ಬಹುಜನಾಂಗಿಕ, ಬಹುಭಾಷಿಕ ಸಮುದಾಯಕ್ಕೆ ಒಂದು ಮಾದರಿಯಂತಿರುವ ನಮ್ಮ ದಕ್ಷಿಣ ಕನ್ನಡದ ತುಳುನಾಡು ವಲಯದಲ್ಲಿ ರುವ ಜನಾಂಗಗಳಲ್ಲಿ ಮಹಾರಾಷ್ಟ್ರ ಮೂಲದ ಚಿತ್ಪಾವನ ಬ್ರಾಹ್ಮಣ ಸಮಾಜವೂ ಒಂದು[1], ದ. ಕ. ಉಡಪಿ ಜಿಲ್ಲೆಗಳಲ್ಲಿ ಇವರ ವಸತಿಗಳಿದ್ದು, ಒಟ್ಟು ಸುಮಾರು ಐದಾರು ಸಾವಿರ ಜನಸಂಖ್ಯೆ ಇದೆ.

ಮೂಲತಃ ಮಹಾರಾಷ್ಟ್ರದ ರತ್ನಾಗಿರಿ -ಗುಹಾಗರ ಪ್ರದೇಶದ ಈ ಜನಾಂಗವು ಈಗಲೂ ಆ ಪ್ರದೇಶದಲ್ಲೂ, ಸಿಂಧುದುರ್ಗ, ಸಾವಂತವಾಡಿ, ಗೋವಾಗಳಲ್ಲೂ, ಅತ್ತ ಘಟ್ಟದ ಮೇಲಣ ಪುಣೆಯಲ್ಲೂ ದೊಡ್ಡ ಸಂಖ್ಯೆಯಲ್ಲಿದೆ. ದಕ್ಷಿಣ ಕನ್ನಡಕ್ಕೆ ಆ ಜನರು, ಕ್ರಿ. ಶ. ಸುಮಾರು ೧೬೦೦-೧೭೦೦ರ ಮಧ್ಯೆ ವಲಸೆ ಬಂದಂತೆ ಕಾಣುತ್ತದೆ. ಹಾಗಾಗಿ ಹತ್ತರಿಂದ ಹದಿನೈದು ತಲೆಮಾರುಗಳ ಹಿಂದೆ ಈ ವಲಸೆ ಆಗಿದೆ ಎನ್ನಬಹುದು.

ವಲಸೆಗೆ ಕಾರಣಗಳು ಸ್ಪಷ್ಟವಿಲ್ಲ. ಜಗತ್ತಿನಾದ್ಯಂತ ಕರಾವಳಿ ಪ್ರದೇಶಗಳಲ್ಲಿ ವಲಸೆಗಳು ಹೆಚ್ಚು ಅನ್ನುವರು. ಚಿತ್ಪಾವನರ ಸ್ಮೃತಿಗಳಲ್ಲಿ ಹಿಂದು -ಮುಸ್ಲಿಂ ಸಂಘರ್ಷವನ್ನು ಕಾರಣವಾಗಿ ಹೇಳಲಾಗುತ್ತದೆ. ಗೋವಾದಿಂದ ತುಳುನಾಡಿಗೆ ದೊಡ್ಡ ವಲಸೆಗಳಿಗೆ ಕಾರಣವಾದ ಪೂರ್ಚುಗೀಸರ ಮತೀಯ ದೌರ್ಜನ್ಯವನ್ನು ಚಿತ್ಪಾವನರ ವಲಸೆಗೆ ಕಾರಣವಾಗಿ ಹೆಳಲಾಗುವುದಿಲ್ಲ ಎಂಬುದು ವಿಶೇಷ. ಆದುದರಿಂದ ಇವರು ಗೋವಾ ಪ್ರದೇಶದಿಂದ ಬಂದಿರದೆ, ನೇರವಾಗಿ ರತ್ನಾಗಿರಿ ವಲಯದಿಂದ ಬಂದಿರುವ ಸಾಧ್ಯತೆ ಹೆಚ್ಚು. ಪೇಶ್ವಾಯಿ ಆಡಳೀತದ ಉಲ್ಲೇಖಗಳಾಗಲಿ, ಶಿವಾಜಿಯ ಬಗೆಗಿನ ವಿಚಾರಗಳಾಗಲಿ ಇಲ್ಲದಿರುವುದರಿಂದ ಪೇಶ್ವೆ ಪೂರ್ವ ಮತ್ತು ಶಿವ ಪೂರ್ವದ ವಲಸೆ ಇರಬಹುದು.

ದ. ಕ. ಉಡಪಿ ಜಿಲ್ಲೆಗಳಲ್ಲಿ ಚಿತ್ಪಾವನರು ಕಾರ್ಕಾಳ ತಾಲೂಕಿನ ಮಳ, ದುರ್ಗ, ಕೆರವಾಸೆ ಈದು ಗ್ರಾಮಗಳಲ್ಲಿ, ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ, ಬೆಳ್ತಂಗಡಿ ತಾಲೂಕಿನ ಮುಂಡಾಜೆ; ನಿಡ್ಳೆ, ಸೂಳಬೆಟ್ಟು, ಪಿಲ್ಯಗಳಲ್ಲಿ, ಪೂತ್ತೂರು ತಾಲೂಕಿನ ಶಿಶಿಲ, ಹತ್ಯಡ್ಕ, ಶಿಬಾಜೆ, ಹೊಸತೋಟ, ಅರಸಿನಮಕ್ಕಿ ಪ್ರದೇಶದಲ್ಲಿ ನೆಲೆಯಾದವರು. ಈ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟಕ್ಕೆ ತಾಗಿದ ದುರ್ಗಮ ಅರಣ್ಯಗಳ ಅಂಚುಗಳು ಎಂಬುದು ಗಮನಾರ್ಹ. ಚಿತ್ಪಾವನರ ಎಲ್ಲಾ ಮೂಲ ವಸತಿಗಳು (ವಾಳ್ಯಗಳು : ವಾಳ್ಯ > ವಾಡಾ. ವಾಟಿಕಾ. ತೋಟ) ಹೀಗೆ ದೂರದೂರುಗಳಲ್ಲಿ ಪರ್ವತದಲ್ಲಿ ಏಕಾದವೆಂಬುದು ಕೌತುಕಾಸ್ಪದ. ಈಗ ಚಿತ್ಪಾವನರು ನಗರಗಳಿಗೂ, ಅನ್ಯತ್ರ ಪ್ರದೇಶಗಳಲ್ಲೂ ಹರಡಿದ್ದಾರೆ.

ಚಿತ್ಪಾವನ ಬ್ರಾಹ್ಮಣರ ಭಾಷೆ ಚಿತ್ಪಾವನೀ ಎಂಬುದು, ಪ್ರಾಚೀನ ಮಹಾರಾಷ್ಟ್ರೀಯ ಒಂದು ರೂಪ. ಕೊಂಕಣದ ಉತ್ತರದ ಗಡಿಯಾದ ರತ್ನಗಿರಿಯಲ್ಲಿ ಮರಾಠಿ ಕೊಂಕಣಿಗಳ ನೆಲದಲ್ಲಿ ಇದು ರೂಪುಗೊಂಡುದರಿಂದ ಇದರ ರಚನೆಯು ವಿಶಿಷ್ಟ, ಅಭ್ಯಾಸಯೋಗ್ಯ. ದಕ್ಷಿಣ ಕನ್ನಡ ಉಡಪಿಗಳ ಎಲ್ಲ ಚಿತ್ಪಾವನರೂ ಇದೇ ಭಾಷೆಯನ್ನೂ ಆಡುತ್ತಾರೆ. ಈ ಚಿತ್ಪಾವನಿಯು ಗೋವಾ- ರತ್ನಗಿರಿಗಳಲ್ಲಿರುವ ಇದೇ ಚಿತ್ಪಾವನಿಗಿಂತ ಹಳತನವನ್ನು ಹೊಂದಿದೆ.

ಈ ಬರಹದಲ್ಲಿ ಚಿತ್ಪಾವನ ಬ್ರಾಹ್ಮಣರ ಭಾಷೆ ಮತ್ತು ಸಂಸ್ಕೃತಿಗಳ ಮೇಲೆ ಆಗಿರುವ ತೌಳವ ಸಂಸ್ಕೃತಿಯ ಪ್ರಭಾವವನ್ನು, ಬಹುಸ್ಥೂಲವಾಗಿ ಪರಿಶೀಲಿಸಲು ಯತ್ನಿಸಿದೆ.

ಚಿತ್ಪಾವನರ ಮತಾಚಾರ, ಧಾರ್ಮಿಕತೆ ಸ್ಮಾರ್ತಭಾಗವತ ಸಂಪ್ರದಾಯದ್ದು. ಗೃಹ್ಯ ವೈದಿಕ ಆಚಾರಗಳಲ್ಲಿ ತೌಳವ ಪ್ರಭಾವವು ಆಗಿಲ್ಲ. ಸಂದ್ಯಾವಂದನೆಯಲ್ಲಿ ಆಚಮನಕ್ಕೆ ಇರುವ ವೈದಿಕ ನಾಮಗಳಾದ ಋಗ್ವೇದಾಯ ಸ್ವಾಹಾ, ಋಗ್ವೇದಾಯ ನಮಃ ಇತ್ಯಾದಿಗಳ ಬದಲು ಕೇಶಾವಾದಿ, ಶ್ರೀಕೃಷ್ಣಾಂತವಾದ ಚರುರ್ವಿಂಶತಿ ಮೂರ್ತಿಗಳ ಬಳಕೆಯು ಪ್ರಾಯಃ ಮಾಧ್ವ ಸಂಪ್ರಾದಾಯದ ಅಥವಾ ವೈಷ್ಣವ ಪ್ರಭಾವವಿರಬಹುದು.

ಚಿತ್ಪಾವನರ ಅನೇಕ ಕೃಷಿ ಭೂಮಿಗಳಲ್ಲಿ ತುಳುನಾಡಿನ ಭೂತಗಳ ಆವಾಸವಿದೆ. ಭೂತಕಲ್ಲು, ಕಲೆ (ಪಿಶಾಚಿ) ಕಲ್ಲುಗಳಿವೆ. ಬ್ರಹ್ಮಸ್ಥಾನ (ಬೆರ್ಮೆರ್ :ಚಿತ್ಪಾವನಿಯಲ್ಲಿ ‘ಬ್ರಹ್ಮೇರು’) ಗಳಿವೆ. ಭೂತಕ್ಕೆ ಪರ್ಬ ಆರಾಧನೆಗಳಿವೆ. ಕೆಲವೆಡೆ ಕೋಲವೂ ಇದೆ. ಭೂತ ಸಂಬಂಧಿಗಳಾದ ಪದಗಳು – ಜಿಡ್ಡೆ, ಕಡ್ತಲ್ಲೆ, ಅಡ್ಡಣ, ನುಡಿ, ಮದಿಪು, ಹುಟ್ಟು, ಕಟ್ಟು- ಮೊದಲಾದುವೆಲ್ಲ ಚಿತ್ಪಾವನಿ ಭಾಷೆಯಲ್ಲಿ ಕಿಂಚಿತ್‌ಪರಿವರ್ತಿತವಾಗಿ, ಚಿತ್ಪಾವನಿ ಪ್ರತ್ಯಯಗಳಿಂದ ಕೂಡಿ ಬಳಕೆಯಲ್ಲಿವೆ. ಉದಾ : ಜಿಡ್ದೆ-ಜಿಡ್ಡಂ, ಗಗ್ಗರ- ಘಾಘ್ಫರೋ, ತೆಂಬರೆ-ತೆಂಬಾರಂ, ಹೆಂಬಾರಂ ಇತ್ಯಾದಿ.

ಚಿತ್ಪಾವನರ ದೇವಾಲಯಗಳ ರಚನೆ ತುಳುನಾಡಿನ ಕ್ರಮದಲ್ಲಿ ವಿಶಾಲವಾಗಿದೆ. ಹೊರಸುತ್ತು, ಪೌಳಿ, ಗರ್ಭಗುಡಿ, ಒಳಸುತ್ತು, ಇವೆ. ಉತ್ತರ ಕೊಂಕಣದಲ್ಲಿರುವುದು ಚಿಕ್ಕ ಗುಡಿಗಳೇ ಹೆಚ್ಚು. ಇಲ್ಲಿಯ ಚಿತ್ಪಾವನರ ದೇವಾಲಯಗಳಲ್ಲಿ ಭೂತಾಲಯಗಳೂ ಇದ್ದು, ವಾರ್ಷಿಕ ಉತ್ಸವದ ಕೊನೆಯ ದಿನ ಭೂತದ ಕೋಲವಿರುವುದು ತೌಳವ ಸಂಪ್ರದಾಯದ ಅಚ್ಚು . (ರತ್ನಾಗಿರಿಯಲ್ಲಿ ಚಿತ್ಪಾವನರಿಗೆ ಭೂತಾರಾಧನೆ ಇಲ್ಲವಷ್ಟೆ)

ಚಿತ್ಪಾವನರಲ್ಲಿ ನಾಗಬನಗಳೂ ಇದ್ದು ನಾಗರ ಪಂಚಮಿಯಂದು ತನು ಹೊಯ್ಯುವ (ತಣು-ತಣ್ಪು ಎಂಬ ಜಲಾಭೀಷೇಕ, ಕ್ಷೀರಾಭಿಷೇಕಗಳು) ಪದ್ಧತಿ ಇದೆ. ಕೆಲವು ಮನೆಗಳಲ್ಲಿ ಪೂಜೆಯ ಪಂಚಾಯತನದ (ಶಿವ, ವಿಷ್ಣು, ಅಂಬಿಕಾ, ಗಣಪತಿ, ಸೂರ್ಯ್ಯ) ಜೊತೆಗೆ ಅಥವಾ ಬೇರೆಯಾಗಿ ನಾಗನ ಪ್ರತಿಮೆಯನ್ನು ಪೂಜಿಸುವರು. ನಾಗಮಂಡಲ, ಧಕ್ಕೆ ಬಲಿ, ಅಶ್ಲೇಷಾ ಬಲಿ, ಮೊದಲಾದ ಪ್ರಸಿದ್ಧ ತೌಳವ ನಾಗಪೂಜಾ ವಿಧಾನಗಳು ಚಿತ್ಪಾವನರಲ್ಲಿ ಇಲ್ಲ. ಮರೀಪೂಜೆ, ಮಾರಿ ಓಡಿಸುವುದು, ಭೂತ ಬಿಡಿಸುವುದು, ಕುಲೆ ಬಿಡಿಸುವುದು (ಪ್ರೇತಮೋಕ್ಷ), ಚೌಂಡಿ, ಕೆಂಡಸೇವೆ, ವಿವಿಧ ‘ದರ್ಶನ’ (ದೈವಾವೇಶ) ಗಳು ಇವುಗಳಿಗೂ ಚಿತ್ಪಾವನರಿಗೂ ಹೆಚ್ಚಿನ ಸಂಬಂಧವಿಲ್ಲ. ಮಂತ್ರವಾದವೂ ಕಡಿಮೆ.

ಪ್ರಾಯಃ ಭೂತಗಳಿಗೆ ಸಂಬಂಧಿಸಿದ ‘ಹೆಬ್ಬಾರಿಕೆ’ (ಹಿರಿದು ಪಾರ್ವ, ಹಿರಿದುಬಾರ- ಹೆಬ್ಬಾರ) ಸ್ಥಾನದಿಂದ ಚಿತ್ಪಾವನರಲ್ಲಿ ಹೆಬ್ಬಾರ ಎಂಬ ಕುಲನಾಮವೂ, ಭೂಮಿಯ ಕಾರಣದಿಂದ ಬಲ್ಲಾಳ ಕುಲನಾಮವೂ ಹೆಚ್ಚುವರಿಯಾಗಿ ಬಳಕೆಯಲ್ಲಿದೆ. ಅದನ್ನು, ಮೂಲ ಕುಲನಾಮದೊಂದಿಗೆ ಬಳಸಲಾಗುತ್ತದೆ. ಉದಾ. ಕೇಳ್ಕರ್‌ ಹೆಬ್ಬಾರ್‌, ಆಠವಲೆ ಹೆಬ್ಬಾರ್‌, ಪಟ್ಟವರ್ಥನ್‌ ಬಲ್ಲಾಳ್ ಇತ್ಯಾದಿ. ಮೂಲ ಕುಲನಾಮ ಲೋಪವಾಗಿ ನವೀನ ಕುಲನಾಮವೇ ರೂಢವಾಗಿರುವುದೂ ಇದೆ.

ದೇವಾಲಯ ಆಚರಣೆಗಳಲ್ಲಿ ದೇವರನ್ನು ಹೊರುವ ಉತ್ಸವ(ಬಲಿ) ಒಂದೇ ಕಡೆ ಇದೆ. (ಅಳದಂಗಡಿ ಸೂಳಬೆಟ್ಟು ಬರಯ ಗೋಪಾಲಕೃಷ್ಣ ದೇವಳ) ಇಲ್ಲಿ ಹೊರುವವರು (ಪಾತ್ರಿ ಎಂದೂ ಹೇಳುವುದಿದೆ) ಚಿತ್ಪಾವನರು. ಚಿತ್ಪಾವನ ದೇವಾಲಯಗಳಲ್ಲಿ ರಥೋತ್ಸವಗಳು ಅರ್ವಾಚೀನ. ಹಿಂದೆ ಪಾಲಕಿ ಉತ್ಸವ ಮಾತ್ರ. ಒಟ್ಟು ಜಾತ್ರೆ ಉತ್ಸವ ಸ್ವರೂಪವು ಆಗಮೋಕ್ತ. ಮರಾಠಿ- ತೌಳವ ವಿಧಾನಗಳ ಸಮನ್ವಯದಲ್ಲಿರುವುದು. ಬಲೀಂದ್ರಪೂಜೆ ತುಳುವ ರೂಪದಲ್ಲಿದ್ದು ಅದರ ಲೆಪ್ಪು (ಕರೆ) ಯುವ ಮದಿಪು ತುಳುವಿನಲ್ಲೆ ಹೇಳುವರು.

ಚಿತ್ಪಾವನರ ಆಹಾರ ಪದ್ಧತಿ ಕರಾವಳಿಯದು. ಇತ್ತೀಚಿನವರೆಗೆ ಅಂದರೆ ಉತ್ತರದ ಮತ್ತು ಪೀಠಭೂಮಿಯ ಪ್ರಭಾವ ಆಗುವವರೆಗೆ ದ. ಕ. ದಿಂದ ರತ್ನಗಿರಿ ತನಕದ ಆಹಾರ ವ್ಯವಸ್ಥೆ ಬಹಳ ಭಿನ್ನವಲ್ಲ. ಅಕ್ಕಿ ಮುಖ್ಯ ಆಹಾರ. ಕಾಯಿ ಪಲ್ಯಗಳೂ ಒಂದೇ ಬಗೆ. ಚಿಕ್ಕ ಸ್ಥಳೀಯ ವ್ಯತ್ಯಾಸಗಳು ಮಾತ್ರ ಇದ್ದುದು. ಹಾಗಾಗಿ ಚಿತ್ಪಾವನರಿಗೆ, ಇಲ್ಲಿಗೆ ಬಂದಾಗ ಆಹಾರದಲ್ಲಿ ಪದ್ಧತಿಗಳು ತೀರ ಬೇರೆ ಎಂದು ಅನಿಸಿರಲಿಕ್ಕಿಲ್ಲ.

ಆಹಾರ ವ್ಯಂಜನಗಳಾದ ‘ಸಾರು, ಹುಳಿ’ ಹೆಸರುಗಳು ಸ್ಥಳೀಯ, ಕಢೀ, ಆಮಚಿ ಶಬ್ಧಗಳು ಹೋಗಿಬಿಟ್ಟಿವೆ. ಉಂಡೆ, ಇಡ್ಲಿ (ಚಿತ್ಪಾವನಿ- ಸಾಂದ್ರಣ) ಮೊದಲಾದ ಪದಗಳು ಸ್ಥಳೀಯ. ಉಳಿದಂತೆ ಚಿತ್ಪಾವನಿ ಪದಗಳೆ ಇವೆ. ಒಟ್ಟು ಆಹಾರ ವ್ಯವಸ್ಥೆಯು ತುಳು ಕನ್ನಡ ಬ್ರಾಹ್ಮಣರ ರೀತಿಯದು. ಅದರಲ್ಲೂ ಸರಳ.

ಚಿತ್ಪಾವನ ಬ್ರಾಹ್ಮಣರಲ್ಲಿ ಹಲರಿಗೆ (ಪ್ರಾಯಃ ಹೆಚ್ಚಿನವರಿಗೆ) ಬಾಲ್ಯದಲ್ಲಿ ತಿಳಿದಿರುವ ಭಾಷೆಗಳು ಚಿತ್ಪಾವನಿ ಮತ್ತು ತುಳು. ಹಲವರಿಗೆ (ಉದಾಹರಣೆಗೆ ಈ ಲೇಖಕ) ಪ್ರಾಥಮಿಕ ಶಾಲೆಗೆ ಬಂದಾಗಲೆ ಕನ್ನಡದ ಪರಿಚಯ. ಆದುದರಿಂದ ತುಳು ಭಾಷೆಯ ಪ್ರಭಾವವು ಚಿತ್ಪಾವನಿಯ ಮೇಲೆ ಆಗಿದೆ. ಈ ಪ್ರಭಾವವು ಮುಖ್ಯವಾಗಿ ಶಬ್ಧ ಭಾಂಡಾರದ ಮೇಲೆ ಆಗಿದೆ. ಆದರೆ ಭಾಷಾ ರಚನೆ, ವಾಕ್ಯ ಸ್ವರೂಪಗಳಲ್ಲಿ ಅಲ್ಲ. ಚಿತ್ಪಾವನಿಯಲ್ಲಿ ಬಳಕೆಗೆ ಬಂದಿರುವ ಕೃಷಿ ಸಂಬಂಧಿ ತುಳು ಶಬ್ಧಗಳು : ಅದರ ಚಿತ್ಪಾವನೀಕೃತ ರೂಪದಲ್ಲಿ :

ಉದಾ : ಕೋಟ್ರೆ (ಕೊಟ್ರಿ. ಖೋರಂ ಚಿತ್ಪಾವನಿ), ಮುಗಪ್ಪಣಂ (ಮೊಗಪಣೆ =ಏತ) (ನೀರ್ನ ಪಾತಿ, ದಂಬೆ) ಕುಂಟಾಣಿ (ಚಿಕ್ಕ ಹಾರೆ), ಮಡು (ದೊಡ್ಡ ಕೊಡಲಿ), ಕಟ್ಟಂ (=ಕಟ್ಟೆ), ದಂಬೆ, ಮುಟ್ಟವೆಚಂ ( =ವ್ಯವಸ್ಥಿತವಾಗಿ ಜೋಡಿಸುವುದು), ಕಲ್ಲೊ, ಹಲ್ಲೊ (=ಮರವೇರಲು ಬಳಸುವ ಕಾಲು ಜೋಡಣೆ ಹಗ್ಗ . ಪಾಹಿಂಡೋ. ಚಿ), ಬೈಮುಟ್ಟೊ (= ಬೈಹುಲ್ಲ ರಾಶಿ), ಫಡಿಮಾಂಚೋ (ಪಡಿಮಂಚ, ಹೊಡಿಮಂಚ), ಪುಣಿ, ಪೂಣಿ (ಗದ್ದೆ ಹುಣಿ, ಮೇರೆಸಾಲು) ಹಡಂಬಾರ (= ಬಾಳೆ ಗಿಡದ ಕೈ), ಗುರುಂಬ (=ಮಳೆ ರಕ್ಷೆಯ ಗೊರಬೆ ಎಂಬ ಸಾಧನ, ಕುರುಂಬ), ಗೋಪಾರಂ (= ಹಾಳೆ ಬೊಪ್ಪಿಗೆಯಂತಹ ಸಾಧನ), ಕೊಕ್ಕಂ (=ಕೊಕ್ಕೆ), ಕಾತ್ತಿ ಹುಡಂಕ್‍(ಕತ್ತಿ ನೇತಾಡಿಸುವ ಸಾಧನ), ಹೆಪ್ಪಾರಿಗೈ(=ತೆಂಗಿನ ಮರದಲ್ಲಿ ಸಿಗುವ ಒಂದು ಬಗೆಯ ವಸ್ತು, ಒಂದು ಜಾತಿಯ ವನಸ್ಪತಿ ವಿಶೇಷ), ಕಾಂಟಿ (=ಕಾಂಟ್ಯಾ, ಬೆತ್ತದ ಬೀಳಲಿನ ದೊಡ್ಡ ಕುಕ್ಕೆ), ಕುರ್ವಂ (=ಕುರ್ವೆ, ಸಣ್ಣಕುಕ್ಕೆ), ಹುಂಡಿ (=ಹೊಂಡ), ಮುದಾರ (ಹಳೆ ಎಲೆ, ಸೋಗೆ ಇತ್ಯಾದಿ ಸೇರಿದ ಮಿಶ್ರಣ, ಎಲೆ ಮಣ್ಣು ಗೊಬ್ಬರ), ಕುಟ್ಟಿ (=ಕುಟ್ಟಿ. ಮರದ ಚಿಕ್ಕ ತುಂಡು), ಕುತ್ತೀ (=ಮರಗಿಡ ಕಡಿದಾಗ ಉಳಿಯುವ ವೃಕ್ಷಮೂಲದ ಮೇಲ್ಭಾಗ) ಇತ್ಯಾದಿ ಹಲವು ಇವೆ. ಕೃಷಿ ಕ್ಷೇತ್ರ ಬೇಸಾಯದ ಗದ್ದೆಯು ಚಿತ್ಪಾವನರಲ್ಲಿ ಗಾದ್ದೊ ಎಂದೇ ಇದೆ. ತುಳುವಿನ ‘ಕಂಡ’ ಕಾಂದೊ ಇಲ್ಲ ಎಂಬುದು ವಿಶಿಷ್ಟ.

ಚಿತ್ಪಾವನರಲ್ಲಿರುವ ತುಳು ವೃಕ್ಷನಾಮಗಳು

ಮರ್ವೊ (ಮರ್ವ, ಮತ್ತಿ), ಬೈಮುಟ್ಟೊ, ಕುಂಟಾಲ್ (= ಕುಂಟ ನೇರಳೆ), ಇಜಿನ (=ದಾಲ್ಚೀನಿ), ಸಾಂತೀ (ಶಾಂತಿ ಕಾಯಿ), ಕಾಟ್‌ ಬಾಳೇ (ಕಾಟು ಬಾಳೆ, ಗಾಳಿ ಬಾಳೆ), ಮಾದೇರಿ (=ಒಂದು ಬಗೆಯ ಬಳ್ಳಿ), ಬಾಪಿ ಮರ್ದ (=ಬಾವುಗಳ ಚಿಕಿತ್ಸೆಗೆ ಬಳಸುವ ಒಂದು ವನಸ್ಪತಿ) ಇತ್ಯಾದಿ. ಮುಕ್ಕಬಾರ (= ಮೂರು ಕವಲಿನ ಮಣೆ)

ಕೆಲವು ತುಳು ಕ್ರಿಯಾಪದಗಳು, ವಾಗ್ರೂಢಿಗಳು

ಕಿಂರ್ಬವೆಚಂ (=ತುರಿಕೆ), ದುಂಬುಪಿರಾ(= ಹಿಂದು ಮುಂದಾಗು), ಸಂತಾನ ಮುತ್ತಾವ್ವೆಚಂ (=ಸಂತಾನ ಮುಕ್ತಿ ಹೋಗು, ವಂಶನಾಶವಾಗು), ಫಿರೆಸ್ಸವೆಚಂ (=ಕರೆಸು, ಫಿರಸ್ಸುನೆ), ಮುರ್ಯೋಘಲ್ಲವೆಚೊ (=ಬೊಬ್ಬೆ, ಶಾಪ ಹಾಕುವಿಕೆ), ಕುಡ್ಪವೆಚಂ (=ಕೊಡುವುದು, ಹನಿ ಬೀಳುವುದು, ಉದುರುವುದು) ಬಿರ್ಕವೆಚಂ (= ಚೆಲ್ಲುವುದು), ಬರ್ಪವೆಚಂ (=ಬರೆಯಾಗುವಂತೆ ಒರಸು, ಮುಳ್ಳು ಗಿಡ ಇತ್ಯಾದಿ ಒರಸು).

ಪೊರ್ಬವೆಂಚಂ (=ಪೊಣರು. ಕಷ್ಟಪಡು, ಹೋರಾಡು), ಫಿರ್ಪಚೆಚಂ (=ಹಿರಿಯುವುದು, ಆವೇಶ ಇಳಿಯುವುದು) ಇತ್ಯಾದಿ.

ಕೆಲವು ವಸ್ತು ನಾಮಗಳು

ಮಂಡಂ (=ತಲೆ, ಮಂಡೆ, ಕೆಲವೊಮ್ಮೆ ಹೀನಾರ್ಥಕ), ಕೀಂತ (= ಮರ ಇತ್ಯಾದಿಗಳಿಂದ ತೆಗೆದ ಚಿಕ್ಕ ತೊಗಟೆಯ ಉದ್ದದ ತುಂಡು, ಕೀಂತು), ಮಣ್ಣಿ (=ಅಕ್ಕಿಯ ಹಿಟ್ಟಿನ ತಿಂಡಿ, ಹಲ್ವ, ಚಿಕ್ಕಮಕ್ಕಳ ಪಿಷ್ಟಾಹರ), ಮಕ್ಕ (= ನಾರಿನ ಚೂರು, ಸೆಣಬಿನ ನೂಲು, ಮಕ್ಕು, ಚಿಕ್ಕ ಧೂಳು ನಾರಿನಂತಹ ವಸ್ತು), ಮೆರ್ವಣೀಕ / ಗ (ಮರವಣಿಗೆ), ಪುಂಡೇಲ (= ಗಿಡಗಳ ಹಿಂಡು, ಪೊದರು), ಕೊಟ್ಯಾ (ಕೊಟ್ಟಿಗೆ), ಕೊಟ್ಟಿಗಂ (ಅದೇ), ಮುಜಾಂಟಿ, ಹೊಡ್ಡಂ, ಕೊಳ್ಚಾ (=ಮೂರು ಬಗೆಯ ಜೇನು ತಟ್ಟಿಗೆಗಳು ಮುಜಾಂಟಿ, ಹೊಡ್ಡೆ, ಕೊಳ್ಚಾ), ಘಟ್ಟ (= ಗೂಡು, ಪಕ್ಷಿ, ಕೀಟಗಳ ಗೂಡು), ನೆಲಮುಚ್ಚಿಲ್ (=ನೆಲ ಮುಚ್ಚಳ ಗಿಡ), ಮರ್ಲ (=ಮರಳು, ಹುಚ್ಚು), ಬಜ್ಜಿ (=ಚಟ್ನಿ, ಗೊಜ್ಜು).

ಕಿರೆಂಚಿ (=ಕಶ್ಮಲ, ಕೆಸರು, Slurry), ಕಾಯಿಕಡೆವ್ವೆಚಂ (ಪ್ರಾಣಿಗಳ ಮೆಲು ಕಾಡುವ ಕ್ರಿಯೆ), ಕಾಯಿವಡೊ (=ಕಾಯಿವಡೆ ಎಂಬ ತಿಂಡಿ), ಹೂಣೊ (=ಸೂಣ, ಗೂಟ, ಮರದ ಚೂಪಾದ ಕೋಲು) ಬsರೋ (ಬರೆ, ಗುಡ್ಡದ ಬದಿ, ತರಚು ಗಾಯ, ಗೆರೆ), ಕಣಕ್ಕೊಟ್ಯಾ (=ಕಣಕ್ಕ್ ಕೊಟ್ಯ. ಕಟ್ಟಿಗೆ ಇಡುವ ಕೊಟ್ಟಿಗೆ), ಕಲ್ಮರ್ಗ್ಯೆ (=ಕಲ್ಲ ಮರಿಗೆ, ಕಲ್ಲಿನ ಪಾತ್ರೆ), ಬೈಪಣೊ(= ಬೈಪ್ಪಣೆ, ಹಟ್ಟಿಯ ಇದಿರು ಭಾಗದಲ್ಲಿರುವ ಜಗಲಿ, ದನಗಳಿಗೆ ತಿನಿಸಿಡುವ ಸ್ಥಳ). ಸುಕುನಂಡೊ (= ಸುಕ್ಕಿನುಂಡೆ, ಸುಕ್ರುಂಡೆ)

ವಿಶೇಷಣಗಳು

ಬಜೀ (= ಬರೇ), ಪೋಂಕು (= ಅಲ್ಪ, ಕ್ಷುಲ್ಲಕ), ಪೊಕ್ಕು (= ಸುಳ್ಳು, ಅಲ್ಪ), ಕಾಟ್‌ (ಕಾಡಿನ, ಊರಿನ, wild, local ಸಾಮಾನ್ಯ ಜಾತಿಯ)

ಹೀಗೆ ಭಾಷಾ ಸ್ವೀಕಾರ ಬಹಳಷ್ಟು ಇದೆ. ಚಿತ್ಪಾವನರಿರುವ ಪ್ರದೇಶದ ತುಳು ಭಾಷೆಯಲ್ಲಿ ಕೆಲವು ಚಿತ್ಪಾವನಿ ಶಬ್ಧಗಳು ಸೇರಿವೆ.

ಚಿತ್ಪಾವನರ ವಸಾಹತುಗೊಂಡ ‘ವಾಳ್ಯ’ ಅಥವಾ ‘ವಠಾರ’ ಗಳೆಂಬ ಪ್ರದೇಶಗಳಿಗೂ, ಆ ಗ್ರಾಮದ ಊರಕಟ್ಟು ಆರ್ಥಾತ್‌ಗ್ರಾಮದ ಪದ್ಧತಿಗಳು ಹರಕೆ, ಕಾಣಿಕೆ, ವಂತಿಗೆ, ಗ್ರಾಮ ನ್ಯಾಯ ನಿರ್ಣಯ ಇತ್ಯಾದಿ ಈ ಒಡಬಂಡಿಕೆಗಳಿಗೂ ಹೆಚ್ಚು ಸಂಬಂಧವಿಲ್ಲ. “ಊರುದ ಕಟ್ಟ್‌ವಾಳ್ಯೊಗು ಇಜ್ಜಿ” (ಊರಿನ, ಅರ್ಥಾತ್‌ಹಳೆ ಗ್ರಾಮದ ಪದ್ಧತಿಯು ವಾಳ್ಯಗಳಿಗೆ ಅನ್ವಯವಿಲ್ಲ) ಎಂಬುದು ನನ್ನ ಊರಾದ ಮಾಳದಲ್ಲಿ ಇರುವ ಮಾತು. ಆದರೂ, ‘ಊರಕಟ್ಟು’ ಗಳನ್ನು ಹಲವನ್ನು ಚಿತ್ಪಾವನರು ಅನುಸರಿಸುತ್ತಾರೆ.

ಚಿತ್ಪಾವನರು ತುಳು ಭಾಷೆಯನ್ನು ಚೆನ್ನಾಗಿ ಮತನಾಡುತ್ತಾರೆ. ಹೆಚ್ಚಿನ ಚಿತ್ಪಾವನರ ತುಳುಮಾತಿನಲ್ಲಿ ಚಿತ್ಪಾವನಿ ಛಾಯೆ, ಬನಿ ಒಂದಿಷ್ಟು ಗೋಚರಿಸುತ್ತದೆ. ಚಿತ್ಪಾವನರಲ್ಲ ನೇಕರು ಶಿವಳ್ಳಿ ತುಳುವನ್ನು ಮಾತಾಡಬಲ್ಲರು.

ಚಿತ್ಪಾವನರ ಸಂಪರ್ಕವುಳ್ಳ ಹಲವು ತುಳುವರು ವಿಶಿಷ್ಟವಾದ ರೀತಿಯಿಂದ ಚಿತ್ಪಾವನಿ ಭಾಷೆಯನ್ನು ಮಾತಾಡುತ್ತಾರೆ.
 

[1]ಬೇರೆ ವಿವರಗಳಿಗಾಗಿ : ದಕ್ಷಿಣ ಕನ್ನಡದ ಚಿತ್ಪಾವನರು : ಎಂ. ಪ್ರಭಾಕರ ಜೋಶಿ. ಮಾನವಿಕ ಕರ್ನಾಟಕ, ಮೈಸೂರು ವಿಶ್ವವಿದ್ಯಾಲಯ. ಸಂಪುಟ ೧೬. ಸಂಚಿಕೆ ೨-೩-೪. ೧೯೮೬. ನೋಡಬಹುದು