ತುಳು ಭಾಷೆ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಸಮೃದ್ಧವಾದ ಹಾಗೂ ವಿಕಸಿತವಾದ ಭಾಷೆ. ಅದಕ್ಕೆ ಎರಡು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ. ತುಳು ಭಾಷೆಗೆ ಕನ್ನಡ ಲಿಪಿ ಬಳಸುವ ರೂಢಿಯಿದೆ. ಆ ಭಾಷೆಯಲ್ಲಿ ವಿಪುಲ ಜನಪದ ಸಾಹಿತ್ಯವೂ ಲಭ್ಯವಿದೆ. ‘ಪಾಡ್ದನ’ಗಳೆಂಬ ಹಾಡಗಬ್ಬಗಳನ್ನು ಹೇರಳವಾಗಿ ಹಾಡುವ ತುಳು ಭಾಷೆಯಲ್ಲಿ ಮಂಗಳೂರು, ಪುತ್ತೂರು, ಉಡುಪಿ ಹಾಗೂ ಕಾಸರಗೋಡು ಇಲ್ಲಿ ತುಳು ಎಂಬ ಪ್ರಾದೇಶಿಕ ಭಾಷೆಗೆ ಬ್ರಾಹ್ಮಣ – ಬ್ರಾಹ್ಮಣೇತರ ತುಳು ಎಂದು ಸಾಮಾಜಿಕ ಉಪಭಾಷೆಗಳ ತುಳುನಾಡಿನಲ್ಲಿವೆ.

ಸುಮಾರು ನೂರು ಐವತ್ತು ವರ್ಷಗಳ ಹಿಂದೆ ಧರ್ಮ ಪ್ರಸಾರವನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ತುಳುನಾಡಿಗೆ (ಭಾರತಕ್ಕೆ) ಬಂದ ಪಾಶ್ಚಾತ್ಯ ಮಿಶನರಿಗಳು ಈ ನಾಡಿನ ವಿವಿಧ ಪ್ರಾದೇಶಿಕ ಭಾಷೆಗಳನ್ನು ಅಧ್ಯಯನ ಮಾಡಬೇಕಾಗಿ ಬಂದಾಗ ತಮ್ಮ ಅನುಕೂಲ ಹಾಗೂ ಅಧ್ಯಯನಕ್ಕೆ ಅನುಗುಣವಾಗಿರುವ ವ್ಯಾಕರಣ ಹಾಗೂ ನಿಘಂಟುಗಳಿಲ್ಲದಿರುವುದನ್ನು ಕಂಡುಕೊಂಡು ಹೊಸ ರೀತಿಯ ನಿಘಂಟು – ವ್ಯಾಕರಣ ರಚನೆಗೆ ಕಾರ್ಯಪ್ರವೃತ್ತರಾದರು. ಅವರ ಉದ್ದೇಶ ಏನೇ ಆಗಿದ್ದರೂ, ಅವರ ಪ್ರಯತ್ನದ ಫಲವಾಗಿ ತುಳು ಭಾಷೆಯಲ್ಲಿ ಶಿಷ್ಟ ಸಾಹಿತ್ಯದ ರಚನೆಗೆ ನಾಂದಿಯಾಯಿತು. ಅವರು ನೀಡಿದ ನಿಘಂಟುಗಳು ತುಳು ಭಾಷೆಯ ಪುನರುಜ್ಜೀವನದ ಘಟ್ಟದಲ್ಲಿ ಅತಿ ಮಹತ್ವದ ಪಾತ್ರವಹಿಸಿವೆ. ಅವರ ಪ್ರಭಾವದಿಂದ ದೇಶೀಯ ವಿದ್ವಾಂಸರು ಆ ನಿಕ್ಷೇಪದತ್ತ ಗಮನಹರಿಸಿದರು. ತುಳುವಿನ ಪುನರುಜ್ಜೀವನವಾಯಿತು.

ತುಳು ಭಾಷೆಗೆ ಮಿಶನರಿ ವಿದ್ವಾಂಸರು ನೂರ ಹತ್ತು ವರ್ಷಗಳ ಹಿಂದೆಯೇ ಶಬ್ದಕೋಶವನ್ನು ರಚಿಸಿದ್ದರು. ಮಿಶನರಿಗಳಲ್ಲಿ ಕೆಮರೆರ್‌ ಮತ್ತು ರೆ. ಅಮ್ಮನ್‌ ಅವರು ಮೊತ್ತಮೊದಲಿಗೆ ಆ ಭಾಷೆಯ ಕಡೆಗೆ ದೃಷ್ಟಿ ಹರಿಸಿದರು. ಕೆಮರೆರ್‌ ಎನ್ನುವವರು ೧೮೫೮ರ ಹೊತ್ತಿಗೆ ಸು. ೨೦೦೦ ಶಬ್ದಗಳನ್ನು ಸಂಗ್ರಹಿಸಿ ತೀರಿಹೋದರು. ಮ್ಯಾನರ್‌ರು ಈ ಕಾರ್ಯವನ್ನು ಮುಂದುವರಿಸಿದರು. ಕಾಪು ಮಧ್ವರಾಯ, ಮೂಲ್ಕಿ ಸೀತಾರಾಮ ಮುಂತಾದ ಸ್ಥಳೀಯ ವಿದ್ವಾಂಸರ ಸಹಕಾರದಿಂದ ೧೮,೦೦೦ ಶಬ್ದಗಳನ್ನೊಳಗೊಂಡ ‘ತುಳು-ಇಂಗ್ಲೀಷ್‌’ ನಿಘಂಟನ್ನು ರಚಿಸಿದರು (೧೮೮೬). ಮುಂದೆ ಅದಕ್ಕೆ ಸಂವಾದಿಯಾಗಿ ‘ತುಳು-ಇಂಗ್ಲೀಷ್‌’ ನಿಘಂಟನ್ನು ರಚಿಸಿದರು (೧೮೮೮). ಮುಂದಿನ ಒಂದು ಶತಮಾನದವರೆಗೆ ಮ್ಯಾನರ್‌ನಿಘಂಟುಗಳು ತುಳು ಅಧ್ಯಯನಕ್ಕೆ ಮಹತ್ವದ ಆಕರಗಳಾದವು. ದ್ರಾವಿಡ ಭಾಷೆ ನಿಘಂಟುಕಾರರಲ್ಲಿ ಮ್ಯಾನರ್‌ತುಳುವನ್ನು ಪ್ರತಿನಿಧಿಸುವವರಲ್ಲಿ ಮೊದಲಿಗನಾದರು.

ಮ್ಯಾನರರು ಮಂಗಳೂರು ಸುತ್ತಮುತ್ತಲಿನ ಪರಿಸರದ ತುಳು ಭಾಷೆಯ ರೂಪಗಳನ್ನು ಸಂಗ್ರಹಿಸಿದರು. ಇವುಗಳನ್ನು ಕನ್ನಡ ಲಿಪಿಯಲ್ಲಿಯೂ ಪರಿಷ್ಕೃತ ರೋಮನ್‌ ಲಿಪಿಯಲ್ಲಿಯೂ ನಮೂದಿಸಿದರು. ತುಳು ಶಬ್ದಗಳ ಸರಿಯಾದ ಉಚ್ಚಾರಣೆಯನ್ನು ಸೂಚಿಸಲು ಲಿಪಿಯಲ್ಲಿ ವಿಶೇಷ ಚಿಹ್ನೆಗಳನ್ನು ಉಪಯೋಗಿಸಿ ಶಬ್ದಗಳಿಗೆ ಅರ್ಥವನ್ನು ನಮೂದಿಸಿದರು. ಮ್ಯಾನರ ತುಳು – ಇಂಗ್ಲಿಷ್‌ ಕೋಶದ ವಿನ್ಯಾಸ ಹೀಗಿದೆ.

ಒರಗ್‌ Woragu s. – A cushion to lean back upon – ಮಣೆ – a wooden seat with a back
ಒರೆಕಲ್ಲು Wore kallu s. – A touch stone; also ಉರೆಕಲ್ಲ್‌
ಅದಗ್‌ adaga. adv. Then at that time; if ಅಪಗ, ಆಪಗ
ಅನಾಥ anātha adv. Fororn, helpless, destitute, ಅನಾಥೆ one who is unprotected helpless, (female) an orphan ಅನಾಥೆದಿ a window, poor woman
ಅನರ್ಥ anartha s. Bad forlorn, calamity disaster

ನೂರು ವರ್ಷಗಳ ಹಿಂದೆ ತುಳು ಭಾಷೆಗೆ ಪ್ರಥಮವಾಗಿ ರಚಿತವಾದ ಈ ನಿಘಂಟಿನಲ್ಲಿ ದೋಷಗಳಿಲ್ಲದಿರುವುದು ಸಾಧ್ಯವಿಲ್ಲ. ಸಮರ್ಪಕವಾದ ನಿಘಂಟಿಗೆ ತುಳುವಿನ ಎಲ್ಲ ಪ್ರಭೇದಗಳ ಪರಿವೀಕ್ಷಣೆ ಆಗಬೇಕು. ವಿವಿಧ ವೃತ್ತಿ ಪದಗಳನ್ನು ಸಂಗ್ರಹಿಸಬೇಕು. ಆದರೆ ಮ್ಯಾನರ್‌ರಿಗೆ ಅದಕ್ಕೆ ಬೇಕಾದ ಅನುಕೂಲತೆಗಳಿರಲಿಲ್ಲ. ಮ್ಯಾನರರು ತುಳುವಿನ ಮುಖ್ಯ ಪ್ರಭೇದಗಳಾದ ಸಾಮಾನ್ಯ ತುಳು ಮತ್ತು ಶಿವಳ್ಳಿ ತುಳು ಎಂಬ ಭೇದವನ್ನು ಪರಿಗಣಿಸಲಿಲ್ಲ. ಗಾದೆ, ನುಡಿಗಟ್ಟು ಮುಂತಾದ ವಾಗ್ರೂಢಿಗಳನ್ನು ಬಳಸಿಲ್ಲ. ಆದರೂ ಭಾಷಾವಿಜ್ಞಾನ, ಕೋಶರಚನೆ ಬೆಳೆದಿರದ ಕಾಲದಲ್ಲಿ ಇಂತಹ ಒಂದು ಮಹತ್ವ ಪೂರ್ಣ ಕಾಣಿಕೆಯನ್ನು ಸಲ್ಲಿಸಿದ ಮ್ಯಾನರ್‌ ಅವರು ನಿಜವಾಗಿಯೂ ಪ್ರಾತಃಸ್ಮರಣೀಯರು.

ತುಳುವಿನಲ್ಲಿ ನಿಘಂಟು ರಚನೆಗೆ ಎರಡನೆಯ ಪ್ರಯತ್ನ ಮಾಡಿದವರು ಎಂ. ಮರಿಯಪ್ಪ ಭಟ್‌ಮತ್ತು ಶಂಕರ ಕೆದಿಲಾಯರು. ಅವರು ಜೊತೆ ಸೇರಿ ‘ತುಳು-ಇಂಗ್ಲೀಷ್‌’ ಕೋಶವನ್ನು ರಚಿಸಿದರು (೧೯೬೭). ಮರಿಯಪ್ಪ ಭಟ್‌ರ ಈ ನಿಘಂಟು ಬರುವವರೆಗೆ ತುಳು ಅಧ್ಯಯನಕಾರರ ಅಗತ್ಯವನ್ನು ಮ್ಯಾನರ್‌ನಿಘಂಟುಗಳೇ ಪೂರೈಸಬೇಕಾಗಿತ್ತು. ಕಾಲಕ್ರಮದಲ್ಲಿ ಪೂರೈಕೆಯಿಂದ ಬೇಡಿಕೆ ಹೆಚ್ಚಾದಾಗ ಮ್ಯಾನರ್‌ನಿಘಂಟು ಪ್ರತಿಗಳು ಅಲಭ್ಯವಾದವು. ಆ ಕೋಶದಲ್ಲಿ ಅನ್ಯಭಾಷೆಯ ಶಬ್ದಗಳು ಹೆಚ್ಚಾಗಿರುವುದರಿಂದ ಅವುಗಳನ್ನು ತೆಗೆದು ಹಾಕಿ ತುಳುವಿನ ಸಹಜ ಶಬ್ದಗಳು ಮತ್ತು ಹೆಚ್ಚು ರೂಢಿಯಲ್ಲಿರುವ ಶಬ್ದಗಳನ್ನೊಳಗೊಂಡ ಕೋಶವೊಂದು ಅವಶ್ಯಕತೆಯಿತ್ತು. ಅಂತಹ ಅಗತ್ಯವನ್ನು ಈ ನಿಘಂಟು ಪೂರೈಸಿತು.

ಮರಿಯಪ್ಪ ಭಟ್‌ಮತ್ತು ಕೆದಿಲಾಯರು ತುಳು ಪರಿಸರದಲ್ಲಿ ಉಸಿರಾಡಿದವರು, ಪುತ್ತೂರು ಪ್ರದೇಶದವರು. ಪುತ್ತೂರು ಪ್ರದೇಶದಲ್ಲಿ ಉಸಿರಾಡಿದವರು, ಪುತ್ತೂರು ಪ್ರದೇಶದವರು. ಪುತ್ತೂರು ಪ್ರದೇಶದಲ್ಲಿ ಬಳಕೆಯಲ್ಲಿರುವ ತುಳು ರೂಪಗಳನ್ನು ಕಲೆ ಹಾಕಿ ಶಾಸ್ತ್ರೀಯವಾಗಿ ಸಂಯೋಜಿಸಿ ಅವುಗಳನ್ನು ಕನ್ನಡ ಲಿಪಿಯಲ್ಲಿಯೂ ಪರಿಷ್ಕೃತ ರೋಮನ್‌ಲಿಪಿಯಲ್ಲಿಯೂ ಶಬ್ದಗಳನ್ನು ದಾಖಲಿಸಿದ್ದಾರೆ. ಅವರ ಕೋಶದ ರಚನೆಯ ಸ್ವರೂಪ ಹೀಗಿದೆ.

ನಾವಡ NAvada n. a. family name among Kota Brahmins.
ಕೊಂಬರ್‌ Kombar – A kind of cap worn by Koragas
ಕೊಂಬರ್‌ ಕೂಳಿ Kombzr Kuli – n. protruding tooth (Kombaru + kulli)

ರೂಪ ಸಾಮ್ಯವಿದ್ದು ಅರ್ಥ ವ್ಯತ್ಯಾಸವುಳ್ಳ ಪದಗಳನ್ನು ೧, ೨, ೩ ಹೀಗೆ ಸಂಖ್ಯೆ ಹಾಕಿ ಪ್ರತ್ಯೇಕ ನಮೂನೆಗಳಾಗಿ ನೀಡಿದೆ.

ಕೊಂಡೆ ೧ – Konde – n A liquid measure
ಕೊಂಡೆ ೨ – Konde – n A hollow piece of bamboo
ಕೊಂಡೆ ೩ – Konde – n The bush or socket of a wheel
ಕೊಂಡೆ ೪ – Konde – n A family name among the Jains.

ಈ ನಿಘಂಟಿನಲ್ಲಿ ತುಳುನಾಡಿನ ಸೀಮಿತ ವಲಯದ ಶಬ್ದಗಳನ್ನು ಮಾತ್ರ ಕಲೆ ಹಾಕಲಾಗಿದೆ. ತುಳು ಪರಿಸರದ ವೃತ್ತಿ ಪದಗಳು, ಜಾನಪದ ಕಲೆ, ವಿನೋದಗಳಲ್ಲಿ ಬಳಸುವ ಸಾವಿರಾರು ಪದಗಳನ್ನು ಸಂಗ್ರಹ ಮಾಡುವ ಪ್ರಯತ್ನ ನಡೆಯಲಿಲ್ಲ. ಮ್ಯಾನರ್‌ಕೋಶದಲ್ಲಿರುವಂತೆ ಈ ಕೋಶದಲ್ಲಿಯೂ ವಾಗ್ರೂಢಿಗಳನ್ನು, ಜ್ಞಾತಿರೂಪಗಳನ್ನು ಕೊಟ್ಟಿಲ್ಲ. ಭಟ್ಟರು ತಮಗೆ ಲಭ್ಯವಿರುವ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಯೋಜಿಸಿದ್ದಾರೆ. ತಮ್ಮ ಕೋಶಕ್ಕೆ ತುಳು ಭಾಷೆ-ಸಾಹಿತ್ಯವನ್ನು ಕರಿತು ಅಭ್ಯಾಸಪೂರ್ಣ ಪ್ರಸ್ತಾಪನೆ ಬರೆದಿದ್ದಾರೆ.

ಈ ಎರಡು ನಿಘಂಟುಗಳ ಪರಸ್ಪರ ಸಮಾನಾಂಶಗಳನ್ನು ಹೀಗೆ ಗುರುತಿಸಬಹುದು. ಇವೆರಡು ದ್ವಿಭಾಷಿಕ ನಿಘಂಟುಗಳು. ತುಳು ಶಬ್ದಗಳಿಗೆ ಇಂಗ್ಲಿಷಿನಲ್ಲಿ ಅರ್ಥ ವಿವರಣೆ ನೀಡಲಾಗಿದೆ. ಎರಡರಲ್ಲೂ ಮುಖ್ಯ ಉಲ್ಲೇಖಗಳನ್ನು ಕನ್ನಡ ಲಿಪಿಯಲ್ಲೂ ಅದರ ಲಿಪ್ಯಂತರವನ್ನು ಪರಿಷ್ಕೃತ ಮತ್ತು ಕನ್ನಡ ಶಬ್ದಗಳು ಹೇರಳವಾಗಿವೆ. ಇದಕ್ಕೆ ಕಾರಣವಿಲ್ಲದಿಲ್ಲ. ಅವರಿಗೆ ಸಾಮಗ್ರಿ ಒದಗಿಸಿದವರು ಮಂಗಳೂರು ಪರಿಸರದ ವೈದಿಕ ವಿದ್ವಾಂಸರು. ಭಟ್ಟರು ತುಳು ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿರುವುದರಿಂದ ಸಂಸ್ಕೃತ ಕನ್ನಡ ಶಬ್ದಗಳು ಬಹು ವಿರಳ. ಮ್ಯಾನರ್‌ನ ನಿಘಂಟುವಿನಲ್ಲಿ ಕುಲನಾಮ, ವ್ಯಕ್ತಿನಾಮ ಹಾಗೂ ಸ್ಥಳನಾಮಗಳನ್ನು ಕೊಟ್ಟಿಲ್ಲ. ಭಟ್ಟರು ಅವುಗಳನ್ನು ಕೊಟ್ಟಿದ್ದಾರೆ. ಶಬ್ದಗಳ ವ್ಯಾಕರಣ ವರ್ಗಗಳನ್ನು ಕೊಡುವಾಗ ನಾಮ ರೂಪಗಳಿದ್ದರೆ, ಮ್ಯಾನರ್‌ನಿಘಂಟಿನಲ್ಲಿ n ಎಂದೂ ಭಟ್ಟರ ನಿಘಂಟಿನಲ್ಲಿ n ಎಂಬ ಸಂಕೇತವನ್ನೂ ಬಳಸಲಾಗಿದೆ.

ಟಿ. ಬರೋ ಮತ್ತು ಎಂ. ಬಿ. ಎಮಿನೊ ಅವರು ‘ದ್ರಾವಿಡ ಜ್ಞಾತಿ ಪದಕೋಶ’ ಸಿದ್ಧಪಡಿಸುವಾಗ ತುಳುವಿನ ಉಲ್ಲೇಖಗಳನ್ನು ದಾಖಲಿಸುವಾಗ ಮ್ಯಾನರ್‌ಮತ್ತು ಭಟ್ಟರ ಕೋಶಗಳನ್ನು ಮುಖ್ಯ ಆಕರಗಳನ್ನಾಗಿ ಬಳಸಿಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಚಲನಶೀಲತೆ ಜೀವಂತ ಭಾಷೆಯ ಆರೋಗ್ಯದ ಲಕ್ಷಣ. ಭಾಷೆ ಚಲನಶೀಲವಾಗುವಾಗ ಹಲವು ಅಂಶಗಳನ್ನು ಸ್ವೀಕರಿಸುತ್ತದೆ. ಹಲವು ಅಂಶಗಳನ್ನು ತ್ಯಜಿಸುತ್ತದೆ. ಶಬ್ದಗಳ ಅರ್ಥ ವಿಸ್ತಾರ ಮತ್ತು ಅರ್ಥ ಸಂಕೋಚದ ಕ್ರಿಯೆ ನಿರಂತರವಾಗಿ ನಡೆಯುತ್ತದೆ. ಒಂದು ಭಾಷೆಗೆ ಒಂದು ಕಾಲಘಟ್ಟದಲ್ಲಿ ರಚಿತವಾದ ನಿಘಂಟುಗಳು ಕಾಲಕ್ರಮೇಣ ತನ್ನ ಉಪಯುಕ್ತತೆ ಮತ್ತು ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಅದು ಆಯಾ ಕೋಶಕಾರರ ದೋಷವಲ್ಲ. ಅದು ಆ ಭಾಷೆಯ ಚಲನಶೀಲತೆಯ ಪರಿಣಾಮವಾಗಿದೆ. ಅದಕ್ಕೆ ತುಳು ನಿಘಂಟುಗಳು ಹೊರತಲ್ಲ, ತುಳುನಾಡಿನ ಭಾಷಾ ಸಂಸ್ಕೃತಿಯನ್ನು ಪ್ರತಿನಿಧಿಸುವ ತುಳುವಿನ ಪುನರುಜ್ಜೀವನದ ಸಂದರ್ಭದಲ್ಲಿ ಅಧ್ಯಯನಯೋಗ್ಯ ಆಕರ ಗ್ರಂಥವಾಗಬಲ್ಲಂತಹ ಒಂದು ಸರ್ವ ಸಂಗ್ರಾಹಕ ನಿಘಂಟಿನ ಅವಶ್ಯಕತೆಯಿತ್ತು.

ಆಧುನಿಕ ಭಾಷಾ ವಿಜ್ಞಾನದ ಬೆಳಕಿನಲ್ಲಿ ತುಳುನಾಡಿನ ಸಾಂಸ್ಕೃತಿಕ ಆಯಾಮವನ್ನೊಳಗೊಂಡ ಬೃಹತ್‌ ಕೋಶವೊಂದರ ಕನಸನ್ನು ತುಳು ಭಾಷಿಕರು ಬಹುದಿನಗಳಿಂದ ಕಾಯುತ್ತಿದ್ದರು. ಅದೀಗ ನನಸಾಗಿ ಯು.ಪಿ. ಉಪಾಧ್ಯಾಯರ ಸಂಪಾದಕತ್ವದಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನ ಸಂಸ್ಥೆ ಪ್ರಕಟಿಸಿದ ತುಳು ನಿಘಂಟು ಸಂಪುಟಗಳು (ಒಟ್ಟು ಆರು) ತುಂಬ ಮೌಲಿಕವಾಗಿವೆ. ಈ ನಿಘಂಟುಗಳ ರಚನೆ ಬಹಳ ಶ್ರಮದಿಂದಲು, ವಿಚಾರಪೂರ್ವಕವಾಗಿಯೂ ನಡೆದಿರುವುದರಿಂದ ಆ ನಿಘಂಟುಗಳ ಪರಿಶೀಲನದಿಂದ ಯಾರಿಗಾದರೂ ವಿಷಯ ಹೊಳೆಯದಿರದು. ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಯಾವ ಭಾಷೆಗಳಿಗೂ (ಶಿಷ್ಟ ಭಾಷೆ / ಆಡುಭಾಷೆ) ಇಂತಹ ನಿಘಂಟುಗಳು ಸಿದ್ಧವಾಗಿಲ್ಲ. ಭಾರತದ ಇತರ ಕಡೆಗಳಲ್ಲೂ ಇಂತಹ ಪ್ರಯತ್ನಗಳು ನಡೆದಿಲ್ಲವೆಂದೇ ಹೇಳಬೇಕು. ತುಳು ನಿಘಂಟು ಇಂತಹ ಕಾರ್ಯಕ್ಕೆ ಮಾದರಿಯಾಗಿದೆ. ಈ ನಿಘಂಟಿನ ಉದ್ದೇಶ ಇಂತಿವೆ:

೧. ತುಳುವಿನ ಅನೇಕ ಸಾಮಾಜಿಕ ಪ್ರಾದೇಶಿಕ ನೆಲೆಗಳಲ್ಲಿ ಬಳಕೆಯಲ್ಲಿರುವ ಎಲ್ಲಾ ಆಡುಭಾಷೆಗಳ ಪ್ರಕಾರಗಳನ್ನು ಗುರುತಿಸುವುದು.

೨. ತುಳುವಿನ ಆಡುಭಾಷೆಗಳಲ್ಲಿರುವ ಶಬ್ದರೂಪಗಳನ್ನು ವೃತ್ತಿ ಪದಗಳನ್ನೂ ಸಂಗ್ರಹಿಸಿ, ಅವುಗಳನ್ನು ಕನ್ನಡ ಹಾಗೂ ಅಂತಾರಾಷ್ಟ್ರೀಯ ಧ್ವನಿಲಿಪಿಯಲ್ಲಿ ಕ್ರೋಢೀಕರಿಸಿ ಅವುಗಳ ಅರ್ಥವನ್ನು ಇಂಗ್ಲಿಷ್‌ಹಾಗೂ ಕನ್ನಡದಲ್ಲಿ ಕೊಡುವುದು.

೩. ಈ ಶಬ್ದಕೋಶ ತುಳುವಿನ ಅಧಿಕೃತ ವ್ಯಾಕರಣ ರಚನೆಗೆ ಸಹಾಯ ಮಾಡುವುದು.

೪. ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆ ತುಳುವನ್ನು ಶಿಕ್ಷಣ ಮಾಧ್ಯಮವಾಗಿ ಉಪಯೋಗಿಸುವ ನಿಟ್ಟಿನಲ್ಲಿ ರಚಿಸಬೇಕಾದ ಪ್ರಾಥಮಿಕ ಪಠ್ಯಪುಸ್ತಕ ಮತ್ತು ಇತರ ಪುಸ್ತಕಗಳಿಗೆ ಅಗತ್ಯವಿರುವ ಮೂಲ ಶಬ್ದ ಭಂಡಾರವನ್ನು ಒದಗಿಸುವುದು.

೫. ತುಳು ಭಾಷೆಗೆ ಒಂದು ಪ್ರಾತಿನಿಧಿಕ ರೂಪದ ರಚನೆ – ಈ ಪ್ರಾತಿನಿಧಿಕ ರೂಪ ಸಾಹಿತ್ಯ ಸೃಷ್ಟಿಗೆ, ಆಕಾಶವಾಣಿಯ ವಾರ್ತಾ ಪರಸಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಪತ್ರಿಕಾ ಪ್ರಕಟಣೆ, ಸಿನೆಮಾ, ನಾಟಕ ಇತ್ಯಾದಿಗಳಿಗೆ ಒಂದು ನಿರ್ದಿಷ್ಟವಾದ ರೂಪವನ್ನು ಕೊಡುತ್ತದೆ.

ಈ ಉದ್ದೇಶ ಸಿದ್ಧಿಗಾಗಿ ನಿಘಂಟು ವ್ಯಾಪಕವಾಗಿರಬೇಕೆಂದು ಇರಾದೆಯಿಂದ ಅದು ಕೇವಲ ನಾಮರೂಪ, ವಿಶೇಷಣಗಳಿಗೆ ಸೀಮಿತವಾಗಿರುವಂತಿಲ್ಲ. ನುಡಿಗಟ್ಟುಗಳು, ಗಾದೆಗಳು ಮೊದಲಾದ ಇತರ ಭಾಷಾ ಜೀವಾಳದ ವಿಷಯಗಳನ್ನು ಒಳಗೊಂಡಿರಬೇಕು. ಜನಪದ ಕಲೆ, ವಿನೋದ, ವೃತ್ತಿ, ಧಾರ್ಮಿಕ ಚಟುವಟಿಕೆಗಳೂ ಇತ್ಯಾದಿಗಳಿಗೆ ಸಂಬಂಧಿಸಿದ ಶಬ್ದ ಸಂಪತ್ತು ಅದರಲ್ಲಿ ಶೇಖರಣೆಯಾಗಿದೆ.

ಈ ನಿಘಂಟಿನ ವೈಶಿಷ್ಟ್ಯಗಳನ್ನು ಹೀಗೆ ಕಲೆ ಹಾಕಬಹುದಾಗಿದೆ. ಶಿಷ್ಟ ಸಾಹಿತ್ಯ, ಜಾನಪದ ಹಾಗೂ ಉಪಭಾಷೆಗಳ ಬಳಕೆ ಎಲ್ಲ ವರ್ಗದ ಆಡುನುಡಿಗಳಿಗೂ ಸಮಾನ ಸ್ಥಾನ, ಪ್ರಾಚೀನ ಸಾಹಿತ್ಯ, ಪಾಡ್ದನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯದ ಉದ್ಧರಣೆ, ಗಾದೆ, ಒಗಟು, ನುಡಿಗಟ್ಟುಗಳ ಉಲ್ಲೇಖ ಕನ್ನಡ ಲಿಪಿಯೊಂದಿಗೆ ಪರಿಷ್ಕೃತ ರೋಮನ್‌ಲಿಪಿಯ ಬಳಕೆ, ಇಂಗ್ಲಿಷ್‌ಮತ್ತು ಕನ್ನಡದಲ್ಲಿ ಅರ್ಥ ವಿವರಣೆ, ವಾಚ್ಯಾರ್ಥ, ವ್ಯಂಗ್ಯಾರ್ಥ, ವಿಶೇಷಾರ್ಥ, ಹೀನಾರ್ಥ, ಅನ್ಯಾರ್ಥ ಮುಂತಾದ ಹಲವಾರು ಅರ್ಥಗಳ ಉಲ್ಲೇಖ. ವೃತ್ತಿ, ಕಲೆ, ವಿನೋದ ಆಚರಣೆ, ನಂಬಿಕೆಗಳ ಬಗ್ಗೆ ವಿವರಣೆಗಳು, ವ್ಯಾಕರಣ ಸಂಧಿ ವಿವರಗಳು, ಪದಗಳ ಸಾಂದರ್ಭಿಕ ರೂಪಭೇದಗಳು, ಸಮಾನಾರ್ಥಕ ಪದಗಳು ಮುಂತಾದವುಗಳ ಉಲ್ಲೇಖ. ಪ್ರತ್ಯಯಗಳ ಭಾವೋದ್ಗಾರಗಳು, ಬಾಲಭಾಷೆಯ ಪದಗಳು ಗುಪ್ತ ಭಾಷೆಯ ಪದಗಳು ಮುಂತಾದವುಗಳ ಉಲ್ಲೇಖ ಸಮಾಸ ಪದಗಳು, ಸಾಧಿತ ರೂಪಗಳು, ನುಡಿಗಟ್ಟುಗಳು ಇವುಗಳ ವಿವರಣೆಗಳನ್ನು ಉದಾಹರಣೆಗಳೊಂದಿಗೆ ಕೊಡಲಾಗಿದೆ.

ಒಂದು ರೂಪ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ರೂಪ ಛಾಯೆಯನ್ನು ಪಡೆದುಕೊಳ್ಳುತ್ತದೆ. ಉಡುಪಿಯ ‘ತೌಡು’ ಕಾರ್ಕಳ ಜೈನರ ಮಾತಿನಲ್ಲಿ ‘ಹೌಡು’ ಪುತ್ತೂರಿನ ಹರಿಜನರ ಮಾತಿನಲ್ಲಿ ‘ಚೌಡು’ ಎಂಬ ರೂಪಗಳಲ್ಲಿ ಕಂಡುಬರುತ್ತದೆ. ಅಂದರೆ ಒಂದು ನಿರ್ದಿಷ್ಟವಾದ ಧ್ವನಿ ಪರಿಸರದಲ್ಲಿ ಉಡುಪಿ ಪ್ರಭೇದದ ಶಬ್ದದ ಆದಿ’ತ’ ಕಾರಕ್ಕೆ ಪ್ರತಿಯಾಗಿ ಕಾರ್ಕಳ ಜೈನರ ಪ್ರಭೇದದಲ್ಲಿ ‘ಚ’ಕಾರ ಕಂಡುಬರುತ್ತದೆ. ಈ ಎಲ್ಲ ಅಂಶಗಳು ಪ್ರಸ್ತುತ ನಿಘಂಟಿನಲ್ಲಿ ದಾಖಲಾಗಿವೆ.

ನಿಘಂಟುಗಳಲ್ಲಿ ಸಾಮಾನ್ಯವಾಗಿ ಮೂಲಧಾತುಗಳನ್ನು ಸಮಸ್ತ ಪದಗಳನ್ನು ಮಾತ್ರ ಕೊಡುತ್ತಾರೆ. ಆದರೆ ಈ ನಿಘಂಟಿನಲ್ಲಿ ತುಳು ಭಾಷೆಯ ಪ್ರತ್ಯಗಳನ್ನು ಬೇರೆ ಬೇರೆ ಉಪಭಾಷೆಗಳಲ್ಲಿ ಕಂಡುಬರುವ ಆ ಪ್ರತ್ಯಗಳ ರೂಪ ಭೇದಗಳನ್ನೂ ಅವುಗಳ ಕನ್ನಡ-ಇಂಗ್ಲಿಷ್‌ಅರ್ಥ ಮತ್ತು ಪ್ರಯೋಗಗಳನ್ನೂ ಕೊಡಲಾಗಿದೆ. ಮುಖ್ಯ ಉಲ್ಲೇಖಗಳ ಉಪ ಉಲ್ಲೇಖಗಳಾಗಿ ಸಾಧಿತ ಪದ, ಸಮಾಸ ಪದಗಳು ಮಾತ್ರವಲ್ಲದೆ ಆ ಪದದಿಂದ ಸಾಧಿತವಾದ ವಾಗ್ರೂಢಿ ಹಾಗೂ ನುಡಿಗಟ್ಟುಗಳನ್ನು ಕೊಡಲಾಗಿದೆ.

ಆಟ aṭa N. / Chitji : ಅಟೊ atochitj cf ಹಟ hata n. 1 ಮೊಂಡುತನ; ಹಠ obstinacy ೨ ಹಗೆ, ಪ್ರತಿಕಾರ Retaliation revenge Skt. hatha ಇದರ ಅಡಿಯಲ್ಲಿ

ಅಟತಾಯೆ – aṭataaye ಹಟಗಾರ An obstinate person

ಅಟಮಾರಿ – aṭamari; ಹಟಮಾರಿ an obstinate person

ಅಟವಾದಿ – aṭvaadi ಹಟವಾದಿ An extremely obstinate person

‘ಆಟ’ ಹಾಗೂ ಅದರಿಂದ ನಿಷ್ಪನ್ನವಾದ ಸಾಧಿತ ರೂಪಗಳನ್ನು ಅದರ ಅಡಿಯಲ್ಲಿ ಕೊಟ್ಟಿದ್ದಾರೆ. ಅದರಂತೆ ‘ಬೆಲ್ಲ’ ಎಂಬ ಪದದ ಉಪು ಉಲ್ಲೇಖವಾಗಿ ಅರಿಬೆಲ್ಲ, ಅಚ್ಚಿಬೆಲ್ಲ, ಊರಬೆಲ್ಲ, ನೀರ್ಬೆಲ್ಲ ಪಾತ್ರೆಬೆಲ್ಲ ಮುಂತಾದ ಸಮಾಸ ಪದಗಳನ್ನು ಕೊಟ್ಟ ನಂತರ ‘ಬೆಲ್ಲ ತಾರಾಯಿ’ (ತೆಂಗಿನ ಕಾಯಿ ತುರಿ ಮತ್ತು ಬೆಲ್ಲದ ಮಿಶ್ರಣ) ‘ಬೆಲ್ಲ ತೆಲ್ಲವು’ (ಬೆಳ್ತಿಗೆ ಅಕ್ಕಿಯೊಂದಿಗೆ ಬೆಲ್ಲದ ತೆಂಗಿನ ತುರಿಯನ್ನು ಬೆರಸಿ, ರುಬ್ಬಿ ಮಾಡಿದ ದೋಸೆ) ಬೆಲ್ಲದಿಂದ ನಿಷ್ಪನ್ನವಾದ ಸಮಸ್ತ ಪದಗಳನ್ನು ಒಂದೆಡೆ ಕೊಡಲಾಗಿದೆ. ಇದರಿಂದ ತುಳು ಭಾಷೆಯಲ್ಲಿ ಬಳಕೆಯಲ್ಲಿರುವ ವಾಕ್ಯಾಂಶಗಳನ್ನು ಶೈಲಿಯ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಮುಖ್ಯ ನಮೂದುಗಳ ಅರ್ಥವನ್ನು ಅತ್ಯಂತ ಸರಳವಾಗಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ನಿರೂಪಿಸಿದ್ದಾರೆ.

ಆಡ್ಡದೇವಿ aḍḍa deruni (ಅಡ್ಡಲಾಗಿ ಉಳಲಿಕ್ಕೆ ಎತ್ತುಗಳನ್ನು) ಒಂದು ಪಕ್ಕಕ್ಕೆ ಹೊಡೆಯುವುದು; ಅಡ್ಡಕ್ಕೆ ಅಟ್ಟುವುದು. Driving bullocks (cross -wise when ploughing)

ಅಡ್ಡನಲಿಕೆ aḍḍanalike ಅಡ್ಡ ಕುಣಿತ; ಅಡ್ದ ಅಡ್ಡಲಾಗಿ ಕುಣಿಯುವ ಭೂತದ ನೃತ್ಯದ ಒಂದು ವಿಧಾನ. A type of cross -dance performed by the Bhuta impersonator.

ಭಾಷೆಯಲ್ಲಿ ಪದಗಳು ಬೇರೆ ಬೇರೆ ಸಂದರ್ಭದಲ್ಲಿ (ಔಪಚಾರಿಕ -ಅನೌಪಚಾರಿಕ) ವಿಶೇಷ ಅರ್ಥವನ್ನು ಹೊಂದಿರುತ್ತವೆ. ಪದಗಳಿಗೆ ಕೇವಲ ವಾಚ್ಯಾರ್ಥ, ಅಲಂಕಾರಿಕಾರ್ಥ, ಗೌಣಾರ್ಥಗಳು ಮಹತ್ವಪೂರ್ಣವೆನಿಸುತ್ತವೆ. ತುಳು ನಿಘಂಟಿನಲ್ಲಿ ಪದಗಳು ಪಡೆದುಕೊಳ್ಳುವ ಎಲ್ಲ ಅರ್ಥಗಳನ್ನು ಮುಖ್ಯ ಉಲ್ಲೇಖದ ಅಡಿಯಲ್ಲಿ ಕೊಟ್ಟು ವಿವರಿಸಲಾಗಿದೆ.ಉದಾ -ಕುಳ (Kula) ಎನ್ನುವ ಅರ್ಥವನ್ನು ಕೊಡುವ ತುಳು ಶಬ್ಧ ಕೆಲವು ಸೀಮಿತ ಸಂದರ್ಭದಲ್ಲಿ ಮಾತ್ರ ‘ಕುಳ’ ಎಂಬರ್ಥದಲ್ಲಿ ಪ್ರಯೋಗವಾಗುತ್ತದೆ. ಇತರ ಸಂದರ್ಭದಲ್ಲಿ ರಸವನ್ನು ಕುದಿಸಿ ಪಾತ್ರಕ್ಕೆ ಬರಿಸಿದ ಸ್ಥಿತಿ. ಗಣ್ಯವ್ಯಕ್ತಿತ್ವ, ಕೆರೆ, ತಗ್ಗು ಪ್ರದೇಶ, ಹೆರಿಗೆಯಾದ ಸ್ಥಳ, ಭೂಮಾಲೀಕ, ತೆರಿಗೆ ಇಂತಹ ಅರ್ಥಗಳನ್ನು ಸೂಚಿಸುತ್ತದೆ. ರೂಪಸಾಮ್ಯ ಹೊಂದಿದ ಅರ್ಥ ವ್ಯತ್ಯಾಸವಿರುವ ಮೂಲ ರೂಪಗಳನ್ನು ೧, ೨…. ಹೀಗೆ ಪ್ರತ್ಯೇಕ ಮುಖ್ಯ ನಮೂದುವನ್ನಾಗಿಸಿದೆ.

ಅಡೆಕ / ಅಡಕ aḍeka / aḍaka, N ಅಡೆಕ್ಕೊ aḍekko s. aḍi ಅಗಲ ಕಿರಿದಾದ; ಇಕ್ಕಟ್ಟಾದ Narrow close ೨ ಚಿಕ್ಕ: ಅಡಕ small; short; brifka. adaka

ಆನೆಡ್ಡ್‌ ಅಡಕಾಯಿ ಕುದುರೆಡ್ದ್‌ ಬಲವಾಯಿ ಮೀನ್‌ (ಪಾಡ್ದನ) aaneddu adakaayi kudureddu balavayi minu ಅನೆಗಿಂತ ಕಿರಿದಾದ ಕುದುರೆಗಿಂತ ಬಲಶಾಲಿಯಾದ ಮೀನು

೨. ಆಡೆಕ / ಅಡಕ adeka / adaka n. adi ೧. ಒಪ್ಪವಾದ; ಸರಿ ಹೊಂದುವ Appropriate Suitable ೨. ವಿದೇಯ ವಿನಯ ಶೀಲ Loyal; Modest

ಒಂದು ಪದಕ್ಕೆ ಒಂದು ಪ್ರದೇಶಲ್ಲಿ ಒಂದು ರೀತಿಯ ಅರ್ಥಗಳಿದ್ದರೆ ಇನ್ನೊಂದು ಪ್ರದೇಶದಲ್ಲಿ ಇನ್ನೊಂದು ರೀತಿಯ ಅರ್ಥಗಳಿರುವುದು ಸಾಧ್ಯವಿದೆ. ತುಳುವಿನಲ್ಲಿ ‘ಮಡ್ಡಿ’ ಎಂಬ ಪದಕ್ಕೆ ಕದಳೆ ಬೇಳೆಗೆ ಸಕ್ಕರೆ ಅಥವಾ ಬೆಲ್ಲ ಬೆರೆಸಿ ತಯಾರಿಸಿದ ಸಿಹಿತಿಂಡಿ ಎನ್ನುವ ಅರ್ಥ ಒಂದು ಪ್ರದೇಶದಲ್ಲಿದ್ದರೆ, ಇನ್ನೊಂದು ಪ್ರದೇಶದಲ್ಲಿ ದನಗಳ ಆಹಾರ ಎನ್ನುವ ಅರ್ಥವಿದೆ. ಒಂದೇ ವಸ್ತುವನ್ನು ನಿರ್ದೇಶಿಸಲು ಬೇರೆ ಬೇರೆ ಪಂಗಡದವರು ಬೇರೆ ಬೇರೆ ಪದಗಳನ್ನು ಉಪಯೋಗಿಸುವರು ‘ಮನೆ’ ಎಂಬ ಅರ್ಥಕ್ಕೆ ತುಳುವಿನಲ್ಲಿ ಇಲ್ಲ್‌, ಗುಡಿಲ್‌, ಕೊಟ್ಟ ಮುಂತಾದ ಪದಗಳಿವೆ. ಇವು ಬೇರೆ ಬೇರೆ ಪಂಗಡದವರು ಬಳಸುವ ಪದಗಳಾಗಿವೆ. ಇವೆಲ್ಲವೂ ಈ ನಿಘಂಟಿನಲ್ಲಿ ದಾಖಲಾಗಿವೆ ಎಂಬುದನ್ನು ಗಮನಿಸಬೇಕು. ಉಪಾಭಾಷಾ ಸಾಮಗ್ರಿಗಳಲ್ಲಿ ಕೋಶಕಾರರಿಗೆ ವಿಶಿಷ್ಟ ರೀತಿಯ ಸಾಧಿತ ಪದಗಳು ಸಿಕ್ಕುತ್ತವೆ. ಅವುಗಳಲ್ಲಿ ಸಂಸ್ಕೃತಿ – ಸಮಾಜ ವೃತ್ತಿಗಳಿಗೆ ಸಂಬಂಧಿಸಿದ ಅರ್ಥವು ವಿಶೇಷವಾಗಿ ಅಭಿವ್ಯಕ್ತವಾಗುತ್ತದೆ. ಉದಾ ತುಳುವಿನಲ್ಲಿ ‘ಅರಿ’ ಎಂದರೆ ‘ಅಕ್ಕಿ’ ಇದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪದಪುಂಜಗಳನ್ನು ಕಾಣಬಹುದು.

ಅರಿಕುರ್ಕುನಿ / ಮೃತನ ಪತ್ನಿಯು ಒಂದು ಬುಟ್ಟಿ ಅಕ್ಕಿಯನ್ನು ತೊಳೆಯುವುದು /
ಅರಿಪಾವುನಿ / ಅಕ್ಕಿಯನ್ನು ತಲೆಯ ಮೇಲೆ ಎರಚಿ ಆಶೀರ್ವದಿಸುವುದು /
ಅರಿಪಣಪು / ಕನ್ಯಾ ಶುಲ್ಕ

ಪದಗಳ ಬಳಕೆಯ ಸಂದರ್ಭವನ್ನು ಅನುಲಕ್ಷಿಸಿ ಸಾಂಸ್ಕೃತಿಕ ಟಿಪ್ಪಣಿಗಳೊಂದಿಗೆ ಅವುಗಳನ್ನು ದಾಖಲಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಶಬ್ಧಗಳಿಗೆ ಅರ್ಥವನ್ನು ಕೊಡುವಾಗ ಆಯಾ ಸಂದರ್ಭಕ್ಕೆ ತಕ್ಕಂತೆ ಸುಂದರವಾದ ದೃಷ್ಟಾಂತಗಳನ್ನು ಉಪಮೇಯಗಳನ್ನು ಕೊಟ್ಟಿದ್ದಾರೆ.

ಉದಾ : ಪತ್ತ್‌ (ಹತ್ತು) ಪದವನ್ನು ವಿವರಿಸುವಾಗ ಸಂದರ್ಭಕ್ಕನುಗುಣವಾಗಿ ‘ಪತ್ತ್‌ ಬಿರಲ್‌ ಪಂದ್‌ಂಡ್‌ ಆಯಿನ್‌ ಬಿರೆಲ್‌ ಬಾಯಿಡ್‌ ಪೋವು’ (ಹತ್ತು ಬೆರಳು ಅಲ್ಲಾಡಿಸಿದರೆ ಐದು ಬೆರಳು ಬಾಯಿಗೆ ಹೋದೀತು). ಅಂದರೆ ಕಷ್ಟ ಪಟ್ಟರೆ ಫಲ ಸಿಕ್ಕೀತು. ಇಂತಹ ನುಡು ಮುತ್ತುಗಳು ಪದಾರ್ಥ ವಿವೇಚನೆಗೆ ಅಡ್ದಿಯಾಗುವ ಬದಲು ಅದನ್ನು ಸಾಧುಗೊಳಿಸಬಲ್ಲ ಎಂಬುದಕ್ಕೆ ಅಲ್ಲಲ್ಲಿ ನುಸುಳಿ ಬಂದಿರುವ ಇಂತಹ ಉಪಮೆಗಳು ಸಾಕ್ಷಿಯಾಗಿವೆ.

ಕೋಶದುದ್ದಕ್ಕೂ ತುಳು ಪ್ರದೇಶದಲ್ಲಿಯೂ ಮೀನುಗಳ, ಭೂತಗಳ ಹೆಸರುಗಳು, ಸ್ಥಳನಾಮ ಹಾಗೂ ಕುಲನಾಮಗಳು ದಾಖಲಾಗಿರುವುದರಿಂದ ತುಳು ಪ್ರದೇಶದ ಸಂಸ್ಕೃತಿಯ ಅಧ್ಯಯನಕ್ಕೂ ಇದು ಮಹತ್ವದ ಆಕರವಾಗಿದೆ. ತುಳುವಿನಲ್ಲಿ ಮುಖ್ಯ ಶಬ್ಧ -ಜ್ಞಾತಿ ರೂಪಗಳು ಇತರ ದ್ರಾವಿಡ ಭಾಷೆಗಳಲ್ಲಿ ಯಾವ ರೂಪದಲ್ಲಿ ಇವೆಯೆಂಬುದನ್ನು ಪ್ರತ್ಯೇಕವಾಗಿ ನಿರೂಪಿಸಲಾಗಿದೆ.

ಅಲೆಪು alepu ಬಳಲು; ಆಯಾಸಗೊಳ್ಳು Ta: alu;
Ma: alayaru, alasuka. alampuka ka : aiv ka: alasu:
Te. : alayuL Kol: alay

ಅಡೆ ade vn. ೧ ಸೇರು : ತಲಪು Join: reach ೨. ಒದಗಿಬರು Come to hand :be of use Ta. atai; Ma. ata, ka-ade tc. ada

ಇಂತಹ ಜ್ಞಾತಿ ರೂಪಗಳಿಂದ ಮೂಲ ದ್ರಾವಿಡವನ್ನು ಪುನಾರಚಿಸಲು ನೆರವಾಗುತ್ತದೆ. ತುಳು ಭಾಷೆಯ ಚಾರಿತ್ರಿಕ ಪುನರ್‌ ನಿರ್ಮಾಣ ಮಾಡುವವರಿಗೂ ತುಳು ಹಾಗೂ ಇತರ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡುವವರಿಗೂ ತುಳು ಸಂವಾದಿ ಜ್ಞಾತಿ ರೂಪಗಳು ಸಾಕಷ್ಟು ಮಾಹಿತಿ ನೀಡುತ್ತವೆ.

ಹಳೆಗನ್ನಡದ ಅನೇಕ ರೂಪಗಳನ್ನು ನಾವು ತುಳುವಿನಲ್ಲಿ ಕಾಣಬಹುದು. ಉದಾ -ಬರ್ಪೆ-ಪೋಪೆ, ಕನ್ನಡದಂತೆ ತುಳುವಿನಲ್ಲಿ ಪ > ಹ ಆಗಿಲ್ಲ ಪತ್ತು -ಹತ್ತು ಪರಕೆ -ಹರಕೆ, ಪುಲ್ಲ್‌ಹುಲ್ಲು ತುಳುವಿನಲ್ಲಿ ‘ಎ’ ಸ್ವರ ಎರಡು ಬಗೆಯಲ್ಲಿದೆ. ಉದಾ : ಆಯೆಬತ್ತೆ (ಅವನು ಬಂದನು) ಯಾನ್‌ಬತ್ತೆ (ನಾನು ಬಂದೆನು) ತುಳುವಿನ ಧ್ವನಿರಚನೆ ಸ್ವರೂಪವನ್ನು ಪ್ರಸ್ತುತ ನಿಘಂಟಿನಲ್ಲಿ ದಾಖಲಿಸಲಾಗಿದೆ. ತುಳುವಿನ ಉಪಭಾಷಿಕ ವೈಶಿಷ್ಟ್ಯಗಳನ್ನು ಅರಿಯಲಿಕ್ಕೆ ಇದು ನೆರವಾಗುತ್ತದೆ. ಒಂದೊಂದು ಪದಕ್ಕೆ ಅನುಗುಣವಾಗಿ ಅರ್ಥವಿವರಣೆಯನ್ನು ಕೊಡಲಾಗಿದೆ. ಅನಗತ್ಯ ವಿವರಣೆಯಾಗಲಿ, ಉದಾಹರಣೆಯಾಗಲಿ ಎಲ್ಲಿಯೂ ಬಂದಿಲ್ಲ. ಒಂದು ಪದಕ್ಕೆ ನಾನಾರ್ಥಗಳಿದ್ದರೆ ೧, ೨, ೩…… ಎಂದು ಉಲ್ಲೇಖಿಸಿ ಅರ್ಥ ಮತ್ತು ಉದಾಹರಣೆಗಳನ್ನು ಕೊಟ್ಟಿರುವುದರಿಂದ ಗೊಂದಲಕ್ಕೆ ಅವಕಾಶವಿಲ್ಲ.

೧. ಕುರು Kuru-ಚಿಗುರು; ಎಳೆ ಎಲೆ A sprout; Spike of corn
೨. ಕುರು Kuru n ads. ೧. ಚಿಕ್ಕ; ಸಣ್ಣದಾದ little; small
೩. ಎಳೆಯ young; tender
೪. ಕುರು Kuru adi ಅದೃಷ್ಟವಾದ; ಗುಸುಗುಸು Indisitinct

ಒಟ್ಟಿನಲ್ಲಿ ಈ ಬಹು ಭಾಷಿಕ ನಿಘಂಟು ಸರ್ವ ಸಂಗ್ರಾಹಕವಾಗಿದ್ದು ತುಳುಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಮಹತ್ವದ ಆಕರ ಗ್ರಂಥವಾಗಿದೆ. ಈ ಕೋಶದ ಹಿಂದಿರುವ ಶಿಸ್ತು, ಶ್ರಮ, ವ್ಯಾಪಾರ ಕ್ಷೇತ್ರ ಕಾರ್ಯದ ನೆಲೆ ಯಾರೂ ಮೆಚ್ಚಬೇಕಾಗಿದೆ. ಕನ್ನಡಲ್ಲಿ ಅಥವಾ ಭಾರತೀಯ ಭಾಷೆಗಳಲ್ಲಿ ಇಷ್ಟೊಂದು ಏಕಪ್ರಕಾರದ ಮಟ್ಟವನ್ನು ಕಾಯ್ದುಕೊಂಡ ನಿಘಂಟುವಿಗೆ ಮತ್ತೊಂದು ಉದಾಹರಣೆ ದೊರಕಲಾರದು. ಒಂದು ಪ್ರದೇಶದ ವಿವಿಧ ಜನ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿ ಗತಿಗಳನ್ನು ಬಿಂಬಿಸುವ ಈ ತೆರನಾದ ನಿಘಂಟು, ಇತರ ಭಾರತೀಯ ಭಾಷೆಗಳಲ್ಲೂ ರಚಿತವಾಗಬೇಕಾಗಿದೆ. ನಿಘಂಟುಗಳ ರಚನೆ ಮತ್ತು ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿ ಕೊಂಡವರಿಗೆ ತುಂಬ ತೃಪ್ತಿತರುವ ಈ ಸಂಪುಟಗಳ ಪ್ರಧಾನ ಸಂಪಾದಕರು ಹಾಗೂ ಪ್ರಕಟಿಸಿದ ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರವು ಅಭಿನಂದನಾರ್ಹವಾಗಿದೆ. ಈ ಸಂಪುಟಗಳ ಪ್ರಕಟಣೆಯಿಂದ ನಿಘಂಟು ಶಾಸ್ತ್ರಕ್ಕೆ ಹೊಸತಿರುವು ಪ್ರಾಪ್ತವಾಗಿದೆ. ಒಟ್ಟಿನಲ್ಲಿ ಮಿಶನರಿ ಪಂಡಿತರಿಂದ ಅರಂಭವಾದ ತುಳು ನಿಘಂಟು ಕಾರ್ಯ ದೇಶಿಯ ಪಂಡಿತರಿಂದ ಶಾಸ್ತ್ರೀಯತೆ ಪಡೆದುಕೊಂಡು ಗೋವಿಂದಪೈ ಸಂಶೋಧನ ಕೇಂದ್ರದಲ್ಲಿ ಕ್ರಮಬದ್ಧತೆ ಮತ್ತು ವ್ಯಾಪಕತೆಯನ್ನು ಪಡೆದುಕೊಂಡಿತು.

ಕೊನೆಯ ಮಾತು

ನಿಘಂಟು ಕಾರ್ಯ ಎಂದೂ ಪರಿಪೂರ್ಣವಾಗುವುದಿಲ್ಲ. ಭಾಷೆ ಬೆಳೆದಂತೆ ಹಳೆಯ ಶಬ್ಧಗಳು ಬಿದ್ದು ಹೋಗುತ್ತವೆ. ಇಲ್ಲವೇ ಹೊಸ ಅರ್ಥದಲ್ಲಿ ಬಳಕೆ ಬರುತ್ತವೆ. ಹೊಸ ಪದಗಳು ಸಂಕೀಕರಣಗೊಂಡು ಚಲಾವಣೆಗೆ ಬರುತ್ತವೆ. ಇದು ಜೀವಂತ ಭಾಷೆಯಲ್ಲಿ ನಡೆಯುವ ಪ್ರಕ್ರಿಯೆ. ಇದಕ್ಕೆ ತುಳು ಭಾಷೆಯೂ ಹೊರತಲ್ಲ. ತುಂಬ ಶ್ರಮವಹಿಸಿ ಸಿದ್ಧಪಡಿಸಿದ ತುಳು ನಿಘಂಟು ಸಂಪುಟಗಳನ್ನು ಕಂಪ್ಯೂಟರ್‌ನಲ್ಲಿ ಒಳಪಡಿಸಿದರೆ ನಿಘಂಟುಗಳ ಪರಿಷ್ಕರಣಕ್ಕೆ ಅನುಕೂಲವಾಗುತ್ತದೆಯಲ್ಲದೆ ತುಳು ಭಾಷೆಯ ಚಲನ ಶೀಲತೆಯನ್ನು ಅರಿಯಲು ನೆರವಾಗುತ್ತದೆ.