ಒಂದು ಭಾಷೆಯ ಅಸ್ತಿತ್ವ, ಬದುಕು ಅದರ ಕೊಳ್ಕೊಡೆಯ ವ್ಯವಹಾರದ ಮೇಲೆ ನಿಂತಿದೆ. ಮಡಿ ಮೈಲಿಗೆಯಿಲ್ಲದೆ ಹರಿಯುವ ನೀರಿನಂತೆ ಭಾಷೆಯು ಕೂಡಾ ಹರಿದಾಗ ಮಾತ್ರ ಅದು ಆವಿಯಲ್ಲದಿದ್ದರೂ ಜೀವಂತ ಭಾಷೆಯಾಗಬಹುದು. ತುಳುಭಾಷೆ ಅಂತಹ ಒಂದು ಪ್ರಬುದ್ಧ ಭಾಷೆ. ಅದರ ಜೀವಂತ ಇರುವಿಕೆಗೆ ಲಿಪಿಯ ತೊಡಕುಂಟಾಗಿಲ್ಲ. ಒಂದು ಭಾಷೆಯ ಸಮೃದ್ಧಿ, ಅದರ ಶ್ರೀಮಂತಿಕೆ ಇರುವುದು ಅದರ ಶಬ್ಧ ಭಂಡಾರದಿಂದ. ಈ ಭಂಡಾರ ತುಂಬಲು ಅನೇಕ ಮಾರ್ಗಗಳಿವೆ. ಅದು ಬೇರೆ ಭಾಷೆಗಳ ಮೇಲೆ ಸವಾರಿ ಮಾಡಿ ಲೂಟಿ ಮಾಡಿರಬಹುದು ಅಥವಾ ಬೇರೆ ಭಾಷೆಯ ಆಕ್ರಮಣಕ್ಕೆ ಒಳಗಾಗಿ ಸಂಕಟ ಅನುಭವಿಸಿದರೂ ಮತ್ತೆ ಅದೇ ಭಾಷೆಯನ್ನು ತನ್ನದಾಗಿಸಿಕೊಳ್ಳುವ ಜಾಣ್ಮೆಯಿಂದಲಾದರೂ ಆಗಿರಬಹುದು. ಹೀಗೆ ಭಾಷೆ, ಆಕ್ರಮಣ, ಸಂಧಾನಗಳ ಮೂಲಕ ಬೆಳೆಯುತ್ತಲೇ ಇರುವಾಗ ಆ ಭಾಷೆಯ ಮೂಲ ಪದಗಳಾವುವು, ಬಂದು ಸೇರಿದವುಗಳಾವುವು ಎನ್ನುವುದನ್ನು ತಿಳಿಯುವುದು ಒಂದು ಬೌದ್ಧಿಕ ಸಂತೋಷದ ಆಟವೇ ಸರಿ!
ಹೀಗೆ ಶಬ್ಧಗಳು ಬೇರೆ ಭಾಷೆಯಿಂದ ನಮ್ಮ ಭಾಷೆಗೆ ಸೇರುವಾಗ ನಮ್ಮ ನಾಲಗೆಗೆ ಸರಿಯಾಗಿ ಅಂದರೆ ನಮ್ಮ ಉಚ್ಚಾರಣೆಗೆ ಯೋಗ್ಯವಾಗಿ ರೂಪ ಬದಲಾಯಿಸಿಕೊಳ್ಳುವುದು ಒಂದು ವಿಧಾನವಾದರೆ, ತನ್ನ ಮೂಲ ಭಾಷೆಯ ಅರ್ಥವನ್ನು ಕಳಕೊಂಡು ಬೇರೆಯೇ ಅರ್ಥದಲ್ಲಿ ಪ್ರಯೋಗವಾಗುವುದು ಅಥವಾ ನಿಜವಾದ ಅರ್ಥಕ್ಕಿಂತ ಹೆಚ್ಚಿನ ಅರ್ಥವ್ಯಾಪ್ತಿ ಪಡೆದುಕೊಳ್ಳವುದು, ಅಥವಾ ಅರ್ಥ ಸಂಕೋಚನಗೊಳ್ಳುವುದು – ಹೀಗೆ ಹಲವಾರು ರೀತಿಯ ಪ್ರಕ್ರಿಯೆಗಳು ಬಹಳ ಸಹಜವಾಗಿ ಸಲೀಸಾಗಿ ಆಗುತ್ತಿರುತ್ತದೆ.
ತುಳು ಭಾಷೆಯ ಆಡುಮಾತನ್ನು ಗಮನಿಸಿದರೆ ಹಿಂದೀ ಭಾಷೆಯ ಪರಿಚಯವಿಲ್ಲದವರಿಗೆ ತುಳುವಿನ ಪದಗಳೇ ಆಗಿ ಅನಕ್ಷರಸ್ಥರಲ್ಲೂ ಚಲಾವಣೆಯಾಗುತ್ತಿರುವ ಶಬ್ಧಗಳು ಸಾಕಷ್ಟು ಇವೆ. ಇವು ಹಿಂದಿ ಅಂದರೆ ಕೇವಲ ಗ್ರಂಥಸ್ಥ ಹಿಂದೀ ಎನ್ನುವುದಕ್ಕಿಂತ ಹಿಂದಿಯೊಳಗೆ ಒಂದಾಗಿ ಹೋಗಿರುವ ಉರ್ದು, ಫಾರಸೀ, ಆರಬ್ಬೀ ಶಬ್ಧಗಳೂ ಆಗಿರಬಹುದು. ಯಾವ ಕಾಲದಲ್ಲಿ ಇವು ಬಂದು ಸೇರಿಕೊಂಡಿವೆ ಈ ತುಳುನಾಡನ್ನು, ಹೇಗೆ ಸೇರಿಕೊಂಡಿತು ಎನ್ನುವುದು ಕೂಡಾ ತುಳುನಾಡಿನ ಚಾರಿತ್ರಿಕ ಇತಿಹಾಸಕ್ಕೆ ಕನ್ನಡಿ ಹಿಡಿಯಬಲ್ಲ ಅಧ್ಯಯನವಾಗಬಹುದು. ಇಷ್ಟೊಂದು ವ್ಯಾಪ್ತಿಯುಳ್ಳ ಅಧ್ಯಯನಕ್ಕೆ ಇಳಿಯದೆ ಹಿಂದೀ ಭಾಷೆಯ ಗ್ರಂಥಸ್ಥ ಪರಿಚಯವಾದಾಗ ನಾವಾಡುವ ತುಳು ಭಾಷೆಯಲ್ಲಿ ಬಹಳಷ್ಟು ಹಿಂದೀ ಭಾಷೆಯ ಶಬ್ಧಗಳು ಸೇರಿ ಹೋಗಿರುವುದನ್ನು ಕಂಡು ಆಶ್ಚರ್ಯವಾಯಿತು. ಬಹುಶಃ ಇಂತಹ ಒಂದು ಸೇರ್ಪಡೆಗೆ ತುಳುನಾಡು ಒಂದು ಕಾಲಕ್ಕೆ ಟಿಪ್ಪು ಸುಲ್ತಾನನ ಆಳ್ವಿಕೆಗೆ ಒಳಪಟ್ಟಿರುವುದರಿಂದ ಎಂದು ಭಾವಿಸಬಹುದು.
ಈಗಾಗಲೇ ಈ ಲೇಖನದ ಆರಂಭದಲ್ಲಿ (೧) ಸವಾರಿ, (೨) ಲೂಟಿ, (೩) ಸಲೀಸು ಎಂಬ ಪದಗಳನ್ನು ಗುರುತಿಸಲಾಗಿದೆ. ಇವು ಇದೇ ಅರ್ಥಗಳಲ್ಲಿ ತುಳುವಿನಲ್ಲೂ ಬಳಕೆಯಾಗುತ್ತಿದೆ. ಟಿಪ್ಪು ಸುಲ್ತಾನನ ಸೈನಿಕರು ಇಲ್ಲಿ ಕುದುರೆಯ ಮೇಲೆ ಸವಾರಿ ಮಾಡಿದ್ದಾರೆ. ನಾನೂ ಚಿಕ್ಕಂದಿನಲ್ಲಿ ಕುದುರೆ ಸವಾರಿ ಮಾಡಿದ್ದೇನೆ ಎಂಬ ಋಷಿ ನನ್ನದು. ಲೂಟಿ=ದರೋಡೆ, ಲುಟೇರ=ದರೋಡೆಕೋರ, ಸೈನಿಕರು ಆಕ್ರಮಣ ಮಾಡುವುದೆಂದರೆ ಹಗಲು ದರೋಡೆಯೇ ತಾನೇ? ಆದರೆ ಇಂದು ತುಳುವಿನಲ್ಲಿ ಪ್ರಯೋಗವಾದ ಲೂಟಿ ಮಗುವಿನ ತುಂಟತನಕ್ಕೆ ಸೀಮಿತವಾಗಿದೆ. ವಾ ಲೂಟಿಯಪ್ಪಾ ಆ ಬಾಲೆಗ್! (ಏನು ತುಂಟಾಟವಪ್ಪಾ ಆ ಮಗುವಿಗೆ!) ಅದೇ ಸಲೀಸಾಗಿ = ಸುಲಭವಾಗಿ ತುಂಟಾಟದ ಮಗುವನ್ನು ರಮಿಸಬಲ್ಲವಳು ತುಳುವಿನ ತಾಯಿ ಮಾತ್ರವಲ್ಲ ಕನ್ನಡ ತಾಯಿಯೂ ಕೂಡಾ, ತುಳುವರು ಅದ್ಹೇಗೆ ಅಷ್ಟೊಂದು ಸಲೀಸಾಗಿ ಹಿಂದೀ, ಉರ್ದು, ಫಾರ್ಸಿ, ಅರಬ್ಬಿ ಶಬ್ದಗಳನ್ನು ಸೇರಿಸಿಕೊಂಡರು ಎಂದರೆ ಇಲ್ಲೊಂದು ಹಿಂದೀ ಭಾಷೆಯ ಆಡಳಿತ ಪ್ರಭಾವ (ಅಂದು ಅದು ಹಿಂದಿ ಆಗಿರಲಾರದು ಉರ್ದು ಭಾಷೆ ಎಂದರೇ ಸರಿಯೆನ್ನಬಹುದು) ಇತ್ತು ಎನ್ನುವುದು ಖಚಿತ. ಪ್ರಾರಂಭದಲ್ಲಿ ತುಳುವರು ಮತ್ತು ಹಿಂದೀಯರು ಯುದ್ಧ = ಲಡಾಯಿ ಮಾಡಿರಲೇಬೇಕು. ಬಳಿಕ ಯುದ್ಧವೆನ್ನುವ ಅರ್ಥದ (೪) ಲಡಾಯಿ ಜಗಳಕ್ಕೆ ಇಳಿದು ಸಂಧಾನ ಮಾಡಿಕೊಂಡಿರಬೇಕು. ಅಲ್ಲದೆ ಇದ್ದರೆ ತುಳುವರು ಯುದ್ದ ಮಾಡುವುದಿಲ್ಲ. ಮಾಡಿದರೆ ಸಣ್ಣಪುಟ್ಟ ಲಡಾಯಿ=ಜಗಳ ಮಾತ್ರ ಅನ್ನಿ! ತುಳುವರು ತಾವೇ ಖುದ್ದಾಗಿ ಸ್ವಂತಾವಾಗಿ ಜಗಳವಾಡಿದರೋ, ಬಾಡಿಗೆಗೆ ಸೈನಿಕರನ್ನು ಕರೆ ತಂದರೋ ಚರಿತ್ರೆಯ ಪುಟಗಳಲ್ಲಿ ನೋಡಬೇಕು. ಆದರೆ (೫) ಕುದ್ಧ್ = ಸ್ವಂತ, ಸ್ವಂತಃ ಎಂಬುದನ್ನು ತಮ್ಮ ಜೊತೆಗೆ ಸ್ವಂತಕ್ಕೆ ಇಟ್ಟುಕೊಂಡರು. ಯಾನೇ ಕುದ್ದು ಪೋದು ಬತ್ತೆ ಮಾರಾಯರೇ = ನಾನೇ ಸ್ವತಃ ಹೋಗಿ ಬಂದೆ ಮಹಾರಾಯರೇ ಎಂದು ಹೇಳುವುದು ಮಾತ್ರವಲ್ಲ ಎನ್ನ ಕೆಬಿಟೇ ಯಾನ್ ಕುದ್ದ್ ಕೇನ್ಯೆ ಪನ್ಪೆ! ನನ್ನ ಸ್ವಂತ ಕಿವಿಯಲ್ಲೇ ನಾನು ಕೇಳಿದ್ದೇನೆ (ಮಾರ್ರಾಯರೇ!) ಎಂದೂ ಹೇಳುತ್ತಾರೆ.
ಉರ್ದು ಅಥವಾ ಹಿಂದಿ ಇಲ್ಲಿಗೆ ಆಡಳಿತ ನೆಡಸಲು ಬಂದಿದೆ ಎನ್ನುವುದಕ್ಕೆ ಇನ್ನೂ ಹಲವು ಸಾಕ್ಷಿಗಳಿವೆ; ಆಡಳಿತ ನಡೆಸುವ ಅಧಿಕಾರಿ ಜನರಿಗೆ ಎಚ್ಚರ ಮೂಡಿಸಿ ರಾಜಾಜ್ಞೆ ತಿಳಿಸುವಲ್ಲಿ ಅಥವಾ ಸೈನಿಕರಿಗೆ ಕವಾಯತು ಕಲಿಸುವಲ್ಲಿ (೬) ‘ಹೋಷಿಯಾರ್’ = ಜಾಗೃತನಾಗು, ಎಚ್ಚರವಾಗು ಎಂದು ಹೇಳಲೇಬೇಕು ತಾನೇ? ಆದರೆ ತುಳುವರು ಜಾಗ್ರತೆಯಾಗಿ ಆ ಹೋಪಿಯಾರನ್ನು ತಮ್ಮ ಬಳಿ ಇಟ್ಟುಕೊಂಡು ಭಾರಿ ಹುಷಾರ್ > ಉಸಾರ್ = ಜಾಣರಾಗಿದ್ದಾರೆ ಅನ್ನಿಸುವುದಿಲ್ಲವೇ? ಅಷ್ಟೇ ಅಲ್ಲ ಆ ಸೈನಿಕರ ಕವಾಯತುಗಳಲ್ಲಿ ಹಲವನ್ನು ಇವರೂ ಕಲಿತುಕೊಂಡಿದ್ದಾರೆ ಎಂದರೆ ಸುಳ್ಳಲ್ಲ. ಆದರೆ ಕೆಲವೊಮ್ಮೆ ತುಳುವರು ಉಸಾರ್ ಆರೋಗ್ಯ ವಿಲ್ಲದೆ ವೈದ್ಯರ ಬಳಿಗೆ ಹೋಗುವುದೂ ಇದೆ. ಇದು ಯಾಕೆ ಹೀಗಾಯ್ತು ಎಂದು ಕೇಳಿದರೆ ‘ಹೋಷಿಯಾರ್’ ಶಬ್ಧದ ಆರೋಗ್ಯ ಕೆಟ್ಟು ಹೋಯಿತೆಂದೇ ಹೇಳಬೇಕು.
ಆದರೆ ಕೆಲವು ತುಳುವರು ಮಾತ್ರ ಎಡ್ಡೆ ಉಸಾರ್ಡ್ ಉಲ್ಲೆರ್ = ಒಳ್ಳೆ ಶ್ರೀಮಂತಿಕೆಯಲ್ಲಿ ಇದ್ದಾರೆ ಎಂದರೆ ಒಪ್ಪುತ್ತೀರಾ? ಖಂಡಿತಾ ಒಪ್ಪಲೇಬೇಕು. ಯಾಕೆಂದರೆ ತುಳುವರು ಹಿಂದಿಯ (೭) ನಿಡರ್ = ನಿರ್ಭಯವನ್ನು ನದರ್ಎಂದು ಬದಲಾಯಿಸಿ ‘ಭಯ’ ಎಂಬ ಅರ್ಥ ನೀಡಿದ್ದಾರೆ. ‘ಅಲೆಗ್ ಒಂತೆಲಾ ನದರ್ ಇಜ್ಜಿ’ = ‘ಅವಳಿಗೆ ಒಂದಿಷ್ಟು ಭಯವೇ ಇಲ್ಲ’. ಇದು ಹೆಣ್ಣಿಗೇ ಹೆಚ್ಚು ಬಳಕೆಯಾಗುವ ಪದವಾಗಿ ಕಾಣಿಸುತ್ತದೆ. ಹುಡುಗಿಯರಿಗೆ ಹೀಗೆ ಗದರಿಸಿದರೆ ಸಾಕಾಗಬಹುದು. ಹುಡುಗರಿಗೆ ಖಂಡಿತ ಸಾಕಾಗಲಿಕ್ಕಿಲ್ಲ. ಅದ್ದಕ್ಕೆಂದೇ ಅವರಿಗೆ (೮) ಛಡೀ ಏಟು ಅಂದರೆ ಚಡಿ ಬೀಳಲೇಬೇಕು ಎಂದು ತೀರ್ಮಾನಿಸಿದ್ದಾರೆ. ಆದರೆ ಇಂದಿನ ಹುಡುಗ ಹುಡುಗಿಯರು ಓ ಚೋರ್ಗೆ (ಗದರಿಸುವಿಕೆ) ಎಲ್ಲ ಹೆದರುತ್ತಾರೆ. ಅಕುಲ್ ಜೋರು ಮಲ್ತಿನ ಮಾಮಣ್ಣನೇ (೯) ನಕಲಿ (೧೦) ಮಲ್ಪೆರ್ = ಅವರು ಗದರಿಸಿದ ಮಾವನ್ನನ್ನೇ ಹಾಸ್ಯ ಮಾಡಿಯಾರು. ತುಳುವರಿಗೆ ನಕಲಿ ಮಾಡುವುದೆಂದರೆ ಬಹಳ ಋಷಿ. ಹೌದಪ್ಪ ಅವರು ಕುಸಾಲ್ ಕುಸೆಲ್ನವರು. (೧೧) ಕುಸಾಲ್ < ಋಷ್ಹಾಲ್ = ಸಂತೋಷಿಸು. ಅದೇ ತಮಾಷೆಯೂ ಹೌದು. ಈ ತಮಾಷೆಯನ್ನು ಅದು ಹೇಗೆ ಮರಾಠಿಯಿಂದ ಪಡೆದುಕೊಂಡರು ಎಂದು ಮಾತ್ರ ಈಗ ಕೇಳಬೇಡಿ.
ತುಳುನಾಡು ಸಮುದ್ರತೀರದಲ್ಲಿರುವುದರಿಂದ ಇಲ್ಲಿ ಹಿಂದೀ ಭಾಷೆಯ ಅಡಳಿತಕ್ಕಿಂತ ಮೊದಲೇ ಅರಬ್ಬೀ, ಪಾರ್ಸಿಗಳು ವ್ಯಾಪಾರಕ್ಕೆ ಅಲ್ಲಲ್ಲ ‘ಬೇರ’ ಕ್ಕೆ ಇಲ್ಲಿ ಬಂದಿದ್ದಾರೆ. ವ್ಯಾಪಾರ್ > ಬೇರ. ತುಳುನಾಡಿನ ಮಂದಿ ಈಗಲೂ (೧೧) ‘ಬೇರ’ ಮಾಡುತ್ತಾರೆ. ಈ ವ್ಯಾಪಾರ ಮಾಡುವ ವ್ಯಾಪಾರಿಯೇ ‘ಬ್ಯಾರಿ’ ಯಾಗಿದ್ದರೂ ಈಗ ತುಳುವಿನಲ್ಲಿ ಬೇರೆ ಮಾಡುವವರೆಲ್ಲ ಬ್ಯಾರಿಗಳಲ್ಲ. ಹಾಗೆಯೇ ತುಳುನಾಡಿನ ಬ್ಯಾರಿ ಬಂಧುಗಳೆಲ್ಲ ಬೇರವಲ್ಲದೆ ಬೇರೆ ವೃತ್ತಿಗಳಲ್ಲೂ ಇದ್ದಾರೆ. (೧೩) ಬೇರದ ಸುರು ಎಡ್ಡೆ (೧೩) ಬೋಣಿಡಾಂಡ ಆನಿ ಬಯ್ಯಗ್ ಪೋನಗ (೧೪) ಪಾಯಿಜಾಮದ (೧೫) ಕಿಸೆ (೧೬) ಭರ್ತಿ ಆವು. ಈ ವಾಕ್ಯದಲ್ಲಿ ಬೇರ, ಸುರು, ಬೋಣಿ, ಪೈಜಾಮ, ಕಿಸೆ, ಬರ್ತಿ ಎಲ್ಲವೂ ಹಿಂದೀ ಪದಗಳೇ ಎಂದರೆ ತುಳುವರಿಗೆ ವ್ಯಾಪಾರ ಮಾಡಲು ಈ ಮಂದಿಯೇ ಕಲಿಸಿರಬೇಕು ಅನ್ನಿಸುತ್ತದೆ. ಹಿಂದಿಯರು ಶುರು -ಪ್ರಾರಂಭ > ಸುರು ಆಗಿದೆ. ಬೋಹನಿ = ಮೊದಲ ವ್ಯಾಪಾರ > ಬೋಣಿ ಆಗಿದೆ. ಪೈಜಾಮಹ್ > ಪೈಜಾಮ ಆಗಿದೆ. ಖೀಸಾ > ಕಿಸೆ ಆಗಿದೆ. ಭರ್ತಿ > ತುಂಬು ಬರ್ತಿ ಆಗಿ ತುಳುವರು ವ್ಯಾಪಾರ ಮಾಡಲು ಕಿಸೆ ತುಂಬಿಸಿಕೊಂಡಿದ್ದಾರೆ. ಕಿಸೆ ಅಂದ ಮೇಲೆ ಅದರಲ್ಲಿ ಹಿಂದೆ ಚಿನ್ನ ಬೆಳ್ಳಿಯ ನಾಣ್ಯಗಳೇ ಇದ್ದುದು. ನೋಟು ಈಗಿನದ್ದು ತಾನೇ? ಆ ದಿನಗಳಲ್ಲಿ ದೊಡ್ಡ ದೊಡ್ಡ ಮೌಲ್ಯದ ನಾಣ್ಯಗಳ ಜತೆ ಸಣ್ಣ ಮೌಲ್ಯದ ನಾಣ್ಯಗಳೂ ಇದ್ದರೆ ಒಳ್ಳೆಯದೇ ಅಲ್ಲವೇ? ಹೌದು ಅದಕ್ಕಾಗಿ ತುಳುವರು ವ್ಯಾಪಾರ ಸಲೀಸಾಗಿ ಆಗಬೇಕಾದರೆ ಕಿಸೆಯಲ್ಲಿ (೧೭) ಚುಂಗುಡಿ ಇಟ್ಟುಕೊಂಡೇ ಇರುತ್ತಾರೆ ಅಥವಾ ಸಂಚಿಯಲ್ಲಿ ಇಟ್ಟುಕೊಂಡಿರಬಹುದು. ತುಳುವ ಹೆಂಗಸೂ ವ್ಯಾಪಾರ ಮಾಡುತ್ತಾಳಲ್ಲಾ? ಇಬ್ಬರಿಗೂ ಬೇಕು ಚುಂಗುಡಿ ಆದರೆ ಚಿಲ್ಲರೆ ಹಣ. ಇದು ಕೂಡಾ ಚುಂಗಲ್= ಮುಷ್ಠಿ. ಚುಂಗುಡಿಯೆಂದರೆ ಮುಷ್ಠಿಯಲ್ಲಿ ಹಿಡಿಯಬಹುದಾದ ಚಿಲ್ಲರೆ ಹಣವೆಂದು ಅರ್ಥ, ಬೆಳಗೆ ವ್ಯಾಪಾರಕ್ಕೆ ಹೋದವರು ಸಂಜೆ ಮರಳಿ ಬರುವಾಗ ಅವರಲ್ಲಿದ್ದ ಚುಂಗುಡಿ ಎಲ್ಲಾ (೧೮) ಖಾಲೀಕಾಲಿ (ಮುಗುದುಹೋಗಿ) ನೋಟುಗಳೇ ಆದರೆ ಅಂದಿನ ವ್ಯಾಪಾರ ತುಂಬಾ ಚೆನ್ನಾಗಿತ್ತು ಎಂದರ್ಥ. ವ್ಯಾಪಾರದಲ್ಲಿ ಸಾಲ – ಸೋಲ ಇದ್ದುದ್ದೇ ಸಾಲ ಕೊಟ್ಟ ಮೇಲೆ ಅದನ್ನು ಹಿಂತಿರುಗಿಸಬೇಕು. ಅಂದರೆ ‘ವಾಪಾಸ್’ ಕೊಡಬೇಕು. ತುಳುವರು (೧೯) ‘ವಾಪಾಸ್’ ಕೊಡುತ್ತಾರೆ. ಕೊಡದಿದ್ದಲ್ಲಿ (೨೦) ‘ವಸೂಲ್’ ಮಾಡಲು ಹೊರಡಲೇಬೇಕಲ್ಲ. ಈ ‘ವಸೂಲು’ ಪದಕ್ಕೆ ತುಳುವಿನಲ್ಲಿ ಬೇರೆ ಪರ್ಯಾಯ ಪದವೇ ಇಲ್ಲವೆನ್ನಬಹುದು. ‘ಸಾಲ ವಸೂಲ್’ಗೇ ಪೋಯಿನಾಯೆ ಬಜಿ ಕೈಟೇ ವಾಪಾಸ್ಬತ್ತೆ – ಸಾಲ ವಸೂಲಾತಿಗೆ ಹೋದವನು ಬರೀ ಕೈಯಲ್ಲೇ ವಾಪಾಸಾದ’.
ಹಿಂದಿ, ಉರ್ದು, ಫಾರ್ಸಿ, ಅರಬ್ಬಿ ಭಾಷೆಯ ಪ್ರಭಾವ ತುಳುವರ ಮೇಲೆ ಅಗಾದವಾಗಿ ಆಗಿದೆ. ಅದು ಕೇವಲ ವ್ಯಾಪಾರಕ್ಷೇತ್ರ ಮಾತ್ರವಲ್ಲ. ಒಂದು ಆಡಳಿತ ವ್ಯವಸ್ಥೆಯ ರೂಢಿಗೂ ಕಾರಣವಾಗಿದೆ ಎಂದರೆ ತಪ್ಪಲ್ಲ. ಸಮಾಜದ ಸುವ್ಯವಸ್ಥೆಗೆ ಆಡಳಿತಾಧಿಕಾರಿ, ಕಾನೂನು ಜ್ಯಾರಿ ಮಾಡಲೇಬೇಕು. (೨೧) ಕಾನೂನನ್ > ಕಾನೂನು (೨೨) ಜ್ಯಾರಿ ಮಾಡುವುದು. – ಅನುಷ್ಠಾನಕ್ಕೆ ತರುವುದು ಎನ್ನುವ ಹಿನ್ನೆಲೆಯಲ್ಲಿ ತುಳುವಿನಲ್ಲಿ ಕಾನೂನು, ಜ್ಯಾರಿ ಶಬ್ಧಗಳ ಬಳಕೆ ಬಹುತೇಕ ಇದೆ. ಕಾನೂನು ಜ್ಯಾರಿ ಮಾಡಲಾಗಿದ್ದಲ್ಲಿ ಮತ್ತೆ (೨೩) ರದ್ದ್ರದ್ದು ಮಾಡಲೇಬೇಕು ತಾನೇ. ತುಳುವಿನಲ್ಲೂ ‘ರದ್ದ್ಮಲ್ತೆರ್’ ಎಂದೇ ಪ್ರಯೋಗವಾಗುತ್ತವೆ. ಒಂದು ಕಾನೂನು, ಅಂದರೆ ನಿಯಮ ಎಲ್ಲರಿಗೂ ಒಪ್ಪಿಗೆ ಆಗಬೇಕೆಂದೇನಿಲ್ಲವಲ್ಲಾ. ಆದ್ದರಿಂದಲೇ ಅವು ಎಂಕ್ಸುತಾರಾಂ ಒಪ್ಪಿಗೆ ಇಜ್ಜಿ ಎಂದು ತುಳುವರು ಧೈರ್ಯದಲ್ಲಿ ಹೇಳುತ್ತಾರೆ. (೨೪) ಸುತಾರಂ -ಖಂಡಿತವಾಗಿ, ನಿಶ್ಚಯವಾಗಿ ಎಂಬ ಪದವೂ ಹಿಂದೀ ಮೂಲದ್ದು. ಹೀಗೆ ಒಪ್ಪಿಗೆ ಇಲ್ಲ ಎಂದವನನ್ನು ಸುಮ್ಮನೆ ಬಿಡುತ್ತದೆಯೇ ಆಡಳಿತ -ಇಲ್ಲ ಖಂಡಿತಾ ಇಲ್ಲ. ಅವನನ್ನು ಕೈದ್(ಖೈದ್) ಮಾಡುತ್ತದೆ. ಅಂದರೆ ಬಂಧಿಸುತ್ತದೆ. ಅವನು ಈಗ (೨೫) ಕೈದಿ (ಖೈದಿ). ಇಲ್ಲಿ ಎಲ್ಲಾ ಹಿಂದೀ ಉರ್ದು ಪದಗಳದೇ (೨೬) ಕಾರುಬಾರು -ಇದು ಕೂಡಾ ಹಿಂದಿಯ ಕಾರೋಬಾರ್ ಎಂಬ ಪದದಿಂದಲೇ ಬಂದಿದೆ. ಇವನನ್ನು ಬಿಡುಗಡೆ ಮಾಡಬೇಕಾದರೆ ಖಾವಂದರಿಗೆ ಕಬೂಲಾಗುವಂತಿರಬೇಕು. ‘ಖಾವಂದರಿಗೆ ಕಬೂಲಾವೊಡು’ (೨೭) ಖಾವಂದರು -ಅಧಿಕಾರಿ, ರಾಜ, ಯಾರೂ ಆಗಬಹುದು. (೨೮) ಖಬೂಲ್ > ಕಬೂಲ್ಒಪ್ಪಿಗೆ ಎನ್ನುವ ಪದಗಳು ಈಗಲೂ ಬಳಕೆಯಲ್ಲಿವೆ.
ಖಾವಂದೆರೆಗ್ ಆಯನ್ ಬುಡುಗಡೆ ಮಲ್ಪೆರೆ ಆಯನ ಬಗ್ಗೆ ತೆರಿಯೊಡತ್ತೆ ಅಂಡ ಅರೆಗ್ ಇತ್ತೆ ಭಾರೀ ಕಜ್ಜೊ ಇತ್ತಿನೆಡ್ಡ್ ನೆಕ್ಕ್ ಪುರುಸೊತ್ತು ಇಜ್ಜಿ. ಖಾವಂದರಿಗೆ ಅವನ ಬಗ್ಗೆ (ಖೈದಿಯ) ತಿಳಿದುಕೊಳ್ಳಲು (೨೯) ಭಾರೀ ಕೆಲಸ ಇರುವುದರಿಂದ ಪುರುಸೊತ್ತು ಇಲ್ಲ. ಭಾರೀ – ಬಾರಿ (ಮಲ್ಲ); (೩೦) ಪುರಸತ್ > ಪುರುಸೊತ್ತು ಎಂಬ ಪದಗಳು ಹಿಂದೀ ಮೂಲದವುಗಳೇ! ಜೈಲ್ಡಿತ್ತಿ ಖೈದಿ ಭಾರೀ ಕಂಗಾಲ್ ಆತೆ, ಲಾಚಾರ್ಆತೆ. ಜೈಲಿನಲ್ಲಿದ್ದ ಕೈದಿ (೩೧) ಕಂಗಾಲ್ = ಕನ್ನಡದಲ್ಲಿ ನಿರ್ಧನ, ಬಡವ, ದರಿದ್ರ ಎನ್ನುವ ಅರ್ಥದಲ್ಲಿ ಬಳಕೆಯಾದರೂ ತುಳುವಿನಲ್ಲಿ ಅಸಹಾಯಕ ಎಂಬ ಅರ್ಥ ಹೆಚ್ಚು ಸೂಕ್ತವಾದುದು. (೩೨) ಲಾಚಾರ್ಎನ್ನುವುದು ದೇಹದ ಸ್ಥಿತಿಗೆ ಅನ್ವಯವಾಗುವಂತೆ ಕ್ಷೀಣ ಎಂಬ ಅರ್ಥವುಳ್ಳದ್ದು. ತಾನು ಮಾಡದ ತಪ್ಪಿಗೆ ಸೆರೆಮನೆ ಸೇರಿದ ಕೈದಿ ಖಂಡಿತವಾಗಿಯೂ ತನ್ನ ಈ ಅಸಹಾಯಕ ಸ್ಥಿತಿಗೆ ತಳ್ಳಿದ ತನ್ನ (೩೩) ‘ದೋಸ್ತಿ’ (ಸ್ನೇಹಿತ) ಆಗಿದ್ದವನ ಬಗ್ಗೆ ಏನೆಂದು ಗೊಣಗಿಯಾನು? ಖಂಡಿತವಾಗಿಯೂ ‘ಎನ್ನನ್ ಚಟ್ಟ್ ದೆತ್ತೆ. ಆಯೆನ ಸಂತಾನ ಮುತ್ತುದ್ ಪೋವಡ್’ ಎಂದು ಶಾಪವೇ ಹಾಕಿಯಾನು. (೩೪) ಚಟ್ಟ್ ನಾಶ, ಹಾಗೆಯೇ ನನ ಆಯೆಗ್ಎನ್ನ ಗರ್ಜಿ ಇಜ್ಜಿ ಎಂದು ಹೇಳಿಕೊಂಡಾನು. (೩೫) ಗರ್ಜಿ – ಗರಜ್ = ಅಗತ್ಯ ಎಂಬ ಅರ್ಥವುಳ್ಳದ್ದು.
ಇನ್ನು ಕೆಲವು ಶಬ್ಧಗಳನ್ನು ಗಮನಿಸೋಣ. ತುಳುವಿನಲ್ಲಿ ಏರುನೆಲವನ್ನು (೩೬) ಚಡಾವು ಎನ್ನುತ್ತಾರೆ. ಅಬ್ಬಾ ಈ ಚಡಾವುಡೆ ಏರ್ಮಿತರುನಿ? ಅಬ್ಬಾ ಈ ದಿನ್ನೆಯನ್ನು ಯಾರು ಏರುವುದು? ಇದಲ್ಲದೆ ಪಠಾಣರು ಧರಿಸುವ ಕಾಲಿನ ಚೂಪು ಮೂತಿ ಪಾದರಕ್ಷೆಯನ್ನು ಕೂಡಾ ಚಡಾವು ಎನ್ನುತ್ತರೆ. ‘ಆಂಡ ಜವನರೆಗ್ ಈ ಚಡಾವುನ್ ಪಂತೊ ಕಟ್ಟ್ದ್ ಏರುನು ಪಂಡ ಭಾರೀ (೩೭) ಉಮೇದ್ಉತ್ಸಾಹ, ಅಪೇಕ್ಷೆ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಇದು ಉಮ್ಮೀದ್ಎಂಬ ಶಬ್ಧದ ತುಳುರೂಪ.
ಹೀಗೆ ತುಳು ಭಾಷೆ ಆಡುಮಾತಿನ ಹಿಂದೆ ಸುತ್ತಾಡುತ್ತಿದ್ದರೆ ತುಳುಭಾಷೆಯೊಳಗೆ ಸದ್ದಿಲ್ಲದೆಯೇ ಬಂದು ಸೇರಿಗೆಯಾದ ಶಬ್ಧಗಳು ಇನ್ನೂ ಸಾಕಷ್ಟು ಇವೆ.
(೩೮) ಆಕ್ಲ್ (ಹಿಂ) > ಅಕಲ್ (ತುಳು) = ಪ್ರಜ್ಞೆ, ಬದ್ಧಿ, ಎಚ್ಚರ, ಮತಿ ಎಂಬರ್ಥದಲ್ಲಿ ಅಕಲ್ ಇಜ್ಜಂದಿ ಕೆಲಸ ಮಲ್ಪುನಗ ಓಲ್ ಇಜ್ಜಂದಿ ಕೋಪ ಬರ್ಪುನ ತಪ್ಪಾ? ಬುದ್ಧಿ ಇಲ್ಲದ (ಎಚ್ಚರ ಇಲ್ಲದ) ಕೆಲಸ ಮಾಡಿದಾಗ ಎಲ್ಲಿಲ್ಲದ ಕೋಪ ಬರುವುದು ತಪ್ಪೇ?
(೩೯) ಮುಶ್ಕಿಲ್ (ಹಿಂದಿ) > ಮುಸ್ಕಿಲ್ (ತುಳು) =ಕಷ್ಟ, ಆಪತ್ತು. ಯಾನ್ ಮಲ್ಲೊಂಜಿ ಮುಕ್ಸಿಲ್ಡ್ ಬೂರ್ದೆ, ದಾದ ಮನ್ಪುನಿ ಇತ್ತೆ (ತುಳು) ನಾನು ದೊಡ್ಡದೊಂದು ಆಪತ್ತಿನಲ್ಲಿ ಬಿದ್ದಿದ್ದೇನೆ. ಏನು ಮಾಡುವುದೀಗ?
(೪೦) ಮಾಲ್ (ಹಿಂದಿ) > ಮಾಲ್ (ತುಳು) =ವಸ್ತು ಒಂಜಿ ರಡ್ಡ್ ರೂಪಾಯಿ ಎಚ್ಚ ಕಮ್ಮಿ ಆಂಡಲಾ ಮಲ್ಲೆ ಅತ್ತ್, ಮಾಲ್ ಎಡ್ಡೆ ಉಪ್ಪೊಡು ತೂಲೆ (ತುಳು) ಒಂದೆರಡು ರೂಪಾಯಿ ಹೆಚ್ಚು ಆದರೂ ಚಿಂತಿಲ್ಲ ನೋಡಿ, ವಸ್ತು ಚೆನ್ನಾಗಿ ಇರಬೇಕು.
(೪೧) ಪಡೋಸಿ (ಹಿಂದಿ) = ನೆರೆಹೊರೆಯ, ಪಡೋಸಿ > ಪಾಸಡಿ = ಗೆಳೆಯ, ಜತೆಗಾರ. ಅಕ್ಷರ ಪಲ್ಲಟದ ಜತೆಯಲ್ಲಿ ಅರ್ಥ ವ್ಯತ್ಯಾಸವನ್ನೂ ಪಡೆದಿದೆ.
(೪೨) ಬೇವಾರ್ಸಿ ಎಂಬ ಬೈಗಳ ಪದದ ಮೂಲರೂಪ ಮತ್ತು ಅರ್ಥವನ್ನು ತಿಳಿದುಕೊಂಡರೆ ಅದರ ತೀಕ್ಷ್ಣತೆ, ಖಾರ ಸ್ಪಲ್ಪ ಕಡಿಮೆಯಾಗ ಬಹುದೇನೋ?
ವಾರೀಸ್ದಾರ ಎನ್ನುವ ಶಬ್ಧಕ್ಕೆ ನಿಷೇಧಾರ್ಥ ಪ್ರತ್ಯಯ ‘ಬೇ’ ಎನ್ನುವುದು ಸೇರಿದಾಗ ಬೇವಾರೀಸ್ದಾರ್ = ಬೇವಾರೀಸುದಾರ ಎಂಬ ಶಬ್ಧ ಉಂಟಾಯಿತು. ಇದರ ಸಂಕ್ಷಿಪ್ತರೂಪ ಬೇವಾರಿಶ್ > ಬೇವಾರ್ಸಿ (ತುಳು) ಆಗಿದೆ. ರಕ್ಷಕನಿಲ್ಲದವನು, ಯಾರ ಹಕ್ಕಿಗೂ ಒಳಪಡದವನು ಎಂದರ್ಥ. ‘ಬೇವಾ’ ಎಂದರೆ ವಿಧವೆ = ರಕ್ಷಕರಿಲ್ಲದವಳು. ಈ ಶಬ್ಧದ ಸಾಹಚರ್ಯದಿಂದ ಬೇವಾರ್ಸಿ ಎಂದರೆ ವಿಧವೆ ಹುಟ್ಟಿದವ ಎಂಬ ಹೀನ ಅರ್ಥ ಹುಟ್ಟಿ ಅದು ತುಳುವಿನ ಬೈಗಳ ಪದಗಳಲ್ಲಿ ಮೊದಲಿನದ್ದಾಗಿದೆ.
(೪೩) ವಾರೀಸ್ದಾರ (ಹಿಂದಿ) ಎನ್ನುವುದು ಕೂಡಾ ‘ವಾರೀಸ್ದಾರ’ ಆಗಿ ಉಳಿದು ‘ನಿನ್ನ ವಾರೀಸ್ದಾರೆರೆ ಏರ್ ಲೆತ್ತೊಂದು ಬಲ ಪೋ? (ತುಳು) ನಿನ್ನ ವಾರೀಸುದಾರರು ಯಾರು ಕರಕೊಂಡು ಬಾ ಹೋಗು!
(೪೪) ಚೋಟ್ (ಹಿಂದಿ) = ಗಾಯ ನೋವು ಉಂಟುಮಾಡುವುದು ಎಂಬರ್ಥದಲ್ಲಿ ನುಡಿಗಟ್ಟು ಇದೆ. ನೋವುಂಟು ಮಾಡುವುದು ಯಾವ ರೀತಿಯಿಂದಲೂ ಆಗಬಹುದು. ದೈಹಿಕವಾದ ನೋವಿಗಿಂತ ಹೆಚ್ಚಾಗಿ ಮಾನಸಿಕ ನೋವು ಉಂಟುಮಾಡುವಲ್ಲಿ ಮೋಸ ಮಾಡುವುದು ಒಂದು ಮುಖ್ಯ ರೀತಿ. ಚೋಟು ಹಿಕಿಸುವುದು ಎಂದರೆ ಮೋಸ ಮಾಡುವುದೆಂಬ ಅರ್ಥದಲ್ಲಿ ಪ್ರಯೋಗವಿದೆ.
ಚೋಟ್ ಪತ್ತವು ನೆಟ್ಟ್ ಬಾರೀ ಮಲ್ಲ ಆಸಾಮಿ (ತುಳು)
ಮೋಸ ಮಾಡುವುದರಲ್ಲಿ ಭಾರೀ ದೊಡ್ಡ ಮನುಷ್ಯ.
ಇಲ್ಲಿ (೪೫) ಆಸಾಮಿ ಕೂಡಾ ಅರಬ್ಬಿಯ ‘ಆದಮೀ’ ಎಂಬುದರಿಂದಲೇ ಬಂದಿರಬೇಕು. ಆದಮೀ > ಆಸಾಮಿ. ಈ ಶಬ್ಧವು ಯಹೂದಿ, ಇಸ್ಲಾಂ, ಕ್ರೈಸ್ತ ಧರ್ಮಗಳ ನಂಬಿಕೆಯಂತೆ ಮೊದಲ ಮಾನವನ ಹೆಸರಾದ ಆದಮ್ನಿಂದಲೇ ಬಂದಿರಬೇಕು.
(೪೬) ನುಕ್ಸಾನ್ (ಅರಬೀ) = ಹಾನಿ, ನಷ್ಟ, ದೋಷ ಎಂಬ ಅರ್ಥವುಳದ್ದು.
ನುಕ್ಸಾನ್ > ಲುಕ್ಕಾನ್ (ತುಳು) ನಕಾರಕ್ಕೆ ಲಕಾರ ಪ್ರಯೋಗ ತುಳುವಿನಲ್ಲಿ ಸಾಕಷ್ಟು ಇದೆ. ಉದಾ : ಮಮ್ಪುನಿ > ಮಲ್ಪುನಿ.
ಈ ಸರ್ತಿದ ಬೆರೊಡು ಬಾರೀ ಲುಕ್ಸಾನ್ ಆಂಡ್(ತುಳು) ಈ ಬಾರಿಯ ವ್ಯಾಪರದಲ್ಲಿ ಭಾರೀ ನಷ್ಟ ಆಯಿತು.
(೪೭) ಬರಕತ್ (ಅರಬೀ) > ಬರ್ಕತ್ (ತುಳು) = ಏಳಿಗೆ, ಸಮೃದ್ಧಿ, ಸೌಭಾಗ್ಯ, ಲಾಭ, ವ್ಯಕ್ತಿನಾಮಗಳಲ್ಲೂ ಪ್ರಯೋಗವಿದೆ ‘ಬರ್ಕತುಲ್ಲಾ’. ಅಪ್ಪೆ ಅಮ್ಮನ್ ದಂಟಿನಾಯೆ ಏಪಲಾ ಬರ್ಕತ್ತಾವೆನಾ (ತುಳು)
ತಾಯಿ ತಂದೆಯನ್ನು ತಿರಸ್ಕರಿಸಿದವನು ಎಂದಾದರೂ ಏಳಿಗೆಯಾದಾನೇ?
(೪೮) ಇಕ್ಮತ್ (ಅರಬೀ) = ಉಪಾಯ
ಆಯೆ ನೆಲ್ಕ ಇಕ್ಮತ್ದಾಯೆ (ತುಳು)
ಅವನು ದೊಡ್ಡ ಉಪಾಯಗಾರ
(೪೯) ಮಿನ್ನತ್ (ಅರಬೀ) > ಮಿನ್ನೆತ್ (ತುಳು) ಮಿನ್ನೊದ್ (ತುಳು) = ವಿನಂತಿ, ಬೇಡಿಕೊಳ್ಳು, ಪ್ರಾರ್ಥಿಸು, ಸಮಾಧಾನಪಡಿಸು, (ರಮಿಸುವುದು).
ಆಯನ್ ಏತಪ್ಪಾ ಮಿನ್ನತ್ ಮನ್ಪುನೀ (ತುಳು)
ಅವನನ್ನು ಎಷ್ಟಪ್ಪಾ ಬೇಡಿಕೊಳ್ಳುವುದು
ಉಂಬೆಗ್ ಮಿನ್ನೊದ್ ಮಲ್ತ್ ದ್ ಸಾಕಾಂಡ್ (ತುಳು)
ಇವನಿಗೆ ಸಮಾಧಾನಪಡಿಸಿ (ರಮಿಸಿ) ಸಾಕಾಯ್ತು
(೫೦) ಮಲಾಮತ್ (ಅರಬ್ಬೀ) = ಬೈಗಳು, ನಿಂದೆ, ಆಪತ್ತು, ತೊಂದರೆ, ರಗಳೆ
ಏರೆಗಾವ್ ಈ ಮಲಾಮತ್ತ್ (ತುಳು)
ಯಾರಿಗಾದೀತು ಈ ಆಪತ್ತು?
ಇರಗ್ದಾಯೆ ಬೋಡಿತ್ತ್ ಂಡ್ ಈ ಮಲಾಮತ್ತ್ (ತುಳು)
ನಿಮಗೆ ಯಾಕೆ ಬೇಕಿತ್ತು ಈ ರಗಳೆ.
(೫೦) ರಖ್ವಾಲಾ (ಹಿಂದೀ) = ರಕ್ಷಕ; ರಖ್ವಾಲೀ = ಇಟ್ಟುಕೊಂಡವಳು. ರಖ್ವಾಲಾ > ರಕ್ಷಣೆಯ ಮೇಲ್ವಿಚಾರಕೆ ಎನ್ನುವ ಹಿನ್ನೆಲೆಯಲ್ಲಿ ಮೇಲ್ವಿಚಾರಣೆಗೆ ‘ರಕ್ಕೋಲೆ’ ಎಂಬ ರೂಪದಲ್ಲಿ ಬಳಕೆ. ಆಡಳಿತ ಎನ್ನುವ ಅರ್ಥವೂ ಬರುತ್ತದೆ.
ಒಂಜಿ ಇಲ್ಲದ ರಕ್ಕೋಲೆ ತೂಪುನ ಕೆಲಸ ಆತ್ಸುಲಬನಾ (ತುಳು) ಒಂದು ಮನೆಯ ಮೇಲ್ವಿಚಾರಣೆ (ಆಡಳಿತ) ನಡೆಸುವುದು ಅಷ್ಟು ಸುಲಭವೇ?
(೫೨) ರಖ್ವಾಲೀ – ಪತ್ನಿಯಲ್ಲದೆ ಉಳಿದ ಹೆಂಡಿರಿದ್ದರೆ ಅವರನ್ನು ಇಟ್ಟುಕೊಂಡವಳು ಎಂಬರ್ಥದಲ್ಲಿ ಬಳಕೆಯಾಗುತ್ತದೆ.
(೫೩) ಫಜೀಹತ್ > ಫಚೀತಿ > ಪಚೀತಿ (ತುಳು) =ಅವಮಾನ, ದುರ್ದೇಶೆ, ಕೆಟ್ಟಹೆಸರು ಎಂರ್ಥದ ಈ ಪದದ ಬಳಕೆ ತುಳುವಿನ್ನಲ್ಲಾಗುವಾಗ ಇದೇ ಅರ್ಥದಲ್ಲಿದ್ದರೂ ಅದರ ತೀವ್ರತೆ ಕಡಿಮೆ.
ಆಯನ ಪಚೀತಿ ತೂಂಡಾ ಏರೆಗಲಾ ಬೊಡ್ಚಿ (ತುಳು)
ಅವನ ಕಷ್ಟ ನೋಡಿದರೆ ಯಾರಿಗೂ ಬೇಡ
(೫೪) ಫಾಯದಾ (ಅರಬೀ) = ಲಾಭ > ಪಾಯಿದೆ > ಪಾಯ್ದೆ (ತುಳು)
ಪಾಯ್ದೆ ಇಜ್ಜಂದೆ ಏರಲಾ ಆಯನ ಸುತ್ತು ನಾಯಿದಲಕ್ಕ ಸುತ್ತು ಬರೆಯೆರ್(ತುಳು)
ಲಾಭವಿಲ್ಲದೆ ಯಾರೂ ಅವನ ಸುತ್ತ ನಾಯಿಯಂತೆ ಸುತ್ತು ಬರಲಾರರು
(೫೫) ಇನ್ಕಾರ್(ಅರಬೀ) = ತಿರಸ್ಕಾರ
ಅಯಗ್ ನನೊರ್ಯನ್ ಇನ್ಕಾರ ಮನ್ಪುನಿ ಬಾರೀ ಕುಸಿ (ತುಳು)
ಅವನಿಗೆ ಇನ್ನೊಬ್ಬನನ್ನು ತಿರಸ್ಕಾರ ಮಾಡುವುದು ಅಂದರೆ ಬಾರೀ ಋಷಿ.
(೫೬) ಮುಲಾಜಮತ್(ಅರಬೀ) = ಸೇವೆ, ನೌಕರಿ. ಈ ಸೇವಾಭಾವ ದಾಕ್ಷಿಣ್ಯದಿಂದ ಸಂಕೋಚಭಾವದಿಂದ ಕೂಡಿರುವುದರಿಂದಲೋ ಏನೋ
ಮುಲಾಜಮತ್ > ಮುಲಾಜ್ = ದಾಕ್ಷಿಣ್ಯ ಎಂಬರ್ಥದಲ್ಲಿ ಪ್ರಯೋಗವಿದೆ.
ಎಂಕ್ಏರೆನಲಾ ಮುಲಾಜ್ಇಜ್ಜಿ (ತುಳು)
ನನಗೆ ಯಾರ ದಾಕ್ಷಿಣ್ಯವೂ ಇಲ್ಲ.
(೫೭) ಸವಾಲ್(ಹಿಂದಿ), (೫೮) ಜವಾಬ್ (ಹಿಂದಿ) > ಸವಾಲ್, ಜವಾಬ್ಎರಡೂ ಹಿಂದಿಯ ಅರ್ಥಗಳಲ್ಲೇ ಪ್ರಯೋಗವಾಗುತ್ತದೆ.
ಆಯನ ಸವಾಲ್ಗ್ (ಪ್ರಶ್ನೆಗ್) ಇಂಬೆನ ಜವಾಬು (ಉತ್ತರ) ಸರಿ ಆಂಡ್ (ತುಳು)
ಅವನ ಪ್ರಶ್ನೆಗೆ ಇವನ ಉತ್ತರ ಸರೀ ಆಯಿತು.
(೫೯) ಜವಾಬ್ದಾರೀ (ಹಿಂದಿ) ಇದಕ್ಕೆ ಪರ್ಯಾಯ ಪದವೇ ಇಲ್ಲದಂತೆ ಬಳಕೆಯಾಗುತ್ತದೆ.
ಮದ್ಮೆ ಆಂಡಲಾ ನನಲಾ ನಿಕ್ಕ್ಜವಾಬ್ದಾರಿ ಇಜ್ಜಂದೆ ಪೋಂಡತ್ತಾ?
ಮದುವೆ ಆದರೂ ಇನ್ನೂ ನಿನಗೆ ಜವಾಬ್ಧರಿ ಇಲ್ಲದೆ ಹೋಯ್ತಲ್ಲಾ?
(೬೦) ಜಬರ್ದಸ್ತ್ (ಅರಬೀ) > ಜಬರ್ದಸ್ತ್ = ಠೀವಿಯುಳ್ಳ, ಗಟ್ಟಿಮುಟ್ಟಾದ
ಸೂಕೆಗ್ಬಾರೀ ಪೊರ್ಲುದ ಜಬರ್ದಸ್ತ್ಆಣ್(ತುಳು)
ನೋಡಲು ಬಾರಿ ಚಂದದ ಜಬರ್ದಸ್ತ್ಹುಡುಗ.
ಇಲ್ಲೇ ನೋಡಲು ಎನ್ನುವುದನ್ನು ಹೀಂದೀ ಪದದಲ್ಲೇ ‘ದೇಕಿಗ್’ (ನೋಡಲು) ಎಂದು ಬಳಸುತ್ತಾರೆ.
ದೇಖನಾ (ಹಿಂದಿ) = ನೋಡುವಿಕೆ > ದೇಕಿ = ನೋಡುವಿಕೆಗೆ.
(೬೧) ದೇಕಿಗ್ ಬಾರಿ ಪೊರ್ಲುದ ಜವನ್ಯೆ (ತುಳು)
ನೋಡಲು ಬಾರಿ ಚಂದದ ಹುಡುಗ
ನಮಸ್ತೆ ಎನ್ನುವ ಪದಕ್ಕೆ ಸಂವಾದಿಯಾಗಿ (೬೨) ‘ಸಲಾಮು’ ಎಂಬ ಪದ
ಇರೆಗ್ ಎನ್ನ ಸಲಾಮು ಉಂಡು (ತುಳು)
ನಿಮಗೆ ನನ್ನ ನಮಸ್ಕಾರವಿದೆ.
(೬೩) ದಿಲ್ದಾರ್(ಅರಬೀ) = ಹೃದಯವಂತ, ಧಾರಾಳೀ
ಆರ್ಬಾರಿ ದಿಲ್ದಾರಿ ಜನ ಮಾರಾಯರೇ (ತುಳು)
ಅವರು ಬಾರಿ ದಾರಾಳೀ ಜನ ಮಹಾರಾಯ್ರರೇ.
ಹೀಗೆ (೬೪) ಲಪಟಾಯಿಸು, (೬೫) ದಸ್ತಗಿರಿ, (೬೬) ನಮೂದಿಸಿ ಮೊದಲಾದ ಪದಗಳು ಕನ್ನಡದಂತೆ ತುಳುವಿನಲ್ಲೂ ಬಳಕೆಯಾಗುತ್ತವೆ ಇವೇ ಅರ್ಥಗಳಲ್ಲಿ.
(೬೭) ದಿವಾಳಿ = ವ್ಯಾಪಾರದಲ್ಲಿ ಪೂರ್ತಿಯಾಗಿ ಸೋಲುವುದು.
ದಿವಾಳಿಯಾದ್ ಊರು ಬುಡ್ನು ಸಾವ್ಕಾರೆರ್ನ ಸುದ್ದಿಯೇ ಇಜ್ಜಿ (ತುಳು).
ದಿವಾಳಿಯಾಗಿ ಊರು ಬಿಟ್ಟ ಸಾಹುಕಾರರ ಸುದ್ದಿಯೇ ಇಲ್ಲ.
(೬೮) ಸಾಹುಕಾರ (ಹಿಂದಿ) > ಸಾವ್ಕಾರ (ತುಳು)
(೬೯) ದಿವಾನ್ (ಹಿಂದಿ) ಮಂತ್ರಿ, ದಿವಾನ್ಖಾನ್= ಒಡ್ಡೋಲಗದ ಚಾವಡಿ.
ಆಯೆ ದಾನೆ ದಿವಾನೆನಾ ಆಯೆ ಪಂಡಿಲೆಕ್ಕ ಕೇಣ್ಯರೆ (ತುಳು)
ಅವನೇನು ಮಂತ್ರಿಯೋ ಅವನೆಂದಂತೆ ಕೇಳು!
(೭೦) ಖಾಸಾ (ಹಿಂದಿ) > ಕಾಸಾ, ಖಾಸಗೀ = ಸ್ವಂತದ್ದು.
ಅಯೆ ಎನ್ನ ಕಾಸಾ ಬಾವೆ (ತುಳು)
ಅವನು ನನ್ನ ಖಾಸಾ ಭಾವ (ಅಕ್ಕನ ಗಂಡ)
(೭೧) ಲಾಯಖ್ (ಹಿಂದಿ) = ಚೆನ್ನಾಗಿರುವುದು, ಸುಂದರವಾದುದು, ಇಷ್ಟವಾದುದು
ಲಾಯಖ್> ಲಾಯಕ್(ತುಳು)
ಆಣ್ ಬಾರಿ ಲಾಯಕುಲ್ಲೇ (ತುಳು)
ಹುಡುಗ ಬಾರಿ ಚೆಂದವಾಗಿದ್ದಾನೆ
(೭೨) ಪಸಂದ್ (ಹಿಂದಿ) = ಇಷ್ಟ > ಪಸಂದ್
ಆಯನ ಪಸಂದ್ಗ್ ಮಲ್ತ್ ಪಾಡ್ಯೆರೆ ಆಯನಜ್ಜೆ ಮಲ್ತ್ ಪಾಡ್ಡಿನ ದಾಲ ಇಜ್ಜಿ (ತುಳು)
ಅವನ ಇಷ್ಟದಂತೆ ಮಾಡಿ ಹಾಕಲು ಅವನಜ್ಜ ಮಾಡಿಟ್ಟಿರುವುದು ಇಲ್ಲಿ ಏನೂ ಇಲ್ಲ.
(೭೩) ಪಗ್ತಾ (ಹಿಂದಿ) = ಒಂದೇ ಸವನೆ
ಪಗ್ತಾ ಟೀವಿ ತೂಂಡಾ ಬೊಕ್ಕ ಪರೀಕ್ಸೆಡ್ ಪಾಸ್ ಆಪುನಿ ಎಂಚ್?
ಒಂದೇ ಸವನೆ ಟೀವಿ ನೋಡಿದರೆ ಮತ್ತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಹೇಗೆ?
(೭೪) ಖಾತಿರ್ (ಹಿಂದಿ) = ಅದರ ಸಲುವಾಗಿ > ಐಕಾತ್ರ
ಬಾಲೆಗ್ಸೀತ ಆತ್ಂಡ್ಐಕಾತ್ರ ಕಸಾಯ ಮಲ್ತ್ಕೊರ್ಯೆ
(೭೫) ಖಾತಿರ್ (ಹಿಂದಿ) > ಖಾತ್ರಿ = ನಿಶ್ಚಯವಾಗಿ, ಖಂಡಿತವಾಗಿ
ಕಪ್ಪು ಪುಚ್ಚೆನೇ ಪೇರ್ ಪರ್ತಿನೀಂದ್ಎಂಕ್ ಖಾತ್ರಿ ಉಂಡು. (ತುಳು)
ಕಪ್ಪು ಬೆಕ್ಕೇ ಹಾಲು ಕುಡಿದಿರುವುದೆಂದು ನನಗೆ ನಿಶ್ಚಯವಾಗಿದೆ.
(೭೬) ಅತ್ತರ್ (ಹಿಂದಿ) = ಸುಗಂಧದ್ರವ್ಯ
ಮದ್ಮಲೆಗ್ ಅತ್ತರ್ ಪೂಜೊಡು (ತುಳು)
ಮದುಮಗಳಿಗೆ ಸುಗಂಧದೆಣ್ಣೆ ಪೂಸಬೇಕು
(೭೭) ದ್ರ್ (ಹಿಂದಿ) = ಬಾಗಿಲು, ಖೋಲ್ನಾ = ತೆರೆಯುವುದು = ಇದನ್ನು ಜೊತೆಗೂಡಿಸಿ ದರ್ಬೋಲ್ ಶಬ್ದದಿಂದ > ತರ್ಕೋಲ್ = ಬೀಗದ ಕೈಗಳ ಗೊಂಚಲು.
ಗುತ್ತುದ ಗುರ್ಕಾರ್ತಿನ ಸೊಂಟೊಡು ಬೊಳ್ಳಿದ ತರ್ಕೋಲ್ ಇತ್ತ್ಂಡನೇ ಪೊರ್ಲು (ತುಳು)
ಗುತ್ತಿನ ಯಜಮಾನ್ತಿಯ ಸೊಂಟದಲ್ಲಿ ಬೆಳ್ಳಿಯ ಬೀಗದ ಕೈಗಳ ಗೊಂಚಲು ಇದ್ದರೇನೇ ಚಂದ.
(೭೮) ಗಜೀರಾ (ಹಿಂದಿ) = ಖರ್ಜೂರ. ತುಳುವಿನಲ್ಲಿ ಗಜೀರ ಪಂರ್ದ್ ಎಂಬ ಪ್ರಯೋಗ.
ಜಾತ್ರೆಗ್ ಪೋಂಡಾ ಬನ್ನಗ ಗಜೀರ ಪಂರ್ದ್ ಕನಯೆರೆ ಮರಪ್ಪಡೆ (ತುಳು)
ಜಾತ್ರೆಗೆ ಹೋದರೆ ಬರುವಾಗ ಖರ್ಜೂರ ತರಲು ಮರೆಯಬೇಡಿ.
(೭೯) ನಖರಾ (ಹಿಂದಿ) = ವಯ್ಯಾರ
ಆ ಪೊಣ್ಣ ನಕ್ರಾ ತೂಂಡ ನಮ್ಮ ಇಲ್ಲಗ್ ಪಂಡಿನ ಪೊಣ್ಣತ್ತ್ (ತುಳು)
ಆ ಹುಡುಗಿಯ ವಯ್ಯಾರ ನೋಡಿದರೆ ನಮ್ಮ ಮನೆಗೆ ಹೇಳಿಸಿದ ಹೆಣ್ಣಲ್ಲ!
(೮೦) ಸೂಂಬ್ (ಉರ್ದು) = ತೂತು ಮಾಡುವ ಉಪಕರಣದ ಅರ್ಥ ಬದಲಾಗಿ ತೂತನ್ನೆ ಸೂಂಬ್ ಎಂದು ಪ್ರಯೋಗವಿದೆ.
ಈತ್ ಮಲ್ಲ ಸೂಂಬ್ನ ತೂಂಡ ಉಂದು ಎಲಿ ಅತ್ತ್ಪೆರ್ಗುಡೆನೇ ಮಲ್ತ್ದುಪ್ಪೊಡು (ತುಳು)
ಇಷ್ಟು ದೊಡ್ಡ ತೂತು (ಬಿಲ)ವನ್ನು ನೋಡಿದರೆ ಇದು ಇಲಿಯಲ್ಲ ಹೆಗ್ಗಣವೇ ಮಾಡಿರಬೇಕು.
(೮೧) ದಸ್ತಕತ್ (ಹಿಂದಿ) > ಸಹಿ > ದಸ್ಕತ್
ಸಾಲೆಗ್ ಪೋತಂಡತ್ತಾ ದಸ್ಕತ್ ಪಾಡುನ್! (ತುಳು)
ಶಾಲೆಗೆ ಹೋಗಿದ್ದರೆ ಅಲ್ಲವೇ ಸಹಿ ಹಾಕುವುದು!
(೮೨) ಕಾಗಜ್ (ಹಿಂದಿ) = ಕಾಕಜಿ = ಕಾಗದ, ಪತ್ರ
ಬೇತಕ್ಲೆನ ಕಾಕಜಿ ಓದರೆ ಬಲ್ಲಿ! (ತುಳು)
ಬೇರೆಯವರ ಪತ್ರ ಓದಬಾರದು!
ಕಾಕಜಿನಂ ತೂಕ್ ಪಾಡ್ಯರಾವಂದ್ (ತುಳು)
ಕಾಗದವನ್ನು ಬೆಂಕಿಗೆ ಹಾಕಬಾರದು.
(೮೩) ದೂಸರಾ (ಹಿಂದಿ) = ಎರಡನೆಯದು
ಎನ್ನ ಒಂಜೇ ಪಾತೆರ; ದೂಸ್ರಾ ಇಜ್ಜಿ (ತುಳು)
ನನ್ನದೊಂದೇ ಮಾತು! ಎರಡನೆಯದು ಇಲ್ಲ.
(೮೪) ತಲಾಶ್ (ಹಿಂದಿ) = ಹುಡುಕು > ತಲಾಸ್
ಕಲ್ವೆರೆ ತಾಲಾಸ್ ಮಲ್ಪೆರೆ ಪೋಲೀಸೆರ್ ಬರ್ಪೆರ್ಂದ್ ಗೊತ್ತಾಯಿ ಕೂಡಲೇ ಊರ್ದ ಕೆಲವು ಜವನೆರ್ ಊರುಡ್ದ್ ಪರಾರಿಯಾಯಿನ ಸುದ್ದಿ ಇನಿತ ಪೊಸ ಸುದ್ದಿ
ಕಳ್ಳರನ್ನು ಹುಡುಕಲು ಪೋಲೀಸರು ಬರುತ್ತಾರೆ ಎಂದು ಗೊತ್ತಾದ ಕೂಡಲೇ ಊರಿನ ಕೆಲವು ಯುವಕರು ಊರಿನಿಂದ ಪರಾರಿಯಾದ ಸುದ್ದಿ ಇಂದಿನ ಹೊಸ ಸುದ್ದಿ.
(೮೫) ಫರಾರ್ (ಹಿಂದಿ) = ಓಡಿಹೋಗು > ಪರಾರಿ. ಮೇಲಿನ ವಾಕ್ಯದಲ್ಲೇ ಪರಾರಿ ಪದದ ಪ್ರಯೋಗ ಆಗಿದೆ.
(೮೬) ಆಖೈರ್ (ಹಿಂದಿ) = ಕೊನೆ > ಆಕೆರಿ
ಸಾಲೆಡ್ ಸಭೆತ ಆಕೇರಿಡ್ ರಾಷ್ಟ್ರಗೀತೆ ಪನ್ಪುನು ಸರಿಯಾಯಿನ ಕ್ರಮ
ಶಾಲೆಯಲ್ಲಿ ಸಭೆಯ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವುದು ಸರಿಯಾದ ಕ್ರಮ.
(೮೭) ಕುರ್ಸಿ (ಹಿಂದಿ) > ಕುರ್ಸು = ಕುರ್ಚಿ
ಬಿನ್ನೆರ್ ಬತ್ತೆರ್ ಮಗಾ ಉಲಯಿತ್ತಿನ ಕುರ್ಸು ಕನಾ (ತುಳು)
ನೆಂಟರು ಬಂದರು ಮಗಾ ಒಳಗಿದ್ದ ಕುರ್ಚಿಯನ್ನು ತಾ.
(೮೮) ಮೇಜ್ (ಹಿಂದಿ) = ಮೇಜು
ಆ ಕಾಕಜಿನ್ ಮೇಜಿದ ಮಿತ್ತ್ದೀಲ (ತುಳು)
ಆ ಕಾಗದವನ್ನು ಮೇಜಿನ ಮೇಲೆ ಇಡು.
(೮೯) ಫರಕ್ (ಹಿಂದಿ) = ಪರಕ್ = ವ್ಯತ್ಯಾಸ
ಆ ರಡ್ಡ್ ಸೀರೆಡ್ ದಾದ ಪರಕ್ ಉಂಡು. ತೂಯೆರೆ ಒಂಜೇ ಲೆಕ್ಕ ಉಂಡತ್ತಾ? (ತುಳು)
ಆ ಎರಡು ಸೀರಗಳಲ್ಲಿ ಏನು ವ್ಯತ್ಯಾಸ ಉಂಟು. ನೋಡಲು ಒಂದೇ ರೀತಿ ಇದೆಯಲ್ಲಾ?
(೯೦) ಜಗಹ್ (ಹಿಂದಿ) = ಜಾಗ = ಸ್ಥಳ
ಇತ್ತೆ ಜಾಗೊಗು ದುಡ್ಡು ಪಾಡ್ಂಡ ನಷ್ಟ ಅವಂದ್. ಬ್ಯಾಂಕ್ಡ್ದೀಪುನೆಡ್ದ್ಉಂದುವೇ ಎಡ್ಡೆ (ತುಳು)
ಈಗ ಸ್ಥಳಕ್ಕೆ (ಖರೀದಿಗೆ) ಹಣ ಹೂಡಿದರೆ ನಷ್ಟವಾಗಲಾರದು. ಬ್ಯಾಂಕಲ್ಲಿ ಇಡುವುದಕ್ಕಿಂತ ಇದುವೇ ಒಳ್ಳೆಯದು.
(೯೧) ಖರೀದ್ನಾ (ಹಿಂದಿ) = ಕೊಂಡುಕೊಳ್ಳುವುದು (ಖರೀದಿ)
ಆಯೆ ಕುಡ್ಲಡ್ಜಾಗೆ ಖರೀದಿ ಮಲ್ತ್ದೆಗೆ (ತುಳು)
ಅವನು ಮಂಗಳೂರಿನಲ್ಲಿ ಸ್ಥಳ ಖರೀದಿಸಿದ್ದಾನಂತೆ (ಕೊಂಡು ಕೊಂಡಿದ್ದಾನಂತೆ)
(೯೨) ಬಿಲ್ಕುಲ್ (ಹಿಂದಿ) = ಬಿಲ್ಕುಲ್=ಖಂಡಿತಾ
ಯಾನ್ ಬರ್ಪುಜಿ ಪಂಡಾ ಬರ್ಪುಜಿ. ಬಿಲ್ಕುಲ್ ಬರಯೆ (ತುಳು)
ನಾನು ಬರುವುದಿಲ್ಲ ಅಂದರೆ ಬುರುವುದಿಲ್ಲ. ಖಂಡಿತಾ ಬರಲಾರೆ!
(೯೩) ಸಾಬೀತ್ (ಹಿಂದಿ) ಸಾಬೀತ್ ಸ್ಪಷ್ಟಪಡಿಸು, ಸತ್ಯವೆಂದು ಸಿದ್ಧಪಡಿಸು
ನಿಕ್ಕ್ ಗೊತ್ತಿತ್ತ್ಂಡ ಸಾಬೀತ್ ಮಲ್ತದ್ ತೋಜ್ಪಾವು ! (ತುಳು)
ನಿನಗೆ ಗೊತ್ತಿದ್ದರೆ ಸತ್ಯೆವೆಂದರೆ ಸಿದ್ಧಪಡಿಸಿ ತೋರಿಸು.
(೯೪) ತಾಕತ್ (ಹಿಂದಿ) > ತಾಕತ್ = ಶಕ್ತಿ, ಸಾಮರ್ಥ್ಯ
ಸತ್ಯದ ತಾಕತ್ದ ಎದುರಡ್ ದುಡ್ಡ್ದ ತಾಕತ್ ಏಪಲಾ ಉಂತಂದ್(ತುಳು)
ಸತ್ಯದ ಶಕ್ತಿಯ ಎದುರಲ್ಲಿ ದುಡ್ಡಿನ ಶಕ್ತಿ ಎಂದೂ ನಿಲ್ಲದು.
(೯೫) ಫಕೀರ್ (ಹಿಂದಿ) > ಫಕೀರ – ಸಾಧು, ಸಂತ
ತುಳುವಿನಲ್ಲಿ ಫಕೀರ ಎನ್ನುವ ಅಂಕಿತನಾಮ ಹಿಂದೆ ಇತ್ತು.
ಪಕೀರಗ್ ಪಿಕ್ರ್ ಇಜ್ಜಿ ಎನ್ನುವುದು ಒಂದು ನುಡುಗಟ್ಟು.
(೯೬) ಸಂತನಾದವನಿಗೆ ಪಿಕ್ರ್ (ಹಿಂದಿ) > ಪಿಕ್ರ್= ಚಿಂತೆ ಇಲ್ಲ ಎಂದು ಅರ್ಥ.
(೯೭) ಜಮೀನ್ (ಹಿಂದಿ) ನೆಲ, ಸ್ಥಳ, ಜಾಗೆ
ಜಮೀನ್ದಾರ = ಸಾಕಷ್ಟು ಭೂಮಿಯುಳ್ಳವ, ತುಳುವಿನಲ್ಲೀ ಇದೇ ಅರ್ಥದಲ್ಲಿ ಬಳಕೆ ಇದೆ.
(೯೮) ಚಾರ್ಸೋ ಬೀಸ್ಎಂಬುದು ನುಡಿಗಟ್ಟು. ಪೋರ್ಟ್ವೆಂಟಿ ಎಂದು ಇಂಗ್ಲಿಷ್ನಲ್ಲಿ ಇದ್ದಂತೆ = ಮೋಸಗಾರ.
ಆಯೆ ಮಲ್ಲ ಚಾರ್ಸೋ ಬೀಸ್
ಅವನು ಬಹುದೊಡ್ಡ ಮೋಸಗಾರ
(೯೯) ಸಾಡೇ ಸಾತ್ಏಳೂವರೆ ಎಂಬೂದೂ ಒಂದು ನುಡಿಗಟ್ಟು.
ಆಯೆ ಒಂತೆ ಸಾಡೇ ಸಾತ್(ತುಳು)
ಅವನು ಪೂರ್ತಿ ಸರಿಯಾಗಿಲ್ಲ ಎಂಬರ್ಥ.
(೧೦೦) ತಲವಾರ್(ಹಿಂದಿ) = ಯುದ್ಧದಲ್ಲಿ ಬಳಸುವಂತಹ ಉದ್ದದ ರಬ್ಬರಿನಂತೆ ಬಗ್ಗಿಸಬಹುದಾದ ಖಡ್ಗದಂತೆ ಇರುವ ಕತ್ತಿ. ಇದರ ಅಟವನ್ನು ಮೆರವಣಿಗೆಯಲ್ಲಿ ಕಾಣಬಹುದು. ಇದು ಒಂದು ನಾಮಪದ. ಅದೇ ಅರ್ಥದಲ್ಲಿ ರೂಪದಲ್ಲಿ ಬಳಕೆಯಾಗುತ್ತದೆ.
(೧೦೧) ಚುಕ್ತಾ (ಹಿಂದಿ) = ಮುಗಿಸು
ಲೆಕ್ಕ ಚುಕ್ತಾ ಮಲ್ತ್ಬುಡು (ತುಳು)
ಲೆಕ್ಕಚಾರ ಮುಗಿಸಿಬಿಡು.
(೧೦೨) ತಾಲೀಮ್ (ಹಿಂದಿ) – ತಾಲೀಮು = ಅಭ್ಯಾಸ.
ಯುದ್ಧಕ್ಕಾಗಿ ಸೈನಿಕರು ತಾಲೀಮು, ನಾಟಕ ಪ್ರದರ್ಶನಕ್ಕಾಗಿ ರಂಗ ತಾಲೀಮು. ಇದೇ ಅರ್ಥದಲ್ಲಿ ಬಳಕೆ
(೧೦೩) ಜರ್(ಹಿಂದಿ) > ಜರಿ. ಸೀರೆಯಲ್ಲಿರುವ ಜರಿ (ಚಿನ್ನ, ಬೆಳ್ಳಿ ಅಥವಾ ತಾಮ್ರದ ನೂಲುಗಳು) ಇದೇ ಅರ್ಥದಲ್ಲಿ ಬಳಕೆ.
(೧೦೪) ಪೇಟೀ (ಹಿಂದಿ) > ಪೆಟ್ಟಿಗೆ ಇದೇ ಅರ್ಥದಲ್ಲಿ ಬಳಕೆ.
(೧೦೫) ದೂರ್ದೂರ. ಪ್ರಯೋಗದಲ್ಲಿ ಎಲ್ಲಿ ಹೋಗುವುದು ಎಂಬರ್ಥದ ವಾಕ್ಯ ಪ್ರಯೋಗದಲ್ಲಿ ಎಲ್ಲಿ ಎಂಬುದು ಅಪಶಕುನ ಎಂಬ ನಂಬಿಕೆಯಿಂದ ತುಳುವಿನಲ್ಲಿ ದೂರ ಪೋಪರ್? =ಎಲ್ಲಿ ಹೋಗುವಿರಿ?
(೧೦೬) ಬನಾವಟ್ (ಹಿಂದಿ) = ಕೃತಕ, ನಕಲಿ > ಬನಬಟ್ಟೆ = ದೀರ್ಘ ಕಾಲ ಬಾಳ್ವಿಕೆ ಬಾರದ
ಎಂಚಿನ ಬನಬಟ್ಟೆದ ಬಾಜನ ಮಾರಾಯ? (ತುಳು)
ಎಂತಹ ನಕಲಿ ಪಾತ್ರೆ ಮರಾಯ?
(೧೦೭) ಕುಸ್ತಿ (ಹಿಂದಿ) -ಕುಸ್ತಿ -ಯುದ್ಧವಿದ್ಯೆಯ ಒಂದು ವಿಧ. ಈಗ ಪ್ರದರ್ಶನ ಕಲೆ. ಅದೇ ಅರ್ಥದಲ್ಲಿ ಬಳಕೆ.
(೧೦೮) ಹುಕುಂ (ಹಿಂದಿ) > ಉಕುಂ =ಆಜ್ಞೆ
ಎಂಕ್ಉಕುಂ ಮಲ್ಪೆರೆ ಆಯೆ ಏರ್ಎನ್ನ ಅಮ್ಮೆನಾ?
ನನಗೆ ಆಜ್ಞೆ ಮಾಡಲು ಅವನೇನು ನನ್ನ ಅಪ್ಪಾನಾ?
(೧೦೯) ಬರ್ಕಾಸ್ತ್ (ಹಿಂದಿ) > ಬರ್ಕಾಸ್ತ್ = ಮುಗಿಸುವುದು, ಮುಗಿಯಿತು.
ಈ ಪದೊಡ್ದು ಎನ್ನ ಬರವು ಬರ್ಕಾರ್ಸ ಮಲ್ಪೊಲಿ ಪಂಡ ಬರ್ಕಾಸ್ತ್ ಮಲ್ಪುನಿ ಸಭೆ, ಪಂಚಾಯ್ತಿನ್ ಅತ್ತಂದೆ ಬರವುನ್ ಅತ್ತ್ ಅಂದ್ ಪನ್ಪರಾ. ಕಂಡಿತಾ ಸರಿ ಅಂದೇ ಪನ್ಪೆ!
ಈ ಪದದಿಂದ ನನ್ನ್ ಬರಹ ಬರ್ಕಾಸ್ತ್ (ಮುಗಿಸು) ಮಾಡೋಣ ಅಂದರೆ ಬರ್ಕಾಸ್ತ್ ಮಾಡುವುದು ಅಂದರೆ ಸಭೆ, ಪಂಚಾಯ್ತಿ, ಚರ್ಚೆ ಗಳನ್ನಲ್ಲದೆ ಬರಹವನ್ನಲ್ಲ ಅನ್ನುತ್ತೀರಾ! ಖಂಡಿತಾ ಸರಿ ಎಂದೇ ಹೇಳುತ್ತೇನೆ!
ಹೀಗೆ ಶಬ್ಧಗಳು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸೇರಿಗೆಯಾಗಿ ಅಲ್ಲಿ ಅಪರಿಚಿತ ಅನ್ನಿಸಿಕೊಳ್ಳದೆ ಪ್ರಯೋಗವಾಗುವುದು ಭಾಷೆಯ ಜೀವಂತಿಕೆಯ ಲಕ್ಷಣ. ಹಾಗೆಯೇ ಒಂದು ಭಾಷೆಯೊಳಗಣ ಶಬ್ಧಗಳು ಒಂದು ಸಾಂಸ್ಕೃತಿಕ ಜಗತ್ತನ್ನು, ಸಾಮಾಜಿಕ ಬದುಕನ್ನು, ಚಾರಿತ್ರಿಕ ಸತ್ಯಗಳನ್ನು ಅನಾವರಣಗೊಳಿಸುತ್ತವೆ. ಶಬ್ಧಗಳ ಕೊಳ್ಕೊಡುಗೆ ಇರಬಹುದಾದ ವಾಸ್ತವಿಕತೆಯ ಅಧ್ಯಯನ ನಿಜಕ್ಕೂ ರೋಮಾಂಚನಗೊಳಿಸುವಂತಹದು. ಈ ದೃಷ್ಟಿಯಿಂದ ಶಬ್ಧಗಳು ಸೇರಿಕೊಂಡ ಕಾಲ, ಹಿನ್ನೆಲೆಗಳ ಅಧ್ಯಯನ ಅನಿವಾರ್ಯ. ಯಾಕೆಂದರೆ ಈ ಶಬ್ಧಗಳು ಪ್ರಯೋಗವಾಗುವ ಮೊದಲ ಅವುಗಳಿಗೆ ಪರ್ಯಾಯವಾಗಿ ಶಬ್ಧಗಳು ಇರಲಿಲ್ಲವೇ? ಎಂಬ ಪ್ರಶ್ನೆ ಎಳುವುದು ಸಹಜ. ಉದಾಹರಣೆಗೆ ಜನಸಾಮಾನ್ಯರ ತುಳುವಿನ ಆಡುಮಾತಿನಲ್ಲಿ ಪುಸ್ತಕಕ್ಕೆ ಸಂವಾದಿಯಾದ ಪದ ‘ಬೂಕ್’ ಆದರೆ, ಇಂಗ್ಲೀಷ್ನ ಪ್ರಭಾವಕ್ಕಿಂತ ಮೊದಲು ಈ ಮಂದಿಗೆ ಪುಸ್ತಕಗಳ ಪರಚಯವೇ ಇರಲಿಲ್ಲ ಎನ್ನುವ ಸತ್ಯದ ದಾಖಲೆಯಾಗುತ್ತದೆ. ಏನೇ ಇರಲಿ, ಯಾವ ಭಾಷೆಯೇ ಆಗಲಿ ಅದು ನಿರಂತರವಾದ ನದಿಯಂತೆ ಹರಿಯುತ್ತಿರಬೇಕಾದರೆ ಜನಸಾಮಾನ್ಯರು ಆಡುವಂತಿರಬೇಕು.
ಜನ ಆಡುವ ಭಾಷೆಗೆ ಅನಿವಾರ್ಯವಾಗಿ ಇತರ ಭಾಷೆಯ ಶಬ್ದಗಳು ಪರಕೀಯವಾಗದೆ ಅದರದ್ದೇ ಎನ್ನುವಷ್ಟು ಸೇರಿಹೋದಾಗ ಮಡಿವಂತಿಕೆ ಮಾಡದೆ ಭಾಷೆಯನ್ನು ಬೆಳಸುವುದು ಭಾಷಾಭಿಮಾನದ ಸಲ್ಲಕ್ಷಣವೇ ಹೊರತು, ಸಂಸ್ಕೃತಿಯ ವಿಕಾಸವೇ ಹೊರತು ವಿನಾಶವಲ್ಲ. ಹಿಂದಿ, ಉರ್ದು, ಫಾರ್ಸಿ, ಅರಬ್ಬೀ ಪದಗಳು ಸಾಕಷ್ಟು ತುಳುವಿನಲ್ಲಿ ಇಂದಿಗೂ ಬಳಕೆಯಾಗುತ್ತಿದ್ದು ಅವುಗಳ ಬೆನ್ನ ಹಿಂದೆ ಬೆಂಬಿಡದೆ ಹೋದರೆ ಇನ್ನೂ ಸಾವಿರಾರು ಪದಗಳು ಸಿಗಬಹುದು. ಸದ್ಯ ನೂರ ಏಳಕ್ಕೆ ಎಣಿಕೆ ಮುಗಿಸುತ್ತಿದ್ದೇನೆ. ಇದರ ಬಗ್ಗೆ ನಿಮ್ಮ (೧೧೦) ‘ತಕರಾರು’ (ದೂರು) ಇದ್ದಲ್ಲಿ ಜರೂರಾಗಿ (೧೧೧) ಎನ್ನ ಈ ಬರವುದ ಬಗ್ಗೆ ನಿಕ್ಲೆನ ತಕರಾರು ಇತ್ತ್ಂಡ ಜರೂರ್ಡೆ ಬರೆಲೆ – ಇಂಚ ಪಾತೆರೊಂದು ಇತ್ತ್ಂಡ ನನಲಾತ್ ಸಬ್ದೊಲ್ ದೆಂಗ್ದ್ ಕುಲ್ಲ್ದಿನ ಎದುರುಗ್ ಬರು. ನಿಕುಲ್ಲಾ ಈ ಸಬ್ದೊದೊಟ್ಟುಗು ಗೊಬ್ಬೊಲಿ ಅತ್ತೆ! ಹೀಗೆ ಮಾತನಾಡುತ್ತಲೇ ಇದ್ದರೆ ಇನ್ನಷ್ಟು ಶಬ್ದಗಳು ಅಡಗಿ ಕುಳಿತವುಗಳು ಎದುರಿಗೆ ಬಂದಾವು ನೀವು ಕೂಡಾ ಶಬ್ದಗಳೊಂದಿಗಿನ ಆಟ ಆಡಬಹುದಲ್ಲವೇ?
Leave A Comment