ಮಧ್ವಾಚಾರ್ಯರ ಜೀವನ ಚರಿತ್ರೆಯನ್ನು ‘ಸ್ಥೂಲವಾಗಿ ತಿಳಿಸುವ ಕಾವ್ಯ’ ‘ಸುಮಧ್ವವಿಜಯ’. ಇದನ್ನು ರಚಿಸಿದವನು, ಆಚಾರ್ಯರೊಂದಿಗೆ ವಾದದಲ್ಲಿ ಸೋತ ಅದ್ವೈತ ವಿದ್ವಾಂಸರಾದ ತ್ರಿವಿಕ್ರಮ ಪಂಡಿತಾಚಾರ್ಯರ ಮಗ ನಾರಾಯಣ ಪಂಡಿತಾಚಾರ್ಯನೆಂಬುವನು. ಅಂದರೆ ಆಚಾರ್ಯರ ನೇರ ಶಿಷ್ಯನ ಮಗ. ಆದುದರಿಂದ ಅವರ ಕಾಲಕ್ಕೆ ಅತಿ ಸಮೀಪವರ್ತಿಯಾಗಿದ್ದವನು. ಮಾತ್ರವಲ್ಲದೆ ಆಗ ಚಿಕ್ಕ ಬಾಲಕನಾಗಿದ್ದು ಅವರನ್ನು ಪ್ರತ್ಯಕ್ಷ ನೋಡಿರಲೂ ಬಹುದು. ನಾರಾಯಣ ಪಂಡಿತನು ಈ ಕಾವ್ಯದಲ್ಲಿ ಆಚಾರ್ಯರ ದೇಹವನ್ನು ವರ್ಣಿಸುವುದು ನೋಡಿದರೆ ಹಾಗನ್ನಿಸುತ್ತದೆ. ತೆಳು ಹೊಟ್ಟೆ, ವೃತ್ತಾಯತ ಬಾಹುದಂಡ, (೧೩-೩೨), ಜನ ಸಮೂಹದಲ್ಲಿಯೂ ಮಧ್ವರ ಎದೆಯ ಮೇಲಿನ ಭಾಗ ಎದ್ದು ತೋರುವಷ್ಟು ಎತ್ತರವಾದ ನಿಲುವು (೧೩-೩೭) ಎಂಬಂತಹ ವರ್ಣನೆಗಳಿಂದ ಅವರನ್ನು ಪ್ರತ್ಯಕ್ಷ ನೋಡಿದಂತೆ ತೋತುತ್ತದೆ. ಮಧ್ವರ ವಿಜಯ ಯಾತ್ರೆಯನ್ನೂ ಅವನು ವರ್ಣಿಸುತ್ತಾನೆ. ಮಧ್ವರು ಒಂದು ಬಾರಿ ರಾಮೇಶ್ವರದವರೆಗೂ ಎರಡು ಬಾರಿ ಬದರಿಕಾಶ್ರಮದವರೆಗೆ ಉತ್ತರ ಭಾರತ ಯಾತ್ರೆಯನ್ನು ಕೈಗೊಂಡ ವಿಚಾರ ಆ ಕಾವ್ಯದಲ್ಲಿ ವರ್ಣಿತವಾಗಿದೆ. ಪ್ರತಿಭಾವಂತನಾದ ಕವಿಗೆ ಕಲ್ಪನಾ ಶಕ್ತಿಯಿಂದ ಜೀವಂತವಾಗಿ ವರ್ಣಿಸುವ ಶಕ್ತಿಯಿರುತ್ತದೆಂಬುದನ್ನು ಮರೆಯುವಂತಿಲ್ಲ. ಆದರೂ ಮಧ್ವರ ಕಾಲಕ್ಕೆ ಅತಿ ಸಮೀಪದವನಾದುದರಿಂದ ಅವನನ್ನು ನಂಬಬೇಕಾಗುತ್ತದೆ. ಅವನಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿ ಮಧ್ವ್ರರ ಮಾಹಿತಿ ನೀಡಬಲ್ಲ ಇತರ ಮೂಲಗಳೇ ಇಲ್ಲ. ಚಾರಿತ್ರಿಕ ವಿಷಯಕ್ಕೆ ಕಾವ್ಯ ಮತ್ತು ಪೌರಣಿಕ ಲೇಪ ಬಂದಿರುವುದರಿಂದ ಲೇಪದ ಒಳಗಿನ ನಿಜ ಸ್ವರೂಪವನ್ನು ಸ್ಪಲ್ಪಚಾಣಾಕ್ಷತೆಯಿಂದ ಗುರುತಿಸಿಕೊಳ್ಳಬೇಕು. ಈ ಕಾವ್ಯದಲ್ಲಿ ಬಹ್ವಂಶಾ ಚಾರಿತ್ರಿಕ ಸತ್ವವಿದೆಯೆಂಬುದಕ್ಕೆ ಮಧ್ವರ ಪರ್ಯಟನದ ದಾರಿಯನ್ನು ಹೇಳುವ ಸ್ಥಳನಾಮಗಳು, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕುಲನಾಮಗಳು ಆಧಾರವಾಗಬಲ್ಲವು. ನಾರಾಯಣ ಪಂಡಿತನು ತುಳುವಿನ ಸ್ಥಳ ನಾಮ ಹಾಗೂ ಕುಲನಾಮಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಿ ಶ್ಲೋಕ ನಿರ್ಮಿಸಿರುವುದರಿಂದ ಅವನ್ನು ಇತರರಿಗೆ ಗುರುತಿಸಿವುದು ಅಸಾಧ್ಯವೆಂದು ಅವನ್ನು ತಿಳಿಸುವ, ಮೂಲ ತುಳು ರೂಪವನ್ನು ಕೊಡುವ, ಮಾತ್ರವಲ್ಲದೆ ವ್ಯಾಕರಣ ವೈಶಿಷ್ಟ್ಯಾದಿಗಳನ್ನು ಹೇಳುವ ‘ಮಧ್ವವಿಜಯ ಭಾವ ಪ್ರಕಾಶಿಕಾ’ ಎಂಬ ಸಂಕ್ಷಿಪ್ತ ಟೀಕೆಯನ್ನು ತನ್ನ ಕಾವ್ಯಕ್ಕೆ ತಾನೇ ಬರೆದಿದ್ದಾನೆ. ಇದು ಎಲ್ಲಾ ಹೆಸರುಗಳ ವಿವರವನ್ನು ಸಮಗ್ರವಾಗಿ ಕೊಡುವುದಿಲ್ಲ. ಕೆಲವು ಹೆಸರುಗಳು ಇನ್ನೂ ಅಸ್ಪಷ್ಟವಾಗಿವೆ. ಈ ಕಾವ್ಯಕ್ಕೆ ವಿಶ್ವಪತಿ ತೀರ್ಥರು ಬರೆದ ‘ಪಾದಾರ್ಥ ದೀಪಿಕೋದ್ಬೋಧಿಕಾ’ ಎಂಬ ವ್ಯಾಖ್ಯಾನದಲ್ಲಿ ‘ಭಾವ ಪ್ರಕಾಶಿಕಾ’ ದಲ್ಲಿ ಕೊಟ್ಟ ಸಂಸ್ಕೃತ ಹೆಸರುಗಳ ತುಳು ರೂಪಗಳನ್ನು ಕೊಡಲಾಗಿದೆ. ಈ ಕಾವ್ಯದಲ್ಲಿ ಉಲೇಖಿಸಿರುವ ತುಳು ನಾಡಿನ ಕೆಲವು ಸ್ಥಳನಾಮ ಮತ್ತು ಕುಲನಾಮಗಳ ವಿಚಾರ ಇಲ್ಲಿ ಪ್ರಸ್ತುತ.

ರಜತ ಪೀಠಪುರ -ರೂಪ್ಯಪೀಠ (೫-೧೦) ಎಂಬ ಹೆಸರುಗಳು ‘ಉಡುಪಿ’ ನಿರ್ದೇಶಿಸುತ್ತವೆ. ‘ರಜತ ಪೀಠ ಪುರಸ್ಯ’, ‘ಒಡಿಪು’, ‘ಇ ತ್ಯಪಭ್ರಷ್ಟ ಸಂಜ್ಞಾ’ ರಜತ ಪೀಠ ಪುರಕ್ಕೆ ಅಪಭ್ರಷ್ಟ ಭಾಷೆಯಾದ ತುಳುವಿನಲ್ಲಿ ‘ಒಡಿಪು’ ಎನ್ನಲಾಗುತ್ತದೆ ಎಂದು ವಿವರಣೆ ಕೊಡಲಾಗಿದೆ. ಇಂದಿಗೂ ತುಳುವಿನಲ್ಲಿ ‘ಒಡಿಪು’, ಎಂದೇ ಹೇಳುತ್ತಾರೆ. ಉಡಪಿ ಎಂಬ ಹೆಸರು. ಮೂಲ ತುಳು ‘ಒಡಿಪು’, ಕನ್ನಡ ರೂಪಾಂತರವೆಂಬುದರಲ್ಲಿ ಸಂದೇಹವಿಲ್ಲ[1] ತುಳುವಿನ ಒಡಿಪು ಕನ್ನಡಲ್ಲಿ ‘ಉಡುಪು’ ಎಂದಾಗಿ ಮತ್ತೆ ಉಡುಪಿ ಎಂದು ಪ್ರಸಿದ್ಧಿಗೆ ಬಂದಿರಬೇಕು. ಕನ್ನಡ ಶಾಸನಗಳಲ್ಲಿ ಈ ಹೆಸರಿನ ಷಷ್ಠೀ ವಿಭಕ್ತಿ ರೂಪ ‘ಉಡುಪಿನ’ ಎಂದಿದೆ. ಉಡುಪಿಯೇ ಪ್ರಾತಿಪಾದಿಕವಾಗಿದ್ದಲ್ಲಿ ‘ಉಡಪಿಯ’ ಎಂದಿರಬೇಕಿತ್ತು. ಈ ಹೆಸರಿನ ಸಂಸ್ಕೃತೀಕರಣದಲ್ಲಿ ರಜತ (ಬೆಳ್ಳಿ) ಹೇಗೋ ಸೇರಿಕೊಂಡು ರಜತಪೀಠಪುರವಾಗಿದೆ. ಮಧ್ವಾಚಾರ್ಯರ ತಂದೆ ಮಧ್ಯಗೇಹ ಭಟ್ಟ (ನಡುವಂತಿಲ್ಲಾಯ) ರು ಉಡುಪಿಯ (ರಜತಪೀಠಪುರ) ಅನಂತೇಶ್ವರನ ಭಕ್ತರಾಗಿದ್ದರು. ಅವರು ‘ಶಿವಳ್ಳಿ’ ಯವರಾಗಿದ್ದು ಪಾಜಕ ಕ್ಷೇತ್ರದಲ್ಲಿ ನೆಲೆಸಿದರು.

ಶಿವಳ್ಳಿ -ಶಿವರೂಪ್ಯವೆಂದು ಸಂಸ್ಕೃತೀಕರಿಸಲ್ಪಟ್ಟ ಈ ಹೆಸರಿನ ತುಳು ರೂಪ ಶಿವಳ್ಳಿ(ಸರ್ಗ೩, ಶ್ಲೋಕ ೧೦) ಎಂದು ವ್ಯಾಖ್ಯಾನದಲ್ಲಿ ಕೊಡಲಾಗಿದೆ. ‘ಶಿಬೆಳ್ಳಿ’ ಎಂಬ ಹೆಸರಿರುವುದಾಗಿಯೂ ಪದಾರ್ಥ ದೀಪಿಕೆಯಲ್ಲಿ ಹೇಳಿದೆ. ‘ಶಿವಳ್ಳಿ’ ಶಿಬೆಳ್ಳಿ -ಶಿಬೆಳ್ಳಿ ಎಂದು ತಪ್ಪಾಗಿ ಯಾವುದೋ ದಂತಕಥೆಯಿಂದ ತಿಳಿದು ಅದನ್ನು ಸಂಸ್ಕೃತೀಕರಿದಾಗ ‘ಶಿವರೂಪ್ಯ’ ಆಗಿರಬೇಕು. ಏಳೆಂಟು ಶತಮಾನಗಳಷ್ಟು ಹಿಂದೆಯೇ ಶಿವಳ್ಳಿ ಪ್ರಸಿದ್ದವಾಗಿತ್ತು. ‘ಶಿವಳ್ಳಿ ಬ್ರಹ್ಮಪುರ'[2] ‘ಶಿವಳ್ಳಿ ಸಾಸಿರ್ವರು[3]ಗಳನ್ನು ಶಾಸನಗಳಲ್ಲಿ ಬಹಳ ಗೌರವದಿಂದ ಉಲ್ಲೇಖಿಸಲಾಗಿದೆ. ‘ಶಿವಳ್ಳಿ’ ಯು ವಾರಣಸಿಯಷ್ಟೇ ಪವಿತ್ರವೆಂದು ತಿಳಿಯಲಾಗಿತ್ತು. ಕೊಡಮಾಡಿದ ದಾನವನ್ನು ಕೆಡಿಸಿದರೆ ಆಗುವ ದುಷ್ಟರಿಣಾಮವನ್ನು ಶಾಸನಗಳಲ್ಲಿ ಹೀಗೆ ಹೇಳಿದೆ – ‘ಇದಾನೞೆವೋನ್ವಾ ರಣಾಶಿಯುಂ ಶಿವಳ್ಳಿಯುಮನಲೆದ ಪಂಚಮಹಾ ಪಾತನಕ್ಕುಂ'[4]  ಶಿವರಾಧನೆಯಿತುವ ಹಳ್ಳಿ ಶಿವಳ್ಳಿ ಎಂಬ ಹೆಸರು ಸಾರ್ಥಕ.[5]

ಪಾಜಕ ಕ್ಷೇತ್ರ

ಮಾಧ್ವಾಚಾರ್ಯರ ತಂದೆ ಶಿವಳ್ಳಿಯಿಂದ ಹೋಗಿ ಪಾಜಕ ಕ್ಷೇತ್ರ (೨-೧೧) ದಲ್ಲಿ ನೆಲೆಸಿದರಂತೆ. ಅಲ್ಲೇ ಮಾಧ್ವಾಚಾರ್ಯರ ಜನನವಾಯಿತು. ಇಂದಿಗೂ ಅವರು ಹುಟ್ಟಿದ ಮನೆ ಅಲ್ಲಿದೆ. ಬೇರೆ ಬೇರೆ ಪವಾಡಗಳ ಸ್ಥಳಗಳನ್ನು ಅಲ್ಲಿ ತೋರಿಸುತ್ತಾರೆ. ದುರ್ಗಾ ದೇವಸ್ಥಾನವಿರುವ ಉನ್ನತವಾದ ‘ಕುಂಜಾರು ಗಿರಿ’ ಯೆಂಬ ಪರ್ವತ ಪಕ್ಕದಲ್ಲೇ ಇದೆ. ಪರಶುರಾಮ ಪ್ರತಿಷ್ಠೆಯೆನ್ನಲಾದ ಈ ದುರ್ಗಾ ದೇವಸ್ಥಾನ ಆ ಕಾಲದಲ್ಲೇ ಪ್ರಸಿದ್ಧವಾಗಿ ತ್ತೆಂದು ಕಾವ್ಯ ಉಲ್ಲೇಖಿಸುತ್ತದೆ. ಈ ಬೆಟ್ಟವನ್ನು ‘ವಿಮಾನ ಗಿರಿ’ ಎಂದಲ್ಲದೆ ‘ಕುಂಜಾರು ಗಿರಿ’ ಎನ್ನಲಿಲ್ಲ.

‘ಪಾಜಕ’ ಎಂಬ ಹೆಸರೂ ಸಂಸ್ಕೃತ ರೂಪ. ಇದರ ತುಳು ರೂಪವನ್ನು ‘ಭಾವ ಪ್ರಕಾಶಿಕಾ’ ಆಗಲಿ, ಪದಾರ್ಥ ದೀಪಿಕೆಯಾಗಲೀ ಕೊಡುವುದಿಲ್ಲ. ವಿಶ್ವವನ್ನು ರಕ್ಷಿಸುವ (ಪ) ಉತ್ಪತ್ತಿ (ಅಜ) ನಾದ ಹರಿ, ಪರಶುರಾಮನ ಪರಶು, ಧನು, ಬಾಣ, ಗದೆಗಳಿಂದ ನಿರ್ಮಿಸಿದ ನಾಲ್ಕು ತೀರ್ಥಗಳು (ಕ, ನೀರು) ಈ ಪ್ರದೇಶದಲ್ಲಿರುವುದರಿಂದ ಇಲ್ಲಿಗೀ ಪಾಜಕ (ಪ +ಅಜ+ ಕ) ಎಂದು ಹೆಸರಾಯಿತೆಂದು ಶ್ಲೋಕ (೨-೧೧) ಮತ್ತು ವ್ಯಾಖ್ಯಾನಗಳಲ್ಲಿ ಯುಕ್ತಿ ಯುಕ್ತವಾಗಿ ಚಮತ್ಕಾರವಾಗಿ ಪ್ರತಿಪಾದಿಸಲಾಗಿದೆ. ಇಲ್ಲಿ ಕವಿಯ ಪಾಂಡಿತ್ಯ ಮಿಂಚಿದೆಯಾದರೂ ಇದು ಮೂಲ ಹೆಸರಲ್ಲ. ಇದು ಸುತ್ತಮುತ್ತಲೆಲ್ಲಾ ಪಾದೆ (ಕಗ್ಗಲ್ಲು) ಹಾಸಿರುವ ಪ್ರದೇಶವಾದ್ದರಿಂದ ‘ಪಾಜೆ’ (ಪಾದೆ) ಎಂಬ ತುಳು ಹೆಸರೇ ಸಂಸ್ಕೃತ ಪಂಡಿತರಿಂದ ಪಾಜಕವಾಗಿದೆ. ಪಾದೆ ಕಲ್ಲು, ‘ಮಣಿಯಂಪಾದೆ’ ಮೊದಲಾದ ಹೆಸರುಗಳಿವೆ. ಉಡುಪಿಯಿಂದ ಆಗ್ನೇಯಕ್ಕೆ ಆರೇಳು ಮೈಲು ದೂರದಲ್ಲಿ ಬೆಳ್ಳೆ ಗ್ರಾಮದ ಈ ಸ್ಥಳವು ಮಧ್ವರ ಹೂಟ್ಟೂರಾದ್ದರಿಂದ ಇಂದಿಗೂ ಇಲ್ಲಿ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕೊಡವೂರಕಾನ

ಮಧ್ವರು ಚಿಕ್ಕಂದಿನಲ್ಲಿ ತನ್ನ ಹೆತವರೊಂದಿಗೆ ಪಕ್ಕದ ಊರಿನ ಬಂಧುಗಳ ಮನೆಗೆ ಯಾವುದೇ ಉತ್ಸವಕ್ಕೆ ಹೋಗಿದ್ದರಂತೆ. ಅಲ್ಲಿಂದ ತಾಯಿಗೆ ತಿಳಿಯದಂತೆ ಕಾನನದೇವತಾಸದನ (ಕಾನಂಗಿ, ಕೊಡವೂರಕಾನ) ದಲ್ಲಿರುವ ದೇವಸ್ಥಾನಕ್ಕೆ ಹೋದರು. (೩-೪) ಈಗ ಕೊಡವೂರು ಎಂದು ವ್ಯವಹರಿಸಲಾಗುವ ಶಂಕರನಾರಾಣ ದೇವಸ್ಥಾನಕ್ಕೆ ಬಂದು ‘ರಮಾಪತಿಗೆ’ ಗೆ ನಮಸ್ಕರಿಸಿದರು. ಅವರು ವೈಷ್ಣವರಾದ್ದರಿಂದ ಎಲ್ಲೆಡೆಯಲ್ಲೂ ಹರಿಯನ್ನೇ ಕಾಣುತ್ತಾರೆ. ಈ ದೇವಾಲಯದಿಂದ ನಾರಿಕೇಲ್ಯುಪಪದಾಂತರ (ತಾಳೆಕುಡೆ)ದ ಶಿವ ದೇವಸ್ಥಾನಕ್ಕೆ ಬಂದು ಶಿವಾಂತರ್ಗತ ಹರಿಯನ್ನು ಕಾಣುತ್ತಾರೆ. ನಾರಿ ಕೇಲ- ತುಳುವಿನಲ್ಲಿ ತಾಳೆ (ರೆ), ಕುಡೆ ತುಳುವಿನಲ್ಲಿ ಮಾಟೆ, ಬಿಲ, ಛಿದ್ರ, ಸಂಸ್ಕೃತಕ್ಕೆ ಭಾಷಾಂತರಿಸಿದಾಗ ‘ನಾರಿಕೇಲ್ಯಂತರ’. ಇಲ್ಲೂ ಶಿವನಲ್ಲಿ ಹರಿಯನ್ನೇ ಅವರು ಕಾಣುತ್ತಾರೆ. ಈ ತಾಳಕುಡೆಯೇ ಬನ್ನಂಜೆ ಎನ್ನಲಾಗಿದೆ.

ನೆಯಂಪಳ್ಳಿ (ಘೃತವಲ್ಲೀ)

ಇನ್ನೊಮ್ಮೆ ಬಂಧುಜ್ನರ ಕರೆಯ ಮೇರೆಗೆ ಬಾಲಕ ವಾಸುದೇವ (ಮಧ್ವರ ಮೊದಲ ಹೆಸರು)ನು ತಾಯೊಂದಿಗೆ ಯಾವುದೋ ಉತ್ಸವಕ್ಕೆ ನೆಯಂಪಳ್ಳಿ (ನೆಯ್‌ಘೃತ, ಪಲ್ಲಿ -ವಲ್ಲಿಗೆ) ಗೆ ಹೋದನು. ಅಲ್ಲಿ ಶಿವಮಣಿನಾಯ (ಶಿವ ಗೌತಪಟ) ಎಂಬ ಬ್ರಾಹ್ಮಣನು ಸಭೆಯಲ್ಲಿ ಹೇಳಿದ ಪುರಾಣ ಕಥೆಯಲ್ಲಿ ತಪ್ಪನ್ನು ಬಾಲಕ ಎತ್ತಿ ಹೇಳಿದ್ದು ಮಾತ್ರವಲ್ಲ ಮಹಾಜನರು ಅವನನ್ನೇ ಸರಿಪಡಿಸಲು ಕೇಳಿದಾಗ ಸರಿಪಡಿಸಿದನಂತೆ.

ವಾಸುದೇವನು ಸನ್ಯಾಸ ಸ್ವೀಕರಿಸುವ ಅಪೇಕ್ಷೆಯಿಂದ ಉಡುಪಿ ಯಲ್ಲಿರುವ ಅಚ್ಯುತ ಪ್ರೇಕ್ಷರಳಿಗೆ ಬರುತ್ತಾನೆ. ತಾಯಿ ತಂದೆಗಳಿಂದ ಅವನನ್ನು ತಡೆಯಲಾಗಲಿಲ್ಲ. ಅವನು ಅಚ್ಯುತ ಪ್ರೇಕ್ಷರ ಜತೆಯಲ್ಲಿ ನೇತ್ರಾವತಿ (ಮಹಾನದಿ) ಯನ್ನು ದಾಟಿ ಕಾರೆವೂರು ಗ್ರಾಮದಲ್ಲಿರುವ ಕುತ್ಯಾಡಿ (ಕುತ್ಯಾರು) ಮಠಕ್ಕೆ ಬಂದನು. (೪-೧೯) ‘ಗ್ರಾಮವರಸ್ಯ ಕಾರ್ಯೂರು’ ಇತ್ಯಪಭ್ರಷ್ಟಭಾಷಾ, ‘ಕಾರ್ಯೂರು’ ಎಂದು ಭಾವ ಪ್ರಕಾಶಿಕೆಯಲ್ಲಿ ಎನ್ನಲಾಗಿದೆ. ಕಾರೆವೂರು, ಕಾರ್ಯೂರು ಎರಡೂ ರೂಪಗಳು ಇದ್ದಿರಬಹುದು. ಉಡುಪಿಯಲ್ಲಿ ಅಚ್ಯುತ ಪ್ರೇಕ್ಷರರಿಂದ ಸನ್ಯಾಸ ದೀಕ್ಷೆಯನ್ನು ಪಡೆದು ಸಕಲ ಶಾಸ್ತ್ರಗಳ ಅಧ್ಯಯನ ಮಾಡಿ ವಾದಕ್ಕೆ ಬಂದ ಕೆಲವರನ್ನು ವಾದದಲ್ಲಿ ಗೆದ್ದು ಪ್ರಸಿದ್ಧರಾದರು. ತಮ್ಮ ಗುರುವಿನೊಂದಿಗೆ ದಕ್ಷಿಣಭಾರತ ಯಾತ್ರೆಯನ್ನು ಕೈಗೊಂಡು ಕಾಸರಗೋಡಿನ ಕೂಡ್ಲುಗ್ರಾಮದ ವಿಷ್ಣು ಮಂಗಲ (೫-೩೦) ವಿಷ್ಣು ದೇವಸ್ಥಾನಕ್ಕೆ ಬಂದು ದೇವರಿಗೆ ನಮಿಸಿದರು. ಇಲ್ಲಿ ಅವರಿಗೆ ಭೀಕ್ಷೆ ನೀಡಿದ ಗೃಹಸ್ಥನೊಬ್ಬ ಇವರನ್ನು ಪರೀಕ್ಷಿಸುವುದಕ್ಕಾಗಿ ಮತ್ತೆ ಮತ್ತೆ ಕೊಟ್ಟ ಇನ್ನೂರು ಬಾಳೆ ಹಣ್ಣುಗಳನ್ನು ನಿರ್ಯತ್ನವ್ವಾಗಿ ತಿಂದು ಮುಗಿಸಿದರು. ಗುರುಗಳು ಆಶ್ಚರ್ಯಚಕಿತರಾಗಿ ‘ವಿಜನ’ ಪ್ರದೇಶಕ್ಕೆ ಕರೆದು ಇಷ್ಟು ತಿನ್ನಲು ಹೇಗೆ ಸಾಧ್ಯವಾಯಿತೆಂದು ಕೇಳಲು ಜಗತ್ತನ್ನೇ ಸುಡಬಲ್ಲ ಅಗ್ನಿ ಹೊಟ್ಟೆಯೊಳಗೆ ಇದ್ದಾನೆ ಎಂದು ಉತ್ತರಿಸಿದರಂತೆ. ವಿಷ್ಣು ಮಂಗಳದಲ್ಲೇ ಮಧ್ವರ ಗ್ರಂಥಗಳನ್ನು ಚೋಲುಜನ್ಮತೀರ್ಥ ಕದ್ದನು. ಇಲ್ಲೇ ಅವರು ಪುರಾಣದ ಅರ್ಥ ವಿವರಣೆ ಮಾಡಿದರು. ತ್ರಿವಿಕ್ರಮರನ್ನು ವಾದದಲ್ಲಿ ಗೆದ್ದರು. ಈಗಲೂ ಪರ್ಯಾಯ ಪೀಠವೇರುವ ಮೊದಲು ಸ್ವಾಮಿಗಳು ಈ ದೇವಾಸ್ಥಾನಕ್ಕೆ ಭೇಟಿ ಕೊಡುತ್ತಾರೆ.

ಇಲ್ಲಿಂದ ಕಾಸರಗೋಡಿನ ಪ್ರಸಿದ್ಧವಾದ ಪಯಸ್ವಿನೀ ನದಿಯನ್ನು ದಾಟಿ ಆಚೆ ದಡದಲ್ಲಿರುವ ದುರ್ಗಾದೇವಿಯ ಆಲಯದಲ್ಲಿ ಅವಳನ್ನು ವಂದಿಸಿದರು. (೫-೩೫) ಚರಿತ್ರ ಪ್ರಝ್ಯಾತವಾದ ಪಯಸ್ವಿನೀ ನದಿಯನ್ನು ‘ಕೇರಳ ಭೂಷಣಾಯಿತಾಂ’ ಎಂದು ವರ್ಣಿಸಿದ್ದರಿಂದ ತುಳುನಾಡು ಕೇರಳಗಳ ಗಡಿ ಅನಾದಿಕಾಲದಿಂದಲೂ ಈ ನದಿಯೇ ಆಗಿತ್ತು. ಕದಂಬರ ರಾಜ್ಯ ಪಯಸ್ವಿನಿಯರಿಗೆ ಇತ್ತು.[6] ಹತ್ತನೇ ಶತಮಾನದ ಜಯಸಿಂಹನ ಶಾಸನ ಪಯಸ್ವಿನೀ ದಡದ ತಳಂಗೆರೆ[7]ಯಲ್ಲಿದೆ. ಮಲಬಾರಿನ ಉತ್ತರಗಡಿ ಚಂದ್ರಗಿರಿ ನದಿಯೆಂದು ಬುಖಾನೆನ್‌ ತನ್ನ ಪ್ರಯಣ ವರದಿಯಲ್ಲಿ ಬರೆದಿದ್ದಾನೆ.[8] ಇಕ್ಕೇರಿ ನಾಯಕರು ಹಾಗೂ ಹೈದಾರಲಿ ಟಿಪ್ಪುಗಳ ಕಾಲದಲ್ಲೂ ಕರ್ನಾಟಕದ ಗಡಿ ನೀಲೇಶ್ವರಕ್ಕೂ ಮುಂದೆ ಹೋಗಿತ್ತು. ಕವಾಯಿ ಹೊಳೆಯೇ ಗಡಿಯೆಂದು ೧೭೩೭ರಲ್ಲಿ ಕೋಲತ್ತಿರಿ ಮತ್ತು ಇಕ್ಕೇರಿ ಆರಸರೊಳಗೇ ಒಪ್ಪಂದವಾಗಿತ್ತು.[9] ಪ್ರಾಂತ ಪುನಾರಚನೆಯ ಕಾಲದಲ್ಲಿ ಈ ಪ್ರದೇಶ ಕೇರಳಕ್ಕೆ ತಳ್ಳಲ್ಪಟ್ಟಿತ್ತು. ಇದರ ಕಾರಣವಿನ್ನೂ ಚಿದಂಬರ ರಹಸ್ಯವಾಗಿದೆ. ಮಧ್ವರು ಕುಂಬಳೆಯ ಸಮೀಪದ ಇತರ ಪ್ರಸಿದ್ಧವಾದ ಕಣಿಪುರ ಗೋಪಾಲಕೃಷ್ಣ, ಮುಜುಂಗಾವು ಪಾರ್ಥಸಾರಥಿ, ಅನಂತಪುರ ದೇವಾಸ್ಥಾನಗಳನ್ನು ನೋಡಿದ ಉಲ್ಲೇಖವಿಲ್ಲ.

ಯಾತ್ರೆಯನ್ನು ಮುಂದುವರಿಸಿದ ಮಧ್ವರು ಅನಂತಪುರ (ಸ್ಯಾನಂದೂರೂ, ಅನಂತಶಯನ, ಈಗಿನ ತಿರುವನಂತಪುರ) ಕನ್ಯಾಕುಮಾರಿ, ಧನುಷ್ಕೋಟಿ ರಾಮೇಶ್ವರ, ಶ್ರೀರಂಗಳನ್ನೆಲ್ಲಾ ಸಂದರ್ಶಿಸಿ ಹಿಂತಿರುಗಿ ಪಯಸ್ವಿನಿಯನ್ನು ದಾಟಿ ಉಡುಪಿಗೆ ಬಂದರು. ಮತ್ತೆ ಉತ್ತರ ಭಾರತ ಯಾತ್ರೆಯನ್ನು ಎರಡು ಸಲ ಕೈಗೊಂಡಿದ್ದರು. ಎರಡನೆಯ ಸಲ ಅವರು ಗೋವೆಯನ್ನು ಸಂಸರ್ಶಿಸಿ ಬಂದರಂತೆ (೧೦-೫೩) ಗೋವೆಗೆ ಪಶುಪೆ ಎಂದು ತುಳುವಿನಲ್ಲಿ ಹೆಸರಿತ್ತೆಂದು ‘ಭಾವಪ್ರಕಾಶಿಕಾ’ .ತಿಳಿಸುತ್ತದೆ. ಇದು ಈಗ ನಾವು ವ್ಯವಹರಿಸುವ ಗೋವೆಯೇ ಅಥವಾ ‘ಪಶುಪೆ’ ಎಂಬ ಹೆಸರನ್ನು ಭಾಷಾಂತರಿಸಿರುವುದರಿಂದ ಇನ್ನಾವುದೇ ಪ್ರದೇಶ ಇರಬಹುದೇ ಎನ್ನಿಸುತ್ತದೆ.

ಮಧ್ವರ ಅನುಯಾಯಿಯಾದ ಕಾವಿನ ಶಂಕರಾರ್ಯನಲ್ಲಿದ್ದ ಅವರ ಗ್ರಂಥಗಳನ್ನು, ಚೋಳದೇಶೀಯ ಪದ್ಮತೀರ್ಥನೆಂಬುವನು ಅವರನ್ನು ವಾದದಲ್ಲಿ ಗೆಲ್ಲಲಾಗದೆ ಮೋಸದಿಂದ ಅಪರಿಸಿದನಂತೆ. (೧೨-೪೨). ‘ಸ್ವರಾಮಸ್ಯ ಕಾವು ಇತ್ಯಪಭಷ್ಟಭಾಷಾ’ (೧೨-೫೪೦ ಸಂಸ್ಕೃತದಲ್ಲಿ ‘ಸ್ವರಾಮ’ ಎಂದಿರುವುದು ತುಳುವಿನ ‘ಕಾವು’ ಎಂಬುದನ್ನು ಈಗಲೂ ಇಲ್ಲಿಗೆ ಇದೇ ಹೆಸರಿದೆ. ಕಾವು -ಕಾವುಗೋಲಿ; ಕಾಸರಗೋಡು ಪೇಟೆಯಿಂದ ಉತ್ತರಕ್ಕೆ ಎರಡು ಮೈಲು ದೂರ ರಾಜಮಾರ್ಗದ ಪಕ್ಕದಲ್ಲಿ ಕೇಂದ್ರೀಯ ತೆಂಗು ಸಂಶೋಧನ ಕೇಂದ್ರದ ಬಳಿಯಲ್ಲಿದೆ. ಕುಂಬಳೆಯಿಂದ ಮೂರು ಮೈಲು ಪೂರ್ವಕ್ಕೆ ಇರುವ ಮುಜಂಗಾವು ಪಾರ್ಥಸಾರಥಿ ಕ್ಷೇತ್ರ, ಜಾಲ್ಸೂರು ಈಶ್ವರ, ಮಂಗಲಗಳ ಹತ್ತಿರವಿರುವ ಕಾವು ಬೇರೆಯಾಗಿದೆ. ಕಾವು ತ್ರಿವಿಕ್ರಮ ಪಂಡಿತರ ಮನೆ, ಕೂಡ್ಲು ಶ್ಯಾನುಭಾಗರ ಮನೆಯ ಪಕ್ಕದಲ್ಲಿರುವ ವಿಷ್ಣು ಮಂಗಲ ದೇವಸ್ಥಾನಗಳು ಮಧ್ವರ ಪ್ರಮುಖ ಕಾರ್ಯಕ್ಷೇತ್ರಗಳಾಗಿದ್ದವು. ಕಾವಿನಲ್ಲೇ ಪದ್ಮ ತೀರ್ಥನನ್ನು ವಾದಲ್ಲಿ ಗೆದ್ದದ್ದು. ಕಾವಿನಲ್ಲಿ ರಜಮಾರ್ಗದ ಪಶ್ಚಿಮಕ್ಕೆ ಒಂದು ವಿಷ್ಣು ದೇವಸ್ಥಾನ ಈಗ ಜೀರ್ಣಾವಸ್ಥೆಯಲ್ಲಿದೆ. ಕಾವಿನಲ್ಲಿ ತ್ರಿವಿಕ್ರಮ ಪಂಡಿತ, ಈ ಕಾವ್ಯದ ಕರ್ತೃ ನಾರಾಯಣ ಸಮಾಧಿಗಳಿವೆ. ಕಾವಿನಿಂದ ಹೊರಟ ಮಧ್ವರು ಕೋಡಿಪಾಡಿ (ಪಾಗ್ರ್ಯವಾಟ)ಯ ಜನಾರ್ದನನನ್ನು ಕಂಡು ವಂದಿಸುತ್ತಾರೆ. ಇಲ್ಲೇ ಚಾತುರ್ಮಾಸ್ಯವನ್ನು ಕಳೆಯುತ್ತಾರೆ.

ರಾತ್ರಿ ರಾತ್ರಿ ಹುಣ್ಣಿಮೆಯ ಇರುಳಿನಲ್ಲಿ ಕಾವಿನಿಂದ ಓಡಿದ್ದ ಪದ್ಮತೀರ್ಥನಿಂದ ಪುಸ್ತಕಗಳನ್ನು ಗ್ರಾಮ ಜನರು ಮಧ್ಯಸ್ಥರೊಬ್ಬರಲ್ಲಿ ಇರಿಸಿದ್ದರು. ಅವುಗಳನ್ನು ಮರಳಿ ಸ್ವೀಕರಿಸಬೆಕೆಂದು ಮಧ್ವರಿಗೆ ರಾಜ ಜಯಸಿಂಹನು ಒಬ್ಬನಲ್ಲಿ ಹೇಳಿ ಕಳುಹಿಸಿದ್ದ. ಅವರು ಚಾತುರ್ಮಾಸ್ಯದಿಂದ ಎದ್ದು ಪುಸ್ತಕಗಳನ್ನು ಸ್ವೀಕರಿಸಲು ಕಬೆನಾಡಿಗೆ (ಸ್ತಂಭಪದ ವಿಷಯ) ಬಂದರು. ‘ಕಬೆನಾಡು’ ಎಂಬ ಹೆಸರು ಈಗ ಕಣ್ಮರೆಯಾಗಿದ್ದರೂ ಜಯಸಿಂಹನು ಕುಂಬಳೆಯ ರಾಜನಾದುದರಿಂದ ಅದು ಕುಂಬಳೆಯನ್ನೇ ಸೂಚಿಸುತ್ತದೆ. ‘ಕುಂಬಳೆ’ ಗೆ ಆಗ ಕಬೆನಾಡು ಎಂಬ ಹೆಸರಿತ್ತೆಂದು ಇದರಿಂದ ತಿಳಿಯುತ್ತದೆ. (೧೨-೯) ಕಬೆನಾಡಿನ ರಾಜ ಜಯಸಿಂಹನಿಗೆ ಕಬೆಸಿಂಹ (ಸ್ತಂಭವಿಶಿಷ್ಟ ಸಿಂಹ ೩-೨೧) ಎಂಬ ಹೆಸರಿತ್ತು.[10]

ರಾಜನ ಆಹ್ವಾನದ ಮೇರೆಗೆ ಮಧ್ವರು ಮಧೂರು ದೇವಸ್ಥಾನ (ಮದನಾದಿ ಪತಿಧಾಮ ೧೩-೯,) ಮದನೇಶ್ಚರ ಪ್ರದೇಶ ೧೩-೨೧) ಕ್ಕೆ ಬರುತ್ತಾರೆ. ಕಾಸರಗೋಡಿನಿಂದ ನಾಲ್ಕು ಮೈಲು ಉತ್ತರಕ್ಕೆ ಮಾಯಿಪ್ಪಾಡಿ ಆರಮನೆಯಿಂದ ಸುಮಾರು ಒಂದು ಮೈಲು ಆಗ್ನೇಯಕ್ಕಿರುವ ಇದು ಅತಿ ಪ್ರಾಚೀನ ಶಿವಾಲಯ. ಅರಸರ ನೇರೆ ಆಡಳಿತಕ್ಕೊಳಪಟ್ಟ ನಾಲ್ಕು ಪ್ರಸಿದ್ಧ ದೆವಾಲಯಗಳಲ್ಲಿ ಒಂದು. ಇಲ್ಲಿನ ಗಣಪತಿಗೆ ವಿಶೇಷ ಪ್ರಸಿದ್ಧಿ. ಇಲ್ಲಿನ ಪ್ರಧಾನ ದೇವ ಶಿವನಿಗೆ ‘ಮದನೇಶ್ವರ’ ಎಂಬ ಹೆಸರು. ಆದರೆ ಇತ್ತೀಚೆಗೆ ‘ಮದಂತೇಶ್ವರ’ ಎಂದು ವ್ಯವಹರಿಸಲಾಗಿತ್ತಿದ್ದು, ಶ್ರೀಮತ್‌ + ಅನಂತೇಶ್ವರ – ಶ್ರೀಮದನಂತೇಶ್ವರ ಅಥವಾ ಶ್ರೀಮದನೇಶ್ವರ ಆಗಬೇಕಲ್ಲದೆ ಕೇವಲ ‘ಮದಂತೇಶ್ವರ’ ಆಸಾಧ್ಯ. ಇಲ್ಲಿ ರಾತ್ರಿ ಉಳಿದುಕೊಂಡ ಮಧ್ವರು ಮರುದಿನ ರಾಜನೊಂದಿಗೆ ಮೆರವಣಿಗೆಯ ಘೋಷದಲ್ಲಿ ಕೂಡ್ಲು ಗ್ರಾಮದ ವಿಷ್ಣುಮಂಗಲ ದೇವಸ್ಥಾನಕ್ಕೆ ಹೋಗುತ್ತಾರೆ. ಅವರನ್ನು ಸ್ವಾಗತಿಸಲು ಪಾಡಿ (ವಾಟ) ಮತ್ತು ಕುಡೆಲ್‌, (ಸಮುದಾಯ) ಎಂಬ ಎರಡು ಗ್ರಾಮಗಳ ಜನರು ಸೇರಿದ್ದರಂತೆ.’ಕುಡೆ’ ಈಗಿನ ಕೂಡ್ಲು. ಇದಕ್ಕೆ ಕೂಡೆಲು (೧೫ -೧), ಕೂಡೆಲ್‌ಮಾತ್ರವಲ್ಲದೆ ಕುಡಿಲ್‌ (ಅಮರಾಲಯ)[11] ಎಂಬ ರೂಪವೂ ಇದ್ದಿರಬೇಕು. ‘ಪಾಡಿ’ ಈಗಲೂ ಅದೇ ಹೆಸರಿನಲ್ಲಿದೆ ವಿಷ್ಣುಮಂಗಲದಲ್ಲಿ ಮಧ್ವರ ಭಾಷ್ಯ ವ್ಯಾಖ್ಯಾನವನ್ನು ತ್ರಿವಿಕ್ರಮ ಪಂಡಿತರು ಕೇಳುತ್ತಾರೆ. ಮಧ್ವರ ಹಿರಿಮೆಯನ್ನು ಒಪ್ಪಿಕೊಳ್ಳುತ್ತಾರೆ. ಅಲ್ಲಿಂದ ಹಿಂತಿರುಗುವಾಗ ಏಕವಾಟಕ ಗ್ರಾಮದ ತಾಂತ್ಯ ಮಠದಲ್ಲಿ ಚಾತುರ್ಮಾಸ್ಯ ಕೈಗೊಂಡರ್ರೆಂದು ಹೇಳಿದೆ. ‘ಏಕವಾಟಕ’ ತುಳುವಿನ ಹೆಸರನ್ನು ಹೇಳಿದ್ದಿಲ್ಲ. ತಾಂತ್ಯ ಮಠ ಈಗಿನ ಕಣ್ವತೀರ್ಥದ ಸಮೀಪ ಇದ್ದಿರಬೇಕು.

ಮಧ್ವರು ಯೋಗಾಭ್ಯಾಸದಿಂದ ಅದ್ಭುತ ದೇಹ ದಾರ್ಢ್ಯವನ್ನು ಸಾದಿಸಿದ್ದರು. ಒಮ್ಮೆ ಅವರು ಇಂತಹ ಅಂಗ ಸಾಧಕರ ಪರೀಕ್ಷೆಗೊಳಗಾದರು. ಕೋಡೊಪಾಡಿ (ಗಂಡವಾಟ, ಗಂಡ -ಕೋಡಿ, ಪಾಡಿ –ವಾಟ, ೧೬ -೨೫)ಯವನೊಬ್ಬ ಮಹಾಬಲಶಾಲಿ ತನ್ನ ಅಣ್ಣನೊಡನೆ ಪರೀಕ್ಷರ ಪ್ರೇರಪಣೆಯಿಂದ ಮಧ್ವರೊಡನೆ ಹುರುಡಿಸಿದ. ಗಂಡವಾಟನು ಮೂವತ್ತು ಜನರು ಹೊರಬೇಕಾದ ಧ್ವಜಸ್ಥಂಭವನ್ನು ಶ್ರೀಕಾಂತೇಶ್ವರ ದೆವಾಲಯ (ಕಾಂತಾವರ) ಒಬ್ಬನೇ ಸಾಗಿಸಿದವ, ಗದೆಯಿಂದ ಮರಕ್ಕೆ ಹೊಡೆದು ತೆಂಗಿನಕಾಯಿ ಉರುಳಿಸಿದ ಮಹಾಬಲಶಾಲಿ; ಅವರಿಬ್ಬರೂ ತಮ್ಮ ಗಂಟಲು ಒತ್ತಿ ಹಿಡಿದು ಉಸಿರು ಕಟ್ಟಿಸುವಂತೆ ಆಚಾರ್ಯರು ಸವಾಲು ಹಾಕಿದರು. ಅವರಿಬ್ಬರೂ ಬಹಳ ಶಕ್ತಿಯಿಂದ ಅವರ ಕುತ್ತಿಗೆಯಮ್ನ್ನು ಒತ್ತಿ ಹಿಡಿದು ಆಯಾಸಗೊಂಡು ಬೆವರಿ ಸೋತು ನೆಲದಲ್ಲಿ ಬಿದ್ದರು. ಅವರ ಉಸಿರು ಕಟ್ಟಿಸಲಾಗಲಿಲ್ಲ. (೧೬-೨೬,೨೭,೨೮)

ಮಧ್ವರು ನೈವೇಧ್ಯ ನಿಂತುಹೋಗಿದ್ದ ಪಾರಂತೀದೇವಾಲಯ (ಪಾರಂತೀಸುರಸದನ, ೧೬-೩೭) ದಲ್ಲಿ ಭೂತಬಲಿ ಸಹಿತ ಪೂಜೆ ವಿಜೃಂಭಣೆಯಿಂದ ನಡೆಯುವಂತೆ ಮಾಡಿದರು. ‘ಪಾರಂತಿ’ ತುಳು ಹೆಸರು ಕೊಟ್ಟಿಲ್ಲ.

ಇಡೆತುದೆ (ಸರಿದಂತರ, ೧೬-೩೮) ಯಲ್ಲಿ ಆರು ಬೇಸಗೆಯಿಂದ ತಟಾಕವೆಲ್ಲಾ ಬತ್ತಿರಲು ಅಲ್ಲಿ ಮಳೆ ಬರಿಸಿ ಮಧ್ವರು ಜನರಿಗೆಲ್ಲ ಆಶ್ಚರ್ಯವುಂಟು ಮಾಡಿದರು. ಕೊಕ್ಕಡ (ಕ್ಷೇತ್ರಾಗ್ರ್ಯ) (೧೬-೪೦) ದ ಧನ್ವಂತರೀ ದೇವಾಲಯದಲ್ಲಿ ಶ್ರೀ ಮಧ್ವರು ತನ್ನ ಭಕ್ತನಾದ ಇಡೆಪ್ಪಾಡಿತ್ತಾಯನಿಗಾಗಿ ‘ಶ್ರೀ ಕೃಷ್ಣಮೃತ ಮಹಾರ್ಣವ’ ವೆಂಬ ಗ್ರಂಥವನ್ನು ಬರೆದರು.

ಉಜೀರ್ಯ (ಉಚ್ಚಭೂತಿ ೧೬-೪೧), ಈಗಿನ ಉಜಿರೆಯಲ್ಲಿ ಪಂಡಿತಂಮನ್ಯರಾದ ಅಹಂಕಾರಿ ವಿದ್ವಾಂಸರನ್ನು ವಾದದಲ್ಲಿ ಗೆದ್ದರು.

ತುಳುನಾಡಿನ ತುಳುವಿನ ಸ್ಥಳನಾಮಗಳಂತೆ ಇಲ್ಲಿನ ಜನರ ತುಳು ಹೆಸರುಗಳೂ ವಿಶಿಷ್ಟವಾಗಿವೆ. ಬ್ರಾಹ್ಮಣರ ಹೆಸರುಗಳೆಲ್ಲಾ ಹೆಚ್ಚಾಗಿ ಸಂಸ್ಕೃತದೇವವಾಚಕವಾಗಿದ್ದರೂ ಅವರ ವಿಶಿಷ್ಟ ಕುಲನಾಮಗಳು ಶುದ್ಧ ತುಳುವಿನಲ್ಲೇ ಇವೆ. ಮಧ್ವವಿಜಯದಲ್ಲಿ ಆಚಾರ್ಯರ ಸಂಪರ್ಕಕ್ಕೆ ಬಂದ ಹಲವರ ಕುಲನಾಮಗಳನ್ನು ಮಾತ್ರ ಹೇಳಿ ಆಂಕಿತನಾಮಗಳನ್ನು ಹೇಳದಿರುವುದು ಸೋಜಿಗವೆನಿಸುತ್ತದೆ. ಈ ತುಳುಕುಲ ನಾಮಾಗಳನ್ನು ಸಂಸ್ಕೃತದಲ್ಲಿ ಭಾಷಾಂತರಿಸಿದೆ. ಕವಿಯೇ ಬರೆದ ‘ಭಾವಪ್ರಕಾಶಿಕೆ’ ಇವುಗಳ ಮೇಲೆ ಪ್ರಕಾಶ ಬೀರುವುದರಿಂದ ಅವುಗಳನ್ನು ತಿಳಿಯಲು ಸಾಧ್ಯವಾಗಿದೆ.

ಮಧ್ವರ ತಂದೆಯ ಅಂಕಿತನಾಮವನ್ನು ಹೇಳದೆ ನಡಿಲ್ಲಾಯ (ನಡುವಂತಿಲ್ಲಾಯ) ನಡುಮನೆಯವರು ಎಂಬುದನ್ನು ಸಂಸ್ಕೃತಕ್ಕೆ ಭಾಷಾಂತರಿಸಿ ‘ಮಧ್ಯಗೇಹ ಕುಲ’ (೨-೯) ಎಂದಿದೆ. ಇವರನ್ನು ತ್ರಿಕುಲೈಕ ಕೇತು (೨-೧೧) ಮೂರು ಕುಲಗಳಲ್ಲಿ ಶ್ರೇಷ್ಠ ನಾದವನೆಂದಿದೆ. ವ (ಒ) ಡಿಪೆ (ಈಗಿನ ಉಡುಪ) ಪಾರ್ಪದಾನೆ; ಕಬೆಕೋಡೆ ಈ ಮೂರು ಕುಲಗಳೆಂದು ವ್ಯಾಖ್ಯಾನದಲ್ಲಿ ಹೇಳಿದ್ದರೂ ಇಂದು ಕೊನೆಯ ಎರಡು ಕಂಡುಬರುವುದಿಲ್ಲ. ಮಧ್ವರ ತಂದೆ ತಮ್ಮ ಮಗನಿಗೆ ವಾಸುದೇವನೆಂದು ಹೆಸರಿಟ್ಟನು. ಅಚ್ಯುತ ಪ್ರೇಕ್ಷಕರು ಮುಂದೆ ಸನ್ಯಾಸ ದೀಕ್ಷೆ ನೀಡುವಾಗ ಪೂರ್ಣಪ್ರಜ್ಞನೆಂದೂ ಮಠದ ಉತ್ತರಾಧಿಕಾರಿಯಾದಾಗ ಅನಂತತೀರ್ಥ ಎಂದೂ ಕರೆದರು. ‘ಮಧ್ವ’ ಎಂಬುದು ತಾನೇ ಇಟ್ಟುದು. ಮಧು -ಅನಂದ, ವ -ತೀರ್ಥ, ಅಂದರೆ ‘ಅನಂದ ತೀರ್ಥ’ ಎಂಬ ಹೆಸರನ್ನು ಸೂಚಿಸುವ ವೈದಿಕ ಶಬ್ಧ. (೧-೩ರ ವ್ಯಾಝ್ಯಾನ) ಮೂಡಿಲ್ಲಾಯ (೨-೩೦) ಪೂರ್ವಾಲಯ (ಪೂರ್ವ -ಮೂಡು, ಇಲ್ಲ್‌ಆಲಯ) ಎಂಬುವರು ಬಾಲಕ ವಾಸುದೇವನಿಗೆ ಹಾಲು ಕುಡಿಯಲು ದನವನ್ನು ಕೊಟ್ಟರಂತೆ ಈ ಪಾತ್ರದಾನದಿಂದ ಮೂಡಿಲ್ಲಾಯಾರ ಮಗನ ಮಗನು ಮುಂದೆ ಮಧ್ವರ ಶಿಷ್ಯನಾಗಿ ಪರಮಾತ್ಮ ತತ್ವವನ್ನು ತಿಳಿದು ಮೋಕ್ಷ ಸಾಧಿಸುವ ಸತ್ಫಲವೊದಗಿತು.

ಬಾಲಕ ವಾಸುದೇವನು ಸ್ವಜನರೊಂದಿಗೆ ನೆಯಂಪಳ್ಳಿಯಲ್ಲಿರುವ ಬಂಧುಗೃಹಕ್ಕೆ ಹೋಗಿದ್ದಾಗ ಅಲ್ಲಿ ಶಿವಮಡಿನ್ನಾಯ (ಶಿವದೌತ ಪತ ಮಡಿ- ಧೌತಪಟ ೩-೨೨) ರಿಂದ ಪುರಾಣ ಕಥೆ ನಡೆಯಿತು. ಅವರು ಹೇಳಿದ ತಪ್ಪನ್ನು ಈ ಬಾಲಕ ಸರಿಪಡಿಸುತ್ತಾನೆ. ಇಲ್ಲಿ ಮಾತ್ರ ಶಿವ ಎಂಬ ಅಂಕಿತನಾಮವಿದ್ದು ‘ಮಡಿನಾಯ’ ಎಂಬುದು ಸಂಸ್ಕೃತದಲ್ಲಿ ‘ಧೌತಪಟ’ ಆಗಿದೆ.

ಚತುರನಾದ ಬಾಲಕ ವಾಸುದೇವನು ಬಹಳ ಬೇಗ ಕಲಿಯುತ್ತಿದ್ದರಿಂದ ತನ್ನ ಗುರುವಾದ ತೋಟಂತಿಲ್ಲಾಯ (ಪೂಗವನಾನ್ವಯ ೩-೪೯) ರ ಪಾಠಕ್ಕೆ ಗಮನ ಕೊಡುತ್ತಿರಲಿಲ್ಲ. ಅವರಿಗೆ ಇವನ ಮೇಲೆ ಅಷ್ಟು ಋಷಿ ಇರಲಿಲ್ಲ. ” ಏ ಶಠ ನೀನೇಕೆ ಸಹಪಾಠಿಗಳೊಂದಿಗೆ ಪಠಿಸುವುದಿಲ್ಲ. ಉದಾಸೀನ ಬುದ್ಧಿಯಾಗಿದ್ಧಿ?” ಎಂದು ಬೈದರಂತೆ.

ಲಿಕುಚಾನ್ವಯೋದ್ಭವ (ಪೆಜತ್ತಾಯ ೫-೨೭) ರಾದ ಒಬ್ಬಹಿರಿಯ ಯತಿ ಮಧ್ವರ ಗುರು ಅಚ್ಯುತ ಪ್ರೇಕ್ಷರೊಂದಿಗಿದ್ದರು. ಇವರೇ ಬ್ರಹ್ಮ ಸೂತ್ರ ಮತ್ತು ಉಪನಿಷತ್ತುಗಳಿಗೆ ಭಾಷ್ಯ ಬರೆಯಲು ಮಧ್ವರನ್ನು ಪ್ರೇರೇಪಿಸಿದರು. ಲಿಕುಚಾನ್ವಯಕ್ಕೆ ಪೆಜತ್ತಾಯ ಎಂಬ ತುಳು ಪರ್ಯಾಯವನು ಹೇಳಿಲ್ಲವಾದರೂ ಹಾಗೆ ತಿಳಿಯಬೇಕು. ಮಧ್ವರ ಶಿಷ್ಯತ್ವವನ್ನು ಸ್ವೀಕರಿಸಿದ ತ್ರಿವಿಕ್ರಮ ಪಂಡಿತರು ಪೆಜತ್ತಾಯ ಕುಲದವರು. ಈ ಜ್ಯೇಷ್ಠಯತಿಯೂ ಅದೇ ಕುಲಕ್ಕೆ ಸೇರಿದವರು. ಮುಂದೆ ೧೫-೩೫ರಲ್ಲಿ ‘ತ್ರಯೋಲಿಕುಚ ಶೇಖರಾ’: ಎಂಬ ಶ್ಲೋಕದ ವ್ಯಾಖ್ಯಾನದಲ್ಲಿ ‘ಶಿಷ್ಯ ಭೂತ ಗ್ರಹಿಣಾಂ ಮಧ್ಯೇ ತ್ರಯೋಲಿಕುಚ ಶೇಖರಾ :ತ್ರಿವಿಕ್ರಮರ್ಯಾ ಏಕ : ಶಂಕರಾರ್ಯ ನಾಮಾನೌದ್ವೌ’ ಎಂದಿರುವುದರಿಂದ ಮೂವರು ಪೆಜತ್ತಾಯ ಕುಲದವರು ಮಧ್ವರ ಗೃಹಸ್ಥ ಶಿಷ್ಯರು. ಅವರಲ್ಲೊಬ್ಬರು ತ್ರಿವಿಕ್ರಮ ಪಂಡಿತರು. ಈ ಜ್ಯೇಷ್ಠಯತಿ ಲಿಕುಚಾನ್ವಯರಾದರೂ ಗೃಹಸ್ಥರಲ್ಲದ್ದರಿಂದ ಈ ಮೂವರಲ್ಲಿ ಸೇರುವುದಿಲ್ಲ,. ಮಧ್ವರಭಿಮಾನಿಯಾಗಿ ಅವರ ಗ್ರಂಥಗಳ ರಕ್ಷಣೆಯನ್ನು ವಹಿಸಿದ ತ್ರಿವಿಕ್ರಮರ ತಮ್ಮನೇ ಆದವರು ಒಬ್ಬ ಶಂಕರರು ಇನ್ನೊಬ್ಬರು ಯಾರೆಂದು ತಿಳಿಯಲಿಲ್ಲ. ಈ ಕಾವ್ಯ ಮಾಧ್ವರ ಜೀವನ ಚರಿತ್ರೆಗೆ ಬೆಳಕು ಬೀರುವುದಿದ್ದರೂ ಆ ಬೆಳಕಿನೆಡೆಯಲ್ಲಿ ಇಂತಹ ಕತ್ತಲು ಹಲವೆಡೆ ಉಳಿದುಕೊಂಡಿದೆ.

ಹಿಂದೆ ಹೇಳಿದ ಕೊಡಿಪಾಡಿ (ಗಂಡವಾಟ) ಯವನಂತೆ ಮೂಡಂಪಾಡಿತ್ತಾಯ (ಮೂಡ- ಪೂರ್ವ, ಪಾಡಿ-ವಾಟ) ನೂ ಮಧ್ವರ ಗಂಟಲು ಒತ್ತುವ ಸವಾಲಿನಲ್ಲಿ ಸೋಲುತ್ತಾನೆ. (೧೬-೩೧) ಮಧ್ವರು ನೆಲದಲ್ಲಿ ಒತ್ತಿ ಇರಿಸಿದ ಅವರ ಬೆರಳನ್ನೂ ಮೂಡಂಪಾತ್ತಾಯನಿಗೆ ಎತ್ತಲಾಗುವುದಿಲ್ಲ. (೧೨-೩೨)

ಕೊಕ್ಕಡದಲ್ಲಿ, ಕೆಲವು ವ್ಯಾಖ್ಯಾನಕಾರರು ‘ಇದನ್ನು’ ‘ಇಡ್ಕ’ ಎಂದಿದ್ದಾರೆ. ಮಧ್ವರು ತನ್ನ ಭಕ್ತರಾದ ಇಡೆಪ್ಪಾಡಿತ್ತಾಯರಿಗಾಗಿ ಶ್ರೀಕೃಷ್ಣಾಮೃತ ಮಹಾರ್ಣವವನ್ನು ಬರೆದರಂತೆ. (೧೬-೪೦) ‘ಸ್ವಭಕ್ತ’ ಎಂಬುದನ್ನು ಇಡೆಪ್ಪಾಡಿತ್ತಾಯ ಎಂದು ವ್ಯಾಖ್ಯಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಇದಕ್ಕೆ ಸಂಸ್ಕೃತ ಭಾಷಾಂತರವಿಲ್ಲ.

ಮಧ್ವರು ದಕ್ಷಿಣ ಭಾರತ ಯಾತ್ರೆಯನ್ನು ಕೈಗೊಂಡು ತಿರುವನಂತಪುರಕ್ಕೆ ಹೋಗಿದ್ದಾಗ ಅಲ್ಲಿ ಶಂಕರಾಚಾರ್ಯರ ಅದ್ವೈತದಲ್ಲಿ ವಿದ್ವಾಂಸರಾದ ಕುದುಪುಸ್ತೂರು ಕುಲದ (ಅಪ್ರಾಂಶುನೂತ್ನೋಧಿವಾಸ ಕುದ್ಯ -ಅಪ್ರಾಂಶು, ಪೊಸತ್ತ್‌-ನೂತ್ನ, ಊರು-ಅಧಿವಾಸ ೫-೩೮) ಸ್ವಾಮಿಗಳೊಬ್ಬರು ಅವರೊಡನೆ ವಾದಿಸುತ್ತಾರೆ. ಇಂತಹ ಒಂದು ತುಳು ಬ್ರಾಹ್ಮಣ ಕುಲ ಈಗ ಕಂಡುಬರುವುದಿಲ್ಲ. ಪುತ್ತೂರಾಯವೆಂಬ ಕುಲ ಈಗಲೂ ಇದೆ. ‘ಕುದಿಪುತ್ತೂರಾಯ’ ಆಗ ಇದ್ದಿರಬಹುದು.

ಮಧ್ವರ ಪೂರ್ವಾಶ್ರಮದಲ್ಲಿ ವೇದವನ್ನು ಕಲಿಸಿದ ಗುರು (ತೋಟಂತಿಲ್ಸ್ಲಾಯ) ವಿನ ಮಗನಾದ ವಾಸುದೇವನು ಅಧಿವಾಸ ಹೋಮಮಾಡಲು ಹೊರಟಾಗ ಮೊರಡಿತ್ತಾಯನೆಂಬವನು (ಜರಾಘುಟಿತ ಗೋತ್ರ, ೯-೪೪) ಅವನು ಯಾಗ ಮಾಡಲು ಅಯೋಗ್ಯನೆಂದು ಅದನ್ನು ತಡೆದನಂತೆ. ಆಗ ಮಧ್ವರು ಆ ವಿಘ್ನವನ್ನು ಪರಿಹರಿಸಿ ಬಾರಕೂರಿನ ರಾಜ (ಬಾಲಕನ್ಯಾಪುರಾಧಿಪ) ನೇ ಮೊದಲಾದ ಸಮಸ್ತರ ಸಮಕ್ಷದಲ್ಲಿ ಆ ಹೋಮವನ್ನು ನಡೆಯಿಸಿದರಂತೆ.

ಕುಂಬಳೆಯ ರಾಜ ಜಯಸಿಂಹನಿಗೆ ಕವಿಸಿಂಹವೆಂಬ ಹೆಸರೂ ಇದ್ದಂತೆ ತಿಳಿಯಲಾಗಿದೆ. ಈ ಗ್ರಂಥದಲ್ಲಿ ಕಬೆನಾಡಿನ (ಕುಂಬಳ) ರಾಜ ಕಬೆಸಿಂಹ (ಸ್ತಂಭವಿಶಿಷ್ಟ ಸಿಂಹ, ೧೩-೨೧) ಎಂದು ಸ್ಪಷ್ಟವಾಗಿ ಕೆಲವೆಡೆ ಹೇಳಿದೆ. (ಸ್ತಂಭ -ತುಳುವಿನಲ್ಲಿ ಕಬೆ, ಕ. -ಕಂಬ)

ಹೀಗೆ ತುಳುವಿನ ಸ್ಥಳನಾಮ ಕುಲನಾಮಗಳು ಸಂಸ್ಕೃತಕ್ಕೆ ಭಾಷಾಂತರವಾಗಿ ದಿಗ್ಭ್ರಮೆಗೊಳಿಸುತ್ತವೆ. ತುಳು ಶಬ್ಧಗಳು ಸಂಸ್ಕೃತಕ್ಕೆ ಹೊಂದಿಕೊಳ್ಳದಿರುವುದರಿಂದ ಕವಿಗೆ ಹೀಗೆ ಮಾಡುವುದು ಅನಿವಾರ್ಯವಾಗಿರಬೇಕು. ಸಂಸ್ಕೃತದ ಸುವರ್ಣಕರಡಿಗೆಯಲ್ಲಿ ತುಳು ಶಬ್ಧ ರತ್ನಗಳನ್ನು ಅಡಗಿಸಿಟ್ಟಂತೆ ಕಂಡರೂ ಕರ್ದಿಗೆಯನ್ನು ತೆರೆದಾಗ ಅವು ಹೊಳೆಯುತ್ತವೆ. ಅರ್ಥಾಲಂಕಾರ ಶಬ್ದಾಲಂಕಾರ ಉಕ್ತಿ ಚಮತ್ಕಾರ ಆಸಾಧಾರಣ ಶಬ್ಧ ಪ್ರಯೋಗಗಳಿಂದ ಪ್ರೌಢವಾದ ಸಂಸ್ಕೃತದ ಈ ಚಿನ್ನದ ಗನಿಯಲ್ಲಿ ತುಳು ಶಬ್ಧಗಳು ಆದುರಿನಂತೆ ಅಡಗಿ ಕುಳಿತಿವೆ. ಮಧ್ವರ ಜೀವನ ಚರಿತ್ರೆಯ ಅವರ ಸಾಧನೆ ಸಿದ್ಧಿ ಮಹತ್ವಗಳನ್ನು ನಿರೂಪಿಸುವುದರೊಂದಿಗೆ ಭೌಗೋಳಿಕ ಜ್ಞಾನವನ್ನು ಒದಗಿಸುವುದರಲ್ಲಿ ಸಫಲವಾಗಿದೆ.

 

[1] ಶಿವ ಮೆರೆದ ಹಳ್ಳಿ ಶಿವಳ್ಳಿ -ಡಾ. ಉಪ್ಪಂಗಳ ರಾಮಭಟ್ಟ, ‘ಬೆಳಕು’ ನಾಲ್ಕನೇ ವಾರ್ಷಿಕೋತ್ಸವದ ನೆನಪಿನ ಸಂಚಿಕೆ. ಸಾಹಿತ್ಯ ಸಂಘ, ಹಿರಿಯಡಕ, ೨೪- ೧೨-೧೯೮೧.

[2] ತುಳುನಾಡಿನ ಶಾಸನಗಳು – ಡಾ. ಕೆ. ವಿ. ರಮೇಶ, ಎಂ. ಜೆ. ಶರ್ಮ, ಗೀತಾ ಬುಕ್‌ಹೌ‌ಸ್‌, ಮೈಸೂರು, ೧೯೭೮, ಪುಟ ೨೬, ಶಾಸನದ ಕಾಲ ೮ನೇ ಶತಮಾನ.

[3] ತುಳುನಾಡಿನ ಶಾಸನಗಳು – ಡಾ. ಕೆ. ವಿ. ರಮೇಶ, ಎಂ. ಜೆ. ಶರ್ಮ, ಗೀತಾ ಬುಕ್‌ಹೌ‌ಸ್‌, ಮೈಸೂರು, ೧೯೭೮, ಪುಟ ೧೫, ಶಾಸನದ ಕಾಲ ೮ನೇ ಶತಮಾನ.

[4] ತುಳುನಾಡಿನ ಶಾಸನಗಳು – ಡಾ. ಕೆ. ವಿ. ರಮೇಶ, ಎಂ. ಜೆ. ಶರ್ಮ, ಗೀತಾ ಬುಕ್‌ಹೌ‌ಸ್‌, ಮೈಸೂರು, ೧೯೭೮, ಪುಟ ೩೩,೩೪, ೩೯, ೪೩, ಶಾಸನದ ಕಾಲ ೯ನೇ ಶತಮಾನ

[5] ಶಿವ ಮೆರೆದ ಹಳ್ಳಿ ಶಿವಳ್ಳಿ -ಡಾ. ಉಪ್ಪಂಗಳ ರಾಮಭಟ್ಟ, ‘ಬೆಳಕು’ ಸಾಹಿತ್ಯ ಸಂಘ, ಹಿರಿಯಡಕ, ೧೯೮೧.

[6] ದಕ್ಷಿಣ ಕನ್ನಡದ ಇತಿಹಾಸ (ತುಳುಚರಿತ್ರೆ) -ಕೇಶವ ಕೃಷ್ಣ ಕುಡ್ವ ಕಾರ್ಕಾಳ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ -ಎಂ. ಗಣಪತಿ ರಾವ್‌, ೧೯೨೩ ಪುಟ ೧೯.

[7] ತುಳುನಾಡಿನ ಶಾಸನಗಳು – ಡಾ. ಕೆ. ವಿ. ರಮೇಶ, ಎಂ. ಜೆ. ಶರ್ಮ, ಸಂ. ೧ ಮೈಸೂರು, ೧೯೭೮, ಪುಟ ೫೦-೫೨.

[8] Journey from Madras through the countries of Mysore, canara, malabar – Francis Buchanen, Page, 212. ಕಾಸರಗೋಡು ಸಮಾಚಾರ – ಸಂ. ವೈ. ಮಹಾಲಿಂಗ ಭಟ್ಟ, ೧೯೫೬

[9] ಕಾಸರಗೋಡು ಕನ್ನಡ
ತಾಯ ಸೆರಗು – ಬೇಕಲ ರಾಮ ನಾಯಕ
ಕಾಸರಗೋಡು ಸಮಾಚಾರ – ಸಂ. ವೈ. ಮಹಾಲಿಂಗ ಭಟ್ಟ, ೧೯೫೬

[10] ಕಬೆಸಿಂಹ, ಜಯಸಿಂಹ, ಏವಂ ನಾಮದ್ವಯ ವಿಶಿಷ್ಟೋ ರಾಜ ಶ್ರೇಷ್ಠ : ‘ಪದಾರ್ಥ ದೀಪಿಕಾ’ ವ್ಯಾಖ್ಯಾನ – ಸಮಧ್ವ ವಿಜಯ ೧೩ – ೨೧

[11] ಅಮರಾಲಯಸ್ಯ ಕುಡಿಲ್‌ಇತ್ಯಪಭ್ರಷ್ಟಭಾಷಾ – ೧೫ – ೧, ಭಾವಪ್ರಕಾಶಿಕಾ