೧. ಮೂರು ಮಾತ್ರೆಯ ಛಂದೋರೂಪಗಳು

ಮೂರು ಮಾತ್ರೆಯ ಏಳುಗಣಗಳೂ ಮೇಲೊಂದು ಗುರುವೂ ಇರುವ, ಉತ್ಸಾಹಲಯದ ರಚನೆಗಳು ತುಳು ಕಬಿತಗಳಲ್ಲಿ ಧಾರಾಳ ಕಂಡುಬರುತ್ತವೆ. ನೇಜಿ ನೆಡುವಾಗ ಹಾಡುವುದಕ್ಕೆ ಮೂರು ಮಾತ್ರೆಯ ಲಯ ಸರಿಯಾಗಿ ಹೊಂದಿಕೊಳ್ಳುತ್ತದೆ. ಎಡಗೈಯಲ್ಲಿ ಹಿಡಿದು ನೇಜಿಯ ಲಯ ಸರಿಯಾಗಿ ಹೊಂದಿಕೊಳ್ಳುತ್ತದೆ. ಎಡಗೈಯಲ್ಲಿ ಹಿಡಿದ ನೇಜಿಯ ಕಟ್ಟಿನಿಂದ ಒಮ್ಮೆ ನೆಡಲು ಬೇಕಾದ ನೇಜಿಯನ್ನು ಬೇರ್ಪಡಿಸುವುದು ತ್ರಿಮಾತ್ರಾ ಘಟಕದ ಕ್ರಿಯೆ. ಪಾದದ ಕೊನೆಯಲ್ಲಿ ಬಿಡಿಯಾಗಿ ನಿಲ್ಲುವ ಗುರುವಿನ ಮುಂದೆ ಒಂದು ಮಾತ್ರೆಯ ಮೌನವಿರುವುದರಿಂದ ಒಟ್ಟು ಎಂಟು ಗಣಗಳು ಒಂದು ಪಾದವನ್ನು ರೂಪಿಸುತ್ತವೆ. ಹೀಗಾಗಿ, ಒಂದು ಪಾದ ಹಾಡುವಾಗ ನಾಲ್ಕು ಬಾರಿ ನೇಜಿ ನೆಡುವುದು ಸಾಧ್ಯವಾಗುತ್ತದೆ. ಸಾಲಾಗಿ ನಿಂತು ನೇಜಿ ನೆಡುತ್ತಾ ಹಿಂದು ಹಿಂದಾಗಿ ಸಾಗುವ ಹೆಂಗಸರು ತಮ್ಮ ಅಡ್ಡಸಾಲುಗಳಲ್ಲಿ ಎಂಟೆಂಟು ಕಡೆ ನೇಜಿ ನೆಡುತ್ತಾ ಹಿಂದಕ್ಕೆ ಸಾಗುತ್ತಾರೆ.

ಒಂದೋ ಕ್ರಿಯೆಯೊಂದಿಗೆ ಅಥವಾ ತಾಳದೊಂದಿಗೆ ಈ ಮಾತ್ರಾಲಯ ಸಂಪೂರ್ಣ ತಾದಾತ್ಮ್ಯ ಪಡೆಯುತ್ತದೆ. ದುಡಿಮೆ, ಆರಾಧನೆ, ಸಾಂಪ್ರದಾಯಿಕ ಸಂದರ್ಭಗಳಲ್ಲಿ ಹಾಡುವ ಹಾಡುಗಳಲ್ಲಿ ಮೂರು ಮಾತ್ರೆಗಳ ಲಯವಿನ್ಯಾಸವನ್ನು ಕಾಣಬಹುದು. ಬೆಸ ಸಂಖ್ಯೆಯ ಪಾದಗಳಲ್ಲಿ ಮೂರು ಮಾತ್ರೆಯ ನಾಲ್ಕು ಗಣಗಳೂ, ಸಮ ಸಂಖ್ಯೆಯ ಪಾದಗಳಲ್ಲಿ ಮೂರು ಮಾತ್ರೆಯ ಮೂರು ಗಣಗಳೂ, ಒಂದು ಅಪೂರ್ಣ ಗಣವೂ (ಮುಡಿ) ಇರುವ ವಿನ್ಯಾಸ ಸಾಮಾನ್ಯ. ಉದಾಹರಣೆಗೆ-

ಓಡ / ಕರೆಕ್‌ / ಕೋsಣ / ತ್‌sದೆ /
ತೇದೆ
/ ಮೀನ್‌ / ಪತ್ತೊ / ಡುs
ಕಾಣೆ
/ ಮೀನ್‌ / ಉಂಡು / ಗಾs /
ಕಣ್ಣ್‌
/ ಬುಡುದು / ತೂಲ / ಗಾ
ಗಿರಿಜೆ
/ ಮಗಲ್‌ / ಗಿರಿಯೊಂ / ತಾಲ್‌ /
ನೇಜಿ
/ ಗೊರೋ / ಬರೊಡು / ಗೇ /
ಬರ್ಪೆ
/ ನಪೆರೆ / ಬರ್ಪೆ / ನೇನ್‌ /
ಚರೇ
/ ಬಾರ್‌ದ್‌ / ಕಟೊನು / ವೇ

ಎರಡೆರಡು ಪಾದಗಳು ಒಂದೊಂದು ಘಟಕವಾಗಿರುವ ದ್ವಿಪದಿಯ ರೂಪವುಳ್ಳ ಈ ಛಂದಸ್ಸಿನಲ್ಲಿ ಒಂದು ಗುರು, ಒಂದು ಲಘುವುಳ್ಳ ವಿನ್ಯಾಸದ ಗಣಗಳೇ ಹೆಚ್ಚು. ಮೂರು ಲಘುಗಳು ಬರುವ ರಚನೆಗಳಲ್ಲಿ ಗತಿ ಹೆಚ್ಚಿನ ತೀವ್ರತೆಯನ್ನು ಪಡೆಯುತ್ತದೆ. ಎರಡನೇ ಉದಾಹರಣೆಗಿಂತ ಒಂದನೇ ಉದಾಹರಣೆಯ ಗತಿ ನಿಧಾನವಾಗಿದೆ. ಗಣಪರಿವೃತ್ತಿ ಹಾಗೂ ಅಕ್ಷರವನ್ನು ಕರ್ಷಿಸುವ ಮೂಲಕ ಈ ಛಂದಸ್ಸಿಗೆ ಹೊಸ ಬಳುಕನ್ನೂ ಉತ್ಸಾಹವನ್ನೂ ತುಂಬಿದ್ದಕ್ಕೆ ಉದಾಹರಣೆಗಳಿವೆ.

ಮಾದಿ / ರೊಂದ್‌ / ಪನ್ಪು / ನಾಳ್‌
ಮಾಪೊದುಳೆದಿ
/ ಮಾದಿ / ರಾ
ಬೆಳ್ಳೇರಿs
/ ಚೆನ್ನಾಗ್‌s
ಆಡುವೆಂ
/ ದುಳ್ಳನೆ / ಮಾದಿ / ರಾ

ಪ್ರತಿ ಪಾದದಲ್ಲಿ ಮೂರು ಮಾತ್ರೆಯ ಮೂರು ಗಣಗಳೂ ಮುಡಿ ಅಥವಾ ಪದ್ಮಗಣವೂ ಇರುವ ಮೂರು ಮಾತ್ರೆಗಳ ಛಂದಸ್ಸಿನ ಪ್ರಭೇದವಿದೆ. ಉದಾಹರಣೆಗೆ –

ಜೋಕು / ಲಪ್ಪ / ಜೋಕು / ಲು
ಟಯಿಂ
/ ಟುಯಿಂ / ಜೋಕು / ಲು
ರೊಟ್ಟಿ
/ ಬೋಡ / ಜೋಕು / ಲೇ
ಪೆಟ್ಟ್‌
/ ಬೋಡ / ಜೋಕು / ಲೇ

೨. ನಾಲ್ಕು ಮಾತ್ರೆಗಳ ಛಂದೋರೂಪಗಳು

ನಾಲ್ಕು ಮಾತ್ರೆಗಳ ಛಂದೋರೂಪಗಳು, ಮೂರು ಮಾತ್ರೆಯ ಛಂದೋರುಪಗಳಂತೆಯೇ ಎರಡೆರಡು ಪಾದಗಳ ಘಟಕಗಳಾಗಿ ವಿಂಗಡಿಸಲ್ಪಟ್ಟಿದ್ದು ದ್ವಿಪದಿಯ ರೂಪದಲ್ಲಿರುವುದು ಕಂಡುಬಂದಿದೆ. ಹೆಚ್ಚಿನ ಗಣಗಳೂ ಎರಡು ಗುರುಗಳಿಂದ ಕೂಡಿರುತ್ತವೆ.

ನಾಲ್ಕು ಮಾತ್ರೆಯ ಮೂರು ಗಣಗಳೂ ಮೇಲೊಂದು ಗುರುವೂ ಇರುವುದು ಇದರ ಸಾಮಾನ್ಯ ಲಕ್ಷಣ. ಈ ಛಂದೋರೂಪಗಳು ಕಬಿತೆಗಳಲ್ಲೇ ಸಾಮಾನ್ಯವಾಗಿ ಕಾಣಸಿಗುತ್ತವೆ. ಅಂಶಗಣಗಳ ಆಧಾರದಲ್ಲಿ ಇವನ್ನು ವಿಶ್ಲೇಷಿಸುವುದು ಸಾಧ್ಯವಿಲ್ಲ. ಗಣದಲ್ಲಿ ಎರಡಕ್ಷರಗಳಿದ್ದಾಗ ಮತ್ತು ಮೂರಕ್ಷರಗಳಿದ್ದು ಮೊದಲ ಎರಡು ಲಘುಗಳಾಗಿದ್ದಾಗ ಮಾತ್ರ ಬ್ರಹ್ಮಗಣವಾಗಬಹುದಾದ ಸಾಧ್ಯತೆ. ಉಳಿದಂತೆ ನಾಲ್ಕು ಅಕ್ಷರಗಳು ಬಂದು ಮೊದಲ ಎರಡು ಲಘುಗಳಾದಾಗ ನಿರ್ದಿಷ್ಟ ಲಕ್ಷಣದಲ್ಲಿ ಅಂಶಗಣಗಳಿಗೆ ಈ ಛಂದಸ್ಸನ್ನು ಸಮೀಕರಿಸುವುದು ಅಸಾಧ್ಯ.[1]

ನಾಲ್ಕು ಮಾತ್ರೆಗಳ ಗಣವುಳ್ಳ ಛಂದೋರೂಪಗಳಲ್ಲಿ ಪಾದದ ಮುಕ್ತಾಯ ಎರಡು ಮಾತ್ರೆಗಳ ಗಣದಿಂದ ರೂಪಗೊಳ್ಳುತ್ತದೆ. ತಾಳಕ್ಕೆ ಅನುಸಾರವಾಗಿ ಉಳಿದೆರಡು ಮಾತ್ರೆಗಳನ್ನು ಮೌನದಿಂದ ತುಂಬಲಾಗುತ್ತದೆ. ಉದಾಹರಣೆಗೆ –

ಬಲ್ಲೇ / ಸ್ವಾಮಿ / ಬಲ್ಲೇ / ಯೇ
ಮಲಿಗೆದ
/ ಮಿತ್ತೊರೊ / ಬಲ್ಲೇ / ಯೇ
ಬಲ್ಲೇ
/ ಸ್ವಾಮಿ / ಬಲ್ಲೇ / ಯೇ
ಸಂಪಿಗೆದ
/ ಮಿತ್ತೊರೊ / ಬಲ್ಲೇ / ಯೇ

ನಾಲ್ಕು ಮಾತ್ರೆಗಳ ಮಂದಾನಿಲ ಲಯ ಕನ್ನಡ – ಮಲಯಾಳಂ ಕಾವ್ಯಗಳಲ್ಲಿ ಲಘುಗಳ ಬಾಹುಳ್ಯ ಹೊಂದಿದ್ದು ತ್ವರಿತ ಗತಿಯಿಂದ ಅತ್ಯುತ್ಸಾಹವನ್ನೂ ಆವೇಶವನ್ನೂ ಪ್ರಕಟಿಸುವುದು ಕಂಡುಬರುತ್ತವೆ. ಆದರೆ ತುಳುವಿನಲ್ಲಿ ಗುರುಗಳೇ ಹೆಚ್ಚು. ಪರಿಣಾಮವಾಗಿ ನಿಧಾನಗತಿ ಹಾಗೂ ನಿರೂಪಣಾತ್ಮಕ ಶೈಲಿ ಕಾಣಿಸುತ್ತದೆ. ನಾಲ್ಕು ಮಾತ್ರೆಯ ಹೆಚ್ಚಿನ ರಚನೆಗಳೂ ಸಂಭಾಷಣೆಯ ರೂಪದಲ್ಲಿವೆ. ಉದಾಹರಣೆಗೆ –

ದಾಯೇ / ಎರ್ಮೇ / ದಾಯೇ / ಎರ್ಮೇ
ಪಂತೀ
/ ಮೇಯೀ / ಜಾ
ಈರೇ
/ ದಿಕೇ / ಬಲ್ಲೇ / ಬುಡಂದಿ /
ನೇಕ್‌
/ ಯಾನ್‌ / ದಾನೋ / ಡೂ

ಇದು ನಾಲ್ಕು ಮಾತ್ರೆಗಳ ಛಂದಸ್ಸಿನ ಇನ್ನೊಂದು ಪ್ರಭೇದ. ಬೆಸ ಸಂಖ್ಯೆಯ ಪಾದಗಳಲ್ಲಿ ನಾಲ್ಕು ಮಾತ್ರೆಗಳ ನಾಲ್ಕು ಗಣಗಳಿವೆ. ಸಮ ಸಂಖ್ಯೆಯ ಪಾದಗಳಲ್ಲಿ ನಾಲ್ಕು ಮಾತ್ರೆಗಳ ಮೂರು ಗಣಗಳ ಮೇಲೆ ಒಂದು ಅಪೂರ್ವ ಗಣವಿದೆ. ಕೆಲವೆಡೆ ಸಮ ಸಂಖ್ಯೆಯ ಪಾದಗಳಲ್ಲಿ ನಾಲ್ಕು ಮಾತ್ರೆಗಳ ಎರಡು ಗಣಗಳ ಮೇಲೆ ಒಂದು ಅಪೂರ್ಣ ಗಣ ಕಾಣಬರುವುದುಂಟು.

ಬೆಸ ಸಂಖ್ಯೆಯ ಪಾದಗಳಿಗಿಂತ ಸಮ ಸಂಖ್ಯೆಯ ಪಾದಗಳು ದೀರ್ಘವಾಗಿರುವ ರಚನೆಗಳಿವೆ.

ತೆರಕ/ ಟ್ಟೊನುಒರ / ಬರುವೊಲು / ಯಾ
/ ಪೊಣ್ಣುs / ರಾಮ / ಸ್ವಾಮಿ / ಮಗಳಾ / ಳ್‌
ಪೂದೀ
/ ಡೊನುಒರ / ಬರುವೊಲು / ಯಾ
/ ಪೊಣ್ಣುs / ರಾಮ / ಸ್ವಾಮಿ / ಮಗಳಾ / ಳ್‌

ಪ್ರತಿ ಪಾದಕ್ಕೆ ನಾಲ್ಕು ಸಮಸಂಖ್ಯೆಯ ಪಾದಗಳು ಪಲ್ಲವಿಯಾಗಿ ಆವರ್ತಿಸುತ್ತವೆ.

ಪ್ರತಿ ಪಾದಕ್ಕೆ ನಾಲ್ಕು ಮಾತ್ರೆಗಳ ಮುರು ಗುಣಗಳೂ, ಮುಡಿಯೂ ಇರುವ ರೂಪವೂ ಈ ಛಂದಸ್ಸಿಗಿದೆ. ಉದಾಹರಣೆಗೆ –

ಆಲ್ಯೇ / ರಕ್ಕೆರ್‌ / ಆಲ್ಯೇ / ರ್‌
ನೆರಡಟೊಂಜಿ
/ ಮದ್ಮೆಂ / ದಾಲ್ಯೇ / ರ್‌
ಎಂಕೊರೊ
/ ಡಕ್ಕರೆ / ಎಂಕೊರೊ / ಡು
ಈರ್‌ದೀಪಿ
/ ಬೆಂಡೊಲೆ / ಎಂಕೊರೊ / ಡು

ಬೆಸ ಸಂಖ್ಯೆಯ ಪಾದಗಳಲ್ಲಿ ೪ ಮಾತ್ರೆಗಳ ನಾಲ್ಕು ಗಣಗಳೂ, ಸಮ ಸಂಖ್ಯೆಯ ಪಾದಗಳಲ್ಲಿ ೪ ಮಾತ್ರೆಗಳ ಒಂದು ಗಣ ಮತ್ತು ಮುಡಿಯೂ ಇರುವುದು ಈ ಛಂದಸ್ಸಿನ ಇನ್ನೊಂದು ವಿನ್ಯಾಸ. ಉದಾಹರಣೆಗೆ –

ಮಲ್ಲಾ / ಮಲ್ಲಾ / ಸೌತೇ / ಕಾಯೀ
ಗೋವಿಂ
/ ದಾ
ಮಲ್ಲಾ
/ ಮಲ್ಲಾ / ಕೆಂಬುಡೆ / ಕಾಯಿ
ಗೋವಿಂ
/ ದಾ

೩. ಆರು ಮಾತ್ರೆಗಳ ಛಂದೋರೂಪಗಳು

ವಿನೋದದ ಸಂದರ್ಭದಲ್ಲಿ ಹಾಡುವ ಹಾಡುಗಳೂ ಮದುವೆ ಮುಂತಾದ ಸಾಂಪ್ರದಾಯಿಕ ಶುಭ ಸಂದರ್ಭಗಳಲ್ಲಿ ಹಾಡುವ ಹಾಡುಗಳೂ ಸಾಮಾನ್ಯವಾಗಿ ಆರು ಮಾತ್ರೆಯ ಲಯವನ್ನು ಹೊಂದಿರುತ್ತವೆ. ಇವು ಮೂರು + ಮೂರು ಮಾತ್ರೆಗಳ ಸಂಯುಕ್ತಗಳಲ್ಲ. ಮುರೂ ಗುರುಗಳಿರುವ ಗಣಗಳೇ ಹೆಚ್ಚಾಗಿ ಕಂಡುಬರುತ್ತವೆ. ಗತಿ ನಿಧಾನವಾಗಿದ್ದರೂ ಈ ಛಂದೋರೂಪವನ್ನು ಉತ್ಸಾಹದ ತ್ವರಿತಲಯದಲ್ಲಿ ಹಾಡಲಾಗುತ್ತದೆ. ಉದಾಹರಣೆಗೆ –

ತೇರ್‌ಡೇ / ತೇರೆಡ್ದೇ / ನೋ / ಓ ಬಡಿಯಾ
ವಾವೂರಾ
/ ತೇರೆಡ್ದೇ / ನೋ /
ತೇರ್‌ಡೇ
/ ತೇರೆಡ್ದೇನೋ /
ಮದವೂರಾ / ತೇರೆಡ್ದೇನೋ /
ಗೊಲ್ಲೇರೇನ / ನೂಲುಪತ್ತಿನಿ / ಯೋ / ಓ ಬಡಿಯ
ಸೂಳೆಗುಳೆ
/ ಮೈಮುಟ್ಟಿನಿ / ಯೋ / ಓ ಬಡಿಯ
ತೇರ್‌ಡೇ
/ ತೇರೆಡ್ದೇನೋ /
ತೇರ್‌ಡೇ
/ ತೇರೆಡ್ದೇನೋ /
ಕದ್ರಿದಾ
/ ತೇರೆಡ್ದೇನೋ /
ಉಡುಪೀದಾ
/ ತೇರೆಡ್ದೇನೋ /
ಗೊಲ್ಲೇರೇನ
/ ನೂಲುಪತ್ತಿನಿ / ಯೋ / ಓ ಬಡಿಯ
ಸೂಳೆಗುಳೆ
/ ಮೈಮುಟ್ಟಿನಿ / ಯೋ / ಓ ಬಡಿಯ

ಈ ಕಬಿತೆಯಲ್ಲಿ ‘ಓ ಬಡಿಯಾ, ವಾ ಊರಾ ತೇರೆಡ್ದೇನೋ’ ಎಂಬುದು ಪಲ್ಲವಿ ‘ಯೋ’ ಎಂಬ ಮುಡಿ ಪ್ರತಿ ನಿಲುಗಡೆಯಲ್ಲಿ ಬಂದು ಪಾದಗಳಿಗೆ ಮುಕ್ತಾಯ ಕಲ್ಪಿಸುತ್ತದೆ.

ಪ್ರತಿ ಪಾದಕ್ಕೆ ಆರು ಮಾತ್ರೆಯ ಮೂರು ಗಣಗಳೂ ಮೇಲೊಂದು ಮುಡಿಯೂ ಇರುವುದು ಈ ಛಂದಸ್ಸಿನ ಇನ್ನೊಂದು ಪ್ರಭೇದ. ಇದು ಪಾದಗಳ ಲೆಕ್ಕಾಚಾರವಿಲ್ಲದೆ ಮುಂದುವರಿಯುತ್ತದೆ. ಉದಾಹರಣೆಗೆ –

ಎನಡೊಂಜಿ / ಬಂಗಾರ್ದಾ / ಬೆಂಡೊಲೆಂ / ಡೂ
ಬಂಗಾಡೀ
/ ಪೋನಗಾ / ದೀವೊನೋ / ಡೂ
ಎನಡೊಂಜಿ
/ ಬಂಗಾರ್ದಾ / ಬೆಂಡೊಲೆಂ / ಡೂ
ಬಂಗಾಡೀ
/ ಪೋನಗಾ / ದೀವೊನೋ / ಡೂ
ಸೇಕೆಸೇಕ್‌
/ ಬಡೆಕ್ಕಾಯಿ / ಜಾಯಿನಮರ / ಕೊಚ್ಚಿನರೇ
ಸೇಕೆಸೇಕ್‌
/ ಬಡೆಕ್ಕಾಯಿ / ತೆಕ್ಕಿದಮರ / ಕೊಚ್ಚಿನರೇ
ಸೇಕೆಸೇಕ್‌
/ ಬಡೆಕ್ಕಾಯಿ / ಪೆಲತ್ತ ಮರ / ಕೊಚ್ಚಿನರೇ
ಸೇಕೆಸೇಕ್‌
/ ಬಡೆಕ್ಕಾಯಿ / ತೇರದ ಮರ / ಕೊಚ್ಚಿನರೇ

ಪಾಡ್ದನಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಆರು ಮಾತ್ರಗಣಗಳ ಛಂದಸ್ಸಿನ ಬೆಸ ಸಂಖ್ಯೆಯ ಪಾದಕ್ಕೆ ನಾಲ್ಕು ಗಣಗಳೂ ಸಮ ಸಂಖ್ಯೆಯ ಪಾದಕ್ಕೆ ಮೂರು ಗಣಗಳೂ ಮೇಲೊಂದು ಮುಡಿಯೂ ಇರುತ್ತದೆ. ಉದಾಹರಣೆಗೆ –

ಬೊಗಳ್ಳರಾ / ಗುತ್ತುಡೂ / ಬಾರೊಂದೂ / ತುಲ್ಲೇರ್‌
ಬೆಳ್ಳೂರಾ
/ ಕೊಟ್ಟಾರೀಂ / ದುಲ್ಲೇರ್‌ /
ಕುತ್ತಿಗೆ
/ ರಿಪ್ಪಾಯೆರ್‌ / ಪೊಸಾಲ್‌ / ದೆಪ್ಪಾಯೆರ್‌
ಪೂಬಿತ್ತ್‌
/ ಬಿತ್ತಾಯೆರ್‌ / ಕೊಟ್ಟಾರೀ /

ಓಬೇಲೆಯಲ್ಲಿ ಆರು ಮಾತ್ರೆಯ ಎರಡು ಗಣಗಳಿದ್ದು ಪಾದಸಂಖ್ಯಾ ಮಿತಿಯಿಲ್ಲದ ಪ್ರಭೇದವಿದೆ. ಉದಾಹರಣೆಗೆ-

ನಮ್ಮಾಂಡ / ಉಳ್ಳಾಯೇ
ಪೋತೂಗೇ
/ ಅವೂಳು
ಅಜೀಮೂ
/ ಡಿತ್ತಾಡೇ
ದರ್ಬೆಪೀ
/ ರಪ್ಪಾತೆರ್‌
ಮೂಜೀಮೂ
/ ಡಿತ್ತಾಡೆಕ್‌

ಇದರಲ್ಲಿ ಮೂರು ಪಾದಗಳ ಸಂಖ್ಯಾಮಿತಿಯ ಪದಗಳ್ಳುಳ್ಳ ಪ್ರಭೇದವಿದೆ.

ಪೋಯಾಜೇ / ಪೋಯಾಜೇ
ಕಾವೇರೀ
/ ಅಮಾಸೇ
ತೀರ್ಥೋಗು
/ ಪೋಯಾಜೇ
ಮುತ್ತುಕಾರ
/ ಉಂಗೀಲೊಡು
ಒರೊಪಿದೋ
/ ವಾಳ್‌ಪೊಣ್ಣು
ರಾಮಸ್ವಾಮಿ
/ ಮಗಳಾಳೇ

ಆರು ಮಾತ್ರೆಗಳ ಎರಡು ಗಣಗಳುಳ್ಳ ಪಾದಸಂಖ್ಯಾ ಮಿತಿಯಿಲ್ಲದ ಛಂದಸ್ಸು ತುಳುವಿಗೆ ಹೆಚ್ಚು ಸಹಜವೂ, ವ್ಯಾಪಕವೂ ಆದದ್ದು ಕಂಡುಬರುತ್ತದೆ. ಸಾಮಾನ್ಯವಾಗಿ ಒಂದು ಗಣದಲ್ಲಿ ಮೂರು ಗುರುಗಳಿದ್ದು ವಿಷ್ಣುಗಣದ ಲಕ್ಷಣವನ್ನು ಹೊಂದಿರುತ್ತದೆ. ನಡುನಡುವೆ ಎರಡು ಗುರು, ಎರಡು ಲಘುಗಳಿರುವ ಗಣಗಳನ್ನೂ ಕಾಣಬಹುದು. ಆರಂಭದಲ್ಲಿ ಲಘುಗಳಿದ್ದರೆ ಅದು ವಿಷ್ಣುಗಣವಾಗುತ್ತದೆ. ಆರಂಭದಲ್ಲಿ ಗುರುವಿದ್ದರೆ ಬ್ರಹ್ಮಗಣವಾಗುತ್ತದೆ.[2]

ಆರು ಮಾತ್ರೆಯ ಗುಣವುಳ್ಳ ಛಂದಸ್ಸಿಗೆ ಅನಿಯತವಾಗಿ ಬರುವ ಮೂರು ಪಾದಗಳ ರೂಪವೂ ಉಂಟು. ಮೊದಲೆರಡು ಪಾದಗಳು ಆರು ಮಾತ್ರೆಯ ಎರಡೆರಡು ಗಣಗಳಿಂದಲೂ, ಮೂರನೇ ಪಾದವು ಆರು ಮಾತ್ರೆಯ ಮೂರು ಗಣಗಳಿಂದಲೂ ಕೂಡಿರುವುದು ಇದರ ಲಕ್ಷಣ. ಉದಾಹರಣೆಗೆ-

ಏರಪ್ಪೇ / ಇಲ್ಲಾಲ್‌ /
ಯಾನತ್ತೋ
/ ಪಂಡಾಳ್‌
ಬೆಲ್ಲೋಲಾ
/ ಪೋಡಿಲಾ / ಬೋಡಾದೇ
ಬೋಡ್ಯೇರಂಚ
/ ಬೋಡಾಂಡೇ
ಕೊರ್ಯೆರ ದಾಲ
/ ಇಜ್ಜಾಂಡೇ
ಬೆಲ್ಲೊಲಾ
/ ಪೋಡಿಲಾ / ಕೊರೊಂಡೇಯೇಏ

ಉರಳಿನಲ್ಲೂ ಆರು ಮಾತ್ರೆಯ ಗಣಘಟನೆಯಿದೆ.

ಎಂಕುಳೇ / ಉಳ್ಳಾಯೇ
ಊರುಗಾಪಿ
/ ಬಾರ್ಯೆಗೇ
ಆಯಿಗೊಂಜಿ
/ ಕಾಣಿಕೇ
ಪೊಟ್ಟುತಾರ
/ ಗೇ

ಪ್ರತಿಪಾದಕ್ಕೆ ಆರುಮಾತ್ರೆಯ ಮೂರು ಗಣಗಳಿದ್ದು ಮೇಲೆ ಮುಡಿ ಬರುವ ಪ್ರಭೇದವಿದೆ. ಉದಾಹರಣೆಗೆ –

ಟ್ರುವೇಲೇ / ಚಾಲೇ / ಚಾಲೆಪೊಲೀ / ಯೆ || ಪಲ್ಲವಿ ||
ಮಾಮೇರಿ / ಮಾಮಲ್ಲಾ / ಪರ್ವಾತೋ / ಡೂ
ಓವ ಕೂಡಾ
/ ನನೋಲಾ / ಉದ್ಯೋನೇ / ದೇ
ಮಾಮಲ್ಲಾ
/ ಅರಮಾನ್ಯಾ / ಉದ್ಯೋನೇ / ದೇ

ಬೆಸ ಸಂಖ್ಯೆಯ ಪಾದಗಳಲ್ಲಿ ೬ ಮಾತ್ರೆಯ ೪ ಗಣಗಳೂ ಸಮಸಂಖ್ಯೆಯ ಪಾದಗಳಲ್ಲಿ ೬ ಮಾತ್ರೆಯ ೩ ಗಣಗಳೂ, ಮುಡಿಯೂ ಇರುವ ಪ್ರಭೇದವಿದೆ. ಉದಾಹರಣೆಗೆ –

ಎಲ್ಯಾಲ್‌/ ಎಲ್ಯಬಾಲೇ / ತೇಲಿಕೇದಾ / ಮೋನೆದಾಳೇ
ಎಲ್ಯಲೇಗ್‌
/ ಎಲ್ಯಬಾಲೆಗ್‌ / ಏಳ್‌ ಜನೋ / ಪಲಯಲೂ /
ಏಳೊರಣ
/ ಉಂಗೀಲಾ / ಪಾಡಿಯೇರ್‌ / ಯಾ
ಎಲ್ಯಲೇಗ್‌
/ ಎಲ್ಯಬಾಲೆಗ್‌ / ಏಳ್‌ಜನೋ / ಪಲಯಲೂ /
ಏಳರೊಣ
/ ಕಾಜೀನ್‌ / ಪಾಡಿಯೇರ್‌ / ಯಾ

ಮುಡಿವು ಇಲ್ಲದೆ, ಪಾದಕ್ಕೆ ಆರುಮಾತ್ರೆಯ ನಾಲ್ಕುಗಣಗಳಿರುವ ಪಾದಸಂಖ್ಯಾ ಮಿತಿಯಲ್ಲದೆ ಬೆಳೆಯುವ ಪ್ರಭೇದವಿದೆ.

೪. ಏಳು ಮಾತ್ರೆಗಳ ಛಂದೋರೂಪಗಳು

ಕನ್ನಡ ಮಾತ್ರಾ ಛಂದಸ್ಸಿನಲ್ಲಿ ೩+೪ರ ಸಂಯುಕ್ತಗಳೆಂದು ಗುರುತಿಸಲಾದ ಏಳು ಮಾತ್ರೆಗಳ ಗಣಗಳು ತುಳುವಿನಲ್ಲಿ ೩+೪ರ ವಿನ್ಯಾಸಕ್ಕೆ ಸಿಗದೆ ಇರುವುದು ಗಮನಾರ್ಹ. ಸಾಮಾನ್ಯವಾಗಿ ೬+೧ರ ರೂಪದಲ್ಲಿ ಇರುವ ಇವು ನಿಧಾನಗತಿಯಿಂದ ಕೂಡಿದ್ದು ಗುರುಗಳ ಬಾಹುಳ್ಯ ಹೊಂದಿವೆ. ಒಂದಿಲ್ಲೊಂದು ವಿಧದಲ್ಲಿ ಎರಡು ಪಾದಗಳ ದ್ವಿಪದಿ ರೂಪಗಳನ್ನು ಪಡೆಯುವ ವಿನ್ಯಾಸ ಸಾಮಾನ್ಯವಾಗಿ ಕಂಡುಬರುತ್ತದೆ. ಕಬಿತೆಗಳಲ್ಲಿ ಈ ಛಂದೋರೂಪ ಹೆಚ್ಚಾಗಿ ಬಳಸಲ್ಪಟ್ಟಿದೆ. ಉದಾಹರಣೆಗೆ –

ಡಿಂಬೀ ಸಾಲೆ / ಮಗಳೇ ಆಳ್‌
ದಾನೇ ಮಾ
/ ರುಂಡಾಳೋ
ಡಿಂಬೀ ಸಾಲೆ
/ ಮಗಳೇ ಆಳ್‌
ಕೆಬಿತಾಬೆಂಡೆ
/ ಮಾರುಂಡಾಳೊ
ಡಿಂಬೀ ಸಾಲೆ
/ ಮಗಳೇ ಆಳ್‌
ಸೊಂಟೊದ ಪಟ್ಟಿ
/ ಮಾರುಂಡಾಳೊ
ಡಿಂಬೀ ಸಾಲೆ
/ ಮಗಳೇ ಆಳ್‌
ಕೈತ್ತಕಾಜಿ
/ ಮಾರುಂಡಾಳೊ

ಪ್ರತಿ ಬೆಸ ಸಂಖ್ಯೆಯ ಪಾದಕ್ಕೆ ಏಳುಮಾತ್ರೆಯ ಎರಡು ಗಣಗಳೂ, ಸಮಸಂಖ್ಯೆಯ ಪಾದಕ್ಕೆ ಒಂದು ಗಣವೂ, ಮೇಲೊಂದು ಗುರು ಅಥವಾ ಮುಡಿಯೂ ಇರುವುದು ಇದರ ಇನ್ನೊಂದು ಪ್ರಭೇದ. ಉದಾಹರಣೆಗೆ –

ಕರಿಯ ಪಕ್ಕಿದ / ಕಾರೀಕೊಂಡ್ರ /
ಪೋತೇರಂಜೊ
/ ವೂ
ದೊಂಬರಪ್ಪಾ
/ ಗಾಳೀ ಬೀಜ / ಬರುವೆರಂಜೋ / ವೂ
ಕರಿಯ ಪಕ್ಕಿದ
/ ಮುಂಕುತಿ ಕೊಂಡ್ರ /
ಪೋತೇರಂಜೊ
/ ವೂ
ದೊಂಬರಪ್ಪಾ
/ ಗಾಳೀ ಬೀಜ /
ಬರುವೆರಂಜೋ
/ ವೂ

ಏಳುಮಾತ್ರೆಗಳ ಗಣದ ಮುಂದೆ ಆರು ಮಾತ್ರೆಗಳ ಗಣವುಳ್ಳ ಛಂದಸ್ಸೊಂದಿದೆ. ಇಂತಹ ಪ್ರಭೇದ ವಿರಳ. ಉದಾಹರಣೆಗೆ

ಮಾಲ್‌ಂಡೆ ಮರ / ಮಾಲ್‌ಂಡೇ
ದಾಯ್ತೆನ ಮರ
/ ಮಾಲ್‌ಂಡೇ
ಮಾಲ್‌ಂಡೆ ಮರ
/ ಮಾಲ್‌ಂಡೇ
ಚಿಕ್ಕೀದ ಮರ
/ ಮಾಲ್‌ಂಡೇ
ಮಾಲ್‌ಂಡೆ ಮರ
/ ಮಾಲ್‌ಂಡೇ
ತಾರೇದ ಮರ
/ ಮಾಲ್‌ಂಡೇ

೫. ಎಂಟು ಮಾತ್ರೆಗಳ ಛಂದೋರೂಪಗಳು

ಎಂಟು ಮಾತ್ರೆಗಳ ಗಣಗಳುಳ್ಳ ಛಂದಸ್ಸು ಕಬಿತೆಗಳಲ್ಲೂ, ಪಾಡ್ದನಗಳಲ್ಲೂ ಕಂಡುಬರುತ್ತದೆ. ಇದಕ್ಕೆ ಬೇರೆ ಬೇರೆ ರೂಪಗಳಿವೆ. ಒಂದೊಂದು ರೂಪವೂ ವಿಭಿನ್ನ ಲಯವನ್ನು ಹೊಂದಿದ್ದು ಅನನ್ಯವಾಗಿದೆ.

ಪಾದದಲ್ಲಿ ನಾಲ್ಕು ಗಣಗಳಿದ್ದು ಪ್ರತಿಪಾದದ ಮುಂದೆ ಮೊದಲ ಪಾದವನ್ನು ಪಲ್ಲವಿಯಾಗಿ ಆವರ್ತಿಸುವ ರೂಪ ಗುರು ಅಕ್ಷರಗಳ ಬಾಹುಳ್ಯ ಹೊಂದಿದ್ದು ನಿಧಾನಗತಿಯಲ್ಲಿದೆ. ಉದಾಹರಣೆಗೆ –

ರಾವೋ / ರಾವುಕೊರಂಗೂ / ರಾವಂತೇನ್‌ / ದಾನ್‌ಪೇ
ಕುಂಟುಸುತ್ತ್‌
/ ಸುತ್ತ್‌ಕೊರಂಗೂ / ಸುತ್ತಂತೇನ್‌ / ದಾನ್‌ಪೇ
ರವಕೆ ಪಾಡ್‌
/ ಪಾಡ್‌ಕೊರಂಗೂ / ಪಾಡಂತೇನ್‌ / ದಾನ್‌ಪೇ
ಪೂವು ಮುಡಿಪ್ಪೂ
/ ಮುಡಿಪು ಕೊರಂಗೂ / ಮುಡಿಪಂದೇನ್‌ / ದಾನ್‌ಪೇ

ಇದರ ನಾಲ್ಕನೇ ಗಣ ಅಪೂರ್ಣಗಣವಾಗಿದ್ದು ಪಾದದ ಮುಕ್ತಾಯವನ್ನು ಸೂಚಿಸುತ್ತದೆ.

ತುಸು ತ್ವರಿತ ಗತಿಯ, ಎರಡೆರಡು ಗಣಗಳ ಎರಡು ಪಾದಗಳಿಗೊಮ್ಮೆ ಪಲ್ಲವಿ ಆವರ್ತನೆಯಾಗುವ ಇನ್ನೊಂದು ರೂಪ ಎಂಟು ಮಾತ್ರೆಗಳ ಛಂದಸ್ಸಿಗಿದೆ.

ರಾಮಸ್ವಾಮೀ / ಪಕ್ಕಿಕುಳೂ
ದಾಯಿತೇನ
/ ಪೂವುಟು ಕುಳ್ಯೋ
ಚೀಪೇ ಆರಿತೊಯೆ
/ ಪಕ್ಕಿಕುಳೂ
ಕೆಂಬುಡೇತ
/ ಪೂವುಟು ಕುಳ್ಯೋ
ಚೀಪೇ ಅರಿತೊಯೆ
/ ಪಕ್ಕಿಕುಳೂ

ತ್ವರಿತ ಗತಿಯ ಪಲ್ಲವಿಯ ಆವರ್ತನೆಯಿಲ್ಲದ ರೂಪ ದ್ವಿಪದಿ ರೂಪದಲ್ಲಿದೆ. ಉದಾಹರಣೆಗೆ –

ನಾಲೇ ಎರೂ/ ಮಾದವೇರೇ
ಉಳ್ಳಯ ಪನೋರ
/ ಇಜ್ಜಾಂಡೇ
ಪಾವೋಲೆ ಪತ್ತೊಡೆ
/ ಉಳ್ಳಾಯ
ಪತ್ತೊಂಜೀ
/ ಇಜ್ಜಾಂಡೇ
ನಾಲೆ ಎರೂ
/ ಮಾದವೋ ಉಳ್ಳಾಯ
ಪತ್ತೊಂಜೀ
/ ಇಜ್ಜಾಂಡೇ

ನಿಧಾನಗತಿಯುಳ್ಳ ಪಾದಕ್ಕೆ ಒಂದೇ ಗಣವಿರುವ, ಪದ್ಮಗಣ ರೂಪದ ಪಲ್ಲವಿಯುಳ್ಳ ರೂಪವೊಂದಿದೆ. ಪದ್ಮಗಣದ ಅನಂತರ ಎರಡು ಮಾತ್ರೆಗಳ ಮೌನವಿದ್ದು ಆಮೇಲೆ ಎರಡನೇ ಪಾದ ಆರಂಭವಾಗುತ್ತದೆ. ಉದಾಹರಣೆಗೆ –

ಲೇಲೆಬುಡಾದೇ / ಆಲೇಲೇ
ಲೇಲೆತಕಯ್ಯೀ
/ ಆಲೇಲೇ
ಲೆಂಚಬರೊಡೂ
/ ಆಲೇಲೇ
ನೀರಮೇಲ್‌ಟ್‌
/ ಆಲೇಲೇ
ಕುಂಕುಮದೇಯಿ
/ ಆಲೇಲೇ
ಬುತ್ತೀನ ಲೆಕ್ಕೋ
/ ಆಲೇಲೇ

ಇದೇ ಛಂದಸ್ಸು ೮+೭ ಮಾತ್ರಾಗಣ ರೂಪದಲ್ಲಿ, ಪ್ರತೀ ಪಾದದ ಮುಂದೆ ಪಲ್ಲವಿ ಆವರ್ತನೆಯಾಗುವಂತೆ ರೂಪುಗೊಳ್ಳುವುದಿದೆ. ೬ ಮಾತ್ರೆಯ ಗಣ ಪದ್ಮಗಣವಾಗಿದ್ದು ಅದರ ಮುಂದೆ ಒಂದು ಮಾತ್ರೆಯ ಮೌನವಿರುತ್ತದೆ. ಉದಾಹರಣೆಗೆ –

ಗೋವಿಂದ / ಬದನೇ
ಬದನೇ ಓಳೂ
/ ಉಂಡೂಯಾ
ಕುಡ್ಲಾ ಪೇಂಟೆದ
/ ಬದನೆ ಅತ್ತೊ
ಆತೆನ ಪೊರ್ತುಡೆ
/ ಪನ್ಪೇರತ್ತೊ
ಜನೊಕ್ಕುಳೆನ್‌ನ
/ ಲೆತ್ತೇರತ್ತೊ
ಕುಡ್ಲಾ ಪೇಂಟೆದ
/ ಬಾಯಿ ಅತ್ತೊ

ಮೇಲಿನ ಎಲ್ಲಾ ಉದಾಹರಣೆಗಳೂ ೮ ಮಾತ್ರೆಯ ಗಣ ವಿನ್ಯಾಸದ ವಿಭಿನ್ನ ಲಯಗಾರಿಕೆಯನ್ನು ಹೊಂದಿವೆ. ಸಾಮಾನ್ಯವಾಗಿ ಕಬಿತೆಗಳಲ್ಲಿ ಕಾಣಿಸುವ ಎಂಟು ಮಾತ್ರೆಯ ಗಣಗಳು ನಾಲ್ಕು ಮಾತ್ರೆಯ ಎರಡು ಗಣಗಳ ಸಂಯುಕ್ತ ರಚನೆಗಳಲ್ಲ. ಹಾಡುವ ಲಯ ಮತ್ತು ಅರ್ಥದ ಘಟಕಗಳು ಇದನ್ನು ನಿರ್ದರಿಸುತ್ತವೆ. ಉದಾಹರಣೆಗೆ –

ಏದಾ ಬಲಮಗ / ದೂಜಿಕಮ್ಮ್ಯೆರಾ
ವಾಪೆತ್ತಾದ
/ ಮಗೆನೋ ಆಯೇ
ದೂಜಿಕೆಮ್ಮೈರಾ
ಕಬುಲ್ದಿ ಪೆತ್ತದ
/ ಮಗೆನೋ ಆಯೆ
ದೂಜಿಕೆಮ್ಮ್ಯೆರಾ

ಇಲ್ಲಿ ‘ವಾಪೆ / ತ್ತದಾ’ ಎಂದು ವಿಂಗಡಿಸಿ ನಾಲ್ಕು ಮಾತ್ರೆಯ ಎರಡು ಗಣಗಳನ್ನು ರೂಪಸಿವುದು ತೀರಾ ಅಸಹಜವೆನಿಸುತ್ತದೆ. ಅರ್ಥ ಹಾಗೂ ಲಯದ ದೃಷ್ಟಿಯಲ್ಲಿ ಕೃತಕವಾಗುತ್ತದೆ.

ಲಘು ಬಾಹುಳ್ವುಳ್ಳ ತ್ವರಿತಗತಿಯ ೮ ಮಾತ್ರಾಗಣಗಳ ಛಂದಸಿನ ಪ್ರಬೇಧವೊಂದಿದೆ. ಇದರಲ್ಲಿ ಪಾದ ಸಂಖ್ಯಾ ಮಿತಿಯಿಲ್ಲ. ಪ್ರತಿ ಪಾದಕ್ಕೆ ಎಂಟು ಮಾತ್ರೆಯ ಮೂರುಗಣಳೂ ಮೇಲೊಂದು ಪದ್ಮಗಣವೂ ಇರುತ್ತದೆ. ಉದಾಹರಣೆಗೆ –

ಸತ್ಯಾನಂಗಡಿ / ದೇಲಗುಡೂ / ದುಂಬಾಂಡಣ್ನೆರೆ / ಪಿರವಾಂಡಾ
ಬೆಲ್ಲೋತಂಗಡಿ / ದೇಲಗುಡೂ / ದುಂಬಾಂಡಣ್ಣೆರೆ / ಪಿರವಾಂಡಾ
ಸಕ್ಕರೆತಂಗಡಿ / ದೇಲಗುಡೂ / ದುಂಬಾಂಡಣ್ಣೆರೆ / ಪಿರವಾಂಡಾ
ಚಾತಪೊಡಿತಂಗಡಿ / ದೇಲಗುಡೂ / ದುಂಬಾಂಡಣ್ಣೆರೆ / ಪಿರವಾಂಡಾ

೬. ಹತ್ತು ಮಾತ್ರೆಗಳ ಛಂದೋಪಗಳು

ಹತ್ತು ಮಾತ್ರೆಗಳ ಗಣಗಳೂ ಐದು ಮಾತ್ರೆಗಳ ಗಣ ಸಂಯುಕ್ತಗಳಲ್ಲ, ಸ್ವತಂತ್ರಗಣಗಳು. ತುಳುವಿನಲ್ಲಿ ಕಾಣಬರುವ ಅತೀ ದೊಡ್ಡ ಗಣಗಳು. ಐದು ಮಾತ್ರೆಗಳ ಛಂದೋರೂಪಗಳು ತುಳುವಿನಲ್ಲಿ ತೀರಾ ವಿರಳ. ಆದರೆ ಹತ್ತು ಮಾತ್ರೆಗಳ ಛಂದೋರೂಪಗಳು ಆತ್ಯಧಿಕ ಸಂಖ್ಯೆಯಲ್ಲಿದೆ. ಹೆಚ್ಚಿನ ಪಾಡ್ದನಗಳೂ ಹತ್ತು ಮಾತ್ರೆಗಳ ತಾಳ ಘಟನೆಯನ್ನು ಅನುಸರಿಸುತ್ತವೆ.

ಹತ್ತು ಮಾತ್ರೆಗಳ ಗಣಗಳುಳ್ಳ ಕಬಿತೆಗಳು ಸಾಮಾನ್ಯವಾಗಿ ದುಡಿಮೆಗೆ ಸಂಬಂಧಿಸಿವೆ. ಉದಾಹರಣೆಗೆ –

ಕಯಿತೊಂತೆ ದುಂಬೂ -ಓಬೇಲೇs
ಕಾರೊಂತೆ ಪಿರವೂ – ಓಬೇಲೇs
ಮೂಲೋತಾ ದಿsಕೇ -ಓಬೇಲೇs
ಕಣ್ಣೂರs ಜನೊನ್‌ಓಬೇಲೇ

ಇಲ್ಲಿನ ಪಲ್ಲವಿ ಅಪೂರ್ಣಗಣವಾಗಿದ್ದು ನಾಲ್ಕು ಮಾತ್ರೆಗಳ ಮೌನವನ್ನು ಬೇಡುತ್ತದೆ. ಪಲವಿಯ ಮುಂದೆ ನಾಲ್ಕು ಮಾತ್ರೆಗಳ ಮೌನವಿದ್ದರೂ, ಅದನ್ನು ನಿರ್ಲಕ್ಷಿಸಿ, ತಕ್ಷಣ ಮುಂದಿನ ಪಾದವನ್ನೆತ್ತಿ ಹಾಡುವುದು ಪದ್ಧತಿ. ಅಥವಾ ಪಲ್ಲವಿಯನ್ನೇ ಹತ್ತು ಅಥವಾ ಒಂಬತ್ತು ಮಾತ್ರೆಗಳಿಗೆ ವಿಸ್ತರಿಸಿ ಹಾಡಲಾಗುತ್ತದೆ.

ಪ್ರತಿ ಪಾದಕ್ಕೆ ಹತ್ತು ಮಾತ್ರೆಗಳ ಎರಡು ಗಣಗಳಿದ್ದು ತ್ವರಿತಗತಿಯಲ್ಲಿ ಸಾಗುವ ಈ ಛಂದಸ್ಸಿನ ಪ್ರಭೇದವೊಂದಿದೆ. ಉದಾಹರಣೆಗೆ –

ಈರ್‌ ಪೋಪರಾ / ಪೋಪಾರಾಂಜೊವೇ
ಎಂಕ್‌ಲೇರುಡೂ / ಏರುಂಡಂಜೋವೇ
ನಮ್ಮನೆ ಒಕ್ಕೆಲ್‌ಡ್‌ / ಬಿರುವೇದಿ ಪೊಣ್ಣುಂಡು
ಅಲೇನ್‌ ಲೆತೊನೂಲ / ಸುಣ್ಣಾದಮಾಕುಟೇ
ಅಲ್‌ ‍ಪಿsದsಯೀ / ಯಾನ್‌ ಉsಲಾಯಿ

೭. ಹನ್ನೆರಡು ಮಾತ್ರೆಗಳ ಛಂದೋಪಗಳು

ಒಂದು ತಾಳದ ಆವರ್ತನೆಯ ಆಧಾರದಲ್ಲಿ ಹನ್ನೆರಡು ಮಾತ್ರೆಗಳ ಗಣವನ್ನು ಗುರುತಿಸಬಹುದಾಗಿದೆ. ಸಾಮಾನ್ಯವಾಗಿ ಪಾಡ್ದನಗಳಲ್ಲಿ ಕಂಡುಬರುವ ಈ ತಾಳ ಪದ್ಯಪಾದಕ್ಕೆ ಗಂಭೀರ ನಡೆಯನ್ನು ಒದಗಿಸುತ್ತದೆ. ಉದಾಹರಣೆಗೆ –

ಸಾರಗುಂಡೊ ದೇವೇರ್‌ / ಸಾರತೊಂಜಿ ಆಸ್ರೇರ್‌
ಪೆರಜೇಯಿನ ಲೆಕ್ಕೋಟು / ಕಾಡ್ಕೆರೋsಯೇs
ಅರಸೂನ ಕಾಲೋಕೂ / ಬಾಸೆ ಬಳ್ಮನೊ ಪಣ್ಣುವs
ಮಾಸಡೀ ಬಲವುಳ್ಳೋ / ಬರಟೇರ್‌sಯೇ

ಇಲ್ಲಿ ಮೊದಲ ಪಾದ ಎರಡು ಹನ್ನೆರಡು ಮಾತ್ರೆಗಳ ಗಣಗಳಿಂದಲೂ ಎರಡನೇ ಪಾದ ಒಂದು ಹನ್ನೆರಡು ಮಾತ್ರೆಗಳ ಗಣ ಹಾಗೂ ಒಂದು ಅಪೂರ್ವ ಗಣದಿಂದಲೂ ಕೂಡಿದೆ. ಇದು ಸಾಮಾನ್ಯ ರೂಪ. ಪ್ರತಿ ಪಾದಕ್ಕೂ ಒಂದು ಹನ್ನೆರಡು ಮಾತ್ರೆಗಳ ಗಣ ಹಾಗೂ ಒಂದು ಅಪೂರ್ವಗಣವಿರುವ ರೂಪವೂ ಇದೆ. ಉದಾಹರಣೆಗೆ –

ಟ್ರೂವೇಲೆ ಬಾಲೇs / ಬಾಲೆಪೊಲೀಯೇ
ಮಿತ್ತೊಂಜೀಮಿರಿಲೋಕೋ / ಡುಳ್ಳೇರಡೋ
ತಿರ್ತ್ತೊಂಜೀಸಿರಿಲೋಕೋ / ಡುಳ್ಳೇರಡೋ
ನಾನಾಂಡs ಈಸ್ವರೇs / ಲೋಕೋಗೇಈಸ್ವರೇ

ಈ ಎಲ್ಲಾ ಛಂದೋ ಮಾದರಿಗಳಲ್ಲೂ ಬೇರೆ ಬೇರೆ ಗಣ ವಿನ್ಯಾಸಗಳ ಒಳಪ್ರಬೇಧಗಳನ್ನು ಗುರುತಿಸಬಹುದು. ಸ್ವರಾಘಾತದ ಹಿನ್ನೆಲೆಯಲ್ಲಿ ಪಾಡ್ದನಗಳ ಛಂದೋವಿನ್ಯಾಸವನ್ನೂ ಗುರುತಿಸಬಹುದು. ಇಲ್ಲಿ ಗಮನಿಸಬೇಕಾದ ಅಂಶ- ಈ ಎಲ್ಲಾ ಜಾನಪದ ಛಂದೋ ಮಾದರಿಗಳನ್ನು ತಾರಸ್ಥಾಯಿಯಲ್ಲಿ ಹಾಡಲಾಗುತ್ತದೆ. ಪಾಡ್ದನಗಳಲ್ಲಿ ಭಾವತೀವ್ರತೆಯೂ ಆವೇಶವೂ ಇರುತ್ತದೆ. ಹಾಡುವ ಸಂದರ್ಭ, ಅರ್ಥ, ಸ್ವರಾಘಾತ, ಛಂದಸ್ಸು -ಇತ್ಯಾದಿಗಳ ನಿಕಟ ಸಂಬಂಧ ಹೊಂದಿರುತ್ತದೆ

ಆಧುನಿಕ ತುಳು ಕಾವ್ಯ ಆಧುನಿಕ ಕನ್ನಡ ಕಾವ್ಯದ ಮುಂದುವರಿಕೆಯೇ ಆಗಿರುವುದರಿಂದ ಅದಕ್ಕೆ ಪ್ರತ್ಯೇಕ ಅಸ್ತಿತ್ವವನ್ನು ಕಲ್ಪಿಸಬೇಕಾಗಿಲ್ಲ. ಯಕ್ಷಗಾನ ಛಂದಸ್ಸೂ ಕೂಡ ಹಾಗೆಯೇ.

 

[1] ತುಳು ಛಂದಸ್ಸಿಗೆ ಕನ್ನಡ ಅಂಶಗಣ ಲಕ್ಷಣವನ್ನು ಅನ್ವಯಿಸುವಾಗ ಪ್ರತಿ ಅಂಶಗಣವೂ ತನ್ನ ಅತ್ಯಧಿಕ ಮಾತ್ರಾ ಮೌಲ್ಯವನ್ನೇ ಪ್ರರ್ಶಿಸುತ್ತದೆ. ಕನ್ನಡದಲ್ಲೂ ಈ ಪ್ರಕ್ರಿಯೆಯನ್ನು ಕಾಣಬಹುದು. ಜನಪದ ಕಾವ್ಯಗಳಲ್ಲಿ ಭಾಷಾಭೇದವಿಲ್ಲದೆ ಗುರುಗಳೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಅವು ಅಂಶಗಳ ಸಂಖ್ಯೆಯ ಎರಡು ಪಟ್ಟು ಮಾತ್ರಾ ಸಂಖ್ಯೆಯನ್ನು ಹೊಂದಿರುತ್ತದೆ. ಹೀಗಾಗಿ ಬ್ರಹ್ಮಗಣವೆಂದರೆ ನಾಲ್ಕು ಮಾತ್ರೆ, ವಿಷ್ಣು ಗಣವೆಂದರೆ ಆರುಮಾತ್ರೆ, ರುದ್ರಗಣವೆಂದರೆ ಏಳು ಅಥವಾ ಎಂಟು ಮಾತ್ರೆಗಳೆಂದು ಸಾಧಿತವಾಗಿ, ತನಗೆ ತಾನೇ ಅಂಶಗಣಗಳು ಮಾತ್ರಾಗಣಗಳಾಗಿ ಪರಿವರ್ತಿಸಲ್ಪಡುವ ಪ್ರಕ್ರಿಯೆ ತುಳುವಿನಲ್ಲಿ ಕಂಡುಬರುತ್ತವೆ.

[2] ಕನ್ನಡ ಜನಪದಗೀತೆಗಳಲ್ಲೂ ಇಂತಹ ಗಣಗಳೇ ಸಾಮಾನ್ಯವಾಗಿ ಕಂಡುಬರುತ್ತವೆ. ಹಾಡುವಾಗಿನ ಅಕ್ಷರಗಳ ಸ್ಥಿತಿಸ್ಥಾಪಕ ಗುಣವನ್ನನುಸರಿಸಿ ಗಮನಿಸುವಾಗ ಒಂದೊಂದು ವಿಷ್ಣುಗಣವೂ ಆರುಮಾತ್ರೆಗಳ ಕಾಲಮಿತಿಯನ್ನು ಹೊಂದಿರುವುದು ಕಂಡುಬರುತ್ತದೆ. ಉದಾಹರಣೆಗೆ –

ಮುಂಗೋಳೀ / ಕೂಗ್ಯಾವೂ / ಮೂಡೂ ಕೆಂ / ಪೇರ್ಯಾವು

ಸ್ವಾಮೀನ / ನ್ನಯ್ಯಾs / ರಥವೇರೀ

ಸ್ವಾಮೀನ / ನ್ನಯ್ಯಾs / ರಥವೇರೀ / ಬರುವಾಗಾ

ನಾವೆದ್ದೂ / ಕೈಯ್ಯಾs / ಮೊಗಿದೇವೂ /