ಲಿಖಿತ ಪರಂಪರೆಯಿಂದೊಡಗೂಡಿರುವ ಪಂಚ ದ್ರಾವಿಡ ಭಾಷೆಗಳ ನಡುವೆ ಯಾವಾಗಲೂ ಮುಜುಗರಪಡಬೇಕಾಗಿದ್ದ ಪರಿಸ್ಥಿತಿ ತುಳುಭಾಷೆಗಿತ್ತು. ಜನಾಂಗಗಳ ನಡುವೆ ವಿವಿಧ ಕರಣಗಳಿಗೆ ಅಸಮಾನತೆ ಕಂಡು ಬರುವ ಹಾಗೆ, ಭಾಷೆಗಳ ನಡುವೆಯೂ ಬೇರೆ ಬೇರೆ ಕಾರಣಗಳಿಗಾಗಿ ಅಸಮಾನತೆಗಳು ತಲೆದೋರುತ್ತವೆ. ಮುಖ್ಯವಾಗಿ ಲಿಪಿ, ಸಾಹಿತ್ಯ, ಸಂವಿಧಾನಿಕ ಮನ್ನಣೆ, ರಾಷ್ಟ್ರ ಮನ್ನಣೆ, ಅಂತಾರಷ್ಟ್ರೀಯ ಮನ್ನಣೆ ಇವುಗಳ ನೆಲೆಯಲ್ಲಿ ಭಾಷೆಗಳಿಗೆ ತಕ್ಕ ಮನ್ನಣೆ ನೀಡುವ ಪಾಠವಿದೆ. ಇವುಗಳಲ್ಲಿ ಲಿಪಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಡೆಯುವ ತರಮ ಭಾವವು ಭಾಷೆಗಳನ್ನು ಬಾಲಗ್ರಹದಂತೆ ಕಾಡುವ ಪಿಡುಗುಗಳಾದರೆ, ಉಳಿದ ಭಾಷೆಗಳಿಗೆ ತಾರುಣ್ಯದಲ್ಲಿ ಕಾಡುವ ಸಮಸ್ಯೆಗಳಾಗಿವೆ. ಯಾವುದೇ ಭಾಷೆಗೆ ಪ್ರಾಥಾಮಿಕ ಮನ್ನಣೆ ಸಿಗಬೇಕಾದರೆ ಲಿಪಿ ಮತ್ತು ಲಕ್ಷಣಗಳು ಆ ಭಾಷೆಯಲ್ಲಿ ರಬೇಕಾಗುತ್ತವೆ. ಇಲ್ಲದಿದ್ದರೆ ಆ ಭಾಷೆಯನ್ನು ಅಂತಹ ಗುಣಗಳಿರುವ ಭಾಷೆಯ ಉಪಭಾಷೆಯೇಂದೇ ಪರಿಗಣಿಸಲಾಗುತ್ತದೆ. ಭಾಷಾ ಶಾಸ್ತ್ರದ ದೃಷ್ಟಿಯಿಂದ ಇದು ಹುರುಳಿಲ್ಲದ ವಾದವಾದರೂ ಭಾಷೆಯೊಂದಕ್ಕೆ ಅಂತಹ ಸ್ಥಿತಿ ಬರುವುದು ಸಾಮಾಜಿಕ ವಾಸ್ತವವೇ ಆಗಿದೆ.

ಈ ಪೀಠಿಕೆಯ ತುಳು ಭಾಷೆಯ ಮುಜುಗರಗಳನ್ನು ಸಾಕಷ್ಟು ಸ್ಪಷ್ಟಪಡಿಸಬಲ್ಲುದೆನಿಸುತ್ತದೆ. ಮಿಕ್ಕೆಲ್ಲ ಗುಣಗಳಿದ್ದೂ, ಸಮೃದ್ಧಿಯಾದ ಮೌಖಿಕ ಪರಂಪರೆಯನ್ನು ತುಳುವಿಗೆ ಲಿಪಿ ಮತ್ತು ಸಾಹಿತ್ಯದ ದೃಷ್ಟಿಯಿಂದ ಎದ್ದು ಕಾಣುವ ಕೊರತೆಗಳಿವೆ ಎಂದು ವಿಶೇಷವಾಗಿ ಅದರ ಭಾಷಿಕರಿಗೆ ಅನಿಸುತ್ತಿತ್ತು. ಪಂಡಿತ ವೆಂಕಟರಾಜ ಪುಣಿಂಚತ್ತಾಯರಂತಹವರಿಗೆ ಅಡು ಸಂಶೋಧಿಸಲೇಬೇಂಬಷ್ಟೂ ಅನುಮಾಸ್ಪದ ವಿಷಯವಾಗಿಯೂ ಕಾಡಿತು. ಆದರ ಫಲವೆಂಬಂತೆ ಇದೀಗ ತುಳು ಭಾಷೆಯ ಲಿಪಿ ಮತ್ತು ಸಾಹಿತ್ಯ ಪರಂಪರೆಯ ಸ್ಪಷ್ಟ ಕುರುಹುಗಳು ಕಾಣತೊಡಗಿವೆ, ವೆಂಕಟರಾಜ ಪುಣಿಂಚತ್ತಾಯರು ನಡೆದಾಡುವುದನ್ನು ನೋಡಿದಾಗ ತುಳುಭಾಷೆಯೇ ನಡೆದುಬಂದಂತೆ ಕಾಣುವುದು ಈಗ ಅತಿಶಯೋಕ್ತಿಯ ಮಾತಲ್ಲ. ಏಕೆಂದರೆ ಲಿಪಿ ಮತ್ತು ಸಾಹಿತ್ಯ ಗಣಗಳು ಭಾಷೆಗೆ ಚಾಕ್ಷುಪರೂಪವನ್ನು ನೀಡುವುದು ಸಹಜ ತಾನೇ? ಅಂಬರೀಷೋಪಾಖ್ಯಾನ, ಇವುಗಳಿಂದ ತುಳುವಿನ ಕಾವ್ಯ ಪರಂಪರೆ ಪ್ರಾಚೀನವಾದುದೆಂದು ತಿಳಿಯಲು ಈಗ ಯಾವ ಅನುಮಾನವೂ ಇಲ್ಲ.

ಅರುಣಾಬ್ಜ ಕವಿಯ ಮಹಾಭಾರತದಲ್ಲಿ ಮಹಾಭಾರತದ ಅರಂಭದ ಪರ್ವಗಳ ಕಥೆಯಿದೆ. ೧. ಸಂಭವ ಪರ್ವ ೨. ಗೃಹಪರ್ವ ೩. ವೈವಾಹಿಕ ಪರ್ವ೪. ಹಿಡಿಂವಧೆ ಪರ್ವ ೫. ಬಕವಧೆ ಪರ್ವ. ೬.ಚೈತ್ರರಥಪರ್ವ, ೭. ಸ್ವಯಂವರಪರ್ವ ೮. ವಿದುರಾಗಮನ ಪರ್ವ.೯. ಅರ್ಜುನವನವಾಸಪರ್ವ ೧೦. ಸುಭದ್ರಾಪಹರಣ ಪರ್ವ.೧೧. ಹರಿಣಾಹರಣ ಪರ್ವ ೧೨. ಖಾಂಡವಹನ ಪರ್ವ- ಹೀಗೆ ಕಾವ್ಯದ ಹರಹುಗಳು ಇವೆ. ತುಳುಭಾಷೆಯಲ್ಲಿ ರಚಿತವಾಗಿರುವ ನಾಲ್ಕು ಅಪೂರ್ವ ಕಾವ್ಯಗಳನ್ನು ಪುಣಿಂಚತ್ತಾಯರು ಈವರೆಗೆ ಸಾರಸ್ವತಲೋಕದ ಮುಂದಿರಿಸಿದ್ದಾರೆ. ಈ ಎಲ್ಲ ಗ್ರಂಥಗಳೂ ತುಳುಲಿಪಿಯಲ್ಲೇ ಇವೆಯಾದರೂ, ಸಂಪಾದನೆಯಾದಾಗ ಕನ್ನಡ ಲಿಪಿಯಲ್ಲೇ ಲಿಪೀಕರಣಗೊಂಡು ಪ್ರಕಟವಾಗಿರುವುದು ವಿಶೇಷವಾಗಿದೆ. ಇದಕ್ಕೆ ಕಾರಣ ಪ್ರಾಚೀನ ತುಳು ಲಿಪಿಯು ಈಗ ಬಳಕೆ ತಪ್ಪಿರುವುದೇ ಆಗಿದೆ. ಕಾವ್ಯಗಳ ಆರಂಭದಲ್ಲಿ ಪುಣಿಂಚತ್ತಾಯರು ಕನ್ನಡದಲ್ಲಿ ಬರೆದ, ಅಭ್ಶಾಸ ಪೂರ್ಣವಾದ ಸುದೀರ್ಘ ಪ್ರಸ್ತಾವನೆಗಳು ಆ ಕಾವ್ಯಗಳಷ್ಟೇ ಮುಖ್ಯವ್ಶಾಗಿವೆ. ಅಲ್ಲದೆ ಗ್ರಂಥದ ಪ್ರತಿಪುಟದಲ್ಲಿಯೂ ಇರುವ ಕನ್ನಡದಲ್ಲಿ ಬರೆದಿರುವ ಟಿಪ್ಪಣಿಗಳಿಂದ ಕನ್ನಡಿಗರಿಗೂ ಇದರ ಓದು ಕ್ಲಿಷ್ಟವೆನಿಸಲಾರದು.

ಗ್ರಂಥ ಸಂಪಾದನೆ ಎಂದರೆ ಮೂಲ ಗ್ರಂಥದ (ಕವಿಯೇ ಬರೆದಿರಬಹುದುದಾದ ಮೂಲಗ್ರಂಥ) ನಿಜರೂಪ ದರ್ಶನೆವೆಂಬುದು ಆ ಬಗೆಗಿನ ಅಧ್ಯಯನ ಕ್ರಮದ ಒಂದು ಸಾಧಾರಣ ನಿರೂಪವಾಗಿದೆ. ಇದರಲ್ಲಿ ಹಸ್ತಪ್ರತಿ ಶೋಧನೆ, ಪಾಠನಿರ್ಣಯ, ಅಕ್ಷರ ಸ್ಪಾಲಿತ್ಯ, ಶುದ್ಧ ಪ್ರತಿ ತಯಾರಿ ಇತ್ಯಾದಿ ವಿಷಯಗಳು ಒಳಗೊಳ್ಳುತ್ತವೆ. ಹಾಗೆ ನೋಡಿದರೆ ಒಂದಕ್ಕಿಂತ ಹೆಚ್ಚು ಹಸ್ತಪ್ರತಿಗಳಿಗೆ ಸಂಬಂಧಿಸಿದ ಶಾಸ್ತ್ರವಿದು. ಆದರೆ ಒಂದೇ ಹಸ್ತಪ್ರತಿ ದೊರೆತಾಗಲೂ, ಅದರ ಶೋಧನೆ ಮತ್ತು ಸಂಪಾದನೆ ಗ್ರಂಥ ಸಂಪಾದನೆ ಯೇ ಆಗುತ್ತದೆ ಎಂಬುದು ಪೂರ್ವ ಸೂರಿಗಳ ಮತ. ಅಂತೆಯೇ ಪುಣಿಂಚತ್ತಾಯರು ಈವರೆಗೆ ಶೋಧಿಸಿದ ಗ್ರಂಥಗಳೆಲ್ಲ ಏಕಹಸ್ತಪ್ರತಿಯಿಂದ ಸಂಪಾದಿಸಿದುವುಗಳೇ ಆಗಿವೆ. ಗ್ರಂಥ ಸಂಪಾದನೆಯ ಅಧ್ಯಯನ ದೃಷ್ಟಿಯಿಂದ ಅದು ಅವರ ಸಾಧನೆಯೂ ಆಗಬಲ್ಲುದು. ಏಕೆಂದರೆ, ದೊರೆತ ಹಸ್ತಪ್ರತಿಗಳೇ ಅಪೂರ್ಣವಾಗಿರುವಾಗ ಇತರ ಹಸ್ತಪ್ರತಿಗಳು ದೊರೆಯುತ್ತವೆ ಎಂಬ ಅಶಾವಾದಕ್ಕೂ ಎಡೆಯಿಲ್ಲದಂತಾಗಿದೆ ಇದು ಒಂದು ಮಿತಿಯೂ ಆಗುವ ಸಾಧ್ಯತೆಯಿರುವುದರಿಂದೇಕೆಂದರೆ ಅನುಮಾನಾಸ್ಪದವೂ ಆಗಿರುವುದರಿಂದ ಕಂಸದಲ್ಲಿರಿಸಿದ ಪದಗಳು, ಪಾಠಗಳು, ಸಹಜವಾಗಿಯೇ ಅನುಮಾನಾಸ್ಪದವೂ ಆಗಿರುವುದರಿಂದ ! ಇಂತಹ ಒಂದು ಚರ್ಚೆ ಈ ಲೇಖನದ ವ್ಯಾಪ್ತಿಗೆ ಬರುವುದಿಲ್ಲವೆಂದು ನಾನು ತೀರ್ಮನಿಸಿರುವುದರಿಂದ ಅವರ ಸಾಧನೆಯ ಬಗೆಗೆ ಗಮನಹರಿಸಬುದಾಗಿದೆ.

ಲಿಪಿ ಶೋಧ

ತುಳು ಭಾಷೆಗೆ ಲಿಪಿಯಲ್ಲವೆಂಬ ಕೊರತೆ ತುಂಬ ಹಿಂದಿನಿಂದಲೇ ಇತ್ತು. ನಾಡಿಗೆ ಬಂದ ಮಿಶನರಿಗಳು ಕನ್ನಡದ ಲಿಪಿಯನ್ನೇ ಹೆಚ್ಚಾಗಿ ಬಳಕೆಗೆ ತಂದುದರಿಂದ ವ್ಯಾವಹಾರಿಕವಾಗಿ ಲಿಪಿಯ ಸಮಸ್ಯೆ ಪರಿಹಾರವಾಗಿತ್ತು. ಆದರೆ ಸಂಶೋಧನೆಯ ದೃಷ್ಟಿಯಿಂದ ಸಮಸ್ಯೆ ಇತ್ಯರ್ಥವಾಗದೆ ಹಾಗೆಯೇ ಉಳಿದಿತ್ತು. ಅದು ಪರಿಹಾರ ಕಂಡುಕೊಂಡಿದ್ದು ಮೊದಲು ಹೇಳಿದ ‘ಶ್ರೀ ಭಾಗವತೊ’ ಕಾವ್ಯದ ಸಂಪಾದನೆಯಿಂದಲೇ ಮಲೆಯಾಳಂ ಭಾಷೆಗೆ ಲಿಪಿ ಇರಲಿಲ್ಲವೆಂಬುದು ಮಾತ್ರಷ್ಟೇ ಅಲ್ಲದೆ ಸಾಹಿತ್ಯ ಪರಂಪರೆಯಿಂದಲೂ ಮಲೆಯಾಳಂ ಭಾಷೆಯ ಇತಿಹಾಸ ಈಚಿನದು ಎಂಬುದು ಈಗ ಹೊರಬಿದ್ದ ಸತ್ಯವಾಗಿದೆ. ಪುಣಿಂಚತ್ತಾಯರು ಈಗ ಅದನ್ನು ‘ತುಳುಲಿಪಿ’ ಎಂದೇ ಪ್ರಸಿದ್ಧಿಗೊಳಿಸಿದ್ದಾರೆ. ಅದರ ಕಥೆ ಹೀಗೆ :

ಬಹುಹಿಂದಿನಿಂದಲೂ ಕೇರಳಕ್ಕೆ ದಕ್ಷಿಣ ಕನ್ನಡದ ತುಳು ಬ್ರಾಹ್ಮಣರು ಪೂಜೆ ನಿಮಿತ್ತ ಹೋಗುತ್ತಿದ್ದ ಪರಿಪಾಠವಿತ್ತು. ಈ ಬ್ರಾಹ್ಮಣರು ಸಂಸ್ಕೃತ ಬರವಣಿಗೆಗಾಗಿ ‘ಗ್ರಂಥ ಲಿಪಿ’ ಎಂಬ ಲಿಪಿಯನ್ನು ಬಳಕೆಗೆ ತಂದರು. ಅನಂತರ ಅದಕೆ ಆರ್ಯಎೞುತ್ತು ಎಂಬ ಹೆಸರಾಯಿತು. ಮಂತ್ರ ಸಂಖ್ಯೆ, ಪುಟಸಂಖ್ಯೆ ಇತ್ಯಾದಿಗಳನ್ನು ಬರೆಯಲು ಕನ್ನಡ ಸಂಖ್ಯೆಯನ್ನೇ ಬಳಸುತ್ತಿದ್ದರು. ಅದೂ ಕಾರಣವಾಗಿ ಈ ಲಿಪಿಯೂ ದಕ್ಷಿಣ ಕನ್ನಡದ ತುಳು ಬ್ರಾಹ್ಮಣರ ಕೊಡುಗೆ ಎನ್ನುವುದಕ್ಕೆ ಆಧಾರವಾಯಿತು. ಕೇರಳದಲ್ಲಿ ಮಂತ್ರಗಳನ್ನು ಬರೆಯಲು ಈ ಲಿಪಿಯನ್ನು ಬಳಸಿದಾಗಲೇ ಅದಕ್ಕೆ ಆರ್ಯಎೞುತ್ತು (ಆರ್ಯರ ಬರೆಹ) ಎಂಬ ಹೆಸರು ಪ್ರಾಪ್ತವಾದುದು. ಹಿಂದೆ ತುಳುನಾಡಲ್ಲಿ ವ್ಯಾವಹಾರಿಕವೇ ಮೊದಲಾಗಿ ತುಳು ಬರವಣಿಗೆಯಲ್ಲಿ ಉಪಯೋಗಿಸುತ್ತಿದ್ದ ಈ ಲಿಪಿಯನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ‘ಮಲಯಾಳಂ ಲಿಪಿ’ ಯಾಗಿ ಪರಿಗಣಿಸಲಾಗಿತ್ತು. (ಇದು ಕ್ರಿ. ಶ. ೯ನೆಯ ಶತಮಾನದ ಕಥೆ) ತುಳುಭಾಷೆಗೆ ರಾಜ್ಯ ಮತ್ತು ರಾಷ್ಟ್ರ ಭಾಷೆಯ ಮನ್ನಣೆಯಿಲ್ಲದಾಗ, ಮಲಯಾಳಂ ಭಾಷೆಯಲ್ಲಿ ತುಳುಲಿಪಿ ಅಧಿಕೃತವಾಗುತ್ತ, ತುಳುಭಾಷೆಯಲ್ಲಿ ಆ ಲಿಪಿಯೇ ಕೈ ತಪ್ಪಿ ಹೋಯಿತು. ಹೀಗೆ ಕೈ ತಪ್ಪಿ ಹೋದ ಲಿಪಿ ಪುಣಿಂಚತ್ತಾಯರು ಆರಸಿಕೊಂಡು ಹೋದಾಗಲೇ ಕಣ್ಣಿಗೆ ಬಿದ್ದದ್ದು.

ಅಂಶಗಣ ಷಟ್ಟದಿ

ಮೊತ್ತ ಮೊದಲಾಗಿ ನಾಗವರ್ಮನಿಂದ ಪ್ರಸ್ತಾಪಿಸಲ್ಪಟ್ಟ ಅಂಶಗಣ ಷಟ್ಪದಿಯು ಕನ್ನಡದಲ್ಲಿ ಬಳಕೆಯಾಗಿರುವುದು ವಿರಳವೇ ಆಗಿದೆ. ಕನ್ನಡದ ಹೆಚ್ಚಿನ ಕವಿಗಳೆಲ್ಲ ಷಟ್ಪದಿಗೆ ಮಾತ್ರ ಮಾರುಹೋದವರು. ಕನ್ನಡದಲ್ಲಿ ಸು. ೧೧೪೦-೫೦ರಿಂದೀಚೆಗೆ ಅಂಶಗಣ ಘಟಿತ ಷಟ್ಪದಿಯು ಮಾತ್ರಗಣಘಟಿತ ಷಟ್ಪದಿಯಾಗತೊಡಗಿರುವುದಕ್ಕೆ ಆಧಾರಗಳಿವೆ (ನೋಡಿ: ಚಿದಾನಂದ ಮೂರ್ತಿ, ‘ಇನ್ನೊಂದು ಷಟ್ಪದ ಸಂಶೋಧನ ತರಂಗ’, ಪುಟ ೧೩೫-೧೩೬). ಇದು ಸಹಿತವಾಗಿಯೇ ಎಂಬಂತೆ ಕನ್ನಡ ಕವಿಗಳು ಅಂಶಗಣ ಷಟ್ಪದಿಯತ್ತ ಒಲವು ತೋರಿರುವಂತೆ ಕಂಡುಬರುವುದಿಲ್ಲ. ಆದರೆ ಪುಣಿಂಚತ್ತಾಯರ ಈ ಶೋಧನೆಯಿಂದ ಆ ಬಗೆಗೆ ಕೆಲವು ಸಂದೇಹಗಳು ನನಗಂತೂ ಮೂಡತೊಡಗಿವೆ.

ಕನ್ನಡ ಸಾರಸ್ವತಲೋಕಕ್ಕೆ ವೆಂಕಟರಾಜ ಪುಣಿಂಚತ್ತಾಯರ ಪರಿಚಯ ಸ್ವಲ್ಪ ಅಪರೂಪವೆಂದೇ ಹೇಳಬೇಕು. ದಕ್ಷಿಣ ಕನ್ನಡದ ಕನ್ನಡಿಗರಿಗೆ ಪುಣಿಂಚತ್ತಾಯರ ಬಗೆಗೆ ಹೇಳಬೇಕಾದ ಅಗತ್ಯ ಅಲ್ಪವೇ. ಇಲ್ಲವಾದರೂ, ಬಹುಸಂಖ್ಯಾತ ಕನ್ನಡಿಗರಿಗೆ ಅವರ ಬಗೆಗೆ ತಿಳಿದಿರುವುದು ಅಲ್ಪವೇ. ಹಾಗಾದುದರಿಂದ ವೆಂಕಟರಾಜ ಪುಣಿಂಚತ್ತಾಯರ ಕಿರು ಪರಿಚಯ ಇಲ್ಲಿ ಉಪಯುಕ್ತ ಆಗಬಹುದೆನಿಸುತ್ತದೆ.

ಪುಂಡೂರು ವೆಂಕಟರಾಜ ಪುಣಿಂಚತ್ತಾಯರೆಂದು ಪೂರ್ಣ ನಾಮಧೇಯರಾಗಿರುವ ಇವರು ೧೦-೧೦-೧೯೩೬ರಲ್ಲಿ ಕಾಸರಗೋಡಿನ ಪುಂಡೂರು ಮನೆತನದಲ್ಲಿ ಜನಿಸಿದರು. ಕಾಸರಗೋಡಿನ ಪುಂಡೂರು ಮನೆತನದಲ್ಲಿ ಜನಿಸಿದರು. ಕಾಸರಗೋಡಿನ ಎಡನೀರು ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ನಿರ್ವಹಿಸಿದ ಇವರಿಗೆ ಆ ವೃತ್ತಿಗಾಗಿಯೇ ಮೀಸಲಾಗಿರಿಸದ ರಾಷ್ಟ್ರಪ್ರಶಸ್ತಿ ಗೌರವವೂ ಲಭಿಸಿದೆ. ಸಂಸ್ಕೃತ, ಕನ್ನಡ, ತುಳು, ಮಲೆಯಾಳಂ, ಇಂಗ್ಲಿಷ್‌, ತಮಿಳು, ಹಿಂದಿ, ಕೊಡವ ಭಾಷೆಗಳಲ್ಲಿ ಇವರು ಪಂಡತರಾದವರು. ‘ಶೈಲೂಷಿ’, ‘ಜೋಕಾಲಿ’, ‘ಆಲಡೆ’, ‘ಅಕ್ಷಕ ಯಾತ್ರೆ’ ಮತ್ತು ‘ಸುಭಾಷಿತ ಲಹರಿ’ ಇವು ಇವರ ಕಾವ್ಯ ಸಂಕಲನಗಳು. ‘ಮೊಗೇರ ಸಂಸ್ಕೃತಿ’, ‘ಕೇರಳದ ವರ್ಣಚಿತ್ರಲೋಕ’, ‘ತುಳು ನಡೆ-ನುಡಿ’ ಇವು ಅವರ ಅಧ್ಯಯನ ಗ್ರಂಥಗಳು. ‘ನಚೀಕತ’, ‘ಬೇಡನ ಮಗಳು’ ಮೊದಲಾದ ನಾಟಕ ಕೃತಿಗಳಲ್ಲದೆ, ಮಲೆಯಾಳಂ ಭಾಷೆಯ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಯಕ್ಷಗಾನ, ಮಕ್ಕಳ ಸಾಹಿತ್ಯ ಇವು ಪಣಿಂಚತ್ತಾಯರ ಆಸಕ್ತಿಯ ಕ್ಷೇತ್ರಗಳು.

ವಿಶೇಷವಾಗಿ ಈಗ ಸಂಶೋಧನೆ – ಅದರಲ್ಲಿಯೂ ಹಸ್ತ ಪ್ರತಿಯ ಶೋಧ-ಸಂಪಾದನೆ, ಅವರ ಪರಿಣಿತ ಕ್ಷೇತ್ರವಾಗಿದೆ. ಅವರ ಇತರ ಆಸಕ್ತಿಗಳೆಲ್ಲವೂ ಇದೀಗ ಈ ಕ್ಷೇತ್ರದಲ್ಲಿ ಅವರಿಗೆ ಬೇಕಾಗಿದ್ದ ಅಗತ್ಯ ಪರಿಶ್ರಮಗಳೆಂಬಂತೆ ಪೂರಕವಾಗಿರುತ್ತ, ಪುಣಿಂಚತ್ತಾಯರನ್ನು ಪಂಡಿತರನ್ನಾಗಿ ರೂಪಿಸಿವೆ.

ಇದು ಪುಣಿಂಚತ್ತಾಯರ ವ್ಯಕ್ತಿ ಪರಿಚಯ. ಆದರೆ ಅವರ ವಿದ್ವತ್ತಿನ ಪರಿಚಯ ಅದರಿಂದೇನೂ ಮಾಡಿದಂತಾಗಲಿಲ್ಲ. ಅದಕ್ಕಾಗಿ ಪುಣಿಂಚತ್ತಾಯರು ಬೆಳಕಿಗೆ ತಂದ ಗ್ರಂಥಗಳನ್ನು ಪರಿಚಯಿಸಬೇಕಾಗುತ್ತದೆ. ಇನ್ನು ಮುಂದಿನ ವಿವರಗಳು ಗ್ರಂಥ ಸಂಪಾದನೆಯ ಬಗೆಗೆ ಹೆಚ್ಚಿನ ಬೆಳಕು ಚೆಲ್ಲಬಲ್ಲವು.

೧. ವಿಷ್ಣು ತುಂಗವಿರಚಿತ ಶ್ರೀ ಭಗವತೊ

ಪುಣಿಂಚತ್ತಾಯರು ಶೋಧಿಸಿ ಸಂಪಾದಿಸಿದ ಈ ಕಾವ್ಯವನ್ನು ೧೯೮೪ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಆಗ ಮೊತ್ತ ಮೊದಲ ಬಾರಿಗೆ, ತುಳುವಿನಲ್ಲಿ ಲಿಖಿತ ಪರಂಪರೆ ಇದ್ದ ಬಗೆಗೆ ಅಧಿಕೃತ ದಾಖಲೆ ದೊರಕಿದಂತಾಯಿತು. ನಿತ್ಯಾತ್ಮ ಶುಕಯೋಗಿಯ ‘ಕನ್ನಡ ಭಾಗವತದ’ ಪ್ರೇರಣೆಯಿಂದ ಬರೆದ ಈ ಕಾವ್ಯವು ಅಪೂರ್ಣವಾದುದು. ಈಗಿರುವಂತೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸಂಧಿಗಳಷ್ಟೇ ನಮಗೆ ದೊರೆತಿರುವುದು. ಈತನ ಕಾಲವು ಕ್ರಿ.ಶ. ೧೬೩೯ ಎಂಬ ಸಾಮಾನ್ಯ ನಿರ್ಣಯಕ್ಕೆ ಪುಣಿಂಚತ್ತಾಯರು ಬಂದಿದ್ದಾರೆ. ಈತನು ಕಾಸರಗೋಡು ಪ್ರದೇಶಕ್ಕೆ ಸೇರಿದವನು ಎಂಬ ಅಭಿಪ್ರಾಯವಿರುವುದಾದರೂ ಮುಂದೆ ಪುಣಿಂಚತ್ತಾಯರು ಅದನ್ನು ಪರಿಷ್ಕರಿಸುತ್ತ, ಆತನ ಹುಟ್ಟುರಿನ ಬಗೆಗೆ ನಿರ್ದಿಷ್ಟ ಪುರಾವೆಗಳಿಲ್ಲವೆಂದೇ ಹೇಳುತ್ತಾರೆ.

೨. ಕಾವೇರಿ

ಇದು ಕೂಡ ಅಪೂರ್ಣವಾಗಿರುವ ಪ್ರಾಚೀನ ತುಳುಕಾವ್ಯ, ಕಾವ್ಯದ ಪ್ರಥಮಭಾಗವೇ ಅನುಪಲಬ್ಧವಾದುದರಿಂದ ಕವಿ, ಕಾಲ, ಸ್ಥಳದ ಬಗೆಗೆ ಯಾವ ಮಾಹಿತಿಯೂ ದೊರೆಯುವುದಿಲ್ಲ. ಅಧ್ಯಾಯ ೬ರಿಂದ ಅಧ್ಯಾಯ ೧೧ರವರೆಗಷ್ಟೇ ಲಭ್ಯವಾಗಿರುವುದು. ಈ ಪುಟ್ಟ ಕಾವ್ಯದಲ್ಲಿ ಕೊನೆಗೆ ‘ಬ್ರಾಹ್ಮಣ ಕವಿಯೊಬ್ಬನು ಪ್ರಜೋತ್ಪತ್ತಿ ಸಂವತ್ಸರದಲ್ಲಿ ಬರೆದ ಕಾವ್ಯವಿದು’ ಎಂದು ಹೇಳಲಾಗಿದೆ. ಪುಣಿಂಚತ್ತಾಯರು ಈತನನ್ನು ವಿಷ್ಣು ತುಂಗನ ಸಮಕಾಲೀನನೆಂದು ಸಾಧಾರ ಪರಿಗಣಿಸಿದ್ದಾರೆ. ಸ್ಕಾಂದಪುರಾಣಾಂತರ್ಗತವಾದ ಕಾವೇರಿ ಮಹಾತ್ಮೆಯೂ ಸಂಸ್ಕೃತದಲ್ಲಿ ೧೫ ಅಧ್ಯಾಯಗಳಷ್ಟು ವಿಸ್ತಾರವಾದುದು. ತುಳು ಕವಿಯು ಇದನ್ನು ತನಗೆ ಬೇಕಾದಂತೆ ಸಂಕ್ಷೇಪ ವಿಸ್ತಾರಗಳೊಂದಿಗೆ ವರ್ಣಿಸಿದ್ದಾನೆ. ರಾಷ್ಟ್ರ ಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ೧೯೮೭ರಲ್ಲಿ ಇದನ್ನು ಪ್ರಕಟಿಸಿದೆ.

೩. ತುಳು ದೇವೀ ಮಹಾತ್ಮೆ

ಇಲ್ಲಿಯವರೆಗೆ ತುಳುವಿನಲ್ಲಿ ದೊರೆತ ಪ್ರಥಮ ಗದ್ಯ ಕೃತಿಯಿದು. ಸಂಸ್ಕೃತದಲ್ಲಿರುವ ಮಾರ್ಕಾಂಡೇಯ ಪುರಾಣಾಂತರ್ಗವಾದ ದೇವೀ ಮಾಹಾತ್ಮೆಯನ್ನು ಈ ಕಾವ್ಯದಲ್ಲಿ ತುಳುವಿನಲ್ಲಿ ನೀರೂಪಿಸಲಾಗಿದೆ. ಈ ಕಾವ್ಯದ ೯ ನೇಯ ಅಧ್ಯಾಯವು ಪೂರ್ಣವಾಗಿಯೂ, ೧೦ನೇ ಅಧ್ಯಾಯದ ಆರಂಭದ ಭಾಗವು ನಷ್ಟವಾಗಿರುವುದನ್ನು ಬಿಟ್ಟರೆ, ಬಹುಮಟ್ಟಿಗೆ ಕಾವ್ಯವು ಪೂರ್ಣವಾಗಿಯೇ ಇದೆ. ಒಟ್ಟು ೧೩ ಅಧ್ಯಾಯಗಳಲ್ಲಿರುವ ಈ ಕಾವ್ಯವು ಮೂಲ ದೇವೀ ಮಹಾತ್ಮೆಯಷ್ಟು ದೀರ್ಘವಲ್ಲದ ಪುಟ್ಟ ಕಾವ್ಯವಾಗಿದೆ. ತೆಂಕಿಲ್ಲಾಯ ಕುಲದ ಬ್ರಾಹ್ಮಣ ಕವಿಯಿವನೆಂದು ತಿಳಿದು ಬರುತ್ತದೆ. ಕವಿಯ ಕಾಲದ ಬಗೆಗೆ ಖಚಿತವಾಗಿ ತಿಳಿದು ಬರುವುದಿಲ್ಲ. ವಿಷ್ಣುತುಂಗ ಕವಿಯ ಸಮಕಾಲೀನನಾಗಿರ ಬಹುದೆಂದು ಸದ್ಯಕ್ಕೆ ನಿರೂಪಿಸಬಹುದು.

೪. ಅರುಣಾಬ್ಜ ಕವಿಯ ಮಹಾಭಾರತೊ

ಹೆಸರೇ ಸೂಚಿಸುವಂತೆ ಇದು ತುಳುವಿನಲ್ಲಿ ರಚನೆಯಾದ ಪ್ರಾಚೀನ ಮಹಾಕಾವ್ಯ. ಈ ಕಾವ್ಯದ ಪ್ರಕಟಣೆಯೊಂದಿಗೆ ಮೊದಲು ದೊರಕಿದ ‘ಶ್ರೀ ಭಾಗವತೊ’ ತುಳುವಿನ ಅದಿಕಾವ್ಯವೆಂಬ ನಿಲುವು ಬದಲಾಯಿತು. ಹಾಗೆಯೆ ವಿಷ್ಣುತುಂಗನು ಕಾಸರಗೋಡು ಪ್ರಾಂತದವನು ಎಂಬ ಅಭಿಪ್ರಾಯ ಸಹ ಬದಲಾಯಿತು. (ನೋಡಿ: ಅರುಣಾಬ್ಜನಿಗೆ ಮಹಾಭಾರತ, ಪ್ರಸ್ತಾವ ಪು. ೨೦) ಈ ಕಾವ್ಯದ ಕಾಲವು ಅದಕ್ಕಿಂತ ಪ್ರಾಚೀನವಾದುದಾಗಿದ್ದು ಈಗೀಗ ಆತನ ಕಾಲವನ್ನು ಕ್ರಿ. ಶ. ೧೩೮೫ ಅಥವಾ ಕ್ರಿ. ಶ. ಹದಿನಾಲ್ಕನೆಯ ಶತಮಾನದ ಕೊನೆ, ಇಲ್ಲವೇ ಹದಿನೈದು ಶತಮಾನದ ಆರಂಭವೆಂದು ತಿಳಿಯಲಾಗಿದೆ. ಹಾಗಾದಾಗ ‘ಮಹಾಭಾರತೊ’ ಕಾವ್ಯವೂ ‘ಶ್ರೀ ಭಾಗವತೊ’ ಕಾವ್ಯಕ್ಕಿಂತ ಪ್ರಾಚೀನವಾದುದುಷ್ಟೆ ಅಲ್ಲದೆ, ಆ ಕಾವ್ಯದಲ್ಲಿಯೆ ಅದಕ್ಕಿಂತ ಪ್ರಾಚೀನವಾದ ನಾಲ್ಕು ಕಾವ್ಯಗಳ ಉಲ್ಲೇಖವೂ ಸಿಗುತ್ತದೆ. ಅವುಗಳೆಂದರೆ ೧. ರಾಮಾಯಣ, ೨.ರುಕ್ಮೀಣಿ ಸ್ವಯಂವರ ೩. ಬಾಣಾಸುರವಧೆ.೪. ಕೀಚಕವಧೆ.

ತುಳುವಿನಲ್ಲಿ ಈಗ ಬೆಳಕಿಗೆ ಬಂದ ಎರಡು ಕಾವ್ಯಗಳಿಗೆ ನೇರವಾಗಿ ಕನ್ನಡ ಕವಿಗಳ ದಟ್ಟ ಪ್ರಭಾವವಿದೆ. ಕಾವ್ಯವನ್ನು ಹೇಳುವ ಶೈಲಿಗೆ ಸಂಬಂಧಿಸಿದಂತೆ ‘ಶ್ರೀ ಭಾಗವತೊ’ ಕಾವ್ಯದ ಕರ್ತೃವಿಗೆ ನಿತ್ಯಾತ್ಮ ಶುಕಯೋಗಿ ಮಾದರಿಯಾಗಿದ್ದಾನೆ. ಅಂತೆಯೇ ‘ಮಹಾಭಾರತೊ’ ಕಾವ್ಯದ ಕರ್ತೃವಾದ ಅರುಣಾಬ್ಜನಿಗೆ ಕುಮಾರವ್ಯಾಸ ಮಾದರಿಯಾಗಿದ್ದಾನೆ. ಛಂದಸಿಗೆ ಸಂಬಂಧಿಸಿದಂತೆ ಇವರಿಗೆ ಸಂಸ್ಕೃತದ ವೃತ್ತಗಳೇ ಮಾದರಿಯಾಗಿವೆ. ಅಂತೆಯೇ ಈ ಮಾಹಾಕಾವ್ಯಗಳಲ್ಲಿ ವಿವಿಧ ಜಾತಿಯ ವೃತ್ತಗಳು ಬಳಕೆಯಾಗಿವೆ. ಈ ಮಾದರಿಯನ್ನು ತುಳು ಕವಿಗಳು ಸಂಸ್ಕೃತದಿಂದಲೇ ತೆಗೆದುಕೊಂಡಿರಬಹುದು. ಕನ್ನಡ ಮತ್ತು ಸಂಸ್ಕೃತ ಮಾದರಿಗಳನ್ನು ತಮ್ಮದಾಗಿರಿಸಿಕೊಂಡಿದ್ದ ತುಳು ಕವಿಗಳು ವಿಪುಲವಾಗಿ ಅಂಶ ಷಟ್ಟದಿಗಳನ್ನು ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಹಾಗಾದರೆ ಅಂಶ ಷಟ್ಟದಿಗಳಿಗೆ ಅವರಿಗೆ ಪ್ರೇರಣೆ ಎಲ್ಲಿಂದ ಬಂತು ಎಂಬ ಪ್ರಶ್ನೆಗಳಿಗೆ ಸಹಜವಾಗಿಯೇ ಕನ್ನಡವೆಂದೇ ಅನುಮಾನಿಸ ಬೇಕಾಗುತ್ತದೆ. ಹೀಗಿರುತ್ತ ಹದಿನಾಲ್ಕು – ಹದಿನೈದನೆಯ ಶತಮಾನದಲ್ಲಿ ಅಥವಾ ಅದಕ್ಕಿಂತ ಪೂರ್ವದಲ್ಲಿ ಕನ್ನಡದಲ್ಲಿ ಅಂಶ ಷಟ್ಟದಿ ಕಾವ್ಯಗಳಿದ್ದುವೇ ಎಂಬುದೇ ಈಗ ಅನಿಮಾನ, ಪುಣಿಂಚತ್ತಾಯರ ಸಂಶೋಧನೆಯಿಂದ ಇದ್ದುವೆಂಬುದಾಗಿ ಪ್ರಬಲವಾದ ಊಹೆ ಮಾಡಲು ಸಾಧ್ಯವಿದೆ. ಈ ಬಗೆಗೆ ಹೆಚ್ಚಿನ ಶೋಧನೆಗೆ ಎಂದೂ ಅವಕಾಶವಿದೆ.

ಕವಿಕಾಲ ನಿರ್ಣಯ

ಗ್ರಂಥ ಸಂಪಾದನೆಯಲ್ಲಿ ಕವಿಯ ಕಾಲದ ಬಗೆಗಿನ ಚರ್ಚೆ ಬರಲೇ ಬೇಕು. ಗ್ರಂಥ ಸಂಪಾದನೆಯ ಶಿಸ್ತಿಗೆ ಸಂಬಂಧಿಸಿದ ವಿಷಯ ಇದು ಎಂಬುದಕ್ಕಿಂತಲೂ ಇತಿಹಾಸದ ಬಗೆಗೆ ನಮಗಿರುವ ಕೂತೂಹಲವು ಸಹಜವಾಗಿಯೇ ಆ ಪ್ರಶ್ನೆಯನ್ನು ಕೇಳುದಿರುವುದಿಲ್ಲ. ಸಂಪಾದಿತವಾಗಿರುವ ಗ್ರಂಥಗಳ ಕಾಲದ ಬಗೆಗಿರುವ ಗೊಂದಲಗಳನ್ನು ಅಲ್ಲಲ್ಲಿಯೇ ಈಗಾಗಲೆ ಹೇಳಲಾಗಿದೆ. ಅರುಣಾಬ್ಜಕವಿಯ ಕಾಲ ಮತ್ತು ಕುಮಾರವ್ಯಾಸನ ಕಾಲದ ಕುರಿತು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕಾಗಿದೆ. ಅರುಣಾಬ್ಜಕವಿಯ ‘ಮಹಾಭಾರತೊ’ ಕಾವ್ಯದಲ್ಲಿ ಆತನ ಕಾಲಕ್ಕೆ ಸಂಬಂಧಿಸಿದಂತೆ ‘ಶಿವಾ ನಿಡೂಂಬೂರ’ ನೆಂಬ ಆರಸನ ಬಗೆಗಿನ ಉಲ್ಲೇಖವು ಗಮನಾರ್ಹ ವಾದುದು. ಉಲ್ಲೇಖಿತ ಶಿವನಿಡೂಂಬೂರನು ಕ್ರಿ. ಶ. ೧೩೮೩ ರ ಕಾಲದವನೆಂಬುದಾಗಿ ಶಾಸನಾಧಾರದಿಂದ ತಿಳಿದುಬರುತ್ತದೆ. ಇದರ ಪ್ರಕಾರವಾಗಿ ಕವಿಯು ಸುಮಾರು ೧೪ನೇ ಶತಮಾನದ ಅದಿಯಲ್ಲಿ ಅಥವಾ ೧೪ನೇ ಶತಮಾನದ ಅಂತ್ಯದಲ್ಲಿ ಜೀವಿಸಿರಬೇಕೆಂದು ಪುಣಿಂಚತ್ತಾಯರು ತರ್ಕಿಸುತ್ತಾರೆ. ಅರುಣಾಬ್ಜನು ಕುಮಾರವ್ಯಾಸ ಕಾವ್ಯವನ್ನು ‘ಕಾವ್ಯಕ್ಕೆ ಗುರು’ ವೆಂದೇ ಪರಿಗಣಿಸಿ ಅನುಸರಿಸಿದ್ದಾನೆ. ಹೀಗಿರುವಾಗ ಕುಮಾರವ್ಯಾಸ ಅರುಣಾಬ್ಜನಿಗಿಂತ ಹಿಂದಿನವನು ಎಂಬುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಗೋವಿಂದಪೈಯವರು ಹೇಳಿರುವ ಕ್ರಿ. ಶ. ೧೨೩೦-೩೫ ಕುಮಾರವ್ಯಾಸನ ಕಾಲನಿರ್ಣಯವೇ ಅಧಿಕೃತವೆಂದಾಯಿತು. ಇದು ಕಾರಣವಾಗಿ ಪುಣಿಂಚತ್ತಾಯರ ಹೊಸ ಕಿತಿಗಳ ಶೋಧನೆ ಕನ್ನಡ ಕಾವ್ಯಗಳ ಚರ್ಚೆಯ ದೃಷ್ಟಿಯಿಂದ ಮುಖ್ಯವಾಗುತ್ತದೆ.

ಸಮಾರೋಪ

ಈ ಲೇಖನದಲ್ಲಿ ಕನ್ನಡ ಕಾವ್ಯಗಳ ಚರ್ಚೆಯಲ್ಲಿ ತುಳು ಗ್ರಂಥಸಂಪಾದನೆಯ ಮಹತ್ವವನ್ನು ವಿವರಿಸುವ ಉದ್ದೇಶವಿರಿಸಿಕೊಳ್ಳಲಾಗಿತ್ತು. ಮುಖ್ಯವಾಗಿ ತುಳು ಕಾವ್ಯಗಳಿಗೆ ಸಂಬಂಧಿಸಿದ ಅಂಶಗಳನ್ನು ವಿಶೇಷವಾಗಿ ಇಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾರಅವಾಗಿ ಈಗ ಈ ಲೇಖನವು ‘ತುಳಿ ಗ್ರಂಥಸಂಪಾದನೆ’ ಎಂಬ ಹೊಸ ವಿಷಯವೊಂದಕ್ಕೆ ಮೊದಲಾಗಿ ಪೀಠಿಕೆಯೂ ಆಯಿತು. ಏಕೆಂದರೆ ಇಷ್ಟು ಮಹತ್ತಾದ ಗ್ರಂಥ ಸಂಪಾದನೆಯಾದಗಲೂ ತುಳು ನಾಡಿನಲ್ಲಿಯೇ ಆ ಕುರಿತು ವಿಶೇಷ ಚರ್ಚೆಯೇನೂ ನಡೆಯುತ್ತಿಲ್ಲ. ಅದರಲ್ಲಿಯೂ ಗ್ರಂಥ ಸಂಪಾದನೆಯ ದೃಷ್ಟಿಯಿಂದ ಈವರೆಗೆ ಯಾರೂ ಈ ಕಾವ್ಯಗಳನ್ನು ಚರ್ಚಿಸಿಲ್ಲ. ದೊರಕಿದ ನಾಲ್ಕು ಗ್ರಂಥಗಳೂ ಏಕಹಸ್ತ ಪ್ರತಿಯಿಂದಲೇ ಸಂಪಾದಿತವಾದವು ಈಗ ಈ ಕಾವ್ಯಗಳ ಹಿನ್ನೆಲೆಯಲ್ಲಿಯೇ ಪಾಠ ಪರಿಷ್ಕಾರದ ಸಾಧ್ಯತೆಯಿದೆ. ಕನ್ನಡದಲ್ಲಾದರೋ ಗ್ರಂಥ ಸಂಪಾದನೆಯೆಂಬುದು ಹೊಸ ಗ್ರಂಥಗಳ ಶೋಧನೆ ಎಂಬರ್ಥಕ್ಕಿಂತಲೂ (ಒಂದಕ್ಕಿಂತ ಹೆಚ್ಚು ಹಸ್ತಪ್ರತಿಗಳಿಂದ ಶುದ್ಧ ಪಾಠನಿರ್ಣಯವೆಂವಷ್ಟಕ್ಕೇ ಸೀಮಿತವಾಗಿದೆ. ಇದಕ್ಕೆ ಹಸ್ತಪ್ರತಿ ಬಹುಳತೆ ಸುರ್ದೀಘವಾದ ಕಾವ್ಯ ಪರಂಪರೆಯೇ ಮುಖ್ಯ ಕಾರಣವೆನಿಸುತ್ತದೆ. ತುಳುವಿನ ಮಟ್ಟಿಗೆ ಗ್ರಂಥ ಸಂಪಾದನೆ ಎಂದರೆ ಹೊಸ ಗ್ರಂಥಗಳ ಶೋಧನೆಯೇ ಆಗಿ, ತುಳುವರಿಗೆ ಕುತೂಹಲಕರವಾದ ಸಂಗತಿಯಾಗಿದೆ. ಪುಣಿಂಚತ್ತಾಯರಿಗೆ ಹೊಸ ಕಾವ್ಯ ಸಿಕ್ಕಿದೆ ಎಂಬುದು ಅಲ್ಲಿ ಮನೆಮಾತಾಗುತ್ತದೆ. ಇಡೀಗ ಪುಣಿಂಚತ್ತಾಯರು ಆ ಶಾಸ್ತ್ರಕ್ಕೆ ಲವಲವಿಕೆ ಯೊಂದಿಗೆ ಹೊಸ ಕೊಡುಗೆಯನ್ನು ನೀಡಿದಂತಾಗಿದೆ. ಹಾಗೆ ನೋಡಿದರೆ ‘ಗ್ರಂಥ ಸಂಪಾದನೆ’ ಎಂಬುದು ಅಧ್ಯಯನಕ್ಕಿಂತಲೂ ಹೆಚ್ಚಾಗಿ ಶೋಧನೆಗೆ ಸಂಬಂಧಿಸಿರುವುದೇ ಆಗಿದೆ. ಪರಂಪರೆಯ ಬಗೆಗಿನ ನಮ್ಮ ಕುತೂಹಲಗಳನ್ನು ತಣಿಸಲು ಆಗಲೇ ಅದು ಸಮರ್ಥವಾಗುವುದು. ಪುಣಿಂಚತ್ತಾಯರು ಹೊಸ ಶೋಧನೆಗಳ ಮೂಲಕ ಅಂತಹ ಅಧ್ಯಯನಗಳಿಗೆ ಕನ್ನಡ ಮತ್ತು ತುಳು ಭಾಷಿಕರಿಗೆ ವಿಪುಲವಾದ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಅವರ ಶೋಧನೆಯಿಂದ ತುಳು ಭಾಷೆ ಮತ್ತು ಸಾಹಿತ್ಯಕ್ಕೆ ಒಟ್ಟಾಗಿಯೇ ಅಭಿಜಾತಗುಣ ಲಭ್ಯವಾಗಿದೆ. ಹೀಗೆ ಅವರ ಸಾಧನೆ ವರ್ತಮಾನದಲ್ಲಿಯೇ ಐತಿಹಾಸಿಕವಾಯಿತು. ಪುಣಿಂಚತ್ತಾಯರ ದೇಹ ಪ್ರಕೃತಿಯನ್ನು ಬಲ್ಲವರಿಗೆ ಅದು ಸಾಮಾನ್ಯವಾದ ಶ್ರಮವೆನ್ನಲು ಸಾಧ್ಯವೇ ಇಲ್ಲ. ಹಾಗಾದುದರಿಂದ ಅವರ ಐತಿಹಾಸಿಕ ಸಾಧನೆ ಮುಂದೆ ಐತಿಹ್ಯವೂ ಅದೀತು!