ಪಾಡ್ದನದ ಭಾಷೆ-ಶೈಲಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಲಿಖಿತ ಕಾವ್ಯಗಳಿಗಿಂತ ಬೇರೆಯಾದ ಮಾನದಂಡವನ್ನು ಬಳಸಬೇಕಾಗುತ್ತದೆ. ಜನಪದ ಕವಿಯೊಬ್ಬನು ಕಾವ್ಯ ನಿರ್ವಹಿಸುವ ಬಗೆ, ಬಳಸುವ ಪರಿಕರ, ಅವನು ಅಂತಸ್ಥಗೊಳಿಸಿಕೊಂಡಿರುವ ವ್ಯುತ್ಪತ್ತಿ ಎಲ್ಲವುಗಳ ಆಕರ ಜಾನಪದವೇ ಆಗಿರುತ್ತದೆ. ಜನಪದ ಕಾವ್ಯವೊಂದು ಹುಟ್ಟುವುದೇ ಕೇಳುಗರ ಎದುರು ಹಾಗೂ ಕೇಳುಗರಿಲ್ಲದೆ ಅದು ಆಕಾರ ಪಡೆಯಲಾರದು. ಆದರೆ ಶಿಷ್ಟಕಾವ್ಯ ಏಕಾಂತದ ಸಲ್ಲಾಪ. ಜನಪದ ಕಾವ್ಯವಿರಲಿ, ಲಿಖಿತ ಕಾವ್ಯವೇ ಇರಲಿ, ಅಲ್ಲಿ ಬಳಕೆಯಾಗುವ ಭಾಷೆ ದಿನೋಪಯೋಗಿ ಭಾಷೆಗಿಂತ ಬೇರೆಯಾಗಿರುತ್ತದೆ. ನಿತ್ಯ ಬಳಕೆಯ ಭಾಷೆ ಸರಳ ಹಾಗೂ ಪಾರದರ್ಶಕವಾಗಿದ್ದು ಮಾಹಿತಿ ಸಂವಹನದಲ್ಲಷ್ಟೇ ದುಡಿದು ವಿರಮಿಸುತ್ತದೆ. ಆದರೆ ಒಂದು ಸಾಹಿತ್ಯ ಕೃತಿಯಲ್ಲಿ ಭಾಷೆಯ ಕಾರ್ಯ ಬೇರೆಯಾಗಿರುತ್ತದೆ. ಇದನ್ನು ಡಾ. ಶಾಂತಿನಾಥ ದೇಸಾಯಿಯವರು ಹೀಗೆ ಖಚಿತಗೊಳಿಸುತ್ತಾರೆ. “ಆಡು ಭಾಷೆಯಲ್ಲಿ ವಿವಿಧ ಅಂಗಗಳ ಸಂಯೋಜನೆ ಸ್ವಲ್ಪ ಸಡಿಲವಾಗಿ, ಸ್ವಚ್ಛಂದವಾಗಿ, ಅಚಿಂತಿತವಾಗಿರುತ್ತದೆ…. ಇಲ್ಲಿ ಒಂದು ರೀತಿಯ ಸಂಯೋಜನೆ ಇರುತ್ತದೆಯಾದರೂ ಅದು ಸಡಿಲವಾಗಿದೆ. ಅದರ ಹಿಂದೆ ಒಂದು ನಿಷ್ಠುರವಾದ ಸೂತ್ರ ಕಾಣಿಸುವುವಿದಲ್ಲ. ಇದಕ್ಕೆ ವಿರುದ್ಧವಾಗಿ, ಸಾಹಿತ್ಯದ ಭಾಷೆಯಲ್ಲಿ ಒಂದು ಉದ್ದೇಶಪೂರ್ವಕವಾದ ಬಿಗುವಿರುತ್ತದೆ. ಜಾಗರೂಕತೆ ಇರುತ್ತದೆ, ಸುಸೂತ್ರತೆ ಇರುತ್ತದೆ. ಅದರಲ್ಲಿ ಭಾಷಾಪ್ರಜ್ಞೆ ಹೆಚ್ಚು ಏಕಾಗ್ರತೆಯಿಂದ ಅರ್ಥಪೂರ್ಣವಾಗಿ ಕೆಲಸ ಮಾಡುತ್ತದೆ” (ದೇಸಾಯಿ ೧೯೮೦:೭) ಸಾಮಾನ್ಯವಾಗಿ ಜನಪದ ಕವಿಗಳು ತಮ್ಮ ದಿನಬಳಕೆಯ ಮಾತನ್ನೇ ತಮ್ಮ ತಮ್ಮ ಕಾವ್ಯಕಟ್ಟುವ ಪ್ರಕ್ರಿಯೆಯಲ್ಲಿ ಬಳಸುತ್ತಾರೆ ಎನ್ನುವ ಗ್ರಹಿಕೆಯಿದೆ. ಆದರೆ ವಾಸ್ತವಿಕವಾಗಿ ಪ್ರದರ್ಶನವೊಂದರಲ್ಲಿ ಕಾವ್ಯಕಟ್ಟುವ ಜನಪದ ಕವಿಗಳು (ಪಾಡ್ದನಕಾರರು) ತಮ್ಮ ನಿತ್ಯದ ಪ್ರಾದೇಶಿಕ ಹಾಗೂ ಸಾಮಾಜಿಕ ಭಾಷೆಗಿಂತ ಭಿನ್ನವಾದ ಭಾಷೆಯನ್ನು ಕಾವ್ಯಕರ್ಮದಲ್ಲಿ ಬಳಸುತ್ತಾರೆ. ಇದನ್ನು ಜನಪದ ಭಾಷೆ ಎನ್ನಬಹುದು. ಕಾವ್ಯದ ಬಂಧ ಅಥವಾ ಆಂತರಿಕ ಹೆಣಿಗೆಯನ್ನು ಕುರಿತು ನಡೆಸುವ ಆಲೋಚನೆಯನ್ನು ಕವಿಯ ಶೈಲಿ ಅಥವಾ ಕವಿಭಾಷೆಯ ಬಳಕೆಯ ಒಂದು ವಿಧಾನ ಎನ್ನಬಹುದು. ಇಲ್ಲಿ ಭಾಷೆಯ ಒಂದು ಪುನರ್‌ಸಂಯೋಜನೆ ನಡೆಯುತ್ತದೆ. ಕಾವ್ಯದೊಳಗೆ ಪ್ರಾಸ-ಛಂದಸ್ಸು, ಸೂತ್ರಾತ್ಮಕ ಅಭಿವ್ಯಕ್ತಿ, ನುಡಿಗಟ್ಟು, ಅಲಂಕಾರ, ಗಾದೆಗಳ ಬಳಕೆಗಳ ಮೂಲಕ ಕಾವ್ಯದ ಅಭಿವ್ಯಕ್ತಿ ಶಕ್ತಿಯ ಮಾನಕ ಹೆಚ್ಚುತ್ತದೆ, ಭಾಷೆಗೆ ಒಂದು ಬಗೆಯ ಅಡಕತನ ಸಿದ್ಧಿಸುತ್ತದೆ. ಅಂದರೆ ಶೈಲಿಯ ಮುಖ್ಯ ತುಡಿತವೆಂದರೆ ಅನುಭವವನ್ನು ಹರಳುಗಟ್ಟಿಸುವ ಪ್ರಯತ್ನ. ಇಲ್ಲಿ ಕವಿಯ ಪ್ರತಿಭಾಶಕ್ತಿ ವಸ್ತುಪ್ರತಿರೂಪದ ಭಾಷೆಯಲ್ಲಿ ನಡೆಸುವ ವಿಶಿಷ್ಟ ಕ್ರಿಯೆ ಇದು.

ಕಲಾ ಪ್ರಪಂಚದಲ್ಲಿ ಎಲ್ಲಿ ಸಂವಹನ ಸಾಮರ್ಥ್ಯ ಇರುತ್ತದೊ ಅಲ್ಲಿ ಶೈಲಿಯ ಆವಿಷ್ಕಾರವಾಗುತ್ತದೆ. ಚಿತ್ರ, ಸಂಗೀತ, ನೃತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶೈಲಿಯನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಕವಿಯಾದವನ ವ್ಯಕ್ತಿತ್ವ ಪ್ರಕಟಣ ವಿಧಾನವಾದ ಶೈಲಿಗೆ ಡಾ. ಕೆ.ವಿ. ತಿರುಮಲೇಶ ಅವರು ಹೇಳುವಂತೆ “ಭಾಷಾ ವಿಜ್ಞಾನದ ದೃಷ್ಟಿಯಿಂದ ಮುಖ್ಯವಾದ ಎರಡು ಸಮೀಪನಗಳಿವೆ. ಶೈಲಿಯೆಂದರೆ ಆಯ್ಕೆ (choice). ಶೈಲಿಯೆಂದರೆ ಲಂಘನ ಅಥವಾ ಅಡ್ಡದಾರಿ (deviance) ಎಂಬುದಾಗಿ” (ತಿರುಮಲೇಶ್‌೧೯೮೯:೧-೨೧). ಮಾತಿನ ಮೂಲಕ ಅಭಿವ್ಯಕ್ತಿಯನ್ನು ಕಾಣುವ ಕಾವ್ಯದಲ್ಲಿ ಪದ, ವಾಕ್ಯಗಳ ವಿನ್ಯಾಸ, ಕಾಕು, ಸ್ವರಭಾರಗಳ ಸಂಯೋಜನೆ, ಮಾತಿನೊಂದಿಗೆ ಮೌನ ತರುವ ಅರ್ಥ ಇಲ್ಲೆಲ್ಲ ಹಲವು ಬಗೆಯ ಆಯ್ಕೆಗೆ ಅವಕಾಶವಿದೆ. ಕವಿ ಕಾವ್ಯದ ಮೂಲಕ ತನ್ನ ಪ್ರತಿಭೆಯ ಆವಿಷ್ಕರಣದಲ್ಲಿ ನಿಯಮಬದ್ಧವಾದ ಭಾಷಾಪ್ರಯೋಗವನ್ನು ಮೀರಿ ನಡೆಯುತ್ತಾನೆ. ಈ ಉಲ್ಲಂಘನೆಯಲ್ಲೇ ಅವನ ಅನನ್ಯತೆ ಸ್ಥಾಪಿತವಾಗುತ್ತದೆ. ಈ ಪ್ರಕ್ರಿಯೆಯನ್ನು ಕುರಿತು ತಿರುಮಲೇಶರು “ಈ ದಿಕ್ಚುತಿ ಕೇವಲ ವ್ಯಾಕರಣ ನಿಯಮಗಳಿಗಷ್ಟೇ ಸೀಮಿತವಲ್ಲ, ಭಾಷೆಯ ಎಲ್ಲ ವಿದ್ಯಮಾನಗಳಿಗೂ ಸಂಬಂಧಿಸಿದುದು…. ಇಂಥ ಉಲ್ಲಂಘನೆಗಳು ಕವಿ ಮಾತಿನ ಆದರ್ಶ ಸ್ಥಿತಿಯ ಅಥವಾ ಪರಿಪೂರ್ಣ ಸ್ಥಿತಿಯ ಕಡೆಗೆ ನಡೆಸುವ ತುಯ್ತಗಳು. ಇವುಗಳಲ್ಲಿ ಕವಿ ಎಷ್ಟರ ಮಟ್ಟಿಗೆ ಸಫಲನಾಗುತ್ತಾನೆ ಎನ್ನುವುದು ಅವನ ಪ್ರತಿಭೆಯನ್ನು ಹೊಂದಿಕೊಂಡಿದೆ” (ತಿರುಮಲೇಶ್‌, ೧೯೮೯: ಅದೇ). ಕಾವ್ಯದಲ್ಲಿ ಭಾಷೆ ಆಡು ಮಾತಾಗಿ ಬಂದಾಗ ಅದರ ಅರ್ಥಾಭಿವ್ಯಕ್ತಿ ಸಾಮರ್ಥ್ಯ ಹೆಚ್ಚುತ್ತದೆ, ದ್ರವಣತೆ ಒದಗುತ್ತದೆ. ಆದರೆ ದಿನಬಳಕೆಯ ಆಡು ಮಾತನ್ನು ಬಳಸುವುದಷ್ಟರಿಂದಲೇ ಒಳ್ಳೆಯ ಕಾವ್ಯ ಶೈಲಿ ಏರ್ಪಡುತ್ತದೆ ಎನ್ನುವಂತಿಲ್ಲ. ‘ತೊಳೆಯದ ಬಾಚದ ಶಬ್ದಗಳನ್ನು ಬೀದಿಯಿಂದ ಹೆಕ್ಕಿ ತಂದು ತಮ್ಮ ಹಾಡುಗಳಲ್ಲಿ ಪೋಣಿಸುತ್ತಾರೆ ಹೌದು, ಆದರೆ ಅವರು ಆ ಪದಗಳನ್ನು ಅನಾಮತ್ತಾಗಿ ಬಳಸುವುದಿಲ್ಲ. ಪದದ ರೂಪ, ವ್ಯಾಕರಣ ನಿಯಮಗಳನ್ನು ಮೀರಿದರು ಅಂದರೆ ಅದಕ್ಕೆ ಒಂದು ಬಗೆಯ ಅಡ್ಡ ದಾರಿ ಹಿಡಿಸಿದರು. ಮೌಖಿಕ ಕಾವ್ಯವನ್ನು ಕಟ್ಟಿ ನಿರೂಪಿಸುವವರಲ್ಲಿ ಕಾವ್ಯದ (ಪಾಡ್ದನ)’ ಕತೆ ಹೇಳಿ ಎಂದಾಗ ದಿನನಿತ್ಯದ ಆಡುಮಾತಿನಲ್ಲಿ ಸರಳವಾಗಿ ಕತೆಯನ್ನು ಗದ್ಯದಲ್ಲಿ ಹೇಳುತ್ತಾರೆ. ಅಲ್ಲಿ ಭಾಷಾ ರೂಪದ ಉಲ್ಲಂಘನೆ ಇಲ್ಲ. ಆದರೆ ಅವರು ಕಾವ್ಯ ಕಟ್ಟಿ ನಿರೂಪಿಸುವ ಸಂದರ್ಭದಲ್ಲಿ ಲಂಘನ ಅಥವಾ ಅಡ್ಡದಾರಿಯನ್ನು ಬಳಸುತ್ತಾರೆ. ತನ್ನ ನಿಡುಗಾಲದ ಅನುಭವ ಹಾಗೂ ಅಭ್ಯಾಸದ ಫಲವಾಗಿ ದಕ್ಕಿಸಿಕೊಂಡ ಸೂತ್ರಗಳ ವ್ಯವಸ್ಥಿತ ಬಳಕೆ ಗೋಚರಿಸುತ್ತದೆ.

ಪ್ರತಿಯೊಬ್ಬ ಜನಪದ ಕವಿ ಗಾಯಕನಲ್ಲಿ ಒಂದು ಮಾನಸಿಕ ಪಠ್ಯ ನಿರ್ಮಾಣಗೊಂಡಿರುತ್ತದೆ. ನಿರಕ್ಷರಿ ಗಾಯಕನೊಬ್ಬನು ಪ್ರದರ್ಶಿಸಿದ ಆ ಮೂಲಕ ಪಠ್ಯೀಕರಣಗೊಂಡ ಪಠ್ಯದಲ್ಲಿ ಪ್ರಾಚೀನ ಕಾಲದ ಸಾಂಪ್ರದಾಯಿಕ ಸಂದೇಶವಿರುತ್ತದೆ ಎಂದು ಅನೇಕರು ಹೇಳುವುದುಂಟು. ಒಂದು ಅರ್ಥದಲ್ಲಿ ಇದು ನಿಜ. ಮೌಖಿಕ ಕಾವ್ಯ ಪ್ರದರ್ಶನವೊಂದು ಸುದೀರ್ಘ ಕಾಲಾವಧಿಯ ನೂರಾರು ಪ್ರದರ್ಶನಗಳ ಹಾಗೂ ಅವುಗಳನ್ನು ಕೇಳಿಸಿಕೊಂಡ ಸಾವಿರಾರು ಪ್ರೇಕ್ಷಕರ ತಿಳುವಳಿಕೆಯಿಂದ ಸಂಪನ್ನಗೊಂಡು ವರ್ತಮಾನದಲ್ಲಿ ಸಮಕಾಲೀನ ಮೌಲ್ಯಗಳ ಹೀರಣೆಗೊಳಗಾಗಿ ಕಾವ್ಯ ಆಕೃತಿಗೊಳ್ಳುತ್ತದೆ. ಕವಿ ಗಾಯಕನು ಪ್ರದರ್ಶನದ ಸಂದರ್ಭದಲ್ಲಿ ಹಾಡಿದಾಗ ಅದನ್ನು ಆಧುನಿಕ ಯಂತ್ರ ಸಾಧನಗಳ ಮೂಲಕ ದಾಖಲಿಸಿಕೊಂಡಾಗ ಒಂದು ಪಠ್ಯ ನಿರ್ಮಾನಗೊಳ್ಳುತ್ತದೆ. ಇದನ್ನು ಲಾರಿ ಹಾಂಕೊ ಅವರು ಪ್ರಾಥಮಿಕ ಪಠ್ಯೀಕರಣವೊಂದು ಇದನ್ನು ಅಕ್ಷರ ನಿಬದ್ಧಗೊಳಿಸಿದಾಗ ಸೆಕೆಂಡರಿ ಪಠ್ಯೀಕರಣ ಏರ್ಪಡುವುದಾಗಿಯೂ ಬರೆಯುತ್ತಾರೆ. (ಹಾಂಕೊ : ೨೦೦೦) ಜನಪದ ಕಾವ್ಯವನ್ನು ಸಮಷ್ಟಿಯ ಉತ್ಪನ್ನವೆಂದೂ ಅದರಲ್ಲಿ ಕವಿಯ ವ್ಯಕ್ತಿತ್ವದ ಮೊಹರು ಕಾಣಿಸಲಾರದು ಎನ್ನಲಾಗದು. ಜನಪದ ಕಾವ್ಯ ಸಂಪ್ರದಾಯಬದ್ಧವಾಗಿರುವುದರಿಂದ ಕವಿಯ / ಕಲಾವಿದನ ಸೃಜನಶೀಲತೆ ಒಟ್ಟಾರೆ ವರ್ತನೆಯಲ್ಲಿ ಹೊರಹೊಮ್ಮಬೇಕೇ ಹೊರತು ಮಾತಿನ ಅಂಗಗಳಲ್ಲ (ತಿರುಮಲೇಶ್‌೧೯೮೯:೮) ಎನ್ನುವ ಅಭಿಪ್ರಾಯವನ್ನು ಪ್ರಶ್ನಿಸಬೇಕಾಗಿದೆ. ಕಾರಣ ಜನಪದ ಮೌಖಿಕ ಕಾವ್ಯವೊಂದು ‘ನಿಚ್ಚಂಪೊಸತು’. ಈ ಹಿಂದೆ ವಿವರಿಸಿದಂತೆ ಗಾಯಕನೊಬ್ಬನು ಈಗ ಹಾಡಿದ ಕಾವ್ಯವನ್ನು ಯಥಾವತ್ತಾಗಿ ಇನ್ನೊಮ್ಮೆ ಕಟ್ಟಿ ನಿರೂಪಿಸಲಾರ.

ಮೌಖಿಕ ಕಾವ್ಯವೊಂದರ ಸಂಯೋಜನೆ ಹಾಗೂ ಪಠ್ಯೀಕರಣ ಲಿಖಿತ ಕಾವ್ಯಕ್ಕಿಂತ ಬೇರೆಯಾದುದು ಎನ್ನುವುದು ಮೇಲಿನ ಚರ್ಚೆಯಿಂದ ವಿದಿತವಾಯಿತು. ಸೃಜನಶೀಲ ಕವಿ / ಕಲಾವಿದನ ಮೇಲೆ ಕಾಲಧರ್ಮದ ಒತ್ತಡ ಏರ್ಪಡುವ ಕಾರಣವಾಗಿ ಅವನ ಸೃಜನಶೀಲತೆಯ ಮೇಲೆ ಆ ಮೂಲಕ ಅವನ ಭಾಷಾಶೈಲಿಯಲ್ಲಿ ಏರ್ಪಡುವ ಬದಲಾವಣೆಯನ್ನು ಭಿನ್ನಭಿನ್ನ ನೆಲೆಗಳಿಂದ ಪರಿಶೀಲಿಸಬೇಕಾಗಿದೆ.

ಮೌಖಿಕ ಸೂತ್ರಾತ್ಮಕ ಶೈಲಿ ಮೌಖಿಕತೆಯ ವಿಶಿಷ್ಟತೆ. ಈ ಸೂತ್ರಗಳ ಪದರಚನೆ, ವಾಕ್ಯ ಸಂಯೋಜನೆಗಳು ಪೂರ್ವನಿರ್ಧಾರಿತವಾದರೂ ಆಯಾ ಸೂತ್ರ ಆಯಾ ಪಾಡ್ದನದ್ದೆಂದು ನಿಗದಿಯಾಗಿರುವುದಿಲ್ಲ. ಜಾಣನಾದ ಕಾವ್ಯಕಟ್ಟುಗ ತನ್ನ ಕಥಾಸನ್ನಿವೇಶಕ್ಕೆ ಹಾಗೂ ಹಾಡಿನ ವಸ್ತು, ನಿರೂಪಣಾ ಧಾಟಿಗೆ ತಕ್ಕಂತೆ ಸೂತ್ರಗಳನ್ನು ಹಾಡಿನ ಕಟ್ಟಿನೊಳಗೆ ಕೂರಿಸುತ್ತಾನೆ. ಇಂತಹ ಸೂತ್ರ ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಅಷ್ಟೇ ಅಲ್ಲ ಒಬ್ಬನೇ ಗಾಯಕ ಒಂದು ಸಂದರ್ಭದಲ್ಲಿ ಬಳಸಿದ ಸೂತ್ರಕ್ಕಿಂತ ಭಿನ್ನವಾದ ಸೂತ್ರಸಮುಚ್ಚಯವನ್ನು, ಸೂತ್ರವನ್ನು ಇನ್ನೊಮ್ಮೆ ಬಳಸುವುದುಂಟು. ಮೌಖಿಕ ಕಾವ್ಯದ ನಿರೂಪಣಾ ಶೈಲಿಯನ್ನು ನಿಯಂತ್ರಿಸುವ ಸೂತ್ರಾತ್ಮಕ ನುಡಿಗಟ್ಟುಗಳಿಗೆ ಕೆಲವೊಂದು ನಿದರ್ಶನವನ್ನು ನೋಡಬಹುದು.

೦೧. ಯೇಲೇಲ್‌ಪತ್ತ್‌ಪದಿನಾಲ್‌ಲೋಕದ ಗಿಂಡ್‌ಕೋಪ ಕೋಪಿಯೆರ್‌
ಕ. ಯೇಳೇಳು ಹತ್ತು ಹದಿನಾಲ್ಕು ಲೋಕದ ಕಡುಕೋಪ ಕೋಪಿಸಿದರು

೦೨. ಮುತ್ತುಡು ದೇಸೆ ಪಕಲೊಡು ಆರೆತಿ ಮಲ್ತೆರ್‌
ಕ. ಮುತ್ತಿನಲ್ಲಿ ಸೇಸೆ ಹವಳದಲ್ಲಿ ಆರತಿ ಮಾಡಿದರು.

೦೩. ಕಾಲ್ಯ ಕಡೆಸುಂಡು ಏಲ್ಯ ಪೋಪುಂಡು
. ಕಾಲ ಕಳೆಯುತ್ತಿದೆ ವೇಳೆ ಹೋಗುತ್ತಿದೆ

೦೪. ಸಾದಿ ಪತ್ತೊಂದು ಬೀದಿ ನಿರೆಯೊಂದು ಪೋಯರ್‌
ಕ. ಹಾದಿ ಹಿಡಿದುಕೊಂಡು ಬೀದಿ ಹಾದುಕೊಂಡು ಹೋದರು

೦೫. ದಿಕ್ಕ್‌ಬುಡಿ ದೇಸಾಂದ್ರಿ ಪೋಪಿಕಾಲ ಆಂಡ್‌
ಕ. ದಿಕ್ಕು ಬಿಟ್ಟು ದೇಶಾಂತರ ಹೋಗುವ ಕಾಲ ಆಯಿತು

೦೬. ಬಲ್ಲ್‌ಪತ್ತಿ ಬೊಲ್ಲಿ ಮಾಡೊಗು ಪೋಯರ್‌
ಕ. ಹಗ್ಗ ಇಳಿಸಿದ ಬೆಳ್ಳಿಯ ಭವನಕ್ಕೆ ಹೋದರು

೦೭. ಕೈ ಬಚ್ಚಲಾತ್‌ಗುದ್ದಿಯೆರ್‌ಕಾರ್‌ಬಚ್ಚಲಾತ್‌ತೊರಿತ್ತೆರ್‌
ಕ. ಕೈ ದಣಿವಷ್ಟು ಗುದ್ದಿದರು ಕಾಲು ದಣಿವಷ್ಟು ತುಳಿದರು

೦೮. ಮೈಲೆ ಮಾತೆರ್‌ಮಡಿ ತುತೊಂಡೆರ್‌
ಕ. ಮೈಲಿಗೆ (ಬಟ್ಟೆ) ಬದಲಾಯಿಸಿದರು ಮಡಿ ಉಟ್ಟುಕೊಂಡರು

೦೯. ಒಂಜಿ ಲೆಪ್ಪುಗು ಎರಡ್‌ಓ ಕೊಂಡೆರ್‌
ಕ. ಒಂದು ಕರೆಗೆ ಎರಡು ಓಗೊಂಡರು.

೧೦. ಮಣ್ಣ್‌ಮುಟ್ಟು ಪೊಣ್ಣ ಸಾಪೊ ಕೊರಿಯೆರ್‌
ಕ. ಮಣ್ಣು ಮುಟ್ಟಿ ಹೆಣ್ಣ ಶಾಪ ಕೊಟ್ಟರು

೧೧. ಕಾಯ ಬುಡುದು ಕೈಲಾಸೊಗು ಸಂದಿಯೆರ್‌, ಜೂವ ಬುಡುದು ವೈಗುಂಟೊಗು ಸೇರಿಯೆರ್‌
ಕ. ಕಾಯ ಬಿಟ್ಟು ಕೈಲಾಸಕ್ಕೆ ಸಂದರು, ಜೀವ ಬಿಟ್ಟು ವೈಕುಂಠಕ್ಕೆ ಸೇರಿದರು.

೧೨. ಓಲೆ ತೂತಯಿ ಗಲಿಗ್ಗಡ್‌, ಉಂತಿ ಉಣ್ಪುಡು, ತುತ್ತಿ ಕುಂಟುಡು ಕೊಲ್ತಿ ತಮ್ಮಯಿಡ್‌ ಈರಾಂಡಲ ಬರೊಡು
ಕ. ಓಲೆ ಕಂಡ ಗಳಿಗೆಯಲ್ಲಿ ಉಂಡ ಅನ್ನದಲ್ಲಿ, ಉಟ್ಟ ಬಟ್ಟೆಯಲ್ಲಿ, ಸಿಕ್ಕಿಸಕೊಂಡ ಪಾದರಕ್ಷೆಯಲ್ಲಿ ನೀವಾದರೂ ಬರಬೇಕು.

೧೩. ಸಿರಿವುಲ್ಲ ಮೋನೆಡ್‌ಪುಲಿವುಲ್ಲಬೇನೆ ತೋಜಿಂಡ್‌
ಕ. ಸಿರಿಯುಳ್ಳ ಮುಖದಲ್ಲಿ ಹುಳಿಯುಳ್ಳ ನೋವು ಕಂಡಿತು.

೧೪. ಮೋನೆದ ಮುತ್ತು ಬೆಗರ್‌ತೆಗಲೆದ ಯಮದೂಳು ನೆಡೆಯೆರ್‌
ಕ. ಮುಖದ ಮತ್ತು ಬೆವರು ಎದೆಯ (ಬಹು) ಧೂಳು ತೊಳೆದರು

೧೫. ಅಂತರಂಗದ ಓಲೆ ಬಯಿರಂಗದ ಮಾನಿ ಕಡಾದೆರ್‌
ಕ. ಅಂತರಂಗದ ಪತ್ರ ಬಹಿರಂಗದ ಆಳು ಕಳುಹಿಸಿದ್ದಾರೆ

೧೬. ತರೆಕೋಡಿ ಮಾಸ್‌ದ್‌ಂಡ್‌ ಮಿರೆಕೊಡಿ ದಂಗ್‌ದ್‌ಂಡ್‌
ಕ. ಕಡೆ ಮೀಸೆ ಕತ್ತರಿಸಿದರು ಕೊಡಿಮೀಸೆ ಕಿರಿದುಗೊಳಿಸಿದರು.

೧೭. ಅಳೆ ಕೂಟುದು ಐನ್ನೂದು ಬಗೆ ಪುಳಿ ಕೂಟುದು ಮುನ್ನೂದು ಬಗೆ
ಕ. ಮಜ್ಜಿಗೆ ಹಾಕಿ ಐನೂರು ಬಗೆ ಹುಳಿ ಹಾಕಿ ಮುನ್ನೂರು ಬಗೆ

೧೮. ಜೋಗ ಬುಡುದು ಮಾಯೊಗು ಸಂದಿಯೆರ್‌
ಕ. ಗೋಚರ (ರೂಪ) ಬಿಟ್ಟು ಅಗೋಚರ (ಲೋಕ) ಸೇರಿದರು.

೧೯. ದಾಡೆ ಕಲೆಯಿ ದೋಡೆ ಸುಂಟಿ ಮೀರಿ ಕಸಾಯೊ, ಪುಣಿಮೀರಿ ಕಂಡೊ ತಮೆರಿ ಮೀರಿ ಪೊಣ್ಣು
ಕ. ಹಲ್ಲು ಮೀರಿದ ಗಯ್ಯಾಳಿ ಶುಂಠಿ ಹೆಚ್ಚಾದ ಕಷಾಯ ಕಟ್ಟು ಮೀರಿದ ಗದ್ದೆ ತವರು ಮೀರಿದ ಹೆಣ್ಣು

ಕಾವ್ಯಾಭಿವ್ಯಕ್ತಿಯಲ್ಲಿ ಪ್ರಾಸದ ಕಾರ್ಯ ಗಮನಾರ್ಹವಾದುದು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಪ್ರಾಸವನ್ನು ಶಬ್ದಾಲಂಕಾರವೆಂದು ಕರೆಯಲಾಗಿದೆ. ಸಮಾನ ನಾದಗುಣಗಳನ್ನು, ವರ್ಣಗಳ ಆವೃತ್ತಿಯನ್ನು ಪ್ರಾಸ ಎನ್ನಲಾಗುವುದು. ನಮ್ಮ ಪ್ರಾಚೀನ ಕವಿಗಳಿಂದ ತೊಡಗಿ ಜನಪದ ಕವಿಗಳು ಪ್ರಸಾಕ್ಷರವನ್ನು ಬೇಕೆಂಬಷ್ಟು ಬಳಸಿದ್ದಾರೆ. ಕೇಳುಗರೆದುರು ಆಕಾರಗೊಳ್ಳುವ ಮೌಖಿಕ ಕವಿಗಳಿಗಂತೂ ಪ್ರಾಸ ತೀರಾ ಅನಿವಾರ್ಯ ಅಂಶ. ಅದು ಕಾವ್ಯ ಕಟ್ಟುಗನ ಮತ್ತು ಕೇಳುಗನ ಆಂತರ್ಯದ ಬಯಕೆಯನ್ನು ತುಂಬಿಕೊಡುತ್ತದೆ. ಡಾ. ಡಿ.ಎಸ್‌. ಕರ್ಕಿಯವರು ಹೇಳುವಂತೆ ಈ ಸಹಜನಾಮಯ ವರ್ಣಗಳು ಲಯದ ಜಾಡುಹಿಡಿದು ಹೊಂದಿಕೊಳ್ಳುವುದರಿಂದ ಲಯವು ನಾದಮಯವಾಗುತ್ತದೆ, ನಿನಾದಗೊಳ್ಳುತ್ತದೆ (ಕರ್ಕಿ ೧೯೭೦:೧೧-೧೩) ಪ್ರಾಸದ ಮೇಲೆ ಅತಿ ವ್ಯಾಮೋಹಕ್ಕೊಳಗಾದರೆ ಕಾವ್ಯದ ಅರ್ಥ ಪ್ರತೀತಿಗೆ ಊನ ತಟ್ಟುವುದೇನೋ ನಿಜ. ಆದರೆ ಶ್ರಾವಕರೆದುರು ಆಯಾಕ್ಷಣದಲ್ಲಿ ಕಾವ್ಯ ಕಟ್ಟುವ ತುರ್ತು ಮೌಖಿಕ ಕಾವ್ಯದಲ್ಲಿ ಇರುವುದರಿಂದ ಭಾಷೆಯನ್ನು ನಿಜವಾದ ಅರ್ಥದಲ್ಲಿ ಕಾವ್ಯವಾಗಿಸುವಲ್ಲಿ ಪ್ರಾಸಕ್ಕೆ ಸ್ಥಾನವಿದೆ. ಮತ್ತೆ ಮತ್ತೆ ಅಕ್ಷರಗಳು, ಸ್ವರಗಳು ಪುನರಾವರ್ತನೆಗೊಂಡಾಗ ಭವ ಜೀಕುತ್ತದೆ, ಅರ್ಥ ಹೊಮ್ಮುತ್ತದೆ. ಕಾವ್ಯ ಕಟ್ಟುಗರಿಗೆ ಕಾವ್ಯ ನಿರ್ಮಾಣ ತಂತ್ರವಾಗಿಯೂ ಪ್ರಾಸ ದುಡಿಯುತ್ತದೆ.

ಆದಿ ಪ್ರಾಸ, ಅಂತ್ಯ ಪ್ರಾಸ ಎರಡನ್ನು ಸಿರಿ ಪಾಡ್ದನವೊಂದರಲ್ಲಿ ಬಳಸಿರುವ ಬಗೆಯನ್ನು ಕೆಲವು ಉದಾಹರಣೆಯೊಂದಿಗೆ ಪರಿಶೀಲಿಸಬಹುದು.

ಸತಸಾವಿರ ಕಾಲೊಡು ನಡತ್‌ದ್ ಪಟ್ಟ ಆಳಿಯೊಂಡೆದೆ
ಸತ ಸಾವಿರ ಕಾಲೊಡು ಉಂತ್‌ದ್‌ಪಟ್ಟ ಆಳಿಯೊಂಡೆದೆ
ಸತ ಸಾವಿರ ಕಾಲೊಡು ಕುಲ್ಲನ ಪಟ್ಟ ಆಳಿಯೊಂಡೆದೆ

ಹೊರನೋಟಕ್ಕೆ ಮೇಲಿನ ಸಾಲುಗಳಲ್ಲಿ ಪ್ರಾಸದ ಅತಿಪ್ರಚುರತೆ ಇದ್ದಂತೆ ಕಾಣಬಹುದು. ಆದರೆ ಮೌಖಿಕ ಕಾವ್ಯದಲ್ಲಿ ಒಂದಾದ ಮೇಲೊಂದರಂತೆ ಹಾಡನ್ನು ಹೊಸೆಯುತ್ತಾ ಹೋಗಬೇಕಾದ ಮೌಖಿಕ ಕವಿಗೆ ಪದಗಳ ಪುನರುಕ್ತಿ ಕಾವ್ಯ ನಿರ್ಮಾಣ ಕಾರ್ಯಕ್ಕೆ ಅನುಕೂಲ ಮಾಡಿಕೊಡುತ್ತದೆ.

ಎರ್ಕಿನೀರ್‌, ಸಿರ್ಕಿನೀರ್‌ಇಂತಹ ನಾಮಪದ, ಎರ್ಕಾವುನಿ, ಸಿರ್ಕಾವುನಿ ಮುಂತಾದ ಕ್ರಿಯಾಪದಗಳನ್ನು ಒಂದೇ ಸಾಲಿನಲ್ಲಿ ಮತ್ತೆ ಬಳಸುವ ಮೂಲಕ ಏರ್ಪಡುವ ಅನುಪ್ರಾಸ ಕ್ರಿಯೆಯ ವೇಗವನ್ನು ನಾಟ್ಯೀಕರಿಸುತ್ತದೆ. ಉದಾ:

ಕಂಡದ ಎರ್ಕಿನೀರ್‌ಸಿರ್ಕಾವೆರ್‌
ಸಿರ್ಕಿನೀರ್‌ಎರ್ಕಾವೆರ್‌

ತುಳು ಪಾಡ್ದನಗಳ ಸಾಲು ಸಾಲುಗಳಲ್ಲಿ ಬರುವ ಅನುಪ್ರಾಸಗಳಿಗೆ ಕೆಲವು ದೃಷ್ಟಾಂತಗಳು.

೦೧. ಅಸರ್‌ ಕರ್ಪಾವೆರ್‌ ಬೆಸರ್‌ ತಗ್ಗಾವೆರ್‌
೦೨. ಅಜಿಪ ಪುಂಡಿ ಜಾತಗ ಮುಪ್ಪ ಪುಂಡಿ ಪುಸ್ತಗ
೦೩. ಕಾಲ್ತೆಡ್‌ ಯಾನ್‌ ಬತ್ತೆಡ ಮಾಲ್ತೆಡ್‌ಯೆನ ಮಗಾನ್‌ ಕಡಾವೆ
೦೪.ಕೊಟ್ಟು ಕೊನೊದು ಕೊಟ್ಟಾರೊಡು ಕೆರ್ತೆರ್‌
೦೫. ಕಡೆಯೊಂಜಿ ದಿಕ್ಕೆಲ್‌ಡ್‌ ಕೊಡಿಕಜಿಪು ದೀಯೆರ್‌
೦೬. ನೆತ್ತಿಗ್‌ ನೆಯಿಯೆಣ್ಣೆ ಎಸಲ್‌ಗ್‌ ಎಸಲೆಣ್ಣೆ
೦೭. ಮಾನಿ ಪೋಪಿಮಾರ್ಗ ಎರುಪೋಪಿ ಎದ್ದಾರಿ ಪತ್ಯೆರ್‌
೦೮. ಬೆರಿಟೆ ಬರ್ಪುಂಡು ಬೆರ್ಮ ದೇವರೆ ಬೇನೆ ಬಂಜಿಡೆ ಬರ್ಪುಂಡು ಬಾಲೆದ ಬೇನೆ
೦೯. ಪೊತ್ತ ಪೊತ್ತ ಉಂಡೆರ್‌ ಬಗಬಗ ಬೆಗತ್ತೆರ್‌
೧೦. ಕೀಲ್‌ಕೀಲ್‌ ಬುಲಿಪುಂಡು ಕಾಲ್‌ಕಾಲ್‌ ಕಲೆಂಕುಂಡು
೧೧. ಬಂಗಾರ್‌ಡ್‌ ಸಿಂಗಾರ ಮಲ್ದೆರ್‌, ಬೊಲ್ಲಿಡ್‌ ಬೊಲ್ಲೆನೆ ಮಲ್ದೆರ್‌
೧೨. ಮೆಯಿಮುಟ್ಟು ಮೆಯಿದೇಸೆ ಕೈ ಮುಟ್ಟು ಕೈದಾರೆ ಕರಿತ್ತೆರ್‌

ಮೌಖಿಕ ಶೈಲಿ

ಮೌಖಿಕ ಸಾಹಿತ್ಯಕ್ಕೆ ವಿಶಿಷ್ಟವಾದ ಅನನ್ಯವಾದ ಶೈಲಿಯೊಂದಿದೆಯೇ? ಮೌಖಿಕ ಅಭಿವ್ಯಕ್ತಿಯ ಪ್ರಧಾನ ಗುಣ ಪುನರಾವೃತ್ತಿ. ಇದರಿಂದಾಗಿ ಕೇಳುಗನಿಗೆ ಕಾವ್ಯದ ಗ್ರಹಿಕೆಗೆ ಅನುಕೂಲವಾಗುತ್ತದೆ ಹಾಗೂ ಗಾಯಕನಿಗೆ ತನ್ನ ಹಾಡಿನ ಸಂದೇಶವನ್ನು ತಲುಪಿಸಲು ಅನುಕೂಲವಾಗುತ್ತದೆ. ಇದರಲ್ಲಿ ಮತ್ತೆ ಮತ್ತೆ ಕಾಣಿಸುವ ಅನುರೂಪತೆ ಹಾಗೂ ಸೂತ್ರಾತ್ಮಕ ಅಭಿವ್ಯಕ್ತಿ ಒಳಗೊಂಡಿರುತ್ತದೆ. ಲಿಖಿತ ಕಾವ್ಯಕ್ಕಿಂತ ಮೌಖಿಕ ಕಾವ್ಯವನ್ನು ಬೇರೆಯಾಗಿಸುವಲ್ಲಿ ಈ ಲಕ್ಷಣ ಪ್ರಮುಖ ಮಾನದಂಡವಾಗುತ್ತದೆ.

ಅನುರೂಪತೆ ಒಂದು ನಿರ್ದಿಷ್ಟ ಬಗೆಯ ಪುನರಾವೃತ್ತಿ. ಸಾಲುಗಳಲ್ಲಿ ಒಂದು ಭಾಗ ಸ್ಥಿರವಾಗಿರುತ್ತದೆ, ಇನ್ನೊಂದು ಬದಲಾಗುತ್ತಿರುತ್ತದೆ.

ಸತಸಾವಿರ ಕಾಲೊಡು ನಡತ್‌ದ್‌ ಪಟ್ಟ ಆಳಿಯೊಂಡೆದೆ
ಸತಸಾವಿರ ಕಾಲೊಡು ಉಂತುದನ ಪಟ್ಟ ಆಳಿಯೊಂಡೆದೆ
ಸತಸಾವಿರ ಕಾಲೊಡು ಕುಲ್ಲುನ ಪಟ್ಟ ಆಳಿಯೊಂಡೆದೆ

ಕ್ರಿಯೆಯನ್ನು ನಿರೂಪಿಸುವ ಸಂದರ್ಭದಲ್ಲಿ ನಾಮಪದವನ್ನು ಬದಲಾಯಿಸುತ್ತಾ ಕ್ರಿಯಾಪದವನ್ನು ಸ್ಥಿರವಾಗಿರಿಸುವ ಒಂದು ಮಾದರಿಯನ್ನು ನೋಡಬಹುದು. ಇಲ್ಲಿ ಮೌಖಿಕ ಕವಿಗೆ ಘಟನಾವಳಿಗಳನ್ನು ಒಂದೊಂದಾಗಿ ನೆನಪಿಸುತ್ತಾ ಪ್ರತಿನಿಧಾನಿಸುತ್ತಾ ಹೋಗುವುದಕ್ಕೆ ಅನುಕೂಲವಾಗುತ್ತದೆ.

ಕಂಬಳಕ್ಕೆ ಕೋಣಗಳನ್ನು ಕೊಂಡೊಯ್ಯುವ ವಿವರಗಳನ್ನು ಸವಿವರವಾಗಿ ಇಲ್ಲಿ ನಿರೂಪಿಸಿದೆ. ಈ ಅನುರೂಪತೆಯ ತಂತ್ರ ಕಾವ್ಯಕ್ಕೆ ಸಾವಕಾಶತೆಯನ್ನು ಒದಗಿಸುತ್ತದೆ.

            ಕಲ್ಕುಂದ ಮಜಲ್‌ಕರಿಯೊಂಡೆರ್‌
ಕೋರಿಕಟ್ಟ ಕಂಡ ಕರಿಯೊಂಡೆರ್‌
ಸಂತೆಸದ ಕಂಡ ಕರಿಯೊಂಡೆರ್‌
ಸಮಗಾರ ಕೋರಿ ಕರಿಯೊಂಡೆರ್‌
ಸೂಳೆಲೆ ಪೇಟೆ ಕರಿಯೊಂಡೆರ್‌
ರಂಬೆಲೆ ನಟಕ ಕರಿಯೊಂಡೆರ್‌
ಗುಬ್ಬಿಲೆ ಮಿನದ ಕರಿಯೊಂಡೆರ್‌
ಮಲ್ಲಿಗೆ ಕೊಪ್ಪಲ ಕರಿಯೊಂಡೆರ್‌
ಪೂತ ಪೇಂಟೆ ಕರಿಯೊಂಡೆರ್‌

ತಿರಸ್ಕಾರದ ಲೇವಡಿಯ ಭಾವವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಪುನರಾವೃತ್ತಿಯ ತಂತ್ರ ಅತ್ಯಂತ ಸಶಕ್ತವೂ ಪರಿಣಾಮಕಾರಿಯೂ ಆಗಿ ಕೆಲಸಮಾಡುತ್ತದೆ.

ಪೂಂಜೆ ಪೂಂಜೆಂದ್‌ಂಡ ಈಯೆನೊ
ಕೋರಿದ ಕಟ್ಟೊಡು ನಾಲನೆ ಲೆಕ್ಕೊದ ಪೂಂಜೆನಾಂದ್‌ ಕೇಂಡೆ

ಮೇಲಿನ ಸಾಲುಗಳಲ್ಲಿ ಪೂಂಜೆ ಎನ್ನುವ ಪದವನ್ನು ಶ್ಲೇಷೆಯಾಗಿ ಬಳಸಿದುದನ್ನು ಗಮನಿಸಬೇಕು.

ವಸ್ತು ಅಥವಾ ಘಟನೆಗಳ ವಿವರಗಳು ಮತ್ತೆ ಮತ್ತೆ ಪುನರಾವೃತ್ತಿ ಗೊಳ್ಳುವುದು ಮೌಖಿಕ ಕಾವ್ಯದ ವಿಶಿಷ್ಟ ಲಕ್ಷಣ. ಇದು ಕಾವ್ಯ ಸಂಯೋಜನ ಪ್ರಕ್ರಿಯೆಯ ನಿರ್ವಹಣೆಗೆ ಅನುಕೂಲ ಮಾಡಿಕೊಡುತ್ತದೆ. ಆದರೆ ಈ ಪುನರಾವೃತ್ತಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇದ್ದೇ ಇರುತ್ತದೆ. ಕಾರಣ, ಈ ಹಿಂದೆ ಚರ್ಚಿಸಿದಂತೆ ಕಾವ್ಯನಿರ್ಮಾಣಕಾರ ಗಾಯಕನ ಮಾನಸಭಂಡಾರದಲ್ಲಿ ಅದು ಘನೀಭವಿಸಿ ಬಾಯಿಪಾಠದ ರೂಪದಲ್ಲಿ ಸ್ಥಿರೀಕರಣಗೊಂಡಿರುವುದಿಲ್ಲ. ಪ್ರದರ್ಶನದ ಸಂದರ್ಭದಲ್ಲಿ ಮತ್ತೆ ಮತ್ತೆ ಅದು ಪುನರ್‌ ಸೃಷ್ಟಿಗೊಳ್ಳುತ್ತಿರುತ್ತದೆ. ಆಯಾ ಸಮಯ, ಸಂದರ್ಭಕ್ಕೆ ತಕ್ಕಂತೆ ಘಟನೆಯೊಂದು ವಿಸ್ತಾರಗೊಳ್ಳುತ್ತದೆ, ಇಲ್ಲವೇ ಕುಗ್ಗುತ್ತದೆ. ಪದಗಳ ಬಂಧದಲ್ಲೂ ಅಷ್ಟಿಷ್ಟು ಬದಲಾಗುತ್ತದೆ. ಆದರೆ ಆಶಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹೀಗಾಗಿ ಕೇಳುಗರಿಗೆ ಕೇಳಿದ್ದನ್ನೇ ಕೇಳುವುದರಿಂದ ಉಂಟಾಗುವ ನೀರಸತೆ ತಪ್ಪುತ್ತದೆ. ಕೇಳುಗರು ಮತ್ತೆ ಮತ್ತೆ ಅದೇ ಪ್ರಸಂಗ ಅದೇ ನಿರೂಪಣಾ ಧಾಟಿಯಲ್ಲಿ ಬಂದಾಗ ಅದನ್ನು ನಿರಾಕರಿಸುತ್ತಿಲ್ಲ. ಅದನ್ನು ಮತ್ತೆ ಮತ್ತೆ ಕೇಳಲು ಬಯಸುತ್ತಾರೆ. ಈ ಬಗೆಯ ಸಮಾನ ಘಟನೆಯ ಪುನರಾವೃತ್ತಿ ಎರಡು ಬಗೆಯಲ್ಲಿ ಗೋಚರಿಸುತ್ತದೆ.

ಒಂದನ್ನು ತಿರುಳಿನ ಪುನರಾವರ್ತನೆ ಎಂದೂ (nucleus repetition) ಇನ್ನೊಂದನ್ನು ಚೌಕಟ್ಟಿನ ಪುನರಾವರ್ತನೆ ಎಂದೂ (frame repetition) ಕರೆಯಲಾಗುತ್ತದೆ.

ಮೊದಲ ಮಾದರಿಯ ಪುನರಾವೃತ್ತಿಯಲ್ಲಿ ಆಶಯ ಹಾಗೂ ವಿವರಗಳ ಬದಲಾವಣೆ ಇರುವುದಿಲ್ಲ. ಮದುವೆಗೆ ಮುನ್ನ ಹಾಕುವ ಚಪ್ಪರದ ಸನ್ನಾಹ, ಅಡುಗೆಯ ಕ್ರಿಯಾ ವಿಧಾನಗಳ ವರ್ಣನೆ, ಊಟದ ವಿವರ, ಮದುಮಗನ, ಮದುಮಗಳ ಅಲಂಕಾರ, ನಾಯಕನ ಅಲಂಕರಣ, ಅವನ ದೈನಂದಿನ ಜೀವನ ವಿಧಾನ, ಓಲೆಯ ತಯಾರಿ, ಪತ್ರದ ಒಕ್ಕಣೆ ಇಂತಹ ಹತ್ತು ಹಲವು ಸಂಗತಿಗಳು ಕಾವ್ಯದೊಳಗೆ ಮತ್ತೆ ಮತ್ತೆ ಪುನರಾವೃತ್ತಿಗೊಳ್ಳುತ್ತವೆ. ಒಂದು ಸಂಗತಿ ಮಕ್ಕಿಕಾಮಕ್ಕಿಯಾಗಿ ಯಥಾರೂಪದಲ್ಲಿ ಅಭಿವ್ಯಕ್ತಿಗೊಳ್ಳುವುದಿಲ್ಲ. ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನದೊಳಗೆ ಅಡುಗೆಯ ವಿವರ ಎಂಟು ಬಾರಿ ಬಂದಿದ್ದು, ಮಾದರಿಗಾಗಿ ಎರಡು ಸಂದರ್ಭಗಳ ವರ್ಣನೆಯ ಕನ್ನಡ ರೂಪವನ್ನು ನೀಡಿದೆ.

ಸಿರಿಯ ಸಮ್ಮಾನದೂಟದ ತಯಾರಿ

ಇಂದು ಸಾಮುವಾದರೋ ಹಾಕಿದ ಏತದೆಡೆಗೆ ನಡೆದಳು
ತೋಡಿಸಿದ ಕೆರೆಯೆಡೆಗೆ ಬಂದಳು
ಆಕಾಶದೆತ್ತರದ ಏತದ ಮರವನ್ನು ಎಳೆದು ಬಗ್ಗಿಸಿದಳು
ಕುಳಿತು ನೀರೆತ್ತಿದಳು

ಬೋರಲು ಹಾಕಿದ ಕಲ್ಲ ಮರಿಗೆಯ ಮುಖ ಮೇಲಾಗಿಸಿದಳು
ಸಾಮು ಆಳ್ವೆದಿ ಅವಳು ಅಂಗರ ಜಾಲ ಬರಿಕೆಯಲ್ಲಿ . . . .
ಆಕಾಶದೆತ್ತರದ ಏತದ ಮರವನ್ನು ಎಳೆದು ಬಗ್ಗಿಸಿದ ಸಾಮು
ಪಾತಾಳದ ಹನಿನೀರನ್ನು ಮೇಲೆತ್ತಿದಳು

ಕಲ್ಲ ಬೋಗುಣಿಗೆ ಸುರಿದಳು
ತನ್ನ ಕಾಲಧೂಳು ಕೈಯಧೂಳು ತೊಳೆದಳು
ಮುಖದ ಮೇಲಿನ ಮುತ್ತು ಬೆವರನ್ನು ತೊಳೆದಳು.
ಇನ್ನೊಂದು ಮರಿಗೆ ನೀರನ್ನು ಎತ್ತಿದಳು
ಸಾಮು ಅವಳು ಅಂಗರಜಾಲ ಬರಿಕೆಯಲ್ಲಿ . . . .
ಇದೀಗ ಮತ್ತೊಂದು ಮರಿಗೆ ನೀರೆಳೆದಳು
ಕಲ್ಲ ಬೋಗುಣಿಗೆ ಸುರಿದಳು
ಅನ್ನದ ಪಾತ್ರೆಯ ತಿಕ್ಕಿ ತೊಳೆದಳು
ಇನ್ನೊಂದು ಮರಿಗೆ ನೀರೆತ್ತಿದಳು
ಅನ್ನದ ಪಾತ್ರೆಗೆ ನೀರು ತುಂಬಿದಳು
ಸಾಮು ಅವಳು ಅಂಗರಜಾಲ ಬರಿಕೆಯಲ್ಲಿ . . . .
ನೀರಿನ ಕೊಡವನ್ನು ಸೊಂಟಕ್ಕೇರಿಸಿಕೊಂಡಳು
ಎಡಕ್ಕೆ ಬಲಕ್ಕೆ ಬದಲಿಸಿಕೊಂಡು ಬಂದಳು ಸಾಮು ಅವಳು
ಅಂಗರಜಾಲ ಬರಿಕೆಯ ಅಡುಗೆ ಮನೆಗೆ ಹೋದಳು
ಸಾಮು ಅವಳು ಅಂಗರಜಾಲ ಬರಿಕೆಯಲ್ಲಿ
ದೊಡ್ಡ ಒಲೆ ಮೇಲೆ ಅನ್ನಕ್ಕೆ ಎಸರಿಟ್ಟಳು
ಅಡಿಯಿಂದ ಬೆಂಕಿ ಒಟ್ಟಿದಳು
(ಒಲೆ) ಮೇಲೆ ಅನ್ನಕ್ಕೆ ಪಾತ್ರೆಯನ್ನು ಇಟ್ಟಳು
ಅಂಗಜಾಲ ಬರಿಕೆಯಲ್ಲಿ ಸಾಮು ಅವಳು ….
ಇಂದಾದರೆ ಒಲೆಯೊಳಗೆ ಬೆಂಕಿ ಉರಿ ಮಾಡಿದಳು
ಸಾಮು ಅವಳು (ಅಡುಗೆ ಮನೆ) ಯ ಮೂಲೆಗೆ ಹೋದಳು
ಮೂಲೆಯ ಕಿರು ಏಣಿಯನ್ನು ತಂದು ಕುತ್ತಟ್ಟಿಕ್ಕಿರಿಸಿದಳು
ಬಲದ ಕೈಯಲ್ಲಿ ಹಿಡಿದಳು ಅಕ್ಕಿಮುಡಿಯ ಚುಚ್ಚುಗ
(ಮುಡಿನಾಳಿ-ತುಳು)

ಕುತ್ತಟ್ಟದ ಮೇಲೇರಿದಳು ಸಾಮು ಅವಳು
ಅಂಗರಜಾಲ ಬರಿಕೆಯೊಳು ಓ ಸಾಮು ಅವಳು…..
ಇಂದು ಕುತ್ತಟ್ಟ ಏರಿದ ಸಾಮು ಅವಳು
ಅಕ್ಕಿ ಮುಡಿ ಹಿಡಿದು ಚುಚ್ಚುಗ ಚುಚ್ಚಿದಳು
ಕಜೆಯಕ್ಕಿಯೋ ಬಿಳಿಯಕ್ಕಿಯೋ ಎಂದು ಪರಿಕಿಸಿ ನೋಡಿದಳು
ಬಿಳಿಯಕ್ಕಿ ಮುಡಿದು ಹಿಡಿದಳು
ಮೂರು ಬಳ್ಳ ಅಕ್ಕಿ ಸುರಿದು ಕುತ್ತಟ್ಟದಿಂದ ಕೆಳಗಿಳಿದಳು
ಸಾಮು ಅವಳು ಅಂಗರಜಾಲ ಬರಿಕೆಯೊಳು ಓ….
ಮೂಲೆಯ ಕಿರು ಏಣಿಯ ಮೂಲೆಯಲ್ಲಿರಿಸಿ ಬಂದಳು ಸಾಮು ಅವಳು
ಅಕ್ಕಿಯ ಕೈಯಲ್ಲಿ ಹಿಡಿದು ನಡೆದಳು
ಕಲ್ಲ ಒರಳಿಗೆ ಸುರಿದು ಒನಕೆಯಲ್ಲಿ ಕುಟ್ಟಿ ಗೇರಿದಳು
ಕಂಚಿನ ಪಾತ್ರೆಗೆ ತುಂಬಿದಳು ಸಾಮು
ಮೂರು ಬಳ್ಳ ಅಕ್ಕಿಯ ಕುಟ್ಟಿ ಒಂದು ಬಳ್ಳ ಮಾಡಿದಳು.
ಕಂಚಿನ ಬೋಗುಣಿಗೆ ಅಕ್ಕಿಯ ತುಂಬಿದಳು
ಕೊಡದ ನೀರನ್ನು ಸುರಿದಳು
ಅಕ್ಕಿ ತೊಳೆದ ನೀರನ್ನು ಹೊರ ಚೆಲ್ಲಿದಳು
ಅಂಗರಜಾಲ ಬರಿಕೆಯೊಳು ಸಾಮು ಅವಳು . . . .
ಕೆಳಗೆ ಉಳಿದ ಅಕ್ಕಿಯೊಳಗಿನ ಕಲ್ಲನ್ನು ಬೇರೆ ಮಾಡಿದಳು
ಕಂಚಿನ ಪಾತ್ರೆಗೆ ಅಕ್ಕಿಯ ತುಂಬಿದಳು
ಅಡುಗೆ ಮನೆಗೆ ನಡೆದಳು ಸಾಮು ಅವಳು
ಅನ್ನದ ಪಾತ್ರೆಯ ಬಾಯಿ ತೆಗೆದಳು
ತೊಳೆದ ಅಕ್ಕಿಯ ತಂದು ಸುರಿದಳು
ಅಕ್ಕಿ ಹಾಕಿದ ದೋಷಕ್ಕೆಂದೇ ಕಂಚಿನ ಕೈಸುಟ್ಟುಗ ಹಾಕಿದಳು
ಅಕ್ಕಿಯ ಮೇಲಿನ ಎಸರು ನೀರನ್ನು ಸಟ್ಟುಗದಲ್ಲಿ ತಿರುವಿದಳು
ಪಾತ್ರೆಯ ಬಾಯನ್ನು ಮುಚ್ಚಿದಳು ಸಾಮು ಅವಳು ಅಂಗರ ಜಾಲ ಬರಿಕೆಯೊಳು

ಒಲೆಯೊಳಗೆ ಬೆಂಕಿ ಉರಿ ಮಾಡಿದಳು
ನನ್ನ ಅನ್ನದ ಏರ್ಪಾಟು ಆಯಿತೆಂದಳು ಸಾಮು ಅವಳು
ಇನ್ನು ಮೇಲೋಗರದ ಸನ್ನಾಹ ಆಗಬೇಕೆಂದಳು ಸಾಮು ಅವಳು
ಇಂದೀಗ ಅಗಲಬಾಯಿಯ ಪುಟ್ಟ ಪಾತ್ರೆಯ ಹಿಡಿದಳು
ಕಿರುಮೆಟ್ಟುಕತ್ತಿ ಹಿಡಿದು ಸಾಲರಿ ಚಾವಡಿಗೆ ಬಂದಳು
ಮೇಲೋಗರದ ಸನ್ನಾಹಕ್ಕೆ ತೊಡಗಿದಳು.
ಗುಂಡುಗುಂಡಗಿನ ಚೀನಿಕಾಯಿ
ಉರುಟು ಉರುಟಾದ ಬದನೆಕಾಯಿ
ಅಳಿಲಬಣ್ಣದ ಸೌತೆಕಾಯಿ
ಕೈಮುಷ್ಟಿ ತುಂಬ ಅಲಸಂಡೆ ಹಿಡಿದಳು ಸಾಮು ಅವಳು ಅಂಗರಜಾಲ ಬರಿಕೆಯೊಳು
ಕಿರುಮೆಟ್ಟುಕತ್ತಿಯ ಮೇಲೆ ಒಕ್ಕಾಲಿನಲ್ಲಿ ಓರೆಯಾಗಿ ಕುಳಿತಳು ಸಾಮು ಅವಳು

ಬಣ್ಣ ಬಣ್ಣದ ತರಕಾರಿಯ ಹೆಚ್ಚಿ ಪಾತ್ರೆಗೆ ತುಂಬಿದಳು
ಓ ಸಾಮು ಅವಳು ತಂಗಿ ಸಿರಿಯ ಸಮ್ಮಾನದೂಟದಂದು
ಮೂಲೆಯ ಮೆಟ್ಟುಕತ್ತಿಯನ್ನು ಮೂಲೆಯಲ್ಲಿರಿಸಿ ಬಂದಳು
ಅಡುಗೆ ಮನೆಗೆ ನಡೆದು ಬಂದಳು
ನೀರು ಸುರಿದು ಹೆಚ್ಚಿದ ತರಕಾರಿಯ ತೊಳೆದಳು
ಸಾಮು ಅವಳು ತಂಗಿ ಸಿರಿಯ ಸಮ್ಮಾನದೂಟದಂದು
ನೀರು ಸುರಿದು ತರಕಾರಿಯ ತೊಳೆದ ಸಾಮು ಅವಳು
ಒಲೆ ಮೇಲಿನ ಅನ್ನದ ಪಾತ್ರೆಯ ಬಳಿಗೆ ಬಂದಳು
ಅನ್ನ ಬೆಂದಿದೆ ಎಂದುಕೊಂಡಳು ಅವಳು ಸಾಮು
ತಂಗಿ ಸಿರಿಯ ಸಮ್ಮಾನದೂಟದಂದು
ಬೆಂದ ಅನ್ನವನ್ನು ನೋಡಿದಳು ಸಾಮು ಅವಳು
ತಿಳಿಗಂಜಿಯ ಬಸಿದು ತೆಗೆದಳು
ಇನ್ನೊಂದು ಒಲೆ ಮೇಲೆ ಮೇಲೋಗರಕ್ಕೆ ಪಾತ್ರೆಯಿಟ್ಟಳು
ಅಕ್ಕಪಕ್ಕದಲ್ಲಿದ್ದ ಮೇಲೋಗರದ ಸರಕು ಸರಂಜಾಮು ನೋಡಿದಳು
ತೆಂಗಿನಕಾಯಿ ಅರೆದು ಸಾವಿರ ಬಗೆ ಮೇಲೋಗರ ಮಾಡಿದಳು
ಮೆಣಸು ಅರೆದು ಐನೂರು ಬಗೆ ಮೇಲೋಗರವ ಮಾಡಿದಳು.
ಸಾಮು ಅವಳು ತಂಗಿ ಸಿರಿಯ ಸಮ್ಮಾನದೂಟದಂದು.
ಅನ್ನ ಮೇಲೋಗರಗಳ ಸನ್ನಾಹವಾಯಿತು
ಇನ್ನು ಉಪ್ಪಿನಕಾಯಿ ಆಗಬೇಕೆಂದಳು
ಕಣಿಲೆ ಕಾವಂಟೆಯ ಆಡುಉಪ್ಪಿನಕಾಯಿ ಆಗಬೇಕೆಂದಳು
ಪೊಟ್ಟರೆ ಮಾದಳದ ಉಪ್ಪಿನಕಾಯಿ ಆಗಬೇಕೆಂದಳು
ನೀಲ ಬಣ್ಣದ ಎಣ್ಣೆಯಲ್ಲಿ ಅಪ್ಪವ ಕಾಯಿಸಿದಳು
ಪಟ್ಟೆಬಣ್ಣದ ತುಪ್ಪವ ತಂದಿರಿಸಿದಳು ಅಂಗಾರಜಾಲ
ಬರಿಯೊಳು ಸಾಮು ಅವಳು…..
ನನಗೆ ಸಮ್ಮಾನದಡುಗೆ ಸಕಾಲದಲ್ಲಾಗಬೇಕೆಂದಳು
ತಿಂಗಳು ತುಂಬಿದ ಬಸುರಿಗೆ ಬಳಸುವ ಸಮ್ಮಾನದೂಟ ಇದು
ಎಣ್ಣೆಯಲ್ಲಿ ಕರಿದ ಚಕ್ಕುಲಿ ಬಣ್ಣದ ಗಾರಿಗೆ
ಬುಟ್ಟಿ ತುಂಬ ಅರಳು ಹುರಿದಳು ಸಾಮು ಅವಳು
ಅಂದಿನ ದಿನ ಬಸುರಿ ಸಿರಿಯ ಸಮ್ಮಾನದೂಟಕ್ಕೆಂದು
ನಾರಾಯಣ ನಾರಾಯಣಾ ಅಣ್ಣನವರೆ ಕೇಳಿದಿರಾ
ಸಮ್ಮಾನದೂಟ ಸಕಾಲಕ್ಕಾಗಿದೆ ಎಂದಳು ಸಾಮು ಅವಳು
ತಂಗಿ ಸಿರಿಯ ಸಮ್ಮಾನದೂಟದಂದು …..

ಅತಿಥಿ ಕಾಂತಣ್ಣ ಆಳ್ವನಿಗೆ ಕೊಡ್ಸರಾಳ್ವ ಮಾಡಿದ ಅತಿಥ್ಯ

ಸಾಮುವಾದರೋ ಅನ್ನದ ಪಾತ್ರೆಯ ಕೈಯಲ್ಲಿ ಹಿಡಿದಳು
ಇನ್ನೊಂದು ಕೈಯಲ್ಲಿ ತಾಮ್ರದ ಕೊಡವನ್ನು ಹಿಡಿದಳು ಸಾಮು ಅವಳು
ಹಾಕಿದ ಏತದೆಡೆಗೆ ತೋಡಿದ ಕೆರೆಯೆಡೆಗೆ ಹೋದಳು
ಕೆರೆಯ ಅಡ್ಡಮರದ ಮೇಲೆ ನಿಂತಳು
ಆಕಾಶದೆತ್ತರದ ಏತದ ಮರವ ಹಿಡಿದು ಬಗ್ಗಿಸಿದಳು.
ಒಂದು ಮರಿಗೆ ನೀರ ಎತ್ತಿ ಎಳೆದಳು ಅವಳು ಸಾಮು
ಎಳೆದ ಮರಿಗೆ ನೀರನ್ನು ಕಲ್ಲ ಬೋಗುಣಿಗೆ ಸುರಿದಳು
ಇನ್ನೊಂದು ಮರಿಗೆ ನೀರು ಎಳೆದಳು
ಅನ್ನದ ಪಾತ್ರೆಗೆ ನೀರು ತುಂಬಿದಳು ಸಾಮು ಅವಳು
ಕೊಡದ ನೀರನ್ನು ಎತ್ತಿ ಸೊಂಟಕ್ಕೇರಿಸಿದಳು
ಒಯ್ಯಾರದಲ್ಲಿ ಕೊಡನೀರನ್ನು ತಂದಳು
ಬಂದು ಬಂದು ಕೊಟ್ಟರಾಡಿಯ ಅರಮನೆ ಹೋಗುವಳು ಅವಳು
ಕೊಡ್ಸರಾಳ್ವನ ಕೈಹಿಡಿದ ಮುದುಮಗಳು ಸಾಮು ಅವಳು
ಎತ್ತರದ ಒಲೆ ಮೇಲೆ ಅನ್ನಕ್ಕೆ ಎಸರಿಟ್ಟಳು
ಅನ್ನದ ಪಾತ್ರೆಯ ಬಾಯಿ ಮುಚ್ಚಿದಳು
ನಾರಾಯಣ ಮಗಳೇ ಸಿರಿಯೇ ನೀನು ಕೇಳಿದಿಯಾ
ಕಾಲದ ಅಡುಗೆ ಕಾಲದಲ್ಲಾಗಬೇಕು
ವೇಳೆಯದ ಅಡುಗೆ ವೇಳೇಯಲ್ಲಾಗಬೇಕು
ಸ್ನಾನದ ಬಿಸಿನೀರು ಕಾದು ಬಿಸಿಯಾಗಬೇಕು
ಅಡುಗೆ ಆಗಬೇಕಲ್ಲ ಸಿರಿಯೇ ಎಂದಳು ಸಾಮು
ಆಳ್ವೆದಿ ಅವಳು ಕೊಡ್ಸರಾಳ್ವನ ಕೈಹಿಡಿದ ಮುದುಮಗಳು
ಇಂದಾದರೊ ಸಾಮು ಆಳ್ವೆದಿ ಅಡಿಯಿಂದ ಮೇಲಿಂದ
ಬೆಂಕಿ ಒಟ್ಟಿದಳು ಅವಳು
ನುಣ್ಣಾನೆಯ ಬಿಳಿಯುಕ್ಕಿ ಮೇಲಟ್ಟದಿಂದ ತಂದಳು
ಮೂರು ಬಳ್ಳ ಅಕ್ಕಿ ಮುಡಿಯಿಂದ ತೆಗೆದಳು
ಕಲ್ಲ ಒರಳಲ್ಲಿಟ್ಟು ಕುಟ್ಟಿದಳು
ಧೂಳು ಹಾರಿಸಿ ಒಂದು ಬಳ್ಳ ಮಾಡಿದಳು
ಆಡಿಗೆಯ ಸನ್ನಾಹ ಮಾಡುವಳು ಓ ಸಾಮು ಅವಳು
ಕೊಡ್ಸರಾಳ್ವನ ಕೈಹಿಡಿದ ಮದುಮಗಳು
ಕಂಚಿನ ಗುಂಡುಪಾತ್ರೆಗೆ ಅಕ್ಕಿಯ ತುಂಬಿದಳು
ಸುರಿದ ನೀರಿನ ಮೇಲಿನ ಅಕ್ಕಚ್ಚು ತೆಗೆದಳು
ಅಕ್ಕಿಯೊಳಗಿನ ಕಲ್ಲ ಬೇರೆ ಮಾಡಿದಳು ಅವಳು
ಕಂಚಿನ ಅನ್ನದ ಪಾತ್ರೆಗೆ ಅಕ್ಕಿ ಹಾಕಿದಳು
ಒಯ್ಯಾರದಲ್ಲಿ ಅಕ್ಕಿಯ ಅಡುಗೆಮನೆ ತರುವಳು
ಸಾಮು ಅವಳು ಕೊಡ್ಸರಾಳ್ವನ ಕೈಹಿಡಿದ ಮದುಮಗಳು
ಅನ್ನದ ಪಾತ್ರೆಗೆ ಇಂದು ಅಕ್ಕಿ ತಂದು ಸುರಿದಳು
ಅಕ್ಕಿ ಹಾಕಿದ ದೋಷಕ್ಕೆ ಕಂಚಿಯ ಕೈಸಟ್ಟುಗ ಹಾಕಿದಳು
ಅನ್ನದ ಪಾತ್ರೆಯ ಮಗುಚಿ ಮೇಲಿನ ಬಾಯಿ ಮುಚ್ಚಿದಳು
ಅಡಿಯಿಂದ ಬೆಂಕಿಯ ಮಾಡುವಳು ಸಾಮು ಅವಳು
ಕೊಡ್ಸರಾಳ್ವನ ಕೈಹಿಡಿದ ಮದುಮಗಳು
ಅನ್ನದ ಪಾತ್ರೆಯ ಮಗುಚಿಕೊಂಡು ಇರುವಾಗ
ಅನ್ನದ ಏರ್ಪಾಡು ಆಗುತ್ತ ಬಂದಿತು
ಇನ್ನೀಗ ಮೇಲೋಗರದ ಸನ್ನಾಹ ನಮಗಾಬೇಕೆಂದರು
ಸಾಮುವೂ ಸಿರಿಯೂ ಕೊಟ್ಟರಾಡಿಯ ಆರಮನೆಯಲ್ಲಿ
ಅಳಿಲ ಬಣ್ಣದ ಸೌತೆಕಾಯಿ ಗುಂಡಿನ ಚೀನಿಕಾಯಿ ಹಿಡಿದರು
ಕಿರುಮೆಟ್ಟುಕತ್ತಿ ಪುಟ್ಟ ಪಾತ್ರೆಯ ಹಿಡಿದರು
ಸಾಲರಿ ಚಾವಡಿಯೊಳಗೆ ಒರ್ಕಾಲಲ್ಲಿ
ಓರೆಶರೀರದಲಿ ಕುಳಿತರು ಅವರು
ಬಗೆಬಗೆಯ ಬಣ್ಣದ ತರಕಾರಿ ಹೆಚ್ಚಿ ಪಾತ್ರೆಗೆ ತುಂಬಿದರು
ಮೂಲೆಯ ಮೆಟ್ಟುಕತ್ತಿ ಮೂಲೆಯಲ್ಲಿ ಇರಿಸಿದರು
ಅಡುಗೆ ಮನೆಗೆ ಬರುವರು ಅಕ್ಕ ತಂಗಿಯರು ಅವರು
ಹೆಚ್ಚಿದ ತರಕಾರಿಗೆ ನೀರು ಸುರಿದು ತೊಳೆದರು
ಸಾಮುವೂ ಸಿರಿಯೂ ಅಕ್ಕತಂಗಿಯರು ಅವರು
ಮಿಂಚುವ ಪಾತ್ರೆಯ ಅನ್ನ ಬೇಯುತ್ತ ಬಂದಿತು
ಅನ್ನದ ಪಾತ್ರೆಯ ಬಸಿದರು
ಕೂಡು ಒಲೆಯಲ್ಲಿ ಮೇಲೋಗರದ ಪಾತ್ರೆ ಇರಿಸಿದರು
ಸಾಮುವೂ ಸಿರಿಯೂ ಅಕ್ಕತಂಗಿಯರು ಅವರು
ಇಂದು ಸಾಮು ಮೇಲೋಗರದ ಸನ್ನಾಹ ಮಾಡಿದಳು
ಮೆಂಣಸು ಸೇರಿಸಿ ಮೂನ್ನೂರು ಬಗೆ ಮೇಲೋಗರವಂತೆ
ತೆಂಗಿನಕಾಯಿ ಸೇರಿಸಿ ಸಾವಿರ ಬಗೆ ಮೇಲೋಗರವಂತೆ
ಹುಳಿ ಸೇರಿಸಿ ಐನೂರು ಬಗೆ ಮೇಲೋಗರವಂತೆ
ಗಳಿಗೆ ಹೊತ್ತೊಳಗೆ ಅಡುಗೆ ಆಗಿ ಹೋಯಿತು
ಕೊಟ್ಟರಾಡಿಯ ಅರಮನೆಯಲ್ಲಿ ಸಾಮುವೂ ಸಿರಿಯೂ ಅವರು
ಕಣಿಲೆ ಕಾವಂಟೆಯ ಅಡುಉಪ್ಪಿನಕಾಯಿ ಜೋಡಿಸಿದರು
ಪೊಟ್ಟೀರ ಮಾದಳದ ಉಪ್ಪಿನಕಾಯಿ ಸಿದ್ಧವಾಯಿತು
ನೀಲಬಣ್ಣದ ಎಣ್ಣೆ ಪಚ್ಚೆ ಬಣ್ಣದ ತುಪ್ಪ ಜೋಡಿಸಿದರು
ಅಡುಗೆಯ ಸಕಲ ಸನ್ನಾಹವಾಯಿತಂತೆ ಕೊಟ್ಟರಾಡಿಯ ಆರಮನೆಯಲ್ಲಿ.

ಒಬ್ಬರೇ ಗಾಯಕಿ ಸುಮಾರು ಒಂದು ಗಂಟೆಯ ಅಂತರದಲ್ಲಿ ಈ ಎರಡು ಪ್ರಸಂಗಳನ್ನು ನಿರೂಪಿಸಿದ್ದರು. ಮೊದಲ ಪ್ರಸಂಗದ ಅರ್ಧದಷ್ಟಕ್ಕೆ ಇಳಿದಿದೆ ಎರಡನೆಯ ಸಂರಚನೆ. ಭಾಷಾ ನಿರೂಪಣೆಯಲ್ಲಾಗಲೀ, ಪದಗುಂಪುನಗಳ ಆಯ್ಕೆಯಲ್ಲಾಗಲೀ ಹೆಚ್ಚೇನೂ ವ್ಯತ್ಯಾಸ ತೋರಿ ಬರುವುದಿಲ್ಲ.

ಇನ್ನೊಂದು ಬಗೆಯ ಪುನಾರಾವೃತ್ತಿ. ಅದು ಚೌಕಟ್ಟಿನ ಪುನಾರಾವೃತ್ತಿ. ಇಲ್ಲಿ ಕೇಂದ್ರೀಯ ಆಶಯ ಒಂದೇ ಇರುತ್ತದೆ. ಆದರೆ ಕ್ರಿಯೆಯ ಹೊರಚೌಕಟ್ಟಿನಲ್ಲಿ ಬದಲಾವಣೆ ಇರುತ್ತದೆ. ಉದಾಹರಣೆಗೆ ಸಿರಿಪಾಡ್ಡನದ ಒಂದು ಪ್ರಸಂಗ. ಕಾನಬೆಟ್ಟನ ದುಗ್ಗಲ್ಲಾಯ ಪೆರ್ಗಡೆಯವರು ತಮ್ಮ ಮೊಮ್ಮಗಳು ಗಿಂಡೆಯ ‘ನೀರು ಮೀಯುವ ಪೆರತ್ತ (ಮೊದಲ ರಜಸ್ವಲೆ ಆದ ಸಂದರ್ಭದ ಆಚರಣೆ)’ಕ್ಕೆ ಒಂದು ಮನೆ ಬಿಡದಂತೆ ಊರು ಊರು ಸಂಚರಿಸಿ ಆಮಂತ್ರಿಸಿ ಬರುವಂತೆ ಊರ ಹೆಂಗಸರನ್ನು ಕೇಳಿಕೊಳ್ಳುತ್ತಾರೆ. ಹಾಗೆ ಹೇಳುವಾಗ ಅಜ್ಜರು ಎಲ್ಲೆಲ್ಲಿಗೆ ಹೋಗಬೇಕೆಂದು ಒಂದೊಂದು ಊರಿನ ಮನೆಯ ಹೆಸರು ಹೇಳಿ ಕೇಳಿಕೊಳ್ಳುತ್ತಾರೆ.

ಇನ್ನಾ ಮುಂಡೇರ್‌ಗೆ ಕಾಯಿ ಹಾಕಿ ಮೂರ್ತ ಕರೆಯಬೇಕು
ಬೋಳ -ಬೆಳ್ಮಣ್ಣಿಗೆ ಕಾಯಿ ಹಾಕಿ ಮೂರ್ತ ಕರೆಯಬೇಕು
ಕಾಂತಾರ ಕಡಂದಲೆಗೆ ಕಾಯಿ ಹಾಕಿ ಮೂರ್ತ
ಕರೆಯಬೇಕು
ಕಾಪು ಕಟಪಾಡಿಗೆ ಕಾಯಿ ಹಾಕಿ ಮೂರ್ತ
ಕರೆಯಬೇಕು
ಅಲ್ಲಿಂದ ಹಾಗೆ ಮುಂದೆ ಹೋದವರು ಕೇಳಿದಿರಾ

ಕೆದಿಂಜ ಪರಾರಿಯ ಜಾರುಮಾರ್ಲರಿಗೆ ಕಾಯಿ ಹಾಕಿ ಮೂರ್ತ ಕರೆಯಬೇಕು.

ಉರ್ಕಿತೋಟದ ಆರಮನೆಗೆ ಹೋಗಬೇಕು ಮಕ್ಕಳೆ
ಉರ್ಕಿ ತೋಟದ ಆರಮನೆಯಲ್ಲಿ
ಸೊನ್ನೆಗೂ ಗುರುಮಾರ್ಲರಿಗೂ ಮೂರ್ತಕ್ಕೆ ಬರಹೇಳಬೇಕು
ಅಜ್ಜರು ಹೇಳುತ್ತಾರೆ, ಓ ಕಾನಬೆಟ್ಟನ ಅಜ್ಜರು
ದುರ್ಗಲ್ಲಾಯ ಹೆಗ್ಗಡೆಯವರು
…………..
…………..
ಅಷ್ಟು ಮಾತನ್ನು ಕೇಳಿದ ಹೆಂಗಸರು
ಆಗಲಿ ಅಜ್ಜರೆ ನಾವು ಹೋಗಿ ಬರುತ್ತೇನೆ ಎಂದರು
ಕಾನಬೆಟ್ಟಿನರಮನೆ ಇಳಿದರು ನಾಲ್ಕು ಮನೆಯ ಹೆಂಗಸರು
ಗಿಂಡೆಯ ಪೆರತ್ತಕ್ಕೆ ಬರುವಂತೆ ಹೇಳಲು ಹೋದರು
ನಾಲ್ಕು ಮನೆಯ ಹೆಂಗಸರು ಕಾನಬೆಟ್ಟನರಮನೆಯಿಂದ
ಮೂರ್ತಕ್ಕೆ ಕರೆಯಲು ಹೋದ ಹೆಂಗಸರು
ಇನ್ನ ಮುಂಡೇರ್‌ಗೆ ಹೋದರು
ಕಾಯಿ ಹಾಕಿ ಮೂರ್ತಕ್ಕೆ ಕರೆದರು
ಹಾಗೆ ಅಲ್ಲಿಂದ ಬಂದವರು
ಕಾಂತಾವರ ಕಡಂದಲೆಯಲ್ಲಿ ಕಾಯಿ ಹಾಕಿ ಮೂರ್ತಕ್ಕೆ ಕರೆದರು
ಹಾಗೆ ಅಲ್ಲಿಂದ ಬಂದವರು
ಕಾಂತಾವರ ಕಡಂದಲೆಯಲ್ಲಿ ಕಾಯಿ ಹಾಕಿ ಮೂರ್ತಕ್ಕೆ ಕರೆದರು
ಹಾಗೆ ಅಲ್ಲಿಂದ ಹೊರಟವರು
ಕಾಪುಕಟಪಾಡಿಗೆ ಬಂದವರು ಕಾಯಿ ಹಾಕಿ ಮೂರ್ತಕ್ಕೆ ಕರೆದರು
…………..
…………..

ಹೀಗೆ ಅಜ್ಜರು ಹೋಗಿ ಕರೆವಂತೆ ಹೇಳಿದ ಒಂದೊಂದು ಊರಿನ ಮನೆ ಮನೆಗೂ ಹೋಗಿ ಮೂಹೂರ್ತ ಕರೆದು ಬಂದರು ಎನ್ನುವುದಾಗಿ ಹೇಳಲಾಗುತ್ತದೆ. ಅಜ್ಜರು ಹೇಳಿದ ಊರೆಲ್ಲೆಲ್ಲ ಸಂಚರಿಸಿ ಬಂದು ಒಂದೂ ಮನೆಯನ್ನು ಬಿಡದೆ ಆಮಂತ್ರಿಸಿ ಬಂದರು ಎಂದು ಹೇಳುವ ಮೂಲಕ ಕತೆಯನ್ನು ಮುಂದುವರಿಸಬಹುದಿತ್ತು. ಆದರೆ ಮೌಖಿಕ ಕಾವ್ಯಗಳಲ್ಲಿ ಈ ಬಗೆಯ ನಿರ್ವಹಣೆ ಇರುವುದಿಲ್ಲ. ಅಲ್ಲಿ ಪುನಾರಾವೃತ್ತಿ ಸಹಜ. ಇಂತಹ ಪುನರಾವೃತ್ತಿಯ ಮೂಲಕ ಮೌಖಿಕ ಕಾವ್ಯಗಳ ಲಕ್ಷಣಗಳಲ್ಲಿ ಒಂದಾದ ಸಾವಕಾಶತೆ (retardation) ಏರ್ಪಡುತ್ತದೆ.