ಪ್ರಾಚೀನ ಪ್ರಾಚೀನತೆಯನ್ನು ಅಭ್ಯಾಸ ಮಾಡುವಾಗ ಆ ಭಾಷೆಯ ಲಿಖಿತ ಪರಂಪರೆಯನ್ನು ಮಾತ್ರ ಗಮನಿಸದೆ ಆಡುಮಾತಿಗೂ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಈ ರೀತಿಯ ಕ್ರಮ ಭಾಷಾವಿಜ್ಞಾನದ ಅಧ್ಯಯನದಲ್ಲಿ ಇಂದು ಹೆಚ್ಚು ಪ್ರಚಲಿತವಾಗಿದೆ. ಅಂದರೆ, ಒಂದು ಭಾಷೆ ಲಿಖಿತ ರೂಪದಲ್ಲಿ ಹಾಗೂ ಆಡುಮಾತಿನಲ್ಲಿ ಹೇಗಿದೆ ಎಂದು ತೌಲನಿಕವಾಗಿ ಅಭ್ಯಾಸ ಮಾಡಿ ಕಾಲದಿಂದ ಕಾಲಕ್ಕೆ ಆ ಭಾಷೆ ಹೇಗೆ ಬದಲಾವಣೆ ಹೊಂದಿದೆ ಎಂಬುದನ್ನೂ ಅದು ಮೂಲವನ್ನು ಎಷ್ಟು ಉಳಿಸಿಕೊಂಡಿದೆ ಎಂಬುದನ್ನು ತಿಳಿಯುವ ಮೂಲಕ ಒಂದು ಭಾಷೆಯ ಪ್ರಾಚೀನತೆಯನ್ನು ತಿಳಿಯಲು ಪ್ರಯತ್ನಿಸಲಾಗುತ್ತದೆ. ಅಷ್ಟೇ ಅಲ್ಲ. ಇಂದು ಭಾಷೆಯ ಅಧ್ಯಯನವನ್ನು ಕೇವಲ ಲಿಖಿತ ಭಾಷೆಗಳಿಗೆ ಮಾತ್ರ ಸೀಮಿತಗೊಳಿಸದೆ, ಆಡುಭಾಷೆಗಳಿಗೂ ಅದನ್ನು ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುಳು ಭಾಷೆ, ಆಡು ಭಾಷೆಗಳಿಗೂ ಅದನ್ನು ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುಳು ಭಾಷೆ, ತುಳು ಸಾಹಿತ್ಯ, ತುಳು ವ್ಯಾಕರಣ, ತುಳು ಜಾನಪದದ ಅಧ್ಯಯನ ಇಂದು ಬಹಳಷ್ಟು ವ್ಯಾಪಕವಾಗಿ ನಡೆದಿದೆ. ತುಳು ಭಾಷೆಯ ಅಧ್ಯಯನ ನಡೆದಷ್ಟು ವಿಸ್ತಾರವಾಗಿ, ದ್ರಾವಿಡ ವರ್ಗದ ಇತರ ಮೌಖಿಕ ಭಾಷೆಗಳ ಅಧ್ಯಯನ ನಡೆದಿಲ್ಲವೆನ್ನಬಹುದು. ಎಲ್ಲಾ ದ್ರಾವಿಡ ಭಾಷೆಗಳ ವ್ಯಾಕರಣವನ್ನು ಅಭ್ಯಾಸ ಮಾಡಿ ಇಂಗ್ಲಿಷ್‌ನಲ್ಲಿ ‘A Comparative Grammar of the Dravidian or South Indian Family of Langages’ ಎಂಬ ಆಧಾರ ಗ್ರಂಥವನ್ನು ಬರೆದ ಭಾಷಾ ವಿಜ್ಞಾನಿ ರಾಬರ್ಟ್‌ ಕಾಲ್ಡ್‌ವೆಲ್‌’ ತುಳು ಭಾಷೆ ದ್ರಾವಿಡ ಭಾಷಾ ದ್ರಾವಿಡ ಭಾಷಾವರ್ಗದಲ್ಲಿಯೇ ಹೆಚ್ಚು ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿ ಒಂದು ಎಂದಿದ್ದಾನೆ. ಅದರಿಂದಾಗಿ ತುಳುವಿಗೆ ಲಿಖಿತ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು ಹಾಗೂ ಮಲೆಯಾಳಗಳೊಂದಿಗೆ ಸಮವಾಗಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.

ತುಳುನಾಡಿನಲ್ಲಿ ನ್ಯಾಯಾಲಯ, ಶಾಲಾ-ಕಾಲೇಜು, ಕಚೇರಿಗಳ ವ್ಯಾವಹಾರಿಕ ಭಾಷೆ ಕನ್ನಡವಾಗಿದ್ದರೂ, ಮಾರ್ಕೆಟ್‌ನ, ಜನಸಾಮ್ಯಾನ್ಯರ ಹಳ್ಳಿಯ ಜನರ ಭಾಷೆ ತುಳುವೇ ಆಗಿದೆ. ತುಳು ಶ್ರೀಮಂತ ಶಬ್ಧ ಸಂಪತ್ತುಳ್ಳ ಚೆನ್ನಾಗಿ ಅಭಿವೃದ್ಧಿ ಹೊಂದಿದ ಭಾಷೆ. ಅದು ಯಾವುದೇ ಭಾವನೆಯನ್ನೂ ಸರಳವಾಗಿ ಹಾಗೂ ಸ್ಪಷ್ಟವಾಗಿ ನಿರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ತುಳುವಿನಲ್ಲಿ ಪಾಡ್ದನಗಳು, ಸಂಧಿಗಳು ಕವಿತೆಗಳು, ಗಾದೆಗಳು, ಒಗಟುಗಳು ಮುಂತಾದ ಸಮೃದ್ಧ ಜನಪದ ಸಾಹಿತ್ಯವಿದೆ. ತುಳು ಮಾತು ನಾಡಿನ ಬೇರೆ ಬೇರೆ ಜಾತಿ, ಜನಾಂಗ ಹಾಗೂ ವರ್ಗಗಳ ಜನರ ಮಾತೃ ಭಾಷೆಯಾಗಿದೆ. ಮುಖ್ಯವಾಗಿ, ಶಿವಳ್ಳಿ ಬ್ರಾಹ್ಮಣರು, ಸ್ಥಾನಿಕರು, ಬಂಟರು, ಜೈನರು ಗೌಡರು, ಮೂಲ್ಯರು ಬೈದ್ಯರು, ಹರಿಜನರು, ಪ್ರೊಟೆಸ್ಟೆಂಟ್‌ ಕ್ರಿಶ್ಚಿಯನರು ತುಳುವನ್ನು ಮಾತೃ ಭಾಷೆಯನ್ನಾಗಿ ಆಡುತ್ತಾರೆ. ಆದುದರಿಂದ ತುಳುವಿನಲ್ಲಿ ಹಲವು ಉಪಭಾಷಾ ಪ್ರಭೇದಗಳು ಉಂಟಾಗಿವೆ.

ಸಾಮಾಜಿಕ ವರ್ಗಗಳನ್ನು ಗಮನಿಸಿ ತುಳು ಭಾಷೆಯನ್ನು ಮುಖ್ಯವಾಗಿ ಬ್ರಾಹ್ಮಣರ ತುಳು ಹಾಗೂ ಬ್ರಾಹ್ಮಣೇತರರ ತುಳು ಎಂದು ವಿಭಾಗಿಸುತ್ತಾರೆ. ಹಾಗೆಯೇ ಪಾದ್ರಿ ತುಳು ಪ್ರಕಾರವೂ ಇದೆ. ಪ್ರಾದೇಶಿಕವಾಗಿ ತುಳುವನ್ನು ಉಡುಪಿ ತುಳು, ಮಂಗಳೂರು ತುಳು, ಕಾರ್ಕಳ ತುಳು, ಪೂತ್ತೂರು ತುಳು ಎಂದು ವರ್ಗೀಕರಿಸಬಹುದಾದರೂ ತುಳುವಿನಲ್ಲಿ ಇನ್ನೂ ಅನೇಕ ಪ್ರಾದೇಶಿಕ ವ್ಯತ್ಯಾಸಗಳು ಸ್ಪಷ್ಟವಾಗಿ ಕಂಡುಬರುತ್ತವೆ.

ಈ ರೀತಿಯಾಗಿ ಸಮೃದ್ಧಿ ಹಾಗೂ ವೈವಿಧ್ಯದಿಂದ ಕೂಡಿದ ತುಳು ಭಾಷೆ ಆಡುನುಡಿಯಾಗಿದ್ದ ಕಾರಣ ಅದಕ್ಕೆ ವ್ಯಾಕರಣ ಗ್ರಂಥದ ಅವಶ್ಯಕತೆಯಿರಲಿಲ್ಲ. ಆದರೆ ತುಳು ಭಾಷೆಯ ಪುನರುಜ್ಜೀವನದ ಕಾಲ ಘಟ್ಟವಾದ ೧೮೫೦ -೧೯೫೦ ಅವಧಿಯಲ್ಲಿ ತುಳುವಿನಲ್ಲಿ ಕೃತಿ ರಚನೆಗೆ ತೊಡಗಿದ್ದು ಹಾಗೂ ಅದನ್ನು ಸಮೂಹ ಸಂಪರ್ಕ ಮಾಧ್ಯಮಗಳಾದ ಪತ್ರಿಕೆ, ಪುಸ್ತಕ, ರೇಡಿಯೋಗಳಲ್ಲಿ, ಶಾಲಾ ತರಗತಿ, ಅಫೀಸಿನ ಕಾರ್ಯಕಲಾಪ, ಸಾರ್ವಜನಿಕ ಭಾಷಣ ಮುಂತಾದ ಕಡೆಗಳಲ್ಲಿ ಬಳಸಿದ್ದರಿಂದ ಭಾಷೆಗ ಶಿಷ್ಟ ರೂಪವನ್ನು ಕೊಡಲಾಯಿತು. ಪ್ರಾದೇಶಿಕ ಹಾಗೂ ಸಾಮಾಜಿಕವಾಗಿ ಭಾಷೆಯಲ್ಲಿರುವ ಪ್ರಭೇದಗಳಿಗೆ ಎಲ್ಲರೂ ಒಪ್ಪಿತವಾಗುವಂತಹ ಸಾಮಾನ್ಯ ರೂಪವೊಂದನ್ನು ಕೊಡುವ ದೃಷ್ಟಿಯಿಂದ ವ್ಯಾಕರಣಗ್ರಂಥಗಳು ಅಗತ್ಯವಾಗುತ್ತವೆ. ಸ್ವಾತಂತ್ರ್ಯ ಪೂರ್ವದ ಶತಮಾನದಲ್ಲಿ ಕ್ರೈಸ್ತ ಮಿಶನರಿಗಳು ಹಾಗೂ ಸ್ವಾತಂತ್ರ್ಯ ಸಂಗ್ರಾದ ಕಾಲದಲ್ಲಿ ಜಿಲ್ಲೆಯ ತುಳುವ ಧುರೀಣರು ಹಾಗೂ ವಿದ್ವಾಂಸರು ತುಳು ಭಾಷೆಯನ್ನು ಸಾಮೂಹಿಕ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು, ಪತ್ರಿಕೆಗಳ ಪ್ರಕಟಣೆ, ಸಾಹಿತ್ಯ ಗ್ರಂಥಗಳ ರಚನೆ ಮುಂತಾದ ಅನೇಕ ಸಾಹಿತ್ಯಿಕ ಹಾಗೂ ಭಾಷಿಕ ಕೆಲಸಗಳನ್ನು ಮಾಡಿದರು. ಇದರಿಂದಾಗಿ ತುಳುವಿಗೆ ವ್ಯಾಕರಣ ಗ್ರಂಥ ರಚನೆ ಅನಿವಾರ್ಯವಾಯಿತು. ಸ್ವಾತಂತ್ರ್ಯ ಪೂರ್ವದ ಶತಮಾನದಲ್ಲಿ ರಚನೆಯಾದ ರೆವೆ. ಜೆ. ಬ್ರಿಗೆಲ್ಲರ ‘The Grammmar of Tulu Language’ ಕೃತಿಯ ತುಳು ಭಾಷೆಯ ಮೊತ್ತ ಮೊದಲ ವ್ಯಾಕರಣ ಗ್ರಂಥ. ಈ ಕೃತಿ ರಚನೆಯ ಮುಖ್ಯ ಉದ್ದೇಶ ವಿದೇಶೀಯರಿಗೆ ತುಳುವನ್ನು ಕಲಿಸಿಕೊಡುವುದಕ್ಕೆ ಸಹಾಯಕವಾಗಿ ಉಪಯೋಗಿಸಿವುದು. ಆದರೆ ಈ ರೀತಿಯ ಕೆಲಸದಿಂದ ತುಳು ಭಾಷೆಗೆ ಶಿಷ್ಟರೂಪವನ್ನು ಕೊಡಲು ಸಾಧ್ಯವಾಯಿತೆಂಬುದು ಗಮನಾರ್ಹವಾಗಿದೆ.

ತುಳು ಭಾಷಾ ವ್ಯಾಕರಣ
(The Grammar of Tulu Language)

ರೆವೆ. ಜೆ. ಬ್ರಿಗೆಲ್ಲರ ‘The Grammmar of Tulu Language’ ಕೃತಿಯ ಮೂರು ಭಾಗಗಳಿವೆ ಧ್ವನಿ, ಶಬ್ಧವ್ಯುತ್ಪತ್ತಿ ಹಾಗೂ ವಾಕ್ಯ ರಚನೆ (Phonology, Etymology and Syntax) ಧ್ವನಿ ವಿಭಾಗದಲ್ಲಿ ವರ್ಣಮಾಲೆ, ಉಚ್ಚಾರಣೆ, ಸಂಧಿ (Alphabet, Pronunciation, Euphony) ಎಂದು ಮೂರು ಅಧ್ಯಾಯಗಳಿವೆ ಎರಡನೆಯ ಭಾಗದಲ್ಲಿ ಶಬ್ಧಗಳ ವರ್ಗೀಕರಣ ಹಾಗೂ ವಾಗರ್ಥ ಭೇದ (Formation of words and Parts of Speech) ಎಂದು ಎರಡು ಅಧ್ಯಾಯಗಳಿವೆ. ವಾಗರ್ಥ ಬೇದದಲ್ಲಿ ನಾಮಪದ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ ಹಾಗೂ ಅವ್ಯಯಗಳ ಬಗ್ಗೆ ವಿವವರಣೆಯಿದೆ. ಮೂರನೆಯ ಭಾಗದಲ್ಲಿ ವಾಕ್ಯ ರಚನೆ, ಶಬ್ಧಗಳ ಸ್ಥಾನ ನಿರ್ದೇಶಿತ ಅರ್ಥ ಹಾಗೂ ಪ್ರಯೋಗ ವಿಧಾನ ವಿಶೇಷಣಾರ್ಥಕ ಘಟಕಗಳು. ವಾಕ್ಯ ಘಟಕಗಳ ರಚನೆ ಹಾಗೂ ಅವುಗಳ ರೂಪ, ವಾಕ್ಯ ಜೋಡಣೆ ಎಂದು ಐದು ಅಧ್ಯಾಯಗಳಿವೆ. ಅನುಬಂಧದಲ್ಲಿ ತುಳು ಪದ್ಯಗಳು, ಐವತ್ತು ಗಾದೆಗಳಿವೆ. ಇಲ್ಲಿ ಬ್ರಾಹ್ಮಣರ ಉಪಭಾಷೆಯ ಕೆಲವು ವಿಶಿಷ್ಟ ಶಬ್ಧಗಳ ಬಗ್ಗೆ ಮಾಹಿತಿಯಿದೆ.

ತುಳು ವರ್ಣಮಾಲೆಯ ಕುರಿತು ಬ್ರಿಗೆಲ್ಲರು ಬರೆಯುತ್ತಾ ಆ, ಇ, ಉ, ಋ, ಎ, ಒ ಆರು ಹ್ರಸ್ವ ಹಾಗೂ ಅವುಗಳ ದೀರ್ಘಸ್ವರಗಳನ್ನು ಗುರುತಿಸುತ್ತಾರೆ. ಹಾಗೆಯೇ ಐ, ಔ ಎಂಬ ಸಂಯುಕ್ತ ಸ್ವರಗಳನ್ನು ‘ಉ’ ಎನ್ನುವ ತುಳುವಿನ ನಿಶಿಷ್ಟ ‘ಉ’ ಕಾರನ್ನು ಅಂ. ಆಃ ಎಂಬ ಅನಿಸ್ವಾರಗಳನ್ನೂ ಗುರುತಿಸಿ ತುಳುವಿನಲ್ಲಿ ೧೫ ಸ್ವರಗಳಿವೆ ಎನ್ನುತ್ತಾರೆ. ವ್ಯಂಜನಗಳಲ್ಲಿ ೨೫ ವರ್ಗಿಯ ಹಾಗೂ ೯ ಅವರ್ಗೀಯ (unclassified) ವ್ಯಂಜನಗಳನ್ನು ಗುರುತಿಸಿದ್ದಾರೆ. ಈ ರೀತಿ ತುಳುವಿನ ವರ್ಣಮಾಲೆಯನ್ನು ಗುರುತಿಸಿಕೊಳ್ಳುವಾಗ, ಬ್ರಿಗೆಲ್ಲರು ಕನ್ನಡ ವರ್ಣಮಾಲೆಯನ್ನು ಆಧಾರವಾಗಿಟ್ಟುಕೊಂಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಈ ವರ್ಣಮಾಲೆಯ ಹಿನ್ನೆಲೆಯಲ್ಲಿ ತುಳು ವರ್ಣಮಾಲೆಯ ಉಚ್ಚಾರಣಾ ಕ್ರಮದ ಬಗ್ಗೆಯೂ ಅವರು ವಿವರಣೆ ನೀಡಿದ್ದಾರೆ. ಸಂಧಿಯ ಕುರಿತು ವಿವೇಚಿಸುವಾಗ ಲೋಪ, ಆಗಮ ಹಾಗೂ ಅದೇಶ ಸಂಧಿಗಳನು ಹೇಳಿ ಒಂದೆರಡು ಉದಾಹರಣೆಗಳನ್ನು ಕೊಟ್ಟಿದ್ದಾರೆ.

ತುಳು ಶಬ್ಧಗಳ ಬಗ್ಗೆ ವಿಚೇಚಿಸುತ್ತಾ ಬ್ರಿಗೆಲ್ಲರು ಸಂಸ್ಕೃತ ತುಳು ಭಾಷೆಯು ಶುದ್ಧ ತುಳು (Pure Tulu) ಶುದ್ಧ ಸಂಸ್ಕೃತ (Pure Sanskrit) ಸಂಸ್ಕೃತದ ತದ್ಭವಗಳು (Corrupted Sanskrit) ಕನ್ನಡ (Canarese) ಹಿಂದೂಸ್ಥಾನಿ (Hindustani) ಹಾಗೂ ವಿದೇಶೀ (Foreign) ಶಬ್ಧಗಳಿಂದ ಕೂಡಿದೆ ಎಂದು ಹೇಳಿ ಆರು ವಿಭಾಗಗಳಾಗಿ ವಿಭಾಗಿಸಿ ಕೆಲವು ಪದಗಳನ್ನು ಉದಾಹರಣೆಯಾಗಿ ನೀಡಿದ್ದಾರೆ. ತುಳು ಭಾಷೆಯನ್ನು ರಾಚನಿಕ ಹಿನೆಲೆಯಲ್ಲಿ ವಿವರಿಸುವಾಗ ಮೂಲ ಶಬ್ಧ, ಸಾದಿತ ಶಬ್ಧ, ಸಮಾಸ ಶಬ್ಧ ಎಂದು ವಿಂಗಡಿಸಿಕೊಂಡು ಮೂಲಶಬ್ಧದಲ್ಲಿ ಧಾತು, ನಾಮ, ಸರ್ವನಾಮ, ಸಂಖ್ಯಾವಾಚಕ, ಅವ್ಯಯ ಎಂಬ ಐದು ವಿಭಾಗಗಳನ್ನು ಮಾಡಿದ್ದಾರೆ.

ರಾಚನಿಕ ದೃಷ್ಟಿಯಿಂದ ಗಮನಿಸಿದರೆ ತುಳುವಿನಲ್ಲಿ ವಿಶೇಷಣ ಹಾಗೂ ಕ್ರಿಯಾ ವಿಶೇಷಣ ಎಂಬ ಪ್ರತ್ಯೇಕ ವರ್ಗವಿಲ್ಲ ಎಂದು ಬ್ರಿಗೆಲ್ಲರು ಹೇಳಿದ್ದಾರೆ. ಯಾಕೆಂದರೆ ನಾಮಪದಗಳ ಹಾಗೆ ವಿಶೇಷಣ ಹಾಗೂ ಕ್ರಿಯಾ ವಿಶೇಷಣಗಳಿಗೆ ವಿಭಕ್ತಿ ಪ್ರತ್ಯಯಗಳು ಸೇರುತ್ತವೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ವಿಶೇಷಣಗಳು ನಾಮಪದ ರೀತಿಯಲ್ಲಿ ಪ್ರಯೋಗಗೊಳ್ಳಿತ್ತವೆ. ಉದಾ: ಸೋಂಕು (ಚಂದ), ಸೋಕುದ (ಚಂದದ), ಸೋಕುಗು (ಚಂದಕ್ಕೆ), ದುಂಬು (ಮೊದಲು), ದುಂಬುದ (ಮುಂಚಿನ), ದುಂಬುಡ್ದ್‌(ಮುಂಚಿನಿಂದ), ಪಿರವು( ಹಿಂದೆ), ಪಿರವುದ (ಹಿಂದಿನ), ಪಿರವುಡ್ದ್‌(ಹಿಂದಿನಿಂದ) ಇತ್ಯಾದಿ. ಹಾಗಾಗಿ ತುಳುವಿನಲ್ಲಿ ರಾಚನಿಕವಾಗಿ ವಿಶೇಷಣ ಹಾಗೂ ಕ್ರಿಯಾ ವಿಶೇಷಣವಿಲ್ಲವೆಂಬುದನ್ನು ಬ್ರಿಗೆಲ್ಲರು ತೋರಿಸಿಕೊಟ್ಟಿದ್ದಾರೆ.

ವಿಭಕ್ತಿಯ ಕುರಿತು ವಿವೇಚಿಸುವಾಗ ಬ್ರಿಗೆಲ್ಲರು ತುಳುವಿಗೆ ವಿಶಿಷ್ಟವಾದ ‘ಡ’ ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ ಅದಕ್ಕೆ Communicative ವಿಭಕ್ತಿ ಎಂದು ಹೆಸರಿಸಿ ತುಳುವಿನಲ್ಲಿ ಒಟ್ಟು ಎಂಟು ವಿಭಕ್ತಿಗಳಿವೆ ಎಂದಿದ್ದಾರೆ. ತೃತೀಯ ಹಾಗೂ ಪಂಚಮಿಗಳಿಗೆ ‘ಡ್ದ್‌’ ಎಂಬ ಒಂದೇ ವಿಭಕ್ತಿ ಪ್ರತ್ಯಯ ಎಂದು ಪರಿಗಣಿಸಿದ್ದಾರೆ. ತುಳು ಧಾತುಗಳನ್ನು ಮುಖ್ಯವಾಗಿ ಎರಡು ಗುಂಪುಗಳಾಗಿ ವರ್ಗೀಕರಿಸಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ. ವರ್ತಮಾನ ಕಾಲರೂಪದಲ್ಲಿ ‘ಉವ್‌’ ಸೇರುವ ಧಾತುಗಳು ಹಾಗೂ ‘ಪ’ ಸೇರುವ ಧಾತುಗಳು. ತುಳು ಧಾತುಗಳು ರಚನೆಯಲ್ಲಿರುವ ಈ ಮುಖ್ಯ ಪ್ರವೃತ್ತಿಯನ್ನು ಬ್ರಿಗೆಲ್ಲರು ಸರಿಯಾಗಿಯೇ ಗುರುತಿಸಿದ್ದಾರೆ.

ಐರೋಪ್ಯ ಸಂಪ್ರದಾಯದ ವ್ಯಾಕರಣಕಾರರಿಗೆ ‘ವಾಕ್ಯ ರಚನೆ’ ಎಂಬುದು ವ್ಯಾಕರಣದ ಅವಿಭಾಜ್ಯ ಅಂಗ. ಹಾಗಾಗಿ ತುಳು ವ್ಯಾಕರಣದ ಬಗ್ಗೆ ವಿವೇಚಿಸುವಾಗ ಬ್ರಿಗೆಲ್ಲರು ವಾಕ್ಯ ಪ್ರಕರಣವನ್ನು ಸವಿಸ್ತಾರವಾಗಿ ನೀಡಿದ್ದಾರೆ. ಬ್ರಿಗೆಲ್ಲರು ತುಳು ವ್ಯಾಕರಣದ ಬಗ್ಗೆ ವಿವೇಚಿಸಿದ್ದು ತುಳು ಕಲಿಯುವ ವಿದೇಶಿಯರಿಗಾಗಿ ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಹಾಗಾಗಿ ಐರೋಪ್ಯ ಭಾಷೆಗಳ ಪ್ರಜ್ಞೆಯಿಂದ ತುಳುವಿನ ವಾಕ್ಯ ಹಾಗೂ ವಾಕ್ಯಾಂಶಗಳ ನಿರೂಪಣೆ ಬಹಳಷ್ಟು ಸೊಗಸಾಗಿ ಮೂಡಿ ಬಂದಿದೆ. ಸುಮಾರು ಇಪ್ಪತ್ತು ಪುಟಗಳಷ್ಟು ವಿಸ್ತಾರವಾದ ತುಳುವಿನ ವಾಕ್ಯ ವಿಶ್ಲೇಷಣೆಯಲ್ಲಿ ವಾಕ್ಯಗಳು ಹಾಗೂ ವಾಕ್ಯಾಂಶ ಪ್ರಕಾರಗಳು, ಅವುಗಳ ರಚನಾ ವಿಧಾನ, ಒಂದಕ್ಕೊಂದು ಸಂಬಂಧ ಕಲ್ಪಿಸುವ ಸಮುಚ್ಛಯ ಬೋದಕ ಕೊಂಡಿಗಳು, ವಿವಿಧ ಘಟಕಗಳ ಅನುಕ್ರಮ, ವಿಶೇಷ -ವಿಶೇಷಣಗಳ ಸಂಬಂಧ ಹಾಗೂ ಅನುಕ್ರಮ, ಕಾರಕ ಸಂಬಂಧದ ನಿರೂಪಣೆ, ತುಳು ಭಾಷೆ ಕಲಿಯಲಿಚ್ಛಿಸುವವರಿಗೆ ಬೇಕಾದ ಮಾಹಿತಿ ಮುಂತಾದವುಗಳ ನಿರೂಪಣೆಯಿದೆ. ಹಾಗೆಯೇ ಬ್ರಿಗೆಲ್ಲರು ಮಾಡಿದ ಅಧ್ಯಯನ ವರ್ಗೀಕರಣವೂ ಅವರ ವಿವೇಚನಾಶಕ್ತಿಗೆ ಸಾಕ್ಷಿಯಾಗಿದೆ.

ಬ್ರಿಗೆಲ್ಲರು ತುಳು ವ್ಯಾಕರಣ ಗ್ರಂಥ ಹಲವು ದೃಷ್ಟಿಗಳಿಂದ ಉತ್ತಮ ವ್ಯಾಕರಣ ಗ್ರಂಥವಾಗಿದ್ದರೂ ಅದು ಕೆಲವೊಂದು ಲೋಪದೋಷಗಳನ್ನೂ ಒಳಗೊಂಡಿದೆ. ವರ್ಣಮಾಲೆಯ ಬಗ್ಗೆ ವಿವೇಚಿಸುವಾಗ ಋ, ೠ,ಊ, ಐ, ಔ, ಅಂ,ಆಃ -ಸ್ವರಗಳು, ಮಹಾ ಪ್ರಾಣಗಳು, ಅವರ್ಗೀಯ ವ್ಯಂಜನದ ಶ, ಷಗಳೂ ತುಳುವಿಗೇ ಬೇಕೇ ಎಂಬ ಕಡೆಗೆ ಅವರು ಗಮನಹರಿಸಿಲ್ಲ. ತುಳುವಿನ ವಿಶಿಷ್ಟ ಧ್ವನಿಮಾ ‘ಱೆ’ ‘ರೆ’ ಕಾರವನ್ನು ಗುರುತಿಸಿದ್ದರೂ ವಿವೃತ ‘ಎ’ ಕಾರಕ್ಕೆ ಸ್ಥಾನವನ್ನು ಕೊಟ್ಟಿಲ್ಲ. ತುಳು ಭಾಷೆಯಲ್ಲಿ ಭವಿಷ್ಯತ್ಕಾಲ ರೂಪವಿಲ್ಲ. ಭವಿಷ್ಯಾರ್ಥದಲ್ಲಿ ವರ್ತಮಾನಕಾಲ ರೂಪವನ್ನು ಬಳಸಲಾಗುತ್ತದೆ. ಹಾಗಾಗಿ ಭವಿಷ್ಯತ್ಕಾಲ ರೂಪ ಎನ್ನುವುದು ಪ್ರತ್ಯೇಕ ರೂಪವಾಗಿರದೆ ಅದು ಸಂಭಾವನಾರ್ಥ ಭವಿಷ್ಯತ್ಕಾಲ ಅಥವಾ ಸಾಮರ್ಥ್ಯ ಸೂಚಕ ಭವಿಷ್ಯತ್ಕಾಲ ರೂಪವಾಗಿದೆ. ಉದಾ: ಎನ್‌ಬರುವೆ ಎಂದರೆ ನಾನು ಬರಬಹುದು ಎಂದರ್ಥ. ‘ಎನ್‌ಕೊರವೆ’ ಎಂದರೆ ನಾನು ಕೊಡಬಹುದು ಯಾ ಕೊಡಲು ಸಮರ್ಥನಾಗಬಹುದು ಎಂದರ್ಥ. ಆದರೆ ಬ್ರಿಗೆಲ್ಲರು ಇದನ್ನು ಭವಿಷ್ಯತ್ಕಾಲ ಎಂದು ನಿರೂಪಿಸಿದ್ದಾರೆ. ಇಲ್ಲಿ ನಾವು ಬ್ರಿಗೆಲ್ಲರ ಮೇಲಾದ ಐರೋಪ್ಯ ವ್ಯಾಕರಣಗಳ ಅಧ್ಯಯನದ ಪ್ರಭಾವವನ್ನು ಕಾಣಬಹುದು.

ಬ್ರಿಗೆಲ್ಲರು ಶಬ್ದ ರೂಪಾವಳಿ ಹಾಗೂ ಧಾತು ರೂಪಾವಳಿ (Declension and conjugation) ಗಳಿಗೆ ಮಹತ್ವ ನೀಡಿ ಬೇರೆ ಬೇರೆ ಜಾತಿಯ ಪ್ರಕೃತಿಗಳ ರೂಪಾವಳಿಗಳನ್ನು ಸವಿಸ್ತಾರವಾಗಿ ವಿವೇಚಿಸಿದ್ದಾರೆ. ಹಾಗೆಯೇ ವಿಸ್ತೃತ ಧಾತು ರೂಪಾವಳಿಗಳ ಜೊತೆಗೆ ಮಳ್ತ್‌ದಿತ್ತೆ, ಮಳ್ತ್‌ದುಪ್ಪೆ, ಮುಳ್ಪುನೆ ಮುಂತಾದ ಸಂಕೀರ್ಣ ಕ್ರಿಯಾರೂಪಗಳನ್ನು ವಿವೇಚಿಸಿದ್ದಾರೆ. ಇದು ತುಳು ಭಾಷೆಯನ್ನು ಕಲಿಯುವವರಿಗೆ ಹೆಚ್ಚು ಉಪಯೋಗವಾಗಬಹುದು ಹೊರತು, ಭಾಷಾ ವಿಶ್ಲೇಷಣೆಯ ದೃಷ್ಟಿಯಿಂದ ಇದಕ್ಕೆ ಹೆಚ್ಚಿನ ಮಹತ್ವವಿಲ್ಲ. ಬ್ರಿಗೆಲ್ಲರು ಸೂಚಿಸಿದಂತೆ ತುಳು ವ್ಯಾಕರಣದಲ್ಲಿ ವಾಕ್ಯರಚನೆಗೆ ಹೆಚ್ಚು ಮಹತ್ವ ನೀಡುವುದು ಸಮಂಜಸವಲ್ಲ. ಜನಸಾಮಾನ್ಯರ ದೃಷ್ಟಿಯಿಂದ ಈ ಆಡುಮಾತಿನ ವ್ಯಾಕರಣ ಗ್ರಂಥಕ್ಕೆ ಹೆಚ್ಚಿನ ಮಹತ್ವ ಇಲ್ಲದಿದ್ದರೂ, ವಿದ್ವಾಂಸರಿಗೆ, ಸಾಹಿತಿಗಳಿಗೆ ಹಾಗೂ ಭಾಷಾಭ್ಯಾಸಿಗಳಿಗೆ ಇದೊಂದು ಮಹತ್ವದ ಗ್ರಂಥವಾಗಿದೆ.

ತುಳು ವ್ಯಾಕರಣ

ಎಸ್‌. ಯು ಪಣಿಯಾಡಿಯವರ ‘ತುಳು ವ್ಯಾಕರಣ’ ಎನ್ನುವ ಗ್ರಂಥ ೧೯೩೨ರಲ್ಲಿ ಪ್ರಕಟವಾಯಿತು. ಇದು ತುಳುವಿನ ಎರಡನೆಯ ವ್ಯಾಕರಣ ಗ್ರಂಥ. ಆದರೆ ತುಳು ಭಾಷೆಯಲ್ಲಿ ರಚಿತವಾದ ಮೊದಲ ತುಳು ವ್ಯಾಕರಣ ಗ್ರಂಥ. ಬ್ರಿಗೆಲ್ಲರು ತುಳು ವ್ಯಾಕರಣ ಗ್ರಂಥದ ರಚನೆಯನ್ನು ವಿದೇಶೀಯರ ದೃಷ್ಟಿಯಿಂದ ಮಾಡಿದ್ದರೆ, ಪಣಿಯಾಡಿಯವರು ತುಳು ವ್ಯಾಕರಣವನ್ನು ತುಳುವರಿಗಾಗಿ, ತುಳು ಬಲ್ಲವರು ತುಳು ಭಾಷೆಯನ್ನು ಸಮೂಹ ಸಂಪರ್ಕದ ಸಾಧನವಾಗಿ ಸೃಜನಶೀಲ ಸಾಹಿತ್ಯ ಕೃತಿಗಳಿಗಾಗಿ ಉಪಯೋಗಿಸುವ ಹಿನ್ನೆಲೆಯಲ್ಲಿ ರಚಿಸಿದ್ದಾರೆ. ಇವರು ತಮ್ಮ ವ್ಯಾಕರಣವನ್ನು ೧೨ ಪ್ರಕರಣಗಳಾಗಿ ವಿಭಾಗ ಮಾಡಿ, ಅವುಗಳನ್ನು ವರ್ಣ, ಸಂಧಿ, ಶಬ್ದಕಾರಕ ಸ್ತ್ರೀಪ್ರತ್ಯಯ, ಸಮಾಸ, ನಾಮಜ, ಕ್ರಿಯಾಪದ, ಧಾತು ಪಾಠ, ಧಾತುಜ ಅವ್ಯಯ ಎಂಬುದಾಗಿ ಹೆಸರಿಸಿದ್ದಾರೆ. ಇಲ್ಲಿ ತದ್ಧಿತ ಪ್ರಕರಣಕ್ಕೆ ನಾಮಜ ಎಂದೂ ಕೃದಂತ ಪ್ರಕರಣಕ್ಕೆ ‘ಧಾತುಜ’ ಎಂದೂ ನಾಮರಕಣ ಮಾಡಿದ್ದಾರೆ. ಧಾತು ಪ್ರಕರಣದಲ್ಲಿ ೧೨೦೦ ಧಾತುಗಳ ಧಾತು ಪಾಠವನ್ನು ನೀಡಿದ್ದಾರೆ. ಬ್ರಿಗೆಲ್ಲರೂ ತುಳು ಧಾತುಗಳ ರಚನೆಯಲ್ಲಿ ಎರಡು ಮುಖ್ಯ ಪ್ರವೃತ್ತಿಗಳನ್ನು ಗುರುತಿಸಿದ್ದಾರೆ. ಆದರೆ ಪಣಿಯಾಡಿಯವರು ತುಳುವಿನಲ್ಲಿ ಮೂರು ಧಾತುಗಳಿವೆ ಎಂದಿದಾರೆ. ‘ಉವ್‌’ ಸೇರುವ ಧಾತುವಿನಲ್ಲಿ ಎರಡು ಪ್ರಭೇದಗಳಿವೆ. ಧಾತುವಿನ ಮೂಲರೂಪದಲ್ಲಿ ‘ಪ’ಕಾರವಿರು ಧಾತುಗಳು (ಉದಾ: ‘ಮಲ್ಪುವೆ’), ಹಾಗೆಯೇ ‘ಪ’ಕಾರವಲ್ಲದ ಧಾತುಗಳು (ಉದಾ: ‘ಕೊರವೆ’) ಎಂದು ಹೇಳಿ ಧಾತುಗಳನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ. ಇಲ್ಲಿ ಧಾತು ಪ್ರಕರಣವನ್ನು ಮೂರುಗಣಗಳಾಗಿ ವಿಭಾಗಿಸುವುದರ ಬದಲಾಗಿ, ‘ಉವ್‌’ ಸೇರುವ ಧಾತುಗಳಲ್ಲಿ ಎರಡು ಉಪ ಪ್ರಭೇದಗಳಿವೆ – ಎಂದು ಸೂಚಿಸಿದ್ದರೆ ಅದು ಹೆಚ್ಚು ವೈಜ್ಞಾನಿಕವಾದ ವಿಶ್ಲೇಷಣೆ ಆಗುತ್ತಿತ್ತು. ಪ್ರತ್ಯಯಗಳ ಬಗ್ಗೆ ವಿವೇಚಿಸುವಾಗ ಬ್ರಾಹ್ಮಣ ತುಳು ಹಾಗೂ ಸಾಮಾನ್ಯ ತುಳು ಎರಡರ ಉದಾಹರಣೆಗಳನ್ನು ನೀಡಿದ್ದಾರೆ. ಕಾರಕ ಪ್ರಕರಣದ ವಿವೇಚನೆಯಲ್ಲಿ ಸಂಸ್ಕೃತ ವ್ಯಾಕರಣದ ಪ್ರಭಾವವಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಕೊನೆಯ ‘ವಿಶೇಷ ವಿಚಾರ’ ಎಂಬ ಅಧ್ಯಾಯದಲ್ಲಿ ತುಳುವಿನಲ್ಲಿ ಕರ್ಮಣಿ ಪ್ರಯೋಗವಿಲ್ಲದಿರುವಿಕೆ, ತುಳುವಿನ ಕೆಲವು ಉಪಭಾಷಾ ಭೇದಗಳು, ಲಿಪಿವಿಚಾರ ಮುಂತಾದವುಗಳ ವಿವೇಚನೆಯಿದೆ. ಇವರು ಈ ವ್ಯಾಕರಣ ಗ್ರಂಥವನ್ನು ಜೈಲಿನಲ್ಲಿ ಇದ್ದಾಗ ರಚಿಸಿದರು. ಆಗ ಇವರಿಗೆ ಪೊಳಲಿ ಶೀನಪ್ಪ ಹೆಗ್ಡೆ, ಎನ್‌.ಎಸ್‌. ಕಿಲ್ಲೆ ಹಾಗೂ ತಮಿಳು ವ್ಯಾಕರಣದ ಬಗ್ಗೆ ರಾಜಗೋಪಾಚಾರ್ಯ ಮೊದಲಾದವರು ಸಹಾಯ ಮಾಡಿದ್ದಾರೆ.

ತುಳುವಿನ ವರ್ಣಮಾಲೆಯ ಕುರಿತು ವಿವೇಚಿಸುತ್ತಾ ಪಣಿಯಾಡಿಯವರು ತುಳುವಿನಲ್ಲಿ ೧೬ ಸ್ವರಗಳನ್ನು ಗುರುತಿಸಿದ್ದಾರೆ. ‘ಉ’ ಕಾರ ಹಾಗೂ ‘ಎ’ ಕಾರಗಳಲ್ಲಿರುವ ಎರಡು ಭಿನ್ನ ಉಚ್ಚಾರಣೆಗಳಿಗೆ ಸ್ವತಂತ್ರ ಧ್ವನಿಯ ಸ್ಥಾನವನ್ನು ಪರಿಕಲ್ಪಿಸಿದ್ದಲ್ಲದೆ ಬ್ರಿಗೆಲ್ಲರು ಮಾಡಿದ ಸ್ವರಗಳ ವಿವೇಚನೆಗಿಂತ ಹೆಚ್ಚು ಸಮರ್ಥವಾಗಿ ಧ್ವನಿ ವಿವೇಚನೆ ಮಾಡಿದ್ದಾರೆ. ಹಾಗೆಯೆ ಋ, ೠ, ಐ, ಔ ಕಾರಗಳು, ಅನುಸ್ವರಾಂತ ವಿಸರ್ಗ, ಜಿಹ್ವಾಮೂಲಗಳೂ ಮಹಾಪ್ರಾಣಗಳೂ, ಶ, ಷಗಳು ತುಳುಭಾಷೆಯ ಜಾಯಮಾನಕ್ಕೆ ಸೇರುವುದಿಲ್ಲವೆಂದು ಸರಿಯಾಗಿಯೇ ಹೇಳಿದ್ದಾರೆ. ಆದರೆ ಬೇರೆ ಭಾಷೆಯ ಎರವಲು ಪದಗಳನ್ನು ಉಪಯೋಗಿಸಿಕೊಳ್ಳಲು ಇವು ಬೇಕಾಗಿರುವುದರಿಂದ ತುಳು ವ್ಯಾಕರಣದಲ್ಲಿ ಇವುಗಳಿಗೆ ಸ್ಥಾನಕೊಟ್ಟಿದ್ದಾರೆ. ಸಂಧಿ ಪ್ರಕರಣ ಸಾಕಷ್ಟು ವಿಸ್ತಾರವಾಗಿದ್ದು, ಸಂಧಿ ಕಾರ್ಯ ನಡೆಯುವಾಗ ಆಗುವ ಪರಿವರ್ತನೆಗಳನ್ನು ವಿಸ್ತಾರವಾಗಿ ವಿವೇಚಿಸಿದ್ದಾರೆ. ಪ್ರಕೃತಿ ಪ್ರತ್ಯಯಗಳ ವಿವೇಚನೆಯಲ್ಲಿ ಪಣಿಯಾಡಿಯವರು ಸಂಸ್ಕೃತದ ಪಾಣಿನಿಯ ಪದ್ಧತಿಯನ್ನು ಅನುಸರಿಸಿದ್ದನ್ನು ಕಾಣಬಹುದು. ಉದಾಹರಣೆಗಳನ್ನು ಕೊಡುವಾಗ ಅವರು ಸ್ವಾತಂತ್ರ್ಯ ಚಳುವಳಿ ಹಾಗೂ ತುಳು ಚಳುವಳಿಯ ಹಿನ್ನೆಲೆಯನ್ನು ಬಳಸಿಕೊಂಡಿದ್ದಾರೆ. ಉದಾಹರಣೆಗೆ, ಪ್ರಥಮಾ ವಿಭಕ್ತಿ – ‘ತುಳುನಾಡ್‌ನ್‌ ಕನ್ನಡ ಮಳ್ತೆರ್‌’ ದ್ವಿತೀಯಾ ವಿಭಕ್ತಿ ‘ತುಳುವರಸುಲು ವಿಜಯನಗರನ್‌ ಆಳ್ದೆರ್‌,’ ತೃತೀಯ ವಿಭಕ್ತಿ ‘ತುಳುವೆರೆ ಆಲಸ್ಯಡ್ದ್‌ ತುಳುನಾಡ್‌ ಹಾಳಾಂಡ್‌’ ಚತುರ್ಥಿ ವಿಭಕ್ತಿ – ‘ತುಳುವೆರ್‌ ತುಳುನಾಡ್‌ದ ಸ್ವಾತಂತ್ರ್ಯಗ್‌ ಕಾದ್‌ಯೆರ್‌’ ಇತ್ಯಾದಿ. ಈ ರೀತಿ ತುಳು ವ್ಯಾಕರಣ ಗ್ರಂಥದ ರಚನೆಯಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಹಾಗೂ ತುಳು ಚಳುವಳಿಯ ಹಿನ್ನೆಲೆಗಳನ್ನು ಗಮನಿಸಿದ್ದು ಅಪೂರ್ವವಾಗಿದೆ.

ಯಾವುದೇ ಒಂದೇ ಭಾಷಾ ವರ್ಗದ ವ್ಯಾಕರಣವನ್ನು ರಚಿಸುವಾಗ ಅದಕ್ಕೆ ತನ್ನದೇ ಆದ ಭಾಷಾ ನಿಯಮಗಳಿವೆ ಎಂಬುದನ್ನು ಗುರುತಿಸಿ ಕೊಳ್ಳಬೇಕಾಗುತ್ತದೆ. ದ್ರಾವಿಡ ಭಾಷಾ ವರ್ಗದ ಭಾಷೆಗೆ ಹಾಗೂ ವ್ಯಾಕರಣಕ್ಕೆ ಸಂಸ್ಕೃತದ ಅಥವಾ ಐರೋಪ್ಯ ವ್ಯಾಕರಣಗಳ ವಿಧಾನ ಒಪ್ಪುವುದಿಲ್ಲ. ಆದರೆ ನಮ್ಮ ವ್ಯಾಕರಣ ಕೃತಿಗಳಲ್ಲಿ ಈ ಎರಡರ ಪ್ರಭಾವಗಳು ದಟ್ಟವಾಗಿರುವುದು ಕಂಡು ಬರುತ್ತದೆ. ಪಣಿಯಾಡಿಯವರು ತಮ್ಮ ತುಳು ವ್ಯಾಕರಣ ಕೃತಿಯ ಮುನ್ನುಡಿಯಲ್ಲಿ ಬರೆಯುತ್ತಾ ‘ಸರಿಯಾಗಿ ನೋಡಿದರೆ ದ್ರಾವಿಡ ಭಾಷೆಗೆ ವ್ಯಾಕರಣವನ್ನು ಬರೆಯುವಾಗ ಸಂಸ್ಕೃತ ವ್ಯಾಕರಣಕ್ಕಿಂತ ಬೇರೆ ನಮ್ಮೂನೆಯ ರಚನಾಕ್ರಮವನ್ನು ಅನುಸರಿಸಬೇಕು ಎಂದು ನನ್ನ ಅಭಿಪ್ರಾಯ’ ಎಂದು ಹೇಳಿದ್ದಾರೆ. ಹಾಗಾಗಿ ತುಳು ವ್ಯಾಕರಣದ ವಿಚೇಚನೆ ಮಾಡುವಾಗ ತುಳುವಿಗೆ ಸಂಸ್ಕೃತದ ಶರಣತೆ ಅವರಲ್ಲಿ ಎದ್ದು ಕಾಣುತ್ತದೆ ಉದಾಹರಣೆಗೆ ಸ್ತ್ರೀಪ್ರತ್ಯಯ, ಸಮಾಸ, ನಾಮಜ ಮೊದಲಾದವುಗಳನ್ನು ನಾಮಪದ ಪ್ರಕರಣದಲ್ಲಿಯೇ ಹೇಳಿ ಮುಗಿಸಬಹುದಿತ್ತು. ಆದರೆ ಪಣಿಯಾಡಿಯವರು ಇವುಗಳ ಬಗ್ಗೆ ವಿಸ್ತಾರದ ವಿವೇಚನೆ ಮಾಡುತ್ತಾರೆ. ಬ್ರಿಗೆಲ್ಲರು ವಿಸ್ತಾರವಾಗಿ ಬಿಟ್ಟಿದ್ದಾರೆ. ಯಾಕೆಂದರೆ ಸಂಸ್ಕೃತದಲ್ಲಿ ‘ವಾಕ್ಯರಚನೆ’ ಪ್ರಾಧಾನ್ಯವಿಲ್ಲ, ಪ್ರಕೃತದಲ್ಲಿ ಸೇರಿದ ಪ್ರತ್ಯಯಗಳ ವಾಕ್ಯದಲ್ಲಿ ಆ ಶಬ್ಧದ ಸ್ಥಾನವನ್ನು ನಿಗದಿಗೊಳಿಸಿದ್ದಾರೆ. ಅದ್ದರಿಂದ ಶಬ್ಧಗಳ ಅನುಕ್ರಮದಲ್ಲಿ ಹೆಚ್ಚು ಕಡಿಮೆಯಾದರೂ ವಾಕ್ಯದ ಅರ್ಥಕ್ಕೆ ತೊಂದರೆಯಾಗುವುದಿಲ್ಲ. ಆದರೆ ತುಳುವಿನ ವಾಕ್ಯರಚನಾ ಕ್ರಮದ ಬಗ್ಗೆ ಸ್ಪಲ್ಪ ಹೆಚ್ಚಿನ ವಿವೇಚನೆ ಬೇಕಾಗುತ್ತದೆ. ಆದರೂ ಯು. ಪಿ. ಉಪಾಧ್ಯಾಯರು ಹೇಳಿದಂತೆ ‘ಈ ದೃಷ್ಟಿಯಲ್ಲಿ ಪಣಿಯಾಡಿಯವರು ತುಳು ಧ್ವನಿಗಳನ್ನು ಸರಿಯಾಗಿ ನೋಡಿದ್ದಾರೆ. ಎಂದು ಹೇಳಬಹುದು. ‘ಉ’ ಮತ್ತು ‘ಎ’ ಕಾರಗಳ ಎರಡು ರೀತಿಯ ಉಚ್ಚಾರಣೆಗಳಿಗೆ ಸ್ವತಂತ್ರ ಸ್ಥಾನ ನೀಡಿ ಅವರು ತಮ್ಮ ವಿಚೇಚನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಋ, ೠ ಅನುಸ್ವಾರ, ವಿಸರ್ಗ, ಜಿಹ್ವಾಮೂಲಿಯಗಳೂ ಮಹಾಪ್ರಾಣಗಳೂ ಶ ಷ ಮುಂತಾದಾ ಅಕ್ಷರಗಳೂ ತುಳು ಭಾಷೆಯ ಜಾಯಮಾನಕ್ಕೆ ಸೇರಿದವುಗಳಲ್ಲ ಎಂದೇ ನಿಶ್ಕರ್ಷೆ ಮಾಡಿ ಹೇಳಿದ್ದಾರೆ. ಸಂಸ್ಕೃತ ಹಾಗೂ ಕನ್ನಡದಿಂದ ಎರವಲು ಪಡೆದ ಶಬ್ಧಗಳಿಗಾಗಿ ಅವುಗಳನ್ನು ಬರಹದಲ್ಲಿ ಇಡಬಹುದು. ಐ, ಔ ತುಳು ಭಾಷೆಯ ಧವನಿಗಳಿಗೆ ಸೇರಿದವುಗಳಲ್ಲ ಎಂದು ಹೇಳಿರುವುದು ಇವರ ವೈಶಿಷ್ಟ್ಯ. ಹಾಗೆಯೆ ಪಣಿಯಾಡಿಯವರು ಧ್ವನಿ, ಸಂಧಿ, ಸಮಾಸ ವಿಭಕ್ತಿಗಳ ನಿರೂಪಣೆ ಹಾಗೂ ಪ್ರಕೃತಿ ಪ್ರತ್ಯಯಗಳು ಸೇರಿದಾಗ ಆಗುವ ಬದಲಾವಣೆಗಳನ್ನು ಖಚಿತ ವಿಶ್ಲೇಷಣೆಯ ಮೂಲಕ ನಿರೂಪಿಸಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ (ಕು. ಶಿ. ಹರಿದಾಸ ಭಟ್‌ (ಸಂ.) ೧೯೮೧).

ವರ್ಣಾನಾತ್ಮಕ ತುಳು ವ್ಯಾಕರಣ

ತುಳುವಿನ ಎರಡು ವ್ಯಾಕರಣ ಗ್ರಥಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬಂದರೆ, ರಾಮಕೃಷ್ಣ ಟಿ. ಶೆಟ್ಟಿಯವರ ‘ವರ್ಣನಾತ್ಮಕ ತುಳು ವ್ಯಾಕರಣ’ ಸ್ವಾತಂತ್ರ್ಯ ನಂತರ ಬಂದ ತುಳು ವ್ಯಾಕರಣ ಗ್ರಂಥವಾಗಿದೆ. ಇದು ಕನ್ನಡದಲ್ಲಿ ತುಳುವಿನ ವ್ಯಾಕರಣವನ್ನು ವಿಶ್ಲೇಷಿಸುವ ಕೃತಿಯಾಗಿದೆ. ಇದರಿಂದಾಗಿ ತುಳು ವ್ಯಾಕರಣದ ಬಗ್ಗೆ ಕನ್ನಡದವರಿಗೂ ಅಭ್ಯಾಸ ಮಾಡಲು ಅನುಕೂಲವಾಗಿದೆ. ಈ ಕೃತಿಯಲ್ಲಿ ಧ್ವನಿಮಾ ವ್ಯವಸ್ಥೆ ಸಂಧಿ, ನಾಮಪದಗಳು, ಕ್ರಿಯಾಪದಗಳು, ನಾಮ ವಿಶೇಷಣಗಳು, ಕ್ರಿಯಾವಿಶೇಷಣ, ತುಳು ವಾಕ್ಯ ವಿಜ್ಞಾನ ಹಾಗೂ ಬ್ರಾಹ್ಮಣ ಹಾಗೂ ಸಾಮಾನ್ಯ ತುಳು ಬಾಷೆಗಳಲ್ಲಿರುವ ಕೆಲವೊಂದು ವ್ಯತ್ಯಾಸಗಳು ಎಂಬ ಏಳು ಅಧ್ಯಾಯಗಳಿವೆ. ಕೊನೆಯಲ್ಲಿ ಪಾರಿಭಾಷಿಕ ಪದಕೋಶವು ಇದೆ. ಈ ಕೃತಿ ಮುಖ್ಯವಾಗಿ ತುಳು ವ್ಯಾಕರಣ ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸುತ್ತದೆ.

ಧ್ವನಿಮಾ ವ್ಯವಸ್ಥೆಯ ಬಗ್ಗೆ ವಿವೇಚಿಸುವಾಗ ತುಳು ಬಾಷೆಯಲ್ಲಿ ಏಳು ಹ್ರಸ್ವಾ ಸ್ವರ ಧ್ವನಿಮಾಗಳು, ಆರು ದೀರ್ಘ ಧ್ವನಿಮಾಗಳೂ ಇವೆ. ಇಪ್ಪತ್ತಾರು ವ್ಯಂಜನ ಧ್ವನಿಮಾಗಳಲ್ಲಿ ಹತ್ತು ಸ್ಪರ್ಶ ಧ್ವನಿಮಾಗಳು ಐದು ಅನುನಾಸಿಕ ಧ್ವನಿಮಾಗಳು ಮೂರು ಘರ್ಷ ಧ್ವನಿಮಾಗಳು, ಒಂದು ಪಾರ್ಶ್ವಿಕ ಧ್ವನಿಮಾವೂ ಒಂದು ತಾಡಿತ ಧ್ವನಿಮಾ ಅಲ್ಲದೆ ಎರಡು ಆರೆ ವ್ಯಂಜನ ಧ್ವನಿಮಾಗಳೂ ಇವೆ ಎಂದು ಹೇಳಿ ತುಳು ವರ್ಣಾಮಲೆಗೆ ಭಾಷಾ ವೈಜ್ಞಾನಿಕ ವಿಶ್ಲೇಷಣೆ ನೀಡಿದ್ದಾರೆ. ಪ್ರತಿಯೊಂದು ಧ್ವನಿಮಾವೂ ಪದಾದಿ, ಪದಮಧ್ಯ ಹಾಗೂ ಪದಾಂತ್ಯದಲ್ಲಿ ಹೇಗೆ ಸಾದೃಶ್ಯ ಹಾಗೂ ವೈದೃಶ್ಯಗಳಿಂದ ಕೂಡಿದೆ ಎಂಬುದನ್ನು ಉದಾಹರಣೆಗಳ ಮೂಲಕ ವಿವೇಚಿಸಿದ್ದಾರೆ.

ರಾಮಕೃಷ್ಣ ಶೆಟ್ಟರು ತುಳುವಿನಲ್ಲಿ ಅಂತಸ್ಸಂಧಿ ಮತ್ತು ಬಹಿಸ್ಸಂಧಿ ಎಂದು ಎರಡು ವಿಧದ ಸಂಧಿಗಳಿವೆಂದು ಗುರುತಿಸಿಸುತ್ತಾರೆ. ಪ್ರಕೃತಿ ಮತ್ತು ಪ್ರತ್ಯಯ ಸೇರಿದಾಗ ಹಾಗೂ ಪದ ಮತ್ತು ಪ್ರತ್ಯಯ ಸೇರಿದಾಗ ಆಗುವ ಸಂದಿ ಕಾರ್ಯವನ್ನು ಅಂತಸ್ಸಂಧಿ ಎಂದು ಕರೆದು ಅವುಗಳನ್ನು ಬೇರೆ ಬೇರೆ ನಿಯಮಗಳಿಂದ ಉದಾಹರಣೆ ಸಹಿತ ವಿವರಿಸಿದ್ದಾರೆ. ಹಾಗೆಯೇ ಪ್ರಕೃತಿ ಮತ್ತು ಪದ ಹಾಗೂ ಪದ ಮತ್ತು ಪದ ಸೇರಿದಾಗ ನಡೆಯುವ ಸಂಧಿಕಾರ್ಯವನ್ನು ಬಹಿಸ್ಸಂಧಿ ಎಂದು ಕರೆದು ಅದು ನಿಯಮಗಳು ಐಚ್ಛಿಕವಾಗಿರುತ್ತವೆ ಎಂದಿದ್ದಾರೆ. ತುಳು ಭಾಷೆಯ ಸಂಧಿಕಾರ್ಯವನ್ನು ಮುಖ್ಯವಾಗಿ ಮೂರು ಮುಖ್ಯ ನಿಯಮಗಳ ಮೂಲಕ ವಿವೇಚಿಸಿದ್ದಾರೆ. ಆ ನಿಯಮಗಳನ್ನು ಸದಾಂತ್ಯ ಸ್ವರ ಲೋಪಗೊಳ್ಳುವ ಸಂಧಿನಿಯಮಗಳು, ಪದಾದಿ ಸ್ವರ ಲೋಪಗೊಳ್ಳುವ ಸಂಧಿ ನಿಯಮಗಳು ಹಾಗೂ ಯ್‌ಹಾಗೂ ವ್‌ಆಗಮಗೊಳ್ಳುವ ಸಂಧಿ ನಿಯಮಗಳೆಂದು ತಿಳಿಸಿ, ಅವುಗಳಲ್ಲಿರುವ ಬೇರೆ ಬೇರೆ ನಿಯಮಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.

ತುಳುವಿನ ನಾಮಪದದ ಬಗ್ಗೆ ವಿವೇಚಿಸುತ್ತಾ ರಾಮಕೃಷ್ಣ ಶೆಟ್ಟರು ತುಳು ನಾಮಪದದ ನಿಷ್ಪತ್ತಿಯಲ್ಲಿ ಎರಡು ವಿಧಗಳನ್ನು ಗುರುತಿಸುತ್ತಾರೆ. (೧) ಕ್ರಿಯಾಪದಗಳಿಂದ ನಿಷ್ಪತ್ತಿಯಾದ ನಾಮಪದಗಳು, ಉದಾ.- ಕೆತ್ತೆ, ಬೆರಕೆ, ನಂಬಿಕೆ ಇತ್ಯಾದಿ. (೨) ನಾಮಪಕೃತಿಯಿಂದ ನಿಷ್ಪತ್ತಿಯಾದ ನಾಮಪದಗಳೂ ಉದಾ.- ಕೆಪ್ಪೆ, ಮರ್ಲೆ, ಪೊಸಬೆ ಇತ್ಯಾದಿ. ತುಳುವಿನ ಸರ್ವನಾಮಗಳಲ್ಲಿ (೧) ಪುರುಷವಾಚಕ, (೨) ಪ್ರಶ್ನಾರ್ಥಕ, (೩) ಆತ್ಮಾರ್ಥಕ ಹಾಗೂ (೪) ದರ್ಶನ ಸರ್ವನಾಮಗಳೆಂದು ನಾಲ್ಕು ವಿಧದ ಸರ್ವನಾಮಗಳನ್ನು ಗುರುತಿಸಿ ವಿಸ್ತಾರವಾದ ವಿವರಣೆ ನೀಡಿದ್ದಾರೆ. ತುಳುವಿನ ವಿಭಕ್ತಿ ಪ್ರತ್ಯಯಗಳ ವಿವೇಚನೆಯಲ್ಲಿ ಏಕವಚನ ಮತ್ತು ಬಹುವಚನ ನಾಮಪದಗಳು ಹಾಗೂ ಸರ್ವನಾಮಗಳು ವಿಭಕ್ತಿ ಪ್ರತ್ಯಯವನ್ನು ಹೊಂದುತ್ತವೆ ಎಂದು ಹೇಳಿ ಒಂಭತ್ತು ವಿಭಕ್ತಿಗಳನ್ನು ಹೀಗೆ ಗುರುತಿಸಿದ್ದಾರೆ. (೧) ಪ್ರಥಮಾ (ಕೃರ್ತ) (೨) ದ್ವಿತೀಯಾ (ಕರ್ಮ) (೩) ತೃತೀಯಾ (ಕರಣ) (೪) ಚತುರ್ಥಿ (ಸಂಪ್ರದಾನ) (೫) ಪಂಚಮಿ (ಅಪಾದಾನ) (೬) ಸಂಬಂಧ (೭) ಸಪ್ತಮಿ (ಅಧಿಕರಣ) (೮) ಸಂಬೋಧನಾ ಹಾಗೂ (೯) ಸಾಂಘಿಕ (ಸಂಯೋಗ). ಇವುಗಳಲ್ಲಿ ಪ್ರಥಮಾ ವಿಭಕ್ತಿ ಶೂನ್ಯವೆಂದೂ ತೃತೀಯಾ ಹಾಗೂ ಸಪ್ತಮಿ ವಿಭಕ್ತಿ ಪ್ರತ್ಯಗಳು ಒಂದೇ ರೀತಿಯಾಗಿರುತ್ತವೆ ಎಂದು ಗುರುತಿಸಿದ್ದಾರೆ. ತುಳುವಿನಲ್ಲಿ ಸಮಾಸ ಪದಗಳು ಮುಖ್ಯವಾಗಿ ನಾಲ್ಕು ವಿಧಗಳೆಂದು ಹೇಳಿ ಅವುಗಳನ್ನು (೧) ಅಂತಃ ಕೇಂದ್ರೀಯ ಸಮಾಸ (೨) ಬಹಿಃಕೇಂದ್ರೀಯ ಸಮಾಸ (೩) ಅನ್ಯೋನ್ಯ ಸಂಬಂಧಾತ್ಮಕ ಸಮಾಸ ಪದಗಳು ಹಾಗೂ (೪) ಜೋಡಣೆಯಾಗಿರುವ ಸಮಾಸ ಪದಗಳೆಂದು ಗುರುತಿಸಿ, ಅವುಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಅಂತೆಯೇ ಸಂಖ್ಯಾವಾಚಕಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ.

ಕ್ರಿಯಾಪದದ ಬಗ್ಗೆ ವಿವೇಚಿಸುತ್ತಾ ರಾಮಕೃಷ್ಣ ಶೆಟ್ಟರು ಕ್ರಿಯಾ ಪದಗಳ ಹಿಂದೆ ಕಾಲವಾಚಕ ಪ್ರತ್ಯಯವೂ ಅವುಗಳ ಹಿಂದೆ ಪುರುಷವಾಚಕ (ಅಖ್ಯಾತ) ಪ್ರತ್ಯಯವೂ ಸೇರುತ್ತವೆ. ಪುರುಷ ವಾಚಕಗಳು ಸೇರುವ ರೂಪಗಳನ್ನು ಪೂರ್ಣ ರೂಪಗಳೆಂದೂ ಅವುಗಳು ಸೇರದ ರೂಪಗಳನ್ನು ಅಪೂರ್ಣ ರೂಪಗಳೆಂದೂ ಕರೆಯಬಹುದು ಎನ್ನುತ್ತಾರೆ. ಭೂತಕಾಲ, ಅಭೂತಕಾಲ, ವಿಧ್ಯರ್ಥಕ ಹಾಗೂ ಪಕ್ಷಾರ್ಥಕ ಕ್ರಿಯಾನ್ಯೂನ ರೂಪಗಳನ್ನು ಪೂರ್ಣ ರೂಪಗಳೆಂದೂ ಭಾವ ರೂಪ, ಕ್ರಿಯಾ ವಿಶೇಷಣಾ ರೂಪ ಮತ್ತು ನಾಮ ವಿಶೇಷಣ ರೂಪಗಳನ್ನು ಅಪೂರ್ಣ ರೂಪಗಳೆಂದೂ ಗುರುತಿಸಿ ವಿಸ್ತಾರವಾದ ವಿವರಣೆ ನೀಡಿದ್ದಾರೆ.

ನಾಮ ವಿಶೇಷಣದ ಬಗ್ಗೆ ವಿವೇಚಿಸುತ್ತಾ, ತುಳುವಿನಲ್ಲಿ ನಾಮ ವಿಶೇಷಣಗಳು ಎರಡು ವಿಧ. (೧) ಸರಳ ನಾಮ ವಿಶೇಷಣ (೨) ತದ್ಧಿತ ನಾಮ ವಿಶೇಷಣ ಸರಳ ನಾಮ ವಿಶೇಷಣಗಳನ್ನು ಅರ್ಥಾನುಸಾರವಾಗಿ ನಾಲ್ಕು ವಿಧಗಳಾಗಿ ವಿಂಗಡಿಸುತ್ತಾರೆ. ಅವುಗಳನ್ನು (ಅ) ವರ್ಣನಾತ್ಮಕ ನಾಮವಿಶೇಷಣಗಳು (ಆ) ದರ್ಶಕ ಸರ್ವನಾಮ ವಿಶೇಷಣಗಳು (ಇ) ಪ್ರಶ್ನಾರ್ಥಕ ನಾಮ ವಿಶೇಷಣಗಳು ಹಾಗೂ (ಈ) ಸಂಖ್ಯಾವಾಚಕ ನಾಮ ವಿಶೇಷಣಗಳೆಂದು ಗುರುತಿಸಿ ಉದಾಹರಣೆ ಸಹಿತ ವಿವರಿಸುತ್ತಾರೆ. ತದ್ಧಿತ ನಾಮ ವಿಶೇಷಣಗಳು ದರ್ಶಕ ಸರ್ವನಾಮ ವಿಶೇಷಣ ಹಾಗೂ ಪ್ರಶ್ನಾರ್ಥಕ ಸರ್ವನಾಮ ವಿಶೇಷಣ ಪ್ರಕೃತಿಗಳಿಂದ ನಿಷ್ಪನ್ನಗೊಳ್ಳುತ್ತವೆ ಎಂದು ಹೇಳಿ ಅವುಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.

ಕ್ರಿಯಾ ವಿಶೇಷಣದ ಬಗ್ಗೆ ವಿವೇಚಿಸುತ್ತಾ, ತುಳುವಿನಲ್ಲಿ ಸಹಜ ಕ್ರಿಯಾ ವಿಶೇಷಣಗಳು ಹಾಗೂ ಸಾಧಿತ ಕ್ರಿಯ, ವಿಶೇಷಣಗಳು ಎಂದು ಎರಡು ವಿಧಗಳನ್ನು ಗುರುತಿಸುತ್ತಾರೆ. ಸಾಧಿತ ಕ್ರಿಯ, ವಿಶೇಷಣಗಳು ದರ್ಶಕ ಸರ್ವನಾಮ ಹಾಗೂ ನಾಮಪದಗಳಿಂದ ನಿಷ್ಪನ್ನಗೊಳ್ಳುತ್ತವೆಯೆಂದು ತಿಳಿಸಿ ಅವುಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ತುಳು ವಾಕ್ಯ ವಿಜ್ಞಾನ ಹಾಗೂ ಬ್ರಾಹ್ಮಣ ತುಳು ಮತ್ತು ಇತರ ತುಳು ಭಾಷೆಗಳಲ್ಲಿರುವ ಕೆಲವೊಂದು ವ್ಯತ್ಯಾಸಗಳನ್ನು ಕೂಡ ಈ ಕೃತಿಯಲ್ಲಿ ವಿವೇಚಿಸಲಾಗಿದೆ.

‘ವರ್ಣನಾತ್ಮಕ ತುಳು ವ್ಯಾಕರಣವು’ ವರ್ಣನಾತ್ಮಕ ಭಾಷಾ ವಿಜ್ಞಾನದ ತತ್ತ್ವಗಳಿಗನುಸಾರವಾಗಿ ತುಳು ಭಾಷೆಯ ಧ್ವನಿಮಾ ವ್ಯವಸ್ಥೆ, ಆಕೃತಿಮಾ ವ್ಯವಸ್ಥೆ ಹಾಗೂ ವಾಕ್ಯರಚನಾ ವ್ಯವಸ್ಥೆಗಳನ್ನು ಪರಿಚಯ ಮಾಡಿಕೊಡುವ ಕೃತಿಯಾಗಿದೆ. ತುಳು ವ್ಯಾಕರಣದ ಬಗ್ಗೆ ಅಭ್ಯಾಸ ಮಾಡಬಯಸುವ ಭಾಷಾ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದು ಬಹಳ ಉಪಯುಕ್ತ ಕೃತಿಯಾಗಿದೆ. ಇತರ ಭಾಷೆಗಳಂತೆ ತುಳುವಿನಲ್ಲೂ ಅನೇಕ ಪ್ರಾಂತ್ಯ ಭೇದಗಳಿರುವುದರಿಂದ ಬ್ರಾಹ್ಮಣ ತುಳು ಹಾಗೂ ಸಾಮಾನ್ಯ ತುಳುವಿಗಿರುವ ವ್ಯತ್ಯಾಸಗಳನ್ನು ಗುರುತಿಸುವಲ್ಲಿ ಬಳಸಿದ ಸಾಮಾನ್ಯ ತುಳು ಯಾವ ಪ್ರದೇಶದ್ದೆಂದು ತಿಳಿಸಿದರೆ, ದ್ವಿ ಅಕ್ಷರೀಯ ತ್ರೈ ಅಕ್ಷರೀಯ ಚತುರ್ಥಿ ಅಕ್ಷರೀಯ ಹಾಗೂ ಪಂಚಮ ಅಕ್ಷರೀಯ ಎಂಬ ಪಾರಿಭಾಷಿಕ ಪದಗಳ ಬಗ್ಗೆ ಮರು ಪರಿಶೀಲನೆ ಅಗತ್ಯವಿದೆ. ಕೆಲವೊಂದು ಸಣ್ಣಪುಟ್ಟ ಕುಂದುಕೊರತೆಗಳನ್ನು ಬಿಟ್ಟರೆ ಈ ವ್ಯಾಕರಣ ಗ್ರಂಥವು ಸಮಗ್ರವಾಗಿ ಹಾಗೂ ಶಾಸ್ತ್ರೀಯವಾಗಿ ರೂಪುಗೊಂಡಿದೆ ಎನ್ನಬಹುದು.

A comprehensive Grammar of Tulu

ಈ ವ್ಯಾಕರಣ ಕೃತಿಯು ರಾಮಕೃಷ್ಣ ಟಿ. ಶೆಟ್ಟಿ ಅವರು ಇಂಗ್ಲಿಷ್‌ನಲ್ಲಿ ಬರೆದ ತುಳು ವ್ಯಾಕರಣ ಕೃತಿಯಾಗಿದೆ. ಈ ಕೃತಿಯಲ್ಲಿ ಪ್ರಸ್ತಾವನೆ, ಧ್ವನಿಮಾ, ಸಂಧಿ, ಅಕೃತಿಮಾ ಹಾಗೂ ವಾಕ್ಯರಚನೆ ಎಂದು ಐದು ಅಧ್ಯಾಯಗಳಲ್ಲಿ ತುಳು ವ್ಯಾಕರಣವನ್ನು ವಿಶ್ಲೇಷಿಸಿದ್ದಾರೆ. ಇಲ್ಲಿ ಮುಖ್ಯವಾಗಿ ಅವರು ‘ವರ್ಣನಾತ್ಮಕ ತುಳು ವ್ಯಾಕರಣದಲ್ಲಿ ವಿವರಿಸಿದ ವಿವರಣೆಗಳನ್ನೇ ನೀಡಿದ್ದಾರೆ. ತುಳು ಬಾರದವರಿಗೆ ತುಳು ವ್ಯಾಕರಣದ ಮಾಹಿತಿಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಇದನ್ನು ತುಳು ವ್ಯಾಕರಣದ ಬಗ್ಗೆ ಸಮರ್ಥವಾಗಿ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುವ ಗ್ರಂಥವೆಂದು ಗುರುತಿಸಬಹುದು.

ತುಳು ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ಬಹಳಷ್ಟು ಪಿಎಚ್‍‌ಡಿ ಪ್ರಬಂಧಗಳು ರಚನೆಯಾಗಿವೆ. ಡಿ.ಎನ್‌. ಶಂಕರ ಭಟ್ಟರ ‘Descriptive Analysis of Tulu’ ಮಲ್ಲಿಕಾದೇವಿ ಅವರ’ The Structure Tulu verbs – A transformtional Analysis’, ಎಂ. ರಾಮ ಅವರ ‘Structural Description of Tulu – Kulala (Kumbara) Dialect’, ಲಕ್ಷ್ಮೀನಾರಾಯಣ ಭಟ್‌ ಅವರ ‘A Grammar of Tulu’ (A Dravidian Language), ಕೆ. ವಿ. ಜಲಜಾಕ್ಷಿ ಅವರ ‘Tulu Language Descripive and Comparative)’ ಎನ್ನುವ ಕೆಲವು ಪಿಎಚ್‌. ಡಿ ಪ್ರಬಂಧಗಳು ತುಳು ಭಾಷೆಯ ವೈಜ್ಞಾನಿಕ ವಿಶ್ಲೇಷಣೆಯನ್ನು ಮಾಡುತ್ತೇವೆ. ಹಾಗೆಯೆ ಬಿ. ರಾಮಚಂದ್ರರಾವ್‌ ಅವರ ‘ಭಾಷಾ ದೃಷ್ಟಿಯಲ್ಲಿ ತುಳು ಭಾಷೆ’ ಹಾಗೂ ‘ದ್ರಾವಿಡ ಬಾಸೆಲೆಟ್‌ ತುಳಿತ ಸ್ಥಾನೊ’, ಟಿ. ರಾಮಕೃಷ್ಣ ಶೆಟ್ಟಿ ಅವರ ‘ತುಳು ಭಾಷೆ’ ಹಾಗೂ ‘ತುಳು ಸಂಪೊತ್ತು’, ಅಮೃತ ಸೋಮೇಶ್ವರ ಅವರ ‘ತುಳು ಕನ್ನಡ – ಬಾಷಾ ಬಾಂಧವ್ಯ’, ತೆಕ್ಕುಂಜ ಗೋಪಾಲಕೃಷ್ಣ ಭಟ್‌ ಅವರ ‘ತುಳುವಿನ ಸ್ವರಮಾಲೆ’, ಪಿ. ಗುರುರಾಜ ಭಟ್‌ ಅವರ ‘ತುಳು ಭಾಷೆ ಮತ್ತು ಸಾಹಿತ್ಯ’, ಕುಶಾಲಪ್ಪ ಗೌಡರ ‘ದಕ್ಷಿಣ ಕನ್ನಡದ ತುಳು ಉಪ ಭಾಷೆಗಳು’, ಯು.ಪಿ.ಉಪಾಧ್ಯಾಯ ಅವರ ‘ತುಳುವಿನ ಎರಡು ವ್ಯಾಕರಣ ಗ್ರಂಥಗಳು ಹಾಗೂ ಡಾ. ಶ್ರೀ ಕೃಷ್ಣಭಟ್‌ ಅರ್ತಿಕಜೆ ಅವರು ಬರೆದ ‘ತುಳುವಿನ ಕೆಲವು ವಿಶಿಷ್ಟ ಧ್ವನಿಗಳು’ ಮತ್ತು ತುಳು ವ್ಯಾಕರಣದ ಬಗ್ಗೆ ವಿವರಿಸುವ ಕೆಲವು ಮುಖ್ಯ ಲೇಖನಗಳು ಪ್ರಕಟವಾಗಿವೆ. ಅಲ್ಲದೆ ಇನ್ನೂ ಅನೇಕ ಲೇಖನಗಳು ನಿಯತಕಾಲಿಕಗಳಲ್ಲಿ, ಸಾಹಿತ್ಯ ಪತ್ರಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಹಾಗಾಗಿ ಕಳೆದ ಶತಮಾನದಲ್ಲಿ ತುಳು ವ್ಯಾಕರಣ ಹಾಗೂ ಭಾಷಾ ವೈಜ್ಞಾನಿಕ ವಿಶ್ಲೇಷಣೆ ಬಹಳಷ್ಟು ನಡೆದಿದೆ ಎಂಬುದು ಸಂತೊಷದ ಸಗತಿಯಾಗಿದೆ.

ಆಕರಸೂಚಿ

೧. Rev. J. Brigei -The Grammar of Tulu Language -Asian Eductional Service, New Delhi 1982

೨. ಪಣಿಯಾಡಿ ಎಸ್‌, ಯು.- ತುಳು ವ್ಯಾಕರಣ, ತುಳು ಸಾಹಿತ್ಯ ಮಾಲೆ, ಉಡುಪಿ ೧೯೩೨.

೩. ಪಾದೇಕಲ್ಲು ವಿಷ್ಣು ಭಟ್ಟ (ಸಂ) – ತುಳುವರಿವರು – ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ ೧೯೯೭

೪. ರಾಮಕೃಷ್ಣ ಟಿ. ಶೆಟ್ಟಿ – A comprehensive grammar of Tulu- Annamalai University -Annamalainagar. 2001

೫. ರಾಮಕೃಷ್ಣ ಟಿ. ಶೆಟ್ಟಿ – ವರ್ಣಾತ್ಮಕ ತುಳು ವ್ಯಾಕರಣ -ಕನ್ನಡ ಸಂಘ ವಿವೇಕಾನಂದ ಕಾಲೇಜು, ಪೂತ್ತೂರು ೧೯೮೬

೬. ಮುರಳೀಧರ ಉಪಾಧ್ಯ ಹಿರಿಯಡಕ -ಎಸ್‌. ಯು. ಪಣಿಯಾಡಿ -ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ. ಮಂಗಳೂರು -೧೯೯೬

೭. ಹರಿದಾಸ ಭಟ್ಟ ಕು. ಶಿ. (ಸಂ) ಸ್ವಾತಂತ್ರ್ಯ ಪೂರ್ವ ತುಳು ಸಾಹಿತ್ಯ- ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ ೧೯೮೨.