪದಾಂತ್ಯದ ಸಂವೃತ್ತ ‘ಉ’ ಕಾರಗಳು ಮತ್ತು ಧ್ವನಿಮಾವು ಎರಡು ಭಾಷೆಗಳಲ್ಲೂ ಉಳಿದುಕೊಂಡಿವೆ. ಉದಾ:

ತುಳು ಮಲಯಾಳಂ ಅರ್ಥ
ಪೇರ್‌ ಪಾಲ್‌ ಹಾಲು
ಕಾರ್‌ ಕಾಲ್‌ ಕಾಲು
ಕಟ್ಟ್‌ ಕೆಟ್ಟ್‌ ಕಟ್ಟು

ಧ್ವನಿಮಾ ಉಲ್ಲವೆ ಆಕೃತಿಮಾ ವ್ಯತ್ಯಾಸಗಳೊಂದಿಗೆ ಎರಡೂ ಭಾಷೆಗಳಲ್ಲಿ ಉಳಿದುಕೊಂಡಿರುವ ಜ್ಞಾತಿ ಪದಗಳು:

೦೧. ಮೂಲದ್ರಾವಿಡದ ‘ನ್ಡ್ರ್‌’ ಮಲಯಾಳದಲ್ಲಿ ‘ನ್ನ್‌’ ಎಂದೂ ತುಳುವಿನಲ್ಲಿ ‘ಜಿ’ ಎಂದೂ ಆಗಿದೆ.

ಮೂಲದ್ರಾವಿಡ ಮಲಯಾಳಂ ತುಳು ಅರ್ಥ
ಒನ್ಡ್ರ್‌ ಒನ್ನ್‌ ಒಂಜಿ ಒಂದು
ಕನ್ಡ್ರ್‌ ಕನ್ನ್‌ ಕಂಜಿ ಕರು
ಪನ್ಡ್ರಿ ಪನ್ನಿ ಪಂಜಿ ಹಂದಿ

ಪದಾದಿಯ ವ್ಯಂಜನದೊಂದಿಗೆ ದೀರ್ಘಸ್ವರ ಬಂದರೆ ಅನುನಾಸಿಕವನ್ನು ಕಳಕೊಳ್ಳುತ್ತದೆ. ಪದಾಂತ್ಯದಲ್ಲಿ ಅನುನಾಸಿಕವಿಲ್ಲದುದು ಹಾಗೇ ಉಳಿಯುತ್ತದೆ.

ಮೂನ್ಡ್ರ್‌ ಮೂನ್ನ್‌ ಮೂಜಿ ಮೂರು
ತೋನ್ಡ್ರ್‌ ತೋನ್ನ್‌ ತೋಜಿ ತೋರು
ಊಟ್ಟ್‌ ಊಟ್ಟ್‌ ಊಜಿ ಒಸರು

೦೨. ಮೂಲದ್ರಾವಿಡದ ‘ರ್‌’ ಮಲೆಯಾಳದಲ್ಲಿ ‘ರ್‌’ ಆಗಿಯೇ ಉಳಿಯುತ್ತದೆ. ತುಳುವಿನಲ್ಲಿ ‘ಜಿ’ ಆಗುತ್ತದೆ.

ಆರ್‌ ಆರ್‌ ಆಜಿ ಆರು

ಮೂಲದಲ್ಲಿ ‘ರ್‌+ ಇ’ ಮತ್ತು ‘ರ್‌+ ಇ’ ತುಳುವಿನಲ್ಲಿ ‘ಜಿ’ ಆಗುತ್ತದೆ.

ಕರಿ ಕರಿ ಮಜಿ ಮಸಿ
ಕರಿ ಕರಿ ಕಜಿಪ್ಪು ಪಲ್ಯ, ಪದಾರ್ಥ
ತರಿಕ್ಕ್‌ ತರಿಕ್ಕುಕ ತಜಿಪು ಕೊಚ್ಚು

೦೩. ಮೂಲದ್ರಾವಿಡದ ‘ಇ’, ‘ಎ’ಗಳು ತುಳುವಿನಲ್ಲಿ ‘ಉ’, ‘ಓ’ ಗಳಾಗುತ್ತವೆ.

ಪೀರ್ಣಂ ಪಿಣಂ ಪುಣ ಹೆಣ
ಪಿಣ್ಣಾಕ್‌ ಪಿಣ್ಣಾಕ್‌ ಪುಂಡಿ ಹಿಂಡಿ
ಪೆಣ್ಣ್‌ ಪೆಣ್ಣ್‌ ಪೊಣ್ಣು ಹೆಣ್ಣು
ವೆಳ್ಳಿ ವೆಳ್ಳಿ ಬೊಳ್ಳಿ ಬೆಳ್ಳಿ

ಮೂಲದ ‘ಉ ತುಳುವಿನಲ್ಲಿ ‘ಇ’ ಆದದೂ ಇದೆ.

ಪುಲಿ ಪುಲಿ ಪಿಲಿ ಹುಲಿ

ಮೂಲದ ‘ಊ ತುಳುವಿನಲ್ಲಿ ‘ಉ’ ಆದದೂ ಉಂಟು.

ಪೂಣೈ ಪೂಚ ಪುಚ್ಚೆ ಬೆಕ್ಕು