ಭಾಷೆ ಮನುಷ್ಯನ ಅಭಿವ್ಯಕ್ತಿಯ ಮಾಧ್ಯಮ, ಮನುಷ್ಯನ ಹೆಚ್ಚಿನ ಚಟುವಟಿಕೆಗಳಿಗೂ ಭಾಷೆಗಳಿಗೂ ಸಂಬಂಧವಿದೆ. ಒಂದು ಭಾಷೆಯನ್ನು ಸಮರ್ಥ ಭಾಷೆಯನ್ನಾಗಿ ಮಾಡುವ ಸಾಮರ್ಥ್ಯ ಆ ಭಾಷೆಯನ್ನಾಡುವ ಜನರ ಮೇಲೆ ಹೊಂದಿದೆ. ಭಾಷೆ ಒಂದೇ ಆಗಿದ್ದರೂ ಒಬ್ಬ ವ್ಯಕ್ತಿ ಆಡುವ ಮಾತಿಗೂ ಇನ್ನೊಬ್ಬನಾಡುವ ಮಾತಿಗೂ ಭಿನ್ನತೆ ಬಂದೇ ಬರುತ್ತದೆ. ಉಚ್ಚಾರ ವ್ಯತ್ಯಾಸ ಉಂಟಾಗಬಹುದು, ಅಥವಾ ಭಾವ ವ್ಯತ್ಯಾಸ ಉಂಟಾಗಬಹುದು. ಭಾಷೆ ಅದನ್ನಾಡುವ ವ್ಯಕ್ತಿಯ ಸ್ವಭಾವ, ಸಂಸ್ಕೃತಿಯನ್ನೂ ಕೂಡಾ ಅಭಿವ್ಯಕ್ತಗೊಳಿಸುತ್ತದೆ. ಭಾಷೆ ಅದನ್ನಾಡವ ವ್ಯಕ್ತಿಯ ಸ್ವಭಾವ, ಸಂಸ್ಕೃತಿಯನ್ನೂ ಕೂಡ ಅಭಿವ್ಯಕ್ತಿಗೊಳಿಸುತ್ತದೆ. ಭಾಷೆಗೆ ಪ್ರಾದೇಶಿಕ ವ್ಯತ್ಯಾಸವಿದ್ದಂತೆ ಜಾತೀಯ ವ್ಯತ್ಯಾಸವೂ ಇದೆ. ಒಂದು ಪ್ರದೇಶದಲ್ಲಿ ವಾಸಿಸುವ ಒಂದು ಜಾತಿಯ ಜನರು ಆಡುವ ಭಾಷೆಯು ಅದೇ ಜಾತಿಯ ಇನ್ನೊಂದು ಪ್ರದೇಶದ ಜನರ ಭಾಷೆಗಿಂತ ಭಿನ್ನವಾಗಿರುತ್ತದೆ. ಭಾಷೆಯು ವ್ಯಕ್ತಿಯ ಸಾಮಾಜಿಕ ಅಂತಸ್ತಿಗನುಸಾರವಾಗಿ ಬದಲಾಗುತ್ತದೆ. ಮೇಲ್ವರ್ಗದವರು ಆಡುವ ಭಾಷೆಗೂ ಕೆಳವರ್ಗದವರು ಆಡುವ ಭಾಷೆಗೂ ಹೆಚ್ಚು ಅಂತರವಿರುತ್ತದೆ. ಭಾಷೆಗೆ ಸಾಮಾಜಿಕ ಆಯಾಮಗಳಿರುತ್ತವೆ. ಸಮಾಜದಲ್ಲಿ ಸಂಭವಿಸುವ ಹಲವು ಪರಿವರ್ತನೆಗಳು ಭಾಷೆಯ ಮೇಲೆ ಪರಿಣಾಮ ಬೀರಿ ಭಾಷೆಯ ಸ್ವರೂಪವನ್ನು ಬದಲಾಯಿಸಿಬಿಡುತ್ತವೆ.

ಭೌಗೋಳಿಕ ಲಕ್ಷಣಗಳು, ಆಡಳಿತ ವ್ಯವಸ್ಥೆ, ಇನ್ನೊಂದು ಭಾಷೆಯನ್ನಾಡುವ ಜನರ ಸಂಪರ್ಕ, ಸಂಸ್ಕೃತಿಯ ಪ್ರಭಾವ, ವಾಣಿಜ್ಯ ಸನ್ನಿವೇಶಗಳು ಭಾಷೆಯ ತೀವ್ರ ಬದಲಾವಣೆಗೆಗಳಿಗೆ ಎಡೆಮಾಡಿಕೊಡುತ್ತವೆ. ಶಿಕ್ಷಣ ಮತ್ತು ಪ್ರಸಾರ ಮಾಧ್ಯಮಗಳೂ ಕೂಡಾ ಭಾಷೆಯಲ್ಲಿ ಬದಲಾವಣೆನ್ನು ತರುತ್ತವೆ.

ಭಾಷೆಯ ಹಲವು ಪ್ರಭೇದಗಳಲ್ಲಿ ಯಾವುದಾದರೊಂದನ್ನು ಶುದ್ಧವೆಂದೂ, ಅನುಸರಣೀಯ ಮಾದರಿಯೆಂದೂ ಸಿದ್ಧಾಂತ ಮಾಡುವ ಪ್ರವೃತ್ತಿ ಕಂಡುಬರುತ್ತದೆ. ಇಂತಹ ಚಿಂತನೆಯನ್ನು ನಿರ್ದೇಶಾತ್ಮಕ ಪರಂಪರೆಯೆಂದು ಗುರುತಿಸಬಹುದು. ಹೀಗೆ ಶುದ್ಧವೆಂದು ಪರಿಗಣಿಸಿದ ಮಾದರಿಯನ್ನು ಎಲ್ಲ ಭಾಷಿಕರೂ ಬಳಸಬೇಕೆನ್ನಲಾಗುತ್ತದೆ. ಪದಕೋಶ ಮತ್ತು ವ್ಯಾಕರಣದ ಕೆಲವು ನಿಯಮಗಳಿಗೆ ಮಾತ್ರವಲ್ಲದೆ, ಉಚ್ಚಾರಣೆಯ ಬಗೆಗಳಿಗೂ ಶುದ್ಧ ಮಾದರಿಯನ್ನು ಆದರ್ಶವನ್ನಾಗಿ ಸೂಚಿಲಾಗುತ್ತದೆ. ಈ ಶುದ್ಧ ಮಾದರಿಯು ಸಾಮಾನ್ಯವಾಗಿ ಲಿಖಿತ ರೂಪದ ಭಾಷೆಯಾಗಿರುತ್ತದೆ. ಲಿಖಿತ ಸಾಹಿತ್ಯ ಕೃತಿಗಳಲ್ಲಿ ಔಪಚಾರಿಕವಾದ ಮಾತುಕತೆಗಳಲ್ಲಿ ಈ ಮಾದರಿಯ ನಿದರ್ಶನಗಳು ಸಿಗುತ್ತವೆ. ಈ ಶುದ್ಧ ಮಾದರಿಗೆ ಹೊರತಾದ ಎಲ್ಲ ಪ್ರಭೇದಗಳನ್ನು ಗ್ರಾಮ್ಯವೆನ್ನಲಾಗುತ್ತದೆ. ಆದರೆ ಭಾಷಾ ಶಾಸ್ತ್ರಜ್ಞರು ಶುದ್ಧ, ಗ್ರಾಮ್ಯವಾದವನ್ನು ಒಪ್ಪುವುದಿಲ್ಲ. ತುಳು ಭಾಷೆಯ ಶಿಕ್ಷಣ ಮಾಧ್ಯಮವಲ್ಲದೆ ಇರುವುದರಿಂದ ಮತ್ತು ಲಿಖಿತ ಸಾಹಿತ್ಯ ಈ ಭಾಷೆಯಲ್ಲಿ ಕಡಿಮೆ ಇರುವುದರಿಂದ ಒಂದು ನಿರ್ದಿಷ್ಟ ಪ್ರಭೇದವನ್ನು ಶುದ್ಧ ಅಥವಾ ಶಿಷ್ಟ ಭಾಷೆ ಎಂಬುದಾಗಿ ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ.

ತುಳುನಾಡಿನ ಜನರ ಆಡುಭಾಷೆ ತುಳು, ತುಳು ಭಾಷೆ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಸಮೃದ್ಧ ಹಾಗೂ ವಿಕಸಿತವಾದ ಭಾಷೆ. ಒಂದು ಭಾಷೆಯ ಹುಟ್ಟು ಯಾವಾಗ ಆಯಿತೆಂದು ಹೇಳಲು ಸಾಧ್ಯವಿಲ್ಲ. ಆದರೆ ತುಳು ಭಾಷೆಗೆ ಸುಮಾರು ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಕ್ರಿಸ್ತ ಶಕದ ಮೊದಲನೆಯ ಶತಮಾನದಲ್ಲಿ ಬರೆದ ಒಂದು ಗ್ರೀಕ್‌ ಪ್ರಹಸನದಲ್ಲಿ ಗ್ರೀಸ್‌ದೇಶದ ಕಡಲು ಪಾಲಾದ ಒಬ್ಬ ರಾಜಕುಮಾರಿಯನ್ನು ಪಾರು ಮಾಡಿದ ಒಂದು ಕತೆಯಿಂದ ಅದು ತುಳು ಭಾಷೆಯದು, ಅದರಲ್ಲಿ ಮಂಗಳೂರು ಸಮೀಪದ ಪಣಂಬೂರು ಕಟ್ಟೆ ಅಮ್ಮನ ವಿಚಾರವಿದೆ. ಇದು ಗ್ರೀಕ್‌ಲಿಪಿಯಲ್ಲಿ ಬರೆದ ತುಳು ಭಾಷೆಯ ಪ್ರಹಸನ. ಅದು ಯಾವ ಭಾಷೆಯದ್ದೆಂದು ಹೇಳಲು ಮೊದ ಮೊದಲಿಗೆ ಯಾರಿಗೂ ಸಾಧ್ಯವಾಗಲಿಲ್ಲ. ಯುರೋಪಿನ ಭಾಷಾತಜ್ಞರು ಅದು ಯಾವುದೇ ಭಾರತೀಯ ಭಾಷೆ ಇರಬೇಕೆಂದು ಅಭಿಪ್ರಾಯ ಪಟ್ಟರು. ರಾಷ್ಟ್ರಕವಿ ಗೋವಿಂದ ಪೈಯವರು ಮೇಲ್ನೋಟದಿಂದ ಅದನ್ನು ಕನ್ನಡವಾಗಿರಬಹುದೆಂದರು. ಆದರೆ ಕೆಲವು ವರ್ಷಗಳ ಬಳಿಕ ಈಜಿಪ್ಟಿಗೆ ಭೇಟಿ ನೀಡಿದ ಸ್ಕ್ವಾಡ್ರನ್‌ ಲೀಡರ್‌ ಪಿ.ಎಸ್‌. ರೈಯವರು ಅದನ್ನೋದಿ ಅದು ತುಳು ಭಾಷೆಯ ಚಾರಿಸನ್‌ಎಂಬ ಪ್ರಹಸನವೆಂದು ವಿವರಣೆ ನೀಡಿದರು. ಈಜಿಪ್ಟ್‌ನ ಆಕ್ಷಿರಿಂಕಸ್‌ ಎಂಬಲ್ಲಿ ದೊರೆತ ಗ್ರೀಕ್‌ ಲಿಪಿಯಲ್ಲಿ ಬರೆದ ಈ ಪ್ರಹಸನವು ತುಳು ಭಾಷೆಯದ್ದು ಎಂಬುದನ್ನು ಡಾ. ಕೆ. ಶಿವರಾಮ ಕಾರಂತರು ಕೂಡ ಒಪ್ಪಿಕೊಂಡಿದ್ದಾರೆ (ಡಾ. ಕೆ. ಶಿವರಾಮ ಕಾರಂತ – ಕರಾವಳಿ ೧೯೯೩).

ತುಳುವಿಗೆ ದ್ರಾವಿಡ ಮೂಲದ ಇತರ ಭಾಷೆಗಳಷ್ಟೇ ಪ್ರಾಚೀನತೆ ಇದ್ದರೂ ಕೂಡ, ತಮಿಳು, ತೆಲುಗು, ಕನ್ನಡ, ಮಲೆಯಾಳಂನಷ್ಟು ಅಭಿವೃದ್ಧಿ ಹೊಂದಿಲ್ಲ. ತುಳುನಾಡಿನ ಭೌಗೋಳಿಕತೆ, ತುಳುವು ಆಡಳಿತ ಭಾಷೆಯಾಗಿ ಮೆರೆಯದಿರುವುದು, ತುಳುವಿನಲ್ಲಿ ಹೆಚ್ಚು ಗ್ರಂಥಗಳ ರಚನೆಯಾಗದಿರುವುದು, ಆದಿಯಲ್ಲಿದ್ದ ತುಳು ಲಿಪಿ ಮಾಯವಾಗಿರುವುದು – ಇವೆಲ್ಲ ತುಳುಭಾಷೆ ಹಿಂದುಳಿಯಲು ಕಾರಣವಾಯಿತು.

ತುಳು ಭಾಷೆಯ ಬೆಳವಣಿಗೆಯನ್ನು ಅನುಲಕ್ಷಿಸಿ ಪ್ರಾಚೀನ ತುಳು, ಮಧ್ಯಕಾಲೀನ ತುಳು ಮತ್ತು ಆಧುನಿಕ ತುಳು ಎಂಬುದಾಗಿ ಮೂರು ವಿಭಾಗ ಮಾಡಬಹುದು. ಈವರೆಗೆ ಉಪಲಬ್ಧವಾದ ತುಳು ಲಿಪಿಯಲ್ಲೇ ಬರೆಯಲಾದ ದೇವಿ ಮಹಾತ್ಮೆ, ಅರುಣಾಬ್ಜನ ಮಹಾಭಾರತೊ, ವಿಷ್ಣತುಂಗನ ಶ್ರೀ ಭಾಗವತೊ, ಕಾವೇರಿ, ರಾಮಾಯಣೊ ಮುಂತಾದ ಗ್ರಂಥಗಳಲ್ಲಿ ಬಳಸಲಾದ ಭಾಷೆಯನ್ನು ಹೇಗಿತ್ತು ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಸುಮಾರು ೮ನೆಯ ಶತಮಾನದಿಂದ ಬರವಣಿಗೆಯಲ್ಲಿ ತುಳು ಲಿಪಿ ಪ್ರಾರಂಭವಾಯಿತೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ತುಳು ಲಿಪಿಯಲ್ಲಿ ಬರೆದ ಸುಮಾರು ಎರಡು ಸಾವಿರ ಗ್ರಂಥಗಳು ಈವರೆಗೆ ದೊರಕಿವೆ.

ತುಳು ಲಿಪಿಯ ತುಳುಗ್ರಂಥಗಳ ಬರೆವಣಿಗೆಯು ಒಂದು ಸೀಮಿತ ಅವಧಿಯ ವರೆಗೆ ಮುಂದುವರಿದು ಮುಂದೆ ನಿಂತು ಹೋಯಿತು. ತುಳು ಲಿಪಿಯ ಅರಿವು ಬ್ರಾಹ್ಮಣ ವರ್ಗದವರಿಗಷ್ಟೇ ಇದ್ದುದು, ಈ ವಿದ್ವಾಂಸರು ಕೇರಳದ ಕಡೆಗೆ ವಲಸೆ ಹೋದುದು, ಬ್ರಾಹ್ಮಣೇತರರು ಸಾಹಿತ್ಯದ ಕಡೆಗೆ ಗಮನ ಕೊಡದಿದ್ದುದು ಮತ್ತು ತುಳುನಾಡಿನಲ್ಲಿ ಆಳರಸರು ಕನ್ನಡವನ್ನೂ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡದ್ದು ಇದಕ್ಕೆ ಪ್ರಮುಖ ಕಾರಣಗಳು.

ಮುಂದೆ ಹಲವು ವರ್ಷಗಳವರೆಗೆ ತುಳು ಲಿಖಿತ ಸಾಹಿತ್ಯ ರಚನೆಗೊಳ್ಳಲೇ ಇಲ್ಲ. ಪರಿಣಾಮವಾಗಿ ತುಳುವಿನಲ್ಲಿ ಶಿಷ್ಟ ಸಾಹಿತ್ಯವೇ ನಿಂತುಹೋಗಿ ತುಳು ಸಾಹಿತ್ಯ ಭಂಡಾರವೇ ಬರಿದಾಗುತ್ತದೋ, ಭಾಷೆಯೇ ಸತ್ತು ಹೋಗುತ್ತದೋ ಎಂಬ ಸ್ಥಿತ್ಯಂತರ ಪರಿಸ್ಥಿತಿಗೆ ಮುಟ್ಟಿದಾಗ ಭಾಷೆ ಸತ್ತಿಲ್ಲ ಇನ್ನೂ ಜೀವಂತವಾಗಿದೆ. ಜಗತ್ತು ಕಾಣುವ ಅದ್ಭುತ ಸಂಪತ್ತು ಅದರಲ್ಲಿದೆ ಎಂಬುದನ್ನು ತಮ್ಮ ಮೌಖಿಕ ಸಾಹಿತ್ಯದ ಮೂಲಕ ತೋರಿಸಿಕೊಟ್ಟವರು ತುಳು ಜನಪದರು. ಅವರಿಗೆ ತುಳು ಕೇವಲ ಒಂದು ಮಾಧ್ಯಮವಾಗಿರಲಿಲ್ಲ, ಅದು ಅವರ ಸಂಸ್ಕೃತಿಯಾಗಿತ್ತು. ಬದುಕೆ ಆಗಿತ್ತು. ತಮ್ಮ ಪಾಡ್ದನ, ಕತೆ, ಕಬಿತೆ, ಗಾದೆ, ಒಗಟುಗಳಿಂದ ಅವರು ಭಾಷೆಯನ್ನು ಸಮೃದ್ಧಿಗೊಳಿಸಿದರು. ಜೊತೆಗೆ ಬದುಕನ್ನೇ ಹಸನಾಗಿಸಿಕೊಂಡರು. ಶಿಷ್ಟ ಸಾಹಿತ್ಯವು ನಿಂತು ಹೋಗಿ ಮೌಖಿಕ ಸಾಹಿತ್ಯವು ಬೆಳೆಯುತ್ತಾ ಹೋಗುವ ಈ ಸಂದರ್ಭದಲ್ಲಿ ಬಾಸೆಲ್‌ನಿಂದ ಕ್ರೈಸ್ತ ಪಾದರಿಗಳು ಮತ ಪ್ರಚಾರಕ್ಕಾಗಿ ತುಳು ನಾಡನ್ನು ಪ್ರವೇಶಿಸಿದರು. ಕ್ರಿಸ್ತ ಶಕ ೧೮೩೪ರಲ್ಲಿ ತುಳುನಾಡಿಗೆ ಬಂದ ಬಾಸೆಲ್‌ಮಿಶನರಿಯವರು ತುಳು ಕಲಿತು ತುಳು ಮಾಧ್ಯಮದಲ್ಲೇ ತಮ್ಮ ಮತ ಪ್ರಚಾರಕ್ಕೆ ತೊಡಗಿದರು. ತುಳು ಭಾಷೆಯ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದರು. ವಿದ್ವಾಂಸರು, ಮೇಲ್ವರ್ಗದವರೆನಿಸಿಕೊಂಡವರು ಜಾನಪದವನ್ನು ಗೊರವರ ಡುಂಡಚಿ ಎಂದು ಹಳಿಯುತ್ತಿರುವ ಹೊತ್ತಿನಲ್ಲೇ ಇಲ್ಲಿನ ಜಾನಪದದ ಬಗ್ಗೆ, ತುಳು ಭಾಷೆಯ ಬಗ್ಗೆ, ಅವರು ತೋರಿಸಿದ ಒಲವು, ಗೌರವದೃಷ್ಟಿ ವಿದ್ವಾಂಸರನ್ನು ನಾಚುಂತೆ ಮಾಡಿತು.

ತುಳು ಭಾಷಾಭಿವೃದ್ಧಿಯಲ್ಲಿ ಕ್ರೈಸ್ತ ಮಿಶನರಿಗಳ ಕೊಡುಗೆ ಬಹಳ ಮಹತ್ತರವಾದುದು. ಎರಡನೆಯ ಹಂತದ ಗ್ರಂಥಸ್ಥ ತುಳು ಸಾಹಿತ್ಯ ಪ್ರಾರಂಭಗೊಳ್ಳಲು ಮಿಶನರಿಗಳೇ ಪ್ರೇರಕಶಕ್ತಿ ಎಂದರೂ ತಪ್ಪಾಗಲಾರದು. ತುಳು ಅನುವಾದ ರಚನೆ ಮೊದಲಾಯಿತು. ತುಳುವಿನಲ್ಲಿ ವ್ಯಾಕರಣಗ್ರಂಥ, ನಿಘಂಟು, ಪಾಡ್ದನಗಳ ಸಂಗ್ರಹ ಕಾರ್ಯ ಪ್ರಾರಂಭವಾಯಿತು. ಬಾಸೆಲ್‌ಮಿಶನ್‌ನವರು ತುಳು ಭಾಷೆಯನ್ನು ಶಾಲೆಗಳಲ್ಲಿ ಕಲಿಸುವ ಯೋಜನೆಯನ್ನು ಕೂಡ ಹಾಕಿಕೊಂಡು ಕನ್ನಡ ಮತ್ತು ತುಳು ಮೊದಲನೆಯ ಪುಸ್ತಕ ‘The Firsft Book in Tulu’ ಎಂಬ ಪಠ್ಯ ಪುಸ್ತಕಗಳನ್ನು ಕೂಡ ಪ್ರಕಟಿಸಿದರು. ಆದರೆ ಇಲ್ಲಿನ ಜನರು ತುಳು ಮಾಧ್ಯಮವನ್ನು ಸ್ವೀಕರಿಸಲಿಲ್ಲ. ತುಳು ಮಾಧ್ಯಮದಲ್ಲಿ ಕಲಿತವರಿಗೆ ಸರಕಾರಿ ಉದ್ಯೋಗ ದೊರೆಯಲಾರದು ಎಂಬ ಭಯದಿಂದ ತಮ್ಮ ಮಕ್ಕಳನ್ನು ಕನ್ನಡ / ಇಂಗ್ಲಿಷ್‌ಮಾಧ್ಯಮ ಶಾಲೆಗಳಿಗೇ ಸೇರಿಸಿದರು. ತುಳು ಭಾಷಾ ಮಾಧ್ಯಮ ಸಫಲತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ.

ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾಯಿತು. ಗಾಂಧೀಜಿಯ ಅನುಯಾಯಿಗಳಾದ ಪಣಿಯಾಡಿ ಶ್ರೀನಿವಾಸ ಉಪಾಧ್ಯ ಮತ್ತವರ ಸಂಗಡಿಗರು ನಡೆಸಿದ ಸ್ವಾತಂತ್ರ್ಯ ಹೋರಾಟದ ಅಂಗವಾಗಿ ನಡೆದ ಸ್ವದೇಶಿ ಚಳವಳಿ – ಇದರ ಪರಿಣಾಮವಾಗಿ ಮಾತೃಭಾಷೆ ತುಳುವಿನ ಬಗ್ಗೆ ಸಾಹಿತಿಗಳಿಗೆ ಮೂಡಿಬಂದ ಭಾಷಾ ಪ್ರೇಮ – ದೇಶ ಪ್ರೇಮ, ವಿದೇಶಿಯರು ಇಲ್ಲಿ ಬಂದು ತುಳು ಭಾಷೆ ಮತ್ತು ಜಾನಪದದ ಬಗ್ಗೆ ನಡೆಸಿದ ಸಂಶೋಧನೆಗಳು, ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅವರು ತೋರಿದ ಗೌರವ ದೃಷ್ಟಿ ಇವೆಲ್ಲದರ ಪರಿಣಾಮವಾಗಿ ತುಳುವರ ಜೀವನೋತ್ಸಾಹ ಹೆಚ್ಚಾಯಿತು. ತುಳು ಭಾಷೆ ಮತ್ತು ತುಳುವರ ಮಧ್ಯೆ ಅವಿನಾಭಾವ ಬೆಳೆಯಿತು. ತುಳು ಭಾಷೆ ಸಮೃದ್ಧಿಯಾಯಿತು. ಪಾಡ್ದನಗಳಲ್ಲಿ ಬಳಸಲ್ಪಡುವ ನುಡಿಗಟ್ಟುಗಳು ಗಾದೆಗಳು, ರೂಪಕಗಳು ಜನಸಾಮಾನ್ಯರ ಆಡು ಮಾತಿನಲ್ಲಿ ಬಹುಮಟ್ಟಿಗೆ ಬೆರಕೆಯಾಯಿತು. ಜೊತೆಯಲ್ಲಿ ಬಹಳಷ್ಟು ವಿದೇಶೀ ಭಾಷಾ ಪದಗಳು ತುಳುವಿನಲ್ಲಿ ಸೇರಿ ರೂಪ ಪರಿವರ್ತನೆ ಪಡೆದುಕೊಂಡವು. ಈ ಕಾಲವನ್ನು ತುಳು ಸಾಹಿತ್ಯ ಬೆಳವಣಿಗೆಯ ಮಧ್ಯಕಾಲವೆಂದು ಪರಿಗಣಿಸಬಹುದಾಗಿದೆ.

ಸ್ವಾತಂತ್ರ್ಯಾನಂತರದ ಕಾಲವನ್ನು ಆಧುನಿಕ ತುಳು ಸಾಹಿತ್ಯ ಕಾಲವೆಂದು ಕರೆಯಬಹುದು. ಸ್ವಾತಂತ್ರ್ಯಾನಂತರ ಒಂದೆರಡು ದಶಕಗಳವರೆಗೆ ಶಿಷ್ಟ ಸಾಹಿತ್ಯ ನಿರ್ಮಾಣಗೊಳ್ಳಲೇ ಇಲ್ಲ. ವಿದೇಶೀ ವಿದ್ವಾಂಸರು ಇಲ್ಲಿ ಬಂದು ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಅಧ್ಯಯನ ಸಂಶೋಧನೆಗೆ ಪ್ರಾರಂಭಿಸಿದ ನಂತರ ಇಲ್ಲಿನವರು ಕಣ್ಣು ತೆರೆದರು. ಇತ್ತೀಚೆಗಿನ ಕೆಲವು ದಶಕಗಳಲ್ಲಿ ತುಳುವಿನ ಸಾಹಿತ್ಯ ನಿರ್ಮಾಣ ಆಬಿವೃದ್ಧಿ ಪಥದಲ್ಲಿದೆ. ಸರಕಾರ ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ ಬಳಿಕ ಅಕಾಡೆಮಿ ಬಹಳಷ್ಟು ತುಳು ಗ್ರಂಥಗಳನ್ನು ಪ್ರಕಟಿಸಿದೆ. ದೇಶದ ನಾನಾಭಾಗಗಳಲ್ಲಿ ಸ್ಥಾಪನೆಗೊಂಡ ತುಳು ಕೂಟಗಳು ತುಳು ಭಾಷಾಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿವೆ. ಮಂಗಳೂರಿನಲ್ಲಿ ಆಕಾಶವಾಣಿ ಸ್ಥಾಪನೆಗೊಂಡ ಬಳಿಕ ಆಕಾಶವಾಣಿಯ ಮೂಲಕ ತುಳು ಭಾಷಣ, ತುಳು ಕವನ, ವಿದ್ವಾಂಸರ ಸಂದರ್ಶನ, ತುಳು ಜಾನಪದ ಪ್ರಸಾರವಾಗತೊಡಗಿದೆ. ಪರಿಣಾಮವಾಗಿ ತುಳುವರಲ್ಲಿ ಭಾಷಾಭಿಮಾನ ಬೆಳೆಯತೊಡಗಿದೆ.

ತುಳುವಿನಂತೆ ಕೇವಲ ಕೆಲವೇ ಲಕ್ಷ ಜನರ ಮಾತೃಭಾಷೆಯಾದ ಯಿದಿಷ್‌ ಭಾಷೆಯಲ್ಲಿ ಗ್ರಂಥ ರಚಿಸಿ ೧೯೭೮ರಲ್ಲಿ ನೊಬೆಲ್‌ ಬಹುಮಾನವನ್ನು ಪಡೆದ ಕಥೆಗಾರ ಐಸಾಕ್‌ ಭಾಷೆವಿನ್‌ ಸಿಂಗರ್‌ ತನ್ನ ಭಾಷೆಯ ಬಗ್ಗೆ ನುಡಿದ ಮಾತುಗಳು ತುಳು ಭಾಷೆ – ಸಾಹಿತ್ಯಕ್ಕೂ ಚೆನ್ನಾಗಿ ಅನ್ವಯಿಸುತ್ತದೆ. “ನನಗೆ ಯಿದ್ದಿಶ್‌ ಭಾಷೆ ಹಾಗೂ ಅದನ್ನು ಮಾತನಾಡುವ ಜನತೆ ಬೇರೆ ಬೇರೆ ಅಲ್ಲ ಎನಿಸಿದೆ. ಯಿದ್ದಿಶ್‌ ಭಾಷೆಯಲ್ಲಿನ ದನಿ, ಜೀವನೋತ್ಸಾಹ, ಸಹನೆ ಅಲ್ಲಿನ ಜನರ ಬದುಕಿನಿಂದ ಬಂದದ್ದು. ಈ ಭಾಷೆ ಪ್ರಕಟಿಸುವ ಮಾನವನ ಬಗೆಗಿನ ಗೌರವ ಘನತೆಯು ಆ ಬದುಕಿನ ಫಲವೇ ಆಗಿದೆ. ಯಿದ್ದಿಶ್‌ನಲ್ಲಿ ಆರೋಗ್ಯಕರ ವಿನೋದವಿದೆ. ದಿನನಿತ್ಯದ ಬದುಕಿನ ಬಗ್ಗೆ ಅಪಾರ ಗೌರವವಿದೆ. ಪ್ರೀತಿ ಸಾಹಸಗಳನ್ನು ಅದು ಒಪ್ಪಿ ಆಲಂಗಿಸಿಕೊಳ್ಳುತ್ತದೆ. ಯಿದ್ಧಿಶ್‌ ಮನೋಭಾವ ತೀರ ಒರಟಾದುದಲ್ಲಿ ಯಶಸ್ಸನ್ನು ಅದು ಕೊಡುಗೆಯಾಗಿ ಪಡೆಯಲು ಸಿದ್ದವಿಲ್ಲ. ಸಾಧನೆಯ ಮೂಲಕ ಗಳಿಸಿಕೊಳ್ಳಲು ಹಂಬಲಿಸುತ್ತದೆ. ಅದು ಯಾವುದನ್ನೂ ತನ್ನ ಹಕ್ಕೆಂದು ಪಡೆಯದೆ ಗೊಂದಲಗಳ ನಡುವೆ ಮೂಡುವ ವಿನಾಶದ ಮಧ್ಯೆ ಅರಳುವ ಸೃಷ್ಟಿ ಶಕ್ತಿಯ ಬಗ್ಗೆ ಗಾಢ ವಿಶ್ವಾಸ ಹೊಂದಿದೆ…. ಯಿದ್ದಿಶ್‌ಇನ್ನೂ ಸತ್ತಿಲ್ಲ. ಜಗತ್ತು ಕಾಣುವ ಅದ್ಭುತ ಸಂಪತ್ತು ಅದರಲ್ಲಿದೆ” (ಮುರಳೀಧರ ಉಪಾಧ್ಯ – ಪೊಲಿ, ೨೦೦೦ – ತುಳು ಸಣ್ಣಕತೆ, ಸಾಹಿತ್ಯ, ಜಿಲ್ಲಾಡಳಿತ ದಕ್ಷಿಣ ಕನ್ನಡ, ಮಂಗಳೂರು). ಇದು ತುಳುವಿಗೂ, ಸಂಸ್ಕೃತಕ್ಕೂ ಒಪ್ಪುತ್ತದೆ.

ಆಧುನಿಕ ತುಳುವಿನ ಸ್ವರೂಪವನ್ನು ತಿಳಿದುಕೊಳ್ಳಬೇಕಾದರೆ, ಪ್ರಾಚೀನ ಮತ್ತು ಮಧ್ಯಕಾಲೀನ ತುಳು ಹೇಗಿತ್ತು ಎಂಬುದರ ಅರಿವು ನಮಗಿರಬೇಕಾಗುತ್ತದೆ. ಪ್ರಾಚೀನ ಕಾಲದಲ್ಲಿ ಜನರ ಆಡುಭಾಷೆ ಹೇಗಿತ್ತು ಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಗಳು ದೊರೆಯುವುದಿಲ್ಲ. ಸುಮಾರು ೧೩ನೆಯ ಶತಮಾನದಿಂದೀಚೆಗಿನ ಸಾಹಿತ್ಯ ಕೃತಿಗಳನ್ನು ಅವಲೋಕಿಸಿದಾಗ ಕಂಡು ಬರುವ ವಿಶೇಷತೆ ಎಂದರೆ, ಉಪಲಬ್ಧವಾದ ಎಲ್ಲಾ ಕೃತಿಗಳ ಕರ್ತೃಗಳಲ್ಲಿ ಬ್ರಾಹ್ಮಣರ ತುಳುವಿಗೂ ಬ್ರಾಹ್ಮಣೇತರರ ತುಳುವಿಗೂ ಕೆಲವೊಂದು ವ್ಯತ್ಯಾಸಗಳಿವೆ. ಈ ಅಂತರ ಪ್ರಾಚೀನ ಕಾಲದಲ್ಲಿ ಬಹಳಷ್ಟು ಇದ್ದಿರಬಹುದು, ಬ್ರಾಹ್ಮಣೇತರಿಂದ ಸಂಶೋಧನೆಗೊಳ್ಳದೆ ಇರುವುದರಿಂದ ಪ್ರಾಚೀನ ಕಾಲದ ಸಾಮಾನ್ಯ ತುಳು ಹೇಗಿತ್ತು ಎಂಬುದನ್ನು ಊಹಿಸಲು ಕೂಡಾ ಸಾಧ್ಯವಾಗುವುದಿಲ್ಲ.

ಬ್ರಾಹ್ಮಣರು ವೈದಿಕ ಸಂಸ್ಕೃತಿಯವರಾದ ಕಾರಣ ಅವರ ಕೃತಿಗಳಲ್ಲಿ ಸಂಸ್ಕೃತದ ಪ್ರಭಾವ ಬಹಳಷ್ಟು ಕಂಡುಬರುತ್ತದೆ. ತುಳು ಕಾವ್ಯಗಳನ್ನೋದುವಾಗ ಅವು ತುಳುವಿನ ಪ್ರತ್ಯಯಗಳನ್ನು ಬಳಸಿಕೊಂಡು ಬರೆಯಲಾದ ಸಂಸ್ಕೃತ ಗ್ರಂಥಗಳೋ ಎಂಬಷ್ಟರ ಮಟ್ಟಿಗೆ ಸಂದೇಹಕ್ಕೆ ಎಡೆ ಮಾಡಿಕೊಡುತ್ತವೆ. ತುಳು ಭಾಷೆಯನ್ನು ಹೀಗೆ ಕೂಡಾ ಮಾತನಾಡುತ್ತಿದ್ದರೇ ಎಂಬ ಆಶ್ಚರ್ಯ ಉಂಟಾಗುತ್ತದೆ. ಆಧುನಿಕ ತುಳುವಿನಲ್ಲಿ ಸಂಸ್ಕೃತ ಪದಗಳ ಬೆರಕೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಇಂಗ್ಲಿಷ್‌ ಮತ್ತಿತರ ಭಾಷೆಗಳ ಪದಗಳ ಬಹಳಷ್ಟು ಸೇರ್ಪಡೆಗೊಂಡಿವೆ.

ತುಳು ಭಾಷೆಯನ್ನಾಡುವಾಗ ಕರ್ಮಣೀ ಪ್ರಯೋಗವನ್ನು ಬಳಸುವ ಕ್ರಮ ಆಧುನಿಕ ಕಾಲದಲ್ಲಿಲ್ಲ. ಪ್ರಾಚೀನ ಕಾಲದಲ್ಲಿ ಅದು ಅಪರೂಪ ಬಳಕೆಯಲ್ಲಿತ್ತು. ಆದುನಿಕ ತುಳು ಪ್ರಾಚೀನ ಕಾಲದಲ್ಲಿದ್ದ ಬಹಳಷ್ಟು ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡಿದೆ. ಇನ್ನೊಂದು ವಿಶೇಷತೆ ಎಂದರೆ ಪ್ರಾಚೀನ ಕಾಲದ ತುಳು ಕೃತಿಗಳಲ್ಲಿ ಸ್ದ್‌ ಮತ್ತು ಸ್ಟ್‌ ಎಂಬೆರಡು ಧ್ವನಿಮಾಗಳು ಕಂಡುಬರುತ್ತವೆ. ಪ್ರಾಚೀನವೆಂದೆಣಿಸಿದ ‘ದೇವಿ ಮಹಾತ್ಮೆ’ಯ ರಚನಾ ಕಾಲದಲ್ಲಿ ‘ಸ್ದ್‌’ ಧ್ವನಿಮಾ ಒತ್ತಕ್ಷರವೇ ಆಗಿದ್ದು (ಈಗ ತಮಿಳು ಮಲೆಯಾಳಗಳ ವರ್ತ್ಸ ವರ್ಣಗಳ ಹಾಗೆ) ಮಹಾಭಾರತೊ ಮತ್ತು ಶ್ರೀ ಭಾಗವತೊ ಕಾಲಕ್ಕೆ ಶಿಥಿಲ ದ್ವಿತ್ವವಾಗಿ ಪರಿಣಮಿಸಿರಬೇಕು. ಕಾಲ ಕ್ರಮೇಣ ಶ್ರತಿ ಕಷ್ಟವೆನಿಸಿದ ಈ ಪ್ರಯೋಗ ಸುಲಭೋಚ್ಚಾರಣೆಯ ಪ್ರೀತಿಯಿಂದ ಮರೆಯಾಗಿರಬಹುದು. ಆಧುನಿಕ ಕನ್ನಡಿಗರು ರ, ಳವನ್ನು ಮರೆತಂತೆ ತುಳುವರು ಸ್ಟ್‌ಧ್ವನಿಮಾವನ್ನು ಮರೆತಿರಬೇಕು (ಡಾ. ಭಾರದ್ವಾಜ – ಪಂತಳು -೨೦೦೧). ‘ಸ್ಟ್‌’ ಕಾರವು ಆಧುನಿಕ ಕಾಲದಲ್ಲಿ ಹೇಗೆ ಬದಲಾವಣೆಗೊಂಡಿತು ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ಕಂಡುಕೊಳ್ಳಬಹುದು).

ಪ್ರಾಚೀನ ತುಳು ಆಧುನಿಕ ತುಳು  ಕನ್ನಡ
೦೧. ಅಸ್ಟೆನ್‌ ಅಯಿನ್‌ ಅದನ್ನು
೦೨. ಅಸ್ಟೆಕ್‌ ಅಯಿಕ್‌ ಅದಕ್ಕೆ
೦೩. ಅಸ್ಟೆಟ್‌ ಅಯಿಟ್‌ ಅದರಲ್ಲಿ
೦೪. ಸ್ಟೇನ್‌ ಯೋನ್‌ ನಾನು
೦೫. ಸ್ಟೀಯ್ಯ ಯೀಯ್ಯ ನೀನು
೦೬. ಸ್ಟ್‌ಂಬೆ ಯಿಂಬೆ ಇವನು
೦೭. ಸ್ಟ್‌ಂಬಳ್‌ ಯಿಂಬಳ್‌ ಇವಳು
೦೮. ಸ್ಟಾಯೆ ಆಯೆ ಅವನು
೦೯. ಸ್ಟ್‌ ಯೌ ಅದು
೧೦. ಸ್ಟ್‌ಂದ್‌ ಯಿಂದ್‌ ಇದು
೧೧. ಸ್ಟೇ
೧೨. ಸ್ಟ್‌ಂದ್‌ ಅಂದ ಇಗೊ
೧೩. ಸ್ಟೌರ್ತ್‌ ಚೌಳ್ತ್‌ ಅಲ್ಲಿಂದ
೧೪. ಸ್ಟಿತೆನ ಇತೆನ (ಇತ್ತೆ) ಈಗ
೧೫. ಸ್ಟಿರಡ್‌ (ಇ)ರಡ್‌ ಎರಡು
೧೬. ಸ್ಟೊರಿಯೊ ಒರಿಯೆ ಒಬ್ಬ
೧೭. ಎನಸ್ದ್‌ ಉಳ್ಳವು ಇರುವುದು
೧೮. ಜಾಸ್ದ್‌ ಜೈದ ಯಾವುದು

ಸ್ದ್‌ ಮತ್ತು ಸ್ಟ್‌ ಗಳ ಉಚ್ಚಾರ ಹೇಗಿತ್ತು ಎಂಬುದೇ ತಿಳಿಯಲು ಕಷ್ಟ ಸಾಧ್ಯ. ಸ್ಟ್‌ ಕಾರವು ಹೊಸ ತುಳುವಿನಲ್ಲಿ ಕೆಲವೆಡೆ ತ್‌ ಮತ್ತು ದ್‌ ಕಾರವನ್ನು ತಾಳುತ್ತದೆ. ಕೆಲವೆಡೆ ಅದು ‘ಯ’ ಕಾರವಾದದ್ದೂ ಇದೆ. ಇನ್ನು ಕೆಲವೆಡೆ ಅದು ಯಾವುದಾದರೂ ಸ್ವರಾಕ್ಷರವಾಗಿದ್ದು ನಿರ್ದಿಷ್ಟತೆ ಇಲ್ಲದಿರುವುದು ಕಂಡುಬರುತ್ತದೆ.

ಅಂತೂ ಒಂದು ವಿಚಿತ್ರ ರೀತಿಯ ಧ್ವನಿಮಾ ಪ್ರಾಚೀನ ಕಾಲದ ತುಳುವಿನಲ್ಲಿತ್ತು ಎಂಬುದು ಸ್ಪಷ್ಟವಾಗುತ್ತದೆ. ಪ್ರಾಚೀನ ತುಳು ಕಾವ್ಯದಲ್ಲಿ ಇರುವ ಬಹಳಷ್ಟು ತುಳು ಪದಗಳು ಆಧುನಿಕ ತುಳುವಿನಲ್ಲಿ ಪ್ರಯೋಗದಲ್ಲಿಲ್ಲ. ಉದಾಹರಣೆಗೆ ಅಂಬುಡಿಕೆ (ಬತ್ತಳಿಕೆ), ತೆರ್ವೆತೃ (ಹೆದೆ), ಬೆಳ್ಪು (ಬೆಳಕು), ಕೊಳ್ಳಿಮೆನ್ನ್‌ (ಉಲ್ಕೆ), ಒನೀತ್‌ (ಸ್ವಲ್ಪ), ಗುತ್ತುಪಾರ್‌ (ಜಿಗಿಯು), ನೀರ್ಪು (ವಾಸಿಸು), ಬಿಡ್ಪು (ನಿಯಂತ್ರಿಸು), ಉಚಿಪು (ಸೀಳು), ತೆಂಬಡ (ದಾರಿ), ಬೆಳಿರ್‌ (ವಿಶಾಲ), ಕಾಟ್‌ (ಕಾಡು), ಪಜಿವೋದೆರ್‌ (ಅಲ್ಪಜ್ಞಾನಿಗಳು), ವಿಶಾ (ಬೇಗ), ಕಬ್ಬಲ (ಸರ್ವ), ಅಗ್ಯಕಾಲ (ಕೆಟ್ಟಕಾಲ), ನುಂಬತೌಳ್‌ (ಅಂಗಣ), ಕಂದಿಕೆ (ನೂಪುರ), ರೆಂಗಬುದ್ದೀ (ದುರ್ಬುದ್ಧಿ), ಕಾಟಾಗ್ನಿ (ಕಾಡ್ಗಿಚ್ಚು), ಬಿರುವೇ ಚಾಡ್‌ಕುಳು (ಯೋಧರು), ವೀರಿ (ಕಾಡ್ಗಿಚ್ಚು), ಪುರವಟ್ಟ (ಗುರುಕುಲ) – ಇವೇ ಮುಂತಾದವುಗಳು, ಇವು ಹೊಸ ತುಳುವಿನಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ.

ಸಂಸ್ಕೃತ ಪದಗಳು ದ್ರಾವಿಡ ಭಾಷೆಗೆ ವರ್ಗಾವಣೆಗೊಳ್ಳುವಾಗ ಸಾಮಾನ್ಯವಾಗಿ ನಾಮಪದಗಳ ಅಂತ್ಯಾಕ್ಷರವೂ ‘ಎ’ ಕಾರವನ್ನು ತಾಳುತ್ತದೆ. ಪ್ರಾಚೀನ ತುಳುವಿನಲ್ಲಿ ಆದಿ ಅಕ್ಷರವೂ ಕೂಡ ‘ಎ’ ಕಾರಕ್ಕೆ ತಿರುಗುದುದು ಕೆಲವೆಡೆ ಕಂಡು ಬರುತ್ತದೆ. ಉದಾ : ರಶ್ಮಿ-ರೆಶ್ಮಿ, ರಕ್ಷಿಸು-ರೆಕ್ಷಿಸು, ರಚಿಪು-ರೆಚಿಪು, ಜಗತ್‌ಜೆಗತ್ತ್‌, ಜನ-ಜೆನೊ, ಗಂಗೆ-ಗೆಂಗೆ – ಇತ್ಯಾದಿ.

ಈ ರೀತಿಯ ಮಾರ್ಪಾಟು ಆಧುನಿಕ ತುಳುವಿನಲ್ಲಿ ಕಂಡುಬರುವುದಿಲ್ಲ.

ಆಧುನಿಕ ಕಾಲದಲ್ಲಿ ತುಳು ಭಾಷೆಗೆ ಸಾಕಷ್ಟು ವ್ಯಾಕರಣ, ನಿಘಂಟು ಪುಸ್ತಕಗಳು ರಚನೆಗೊಂಡಿವೆ. ೧೯೬೭ರಲ್ಲಿ ಪ್ರೊ. ಮರಿಯಪ್ಪ ಭಟ್ಟ ಹಾಗೂ ಡಾ. ಶಂಕರ ಕೆದಿಲಾಯರು ೮೦೦೦ ಶಬ್ದಗಳ ಅರ್ಥಕೋಶವೊಂದನ್ನು ರಚಿಸಿದರು. ಇದಕ್ಕಿಂತ ಪೂರ್ವದಲ್ಲಿ ಅಂದರೆ ಕ್ರಿ. ಶ. ೧೮೫೬ರಲ್ಲಿಯೇ ಕೆ. ಜಿ. ಕಮ್ಮರೆರ್ ೨೦೦೦ ಶಬ್ದ ಘಟಕಗಳ ಸಂಗ್ರಹ ಮಾಡಿದರು. ಇವರ ಕೆಲಸವನ್ನು ಮುಂದುವರಿಸಿದ ಮೆನ್ನರ್‌೧೮,೦೦೦ ಶಬ್ದಗಳನ್ನೊಳಗೊಂಡ ತುಳು-ಇಂಗ್ಲಿಷ್‌ನಿಘಂಟನ್ನು ರಚಿಸಿದ್ದರು. ಮುಂದೆ ೧೯೮೮ ರಲ್ಲಿ ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ೬ ಸಂಪುಟಗಳನ್ನೊಳಗೊಂಡ ವಿಶ್ವಕೋಶದ ಮಾದರಿಯಲ್ಲಿ ತುಳು ಬೃಹತ್‌ನಿಘಂಟು ಯು. ಪಿ. ಉಪಾಧ್ಯಾಯ ಅವರ ಸಂಪಾದಕತ್ವದಲ್ಲಿ ಕು. ಶಿ. ಹರಿದಾಸ ಭಟ್ಟರ ನೇತೃತ್ವದಲ್ಲಿ ಪ್ರಕಟಗೊಂಡಿತು. ಈ ನಿಘಂಟಿನಲ್ಲಿ ಸಂಶೋಧನೆಗೊಂಡ ಎಲ್ಲ ಪ್ರಾಚೀನ ಮತ್ತು ಮಧ್ಯಕಾಲೀನ (ತುಳು ಲಿಪಿಯಲ್ಲಿ ಮತ್ತು ಕನ್ನಡ ಲಿಪಿಯಲ್ಲಿ ಬರೆಯಲಾದ) ಕೃತಿಗಳಲ್ಲಿ ಕಂಡುಬಂದ ಪ್ರಕೃತ ಕಣ್ಮೆ ರೆಯಾದ ಪದಗಳನ್ನು ಸೇರಿಸಿಕೊಳ್ಳಲಾಗಿದೆ. ಹೀಗಾಗಿ ಮುಂದಿನ ಬರಹಕಾರರು ತಮ್ಮ ಕೃತಿಗಳಲ್ಲಿ ಈ ಪದಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ತುಳುವಿನಲ್ಲಿ ಲಿಖಿತ ಸಾಹಿತ್ಯದ ಕೊರತೆ ಇದ್ದುದರಿಂದಲೋ ಏನೋ ಮಧ್ಯಕಾಲದಲ್ಲಿ ಜನಪದ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಕನ್ನಡಲಾವಣಿಗಳನ್ನು ಹೋಲುವ ಪಾಡ್ದನ, ಸಂಧಿಗಳೆಂದು ಕರೆಯಲ್ಪಡುವ ಪದ್ಯಗಂಧೀಗದ್ಯ ಕೃತಿಗಳು ಜಾನಪದ ಭಂಡಾರಕ್ಕೆ ಸೇರ್ಪಡೆಗೊಂಡವು. ತುಳುನಾಡಿನ ಜನಜೀವನದ ವಿವಿಧ ಮುಖಗಳನ್ನು ಧಾರ್ಮಿಕ ಹಾಗೂ ಸಾಮಾಜಿಕ ಪರಂಪರೆಯ ವಿವಿಧ ಚಿತ್ರಗಳನ್ನು ಪ್ರತಿ ಬಿಂಬಿಸುವಲ್ಲಿ ಈ ಪಾಡ್ದನಗಳು ಸಫಲತೆ ಪಡೆದಿವೆ. ತುಳುನಾಡಿನ ಜನತೆಯ ವಿವಿಧ ಕುಲಕಸುಬುಗಳು ಹಬ್ಬ ಆಚರಣೆಗಳು, ಸಂಗೀತ, ಕುಣಿತ, ಕಲೆಗಳು, ಆಟ-ವಿನೋದಗಳು ಮುಂತಾದವುಗಳಿಗೆ ಸಂಬಂಧಿಸಿದ ಶಬ್ದ ಸಂಪತ್ತು ಬೆಳೆದು ಬಂದು ತುಳು ಭಾಷೆಯ ಶಬ್ದ ಭಾಂಡಾರ ಸಮೃದ್ಧವಾಯಿತು. ಜೊತೆಗೆ ಪಣಿಯಾಡಿ ಮತ್ತವರ ಬಳಗದವರಾದ ಸತ್ಯಮಿತ್ರ ಬಂಗೇರ, ಬಡಕಬೈಲು ಪರಮೇಶ್ವರಯ್ಯ, ಪೊಳಲಿ ಶೀನಪ್ಪ ಹೆಗಡೆ, ಎನ್‌. ಎಸ್‌. ಕಿಲ್ಲೆ, ಎಂ. ವಿ. ಹೆಗ್ಡೆ, ಮಾಧವ ತಿಂಗಳಾಯ ಮೊದಲಾದವರು ೧೯೨೮ರಲ್ಲಿ ಪ್ರಾರಂಭಿಸಿದ ತುಳುವ ಸಾಹಿತ್ಯ ಮಾಲೆಯ ಮೂಲಕ ಹಲವಾರು ತುಳು ಕೃತಿಗಳು ಹೊರಬಂದುವು. ತುಳು ಭಾಷೆ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ದುಡಿದ ಈ ಪ್ರಮುಖರ ಗಣನೀಯ ಪ್ರಯತ್ನದಿಂದ ತುಳು ಭಾಷೆಗೊಂದು ಶಿಷ್ಟತೆ ಒದಗಿ ಬಂತು.

ಪಾಡ್ದನಗಳ ಪ್ರಭಾವದಿಂದ ಆಧುನಿಕ ತುಳುವಿಗೆ ಬಹಳಷ್ಟು ಸುಂದರವಾದ ನುಡಿಗಟ್ಟುಗಳು, ಗಾದೆ ಮಾತುಗಳು ಸೇರ್ಪಡೆಗೊಂಡುವು. ಮುಖ್ಯವಾಗಿ ಆಧುನಿಕ ಸಾಹಿತಿಗಳು ಮತ್ತು ನಾಟಕಕಾರರು ಇವುಗಳನ್ನು ತಮ್ಮ ಕೃತಿಗಳಲ್ಲಿ ಬಳಸಿ ರೂಢಿಗೆ ತಂದರು. ತುಳು ವಿದ್ವಾಂಸರಾದ ಅಮೃತ ಸೋಮೇಶ್ವರರು ತಮ್ಮ ಕೃತಿಗಳಲ್ಲಿ ಬಳಸಿಕೊಂಡು ಬಂದಂತಹ ಕೆಲವು ನುಡಿಗಟ್ಟುಗಳನ್ನು ಇಲ್ಲಿ ಹೀಗೆ ಉದಾಹರಿಸಬಹುದು:

ಪೊರ್ಲು-ಪೊಳಿಕೆ (ಅಂದ-ಚಂದ), ಕಲೆ (ಕಾರಣಿಕ), ಅಂಕ- ಆಯನ (ಸ್ಪರ್ಧೆ-ಜಾತ್ರೆ), ನಾಡಿ-ನರಂಬು (ನರನಾಡಿ), ಆಯ-ಬೀರ (ಶಕ್ತಿ-ಸಾಮರ್ಥ್ಯ), ನೆತ್ತೆರಗೊಬ್ಬು (ರಕ್ತದಾಟ), ಕೊಂಬು-ವಾಲಗ (ಕೊಂಬು-ವಾಲಗ), ಬಿರ್ದ್‌ಬಲ್ಮಣ (ಬಿರುದು-ಸನ್ಮಾನ), ಕೊಂಡಾಚಟೊಂದ ಕುರ್ಲೆ (ಮುದ್ದು ಮರಿ), ಕಣ್ಣ್‌ದ ಕುಂಞೆ, ಕಣ್ಣದ ಆಲಿ (ಕಣ್ಣುಗೊಂಬೆ), ಪೊರ್ಲಕಂಟ್‌ (ಅತ್ಯಂತ ಮುದ್ದು), ಏಳದೆಯ ಯಮಗೊಂಡೊ (ಏಳು ಬಾಗಿಲ ಗುಪ್ತ ಕೋಣೆ), ಪೋಕಾಲ (ಹೋಗುವ ಕಾಲ), ಕೊನಲೆದ ಬಿತ್ತ್‌ (ಕಳೆಬೀಜ), ಗರ್ಗಂಡ ಕತ್ತಲೆ (ಕಣ್ಣುಕುಕ್ಕುವ ಕತ್ತಲೆ), ರೂಬು-ರೂಬು (ಎದುರೆದುರು), ಅರ್ತಿದ ಪೂ (ಅರ್ತಿ ಹೂ-ಅಪರೂಪ),ಕೋಂಗಿ ಕಟ್ಟುನೆ (ಹಿಯ್ಯಾಳಿಸು), ನಿರ್ಸಾನಿಗೇ ನೀರ್‌ರಟ್ಟವುನೆ (ಗುರಿ ಮುಟ್ಟುವುದು), ಕೆಸರ್ದ ಕಂಬ (ದುರ್ಬಲ), ಕೆಸರ್‌ಕಲ್ಲ್ (ಶಿಲಾನ್ಯಾಸ), ಅಂಗಲ್ಪು -ಬೆಂಗಲ್ಪು -(ಅತ್ಯಾಸೆ- ಆತುರ), ಪಿತ್ತಾಳೆ ಕೆಬಿ (ಹಿತ್ತಾಳೆ ಕಿವಿ), ಜಕ್ಕಜವ್ಯಂದಿಗೆ (ಕಟ್ಟುಮಸ್ತಾದ ಯೌವನ), ದಡಿಬೊಟ್ಟುನೆ (ಅಹಂಕಾರದ ಮಾತು), ತೆತ್ತಿಡ್‌ಕಿಲೆಪುನೆ (ಸಣ್ಣ ಪ್ರಾಯದಲ್ಲಿ ದೊಡ್ಡ ಮಾತನಾಡುವುದು). ಒಕ್ಕಣೆ ತರ್ಕಣೆ (ಉಲ್ಲೇಖ ದೃಷ್ಟಾಂತ), ತಂಙನೆ -ಮಂಙನೇ (ಒಣಪು- ಒಯ್ಯಾರ), ಬೇನೆ – ಬೇಸರ (ನೋವು -ದುಃಖ), ಕಜಿಪುದ ಕೋರಿ (ಹೇಡಿ), ಅರೆ ಕೊಡ್ಡಲ್‌(ಅರೆ ಬೆಂದ ಸಾರು), ತಿರ್ಗ ಮುರ್ಗ (ತಿರ್ಗ ಮುರ್ಗ), ಮಣ್ಣ್‌ ಮೂರಿ ಲಕ್ಕುನೇ (ವಿನಾಶ ಕಾಲ ಸಮೀಪಿಸುವುದು), ಕರ್ಲ್‌ಗ್‌ ಕುಂತುನಿ (ಕರುಳಿಗೆ ಚುಚ್ಚುವ ವೇದನೆ), ಮರ್ಲ್ ಕಟ್ಟುನೆ (ಹುಚ್ಚಾಟ), ಕೋಲ ಕಟ್ಟುನೆ (ವೇಷ ಹಾಕುವುದು), ದೋಲು ಬಂಜಿ (ಡೊಳ್ಳೊಟ್ಟೆ), ಬಿದೆ ಮುಕ್ತಾವುನೆ (ಸಂತಾನ ನಾಶ), ಪುಗೆ ತೂಪಿನಿ (ಸಾವು ನೋಡುವುದು), ಕೊಡಿ ಎತ್ತುನೆ (ಗುರಿ ಮುಟ್ಟುವುದು), ಲತ್ತ್‌ ಬುದ್ಧಿ (ಎಳೆ ಮನಸ್ಸು), ಸುಡುಸೂಕರ (ಸುಟ್ಟು ಕರಕಲಾಗು), ಮುರ್ಯಲಕ್ಕುನೀ (ಸತ್ತವರ ಬಗ್ಗೆಗೋಳು).

ಪ್ರೊ. ವಿವೇಕ ರೈಯವರು : ಸೊಲ್ಮೆ ಸಂದಾವುನೆ (ಕೃತಜ್ಞತೆ ಸಲ್ಲಿಸುವುದು), ಸೇಜಿಪಾಲ್‌(ದುಡಿಮೆಯ ಪಾಲು), ತಗೆ -ತಂಗಡಿ (ಅಣ್ಣ -ತಂಗಿ), ಸುಗಿಪು (ಸ್ತುತಿ), ಎದುರ್ಕೊನುನೆ (ಸ್ವಾಗತಿಸುವುದು), ಮದ್ಮೆ ಮಾಸಿರಿ (ಮುದುವೆ ವೈಭವ), ಲೇಸ್‌ (ಸಮಾರಂಭ), ಒಕ್ಕೆಲ್‌ ಸಕ್ಕೆಲ್‌ (ಒಕ್ಕಲು- ಕೆಲಸದವರು), ತರೆಕ್‌ ಕೈಪಾಡಿನಿ (ಮೂಲಕ್ಕೆ ಪ್ರಶ್ನೆ ಹಾಕುವುದು), ಬೇರ್‌ಗ್‌ ಬೆಂದ್ರ್‌ (ಮೂಲವನ್ನೇ ನಾಶ ಮಾಡುವುದು), ನೀರ್‌ನಂಜಾಪುನೆ (ಸದಾ ಕುಡಿವ ನೀರು ವಿಷವಾಗುವುದು), ಮದಿಪು (ಒಳ್ಳೆ ಮಾತು), ಉನ್ಪು ಗಂಜಾಪುನೆ (ತುಂಬಾ ಕಷ್ಟಪಡುವುದು), ಪಾರಿಪನ್ಪುನೆ (ಎಡೆಬಿಡದೆ ಹೇಳುತ್ತಾ ಹೋಗುವುದು), ನೇಮನಿರಿ (ನೇಮ ಆರಾಧನೆ), ಬಲಿ – ಭೋಗ (ಬಲಿ ಪೂಜೆ), ಜಯಾಸಾರತಿ (ಜಯಕ್ಕೆ ಬೆಂಗಾವಲು), ಬೆರಿಸಾಯೊ (ಸಹಕಾರ), ಉದಿಪನ (ಮುಕ್ತಾಯ), ಸುದಾರಿಕೆ (ನಿರ್ವಹಣೆ) ಹೀಗೆ ಹಲವಾರು ಪದಗಳನ್ನು ರೂಢಿಗೆ ತಂದಿದ್ದಾರೆ. ಕೆದಂಬಾಡಿ ಜತ್ತಪ್ಪ ರೈ. ಮುಂದಾರ ಕೆಶವ ಭಟ್ಟ, ಸುನೀತಾ ಶೆಟ್ಟಿ,ವಾಮನ ನಂದಾವರ, ಚಿನ್ನಪ್ಪ ಗೌಡ, ಬನ್ನಂಜೆ ಬಾಬು ಅಮೀನ್‌, ವಸಂತಕುಮಾರ ಪೆರ್ಲ – ಹೀಗೆ ಬಹಳಷ್ಟು ಮಂದಿ ಸಾಹಿತಿಗಳು ತಮ್ಮ ಸಾಹಿತ್ಯದಲ್ಲಿ ಮಧ್ಯಕಾಲಿನ ನುಡಿಗಟ್ಟುಗಳನ್ನು ಬಳಸಿಕೊಂಡು ಅವು ಅಳಿದು ಹೋಗದಂತೆ ಮಾಡಿದ್ದಾರೆ.

ಹೀಗೆ ಆಧುನಿಕ ತುಳುವಿಗೆ ಬಹಳಷ್ಟು ನುಡುಗಟ್ಟುಗಳ ಸೇರ್ಪಡೆ ಯಾದರೆ ಹಲವಾರು ಪದಗಳು ಮೂಲರೂಪವನ್ನು ಕಳೆದುಕೊಂಡು ಹೊಸರೂಪದಿಂದ ಹೊಸ ತುಳುವಿಗೆ ಸೇರಿವೆ. ಉದಾ : ಅದೆಕಿ – ಸಂತಾನೊ (ಸಂತಾನ), ಇಡೆ ಮಂಡಿಗೆ -ಇಕ್ಕಟ್ಟ್ (ಇಕ್ಕಟ್ಟು), ಕನ್ಯಪು -ಕಿನ್ಯಪೊಣ್ಣು (ಸಣ್ಣ ಹುಡುಗಿ), ಪರಂಟ್‌ ತೊಂದೆ (ಚೊಂದೆಕಪ್ಪೆ), ಕರ್ತೊತ್ತಿಗೆ -ಆಡಳ್ತೆ (ಆಡಳಿತೆ), ಗರಿಕೆನ (ಶುದ್ಧ), ತೊಂಬರ -ಗೌಜಿ (ಗದ್ದಲ), ತಬುಕು- ಹರಿವಾಣೊ (ಹರಿವಾಣ), ತಮಕೆ -ಬುಡುಪೊರ್ತು (ಬಿಡು ಸಮಯ), ದಡಿಪು -ಬೆರಿಪತ್ತ್‌ (ಬೆನ್ನಟ್ಟು), ಎಜ್ಜೆ -ಒಟ್ಟೆ (ತೂತು), ದುಂಜಿ-ಸುಂಗು (ಸಪೂರವಾದ ಮುಳ್ಳು), ದೆಕ್ಕಾಯಿ -ಬದ್ಧ (ನಿಶ್ಚಿತಾರ್ಥ), ದೊಜ್ಜೆಲ್ -ಕುರ್ತೆಲ್‌ (ಹೊಲಸು), ಸಂದೆಗ-ಅಟ್ಟನೆ (ಸನ್ನಾಹ), ಪಂಜ -ಪಡಿಲ್ (ಬಂಜರು), ಪಂತ್‌ಉರ್ಲ್‌ ‍(ಉರುಳು), ಒಯ್ಯನೆ -ಅರ್ದುನೆ (ಒಗೆಯುವುದು), ಅಜಲ್‌ಪಾಲು (ಪಾಲು), ಅಜಕಳ- ಪಾಲ್‌ಕಟ್ಟುನೇ (ಪಾಲು ಮಾಡುವುದು), ಪಪ್ಪು – ಮಾಸೋ (ಮಾಂಸ), ಕಲ್ಪೊರೊ- ಕರ್ಪೂರ (ಕರ್ಪೂರ), ಪಾಂಡವು- ಪುದ (ಪಾರಿವಾಳ), ಪಾಲೆವು- ಬೊಳಿಯ ಏಮೆ (ಬಿಳಿ ಆಮೆ), ಅಂಗಮುಟ್ಟೆ -ಬೋಳು ಮಂಡೆ (ಬೋಳುತಲೆ), ಪುಟ್ಟ- ಗುಳ್ಳೆ (ಗುಳ್ಳೆ), ನೆರೊ -ವರ್ಣೊ (ಬಣ್ಣ), ಬಾರಣೆ- ಮುಕ್ಕುನೆ (ಗಬಗಬ ತಿನ್ನು), ಸಿಡಿ – ಚೆಕ್ಕ್‌(ತೊಳ್ಳೆ), ವಜಯೊ -ಆಕಾರೊ (ಆಕಾರ), ಸಿದ್ಯ- ಎಲ್ಯ ಕಿನ್ಯ (ಸಣ್ಣ), ಮೂರಜೆ -ಕೇರಿ (ಕೇರೆ ಹಾವು), ಮುರ್ಲಡಿ- ಮೊಟ್ಟು (ಚಪ್ಪಲಿ), ಮೊಲ್ಲತೊ- ಬಿರಕೆ (ಕಲಬೆರಕೆ), ಮೊರ್ಲೊರ -ಸೂರ್ಗೊ (ಸ್ವರ್ಗ), ಬಿರತ್ತೊಪುನೆ -ಬೂರನೆ (ಬೀಳುವುದು), ಮಲಿಪ್ಪುನೆ -ಜಾರುನೆ (ಉರುಳುವುದು), ಅಂಗಾತ್ನೆ -ಬಾಜೆಲ್‌(ದಾಹ), ವಯಲುನೆ -ಅಲೆಗುನೆ -(ಅಲ್ಲಾಡು), ತೋಕೆ -ತೊಟ್ಟಿ (ತೊಟ್ಟಿ), ಎಲ್ಕಟೆ -ಎಲುತಗೂಡು(ಅಸ್ಥಿಪಂಜರ), ವಯೊ- ಸರೋ (ಶರೀರ), ಗದ್ದಿಗೆ -ಆಸನೋ (ಪೀಠ), ಪೊಲಬುಗುರ್ತೋ (ಪರಿಚಯ), ಬಯ್ಯನೆ -ತಡೆವುನೆ (ತಡೆಯು), ಪಜವು -ಕಪ್ಪಲ್‌(ಹಡಗು), ಪರು -ಕೂಲಿ (ಹಲ್ಲು), ವಡ್ಡಾರ- ಬುಳೆಚಿಲ್‌ (ಬೆಳವಣಿಗೆ), ಒನ್ನಡ್‌ ದುಂಬುಡು (ಹಿಂದೆ), ಅಡೆಕ್ಕೊ -ಕಿನ್ಯ (ಸಣ್ಣ), ಅಕ್ಕಳ -ಅಡಿಗೆಕೋಣೆ (ಪಾಕಸಾಲೆ), ಪೆರ್ಗ -ನಿಧಿ (ನಿಧಿ), ತಿರಿ -ಬತ್ತಿ (ಬತ್ತಿ), ಊದು -ಆಧಾರೊ (ಆಧಾರ), ಇರ್ಮೆನ -ಮೈಕೊಕ್ಕೆರುನೆ (ರೋಮಾಂಚನ), ಮದಕ -ಅಡ್ಡದಂಡೆದ ಕೆದು (ಮದಗ), ಇನೆ ಪಕ್ಕಿ -ಚಕ್ರವಾಕ (ಜಕ್ಕವಕ್ಕಿ), ಮಾಣೆಚ್ಚರಿ – ಅವೇಸೊ (ಆವೇಶ), ಇನೆ ಮೋಕೆ -ಪ್ರೇಮೊ (ಪೇಮ).

ಕಾಸರಗೋಡಿನಿಂದ ಹಿಡಿದು ಕುಂದಾಪುರದವರೆಗೆ ಪಸರಿಸಿರುವ ಒಂದು ಚಿಕ್ಕ ಪ್ರದೇಶ ತುಳುನಾಡು ಒಂದು ಕಡೆಯಿಂದ ಅರಬೀ ಸಮುದ್ರ – ಇನ್ನೊಂದು ಕಡೆಯಿಂದ ಪಶ್ಚಿಮ ಘಟ್ಟದ ತಡೆಗೋಡೆ ಇರುವುದರಿಂದ ಪ್ರಾಚೀನ ಕಾಲದಲ್ಲಿ ಈ ಪ್ರದೇಶಕ್ಕೆ ಪರಭಾಷೆಗಳನ್ನಾಡುವ ಜನರ ಪ್ರದೇಶ ಕಡಿಮೆ ಇತ್ತು. ತುಳು ನಾಡಿನ ಒಳಭಾಗದಲ್ಲಿಯೂ ಗುಡ್ಡ – ಬೆಟ್ಟಗಳು, ನದಿ – ಹೊಳೆಗಳು ಅಲ್ಲಲ್ಲಿ ದಟ್ಟ ಕಾಡು ಇದ್ದುದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಸರಿಯಾದ ರಸ್ತೆಗಳಿರಲಿಲ್ಲ. ಜನರ ಸಂಪರ್ಕ ಬಹಳ ಕಡಿಮೆಯಾಗಿತ್ತು. ಸ್ವಭಾವತಃ ತುಳು ಒಂದು ಆಡು ಭಾಷೆ. ತುಳು ನಾಡಿನ ಒಳಭಾಗದ ಒಂದೊಂದು ಗುಂಪು ಸಮುದಾಯದ ಜನರ ಆಡುಭಾಷೆ ಅಲ್ಲಿನವರ ಜಿಹ್ವಾಸಾಮರ್ಥ್ಯಕ್ಕನುಸಾರವಾಗಿ ಬೇರೆ ಬೇರೆ ರೀತಿಯಲ್ಲಿ ಬೆಳೆದು ಬಂತು. ತುಳು ನಾಡಿನ ಮಧ್ಯಭಾಗದಿಂದ ಮುಖ್ಯನದಿ ನೇತ್ರಾವತಿ ಹರಿಯುತ್ತಿದೆ. ಈ ನದಿ ಭೌಗೋಳಿಕ ನಾಡನ್ನು ಉತ್ತರ -ದಕ್ಷಿಣವೆಂಬುದಾಗಿ ವಿಭಜಿಸುತ್ತದೆ. ಈ ವಿಭಜನೆಗನುಸಾರವಾಗಿ ಭಾಷೆಯೂ ಕೂಡ ಬೇರೆ ಬೇರೆ ರೂಪವನ್ನು ಹೊಂದಿತ್ತು. ಕಾಸರಗೋಡು ಪ್ರದೇಶದ ಮೇಲೆ ಮೊದಲಿನಿಂದಲೂ ಮಲೆಯಾಳದ ಪ್ರಭಾವವಿದ್ದುದರಿಂದ ಅಲ್ಲಿನ ತುಳು ಒಂದು ರೀತಿಯದ್ದಾಗಿದ್ದರೆ ಸುಳ್ಯವು ದಟ್ಟಕಾಡಿನಿಂದ ಆವೃತ್ತವಾಗಿದ್ದು ಅಲ್ಲಿನ ತುಳುವು ಇನ್ನೊಂದು ರೀತಿಯದ್ದಾಗಿತು. ಉಳಿದ ಪೂತ್ತೂರು -ಬಂಟ್ವಾಳ -ಬೆಳ್ತಂಗಡಿ ಭಾಗದ ತುಳು ಮತ್ತೊಂದು ರೀತಿಯದ್ದಾಗಿತ್ತು.

ನೇತ್ರಾವತಿಯ ಉತ್ತರ ಭಾಗದ ಮಂಗಳೂರು -ಉಡಪಿಯ ಭಾಷೆ ಒಂದು ಬಗೆಯದ್ದಾಗಿದ್ದರೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರ್ಕಳದ ತುಳು ಭಾಷೆ ಮತ್ತೊಂದು ಬಗೆಯದಾಗಿತ್ತು. ಭೌಗೋಳಿಕವಾಗಿ ತುಳು ನಾಡಿನ ಭಾಷಾ ಪ್ರಭೇದಗಳನ್ನು ಈ ರೀತಿಯಾಗಿ ಉದಾಹರಿಸಬಹುದು.

ಕನ್ನಡ ಕಾಸರಗೋಡು ಸುಳ್ಯ ಪೂತ್ತೂರು ಬಂಟ್ವಾಳ ಬೆಳ್ತಂಗಡಿ ಮಂಗಳೂರು ಉಡಪಿ ಕಾರ್ಕಾಳ
ಸೌತೆ ಚೌತೆ ಚೌತೆ ಸೌತೆ ತೌತೆ ಹೌತೆ
ತಾಳೆ ಚಾರಿ ಆರಿ ಸಾರಿ ತಾರಿ ಹಾರಿ
ಸೊಪ್ಪ ಚಪ್ಪ ಅಪ್ಪ ಸಪ್ಪ ತಪ್ಪ ಹಪ್ರು
ತಲೆ ಚರೆ ಅರೆ ಸರೆ ತರೆ ಹರೆ
ಬೆಂಕಿ ಚೂ ಸೂ ತೂ ಹೂ

ಈ ಪ್ರಭೇದಗಳುಂಟಾಗಲು ಈ ಕೆಳಗಿನಂತೆ ಕಾರಣಗಳನ್ನು ನೀಡಬಹುದಾಗಿದೆ.

೧. ಮಲೆಯಾಳಂನ ಪ್ರಭಾವದಿಂದ ಕಾಸರಗೋಡು ಪ್ರದೇಶದಲ್ಲಿ ‘ಚ’ ಕಾರವು ಹೆಚ್ಚು ಬಳಸಲ್ಪಡುತ್ತದೆ.

೨. ಸುಳ್ಯವು ಕಾಡು ಪ್ರದೇಶವಾಗಿದ್ದು ಅಲ್ಲಿ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ವರ್ಗಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅವರು ಪರಂಪರಂಗತವಾಗಿ ಬಂದ ತುಳು ಭಾಷೆಯನ್ನೇ ಬಳಸುತ್ತಿದ್ದರು. ಳ ಮತ್ತು ಮ ಕಾರವನ್ನು ಹೆಚ್ಚು ಬಳಸುತ್ತಿದ್ದರು. ನಿಧಾನಗತಿಯಲ್ಲಿ ಮಾತ್ತನಾಡುತ್ತಿದ್ದರು. ವ್ಯಂಜನಾಕ್ಷರಗಳ ಬದಲು ಸ್ವರಾಕ್ಷರಗಳಿಂದ ಪದಗಳನ್ನು ಪ್ರಾರಂಬಿಸುತ್ತಿದ್ದರು.

೩. ಪುತ್ತೂರು – ಬಂಟ್ವಾಳ – ಬೆಳ್ತಂಗಡಿಯವರು ಹೆಚ್ಚು ನಿಧಾನವೂ ಅಲ್ಲದ, ಹೆಚ್ಚು ವೇಗವೂ ಅಲ್ಲದ ಗತಿಯಲ್ಲಿ ಮಾತನಾಡುತ್ತಿದ್ದರು.ಇವರು ಸಕಾರವನ್ನು ಹೆಚ್ಚು ಬಳಸುತ್ತಿದ್ದರು. ಸುಳ್ಯದವರು ಣ ಕರವನ್ನು ಪದ್ಯಾಂತ್ಯದಲ್ಲಿ ಬಳಸಿದರೆ, ಇಲ್ಲಿನವರು ನಕಾರವನ್ನು ಬಳಸುತ್ತಿದ್ದರು. ಉದಾ : ಪೋಪುಣ- ಪೋಪನೆ, ಬರ್ಪುನೆ, ಹಿನ್ಪುಣ -ಸಿನ್ಪುನೆ.

೪. ಮಂಗಳೂರು – ಉಡಪಿಯ ಕಡೆಯವರು ವೇಗವಾಗಿ ಮಾತನಾಡುತ್ತಾರೆ. ಅಲ್ಪಪ್ರಾಣ ಅಕ್ಷರಗಳನ್ನೇ ಹೆಚ್ಚು ಬಳಸುತ್ತಾರೆ. ಇವರು ಪದಗಳನ್ನು ಹೆಚ್ಚಾಗಿ ‘ಇ’ ಕಾರದಿಂದ ಅಂತ್ಯಗೊಳಿಸುತ್ತಾರೆ. ಉದಾ : ಪೋಪಿನಿ, ಬರ್ಪಿನಿ, ತಿನ್ಪಿನಿ.

೫. ಕಾರ್ಕಾಳದಲ್ಲಿ ಜೈನರ ಸಂಖ್ಯೆ ಹೆಚ್ಚು. ಜೈನರು ಪೂರ್ವದಲ್ಲಿ ಪ್ರಾಕೃತ ಭಾಷೆಯನ್ನು ಬಳಸುತ್ತಿದ್ದರು. ಪ್ರಾಕೃತ ಭಾಷೆಯಲ್ಲಿ ಹ ಕಾರದ ಬಳಕೆ ಹೆಚ್ಚು ಹಾಗಾಗಿ ಜೈನರು ತುಳು ಪದಗಳನ್ನು ಕೂಡಾ ಹೆಚ್ಚಾಗಿ ಹಕಾರದಿಂದಲೇ ಪ್ರಾರಂಬಿಸುತ್ತಾರೆ. ಜೈನರ ಹಕಾರದ ಪ್ರಭಾವ ಕಾರ್ಕಳದ ಸಾಮಾನ್ಯ ತುಳುವಿನ ಮೇಲೂ ಬಿದ್ದಿದೆ.

೬. ಉಡುಪಿಯಲ್ಲಿ ಶಿವಳ್ಳಿ ಬ್ರಾಹ್ಮಣರ ಸಂಖ್ಯೆ ಹೆಚ್ಚು ಬ್ರಾಹ್ಮಣರ ತುಳು ಸಾಮಾನ್ಯ ತುಳುವಿಗಿಂತ ಭಿನ್ನವಾಗಿರುತ್ತದೆ. ಬ್ರಾಹ್ಮಣರ ಉಡಪಿಯ ಸಾಮಾನ್ಯ ತುಳುವಿನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಉದಾ : ದೆತೊನು -ಗೆತೊನು, ದೆಕ್ಕ್‌, -ಜೆಕ್ಕ್‌.

ಪ್ರತಿಯೊಂದು ಜಾತಿಯವರು ಆಡುವ ತುಳು ಭಾಷೆಗೂ ಅದರದ್ದೇ ಆದ ವೈಶಿಷ್ಟ್ಯವಿದೆ. ಈ ವ್ಯತ್ಯಾಸವು ಅಲ್ಪ ಮಟ್ಟಿಗಾದರೂ, ಬ್ರಾಹ್ಮಣರ ತುಳುವಿಗೂ ಬ್ರಾಹ್ಮಣೇತರ ತುಳುವಿಗೂ ಸ್ವಲ್ಪ ಹೆಚ್ಚಿನ ಮಟ್ಟದ ವ್ಯತ್ಯಾಸ ಈಗಲೂ ಉಳಿದುಕೊಂಡಿದೆ. ಬ್ರಾಹ್ಮಣರು ಪರಂಪರಾಗತವಾಗಿ ಶಾಸ್ತ್ರೋಕ್ತ ಧಾರ್ಮಿಕ ಆಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಶಿಕ್ಷಣವನ್ನು ಪಡೆದವರು. ಹುಟ್ಟಿನಿಂದಲೇ ವೈದಿಕ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡವರು. ಇವರು ತಮ್ಮ ಆಡುನುಡಿಯಲ್ಲಿ ತಮ್ಮದೇ ಆದ ಸಂಸ್ಕೃತ ಭೂಯಿಷ್ಠ ಶೈಲಿಯೊಂದನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಕಟ್ಟುನಿಟ್ಟಿನ ಜಾತಿ ನಿರ್ಬಂಧಗಳಿಂದಾಗಿ ಇತರ ಜಾತಿಯ ಜನರು ಬಳಸುವ ತುಳು ಪದಗಳು ಇವರ ಭಾಷೆಯಲ್ಲಿ ಮಿಶ್ರಗೊಳ್ಳುವುದಿಲ್ಲ. ಬ್ರಾಹ್ಮಣರ ತುಳುವಿಗೂ ಸಾಮಾನ್ಯ ತುಳುವಿಗೂ ಇರುವ ವ್ಯತ್ಯಾಸಗಳನ್ನು ಈ ರೀತಿ ಗುರುತಿಸಬಹುದಾಗಿದೆ.

೧. ಬ್ರಾಹ್ಮಣರು ಸಂಸ್ಕೃತದ ಮಹಾ ಪ್ರಾಣಾಕ್ಷರಗಳನ್ನು ಅದೇ ರೀತಿಯಾಗಿ ಉಚ್ಚರಿಸಲು ಪ್ರಜ್ಞಾಪೂರ್ವಕ ಪ್ರಯತ್ನಿಸುತ್ತಾರೆ. ಆದರೆ ಆನೌಪಚಾರಿಕ ಸಂದರ್ಭಗಳಲ್ಲಿ ಈ ಪ್ರಯತ್ನ ಸ್ಪಲ್ಪ ಮಟ್ಟಿಗೆ ಸಡಿಲವಾಗುತ್ತದೆ. ಮೂರ್ಧನ್ಯ ಮತ್ತು ಮೂರ್ಧನ್ಯೇತರ ಧ್ವನಿಗಳೊಳಗೆ ಸ್ಪಷ್ಟ ವ್ಯತ್ಯಾಸವನ್ನು ಕಾಪಾಡಿ ಕೊಳ್ಳುತ್ತಾರೆ. ಲ – ಳ -ನ – ಣ -ಶ -ಷ – ಸಗಳೊಂದಿಗಿನ ಉಚ್ಚಾರ ವ್ಯತ್ಯಾಸ ಅಲ್ಪಪ್ರಾಣ – ಮಹಾಪ್ರಾಣಗಳ ವ್ಯತ್ಯಾಸ, ಇದು ಬ್ರಾಹ್ಮಣರ ತುಳುವಿನ ಮುಖ್ಯ ಲಕ್ಷಣಗಳು.

೨. ಲಿಖಿತ ಸಾಹಿತ್ಯದ ಕೊರತೆಯಿರುವ ಒಂದು ಆಡುಭಾಷೆಯು ಕಾಲಾನಂತರದಲ್ಲಿ ಪದ ಮೂಲದ ಸ್ವರಾಕ್ಷರಗಳನ್ನು ಕಳೆದುಕೊಳ್ಳುತ್ತದೆ. ಸಾಮಾನ್ಯ ತುಳುವಿನಲ್ಲಿ ಈ ಬದಲಾವಣೆ ಆಗಿದ್ದರೂ ಬ್ರಾಹ್ಮಣರು ತಮ್ಮ ತುಳು ಭಾಷೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಸಂಪ್ರದಾಯಸ್ಥರಾದ ಬ್ರಾಹ್ಮಣರು ತಮ್ಮ ಭಾಷೆಯಲ್ಲೂ ಸಂಪ್ರದಾಯವನ್ನು ಬಿಟ್ಟುಕೊಟ್ಟಿಲ್ಲ.

ಮೂಲ ತುಳು ಬದಲಾದ ತುಳು ಕನ್ನಡ
೦೧. ಅಲತ್ತಂಡೆ ಲತ್ತಂಡೆ ಲತ್ತನೆ (ಅಲಸಂಡೆ)
೦೨. ಅಡಪು ಡಪ್ಪು ದಪ್ಪು (ಗದ್ದೆಉಳು)
೦೩. ಅಡಕ್‌ ಡಕ್ಕ್ ದಕ್ಕ್ (ಬಿಸಾಡು)
೦೪. ಅಲಂಬು ಲಾಂಬು (ಅಣಬೆ)
೦೫. ಇಸಿಲ್‌ ಸಿಲ್ಲ್ (ಸಿಳ್ಳು)
೦೬. ಉನಪು ಉಂಪು ನುಪ್ಪು (ಅನ್ನ)
೦೭. ಉಲುಂಗೆಲ್ ಲುಂಗೆಲ್ ನುಂಗೆಲ್‌(ಒಣಗ)
೦೮. ಎರಡ್‌ ರಡ್ಡ್‌ (ಎರಡು)
೦೯. ಒಲೆಪು ಲೆಪ್ಪು (ಕರೆ)
೧೦ ಇನ್ಕುಳು ನಿಕುಲು (ನೀವು)
೧೧. ಎಳತ್‌ ಲತ್ತ್‌‍ (ಎಳೆಯ)
೧೨. ಅಳಪು ಲಪ್ಪು (ಅಳೆ)

೩. ಶಿವಳ್ಳಿ ಬ್ರಾಹ್ಮಣರು ಕೆಲವೊಂದು ಪಾರಿಭಾಷಿಕ ಪದಗಳನ್ನು ಇತರರಿಗಿಂತ ಭಿನ್ನವಾಗಿ ಬಳಸುತ್ತಾರೆ. ಉದಾ : ಕೆಯೊನು -ಜೆಪ್ಪು (ಮಲಗು). ತಮಂತ್ರೆ -ಬಚ್ಚಿರೆ (ವಿಳ್ಯದೆಲೆ), ಪೋಸ್ರಟ್ಟವನೆ- ಪಡಿಕೆಮೈಪುನೆ (ಮೂತ್ರ ಮಾಡುವುದು), ನೇಡ್‌ಬೇನೆ (ನೋವು), ಬೆತ್ತ್ -ಬೊಕ್ಕ (ಮತ್ತೆ), ಬೊಳ್ಚರೆ ಬೊಳ್ಪುಗು / ಕಾಂಡೆ (ಬೆಳಗಾತ), ಬೋತ್ರಿ -ಬೊಡ್ಚಿ (ಬೇಡ), ಅಪುರಿ -ಅಫುಜಿ(ಆಗುವುದಿಲ್ಲ) -ಇತ್ಯಾದಿ ಶಬ್ಧಗಳನ್ನು ಉಚ್ಚಾರ ಮಾಡುವ ರೀತಿಯೂ ಇತರರ ತುಳುವಿಗಿಂತ ಭಿನ್ನವಾಗಿದೆ.

೪. ತುಳುವಿನ ಮೂಲರೂಪದಲ್ಲಿ ಕೆಲವೊಂದು ಪದಗಳಿಗೆ ಪದ ಮಧ್ಯೆ ಅನಿಸ್ವಾರ ಹಾಗೂ ಕಾರಗಳುಳ್ಳ ಬಳಕೆಯಿತ್ತು. ಅದು ಅಧುನಿಕ ತುಳುವಿನಲ್ಲಿ ಕಡಿಮೆಯಾಗಿದೆ. ಆದರೆ ಬ್ರಾಹ್ಮಣರ ತುಳುವಿನಲ್ಲಿ ಅದು ಈಗಳೂ ಬಳಕೆಯಲ್ಲಿದೆ

ಗೊಂತು -ಗೊತ್ತು (ತಿಳಿವು), ಮಾಂತ- ಮಾತ (ಎಲ್ಲಾ), ಊರುಂಟು -ಉರುಟು (ಉರುಟು), ಪೇಂಟೆ -ಪೇಟೆ (ಪೇತೆ), ಮಾಂಪು-ಮಾಳ್ವು (ಮಾಡು), ಜೆರ್ಪು- ಜೆಪ್ಪು (ಮಲಗು), ದೆರ್ಪು-ದೆಪ್ಪು (ತೆಗೆ / ಎತ್ತು).

ಪಾಚೀನ ತುಳುವಿನಲ್ಲಿ ಸಂಸ್ಕೃತದ ಪ್ರಭಾವದಿಂದ ಮಹಾಪ್ರಾಣಾಕ್ಷರಗಳಿದ್ದರೂ ಆಧುನಿಕ ತುಳುವಿನಲ್ಲಿ ಅವು ಕಾಣಿಸಿಕೊಳ್ಳುವುದಿಲ್ಲ. ಅವುಗಳೆಲ್ಲ ಅಲ್ಪ ಪ್ರಾಣಾಕ್ಷರಗಳಾಗಿವೆ. ಆದರೆ ಅನುಕರಣ ವಾಚಕಗಳಲ್ಲಿ ಮತ್ತು ಭಾವತೀವ್ರತೆಗಾಗಿ ಮಹಾಪ್ರಾಣ ಉಚ್ಚಾರವಿರುತ್ತದೆ. ಸಂಸ್ಕೃತ, ಪ್ರಾಕೃತ ಮತ್ತು ಮರಾಠಿ ಭಾಷೆಗಳಿಂದ ಬಂದ ಪದಗಳು ಬದಲಾಗುವ ರೀತಿಯನ್ನು ಈ ರೀತಿಯಾಗಿ ಉದಾಹರಿಸಬಹು.

ದುಃಖ-ದುಕ್ಕ, ಕಠಿಣ-ಕಟಿನ, ಢಕ್ಕೆ-ಡಕ್ಕೆ, ಫಲ-ಪಲ, ಭೂಮಿ-ಬೂಮಿ, ಖಾರ-ಕಾರ, ಶಿಥಿಲ- ಸಡಿಲ, ಕರ್ತರಿ-ಕತ್ತೆರಿ, ವ್ಯಾಖ್ಯಾನ-ಒಕ್ಕಣೆ, ಶ್ಮಶಾನ -ಮಸನ, ಖನಿ- ಕನಿ, ನಿತ್ಯ-ನಿಚ್ಛ, ಉತ್ಸವ- ಉಚ್ಚಯಾ, ಪರ್ವ- ಪರ್ಬೊ, ಗ್ರಂಥ -ಗೆಂರ್ತಕ, ವೃಷಭ- ಬಸವೆ, ವಿಸ್ತಾರ -ಬಿತ್ತರೊ (ಈಗ ಅರ್ಥ ಬದಲಾಗಿದೆ), ಸೂಚಿ-ಸೂಜಿ, ಕಟಕ- ಕಡಗ, ದೃಷ್ಟಿ-ದಿಟ್ಟಿ, ಕಥಾ -ಕತೆ, ವಿಷ-ಇಸೊ, ಲಕ್ಷ್ಮಿ-ಲಚ್ಚಿ, ಉಷ್ಣ -ಉಸ್ನೊ, ವರ್ಷ -ಬರ್ಸ, ವೃದ್ಧಿ-ಬಡ್ಡಿ, ಆಜ್ಞಾ -ಆಜೊ, ಶರ್ಕರ -ಸಕ್ಕರೆ, ಶಲ್ಕೆ-ಚೆಕ್ಕೆ, ಋಷಿ-ರಿಸಿ, ಮಷಿ-ಮಜಿ ಇತ್ಯಾದಿ.

ಕನ್ನಡವು ಬಹಳ ಕಾಲದಿಂದಲೂ ತುಳುನಾಡಿನ ಆಡಳಿತ ಭಾಷೆ ಯಾಗಿದ್ದುದ್ದರಿಂದ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಮಕ್ಕಳು, ಪಾಠಗಳನ್ನು ಕಲಿಯಬೇಕಾಗಿದ್ದುದರಿಂದ ತುಳುನಾಡಿನ ಹೆಚ್ಚಿನ ಜನರು ಕನ್ನಡ ಬಲ್ಲವರೇ ಆಗಿದ್ದಾರೆ. ಹೀಗಾಗಿ ಕನ್ನಡದ ಬಹಳಷ್ಟು ಪದಗಳು ತುಳುವಿನಲ್ಲಿ ಸೇರ್ಪಡೆಗೊಂಡು ತುಳು ರೂಪವನ್ನು ಪಡೆದಿವೆ. ತುಳುವಿನಿಂದ ಕನ್ನಡ ಪದಗಳನ್ನು ವಿಂಗಡಿಸುವುದು ಕಷ್ಟಸಾಧ್ಯ. ಕನ್ನಡದ ನಾಮಪದಗಳ ಅಂತ್ಯಾಕ್ಷರವು ಆಕಾರವಾಗಿದ್ದರೆ ಅವು ತುಳುವಿಗೆ ಬರುವಾಗ ಸಾಮಾನ್ಯವಾಗಿ ಎಕಾರವನ್ನು ತಾಳುವುದಿದೆ. ಉದಾ : ರಾಮ-ರಾಮೆ, ಸೀತಾ-ಸೀತೆ, ರಾವಣ -ರಾವಣೆ, ಅಣ್ಣ -ಅಣ್ಣೆ, ಅಕ್ಕ -ಅಕ್ಕೆ -ಇತ್ಯಾದಿ. ಅದೇ ರೀತಿ ಶಬ್ಧದ ಕೊನೆಯಲ್ಲಿ ಬರುವ ಗಕಾರವು ಯಕಾರವನ್ನು ತಾಳುವುದಿದೆ. ಉದಾ : ಸಂಪಗೆ -ಸಂಪಾಯಿ, ನಾಲಗೆ -ನಾಲಯಿ, ಕೇದಗೆ -ಕೇದಯಿ, ಸುರಿಗೆ -ಸುರಿಯ, ಬಾಡಿಗೆ -ಬಾಡಯಿ. ಕನ್ನಡವು ಕೂಡ ದ್ರಾವಿಡ ಮೂಲದ ಭಾಷೆಯೇ ಆಗಿದ್ದರೂ ಅದು ಞ ಙ ಮುಂತಾದ ಅನುನಾಸಿಕ ವ್ಯಂಜನಾಕ್ಷರಗಳನ್ನು ಕಳೆದು ಕೊಂಡಿದೆ. ಉದಾ : ಕಿಞ್ಣಣ್ಣ ಎಂಬ ಪದವನ್ನು ಕಿಯ್ಯಣ್ಣ, ಕಿನ್ನಣ್ಣ, ಕುಂಞಿ, ಕುನ್ನಿ, ಕೃತಜ್ಞ – ಕೃತಗ್ನ, ವಿಜ್ಞಾನ -ವಿಗ್ನಾನ, ಬಂಙ – ಬಂಗ ಈ ರೀತಿಯಾಗಿ ಉಚ್ಚರಿಸುವುದು ಕನ್ನಡದಲ್ಲಿ ರೂಢಿಯಾಗಿ ಬಿಟ್ಟಿದೆ. ಆದರೆ ತುಳುವರು ತಮ್ಮ ಭಾಷೆಯಲ್ಲಿ ಞ, ಙ ಅಕ್ಷರಗಳನು ಸಮರ್ಪಕವಾಗಿ ಉಚ್ಚರಿಸುತ್ತಾರೆ.