ಆಡು ಭಾಷೆಗೂ ಭಾಷೆಯ ಸ್ಥಾನಮಾನವನ್ನು ನೀಡಿದ್ದು ಭಾಷಾವಿಜ್ಞಾನದ ಪ್ರಮುಖ ಕೊಡುಗೆ. ಬರಹದ ಭಾಷೆ ಮಾತ್ರ ನಿಜವಾದ ಭಾಷೆ ಎಂಬ ಸಾಂಪ್ರದಾಯಿಕ ತಿಳುವಳಿಕೆಯನ್ನು ಮೀರಿ ಆಡು ಭಾಷೆಯೂ ಪರಿಣಾಮಕಾರಿ ಸಂವಹನ ಮಾಧ್ಯಮ ಎಂಬುದನ್ನು ಭಾಷಾವಿಜ್ಞಾನ ವೈಜ್ಞಾನಿಕವಾಗಿ ಸಿದ್ಧಪಡಿಸಿತು. ಪರಿಣಾಮವಾಗಿ ಹಲವು ದೇಶೀಯ ಭಾಷೆಗಳು ಜೀವ ಪಡೆದವು. ಅವು ಸಾಹಿತ್ಯ ಭಾಷೆಯಾಗಿ ಬೆಳೆದುದು ಮಾತ್ರವಲ್ಲ. ಆ ಭಾಷೆಗಳ ಅಧ್ಯಯನವೂ ಭಾಷಾ ಬೆಳವಣಿಗೆಗೆ ಕಾರಣವಾಯಿತು ತುಳು ಭಾಷೆ ಇದಕ್ಕೊಂದು ಒಳ್ಳೆಯ ಉದಾಹರಣೆ. ತುಳು ಭಾಷೆಯ ಬೆಳವಣಿಗೆಗೆ ಯಾವುದೇ ಕಾರಣವನ್ನು ನೀಡಿದರೂ ಭಾಷಾವಿಜ್ಞಾನದಿಂದ ರೂಪುಗೊಂಡ ಹೊಸ ದೃಷ್ಟಿ ಕೋನವೇ ಆದರ ಬೆಳವಣಿಗೆಗೆ ಮುಖ್ಯ ಕಾರಣವೆಂಬುದು ಆಳವಾದ ಅಧ್ಯಯನದಿಂದ ಸ್ಪಷ್ಟವಾಗುತ್ತದೆ.

೧೮೫೬ ರಲ್ಲಿ ರಾಬರ್ಟ್ ಕಾಲ್ಡ್‌ವೆಲ್ಲರು ಎಲ್ಲಾ ದ್ರಾವಿಡ ಭಾಷೆಗಳ ಅಧ್ಯಯನ ಮಾಡಿ ‘ದ್ರಾವಿಡಿಯನ್‌ ಕಂಪೆರೆಟಿವ್‌ ಗ್ರಾಮರ್‌’ ಎಂಬ ಗ್ರಂಥವನ್ನು ರಚಿಸಿದರು. ಅವರು ದ್ರಾವಿಡ ಭಾಷಾ ಕುಟುಂಬದಲ್ಲಿ ತುಳು ಅತ್ಯಂತ ಬೆಳವಣಿಗೆ ಹೊಂದಿದ ಸ್ವತಂತ್ರವಾದ ಭಾಷೆ ಎಂದು ಸಾರಿದರು. ಇದರಿಂದ ಭಾಷಾವಿಜ್ಞಾನಿಗಳು ತುಳು ಭಾಷೆಂಯ ಅಧ್ಯಯನದ ಬಗೆಗೆ ಗಮನಹರಿಸಿದರು. ತುಳು ಭಾಷಾ ವೈಶಿಷ್ಟ್ಯ ಮತ್ತು ಮೌಖಿಕ ಸಾಹಿತ್ಯ ಗಮನಿಸಿ, ಕನ್ನಡ ತೆಲುಗು, ಮತ್ತು ಮಲಯಾಳಂ ಭಾಷೆಗೆ ಸಮಾನವಾದ ಸ್ಥಾನವನ್ನು ನೀಡಿ ಪಂಚದ್ರಾವಿಡ ಭಾಷೆಗಳಲ್ಲಿ ಒಂದೆಂದು ಗುರುತಿಸಿದರು. ಇದರಿಂದ ದೇಶಿ, ವಿದೇಶಿ ವಿದ್ವಾಂಸರ ಗಮನವನ್ನು ಸೆಳೆದ ಈಭಾಷೆಯಲ್ಲಿ ಭಾಷಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಧ್ಯಯನಗಳು ನಡೆದವು.

ತುಳು ಲಿಪಿಯಿಲ್ಲದ ಆಡುಮಾತಿನ ಭಾಷೆ. ಈ ಭಾಷೆಯಲ್ಲಿ ಸಮೃದ್ಧವಾದ ಮೌಖಿಕ ಸಾಹಿತ್ಯ ಪರಂಪರೆಯನ್ನು ಬಿಟ್ಟರೆ ಗ್ರಂಥಸ್ಥ ಸಾಹಿತ್ಯ ಪರಂಪರೆ ಸಾಹಿತ್ಯ ಪರಂಪರೆ ಇಲ್ಲ ಎಂಬ ನಂಬಿಕೆ ಆರಂಭದಲ್ಲಿತ್ತು. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರದಲ್ಲಿ ಮೂರಾರು ಲೇಖಕರು ಸಾಹಿತ್ಯವನ್ನು ರಚಿಸಿ ತುಳುವಿಗೆ ಗ್ರಂಥಸ್ಥ ಸಾಹಿತ್ಯದ ಮನ್ನಣೆಯನ್ನು ತಂದುಕೊಟ್ಟರು. ಎಂಬತ್ತರ ದಶಕದಲ್ಲಿ ತುಳುವಿನಲ್ಲಿ ಮಹಾಕಾವ್ಯಗಳ ಶೋಧನೆಯಾಯಿತು. ಇದರಿಂದ ಈ ಭಾಷೆಗೆ ಗ್ರಂಥಸ್ಥ ಸಾಹಿತ್ಯ ಪರಂಪರೆಯೊಂದಿತ್ತು ಎಂಬುದನ್ನು ಒಪ್ಪಿಕೊಳ್ಳುವಂತಾಯಿತು.

೧೮೮೬ರಲ್ಲಿ ತುಳುವಿನ ಮೊದಲ ನಿಘಂಟು ರಚಿಸಿದ ರೆವರೆಂಡ್‌ ಅಗಸ್ಟ್‌ ಮ್ಯಾನರ್‌ ತಮ್ಮ ಗ್ರಂಥದ ಮುನ್ನುಡಿಯಲ್ಲಿ ‘ಕೆಲವು ಬ್ರಾಹ್ಮಣ ಕುಟುಂಬಗಳ ಮನೆಯಲ್ಲಿ ಮಲಯಾಳಂ ಲಿಪಿಯು ತಾಳೆಗರಿಯಲ್ಲಿ ಬರೆದ ಕೆಲವು ಐತಿಹ್ಯಗಳನ್ನು ಬಿಟ್ಟರೆ ತುಳುವಿನಲ್ಲಿ ಬೇರೆ ಯಾವುದೇ ಸಾಹಿತ್ಯ ಇಲ್ಲ’ ಎಂದು ಹೇಳುವಾಗ ಮಲಯಾಳಂ ಲಿಪಿಯಲ್ಲಿದ್ದ ತುಳುವಿನ ತಾಳೆಗರಿ ಗ್ರಂಥಗಳ ಕುರಿತಾಗಿ ಪ್ರಸ್ತಾಪಿಸಿದ್ದರು. ಅವರ ಪ್ರಸ್ತಾವನೆಯ ನೂರು ವರ್ಷಗಳ ಬಳಿಕ ಈ ಕೃತಿಗಳ ಶೋಧನೆಯಾಗಿ ತುಳು ಗ್ರಂಥಸ್ಥ ಸಾಹಿತ್ಯದ ಮನ್ನಣೆಯನ್ನು ಪಡೆಯಿತು. ಇಂದು ಆರು ಸಂಪುಟಗಳ ಬೃಹತ್‌ತುಳುನಿಘಂಟು ರಚನೆಯಾದುದು ತುಳು ಭಾಷೆ ಸಮೃದ್ಧವಾಗಿ ಬೆಳೆದಿರುವುದಕ್ಕೆ ಸಾಕ್ಷಿಯಾಗಿದೆ.

ಆಧುನಿಕ ತುಳು ಭಾಷೆಯಲ್ಲಿ ಸಾಹಿತ್ಯರಚನೆ ಮತ್ತು ಸಾಂಸ್ಕೃತಿಕ ಸಂಶೋಧನೆಗಳ ಜೊತೆಯಲ್ಲೇ ಭಾಷಾ ಅಧ್ಯಯನವು ಭಾಷಾ ಅಧ್ಯಯನವು ಬೆಳೆದು ಬಂತು. ಆರಂಭದಲ್ಲಿ ಮತಪ್ರಚಾರದ ಉದ್ದೇಶಕ್ಕಾಗಿ ಭಾರತಕ್ಕೆ ಬಂದ ಕ್ರೈಸ್ತ ಮಿಶನರಿಗಳು ಭಾರತೀಯ ಭಾಷೆಗಳಲ್ಲಿ ಅಧ್ಯಯನ ಮತ್ತು ಸಾಹಿತ್ಯ ರಚನೆಯ ಕಾರ್ಯಗಳನ್ನು ಕೈಗೊಂಡರು. ಈ ಕಾರ್ಯ ತುಳುವಿನಲ್ಲೂ ನಡೆಯಿತು. ಮತಪ್ರಚಾರದ ಉದ್ದೇಶದಿಂದ ತುಳು ಭಾಷೆಯನ್ನು ಕಲಿತು ತುಳುವಿನಲ್ಲಿ ಮತ ಸಂಬಂಧಿ ಸಾಹಿತ್ಯವನ್ನು ರಚಿಸಿದರು. ತುಳು ಭಾಷಾ ಅಧ್ಯಯನವನ್ನು ನಡೆಸಿದರು. ಎರಡನೇ ಹಂತದಲ್ಲಿ ಸ್ವಾತಂತ್ರ್ಯ ಚಳವಳಿಯ ಸೃಷ್ಟಿಸಿದ ದೇಶಭಕ್ತಿಯ ಪರಿಣಾಮವಾಗಿ ಭಾರತೀಯರಿಗೂ ದೇಶೀಯ ಭಾಷೆಗಳ ಬಗ್ಗೆ ಅಭಿಮಾನ ಮೂಡಿ ಸಾಹಿತ್ಯ ರಚನೆ, ಸಂಶೋಧನೆ ಮತ್ತು ಭಾಷಾ ಅಧ್ಯಯನಗಳು ನಡೆದವು. ತುಳುವಿನಲ್ಲಿ ಇದನ್ನು ‘ತುಳು ಚಳುವಳಿ’ ಎಂದು ಗುರುತಿಸಲಾಗಿದೆ. ತುಳು ಭಾಷೆ, ಸಾಹಿತ್ಯದ ಪುನರುಜ್ಜೀವನ ಭಾವನಾತ್ಮಕ ಮನೋಭಾವವನ್ನು ಇಲ್ಲಿ ಕಾಣಬಹುದಾಗಿದೆ. ತುಳು ಮಾತೃಭಾಷೆಯನ್ನಾಡುವ ವಿದ್ವಾಂಸರು ಸಾಹಿತ್ಯ ರಚನೆಯೊಂದಿಗೆ, ಭಾಷಾ ಅಧ್ಯಯನವನ್ನು ನಡೆಸಿದರು. ತುಳು ಪುನರುಜ್ಜೀವನದ ಈ ಭಾವನಾತ್ಮಕ ಮನೋಭಾವ ಇಂದಿನವರೆಗೂ ಮುಂದುವರಿದುಕೊಂಡು ಬಂದಿದೆ. ಮೂರನೇ ಹಂತದಲ್ಲಿ ಸ್ವಾತಂತ್ರ್ಯದ ಬಳಿಕ ತುಳು ಭಾಷೆಯ ಅಧ್ಯಯನವು ವಿಶಿಷ್ಟ ರೂಪವನ್ನು ಪಡೆಯಿತು. ಕರ್ನಾಟಕದ ಹೊರಗಿನ ವಿಶ್ವವಿದ್ಯಾನಿಲಯಗಳಲ್ಲಿ ಈ ಅಧ್ಯಯನ ಹೆಚ್ಚಾಗಿ ನಡೆದಿರುವುದು ಒಂದು ವೈಶಿಷ್ಟ್ಯವಾಗಿದೆ. ಸ್ಥಳೀಯ ವಿದ್ವಾಂಸರು ಭಾಷಾ ಅಧ್ಯಯನಕ್ಕಿಂತ ಹೆಚ್ಚಾಗಿ ಜಾನಪದ ಸಂಶೋಧನೆಗೆ ಮಹತ್ವ ನೀಡಿದ್ದು ಕಂಡುಬರುತ್ತದೆ. ಅಲ್ಲಲ್ಲಿ ಭಾಷೆಯ ಕುರಿತಾದ ಅಧ್ಯಯನಗಳು ಕ್ವಚಿತ್ತಾಗಿ ಕಂಡುಬರುತ್ತದೆ. ತುಳು ಭಾಷೆಯ ಕುರಿತಾಗಿ ನಡೆದ ಅಧ್ಯಯನವನ್ನು ಹೀಗೆ ವಿವರಿಸಬಹುದು.

ವಿದೇಶಿ ವಿದ್ವಾಂಸರ ತುಳು ಭಾಷಾಧ್ಯಯನ

ಭಾರತೀಯ ಭಾಷೆಗಳ ಸಾಹಿತ್ಯ ರಚನೆ ಮತ್ತು ಅಧ್ಯಯನಕ್ಕೆ ವಿದೇಶಿ ವಿದ್ವಾಂಸರ ಕೊಡುಗೆ ಮಹತ್ವದ್ದಾಗಿದೆ. ಸಾಂಪ್ರದಾಯಿಕವಾಗಿದ್ದ ಭಾಷಾ ಅಧ್ಯಯನಕೆ ವೈಜ್ಞಾನಿಕ ಸ್ವರೂಪ ನೀಡಿದವರು ಈ ವಿದೇಶಿ ವಿದ್ವಾಂಸರು. ಅದರಲ್ಲೂ ದೇಶಿ ಭಾಷೆಗಳಿಗೆ ತಮ್ಮ ಅಧ್ಯಯನದ ಮೂಲಕ ಸಾಹಿತ್ಯಿಕ ಮತ್ತು ಭಾಷಿಕಶಕ್ತಿಯನ್ನು ಒದಗಿಸಿದರು. ಭಾರತದಲ್ಲಿ ಭಾಷಾ ವಿಜ್ಞಾನದ ಅಧ್ಯಯನಕ್ಕೆ ತಳಹದಿಯನ್ನು ನಿರ್ಮಿಸಿ ವೈಜ್ಞಾನಿಕ ಅಧ್ಯಯನಕ್ಕೆ ನಾಂದಿ ಹಾಡಿದರು. ಇದು ತುಳು ಭಾಷೆಗೂ ಅನ್ವಯವಾಗುತ್ತದೆ. ಕ್ರೈಸ್ತ ಮಿಶನರಿಗಳ ತುಳು ಭಾಷಾ ಅಧ್ಯಯನವು ತುಳು ಭಾಷೆಯ ಅಧ್ಯಯನ ಮತ್ತು ಸಾಹಿತ್ಯದ ರಚನೆಗೆ ಹೆದ್ದಾರಿಯನ್ನು ನಿರ್ಮಿಸಿತು.

೧೮೧೫ ನೇ ಇಸವಿಯಲ್ಲಿ ಸ್ವಿಜರ್‌ಲ್ಯಾಂಡಿನ ಬಾಸೆಲ್‌ ಎಂಬ ಊರಿನಲ್ಲಿ ನಾಲ್ವರು ಸಹೋದರರು ಕ್ರೈಸ್ತ ಮತ ಪ್ರಚಾರದ ಉದ್ದೇಶದಿಂದ ಒಂದು ಐಕ್ಯ ಸಂಘವನ್ನು ಸ್ಥಾಪಿಸಿದರು. ಈ ಸಂಸ್ಥೆ ಕ್ರೈಸ್ತ ಮತ ಪ್ರಚಾರಕ್ಕಾಗಿ ಬೇರೆ ಬೇರೆ ದೇಶಗಳಿಗೆ ತಮ್ಮ ಸದಸ್ಯರನ್ನು ಕಳುಹಿಸಿತು. ಅದರಂತೆ ಭಾರತಕ್ಕೆ ಬಂದ ಹಲವು ಕ್ರೈಸ್ತ ಮಿಶನರಿಗಳು ಅಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿತರು. ಬಾಸೆಲ್‌ ಊರಿನಿಂದ ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಇವರನ್ನು ‘ಬಾಸೆಲ್‌ ಮಿಶನ್‌’ ಎಂದು ಕರೆಯಾಲಾಯಿತು. ೧೮೩೪ರಲ್ಲಿ ಮಂಗಳೂರಿಗೆ ಬಂದು ಮಿಶನರಿಗಳು ಇಲ್ಲಿ ಕ್ರೈಸ್ತ ಮತ ಪ್ರಚಾರಕ್ಕಾಗಿ ಬಾಸೆಲ್‌ ಮಿಶನ್‌ ಸ್ಥಾಪಿಸಿದರು. ಇಲ್ಲಿಯ ಜನರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶದಿಂದ ತುಳು ಭಾಷೆಯನ್ನು ಕಲಿಯುವುದು ಅನಿವಾರ್ಯವಾಯಿತು. ಶ್ರದ್ಧೆಯಿಂದ ತುಳು, ಭಾಷೆಯಲ್ಲಿ ಪರಿಣತಿಯನ್ನು ಪಡೆದು, ಕ್ರೈಸ್ತ ಸಾಹಿತ್ಯವನು ರಚಿಸಿದರು. ಮಂಗಳೂರಿನಲ್ಲಿ ಬಾಸೆಲ್‌ ಮಿಶನ್‌ ಪ್ರೆಸ್ಸನ್ನು ಸ್ಥಾಪಿಸಿದರು. ಕನ್ನಡ ಲಿಪಿಯನ್ನು ಬಳಸಿಕೊಂಡು ತುಳು ಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಟಿಸಿದರು. ಇದರಿಂದ ಆಡು ಮಾತಾಗಿದ್ದ ತುಳು ಗ್ರಾಂಥಿಕ ಭಾಷೆಯ ಸ್ಥಾನವನ್ನು ಪಡೆಯಿತು. ತುಳುವಿನಲ್ಲಿ ಬೈಬಲ್‌, ಕ್ರೈಸ್ತ ಗೀತೆಗಳು, ಜಾನಪದ ವಿವಿಧ ಪ್ರಕಾರಗಳು, ಸಂಗೀತ ಹೀಗೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಇದರಿಂದ ತುಳು ಸಾಹಿತ್ಯ ರಚನೆಗೆ ಪ್ರೇರಣೆ ದೊರೆಯಿತು. ಭಾಷಾ ಅಧ್ಯಯನದ ಹೊಸ ಅಧ್ಯಾಯ ಆರಂಭವಾಯಿತು. ಕ್ರೈಸ್ತ ಮಿಶನರಿಗಳ ಕಾಲದಲ್ಲಿ ಪ್ರಕಟವಾದ ತುಳು ಭಾಷೆಗೆ ಸಂಬಂಧಿಸಿದ ಗ್ರಂಥಗಳು ಎರ್ರಡು:

೧. ಜೆ. ಬ್ರಿಗೆಲ್‌ರವರ ‘ತುಳು ವ್ಯಾಕರಣ’
೨. ಎ. ಮ್ಯಾನರರ ತುಳು – ಇಂಗ್ಲಿಷ್‌ ಮತ್ತು ಇಂಗ್ಲಿಷ್‌ ತುಳು ನಿಘಂಟು

ಶಬ್ಧಕೋಶ ರಚನೆ ಆರಂಭಿಸಿದ ಜೆ. ಕೆಮರರ್

ಮತ ಪ್ರಚಾರ ಮಾಡುತ್ತಿದ್ದ ಕ್ರೈಸ್ತ ಮಿಶನರಿಗಳ ಸಂಕಷ್ಟದ ಸಂದರ್ಭದಲ್ಲಿ ಜರ್ಮನಿಯಿಂದ ಭಾರತಕ್ಕೆ ಬಂದವರು ಕೆಮರರ್‌. ಉಡಪಿಯಲ್ಲಿ ಆರಂಭವಾದ ಹೊಸ ಮತ ಪ್ರಚಾರ ಕೇಂದ್ರಕ್ಕೆ ಗ್ರೈನರರಿಗೆ ಸಹಾಯಕರಾಗಿ ಬಂದವರು ಕೆಮರರ್‌. ಬಂದ ಒಂದು ವರ್ಷದಲ್ಲೇ ತುಳು ಕಲಿತು, ತುಳುವಿನಲ್ಲಿ ಕೃತಿ -ರಚನೆ ಅರಂಭಿಸಿದರು. ಅವರ ಯಾವ ಕೃತಿ ಪ್ರಕಟವಾಗದಿದ್ದರೂ ಮುಂದಿನ ಪ್ರಕಟವಾದ ಗ್ರಂಥಗಳಲ್ಲಿ ಅವರು ರಚಿಸಿದ ಕ್ರೈಸ್ತ ಗೀತೆಗಳು ಪ್ರಕಟವಾದವು. ಜರ್ಮನ್‌ ಭಾಷೆಯ ಕ್ರೈಸ್ತ ಗೀತೆಗಳನ್ನು ತುಳುವಿಗೆ ಅನುವಾದ ಮಾಡಿದರು. ಕೆಮರರ್‌ನಮಗೆ ಮುಖ್ಯವಾಗುವುದು ಅವರ ತುಳು ಶಬ್ಧ ಸಂಗ್ರಹದ ದೃಷ್ಟಿಯಿಂದ, ಅವರು ತುಳು ನಿಘಂಟು ಮಾಡುವ ಉದ್ದೇಶದಿಂದ ಎರಡು ಸಾವಿರ ತುಳು ಶಬ್ಧಗಳನ್ನು ಸಂಗ್ರಹಿಸಿದರು. ಹೀಗೆ ತುಳುವಿನ ಭಾಷಾ ಅಧ್ಯಯನವನ್ನು ಆರಂಭಿಸಿದವರು. ಕೆಮರರ್‌. ಆದರೆ ೧೯೫೮ ಅವರು ಅನೀರೀಕ್ಷಿತ ಅನಾರೋಗ್ಯದಿಂದ ತೀರಿಕೊಂಡರು, ಇದರಿಂದ ಪ್ರಕಟವಾಗಬೇಕಿದ್ದ ತುಳು ನಿಘಂಟು ಪ್ರಕಟವಾಗಲಿಲ್ಲ. ಆದರೆ ಮುಂದೆ ಎ. ಮ್ಯಾನರ್‌ರವರು ಕೆಮರರ ಕೆಲಸವನ್ನು ಮುಂದುವರಿಸಿದ್ದರು. ಅವರು ಸಂಗ್ರಹಿಸಿದ ಎರಡು ಸಾವಿರ ಶಬ್ಧಗಳನ್ನು ಸೇರಿಸಿಕೊಂಡು ಇಪ್ಪತ್ತು ಸಾವಿರ ಶಬ್ಧಗಳ ತುಳು -ಇಂಗ್ಲಿಷ್‌ ಶಬ್ಧಕೋಶವನ್ನು ರಚಿಸಿದರು. ಹೀಗೆ ತುಳುವಿನ ಮೊದಲ ಶಬ್ಧಕೋಶ ರಚನೆಗೆ ಕೆಮರಲ್ ಅವರೇ ಮೂಲ ಪ್ರೇರಣೆ. ತುಳು ಭಾಷೆಯ ಅಧ್ಯಯನದ ದೃಷ್ಟಿಯಿದ ಇದನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ.

ತುಳುವಿನ ಮೊದಲ ವ್ಯಾಕರಣಕಾರ ಜೆ. ಬ್ರಿಗೆಲ್‌

ಒಂದು ಭಾಷೆಯಲ್ಲಿ ವ್ಯಾಕರಣ ರಚನೆ ಮಹತ್ವದ ಮೈಲಿಗಲ್ಲು. ಅದು ಭಾಷೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಈ ದೃಷ್ಟಿಯಿಂದ ಬ್ರಿಗೆಲ್ಲರು ಆಂಗ್ಲ ಭಾಷೆಯಲ್ಲಿ ತುಳು ವ್ಯಾಕರಣವನ್ನು ಬರೆದು ತುಳು ಭಾಷೆಗೆ ಮಹತ್ತಿಕೆಯನ್ನು ತಂದುಕೊಟ್ಟರು. ಮುಂದೆ ತುಳು ಭಾಷೆ ಅಧ್ಯಯನ ಮತ್ತು ಸಾಹಿತ್ಯರಚನೆಗೆ ಈ ಕೃತಿ ಪರೋಕ್ಷ ಪ್ರೇರಣೆಯನ್ನು ಒದಗಿಸಿತು. ಆಗಿನ ತುಳು ಸಾಹಿತ್ಯ ರಚನೆ ಆರಂಭವಾಗಿತ್ತು. ಯುರೋಪಿನಿಂದ ಬಂದ ಬ್ರಿಗೆಲ್ಲರು ತುಳು ಕಲಿತು ವ್ಯಾಕರಣ ರಚನೆ ಮಾಡಿದರು. ತುಳು ಭಾಷೆಯ ಬಗ್ಗೆ ಯಾವುದೇ ರೀತಿಯ ಆಕರ ಗ್ರಂಥಗಳಿರಲಿಲ್ಲ. ಬ್ರಿಗೆಲ್‌ ಅವರಿಗೆ ಮಾದರಿಯಾಗಿದ್ದದ್ದು ಆಂಗ್ಲ ವ್ಯಾಕರಣ ಗ್ರಂಥಗಳು. ಅವುಗಳ ಮಾದರಿಯಲ್ಲಿ ಅವರು ತುಳು ವ್ಯಾಕರಣವನ್ನು ರಚಿಸಬೇಕಿತ್ತು. ಎಲ್ಲಕ್ಕಿಂತಲೂ ಮುಖ್ಯವಾಗಿ ತುಳು ಆಡುಮಾತಿನ ಆಧಾರದ ಮೇಲೆ ವ್ಯಾಕರಣ ರಚನೆ ಮಾಡಬೇಕಿತ್ತು. ಈ ಎಲ್ಲಾ ದೃಷ್ಟಿಯಿಂದ ಬ್ರಿಗೆಲರರ ವ್ಯಾಕರಣ ರಚನೆ ಮಹಾನ್‌ ಸಾಹಸವೆಂದೇ ಹೇಳಬೇಕು.

ಬ್ರಿಗೆಲರು ತುಳು ವ್ಯಾಕರಣವನ್ನು ಅಂಗ್ಲ ಭಾಷೆಯಲ್ಲಿ ರಚಿಸಿದರು. ಸಾಮಾನ್ಯವಾಗಿ ಸಂಸ್ಕೃತ ಭಾಷೆಯು ಭಾರತೀಯ ಭಾಷೆಗಳ ವ್ಯಾಕರಣ ರಚನೆಗೆ ಪ್ರೇರಣೆ ಮತ್ತು ಮಾದರಿಯಾಗಿತು. ಆದರೆ ಬ್ರಿಗೆಲರ ರಚನೆಗೆ ಅಂಗ್ಲ ಭಾಷೆಯ ವ್ಯಾಕರಣವು ಮಾದರಿಯಾಗಿದೆ. ಭಾಷಾ ವಿಜ್ಞಾನ ಇನ್ನೂ ಶೈಶಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಬ್ರಿಗೆಲರು ಭಾಷೆಯನ್ನು ವೈಜ್ಞಾನಿಕ ದೃಷ್ಟಿಯಿಂದ ವಿಶ್ಲೇಷಿಸುವ ಪ್ರಯತ್ನ ಮಾಡಿದರು. ಬ್ರಿಗೆಲರು ತಮ್ಮ ವ್ಯಾಕರಣವನ್ನು ಧ್ವನಿ ಶಾಸ್ತ್ರ, (Phonology) ವ್ಯುತ್ಪತ್ತಿ ಶಾಸ್ತ್ರ (Etymology) ಮತ್ತು ವಾಕ್ಯ ರಚನೆ (Syntax) ಎಂದು ವಿಭಾಗಿಸಿ ಅಧ್ಯಯನ ಮಾಡಿದ್ದಾರೆ. ಮೊದಲನೇ ವಿಭಾಗದಲ್ಲಿ ವರ್ಣಮಾಲೆ, ಉಚ್ಚಾರಣೆ, ಸಂಧಿ ಎಂಬ ಮೂರು ಉಪವಿಭಾಗಳಾಗಿಯೂ, ಎರಡನೆ ಭಾಗದಲ್ಲಿ ಶಬ್ಧಗಳ ವರ್ಗೀಕರಣ, ನಾಮಪದ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ, ಅವ್ಯಯ ಎಂಬ ಉಪ ವಿಭಾಗಗಳಾಗಿಯೂ, ಮೂರನೇ ಭಾಗವನ್ನು ವಾಕ್ಯರಚನೆ, ಶಬ್ಧಗಳ ಸ್ಥಾನನಿರ್ದೇಶಿತ ಅರ್ಥ ಮತ್ತು ಪ್ರಯೋಗ ವಿಧಾನ, ವಿಶೇಷಣಾರ್ಥ ಘಟಕಗಳು, ವಾಕ್ಯಘಟಕಗಳ ರಚನೆ ಮತ್ತು ಅವುಗಳ ರೂಪ, ವಾಕ್ಯಗಳ ಜೋಡಣೆ ಮುಂತಾದ ಉಪವಿಭಾಗಗಳಾಗಿ ವಿಂಗಡಿಸಿದ್ದಾರೆ. ಕೊನೆಯ ಅನುಬಂಧದಲ್ಲಿ ತುಳುಪದ್ಯಗಳು, ೫೦ ಗಾದೆಗಳು ಹಾಗೂ ಬ್ರಾಹ್ಮಣ ತುಳುವಿನ ಕೆಲವು ವಿಶಿಷ್ಟ ಪದಗಳನ್ನು ನೀಡಿದ್ದಾರೆ. ಹೀಗೆ ಆಂಗ್ಲ ಮಾದರಿಯಲ್ಲಿ ಬ್ರಿಗೆಲರ ವ್ಯಾಕರಣ ರಚನೆಯಿದೆ. ವಾಕ್ಯ ರಚನಾ ಕ್ರಮದ ವಿಶ್ಲೇಷಣೆಯು ಬ್ರಿಗೆಲರ ವ್ಯಾಕರಣ ಸೊಗಸಾದ ಭಾಗವೆಂದು ಭಾಷಾ ವಿಜ್ಜ್ಞಾನಿ ಯು. ಪಿ. ಉಪಾಧ್ಯಾಯರ ಅಭಿಪ್ರಾಯ. ಬ್ರಿಗೆಲರು ಭಾಷಾ ವಿಜ್ಞಾನದ ತತ್ವಗಳನ್ನು ಅಳವಡಿಸಿ ಕೊಂಡಿರುವುದು ಕಂಡುಬರುತ್ತದೆ. ಹೀಗೆ ತುಳುವಿನ ಮೊದಲ ವ್ಯಾಕರಣ ಗ್ರಂಥ ಇಂಗ್ಲಿಷ್‌ಭಾಷೆಯಲ್ಲಿರುವುದು; ಆಂಗ್ಲ ಮಾದರಿಯನ್ನು ಅನುಸರಿಸುವುದು : ಆಧುನಿಕ ಭಾಷಾ ವಿಜ್ಞಾನ ಸಿದ್ಧಾಂತಗಳಿಗೆ ಹತ್ತಿರವಿರುವುದು ಒಂದು ವೈಶಿಷ್ಟ್ಯವಾಗಿದೆ.

ತುಳುವಿನ ಮೊದಲ ನಿಘಂಟು ರಚಿಸಿದ ಆಗಸ್ಟ್‌ಮ್ಯಾನರ್‌

ತುಳು ಭಾಷೆಯ ಅಧ್ಯಯನದಲ್ಲಿ ರೆವ. ಆಗಸ್ಟ್ ಮ್ಯಾನರರಿಗೆ ಪ್ರಮುಖ ಸ್ಥಾನವಿದೆ. ಮೂವತ್ತಮೂರು ವರ್ಷಗಳ ಕಾಲ ತುಳು ನಾಡಿನಲ್ಲಿ ಕ್ರೈಸ್ತ ಮತ ಪ್ರಚಾರದೊಂದಿಗೆ ತುಳು ಭಾಷೆ ಮತ್ತು ತುಳುನಲ್ಲಿ ಕ್ರೈಸ್ತ ಸಾಹಿತ್ಯ ರಚಿಸಿ ತುಳು ಭಾಷೆಯನ್ನು ಬೆಳೆಸಿದರು. ತುಳು ನಿಘಂಟು ರಚನೆ ತುಳುವಿಗೆ ಗ್ರಾಂಥಿಕ ಭಾಷೆಯ ಸ್ಥಾನವನ್ನು ದೊರಕಿಸಿಕೊಟ್ಟರು. ೨೦,೦೦೦ ಶಬ್ಧಗಳ ತುಳು ಇಂಗ್ಲಿಷ್‌ನಿಘಂಟು ಮ್ಯಾನರ್‌ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

೧೮೫೮ ರಲ್ಲಿ ಉಡಪಿಯಲ್ಲಿ ಅಮ್ಮನ್ನ್‌ ಮಿಶನರಿಯ ಸಹಾಯಕರಾಗಿ ಮ್ಯಾನರ್‌ ನೇಮಕವಾದರು. ೧೮೭೮ರಲ್ಲಿ ಮಂಗಳೂರಿನ ಬಾಸೆಲ್ ಮಿಶಿನ್‌ ಮುಖ್ಯಸ್ಥರಾದರು. ಭಾರತದಲ್ಲಿ ಬಾಸೆಲ್‌ ಮಿಶನಿನ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದರು. ತುಳು ನಿಘಂಟು ರಚನೆಯ ತುಳು ಭಾಷೆಯ ಅಧ್ಯಯನ ಕ್ಷೇತ್ರದಲ್ಲಿ ಅವರಿಗೆ ಬಹುದೊಡ್ಡ ಕೀರ್ತಿಯನ್ನು ತಂದುಕೊಟ್ಟಿತು.

ತುಳು ನಿಘಂಟು ರಚನೆಯ ಮಹಾತ್ವಾಕಾಂಕ್ಷೆಯೊಂದಿಗೆ ಕೆಮರರ್‌ ಸಂಗ್ರಹಿಸಿದ ೨ ಸಾವಿರ ಶಬ್ಧಗಳು ಮೆನ್ನರ್‌ರಿಗೆ ನಿಘಂಟು ರಚನೆಗೆ ಸ್ಫೂರ್ತಿ ನೀಡಿತು. ಸ್ಥಳೀಯರಾದ ಕಾಪುವಿನ ಮಧ್ವರಾಯರು, ಮುಲ್ಕಿಯ ಸೀತಾರಾಮರು, ಮಂಗಳೂರಿನ ಸರ್ವೋತ್ತಮ ಪೈ ಶಿವರಾಮ್‌ ಮೊದಲಾದ ದೇಶೀ ಪರಿಣತರ ಸಹಾಯ ಪಡೆದರು. ಡಬ್ಲ್ಯು. ರೀವ್‌ ಅವರ ಕನ್ನಡ ನಿಘಂಟು, ಎಚ್‌. ಗುಂಡರ್ಟ್‌ರವರ ಮಲಯಾಳಂ ನಿಘಂಟು, ಚಿ. ಬೆನಿಫ್‌ ಅವರ ಸಂಸ್ಕೃತ ನಿಘಂಟುಗಳನ್ನು ಆಧಾರವಾಗಿಟ್ಟುಕೊಂಡು ಮರಗಿಡಗಳ ಹೆಸರಿಗಾಗಿ ಸಿ. ಸ್ಟೊಲ್ಜ್‌ ರಚಿಸಿದ ‘Five Hundred Indian Plants’ ಎಂಬ ಪುಸ್ತಕದ ಸಹಾಯವನ್ನು ಪಡೆದರು. ಈ ವಿಚಾರಗಳೆಲ್ಲವನ್ನು ಅವರ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. ಮದ್ರಾಸು ಸರಕಾರ ತುಳು ನಿಘಂಟು ಮುದ್ರಣಕ್ಕೆ ಆರ್ಥಿಕ ಸಹಾಯವನ್ನು ನೀಡಿತು. ೧೮೫೬ರಲ್ಲಿ ಮಂಗಳೂರಿನ ಬಾಸೆಲ್ ಮಿಶಿನ್‌ ಪ್ರೆಸ್ಸಲ್ಲಿ ತುಳು – ಇಂಗ್ಲಿಷ್‌ನಿಘಂಟು ಮುದ್ರಣವಾಗಿ ಪ್ರಕಟವಾಯಿತು.

ಅಕಾರಿದಿಯಾಗಿ ತುಳು ಶಬ್ಧಗಳನ್ನು ಕನ್ನಡ ಲಿಪಿಯಲ್ಲಿ ನೀಡಲಾಗಿದೆ. ತುಳು ಗೊತ್ತಿಲ್ಲದವರಿಗೆ ತುಳುವನ್ನು ಇಂಗ್ಲಿಷ್‌ಅಕ್ಷರಗಳಲ್ಲಿ ನೀಡಲಾಗಿದೆ. ಒಂದು ಶಬ್ಧದ ಮುಖ್ಯ ಉಲ್ಲೇಖ ಹಾಗೂ ಉಪ ಉಲ್ಲೇಖಗಳನ್ನು ನೀಡಲಾಗಿದೆ. ಈ ಶಬ್ಧ ತುಳು ವ್ಯಾಕರಣದ ಯಾವ ವರ್ಗಕ್ಕೆ ಸೇರುತ್ತದೆ ಅಂದರೆ ನಾಮಪದವೇ, ಕ್ರಿಯಾಪದವೇ, ನಾಮ ವಿಶೇಷಣವೇ, ಕ್ರಿಯಾ ವಿಶೇಷಣವೇ ಇತ್ಯಾದಿಗಳನ್ನು ಸಂಕೇತಾಕ್ಷರಗಳಲ್ಲಿ ನೀಡಲಾಗಿದೆ. ಒಂದು ಶಬ್ಧ ಪ್ರಯೋಗವಾಗುವ ವಿಶೇಷಾರ್ಥ ಪ್ರಯೋಗವನ್ನು ಅರ್ಥದೊಂದಿಗೆ ನೀಡಲಾಗಿದೆ. ಗಾದೆ ಹಾಗೂ ನುಡಿಗಟ್ಟುಗಳನ್ನು ಉದಾಹರಣೆಗಳಾಗಿ ನೀಡಲಾಗಿದೆ. ಗಿಡ, ಮರ, ಪ್ರಾಣಿ ಪಕ್ಷಿಗಳ ಉಲ್ಲೇಖವನ್ನು ನೀಡುವಾಗ ವೈಜ್ಞಾನಿಕವಾಗಿ ಅದಕ್ಕಿರುವ ಹೆಸರನ್ನು ಪ್ರಸ್ಥಾಪಿಸಲಾಗಿದೆ. ಅನ್ಯದೇಶಿಯ ಶಬ್ಧಗಳನ್ನು ಕೂಡ ತುಳುವಿನ ಶಬ್ದಗಳೆಂದು ಅಂಗೀಕರಿಸಿ ನೀಡಿದ್ದು ಮ್ಯಾನರರ ಅಧುನಿಕ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಡೆಮ್ಮಿ ೧ / ೮ ಅಕಾರದಲ್ಲಿ ೬೮೭ ಪುಟಗಳ ಈ ನಿಘಂಟು ತುಳುವಿನ ಮೊದಲ ನಿಘಂಟು ಮಾತ್ರವಲ್ಲ ತುಳು ಭಾಷಾಧ್ಯಯನಕ್ಕೆ ಪ್ರೇರಣೆ ನೀಡಿದ ಐತಿಹಾಸಿಕ ಮಹತ್ವದ ಕೃತಿಯಾಗಿದೆ.

೧೮೮೮ರಲ್ಲಿ ಮ್ಯಾನರ್‌ ಇಂಗ್ಲಿಷ್‌ ತುಳು ನಿಘಂಟು ಪ್ರಕಟವಾಯಿತು. ತುಳು – ಇಂಗ್ಲಿಷ್‌ ನಿಘಂಟನ್ನು ಆಕರವನ್ನಾಗಿಟ್ಟುಕೊಂಡು ಇದನ್ನು ರಚಿಸಲಾಗಿದೆ. ಇಂಗ್ಲಿಷ್‌ ಶಬ್ಧಗಳಿಗೆ ತುಳುವಿನ ಅರ್ಥವನ್ನು ನೀಡಲಾಗಿದೆ. ಇಂಗ್ಲಿಷ್‌ ಶಬ್ಧವನ್ನು ರೋಮನ್‌ ಲಿಪಿಯಲ್ಲೇ ನೀಡಲಾಗಿದೆ. ತುಳು ಗೊತ್ತಿಲ್ಲದವರಿಗೆ ತುಳು ಶಬ್ಧಗಳನು ತಿಳಿಯಲು ಉಪಯುಕ್ತವಾದ ನಿಘಂಟು ಇದಾಗಿದೆ. ಹೀಗೆ ಈ ಎರಡೂ ನಿಘಂಟುಗಳು ತುಳು ಭಾಷೆಗೆ ಮ್ಯಾನರ ಮಹತ್ವದ ಕೊಡುಗೆ ತುಳು ಭಾಷೆಯ ಕಲಿಕೆಯ ದೃಷ್ಷಿಯಿಂದ ಬಾಸೆಲ್‌ ಮಿಶನಿನವರ ಎರಡು ಪ್ರಕಟಣೆಗಳನ್ನು ಹೆಸರಿಸಬೇಕು. ೧೮೬೨ನೇ ಇಸವಿಯಲ್ಲಿ ಪ್ರಕಟವಾದ ‘ತುಳು’ ಪಾಟಳೆ ದುಂಬುದು ಪುಸ್ತಕ’ (First Book in Tulu) ಮತ್ತು ೧೮೯೦ರಲ್ಲಿ ಪ್ರಕಟವಾದ ‘ಕನ್ನಡ ತುಳು -ಇಂಗ್ಲಿಷ್‌ ಭಾಷಾ ಮಂಜರಿ’ (A Kannada Guide to Tulu -English Conversation) ತುಳು ಭಾಷೆಯನ್ನು ಕಲಿಸುವ ದೃಷ್ಟಿಯಿಂದ ಪ್ರಕಟಿಸಿದ ಈ ಎರಡು ಕೃತಿಗಳು ಪ್ರಸಾರದಲ್ಲಿ ಮಹತ್ವದ ಕೊಡುಗೆಗಳಾಗಿವೆ.

ತುಳು ಚಳವಳಿ ಮತ್ತು ಅಧ್ಯಯನ

ಕ್ರೈಸ್ತ ಮಿಶನರಿಗಳ ತುಳು ಭಾಷೆ ಮತ್ತು ಸಾಹಿತ್ಯ ಚಟುವಟಿಕೆಗಳಿಂದಾಗಿ ಆಡುಭಾಷೆಯಾಗಿದ್ದು ತುಳು ಗ್ರಂಥಸ್ಥ ಭಾಷೆಯ ಸ್ಥಾನಮಾನವನ್ನು ಪಡೆಯಿತು. ಎರಡನೇ ಹಂತದಲ್ಲಿ ದೇಶೀಯ ವಿದ್ವಾಂಸರ ಸಾಂಘಿಕ ಚಟುವಟಿಕೆಗಳಿಂದಾಗಿ ತುಳು ಸಾಹಿತ್ಯ ರಚನೆ ವೇಗವನ್ನು ಪಡೆಯಿತು. ಸ್ವಾತಂತ್ರ್ಯ ಚಳುವಳಿಯ ಕಾರಣದಿಂದ ಹುಟ್ಟಿದ ದೇಶೀಯ ಅಭಿಮಾನ ತುಳುನಾಡು – ನುಡಿಯ ಬಗೆಗೂ ತಿರುಗಿತು. ಪರಿಣಾಮವಾಗಿ ತುಳು ನಾಡು – ಭಾಷೆ – ಸಂಸ್ಕೃತಿಯ ಪುನರುಜ್ಜೀವನ ಕಾರ್ಯವು ವ್ಯವಸ್ಥಿತವಾಗಿ ನಡೆಯಿತು. ದಿ.ಎಸ್‌.ಯು. ಪಣಿಯಾಡಿಯವರ ನೇತೃತ್ವದಲ್ಲಿ ೧೯೩೦ರ ಸುಮಾರಿಗೆ ಆರಂಭವಾದ ಈ ಕಾರ್ಯವನ್ನು ‘ತುಳು ಚಳುವಳಿ’ ಎಂದು ಗುರುತಿಸಲಾಗುತ್ತಿತ್ತು.

ಆದರೆ ತುಳು ಚಳುವಳಿಯ ಸಂದರ್ಭದಲ್ಲಿ ದೇಶೀಯ ವಿದ್ವಾಂಸರು ತುಳು ಸಾಹಿತ್ಯ ರಚನೆಗೆ ಹೆಚ್ಚಿನ ಒಲವು ತೋರಿಸಿದಂತೆ ಕಂಡುಬರುತ್ತದೆ. ಭಾಷೆಯ ಕುರಿತಾದ ಅಧ್ಯಯನ ಬಹಳಷ್ಟು ಕಡಿಮೆ. ತುಳುನಾಡು ಹಾಗೂ ಕೆಲವು ಶಬ್ದಗಳ ವ್ಯುತ್ಪತ್ತಿಯ ಕುರಿತಾಗಿ ವಿದ್ವಾಂಸರ ವಲಯದಲ್ಲಿ ಚರ್ಚೆ ಕಂಡುಬರುತ್ತದೆ. ಮಂಜೇಶ್ವರ ಗೋವಿಂದ ಪೈಗಳು, ಬಿ.ಎ. ಸಾಲೆತ್ತೂರು, ಸೇಡಿಯಾಪು ಕೃಷ್ಣಭಟ್ಟರು ಮುಂತಾದ ವಿದ್ವಾಂಸರನ್ನು ಗುರುತಿಸಬಹುದು. ಉಳಿದಂತೆ ಸೃಜನಶೀಲ ಸೃಷ್ಟಿಯ ಕಡೆಗೆ ಹೆಚ್ಚಿನ ಒಲವಿರುವಂತೆ ಕಂಡುಬರುತ್ತದೆ.

ಪಣಿಯಾಡಿಯರ ದೇಶೀಯ ತುಳು ವ್ಯಾಕರಣ ಗ್ರಂಥ

ತುಳು ಪುನರುಜ್ಜೀವನ ಚಳುವಳಿಯ ಸಂದರ್ಭದಲ್ಲಿ ರಚನೆಯಾದ ಏಕೈಕ ಭಾಷಾ ಅಧ್ಯಯನದ ಕೃತಿಯೆಂದರೆ ಎಸ್‌. ಯು. ಪಣಿಯಾಡಿಯವರ ‘ತುಳು ವ್ಯಾಕರಣ’ ಹಲವು ದೃಷ್ಟಿಯಿಂದ ಈ ಕೃತಿ ಮಹತ್ವದ್ದಾಗುತ್ತದೆ. ೧೮೭೨ರಲ್ಲಿ ಬ್ರಿಗೆಲ್ಲರು ಆಂಗ್ಲ ಮಾದರಿಯನ್ನಿಟ್ಟುಕೊಂಡು, ಆಂಗ್ಲ ಭಾಷೆಯಲ್ಲಿ ವ್ಯಾಕರಣವನ್ನು ರಚಿಸಿದರು. ಆದರೆ ಪಣಿಯಾಡಿಯವರು ದೇಶೀಯ ಸಾಂಪ್ರದಾಯಿಕ ಮಾದರಿಯಲ್ಲಿ ತುಳು ಭಾಷೆಯಲ್ಲೇ ವ್ಯಾಕರಣ ರಚಿಸಿದರು. ಈ ದೃಷ್ಟಿಯಿಂದ ಪಣಿಯಾಡಿಯವರದು ತುಳುವಿನ ಮೊದಲ ವ್ಯಾಕರಣ ಕೃತಿಯಾಗಿದೆ.

ಪಣಿಯಾಡಿಯವರು ಭಾರತೀಯ ವೈಯಾಕರಣಿಗಳಂತೆ ಸಂಸ್ಕೃತ ವ್ಯಾಕರಣ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಬರೆದರು. ತಮ್ಮ ವ್ಯಾಕರಣವನ್ನು ಹನ್ನೆರಡು ವಿಭಾಗಗಳಾಗಿ ಮಾಡಿ, ಅವುಗಳಿಗೆ ವರ್ಣ, ಸಂಧಿ, ಶಬ್ದ, ಕಾರಕ, ಸ್ತ್ರೀಪ್ರತ್ಯಯ, ಸಮಾಸ, ನಾಮಜ (ತದ್ಬವ), ಕ್ರಿಯಾಪದ ಧಾತು ಪಾಠ, ಧಾತುಜ (ಕೃದಂತ) ಅವ್ಯಯಗಳೆಂದೆ ಹೆಸರಿಸಿದ್ದಾರೆ. ವಿಶೇಷ ವಿಚಾರ ಎಂಬ ಕೊನೆಯ ಅಧ್ಯಾಯದಲ್ಲಿ ತುಳುವಿನ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ದ್ರಾವಿಡ ಭಾಷೆಯಾದ ತುಳುವಿಗೆ ಆರ್ಯ ಭಾಷೆಯಾದ ಸಂಸ್ಕೃತವನ್ನು ಮಾದರಿಯಾಗಿ ಸ್ವೀಕರಿಸಿರುವುದರಿಂದ ಸಹಜವಾಗಿಯೇ ಕೆಲವು ಗೊಂದಲಗಳು, ಅನಗತ್ಯ ವಿವರಗಳು ನುಸುಳಿವೆ.

ಆದರೆ ತುಳು ಭಾಷೆಯ ವೈಶಿಷ್ಟ್ಯಗಳನ್ನು ಗುರುತಿಸುವ ಪ್ರಯತ್ನವನ್ನು ಪಣಿಯಾಡಿಯವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಸಂಸ್ಕೃತದ ಕೆಲವು ಸ್ವರಗಳು (ಈ, ಔ, ಋ, ೠ, ಇತ್ಯಾದಿ) ತುಳು ಭಾಷೆಗೆ ಹೊಂದಿಕೆಯಾಗುವುದಿಲ್ಲ ಎಂಬುದನ್ನು ಗುರುತಿಸುತ್ತಾರೆ. ತುಳು ಭಾಷೆಯ ವೈಶಿಷ್ಟ್ಯಗಳಾಗಿ ಕರ್ಮಣಿ ಪ್ರಯೋಗವಿಲ್ಲದಿರುವಿಕೆ, ತುಳುವಿನ ಉಪಭಾಷಾ ವೈಶಿಷ್ಟ್ಯಗಳಾಗಿ ಕರ್ಮಣಿ ಪ್ರಯೋಗವಿಲ್ಲದಿರುವಿಕೆ, ತುಳುವಿನ ಉಪಭಾಷಾ ಭೇದಗಳು, ಲಿಪಿ ವಿಚಾರ ಇತ್ಯಾದಿಗಳನ್ನು ವಿವರಿಸಿದ್ದಾರೆ. ತುಳು ಭಾಷೆಯ ಪುನರುಜ್ಜೀವನದ ಕಾಲದಲ್ಲಿ ಮೂಡಿಬಂದ ಅತ್ಯಂತ ಮಹತ್ವದ ಕೃತಿ ಇದು. ಅದಕ್ಕಿಂತಲೂ ಮುಖ್ಯವಾಗಿ ತುಳುವಿನಲ್ಲಿ ಬರೆದ ಮೊದಲ ವ್ಯಾಕರಣ ಕೃತಿ ಎಂಬ ಹೆಗ್ಗಳಿಕೆ ಈ ಕೃತಿಗಿದೆ. ಆ ಬಳಿಕ ತುಳುವಿನಲ್ಲಿ ಯಾವುದೇ ವ್ಯಾಕರಣ ಕೃತಿ ರಚನೆಯಾಗಿಲ್ಲ ಎಂಬ ದೃಷ್ಟಿಯಿಂದ. ಇದು ಸದ್ಯಕ್ಕೆ ನಮ್ಮ ಎದುರಿನ ಏಕೈಕ ಸಾಂಪ್ರದಾಯಿಕ ವ್ಯಾಕರಣ ಕೃತಿ ಎಂಬ ದೃಷ್ಟಿಯಿಂದಲೂ ಈ ಕೃತಿಗೆ ಮಹತ್ವವಿದೆ.

ಕಡವ ಶಂಭು ಶರ್ಮರ ‘ತುಳು ದೇಶ ಭಾಷಾ ವಿಚಾರವು’ ಎಂಬ ಕೃತಿಯಲ್ಲಿ ತುಳು ಭಾಷೆಗೆ ಸಂಬಂಧಿಸಿದ ವಿಚಾರಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ರಚಿಸಿದ್ದರೂ, ೧೯೭೦ರಲ್ಲಿ ಶಿವರಾಮ ಕಾರಂತರ ಮುನ್ನುಡಿಯೊಂದಿಗೆ ಕೃತಿ ಪ್ರಕಟವಾಯಿತು. ತುಳು ದೇಶದ ವಿಚಾರ, ತುಳು ದೇಶವೇ ಕರ್ನಾಟಕ ದೇಶ, ತುಳು ಭಾಷೆಯೇ ಹಳೆ ಕನ್ನಡ, ತುಳು ಭಾಷೆಯ ಅತಿ ಪ್ರಾಚೀನತೆ, ತುಳು ಭಾಷೆಯೇ ಹಳೆ ಕನ್ನಡವಾಗಿ ವ್ಯಾಕರಣಕ್ಕೆ ಮೂಲಭಾಷೆ, ತುಳು ಕನ್ನಡ ರೂಪ ತುಲನೆ, ನಾಮಪದ ಮಾತೃಧಾತುಗಳ ತುಲನೆ – ಹೀಗೆ ತುಳು ಭಾಷೆಯ ಬಗ್ಗೆ ಚರ್ಚೆಯಿದೆ. ತೀರ ಸಾಂಪ್ರದಾಯಿಕ ದೃಷ್ಟಕೋನ ಹಾಗೂ ಆಧುನಿಕ ಭಾಷಾವಿಜ್ಞಾನದ ದೃಷ್ಟಿಯಿಂದ ಅವೈಜ್ಞಾನಿಕವೆಂದು ಅನ್ನಿಸುವ ವಿಚಾರಗಳಿದ್ದರೂ ತುಳು ಭಾಷೆಯ ಕುರಿತಾದ ವಿದ್ವತ್ಪೂರ್ಣ ಚರ್ಚೆ ಗಮನ ಸೆಳೆಯುತ್ತದೆ.

ಸೇಡಿಯಾಪು ಕೃಷ್ಣ ಭಟ್ಟರ ‘ಕೆಲವು ದೇಶನಾಮ’ಗಳು ಎಂಬ ಕೃತಿಯು ಬಹುಮುಖ್ಯವಾದುದು. ತುಳು ಭಾಷಾಜಾಗೃತಿಯ ನಾಲ್ಕನೇ ಹಂತದ ಗುರುತನ್ನು ಈ ಕೃತಿಯಲ್ಲಿ ಕಾಣಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಕೃತಿಯ ‘ತುಳು ಶಬ್ದಾರ್ಥ ಮತ್ತು ಚೇರ ಕೊಂಕಣ’ ಎಂಬ ಪ್ರಬಂಧವು ಬಹುಮುಖ್ಯವಾದುದು. ತುಳು ಶಬ್ದದ ಕುರಿತಾಗಿ ಬಂದ ವಾದಗಳನ್ನು ವಿದ್ವತ್‌ಪೂರ್ಣವಾಗಿ ನಿರಾಕರಿಸಿ, ತುಳು ಎಂದರೆ ‘ಜಲಭರಿತ’ ಎಂದು ಅರ್ಥವೆಂದೂ, ತುಳುನಾಡು ಎಂದರೆ ‘ಜಲಾಧಿಕ್ಯವುಳ್ಳ ದೇಶ, ಜಲಭರಿತವಾದ ದೇಶ’ ಎಂಬುದನ್ನು ನಿರೂಪಿಸಿದ್ದಾರೆ. ತುಳು ಭಾಷೆಯ ಹಲವು ವೈಶಿಷ್ಟ್ಯಗಳನ್ನು ಪಾಂಡಿತ್ಯಪೂರ್ಣವಾಗಿ ಈ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ತುಳು ಶಬ್ದ ನಿಷ್ಪತ್ತಿ ಮತ್ತು ಭಾಷೆಯ ಕುರಿತಾದ ಮಹತ್ವದ ವಿಚಾರಗಳು ಮುಂದಿನ ವಿದ್ವಾಂಸರ ಕುತೂಹಲ ಕೆರಳಿಸುತ್ತವೆ. ಈ ದೃಷ್ಟಿಯಿಂದ ಸೇಡಿಯಾಪು ಅವರ ಕೃತಿ ಮಹತ್ವದ್ದಾಗಿದೆ.

ಭಾಷಾವೈಜ್ಞಾನಿಕ ಅಧ್ಯಯನಗಳು

ತುಳುಭಾಷೆಯ ಕುರಿತಾದ ಸಾಂಪ್ರದಾಯಿಕ ಅಧ್ಯಯನಕ್ಕಿಂತ ಭಾಷಾ ವೈಜ್ಞಾನಿಕವಾಗಿ ನಡೆದ ಅಧ್ಯಯನವೇ ಹೆಚ್ಚಾಗಿರುವುದು ಒಂದು ವೈಶಿಷ್ಟ್ಯವಾಗಿದೆ. ಕರ್ನಾಟಕದ ಹೊರಗಿನ ವಿಶ್ವವಿದ್ಯಾನಿಲಯಗಳಲ್ಲಿ ಈ ರೀತಿಯ ಅಧ್ಯಯನಗಳು ನಡೆದುದನ್ನು ಗುರುತಿಸಬಹುದಾಗಿದೆ. ನಾಲ್ಕಾರು ಪಿಎಚ್‌.ಡಿ. ಪ್ರಬಂಧಗಳೂ ತುಳು ಭಾಷೆ ಅಧ್ಯಯನದ ಕುರಿತಾಗಿ ಬಂದಿವೆ. ಭಾಷೆಯನ್ನು ಎಲ್ಲಾ ನೆಲೆಗಳಲ್ಲೂ ವಿಶ್ಲೇಷಿಸುವ ಪ್ರಯತ್ನಗಳು ನಡೆದಿವೆ.

ತುಳುನಾಡಿನವರೆಲ್ಲರ ದೇಶೀ ಮತ್ತು ವಿದೇಶಿ ವಿದ್ವಾಂಸರು ಕೂಡ ಈ ರೀತಿಯ ಕಾರ್ಯವನ್ನು ಮಾಡಿದ್ದಾರೆ. ತುಳು ಒಂದು ಸ್ವತಂತ್ರ ಭಾಷೆ ಎಂದು ಘೋಷಿಸಿ ಅದರ ಬೆಳವಣಿಗೆಗೆ ದಾರಿ ಮಾಡಿಕೊಟ್ಟವರು ಟಿ. ಕಾಲ್ಡ್‌ವೆಲ್‌. ಹಾಗೆಯೇ ದ್ರಾವಿಡ ಭಾಷೆಗಳ ಬಗ್ಗೆ ಅಧ್ಯಯನ ಮಾಡಿದ ಬರೋ ಮತ್ತು ಟಿ. ಎಮಿನೋ ಕೂಡಾ ತುಳುವನ್ನು ದ್ರಾವಿಡ ಭಾಷಾ ಪರಿವಾರದ ಪ್ರಮುಖ ಭಾಷೆಯೆಂದು ಅಂಗೀಕರಿಸಿದರು. ತುಳುವಿನ ಕುರಿತಾಗಿ ಅಧ್ಯಯನ ನಡೆಸಿದ ದೇಶೀಯ ವಿದ್ವಾಂಸರಲ್ಲಿ ಕೇರಳದ ಎಲ್‌. ವಿ. ರಾಮಸ್ವಾಮಿ ಅಯ್ಯರ್‌ ಪ್ರಮುಖರು. ಪ್ರಮುಖ ಭಾಷಾ ವಿಜ್ಞಾನಿಯಾಗಿರು ರಾಮಸ್ವಾಮಿ ಅಯ್ಯರ್‌ ಪ್ರಮುಖರು. ಪ್ರಮುಖ ಭಾಷಾ ವಿಜ್ಞಾನಿಯಾಗಿರುವ ರಾಮಸ್ವಾಮಿ ಅಯ್ಯರ್‌ದ್ರಾವಿಡ ಭಾಷಾ ಅಧ್ಯಯನಕ್ಕೆ ನೀಡಿದ ಕೊಡುಗೆ ಮಹತ್ವವಾದುದು. ತಮಿಳು ಭಾಷೆಯಲ್ಲಿ ಆಳವಾದ ಅಧ್ಯಯನವನ್ನು ಅವರು ನಡೆಸಿದ್ದಾರೆ. ತಮಿಳಿನ ನಂತರ ಅವರು ಮಹತ್ವ ನೀಡಿದ ದ್ರಾವಿಡ ಭಾಷೆಯೆಂದರೆ ತುಳು.

ಅವರು ಬರೆದ ನೂರಾರು ಲೇಖನಗಳಲ್ಲಿ ಆರು ಲೇಖನಗಳು ತುಳುವಿಗೆ ಸಂಬಂಧಿಸಿದ್ದಾಗಿದೆ. ಹಲವಾರು ಲೇಖನಗಳಲ್ಲಿ ತೌಲನಿಕ ಅಧ್ಯಯನ ನಡೆಸುವಾಗ ತುಳುವಿನ ಉದಾಹರಣೆಗಳನ್ನು ಧಾರಾಳವಾಗಿ ನೀಡಿದ್ದಾರೆ. ‘The Tulu Verbs’, ‘Tulu Ruder Name’, ‘Tulu initial Affricates and sibilants’, Tulu Prose Texts in two dialects’, ‘Tulu Problems’, ‘Materials for a sketch of Tulu Phonology’ – ಇವು ಅವರು ತುಳುವಿನ ಬಗ್ಗೆ ಬರೆದ ಆರು ಲೇಖನಗಳು. ತುಳುವಿನ ವ್ಯಾಕರಣ, ಧ್ವನಿವಿಜ್ಞಾನ, ಉಪ ಭಾಷೆಗಳು, ಕ್ರಿಯಾಪದಗಳು – ಹೀಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಈ ಅಧ್ಯಯನ ಮುಂದೆ ತುಳುವಿನ ಕುರಿತಾಗಿ ಭಾಷಾ ವೈಜ್ಞಾನಿಕ ಅಧ್ಯಯನಕ್ಕೆ ಪ್ರೇರಣೆಯನ್ನು ಒದಗಿಸಿತು.

ತುಳು ಭಾಷಾ ವೈಜ್ಞಾನಿಕ ಅಧ್ಯಯನಕ್ಕೆ ನಡೆಸಿದ ಇನ್ನೊಬ್ಬ ದೇಶೀ ವಿದ್ವಾಂಸರೆಂದರೆ ಪಿ. ಎಸ್‌. ಸುಬ್ರಹ್ಮಣ್ಯಂ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಭಾಷಾ ಅಧ್ಯಯನ ಕೇಂದ್ರದಲ್ಲಿ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ತೌಲನಿಕ, ಭಾಷವಿಜ್ಞಾನ, ತೆಲುಗು ಭಾಷಾ ವಿಜ್ಞಾನ ಮತ್ತು ಸಂಸ್ಕೃತ ವ್ಯಾಕರಣ ಅವರ ಸಂಶೋಧನಾ ಕ್ಷೇತ್ರವಾಗಿತ್ತು ‘The position of Tulu in Dravidian’ ಎಂಬುದು ಅವರ ಅಮೂಲ್ಯವಾದ ಲೇಖನ. ಇದು ೧೯೬೮ರಲ್ಲಿ ‘Indian Linguistic Journals’ನಲ್ಲಿ ಪ್ರಕಟವಾಗಿದೆ. ಇದರಲ್ಲಿ ತುಳುವಿನ ಧ್ವನಿಮಾ ಮತ್ತು ಆಕೃತಿಮಾ ವ್ಯವಸ್ಥೆಯ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಮೂಲ ದ್ರಾವಿಡ ಭಾಷೆಯೊಂದಿಗೆ ತುಳುವನ್ನು ಹೋಲಿಸಿ ವೈಶಿಷ್ಟ್ಯಗಳನ್ನು ಚರ್ಚಿಸಿದ್ದಾರೆ. ತುಳು ದಕ್ಷಿಣ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯೆಂಬುದನ್ನು ಹೇಳುತ್ತಾ, ದಕ್ಷಿಣ ದ್ರಾವಿಡ ಭಾಷೆ ಬೇರೆ ಬೇರೆ ಕವಲುಗಳಾಗಿ ಸ್ವತಂತ್ರ ಭಾಷೆಗಳಾಗುವ ಮೊದಲೇ ತುಳು ಪ್ರತ್ಯೇಕವಾಯಿತು ಎಂಬುದನ್ನು ವಿವರಿಸಿದ್ದಾರೆ. ಈ ಅಭಿಪ್ರಾಯವನ್ನು ಆಧುನಿಕ ಭಾಷಾ ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಈ ದೃಷ್ಟಿಯಿಂದ ಸುಬ್ರಹ್ಮಣ್ಯಂ ಅವರ ಕೊಡುಗೆ ತುಳು ಭಾಷಾಧ್ಯಯನಕ್ಕೆ ಮಹತ್ವವಾದುದು.

ಮದ್ರಾಸು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಎಂ. ಮರಿಯಪ್ಪ ಭಟ್ಟರು ತುಳು ಭಾಷಾ ಅಧ್ಯಯನಕ್ಕೆ ನೀಡಿದ ಕೊಡುಗೆ ಅತ್ಯುತ್ತಮವಾದುದು. ತುಳು-ಇಂಗ್ಲಿಷ್‌ಶಬ್ದಕೋಶವನ್ನು ರಚಿಸಿದ್ದು ಮಾತ್ರವಲ್ಲ ತುಳು ಭಾಷೆ ಮತ್ತು ಸಾಹಿತ್ಯ ಕುರಿತಾಗಿ ಅವರು ಅನೇಕ ಸಂಶೋಧನ ಲೇಖನಗಳನ್ನು ರಚಿಸಿದ್ದಾರೆ. ಮ್ಯಾನರ್‌ನಂತರ ಚಿಸಿದ ಎರಡನೇ ನಿಘಂಟು ಇದಾಗಿದೆ. ೧೯೬೭ರಲ್ಲಿ ಎಂ. ಶಂಕರ ಕೆದಿಲಾಯರೊಂದಿಗೆ ಸೇರಿ ಅವರು ತುಳು-ಇಂಗ್ಲಿಷ್‌ಶಬ್ದಕೋಶವನ್ನು ಸಂಪಾದಿಸಿದರು. ಮ್ಯಾನರರ ನಿಘುಂಟು ಪ್ರತಿಗಳು ಉಪಲಬ್ಧವಿಲ್ಲದ್ದು ಹಾಗೂ ಅದರಲ್ಲಿ ಸಂಸ್ಕೃತ ಶಬ್ದಗಳ ಬಾಹುಳ್ಯವಿರುವುದರಿಂದ ಇನ್ನೊಂದು ನಿಘಂಟಿನ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಈ ಶಬ್ದಕೋಶದ ಮುನ್ನುಡಿಯಲ್ಲಿ ತುಳು ಭಾಷೆ ಮತ್ತು ಸಾಹಿತ್ಯ ಸಂಶೋಧನೆಗೆ ಸಂಬಂಧಿಸಿದ ಉಪಯುಕ್ತ ವಿಚಾರಗಳಿವೆ.

ಹಲವು ದೃಷ್ಟಿಯಿಂದ ಮರಿಯಪ್ಪ ಭಟ್ಟರ ನಿಘಂಟು ಮಹತ್ವಪೂರ್ಣವಾಗಿದೆ. ತಮ್ಮ ಶಬ್ದಕೋಶದಿಂದ ಶುದ್ಧ ಸಂಸ್ಕೃತ ಮತ್ತು ಕನ್ನಡ ಪದಗಳನ್ನು ಅವರು ಕೈಬಿಟ್ಟರು. ತುಳುವಿನ ಕುಲನಾಮ, ವೃತ್ತಿನಾಮ ಮತ್ತು ಸ್ಥಳನಾಮಗಳು ಕುರಿತಾಗಿ ವಿಶಿಷ್ಟ ವಿವರಗಳಿವೆ. ಸುಮಾರು ೮ ಸಾವಿರ ಶಬ್ದಗಳಿರುವ ೨೩೦ ಪುಟಗಳ ಈ ಶಬ್ದಕೋಶ ಮ್ಯಾನರರ ಶಬ್ದಕೋಶಕ್ಕಿಂತ ಚಿಕ್ಕದಾದರೂ ಅದನ್ನು ಪರಿಷ್ಕರಣೆಗೊಳಿಸಿದಂತಿದೆ. ಹೀಗೆ ತುಳುಭಾಷೆಗೆ ಎರಡನೇ ಶಬ್ದಕೋಶವನ್ನು ನೀಡಿದ ಕೀರ್ತಿ ಎಂ. ಮರಿಯಪ್ಪ ಭಟ್ಟರಿಗೆ ಸಲ್ಲುತ್ತದೆ.