ಆಡಳಿತ ಭಾಷೆ ಕನ್ನಡವಾಗಿದ್ದು ಅಧಿಕಾರಿಗಳು ಜನರೊಡನೆ ಕನ್ನಡದಲ್ಲೇ ಮಾತನಾಡುವುದರಿಂದ ಅಧಿಕಾರಿಗಳೊಂದಿಗೆ ತುಳುವಿನಲ್ಲಿ ಮಾತನಾಡಿದರೆ ತನ್ನನ್ನು ಹಳ್ಳಿಮಾರನೆಂದು ಭಾವಿಸುತ್ತಾರೆ. ಎಂಬ ಭಯದಿಂದ ಸಾಮಾನ್ಯ ಜನರೂ ತುಳುವನ್ನು ಬಿಟ್ಟು ಕನ್ನಡವನ್ನೇ ಹೆಚ್ಚು ಬಳಕೆಗೆ ತಂದರು. ಕನ್ನಡ ಅಥವಾ ಇಂಗ್ಲಿಷ್‌ಮಾಧ್ಯಮದ ಶಾಲೆಗಳಲ್ಲಿ ಆಯಾ ಭಾಷೆಯಲ್ಲಿ ಮಾತನಾಡದೆ, ತುಳುವಿನಲ್ಲಿ ಮಾತನಾಡಿದರೆ ಅನೇಕ ಶಿಕ್ಷಕರೂ ವಿದ್ಯಾರ್ಥಿಗಳನ್ನು ಶಿಕ್ಷಿಸುತ್ತಿದ್ದರು. ತುಳುವಿನಲ್ಲಿ ಶ, ಷ, ಸ ಗಳ ಮತ್ತು ಳ, ಲ, ನ, ಣ ಗಳ ವ್ಯತ್ಯಾಸವಿಲ್ಲ. ತುಳುವಿನಲ್ಲಿ ಮಾತನಾಡಲು ಬಿಟ್ಟರೆ ಆ ವಿದ್ಯಾರ್ಥಿಗಳು ಕನ್ನಡ ಮಾತನಾಡುವಾಗಲೂ ಈ ಉಚ್ಚಾರ ಭೇದಗಳನ್ನು ಎಣಿಸದೆ ಮಾತನಾಡುತ್ತಾರೆ ಎಂಬುದು ಈ ಶಿಕ್ಷಕರ ಅಭಿಪ್ರಾಯವಾಗಿತ್ತು. ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕಾಗಿದ್ದುದರಿಂದ ಶಾಲೆಗೆ ಮಕ್ಕಳನ್ನು ಸೇರಿಸುವ ಮೊದಲೇ ಕನ್ನಡ ಕಲಿಸುವುದು ಉತ್ತಮವೆಂದು ಅನೇಕ ತಂದೆ ತಾಯಿಯವರು ಮನೆಗಳಲ್ಲಿ ಮಕ್ಕಳೊಡನೆ ತುಳುವನ್ನು ಬಿಟ್ಟು ಕನ್ನಡ ಮಾತನಾಡಲು ಪ್ರಾರಂಬಿಸಿದರು. ತಾವು ತುಳು ಮಾತನಾಡಿದರೆ ಮಕ್ಕಳು ತುಳುವಿನ ಕಡೆಗೆ ಒಲವು ಹರಿಸುತ್ತಾರೆ ಎಂಬುದಾಗಿ ಭಾವಿಸಿ ತಂದೆ ತಾಯಿ ಕೂಡಾ ತುಳುವನ್ನು ಬಿಟ್ಟು ಕನ್ನಡವನ್ನೇ ಬಳಸಿದರು.

ತುಳುವಿನಲ್ಲಿ ಪ್ರಾದೇಶಿಕ ವ್ಯತ್ಯಾಸ ಬಹಳಷ್ಟು ಹೆಚ್ಚಾಗಿದ್ದ ಸಂದರ್ಭದಲ್ಲಿ ಪಟ್ಟಣದ ತುಳುವರು ಹಳ್ಳಿಯ ತುಳುವರ ಭಾಷೆಯನ್ನು ಹೀಯಾಳಿಸುತ್ತಿದ್ದರು. ಹಳ್ಳಿಯ ತುಳುವರಿಗೆ ತಮ್ಮ ಭಾಷೆಯ ಬಗ್ಗೆ ಕೀಳಿರಿಮೆ ಇತ್ತು. ಈ ಹೀಯಾಳಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಳ್ಳಿ ಪ್ರದೇಶದ ಜನರು ತುಳು ಮಾತನಾಡುವುದನ್ನು ಬಿಟ್ಟು ಕನ್ನಡದಲ್ಲಿ ಮಾತನಾಡುವುದಕ್ಕೆ ಪ್ರಾರಂಬಿಸಿದರು. ಪ್ರಾದೇಶಿಕ ವ್ಯತ್ಯಾಸ ಕಡಿಮೆಯಾಗಿ ಇತ್ತೀಚೆಗೆ ತುಳು ಮಾತೃಭಾಷೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿಯೊಂದು ಜಾತಿಯಲ್ಲಿಯೂ ಭಾಷಾ ಭೇದವಿದೆ. ಉದಾ : ಬಂಟರು (ತುಳು) ನಾಡವರು (ಕನ್ನಡ) ವಿಶ್ಚಕರ್ಮದಲ್ಲಿ ತುಳು, ಮಲೆಯಾಳ, ಕನ್ನಡಿಗರೆಂಬ ಭೇದವಿದೆ. ಬಿಲ್ಲವರಲ್ಲಿ (ತುಳು) ಬೆಳ್ಚಾಡ (ಮಲೆಯಾಳ) ಈಡಿಗ (ಕನ್ನಡ) ಎಂಬ ವ್ಯತ್ಯಾಸವಿದೆ. ಬ್ರಾಹ್ಮಣರಲ್ಲಿ ಶಿವಳ್ಳಿ, ಶಿವಬ್ರಾಹ್ಮಣ (ತುಳು) ಕೋಟ, ಹವ್ಯಕ (ಕನ್ನಡ) ಸಾರಸ್ವತ (ಕೊಂಕಣಿ) ಕರಾಡಸ್ಥ, ಚಿತ್ಪಾವನ (ಮರಾಠಿ) ಹೀಗೆ ಬಹಳಷ್ಟು ವಿಧಗಳಿವೆ. ಪೂತ್ತೂರು, ಬಂಟ್ವಾಳದಲ್ಲಿರುವ ಗೌಡರು ತುಳು ಮಾತನಾಡಿದರೆ ಸುಳ್ಯದ ಗೌಡರು (ಅರೆ) ಗೌಡಕನ್ನಡ ಮಾತನಾಡುತ್ತಾರೆ. ಈ ಭಾಷಾ ಭೇದ ವಿವಾಹ ಸಂಬಧ ಬೆಳೆಸುವಲ್ಲಿ ಅಡ್ಡಿ ಉಂಟು ಮಾಡುತ್ತದೆ ಎಂದು ಭಾವಿಸಿ, ಇದನ್ನು ತಪ್ಪಿಸುವ ಸಲುವಾಗಿ ಹಲವು ಜಾತಿಯವರು ತುಳುವನ್ನು ಬಿಟ್ಟು ಕನ್ನಡವನ್ನೇ ತಮ್ಮ ಭಾಷೆಯನ್ನಾಗಿ ಮಾಡಿಕೊಂಡರು.

ತುಳು ನಾಡಿನಲ್ಲಿ ಕನ್ನಡವನ್ನು ಹೆಚ್ಚು ಪ್ರಚಾರಕ್ಕೆ ತಂದ ಮಾಧ್ಯಮವೆಂದರೆ ಯಕ್ಷಗಾನ. ಅನಕ್ಷರಸ್ಥರೂ ಕೂಡಾ ಯಕ್ಷಗಾನದಲ್ಲಿ ಪಾತ್ರವಹಿಸಬಲ್ಲವರಾಗಿದ್ದರು. ಕನ್ನಡಬಾರದ ಜನರು ಕೂಡಾ ಯಕ್ಷಗಾನದಿಂದ ಕನ್ನಡ ಭಾಷೆ ಕಲಿತುಕೊಂಡು ಅದರ ಆಧಾರದಿಂದ ಕನ್ನಡ ವ್ಯವಹರಿಸಲು ಪ್ರಾರಂಬಿಸಿದರು. ಕೆಲವು ವರ್ಷಗಳ ಹಿಂದೆ ತುಳು ಯಕ್ಷಗಾನ ಪ್ರದರ್ಶನ ಅರಂಭಗೊಂಡಿತು. ಮೊದ ಮೊದಲಿಗೆ ತುಳು ಯಕ್ಷಾಗಾನದಲ್ಲಿ ದೇವ, ದೇವತೆಗಳ ಪಾತ್ರದಾರಿಗಳು ಕನ್ನಡದಲ್ಲಿಯೂ ರಾಜರು, ಸಾಮಾನ್ಯ ಜನರು ಮತ್ತು ಭೂತಗಳು ತುಳುವಿನಲ್ಲೂ ಸಂಭಾಷಣೆ ನಡೆಸುತ್ತಿದ್ದರು. ತುಳುವು ಕನ್ನಡಕ್ಕಿಂತ ಕೆಳದರ್ಜೆಯದ್ದು ಎಂಬ ಭಾವನೆಯೇ ಇದಕ್ಕೆ ಕಾರಣವಾಗಿತ್ತು.

೧. ತುಳುವಿನ ಸರ್ನನಾಮಗಳು : ಹಳೆಯ ತುಳುವಿನಲ್ಲಿ ಬಳಸುತ್ತಿದ್ದ ಪದಗಳು

ತನ್ಕುಲು (ತಾವು), ನಮೊ / ನಮ (ತಾವು), ಇಂಬ್ಯೆ (ಅವನು), ಅಂಬಳ್‌ / ಮೋಲು (ಇವಳು), ಉಂದು (ಇದು), ಅವು (ಅದು / ಅವುಗಳು), ಮುಕುಲು (ಇವರು), ಅಕುಲು (ಅವರು), ಅಂಬೆರ್‌(ಇವರು).

೨. ತುಳುವಿನಲ್ಲಿ ಸಂಬೋಧನಾ ಪದಗಳು ಇತರ ಭಾಷೆಯದಕ್ಕಿಂತ ಭಿನ್ನವಾಗಿವೆ.

ಹತ್ತಿರದ ಸಂಬಂಧಿಕರಾದರೆ ಹಿರಿಯರು ಕಿರಿಯರನ್ನು ಹೀಗೆ ಸಂಭೋಧಿಸುವ ಪದ್ಧತಿ ಇತ್ತು.

ಅಂದಂಬೆ (ಹುಡುಗರನ್ನು) ಅಂದದೇ / ದಿ -(ಹುಡುಗಿಯರನ್ನು)
ಅಂದಲೇ -ಇಕೊಳ್ಳಿ, ಅಂದಯ -ಇಕೋ

ಅಂದಯ – ಪ. ಜಾತಿಯು ಹುಡುಗರನ್ನು ಮೇಲ್ಜಾತಿಯರು ಸಂಬೋಧಿಸುವ ಪದ

ಅಂದಳೆ – / ಗಳೆ -ಪ. ಜಾತಿಯ ಹೆಣ್ಣನ್ನು ಮೇಲ್ಜಾತಿಯರು ಸಂಬೋಧಿಸುವ ಪದ.

೩. ಕೆಳವರ್ಗದವರು ಬ್ರಾಹ್ಮಣರನ್ನು ಅಯ್ಯ / ಅಣ್ಣೆರೆ ಎಂದೂ ಬ್ರಾಹ್ಮಣ ಹೆಂಗಸರನ್ನೂ ಅಕ್ಕೆ ಎಂದೂ ಕರೆಯುತ್ತಿದ್ದರು.

ಸಮಾನ ವರ್ಗದ ಹಿರಿಯರನ್ನು ಅಣ್ಣ ಎಂದೂ ಹೇಂಗಸರನ್ನೂ ಅಕ್ಕ ಎಂದು ಸಂಬೋಧಿಸುವುದು ಸಾಮಾನ್ಯ.

೪. ಬ್ರಾಹ್ಮಣ / ಜೈನ ಮತ್ತಿತ್ತರ ಹೆಂಗಸರನ್ನು ಮದಿಮಲ್‌ ಎಂದು ಕರೆಯುವ ಪದ್ಧತಿಯೂ ಇತ್ತು.

೫. ಬ್ರಾಹ್ಮಣರು ಗಂಡನನ್ನು ಪುರುಷೆ ಮತ್ತು ಹೆಂಡತಿಯನ್ನು ಮದಿಮಲ್‌ ಅಥವಾ ರಾಮಣಿ ಎಂದು ಕರೆಯುತ್ತಿದ್ದರು.

೬. ಪರಿಶಿಷ್ಟ ಜಾತಿಯವರು ಮೇಲ್ವರ್ಗದವರನ್ನು ಸಂಬೋಧಿಸುವ ಪದಗಳು ಈ ರೀತಿಯದ್ದಾಗಿತ್ತು.

ಬ್ರಾಹ್ಮಣ / ಬಾಣರ್‌ (ಪುಲಿಂಗ) ದೆತ್ತೀ (ಸ್ತ್ರೀ)
ಬಂಟರನ್ನು – ದೆಕ್ಕಲು (ಪು) ದೆತ್ತಿ (ಸ್ತ್ರೀ)
ಗೌಡರನ್ನು – ಎಟ್ಯಾಲ್‌ (ಪು) ಎಡ್ತುಲು (ಸ್ತ್ರೀ)
ಮುಸ್ಲಿಮರನ್ನು – ಚೆಟ್ಯಾಲ್‌ (ಪು) ಚೆಡ್ತಿಲು (ಸ್ತ್ರೀ)
ಬಿಲ್ಲರನ್ನು – ಬೈದ್ಯೆರ್‌ (ಪು) ಬದಿಲು (ಸ್ತ್ರೀ)

ಇತರ ಜ್ತಿಯವರಿಗೆ ‘ಪಾಲ್‌’ ಎಂಬ ಪದ ಪ್ರತ್ಯಯ ಸೇರಿಸುವುದು ಪದ್ಧತಿ. ಉದಾ : ಆಚಾರ್‌ + ಪಾಲ್‌, ಆಚಾರ್ತುಲು, ಮಡ್ಯೊಲು + ಪಾಲ್‌ಮಡ್ಯೊಲ್ತಿಲು, ಬಂಡಾರ್‌, ಪಾಲ್‌, ಬಂಡಾರ್ತೂಲು, ನಾಗೆರ್‌(ವು) ನಾಗೆತಿಲು (ಸ್ತ್ರೀ).

ತುಳುನಾಡನ್ನು ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಹೊರತಾಗಿ ಮುಸ್ಲಿಂ ದೊರೆಗಳ್ಯಾರೂ ಆಡಳಿತ ನಡೆಸದೆ ಇದ್ದರೂ ತುಳುನಾಡಿನ ಹೊರತಾಗಿರುವ ಕನ್ನಡ ನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಮುಸಲ್ಮಾನರ ಆಡುಭಾಷೆಯ ಪ್ರಭಾವ ತುಳು ಭಾಷೆಯ ಮೇಲಾಗಿದೆ. ಉತ್ತರ ಭಾರತದ ಮುಸ್ಲಿಮರ ಆಡು ಭಾಷೆಯನ್ನು ಬ್ರಿಟಿಷರು ‘ಹಿಂದೂಸ್ತಾನಿ’ ಎಂದು ಕರೆದರು. ಇದನ್ನು ಮಾಮೂಲಿಯಾಗಿ ಉರ್ದು ಎನ್ನಲಾಗುತ್ತಿತ್ತು. ಉರ್ದುವಿನಲ್ಲಿ ಹಿಂದಿ, ಪಾರಸಿ ಮತ್ತು ಅರೆಬಿಕ್‌ಪದಗಳು ಸಾಕಷ್ಟು ಬೆರೆತಿವೆ. ಉರ್ದು ಭಾಷೆಯು ದಕ್ಷಿಣ ಭಾಗದಲ್ಲಿ ಕನ್ನಡ ಮತ್ತು ಮರಾಠಿಯೊಂದಿಗೆ ಸಂಪರ್ಕ ಹೊಂದಿ ರೇಖ್ತಾ ಎಂಬ ಹೊಸ ಭಾಷೆಯೊಂದು ಹುಟ್ಟಿಕೊಂಡಿತ್ತು. ಬಹಮನೀ ಸುಲ್ತಾನರ ಆಡಳಿತಾವಧಿಯಲ್ಲಿ ಇದೊಂದು ಶಿಷ್ಟ ಭಾಷೆಯಾಗಿ ಬೆಳೆದು ದಖನೀ ಎಂದೇ ಹೆಸರಿಸಲ್ಪಟ್ಟಿತು. ಆಕಾಲದಲ್ಲಿ ಕನ್ನಡವು ತನ್ನೊಳಗೆ ಸಾಕಷ್ಟು ಪಾರಸಿ, ಮತ್ತು ಅರೆಬಿಕ್‌, ಉರ್ದು ಪದಗಳನ್ನು ಸ್ವೀಕರಿಸಿಕೊಂಡು ಕನ್ನಡದ ಮೂಲಕ ತುಳುವಿಗೂ ಈ ಪದಗಳು ವರ್ಗಾಯಿಸಲ್ಪಟ್ಟವು. ಹೀಗೆ ತುಳುವಿಗೆ ಬಂದ ಕೆಲವೊಂದು ಪಾರಸಿ ಪದಗಳನ್ನು ಹೀಗೆ ಪಟ್ಟಿ ಮಾಡಬಹುದು. ಅಬ್ಕಾರಿ (ಅಬಕಾರಿ), ಉಮೇದ್‌ (ಉಮ್ಮಿದ್‌), ಕಮ್ಮಿ (ಕಮೀ), ಕುಸ್ತಿ (ಕುಷ್ತಿ), ಗೋಸ್ವರಿ (ಗೋಸ್ವಾರಹ್‌), ಚೌಕಾಸಿ (ಚೌಕಾಶಿ), ಜಬರ್‌ದಸ್ತ್‌ (ಜಬರ್‌ದಸ್ತ್‌), ತಗಾದೆ (ತಗಾದನ್‌), ದಗೆ (ದಫ), ದಗಲ್ಬಾಜೀ (ದಘುಲ್‌ಬಾಜಿ), ದಳ್ಳಾಳಿ (ನಗದಿ- ನಖ್‌ದಿ,) ನಮೂನೆ (ನಮೂನಹ್), ವಸೂಲಿ (ವಸೂಲತ್‌), ಗತ್ತ್ (ಗಸ್ತ್‌), ವಾಪಾಸ್‌(ವಾಪಾಸ್‍), ಸಿಕಾರಿ (ಷಿಕಾರಿ), ಸಜೆ (ಸಜಾ), ಸಾಮಾನ್‌ (ಸಾಮಾನ್‌‍) ಇಷ್ಟೇ ಅಲ್ಲದೆ ಬದಲಾವಣೆಗೊಳ್ಳದೆ ನೇರವಾಗಿ ಬಳಸಲ್ಪಡುವ ಪದಗಳೆಂದರೆ ಎಅಂದಾಜಿ, ಅಮಲ್ದಾರ, ಅಂಬಾರಿ, ಅರ್ಜಿ, ಆಫಿಮು, ಆರಾಮ, ಇನಾಂದಾರ್, ಕಮಾನ್‌‍, ಕರಾರು, ಕಲಾಯಿ, ಕಸೂತಿ, ಕರ್ಬಾರ್‌, ಕಾರಾಸ್ತಾನ್‌, ಕುಳವಾರು, ಕೂಜಿ, ಕೂಲಿ, ಕೋಮುವಾದಿ ಕಾಸಗಿ, ಖಜಾಂಜಿ, ಕರೀದಿ ಕುರ್ಚಿ, ಕುಸ್ತಿ, ಕಾನೆಸುಮಾರಿ, ಕುದ್ದು, ಕೂನಿ, ಗಾರೆ, ಗುಮಾಸ್ತೆ, ಗುಮ್ಮಟೆ, ಗುರಿಕಾರೆ, ಗಸಗಸೆ, ಗುಲಾಮೆ, ಗುಲಾಬಿ, ಗೋರಿ, ಚಟ್ನಿ ಚಪಾತಿ, ಚಮ್ಚೊ, ಚರಕ, ಚಾ, ಚಾಕ್ರಿ, ಚಾಲೂಕು, ಚೂರು, ಚಾಲು, ಜಕಂ ಜಮೆ, ಜಮಾಬಂದಿ ಜಮಿನ್ದಾರೆ, ಜರಿ, ಜರತಾರಿ ಜಲ್ದಿ, ಜವಾನ್‌, ಜವಾಬ್ದಾರಿ, ಜಾಗ, ಜಾನುವಾರು ಜಾಸ್ತಿ, ಜಿಲೇಬಿ, ಜಿಲ್ಲೆ, ಜುಲ್ಮಾನೆ, ಜೋರು, ಜುಲಾಬು, ತಮಾಸ್‌, ತಂಬೂರಿ, ತಯಾರಿ, ತಹಸೀಲ್ದಾರ್‌, ತಾಜ, ತುಪಾಕಿ, ತುರ್ಕೆರ್‌, ತ್ರಾಸ್‌, ದಫೆದಾರ್‌, ದಫ್ತರ್‌, ದಮ್ಮು, ದರ್ಜಿ, ದರ್ಬಾರ್‌, ದೋಸ್ತಿ, ದಸ್ತಾವೇಜಿ, ದಾಲ್ಚೀನಿ, ದಾವೆ, ದುಬಾರಿ, ದುರ್ಬೀನ್‌, ನಿಮಾಜಿ, ನೌಕ್ರಿ, ಜಾಜೂಕು, ನಿಗಾ, ನಸೆ, ಪರ್ದೆ, ಪತ್ತೆ, ಪಲಾವು, ಪಾಯಿಕಾನೆ, ಪೈಜಾಮ, ಪಿಂಗಾಣಿ, ಪಿರ್ಯಾದಿ, ಬಕ್ಷೀಸ್‌, ಬಾಗಾಯ್ತು, ಬಜಾರ್‌, ಬಂದರ್‌, ಬುಲಾಕ್‌, ಬೇಜಾರ್‌, ಬೇವರ್ಸಿ, ಬೇಸ್‌, ಬರವಸೆ, ಮ, ಮೈಲಿ, ಮಸ್ಕಿರಿ, ಮಸಾಲೆ, ಮಾದ್ರಿ, ಮಾಪಿ, ಮಾಲಿಸ್‌, ಮುಚ್ಚಳಿಕೆ, ಮೇಜಿ, ಮೇಸ್ತ್ರೀ, ಮೈದ ಮೈದಾನ್‌, ರಜೆ, ರವಾನೆ, ರಸೀದಿ, ರಾಜಿನಾಮೆ, ರೂಪು-ರೂಪು, ರುಮಾಲು, ರೇಷ್ಮೆ, ಲಗಾಮು, ಲಫಂಗ, ಲುಂಗಿ, ವಕಾಲತ್ತ್‌, ವರದಿ, ವಾರಾಸುದಾರೆ, ವಿಮೆ, ಸರ್ಬತ್ತ್‌, ಸಾಬಾಸ್‌, ಸಾ(ಶ)ಯಿ, ಸಾ(ಶಾ)ಲ್‌, ಸಿ(ಶಿ)ಫಾರಸ್‌, ಸಕತ್ತ್‌, ಸಿಪಾಯಿ, ಸರ್ದಾರೆ ಸರ್ಕಾರ್‌, ಸರಾಸರಿ, ಸವಾರೆಸ, ಸಾದಾ, ಸಿಪಾಯಿ, ಸಿಬ್ಬಂದಿ, ಸುಬೇದಾರೆ, ಸುಮಾರ್‌, ಸುಲ್ತಾನೆ, ಹಕ್ಕೆದಾರೆ, ಹತ್ಯಾರ್‌, ಹವಲ್ದಾರ್‌, ಹುಮ್ಮಸ್‌, ಹುಷಾರ್‌ಹೀಗೆ ಎಷ್ಟೋ ಪದಗಳು ತುಳುವಿನಲ್ಲಿ ಮಾಮೂಲಿಯಾಗಿ ಬಳಕೆಯಲ್ಲಿವೆ.

ತುಳುನಾಡಿನ ಕರಾವಳಿಗೆ ಹಡಗದ ಮೂಲಕ ಬಂದು ಅರಬರು ಬಹಳ ಕಾಲದ ಹಿಂದಿನಿಂದಲೂ ವ್ಯಾಪಾರ ಮಾಡುತ್ತಿದ್ದರು. ತುಳುನಾಡಿನಿಂದ ಸಂಗ್ರಹಿತವಾದ ಅಕ್ಕಿ, ಕರಿಮೆಣಸು, ಸಂಬಾರ ಪದಾರ್ಥ ಮುಂತಾದವುಗಳನ್ನು ಯುರೋಪಿಗೆ ಕೊಂಡೊಯ್ದು ಮಾರಾಟ ಮಾಡುವ ಮಧ್ಯವರ್ತಿಗಳಾಗಿದ್ದರು. ಮಲಬಾರು ಮತ್ತು ತುಳುನಾಡಿನ ಹೆಣ್ಣು ಮಕ್ಕಳನ್ನು ಮದುವೆಯಾಗಿ ಸಂಬಂಧ ಬೆಳೆಸಿ ಇಸ್ಲಾಂ ಧರ್ಮವು ಕರಾವಳಿ ಪ್ರದೇಶದಲ್ಲಿ ಬೆಳೆಯುವಂತೆ ಮಾಡಿದರು. ಈ ಎಲ್ಲಾ ವ್ಯವಹಾರಗಳ ಪರಿಣಾಮವಾಗಿ ಇಲ್ಲಿನ ತುಳು ಭಾಷೆಯಲ್ಲಿ ಅನೇಕ ಅರೆಬಿಕ್‌ ಪದಗಳು ಬೆರೆತುಹೋದವು. ಮುಸ್ಲಿಮರ ಪವಿತ್ರ ಗ್ರಂಥ ಕುರುಆನ್‌ ಅರಬೀ ಭಾಷೆಯಲ್ಲಿದೆ. ಈ ಗ್ರಂಥ ಪಠಣ ಮಾಡಿದ ಮುಸ್ಲಿಮರು ಕೂಡಾ ತುಳುವಿನೊಂದಿಗೆ ಅರಬೀ ಭಾಷೆಯ ಪದಗಳು ಸೇರ್ಪಡೆಗೆ ಕಾರಣರಾಗುತ್ತಾರೆ. ಅಹವಾಲು, ಇರಾದೆ, ಇಲಾಖೆ, ಕಬೂಲು, ಕಸುಬು, ಕಸರತ್ತು, ಕಾನೂನು, ಕಿಮ್ಮತ್ತು, ಕಿಸೆ, ಕಿಲ್ಲೆ, ಕುರ್ಸಿ, ಕೈದಿ, ಖಾಸ, ಖಾಲಿ, ಜವಾಬ್‌, ಸವಾಐಲ್‌, ಜಮಿನ್‌, ಜಾರಿ, ಜಿದ್ದ್‌, ಜಿಲ್ಲಾ ತನಿಕೆ, ತಬಲ, ತರ್ಜುಮೆ, ತಾರೀಕ್‌, ತಾಲ್ಲೂಕ, ದರ್ಜೆ, ದಾಖಲು, ದೌಲತ್ತ್‌, ನಕಲ್‌, ನಕಾಸೆ, ಪಿಕ್ರ್‌, ಪರಾರಿ, ಪಸಲ್‌, ಪಾಯ್ದೆತ, ಬದಲಂ, ಬಕಾಇ, ಬುರ್ಕ, ಮಜಲ್‌, ಮಂಜೂರಿ, ಮಸಲತ್ತ್‌ಮಹಜರ್‌, ಮಹಲ್‌, ಮಾಜಿ, ಮಾಮೂಲು, ಮೌಲ್‌, ಮೊಕದ್ದಮೆ, ರಖಂ, ರದ್ದ್‌, ರಾಜಿನಾಮೆ, ರಿವಾಜಿ, ರಿಯಾಯ್ತಿ, ರುಜುವಾತು, ಲುಕ್ಸಾನ್‌, ವಕೀಲ್‌, ವಜ, ವಸೂಲಿ, ವೈದೆ, ಸುರು, ಸರತ್ತ್‌, ಸಬೂಬು, ಸಲಾಮು, ಸಾಬೀತ್‌, ಹಲ್ವ, ಹಾಜರಿ, ಹಿಕ್ಮತ್‌, ಹುಕುಂ – ಹೀಗೆ ತುಳು ಭಾಷೆಯೊಂದಿಗಿನ ನೂರಾರು ಅರಬೀ ಪದಗಳು ಬೆರೆತು, ತುಳು ಮೂಲದ ಪದಗಳೋ ಎಂಬಷ್ಟರ ಮಟ್ಟಿಗೆ ನೈಜತೆಯನ್ನು ಪಡೆದಿವೆ.

ಕರಾವಳಿ ಕರ್ನಾಟಕದಲ್ಲಿ ಆಧಿಪತ್ಯವನ್ನು ಪ್ರಾರಂಭಿಸಿದ ವಿದೇಶೀಯರಲ್ಲಿ ಪೋರ್ಚುಗೀಸರು ಮೊದಲಿಗರು. ಅವರು ಗೋವೆಯಲ್ಲಿ ತಮ್ಮ ವ್ಯಾಪಾರ ಕೇಂದ್ರವನ್ನು ಕ್ರಿ.ಶ. ೧೫೧೦ರಲ್ಲಿ, ಸ್ಥಾಪಿಸಿದರು ವಿಜಯನಗರದ ಅರಸ ಕೃಷ್ಣದೇವರಾಯನು ಬಿಜಾಪುರದ ಸುಲ್ತಾನನೊಂದಿಗೆ ನಡೆಸಿದ ಕಾಳಗದಲ್ಲಿ ನೆರವಾಗಿ, ಅದಕ್ಕೆ ಪ್ರತಿಯಾಗಿ ವಿಜಯನಗರದ ಅರಸರ ಆಶ್ರಯ ಸಂಪಾದಿಸಿದರು. ಉಳ್ಳಾಲದ ರಾಣಿ ಅಬ್ಬಕ್ಕನೊಡನೆ ಕ್ರಿ.ಶ. ೧೬೧೮ರಲ್ಲಿ ಹೋರಾಟ ನಡೆಸಿದರು. ಅವರು ಕರಾವಳಿ ಕರ್ನಾಟಕದಲ್ಲಿ ವ್ಯಾಪಾರ ವ್ಯವಹಾರಗಳನ್ನು ಚೆನ್ನಾಗಿ ನಡೆಸುತ್ತಿದ್ದರು. ಬ್ರಿಟಿಷರ ಬಲಾಢ್ಯತೆಯಿಂದಾಗಿ ಗೋವೆಯನ್ನುಳಿದು ಉಳಿದ ಕರಾವಳಿ ಭಾಗವನ್ನು ವಶಪಡಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಅವರು ತುಳುವರೊಂದಿಗೆ ನಡೆಸುತ್ತಿದ್ದ ವ್ಯವಹಾರದಿಂದಾಗಿ, ಅನೇಕ ಪೋರ್ಚುಗೀಸ್‌ ಪದಗಳು ತುಳುವಿನೊಂದಿಗೆ ಬೆರೆತುಕೊಂಡವು. ತುಳುವಿಗೆ ಪರಿವರ್ತನೆಗೊಂಡ ಕೆಲವೊಂದು ಪೋರ್ಚುಗೀಸ್‌ ಪದಗಳನ್ನು ಹೀಗೆ ಹೆಸರಿಸಬಹುದಾಗಿದೆ:

ಅಲ್ಮಾರು, ಅನನಾಸು, ಆಸ್ಪತ್ರೆ, ಬಟಾಟೆ, ಚಾ, ಚಾವಿ, ಗಡಂಗ್‌, ಇಸ್ತ್ರಿ, ಜುಗಾರಿ, ಕ್ರಿಸ್ತನ್‌, ಮೇಜಿ, ಮೇಸ್ತ್ರಿ, ಪಾದ್ರಿ, ಪಾಪೋಸ್‌, ಪೆನ್ನ್‌, ಪೇರಳೆ, ಪೀಪೆ, ಸಾಬೂನು, ವರಾಂಡ, ಸೋಡ್ತಿ ಇವೆಲ್ಲವು ಪೂರ್ಚುಗೀಸ್‌ ಭಾಷೆಯಿಂದ ತುಳುವಿಗೆ ರೂಪ ಪರಿವರ್ತನೆಗೊಂಡ ಪದಗಳಾಗಿವೆ.

ಇಂಗ್ಲಿಷರು ಭಾರತದಲ್ಲಿ ಬಂದು ೧೭ನೆಯ ಶತಮಾನದಲ್ಲಿ ಪ್ರಬಲರಾದರು. ಸುಮಾರು ಮೂರು ಶತಮಾನಗಳವರೆಗೆ ಇಲ್ಲಿ ಆಡಳಿತ ನಡೆಸಿದರು. ಇಂಗ್ಲಿಷ್‌ನ್ನು ಆಡಳಿತ ಭಾಷೆಯನ್ನಾಗಿ ಮಾಡಿದರು. ಶಿಕ್ಷಣ ಮಾಧ್ಯಮವನ್ನಾಗಿ ಮಾಡಿದರು. ಭಾರತೀಯರೆಲ್ಲರೂ ಇಂಗ್ಲಿಷ್‌ ಭಾಷೆಯ ಪ್ರಭಾವಕ್ಕೊಳಗಾದರು. ಸಾಮಾಜಿಕ, ಸಾಹಿತ್ಯಕ, ರಾಜನೈತಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಇಂಗ್ಲಿಷ್‌ ಸುಶಿಕ್ತಿರ ಬಳಕೆಯ ಭಾಷೆಯಾದುದು ಕಾಲಕ್ರಮೇಣ ಜನಸಾಮಾನ್ಯರ ಮನೆಯನ್ನು ಪ್ರವೇಶಿಸಿತು. ಇಂಗ್ಲಿಷ್‌ಮಾತನಾಡುವುದರಿಂದ ತಮ್ಮ ಪ್ರತಿಷ್ಟೆ ಹೆಚ್ಚುತ್ತದೆ ಎಂಬ ಭಾವನೆ ಜನರಲ್ಲಿ ಮೂಡಿತು. ಈಗಲೂ ಇಂಗ್ಲಿಷ್‌ ಬಲ್ಲವರು ತಾವು ತುಳು ಮಾತನಾಡುವಾಗ ಅದೆಷ್ಟೊ ಇಂಗ್ಲಿಷ್‌ ಪದಗಳನ್ನು ಬೆರಕೆ ಮಾಡಿಕೊಂಡು ಮಾತನಾಡುತ್ತಾರೆ. ಬಾರದವರು ಕೂಡ ಇಂಗ್ಲಿಷ್‌ ಪದಗಳನ್ನು ತುಳುವಿಗೆ ಮಾರ್ಪಾಡು ಮಾಡಿಕೊಂಡು ಬಳಸುತ್ತಿದ್ದಾರೆ. ಇಂತಹ ನೂರಾರು ಪದಗಳನ್ನು ತುಳುವಿನಲ್ಲೂ ದೊರೆಯುತ್ತವೆ. ಉದಾ: ಬೂಕ್‌ (Book), ರೈಲ್‌ (Rail), ಬೆಂಚಿ (Bench), ಕೋರ್ಟು (Court), ಗ್ಲಾಸ್‌ (Glass), ಗೀಲೀಟ್‌ (Gilt), ಫಿಡ್ಲ್‌ (Pidle), ಕಂತ್ರಾಟ್‌ (Contract), ಮಾಸ್ಟ್‌ (Master), ಬಸ್‌ (Bus), ಪಿಂಚಿನಿ (Pension), ಲೋರಿ (Lorry), ಕೋಲೇಜಿ (College), ಕಾಫಿ (Coffee), ಕೋಲ್ಡ್‌ (Cool Drinks).

ಬಹಳ ಹಿಂದಿನ ಕಾಲದಿಂದಲೂ ತುಳುವಿನಲ್ಲಿ ಬಳಸುತ್ತಾ ಬಂದ ಪದಗಳಿಂದ ಅಕೇರಿ (ಆಖಿರ್‌), ಅಸಲ್‌ (ಅಸ್ಲಿ), ಅಸ್ಸಾಮಿ (ಅಸಾಮೀ), ಇನಾಮು (ಇನಾಂ), ಇಸ್ವಿ (ಇಸ್ವಿ), ಕಾಯಿಲೆ (ಕಾಹಿಲ್‌), ಕಾಕಜಿ (ಕಾಗಜ್‌), ಕಾಯಂ (ಖಾಇಮ್‌), ತಕ್ರಾರ್‌ (ತಕರಾರ್‌), ತರ್ಬೇತಿ (ತರ್‌ಬೀಯತ್‌), ದಾಕ್ಲಾತಿ (ದಾಖಲಾತ್‌), ದಿಮಾಕ್‌ (ದಿಮಾಫ್‌), ನಕ್ಲಿ (ನಖ್‌ಲಿ), ಬಾಬ್ತು (ಬಾಬ್‌), ರಾಜಿ (ರಾಜಿ), ವಿಲಾತಿ (ವಿಲಾಯತ್‌), ಸೋಕು (ಷಲೂಖ್‌), ಸರಾಪೆ (ಷರಾಫ್‌) ಮುಂತಾದ ಪದಗಳು ಉರ್ದು ಮೂಲದವುಗಳೆಂದರೆ ಯಾರಿಗೂ ಅಚ್ಚರಿ ಮೂಡದಿರದು. ಈ ಪದಗಳೆಲ್ಲ ಕೇವಲ ವ್ಯವಹಾರದಲ್ಲಿ ಮಾತ್ರವಲ್ಲ, ಪಾಡ್ಡನಗಳಲ್ಲಿಯೂ ಸೇರಿಹೋಗಿವೆ. ಆಡಳಿತಾತ್ಮಕ ಭಾಷೆಯಲ್ಲೂ ಇದೇ ಪದಗಳನ್ನು ಬಳಸಲಾಗುತ್ತೆದೆ.

ತುಳುನಾಡಿಗೆ ಅನೇಕ ಕುಟುಂಬಗಳು ಮಹಾರಾಷ್ಟ್ರದ ಕಡೆಯಿಂದ ಬಂದಿವೆ. ಮಹಾರಾಷ್ಟ್ರದ ಬ್ರಾಹ್ಮಣವರ್ಗದವರು ಮತ್ತು ಮರಾಠಿ ಗಿರಿಜನರು ಇಲ್ಲಿನ ಹಳ್ಳಿಹಳ್ಳಿಗಳಲ್ಲಿಯೂ ಕಂಡುಬರುತ್ತಾರೆ. ಅನೇಕ ಮರಾಠಿಗರು ತಮ್ಮ ಮೂಲಭಾಷೆಯನ್ನು ಬಿಟ್ಟು ತುಳುವನ್ನು ಮಾತೃಭಾಷೆಯಾಗಿ ಸ್ವೀಕರಿಸಿದ್ದಾರೆ. ಅವರ ಮೂಲಕ ತುಳುವಿಗೆ ಅನೇಕ ಮರಾಠಿ ಪದಗಳು ಬಂದು ಸೇರಿವೆ. ಅದೇ ರೀತಿ ಗೋವಾದಿಂದ ಬಂದ ಕೊಂಕಣಿ ಮಾತನಾಡುವವರು ಮತ್ತು ಕೇರಳದಿಂದ ಬಂದ ಮಾಲೆಯಾಳಿಗಳ ಸಂಖ್ಯೆ ಕೂಡಾ ತುಳುನಾಡಿನಲ್ಲಿ ಬಹಳಷ್ಟಿದೆ. ತುಳುನಾಡು ಒಂದು ಸಂಕೀರ್ಣ ಭಾಷಾ ಸಂಸ್ಕೃತಿಯುಳ್ಳ ನಾಡು ಎಂದೆಣಿಸಿದೆ. ಇಲ್ಲಿ ನೆಲೆಸಿದ ಜನರ ಆಡುಭಾಷೆಗಳಾದ ಕೊಂಕಣಿ, ಮರಾಠಿ, ಮಲೆಯಾಳ, ಬ್ಯಾರಿ ಭಾಷೆ, ಕನ್ನಡದ ಅನೇಕ ಉಪಭಾಷೆಗಳು ಮತ್ತು ತುಳುವಿನ ಮಧ್ಯೆ ಕೊಡು- ಕೊಳೆಗಳು ನಡೆದು, ಒಂದು ಭಾಷೆಯಲ್ಲಿ ಬಳಸುವ ಪದವು ಇನ್ನೊಂದು ಭಾಷೆಯಲ್ಲೂ ಕಂಡುಬಂದಾಗ, ಅದು ಮೂಲತಃ ಯಾವ ಭಾಷೆಯದ್ದು ಎಂಬುದನ್ನು ಕಂಡುಹಿಡಿಯುವುದೇ ಕಷ್ಟದ ಕೆಲಸವಾಗಿದೆ.

ಇಂದು ತುಳುನಾಡು ಸಾಕಷ್ಟು ಸಾಧನಗಳನ್ನು ಹೊಂದಿದೆ. ಬೆಂಗಳೂರು ನಗರವನ್ನು ಬಿಟ್ಟರೆ ಅತ್ಯಂತ ಹೆಚ್ಚು ದೂರಸಂಪರ್ಕವನ್ನು ಹೊಂದಿದ ಜಿಲ್ಲೆ ದಕ್ಷಿಣ ಕನ್ನಡ ಎಂಬುದಾಗಿ ಹೆಸರು ಪಡೆದಿದೆ. ಗ್ರಾಮಾಂತರ ಪ್ರದೇಶಗಳಿಗೂ ಹೋಗಿಬರಲು ರಸ್ತೆ ನಿರ್ಮಾಣವಾಗಿದೆ. ಖಾಸಗಿ ಮತ್ತು ಸರಕಾರಿ ವಾಹನಗಳ ವ್ಯವಸ್ಥೆ ಹೆಚ್ಚಿದೆ. ಒಂದು ತಾಲ್ಲೂಕಿನ ಜನ ಇನ್ನೊಂದು ತಾಲ್ಲೂಕಿನವರೊಂದಿಗೆ ಸಾಮಾಜಿಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಜಾತೀಯ ಸಂಘಟನೆಗಳು ಕೂಡಾ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದವರೆಗೂ ವ್ಯಾಪಿಸಿವೆ. ಮಂಗಳೂರು ಆಕಾಶವಾಣಿಯ ತುಳು ಪ್ರಸಾರವನ್ನು ಸುಮಾರು ೪೦ ಲಕ್ಷ ಜನ ಕೇಳುತ್ತಾರೆ. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸ್ಥಾಪನೆಗೊಂಡು ಬಹಳಷ್ಟು ತುಳು ಪುಸ್ತಕಗಳನ್ನು ಪ್ರಕಟಿಸಿದೆ. ಅಲ್ಲಲ್ಲಿ ಸಂಸ್ಕೃತಿಕ ಸಮಾರಂಭಗಳನು ಏರ್ಪಡಿಸಿ ತುಳುವಿನ ಕಡೆಗೆ ಜನರನ್ನು ಸೆಳೆಯುತ್ತದೆ. ಅತ್ಯುತ್ತಮ ಪುಸ್ತಕಗಳಿಗೆ, ವಿದ್ವಾಂಸರಿಗೆ ಬಹುಮಾನ, ಪ್ರಶಸ್ತಿ ನೀಡುವುದರ ಮೂಲಕ ಬರೆವಣಿಗೆಗೆ ಪ್ರೋತ್ಸಾಹ ನೀಡುತ್ತದೆ. ನಿರಂತರವಾಗಿ ತುಳು ನಾಟಕಗಳು ಹಳ್ಳಿ, ಪಟ್ಟಣಗಳಲ್ಲಿ ನಡೆಯುತ್ತಲೇ ಇವೆ. ತುಳು ಹಾಡಿನ ಧ್ವನಿ ಸುರಳಿಗಳು ತಯಾರುಗೊಂಡು, ಮಾರಾಟಕ್ಕೆ ಸಿಗುತ್ತವೆ. ಕೆಲವೊಂದು ತುಳು ಸಿನಿಮಾಗಳು ಕೂಡಾ ನಿರ್ಮಾಣಗೊಂಡಿವೆ. ನಾಟಕದ ಸಂಭಾಷಣೆ, ಹಾಡಿನ ಸೊಲ್ಲು ತುಳುವರ ನಾಲಗೆಯಲ್ಲಿ ನಲಿದಾಡುವಂತಾಗಿದೆ.

ತುಳು ಕೂಟಗಳು, ಸಂಘ, ಸಂಸ್ಥೆಗಳು, ಹಬ್ಬಹರಿದಿನಗಳು ಆಚರಣೆ, ಸಮಾರಂಭಗಳನ್ನು ನಡೆಸುವುದರ ಮೂಲಕ ಭಾಷಾಭಿಮಾನವನ್ನು ಹೆಚ್ಚಿಸಿವೆ. ಭಾಷಾ ಬಾಂಧವ್ಯ ಬೆಳೆದಿದೆ. ಪ್ರಾದೇಶಿಕ ಭೇಧ, ಜಾತಿಭೇದಗಳನ್ನು ಕಳೆದುಕೊಂಡು ತುಳು ಭಾಷೆ ಏಕರೂಪಕ್ಕೆ ಬರಲು ಮುಂದಾಗಿದೆ. ಜನರಲ್ಲಿ ತುಳುವಿನ ಬಗ್ಗೆ ಕೀಳಿರಿಮೆ ತೊಲಗಿ, ಅಭಿಮಾನ- ಗೌರವ ಭಾವನೆ ಬೆಳೆದಿದೆ.

ಇವೆಲ್ಲ ವಿಶ್ಲೇಷಣೆಗಳ ಆಧಾರದಿಂದ, ಆಧುನಿಕ ತುಳುವಿನ ರೂಪ- ರೇಷೆ, ಲಕ್ಷಣಗಳನ್ನು ಈ ರೀತಿಯಾಗಿ ನಿರ್ಧರಿಸಬಹುದಾಗಿದೆ:

೧. ಮಂಗಳೂರು- ಉಡುಪಿಯ ತುಳುವಿನಲ್ಲಿ ಮಹಾಪ್ರಾಣಾಕ್ಷರಗಳನ್ನು ಕೈಬಿಡಲಾಗಿದೆ. ಆ ಸ್ಥಾನದಲ್ಲಿ ಅಲ್ಪ ಪ್ರಾಣಾಕ್ಷರಗಳನ್ನು ಬಳಸಲಾಗುತ್ತದೆ. ‘ಳ’ ಕಾರದ ಬದಲು ‘ಲ’ ಕಾರವನ್ನು ಹೆಚ್ಚು ಬಳಕೆಗೆ ತರಲಾಗಿದೆ. ಇಲ್ಲಿನವರು ಶಬ್ಧಗಳನ್ನು ಹಗುರವಾಗಿ ತೇಲಿಸಿ ಸಾಕಷ್ಟು ವೇಗವಾಗಿ ಮಾತನಾಡುತ್ತಾರೆ. ಕ್ರಿಯಾಪದಗಳನ್ನು ‘ನಿ’ ಯಿಂದ ಅಂತ್ಯಗೊಳಿಸುವುದು ಹೆಚ್ಚು ಬಹುವಚನ ಮತ್ತು ಗೌರಯುತವಾದ ಪದಗಳನ್ನು ಬಳಸುವುದರಿಂದ ಈ ಭಾಷೆ ಕೇಳಲು ಹೆಚ್ಚು ಇಂಪಾಗಿರುತ್ತದೆ. ಮಾಧುರ್ಯಾವುಳ್ಳ ಸೌಮ್ಯ ಭಾಷೆ ಎಂಬುದಾಗಿ ಮಂಗಳೂರು -ಉಡಪಿ ಪ್ರದೇಶದ ನಾಗರಿಕರ ತುಳು ಭಾಷೆಯನ್ನು ತುಳುನಾಡಿನವರೆಲ್ಲರೂ ಅನುಸರಿಸುತ್ತಿದ್ದಾರೆ.

೨. ಬ್ರಾಹ್ಮಣರ ತುಳು – ಜೈನರ ತುಳು – ಪರಿಶಿಷ್ಟಜಾತಿಯವರ ತುಳು – ಸಾಮಾನ್ಯ ತುಳು ಎಂಬ ಸಾಮಾಜಿಕ ಪ್ರಭೇದಗಳ ಮಧ್ಯೆ ಇರುವ ಅಂತರ ಕಡಿಮೆಯಾಗಿದೆ. ಸಾಮೂಹಿಕ ಸಮಾರಂಭಗಳಲ್ಲಿ ಎಲ್ಲರೂ ಸಾಮಾನ್ಯ ತುಳುವನ್ನೇ ಮಾತನಾಡುತ್ತಾರೆ. ಪತ್ರಿಕೆಗಳಲ್ಲಿ ಸಾಮಾನ್ಯ ತುಳುವಿನ ಲೇಖನಗಳನ್ನೇ ಪ್ರಕಟಿಸುತ್ತಾರೆ. ಆಕಾಶವಾಣಿಯಲ್ಲಿಯೂ ಸಾಮಾನ್ಯ ತುಳು ಬಳಸಲ್ಪಡುತ್ತದೆ. ಕೆಲವೊಂದು ಬ್ರಾಹ್ಮಣ ತುಳುವಿನ ಪದಗಳು ಸಾಮಾನ್ಯ ತುಳುವಿನಲ್ಲಿ ಸೇರ್ಪಡೆಗೊಂಡಿವೆ.

೩. ತುಳು ಭಾಷೆಯಲ್ಲಿ ಸಂಸ್ಕೃತ ಪದಗಳ ಬಳಕೆ ಕಡಿಮೆಯಾಗಿದೆ. ಸೂಕ್ಷ್ಮವಾದ ಭಾವನೆಗಳು, ಉದಾತ್ತ ವಿಚಾರಗಳು, ಬೌದ್ಧಿಕ ವಿಚಾರಗಳು, ದೇವರು, ಧರ್ಮ, ನ್ಯಾಯ, ನೀತಿ ತತ್ವ -ಸಿದ್ಧಾಂತ, ಶೀಲ- ಭಕ್ತಿ, ಇತ್ಯಾದಿ ವಿಚಾರಗಳನ್ನು ಹೇಳುವಾಗ ಅನಿವಾರ್ಯವಾಗಿ ಸಂಸ್ಕೃತ ಪದಗಳ ಬಳಕೆಯಾಗುತ್ತದೆ.

೪. ಇಂಜಿನಿಯರಿಂಗ್‌, ಮೆಡಿಕಲ್‌ ಮತ್ತಿತ್ತರ ವೈಜ್ಞಾನಿಕ ವಿಚಾರಗಳ ತಾಂತ್ರಿಕ ಪದಗಳನ್ನು ಹೇಳುವಾಗ, ಇಂಗ್ಲಿಷ್‌ ಪದಗಳನ್ನು ಬಳಸುತ್ತಾರೆ. ಆಂಟಿ, ಅಂಕಲ್‌, ಡ್ಯಾಡಿ, ಮಮ್ಮಿ, ಥಾಂಕ್ಸ್‌, ಸ್ಸಾರಿ, ಎಕ್ಸ್‌ಕ್ಯೂಸ್‌ಮಿ, ವೆಲ್‌ಕಮ್‌, ಡೋಂಟ್‌ವರಿ, ಸ್ಪೀಡ್‌, ಅಪ್‌, ಡೌನ್‌, ಲೂಸ್‌, ಟೈಟ್‌, ಫಿಟ್‌, ಡಿನ್ನರ್‌, ಎಂಗೇಜ್‌ಮೆಂಟ್‌, ಟೈಮ್, ಸ್ಕೂಲ್‍, ಜೆಸ್ಟ್‌, ರಿಟರ್ನ್, ಕಾಮನ್‌, ಡೇಂಜರ್‌, ಅರ್ಜಂಟ್‌, ಹೆಲ್ಫ್‌, ರಾಸ್ಕಲ್, ಟಾಟಾ, ಬಿಸ್ಸಿ, ಡೋಂಟ್‌ ಕೇರ್‌, ಹೆಡ್‌ಏಕ್‌, ಇನ್ಸ್‌ಫೆಕ್ಟ್ರ್‌, ರೋಡ್‌, ಟೌನ್‌ ಮುಂತಾದ ಬಹಳಷ್ಟು ಪದಗಳು ತುಳುವರಿಂದ ಮಾತಿನ ನಡುವೆ ಬಳಸಲ್ಪಡುತ್ತದೆ.

೫. ತುಳುನಾಡಿನಲ್ಲಿ ಕನ್ನಡವು ಆಡಳಿತ ಭಾಷೆಯಾಗಿರುವುದರಿಂದ, ಸಮಾನ್ಯ ಜನರು, ಅನಕ್ಷರಥರು ಕೂಡ ಕನ್ನಡ ಮಾತನಾಡಲು ಬಲ್ಲರು ಮತ್ತು ಅರ್ಥ ಮಾಡಿಕೊಳ್ಳಬಲ್ಲರು. ಯಕ್ಷಗಾನವು ತುಳುವರ ಮೇಲೆ ಕನ್ನಡದ ಪ್ರಭಾವವನ್ನು ಬಹಳಷ್ಟು ಬೀರಿದೆ. ಸಮೂಹ ಮಾಧ್ಯಮಗಳಲ್ಲಿ ಕೂಡ ಕನ್ನಡದ ಬಳಕೆಯೇ ಹೆಚ್ಚಾಗಿದ್ದುದರಿಂದ ತುಳು ಭಾಷೆಯಲ್ಲಿ ಕನ್ನಡ ಪದಗಳು ಹೇರಳವಾಗಿ ಬೆರೆತುಕೊಂಡಿವೆ. ಕೆಲವು ಪದಗಳು ನೇರವಾಗಿ ಬಳಸಲ್ಪಟ್ಟರೆ, ಇನ್ನು ಕೆಲವು ಕೆಲವು ರೂಪಾಂತರಗೊಂಡು ಬಳಕೆಯಾಗುತ್ತಿವೆ. ಇತ್ತೀಚೆಗಿನವರೆಗೂ ಕನ್ನಡ ಮಾತನಾಡುವವರೆದುರು ತುಳುವರಿಗೆ ತಮ್ಮ ಭಾಷೆಯ ಬಗ್ಗೆ ಕೀಳರಿಮೆ ಇತ್ತು. ತುಳುವಿನಲ್ಲಿ ಯಕ್ಷಗಾನ, ನಾಟಕಗಳು ಧ್ವನಿ ಸುರಳಿಗಳು, ಪತ್ರಿಕೆಗಳು ಪ್ರಾರಂಭಗೊಂಡ ಮೇಲೆ ಸರಕಾರದಿಂದಲೇ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸ್ಥಾಪನೆಗೊಂಡ ಬಳಿಕ ಜನರಿಗೆ ತುಳು ಭಾಷೆಯ ಬಗ್ಗೆ ಇದ್ದ ಕೀಳರಿಮೆ ಕಡಿಮೆಯಾಗಿದೆ.

೬. ಅರೆಬಿಕ್‌, ಪಾರಾಸಿ, ಉರ್ದು, ಮರಾಠಿ, ಮಲೆಯಾಳಂ, ಕೊಂಕಣಿ ಭಾಷೆಗಳ ಆಧುನಿಕ ತುಳುವಿನಲ್ಲಿ ಬೆರತು ಅವು ತುಳು ಮೂಲದಿಂದಲೇ ಬಂದವುಗಳೋ ಎಂಬಷ್ಟರ ಮಟ್ಟಿಗೆ ಸಹಜತೆಯನ್ನು ಪಡೆದಿವೆ.

೭. ತುಳುವಿನಲ್ಲಿ ಬೇರೆ ಬೇರೆ ವರ್ಗದ ಮತ್ತು ಜ್ಶಾತಿಯ ಜನರನ್ನು ಇನ್ನೊಂದು ವರ್ಗ ಅಥವಾ ಜಾತಿಯವರು ಸಂಬೋಧನೆ ಮಾಡುವ ಪದಗಳು ಬೇರೆ ಬೇರೆಯಾಗಿದ್ದವು. ಆಧುನಿಕ ತುಳುವಿನಲ್ಲಿ ಅವು ಬಳಕೆಯಲ್ಲಿಲ್ಲ. ಹೆಸರಿನೊಂದಿಗೆ ಅಣ್ಣ, ಅಕ್ಕ ಪದಗಳನ್ನು ಜೋಡಿಸಿ ಹೇಳುವ ಕ್ರಮ ರೂಢಿಯಲ್ಲಿದೆ.

೮. ಹಳೆಯ ತುಳುವಿನಲ್ಲಿ ಪ. ಜಾತಿಯವರನ್ನು ಅಂದಗ -ಅಂದಲೆ ಎಂದು ಸಂಬೋಧಿಸುವ ಕ್ರಮವಿತ್ತು. ಈಗ ಆ ಪದಗಳು ಬಳಕೆಯಲ್ಲಿಲ್ಲ.

೯. ಸರ್ವನಾಮಗಳು ಕೂಡಾ ಮಂಗಳೂರು -ಉಡಪಿಯಲ್ಲಿ ಬಳಕೆಯಲ್ಲಿದ್ದಂತೆ ಪರಿವರ್ತನೆಗೊಂಡಿದೆ.

೧೦. ಕಾರ್ಕಳದಲ್ಲಿದ ಇಯ್ಯೊ (ಹೌದು) ಪದ ಬಳಕೆ ಕಡಿಮೆಯಾಗಿದೆ. ಅಲ್ಲಿ ‘ಬಂದರು’ ಎಂಬಕ್ರಿಯಾ ಪದವನ್ನು ಬೌದೆರ್‌ಎಂದು ಉಚ್ಚರಿಸಿದರೆ, ಉಡಪಿ- ಮಂಗಳೂರಲ್ಲಿ ಬೈದರ್‌ಎನ್ನುತ್ತಾರೆ. ಸುಳ್ಯ -ಪೂತ್ತೂರ ಕಡೆ ಬತ್ತೆರ್‌ಎನ್ನುತ್ತಾರೆ. ಬೈದರ್‌, ಜೈದರ್‌(ಮಲಗಿದ್ದಾರೆ) ಈ ಸಂಭೋಧನಾ ಪದಗಳು ಹೆಚ್ಚು ಪ್ರಚಲಿತವಿವೆ. ‘ಇದ್ದಿ’ (ಇಲ್ಲ) ಎಂಬುದನ್ನು ‘ಇಜ್ಜಿ’ ಎಂದೂ, ಬೋಡ್ಚಿ (ಬೇಡ) ಎಂಬುದನ್ನು ಬೊಡ್ಚಿ ಅಥವಾ ಬೊಡಿ ಎಂಬುದಾಗಿ ಬದಲಾವಣೆಗೊಳಿಸಲಾಗಿದೆ.

೧೧. ಪರಿಶಿಷ್ಟ ಜಾತಿಯವರು ಮಾತ್ರ ಬಳಸುತ್ತಿದ್ದ ಕಯ್ಯೆರ್‌ (ಸಾರು) ಮಜಕೆ (ಮದುವೆ) ತುಳ್ಳೆಲ್‌ (ಮದುವೆ) ಮುಳ್ಳುಮೊಟ್ಟುನೆ (ಋತುಮತಿಯಾಗುವುದು) ಕಾಂಪರಿ (ದನದ ಮಾಂಸ) ಕೂರಬು (ಕೂಳು) ಇತ್ಯಾದಿ ಪದಗಳು ಮಾತ್ರವಲ್ಲ, ಅವರು ತಮ್ಮ ವಸತಿಗೆ ಬಳಸುತ್ತಿದ್ದ ಕೊಪ್ಪ, ಕೇಳ್‌‍, ದಟ್ಟಿಗೆ, ಪಟ್ಟ, ಗುಡ್ಲು ಮುಂತಾದ ಪದಗಳು ಕೂಡಾ ಬಳಕೆಯಲ್ಲಿಲ್ಲ.

೧೨. ದಿನನಿತ್ಯದ ಬಳಕೆಗೆ ಯಂತ್ರಗಳು ಮತ್ತು ಅಧುನಿಕ ಉಪಕರಣಗಳ ಜೊತೆ ಬಳಕೆ ಹೆಚ್ಚಾದುದರಿಂದ, ಹಿಂದೆ ಬಳಸುತ್ತಿದ್ದ ವಸ್ತುಗಳ ಹೆಸರು ಜನರಿಗೆ ಮರೆತು ಹೋಗಿದೆ. ಉದಾ : ಅಡುಗೆ ಕೋಣೆಯಲ್ಲಿ ಹಿಂದೆ ಬಳಸುತ್ತಿದ್ದ ಮಣ್ಣಿನ ವಿವಿಧ ಆಕಾರದ ಪ್ರಾತ್ರಗಳಾದ ಕರ, ನೆಸಲೆ, ಬಿಸಲೆ, ಕಡ್ಯ, ಅರಿಯ, ಕುದ್ದೆ, ಅಡ್ಯರ, ಕುಜಿಲಿ, ತೊಂದುರ, ಕರ, ಗದ್ದವು, ಪಲ್ಲಯಿ ಇವೆಲ್ಲ ಹೆಸರುಗಳು ಹೊಸ ತುಳುವಿನಲ್ಲಿ ಮಾಯವಾಗಿವೆ. ಆದೇ ರೀತಿ ಗದ್ದೆ ಉಳಲು ಟಿಲ್ಲರು (Tiller) ಬಂದು ನೊಗ -ನೇಗಿಲು ಮಾಯವಾಗಿದೆ. ನೇಗಿಲಿನ ಭಾಗಗಳಿದ್ದ ಮೊನೆ, ಪುಡಿ, ಪುಡ್ಕಯಿ, ಪನೊರು ಇತ್ಯಾದಿ ಪದಗಳು ಚಾಲ್ತಿಯಲ್ಲಿಲ್ಲ. ಹಲ್ಲರು (Hullor) ಬಂದುದರಿಂದ ಉಜ್ಜೆರ್‌(ಒನಕೆ), ಪಂಪ್ (Pump) ಬಂದುದರಿಂದ ಪನೆ / ಚೊಟ್ಟೆ (ಏತ) ಹೀಗೆ ಭೌತಿಕ ಸಂಸ್ಕೃತಿಯ ಅನೇಕ ವಸ್ತುಗಳು ಕಣ್ಮರೆಗೊಂಡಂತೆ ಅವುಗಳ ಹೆಸರುಗಳೂ ಬಾಯಿ ಮಾತಿನಿಂದ ಮರೆಯಾಗಿವೆ.

೧೩. ಕೆಲವು ಕಣ್ಣೆದುರು ಇದ್ದರೂ ಆ ವಸ್ತುಗಳ ಆ ಸೂಕ್ಷ್ಮ ಭಾಗಗಳ ನಿರ್ದಿಷ್ಟ ಹೆಸರುಗಳ ಬಳಕೆ ತಪ್ಪಿಹೋಗಿದೆ. ಉದಾ : ತಾರೆ (ತೆಂಗಿನ ಮರ) ತಾರಾಯಿ (ತೆಂಗಿನ ಕಾಯಿ) ಬೊಂಡ (ಎಳನೀರು) ಇವಿಷ್ಟು ಎಲ್ಲರಿಗೂ ಗೊತ್ತು. ಆದರೆ ತೆಂಗಿನ ಮರದ ಇನ್ನಿತರ ಭಾಗಗಳಾದ ತೆಂಡೆಲ್‌, ಮಡಲ್‌, ತಿರಿ, ಸೀಂಕ್ರ್‌, ದಂಡ್‌, ಪಾಂದವು, ಕೊಂದುಂಬು, ಕೀಲೆ, ಪಿಂಗಾರ, ಪಾಳೆ, ತೆಪ್ಪು, ಮೊಗಡೊ, ಕೂರು – ಈ ಪದಗಳ ಹೆಸರನ್ನೇ ಕೇಳದ ತುಳುವರು ಅದೆಷ್ಟೋ ಜನರಿರಬಹುದು. ಕತ್ತಿ ಎಂಬುದು ಎಲ್ಲರಿಗೂ ಗೊತ್ತು. ಆದರೆ ಕತಿಯಲ್ಲಿ ಇರಬಹುದಾದ ಕಡ್ಪತ್ತಿ, ತರ್ಕತ್ತಿ, ಕೈಕತ್ತಿ, ಪರ್ದತ್ತಿ, ಬಿಸತ್ತಿ, ಬಾಲ್ಕತ್ತಿ, ಗೆಜ್ಜೆತ್ತಿ – ಈ ಪ್ರಭೇದಗಳು ಆಧುನಿಕ ತುಳುವರಿಗೆ ತಿಳಿಯಲಾರದು.

೧೪. ತುಳುನಾಡಿನಲ್ಲಿ ಬೆಳೆಯುವ ವಿವಿಧ ಜಾತಿಯ ಮರಗಳು ಮತ್ತು ಗಿಡಮೂಲಿಕೆಗಳನ್ನು ಗುರುತು ಹಿಡಿದು, ಈಗಿನ ಕಾಲದ ತುಳುವರು ಹೆಸರಿಸಲಾರರು. ಕುಕ್ಕು (ಮಾವು), ಪೆಲ (ಹಲಸು) ಇವೆರಡನ್ನು ಬಿಟ್ಟರೆ ಕಾಯೆರ್‌, ಸಾಂತಿ, ಪೊನ್ನೆ, ಪಿಜ, ಅನೊವು, ಅರ್ತಿ, ಚಿರ್ಪು, ಬೋವು, ಮರ್ವ ಇವೆಲ್ಲ ಹೆಸರುಗಳೇ ಈಗಿನವರಿಗೆ ಗೊತ್ತಿಲ್ಲ. ಅಧುನಿಕ ತುಳುವಿನಲ್ಲಿ ಅವು ಮರೆಯಾಗಿವೆ.

೧೫. ಬೈಗಳೆಂಬುದು ವಿಕ್ಷಣ ವಾಕ್‌ ಪ್ರಯೋಗಗಳು. ಇವು ಆಶಿಷ್ಟ ಪ್ರಯೋಗಗಳಾಗಿದ್ದರೂ ಹಿಂದಿನ ಕಾಲದ ತುಳುವರಿಗೆ ದಿನದಲ್ಲಿ ಕೆಲವಾದರೂ ಬೈಗಳ ನುಡಿಗಟ್ಟುಗಳನ್ನು ಬಳಸದಿದ್ದರೆ, ಉಂಡ ಅನ್ನ ಅರಗದಷ್ಟು ಮಟ್ಟಿಗೆ ಸಂಕಟವಾಗುತ್ತಿತ್ತು. ನಾನಾ ರೀತಿಯಿಂದ ಬೈಗಳನ್ನು ಹಿಂದಿನವರು ಬಳಸುತ್ತಿದ್ದರು. ಪದಗಳಲ್ಲಿ, ನುಡಿಗಟ್ಟುಗಳಲ್ಲಿ ವಾಕ್ಯಗಳಲ್ಲಿ ರೂಪಕಗಳಲ್ಲಿ, ಉಪಮೆಗಳಲ್ಲಿ ಶ್ಲೇಷೆಗಳಲ್ಲಿ ಬೈಗಳನ್ನು ಅಭಿವ್ಯಕ್ತಗೊಳಿಸಲಾಗುತ್ತಿತ್ತು. ತುಳುವನ್ನು ಅತ್ಯಂತ ಹೆಚ್ಚು ಬೈಗಳು ಹೊಂದಿರುವ ಭಾಷೆ ಎಂಬುದಾಗಿ ಇತರ ಭಾಷೆಯವರು ಅವಹೇಳನ ಮಾಡುತ್ತಿದ್ದುದ್ದೂ ಇದೆ. ನಾಗರಿಕತೆ ಹೆಚ್ಚಿದಂತೆ, ಬೈಗಳ ಬಳಕೆ ಎಲ್ಲಾ ಭಾಷೆಗಳ್ಳಲ್ಲೂ ಕಡಿಮೆಯಾಗಿದೆ. ಅಂತೆಯೇ ತುಳುವಿನಲ್ಲೂ ಬೈಗಳ ಪದಗಳು ಅಂತರ್ಧ್ವನಿಗಳಾಗಿವೆ.

೧೬. ರೂಢಿಯಿಂದ ಬಂದಿರುವ ಸ್ಥಳನಾಮಗಳು, ಅಲ್ಲಿನ ಪ್ರಾಕೃತಿಕ ಲಕ್ಷಣಗಳಿಗನುಸಾರವಾಗಿ ರೂಪುಗೊಂಡವುಗಳು. ತುಳು ನಾಡಿನ ಸ್ಥಳನಾಮಗಳೆಲ್ಲ ತುಳು ಮೂಲದಿಂದ ಅಥವಾ ದ್ರಾವಿಡ ಭಾಷಾ ಮೂಲದ ಪದಗಳಿಂದಾದವುಗಳು. ಅಡ್ಕ (ಮೈದಾನ) ಅಜೆ / ಕಜೆ ಅಂಚೆ (ಕೃಷಿ ಭೂಮಿ) ಆಲ (ನೀರು) ಬೊಟ್ಟು (ಎತ್ತರ ಪ್ರದೇಶ) ಕೊಪ್ಪ / ಕೇರಿ (ಗುಂಪು ಮನೆಗಳು) ಪಾಡಿ / ಕಾನ (ವನಪ್ರದೇಶ) ಅಂಡೆ (ಬೆಟ್ಟದ ಬುಡ) ಬೈಲು (ಭತ್ತದ ಗದ್ದೆ) ಹೀಗೆ ಬಹಳಷ್ಟು ಪ್ರಾಚೀನ ತುಳು ಪದಗಳಿಂದೊಡಗೂಡಿದ ಸಂಯುಕ್ತ, ಸಮಾಸ ಪದಗಳು ತುಳುನಾಡಿನ ಸ್ಥಳನಾಮಗಳು. ಬದಿಯಡ್ಕ, ಅರ್ತಿಕಜೆ, ಪಾಣಾಜೆ, ಕೆಂಬೊಟ್ಟು, ದಿಂಡಲಕೊಪ್ಪ, ಬೈಲುಕೇರಿ, ಕುಂಟಿಕಾನ, ಮಂಗಲಪಾಡಿ, ನೂಜಿಬೈಲು, ಅಂಡೆಮನೆ ಜನಪದರು ನೀಡಿದ ಈ ಹೆಸರುಗಳು ಪ್ರಕೃತ ಆಕರ್ಷಣೆಯನ್ನು ಕಳೆದುಕೊಂಡಿವೆ. ಇದ್ದ ಹೆಸರುಗಳನ್ನು ಬದಲಾವಣೆಗೊಳಿಸಿ ಅನ್ವರ್ಥವಲ್ಲದ ಹೊಸ ಹೆಸರುಗಳನ್ನಿಡುವ ವರಸೆ ಪ್ರಾರಂಭಗೊಂಡಿವೆ. ಹೀಗಾಗಿ ಹಳೆಯ ಸ್ಥಳನಾಮಗಳು ಆಧುನಿಕ ತುಳುವಿನಿಂದ ಕೈಬಿಟ್ಟು ಹೋಗುತ್ತಿವೆ.

ಸುಮಾರು ೨೪ ಲಕ್ಷಕ್ಕಿಂತಲೂ ಹೆಚ್ಚು ಜನರು ಮಾತನಾದಬಲ ತುಳು ಅತ್ಯಂತ ಸೌಮ್ಯ ಮಧುರವಾದ ಭಾಷೆ. ತುಳು ಎಂಬ ಪದಕ್ಕೆ ಭಾಷೆ ಅನ್ವರ್ಥವಾಗಿದೆ. ರಂ. ಶ್ರೀ ಮುಗಳಿಯವರು ‘ಒಂದು (ತುಳು) ಭಾಷೆಗೆ ಲಿಪಿಯಿಲ್ಲದೆ ಹೋದರೂ ಆ ಭಾಷೆಯ ಸಾಂಸ್ಕೃತಿಕ ಮಹತ್ವದಿಂದಾಗಿ ಆ ಭಾಷೆಯು ವಿಶಿಷ್ಟವೆನಿಸುತ್ತದೆ’ ಎಂದಿದ್ದು. ತುಳುವಿಗೆ ಲಿಪಿ ಇದ್ದರೂ ಅದು ತನ್ನ ಲಿಪಿಯನ್ನು ಬಹಳಷ್ಟು ಹಿಂದೆಯೇ ಕಳೆದು ಕೊಂಡಿದೆ. ಹೀಗಾಗಿ ಅದರಲ್ಲಿ ಮೌಖಿಕ ಸಾಹಿತ್ಯ ಹೇರಳವಾಗಿ ಬೆಳೆಯಿತು. ಗ್ರಂಥಸ್ಥ ಸಾಹಿತ್ಯ ಕಡಿಮೆಯಾಯಿತು. ಜಾಗತಿಕ ಮೌಖಿಕ ಮಹಾಕಾವ್ಯವೆಂದು ಕರೆಯಲ್ಪಡುವ ಹೋಮರನ ಇಲಿಯಡ್‌ನ್ನು ಸರಿಗಟ್ಟುವ ಮೌಖಿಕ ಮಹಾಕಾವ್ಯ ತುಳುವಿನಲ್ಲಿ ಬೆಳೆಯಿತು. ‘ಸಿರಿ’ ಮಹಾಕಾವ್ಯ ೧೫,೬೮೩ ಸಾಲುಗಳನ್ನು ಹೊಂದಿದ್ದು ಅದು ಇಲಿಯಡ್‌ಗಿಂತ ಕೇವಲ ಐದು ಸಾಲುಗಳಷ್ಟು ಕಿರಿದಾಗಿದೆ. ಗ್ರಂಥಸ್ಥಗೊಂಡ ಈ ಕಾವ್ಯ ಸಾಮಾನ್ಯರ ಓದಿಗೂ ನಿಲುಕಿದರೆ ಅಧುನಿಕ ತುಳು ಭಾಷೆ ಇನ್ನಷ್ಟು ಸಂಪನ್ನಗೊಳ್ಳುವುದರಲ್ಲಿ ಸಂಶಯವಿಲ್ಲ. ಕ್ರಿ. ಶ. ೧೮೮೬ ರಲ್ಲಿ ರಚನೆಗೊಂಡ ತುಳು -ಇಂಗ್ಲಿಷ್‌ನಿಘಂಟಿನಲ್ಲಿ ೧೮,೦೦೦ ಶಬ್ಧಗಳಿದ್ದವು. ಇತ್ತೀಚೆಗೆ ಅಂದರೆ ೧೯೭೮-೯೭ರ ಅವಧಿಯಲ್ಲಿ ಪ್ರಕಟವಾದ ತುಳು -ಕನ್ನಡ – ಇಂಗ್ಲಿಷ್‌ನಿಘಂಟಿನಲ್ಲಿ ಸುಮಾರು ಒಂದು ಲಕ್ಷ ಶಬ್ಧಗಳು ಸೇರ್ಪಡೆಗೊಂಡಿವೆ. ಹೀಗಾಗಿ ತುಳುಭಾಷೆ ನಶಿಸಿಹೋಗುತ್ತಿದೆ ಎಂಬ ಮಾತು ಸರಿಯಲ್ಲ. ಹಳೆಯ ಕಾಲದಲ್ಲಿ ರೂಢಿಯಲ್ಲಿದ್ದ ಬಹಳಷ್ಟು ಪದಗಳು ಅಳಿದುಹೋಗಿವೆ. ಆದರೆ ನಸಿಸಿಹೋದ ಪದಗಳಿಗಿಂತ ನಾಲ್ಮಡಿಯಷ್ಟು ಪದಗಳು ಬೇರೆ ಬೇರೆ ಭಾಷೆಗಳಿಂದ ಬಂದು ತುಳುವಿನೊಂದಿಗೆ ಬೆರೆತು ಹೋಗಿವೆ. ಅದರಲ್ಲಿ ಭೂತ (ಪ್ರಾಚೀನ) ಶಬ್ಧಾವಳಿ ಮತ್ತು ವಿಶಿಷ್ಟ ಶಬ್ಧ ಸಂಪತ್ತನ್ನು ತುಳು ಭಾಷೆ ಹೊಂದಿದೆ. ತುಳುನಾಡಿನಲ್ಲಿ ವಾಸಿಸುವ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನರೆಲ್ಲರೂ ತುಳು ಮಾತನಾಡಬಲ್ಲರು. ಕೊಂಕಣಿ, ಮಾಲೆಯಾಳ, ಬ್ಯಾರಿ ಭಾಷೆ, ಮರಾಠಿ, ಕನ್ನಡ ಮಾತೃಭಾಷೆಯವರೂ ತುಳು ಮಾತನಾಡಬಲ್ಲರು. ಆಯಾಯ ಮಾತೃಭಾಷಾ ಶೈಲಿಗಳಿಗನುಸಾರವಾಗಿ ಅವರು ಮಾತನಾಡುವ ತುಳುವಿನ ಉಚ್ಚಾರ ಶೈಲಿ ಮತ್ತು ವೇಗದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಯಾವುದೇ ಭಾಷೆಯನ್ನು ಶಿಷ್ಟ -ಗ್ರಾಮ್ಯವೆಂದು ವಿಂಗಡಿಸಲು ಭಾಷಾಶಾಸ್ತ್ರಜ್ಞರು ಒಪ್ಪದೇ ಹೋದರೂ ತುಳು ಭಾಷೆಗೊಂದು ಪ್ರಮಾಣ – ಭಾಷಾಸ್ವರೂಪ (Standard Language) ಬೇಡವೇ ಎಂಬ ಪ್ರಶ್ನೆಗೆ ‘ಬೇಡ’ ಎನ್ನುವವರಿಲ್ಲ. ಪ್ರಾಚೀನ ಕವಿಗಳಾದ ಪಂಪ -ರನ್ನಾದಿಗಳು ಕೂಡಾ ಕನ್ನಡಕ್ಕೊಂದು ಪ್ರಮಾಣ – ಭಾಷೆ ಬೇಕೆಂದುಕೊಂಡಿದ್ದರು. ಅವರೆಲ್ಲರೂ ಪುಲಿಗೆರೆಯ ಪರಿಸರದ ಕನ್ನಡವೇ ತಿರುಳು ಕನ್ನಡವೆಂದು ಅಭಿಪ್ರಾಯಪಟ್ಟಿದ್ದರು. ಪ್ರಾಚೀನ ಗ್ರೀಸ್‌ನಲ್ಲಿ ಡೋರಿಕ್‌, ಲ್ಯಕೋನಿಯನ್‌, ಅಬೇನಿಯನ್‌, ಅಯೋನಿಯನ್‌ಮತ್ತು ಅಟ್ಟಿಕ್‌ಮುಂದೆ ಗ್ರೀಸಿನ ಪ್ರಮಾಣ ಭಾಷೆಯಾದುದು ಕಾಣುತ್ತೇವೆ. ಇಂಗ್ಲೆಂಡಿನಲ್ಲಿ ಲಂಡನ್‌ಪರಿಸರದ ಇಂಗ್ಲಿಷ್‌ಭಾಷೆ ಪ್ರಮಾಣ ಭಾಷೆ ಎನಿಸಿಕೊಂಡಿತು.

ತುಳುವಿನ ಪ್ರಮಾಣ ಭಾಷೆ ಯಾವುದು ಎಂಬ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ತುಳುವು ತಾಯ್ನುಡಿಯಾಗಿರುವ ಪ್ರತಿಯೊಬ್ಬರೂ ತಾನು ಆಡುವ ಭಾಷೆಯೇ ಪ್ರಮಾಣ ಭಾಷೆ ಎಂದುಕೊಳ್ಳುವುದು ತಪ್ಪಲ್ಲ. ಬಹಳ ಹಿಂದೆಯೇ ತುಳುವರೂ ಈ ಬಗ್ಗೆ ಚಿಂತನೆ ನಡೆಸಿದ್ದರು. ಪಣಿಯಾಡಿಯವರು ತುಳು ಭಾಷೆಯಲ್ಲಿಯೇ ಬರೆದ ತಮ್ಮ ತುಳು ವ್ಯಾಕರಣ (೧೯೩೨) ದಲ್ಲಿ ಗ್ರಾಂಥಿಕ ಭಾಷೆಯ ಬಗೆಗೆ ಕೆಲವು ಉಪಯುಕ್ತವಾದ ಮಾತುಗಳನ್ನು ಹೇಳುತ್ತಾರೆ “ಮಾತೆರ್ಲಾ ಪಾತೆರ್ಪಿ ತುಳುನೇ ಗ್ರಾಂಥಿಕ ಮಲ್ಪೊಡು, ಇಂದೆಟ್ಲಾ ಸಂಸ್ಕೃತ ಕನ್ನಡ ಸಂಬಂಧ ಇಪ್ಪಿ ಶಬ್ಧಳು ಕೆಲವು. ಅಂಚಿ ಸಂದರ್ಭಡ್‌ ಬ್ರಾಹ್ಮಣೆರೆ ಪಾತೆರಡ್‌ ಇಪ್ಪಿ ಶುದ್ಧ ತುಳು ಶಬ್ಧಳೆನಿ ಪ್ರಯೋಗಿಪುನಿ ಎಡ್ಡೆ. ವ್ಯಾಕರಣ ರೀತಿಡ್‌ ಇಪ್ಪಿ ಭೇದನೊ ಬಾಕಿ ಶಬ್ಧ ಭೇದನೊ ಪದ್ಯ ರಚನೆಡ್‌ ವಿಕಲ್ಪಾಡ್‌ಗೆ ತೊಣೊಲಿ. ವಾಕ್ಯರಚನೆಟ್‌ಸರ್ವಸಾಧಾರಣ ಶೈಲಿನೇ ಅನುಸರಿಪುನಿ ಎಡ್ಡೆ. ಸುರುಟು ಶುದ್ಧ ತುಳು ಶಬ್ಧಳೆ ಮಿತ್ತ್ ಮಾತೆರೆನ ಗಮನಲಾ ಬೋಡು” (ಪುಟ ೧೫) . (ಎಲ್ಲರೂ ಮಾತನಾಡುವ ತುಳುವನ್ನೇ ಗ್ರಾಂಥಿಕ ಮಾಡಬೇಕು. ಇದರಲ್ಲೂ ಸಂಸ್ಕೃತ ಕನ್ನಡ ಸಂಬಂಧ ಇರುವ ಶಬ್ಧಗಳು ಕೆಲವಿದೆ. ಅಂತಹ ಸಂದರ್ಭದಲ್ಲಿ ಬ್ರಾಹ್ಮಣರ ಮಾತಿನಲ್ಲಿ ಬರುವ ಶುದ್ಧ ತುಳು ಶಬ್ಧಗಳನ್ನು ಪ್ರಯೋಗಿಸುವುದು ಲೇಸು. ವ್ಯಾಕರಣ ರೀತಿಯಲ್ಲಿ ಇರುವ ಭೇದವನ್ನು ಪದ್ಯರಚನೆಯಲ್ಲಿ ವಿಕಲ್ಪವಾಗಿ ಸ್ವೀಕರಿಸಬಹುದು. ವಾಕ್ಯರಚನೆಯಲ್ಲಿ ಸರ್ವಸಾಧಾರಣ ಶೈಲಿಯನ್ನೇ ಅನುಸರಿಸುವುದು ಒಳ್ಳೆಯದು. ಪ್ರಾರಂಭದಲ್ಲಿ ಶುದ್ಧ ತುಳು ಶಬ್ಧಗಳ ಮೇಲೆ ಗಮನವೂ ಬೇಕು).

ತುಳು ಭಾಷೆ ಎಂದಾಕ್ಷಣ ಕೆಲವರು ಅದು ತದ್ಭವ ಅಥವಾ ಅಪಭ್ರಂಶ ಭೂಯಿಷ್ಠವಾಗಿರಬೇಕೆಂದು ಭಾವಿಸುವವರೂ ಇದ್ದಾರೆ. ಹೀಗಾಗಿ ಅನೇಕ ತುಳು ಬರಹಗಾರರು ತುಳುವಿನಲ್ಲಿ ಬಳಸುವ ಸಂಸ್ಕೃತ ಪದಗಳನ್ನು ಅಪಭ್ರಂಶ ಮಾಡಿಕೊಂಡು ಬರೆಯುವುದಿದೆ. ಆದರೆ ಇದು ಸರಿಯಲ್ಲ. ತದ್ಬವಗಳೂ ರೂಢಿಯಲ್ಲಿ ಬಂದರೆ ಚಿಂತೆಯಿಲ್ಲ. ಕೃಷ್ಣನನ್ನು ತುಳುವಿನವರು ಕಿಟ್ಣ ಎಂದೇ ಹೇಳಬೇಕೆಂಬ ಬಲವಂತವಿಲ್ಲ. ಸಂದರ್ಭೋಚಿತವಾಗಿ ಸಂಸ್ಕೃತ ಹಾಗೂ ಇನ್ನಿತರ ಭಾಷೆಯ ಪದಗಳನ್ನು ಇದ್ದಕ್ಕಿದ್ದಂತೆ ಬಳಸುವುದರಿಂದ ದೋಷವಿಲ್ಲ. ವೈಜ್ಞಾನಿಕ, ವೈಚಾರಿಕ, ಆಧ್ಯಾತ್ಮಿಕ ವಿಚಾರಗಳಿಗೆ ಇದು ಅನಿವಾರ್ಯವೂ ಆಗಿದೆ.

ಒಂದು ಆಡುನುಡಿ ಸಾರ್ವತ್ರಿಕತೆಯನ್ನು ಪಡೆಯಬೇಕಾದರೆ ಅದು ಬಹುಜನರ ಬಹು ವಿಧದ ವ್ಯವಹಾರಗಳ ಹಾಗೂ ಕಲೆ ಸಾಹಿತ್ಯಾದಿ ಸೂಕ್ಷ್ಮ ವ್ಯವಹಾರಗಳ ಮಾಧ್ಯಮವಾಗಿರಬೇಕು. ಬಹುಮಂದಿಗೆ ತಲುಪುವ ದೃಷ್ಟಿಯಿಂದ ಅದನ್ನು ದುಡಿಸಿಕೊಂಡಾಗ ಮಾತ್ರ ಅದು ಮೇಲ್ಮಟ್ಟದ ವೇದಿಕೆಗೆ ಏರಲು ಸಾಧ್ಯವಾಗುತ್ತದೆ. ಯಾರೊಬ್ಬರ ಬಲವಂತ, ಪ್ರೇರಣೆ ಅಥವಾ ವಿಶಿಷ್ಟ ಪ್ರಯತ್ನವಿಲ್ಲದೆ ಆಯಾಚಿತವಾಗಿ, ಅಗೋಚರವಾಗಿ ಪ್ರಾಮಾಣ್ಯವನ್ನು ಮೆಲ್ಲನೆ ಪಡೆದುಕೊಳ್ಳುತ್ತದೆ. ರಾಜಕೀಯ ದೃಷ್ಟಿಯಿಂದ ಯಾವ ಪ್ರದೇಶಕ್ಕೆ ಮಹತ್ವವಿದೆಯೋ ಅಥವಾ ಯಾವ ಪ್ರದೇಶ ವಿಶಿಷ್ಟ ಸಾಂಸ್ಕೃತಿಕ ಕೇಂದ್ರವಾಗಿದೆಯೋ ಆ ಕಡೆಯ ಭಾಷೆ ಹೆಚ್ಚು ಗೌರವಾರ್ಹ ಹಾಗೂ ಅನುಕರಣಾರ್ಹವಾಗುತ್ತದೆ (ಅಮೃತ ಸೋಮೇಶ್ವರ – ೧೯೮೪). ತುಳುನಾಡಿನ ಎರಡು ಜಿಲ್ಲೆಗಳ ಆಡಳಿತ ಹಾಗೂ ಸಾಂಸ್ಕೃತಿಕ ಕೇಂದ್ರಗಳೆಂದರೆ ಮಂಗಳೂರು ಮತ್ತು ಉಡುಪಿ. ಈ ಪರಿಸರದ ತುಳು ಭಾಷೆ ಈಗಾಗಲೆ ಸಹಜವಾಗಿ ವ್ಯಾವಹಾರಿಕ ಪ್ರಮಾಣ ಭಾಷೆ ಎನಿಸಿದೆ. ಒಂದು ಭಾಷೆ ಸರ್ವಾಂಗೀಣವಾಗಿ ಬೆಳೆಯುವುದು ಅದನ್ನು ಬಳಸುವ ಭೂರಿಜನತೆಯಿಂದ. ಜನರ ಉದ್ದೇಶ, ಸಂಕಲ್ಪ ಹಾಗೂ ಪ್ರಯತ್ನಗಳ ಬೆಂಬಲವಿದ್ದರೆ ಆ ಕ್ರಿಯೆ ಹೆಚ್ಚು ಉತ್ಕಟ ಹಾಗೂ ತೀವ್ರವಾಗಿ ನಡೆಯುತ್ತದೆ.

ತುಳು ಭಾಷೆಗೆ ಎಲ್ಲಾ ವಿಚಾರಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಗೊಳಿಸುವ ಶಕ್ತಿ ಇದೆ. ತುಳು ಭಾಷೆಯಲ್ಲಿ ಪ್ರಾದೇಶಿಕ ಪ್ರಭೇಧಗಳೂ ಇದ್ದರೂ ಜನರು ವ್ಯವಹಾರದ ಒಂದು ಸಾಮಾನ್ಯ ಮಟ್ಟದ ಭಾಷೆಯಲ್ಲಿ ತುಳು ಮಾತನಾಡುತ್ತಾರೆ. ಇದನ್ನೇ ಆದುನಿಕ ತುಳು ಎನ್ನಬಹುದು. ಪತ್ರಿಕೆ, ನಾಟಕ, ಸಿನಿಮಾ, ರೇಡಿಯೋ, ದೂರರ್ಶನ ಮತ್ತು ಹೆಚ್ಚಿನ ಗ್ರಂಥಗಳಲ್ಲಿ ಈ ಭಾಷೆ ಬಳಸಲ್ಪಡುತದೆ. ಹಿಬ್ರೂ ಭಾಷೆ ಅವಸಾನದ ಸ್ಥಿತಿಗೆ ಮುಟ್ಟಿದಾಗ ಆ ಭಾಷೆಯನ್ನಾಡುತ್ತಿದ್ದ ಅಲ್ಪ ಸಂಖ್ಯೆಯ ಜನರು ತಮ್ಮ ಸಕಲ ಶಕ್ತಿಯಿಂದ ಭಾಷೆಯನ್ನು ಮೇಲ್ಮಟ್ಟಕ್ಕೆ ತಂದರು. ಅದೇ ರೀತಿಯಲ್ಲಿ ತುಳು ಭಾಷೆಯ ಅಭಿವೃದ್ಧಿಯ ಬಗ್ಗೆ ಪರಂಪರಾಗತ ತುಳು ಸಾಂಸ್ಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವ ಬಗ್ಗೆ ಎಲ್ಲ ತುಳು ಅಭಿಮಾನಿಗಳೂ, ಪ್ರಯತ್ನಪಡಬೇಕು. ಕೇಂದ್ರ ಸರಕಾರ ತುಳು ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನಗಳನ್ನು ಅದಷ್ಟು ಶೀಘ್ರವಾಗಿ ನೀಡುವಂತಾಗಬೇಕು.

ಆಕರಸೂಚಿ

೧. ಡಾ. ಯು. ಪಿ. ಉಪಾಧ್ಯಾಯ, ೧೯೮೮ (ಸಂ.) ತುಳು ನಿಘಂಟು ಸಂಪುಟ ಒಂದು – ರಾ. ಗೋ. ಪೈ. ಸಂಶೋಧನ ಕೇಂದ್ರ. ಉಡಪಿ.

೨. ಡಾ. ಕೆ. ವಿ. ನಾರಾಯಣ ೨೦೦೦, ಭಾಷೆ -ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ : ೧, ಕನ್ನಡ ವಿಶ್ವವಿದ್ಯಾಲಯ ಹಂಪಿ

೩. ಡಾ. ಕೆ. ಶಿವರಾಮ ಕಾರಂತ, ೧೯೯೩, ಕರಾವಳಿ, ಕರಾವಳಿ ಉತ್ಸವ ಸಮಿತಿ, ಮಂಗಳೂರು.

೪. ಪ್ರೊ. ಮುರಳೀಧರ ಉಪಾಧ್ಯ. ೨೦೦೦, ತುಳು ಸಣ್ಣ ಕತೆ -ಸಾಹಿತ್ಯ -ಪೊಲಿ, ಜಿಲ್ಲಾಡಳಿತ ದಕ್ಷಿಣ ಕನ್ನಡ, ಮಂಗಳೂರು.

೫. ಡಾ. ಕಬ್ಬಿನಾಲೆ ವತಂತ ಭಾರಧ್ವಾಜ, ೨೦೦೧, ಪಳಂತುಳು ಕಾವ್ಯ, ಮಧುಮತಿ ಪ್ರಕಾಶನ, ಬೆಂಗಳೂರು.

೬. ಪ್ರೊ. ಅಂಮೃತ ಸೋಮೇಶ್ವರ, ೧೯೮೪, ತುಳು ಬದುಕು, ಪ್ರಕೃತಿ ಪ್ರಕಾಶನ ಕೋಟೆಕಾರು.

೭. ಎಸ್‌. ಯು. ಪಣಿಯಾಡಿ, ೧೯೩೨, ತುಳು ವ್ಯಾಕರಣ, ತುಳುವ ಸಾಹಿತ್ಯ ಮಾಲೆ ಉಡಪಿ.

೯. ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ, ೧೯೯೦, ಹೊಸಗನ್ನಡ ವ್ಯಾಕರಣ, ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ ಬೆಂಗಳೂರು.