ಮಕ್ಕಳು ತಮ್ಮ ಮಾತೃ ಭಾಷೆಯಲ್ಲಿಯೇ ಶಿಕ್ಷಣವನ್ನು ಆರಂಭಿಸಬೇಕು-ಎನ್ನುವುದು ಶಿಕ್ಷಣ ಶಾಸ್ತ್ರದ ಗಟ್ಟಿಮುಟ್ಟಾದ ಸಿದ್ಧಾಂತ. ಕಳೆದ ದಶಕದಲ್ಲಿ ನಾನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿ ಸೇರಿದ ಸುರುವಾತನ ಕಾಲದಲ್ಲಿ ‘ಈ ಜಿಲ್ಲೆಯಲ್ಲಿ ೨೦ ಲಕ್ಷ ಜನ ತುಳುವರಿರುವಾಗ ಅವರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ತುಳು ಭಾಷೆಯಲ್ಲಿ ಯಾಕೆ ನೀಡುತ ಇಲ್ಲ’ ಎಂದು ಅನಿಸುತ್ತಿದ್ದಿತು. ನಮ್ಮ ಹಳ್ಳಿಗಳಲ್ಲಿ ಉರ್ದು ಶಾಲೆಗಳಿದ್ದು, ಉರ್ದು ಮಾತೃ ಭಾಷೆಯಾಗಿರುವ ೧-೪ ಇಯತ್ತೇಯವರೆಗೆ ಉರ್ದು ಲಿಪಿ, ಭಾಷೆಗಳನ್ನು ಕಲಿಯುತ್ತಾರೆ (ಜೊತೆಗೆ ಕನ್ನಡವನ್ನೂ) . ಮುಂದೆ ಐದನೆಯ ಇಯತ್ತೆಯಲ್ಲಿ ಅವರು ಕನ್ನಡ ಶಾಲೆಯಲ್ಲಿಯ ಸಮಾವೇಶಗೊಳ್ಳುತ್ತಾರೆ. ಇದೇ ರೀತಿಯಲ್ಲಿ ತುಳುವಿಗೆ ವ್ಯವಸ್ಥೆ ಇದ್ದರೆ ಒಳ್ಳೆಯದ್ದಲ್ಲವೆ? ಇದು ಆಗಿನ ನನ್ನ ವಿಚಾರವಾಗಿದ್ದಿತು.

ಇದೇ ವಿಚಾರ, ನೂರು ವರ್ಷಗಳ ಹಿಂದೆ ಇಲ್ಲಿಯ ಬಾಸೆಲ್‌ ಮಿಶನ್ನನ್ನಿನವರಿಗೂ ತಲೆದೋರಿತ್ತು! ಆ ದೃಷ್ಟಿಯನ್ನಿಟ್ಟುಕೊಂಡು ಅವರು ೧೮೯೧ ರಲ್ಲಿ ‘ತುಳು ದುಂಬುದ ಪುಸ್ತಕ’ ವನ್ನು ಪ್ರಕಟಿಸಿದರು. ‘ಕನ್ನಡವೇ ಈ ಜಿಲ್ಲೆಯ ಆಡಳಿತದ, ವ್ಯವಹಾರದ ಭಾಷೆಯಾಗಿದ್ದರೂ, ಇಲ್ಲಿಯ ತುಳು ಮಕ್ಕಳಿಗೆ ಕನ್ನಡ ಲಿಪಿಯನ್ನು ಮೊದಲು ರೂಢಿಸಿಕೊಳ್ಳಲು ಸಹಾಯಕವಾಗಬೇಕು. ಅದಕ್ಕಾಗಿ ತುಳು ಪ್ರೈಮರನ್ನು ಪ್ರಕಟಿಸಿ ಕಲಿಸಬೇಕು’ – ಇದು ಅವರ ಉದ್ದೇಶವಾಗಿದ್ದಿತು!

ಬಾಸೆಲ್‌ ಮಿಶನಿಗರ ಈ ಎತ್ತುಗಡೆ ನಮಗೆ ಆ-ತಾರ್ಕಿಕವಾಗಿ ಕಾಣಬಹುದು. ದ. ಕ. ಜಿಲ್ಲೆಯಲ್ಲಿ ಕನ್ನಡದ, ಅದರಂತೆ ತುಳು ಮುಂತಾದ ಭಾಷೆಗಳ ಸ್ಥಾನಮಾನದ ಬಗ್ಗೆ, ನೂರು ವರ್ಷಗಳ ಹಿಂದೆ ಸ್ಪಷ್ಟವಾದ ತಿಳಿವಳಿಕೆ ಇಲ್ಲದ ಕಾಲವದು. ವಿಶೇಷತಃ ಅವರು ಮತಾಂತರಿಸಿದ ದೇಶೀ ಕ್ರಿಶ್ಚಿಯನ್ನರಲ್ಲಿ ತುಳುವರೇ ಹೆಚ್ಚಾಗಿ ಇದ್ದು, ಅವರು ಶಿಕ್ಷಣ ವಿಚಾರದಲ್ಲಿ ಇತರ ಜನಾಂಗದವರಿಗಿಂತ ಹಿಂದೆ ಬೀಳಬಾರದೆಂಬ ಕಳಕಳಿ ಅವರದ್ದಾಗಿತ್ತು. ಅದು ಎಷ್ಟರಮಟ್ಟಿಗೆ ಎಂದರೆ, ಒಂದು ವೇಳೆ ಮೊದಲ ವರ್ಷ ಈ ತುಳು ಪಠ್ಯವನ್ನು ಓದಿಯಾದ ಮೇಲೂ ಆ ವಿದ್ಯಾರ್ಥಿ ಹಿಂದೆ ಬಿದ್ದರೆ, ಮರುವರ್ಷ ತುಳುವಿನ ಪುಸ್ತಕವನ್ನೇ ಕಲಿಯಬೇಕು- ಎಂಬುದೂ ಅದರ ನಿಲುಮೆಯಾಗಿದ್ದಿತು! (Those children who will be found obtruse will be taught Tulu in the second year also, in the parochial schools).

ತುಳು ಭಾಷಾ ಶಿಕ್ಷಣವನ್ನು ಆಗಿನ ಮದ್ರಾಸ್‌ಪ್ರಾಂತದ ಶಿಕ್ಷಣ ಖಾತೆಯ ಮಾನ್ಯ ಮಾಡಿರಬೇಕಿತ್ತು. ಹಾಗೇನೂ ಮಾಡಿರಲಿಲ್ಲ. ಆದಾಗ್ಯಾ ಬಾಸೆಲ್‌ಮಿಶನಿಗರು ತಾವು ನಡೆಸುವ ಶಾಲೆಗಳಲ್ಲಿ ಈ ತಮ್ಮ ಪ್ರಯೋಗವನ್ನು ಅನುಷ್ಠಾನದಲ್ಲಿ ತರಬೇಕು ಎಂದು ನಿರ್ಧರಿಸಿದ್ದರು. ಶಿಕ್ಷಣ ಖಾತೆಗೆ ಉಭಯ ಭಾಷಾ ಸಂಬಂಧದ ಅರಿವಿದ್ದಿಲ್ಲವೆಂತೆಲ್ಲ. ಅದಕ್ಕೂ ೩೦ ವರ್ಷಗಳ ಹಿಂದೆ (೧೮೬೨) ಅವರೇ ಈಯೊಂದು ಪುಸ್ತಕವನ್ನು ಪ್ರಕಟಿಸಿದ್ದುಂಟು:

Digilott First Book of Lessons in Canerese and Tulu. (Published by D.P.I)

ಕನ್ನಡ ಮತ್ತು ತುಳು ಪಾಠಗಳ ಮೊದಲನೆಯ ಪುಸ್ತಕ
ಕರ್ನಾಟ್‌ ಬೊಕ್ಕ ತುಳು ಪಾಠೊಳೆ ದುಂಬುದ ಪುಸ್ತಕ

ಆ ಕಾರಣದಿಂದ ಶಿಕ್ಷಣ ಖಾತೆಯ ಬಾಸೆಲ್‌ಮಿಶನಿಗರ ಈ ಪ್ರಯತ್ನವನ್ನು ಅಮಾನ್ಯ ಮಾಡಹೋಗಲಿಲ್ಲ.

ಆದರೆ ಎಸ್‌. ದೌರ್‌ (Daur) ಎಂಬಾತ ದಿ. ೧೭-೦೯-೧೮೯೧ರ (Christian Patroit -ಎಂಬ ಸಾಪ್ತಾಹಿಕದಲ್ಲಿ ವಾಚಕ ಪತ್ರವನ್ನು ಬರೆದಾಗಲೇ ಇದು ಸಾರ್ವಜನಿಕರ ಗಮನಕೆ ಬಂದದು. ಅಲ್ಲಿಂದ ಸುರುವಾಯಿತು. ವಿರೋಧಿ ಪತ್ರಗಳ ವಾಗ್ಬಾಣ!

‘ನಮ್ಮ ಮಂಗಳೂರು ಜಿಲೆಯಲ್ಲಿ ಕೊಂಕಣಿ ಮುಂತಾಗಿ ಬೇರೆ ಹಲವು ಭಾಷೆಗಳೂ ಇವೆ. ಈ ಭಾಷೆಗಳಿಗೂ ಇಂಥ ಮೊದಲ ಇಯತ್ತೆಯ ಕನ್ನಡ ಲಿಪಿಯುಳ್ಳ ಪುಸ್ತಕಗಳು ಸಿದ್ಧವಾಗಬೇಕೆ? ಆ ಭಾಷಿಕರು ಒಪ್ಪುತ್ತಾರೆಯೆ?’

‘ತುಳುವಿನಲ್ಲಿ ಅರ್ಧ ಸ್ವರದ, ದ್ವಿಸ್ವರ ಭಾರದ (double sound) ಶಬ್ಧಗಳಿವೆ. ಅವನ್ನು ಕನ್ನಡ ಲಿಪಿ ಸಮರ್ಪಕವಾಗಿ ಧ್ವನಿಸಲಾರದು’

‘ತುಳು ಭಾಷಾಪುಸ್ತಕ -ಎಂದಾದರೆ ತುಳು ಲಿಪಿಯಲ್ಲೇ ಅದು. ಇರಬೇಕಾದದ್ದು. ಆ ಲಿಪಿ (ಒಟ್ಟೆಳೊತ್ತು) ಸದ್ಯ ಬಳಕೆಯಲ್ಲಿ ಇಲವಾದರೂ, ಅದನ್ನೇಕೆ ಪುನರುಜ್ಜೀವಿಸಬಾರದು?’

‘ಇಷ್ಟಕ್ಕೂ Standard ಯುಳು ಎಂಬುದು ಇದೆಯೆಲ್ಲಿ? ಪ್ರಾದೇಶಿಕ ವಾದ, ಜಾತಿಕೋಮುಗಳ ಮೂಲಕವಾದ ಭೇದಗಳು ತುಂಬಾ ಇವೆ. ಮಕ್ಕಳು ಯಾವ ತುಳುವನ್ನು ಕಲಿಯಬೇಕು?’

‘ಶಲೆಯಲ್ಲಿ ತುಳು ಕಲಿತವರಿಗೆ ವ್ಯಾವಹಾರಿಕವಾಗಿ ಅದಾವ ಪ್ರಯೋಜನವಿದೆ? ತುಳುವಿನ ಕ್ರಿಶ್ಚಿಯನ್ನರು ಈಗಂತೂ ಹೆಚ್ಚಾಗಿ ನಿಮ್ನ ವರ್ಗದವರು ಅವರು ಮುಂದೆಯೂ ಕೂಲಿಗಳೋ, ಜೀತದಾಳುಗಳೋ ಆಗಿಯೆ ಜೀವನ ನಡೆಸಬೇಕಾದೀತು?

‘ತುಳು ಮಾತಿನ ಮಗು ಹಿಂದೆ ಬಿದ್ದರೆ……’ ಎಂಬ ಮಾತಿದೆ. ಅದನ್ನು ಯಾರು ಮತ್ತು ಹೇಗೆ ನಿರ್ಧರಿಸಬೇಕು? ಶಾಲಾದಿನಗಳಲ್ಲಿ ಹಸಿ ದಡ್ಡು ಎನಿಸಿಕೊಂಡವರು ಮುಂದೆ ಪ್ರತಿಭಾನ್ವಿತರಾಗಿ ಮೆರೆದ ಅದೆಷ್ಟೋ ಜನ ಇದ್ದಾರಲ್ಲ? ಉದಾಹರಣೆಗೆ ಸರ್‌ ವಾಲ್ಟರ್‌ ಸ್ಕಾಟ್‌, ಟಾಡ್‌ ಹಂಟರ್‌, ಕ್ರಿಸ್ತೋಫರ್‌ ಕ್ಲಾವಿಯಾ. (ಈತ ಮುಂದೆ ತನ್ನ ಕಾಲದ ಯುಕ್ಲಿಡ್‌ ಎನಿಸಿದನಂತೆ)’.

ಈ ‘ದಡ್ಡ’ ಎರಡನೆಯ ವರ್ಷವೂ ತುಳು ಕಲಿಯಬೇಕು. ಆಗೂ ದಡ್ಡನಾಗಿ ಉಳಿದರೆ ಮೂರನೆಯ ವರ್ಷವೂ ….?!

ಪತ್ರಿಕಾ ಚರ್ಚೆ ಹೀಗೆ ಎಲ್ಲೆಲ್ಲಿಯೂ ಹರಿದಾಡಿತು. ಈ ಕುರಿತು ಓರ್ವ ಶಿಕ್ಷಣತಜ್ಞ ಪದವೀಧರರೊಬ್ಬರನ್ನು ಕೇಳಿದರಂತೆ. ಅವರೂ ವಿರೋಧವನ್ನು ವ್ಯಕ್ತಪಡಿಸಿದರಂತೆ (ಆ ಪದವಿಧರ ಶಿಕ್ಷಣ ತಜ್ಞ ಆಗಿನ ಕಾಲಕ್ಕೆ ನನಗೆ ತಿಳಿದ ಮಟ್ಟಿಗೆ ಪಂಜೆ ಮಂಗೇಶರಾಯರು). ಅಂತೂ ಈ ನಿಮಿತ್ತದಿಂದ ಜಿಲ್ಲೆಯಲ್ಲಿ ಕನ್ನಡ ತುಳು ಭಾಷೆಗಳ ಸಂಬಂಧ ಏನು, ಹೇಗಿರಬೇಕು ಎಂಬುದನ್ನು ಕೂಲಂಕಷವಾಗಿ ಚರ್ಚಿಸಿದಂತಾಗಿತ್ತು.

ಅದೇನಿದ್ದರೂ ವಿರೋಧವೇ ಬಹಳವಾದ್ದರಿಂದ ಬಾಸೆಲ್‍ ಮಿಶನಿಗರು ತುಳು ಕಲಿಕೆಯ ಆ ತಮ್ಮ ಪ್ರಯೋಗವನ್ನು ನಿಲ್ಲಿಸಿಬಿಟ್ಟರು.