ಗಾದೆಯ ಬಳಕೆ

ಅನಕ್ಷರಸ್ಥ ಗ್ರಾಮೀಣರು ಮಾತನಾಡುವುದೇ ಗಾದೆಯ ಮೂಲಕ. ತಮ್ಮ ಮಾತಿಗೆ ಅಧಿಕೃತತೆ ಬರುತ್ತದೆ ಗಾದೆಯ ಬಳಕೆಯಿಂದ ಎಂದು ಅವರು ಭಾವಿಸುತ್ತಾರೆ. ಗಾದೆಯ ಬಳಕೆಯಿಂದ ಅಭಿವ್ಯಕ್ತಿಗೆ ಸಂಕ್ಷಿಪ್ತತೆ, ಬೆಡಗು ಹಾಗೂ ವ್ಯಂಜಕಶಕ್ತಿ ಬರುತ್ತದೆ. ಪಾಡ್ದನಗಳಲ್ಲಿ ಕೆಲವೊಂದು ಗಾದೆಯ ಬಳಕೆಯಾಗಿರುವುದನ್ನು ಗುರುತಿಸಬಹುದು.

ತುಳು – ಪಂಡ್‌ಕೊರಿ ಪಾತೆರ ಕಟ್ಟ್‌ಕೊರಿ ಪೊದಿಕೆ
ಕನ್ನಡ – ಹೇಳಿಕೊಟ್ಟ ಮಾತು ಕಟ್ಟಿ ಕೊಟ್ಟ ಬುತ್ತಿ

ತುಳು – ಅಂಡೆದ ಬಾಯಾಂಡಲ ಕಟ್ಟೊಲಿ ದೊಂಡೆದ ಬಾಯಿ ಕಟ್ಟೆರೆ ಆವಂದ್‌
ಕನ್ನಡ – ಅಂಡೆಯ ಬಾಯಾದರೂ ಕಟ್ಟಬಹುದು. ಗಂಟಲ ಮಾತು ಕಟ್ಟುವುದು ಆಗದು

ತುಳು – ಎಕ್ಕಿನಯ ಬಂಜಿ ತೂವೊಡು ಮಾಸಿನಾಯ ತರೆ ತೂವೊಡು
ಕನ್ನಡ – ಸೋತವನ ಹೊಟ್ಟೆ ನೋಡಬೇಕು ಬಸವಳಿದವನ ತಲೆ ನೋಡಬೇಕು

ತುಳು – ಮಲ್ದಿನ ಕರ್ಮ ಆಯೆನ ತರೆಕೇ ಸಿಗೆವುಂಡ್‌
ಕನ್ನಡ – ಮಾಡಿದ ಕರ್ಮ ಅವನ ತಲೆಗೆ ಬರುತ್ತದೆ

ತುಳು – ಪಲ್ಲೆದ ಕಲಟ್‌ಸಾಲ ಇದ್ದಿ ತವುಡುಗು ಪೊಲಿ ಇದ್ದಿ ತಾರೊಗು ಬಡ್ಡಿ ಇದ್ದಿ
ಕನ್ನಡ – ಪಲ್ಲೆಯ ಕಳದಲ್ಲಿ ಸಾಲ ಇಲ್ಲ, ತೌಡಿಗೆ ಸಮೃದ್ಧಿ ಇಲ್ಲ, ತಾರಕ್ಕೆ ಬಡ್ಡಿ ಇಲ್ಲ

ತುಳು – ಪೊಣ್ಣು ಸೆರಂಗ್‌ಕೊರಯಲ್‌ಆಣ್‌ಜುಟ್ಟು ಕೊರಾಯೆ
ಕನ್ನಡ – ಹೆಣ್ಣು ಸೆರಗು ಕೊಡಳು ಗಂಡು ಜುಟ್ಟು ಕೊಡನು

ತುಳು – ಜತ್ತ್‌ಪೋಯಿ ಪೊಣ್ಣಗ್‌ಲೆತ್ತ್‌ಪಂಡಿ ಬರಗೆ
ಕನ್ನಡ – ಇಳಿದಿ ಹೋದ ಹೆಣ್ಣಿಗೆ ಕರೆದು ಹೇಳಿದ ವಿಚ್ಚೇದನವಂತೆ

ಬಳಕೆ ತಪ್ಪಿದ ಪದಗಳು

ಪಾಡ್ದನಗಳು ವರ್ತಮಾನದ ಫಲಿತವೂ ಹೌದು, ಪರಂಪರೆಯ ಬಳವಳಿಯೂ ಹೌದು. ಹೀಗಾಗಿ ಪರಂಪರೆಯಿಂದ ಇಳಿದು ಬಂದ ಮೌಲ್ಯಗಳ ಜೊತೆಗೆ ಭಾಷೆಯ ಚಹರೆಯನ್ನು ಉಳಿಸಿಕೊಂಡಿರುತ್ತದೆ. ಸಾಮಾನ್ಯವಾಗಿ ಮೌಖಿಕ ಕವಿಗಳು ಪಾಡ್ದನಗಳನ್ನು ಕಟ್ಟುವ ಸಂದರ್ಭದಲ್ಲಿ ದಿನಬಳಕೆಯ ಮಾತಿನ ಭಾಷೆಯನ್ನು ಮೀರಿ ಪರಂಪರೆಯಿಂದ ಉಳಿಸಿಕೊಂಡು ಬಂದ ಬಳಕೆ ತಪ್ಪಿದ ಪದಗಳನ್ನು ಬಳಸುವುದಿದೆ. ತುಳು ಪಾಡ್ದನಗಳಲ್ಲಿ ಇಂತಹ ಅನೇಕ ವಿಶಿಷ್ಟ ಪದಗಳ ಕಾಣಿಸುತ್ತವೆ. ಭಾಷೆಯ ಹಳಮೆಯನ್ನು ಪುನರ್ರಚಿಸುವ ನಿಟ್ಟಿನಲ್ಲಿ ಇಂತಹ ಪದಗಳು ಉಪಯುಕ್ತವಾಗುತ್ತವೆ.

ತುಳು ಕನ್ನಡ
ನೆಡಿಯನಿ ತೊಳೆಯುವುದು
ನಿರ್ಪು ಪಕ್ಕ, ಸಮೀಪ
ಊಂದುನಿ ಒತ್ತು (ಕ್ರಿಯಾಪದ)
ತೊಡುತ್ತರೆ ಮರಿಗೆ
ಸಿಗೆವುನಿ ತುಂಬು, ಪೂರ್ಣವಾಗು
ಬಯ್‌ ನೆಲಸು
ಬೇದುನಿ ಕೇಳಿಸು
ಸಿರಾವುನಿ ಕಟ್ಟಿಸು, ರಚಿಸು
ಕಾಲ್ತೆ ಬೆಳಗ್ಗೆ
ಮಾಲ್ತೆ ಸಂಜೆ
ಆರುನಿ ಅಳು
ಕೊಲ್ಪು ಸತ್ವ, ಸಾಮರ್ಥ್ಯ
ಸೊಲಮನ ಅಭ್ಯಂಜನ
ಪಗ್‌ರ್‌ ಸನ್ನೆ
ಮರಪ್ಪಾವು ಬೀಳಿಸು
ನೇರಡೆಕಾಂಡೆ ಮುಂಜಾನೆ
ತಟ್ಟತವಯಿ ವಿಳಂಬ
ಚಿನ್ನದನ ಮಾಸಲು ಬಟ್ಟೆ
ತೆರ್ಪು ಇಡು
ನಿರ್ವ ರೂಪ
ಅಕಿಲಾಸ ಬಾಯಾರಿಕೆ
ಅಜೆ ಬಟ್ಟೆ ಒಣಗಿಸಲು ಕಟ್ಟಿದ ಕೋಲು
ಅಡೆಕ್ಕ ಒಪ್ಪವಾದ, ವಿಧೇಯ
ಅನ್ಯಮನ್ಯ ಅನ್ಯೋನ್ಯ?
ಅರಿಯ ಮಣ್ಣಿನ ಚಿಕ್ಕ ಕುಡಿಕೆ
ಅಲವು ಹದಮಾಡಿದ ಕಬ್ಬಿಣ
ಅಲೆಂಗಿ ಹೂಮಾಲೆ
ಆರ್‌ ಬೊಬ್ಬಿಡು, ಕುಡಿಯು
ಇಡ್ಕಲ್ಲ ಇಡಿಯಾದ
ಇಚ್ಚಿತ್ತ ಕಣ್ಣೀರು
ಎಕ್ಕಿನಾಯೆ ಸೋತವನು
ಎದ್ದಾಡು ತಿರುಗಾಡು
ಎಯಿ ಬಾಣ
ಏಳ್‌ಗಿಂಡ್‌ಕೋಪ ವಿಪರೀತ ಸಿಟ್ಟು
ಒಡಿಪ್ಪು ಬಗ್ಗಿಸು
ಓದಿಗ ಓದುವಿಕೆ
ಓಲೆಗ ನಮಸ್ಕಾರ, ಸಿರಿ ದೈವವನ್ನು ಮೈಮೇಲೆ ಆವಾಹಿಸಿ ಕೊಳ್ಳುವವನು ಹೇಳುವ ಪ್ರಾರ್ಥನಾರೂಪದ ಹಾಡು
ಕಂತ್‌ ಸಂಧ್ಯಾಕಾಲ
ಕಡುಮುಟ್ಟು ಅತಿಕಠಿಣ
ಕಡೆಕಾಪುನಿ ಇಂದ್ರಿಯಾಸಕ್ತಿ
ಕಣಬಲಿ ಕನಸು
ಕತ್ತರಿಗಾಳಿ ಸುಳಿಗಾಳಿ
ಕಪಿಕಟ್ಟುನಿ ಹೀನೈಸು
ಕಲ್ಕಾ ಕಲಸು
ಕಪ್ಪುರ ಮತ್ತು, ಅಮಲು
ಕಲ್ಕುಂಡೆ ತಾಡವಾಲೆಯಿಂದ ಮಾಡಿದ ಕೊಡ
ಕಲ್ಲೆಚ್ಚಿ ಕಲ್ಲಿನ ಮೇಲೆ ಆವಾಹನೆ ಆಗುವಿಕೆ
ಕಾರಪೊಡಿ ಕಾಲಧೂಳು
ಕಾಲ್ತೆ ಬೆಳಗ್ಗೆ
ಕಾಲ್ಸ ಕಾಲ
ಕಾವೆರಿ ವೇದನೆ, ಉರಿ, ದುಃಖ
ಕುಡುಂಬೆದಿ ಕ್ರಿಶ್ಚಿಯನ್‌ಹೆಂಗಸು
ಕಿರ್ಪಿಲ್‌ ಚಿಕ್ಕ ಗುಡಿಸಲು
ಕಿರ್ವಾಲ್‌ ಚಿಕ್ಕ ಕತ್ತಿ
ಕಿರ್ವಟಿ ಸೊಂಟದಲ್ಲಿ ಸುತ್ತಿದ್ದ ಬಟ್ಟೆಯ ಎಡೆ
ಕಿಲ ಹೊಟ್ಟೆ ಗರ್ಭ
ಕೆಡಗು ಇಳಿಸು
ಕೀರಿಕುತ್ತು ಕೂಗು, ಅರಚು
ಕೇಲಿಗೆ ಘೋಷಣೆ
ಕೊಡಂಜರ ಬಾಯಿತುಂಬ
ಕೊಡಿ ನಿರೆಲ್‌ ದಟ್ಟ ನೆರಳು
ಕೊಡಿ ಪಗರಿ ಹರಿತವಾದ ಬಾಣ
ಕೊಲ್ಟಾ ಸತ್ವ
ಕೈಸೆರಸ್ರೆ ವಿವಾಹ ಬಂಧನ
ತೊಡತ್ತರೆ ಮರಿಗೆ
ತೋಡಾ ಬೋಡಾ ಮೂರ್ಛೆಹೋಗು
ದಲದಂಗೂರ ಡಂಗುರ
ಪಯಿನಾಲಿ ಅಹಂಕಾರ
ಪರ್ಲಾ ಕುಸಿದು ಬೀಳು
ಪಣ್ಣಿ ಹೇಳಿಕೆ
ಪುಲ್ಲೆಬಣ್ಣ ಚಿಗುರುಬಣ್ಣ
ಪಾಯು ಕುಪ್ಪಳಿಸು
ಪೆರಣಪಾಸ್‌ ಮರಣ ಶಯ್ಯೆ
ಪೆರ್ಪು ಸಮೃದ್ಧಿ
ಬಯ್ಯ ಮರದಲ್ಲಿ ತಂಗು
ಬಲಂಜ್‌ ಸುತ್ತು(ಕ್ರಿ)
ಬಾವಿಯು ಭಾವಿಸು
ಬಾರ್ಪು ಸೀಳು
ಮರಪ ಬೀಳಿಸು, ಮರ ಇತ್ಯಾದಿ
ಸಗುಬಗು ಸಮೀಪ
ಸಲ್ಮತ ಶಾಲತ, ಸಮಾಧಾನ
ಸಾಲಿತ್ತ ಕಣ್ಣದೃಷ್ಟಿ
ಸಿಕೆಯು ತುಂಬು

ನುಡಿಗಟ್ಟುಗಳು

ಮೌಖಿಕವಾಗಿ ಆಶುರೂಪದಲ್ಲಿ ರಚನೆಗೊಳ್ಳುವ ಪಾಡ್ಡನಗಳಲ್ಲಿ ನುಡಿಗಟ್ಟುಗಳು, ಪಡೆನುಡಿಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತವೆ, ಇಂತಹ ನುಡಿಗಟ್ಟುಗಳಲ್ಲಿ ಅವಯವ ಪದಗಳು ನೀಡುವ ಅರ್ಥಕ್ಕಿಂತ ಭಿನ್ನವಾದ ಒಂದು ಒಟ್ಟರ್ಥ ಹೊಮುತ್ತಿರುತ್ತದೆ. ಇಂತಹ ನುಡಿಗಟ್ಟುಗಳ ಬಳಕೆಯಿಂದ ಕಾವ್ಯದ ಧ್ವನಿಶಕ್ತಿ ಹೆಚ್ಚುತಿದೆ. ಕಾವ್ಯಾತ್ಮಕ ಹಿಗ್ಗುತ್ತದೆ. ಭಾಷೆಯ ಕಸುವು ಮಿಗಿಲಾಗುತ್ತದೆ. ಲಿಖಿತ ಸಾಹಿತ್ಯ ಪರಂಪರೆಯೊಂದು ಆಕಾರಗೊಳ್ಳುತ್ತಿರುವ ತುಳು ಭಾಷೆ ತನ್ನ ಮೌಖಿಕ ಪರಂಪರೆಯ ಪಡೆನುಡಿಗಳಿಂದ, ನುಡಿಗಟ್ಟುಗಳಿಂದ ಶಕ್ತಿಪೂರಣ ಮಾಡಿಕೊಳ್ಳಬಹುದು. ಪಾಡ್ಡನದಲ್ಲಿ ಬಳಕೆಯಾದ ಕೆಲವು ನುಡಿಗಟ್ಟುಗಳು.

೦೧. ತು. ಬೂಡುಗು ದೂರಾತೆಲ್‌, ಮುಂದಿಲ್‌ಗ್‌ ಮುಟ್ಟಾತೆರ್‌
ಕ.
ಬೀಡಿಗೆ ದೂರವಾಗಿದ್ದರೆ, ಮನೆಯಂಗಳಕ್ಕೆ ಸಮೀಪವಾಗಿದ್ದಾರೆ (ಮುಟ್ಟಾಗು)

೦೨. ತು. ನಡುನೆತ್ತಿಗ್‌ ಕಲ್ಲ್‌ ಪಾಡಿಯೆರ್‌
ಕ.
ನಡುತಲೆಗೆ ಕಲ್ಲು ಹಾಕಿದರು (ಉನ್ನತಿಯನ್ನು ತಡೆಯು)

೦೩. ತು. ಕಾರಮಣ್ಣ್‌ ತರೆಕಾಂಗೆ ಪಾರು ಓಡೋನು ಪೋಪೊಂಡು
ಕ.
ಕಾಲಮಣ್ಣು ತಲೆಗಾಗುವಂತೆ ಓಡಿಕೊಂಡು ಹೋಗುತ್ತಿದೆ (ತೀವ್ರ ಓಟ)

೦೪. ತು. ಕುಲ್ಲು ಕುದಿ ತತ್ತಂಡ್‌ಮೀಯಿ ನೀರ್‌ಉಂತುಂಡು
ಕ.
ಕುಳಿತ ದಿನ ತಪ್ಪಿತು ಮೀವ ನೀರು ನಿಂತಿತು (ಬಸುರಿಯಾಗು)

೦೫. ತು. ಮಿತ್ತ್‌ಪಾರಾಯಿ ಸಾಸೆಮಿಲಾ ತಿರ್ತ್‌ಬೂರಾಂದ್‌
ಕ.
ಮೇಲೆ ಹಾರಿಸಿದ ಸಾಸಿವೆಯೂ ಕೆಳಗೆ ಬೀಳದು (ಜನದಟ್ಟಣೆ)

೦೬. ತು. ಉಲಾಯ್ಯಿತ್ತಿಂಚಿ ಪೇರ್‌ನ್‌ಪಿದಾಯಿ ಗೆಂದತಾರೆದ ಮುದೆಲ್‌ಗ್‌ ಮಯ್ಪಾಡ
ಕ.
ಒಳಗಿನ ಹಾಲನ್ನು ಹೊರಗಿನ ಕೆಂದಾಳೆ ಮರದ ಬುಡಕ್ಕೆ ಚೆಲ್ಲಬೇಡ (ಒಳಗಿನ ರಹಸ್ಯ ವನ್ನು ಹೊರಗೆ ಹಾಕು).

೦೭. ತು. ನಡ್ಸರೆ‌ಗ್‌ನಾಲರಿ ಪುಡನಿ
ಕ.
ನಡುತಲೆಗೆ ನಾಲ್ಕು (ಕಾಳು) ಅಕ್ಕಿ ಹಾಕುವುದು (ಆರ್ಶಿವಾದ)

೦೮. ತು. ಕಾನಬೊಟ್ಟುದರಮನೆಡ್‌ ‘ಕಾ’ ಅನ್ಪಿನಿಕ ಕ್ಕೆ ಒಂಜಾ ಇಜ್ಜಿಗೆ
ಕ.
ಕಾನಬೆಟ್ಟಿನ ಅರಮನೆಯಲ್ಲಿ ‘ಕಾ’ ಎನ್ನುವ ಕಾಗೆಯೂ ಇಲ್ಲ (ನಿರ್ಜನತೆ)

೦೯. ತು. ತೂಕಾ ನೀರ್‌ಗಾ ಅಂದ್‌ಬಂದ್‌ ಆವೊಂದು ಬತ್ತೆರ್‌
ಕ.
ಬೆಂಕಿಗೂ ನೀರಿಗೂ ಸಮವಾಗಿಕೊಂಡು ಬಂದರು (ಬೆಂಕಿ ನೀರಿನಂತೆ ವೇಗವಾಗಿ ಬೆಳೆದರು)

೧೦. ತು. ಪಡ್ಡಾಯಿಡ್ಡ್‌ ನೂರಿನ ಕಕ್ಕೆ ಮೂಡಾಯಿಡ್ಡ್ ಪಿದಾಡೊಂದಿತ್ತ್ಂಡ್‌
ಕ.
ಪಡುದಿಕ್ಕಿಂದ ಒಳನುಗ್ಗಿದ ಕಾಗೆ ಮೂಡು ದಿಕ್ಕಿಂದ ಹೊರ ಹೋಗುತ್ತಿತ್ತು (ಬಡತನದ ಸೂಚನೆ)

೧೧. ತು. ಬಾಲೆಲೆ ನಿಕಲೆ ಅಂಗಾಯಿದ ಮಂಜಲ್‌ ಬರೆ ಮಾಯಿದಿಜ್ಜಿ. ನೆತ್ತಿದ ನೆಯಿಎಣ್ಣೆ ಮಾಜ್‌ದ್‌ಜ್ಜಿ
ಕ.
ಮಕ್ಕಳೆ ನಿಮ್ಮ ಅಂಗೈಯ ಹಳದಿಗೆರೆ ಮಾಸಿಲ್ಲ. ನೆತ್ತಿಯ ನೆಯ್ಯಣ್ಣೆ ಮಾಸಿಲ್ಲ (ಬಾಲ್ಯತನದ ಸೂಚನೆ)

೧೨. ತು. ಬೂಡುಗು ದೂರ ಆತೆರ್‌, ಕಾಡ್‌ಗ್‌ ಮುಟ್ಟ ಆತೆರ್‌
ಕ.
ಬೀಡಿಗೆ ದೂರವಾಗಿದ್ದಾರೆ, ಕಾಡಿಗೆ ಸಮೀಪವಾಗಿದ್ದಾರೆ (ಮುದಿಯಾಗಿ ಸಾವಿನ ಅಂಚಿಗೆ)

೧೩. ತು. ಪೇರ್‌ಡ್‌ ಉಂಡೆರ್‌, ಆಳೆ‌ಟ್‌ ಕೈದೆಕೈರ್‌
ಕ.
ಹಾಲಲ್ಲಿ ಉಂಡರು, ಮಜ್ಜಿಗೆಯಲ್ಲಿ ಕೈ ತೊಳೆದರು (ಶ್ರೀಮಂತಿಕೆಯ ಸೂಚನೆ)

೧೪. ತು. ಇರೆ ಮೋಣೆ ಆಡಿಕ್‌ ಪಾಡಾಯೆ
ಕ.
ನಿಮ್ಮ ಮುಖವನ್ನು ಅಡಿಗೆ ಹಾಕಲಾರೆ (ಮಾನಕ್ಕೆ ಕುಂದು ತರಲಾರೆ)

೧೫. ತು. ಅಕ್ಕಸೊಗು ಬಂಜಿ ಕೊರ್ತಿಜಿ ಯಾನ್‌ ಬೂಮಿಗ್‌ ಬೆರಿ ಕೊರ್ತಿಜಿ
ಕ.
ನಾನು ಆಕಾಶಕ್ಕೆ ಹೊಟ್ಟೆ ನೀಡಿಲ್ಲ, ಭೂಮಿಗೆ ಬೆನ್ನು ನೀಡಿಲ್ಲ. (ಲೈಂಗಿಕ ಸಂಪರ್ಕ ಮಾಡಿಲ್ಲ)

೧೬. ತು. ಮಣ್ಣ್ ತಿಂದ್‌ನೀರ್‌ ಪರೋಡು
ಕ.
ಮಣ್ಣು ತಿಂದು ನೀರು ಕುಡಿಯಬೇಕು (ಬಡತನ)

೧೭. ತು. ಉಂಡಿ ನುಪ್ಪುಡು ತುತ್ತಿ ಕುಟುಂಡು ಬರೊಡು
ಕ.
ಉಂಡ ಅನ್ನದಲ್ಲಿ ಉಟ್ಟ ಬಟ್ಟೆಯಲ್ಲಿ ಬರಬೇಕು (ಕೂಡಲೇ ಬರಬೇಕು)

೧೮. ತು. ಕಕ್ಕೆ ಕೋರಿ ಕಾದಾವುನಕುಲು
ಕ.
ಕಾಗೆ ಕೋಳಿ ಕಾದಿರಿಸುವವರು (ಜಗಳ ತಂದು ಹಾಕುವವರು)

೧೯. ತು. ಪಂಡಿ ನಾಲಾಯಿ ಪೋದು ದೊಂಡೆಡಾವೊಡ್ಡೆಗೆನ
ಕ.
ಹೇಳಿದ ನಾಲಗೆ ಹೋಗಿ ಗಂಟಲಲ್ಲಾದೊಡನೆ (ತತ್‌ಕ್ಷಣವೇ)

೨೦. ತು. ಒಂಜಿ ಸೀರೆತುಪ್ಪೆ ಇತ್ತಿನಡೆ ಏಲ್‌‍ಸಿರಿ ತುಪ್ಪೆ ಆತ್‌ಡ್‌ಗೆ
ಕ.
ಒಂದು ಸಿರಿ ಕಣಜ ಇದ್ದಲ್ಲಿ ಏಳು ಸಿರಿ ಕಣಜ ಆಗಿದೆಯಂತೆ (ಶ್ರೀಮಂತಿಕೆ)

೨೧. ತು. ಮಾಲೋಕ ಕೊರಲತ್ತಾವೊಡು ತನಕ್‌ ತಿನಲತ್ತಾವೊಡು
ಕ.
ಬಹುಲೋಕಕ್ಕೆಲ್ಲ ಕೊಡುವಷ್ಟಾಗಬೇಕು ತನಗೆ ತಿನ್ನುವಷ್ಟಾಗಬೇಕು

೨೨. ತು. ತೆತ್ತಿಡೆ ಕೆಲೆಪಡಯ ಬೊಂಡಡೆ ಅಲಂಕಾಡ
ಕ.
ಮೊಟ್ಟೆಯಲ್ಲಿ ಕೂಗಬೇಡ ಸೀಯಾಳದಲ್ಲಿ ತುಳುಕಬೇಡ (ಎಳೆಯ ವಯಸ್ಸಿನಲ್ಲೇ ಅಂಹಂಕಾರ ತೋರಬೇಡ)

೨೩. ತು. ದೆಂಗೊಂದು ಇರೆಮದೆ ಕಾಯಿಯಾದ್‌ ಬತ್ತೆ
ಕ. ಅಡಗಿಕೊಂಡು ಎಲೆಮರೆ ಕಾಯಿಯಾಗಿ ಬಂದ (ನಿರ್ವೀರ್ಯನಾಗು)

ಉಪಮೆ

ಮಾತಿಗೆ ಒಂದು ಬಗೆಯ ಅರ್ಥಪೂರ್ಣತೆ, ಆಕಾರ ಏರ್ಪಡುವುದೇ ಅಲಂಕಾರದ ಮೂಲಕ. ಈ ಅಲಂಕಾರ ಬಾಹ್ಯ ಪರಿಕರವಾಗದೆ ಅದು ಕಾವ್ಯಸೃಷ್ಟಿಯ ಮೂಲಕ್ಕೆ ಸಂಬಂಧಪಟ್ಟ ಸಂಗತಿಯಾಗಿದೆ. “ಒಂದು ಕಾವ್ಯ ಸೃಷ್ಟಿಯಾಗುವುದೆಂದರೆ ಅದು ಅಲಂಕಾರವಾಗಿ ಪ್ರಕಟವಾಗುವುದೇಂದೇ ಅರ್ಥ ಎಂಬ ಅಭಿಪ್ರಾಯ ಪ್ರಕಟವಾಗಿದೆ” (ಪ್ರಭುಸ್ವಾಮಿ ಮಠ ೧೯೯೬ :೪೫). ಅಂದರೆ ಉಪಮೆ ರೂಪಕ ಮುಂತಾದ ಅಲಂಕಾರಗಳು ಕಾವ್ಯವೊಂದರಲ್ಲಿ ಆಕಾರಪಡೆಯುವ ಕ್ರಮವನ್ನು ಹೇಳುತ್ತವೆ. ಇಲ್ಲಿ ಸಾಮಾನ್ಯವಾಗಿ ಉಪಮೆ, ರೂಪಕಗಳು, ಬರಿಯ ಹೋಲಿಕೆಯಾಗಿ ಬರುತ್ತಿಲ್ಲ. ಕವಿಗೆ ಹೇಳಬೇಕೆಂದಿರುವ ವಿಷಯವನ್ನು ಸಮರ್ಥಿಸಲು ಇದರಿಂದ ಅನುಕೂಲವಾಗುತ್ತದೆ. ಅಂದರೆ ಕವಿಯ ಅನುಭವ ಕೆಲವೊಂದು ವಸ್ತು ಪ್ರತಿರೂಪಗಳ ಮೂಲಕ ಆಕಾರಪಡೆಯುತ್ತದೆ. ಈ ಅಲಂಕಾರಗಳು ಕಾವ್ಯದ ಒಳರಚನೆಯೇ ಹೊರತು ಬಾಹ್ಯಾಂಗವಲ್ಲ. ಮೌಖಿಕ ಕಾವ್ಯಗಳು ಬಾಯಿಂದ ಕಿವಿಗೆ ಸಂವಹನ ಗೊಳ್ಳುವ ಹಿನ್ನೆಲೆಯಲ್ಲಿ ಉಪಮೆ, ರೂಪಕ, ಪ್ರತಿಮೆಗಳು ಲಿಖಿತಕಾವ್ಯಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಅನ್ನಿಸುತ್ತದೆ. ಕೆಲವೊಂದು ದೃಷ್ಟಾಂತಗಳ ಮೂಲಕ ಪಾಡ್ಡನಗಳಲ್ಲಿ ಬಳಕೆಯಾಗಿರುವ ಉಪಮೆಗಳನ್ನು ಪರಿಶೀಲಿಸೋಣ.

ದೇವು ಪೂಂಜನಿಗೂ ಬಂಗರ ದುಗ್ಗಣಕೊಂಡೆಗೂ ನಡೆದ ಯುದ್ಧದ ಸಂದರ್ಭ. ಶತ್ರು ಗುಗ್ಗಣಕೊಂಡೆಯ ಉಡು ಹಿಡಿತದಿಂದ ದೇವು ಪೂಂಜ ತಪ್ಪಿಕೊಂಡ ಬಗೆಯನ್ನು ಹೇಳುವ ಸಂದರ್ಭದಲ್ಲಿ ಪಾಡ್ಡನದಲ್ಲಿ ಬಂದಿರುವ ಉಪಮೆ ಹೀಗಿದೆ.

ತು. ಪೆಲತ್ತರಿ ರಟ್ಟಿಲೆಕೊ ರಟ್ಟಿಯೆಗೆ ದೇವು ಪೂಂಜೆ
ಕ.
ಹಲಸಿನ ಬೀಜ ಚಿಮ್ಮಿದಂತೆ ಚಿಮ್ಮಿದನು ದೇವು ಪೂಂಜ

ಹಲಸಿನ ಸೊಳೆಯೊಳಗಿಂದ ಬೀಜ ಬಿಡಿಸುವ ಸಂದರ್ಭದಲ್ಲಿ ಅದರೊಳಗಿನಿಂದ ಅದು ಚಿಮ್ಮುವ ಬಗೆ ಅದು ಕಂಡವರಿಗೆ ಮಾತ್ರ ತಿಳಿದೀತು. ಆದರ ಹಾರಾಟದ ವೇಗವನ್ನು ದೇವು ಪೂಂಜನ ಚಿಮ್ಮುವಿಕೆ ಉಪಮಿಸಿದುದು ಇದು ಗ್ರಾಮೀಣ ಸಂಸ್ಕೃತಿಯ ಉತ್ಪನ್ನ.

ಇಂತಹ ಕೆಲವು ಉಪಮೆಗಳನ್ನು ಪಟ್ಟಿಮಾಡಿದಾಗ ಪಾಡ್ಡನ ಕಟ್ಟುವ ಮಂದಿಯ ಅನುಭವವಲಯ ಏನು, ಅವರು ಬಳಸುತ್ತಿರುವ ವಸ್ತು ಪರಿಕರಗಳೇನು ಎನ್ನುವುದನ್ನು ತಿಳಿಯಬಹುದು.

೧. ತು ತೂತಲಕ್ಕಂತೆ ದೊಂಬು ಪೂತಲಕ್ಕಂತೆ ಬಾಲೆ
ಕ.
ಬೆಂಕಿಯಂತಹ ಬಿಸಿಲು ಹೂವಿನಂತಹ ಮಗು

೨. ತು ಮಿತ್ತ್‌ ಮಲೆಕೊಪ್ಪೊಡು ಮುಂದೆ ಪಿಜಿನ್‌ದ ದಾರೆ ಪತಿಲೆಕೊ ಬತ್ತ್‌ಸೇರ್‌ದ್‌ಂಡ್‌
ಕ.
ಮೇಲೆ ಮಲೆಕೊಪ್ಪದಲ್ಲಿ ಇರುವೆಯ ಸಾಲು ಹಿಡಿದಂತೆ ಮುಂದೆ ಬಂದು ಸೇರಿದೆ

೩. ತು ಪೊಣ್ಣ ಕೋಡಿಡ್‌ ಲತ್ತ್‌ಪಿಂಗಾರದ ಅರಿ ಬಿರ್ಕಿಲೆಕೊ ಜನಬತ್ತ್‌ ಸೇರ್‌ದ್‌ಂಡ್‌
ಕ.
ಹೆಣ್ಣ ಕಡೆಯಲ್ಲಿ ಎಳೆಯ ಹೊಂಬಾಳೆಯ ಬೀಜ ಚೆಲ್ಲಿದಂತೆ ಜನ ಬಂದು ಸೇರಿದೆ

೪. ತು ಕಳಮೆದ ಕುರಲ್‌ ತುಂಡಾಯಿಲೆಕೊ ಮೂಕಾಂಬಿನ ಜೂವ ಪೋತುಂಡು
ಕ.
ಕಳೆವ ಬತ್ತದ ತೆನೆ ಮುರಿದಂತೆ ಮೂಕಾಂಬಿಯ ಜೀವ ಹೋಗಿದೆ

೫. ತು ಪೊರುವೆಲ್‌ಡ್‌ ದೀದ್‌ ಕಾಪುನ ಅಪ್ಪೆ ಲೆಕಂತಿನ ದೈವ
ಕ.
ತೆಕ್ಕೆಯಲ್ಲಿಟ್ಟು ಕಾಯುವ ತಾತಿಯಂತಿರುವ ದೈವ

೬. ತು ಕಂಗ್‌ದ ಪೂಂಬಾಲೆ ನೀಂದ್‌ನೆಂಗೆ ನೀಂದುವಲ್‌ಮೂಕಾಂಬಿ
ಕ.
ಅಡಿಕೆಯ ಹೊಂಬಾಳೆ ತೇಲುವಂತೆ ತೇಲುವಳು ಮೂಕಾಂಬಿ

ರೂಪಕ

ಅಂತರಂಗದ ಅನುಭವವನ್ನು ಮೂರ್ತಗೊಳಿಸುವ ಕಾರ್ಯವನ್ನು ರೂಪಕಗಳು ಸುಸಂಗತಗೊಳಿಸುತ್ತವೆ. ಅಂದರೆ ಅವು ಅಂತರಂಗದ ಅನುಭವಾಭಿವ್ಯಕ್ತಿಯ ಸಾಧನ. ಇದರಿಂದ ಕಾವ್ಯ ಭಾಷೆಗೆ ಮೊನಚು ಏರ್ಪಡುತ್ತದೆ. ಅರ್ಥ ಸ್ವಾರಾಸ್ಯ ಹೆಚ್ಚುತ್ತದೆ. ಕಾವ್ಯ ಆಡಕಗೊಳ್ಳುತ್ತದೆ. ಅನುಭವದ ಹರಳಾಗುವಿಕೆಯನ್ನು ರೂಪಕದಲ್ಲಿ ಗುರುತಿಸಬಹುದು. ಸಾದೃಶ್ಯ ಸೂಚಕ ವಸ್ತುವನ್ನು ಕಿತ್ತುಹಾಕಿದಾಗ ರೂಪಕ ರೂಪುಗೊಳ್ಳುತ್ತದೆ. ಪ್ರತಿಮೆಯಲ್ಲಿ ಸಾದೃಶ್ಯತೆ ಮರೆಯಾಗಿ ಒಂದು ಶಬ್ಧ ಚಿತ್ರದ ರೂಪದಲ್ಲಿ ಭಾವತೀವ್ರತೆಯು ತನ್ನ ಎಲ್ಲ ಸಂಕೀರ್ಣತೆಯೊಂದಿಗೆ ಪ್ರಕಟಗೊಳ್ಳುತ್ತದೆ. ಕವಿಯೊಳಗಿನ ಭಾವನೆಗಳು ಕಾವ್ಯ ಸಂಯೋಜನೆಯ ಸಂದರ್ಭದಲ್ಲಿ ವಸ್ತುವನ್ನು ರೂಪಿಸುವ ಪ್ರಕ್ರಿಯೆಯಾಗಿ ಪ್ರತಿಮಾ ವಿಧಾನವೆನಿಸುತ್ತದೆ. ಸಾಮಾನ್ಯವಾಗಿ ಪ್ರತಿಮೆಯೆಂದರೆ ಶಬ್ಧ ಚಿತ್ರ ಎನ್ನಲಾಗುತ್ತಿದೆಯಾದರೂ ಒಂದು ವಿಶೇಷಣ, ಒಂದು ರೂಪಕ, ಒಂದು ಉಪಮೆಯೂ ಕೂಡಾ ಧ್ವನಿಶಕ್ತಿ ಪಡೆದಾಗ ಪ್ರತಿಮೆಯಾಗಬಹುದು ಅಥವಾ ಒಂದು ನುಡುಗಟ್ಟು ಅಥವಾ ಒಂದು ಸಾಧಾರಾಣ ವಾಕ್ಯ ಕೂಡಾ ಪ್ರತಿಮೆಯ ರೂಪದಲ್ಲಿ ತೋರಬಹುದು (ಉಷಾಕಿರಣ್‌ ೨೦೦೧: ೫೪) ಪ್ರತಿಮೆಗಳು ಶಬ್ಧಚಿತ್ರಗಳ ರೂಪದಲ್ಲಿ ಅಭಿವ್ಯಕ್ತಗೊಳ್ಳಬಹುದಾದರೂ ಎಲ್ಲ ಶಬ್ಧಚಿತ್ರಗಳು ಪ್ರತಿಮೆಯಾಗಲಾರವು. ಶಬ್ಧಚಿತ್ರಗಳು ಅಮೂರ್ತ ಭಾವಗಳನ್ನು ಮೂರ್ತಗೊಳಿಸುವುದರಲ್ಲಿ ದುಡಿಯಬೇಕು. ಭಾಷೆಗೆ ವ್ಯಂಜನಶಕ್ತಿಯನ್ನು ಪೂರಣಮಾಡಬೇಕು. ಆ ಮೂಲಕ ಕವಿಯ ವಿವಿಧಾನುಭವಗಳು ಓದುಗನಿಗೆ ಸುಲಭ ಸಂವಹನಗೊಳ್ಳು ವಂತಾಗಬೇಕು. ಆಗ ಶಬ್ಧಚಿತ್ರಗಳು ಪ್ರತಿಮೆಗಳಾಗುತ್ತವೆ. ಅಂದರೆ ಕವಿಶಬ್ಧಗಳ ಮೂಲಕ ನಿರೂಪಿಸುವ ಸಂಗತಿಗಳು ಓದುಗನ ಇಂದ್ರಿಯಗ್ರಾಹ್ಯ ಆಗುವಂತೆ ಮಾಡುವುದು ಪ್ರತಿಮೆಗಳ ಪ್ರಮುಖ ಕಾರ್ಯ ಎನ್ನಬಹುದು.

ಜನಪದ ಕವಿಗಳು ಮಾತನಾಡುವುದೇ ರೂಪಕಗಳ ಮೂಲಕ. ಅವರಿಗೆ ಬದುಕು ಬೇರೆ ಅಲ್ಲ. ಕಾವ್ಯ ಬೇರೆ ಅಲ್ಲ. ಪಾಡ್ಡನಗಳ ಭಾಷಿಕ ಅಭಿವ್ಯಕ್ತಿಯನ್ನು ಗಮನಿಸಿದರೆ ಅವರು ತಮ್ಮ ದೈನಂದಿನ ವ್ಯಾವಹಾರಿಕ ಅಡುಮಾತಿಗಿಂತ ಭಿನ್ನವಾದ ಭಾಷಿಕ ಆಬಿವ್ಯಕ್ತಿಯನ್ನು ಬಳಸುತ್ತಿರುವುದು ಕಂಡುಬರುತ್ತದೆ. ಸಾಮಾನ್ಯ ಪದಕೋಶಗಳಿಂದಲೇ ಸಾಂದ್ರಭಾವವನ್ನು ಪ್ರಕಟಿಸುವ ಪ್ರತಿಮೆಗಳು ನಿರ್ಮಾಣಗೊಳ್ಳುತ್ತವೆ. ಅಂದರೆ ವಾಸ್ತವ ಲೋಕದ ಮಾದರಿಗಳು ಕವಿಯ ಪ್ರತಿಭಾ ಬಲದಿಂದ ಪುನರ್‌ಸೃಷ್ಟಿಗೆ ಒಳಗಾಗುವುದು ಒಂದು ವಿಶೇಷ ಸಂಗತಿ.

ಪ್ರೀತಿ, ವಿಶ್ವಾಸ, ದ್ವೇಷ, ಅಸಹನೆ, ಕಾಮುಕತೆ ಮುಂತಾದ ಅಂತರಂಗದ ವ್ಯಾಪಾರಗಳನ್ನು ಬಾಹ್ಯಲೋಕಕ್ಕೆ ತೆರೆದಿದೂವುದಕ್ಕೆ ಸೂಕ್ತಪರಿಕರಗಳೆಂದರೆ ರೂಪಕಗಳು, ಇದನ್ನೇ ಸುಜನಾ ಅವರು ಆ ಅದೃಶ್ಯಲೋಕದ ಸ್ವರೂಪದ ಅವಲೋಕನಕ್ಕೆ ಈ ದೃಶ್ಯ ಲೋಕದ ನೂರಾರು ರೂಪಗಳು ರೂಪಕ ಗವಾಕ್ಷವಾಗುತ್ತದೆ. (ಸುಜನಾ ೧೯೬೫ – ೧೦೩) ಎಂದಿರುವುದು. ಆಗ ಕವಿಯಾದವನು ತನ್ನ ಅನುಭಲೋಕದಲ್ಲಿ ನಿಲುಕುವ ಪಶುಪಕ್ಷಿ ಪ್ರಾಣಿ, ಸಸ್ಯ ಸಮುದಾಯ, ಪ್ರಕೃತಿ ವ್ಯಾಪಾರಗಳನ್ನು ಅಂತರಂಗದ ಅನುಭವಾಭಿವ್ಯಕ್ತಿಯ ಸಾಧನವಾಗಿ ಬಳಸಿಕೊಳ್ಳುತ್ತಾನೆ. ಮನಸ್ಸಿನ ಇರಾದೆಯನ್ನು, ಚಿತ್ರಸ್ಥಿತಿಯನ್ನು ಸಶಕ್ತವಾಗಿ ನಿರೂಪಿಸಲು ಪ್ರಾಣಿರೂಪಕಗಳು ಸೂಕ್ತವೆನ್ನಿಸುತ್ತವೆ.

ಸಿರಿಪಾಡ್ಡನದ ಒಂದು ಸನ್ನಿವೇಶ. ಸಿರಿ ಗಂಡನ ದುರ್ವರ್ತನೆಯಿಂದ ಬೇಸತ್ತು ಅದನ್ನು ಪ್ರತಿಭಟಿಸುವ ಸಲುವಾಗಿ ವಿಚ್ಛೇದನ ಹೇಳುತ್ತಾಳೆ. ಮುಂದೆ ಕೊಡ್ಸರಾಳ್ವನ ಜತೆ ಮರುಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿ ತನ್ನ ಮಗನಲ್ಲಿ (ಮಗು) ವಿಷಯ ಪ್ರಸ್ತಾಪಿಸುತ್ತಾಳೆ. ತಾಯಿಯ ವರ್ತನೆಯನ್ನು ಒಪ್ಪದ ಮಗ ಕುಮಾರ (ಲಿಂಗವೈಷಮ್ಯದ ನೆಲೆಯಲ್ಲಿ) ತನ್ನ ಅಸಮ್ಮತಿಗೆ ರೂಪಕಾತ್ಮಕ ಅಭಿವ್ಯಕ್ತಿ ನೀಡುತ್ತಾನೆ.

ತು. ಒಂಜಿ ಓಡುಡುಗೆನ ರಡ್ಡ್ ನಾಯಿಲು ತೆಲಿಪರ್ಪುನ ಸಮ ಅತ್ತ್‌
ಕ. ಒಂದು ಓಡಿನ ಚೂರಿನಲ್ಲಿ ಎರಡು ನಾಯಿಗಳು ತಿಳಿಗಂಜಿ ಕುಡಿಯುವುದು ಸರಿ ಅಲ್ಲ

ಇಲ್ಲಿ ಸಿರಿಯನ್ನು ಅಥವಾ ಸಂಸಾರವನ್ನು ಒಡೆದ ಓಡಿಗೆ (ಒಡೆದ ಮಡಿಕೆಯ ಚೂರು) ರೂಪಕವಾಗಿ ಹೇಳಿದೆ. ಆ ಓಡಿನಲ್ಲಿ ಗಂಜಿ ಕುಡಿಯುವ ಎರಡು ನಾಯಿಗಳೆಂದರೆ ಕಾಂತಣಾಳ್ವ ಹಾಗೂ ಕೊಡ್ಸರಾಳ್ವ, ಒಂದು ಪಾತ್ರೆಗೆ ಎರಡು ನಾಯಿಗಳು ಬಾಯಿ ಹಾಕಿ ಗಂಜಿ ಕುಡಿದರೆ ಕಚ್ಚಾಟವಾಗುವುದು ನಿಶ್ಚಿತ. ಲೋಕದಲ್ಲಿನ ಪ್ರಾಣಿಗಳ ನಡವಳಿಕೆಯನ್ನು ಮನುಷ್ಯನಿಗೆ ಅನ್ವಯಿಸುವ ಮೂಲಕ ಮನುಷ್ಯನ ನಾಯಿತನಕ್ಕೆ ಕನ್ನಡಿ ಹಿಡಿಯಲಾಗಿದೆ.

ವೀರ ದೇವು ಪೂಂಜ ಬಂಟವಾಳ ಪೇಟೆಯಲ್ಲಿ ನಡೆದು ಹೋಗುತ್ತಿರುವಾಗ ಮನೆಬಾಗಿಲಿನಲ್ಲಿ ನಿಂತ ಸೂಳೆ ಸಿದ್ದು ಆತನಲ್ಲಿ ಮೋಹಿಸಿ ಒಳಗೆ ಬರುವಂತೆ ಆಹ್ವಾನಿಸುತ್ತಾಳೆ. ದೇವು ಪೂಂಜ ನಿರಾಕರಿಸುತ್ತಾನೆ. ಆಗ ಆಕೆ ದೇವು ಪೂಂಜನ ಸ್ವಾಭಿಮಾನವನ್ನು ಗಂಡಸುತನವನ್ನು ಚುಚ್ಚಿ ಮಾತನಾಡುತ್ತಾಳೆ. ದೇವು ಪೂಂಜ ಎಷ್ಟೊಂದು ನಿಷ್ಕ್ರಿಯ, ನೀರಸ ಎನ್ನುವುದನ್ನು ಕಾಸರಕನ ಮರದ ಹಾಗೂ ಹಿಡಮಾಡಿದ ಗೂಳಿಯ ರೂಪಕದ ಜತೆ ಸಮೀಕರಿಸಲಾಗಿದೆ.

ತು. ಈರೆಗ್‌ಪಣ್ಪಿ ಪಾತೆರ ಇತ್ತಂಡ್‌ಕಾಯೆರ್‌ದ ಮರಕ್‌ ಪಣ್ತ್ಂಡ ಪಂರ್ದ್‌ ಇರೆ ತಾಲದು, ಕಾಯಿ ಇರೆ ತೆಲಿತುದು
ಕ. ನಿಮಗೆನ್ನುವ ಮಾತಿದ್ದರೆ ಕಾಡಿನ ಕಾಸರ್ಕನ ಮರಕ್ಕೆನ್ನುತ್ತಿದ್ದರೆ ಹಣ್ಣೆಲೆ ಉದುರುತ್ತಿತ್ತು, ಚಿಗುರೆಲೆ ನಗುತ್ತಿತ್ತು.

ತು. ಎನ್ನ ಲೆಕಂತಿ ಪೊನ್ನನ್‌ ತೂಯಿನಾಂಡ ಆರಿಯ ಎರುಲಾ ಬರು ಅಂದಳ್‌ ಸೂಳೆ ಸಿದ್ದು
ಕ. ನನ್ನಂಥ ಹೆಣ್ಣನ್ನು ಕಂಡರೆ ಹಿಡಮಾಡಿದ ಎತ್ತು (ಗೂಳಿ) ಕೂಡಾ ನನ್ನ ಹಿಂದೆ ಬರುತ್ತಿತು.

ಇಲ್ಲಿನ ರೂಪಕಗಳು ದೇವು ಪೂಂಜನ ಶುಷ್ಕತೆ ಹಾಗೂ ಸೂಳೆ ಸಿದ್ಧುವಿಗೆ ತನ್ನ ಸೌಂದರ್ಯದ ಬಗೆಗಿರುವ ಉತ್ಕಟ ಅಭಿಮಾನ ಎರಡನ್ನೂ ಸೂಚಿಸುತ್ತವೆ.

ನಂದಾವರದ ಬಂಗರಸನು ದೇವು ಪೂಂಜನ ನಾಯಕತ್ವದಲ್ಲಿ ಸೈನ್ಯ ಸಜ್ಜುಗೊಳಿಸಿ ತಿಮ್ಮಣ್ಣಾಜಿಲನನ್ನು ಎದುರಿಸಲು ಸಿದ್ಧವಾಗಿದ್ದಾನೆ. ದೇವು ಪೂಂಜ ಬಂಗರಸನ ಆಳುಗಳನ್ನು ಅವಮಾನಿಸಿ ಕಳುಹಿಸಿದುದನ್ನು ಕಂಡ ಬಂಗರಸ ಬಾಲಕ ದೇವು ಪೂಂಜನ ಸಾಮರ್ಥ್ಯವನ್ನು ರೂಪಕಾತ್ಮಕವಾಗಿ ಅಳೆದ ಬಗೆ ಹೀಗಿದೆ.

ತು. ಈತೆಲ್ಯ ಪಂಜರೊಡು ಈತ್‌ ಮಲ್ಲ ಕುರುಲೆ ಉಂಡುಂದು ಪಿಂದ್‌ಜಿ
ಕ. ಇಷ್ಟು ಚಿಕ್ಕ ಇಕ್ಕೆ (ಗೂಡು) ಯಲ್ಲಿ ಇಷ್ಟು ದೊಡ್ಡ ಪಿಳ್ಳೆಯುಂಟೆಂದು ನಾನು ತಿಳಿಯಲಿಲ್ಲ.

ಬಾಲಕ ದೇವು ಪೂಂಜನ ಸಾಮರ್ಥ್ಯವನ್ನು ಅಡಕವಾಗಿ ಹೇಳಲು ತಕ್ಕುದಾದ ರೂಪಕ ಇದು.

ಹೆಣ್ಣೊಬ್ಬಳು ತನಗೆ ಆಶ್ರಯ ನೀಡಿದ ಒಡೆಯನ ಜತೆ ಲೈಂಗಿಕ ಸಂಬಂಧ ಬೆಳೆಸಿ ಬಸುರಿಯಾದ ಬಗ್ಗೆ ಜನ ಅಡಿಕೊಂಡಾಗ ಅವಳು ತನ್ನ ಒಡೆಯನಿಗೆ ದೈರ್ಯ ಹೇಳುವ ಹಾಗೂ ತನ್ನ ಲೈಂಗಿಕ ಪರಿಶುದ್ಧತೆಯ ಬಗೆಗೆ ಖಛಿತ ನುಡಿಯನ್ನು ರೂಪಕಾರ್ಥವಾಗಿ ವ್ಯಕ್ತಪಡಿಸುವ ಬಗೆ ಹೀಗಿದೆ :

ತು : ಈರೆನೊಂಜಿ ಮೀಸೆದ ಕೊಡಿಕ್‌ ಬಂಗಾರಿನ ಕಟ್ಟ್‌ಪಾಡ್ಪಾವೆ, ಅಕ್ಕಸೊಗು ಬಂಜಿ ಕೊರ್‌ತುಜಿ ಯಾನ್‌ ಬೂವಿಗ್‌ ಬೆರಿ ಕೊರ್ತುಜಿ.
ಕ. ನಿಮ್ಮ ಮೀಸೆಯ ತುದಿಗೆ ಬಂಗಾರದ ಕಟ್ಟು ಹಾಕಿಸುವೆ, ಆಗಸಕ್ಕೆ ಹೊಟ್ಟೆ ಒಡ್ಡಲಿಲ್ಲ, ಭೂಮಿಗೆ ಬೆನ್ನು ಕೊಟ್ಟಿಲ್ಲ.

ಮೇಲಿನಾ ಮಾತುಗಳಲ್ಲಿ ಮೊದಲ ಸಾಲು ಆಕೆಗೆ ಒಡೆಯನ ಮೇಲಿರುವ ಅಭಿಮಾನವನ್ನು ಹೇಳಿದರೆ, ಮುಂದಿನ ಸಾಲು ತನ್ನ ಲೈಂಗಿಕ ಪರಿಶುದ್ಧತೆಯನ್ನು ಶಬ್ಧದಿವ್ಯಕ್ಕೊಳಪಡಿಸುತ್ತಾಳೆ.

ಸಿರಿ ಗಂಡನ ದುರ್ವರ್ತನೆಯಿಂದ ನೊಂದು ವಿಚ್ಛೇದನ ಹೇಳಲು ಬಂದಾಗ ಗಂಡ ಕಾಂತಣಾಳ್ವ ಸಿರಿಯನ್ನು ನಿರ್ವಚಿಸಿದ ಬಗೆ ಹೀಗಿದೆ :

ತು : ಸೂಂಟಿ ಮೀರಿ ಕಸಾಯೆಂದ್‌ಂಡಲ ಈಯ್ಯೆನ ಸಿರಿಯೆ ಸಂಬಾರ ಮೀರಿ ಕಜಿಪುಂದ್‌ಂಡಲ ಈಯ್ಯೆನ ಸಿರಿಯೆ ಪುಣೆಮೀರಿ ಕಂಡಂದ್‌ಂಡಲ ಈಯ್ಯೆನ ಸಿರಿಯೆ ಇಲ್ಲಡ್ಡ್‌ಮಲ್ಲ ಮುಟ್ಟಿಕಲ್ಲ್ಂದ್‌ಂಡಲ ಈಯ್ಯೆನ ಸಿರಿಯೆ

ಕ : ಶುಂಠಿ ಮೀರಿದ ಕಷಾಯ ಎಂದರೆ ನೀನೆಯೇ ಸಿರಿಯೆ ಸಂಬಾರ ಮೀರಿದ ಮೇಲೋಗರವೆಂದರೆ ನೀನೆಯೆ ಸಿರಿಯೆ ಬದು ಮೀರಿದ ಗದ್ದೆಯೆಂದರೆ ನೀನೆಯೆ ಸಿರಿಯೆ ಮನೆಯಿಂದ ದೊಡ್ಡ ಮೆಟ್ಟಲು ಎಂದರೆ ನೀನೆಯೆ ಸಿರಿಯೆ

ಹೆಣ್ಣಾದವಳು ಗಂಡನ, ಗಂಡನ ಮನೆಯವರ ಅಂಕೆಯಲ್ಲಿರಬೇಕು ಎನ್ನುವ ಪುರುಷದೃಷ್ಟಿಕೋನ ಇಲ್ಲಿನ ರೂಪಕಗಳಲ್ಲಿ ವ್ಯಕ್ತವಾಗಿದೆ. ಶುಂಠಿ ಮೀರಿದ ಕಷಾಯ, ಸಂಬಾರ ಪದಾರ್ಥ ಹೆಚ್ಚಾದ ಮೇಲೋಗರ, ಬದು ಮೀರಿದ ಗದ್ದೆ, ಮನೆಯಿಂದ ದೊಡ್ಡ ಮೆಟ್ಟಿಲು ಈ ಎಲ್ಲಾ ವಿಶ್ಲೇಷಣ ರೂಪಕಗಳು ಹೆಣ್ಣಿನ ಬಗೆಗಿನ ತುಳುವರೆ ಲೋಕದೃಷ್ಟಿಯನ್ನು ಹೇಳುತ್ತದೆ.

ಕೊಡ್ಸರಾಳ್ವನ ಹಿರಿ ಹೆಂಡತಿ ಸಾಮು ಇದ್ದಾಗಲೇ ಆತ ಬೋಲಬಾರಿ ಕ್ಷತ್ರಿಯರ ಒತ್ತಾಯದ ಮೇರೆಗೆ ಸಿರಿಯನ್ನು ಮರುಮದುವೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಇದನ್ನು ತಿಳಿದ ಸಾಮು ನೀಡುವ ಪ್ರತಿಕ್ರಿಯೆ ಹೀಗಿದೆ :

ತು. : ಯಾನ್‌ ಬತ್ತಿ ಪೊಕ್ಕಿ ಬೊಕ್ಕೊಗುಗೆನಾ, ಒಂಜಿತ್ತಿನವು ಏಳ್‌ಸಿರಿತುಪ್ಪೆ ಆತ್‌ಂಡ್‌ ಮದಿಮ್ಮಾಯ
ಆನಿ ಪಡ್ಡಾಯಿಡ್ಡ್ ನೂರಿನ ಕಕ್ಕೆ ಮೂಡಾಯಿಡ್ಡ್‌ ಪಿದಾಡ್‌ದ್‌ ಪೋತುಂಡುಗೆನಾ

ಕ. : ನಾನು ಬಂದು ಹೊಕ್ಕಿದ ಬಳಿಕವೇ ಒಂದಿದ್ದುದು ಸಿರಿ ಕಣಜ ಆಗಿದೆ ಮದುಮಗಾ
ಅಂದು ಪಡುವಲಿಂದ ಒಳಬಂದ ಕಾಗೆ ಮೂಡಲಿಂದ ಹೊರಟುಹೋಗಿತ್ತು……

ತಾನು ಆ ಮನೆಯನ್ನು ಹೊಕ್ಕ ಬಳಿಕ ಆ ಮನೆಯಲ್ಲಾದ ಇತ್ಯಾತ್ಮಕ ಬೆಳವಣಿಗೆಯನ್ನು ಎರಡು ಕ್ರಿಯೆಗಳ ಮೂಲಕ ಸೂಚಿಸಿದ್ದಾಳೆ. ಒಂದಿದ್ದ ಭತ್ತದ ಸಿರಿ ಕಣಜ ಏಳಾಗಿದೆ. ಎಂದರೆ ಮನೆಗೆ ಸೌಭಾಗ್ಯ ಕೂಡಿಬಂದಿದೆ. ತಾನು ಬರುವ ಮುನ್ನ ಪಡುದಿಕ್ಕಿಂದ ಮನೆಯೊಳಗೆ ಹೊಕ್ಕ ಕಾಗೆ ಮನೆಯೊಳಗೆ ಏನೂ ತಿನ್ನದೆ ನೇರವಾಗಿ ಮೂಡು ದಿಕ್ಕಿನಿಂದ ಹೊರಹೋಗುತ್ತಿತ್ತು. ಈ ಮಾತು ಮನೆಯ ಹಿಂದಿನ ದುಸ್ಥಿತಿಯನ್ನು ಅಮಂಗಲ ಸನ್ನಿವೇಶವನ್ನೂ ಧ್ವನಿಸುತ್ತದೆ. ಅಂತಹ ಮನೆ ಈಗ ಬದಲಾಗಿದೆ. ಹೀಗಿದ್ದೂ ಮರುಮದುವೆಯಾಗುವ ಗಂಡನ ಪ್ರವೃತ್ತಿಯನ್ನು ಪ್ರತಿಭಟಿಸುವ ಬಗೆ ಇದಾಗಿದೆ.

ಮಾತನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಅಮೂರ್ತ ಅನುಭವವನ್ನು ಮೂರ್ತಗೊಳಿಸುವಲ್ಲಿ ರೂಪಕಗಳನ್ನು ಪಾಡ್ಡನಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ರೂಪಕದಲ್ಲಿ ಸಾಕಾರಗೊಳ್ಳುವ ವಸ್ತುಪರಿಕರ ಗಳೆಲ್ಲವೂ ಅವರು ತಮ್ಮ ಬದುಕಿನಲ್ಲಿ ನಿತ್ಯ ನಿತ್ಯವೂ ಕಾಣುವ, ಬಲಸುವ ಸರಕುಗಳೇ ಆಗಿರುವುದು ಗಮನಾರ್ಹ.

ಆಕರಸೂಚಿ

೧. ಉಷಾಕಿರಣ್‌ ಡಾ. , ೨೦೦೧, ಬಸವೇಶ್ವರ ಮತ್ತು ಪ್ರತಿಮಾನಿರ್ಮಿತಿ ಪ್ರ : ಆನಂದ ಪ್ರಕಾಶನ, ಬೆಂಗಳೂರು -೫೬೦೦೩

೨. ಕರ್ಕಿ ಡಿ. ಎಸ್‌. (ಡಾ), ೧೯೭೦, ಛಂದೋವಿಕಾಸ, ಪ್ರ : ಧಾರವಾಡ

೩. ತಿರುಮಲೇಶ್‌ ಕೆ. ವಿ. ಡಾ. , ೧೯೮೯, ಶೈಲಿಶಾಸ್ತ್ರದ ರೂಪೂರೇಷೆಗಳು, ‘ಸಮ್ಮುಖ’ ದಲ್ಲಿ ಪ್ರ : ಅಕ್ಷರ ಪ್ರಕಾಶನ, ಹೆಗ್ಗೊಡು

೪. ಪ್ರಭುಸ್ವಾಮಿ ಮಠ (ಡಾ), ೧೯೯೬, ಬಸವಣ್ಣನವರ ವಚನಗಳ ಸಾಹಿತ್ಯಕ ಅಧ್ಯಯನ ಪ್ರ : ಅಕ್ಷರ ಪ್ರಕಾಶನ, ಹೆಗ್ಗೋಡು

೫. ಶಾಂತಿನಾಥ ದೇಸಾಯಿ (ಡಾ), ೧೯೮೦, ಸಾಹಿತ್ಯ ಮತ್ತು ಭಾಷೆ, ಪ್ರ : ಪ್ರಸಾರಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು

೬. ಸುಜನಾ, ೧೯೬೫, ಬಸವಣ್ಣನವರ ವಚನಗಳಲ್ಲಿ ಪ್ರಾಣಿರೂಪಕಗಳು, ಪ್ರ : ಸರಸ ಪ್ರಕಾಶನ, ಮೈಸೂರು

೭.Honkm Lauri, 1996, Textualising Siri Epic, FFE No -269, Helsonki