ಅಕ್ಷರಗಳ ಮಾತ್ರಾಮೌಲ್ಯ ನಿರ್ಣಯ

ತುಳು ಮತ್ತು ಸಂಸ್ಕೃತ ಭಾಷೆಗಳು ವ್ಯತ್ಯಸ್ತ ಭಾಷಾವಂಶಗಳಿಗೆ ಸೇರಿದುವು. ಇತರ ದ್ರಾವಿಡ ಭಾಷೆಗಳ ವ್ಯಾಕರಣ ಹಾಗೂ ಲಕ್ಷಣ ಗ್ರಂಥಗಳು ಸಂಸ್ಕೃತದ ವಿಧಾನಗಳನ್ನೂ ಮಾದರಿಗಳನ್ನೂ ಇಟ್ಟುಕೊಂಡು ರಚಿಸಲ್ಪಟ್ಟಿವೆ. ಸಂಸ್ಕೃತದ ಪರಿಭಾಷೆಯನ್ನೂ ರೂಪಗಳನ್ನೂ ಅನ್ವಯಿಸಿಕೊಂಡಿವೆ. ‘ಸಂಸ್ಕೃತದ ವಿಭಿನ್ನ ವ್ಯಾಕರಣ ಸಂಪ್ರದಾಯಗಳಲ್ಲಿ ಬಲ್ಲಿದರಾಗಿದ್ದ ಹಳಗನ್ನಡ ವೈಯಾಕರಣರು ಸಂಸ್ಕೃತ ವ್ಯಾಕರಣಗಳ ವಿಧಾನಗಳನ್ನನುಸರಿಸಿಯೇ ಕನ್ನಡ ಭಾಷೆಯನ್ನು ವಿಶ್ಲೇಷಣೆ ಮಾಡಿದ್ದಾರೆ'[1] ಎಂಬ ಪಿ. ಶ್ರೀಕೃಷ್ಣಭಟ್ಟರ ಅಭಿಪ್ರಾಯ ಎಲ್ಲ ದ್ರಾವಿಡ ಭಾಷೆಗಳ ವ್ಯಾಕರಣ ಮತ್ತು ಲಕ್ಷಣ ಶಾಸ್ತ್ರ ಗ್ರಂಥಗಳ ಮಟ್ಟಿಗೂ ನಿಜ. ಭಾರತೀಯ ಛಂದಃ ಶಾಸ್ತ್ರದ ಮೂಲ ಘಟಕಗಳ ಸ್ವರೂಪನಿರ್ಣಯಕ್ಕೆ ಸಂಸ್ಕೃತವೇ ಮಾದರಿ ಮತ್ತು ಸಂಸ್ಕೃತ ಛಂದಸ್ಸಿನ ಸ್ವರೂಪ ಲಕಷಣಗಳನ್ನೇ ಇತರ ಭಾಷೆಗಳ ಛಂದಸ್ಸಿನ ಸ್ವರೂಪ ನಿರ್ಧಾರಕ್ಕೂ ಆಧಾರವಾಗಿ ಸ್ವೀಕರಿಸಲಾಗುತ್ತದೆ.

ಅಕ್ಷರಗಳ ಮಾತ್ರಾ ಮೌಲ್ಯದ ನಿರ್ಧಾರ ಛಂದಸ್ಸಿನ ಪ್ರಾಥಮಿಕ, ಮೂಲಭೂತ ಘಟಕ. ಅದಕ್ಕಾಗಿ ಸಂಸ್ಕೃತ ಹಾಗೂ ಇತರ ಭಾರತೀಯ ಭಾಷೆಗಳೂ – ದ್ರಾವಿಡ ಸಹಿತ – ಅನುಸರಿಸುವ ನಿರ್ದಿಷ್ಟ ನಿಯಮಗಳಿವೆ. ಇವು ಉಚ್ಚಾರಣೆಯ ಕಾಲಾವಕಾಶದ ಆಧಾರದಲ್ಲಿ ರೂಪಿಸಲ್ಪಟ್ಟಿರುವುದರಿಂದ ಎಲ್ಲ ಭಾಷೆಗಳ ಲಿಖಿತ ಕಾವ್ಯಗಳೂ ಅವುಗಳನ್ನು ಅನುಸರಿಸುತ್ತವೆ.

ಮಾತ್ರೆ ಎಂದರೆ ಏನು ಎನ್ನುವ ವಿಚಾರವನ್ನು ವಿವಕ್ಷಿಸುತ್ತ ಎನ್.ಎಸ್. ತಾರಾನಾಥ ಅವರು ವೇಲಣಕರ್ ಅವರ ಅಭಿಪ್ರಾಯವನ್ನು ಈ ರೀತಿಯಾಗಿ ಸೂತ್ರೀಕರಿಸಿದ್ದಾರೆ.[2]

‘ಮಾತ್ರೆಯ ಒಂದು ಲಘುವಿಗೆ ಸಮಾನವಾಗಿರುತ್ತದೆ. ಅದು ಗಣದ ಧ್ವಿನಿ ಮೌಲ್ಯ (Syllabic Quantity)  ಹಾಗೂ ಅದರ ಉಚ್ಚಾರಣೆಯ ಕಾಲಮೌಲ್ಯವನ್ನು ಅಳತೆ ಮಾಡುವ ಮೂಲಮಾನವಾಗಿ ಬಳಕೆಯಾಗುತ್ತದೆ. ತಾಳವೃತ್ತ ಅಥವಾ ತಾಳ ಛಂದಸ್ಸಿನಲ್ಲಿ ಅದು ಒಂದು ಗಣದ ಉಚ್ಚಾರಣೆಗೆ ಬೇಕಾದ ಕಾಲವನ್ನು ಅಳೆಯುತ್ತದೆ. ಇದನ್ನು ಕಾಲಮಾತ್ರೆಯೆಂದು ಕರೆಯುತ್ತಾರೆ. ಶುದ್ಧ ಮಾತ್ರಾವೃತ್ತಗಳಲ್ಲಿ ಅಥವಾ ಶುದ್ದ ಮಾತ್ರಾ ಛಂದಸ್ಸಿನಲ್ಲಿ ಅದು ಒಂದು ಗಣದ ಒಟ್ಟು ಧ್ವನಿಮೌಲ್ಯವನ್ನು ಅಳೆಯುತ್ತದೆ. ಎಂದಚಷರೆ ಆ ಗಣದಲ್ಲಿರುವ ಒಟ್ಟು ಲಘುಗಳ – ಒಂದು ಗುರುವಿದ್ದರೂ ಅದು ಎರಡು ಲಘುಗಳಾಗುತ್ತವೆ – ಪರಿಮಾಣವನ್ನು ಸೂಚಿಸುತ್ತದೆ. ಇದನ್ನು ವರ್ಣಮಾತ್ರೆ ಎಂದು ಕರೆಯುತ್ತಾರೆ.’

ಅಕ್ಷರದ ಸಹಜ ಉಚ್ಚಾರಣೆಗೆ ಬೇಕಾದ ಕಾಲ ಹಾಗೂ ಸತಾಳವಾಗಿ ಓದುವಾಗ ಅಕ್ಷರದ ಉಚ್ಚಾರಣೆಗೆ ಬೇಕಾದ ಕಾಲ ಇವುಗಳ ನಡೆಉವೆ ಇರುವ ಅಂತರವನ್ನು ಇಲ್ಲಿ ಗುರುತಿಸಲಾಗಿದೆ. ವರ್ಣಮಾತ್ರೆ ನಿಶ್ಚಿತವಾಗಿರುತದೆ ಮತ್ತು ನಿಶ್ಚಿತ ಅಕ್ಷರದ ಆಧಾರದಲ್ಲಿ ಗುರುತಿಸಲ್ಪಡುತ್ತದೆ. ಕಾಲಮಾತ್ರೆ ಓದಿನಲ್ಲಿ ಅಥವಾ ಹಾಡಿನಲ್ಲಿ ಒಂದು ತಾಳ ಘಟಕ ತೆಗೆದುಕೊಳ್ಳುವ ಕಾಲಾವಕಾಶದ ಹಿನ್ನೆಲೆಯಲ್ಲಿ ಗುರುತಿಸಲ್ಪಡುತ್ತದೆ. ವರ್ಣಮಾತ್ರೆ ಓದಿನಲ್ಲಿ ಅಥವಾ ಹಾಡಿನಲ್ಲಿ ಒಂದು ತಾಳ ಘಟಕ ತೆಗೆದುಕೊಳ್ಳುವ ಕಾಲಾವಕಾಶದ ಹಿನ್ನೆಲೆಯಲ್ಲಿ ಗುರುತಿಸಲ್ಪಡುತ್ತದೆ. ವರ್ಣಮಾತ್ರೆ ಶುದ್ಧ ಮಾತ್ರಾಬಂಧಗಳಲ್ಲೂ, ಕಾಲಮಾತ್ರೆ ತಾಳಬಂಧಗಳಲ್ಲೂ ಬಳಕೆಯಾಗುತ್ತದೆ.

ತುಳುವಿನ ಅಕ್ಷರ ವೃತ್ತಗಳೆಲ್ಲವೂ ಸತಾಲವಾಗಿವೆ ಮತ್ತು ತುಳುವಿನ ಮಾರ್ಗ ಕಾವ್ಯ ಹಾಗೂ ದೇಸೀ ಹಾಡುಗಳು ಕಾಲಮಾತ್ರೆಯನ್ನೇ ಅವಲಂಬಿಸಿ ರಚನೆಗೊಂಡಿವೆ. ಆಳವಾಗಿ ಪರಿಶೀಲಿಸಿದರೆ ಅವು ತಾಳಬಂಧಗಳಾಗಿರುವುದು ಗಮನಕ್ಕೆ ಬರುತ್ತದೆ. ಮುಖ್ಯವಾಗಿ ತುಳು ಕಾವ್ಯಗಳಲ್ಲಿನ ಮಾತ್ರಾಮೌಲ್ಯ ವರ್ಣವನ್ನಲ್ಲ, ಉಚ್ಚಾರದ ಕಾಲವನ್ನು ಆಧರಿಸಿ ನಿರ್ಧರಿಸಲ್ಪಡುತ್ತದೆ.

ಅಕ್ಷರೋಚ್ಚಾರದ ಕಾಲಾವಕಾಶವನ್ನು ಹಿಗ್ಗಿಸುವ, ಕುಗ್ಗಿಸುವ ಮತ್ತು ಅಕ್ಷರೋಚ್ಚಾರವನ್ನು ಶಿಥಿಲವಾಗಿಸುವ ಕ್ರಮ ಜನಪದ ಕಾವ್ಯಗಳಲ್ಲಿ ಅಥವಾ ದೇಸೀ ಛಂದಸ್ಸಿನಲ್ಲಿ ಕಾಣುವಂತೆ ತುಳು ಮಾರ್ಗಕಾವ್ಯಗಳಲ್ಲೂ ಕಂಡುಬರುತ್ತದೆ. ಅವುಗಳನ್ನು ಈ ಕೆಳಗಿನಂತೆ ಸಂಕಲಿಸಿ ವಿವರಿಸಬಹುದು.

೧. ಸಂಸ್ಕೃತ ಸಬ್ದಗಳ ಪ್ರಥಮ ಅಕ್ಷರ ವ್ಯಂಜನಗುಚ್ಛವಾಗಿದ್ದಾಗ ಅದನ್ನು ಶಿಥಿಲಗೊಳಿಸುವುದಲ್ಲದೆ. ಪ್ರಥಮೇತರ ವ್ಯಂಜನಗುಚ್ಛಗಳನ್ನು ಶಿಥಿಲಗೊಳಿಸುವುದು. ಉದಾಹರಣೆಗೆ:-

ನ್ಯಾಯೊಂ / ತಪದಂ / ಕುಳುಸ / ತ್ಕ್ರಿಯೇಟ್ / ಲೆಭಿತೇ / ವರ ದ್ರ / ವ್ಯೋ (ಕಾ. ೯-೬೮)
ನಿತ್ಯ / ಪೂರ್ಣ ಸ್ವ / ರೂಪಿ / ಯಾ ಪರ / ವಸ್ತು / ಕ್‌ದ್ದಿಂದೆ / ಸಂಗತೀ (ಭಾ. ೩-೧೮-೩೬)
ಜಾಗ್ರ / ತ್ಸ್ವ ಪ್ನ ಸು / ಷುಪ್ತಿ / ಯೆನ್ಕಿನ / ವಸ್ಥೆ / ಮೂಜಿಂದೆ / ಕಾಶ್ರಯಂ ( ಭಾ. ೩-೧೮-೨೯)

ಮೊದಲ ಉದಾಹರಣೆಯಲ್ಲಿ ೯ನೇ ಅಕ್ಷರ ತ್ಕ್ರಿ, ೧೭ನೇ ಅಕ್ಷರ ದ್ರ, ಎರಡನೇ ಉದಾಹರಣೆಯಲ್ಲಿ ೫ನೇ ಅಕ್ಷರ ಸ್ವ, ಹಾಗೂ ಮೂರನೇ ಉದಾಹರಣೆಯಲ್ಲಿ ೩ನೇ ಅಕ್ಷತ್ಸ್ವಗಳು ಶಿಥಿಲಗೊಂಡಿವೆ. ಇಂತಹ ಶಿಥಿಲತ್ವಕ್ಕೆ ತಾಳದ ಅನುಕೂಲತೆ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ.

೨. ಸ್ವರ ರಹಿತವ್ಯಂಜನ ಸ್ವತಂತ್ರ ಮಾತ್ರಾಮೌಲ್ಯವನ್ನು ಹೊಂದಿರುವುದಿಲ್ಲ. ಆದರೆ ತುಳುವಿನಲ್ಲಿ ಸ್ವರಹರಿತ ವ್ಯಂಜನಗಳ ಬಳಕೆ ತೀರಾ ವಿರಳ. ವ್ಯಂಜಾಂತ ಶಬ್ದಗಳ ಕೊನೆಗೆ ಕನ್ನಡದಲ್ಲಿ ‘ಉ’ ಅಥವಾ ‘ಅ’ ಸೇರಿಕೊಳ್ಳುವಂತೆ ತುಳುವಿನಲ್ಲಿ ‘ಅಮೊದಲ ಉದಾಹರಣೆಯಲ್ಲಿ ೯ನೇ ಅಕ್ಷರ ತ್ಕ್ರಿ, ೧೭ನೇ ಅಕ್ಷರ ದ್ರ, ಎರಡನೇ ಉದಾಹರಣೆಯಲ್ಲಿ ೫ನೇ ಅಕ್ಷರ ಸ್ವ, ಹಾಗೂ ಮೂರನೇ ಉದಾಹರಣೆಯಲ್ಲಿ ೩ನೇ ಅಕ್ಷತ್ಸ್ವಗಳು ಶಿಥಿಲಗೊಂಡಿವೆ. ಇಂತಹ ಶಿಥಿಲತ್ವಕ್ಕೆ ತಾಳದ ಅನುಕೂಲತೆ ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ.

೨. ಸ್ವರ ರಹಿತವ್ಯಂಜನ ಸ್ವತಂತ್ರ ಮಾತ್ರಾಮೌಲ್ಯವನ್ನು ಹೊಂದಿರುವುದಿಲ್ಲ. ಆದರೆ ತುಳುವಿನಲ್ಲಿ ಸ್ವರಹರಿತ ವ್ಯಂಜನಗಳ ಬಳಕೆ ತೀರಾ ವಿರಳ. ವ್ಯಂಜಾಂತ ಶಬ್ದಗಳ ಕೊನೆಗೆ ಕನ್ನಡದಲ್ಲಿ ‘ಉ’ ಅಥವಾ ‘ಅ’ ಸೇರಿಕೊಳ್ಳುವಂತೆ ತುಳುವಿನಲ್ಲಿ ‘ಅ್’ ಸೇರಿಕೊಳ್ಳುತ್ರತದೆ. ತುಳುವಿನಲ್ಲಿ ‘ಅ್’ ಒಂದು ಸ್ವತಂತ್ರ ಸ್ವರ ಧ್ವನಿಮಾ. ಪ್ರಾಚೀನ ತುಳು ಕಾವ್ಯಗಳಲ್ಲಿ ಇದು  ಸ್ವತಂತ್ರವಾಗಿಯೂ, ವ್ಯಂಜನದೊಂದಿಗೂ ಹೇರಳವಾಗಿ ಬಳಕೆಯಾಗಿದೆ. ಆಧುನಿಕ ತುಳುವಿನಲ್ಲೂ ಇದೆ. ಆದರೆ ಅಧುನಿಕ ಬರವಣಿಗೆಯಲ್ಲಿ ಬಳಸಲ್ಪಡುವುದಿಲ್ಲ. ಈ ಸಂವೃತ್ತ ಸ್ವರ ಒಂದು ಮಾತ್ರೆ ಮೌಲ್ಯವುಳ್ಳದ್ದು.

‘ಅ್” ಸಹಿತ ವ್ಯಂಜನ ಹ್ರಸ್ವವಾಗಿದ್ದರೆ ಲಗೂವೆಂದೂ ದೀಘ್ಘವಾಗಿದ್ದರೆ ಗುರುವೆಂದೂ ಪರಿಗಣಿಸಲ್ಪಡುತ್ತದೆ. ಸಾಧಾರಣ ಸ್ವರ ಅಥವಾ ಸ್ವರರಹಿತ ವ್ಯಂಜನಕ್ಕೆ ಛಂದಸ್ಸಿನ ದೃಷ್ಟಿಯಿಂದ ಅನ್ವಯವಾಗುವ ಎಲ್ಲ ನಿಯಮಗಳೂ ‘ಅ್’ ಕಾರಕ್ಕೆ ಅನ್ವಯವಾಗುತ್ತದೆ.

ಆದರೆ ಹಲವೆಡೆ ‘ಅ್’ ಸಹಿತ ವ್ಯಂಜನ ಸ್ವತಂತ್ರ ಮಾತ್ರಾಮೌಲ್ಯವನ್ನು ಪಡೆಯದೆ, ಹಿಂದಿನ ಅಕ್ಷ್ವನ್ನು ಗುರುವಾಗಿಸುವುದು ಕಂಡುಬರುತ್ತದೆ.

ಉದಾಹರಣೆಗೆ:- ಸ್ವತಂತ್ರ ‘ಅ್’ ಕಾರಕ್ಕೆ –

ಅ್ ತೆ ಚೋತಜಿಸ್ಟ್ ಸವ್ವಸಮೃದ್ಧಿಗುಣಂತ ಮೃತಾಬ್ಧಿರಮೇಶಾ (ಭಾ. ೧.೭.೨೯
ಕೇಂಡೆರ್ ನ ನಾರದೆರ್ ವಂದಿತಡೆ ಕೊಂಟೇಧ
ಕುಂಡಿಕ ಮಹಾಂಭಸಿ ಮನೋಹರ ಶುಭಜ್ಞೇ (ಕಾ. ೭.೫೯)

ವ್ಯಾಕರಣಾತ್ಮವಾಗಿ ‘ಅ್’ ಸಹಿತ ವ್ಯಂಜನವಾಗಿದ್ದರೂ ಸ್ವತಂತ್ರ ಮಾತ್ರಾ ಮೌಲ್ಯವಿಲ್ಲದೆ ಉಚ್ಚರಿಸಲ್ಪಡುವುದಕ್ಕೆ

ಸುತೆ ಸುರಂದ್ರ ವೃಕೋದರೆ ನಕುಲಾಖ್ಯೆಯ ಸಹದೇವೆಯಾ
ರೆತಿಪತಿನ್ ಸುತೆ ವಾಮದಿಕ್ಕ್‌ಟ್ಟ್‌ಕುಳ್ಳಪಾಹರಿ ಶೋಭಿತೆರ್ (ಮ. ೧೮-೧೪)
ಫಣೀಂದ್ರಕಂ ನಂಚೇ ಜಾನಿಯೇರ್ ತ್ತರೀಕುಳೆಗಾರು ಡೊಂತವ ನೀಪತಿನ್ (ಮ. ೧೮-೨೧)

೩. Flexibility ಅಥವಾ ಸ್ಥಿತಿಸ್ಥಾಪಕತ್ವ ಸಾಮಾನ್ಯವಗಿ ದೇಸೀ ಛಂದಸ್ಸಿನಲ್ಲಿ ಕಾಣಿಸುವ ಗುಣ. ಸತಾಳ ಛಂದಸ್ಸಿನ ಬಂಧಗಳಲ್ಲಿ, ಮುಖ್ಯವಾಗಿ ಜಾನಪದ ಗೇಯ ರಚನೆಗಳಲ್ಲಿ ಅಕ್ಷರಗಳು ಸ್ಥಿತಿಸ್ಥಾಪಕತ್ವವನ್ನು ಪಡೆಯುತ್ತವೆ. ಕನ್ನಡದಲ್ಲಿ ಈ ಸ್ಥಿತಿಸ್ಥಾಪಕತ್ವ ಅಂಶಗಣಗಳ ಶಾಸ್ತ್ರೀಯ ಚೌಕಟ್ಟಿಗೆ ಅಳವಟ್ಟು ಮಾರ್ಗಕಾವ್ಯಗಳೂ ಸ್ಥಾನ ಪಡೆದಿದೆ. ಆದರೆ ಮಾತ್ರಾಗಣ, ಅಕ್ಷರಗಮ ಛಂದಸ್ಸುಗಳಲ್ಲಿ ಅಕ್ಷರಗಳು ಸ್ಥಿತಿಸ್ಥಾಪಕವಾಗುವುದು ನಿಷಿದ್ಧ. ಅಲ್ಲದೆ ಸ್ಥಿತಿಸ್ಥಾಪಕತ್ವವುಳ್ಳ ಅಕ್ಷರಗಳಿಗೆ ಅವುಗಳ ಸಹಜ ಸ್ಥಿತಿಗನುಗುಣವಾಗಿಯೇ ಮಾತ್ರಾಮೌಲ್ಯ ಕಲ್ಪಿಸಲಾಗುತ್ತದೆ. ಛಂದಸ್ಸಿನ ನಿರ್ಣಯದಲ್ಲಿ ಅಕ್ಷರೋಚ್ಚಾರದ ಸ್ಥಿತಿಸ್ಥಾಪಕತ್ವ ಯಾವುದೇ ಪಾತ್ರ ವಹಿಸುವುದಿಲ್ಲ. ಹಾಡುವಾಗ ಅಥವಾ ಸತಾಲವಾಗಿ ಓದುವಾಗ ಮಾತ್ರ ಅದು ಗಮನಕ್ಕೆ ಬರುತ್ತದೆ.

ತುಳು ಕಾವ್ಯಗಳಲ್ಲಿ ಹಾಗಲ್ಲ. ತುಳುವಿನ ಲಿಖಿತ ಕಾವ್ಯಗಳಲ್ಲಿ ಬರುವ ಎಲ್ಲ ಛಂದೋಬಂಧಗಳೂ ಸತಾಲವಾಗಿರುವುದರಿಂದ ಮಾತ್ರಾ ಮೌಲ್ಯದ ನಿರ್ಣಯದಲ್ಲಿ ತಾಳ ಘಟಕಗಳೇ ಪ್ರಧಾನ ಪಾತ್ರ ವಹಿಸುತ್ತವೆ. ತಾಳ ಸಮಾನ ಮಾತ್ರೆಗಳ ಆವರ್ತನೆಯಾಗಿರುವುದರಿಂದ ಯಾವುದೇ ಅಕ್ಷರದ ಮಾತ್ರಾಮೌಲ್ಯವನ್ನು ನಿರ್ಧರಿಸಬೇಕಿದ್ದರೂ ಅದು ಆ ಛಂದಸ್ಸಿನಲ್ಲಿ ಸ್ಥಿತಿಸ್ಥಾಪಕತ್ವ ಪಡೆದಿದೆಯೇ, ಕರ್ಷಣಗೊಂಡಿದೆಯೇ ಅಥವಾ ಲಘು ಉಚ್ಚಾರವನ್ನು ಹೊಂದಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ. ವ್ಯಾಕರಣ ದೃಷ್ಟಿಯಿಂದ ತಪ್ಪಾಗಿದ್ದರೂ ತುಳು ಕವಿಗಳು ಇದನ್ನು ಬರವಣಿಗೆಯಲ್ಲೂ ತೋರಿಸಿದ್ದಾರೆ.

ಆ ಪಾಪಿಕುಳುಳ್ಳೆರೆನಾತ್ಮ ಜೇರ್ ಖಡುಕಷ್ಟೆರೆನೇಕೊ
ಪಾಪಾನ್ವಿತೆರೇತಲ ಶೂರೆರ್‌ನಾದುರ್ಬುದ್ಧಿಕುಳಾಕುಳು  (ಮ. ೯-೬೩)

ಇಲ್ಲಿ ಮೊದಲ ಪಾದದ ಹನ್ನೊಂದನೆಯ ಅಕ್ಷರ ವ್ಯಾಕರಣ ದೃಷ್ಟಿಯಿಂದ ಹ್ರಸ್ವ. ಆದರೆ ಕವಿ ಇದನ್ನು ದೀರ್ಘವಾಗಿ ಬಳಸಿದ್ದಾನೆ. ಎರಡನೇ ಪಾದದ ೧೫ನೇ ಅಕ್ಷರ ದೀರ್ಘವಿದ್ದರೂ ಹ್ರಸ್ವವೆಂದೇ ಪರಿಗಣಿಸಿ, ಹ್ರಸ್ವದಂತೆ ಒಂದು ಮಾತ್ರೆಯ ಕಾಲಾವಕಾಶದಲ್ಲಿ ಓದಿ ಮುಗಿಸಬೇಕಾಗುತ್ತದೆ.

ಹೀಗೆ ತುಳು ಛಂದಸ್ಸಿನಲ್ಲಿ ಅಕ್ಷರದ ಮಾತ್ರಾ ಮೌಲ್ಯವನ್ನು ಸತಾಳವಾದ ಓದಿನ ಮೂಲಕವೇ ನಿರ್ಧರಿಸಬೇಕಾಗುತ್ತದೆ.

ಪ್ರಾಚೀನ ಶಿಷ್ಟ ಕಾವ್ಯಗಳ ಛಂದಸ್ಸು

ಮಹಾಭಾರತೊ ಈಗ ಉಪಲಬ್ಧವಾದ ಮೊದಲ ತುಳು ಮಹಾಕಾವ್ಯ. ಇದರ ಕವಿ ಅರುಣಾಬ್ಜ. ಈತ ಹಲವು ನೆಲೆಗಳಲ್ಲಿ ಕುಮಾರವ್ಯಾಸನಿಂದ ಪ್ರಭಾವಿತನಾಗಿದ್ದಾನೆ. ಕಾಲ ಸು. ೧೩೮೩.

ವಿಷ್ಣುತುಂಗನಿಂದ ರಚಿತವಾದ ಶ್ರೀ ಭಾಗವತೊ ಉಪಲಬ್ಧವಾದ ಎರಡನೇ ತುಳು ಮಹಾಕಾವ್ಯ. ಕಾಲ ೧೬೩೬ ಅಥವಾ ೧೩೭೦ ಆಗಿರಬೇಕೆಂದು ಊಹಿಸಲಾಗಿದೆ. ಈ ಬಗ್ಗೆ ಸ್ಪಷ್ಟ ತೀರ್ಮಾನವಿಲ್ಲ. ಕೃತಿಯ ಮೂರು ಸ್ಕಂಧಗಳು ಮಾತ್ರ ದೊರೆತಿದ್ದು ಅವುಗಳಲ್ಲಿ ಒಟ್ಟು ೧೯೯೯ ಪದ್ಯಗಳಿವೆ.

ಕವಿ ಯಾರೆಂದೇ ತಿಳಿಯದ ಕಾವೇರಿ ಎಂಬ ಕಾವ್ಯ ತ್ರುಚಿತ ರೂಪದಲ್ಲಿ ದೊರೆತಿದ್ದು ಕಾಲವನ್ನು ೧೩೯೧ ಇರಬೇಕೆಂದು ಅಂದಾಜಿಸಲಾಗಿದೆ.

ಭಾಗವತಾಂತರ್ಗತ ಶ್ರೀ ರಾಮಾಯಣೊ ೧೫ ಅಧ್ಯಾಯಗಳ ವ್ಯಾಪ್ತಿಹೊಂದಿದ್ದು ಇದು ಶ್ರೀ ಭಾಗವತೊದ ಭಾಗವೇ ಆಗಿರಬೇಕೆಂದು ವಿದ್ವಾಂಸರ ಅಭಿಪ್ರಾಯ.

ಈ ನಾಲ್ಕೂ ಕಾವ್ಯಗಳ ಛಂದೋ ರಚನೆಯಲ್ಲಿ ಏಕರೂಪತೆ ಇದ್ದು ಕನ್ನಡ -ಸಂಸ್ಕೃತಗಳಿಗಿಂತ ಭಿನ್ನವಾದ ರಾಚನಿಕ ಹರಿವು ಕಂಡುಬರುತ್ತದೆ. ತುಳುವಿಗೇ ಅನನ್ಯವಾದ ಇಲ್ಲಿನ ಛಂದೋ ವಿನ್ಯಾಸ ದ್ರಾವಿಡ ಛಂದಸ್ಸಿನ ಮೂಲನೆಲೆಗಳನ್ನು ಗುರುತಿಸಲು ಸಹಾಯಕವಾಗಬಲ್ಲುದೆಂದು ಭಾವಿಸಲಾಗಿದೆ. ತುಳು ಕಾವ್ಯಗಳಲ್ಲಿ ಎಲ್ಲ ಛಂದೋರೂಪಗಳಿಗೂ ಹಲವು ವೃತ್ತಭೇದಗಳಿವೆ. ಸಂಸ್ಕೃತ ಅಕ್ಷರ ಗಣಘಟನೆಯ ಆಧಾರದಲ್ಲಿ ನಡೆಸಲಾದ ತುಳು ವೃತ್ತಗಳ ಗುರುತಿಸುವಿಕೆಯನ್ನು ತುಳು ಕಾವ್ಯಗಳ ಎಲ್ಲ ಪದ್ಯಗಳಿಗೂ ಅನ್ವಯಿಸಲು ಸಾಧ್ಯವಾಗುವುದಿಲ್ಲ. ಎಂದರೆ ಕೆಲವು ಪದ್ಯಗಳು ನಿಶ್ಚಿತ ಅಕ್ಷರ ಸಂಖ್ಯೆಯನ್ನೂ ಗುರುಲಘು ವಿನ್ಯಾಸವನ್ನೂ ಹೊಂದಿದ್ದು ಕ್ರಮಬದ್ಧವಾಗಿವೆ. ಇನ್ನೆಷ್ಟೋ ಪದ್ಯಗಳು ಅಕ್ಷರ ಸಂಖ್ಯೆಯಲ್ಲೂ ಮಾತ್ರಾವಿನ್ಯಾಸದಲ್ಲೂ ಭಿನ್ನವಾಗಿವೆ. ಮುಖ್ಯವಾಗಿ ತುಳು ಕವಿಗಳು ಅಕ್ಷರಗಣ ಘಟನೆಯನ್ನು ನಿರ್ಲಕ್ಷಿಸಿ ಗಣಗಳ ಮಾತ್ರಾಮೌಲ್ಯವನ್ನೇ ಛಂದಸ್ಸಿನ ಮೂಲ ಅಂಶವಾಗಿ ಪರಿಗಣಿಸಿದ್ದು ಕಂಡುಬರುತ್ತದೆ. ನಾಲ್ಕು ಪಾದಗಳಲ್ಲೂ ಅಕ್ಷರ ಸಂಖ್ಯೆ ಹಾಗೂ ಗುರು ಲಘುವಿನ್ಯಾಸಗಳು ಸಮಾನವಾಗಿರಲೇಬೇಕಾದ್ದು ಸಮವೃತ್ತಗಳ ಮುಖ್ಯ ಲಕ್ಷಣ. ತುಳು ಕವಿಗಳು ಇದನ್ನು ಮೀರಿದ್ದಾರೆ. ಅಕ್ಷರ ಸಂಖ್ಯೆಯ ಬದಲು ಮಾತ್ರಾಮೌಲ್ಯ ನಾಲ್ಕು ಪದಗಳಲ್ಲೂ ಸಮಾನವಾಗಿರುವಂತ ನೋಡಿಕೊಂಡಿದ್ದಾರೆ. ಶುದ್ಧ ಅಕ್ಷರಘಟಿತ ವೃತ್ತಗಳನ್ನು ಬಳಸಿದ್ದಾದರೂ ನಡುನಡುವೆ ಗುರುವೊಂದಕ್ಕೆ ಬದಲು ಎರಡು ಲಘುಗಳನ್ನು, ಎರಡು ಲಘುಗಳಿಗೆ ಬದಲು ಒಂದು ಗುರುವನ್ನೂ ಬಳಸಿದ್ದಾರೆ. ಇಂತಹ ಪ್ರಯೋಗ ನಾಲ್ಕು ಪದಗಳಲ್ಲೂ ಸಮಾನವಾಗಿ ನಡೆದಾಗ ಅದು ವೃತ್ತಭೇದವನ್ನು ಸೃಷ್ಟಿಸುತ್ತದೆ. ಒಂದೆರಡು ಪಾದಗಳಲ್ಲಿ ಮಾತ್ರ ನಡೆದಾಗ ಅದನ್ನು ಗಣನಿಯಮದಲ್ಲಿ ಉಂಟಾದ ವೃತ್ಯಯ ಎಂದು ಭಾವಿಸಬೇಕಾಗುತ್ತದೆ.

೧. ಸಗಣ ವೃತ್ತ

ಸಂಪೂರ್ಣ ಸಗಣ ಘಟಿತವಾಗಿದ್ದು, ಭಾಗವತೊ ಮತ್ತು ಕಾವೇರಿ ಕಾವ್ಯಗಳಲ್ಲಿ ಶೇಕಡಾ ಐವತ್ತರಷ್ಟು ಬಳಕೆಯಾದ ಒಂದು ಅಪೂರ್ವ ವೃತ್ತ. ಈ ಎರಡು ಕಾವ್ಯಗಳ ನಿರೂಪಣೆಯಲ್ಲೂ ಮಹತ್ವದ ಪಾತ್ರವಹಿಸಿದೆ. ಕನ್ನಡ – ಸಂಸ್ಕೃತಗಳಲ್ಲಿ ಎಲ್ಲೂ ಬಳಕೆಯಾಗದ ಈ ವೃತ್ತ ೧೯ ಅಕ್ಷರಗಳ ಅತಿಧೃತಿ ಛಂದಸ್ಸಿನಲ್ಲಿ ೧೧೨೩೪೮ ನೆಯದು. ವೆಂಕಟರಾಜ ಪುಣಿಂಚತ್ತಾಯರು ಇದನ್ನು ‘ತೋಟಕ ವೃತ್ತದ ಚರಣಗಳಿಗೆ ಇನ್ನೂ ಎರಡು ಸಗಣಗಳನ್ನೂ ಒಂದು ಗುರುವನ್ನೂ ಸೇರಿಸಿ ಮಾಡಿದ ಹೊಸ ವೃತ್ತ'[3] ಎಂದು ಹೇಳಿದ್ದಾರೆ. ತೋಟಕ ಹನ್ನೆರಡು ಅಕ್ಷರಗಳ ವೃತ್ತ. ಸಗಣ ವೃತ್ತಕ್ಕೆ ಹನ್ನೆರಡರಲ್ಲಿ ಯತಿ, ಪಾದಾಂತ್ಯ ಯತಿಯೂ ಇದೆ. ಹನ್ನೆರಡರ ಯತಿ ತೋಟಕ ವೃತ್ತದ ಮುಂದೆ ಎರಡು ಸಗಣಗಳು ಸೇರ್ಪಡೆಗೊಂಡದ್ದನ್ನು ಸೂಚಿಸಿರುತ್ತದೆ.

ಇತಿಹಾ / ಸಪೂರಾ / ಣರಹ / ಸ್ಯೊಮಿನೀ / ಮುನಿವ್ಯಾ / ಸಕೃಪೆ / ತ್ತ್
ಸ್ಥಿತಿಪಿ / ನ್ಕ್‌ಣಯೇ / ರ್‌ತೆನೀ / ಯೊೞೆಯಾ / ಮಹಲೋ / ನನಕು / ಲಿತ್‌ದೊ / ಷಾ
ಮತಿಖಂ / ಡಿಪೆರಾ / ಕಿಪ್ರಸಂ / ಗೊಮಿನೀ / ತೆರಿತೀ / ಯ್ಯ್‌ಪಣೋ / ಡು (ಭಾ. ೧-೧ -೨೪)

ಇದರಲ್ಲಿ ಒಟ್ಟು ಹನ್ನೆರಡು ಲಘುಗಳೂ ಏಳು ಗುರುಗಳೂ ಇರುವುದರಿಂದ ಧೃತಗತಿ. ಸಂದರ್ಭಗಳ ವಿವರಣೆ, ಸಾತ್ವಿಕ ಪಾತ್ರಗಳ ಸಂಭಾಷಣೆಗೆ, ವರ್ಣನೆಗೆ, ತಾತ್ವಿಕ ವಿಚಾರಗಳ ನಿರೂಪಣೆಗೆ ಯೋಗ್ಯವಾದ ಗತಿ, ಸಗಣಕ್ಕೆ ನಾಲ್ಕು ಮಾತ್ರೆಗಳ ಮೌಲ್ಯವಿರುವುದರಿಂದ ಸಹಜವಾದ ಮಂದಾನಿಲ ಲಯ. ಗಣದ ಕೊನೆಯಲ್ಲಿ ಗುರು ಇರುವುದರಿಂದ ಗಂಭೀರವಾದ ನಡೆ ಸ್ಪಷ್ಟವಾಗಿದೆ. ತಾಳ ಸಹಿತವಾದ ಸಮಮ ಗತಿ ಪಾದದ ಕೊನೆಯಲ್ಲಿ ಬಿಡಿಯಾಗಿ ನಿಂತ ಒಂದು ಗುರುವಿಗೆ ಇನ್ನೆರಡು ಮಾತ್ರೆಗಳ ಮೌನವನ್ನು ಸೇರಿಸಿ ವಿರಾಮವನ್ನೊದಗಿಸುತ್ತದೆ. ಕಾಲಕ್ರಿಯಾಖಂಡಗಳ ಸಮತ್ವವಿರುವುದರಿಂದ ಮಾತ್ರಾಗಣ ಹಾಗೂ ಅಕ್ಷರಗಣಗಳ ನಡುವೆ ಭೇಧವಿಲ್ಲ.

ತುಳುಕವಿಗಳು ಇಂತಹ ಒಂದು ಅಪೂರ್ವ ವೃತ್ತವನ್ನು ಎಲ್ಲ ಕಾವ್ಯಗಳಲ್ಲೂ ಮುಖ್ಯ ವೃತ್ತವಾಗಿ ಬಳಸುವುದರೊಂದಿಗೆ ಹಲವು ವೃತ್ತ ಬೇಧಗಳನ್ನೂ ಮಾಡಿಕೊಂಡಿದ್ದಾರೆ.

ಸಗಣವೃತ್ತದ ವೃತ್ತ ಭೇಧಗಳು

ಸಗಣ ವೃತ್ತದ ಆರಂಭದ ಎರಡು ಲಘುಗಳಿಗೆ ಬದಲಾಗಿ ಒಂದು ಗುರುವನ್ನು ಇಟ್ಟು ಮಾಡಲಾದ ವೃತ್ತಭೇದ. ಉದಾಹರಣೆಗೆ-

 / ಏರೀ / ಎಲೆದುಷ್ಟದುರಾಚರುತಾ ಕುಲಗೇಡಿ ಕುಬದ್ಧಾ
/ ಚೋರಾ / ನಿಜವೇಷೊಮಿನೀನ್ಪುಡ್‌ಸ್ಟ್‌‍ ಅವಿವೇಕೊವೆನ್‌ಪ್ಪಾ
/ ಏರೀ / ಕೃಷಿಬೆಂಬೆರ್‌ನಂತ್ಯಜೆರೇ ನಿಜವರ್ತಕೊ ಮಾತೊ
/ ಬೇರ್‌ / ಸಹಿತಂಟಿನ ಪೊರ್ತ್‌ಡ್‌ವೇ ಬುಡನೆಪ್ಪುಟವೇಗೊ(ಭಾ.೧-೧೭-೮)

ಪಾದದ ಮೊದಲ ಎರಡು ಲಘುಗಳಿಗೆ ಬದಲು ಒಂದು ಗುರುವನಿರಿಸಿದಾಗ ಛಂದಸ್ಸು ಬದಲಾಗುತ್ತದೆ. ೧೯ ಅಕ್ಷರಗಳ ಬದಲು ೧೮ ಅಕ್ಷರಗಳಾದಾಗ ‘ಧೃತಿ’ ಎಂಬ ಛಂದಸ್ಸಾಗುತ್ತದೆ. ಧೃತಿಯಲ್ಲಿ ಇದು ೫೬೧೭ನೇ ಛಂದಸ್ಸು. ಸಂಸ್ಕೃತ ಅಕ್ಷರಗಣ ಛಂದಸ್ಸಿನಂತೆ ಲಕ್ಷಣವನ್ನು ಹೇಳುವಾಗ ತಜಜಜಯ -ಎಂಬುದು ಈ ಛಂದಸ್ಸಿನ ಲಕ್ಷಣ. ಅಕ್ಷರಗಣ ವಿಭಜನೆಯಂತೆ ಲಕ್ಷಣ ಯಾವುದಿದ್ದರೂ ಮಾತ್ರಾಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ.

ತೋಟಕ ವೃತ್ತದ ಮೊದಲ ಎರಡು ಲಘುಗಳ ಬದಲಾಗಿ ಒಂದು ಗುರುವನ್ನು ಇಟ್ಟಾಗ ಅದು ತ್ರಿಷ್ಟುಪ್‌ಛಂದಸ್ಸಿನ ಕುಸುಮ ವೃತ್ತ ಆಗುತ್ತದೆ. ಆದ್ದರಿಂದ ಈ ವೃತ್ತಭೇದವನ್ನು ಕುಸುಮ ವೃತ್ತದ ಚರಣಗಳಿಗೆ ಎರಡು ಸಗಣ ಹಾಗೂ ಒಂದು ಗುರು ಸೇರಿ ಮಾಡಿದ ಹೊಸ ವೃತ್ತ ಎಂದು ವ್ಯಾಖ್ಯಾನಿಸಬಹುದು.

ತೋಟಕ ವೃತ್ತದ ಚರಣಗಳಿಗೆ ಸಗಣ ಹಾಗೂ ಒಂದು ಗುರುವನ್ನು ಸೇರಿಸಿ ಸಗಣ ವೃತ್ತವನ್ನು ತಯಾರಿಸಲಾಗಿದೆ ಎಂಬ ಪುಣಿಂಚತ್ತಾಯರ ಹೇಳಿಕೆಯನ್ನು ದೃಢಪಡಿಸುವ ಛಂದೋಭೇದವೂ ತುಳು ಕಾವ್ಯಗಳಲ್ಲಿ ಬಳಕೆಯಾಗಿದೆ. ಇದರಲ್ಲಿ ಸೇರ್ಪಡೆಗೊಂಡ ಮೊದಲ ಸಗಣದ ಮೊದಲ ಎರಡು ಲಘುಗಳಿಗೆ ಬದಲಾಗಿ ಒಂದು ಗುರುವನ್ನಿಡಲಾಗಿದೆ. ಉದಾಹರಣೆಗೆ-

ಭವಸಗರೊಮಾಜಿಸ್ಟ್‌ ರಾಜಿಪುಕೀ / ಶಂಖ / ಧ್ವನಿ ಕೇಂಡ್‌
ತವಕೊಂತವಸಂಬ್ರಮಿತೆಯ್ಯೆರ್‌ಲಾ / ನಾನಾ / ದಿಶೆಟ್‌ತ್ತ್
ಧವಲಂಟ್‌ಪಲಂಕರಿತೊಂಡುಡಲಾ / ರಾಜ್ಯೊಂ / ತಜೆಗತ್ತ್
ಭವನಾಥನಿವಂದಿತ್‌ ಕಾಣಿಕೆನೀ / ಕೈಕೊ / ಳ್ತೆರಡೆಂಗಾ (ಭಾ. ೧-೧೦-೭)

ಒಂದನೇ ವೃತ್ತಭೇದದಲ್ಲಿ ವೃತ್ತದ ಆರಂಬದ ಗಣವನ್ನು ಬದಲಾವಣೆ ಗೊಳಪಡಿಸಿದ್ದರೆ, ಎರಡನೆಯದರಲ್ಲಿ ಸೇರ್ಪಡೆಗೊಂಡ ಭಾಗದ ಮೊದಲಗಣ ಬದಲಾವಣೆಗೊಳಗಾಗಿದೆ. ಅಂದರೆ ವೃತ್ತಭೇದದ ನಿರ್ಮಾಣ ಯತಿಯನ್ನು ಅವಲಂಬಿಸಿ ನಡೆದಂತೆ ತೋರುತ್ತದೆ. ತುಳು ವೃತ್ತಗಳ ಪೈಕಿ ಪಾದ ಮಧ್ಯಯತಿ ಕಂಡುಬರುವುದು ಈ ವೃತ್ತದಲ್ಲಿ ಮಾತ್ರ. ಪಾದದ ಅರಂಭದಲ್ಲಿ ಯತಿಯ ಮುಂದೆ ಮಾತ್ರ ಗಣವನ್ನು ಪರಿವರ್ತಿಸಿ ಹೊಸ ಮಟ್ಟುಗಳನ್ನು ತಯಾರಿಸುವುದು ತುಳುವಿನ ಜಾಯಮಾನವಿದ್ದಂತೆದೆ.

ಆರಂಭದ ಎರಡು ಲಘುಗಳಿಗೆ ಒಂದು ಗುರುವನ್ನು ಇಟ್ಟು ಮಾಡಿದ ವೃತ್ತಭೇದಗಳು ತರಳ ವೃತ್ತದಲ್ಲೂ ತೋಟಕದಲ್ಲೂ ಕಂಡು ಬರುತ್ತಿದ್ದು ಇದು ಖ್ಯಾತ ಕರ್ನಾಟಕಗಳನ್ನು ನೆನಪಿಸುತ್ತದೆ. ೧೯ ಅಕ್ಷರಗಳ ಶಾರ್ದೂಲವಿಕ್ರೀಡಿತ ಆರಂಭದ ಗುರುವಿಗೆ ಬದಲಾಗಿ ಎರಡು ಲಘುಗಳಿನ್ನಿಟ್ಟಾಗ ಮತ್ತೆಭವಿಕ್ರೀಡಿತ, ೨೦ ಅಕ್ಷರಗಳ ಉತ್ಪಲಮಾಲೆಯ ಮೊದಲ ಗುರುವಿಗೆ ಬದಲು ಎರಡು ಲಘುಗಳಿನ್ನಿಟ್ಟಾದಾಗ ಚಂಪಕಮಾಲೆ, ೨೧ ಅಕ್ಷರಗಳ ಸ್ರಗ್ಧರೆಯ ಆರಂಭದ ಗುರುವಿಗೆ ಬದಲು ಎರಡು ಲಘುಗಳಿನ್ನಿಟ್ಟಾಗ ಮಹಾಸ್ರಗ್ಧರೆಗಳು ಸಿದ್ಧವಾಗುತ್ತವೆ. ಈ ಆರು ವೃತ್ತಗಳನ್ನು ಒಟ್ಟಗಿ ಖ್ಯಾತ ಕರ್ನಾಟಕಗಳೆಂದು ಕರೆಯಾಲಗುತ್ತದೆ. ಈ ಪೈಕಿ ಮತ್ತೆಭವಿಕ್ರೀಡಿತ, ಚಂಪಕಮಾಲೆ ಮತ್ತು ಮಹಾಸ್ರಗ್ಧರೆಗಳು ದಾಕ್ಷಿಣಾತ್ಯ ಸಂಪ್ರದಾಯದ ಛಂದೋಗ್ರಂಥಗಳಲ್ಲಿ ಮಾತ್ರ ವ್ಯಕ್ತವಾಗಿದ್ದು ದ್ರಾವಿಡ ಭಾಷೆಗಳಲ್ಲಿ, ಅದರಲ್ಲೂ ಕನ್ನಡದಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗಿವೆ.[4] ಇದೇ ಮಾದರಿಯಲ್ಲಿ ತುಳು ಕವಿಗಳೂ ಹೊಸ ಛಂದೋರೂಪಗಳನ್ನು ರೂಪಿಸಿಕೊಂಡಿರಬಹುದೆಂದು ಊಹಿಸಬಹುದು.

ತೋಟಕದ ಮೊದಲ ಎರಡು ಲಘುಗಳಿಗೂ ಸೇರ್ಪಡೆಗೊಂಡ ಸಗಣಗಳ ಪೈಕಿ ಮೊದಲ ಗಣದ ಮೊದಲ ಎರಡು ಲಘುಗಳಿಗೂ ಒಂದು ಗುರುವನ್ನಿಟ್ಟು, ಅಂದರೆ ಎರಡೂ ಕಡೆ ಬದಲಾವಣೆ ಮಾಡಿ ರೂಪಿಸಿಕೊಂಡ ವೃತ್ತಭೇದಗಳಿವೆ. ಉದಾಹರಣೆಗೆ-

 / ದಾನೊಂ / ಕುಳಧರ್ಮತಪಶ್ಯೌಚೋ / ಸ್ವಾಧ್ಯಾ / ಯವ್ರತೊಂಕ್ಳು
/ ಮೌನ / ಶ್ರುತಿಯೆಜ್ಞ ಪುರಾಣೊಕಥೇ / ಚಾಂದ್ರಾ / ಯಣೊ ಬೆತ್ತ್‌
/ ತಾನೇ / ರತಿ ಶ್ರೇಷ್ಟೊ ಮುಕುಂದ ಶ್ರುತೀ / ಸತ್ಕೀ / ರ್ತನೆ ಬೆಂಬೀನ್‌
/ ಆನಿ / ರ್ಮಲೊಂಕ್‌ದ್ದಿನ ಪ್ರೇತಭಯೋ / ಸ್ವಪ್ನೊಂ / ಟ್‌ಲಕೂಡಾ
 (ಕಾ: ೧೦-೫೦)

ಈ ಎರಡು ವೃತ್ತಭೇದಗಳಲ್ಲದೆ, ವೃತ್ತವನ್ನು ಅರ್ಧಸಮಗೊಳಿಸುವ ಪ್ರಯತ್ನಗಳೂ ತುಳು ಕವಿಗಳಿಂದ ನಡೆದಿವೆ. ಮುಖ್ಯವಾಗಿ ಐದನೇ ಗಣದ ವೃತ್ತಭೇದವನ್ನು ಎರಡು ವಿಧಗಳಲ್ಲಿ ಮಾತ್ರ ತಂದು ಉಳಿದೆರಡು ಪಾದಗಳಲ್ಲಿ ಸಗಣಗಳನ್ನೇ ಉಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಮೊದಲ ಎರಡು ಪಾದಗಳನ್ನು, ಮೂರು ಮತ್ತು ನಾಲ್ಕನೇ ಪಾದಗಳನ್ನು, ಒಂದು ಮತ್ತು ಮೂರನೇ ಪಾದವನ್ನು ಒಂದು ಮತ್ತು ನಾಲ್ಕನೇ ಪಾದವನ್ನು ಎರಡು ಮತ್ತು ಮೂರನೇ ಪಾದವನ್ನು, ಅಥವಾ ಎರಡು ಮತ್ತು ನಾಲ್ಕನೇ ಪಾದವನ್ನು ವೃತ್ತಭೇದಕ್ಕೆ ಒಳಪಡಿಸುವ ಮೂಲಕ ಅರ್ಧಸಮಗೊಳಿಸುವ ಪ್ರಯತ್ನಕ್ಕೆ ತುಳು ಛಂದಸ್ಸಿನಲ್ಲಿ ಸಾಕಷ್ಟು ಲಕ್ಷ್ಯಗಳಿವೆ.

ಬಡವಾ ತೃಷೆ ನಿದ್ರೆಯ ಸಂಹರಿತೇ / ಭಾಗೀ / ರತಿತೀರ್ಥಾ
ತಡೆದೆಕ್ಷಿಣದಿಕ್ಕ್‌ಟ್‌ ಶ್ರೀ ಶುಕಟಾ / ಸಂತೋ / ಷಿತ್‌ಕೇಂಡ್‌
ಕಡಲಾಲಯನಂತ್‌ಟ್‌ ನಿಲ್ತೆಯತಾ / ನೃಪೆಸೇ / ವಿತ್‌ಸಾರೊ
ಕಡೆಕೂಡಲಕೇಂಡೆನತೇನೌಳ್‌ / ಗುರುವೀ / ಕರುಣೊಂಟ್‌ (ಭಾ-೧-೨-೪೦)

ಗಿರಿಯಂತಕೆಯಗ್ನಿ ಜಲಾಧಿಪತೀ / ವಾಯ್ವೀ / ಶೆಧನೇಶೇ
ನಿರ್ತೀಂದ್‌ ದಿವಾಕರೆ ತಾರಕೆರಾ / ಗ್ರಹೆರಾ / ದಿ ಸಮಸ್ತಾ
ಸುರೆರೆಯ್ಯ ಸ್ವಯಂವರೊ ಚೂಕ್‌ಣೆಕ್‌ / ವೈಮಾ / ನಿಕೆರಾಸ್ಟ್‌
ನಿರೆತೌಳ್ತ್‌ ಮಹಾರಭಸಂಪೊಲಿತೆರ್ / ಮಾಂಗಲ್ಯ / ತರಂತಾ
(ಮ. ೧೧-೩೦)

ಮೊದಲ ಮೂರು ಪಾದಗಳಲ್ಲಿ ಮಾತ್ರವೇ ಐದನೇ ಗಣದ ಮೊದಲೆರಡು ಲಘುಗಳಿಗೆ ಬದಲಾಗಿ ಒಂದು ಗುರುವನ್ನಿಟ್ಟು, ಕೊನೆಯ ಪಾದದ ಐದನೇ ಗಣವನ್ನು ಸಗಣವಾಗಿಯೇ ಉಳಿಸಿಕೊಂಡ ನೂರಾರು ಪದ್ಯಗಳು ತುಳುಕಾವ್ಯಗಳಲ್ಲಿ ಲಭ್ಯ. ಉದಾಹರಣೆಗೆ-

ದೇವೇಶಮಹೇಶರಮಾರಮಣಾ / ನಾರಾ / ಯಣಸ್ವಾಮೀ
ಕಾವೇರಿಟ್‌ದಾನೊವೆನ್‌ಪ್ಪಿಗುಣಂ / ಪಾತ್ರಂ / ತೆರಿತೀರ್‌
ಆ ವಿಸ್ತರೊಮಾವಪಣೋಡಯೆನೀ / ತೀರ್ಥೊಂ / ತಮಹಾತ್ಮೆ-
ನ್ದಾವಲ್ಲಭೆ ಪ್ರಾರ್ಥಿಪಕಣ್ಣರಿತ್‌ / ಪಣ್‌ಕೇ / ರಸುರಾರಿ
(ಕಾ. ೯-೩೩)

ಈ ಮೇಲಿನ ಮಾದರಿಗಳನ್ನು ನಿರ್ದಿಷ್ಟ ಲಕ್ಷಣಗಳಿಗೆ ಹೊಂದಿಸಿ ವಿಶ್ಲೇಷಿಸಲು ಸಾಧ್ಯ. ಆದರೆ ಯಾವುದೇ ಲಕ್ಷಣಕ್ಕೂ ಹೊಂದದೆ, ಅಂದರೆ ಎರಡು, ಮೂರು ಅಥವಾ ನಾಲ್ಕು ಪಾದಗಳ ನಿದಿಷ್ಟ ಸ್ಥಾನಗಳಲ್ಲಿ ಆವರ್ತಿಸದೆ, ಅನಿಯತವಾಗಿ ೨ ಲಘುಗಳ ಸ್ಥಾನಕ್ಕೆ ೧ ಗುರು ಅಥವಾ ೧ ಗುರುವಿನ ಸ್ಥಾನಕ್ಕೆ ಎರಡು ಲಘುಗಳು ಬರುವ ಸಂದರ್ಭಗಳು ತುಳು ಛಂದಸ್ಸಿನಲ್ಲಿ ಯಥೇಷ್ಟವಾಗಿ ಕಾಣಸಿಗುತ್ತವೆ.[5] ಇದರಿಂದಾಗಿ ಛಂದಸ್ಸಿನ ಅಕ್ಷರ ಪರಿಮಾಣ ವ್ಯತ್ಯಾಸವಾಗುವುದು ಮಾತ್ರವಲ್ಲ. ಅಕ್ಷರಗಣದ ಆಧಾರದಲ್ಲಿ ಲಕ್ಷಣವನ್ನು ರೂಪಿಸುವುದೇ ಅಸಾಧ್ಯವಾಗುತ್ತದೆ.

ಮೆಲ್ಲನೆ / ಯಾತ್ರಿತ್‌ / ಜಾಹ್ನವೀ / ನೀಕಡೆ / ತಾಕುಳು / ನುಂಬು
ಮಲ್ಲಾ / ಶಿಖರೊಂ / ಕುಳೆಗ್ರಾ / ಮನದೀ / ಬೆಳಿರಾ / ಸ್ಟಿಪ್ರದೇ / ಶೊ (ಭಾ. ೧.೧೨.೨೬)

ಸೃಜಯಿ / ತಜಪೆಂ / ದ್‌ದೆವಿ / ಶ್ವಕರ್ಮಾ / ವಿನಿಮು / ಟ್ವಕ್‌
ಪೊರ್ತ್ಥೊಂ / ಟಿನಿಕೊಂ / ಡತ್‌ಭೂ / ಪತಿಕ್‌ / ಕೊಳ್‌ಸ್ಟ್‌ / ತ್ತೆಯೊಪ / ಕ್ಷೇ (ಮ. ೧೧ -೩೦)

ಪ್ರತಿ ಮೂರು ಅಕ್ಷರಗಳಿಗೆ ಗಣವನ್ನು ಛೇದಿಸುವುದು ಮತ್ತು ನಾಲ್ಕು ಪಾದಗಳಲ್ಲೂ ಸಮಾನ ಗುರುಲಘುವಿನ್ಯಾಸವಿರುವುದು ಅಕ್ಷರಗಣ ಛಂದಸ್ಸಿನ ನಿಯಮ. ವ್ಯತ್ಯಗಳು ವ್ಯಾಪಕವಾಗಿದ್ದಾಗ ಅಂತಹ ಪದ್ಯಗಳನ್ನು ಅಕ್ಷರ ವೃತ್ತಗಳಾಗಿ ಪರಿಗಣಿಸುವುದು ಸಾಧ್ಯವಾಗುವುದಿಲ್ಲ. ಮುಂದೆ ಈ ಬಗ್ಗೆ ಚರ್ಚಿಸಲಾಗಿದೆ.

೨. ಸರಳ ಮತ್ತು ಮಲ್ಲಿಕಾಮಾಲಾ ವೃತ್ತ

ಅಕ್ಷರ ವೃತ್ತಗಳ ಪೈಕಿ ಕೆಲವು ಸಮಾನ ಮಾತ್ರಾಗಣಗಳಿಂದ ಕೂದಿದ್ದು ತಾಳಬದ್ಧವಾಗಿರುತ್ತವೆ. ಶ್ರುತಿ ಹಿತವಾಗಿರುವುದರಿಂದ ಛಂದೋವೈವುಧ್ಯಕ್ಕಾಗಿ ಕನ್ನಡ ಚಂಪೂ ಕವಿಗಳು ತಮ್ಮ ಕಾವ್ಯದಲ್ಲಿ ಕೆಲವೆಡೆಯಾದರೂ ಇಂತಹ ವೃತ್ತಗಳನ್ನು ಬಳಸಿದ್ದುಂಟು ಸಂಸ್ಕೃತದಲ್ಲೂ. ಮಲೆಯಾಳವೇ ಮುಂತಾದ ದ್ರಾವಿಡ ಭಾಷೆಗಳಲ್ಲೂ ಈ ವೃತ್ತಗಳು ಧಾರಾಳ ಬಳಕೆಯಾಗಿವೆ. ಆದರೆ ಒಂದು ಸಮಗ್ರ ಕಾವ್ಯರಚನೆ ಈ ವೃತ್ತಗಳಲ್ಲೆ ನಡೆದದ್ದಿಲ್ಲ.

ತುಳುವಿನಲ್ಲಿ ಸಗಣ ವೃತ್ತವನ್ನು ಬಿಟ್ಟರೆ ಅತ್ಯಂತ ಹೆಚ್ಚು ಬಳಕೆಯಾದ ವೃತ್ತ ಮಲ್ಲಿಕಾಮಾಲೆಯೇ. ಸ್ತುತಿ ವರ್ಣನೆ, ನಿರೂಪಣೆ, ಸಂಭಾಷಣೆ ಇತ್ಯಾದಿಗಳಿಗೆ ಸಾಮಾನ್ಯವಾಗಿ ಬಳಕೆಯಾಗುವ ಮಲ್ಲಿ ಕಾಮಲೆ ದೈನ್ಯ, ಶೋಕ ಮತ್ತು ಕ್ರೋಧದ ಭಾವಾಭಿವ್ಯಕ್ತಿಗೆ ಉತ್ತಮವೆಂದು ಹೇಳಲಾಗಿದೆ. ೩ + ೪ ಮಾತ್ರೆಗಳ ಲಯ ನಿಯತವಾಗಿರುವುದರಿಂದ ಉತ್ಸಾಹದ ಗತಿ ಈ ವೃತ್ತಕ್ಕಿದೆ.

ಸರಳ ಮಲ್ಲಿಕಾ ಮಾಲೆಗಳ ವೃತ್ತ ಭೇದಗಳು

ಶುದ್ಧ ಮಲ್ಲಿಕಾಮಾಲೆಗೂ, ಅದರ ವೃತ್ತ ಭೇದಗಳಿಗೂ ಸಾಕಷ್ಟು ಉದಾಹರಣೆಗಳು ತುಳು ಕಾವ್ಯಗಳಲ್ಲಿ ದೊರೆಯುತ್ತವೆ.

ಕಾಳಿದಾಸೆರಭಟ್ಟೆಭಾರವಿಮೇಘೇಯಡ್ಡಮಯೂರೆಯಾ
ಕಾಳಕಂಠಸಮಾನೆವ್ಯಾಸಕುಮಾರವ್ಯಾಸೆರವಾಲ್ಮಿಕೀ
ಕೋಳಿನಾತರೆಚೀತೆರಾದಿಟನಂತಶಾಸ್ತ್ರಪುರಾಣೊಮಿ
ಕೇಳಿಟೇನ್‌ಲ ವಂ ದಿತಾಕುಳೆವರ್ಣಿಪುಪ್ಪನತೀಕಥೆ (ಭಾ ೧-೧-೧೧)

ಇದು ಶುದ್ಧ ಮಲ್ಲಿಕಾಮಾಲೆ ಇದರ ಮೊದಲ ಹಾಗೂ ೩ನೇ ಪಾದದಲ್ಲಿ, ಐದನೇ ಗಣದ ಎರಡು ಹ್ರಸ್ವಗಳಿಗೆ ಬದಲು ಒಂದು ಗುರುವನ್ನಿಟ್ಟು ಮಾಡಿಕೊಂಡ ವೃತ್ತಭೇದವಿದೆ. ಇದು ವೃತ್ತಕ್ಕೆ ಅರ್ಧಸಮತ್ವವನ್ನು ಕೊಡುತ್ತದೆ. ಉದಾಹರಣೆಗೆ –

ಏಕಮುಷ್ಟಿ ಕೊಳಾಲುತೀರುವುಟೆಂದ್‌ಣ್ೕ ನೇಕೋದಿನೋ
ಪಾಕಾಧರ್ಮೊಮೆಂದುಂಡೊ ಧರ್ಮರಹಸ್ಯೊಮೇರಿಡೆ ಪಿಂಬೆರ್‌
ಲೋಕೊ ಮೂಜೆಕಕೂಡ್‌ಸ್ಟ್‌ೕಯುಗೊಮೂಜೆಟ್ಟ್ೕ ಬೆನ್ಕೀಫಲೋ
ಏಕ ಮುಷ್ಟಿಟೆ ಸಿದ್ಧಿಪೂಕಲಿಕಾಲೊಂಟೇರೆಕ ಸತ್ಯೊಮೇ (ಕಾ. ೯-೭೪)

ಕನ್ನಡದಲ್ಲಿ ಮಲ್ಲಿಕಾಮಾಲೆಯ ಬಳಕೆ ಶೇಕಡಾ ೫ಕ್ಕಿಂತ ಕಡಿಮೆ.

ಇದಕ್ಕಿಂತ ಸಣ್ಣ ಪ್ರಮಾಣದಲ್ಲಿ ಬಳಕೆಯಾದ ಇನ್ನೊಂದು ವೃತ್ತ ತರಳ. ಇದಕ್ಕೆ ಮಲ್ಲಿಕಾಮಾಲೆಗಿಂತ ಒಂದು ಅಕ್ಷರ ಹೆಚ್ಚು. ಮಲ್ಲಿಕಾಮಾಲೆಯ ಪಾದದ ಮೊದಲ ಗುರುವಿಗೆ ಎರಡು ಲಘುಗಳನ್ನಿಟ್ಟರೆ ತರಳವೃತ್ತ ಸಿದ್ಧವಾಗುತ್ತದೆ.

ಮೃಗಮ / ದೊಂಕುಳೆ ಚಾಂದ್‌ ಚಂದನೊ ದರ್ಪಣೊ ಬಹುಪುಷ್ಟೊಮಾ
ಅಗಿಲ / ಗುಗ್ಗುಳ ಭಾಳಧೂಪವಿಲಾಸ ಸೌರಭ ಸಂಪದಂ
ತಿಗೆತಿ / ಕರ್ಪೂರ ವೀಳ್ಯೊ ಚುರ್ಣೊಮನೇಕ ಲಕ್ಷಣೊ ಮುಳ್ಳವೇ
ಬಗೆ ಬ / ಗೇ ತೆರಿತೇರ್‌ ಪಿಂಬೆರ್‌ ಮಾಂತ ಪಿಂದ್‌ ರೆಚೀಪೆರ (ಭಾ ೩-೧೭-೧೧)

ಇದು ಶುದ್ಧ ತರಳ ವೃತ್ತ ‘ಹರ್ಷದಿಂದ ಹೃದಯ ಕಂಪಿತವಾದ, ಚಂಚಲವಾದಾಗ ತರಳವು ಯೋಗ್ಯ ವೃತ್ತ. ರತಿ, ಪ್ರೀತಿಗಳ ವರ್ಣನೆಗೂ ಸೂಕ್ತವೇ ಆಗಿದೆ’ (ಪಂಕೃ. ಪು. ೨೬೧) ಮಲ್ಲಿಕಾಮಾಲೆಗಳ ನಡುವೆ ಎಲ್ಲ ತುಳುಕಾವ್ಯಗಳಲ್ಲೂ ಬೆರಣಿಕೆಯ ತರಳ ವೃತ್ತಗಳು ಸಿಗುತ್ತವೆ. ಮಲ್ಲಿಕಾಮಾಲೆಗೂ ತರಳಕ್ಕೂ ಇರುವ ವ್ಯತ್ಯಾಸ ಪಾದದ ಮೊದಲು ಅಕ್ಷರದಲ್ಲಿ ಮಾತ್ರ. ಅಕ್ಷರಗಣ ಘಟನೆಗೆ ಅನುಸಾರವಾಗಿ ಎಲ್ಲ ಗಣಗಳೂ ವ್ಯತ್ಯಾಸವಾಗುವುದಿದ್ದರೂ ತುಳು ಕವಿಗಳು ತಾಳಕ್ಕೆ ಪ್ರಾಶಸ್ತ್ಯ ನೀಡಿರುವುದರಿಂದ ಈ ಎರಡು ವೃತ್ತಗಳೂ ಹೆಚ್ಚು ಕಡಿಮೆ ಒಂದೇ ಪರಿಣಾಮವನ್ನು ಹೊಂದಿವೆ. ಮಾತ್ರವಲ್ಲ ತುಳು ಕವಿಗಳು ತರಳ ವೃತ್ತವನ್ನು ಉದ್ದೇಶಕಪೂರ್ವಕವಾಗಿ ಬಳಸಿದಂತೆ ತೋರುವುದಿಲ್ಲ. ಏಕೆಂದರೆ ಅಕ್ಷರ ಗಣ ಘಟಿತ ಶುದ್ಧ ತರಳ ವೃತ್ತಗಳು ತುಳು ಕಾವ್ಯಗಳಲ್ಲಿ ತೀರಾ ಕಡಿಮೆ. ಬದಲಾಗಿ ಇವು ಮಲ್ಲಿಕಾಮಾಲೆಯ ವೃತ್ತಭೇದವಾಗಿ ಬಳಸಲ್ಪಟ್ಟಂತೆ ತೋರುತ್ತದೆ. ಆದ್ದರಿಂದ ತರಳ ವೃತ್ತವನ್ನು ಪ್ರತ್ಯೇಕವಾಗಿ ವಿಶ್ಲೇಷಿಸುವ ಅಗತ್ಯವಿಲ್ಲ. ಅದನ್ನು ಮಲ್ಲಿಕಾಮಾಲೆಯೊಂದಿಗೆ ವಿಶ್ಲೇಷಿಸಲಾಗಿದೆ. ಉದಾಹರಣೆಗೆ –

ಸುರಗ |ಜೇಂದೆಲ  | ಪಿಜಿತ್‌ | ತ್‌ಹಸ್ತಿ |ನಾಪುರೊ |ಪ್ರಾಪಿಪಾ
ಉರಳ್‌ |ಬಂಡಿಟ್‌ |ನೂಕ್‌ಸ್ಟೀ | ಸಮಯೊಂ | ಟ್‌ಸೂರ್ಯೆ | ಯುದೀತೆ | ರ್‌
ಸುರನ | ದೀಸುತೆ  |ಭೀಷ್ಮೆಲಾ |ಪರೊಅ | ಕ್ಷ ತೊಮು | ಡ ಪಾಪೌ |ಳ್‌
ಪರಮ | ಗುರುಕು | ಳುದ್ರೋಣ | ಶಲ್ಯೆರ | ಮಾನಿಪ್ರ | ಪ್ಪೆರ | ತರ್ಜುನೆ (ಮ. ೫-೮೦).

ಇದಕ್ಕೆ ಮಲ್ಲಿಕಾಮಾಲೆಯ ಅಥವಾ ತರಳ ವೃತ್ತದ ೩ + ೪ ಮಾತ್ರೆಗಳ ಲಯವಿದೆ. ಆದರೆ ಅಕ್ಷರಗಣ ಘಟನೆಯ ದೃಷ್ಟಿಯಿಂದ ಒಂದೊಂದು ಪಾದವೂ ಇನ್ನೊಂದರಿಂದ ಭಿನ್ನವಾಗಿದೆ. ಒಂದಿಲ್ಲೊಂದು ಪಾದದಲ್ಲಿ ಇಂತಹ ವ್ಯತ್ಯಯಗಳುಳ್ಳ ಧಾರಾಳ ವೃತ್ತಗಳು ತುಳು ಕಾವ್ಯಗಳಲ್ಲಿ ಲಭ್ಯವಿದೆ. ತುಳು ಕವಿಗಳು ಸಗಮ, ವನಮಯೂರ ಮುಂತಾದ ವೃತ್ತಗಳಲ್ಲೂ ಪಾದದ ಮೊದಲ ಗಣದಲ್ಲಿ ಗುರುವಿಗೆ ಬದಲು ಎರಡು ಲಘುಗಳನ್ನಿಟ್ಟು ಉದಾಹರಣೆಗಳನ್ನು ಗಮನಿಸಿದರೆ ಮಲ್ಲಿಕಾಮಾಲೆಗೆ ವೃತ್ತಭೇದವನ್ನು ನಿರ್ಮಿಸುವ ಉದ್ದೇಶವೇ ತುಳುವಿನ ತರಳ ವೃತ್ತಗಳ ರಚನೆಗೆ ಕಾರಣವೇನೊ ಅನ್ನಿಸುತ್ತದೆ. ಸಂಸ್ಕೃತ ವೃತ್ತಗಳ ನಿಯಮಗಳನ್ನು ಮೀರಿ, ಅವುಗಳ ಗಣಘಟನೆ ಹಾಗೂ ಅಕ್ಷರ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡು ತುಳು ಕವಿಗಳು ತೋರಿದ ಪ್ರಯೋಗಶೀಲತೆ ಸಂಸ್ಕೃತ ವೃತ್ತಗಳ ಆಧಾರದಲ್ಲೇ ನಡೆದಿದೆ ಎನ್ನುವುದು ಗಮನಾರ್ಹ, ಅಂದರೆ, ಸಂಸ್ಕೃತ ವೃತ್ತಗಳ ನಿಯಮಗಳ ತಲಸ್ಪರ್ಶೀ ತಿಳುವಳಿಕೆಯಿದ್ದೂ ಅವನ್ನು ಮೀರಲು ಪ್ರಯತ್ನಿಸಿದ್ದು ತುಳು ಭಾಷೆಯ ಅನನ್ಯತೆಗೂ ಸಾಕ್ಷಿ ಹೇಳುತ್ತದೆ.

ವಿಷ್ಣು ತುಂಗನ ‘ಭಾಗವತೊ’ಗೆ ಚಾಟುವಿಠಲನಾಥನ ಕನ್ನಡ ಭಾಗವತೇ ಮೂಲ. ‘ಮೇಲಾಗಿ ಸಂಸ್ಕೃತ ಭಾಗವತವನ್ನೂ ಆತ ಚೆನ್ನಾಗಿ ಅರಗಿಸಿಕೊಂಡಿದ್ದಾನೆ, ಸಂಸ್ಕೃತ, ಕನ್ನಡ – ಎರಡೂ ಭಾಷೆಗಳಲ್ಲೂ ಪ್ರಬುದ್ಧ ಪಾಂಡಿತ್ಯವಿರುವ ವಿಷ್ಣು ತುಂಗನು ಇವೆರಡನ್ನೂ ಸಮತೋಲ ದೃಷ್ಟಿಯಿಂದ ನೋಡಿ ತನ್ನದೇ ಆದ ಒಂದು ಕಾವ್ಯ ಸ್ವರೂಪವನ್ನು ಕಂಡುಕೊಂಡಿರಬೇಕೆಂದು ಆತನ ಕಾವ್ಯ ಪರೀಶೀಲನೆಯಿಂದ ವೇದ್ಯವಾಗುತ್ತದೆ.[6] ಮೇಲಾಗಿ ತಾನು ಕುಮಾರವ್ಯಾಸನಿಂದಲೂ ಪ್ರಭಾವಿತನಾಗಿರುವುದಾಗಿ ಕವಿಯೇ ಸ್ವತಃ ಹೇಳಿಕೊಂಡಿದ್ದಾರೆ. ‘ಇಬ್ಬರೂ ಕನ್ನಡ ಕವಿಗಳ ಉದ್ದಾಮ ಕೃತಿಗಳ ಪರಿಚಯ ಆತನಿಗಿದ್ದರೂ ಅವರು ಬಳಸಿದ ಷಟ್ಟದಿ ಛಂದಸ್ಸನ್ನು ಅನುಸರಿಸುವ ಗೋಜಿಗೆ ಆತ ಹೋಗಲಿಲ್ಲ’ ಎಂದು ವೆಂಕಟರಾಜ ಪುಣಿಂಚತ್ತಾಯರು ಹೇಳಿದ್ದಾರೆ. (ಭಾ.ಪು. ೩೨) ಆದರೆ ಕವಿ ೩+೫ ಮಾತ್ರೆಗಳ ಭಾಮಿನಿಯ ಲಯವನ್ನು ಹೊಂದಿದ ಸಾಕಷ್ಟು ವೃತ್ತಗಳನ್ನು ತನ್ನ ಕಾವ್ಯದಲ್ಲಿ ಬಳಸಿದ್ದಾನೆ. ೩ +೪ ಇದ್ದುದ್ದಕ್ಕೆ ಕಾರಣ ಕನ್ನಡಕ್ಕೆ ಭಿನ್ನವಾದೊಂದು ಛಂದೋಮಾದರಿ ಈಗಾಗಲೇ ತುಳುವಿನಲ್ಲಿ ಇತ್ತು. ಮತ್ತು ಅದು ತುಳುವಿನ ಅನನ್ಯತೆಯನ್ನು ಎತ್ತಿ ಹೇಳುತ್ತಿತ್ತು ಎನ್ನುವುದು ಎಲ್ಲ ತುಳು ಕವಿಗಳೂ ಒಂದೇ ಮಾದರಿಯ ಛಂದಸ್ಸುಗಳನ್ನು ಬಳಸಿರುವುದು ಇದಕ್ಕೆ ಪುರಾವೆ. ತುಳು ಕವಿಗಳು ರೂಪಿಸಿದ ಛಂದೋಮಾದರಿಗಳ ಪೈಕಿ ಮಲ್ಲಿಕಾಮಾಲೆ, ತರಳ ಅಥವಾ ಅವುಗಳ ಛಂದೋಲಯವುಳ್ಳ, ಅಂದರೆ ೩+ ೪ ಮಾತ್ರೆಗಳ ಲಯವುಳ್ಳ ಛಂಧ ಪ್ರಭೇದವು ಒಂದು ಅದನ್ನೇ ವಿಷ್ಣುತುಂಗ ತನ್ನ ಕಾವ್ಯದ ಮುಖ್ಯ ವೃತ್ತವನ್ನಾಗಿ ಸ್ವೀಕರಿಸಿಕೊಂಡಿದ್ದಾನೆ.

 

[1] ವಿವರಗಳಿಗಾಗಿ A Comparative study of Tulu Dialects ಗ್ರಂಥದ ಉದಾಹರಣೆಗಳನ್ನು ನೋಡಬಹುದು. ಪು. ೧೧

[2] ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ ಪು. ೫.

[3] ಕಛಂಚ ಪು. ೨೫೪. ವೇಲಣಕರ್‌ಅವರ ಅಭಿಪ್ರಾಯಗಳಿಗಾಗಿ Kavidarpana, 1962, Introduction. p: XXVII – XXVIII ನೋಡಬಹುದು.

[4] ಭಾ. ಪ್ರಸ್ತಾ. ಪು. ೩೪

[5] ನೋಡಿ. ಭಾರತೀಯ ಛಂದಶ್ಯಾಸ್ತ್ರ ಪು. ೩೭೦ – ೭೧.

[6] ಒಂದು ಗಣದ ಸ್ಥಾನದಲ್ಲಿ ಅನಿಯತವಾಗಿ ಇನ್ನೊಂದು ಗಣ ಬರುವುದು ಈ ಪ್ರಕ್ರಿಯೆಯನ್ನು ಮುಂದೆ ‘ಛಂದೋವ್ಯತ್ಯಯ’ ಎಂಬ