ಮದ್ರಾಸು ವಿಶ್ವವಿದ್ಯಾಲಯದ ಭಾಷಾ ವಿದ್ವಾಂಸರೊಂದಿಗೆ ಸೇರಿ ಅವರು ರಚಿಸಿದ, ‘Dravidian Comparative Vocabulary’ (ದ್ರಾವಿಡ ತೌಲನಿಕ ಪದಕೋಶ) ದ್ರಾವಿಡ ತೌಲನಿಕ ಭಾಷಾ ವಿಜ್ಞಾನದ ಅಧ್ಯಯನಕ್ಕೆ ವಿಶಿಷ್ಟ ಕೊಡುಗೆ. ಪಂಚದ್ರಾವಿಡ ಭಾಷೆಗಳ ಜ್ಞಾತಿಪದಗಳನ್ನು ಒಂದೆಡೆ ಸೇರಿಸಿ ತೌಲನಿಕ ಅಧ್ಯಯನಕ್ಕೆ ವಿಶಿಷ್ಟ ಕೊಡುಗೆ. ಪಂಚದ್ರಾವಿಡ ಭಾಷೆಗಳ ಜ್ಞಾತಿಪದಗಳನ್ನು ಒಂದೆಡೆ ಸೇರಿಸಿ ತೌಲನಿಕ ಅಧ್ಯಯನಕ್ಕೆ ಸಹಾಯ ಮಾಡುವುದು ಈ ಕೃತಿಯ ಮುಖ್ಯ ಉದ್ದೇಶ. ಇತರ ಮುಖ್ಯ ದ್ರಾವಿಡ ಭಾಷೆಗಳೊಂದಿಗೆ ತುಳುವಿಗೂ ಮಹತ್ವ ಸ್ಥಾನ ನೀಡಿರುವುದು ಮುಖ್ಯ ಸಂಗತಿಯಾಗಿದೆ. ಇದಲ್ಲದೆ ಅವರ – ‘ತುಳುನಾಡಿನ ಕೆಲವು ಮನೆಗಳ ಮತ್ತು ಕುಲಗಳ ಹೆಸರುಗಳು’, ‘ತುಳು ಹೆಸರುಗಳಲ್ಲಿ ಕಾಣುವ ಕೆಲವು ತದ್ಭವಗಳು’ ಎಂಬ ಲೇಖನಗಳು ಉಪಯುಕ್ತವಾಗಿವೆ. ತುಳುವಿನ ಬಗ್ಗೆ ವಿವಿಧ ಸಂಶೋಧನಾ ಪತ್ರಿಕೆಗಳಲ್ಲಿ ಬರೆದ ವಿದ್ವತ್‌ಪೂರ್ಣ ಲೇಖನಗಳು ನಮ್ಮ ಗಮನ ಸೆಳೆಯುತ್ತವೆ. ‘Words that tell something about Tuluvas’, ‘Tulu Calender’, ‘Inflexion nouns in Tulu’, ‘Some names in tuluva’ ಇತ್ಯಾದಿ ಲೇಖನಗಳನ್ನು Orientl Researchನ ಸಂಚಿಕೆಗಳಲ್ಲಿ ಪ್ರಕಟಿಸಿದ್ದಾರೆ. ಹೀಗೆ ವಿಮರ್ಶಾತ್ಮಕವಾಗಿ, ತೌಲನಿಕವಾಗಿ, ವರ್ಣನಾತ್ಮಕವಾಗಿ ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ತುಳು ಭಾಷೆಯ ಅಧ್ಯಯನ ನಡೆಸಿದ ಮರಿಯಪ್ಪ ಭಟ್ಟರ ಕೊಡುಗೆ ತುಳು ಭಾಷೆಗೆ ಮಹತ್ವದ್ದಾಗಿದೆ.

ತುಳು ಭಾಷಾ ಅಧ್ಯಯನದಲ್ಲಿ ಹೆಸರಿಸಬೇಕಾದ ಇನ್ನೊಬ್ಬರು ಮಹಾನ್‌ವಿದ್ವಾಂಸರೂ ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾ ವಿಜ್ಞಾನಿಗಳಾದ ಡಿ.ಎನ್‌. ಶಂಕರ ಭಟ್ಟ. ಖ್ಯಾತ ಭಾಷಾ ವಿಜ್ಞಾನಿ ಎ.ಎಂ. ಘಾಟ್ಗೆಯವರ ಮಾರ್ಗದರ್ಶನದಲ್ಲಿ ೧೯೬೩ರಲ್ಲಿ ‘Descriptive Analysis of Tulu’ (ತುಳು ಭಾಷೆಯ ವರ್ಣನಾತ್ಮಕ ವಿಶ್ಲೇಷಣೆ) ಎಂಬ ವಿಷಯದಲ್ಲಿ ಸಂಶೋಧನೆಯನ್ನು ನಡೆಸಿ ಪುಣೆಯ ವಿಶ್ವವಿದ್ಯಾನಿಲಯದಿಂದ ಡಾಕ್ಡರೇಟ್‌ಪದವಿಯನ್ನು ಪಡೆದಿದ್ದಾರೆ. ತುಳು ಭಾಷೆಯ ರಚನೆಯನ್ನು ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ೧೯೬೭ರಲ್ಲಿ ಇದು ಪುಣೆಯ ಡೆಕ್ಕನ್‌ಕಾಲೇಜಿನಿಂದ ಪ್ರಕಟವಾಗಿದೆ.

೧೯೬೧ರಲ್ಲಿ ಆಗ್ರಾದ ಹಿಂದಿ ಮತ್ತು ಭಾಷಾ ವಿಜ್ಞಾನ ಕೇಂದ್ರದ ಹಿಂದಿ ಶಂಶೋಧನ ಪತ್ರಿಕೆ ‘ಭಾರತೀಯ ಸಾಹಿತ್ಯ’ದಲ್ಲಿ ‘ತುಳುವಿನಲ್ಲಿ ಒತ್ತಕ್ಷರ ವರ್ಣ’ ಎಂಬ ಹಿಂದಿ ಲೇಖನವು ತುಳುವಿನ ಒತ್ತಕ್ಷರ ವರ್ಣಗಳ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. ೧೯೬೫ರಲ್ಲಿ ಡೆಕ್ಕನ್‌ಕಾಲೇಜು ಬುಲೆಟಿನಲ್ಲಿ ಪ್ರಕಟವಾದ Studies in Tulu (ತುಳುವಿನ ಅಧ್ಯಯನಗಳು) ಎಂಬ ಲೇಖನವು ವಿಶಿಷ್ಟವಾದುದು. ತುಳು ಉಪಭಾಷೆಗಳನ್ನು ಬಳಸಿಕೊಂಡು ತುಳುವರ್ಣಗಳ ವೈಶಿಷ್ಟ್ಯಗಳನ್ನು ಚರ್ಚಿಸಿದ್ದಾರೆ. ತುಳು ಉಪಭಾಷಾ ಅಧ್ಯಯನಕ್ಕೆ ಈ ಲೇಖನವು ಮಾದರಿಯಾಗಿದೆ. ೧೯೭೧ರಲ್ಲಿ ಡೆಕ್ಕನ್‌ಕಾಲೇಜಿನ ಉಪಭಾಷಾ ಪರಿವೀಕ್ಷಣೆಯ ವಿಭಾಗದಲ್ಲಿ ಪ್ರಕಟವಾದ Koraga Language(ಕೊರಗ ಭಾಷೆ) ಎಂಬ ಲೇಖನವು ಮಹತ್ವಪೂರ್ಣವಾದುದು. ತುಳುವಿನ ಒಂದು ಉಪಭಾಷೆಯೆಂದು ಬವಿಸಲಾಗಿದ್ದ ಕೊರಗ ಭಾಷೆಯನ್ನು ಒಂದು ಸ್ವತಂತ್ರ ಭಾಷೆಯೆಂಬುದನ್ನು ಸಾಧಾರವಾಗಿ ನಿರೂಪಿಸಿದ್ದಾರೆ. ಹೀಗೆ ತಮ್ಮ ಆಳವಾದ ಭಾಷಾವೈಜ್ಞಾನಿಕ ಸಂಶೋಧನೆಯ ಮೂಲಕ ತುಳು ಭಾಷೆಯನ್ನು ವಿಶ್ಲೇಷಿಸಿದ ಎನ್‌. ಶಂಕರ ಭಟ್ಟರ ಅಧ್ಯಯನವು ತುಳು ಭಾಷೆ ಅಧ್ಯಯನದಲ್ಲಿ ಮಹತ್ವವನ್ನು ಪಡೆದಿದೆ.

ಭಾಷಾ ವಿದ್ವಾಂಸರಾದ ಎಂ. ರಾಮ ಅವರು ೧೯೭೬ ರಲ್ಲಿ ಬರೆದ Numaral in Tulu, ೧೯೮೩ರಲ್ಲಿ ಬರೆದ Antique of Tulunadu, People and Language ಇತ್ಯಾದಿ ಲೇಖನಗಳನ್ನು ಗಮನಿಸಬೇಕು. ಭೂತಾರಾಧನೆಯ ಭಾಷಾಗೆ ಸಂಬಂದಿಸಿದಂತೆ ‘ದಕ್ಷಿಣ ಕನ್ನಡದ ಭೂತ ಕಟ್ಟುವವರ ಗುಪ್ತ ಭಾಷೆ’ ಇತ್ಯಾದಿ ಲೇಖನಗಳನ್ನು ಗಮನಿಸಬೇಕು. ಮಲ್ಲಿಕಾ ದೇವಿಯರು Tulu Verbs (ತುಳು ಕ್ರಿಯಾಪದಗಳು) A note on Coordination in Tulu (ತುಳುವಿನ ಸಂಯೋಜನೆಯ ಬಗ್ಗೆ ಟಿಪ್ಪಣಿ) ಮುಂತಾದ ಲೇಖನಗಳನ್ನು ರಚಿಸಿದ್ದಾರೆ. ಬಿ. ರಾಮಚಂದ್ರರಾವ್‌ ಅವರ Social and Local Dialects of Tulu (ಸಾಮಾಜಿಕ ಮತ್ತು ಸ್ಥಳೀಯ ತುಳು ಉಪಭಾಷೆಗಳು), Verb Morphology of Common Tulu (ತುಳುವಿನ ಕ್ರಿಯಾಪದದ ವಿಶ್ಲೇಷಣೆ) ಭಾಷಾಶಾಸ್ತ್ರ ದೃಷ್ಟಿಯಲ್ಲಿ ತುಳು ಭಾಷೆ, ದ್ರಾವಿಡ ಭಾಷೆಲೆಡ್‌ತುಳುತ ಸ್ಥಾನ, Interelationship of Tulu with other Dravidian Language (ತುಳು ಮತ್ತು ಇತರ ದ್ರಾವಿಡ ಭಾಷೆಗಳ ನಡುವಿನ ಆಂತರಿಕ ಸಂಬಂಧ) ‘ತುಳು ಭಾಷೆ – ಕಿರುಪರಿಚಯ’ ಇತ್ಯಾದಿ ಲೇಖನಗಳನ್ನು ಗಮನಿಸಬೇಕು.

ಇಂದಿಗೂ ತುಳು ಭಾಷೆಯ ಕುರಿತಾದ ಸಂಶೋಧನಾತ್ಮಕ ಅಧ್ಯಯನ ನಡೆಸುತ್ತಿರುವ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಭಾಷಾವಿಜ್ಞಾನಿ ರಾಮಕೃಷ್ಣ ಟಿ. ಶೆಟ್ಟಿಯವರು ೧೯೭೬ರಲ್ಲಿ ಪ್ರಕಟಿಸಿದ ‘ವರ್ಣನಾತ್ಮಕ ತುಳು ವ್ಯಾಕರಣ’ ಬಹು ಮಹತ್ವದ ಕೃತಿ. ತುಳುವಿನ ಕುರಿತಾದ ಭಾಷಾ ವೈಜ್ಞಾನಿಕ ಅಧ್ಯಯನಗಳು ಹೆಚ್ಚಾಗಿ ಇಂಗ್ಲಿಷ್‌ನಲ್ಲಿ ನಡೆದಿವೆ ಎಂಬ ದೃಷ್ಟಿಯಿಂದ ಕನ್ನಡದಲ್ಲಿ ಪ್ರಕಟವಾದ ಈ ಕೃತಿ ಮುಖ್ಯವಾಗುತ್ತದೆ. ‘ಕೊರಗ ವ್ಯಾಕರಣ’ ಎಂಬ ವಿಷಯದಲ್ಲಿ ಪುಣೆ ವಿಶ್ವವಿದ್ಯಾನಿಲಯದಿಂದ ಡಾಕ್ಟ್ರೇರೆಟ್‌ಪದವಿ ಪಡೆದಿದ್ದಾರೆ. ‘ಬಿಲ್ಲವ ತುಳು’ ಎಂಬ ಸಂಶೋಧನ ಲೇಖನ ರಚಿಸಿದ್ದಾರೆ. ‘Tulu Linguistics so-far’, ‘Tulunadu – Language and Literature’ ಬಂಟ ಜನಾಂಗದ ತುಳು ಭಾಷೆಯ ವಿಶ್ಲೇಷಣೆಯನ್ನು ತೌಲನಿಕವಾಗಿ ನಡೆಸಿದ್ದಾರೆ. ‘Personal Pronouns in Bunts Tulu’ ಇತ್ಯಾದಿ ಲೇಖನಗಳು ಮುಖ್ಯವಾದವುಗಳು. ೧೯೮೬ರಲ್ಲಿ ಪ್ರಕಟಸಿರುವ ಅವರ ‘Descriptive Grammer of Tulu’ ಎಂಬ ಕೃತಿ ಮತ್ತು ಇತ್ತೀಚಿನ ೨೦೦೧ರಲ್ಲಿ ಪ್ರಕಟಿಸಿರುವ ‘The comprehensive Grammar of Tulu’ ಎಂಬ ಗ್ರಂಥ ಅಮೂಲ್ಯವಾದುದು. ತುಳು ವ್ಯಾಕರಣವನ್ನು ಕುರಿತಾಗಿ ಭಾಷಾವೈಜ್ಞಾನಿಕ ನೆಲೆಯಲ್ಲಿ ಇದರಲ್ಲಿ ಚರ್ಚಿಸಲಾಗಿದೆ. ತುಳುವಿನಲ್ಲೂ ತುಳು ಭಾಷೆಯ ಕುರಿತಾಗಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ‘ತುಳುಟು ಸಂದರ್ಭಗು ಸರಿಯಾದ್‌ಬಳಸುನ ಪ್ರಶ್ನ ವಾಕ್ಯೊಲು’, ‘ತುಳು ಭಾಷೆ, ನಾಡ್‌- ಪರಂಪರೆ’, ‘ತುಳುಟಾತಿ ಬುಲೆ’ ಇತ್ಯಾದಿ ಲೇಖನಗಳನ್ನು ಗಮನಿಸಬಹುದು. ಅವರ ‘ತುಳು ಸಂಪೊತ್ತು’ ಎಂಬ ತುಳು ಪುಸ್ತಕ ತುಳುವಿನಲ್ಲಿ ಇದುವರೆಗೆ ನಡೆದ ಅಧ್ಯಯನಗಳ ಸಮಗ್ರ ವಿವರಗಳನ್ನು ಸ್ಥೂಲವಾಗಿ ಒದಗಿಸುತ್ತದೆ. ಭಾಷಾ ವೈಜ್ಞಾನಿಕ, ಪಾಂಡಿತ್ಯಪೂರ್ಣ ಹಾಗೂ ಆಳವಾದ ಸಂಶೋಧನೆಯಿಂದ ಅವರ ಕೃತಿಗಳು ತುಳು ಅಧ್ಯಯನಕ್ಕೆ ಮಹತ್ವದ ಕೊಡುಗೆಗಳಾಗಿವೆ.

ಇನ್ನೂ ಹಲವಾರು ವಿದ್ವಾಂಸರು ಕರ್ನಾಟಕೇತರ ವಿಶ್ವವಿದ್ಯಾನಿಲಯಗಳಲ್ಲಿ ತುಳು ಭಾಷೆಯ ಕುರಿತಾಗಿ ಸಂಶೋಧನೆ ನಡೆಸಿದ್ದಾರೆ. ೧೯೭೧ರಲ್ಲಿ ಲಕ್ಷ್ಮೀನಾರಾಯಣ ಭಟ್‌ಸೂಡ ಇವರು – ‘A Grammar of Tulu: A Dravidian Language’ – ಎಂಬ ವಿಷಯದ ಬಗ್ಗೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ೧೯೭೯ರಲ್ಲಿ ಮಲ್ಲಿಕಾದೇವಿಯವರು ‘The Structure of Tulu Verbs’ ಎಂಬ ವಿಷಯದಲ್ಲಿ ಕೇರಳ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಕೆ.ವಿ. ಜಲಜಾಕ್ಷಿಯವರು ೧೯೮೦ನೇ ಇಸವಿಯಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದ ಪಿ.ಎಸ್‌. ಸುಬ್ರಹ್ಮಣ್ಯಂ ಇವರ ಮಾರ್ಗದರ್ಶನದಲ್ಲಿ ‘Tulu Language : Description and Comparitive’ ಎಂಬ ವಿಷಯದಲ್ಲಿ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಅವರು ತುಳು ಭಾಷೆಯ ಕುರಿತಾಗಿ ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. Negation in Tulu ತುಳು ಭಾಷೆ ಮತ್ತು ದ್ರಾವಿಡ ಭಾಷೆಗಳು ಇತ್ಯಾದಿಗಳು ಕೆಲವು ಮುಖ್ಯ ಲೇಖನಗಳು.

ಸ್ಥಳೀಯ ವಿದ್ವಾಂಸರ ಅಧ್ಯಯನಗಳು

ಕರ್ನಾಟಕೇತರ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ತುಳು ಭಾಷೆಯ ಕುರಿತಾಗಿ ಹೆಚ್ಚಾಗಿ ಅಧ್ಯಯನ ನಡೆಸಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರು ಭಾಷಾ ವಿಜ್ಞಾನದ ಹಿನ್ನೆಲೆಯನ್ನು ಹೊಂದಿರುವುದು ಹಾಗೂ ಭಾಷಾ ಅಧ್ಯಯನ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವುದು. ಆದರೆ ಸ್ಥಳೀಯ ವಿದ್ವಾಂಸರು ಭಾಷಾ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಿಲ್ಲ. ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ಭಾಷೆಯ ಕುರಿತಾದ ಅಧ್ಯಯನಗಳು ತೀರಾ ಕಡಿಮೆ. ಮುಖ್ಯ ಕಾರಣವೆಂದರೆ ಜಾನಪದ ಕ್ಷೇತ್ರಕಾರ್ಯದ ಮೂಲಕ ಜಾನಪದ ಆಕರಗಳನ್ನು ಸಂಗ್ರಹಿಸಿ, ಸಂಶೋಧನೆ ಮಾಡುವ ವಿಪುಲ ಅವಕಾಶ ಅವರಿಗಿತ್ತು. ಇದರಿಂದ ತುಳು, ಸಂಸ್ಕೃತಿ ಮತ್ತು ಸಾಹಿತ್ಯದ ಕುರಿತಾಗಿ ಸ್ಥಳೀಯ ವಿದ್ವಾಂಸರು ಹೆಚ್ಚಾಗಿ ಸಂಶೋಧನೆ ನಡೆಸಿದ್ದಾರೆ. ಕರ್ನಾಟಕದಿಂದ ಹೊರಗಿರುವ, ತುಳು ಭಾಷೆಯನ್ನು ಮಾತನಾಡುವ ಮತ್ತು ತುಳುವೇತರ ವಿದ್ವಾಂಸರ ಮೇಲೆ ತುಳು ಪುನರುಜ್ಜೀವನದ ಬಯಕೆಯ ಭಾವನಾತ್ಮಕ ಪ್ರಭಾವ ಕಡಿಮೆ. ಇದರಿಂದ ಭಾಷಾ ಸಂಶೋಧನೆಯ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ. ಆದರೆ ಸ್ಥಳೀಯ ವಿದ್ವಾಂಸರ ಮೇಲೆ ತುಳು ಪುನರುಜ್ಜೀವನದ ಭಾವನಾತ್ಮಕ ವಿಚಾರ ಪ್ರಭಾವ ಬೀರಿದೆ. ಇದರಿಂದ ತುಳು ಸಂಸ್ಕೃತಿ ಮತ್ತು ಸಾಹಿತ್ಯದ ಕಡೆಗೆ ಅವರು ಹೆಚ್ಚು ಗಮನ ನೀಡಿದಂತೆ ಕಂಡು ಬರುತ್ತದೆ. ಆದರೆ ಈ ಪ್ರಭಾವದ ಮಧ್ಯೆಯೂ ಹಲವಾರು ವಿದ್ವಾಂಸರು ಭಾಷೆಯ ಕುರಿತಾದ ಅಧ್ಯಯನ ನಡೆಸಿದ್ದಾರೆ.

ಅರುವತ್ತರ ದಶಕದಲ್ಲೇ ಸಾಂಪ್ರದಾಯಿಕ ದೃಷ್ಟಿಕೋನದಲ್ಲಿ ಈ ರೀತಿಯ ಅಧ್ಯಯನಗಳು ನಡೆದುದನ್ನು ಗುರುತಿಸಬಹುದು. ತೆಕ್ಕುಂಜ ಗೋಪಾಲಕೃಷ್ಣ ಭಟ್ಟರು ೧೯೬೨ರಲ್ಲಿ ‘ತುಳುವಿನ ಸ್ವರಮಾಲೆ’ ಎಂಬ ಲೇಖನವನ್ನು ಪ್ರಕಟಿಸಿದ್ದಾರೆ. ಸಾಂಪ್ರದಾಯಿಕ ದೃಷ್ಟಿಕೋನವಿದ್ದರೂ ತುಳುವಿಗೊಂದು ವರ್ಣಮಾಲೆಯ ಅಗತ್ಯವನ್ನು ಚರ್ಚಿಸಿದ್ದಾರೆ. ಇದರಿಂದ ‘ತುಳುಲಿಪಿ’ ಬಗ್ಗೆ ಚರ್ಚೆಗೆ ಚಾಲನೆ ದೊರೆಯಿತು. ೧೯೬೮ರಲ್ಲಿ ನರ್ಕಳ ಮಾರಪ್ಪ ಶೆಟ್ಟರು ತುಳುಭಾಷೆಗೆ ಸಂಬಂಧಿಸಿದ ಕೆಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ‘ಆಳ್‌ ಪದಕ್ಕೆ ಬಕರಾದೇಶದಿಂದ ಉಂಟಾಗುವ ಸ್ಥಳನಾಮಗಳು’, ‘ಮಂಗಳುರು – ಈ ಹೆಸರು ಹೇಗಾಯಿತು’ ಇತ್ಯಾದಿ ಲೇಖನಗಳನ್ನು ಹೆಸರಿಸಬಹುದು. ಕೆ. ವೆಂಕಟರಾಯಾಚಾರ್ಯರು ತೌಳವ ಭಾಷೆ, ತೌಳವ ಪ್ರಾದೇಶಿಕ ನಾಮಗಳು ಇತ್ಯಾದಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಿರಿಯ ಇತಿಹಾಸ ತಜ್ಞರಾದ ಗುರುರಾಜ ಭಟ್‌ ಅವರು ೧೯೬೯ರಲ್ಲಿ ಬರೆದ ‘ತುಳು ಭಾಷೆ ಮತ್ತು ಸಾಹಿತ್ಯ’ ಲೇಖನಗಳನ್ನು ಗಮನಿಸಬೇಕು.

ತುಳು ಭಾಷೆಯ ಅಧ್ಯಯನದಲ್ಲಿ ಯು.ಪಿ. ಉಪಾಧ್ಯಾಯರ ಹೆಸರು ಸ್ಮರಣೀಯವಾದುದು. ತುಳು ನಿಘಂಟಿನ ಸಂಪಾದಕರಾಗಿ ಅವರು ಮಾಡಿದ ಕಾರ್ಯ ತುಳು ಭಾಷಾ ಅಧ್ಯಯನಕ್ಕೆ ಅಪೂರ್ವ ಕೊಡುಗೆ, ಇಂಗ್ಲಿಷ್‌, ಕನ್ನಡ, ತುಳು ಭಾಷೆಗಳಲ್ಲಿ ತುಳು ಭಾಷೆಯ ಕುರಿತಾಗಿ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಬರೆದ ‘Morphology of Tulu Verbs’, ‘Renaissance in Tulu Literature’, ‘Tulu Lixicon and D.E.D’ ಇತ್ಯಾದಿಗಳನ್ನು ಹೆಸರಿಸಬಹುದು. ‘ತುಳುವಿನ ಎರಡು ವ್ಯಾಕರಣ ಗ್ರಂಥಗಳು ಮತ್ತು ನಿಘಂಟು’, ‘ಶಬ್ದ ಸಂಪತ್ತಿನ ಅನ್ವೇಷಣೆ’ ಇತ್ಯಾದಿ ಕನ್ನಡ ಲೇಖನಗಳು ಮಹತ್ವಪೂರ್ಣವಾದುದು. ಅವರು ಬ್ರಿಗೆಲ್‌ ಮತ್ತು ಪಣಿಯಾಡಿಯವರ ವ್ಯಾಕರಣ ಗ್ರಂಥಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿದ್ದಾರೆ. ದ್ರಾವಿಡ ಭಾಷೆಲೆಡ್‌ ತುಳುತ ಸ್ಥಾನ’ ಮೊದಲಾದ ತುಳು ಲೇಖನಗಳನ್ನು ಬರೆದಿದ್ದಾರೆ.

ವಿದ್ವಾಂಸರಾದ ಅಮೃತ ಸೋಮೇಶ್ವರರು ತುಳು ಸೃಜನಶೀಲ ಸಾಹಿತ್ಯ ರಚನೆ ಮತ್ತು ಜಾನಪದ ಸಂಶೋಧನೆಗಳೊಂದಿಗೆ ಭಾಷೆಯ ಕುರಿತಾಗಿ ಲೇಖನಗಳನ್ನು ಬರೆದಿದ್ದಾರೆ. ೧೯೮೪ರಲ್ಲಿ ಪ್ರಕಟವಾದ ಅವರ ‘ತುಳು ಬದುಕು : ಕೆಲವು ಮುಖಗಳು’ ಕೃತಿಯಲ್ಲಿ ‘ತುಳುವಿಗೊಂದು ಶಿಷ್ಟಭಾಷೆ’, ‘ತುಳು-ಕನ್ನಡ’ ಎಂಬ ಲೇಖನಗಳು ತುಳು ಭಾಷೆಯ ಕುರಿತಾಗಿ ಹಲವು ವಿಶಿಷ್ಟ ವಿಚಾರಗಳನ್ನು ಮುಂದಿಡುತ್ತವೆ. ತುಳು ಭಾಷೆಯ ವೈಲಕ್ಷಣಗಳನ್ನೂ, ವಿಶಿಷ್ಟ ವಿಚಾರಗಳನ್ನು ಚರ್ಚಿಸಿದ್ದಾರೆ. ಬಿ.ಎ. ವಿವೇಕ ರೈಯವರು ತಮ್ಮ ಸಂಶೋಧನೆ ಮತ್ತು ತುಳು ಕಾರ್ಯಗಳ ಮೂಲಕ ತುಳು ಭಾಷೆಯ ಬೆಳವಣಿಗೆಗೆ ಕಾರಣರಾದವರು. ಅವರ ೧೯೮೫ರಲ್ಲಿ ಪ್ರಕಟವಾದ ಸಂಶೋಧನ ಪ್ರಬಂಧ ‘ತುಳು ಜನಪದ ಸಾಹಿತ್ಯ’ದ ಮೊದಲ ಲೇಖನ ‘ತುಳು ಭಾಷೆ’ ವಿಶಿಷ್ಟವಾದುದು. ಈ ಪುಟ್ಟ ಲೇಖನವು ತುಳು ಭಾಷೆ ಅಧ್ಯಯನ ಅತ್ಯಂತ ಉಪಯುಕ್ತವಾಗಿದೆ. ಅವರು ‘ತುಳು ಕಲಿಸುವಿಕೆ’, ‘ಸೊಲ್ಮೆ ಪದದ ಅರ್ಥ, ಪ್ರಯೋಗ ಮತ್ತು ಮೂಲ’ ಮುಂತಾದ ಲೇಖನಗಳು ಮುಖ್ಯವಾಗುತ್ತವೆ. ಎ.ವಿ. ನಾವಡರು ೧೯೮೪ರಲ್ಲಿ ಪ್ರಕಟಿಸಿದ ‘ವಿವಕ್ಷೆ’ ಗ್ರಂಥದಲ್ಲಿ ಭಾಷಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಮೂರು ಲೇಖನಗಳಿವೆ. ‘ತುಳು ಲಿಪಿ: ಕೆಲವು ವಿಚಾರಗಳು’, ‘ತುಳುಭಾಷೆಯ ಪ್ರಗತಿ’, ‘ಪರಿಸರದ ಕೋಟದವರ ಆಡುನುಡಿ ಮತ್ತು ತುಳು’ – ಈ ಮೂರು ಲೇಖನಗಳು ಭಾಷಾ ಅಧ್ಯಯನದ ಪ್ರಯತ್ನಗಳಾಗಿವೆ.

ಪದ್ಮನಾಭ ಕೇಕುಣ್ಣಾಯ ಅವರು ತುಳುಭಾಷೆಯನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ‘Comparitive Study of Tulu Dialect’ ಅವರ ಸಂಶೋಧನ ಗ್ರಂಥ ಪ್ರಕಟವಾಗಿದೆ. ತುಳು ನಿಘಂಟು ಯೋಜನೆಯಲ್ಲಿ ಕೆಲಸ ಮಾಡಿದ ಅವರು ಭಾಷಾ ಅಧ್ಯಯನದ ಕುರಿತಾಗಿ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ‘ತುಳುವಿನ ಬಾಲ ಭಾಷೆ’, ‘ದಕ್ಷಿಣ ಕನ್ನಡದ ತುಳುವಿನ ಉಪಭಾಷೆಗಳು’, ‘ಜಿಲ್ಲೆಯ ಭಾಷಾ ವೈವಿಧ್ಯ’ ಇತ್ಯಾದಿ ಲೇಖನಗಳನ್ನು ಗಮನಿಸಬಹುದು. ಭಾಷಾ ಅಧ್ಯಯನದ ದೃಷ್ಟಿಯಿಂದ ಇನ್ನೂ ಕೆಲವು ವಿದ್ವಾಂಸರ ಬರಹಗಳನ್ನು ಗಮನಿಸಬಹುದು. ಪಿ. ಶಿವಪ್ರಸಾದ್‌ರವರು ‘The Primary Evolution of Tulu Speech’, ‘The Origin of English from Tulu’ ಚರ್ಚೆಗೆ ಕಾರಣವಾಗಿದೆ. ವೆಂಕಟರಾಜ ಪುಣಿಂಚತ್ತಾಯರ ‘ತುಳು ಲಿಪಿ’ ಎಂಬ ಕೃತಿ ಮಲಯಾಳ ಮೂಲದ ಲಿಪಿಯನ್ನು ಬಳಸಿ ಬರೆದ ತುಳು ಪ್ರಾಚೀನ ಗ್ರಂಥಗಳ ಲಿಪಿಯ ಕುರಿತಾದುದಾಗಿದೆ. ಪ್ರಾಚೀನ ಗ್ರಂಥಗಳ ಅಧ್ಯಯಯನಕ್ಕೆ ಲಿಪಿಯನ್ನು ತಿಳಿದುಕೊಳ್ಳುವುದಕ್ಕೆ ಇದು ಉಪಯುಕ್ತವಾಗಿದೆ. ಕನ್ನಡ ಭಾಷಾ ವಿದ್ವಾಂಸರು ಕೂಡ ತುಳುವಿನ ಬಗ್ಗೆ ಅಧ್ಯಯನ ಲೇಖನಗಳನ್ನು ಪ್ರಕಟಿಸಿದ್ದಾರೆ. ಕುಶಾಲಪ್ಪ ಗೌಡರ ‘ದಕ್ಷಿಣ ಕನ್ನಡದ ತುಳು ಉಪಭಾಷೆಗಳು’, ಹಂ.ಪ. ನಾಗರಾಜಯ್ಯನವರ ತುಳುವಿನ ಸ್ವರೂಪ ಇತ್ಯಾದಿ ಬರಹಗಳನ್ನು ಹೆಸರಿಸಬಹುದು. ಕರ್ನಾಟಕದ ತುಳು ಅಕಾಡಮಿ ಪ್ರಕಟಿಸುತ್ತಿರುವ ಮದಿಪು, ತ್ರೈಮಾಸಿಕ ಪತ್ರಿಕೆಯಲ್ಲಿ ಭಾಷಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಲೇಖನಗಳು ಪ್ರಕಟವಾಗಿದೆ. ಕೆ.ಕೆ. ಗಟ್ಟಿಯವರು ‘ಪೊಸ ತುಳು ಲಿಪಿತ ಬಗ್ಗೆ’, ಬೆನೆಟ್‌ಜಿ. ಅಮ್ಮನ್ನರವರ ‘ನೂದು ವರ್ಸ ಪಿರವುದ ತುಳು ನಿಘಂಟು’ ಇತ್ಯಾದಿ ಲೇಖನಗಳನ್ನು ಉದಾಹರಿಸಬಹುದು. ಪಿ.ಎಸ್‌. ರಾವ್‌ಅವರು ರಚಿಸಿದ ‘ತುಳು ತೆರಿಲೆ’ ಎಂಬ ತುಳು ಕಲಿಕೆಯ ಕೈಪಿಡಿ ಎಂಟು ಮುದ್ರಣಗಳನ್ನು ಕಂಡು ಪ್ರಸಾರವಾಗಿದೆ.

ತುಳು ನಿಘಂಟು ಪ್ರಕಟಣೆ

ಉಡುಪಿಯ ಗೋವಿಂದ ಪೈ ಸಂಶೋಧನೆ ಕೇಂದ್ರವು ಪ್ರಕಟಿಸಿದ ಆರು ಸಂಪುಟಗಳ ‘ತುಳು ನಿಘಂಟುಗಳು’ ತುಳು ಭಾಷಾಧ್ಯಯನ ಚರಿತ್ರೆಯಲ್ಲಿ ಒಂದು ಮೈಲುಗಲ್ಲು. ಇದು ತುಳು ಜಾಗೃತಿಯ ಸ್ಪಷ್ಟ ಅಭಿವ್ಯಕ್ತಿ ಹಾಗೂ ತುಳು ಭಾಷೆಯ ಬೆಳವಣಿಗೆ ಬಹುದೊಡ್ಡ ಪ್ರೇರಣೆ ಎಂದು ವಿದ್ವಾಂಸರು ಗುರುತಿಸಿದ್ದಾರೆ. ‘ತುಳು ನಿಘಂಟು ಯೋಜನೆ’ ಕೇವಲ ನಿಘಂಟು ಪ್ರಕಟಣೆ ಮಾತ್ರವಲ್ಲ ತುಳುವಿನ ಸಂಶೋಧನೆ, ಸಾಹಿತ್ಯ ರಚನೆ ಮತ್ತು ಭಾಷಾ ಅಧ್ಯಯನಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಕು. ಶಿ. ಹರಿದಾಸ ಭಟ್ಟರ ನಿರ್ದೇಶಕತ್ವದಲ್ಲಿ ನಡೆದ ಈ ಯೋಜನೆ ತುಳು ಪುನರುಜ್ಜೀವನ ಹಾಗೂ ಭಾವನಾತ್ಮಕ ಬೆಳವಣಿಗೆಗೆ ಮಹತ್ವದ ತಿರುವನ್ನು ನೀಡಿತು.ಕರ್ನಾಟಕ ಸರಕಾರದ ಅನುದಾದೊಂದಿಗೆ ೧೯೭೯ ನೇ ಆಕ್ಟೋಬರ್‌ ಎರಡರಂದು ಈ ಯೋಜನೆ ಜಾರಿಗೆ ಬಂತು. ವಿದ್ವಾಂಸರಾದ ಸೇಡಿಯಾಪು ಕೃಷ್ಣಭಟ್‌, ಮರಿಯಪ್ಪಭಟ್‌, ತೆಕ್ಕುಂಜ ಗೋಪಾಲಕೃಷ್ಣ ಭಟ್‌, ಶ್ರೀನಿವಾಸ ಹಾವನೂರ, ಬಿ. ಎ. ವಿವೇಕ ರೈ, ಅಮೃತ ಸೋಮೇಶ್ವರ, ರಾಮಕೃಷ್ಣ ಶೆಟ್ಟಿ, ವೆಂಕಟರಾಯ ಪುಣಿಂಚತ್ತಾಯ ಮೊದಲಾದ ವಿದ್ವಾಂಸರು ಮಂಡಳಿಯಲ್ಲಿದ್ದರು. ಭಾಷಾ ವಿಜ್ಞಾನಿಗಳೂ, ವಿದ್ವಾಂಸರೂ ಅದ ಯು. ಪಿ. ಉಪಾಧ್ಯಾಯರು ಹಾಗೂ ಸುಶೀಲಾ ಉಪಾಧ್ಯಾಯರು ತುಳು ನಿಘಂಟಿನ ಸಂಪಾದಕ ಪ್ರಮುಖರು. ೧೫ ವರ್ಷಗಳಿಗೂ ಹೆಚ್ಚು ಕಾಲ ಬಹು ವ್ಯವಸ್ಥಿತವಾಗಿ ನಡೆದ ಯೋಜನೆಯ ಫಲವಾಗಿ ಆರು ಬೃಹತ್‌ ಸಂಪುಟಗಳ ತುಳು ನಿಘಂಟು ಪ್ರಕಟವಾಯಿತು.

ತುಳು ನಿಘಂಟು ಯೋಜನೆ ಅಂಗವಾಗಿ ನಾಡಿನ ಹಲವು ಕಡೆ ಭಾಷಾಧ್ಯಯನಕ್ಕೆ ಸಂಬಂಧಿಸಿದಂತೆ ಅಧ್ಯಯನ ಶಿಬಿರಗಳು ನಡೆದವು. ಈ ಶಿಬಿರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಭಾಷಾತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಇದರಿಂದ ತುಳುವಿನ ಭಾಷಾಧ್ಯಯನ ನಡೆಸುವ ಸಂಶೋಧಕರಿಗೆ ಮಾರ್ಗದರ್ಶನ ದೊರೆಯಿತು. ಇದರ ಫಲವಾಗಿ ತುಳು ಭಾಷೆಗೆ ಸಂಬಂಧಿಸಿದ ಸಂಶೋಧನಾ ಲೇಖನಗಳು ಪ್ರಕಟವಾದುದು. ಸಂಶೋಧನಾ ಕೇಂದ್ರವೂ ಕು. ಶಿ. ಹರಿದಾಸಾ ಭಟ್ಟರ ಸಂಪಾದಕತ್ವದಲ್ಲಿ ‘ತುಳುವ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಿತು. ಇದರಲ್ಲಿನ ನಾಡಿನ ವಿದ್ವಾಂಸರು ತುಳು ಭಾಷೆಯ ಅಧ್ಯಯನಕ್ಕೆ ಸಂಬಂಧಿಸಿದ ಮಹತ್ವದ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಧ್ಯಯನ ಶಿಭಿರಗಳಲ್ಲಿ ನಡೆದ ಚರ್ಚೆಯ ಮುಖ್ಯಾಂಶಗಳು ಪ್ರಕಟವಾದವು. ಹೀಗೆ ತುಳು ಭಾಷೆಯ ಅಧ್ಯಯನ ದೃಷ್ಟಿಯಿಂದು ೪ ವರ್ಷಗಳ ಕಾಲ ಪ್ರಕಟವಾದ ‘ತುಳುವ’ ಪತ್ರಿಕೆಗಳು ಅಮೂಲ್ಯ ಆಕರಗಳಾಗಿವೆ.

ಭಾಷಾ ವಿಜ್ಞಾನದ ವ್ಯವಸ್ಥಿತವಾಗಿ ತುಳು ನಿಘಂಟುಗಳನ್ನು ರಚಿಸಲಾಗಿದೆ. ಪ್ರಾಚೀನ ಕಾವ್ಯಗಳಾದ ‘ಶ್ರೀ ಭಾಗವತೊ’ ದಿಂದ ಆರಂಭಿಸಿ, ಆಧುನಿಕ ಮಹಾ ಕಾವ್ಯವಾದ ಮಂದಾರ ರಾಮಾಯಣದವರೆಗೆ ಸಾಹಿತ್ಯದ ಶಬ್ಧಗಳು ನಿದರ್ಶನಗಳು ಮತ್ತು ಸಂದರ್ಭ ಸಂಗ್ರಹಿಸಲಾಗಿದೆ. ಮೌಖಿಕ ಸಾಹಿತ್ಯ ಪ್ರಕಾರಗಳಾದ ಪಾಡ್ದನ, ಸಂಧಿ, ಕಬಿತ, ಊರಲ್‌, ಕಥೆ, ಒಗಟು, ಗಾದೆಗಳಿಂದಲೂ ಶಬ್ಧ ಸಂಗ್ರಹ ಮಾಡಲಾಗಿದೆ. ಜಗತ್ತಿನ ವಿವಿಧ ಭಾಷೆಗಳ ನಿಘಂಟುಗಳು ಮತ್ತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಭಾಷಾತಜ್ಞರ ಅಭಿಪ್ರಾಯಗಳನ್ನು ಬಳಸಿಕೊಳ್ಳಲಾಗಿದೆ. ೧೯೮೮ರಲ್ಲಿ ಮೊದಲ ಸಂಪುಟ ಪ್ರಕಟವಾಯಿತು. ಏಳೆಂಟು ವರ್ಷಗಳ ಬಳಿಕ ಐದು ಸಂಪುಟಗಳು ಪ್ರಕಟವಾದವು. ನಿಘಂಟು ರಚನಾಪದ್ಧತಿಯ ಕುರಿತಾದ ಶಾಸ್ತ್ರೀಯ ವಿಶ್ಲೇಷಣೆಯಿರುವ ವಿಸ್ತಾರವಾದ ಪೀಠಿಕೆಯನ್ನು ಮೊದಲ ಸಂಪುಟದಲ್ಲಿ ನೀಡಲಾಗಿದೆ. ತುಳು ನಾಡಿನಾದ್ಯಂತ ಕ್ಷೇತ್ರಕಾರ್ಯವನ್ನು ನಡೆಸಿ ಜನಭಾಷೆಯಿಂದಲೂ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ತುಳುವಿನ ವಿವಿಧ ಜನರ್ಗಗಳಿಂದ ಸಾಂಸ್ಕೃತಿಕ ವಿವವರಗಳನ್ನು ಸಂಗ್ರಹಿಸಿ, ಅವುಗಳ ವ್ಯತ್ಯಾಸಗಳನ್ನು ತೋರಿಸಲು ಕನ್ನಡ ಮತ್ತು ರೋಮನ್‌ಲಿಪಿಯಲ್ಲಿ ಬರೆದು ಯಾವ ಪ್ರದೇಶದಲ್ಲಿ ಯಾವ ವರ್ಗದಲ್ಲಿ ಯಾವ ರೂಪ ಇದೆ ಎಂದು ವಿವರಿಸಲಾಗಿದೆ. ಅಲ್ಲದೆ ಉಳಿದ ದ್ರಾವಿಡ ಭಾಷೆಗಳ ಜ್ಞಾತಿ ಶಬ್ಧಗಳನ್ನು ನೀಡಲಾಗಿದೆ. ಒಟ್ಟಿನಲ್ಲಿ ಇದೊಂದು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ನಡೆದ ನಿಘಂಟು ರಚನಾ ಕಾರ್ಯವಾಗಿದೆ. ಆರು ಸಂಪುಟಗಳ ಈ ಬೃಹತ್‌ ನಿಘಂಟುಗಳು ತುಳುವನ್ನು ಸಮೃದ್ಧ ಭಾಷೆಯ ಸಾಲಿಗೆ, ಸೇರುವಂತೆ ಮಾಡಿದೆ. ತುಳು ಭಾಷೆ ಅಧ್ಯಯನದ ಚರಿತ್ರೆಯಲ್ಲಿ ‘ತುಳು ನಿಘಂಟು ಯೋಜನೆ’ಗೆ ಮಹತ್ವದ ಸ್ಥಾನವಿದೆ.

ತುಳು ಲಿಪಿ ವಿಶ್ಲೇಷಣೆ

ತುಳು ಭಾಷಾ ಅಧ್ಯಯನ ಇತಿಹಾಸದಲ್ಲಿ ತುಳು ಲಿಪಿಯ ಕುರಿತಾದ ಚರ್ಚೆ ಅವ್ಯಾಹತವಾಗಿ ನಡೆದು ಬಂದಿದೆ. ಇಂದಿಗೂ ಈ ಚರ್ಚೆ ಜೀವಂತವಾಗಿದೆ. ಆರಂಭದಲ್ಲಿ ತುಳು ಲಿಪಿಯಿಲ್ಲದ ಭಾಷೆ ಎಂಬ ನಂಬಿಕೆ ಇತ್ತು. ಆಧುನಿಕ ಕಾಲದಲ್ಲಿ ತುಳು ಸಾಹಿತ್ಯ ರಚನೆಗಳು ಕನ್ನಡ ಲಿಪಿಯಲ್ಲೇ ಆರಂಭಗೊಂಡಿತು. ತುಳುನಾಡಿನಲ್ಲೂ ಕನ್ನಡವೇ ಮುಖ್ಯ ವ್ಯವಹಾರ ಮತ್ತು ಶಿಕ್ಷಣದ ಭಾಷೆಯಾಗಿರುವುದರಿಂದ ಇದು ಸಹಜವೂ ಆಗಿದೆ. ಆದರೆ ತುಳುವಿನಲ್ಲಿ ಮೊದಲ ನಿಘಂಟು ರಚನೆ ಮಾಡಿದ್ದಾರೆ. ಮ್ಯಾನರರು ಮಲಯಾಳಂ ಭಾಷೆಯಲ್ಲಿ ಬರೆದ ಕೆಲವು ತಾಳೆಗರಿ ಗ್ರಂಥಗಳು ಇರುವುದನ್ನು ಪ್ರಸ್ತಾಪಿಸಿದರು. ಎಂಬತ್ತರ ದಶಕದಲ್ಲಿ ವೆಂಕಟರಾಜ ಪುಣಿಂಚತ್ತಾಯರ ಶ್ರಮದ ಫಲವಾಗಿ ಪ್ರಾಚೀನ ತುಳು ಕಾವ್ಯಗಳು ಶೋಧನೆಯಾದವು. ಇವು ಮಾಲಯಾಳ ಲಿಪಿಯಲ್ಲಿರುವುದರಿಂದ ಇದನ್ನು ‘ತುಳು ಮಲಯಳಂ ಲಿಪಿ’ ಎಂದು ಕರೆಯಾಲಾಗಿದೆ.

ಇದರಿಂದ ‘ತುಳು ಮಲಯಳ ಲಿಪಿ’ ಯನ್ನು ‘ತುಳು ಲಿಪಿ’ ಎಂದು ಕರೆಯಲಾಯಿತು. ವಿದ್ವಾಂಸರು ವೆಂಕಟರಾಜ ಪುಣಿಂಚತ್ತಾಯರ ‘ತುಳು ಲಿಪಿ’ ಎಂಬ ಪುಟ್ಟ ಪುಸ್ತಕವನ್ನು ತುಳು ಸಾಹಿತ್ಯ ಆಕಾಡೆಮಿ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಈ ಲಿಪಿಯ ವಿವವರಗಳನ್ನು ನೀಡಲಾಗಿದೆ. ಆದರೆ ಇಂದು ಈ ಲಿಪಿ ಬಳಕೆಯಲ್ಲಿಲ್ಲ. ಇದರಿಂದ ಇದು ಜನಪ್ರಿಯವೂ ಆಗಿಲ್ಲ ‘ತುಳುವಿಗೊಂದು ಪ್ರತ್ಯೇಕ ಲಿಪಿ ಬೇಕು’ ಎಂಬ ಚರ್ಚೆಯೂ ಆಗಾಗ ನಡೆದಿದೆ. ಕೆಲವು ಬರಗಗಾರರು ಹೊಸ ಲಿಪಿಯನ್ನು ತಯಾರಿಸುವ ಮತ್ತು ಪ್ರಾಚಾರ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. ಮೋಹನ್‌ಕೆ. ಬೋಳಾರ್‌ಎಂಬುವರು ಇಂತಹ ಲಿಪಿಯನ್ನು ತಯಾರಿಸಿದ್ದಾರೆ.

ಆದರೆ ಭಾಷೆಯೊಂದಕ್ಕೆ ಲಿಪಿ ಅನಿವಾರ್ಯವಲ್ಲ. ಅನ್ಯ ಭಾಷೆಯ ಲಿಪಿಯನ್ನು ಬಳಸಿ ಒಂದು ಭಾಷೆಯ ಗ್ರಂಥಸ್ಥ ಸಾಹಿತ್ಯ ಬೆಳೆಯಬಹುದಾಗಿದೆ. ಸಂಸ್ಕೃತದ ‘ದೇವನಾಗರಿ’ ಲಿಪಿಯನ್ನೇ ಹೆಚ್ಚಿನ ಆರ್ಯನ್‌ಭಾಷೆಗಳು ಬಳಸುತ್ತಿವೆ. ಕೊಂಕಣಿ ಭಾಷೆ ಕನ್ನಡ ಮತ್ತು ಮರಾಠಿ ಲಿಪಿಯಲ್ಲಿ ಗ್ರಂಥಸ್ಥ ವಾಗಿದೆ. ಈಗಾಗಲೆ ಕನ್ನಡ ಲಿಪಿಯನ್ನು ತುಳುವರು ಅನುಕರಿಸುವುದರಿಂದ ಹೊಸ ಲಿಪಿಯ ಕುರಿತಾದ ಚರ್ಚೆ ಅವಾಸ್ತವವೆನ್ನಬಹುದು.

ಉಪಸಂಹಾರ

ಈ ಮೇಲಿನ ಅಧ್ಯಯನ ಹಿನ್ನೆಲೆಯಲ್ಲಿ ತುಳು ಭಾಷಾ ಅಧ್ಯಯನದ ಕುರಿತಾದ ವೈಶಿಷ್ಟ್ಯಗಳನ್ನು ಹೀಗೆ ಸಂಗ್ರಹಿಸಬಹುದು.

೧. ತುಳು ಭಾಷೆಯ ಅಧ್ಯಯನಕ್ಕೆ ೧೫೦ ವರ್ಷಗಳ ನಿಖರವಾದ ಇತಿಹಾಸವಿದೆ. ತುಳು ಸಾಹಿತ್ಯದ ಕುರಿತಾದ ಪ್ರಜ್ಞೆ ಇಲ್ಲದಾಗ ಮತ್ತು ಸೃಜನಶೀಲ ರಚನೆಗಳು ಆರಂಭವಾಗುವ ಮೊದಲೇ ಭಾಷೆಯ ಅಧ್ಯಯನಗಳು ಆರಂಭವಾಗಿವೆ. ತುಳುನಿಘಂಟು, ತುಳು ವ್ಯಾಕರಣಗಳು ಆಗಲೆ ಪ್ರಕಟವಾದವು. ಯಾವುದೇ ಗ್ರಂಥಸ್ಥ ಸಾಹಿತ್ಯದ ರಚನೆಗಳನ್ನು ಆಧಾರವಾಗಿಟ್ಟುಕೊಂಡು ನಿಘಂಟು ವ್ಯಾಕರಣಗಳು ರಚನೆಯಾಗಿಲ್ಲ. ಜನ ಮಾತಾನಾಡುವ ತುಳುವನ್ನು ಆಧಾರವಾಗಿಟ್ಟುಕೊಂಡು ಇವುಗಳನ್ನು ರಚಿಸಲಾಗಿದೆ.

೨. ೧೫೦ ವರ್ಷಗಳ ಅಧ್ಯಯನದ ಇತಿಹಾಸದಲ್ಲಿ ತುಳು ಸೃಜನಶೀಲ ಸೃಷ್ಟಿಗಳಿಗೆ ಪ್ರೇರಣೆಯಾಗಿರುವ ತುಳು ಪುನರುಜ್ಜೀವನದ ಭಾವನಾತ್ಮಕ ಅಂಶ ಭಾಷಾ ಅಧ್ಯಯನಕ್ಕೆ ಪ್ರೇರಣೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ತುಳು ನಿಘಂಟು ವ್ಯಾಕರಣ ಕೃತಿಗಳ ರಚನೆ ಹಾಗೂ ಇತರ ವಿಶ್ಲೇಷಣೆಗಳ ಸಂದರ್ಭದಲ್ಲಿ ಈ ಅಂಶ ಸ್ಪಷ್ಟವಾಗುತ್ತದೆ. ಇದರಿಂದಲೇ ಕೆಲವೊಮ್ಮೆ ‘ಇಂಗ್ಲಿಷಿಗೂ ತುಳುವೆ ಮೂಲ’ ಎಂಬ ಅತಿರೇಕದ ವಿವರಣೆಗಳೂ ವ್ಯಕ್ತವಾಗಿವೆ. ಆದರೆ ಆ ಭಾವನಾತ್ಮಕ ಅಂಶ ಭಾಷಾ ಅಧ್ಯಯನಕ್ಕೆ ಪ್ರಮುಖ ಪ್ರೇರಣೆಯಾಗಿದೆ.

೩. ಆಡು ಭಾಷೆಯಾಗಿದ್ದ ಒಂದು ಭಾಷೆಯ ಕುರಿತಾಗಿ ಇಷ್ಟು ಸಮಗ್ರವಾದ ಭಾಷಾ ಅಧ್ಯಯನ ನಡೆದಿರುವುದು ತುಳುವಿನ ವೈಶಿಷ್ಟ್ಯವಾಗಿದೆ. ಭಾರತೀಯ ಭಾಷಾ ಅಧ್ಯಯನ ಸಂದರ್ಭದಲ್ಲಿ ಈ ರೀತಿಯ ಅಧ್ಯಯನಗಳು ಅಪರೂಪವೆನ್ನುಬಹುದು.

೪. ತುಳು ಭಾಷೆಯ ಕುರಿತಾದ ಅಧ್ಯಯನಗಳು ಕರ್ನಾಟಕೇತರ ವಿಶ್ವವಿದ್ಯಾನಿಲಯಗಳ ಭಾಷಾ ಅಧ್ಯಯನ ವಿಭಾಗಗಳಲ್ಲಿ ಹೆಚ್ಚಾಗಿ ನಡೆದುದು ವೈಶಿಷ್ಟ್ಯವಾಗಿದೆ. ಇದಕ್ಕೆ ಕಾರಣಗಳನ್ನು ಈಗಾಗಲೇ ಈ ಅಧ್ಯಯನದಲ್ಲಿ ವಿವರಿಸಲಾಗಿದೆ.

೫. ತುಳು ಲಿಪಿಯ ಕುರಿತಾದ ಚರ್ಚೆ ಅಧ್ಯಯನದ ಉದ್ದಕ್ಕೂ ನಡೆದು ಬಂದಿರುವುದು ಒಂದು ವಿಶೇಷವಾಗಿದೆ.

ಆಕರಸೂಚಿ

ಕನ್ನಡ ಗ್ರಂಥಗಳು

ಅಮೃತ ಸೋಮೇಶ್ವರ, ೧೯೭೮, ಅವಿಲು, ಕನ್ನಡ ಸಂಗ, ವಿವೇಕಾನಂದ ಕಾಲೇಜು, ಪೂತ್ತೂರು

ಅಮೃತ ಸೋಮೇಶ್ವರ, ೧೯೮೪, ತುಳು ಬದುಕು: ಕೆಲವು ಮುಖಗಳು, ಪ್ರಕೃತಿ ಪ್ರಕಾಶನ, ಕೋಟೆಕಾರು

ಚಿನ್ನಪ್ಪ ಗೌಡ ಕೆ., (ಸಂ),೧೯೮೯, ಪನಿಯಾರ, ವಿಶ್ವ ತುಳು ಸಮ್ಮೇಳನ ಸ್ಮರಣ ಸಂಚಿಕೆ

ವಿವೇಕ ರೈ ಬಿ. ಎ., ೧೯೭೭, ತೌಳವ ಸಂಸ್ಕೃತಿ, ಸಹ್ಯಾದ್ರಿ ಪ್ರಕಾಶನ, ಮೈಸೂರು

ವಿವೇಕ ರೈ ಬಿ. ಎ., ೧೯೮೦, ತುಳುವ ಅಧ್ಯಯನ ಕೆಲವು ವಿಚಾರಗಳು, ತುಳುವ ಪ್ರಕಾಶನ, ಮಂಗಳೂರು

ವಿವೇಕ ರೈ ಬಿ. ಎ., ೧೯೮೫, ತುಳುಜನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಪಾದೇಕಲ್ಲು ವಿಷ್ಣುಭಟ್ಟ (ಸಂ), ೧೯೯೭, ತುಳುವರಿವರು, ಗೋವಿಂದಪೈ ಸಂಶೋಧನ ಕೇಂದ್ರ, ಉಡಪಿ.

ವೆಂಕಟರಾಜ ಪುಣಿಂಚತ್ತಾಯ, ೨೦೦೧, ತುಳು ಲಿಪಿ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಮಂಗಳೂರು

ಶ್ರೀ ಹರಿದಾಸ ಭಟ್ಟ ಕು.ಶಿ. (ಸಂ)., ತುಳುವ ತ್ರೈಮಾಸಿಕ ಸಂಚಿಕೆಗಳು, ಜನವರಿ- ಮಾರ್ಚ್‌೧೯೮೦
ಜನವರಿ- ಮಾರ್ಚ್‌೧೯೮೧, ಅಕ್ಟೋಬರ್‌ದಶಂಬರ್‌೧೯೮೧
ಮದಿಪು ತ್ರೈಮಾಸಿಕ ಸಂಚಿಕೆಗಳು, ೧೯೯೬, ೧೯೯೮, ೨೦೦೧
ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು

ಇಂಗ್ಲಿಷ್‌ ಗ್ರಂಥಗಳು

Mariappa Bhat and M. Shankar Kedilaya M., 1967, Tulu-English Distionary, University of Madras

Brigal J., 1872, Grammar of Tulu Language, Basel Mission Press Mangalore.

August Manner, 1986, Tulu EnglishDictionary, Basel Mission Press Mangalore.

August Manner, 1981, English-Tulu Dictionary, Basel Mission Press Mangalore.

Padmanabha Kekunnaaya, 1994, A Comparative Study of Tulu Dialects, Govinda Pai Research Centre, Udupi

ತುಳು ಗ್ರಂಥಗಳು

ರಾಮಕೃಷ್ಣ ಶೆಟ್ಟಿ, ೧೯೮೮, ತುಳು ಸಂಪೊತ್ತು, ತುಳುವೆರ್‌ ಪ್ರಕಾಶನಾಲಯ, ನ್ಯೂದಿಲ್ಲಿ.

ಪದ್ಮನಾಭ ಕೇಕುಣ್ಣಾಯ, ೧೯೮೫, ರೆವರೆಂಡ್‌ ಅಗಸ್ಟ್‌ ಮೇನರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.

ಮುರಳೀಧರ ಉಪಧ್ಯಾಯ, ೧೯೯೭, ಎಸ್‌. ಯು. ಪಣಿಯಾಡಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು.