ತುಳು ಛಂದಸ್ಸಿನ ರೂಪುರೇಷೆಗಳನ್ನು ಗುರಿತಿಸುವ ಮೊದಲು ಛಂದಸ್ಸಿನ ಹಿನ್ನೆಲೆಯ ಬಗ್ಗೆ ಸ್ಥೂಲವಾಗಿ ಚರ್ಚಿಸಬೇಕಾದ ಆಗತ್ಯವಿದೆ. ಮುಖ್ಯವಾಗಿ ಉಚ್ಚಾರ ಮತ್ತು ಮಾತ್ರಾಮೌಲ್ಯ ನಿರ್ಣಯದ ಬಗ್ಗೆ.

ತುಳು ಭಾಷೆಯ ಜಾಯಮಾನ ಕನ್ನಡಕ್ಕಿಂತ ಹಲವು ನೆಲೆಗಳಲ್ಲಿ ಭಿನ್ನವಾಗಿದೆ. ಮುಖ್ಯವಾಗಿ ಅದು ಸಂಸ್ಕೃತ ಪ್ರಭಾವಕ್ಕೆ ತೀರಾ ಕಡಿಮೆ ಪ್ರಮಾಣದಲ್ಲಿ ತೆರೆದುಕೊಂಡಿದೆ ಮತ್ತು ಜನಪದ ಹಾಗೂ ಶಿಷ್ಟ ನೆಲೆಗಳೆರಡರಲ್ಲೂ ಕಾವ್ಯವನ್ನು ಸತಾಲವಾಗಿಯೇ ಉಳಿಸಿ ಬೆಳೆಸಿಕೊಂಡು ಬಂದಿದೆ. ಪದ್ಯ ಬಂಧವೇ ತುಳು ಕಾವ್ಯದ ಮುಳ್ಯ ಒಲವು. ಸಂಪೂರ್ಣವಾಗಿ ತುಳು ಜನಪದ ಕಾವ್ಯ ಒಂದೋ ಲಯಾನ್ವಿತವಾದ, ಸಮಾನ ಕಾಲಾವಕಾಶದಲ್ಲಿ ಆವರ್ತಿಸುವ ಅಥವಾ ತಾಳವಾದ್ಯದೊಂದಿಗೆ ಹಾಡಲಾಗುವ ಸ್ವರೂಪವುಳ್ಳದ್ದು, ಇದು ತುಳುವಿಗೆಂದೇ ಅಲ್ಲ. ಸಮಗ್ರ ಭಾರತೀಯ ಜಾನಪದ ಛಂದಸ್ಸಿಗೆ ಅನ್ವಯವಾಗುವ ಮಾತು.

ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ತುಳು ಜನಪದ ಛಂದಸ್ಸುಗಳ ಮೂಲಮಾನ ತಾಳವೇ ಎನ್ನುವುದು ನಿಸ್ಸಂಶಯ. ಕನ್ನಡದಲ್ಲಿ ಅಂಶ ಛಂದಸ್ಸಿನ ‘ಅಂಶ’ ಗಣಗಳನ್ನು ಗುರುತಿಸುವುದಕ್ಕೆ ಇರುವ ಏಕೈಕ ಆಧಾರ ತಾಳವೇ ತೆಲುಗು, ತಮಿಳು ಮತ್ತು ಮಲಯಾಳಂಗಳಲ್ಲಿ ಜಾನಪದ ಛಂದಸ್ಸಿನ ಲಕ್ಷಣಗಳನ್ನು ಬೇರೆ ಬೇರೆ ರೂಪಗಳಲ್ಲಿ ಹೇಳಲಾಗಿದ್ದರೂ ಅಂತಿಮವಾಗಿ ಅವು ತಾಳವನ್ನವಲಂಬಿಸಿಯೇ ನಿರ್ಧರಿಸಲ್ಪಡುತ್ತವೆ. ಜನಪದರು ಪದ್ಯಬಂಧವನ್ನು ರೂಪಿಸುವುದೇ ತಾಳದ ಆಧಾರದಲ್ಲಿ. ನಾವು ‘ಅಂಶ’ ‘ಅಶೈ’ ಮುಂತಾಗಿ ಯಾವ ಹೆಸರು ಕೊಟ್ಟರೂ ಅವೆಲ್ಲ ಕೃತಕ ನಿಯಮಾವಳಿಗಳಾಗುತ್ತವೆಯೇ ಹೊರತು ಸಹಜವೆನಿಸುವುದಿಲ್ಲ.

ಮಾತ್ರೆ ಎಂದರೆ ಒಂದು ಅಕ್ಷರದ ಹ್ರಸ್ವರೂಪವನ್ನು ಉಚ್ಚರಿಸುವುದಕ್ಕಿರುವ ಕಾಲವಕಾಶ. ಇಲ್ಲಿ ಉಚ್ಚರಿಸುವ ಸ್ವರೂಪ ಮುಖ್ಯವೇ ಹೊರತು ಬರವಣಿಗೆಯ ವ್ಯಾಕರಣ ಬದ್ಧ ರೂಪವಲ್ಲ. ಹಾಗಾಗಿ ಓದಿನ ಕಾಲಮಾತ್ರೆಗಳ ಆಧಾರದಲ್ಲಿ ಛಂದಸ್ಸನ್ನು ನಿರ್ಧರಿಸಬೇಕೇ ಹೊರತು ಬರವಣಿಗೆಯ ಲಿಪೀಕೃತ ರೂಪದ ಆಧಾರದಲ್ಲಲ್ಲ.

ತಾಳವೆಂದರೆ ಸಮಾನ ಮಾತ್ರೆಗಳ ಕಾಲಖಂಡದ ಆವರ್ತನೆ, ಕಾವ್ಯ ಸತಾಲವಾಗಿದೆ ಎಂದರೆ ಅಲ್ಲಿ ಸಮಾನ ಮಾತ್ರೆಗಳ ಆವರ್ತನ ಇದೆ ಎಂದೇ ಅರ್ಥ. ತುಳುವಿನ ಜನಪದ ಮತ್ತು ಶಿಷ್ಟ ಕಾವ್ಯಗಳೆರಡರಲ್ಲೂ ತಾಳಕ್ಕೆ ಅತ್ಯಂತ ಹೆಚ್ಚು ಪ್ರಾಮುಖ್ಯವಿರುವಂತೆ ಕಂಡುಬರುತ್ತಿದ್ದು, ವಿತಾಳ ಛಂದಸ್ಸಿನ ಬಳಕೆಯೇ ಇಲ್ಲದಿರುವುದು ಗಮನಾರ್ಹ ಸಂಗತಿ.

ತುಳು ಭಾಷೆಯ ಪದ್ಯರಚನೆಗಳಲ್ಲಿ ಅಕ್ಷರಗಳ ಮಾತ್ರಾಮೌಲ್ಯ ನಿರ್ಧಾರದ ಬಗ್ಗೆ ಕೆಲವು ವಿವರಗಳನ್ನು ಇಲ್ಲಿ ಚರ್ಚಿಸುವುದು ಸೂಕ್ತ.

೧. ಶಿಥಿಲದ್ವಿತ್ವ

ಬರೆದಂತೆಯೇ ಉಚ್ಚರಿಸುವುದು ಸಂಸ್ಕೃತದ ಕಟ್ಟುನಿಟ್ಟಾದ ನಿಯಮ. ಆದ್ದರಿಂದ ಅಲ್ಲಿ ಶಿಥಿಲದ್ವಿತ್ವಕ್ಕೆ ಅವಕಾಶವಿಲ್ಲ. ಮಲಯಾಳಂನಲ್ಲೂ ಶಿಥಿಲದ್ವಿತ್ವವಿಲ್ಲ. ಪ್ರಾಕೃತ ಹಾಗೂ ಪ್ರಾಕೃತಜನ್ಯ ಇಂಡೋ ಆರ್ಯನ್‌ ಭಾಷೆಗಳಲ್ಲಿ ಗುರುತ್ವವುಳ್ಳ ಅನುಸ್ವಾರ ಕೋಮಲೋಚ್ಚಾರದಿಂದ ಲಘುತ್ವವನ್ನು ಪಡೆಯುತ್ತದೆ. ‘ಇಂತಹ ಅನುಸ್ವಾರವುಳ್ಳ ಅಕ್ಷರಗಳು ಲಘುಕ್ಷರಗಳೆಂದು ಆಯಾ ಭಾಷೆಯ ಛಂದಃ ಶಾಸ್ತ್ರಗಳಲ್ಲಿ ಹೇಳಲಾಗಿದೆ'[1]

ಪ್ರಾಕೃತದಲ್ಲಿ ಬಿಂದು ಯುಕ್ತವಾದ ಇ, ಹಿ, ಏ. ಓ, ರೇಫ, ಹಕಾರಗಳು ಆದಿಯಲ್ಲಿರುವ ಸಂಯುಕ್ತಾಕ್ಷರಗಳ ಹಿಂದಿನ ಲಘ್ವಕ್ಷರಗಳು ವಿಕಲ್ಪವಾಗಿ ಲಘುಗಳಾಗಿಯೇ ಉಳಿಯುತ್ತವೆಂದು ಪ್ರಾಕೃತ ಪೈಂಗಲ್ಯದಲ್ಲಿ ಹೇಳಲಾಗಿದೆ.

ಕನ್ನಡದಲ್ಲಿ ಎಲ್ಲೆಲ್ಲಿ ಶಿಥಿಲತ್ವ ಬರುತ್ತದೆ ಎಂಬ ವಿವರಗಳನ್ನು ಕೇಶಿರಾಜ ಶಬ್ಧಮಣಿ ದರ್ಪಣದ (೫೨-೫೫) ನಾಲ್ಕು ಸೂತ್ರಗಳಲ್ಲಿ ಹೇಳಿದ್ದಾನೆ. ಮುಖ್ಯವಾಗಿ ಕೇಶಿರಾಜ ಹೇಳುವ ಎಲ್ಲ ಶಿಥಿಲದ್ವಿತ್ವ ಸಂದರ್ಭಗಳೂ, ಕುಳ, ರೇಘಗಳಿಗೆ ಸಂಬಂಧಿಸಿರುವುದು ಗಮನಾರ್ಹ.

ಶಿಥಿಲದ್ವಿತ್ವವನ್ನು ಹೊರತುಪಡಿಸಿದರೆ ಎಲ್ಲ ಭಾರತೀಯ ಭಾಷೆಗಳಲ್ಲೂ ದ್ವಿತ್ವದ ಹಿಂದಿನ ಅಕ್ಷರ ಛಂದಃಶಾಸ್ತ್ರ ನಿಯಮದಂತೆ ಗುರುವಾಗಿರುವುದು ಅನಿವಾರ್ಯ. ಒಂದು ವೇಳೆ ಅದು ಲಘುವಾಗಿದ್ದರೂ ಮುಂದಿನ ದ್ವಿತ್ವಾಕ್ಷರದಿಂದಾಗಿ ಗುರುತ್ವವನ್ನು ಪಡೆಯುತ್ತದೆ.

ಮುಂದಿನ ದ್ವಿತ್ವಾಕ್ಷರ ಹಿಂದಿನ ಲಘ್ವುಕ್ಷರದ ಮೇಲೆ ಒತ್ತಡ ಹೇರಿ ಅದನ್ನು ಗುರುವಾಗಿಸುವುದು ಯಾವುದೇ ಭಾಷೆಯ ಸಾಮಾನ್ಯ ಲಕ್ಷಣ. ಇದು ಒಂದೇ ಶಬ್ದದಲ್ಲಿ ನಡೆಯಬಹುದು, ಅಥವಾ ಎರಡು ಶಬ್ಧಗಳೊಳಗೆ ನಡೆಯಬಹುದು. ಒಂದು ಶಬ್ದದ ಮೊದಲ ಅಕ್ಷರ ದ್ವಿತ್ವವನ್ನು ಹೊಂದಿದ್ದಾಗ ಹಿಂದಿನ ಶಬ್ದದ ಕೊನೆಯ ಅಕ್ಷರ ಲಘುವಾಗಿದ್ಧರೆ ಅದು ಗುರುವಾಗಿ ಮಾರ್ಪಡುವ ಪ್ರಕ್ರಿಯೆ ಸಂಸ್ಕೃತದಲ್ಲಿದೆ. ಸಂಸ್ಕೃತದಲ್ಲಿ ದ್ವಿತ್ವಾಕ್ಷರ ಶಬ್ದಾರಂಭದಲ್ಲಿ ಬರುವುದುಂಟು. ಕನ್ನಡದಲ್ಲಿ ದ್ವಿತ್ವಾಕ್ಷರ ಆರಂಭದಲ್ಲಿ ಬರುವ ಶಬ್ದಗಳಿಲ್ಲ. ಕನ್ನಡದಲ್ಲಿ ಮಾತ್ರವಲ್ಲ, ಯಾವುದೇ ದ್ರಾವಿಡ ಭಾಷೆಗಳಲ್ಲೂ ಹಿಂದಿನ ಶಬ್ದದ ಕೊನೆಯ ಹ್ರಸ್ವವನ್ನು ಗುರುವಾಗಿಸುತ್ತವೆ.

ಕಾವ್ಯಗಳಲ್ಲಿ ದ್ವಿತ್ವಾದಿ ಶಬ್ದಕ್ಕೆ ಲಾಕ್ಷಣಿಕರ ಹಾಗೂ ವೈಯಾಕರಣಿಗಳ ನಿಷೇಧವಿದ್ದರೂ ಅಂತಹ ಶಬ್ದಗಳು ಧಾರಾಳವಾಗಿ ಬಲಸಲ್ಪಟ್ಟಿವೆ ಮತ್ತು ಅವು ಹಿಂದಿನ ಶಬ್ದದ ಕೊನೆಯ ಲಘುವಿಗೆ ಎರಡು ಮಾತ್ರೆಗಳ ಮೌಲ್ಯವನ್ನು ಒದಗಿಸಿವೆ. ತುಳು ಕಾವ್ಯಗಳಲ್ಲೂ ದ್ವಿತ್ವಾದಿಯಾದ ಶಬ್ದಗಳ ಪ್ರಯೋಗ ಸಾಕಷ್ಟಿದೆ. ಆದರೆ ಇವು ಹಿಂದಿನ ಶಬ್ದದ ಕೊನೆಯ ಲಘುವಿಗೆ ಎರಡು ಮಾತ್ರೆಗಳ ಮೌಲ್ಯವನ್ನು ನೀಡುವುದಿಲ್ಲ. ಅಂದರೆ ಇವು ಶಿಥಿಲವಾಗಿ ಉಚ್ಚರಿಸಲ್ಪಡುತ್ತವೆ. ಉದಾಹರಣೆಗೆ-

ಅಧರ್ಮೇನಡೆತಾಡೆ ಪ್ರವೇಶಿತೆನಾ ರೋಷಾನ್ವಿತೆರಾ ಸ್ಟ್‌
ಕ್‌ಂದ್‌ಸ್ಟ್‌ತ್ತ್‌ಣ ಜಾಕ್‌ ಶ್ರೀಮುಖೊ ಮೆಂದ್‌ನಾರದೆ ರೇವಪ

ಇಲ್ಲಿ ‘ಪ್ರ’ ಮತ್ತು ‘ಶ್ರೀ’ ಎಂಬ ವಿಜಾತೀಯ ದ್ವಿತ್ವಗಳು ಹಿಂದಿನ ಲಘುವನ್ನು ಗುರುವಾಗಿಸಲಿಲ್ಲ.

ಜನ್‌ಆದಿಕುಳಾ ಯಿತ್ರಿಸರ್ಗೊಮಿನೀ ಆರ್ಥಾ ದಿಸ್ವರಜ್ಞೇ

ಇಲ್ಲಿ ಆರನೆಯ ಮತ್ತು ಹದಿನಾಲ್ಕನೆಯ ಅಕ್ಷರಗಳಿಗೆ ಅವುಗಳ ಮುಂದಿರುವ ದ್ವಿತ್ವಾಕ್ಷರದಿಂದಾಗಿ ಎರಡು ಮಾತ್ರೆಗಳ ಮೌಲ್ಯ ಬರಬೇಕಿತ್ತು. ಆದರೆ ಅವು ಲಘುಗಳಾಗಿಯೇ ಉಳಿದಿವೆ.

ನೆಗೆಯುವವನು ನೆಲವನ್ನು ಒತ್ತುವಂತೆ ದ್ವಿತ್ವಾಕ್ಷರಗಳು ಹಿಂದಿನ ಅಕ್ಷರದ ಉಚ್ಚಾರ ಸ್ಥಾನದ ಮೇಲೆ ಒತ್ತಡ ತರುತ್ತವೆ. ಈ ಒತ್ತಡದ ಪರಿಣಾಮವಾಗಿ ಅವುಗಳ ಲಘುವಾಗಿದ್ದಲ್ಲಿ ಎರಡು ಮಾತ್ರೆಗಳ ಉಚ್ಚಾರ ಪ್ರಮಾಣವನ್ನು ಪಡೆಯುತ್ತವೆ. ದ್ವಿತ್ವವನ್ನು ತೇಲಿಸಿ ಉಚ್ಚರಿಸಿದಾಗ ಈ ಪ್ರಕ್ರಿಯೆ ನಡೆಯುವುದಿಲ್ಲ. ಹಾಗಾಗಿ ಶಿಥಿಲದ್ವಿತ್ವ ತನ್ನ ಹಿಂದಿನ ಅಕ್ಷರದ ಮೇಲೆ ಉಚ್ಚಾರದ ದೃಷ್ಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ.

ಕಾವ್ಯಗಳಲ್ಲಿ ದ್ವಿತ್ವಾದಿಯಾದ ಶಬ್ದವನ್ನು ನಿಷೇಧಿಸುವ ಕನ್ನಡ ಲಾಕ್ಷಣಿಕರ ಆಶಯ ದ್ರಾವಿಡ ಭಾಷೆಗಳ ಮೂಲಭೂತ ಜಾಯಮಾನವನ್ನು ಸೂಚಿಸುತ್ತದೆ. ಛಂದಸ್ಸಿನಲ್ಲಿ ಭಾಷೆಯ ಸೂಕ್ಷ್ಮ ಒಳನೆಲೆಗಳು ಅನಾವರಣಗೊಳ್ಳುತ್ತವೆ. ದ್ವಿತ್ವಾದಿ ಶಬ್ದಗಳಿಲ್ಲದ ಭಾಷೆಯೊಂದು ಅಂತಹ ಶಬ್ದಗಳನ್ನು ಸಹಜವಾಗಿ ಸ್ವೀಕರಿಸಲಾರದು. ಅದರಿಂದುಂಟಾಗುವ ಅಭಾಸ ಛಂದಸ್ಸಿನಲ್ಲಿ ಬೇಗನೆ ವೇದ್ಯವಾಗುತ್ತದೆ. ತುಳು ಭಾಷೆ ದ್ರಾವಿಡ ಮೂಲದ ಅನೇಕ ಮೂಲಭೂತ ಲಕ್ಷಣಗಳನ್ನು ಇನ್ನೂ ಜೀವಂತವಾಗಿಟ್ಟಿದೆ. ಆದ್ದರಿಂದಲೇ ಸಂಸ್ಕೃತದಿಂದ ಅನಿವಾರ್ಯವಾಗಿ ಸ್ವೀಕರಿಸಿದ ದ್ವಿತ್ವಾದಿ ಶಬ್ದಗಳನ್ನು ಅದು ಶಿಥಿಲದ್ವಿತ್ವಗಳಾಗಿ ಬಳಸಿಕೊಂಡಿದೆ.

೨. ಅನಾಗತ

ಈ ಶಬ್ದವನ್ನು ಛಂದಸ್ಸಿನ ಸಂದರ್ಭದಲ್ಲಿ ಮೊತ್ತಮೊದಲು ಪ್ರಯೋಗಿಸಿದವರು ತಿ.ನಂ. ಶ್ರೀಕಂಠಯ್ಯ[2] ಹೊಸಗನ್ನಡ ಛಂದಸ್ಸಿನ ಬಗ್ಗೆ ವಿಶ್ಲೇಷಿಸುತ್ತ, ತಾಳಘಟಿತ ಅಥವಾ ಮಾತ್ರಾಗಣಬದ್ಧ ಆಧುನಿಕ ಛಂದಸ್ಸಿನಲ್ಲಿ ಕೆಲವೊಮ್ಮೆ ತಾಳವನ್ನು ಎತ್ತಿಕೊಡುವುದಕ್ಕಾಗಿ ಅನಾಗತ ಬರುತ್ತದೆ ಎನ್ನುತ್ತ ಹೊಸಗನ್ನಡದ ಒಂದೆರಡು ಉದಾಹರಣೆಗಳನ್ನೂ ಅವರು ಕೊಟ್ಟಿದ್ದಾರೆ.

ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯು ದ್ವಾಪರವಾಗುವುದು

ಅನಾಥೆ ಇವಳಿನೊಬ್ಬ
ಳೀ ಜನ್ಮರೋಸಿ

ಇಲ್ಲೆಲ್ಲ ಛಂದಸ್ಸಿನ ಮೊದಲ ಗಣಕ್ಕಿಂತ ಮೊದಲೇ ಒಂದು ಹ್ರಸ್ವಾಕ್ಷರವಿದ್ದು, ಅದು ತಾಳವನ್ನು ಎತ್ತಿಕೊಡುತ್ತದೆ.

‘ಸತಾಲ ಛಂದಸ್ಸುಗಳಲ್ಲಿ ಚರಣದ ಮೊದಲ ಅಕ್ಷರದ ಮೇಲೆ ತಾಳದ ಅಸ್ಪಾಲನವೂ ಇರುವುದು ರೂಢಿ. ಅಂದರೆ ಚರಣವೂ ತಾಳವೂ ಜತೆಯಾಗಿ ಆರಂಭಗೊಳ್ಳುತ್ತವೆ. ಅನಾಗತ ಪದ್ಯಪಾದದ ಗಣಗಳಿಗಿಂತ ಮೊದಲೇ ಬಂದು, ಅದನ್ನು ಉಚ್ಚರಿಸಿದ ಮೇಲೆಯೇ ತಾಳ ತೊಡಗುತ್ತದೆ. ಅನಾಗತದಿಂದಾಗಿ ಪದ್ಯ ಪಾದದ ಗತಿ ತುಸು ತ್ವರಿತವಾಗುವುದು ಮತ್ತು ಉದ್ದೇಶಿತ ಭಾವವನ್ನು ಒಂದಷ್ಟು ಹೆಚ್ಚಾಗಿಯೇ ಪ್ರಚೋದಿಸುವುದು ಸಾಧ್ಯ. ಹಾರುವ ಅಥವಾ ಓಡುವ ಪಂದ್ಯಗಳಲ್ಲಿ ನೇಮಿಸಿದ ಗೆರೆಗಿಂತ ಕೆಲವು ಹೆಜ್ಜೆ ಹಿಂದಿನಿಂದ ಸ್ಪರ್ಧಾಳು ಓಡಿಬಂದು ವೇಗವನ್ನು ಬೆಳೆಸಿಕೊಳ್ಳುವಂತೆ ಚರಣಕ್ಕೆ ಇದರಿಂದ ಹೊಸಬಲ ಬರುತ್ತದೆ’ – ಎನ್ನುತ್ತಾರೆ ತೀ.ನಂ.ಶ್ರೀ.

ತುಳುವಿನಲ್ಲಿ ಬರುವ ಅನಾಗತ ಅಕ್ಷರಗಣಘಟಿತ ಛಂದಸ್ಸಿನ ಮೊದಲಿಗೆ ಕಾಣಿಸಿಕೊಳ್ಳುವುದು ಗಮನಾರ್ಹ. ಉದಾಹರಣೆಗೆ –

೧. ಇಂಗಿತೋಮುಡೆ ಪಿಂದ್‌ದ್ರೌಪದಿ ದಂಡ್ಯೆನುಂಬಟ್‌ಪೋವಪಾ
ನಿಷಂಗಿಪಂತೆನೈಪೇರ್ಕುಳೇ ನಿಜ ಚಿತ್ತೋಮಾನ್‌ಡ್‌ನೋಟೊಮಾ

(ಮ. ೧೩, ೨೨)

೨. ದುಂಬಟೊಂಜಿ ರಥೊಂಟ್‌ಯಾದವ ರಾಜೆ ಶ್ರೀ ವಸುದೇವೆರ
ಪ್ರಲಂಬಸೂದನೆ ಗಾದಿನೀ ಸುತೆ ಯಾರೆ ದಿವ್ಯ ಕುಮಾರೆರ
(ಭಾ. ೧.೧೦.೨೨)

೩. ಕುಂಡೊಮೋ ಅಜಮಂಡಲೊಂಕುಳೆ ಪ್ರಾಣ ಸನ್ಮತ ಷಂಡೊಮೋ
ಗಜಮಂಡಲೋ ಚಂದ್ರ ಮಂಡಲೊಂಟೊಂದ್‌ಸ್ಟೂಡಲಿಪುಕಿ ಶೋಭೆತಾ
(ಕಾ. ೮, ೭೨)

೩. ಮುಡಿ ಮತ್ತು ಪದ್ಮಗಣ

ಪದ್ಯದ ಚರಣಕ್ಕೆ ಮುಕ್ತಾಯ ಕೊಡಲು ಕೊನೆಯಲ್ಲಿ ಅಪೂರ್ಣ ಗಣವೊಂದು ಬೇಕಾಗುತ್ತದೆ. ಮಾತ್ರಗಣ ಘಟಿತವೂ ಸತಾಲವೂ ಆದ ಛಂದಸ್ಸಿಗೆ ಕೊನೆಯ ಕ್ರಿಯಾಖಂಡ ಚಿಕ್ಕದಾಗಿದ್ದು ಉಳಿದ ಕಾಲಖಂಡವನ್ನು ಮೌನದಿಂದ ತುಂಬುವಾಗ ಮಾತ್ರವೇ ಖಚಿತವಾದ ನಿಲುಗಡೆ ಬರುವುದು ಸಾಧ್ಯ. ಇದಕ್ಕೆ ತೀ.ನಂ. ಶ್ರೀಯವರ ಮುಡಿ ಮತ್ತು ಪದ್ಮಗಣವೆಂಬ ಎರಡು ಪಾರಿಭಾಷಿಕ ಪದಗಳನ್ನು ಬಳಸಿದ್ದಾರೆ.[3] ಕೊನೆಯ ಗಣದಲ್ಲಿ ಒಂದೇ ಅಕ್ಷರ ಇರುವುದಿದ್ದರೆ ಅದನ್ನು ಮುಡಿಯೆಂದೂ, ಒಂದಕ್ಕಿಂತ ಹೆಚ್ಚು ಅಕ್ಷರಗಳಿರುವುದಿದ್ದರೆ ಅದನ್ನು ಪದ್ಮಗಣವೆಂದೂ ಹೇಳಲಾಗಿದೆ. ಇದನ್ನು ವಿಶ್ಲೇಷಿಸಿದ ಕ.ಪು. ಸೀತಾರಾಮ ಕೆದ್ಲಾಯರು ‘ಎಲ್ಲಾ ಭಾರತೀಯ ಭಾಷೆಗಳ ಛಂದೋಬಂಧಗಳಲ್ಲಿ ಗೋಚರಿಸುವ ಈ ಬಿಡಿಯಾದ ಅಕ್ಷರಕ್ಕೆ – ಅಂದರೆ ಮುಡಿಗೆ – ಇತರ ಸಂಜ್ಞಾನಾಮಗಳಂತೆ ಸಂಸ್ಕೃತದ ಹೆಸರನ್ನೇ ಇಡುವುದು ವಿಹಿತವಾಗಿದೆ. ಅಂತ್ಯಗಣದ ಆದ್ಯಕ್ಷರವಾಗಿ ಕರ್ಷಣವನ್ನು ಪಡೆದು ಗಣಸ್ಥಾನದಲ್ಲಿ ನಿಲ್ಲುವ ಈ ಅಕ್ಷರವನ್ನು ‘ಅವಸಾಯ ಗುರು’ವೆಂದೂ ‘ಗುರ್ವಂಶ’ವೆಂದೂ ಹೇಳಬಹುದು. ಇದರ ನಂತರ ತಪ್ಪದೆ ಅವಸಾಯ ವಿರಾಮವು ಬರುವುದರಿಂದ ಇದಕ್ಕೆ ಇತರ ಗಣದ ಮೌಲ್ಯವು ಬರುವುದೆಂದು ಹಾಡುವಾಗ ಮನವರಿಕೆಯಾಗುವುದು’ ಎನ್ನುತ್ತಾರೆ.[4] ಅಂಶಗಣ ಘಟನೆಯ ನಿಲುಗಡೆಗಾಗಿ ಕೊನೆಯಲ್ಲಿ ಬರುವ ಬ್ರಹ್ಮಗಣಕ್ಕೂ ಪದ್ಮಗಣಕ್ಕೂ ವ್ಯತ್ಯಾಸವಿಲ್ಲದ್ದರಿಂದ ಪದ್ಮಗಣ ಎಂಬ ಪಾರಿಭಾಷಿಕ ಪದದ ಬದಲು ಬ್ರಹ್ಮಗಣವೆನ್ನುವುದೇ ಸೂಕ್ತವೆನ್ನುವುದು ಕೆದ್ಲಾಯರ ಅಭಿಪ್ರಾಯ.4

ಈ ವಿಚಾರಗಳನ್ನು ಇನ್ನಷ್ಟು ಸರಳಗೊಳಿಸುವುದು ಸೂಕ್ತ. ಯಾವುದೇ ಸತಾಲ ಪದ್ಯಕ್ಕೆ ಮುಕ್ತಾಯ ಸಿಗಬೇಕಾದರೆ ಇತರ ಗಣಗಳಿಗಿಂತ ಸಣ್ಣ ಕ್ರಿಯಾ ಖಂಡವೊಂದು ಕೊನೆಯಲ್ಲಿ ಬರಬೇಕಾದ್ದು ಅಗತ್ಯ. ಅದು ತಾಳಕ್ಕೆ ಹೊಂದಿಕೊಳ್ಳುತ್ತಿದ್ದು ಉಳಿದ ಮಾತ್ರಾ ಮೌಲ್ಯವನ್ನು ಮೌನದಿಂದ ತುಂಬ ಬೇಕಾಗುತ್ತದೆ. ಹಾಗಾಗಿ ಎರಡೆರಡು ಪಾರಿಭಾಷಿಕ ಪದಗಳ ಬದಲು ಅದನ್ನು ‘ಅಪೂರ್ಣ ಗಣ’ ಎಂದಷ್ಟೇ ಕರೆಯಬಹುದು.

ಪ್ರಾಚೀನ ತುಳು ಕಾವ್ಯಗಳಲ್ಲೂ, ಜನಪದ ಕಾವ್ಯಗಳಲ್ಲೂ, ಆಧುನಿಕ ಕಾವ್ಯಗಳಲ್ಲೂ ಧಾರಾಳ ಅಪೂರ್ಣ ಗಣಗಳು ಕಾಣಸಿಗುತ್ತವೆ. ಇವು ತುಳು ಕಾವ್ಯಗಳ ಛಂದಸ್ಸಿನ ಸತಾಲತ್ವವನ್ನು ಎತ್ತಿಹಿಡಿಯುತ್ತವೆ. ಉದಾಹರಣಗೆ –

೧. ಮಾದಿ, ರೊಂದು, ಪನ್ಪು, ನಾಳ್‌
ಮಾಪೊ. ರುಳೆದಿ. ಮಾದಿ. ರಾ

೨. ಮೇದಿನೀಪತಿ. ಕೇಂಡ್‌ನಂದನ. ವಾಕ್ಯೋಂಕೇತಲ, ಮೆಚ್ಚಿಸ್ಟ್‌
ಹಾದಿಟ್‌ ಶಠಿ, ಪುಪ್ಪುಣಾರ್‌ಮ, ಹೇಶ್ವರೇಕುದಿ ಕೊಳ್ಳಿಲಾ
(ರಾ. ೩-೧೪)

೩. ಜೋಕು. ಲೆಂಕುಲು. ಜೋಕು. ಲೆಂಕುಲು
ತುಳುವ. ಮಣ್ಣ್‌ದ. ಜೋಕು. ಲು
(ಆಲಡೆ)

ಮಾತ್ರ ಛಂದಸ್ಸಿನ ದೃಷ್ಟಿಯಲ್ಲಿ ಅಪೂರ್ಣ ಗಣಕ್ಕೆ ಪ್ರಾಮುಖ್ಯವಿದೆ. ಅದು ಛಂದಸ್ಸಿನ ಲಯದ ಮೇಲೆ ಪರಿಣಾಮ ಬೀರುತ್ತದೆ. ಅಪೂರ್ಣ ಗಣದಲ್ಲಿ ಅಕ್ಷರಗಳು ಕಡಿಮೆಯಿದ್ದಷ್ಟೂ ಗತಿ ಲಲಿತವಾಗುತ್ತದೆ.

೪. ವಿಷಮ ಗಣ

ಗಣದ ಆದಿಯಲ್ಲಿ ಒಂದು ಗುರು ಅಥವಾ ಎರಡು ಲಘುಗಳಿದ್ದರೆ ಮಾತ್ರ ಸತಾಲವಾದ ಓದು ಅಥವಾ ಗೇಯತೆ ಸಾಧ್ಯ. ಬದಲಾಗಿ ಒಂದು ಲಘುವಿನ ಮುಂದೆ ಒಂದು ಗುರು ಬಂದಾಗ ಓದಿಗೆ ಮತ್ತು ಗೇಯ ಸಾಧ್ಯತೆಗಳಿಗೆ ತೊಂದರೆಯಾಗುತ್ತದೆ. ಇದನ್ನು ಲಾಕ್ಷಣಿಕರು ವಿಷಮಗಣವೆಂದು ಕರೆದು ಛಂದಸ್ಸಿನ ಸಂಪ್ರದಾಯಕ್ಕೆ ಅನುಗುಣವಲ್ಲವೆಂದು ನಿಷೇಧಿಸಿದ್ದಾರೆ. ತುಳು ಛಂದಸ್ಸು, ಅದು ಶಿಷ್ಟವಿರಲಿ, ಜನಪದವಿರಲಿ, ಗೇಯವೆಂದು ಗುರುತಿಸುವುದಕ್ಕೆ, ಸತಾಲವೆಂದು ಭಾವಿಸುವುದಕ್ಕೆ ವಿಷಮಗಣಗಳ ರಾಹಿತ್ಯ ಮತ್ತು ಕರ್ಷಮ ಸಾಧ್ಯತೆಗಳೇ ಸಾಕ್ಷಿ. ಒಂದೋ ಗಣದ ಆರಂಭಕ್ಕೆ ಎರಡು ಲಘು ಅಥವಾ ಒಂದು ಗುರು ಇರುವುದು ತಾಳದ ಆಧಾರದಲ್ಲಿ ಗಣವಿಭಜನೆ ಮಾಡುವಾಗ ತುಳುಕಾವ್ಯಗಳಲ್ಲಿ ಕಂಡುಬರುತ್ತದೆ.

೫. ಯತಿ – ಪ್ರಾಸ

ಯತಿ ಎಂದರೆ ಪದ್ಯವೊಂದರ ನಿರ್ದಿಷ್ಟ ಸ್ಥಾನದಲ್ಲಿ ಉಸಿರಾಟಕ್ಕಾಗಿ ನೀಡಲಾಗುವ ಕ್ರಿಯಾಖಂಡಗಳ ನಡುವಣ ವಿರಾಮ. ಸಾಮಾನ್ಯವಾಗಿ ಯತಿ ಶಬ್ದದ ಕೊನೆಯಲ್ಲೆ ಬರುತ್ತದೆ. ಆದರೆ ಶಬ್ದವನ್ನು ಅರ್ಥಕ್ಕೆ ತೊಡಕಾಗದಂತೆ ಅಥವಾ ಅಪಾರ್ಥ ಹುಟ್ಟದಂತೆ ತುಂಡರಿಸಿ ನಡುವೆ ಯತಿ ಬರುವುದಿದೆ. ಇದೂ ಗ್ರಾಹ್ಯವೇ.

ಸೇಡಿಯಾಪು ಅವರು ‘ಉಸಿರ್ವತಾರ್ಣಂ’ ಎನ್ನುವುದಕ್ಕೆ ‘ನಿರ್ದೇಶಿಸಲ್ಪಟ್ಟ ಸ್ಥಾನ’ ಎಂಬ ಅರ್ಥ ಕೊಟ್ಟಿದ್ದಾರೆ.[5] ಭಾರತೀಯ ಛಂದಸ್ಸಿನಲ್ಲಿ – ಮುಖ್ಯವಾಗಿ ಸಂಸ್ಕೃತದಲ್ಲಿ ವಾಗ್ವಿರಾಮ ನಿರ್ದಿಷ್ಟ ಸ್ಥಾನದಲ್ಲೇ ಇರಬೇಕೆನ್ನುವುದು ನಿಯಮ. ಪಾದಾಂತದಲ್ಲಂತೂ ಯತಿ ಇರಲೇಬೇಕು. ಮಾತ್ರ ವೃತ್ತಗಳೆಲ್ಲ. ಸತಾಲವಾಗಿರುವುದರಿಂದ ಪಾದಾಂತ ಅಥವಾ ಪದಚ್ಛೇದಿತ ಯತಿಗಳು ನಿರ್ದಿಷ್ಟ ಗಣದ ಮುಂದೆ ಹಾಗೂ ಪಾದಾಂತದಲ್ಲಿ ಬಂದೇ ಬರುತ್ತವೆ. ಅಕ್ಷರ ವೃತ್ತಗಳಲ್ಲಿ ಇದನ್ನು ಉದ್ದೇಶಪೂರ್ವಕ ತರಬೇಕಾಗುತ್ತದೆ.

ಕನ್ನಡದಲ್ಲಿ ಅಕ್ಷರ ವೃತ್ತಗಳು ಯತಿನಿಯಮವನ್ನು ಉಲ್ಲಂಘಿಸಿದುವು.[6] ಅಂದರೆ ನಿದಿಷ್ಟ ಅಕ್ಷರದ ಮುಂದೆ ವಾಚನ ವಿರಾಮವನ್ನು ಕೊಡುವ ಬದಲು ಒಂದು ಅರ್ಥಘಟಕ ಅಥವಾ ಅರ್ಥಖಂಡ ಮುಗಿದ ಮೇಲೆ ವಾಚನವಿರಾಮ ಕೊಡಲು ಮುಂದಾದುವು. ಯತಿ ವಿಲಂಘನ ದೋಷವನ್ನೇ ಗುಣವಾಗಿ ಭಾವಿಸಿ ಕನ್ನಡ ಕವಿಗಳು ಯತಿಯನ್ನು ಮೀರಿದರು ಎನ್ನುತ್ತಾನೆ ನಾಗವರ್ಮ.[7]

ಪದ್ಯ ಪಾದದ ನಿರ್ಧಾರಕ್ಕೆ ಪಾದಾಂತಯತಿ ಆಧಾರವಾಗಿದ್ದ ಸಂಸ್ಕೃತದ ಮಾದರಿಯನ್ನು ಮೀರಿ, ಖಂಡಪ್ರಾಸವನ್ನು ಬಳಸಿ, ದ್ವೀತಿಯಾಕ್ಷರ ಪ್ರಾಸವನ್ನೇ[8] ಪಾದವಿಭಜನೆಗೆ ಆಧಾರವಾಗಿ ಮಾಡಿದ್ದು ಕನ್ನಡ ಕವಿಗಳ ಅನನ್ಯತೆ. ಒಂದು ಪಾದದ ಕೊನೆಯಲ್ಲಿ ಬರುವ ಶಬ್ದ ಎರಡನೇ ಪಾದಕ್ಕೂ ಮುಂದುವರಿದು ಅದೇ ಶಬ್ದದ ಒಂದು ಅಕ್ಷರ ಪ್ರಾಸಸ್ಥಾನದಲ್ಲಿ ನಿಲ್ಲುವುದಿದ್ದರೆ ಅದನ್ನು ಖಂಡಪ್ರಾಸವೆಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ದ್ವಿತೀಯಾಕ್ಷರ ಪ್ರಾಸ ನಿಯಮವಿಲ್ಲ. ಮಲಯಾಳಂನಲ್ಲಿ ದ್ವಿತೀಯಾಕ್ಷರ ಪ್ರಾಸವಿದ್ದರೂ ಅದೊಂದು ನಿಯಮವಾಗಿ ಪಾಲಿಸಲ್ಪಡಲಿಲ್ಲ.

ಕನ್ನಡಕ್ಕೆ ದ್ವಿತೀಯಾಕ್ಷರ ಪ್ರಾಸ ನಿಯತ. ಪಾದದ ಕೊನೆಯಲ್ಲಿ ಶಬ್ದ ತುಂಡರಿಸಲ್ಪಟ್ಟು – ಅಂದರೆ ಖಂಡವಾಗಿ, ಎರಡನೇ ಪಾದದ ಆದಿಯಲ್ಲಿ ಬರುವ ಖಂಡವು ಪ್ರಾಸವನ್ನು ಹೊಂದಿರುವುದರಿಂದ ಅದು ಖಂಡಪ್ರಾಸ. ಯತಿಪಾದದ ಕೊನೆಯಲ್ಲಿ ಬಾರದೆ, ಅರ್ಥಘಟಕ ಮುಗಿದ ಮೇಲೆಯೇ ಬರುವ ಕಾರಣ ಕನ್ನಡದಲ್ಲಿ ಶಬ್ದದ ಮಧ್ಯೆ ಯತಿಕೊಡುವ ಸಂಪ್ರದಾಯದ ಅಗತ್ಯವಿಲ್ಲ. ಚಾಕ್ಷುಷವಾಗಿ ಖಂಡಪ್ರಾಸವುಳ್ಳ ಶಬ್ದ ತುಂಡರಿಸಲ್ಪಟ್ಟಂತೆ ಕಂಡರೂ ಶ್ರಾವ್ಯವಾಗಿ ತುಂಡರಿಸಲ್ಪಡುವುದಿಲ್ಲ.

ತುಳು ಕವಿಗಳು ಪಾದದ್ವಿತೀಯಾಕ್ಷರ ಪ್ರಾಸವನ್ನು ಪಾಲಿಸಿದ್ದಾರೆ. ಆದರೆ ಅದನ್ನೊಂದು ನಿಯಮವಾಗಿ ಎಲ್ಲ ಕಡೆ ಬಳಸಿಕೊಂಡಿಲ್ಲ. ದ್ವಿತೀಯಾಕ್ಷರ ಪ್ರಾಸ ಕನ್ನಡಕ್ಕೇ ವಿಶಿಷ್ಟವಾದುದು ಎಂಬ ಕವಿರಾಜ ಮಾರ್ಗದ ಉಲ್ಲೇಖವನ್ನು ಇಲ್ಲಿ ಸ್ಮರಿಸಬೇಕು.[9]

ದ್ವಿತೀಯಾಕ್ಷರ ಪ್ರಾಸವನ್ನು ಪಾಲಿಸದೆ ಇರುವುದಕ್ಕೆ ತುಳು ಕಾವ್ಯಗಳಲ್ಲಿ ಧಾರಾಳ ಉದಾಹರಣೆಗಳಿವೆ. ಉದಾ:

೧. ಯೀತಿಂಚ ವಚೀತ್‌ನ ಕೇಳಪನೇ ತನ ಬುದ್ಧಿಟೆ ವೀರೆ
ಅನುಮಾನಿತ್‌ಸೂಕ್ಷಿತೆ…..
(ಭಾ. ೧. ೧೭. ೨೪)

೨. ಈ ಪಂಡಿನ ಪಂಚವಿಧೋಂಕುಳೆಕಾ ಪ್ರಥಮಾಂಕುರ ತೀರ್ಥೋ
ಈ ಕುಂಡಿಕೆ ಮಂತಲನುಗ್ರಹಿಪೂ…..
(ಕಾ ೯-೧೪)

೩. ಅನುರಾಗೊ ಪಡೆತೊಂಡ್‌
ಜಗೊಂಟ್‌ತ್ತ್‌ ಜನನಾಥನ
ಮನಸ್ಸೆಕ್‌ ಪ್ರಿಯೊಮಾಸ್ಟ್‌ತ್ತೆರ ತಾಪಾಕ್ಳು
(ಮ. ೧. ೧೮೯)

೪. ಭೂಮಿ ಪತಿ ದುಖ್ಖತುದ್‌ಸ್ಟ್‌ತ್ತಿ ದಿವಸೊಂಟ್‌
ಯೇವಿಯವರೊಂಟಾಕಿ ಪರಿಶಿತ್ತಿ ನರೆವರ್ತೆ
(ಭಾ-೧-೧೩-೧೯)

ಕವಿರಾಜ ಮಾರ್ಗದಲ್ಲಿ ಒಟ್ಟು ಆರು ರೀತಿಯ ಪ್ರಾಸಗಳನ್ನು ಹೇಳಿದೆ. ಈ ಪೈಕಿ ಅದ್ವಿತ್ವವಾದ ಅಥವಾ ಸವರ್ಣದಿಂದ ಕೂಡಿದ ಅದ್ವಿತ್ವಾಕ್ಷರ ಪ್ರಾಸ ಕನ್ನಡದಲ್ಲಿ ಸಾಧಾರಣವಾಗಿ ಬಳಕೆಯಾಗುತ್ತದೆ. ಇದು ವಿನುತಪ್ರಾಸ. ವಿಭಿನ್ನ ಸ್ವರಗಳಿಂದ ಕೂಡಿದ ದ್ವಿತ್ವ ಪ್ರಾಸಾಕ್ಷರದ – ಅಂದರೆ ಶಾಂತ ಪ್ರಾಸದ – ಬಳಕೆ ಕನ್ನಡದಲ್ಲಿ ಪ್ರಮಾಣದ ದೃಷ್ಟಿಯಿಂದ ಕಡಿಮೆ. ಇವೆರಡನ್ನೂ, ಅಂತ್ಯಪ್ರಾಸವನ್ನೂ ಬಿಟ್ಟರೆ ವರ್ಗೋದಿತ, ಸಮೀಪಗತ, ಇತ್ಯಾದಿ ಪ್ರಾಸಗಳ ಬಳಕೆ ಕನ್ನಡದಲ್ಲಿಲ್ಲ.

ತುಳುವಿನಲ್ಲಿ ವಿನುತ ಪ್ರಾಸಕ್ಕಿಂತ ಹೆಚ್ಚು ಶಾಂತ ಪ್ರಾಸವೇ ಬಳಕೆಯಾಗಿರುವುದು ಕಂಡುಬರುತ್ತದೆ. ಪ್ರಾಸ ಸ್ಥಾನದಲ್ಲಿ ಸಾಮಾನ್ಯವಾಗಿ ವಿಜಾತೀಯ ವ್ಯಂಜನಗುಚ್ಛಗಳೇ ಇರುತ್ತವೆ. ಎರಡು ಅಥವಾ ಮೂರು ವ್ಯಂಜನ ವರ್ಣಗಳಿರುವ ಅಕ್ಷರ ಪ್ರಾಸಸ್ಥಾನದಲ್ಲಿದ್ದಾಗ, ಆ ವ್ಯಂಜನಗಳ ಪೈಕಿ ಯಾವುದಾದರೊಂದು ಪ್ರಾಸವಾಗಿದ್ದರೂ ಸಾಕು. ಅನುಕ್ರಮಣಿಕೆಯಲ್ಲಿ ಮೊದಲನೆಯದೇ ಪ್ರಾಸವಾಗಿರಬೇಕೆಂದೇನು ಇಲ್ಲ. ಉದಾಹರಣೆಗೆ –

ಶಾಸ್ತ್ರೋಂಟಾ ಸಕಲಾಶ
ಸ್ತ್ರಾ ಸ್ತ್ರೋಂಟಾ ನುಂಬುತ್ರಿ
ನೇತ್ರೆ ತತ್ತನವೂಳ್‌ ಭಾರ್ಗವ ಶ್ರೀ ರಾಮೆರ್‌
ಮಾತ್ರೇಯುಳ್ಳೆರೊ ವೆರ್ತ್‌
ಧಾತ್ರಿಟೀರೆಕ್‌ ತುಲ್ಯ
ಚೂತ್ತಿರಿನಾಂದ್‌ ಮಾನಿತೆರಾ ಭೀಷ್ಮೆರ್‌
(ಮ-೩-೩೪)

‘ತ್‌’ ಈ ಷಟ್ಪದಿಯ ಪ್ರಾಸವರ್ಣ. ಮೊದಲ ಎರಡು ಪಾದಗಳಲ್ಲಿ ಇದು ವ್ಯಂಜನಗುಚ್ಛದ ಎರಡನೆಯ ಸ್ಥಾನದಲ್ಲೂ ಉಳಿದ ಪಾದಗಳಲ್ಲಿ ಮೊದಲ ಸ್ಥಾನದಲ್ಲೂ ಬರುತ್ತದೆ. ತುಳು ಕವಿಗಳು ಈ ಕುರಿತು ನಿರ್ದಿಷ್ಟ ನಿಯಮವನ್ನೇನೂ ಪಾಲಿಸಿದಂತೆ ಕಂಡು ಬರುವುದಿಲ್ಲ.

ೞ-ತ, ತ-ಥ, ನ-ಣ, ಋ-ಆರ್‌, ಶ-ಷ-ಸ – ಹೀಗೆ ಉಚ್ಚಾರ ಸಾಮ್ಯವುಳ್ಳ ಅಕ್ಷರಗಳನ್ನು ಸಾಕ್ಷರಗಳಾಗಿ ಬಳಸಿದ ಧಾರಾಳ ಉದಾಹರಣೆಗಳು ತುಳು ಛಂದಸ್ಸಿನಲ್ಲಿವೆ.

ಖಂಡಪ್ರಾಸವೂ ಯತಿಯೂ ತುಳು ಕಾವ್ಯಗಳಲ್ಲಿ ಜತೆಯಾಗಿ ಬಳಕೆಯಾಗಿವೆ. ಒಂದು ಪಾದದ ಕೊನೆಯಲ್ಲಿ ಶಬ್ದದ ಪೂರ್ವಾರ್ಧವೂ, ಮುಂದಿನ ಪಾದದ ಆದಿಯಲ್ಲಿ ಉತ್ತರಾರ್ಧವೂ ಇದ್ದು, ಉತ್ತರಾರ್ಧದಲ್ಲಿ ಪ್ರಾಸವೂ, ಪಾದಾಂತ್ಯದಲ್ಲಿ ಯತಿಯೂ ಇರುವ ಉದಾಹರಣೆಗಳು ತುಳು ಕಾವ್ಯದಲ್ಲಿ ದಾರಾಳ ಸಿಗುತ್ತವೆ.

೧. ಕುಂಡಿಕೇಟವಗಾಹೊ ಬೆಂಬುಟ ರಾಜಸೂಯ ಮಹಾಧ್ವರೊಂ –
ಟುಂಡ್‌ಮಾಂತಿ ಫಲೊಂತ್‌ಲೇರ ಕ್ಷಣಾರ್ಧೋನ್ಟೇಭವಿಪೇರೆಕಾ

(ಕಾ. ೮-೫೨)

೨. ಶೌನಕ ಮುನೀಶ್ವರೆರೆ ಸೂಕ್ಷಿಪುಲೆ ಧರ್ಮ –
ಸೂನು ಗಜ ಮಂದಿರೊಂಟ್‌ನಿಲ್ಪ ಫಲುಕಾಲೊ

(ಭಾ. ೧-೧೩-೨)

೩. ಶಾಸ್ತ್ರೋಂಟಾ ಸಕಲಾಶ –
ಸ್ತ್ರಾಸ್ತ್ರೋಂಟಾ ನುಂಬುತ್ರಿ –
ನೇತ್ರೆ ತತ್ತ್‌ನವೊಳ್‌ಭಾರ್ಗವ ಶ್ರೀ ರಾಮೆರ್‌

(ಮ. ೩-೩೪)

ತುಳುವಿಗೆ ಪಾದಾಂತ್ಯಯತಿ ನಿಯತ. ಕೆಲವು ಛಂದೋಬಂಧಗಳಲ್ಲಿ ಪಾದ ಮಧ್ಯದಲ್ಲೂ ನಿರ್ದಿಷ್ಟ ಗಣದ ಮುಂದೆ ನಿಯತವಾಗಿ ಯತಿ ಬರುತ್ತದೆ.

ಸ್ಟ್‌ ಎಂಬ ಧ್ವನಿಮಾ

‘ಸ್ಟ್‌’ ಎಂದು ಸಂಕೇತಿಸಲಾದ, ತುಳುವಿಗೇ ವಿಶಿಷ್ಟವಾದ ವರ್ತ್ಸ್ಯ ಧ್ವನಿಮಾ ಎಲ್ಲ ತುಳು ಪ್ರಾಚೀನ ಕಾವ್ಯಗಳಲ್ಲೂ ವ್ಯಾಪಕವಾಗಿ ಬಳಕೆಯಾಗಿದೆ.

ವೆಂಕಟರಾಜ ಪುಣಿಂಚತ್ತಾಯರು ಭಾಗವತೊದ ಪ್ರಸ್ತಾವನೆಯಲ್ಲಿ- ‘ಈ ಧ್ವನಿಮಾವು ತಮಿಳು ಮಲಯಾಳಂಗಳಲ್ಲಿ ಈಗಲೂ ಪ್ರಚಲಿತವಿದೆ. ಅದೇ ದ್ರಾವಿಡ ವರ್ಗಕ್ಕೆ ಸೇರಿದ ತುಳುವಿನಲ್ಲೂ ಅದು ಇರುವುದು ಅಸಹಜವೇನಲ್ಲ. ಇದನ್ನು ಮಲಯಾಳಂನಲ್ಲಿ ‘೧೧’ ಎಂಬ ಸಂಕೇತದಿಂದ ಗುರುತಿಸಲಾಗುತ್ತದೆ. ಇದು ಎರಡು ಶಕಟ ರೇಫಗಳ ಜೋಡಣೆಯೆಂದು ಆಕಾರದಿಂದಲೇ ತಿಳಿದು ಬರುತ್ತದೆ.'[10] ಎಂದಿದ್ದಾರೆ.

ಮಲಯಾಳಂನ ಲಿಪಿಯಲ್ಲಿ ‘೧೧’ ಎರಡು ಶಕಟರೇಫಗಳಂತೆ ಕಂಡರೂ ಉಚ್ಚಾರದಲ್ಲಿ ತಕಾರ ಅಥವಾ ಟಕಾರವನ್ನು ವರ್ತ್ಸ್ಯ (Alveotar) ಸ್ಥಾನದಿಂದ ಉಚ್ಚರಿಸಿದರೆ ಸಿಗುವ ಉಚ್ಚಾರವೇ ಇದೆ. ಇದು ಸಹಜ ದ್ವಿತ್ವಾಕ್ಷರವಾಗಿದ್ದು ಹಿಂದಿನ ಅಕ್ಷರಕ್ಕೆ ಎರಡು ಮಾತ್ರೆಗಳ ಮೌಲ್ಯಗಳನ್ನು ಕೊಡುತ್ತದೆ.

ತುಳುವಿನ ‘ಸ್ಟ್‌’ ಯಾವುದೇ ಸಂದರ್ಭದಲ್ಲಿ ಹಿಂದಿನ ಹ್ರಸ್ವಕ್ಕೆ ಎರಡು ಮಾತ್ರೆಗಳ ಮೌಲ್ಯವನ್ನು ಕೊಡುವುದಿಲ್ಲ. ಮಲಯಾಳಂನಲ್ಲಿ ‘೧೧’ ನಿಂದ ಆರಂಭವಾಗುವ ಶಬ್ದಗಳಿಲ್ಲ. ಆದರೆ ತುಳುವಿನಲ್ಲಿ ಇಂತಹ ಧಾರಾಳ ಶಬ್ದಗಳಿವೆ. ಸಂಯುಕ್ತಾಕ್ಷರಗಳಿಂದ ಅಥವಾ ಸಜಾತೀಯ ವ್ಯಂಜನಗುಚ್ಛದಿಂದ ಶಬ್ದಗಳು ಆರಂಭವಾಗುವ ರೂಢಿ ದ್ರಾವಿಡ ಭಾಷೆಗಳಲ್ಲಿಲ್ಲ. ಆದ್ದರಿಂದ ಮಲಯಾಳಂನ ‘೧೧’ ದ್ವಿತ್ವವಾಗಿದ್ದರೂ ತುಳುವಿನ ‘ಸ್ಟ್‌’ ದ್ವಿತ್ವವಾಗಿರುವ ಸಂಭವವಿಲ್ಲ.

ಹಳೆಯ ತುಳುವಿನ ಶಬ್ದಾದಿಯ ‘ಸ್ಟ್‌’ ಹೊಸ ತುಳುವಿನಲ್ಲಿ ಅ, ಅ್, ಇ- ಗಳಾಗಿ ಪರಿವರ್ತನೆ ಹೊಂದಿದೆ.

ಉದಾ:- ಸ್ಟ್‌ಬೆರ್ – ಅ್೦ಬೆರ್
ಸ್ಟೀಕುಳು – ಇಕುಳು
ಸ್ಟಾರ್ – ಆರ್

ಶಬ್ದ ಮಧ್ಯ ಹಾಗೂ ಶಬ್ದಾಂತ್ಯದ ‘ಸ್ಟ್‌’, ತ್‌ಅಥವಾ ದ್‌ಆಗಿ ಪರಿವರ್ತನೆ ಹೊಂದಿದೆ. ಉದಾ:-

ಆಸ್ಟೆರ್‌ – ಆತೆರ್‌
ಬೂಳ್‌ಸ್ಟ್‌ – ಬೂರ್‌ತ್‌ / ದ್‌
ಕಟ್ಟ್‌ಸ್ಟ್ – ಕಟ್ಟ್‌ತ್‌ / ದ್‌

ಶಬ್ದ ಮಧ್ಯದಲ್ಲೂ ಕೆಲವೊಮ್ಮೆ ‘ಇ’ ಕಾರದ ಉಚ್ಚಾರ ಬರುವುದುಂಟು. ಉದಾ:-

ಆಸ್ಟೆಕ್‌ – ಅಯಿಕ್ಕ್‌
ಆಸ್ಟೆಟ್‌ತ್ತೆ – ಆಯಿಡ್‌ತ್ತೆ

ಸ್ಟ್‌ವಿನ ಸ್ಥಾನದಲ್ಲಿ ಬಳಕೆಯಾಗುವ ತ್‌, ದ್‌ಗಳಿಗೆ ಸ್ವಲ್ಪ ಮಟ್ಟಿನ ವರ್ತ್ಸ್ಯೋಚ್ಚಾರಣೆ ಇದೆ.[11] ಎಂದಿದ್ದಾರೆ.

ತುಳು ಗದ್ಯಕಾವ್ಯ ‘ದೇವೀ ಮಹಾತ್ಮೆ’ ಯಲ್ಲಿ ‘ಸ್ಟ್‌’ ನ ಬದಲು ‘ಸ್ದ್‌’ ಬಳಕೆಯಾಗಿದೆ. ಅಂದರೆ ದೇವಿ ಮಹಾತ್ಮೆ ‘ಸ್ಟ್‌’ ಗೆ ‘ದ್‌’ ವಿನ ಸ್ಥಾನದ ಉಚ್ಚಾರವಿತ್ತೆನ್ನುವುದಕ್ಕೆ ಸಾಕ್ಷಿ ಹೇಳುತ್ತದೆ. ಭಾಷಾ ಪ್ರಯೋಗದ ದೃಷ್ಟಿಯಿಂದ ಸಂಪಾದಕರು ದೇವೀಮಹಾತ್ಮೆ ಭಾಗವತೊಕ್ಕಿಂತ ಪ್ರಾಚೀನವೆಂದು ಹೇಳಿದ್ದರೂ ‘ಸ್ದ್‌’ ವಿನ ಪ್ರಯೋಗ ದೇವಿ ಮಹಾತ್ಮೆಯೇ ಅರ್ವಾಚೀನವಿರಬೇಕೆಂಬ ಸಂಶಯ ಮೂಡಿಸುತ್ತದೆ. ಏಕೆಂದರೆ ಭಾಗವತೊದ ‘ಸ್ಟ್‌’ ದೇವೀ ಮಹಾತ್ಮೆಯ ಕಾಲಕ್ಕೆ ‘ಸ್ದ್‌’ ಆಗಿ ಬರಬರುತ್ತ ‘ದ್‌ / ತ್‌’ ಆಗಿ ಪರಿವರ್ತನೆಗೊಂಡಿರಬಹುದು ಎನ್ನುವ ಊಹೆಗೆ ಅವಕಾಶವಿದೆ. ಏಕೆಂದರೆ ‘ಸ್ದ್‌’ ನಿಂದ ಆರಂಭವಾಗುವ ಶಬ್ದ ‘ಸ್ದ್‌’ ಲೋಪವಾಗಿಯೂ ಪ್ರಯೋಗವಾದ ಎರಡು ಉದಾಹರಣೆಗಳು ದೇವೀ ಮಹಾತ್ಮೆಯಲ್ಲೇ ಸಿಗುತ್ತವೆ. ಉದಾ:-

ಸ್ದ್‌ಳ್ಳಂಜೆತ್ತಿ > ಉಳ್ಳಂಚಿತ್ತಿ
ಸ್ದ್‌ಳೆತರ್ಪಿ > ಉಳೆತರ್ಪಿ

ಒಟ್ಟಿನಲ್ಲಿ, ಪ್ರಾಚೀನ ತುಳುವಿನ ಸ್ಟ್‌ / ಸ್ದ್‌ಗಳು ‘ಸ್ಟ್‌’ ದ ಸ್ಥಾನದಲ್ಲಿ ನಿಂತು ‘ದ್‌’ ಅಥವಾ ‘ತ್‌’ ವನ್ನು ಉಚ್ಚರಿಸಿದಾಗ ದೊರೆಯುವ ವರ್ತ್ಸೋಚ್ಚಾರ ಹೊಂದಿದ್ದುವೆನ್ನುವುದು ನಿಸ್ಸಂಶಯ. ಆಧುನಿಕ ತುಳುವಿನಲ್ಲಿ ಶಬ್ದಾರಂಭದ ‘ಸ್ಟ್‌’ ಲೋಪವಾಗಿದೆ. ಶಬ್ದ ಮಧ್ಯ ಮತ್ತು ಶಬ್ದಾಂತ್ಯದ ‘ಸ್ಟ್‌’. ದ್‌ಅಥವಾ ತ್‌ಆಗಿ ಬದಲಾಗಿದೆ.

ಹಳೆಯ ತುಳುವಿನಲ್ಲಿ ‘ಸ್ಟ್‌’ ಒಂದು ದ್ವಿತ್ವರಹಿತ ಸ್ವತಂತ್ರ ವರ್ತ್ಸ್ಯ ಧ್ವನಿಮಾ ಆಗಿತ್ತು. ಅದರ ಮುಂದಿನ ಅಕ್ಷರ ದ್ವಿತ್ವವಾಗಿದ್ದರೆ ಅದಕ್ಕೆ ಎರಡು ಮಾತ್ರೆಗಳ ಮೌಲ್ಯ ಬರುತ್ತಿತ್ತು. ಉದಾಹರಣೆಗೆ-

ಸನ್ಮತೀಟುದ್‌ಸ್ಟರ್ಚಿತ್‌ಚಿಂತಿತೆನ್‌
(ಭಾ ೧-೫-೨೪)

 

[1] ಭಾರತೀಯ ಛಂದಶ್ಯಾಸ್ತ್ರ: ಪು. ಗೋ. ಕುಲಕರ್ಣಿ. ಪು. ೭೦

[2] ಸಮಾಲೋಕನ. ಪು. ೨೦೭

[3] ಅದೇ. ಪು. ೨೦೦ – ೨೩೩ ಸಂಕ್ಷಿಪ್ತಗಳು : ಮ-ಮಹಾಭಾರತೊ, ಭಾ-ಭಾಗವತೊ, ಕಾ-ಕಾವೇರಿ, ರಾ-ರಾಮಾಯಣೊ.

[4] ಕರ್ನಾಟಕ ಲೋಚನ. ದಶಂಬರ ೧೯೯೦.

[5] ಛಂದೋಗತಿ. ಸೇಡಿಯಾಪು ಕೃಷ್ಣ ಭಟ್ಟ ಪು. ೫೯ ಅಡಿಟಿಪ್ಪಣಿ.

[6] ಕವಿರಾಜಮಾರ್ಗ ೧ – ೧೫೫.

[7] ಈ ವಿಚಾರ, ವಿತಾಲವೃತ್ತಗಳಿಗೆ ಮಾತ್ರ ಅನ್ವಯವಾಗುತ್ತದೆ. ಸತಾಲವೃತ್ತಗಳು – ಅವು ಅಕ್ಷರ, ಮಾತ್ರಾ, ಅಂಶವೃತ್ತಗಳಲ್ಲಿ ಯಾವುದೇ

[8] ಇರಲಿ – ಪಾದಾಂತ ಯತಿಯನ್ನು ಸಹಜವಾಗಿಯೇ ಪಾಲಿಸುತ್ತವೆ.

[9] ಪದ್ಯ ಪಾದಾದಿಯ ವ್ಯಂಜನ ವರ್ಣ ಸಾಮ್ಯ.

[10] ನುತ ಶಬ್ದಾಲಂಕಾರದೊಳತಿಶಯಮೀ ಕನ್ನಡಕ್ಕೆ ಸತತಂ ಪ್ರಾಸಂ. ೧ – ೩೫.

[11] ಪು. ೧೯.