ಎರಡು ಲಘುಗಳ ಸ್ಥಾನದಲ್ಲಿ ಒಂದು ಗುರುವನ್ನಿಟ್ಟು ಮಾಡಿಕೊಂಡ ಬದಲಾವಣೆಗಳು ತರಳ ಮತ್ತು ಮಲ್ಲಿಕಾ ಮಾಲೆಗಳೆರಡರಲ್ಲೂ ಎಲ್ಲ ತುಳುಕಾವ್ಯಗಳಲ್ಲೂ ಕಾಣಸಿಗುತ್ತವೆ. ಈ ಬದಲಾವಣೆಗಳಿಂದಾಗಿ ಪಾದದ ಮಾತ್ರಾ ಮೌಲ್ಯದಲ್ಲಿ ವ್ಯತ್ಯಯವಾಗುವುದಿಲ್ಲ. ಆದರೆ ಪಾದಗಳ ಅಕ್ಷರ ಸಮತ್ವವೂ; ಅಕ್ಷರಗಣ ವಿನ್ಯಾಸವೂ ತಪ್ಪುತ್ತದೆ. ಉದಾಹರಣೆ –

೧. ಕುಂದ್‌ಸ್ಟೀ | ನಲ್ಪಾ | ಯುಷೇರ್ಕುಳು ಶೌಚಸತ್ಯವಿಹೀನೆರೆ (ಭಾ. ೧-೧- ೨೬)

೨. ಬತ್ತ್‌ಚೂ | ಸ್ಟೈರಾ | ವತೋಸುರರಾಜ ವಂದಿತ್‌ನೆಂದಪಾ (ಮ. ೫- ೭೫)

೩. ತಪಸಿ ಯಾಗೋಮಿ ನಾದಿಟ್‌| ನಾರಾ | ಯಣಾತನುವಾಸ್ಟ್‌ತ್  (ಭಾ -೧-೨ -೨೧)

೩. ವನಮಯೂರ

ಕಾವೇರಿ, ಭಾಗವತೊ ಮತ್ತು ರಾಮಾಯಣೊಗಳಲ್ಲಿ ಕಾಣಸಿಗುವ ಪಂಚಮಾತ್ರಾಲಯುವುಳ್ಳ ವೃತ್ತ ವನಮಯೂರ. ಇದು ಮಹಾ ಭಾರತೊದಲ್ಲಿ ಬಳಕೆಯಾಗಿಲ್ಲ.

ಇದು ಸತಾಲವೃತ್ತವಾಗಿದ್ದು ಐದು ಮಾತ್ರೆಗಳ ಅತಿದಂಡಕೀಗತಿಯನ್ನು ಹೊಂದಿದೆ.[1] ದ್ರಾವಿಡ ಸಹಜಾದ ಪಂಚಮಾತ್ರಾಲಯ ಇದಕ್ಕೆ ಚೌಪದಿಯ ಸ್ವರೂಪವನ್ನು ಕೊಟ್ಟಿದೆ.[2] ಉದಾಹರಣೆಗೆ –

ಕೇಂಡೆರ್‌ ನನಾರ ದೆರ್‌ವಂ ದಿತಡೆ ಕೊಂಟೇ
ಕುಂಡಿಕವಹಾಂಬಸಿ ಮನೋಹರ ಶುಭಜ್ಞೇ
ಪಂಡರೊಡು ನೀರೆ ನಿಜೊ ಗೆಂಗೆನ ಜಪಾಯಿ
ದೆಂಡಿಪೆರ್‌ಸ್ಟಯ್ಯೊ ಭವನಾಶನಿ ನಮಸ್ತೇ (ಕಾ. ೭. ೫೯)

ವನಮಯೂರದ ವೃತ್ತ ಭೇದಗಳು

ವನಮಯೂರದ ಮೊದಲ ಪಾದದ ಮೊದಲಗಣದ ಎರಡು ಲಘುಗಳಿಗೆ ಪರವಾಗಿ ಒಂದು ಗುರುವನ್ನಿಟ್ಟು ಮಾಡಿದ ವೃತ್ತಭೇದಕ್ಕೆ ಉದಾಹರಣೆಗಳಿವೆ.

೧. ಕಾವೇರಿ ನಾಕನಕ ಸಂಗಮಸ್ಥಲೊಂಟ್‌
ಶ್ರಾವಿತೊರಿ ಮುಂಹುವಿನಿ ಸರ್ವದುರಿತೊಂಕ್ಳು (ಕಾ. ೭.೪೯)

೨. ಅಧ್ಯಾಯೊಮೀಡೆಕ್‌ ತ್ರಯೋದಶೋನ ಪಾರ್ಥೆ (ಭಾ. ೧೧೩, ೩೯)

ಈ ರೀತಿಯ ಛಂದೋ ವ್ಯತ್ಯಯಗಳು ಬೇರೆ ಬೇರೆ ಪದ್ಯಗಳ ಬೇರೆ ಬೇರೆ ಪಾದಗಳ ವ್ಯತ್ಯಸ್ಥ ಸ್ಥಾನಗಳಲ್ಲಿ ಕಾಣಸಿಗುತ್ತವೆ. ಪಾದಾರಂಭದ ಗುರುವಿಗೆ ಬದಲು ಎರಡು ಲಘುಗಳನ್ನಿಟ್ಟು ಮಾಡಿದ ವೃತ್ತ ಭೇದಗಳು ಕಾವೇರಿ, ಭಾಗವತೊ ಹಾಗೂ ರಾಮಾಯಣೊಗಳಲ್ಲಿ ಕಾಣಸಿಗುತ್ತವೆ, ಉದಾಹರಣೆಗೆ-

ಸುರ ನರ ಮಹೋರಗ ಮುನಿಂದ್ರ ಜನ ವಂದ್ಯ
ಪರ ಮ ಪುರುಷೋತ್ತಮ ಅನಾಥಜನ ಬಂಧು
ಶರಣ ಜನ ವತ್ಸಲೆ
ರಮೇಶೆ ಪರಿಪೂರ್ಣೆ
ಸ್ಥಿರೊ ಸುಖೊವಸೀತೆರೊ ಕಿರೀಟಿ ದೃಢೊ ಪಣ್ಣ್‌ (ಭಾ. ೧.೩.೨೭)

ಆರಂಭದ ಎರಡು ಅಥವಾ ಕೊನೆಯ ಎರಡು ಪಾದಗಳಲ್ಲಿ ಮಾತ್ರ ಬದಲಾವಣೆಯನ್ನು ಮಾಡಿ ಉಳಿದೆರಡು ಪಾದಗಳನ್ನು ಹಾಗೆಯೇ ಉಳಿಸಿಕೊಂಡು ವೃತ್ತವನ್ನು ಅರ್ಧ ಸಮಗೊಳಿಸಿದ್ದಕ್ಕೂ ಉದಾಹರಣೆಗಳಿವೆ.

ಶಿವ ಶಿವ ಮಹೇಶ ಜಗದೇಕಸುರ ವಂದ್ಯ
ಭವ ಭಯವಿನಾಶ ಕರುಣಾರ್ಣವ ಗುಣಾಢ್ಯ
ಭೂಮಿಪತಿ ದುಖ್ಖಿತುದಿ ಸ್ಟ್‌ತ್ತಿದಿವಸೊಂಟ್‌
ಯೇವಿಯವರೊಂಟಾಕಿ ಪರಿಶಿತ್ತಿನರೆವರ್ತೆ (ಭಾ. ೧. ೧೩.೧೯)

ಸಾಮಾನ್ಯವಾಗಿ ದ್ರಾವಿಡ ಭಾಷೆಗಳ ಪಂಚಮಾತ್ರಾಲಯಕ್ಕೆ ಗಣದ ಆರಂಭದಲ್ಲಿ ಒಂದು ಲಘು ಬಂದು ಅದರ ಮುಂದೆ ಒಂದು ಗುರು ಬರುವ ಜಗಣ ವಿನ್ಯಾಸ ಒಪ್ಪುವುದಿಲ್ಲ. ಅಕ್ಷರ ವೃತ್ತಗಳಲ್ಲಿ ಜಗಣ ಸಾಮಾನ್ಯವಾಗಿದ್ದರೂ, ಅಕ್ಷರ ವೃತ್ತ ಸತಾಲವಾಗಿದ್ದು ಪಂಚಮಾತ್ರಾಲಯವನ್ನು ಹೊಂದಿದ್ದರೆ ಯತಿ ಅಥವಾ ತಾಳಾಘಾತ ಜಗಣ ವಿನ್ಯಾಸವನ್ನು ತುಂಡರಿಸಿ ಹಾಕುತ್ತದೆ.[3] ಕಾವೇರಿ ಕಾವ್ಯದಲ್ಲಿ ವನ ಮಯೂರ ವೃತ್ತದ ಉತ್ತಮ ನಿದರ್ಶನವೊಂದಿದೆ.

ಜಯಜಯ ಮಹೇಶ್ವರಿ * / ಗಿರಿಸಂಹ್ಯ ಸ್ಥಿರವಾಸಿ
ಜಯಜಯ ಜಗನ್ಮಯ ನಖಾಗ್ರಗುಣ ಜಾತೆ (೭.೫೭)

ಈ ಪದ್ಯದ ಮೊದಲ ಪಾದವನ್ನು ಪಂಚಮಾತ್ರಾಲಯದಲ್ಲಿ ಓದುವಾಗ ಗುರುತು ಮಾಡಿದ ಸ್ಥಾನದಲ್ಲಿ ಒಂದು ಮಾತ್ರೆಯ ಕಾಲಾವಕಾಶವನ್ನು ಮೌನವಾಗಿ ತುಂಬುವುದು – ಅಂದರೆ ಯತಿಯನ್ನು ತರುವುದು – ಅನಿವಾರ್ಯವಾಗುತ್ತದೆ.

ಜಯಜಯಮ / ಹೇಶ್ವರಿ / ಗಿರಿಸಂಹ್ಯಸ್ಥಿ / ರವಾಸಿ

ಇಲ್ಲಿ ೫ + ೫ + ೫ + ೪ರ ಲಯ ಸರಿಯಾಗಿಯೇ ಇದೆ. ಆದರೆ ಮೂರನೆಯ ಮತ್ತು ನಾಲ್ಕನೆಯ ಗಣಗಳ ವಿನ್ಯಾಸವನ್ನು ತಪ್ಪಿಸುವ ಸಲುವಾಗಿ ಎರಡನೇ ಗಣವನ್ನು ನಾಲ್ಕು ಮಾತ್ರೆಗಳ ಕ್ರಿಯಾಖಂಡ ಮತ್ತು ಒಂದು ಮಾತ್ರೆಯ ಮೌನದಿಂದ ನಿರ್ವಹಿಸಲಾಗುತ್ತದೆ. ನಾಲ್ಕನೇ ಗಣ ಪಂಚಮಾತ್ರಗಣವಾಗಿ ಯತಿಯನ್ನು ಮೀರುತ್ತದೆ.

ತೋಟಕ

ಸಾಮಾನ್ಯವಾಗಿ ಸ್ತುತಿಗೆ ಬಳಕೆಯಾಗುವ ಈ ವೃತ್ತ ಭಾಗವತೊ ಮತ್ತು ಮಹಾಭಾರತೊಗಳಲ್ಲಿ ಮಾತ್ರ ಬಳಕೆಯಾಗಿದೆ. ಸಂಸ್ಕೃತ ಸ್ತೋತ್ರ, ಸುಪ್ರಭಾತಗಳಲ್ಲಿ ದೇವರ ಗುಣಗಾನಕ್ಕಾಗಿ ಪ್ರಸಿದ್ಧವಾದ ತೋಟಕ ವೃತ್ತದ ಸುಮಾರು ೧೯೬ ಪದ್ಯಗಳು ತುಳು ಕಾವ್ಯದಲ್ಲಿ ಉಪಲಭ್ದವಾಗಿವೆ. ನಾಲ್ಕು ಮಾತ್ರೆಗಳ ಗತಿ ಈ ವೃತ್ತಕ್ಕೆ ಉತ್ಸಾಹವನ್ನು ತುಂಬುತ್ತದೆ. ಪ್ರತಿ ಗಣದಲ್ಲಿ ಎರಡು ಲಘುಗಳ ಮೇಲೆ ಒಂದು ಗುರು ಬರುವುದರಿಂದ ಮತ್ತು ಪಾದಗಳಲ್ಲಿ ಒಟ್ಟು ಎಂಟು ಲಘುಗಳೂ ನಾಲ್ಕು ಗುರುಗಳೂ ಇರುವುದರಿಂದ ಗತಿ ತ್ವರಿತವಾಗಿದೆ.

ಗಿರಿಗಂ / ಹರಸ್ಥಾ / ವರಮ / ಲ್ಲಶಿಲೇ
ವರಗು / ಲ್ಮ ಲತಾ / ವಳಿಕೀ / ಚಕೊಮಾ
ವರಭೃಂ / ಗವಿಹಂ / ಗೆರವಾ / ನರೆರಾ
ಫೆರಿಯಾ / ಯಿಮೃಂಗೊಂ / ಕುಳೆದ / ರ್ಶಿತೆರ್‌ (ಭಾ. ೧.೫.೧೮)

ತೋಟಕದ ವೃತ್ತ ಭೇದಗಳು

ತೋಟಕ ವೃತ್ತದ ಆರಂಭದ ಲಘವಿಗೆ ಗುರುವನ್ನಿಟ್ಟು ರಚಿಸಿದ ಪದ್ಯಗಳೆ ಭಾಗವತೊ ಮತ್ತು ಮಹಾಭಾರತೋಗಳಲ್ಲಿ ಅಧಿಕ ಸಂಖ್ಯೆಯಲ್ಲಿ ದೊರೆಯುತ್ತವೆ. ಇದು ತುಳು ಕವಿಗಳು ಮಾಡಿಕೊಂಡ ಮೂಖ್ಯವಾದ ಒಂದು ವೃತ್ತಭೇದ.[4] ಉದಾಹರಣೆಗೆ-

ಧೂಮಕೇ / ತುವಿನಂ / ದೊಮೆನಾ / ಲಕೆನಿನ್‌
ಆಮದೀ / ಯೇಪಿದಾ / ಡೊಸ್ಟ್‌ನೆಂ / ದ್‌ಪಪಾ
ಭೀಮೆಮ / ಸ್ತಕಮಂ / ಡಿಕೆತಾ / ಡವಪಾ
ತಾಮನೀ / ಪನತೆ / ತಿರಡಾ / ಸ್ಟ್‌ಣ್‌ನಾ (ಮ. ೮.೨೪)

ಈ ವೃತ್ತ ಸತಾಲವಾಗಿರುವುದರಿಂದ ಆರಂಭದ ಗಣದ ಮೊದಲ ಗುರು ಆ ಗಣವನ್ನು ಪಂಚಮಾತ್ರಾಗಣವಾಗಿ ಪರಿವರ್ತಿಸತ್ತದೆ. ಇದರಿಂದಾಗಿ ನಾಲ್ಕು ಮಾತ್ರೆಗಳ ಏಕತಾನತೆ ತಪ್ಪುವುದಷ್ಟೇ ಅಲ್ಲದೆ ವೃತ್ತದ ಲಯಕ್ಕೆ ವಿಶಿಷ್ಟವಾದೊಂದು ಆಂದೋಳಿತ ನಡೆ ಉಂಟಾಗುತ್ತದೆ. ತಾಳಾಘಾತವನ್ನು ಗಣದ ಮೊದಲಕ್ಷರವೂ ಕೊನೆಯಕ್ಷರವೂ ಸಮಾನವಾಗಿ ತಡೆಯಬಲ್ಲವಾದ್ದರಿಂದ ಎರಡು ವಿಧದಲ್ಲಿ ಲಯಬದ್ಧವಾಗಿ ಓದುವ ಅವಕಾಶ ಇದೆ. ಮೊದಲ ಗಣದಲ್ಲಿ ಐದು ಮಾತ್ರೆಗಳಿದ್ದರೂ ಮೊದಲ ಗುರುವನ್ನು ಲಘು ಉಚ್ಚಾರಕ್ಕೊಳಪಡಿಸಿ ಗಣದ ಉಚ್ಛಾರವಧಿಯನ್ನು ನಾಲ್ಕು ಮಾತ್ರೆಗಳಿಗೆ ಕುಗ್ಗಿಸಲಾಗುತ್ತದೆ.

ತೋಟಕದ ಪಾದಕ್ಕೆ ಆರಂಭದಲ್ಲಿ ಒಂದು ಲಘುವನ್ನು ಹೆಚ್ಚುವರಿಯಾಗಿ ಸೇರಿಸಿ ಮಾಡಿದ ವೃತ್ತಭೇದವಿದೆ. ಇದು ಮೊದಲನೆಯ ವೃತ್ತಭೇದದ ಮೇಲೆ ಮಾಡಿದ ಪ್ರಯೋಗದಂತೆ ಭಾಸವಾಗುತ್ತದೆ. ಮೊದಲ ವೃತ್ತಭೇದದಲ್ಲಿ ಪಾದಾರಂಭದ ಲಘುವಿಗೆ ಗುರುವನ್ನಿಟ್ಟರೆ, ಇಲ್ಲಿ ಆ ಗುರುವಿಗೆ ಬದಲಾಗಿ ಎರಡು ಲಘುಗಳನ್ನಿಡಲಾಗಿದೆ. ಉದಾಹರಣೆಗ-

ಪತಿ ಪದಾಂ / ಬುಜದ / ಕ್ತಿದನೆ / ತ್ತಿಮಹಾ
ಸತಿಪತಿ / ವೃತೆಕೊಂಡೊನಿಹ / ತ್ರಪರಂ
ಕ್ಷಿತತಮೂ / ಢೆರೆಕ / ಚ್ಯುತಭ / ಕ್ತಿದನೇ
ಗುಸುಮ / ಸ್ತೊಪಠೀ / ತ್‌ಲಚೋ / ಜನ್ನನಾ (ಭಾ. ೧.೪.೧೯)

ಈ ಎರಡು ವೃತ್ತಭೇದಗಳು ಗತಿಯೂ ಮೂಲ ತೋಟಕ್ಕಿಂತ ಹೆಚ್ಚು ತೀವ್ರವಾಗಿದೆ. ಮೊದಲ ಗಣವನ್ನು ವೇಗವಾಗಿ ಉಚ್ಚರಿಸಿ ನಾಲ್ಕು ಮಾತ್ರೆಗಳ ವ್ಯಾಪ್ತಿಗೆ ಒಗ್ಗಿಸಬೇಕಾದ ಅನಿವಾರ್ಯತೆಯೇ ಇದಕ್ಕೆ ಕಾರಣ.

ಈ ವೃತ್ತಭೇದವನ್ನು ವೆಂಕಟರಾಜ ಪುಣಿಂಚತ್ತಾಯರು ಸಂಸ್ಕೃತದ ಧ್ರುತವಿಲಂಬಿತ ವೃತ್ತದ ಕೊನೆಯ ಗುರುವಿನ ಮೊದಲು ಒಂದು ಲಘು ಸೇರಿಸಿ ಮಾಡಿದ ಹೊಸ ವೃತ್ತ ಎಂದು ವಿವರಿಸಿದ್ದಾರೆ.[5] ಆದರೆ ಇದನ್ನು ಧ್ರತವಿಲಂಬಿತದ ವೃತ್ತ ಭೇದವೆನ್ನುವುದಕ್ಕೆ ಆಧಾರವಿಲ್ಲ. ಕಾರಣ ಧ್ರುತ ವಿಲಂಬಿತ ವೃತ್ತ ತುಳು ಕಾವ್ಯಗಳಲ್ಲೆಲ್ಲಿಯೂ ಬಳಕೆಯಾಗಿಲ್ಲ. ಪಾದಾರಂಭದ ಗುರು ಲಘುಗಳನ್ನು ಬದಲಾಯಿಸಿ ವೃತ್ತಭೇದಗಳನ್ನು ಸೃಷ್ಟಿಸುವುದು ತುಳುವಿನಲ್ಲಿ ಸಾಮಾನ್ಯ. ಆದ್ದರಿಂದ ಇದು ತೋಟಕದ ವೃತ್ತಭೇದವೇ ಹೊರತು ಧ್ರುತವಿಲಂಬಿತದಲ್ಲ ಎಂದು ತೀರ್ಮಾನಿಸಬಹುದು.

೫. ಕುಸುಮ

ಕುಸುಮ ವೃತ್ತವು ಸತಾಳವಾಗಿದ್ದು ಸಗಣತಿಯುಳ್ಳದ್ದು. ತೋಟಕದ ಮೊದಲ ಎರಡು ಲಘುಗಳಿಗೆ ಬದಲು ಒಂದು ಗುರುವನ್ನಿಟ್ಟರೆ ಕುಸುಮ ವೃತ್ತ ಸಿದ್ಧವಾಗುತ್ತದೆ. ಭಾಗವತೊದಲ್ಲಿ ತೋಟಕ ವೃತ್ತಗಳ ಮಧ್ಯೆ ಕುಸುಮವೃತ್ತಗಳು ಬಳಕೆಯಾಗಿದ್ದು ಇದನ್ನು ಸಂಪಾದಕರು ಗಮನಿಸಿಲ್ಲ. ಮಾತ್ರವಲ್ಲ, ಹಲವು ತೋಟಕ ವೃತ್ತ ಪದ್ಯಗಳಲ್ಲಿ ಕುಸುಮವೃತ್ತದ ಪಾದಗಳಿರುವುದು ಕಂಡುಬಂದಿದೆ. ಉದಾಹರಣೆಗೆ-

ಅಂಗೀ / ರಸ ನಾ / ರಿ ಕುಳೇ / ಸ್ಥಿತಿನೀ
ಮಂಗಳಾ / ತ್ಮ ಕೆಪಿಂ / ದನುಮಾ / ನಿತೆರ್‌
ನಂಗಪೂ / ಜತಿಗೋ / ಪಕುಮಾ / ರಕೆರೆ
ಅಂಗನೇ / ಕುಳೆಕಾ / ರ್ಯೊಮಿಸಾ / ಧಿತೆರ್‌ (ಭಾ. ೩.೨.೬೦)

ಇಲ್ಲಿ ಮೊದಲ ಪಾದ ಕುಸುಮ ವೃತ್ತದ್ದು. ಅನಂತರದ ಪಾದಗಳು ತೋಟಕದ ವೃತ್ತಭೇದಗಳು. ಭಾಗವತೊದಲ್ಲಿ ಕುಸುಮವೃತ್ತವೂ ತೋಟಕದ ಒಂದು ವೃತ್ತಭೇದವಾಗಿಯೇ ಬಳಕೆಯಾದಂತೆ ಭಾಸವಾಗುತ್ತದೆ. ತೋಟಕಗಳ ನಡುವೆ ಬಳಕೆಯಾದ ಬೆರಳೆಣಿಕೆಯ ಕುಸುಮ ವೃತ್ತಗಳನ್ನು ಕವಿ ಉದ್ದೇಶಪೂರ್ವಕ ಬಳಸಿದ್ದು ನಿಜವೇ? ಎನ್ನುವುದೂ ವಿಚಾರಾರ್ಹ.

೬. ತ್ರಿಮೂರ್ತಿಗಣಘಟಿತ ಷಟ್ಪದಿ

ಒಂದು, ಎರಡು, ನಾಲ್ಕು, ಐದನೇ ಪಾದಗಳಲ್ಲಿ ಎರಡೆರಡು ವಿಷ್ಣುಗಣಗಳೂ, ಮೂರು ಮತ್ತು ಆರನೇ ಪಾದಗಳಲ್ಲಿ ಎರಡರೆಡು ವಿಷ್ಣುಗಣಗಳ ಮೇಲೆ ಒಂದು ರುದ್ರಗಣವೂ ಇರುವುದು ತ್ರಿಮೂರ್ತಿಗಣ ಘಟಿತ ಷಟ್ಪದಿಯ ಲಕ್ಷಣ. ಸತಾಲ ವೃತ್ತಗಳಲ್ಲಿ ಪದ್ಯಪಾದಗಳ ಮುಕ್ತಾಯಕ್ಕೆ ಒಂದು ಅಪೂರ್ವಗಣ ಬರಬೇಕು. ಇಲ್ಲದೆ ಹೋದರೆ ಕ್ರಿಯಾಖಂಡಕ್ಕೆ ಬಿಡುವು ಕೊಟ್ಟು ತಾಳದ ಆವರ್ತನೆಗೆ ಭಂಗಬಾರದೆ ನಿಲುಗಡೆ ನೀಡುವುದು ಸಾಧ್ಯವಿಲ್ಲ. ತ್ರಿಮೂರ್ತಿಗಣಗಳನ್ನು ಪತ್ತೆ ಹೆಚ್ಚುವುದೇ ತಾಳದ. ಆಧಾರದಿಂದ. ತ್ರಿಮೂರ್ತಿ ಗಣಗಟಿತ ಷಟ್ಪದಿಯಲ್ಲಿ ಕೊನೆಗೆ ವಿಷ್ಣು ಗಣಕ್ಕಿಂತ ದೊಡ್ಡದಾದ ರುದ್ರ ಗಣ ಬರುತ್ತದೆ. ರುದ್ರ ಗಣಗವನ್ನು ವಿಷ್ಣುಗಣ + ಒಂದು ಅಕ್ಷರ ಎಂದು ಒಡೆಯಲು ಸಾಧ್ಯವಿದೆ. ಕೊನೆಯಲ್ಲಿ ಉಳಿಯುವ ಒಂದು ಅಕ್ಷರಕ್ಕೆ ಮೌನ ಸೇರಿ ಕಾಲಖಂಡ ಪೂರ್ತಿಯಾಗುತ್ತದೆ. ಈ ಛಂದಸ್ಸಿನ ತಾಳ ಪ್ರತಿ ಆರು ಮಾತ್ರೆಗಳಿಗೆ ಆವರ್ತನೆಯಾಗುವುದು ಗಮನಾರ್ಹ.

ವಾರೀಜಾ / ಸನಭಾರ್ಯೇ
ನಾರೆಸ್ಟ್‌ / ಹೃದಯಂಟ್‌
ಮರಾರೀ / ತನಯಾಕಂ / ಚೆರಗ್‌ಸ್ಟೊ / ಡ್‌
ಘೋರೋಮಾ / ಯಿನಸೈನ್ಯ
ವಾರೂಧೀ / ಟಸುರಾರೀ
ದ್ವಾರsಕೀ / ಪೊಗಿಸ್ಟತ್ತೀ / ಕಥೆರೆಚಿ / ಪ್ಪೆ

ನಾಗವರ್ಮ, ಜಯಕೀರ್ತಿ ಮುಂತಾದವರು ಕನ್ನಡದಲ್ಲಿ ಈ ಛಂದಸ್ಸನ್ನು ನೀರೂಪಿಸಿದ್ದಾರೆ. ಕನ್ನಡದಲ್ಲಿ ಈವರೆಗೆ ಕೇವಲ ೧೨ ತ್ರಿಮೂರ್ತಿ ಗಣಬದ್ಧ ಷಟ್ಪದಿಗಳು ಮಾತ್ರ ದೊರೆತಿವೆ. ತಮಿಳು, ಮಲಯಾಳಂಗಳಲ್ಲಿ ಈ ಛಂದಸ್ಸಿಲ್ಲ. ತೆಲುಗಿನಲ್ಲಿ ಲಕ್ಷಣ ನಿರೂಪಣೆಯಿದ್ದರೂ ಸಾಹಿತ್ಯದಲ್ಲಿ ಇದು ಬಳಸಲ್ಪಟ್ಟಿದೆ. ಭಾಗವತೊದಲ್ಲಿ ೧೬ ಮತ್ತು ಮಹಾಭಾರತೊದಲ್ಲಿ ೮೯೩ ತ್ರಿಮೂರ್ತಿಗಣಬದ್ಧ ಷಟ್ಪದಿಗಳಿವೆ. ಮಹಾಭಾರತೊದಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ಬಳಕೆಯಾದದ್ದು ಇದೇ ಛಂದಸ್ಸು.

ಪ್ರಾಚೀನ ತುಳು ಶಿಷ್ಟ ಕಾವ್ಯಗಳ ಛಂದಸ್ಸನ್ನು ಅಕ್ಷರ ಗಣ ಘಟನೆಯ ಆಧಾರದಲ್ಲಿ ಗುರುತಿಸುವುದು ತೀರಾ ತೊಡಕಿನ ಸಂಗತಿ. ಕಾರಣ ಅವುಗಳಲ್ಲಿ ಬಹುಪಾಲೂ ಏಕರೂಪತೆ ಇಲ್ಲದ ಪದ್ಯ ಬಂಧಗಳೇ ಕಾಣಸಿಗುತ್ತವೆ. ಆದರೆ ಅವೆಲ್ಲ ಸತಾಲ ಓದಿಗೆ ಒಗ್ಗುತ್ತವೆ ಮತ್ತು ಮಾತ್ರಾಗಣಗಳ ಆಧಾರದಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ರೂಪುಗೊಂಡಿವೆ. ಪ್ರಾಚೀನ ತುಳು ಕವಿಗಳ ಕಾವ್ಯ ರಚನೆಗೆ ವಾಚನ ಸಂಪ್ರದಾಯ ಮುಖ್ಯ ಪ್ರೇರಣೆಯಾಗಿತ್ತು ಎನ್ನುವುದಕ್ಕೂ ಸಾಕಷ್ಟು ಆಧಾರಗಳಿವೆ. ಕುಮಾರವ್ಯಾಸ ಹಾಗೂ ಚಾಟುವಿಠಲನಾಥ ಅವರ ಪ್ರೀತಿಯ ಕವಿಗಳಾಗಿದ್ದುದು ಹಾಗೂ ಅವರು ತಮ್ಮ ಕಾವ್ಯಗಳನ್ನು ‘ಪಾಡ್‌’ (ಹಾಡು) ಎಂದು ಕರೆದಿರುವುದು ಇದಕ್ಕೆ ಸಾಕ್ಷಿ. ಮಹಾಭಾರತೊದಲ್ಲಿ ‘ಈ ಪದೊಂಕುಳೆ ಪಂಡ ಕೇಂಡ ಪಠೀತಮಾನಿತಿ ಜಂತುವಿನ್‌’ ಎಂಬ ಮಾತು ಬರುತ್ತದೆ. ಇಲ್ಲಿ ‘ಪಂಡ – ಹೇಳಿದ, ಕೇಂಡ – ಕೇಳಿದ, ಪಠಿತ – ಪಠಿಸಿದ’ ಎನ್ನುವುದು ವಾಚನ ಶ್ರವಣದ ಉದ್ದೇಶವನ್ನೇ ಸೂಚಿಸುತ್ತದೆ. ಆದ್ದರಿಂದ ಸತಾಲತ್ವವೇ ಪ್ರಾಚೀನ ತುಳು ಛಂದಸ್ಸಿನ ಜೀವಾಳ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಮಾತ್ರಾಗಣಗಳ ಆಧಾರದಲ್ಲಿ ತುಳು ಕಾವ್ಯಗಳ ಛಂದಸ್ಸನ್ನು ಗುರುತಿಸುವುದು ಸರಳವೂ, ನಿಖರವೂ, ಔಚಿತ್ಯಪೂರ್ಣವೂ ಆಗುತ್ತದೆ.

ಮಾತ್ರಾಗಣಗಳ ನೆಲೆಯಲ್ಲಿ ಪ್ರಾಚೀನ ತುಳು ಛಂದಸ್ಸು

೧. ನಾಲ್ಕು ಮಾತ್ರೆಯ ಗಣಗಳುಳ್ಳ ಛಂದಸ್ಸು

ಇದು ಚತುರ್ಮಾತ್ರಾಲಯವನ್ನು ತ್ವರಿತ ಗತಿಯನ್ನೂ ಹೊಂದಿದೆ, ಗಣದ ಆರಂಭದಲ್ಲಿ ಗುರುವಿದ್ದಾಗ ಉತ್ಸಾಹವನ್ನು ಅಂತ್ಯದಲ್ಲಿ ಗುರುವಿದ್ದಾಗ ಲಾಲಿತ್ಯವನ್ನೂ ಪ್ರಕಟಿಸುತ್ತದೆ. ಮೊದಲನೆಯ ಭಗಣಗತಿ ಎರಡನೆಯದು ಸಗಣತಿ, ಭಗಣತಿಯ ಛಂದಸ್ಸು ಚಿತ್ರಪದ ವೃತ್ತವನ್ನು ಹೋಲುತ್ತದೆ, ಅಥವಾ ಚಿತ್ರಪದವೇ ಆಗಿರುತ್ತದೆ ಉದಾಹರಣೆಗೆ-

ಕರ್ದಮೆ / ರೆನ್ಕಪ್ರ / ಜಾಪತಿ / ಕ್‌
ಪೊರ್ದ್‌ಸ್ಟ್‌ / ದೇವ ಹೂ / ತೈನ್ಕಿಸ / ತೀ
ಉದ್ಧರಿ / ತ್‌ತ್ತಿನ / ಪುಣ್ಯಕ / ಥೇ
ನಿರ್ದರಿ / ತಾದಿಟ್‌ / ಪಣ್ಕೆರ / ತ್‌ (ಬಾ. ೩.೧೬.೭)

ಇಲ್ಲಿ, ಎರಡನೇ ಪಾದದ ಎರಡನೇ ಗಣದ ಕೊನೆಯಕ್ಷರವನ್ನು ಕುಗ್ಗಿಸಿ ಉಚ್ಚರಿಸಲಾಗುತ್ತದೆ. ಪಾದಾಂತದಲ್ಲಿ ಮುಡಿಯಾಗಿ ನಿಲ್ಲುವ ಎರಡು ಅಕ್ಷರಗಳು – ಕ್‌ಮತ್ತು ತ್‌ಕರ್ಷಿಸಲ್ಪಡುತ್ತವೆ. ಉಳಿದಂತೆ ಚಿತ್ರಪದದ ಲಕ್ಷಣಕ್ಕೆ ಹೊಂದಿಕೊಳ್ಳುತ್ತದೆ.

ತರತರ / ಸೌರಭೋ / ಟೇರಿ ಮು / ಡೀ
ಕುರುಳ್‌ವಿ / ರಾಜಿತಿ / ಮುದ್ದು ಮು / ಖಂ
ಕರುಣರೆ / ಸಾಂಬರ / ಚೂಕೆಕು / ಳಾ
ಕುರೆಲಕ / ವುಸ್ತುಭೊ / ಮಾಶ್ಚರಿ / ಯೊ (ಭಾ. ೩.೧೬.೧೫)

ಇದೂ ಚಿತ್ರಪದದ ಲಕ್ಷಣಗಳಿಗೆ ಹೊಂದುವುದಿಲ್ಲ. ಆರಂಭದ ಗುರುವಿಗೆ ಬದಲು ಎರಡು ಲಘುಗಳಿವೆ.

ಈ ಮಾದರಿಯ ಚತುರ್ಮಾತ್ರಾಗಣಘಟಿತ ಛಂದಸ್ಸಿನಲ್ಲಿ ಮೂರು ಚತುರ್ಮಾತ್ರಾಗಣಗಳೂ ಮೇಲೊಂದು ಗುರುವೂ ಇರುತ್ತದೆ. ಇದು ಭಗವತೊದಲ್ಲಿ ಮಾತ್ರವೇ ಕಾಣಸಿಗುತ್ತದೆ. ಬೇರೆ ಕಾವ್ಯಗಳಲ್ಲಿ ಬಳಕೆಯಾಗಿಲ್ಲ.

ಸಗಣಗತಿಯ ನಾಲ್ಕು ಮಾತ್ರೆಯ ಛಂದಸ್ಸಿನಲ್ಲಿ ನಾಲ್ಕು ಮಾತ್ರೆಯ ನಾಲ್ಕು ಮಾತ್ರೆಯ ನಾಲ್ಕು ಗಣಗಳಿರುವ ಮತ್ತು ನಾಲ್ಕು ಗಣಗಳೂ ಮೇಲೊಂದು ಗುರುವೂ ಇರುವ ಎರಡು ಭೇದಗಳಿವೆ. ಮೊದಲನೆಯದು ತೋಟಕ ವೃತ್ತವನ್ನು ಹೋಲುತ್ತದೆ ಅಥವಾ ತೋಟಕವೇ ಆಗಿರುತ್ತದೆ. ಇನ್ನೊಂದು ಯಾವ ಪ್ರಸಿದ್ಧ ವೃತ್ತವನ್ನೂ ಹೋಲುವುದಿಲ್ಲ.

ಧೂಮಕೇ / ತುವಿನಂ / ದೊಮೆನಾ / ಲಕೆನಿನ್‌
ಆಮದೀ / ಯೆಪಿದಾ / ದೊಸ್ಟ್‌ನಾ / ಲಕೆನಿನ್‌
ಭೀಮೆಮ / ಸ್ತಕಮಂ / ದಿಕೆತಾ / ಡವಪಾ
ತಾಮಸೀ / ಪನನೆ / ತ್ತಿರಡಾ / ಸ್ಟ್‌ಣ್‌ನಾ (ಮ. ಭಾ. ೮.೨೪)

ಪಾದಾರಂಭದ ಗುರುವನ್ನು ಹ್ರಸ್ವೋಚ್ಚಾರಕ್ಕೊಳ ಪಡಿಸಿದರೆ ಇದು ತೋಟಕದ ಲಕ್ಷಣಗಳನ್ನು ಹೋಲುತ್ತದೆ. ಅಥವಾ ಪಾದಾರಂಭದ ದೀರ್ಘವನ್ನು ಮೂರು ಮಾತ್ರೆಗಳ ಕಾಲಕ್ಕೆ ಕರ್ಷಿಸಿಯೂ ಓದಬಹುದು – ಹೀಗೆ ಓದುವಾಗ ಭಗಣಗತಿಗೆ ಬದಲು ಸಗಣಗತಿ ಒದಗುತ್ತದೆ.

ದೂಮ / ಕೇತುವಿ / ನಂದೊಮೆ / ನಾಲಕೆ / ನಿನ್‌
ಆಮ / ದೀಯೆಪಿ / ದಾಡೊಸ್ಟ್‌ / ನೆಂದ್‌ಪ / ಪಾ
ಭೀಮೆ / ಮಸ್ತಕ / ಮಂಡಿಕೆ / ತಾಡವ / ಪಾ
ತಾಮ / ಸೀಪನ / ನೆತ್ತಿರ / ಡಾಸ್ಟ್‌ಣ್‌ / ನಾ

ಹೀಗೆ ಓದುವಾಗ ಕೊನೆಯಲ್ಲಿ ಒಂದಕ್ಷರ ಮುಡಿಯಾಗಿ ನಿಲ್ಲುತ್ತದೆ. ಶುದ್ಧ ತೋಟಕ ಲಕ್ಷಣವುಳ್ಳ ನಾಲ್ಕು ಮಾತ್ರೆಗಳ ಗಣಘಟಕವಿರುವ ಪದ್ಯಗಳು ಸಣ್ಣ ಪ್ರಮಾಣದಲ್ಲಿ ಬಳಕೆಯಾಗಿವೆ-

ಕರೆಟಾ / ಪಪಪಾಂ / ಡವರೈ / ವೆರ್‌ಲಾ
ತರಸಾ / ಕುಳುತ / ನ್ನ ಸಮೇ / ತೊಜಲ್‌
ತೆರಿತಾ / ಕುಳುಯಾ / ತ್ರೆಕುಪ / ಕ್ರಮಿಪಾ
ಬೆರಿಪ / ತ್ತ್‌ಸ್ಟ್‌ವಂ / ದಿತೆನಾ / ವಿಕೆಲಾ (ಮ. ಭಾ. ೮.೨೧)

ನಾಲ್ಕು ಮಾತ್ರೆಯ ಆರು ಗಣಗಳೂ ಮೇಲೊಂದು ಗುರುವೂ ಇರುವ ವಿಶಿಷ್ಟ ಛಂದೋಬಂಧವೊಂದು ತುಳುವಿನಲ್ಲಿ ಬಳಕೆಯಾಗಿದೆ. ಇದೂ ಸಗಣಗತಿ ಹೊಂದಿದ್ದು ತುಳುವಿನಲ್ಲಿ ಬಳಕೆಯಾದ ಛಂದೋಬಂಧಗಳ ಪೈಕಿ ಅತ್ಯಂತ ದೀರ್ಘವಾದುದು

ಎನಪೂ / ರ್ವಜೆರಾ / ಕಪಿಲಾಂ / ಕಮುನೀ / ರೋಷಾ / ಗ್ನಿಟ್‌ಬೈ / ತೇ
ಇನನಂ / ದನಲೋ / ಕೊಮಿಪ್ರಾ / ಪಿತೆರ್‌ / ನಾದೋ / ಪೊಹರೀ / ತ್‌
ವನಜಾ / ನನೆಯಿ / ರ್‌ಳತಾ / ಸ್ಥಲೊಂಟೆಂ / ದುರೆಯಾ / ತ್ರಿತ್‌ಭ / ಸ್ಮೊ
ನನೆತಾ / ಕುಳೆಮು / ಕ್ತಿಲೆಭೀ / ಪೊಳಿನಾಂ / ದಾರೇ / ಯೆರ್‌ನುಂ / ಬೂ (ರಾ. ೭-೯)

ಇದರಲ್ಲಿ ಎಲ್ಲ ಸಗಣಗಳೇ ಇದ್ದರೂ ೧, ೨ ಮತ್ತು ೪ನೇ ಪಾದದ ಐದನೇ ಗಣಗಳು ಎರಡು ಗುರುಗಳಿಂದ ಕೂಡಿವೆ, ಪಾದಾರಂಭದಲ್ಲಿ ಸಗಣ ಬಾರದೆ ಇರುವುದಕ್ಕೂ ಉದಾಹರಣೆಗಳು ಸಾಕಷ್ಟಿವೆ.

ವೇದೋಂ / ಕುಳುವ / ರ್ಣಿಪೆರಾ / ವನತೇ / ತರೆವಾ / ಗ್‌‍ಸ್ಟ್‌ನಿ / ಲ್ತೊ
ವೇದೊಂ / ಕುಳೆಟು / ಳ್ಳಮಹಾ / ಶ್ರುತಿಕುಳು / ಪಿನನೆ / ತ್ತ್ನಭೇ / ಪ್ಪೊ
ವೇದಜ್ಞೆರ್‌ / ಸ್ತ್ರೋಮಿಸಾ / ಕ್ಷಿತ್‌ಲಾ / ಮನಿಪು / ಪ್ಪಿರಿಲೋ / ಕೊಂ
ಟಾದ್ಯಂ / ತೊಮುದಂ / ತಿಹರಿ / ಸ್ತುತಿನೀ / ನಾಂವ / ರ್ಣಿಕ್‌ಣೆಂ / ಚಾ (ಭಾ ೧-೧-೧೮)

೪. ೧.೪.೨,೩ +೪ ಮಾತ್ರೆಗಳ ಗಣಗಳುಳ್ಳ ಛಂದಸ್ಸು

ಈ ಛಂದಸ್ಸು ಹಲವೆಡೆ ಮಲ್ಲಿಕಾಮಾಲಾ ವೃತ್ತದ ಲಕ್ಷಣಗಳನ್ನೂ, ಕೆಲವೆಡೆ ತರಳ ವೃತ್ತದ ಲಕ್ಷಣಗಳನ್ನೂ ಅನೇಕ ಕಡೆ ಯಾವುದೇ ಅಕ್ಷರವೃತ್ತ ಲಕ್ಷಣಗಳಿಗೂ ಹೊಂದಿಕೊಳ್ಳುವುದಿಲ್ಲ ಅಥವಾ ವಿಪುಲ ಛಂದೋಭಂಗಗಳಿಂದ ಕೂಡಿದೆ. ತಾಳದ ದೃಷ್ಟಿಯಲ್ಲಿ ಅಖಂಡ ಏಳು ಮಾತ್ರೆಯ ಮೂರು ಗಣಗಳೂ, ಮೇಲೆ ಐದು ಮಾತ್ರೆಯ ಪದ್ಮಗಣವೂ ಕಂಡುಬರುತ್ತದೆ. ಉದಾಹರಣೆ-

ಗುರುವ / ಸಿಷ್ಠೆರೆ / ನಾಜ್ಞೆ / ಟಾಗೋ / ರಕ್ಷೆ / ಟ್‌ಪ್ಪಪ / ನೊಂಜಿ / ನೊ
ಮಿರ್‌ಳ್‌ / ಟಾವ / ರ್ಘೊಂಕ್‌ / ಗೊ ಷ್ಟೊಮಿ / ಕಾತ್‌ / ನಿಲ್ತಿನ / ವಸ್ಥೆಟ್‌
ಕುರೆಲ್‌ / ಪತ್ತಪ / ವ್ಯಾಘ್ರೆ / ಯಾಪಶು / ಘೋರಿ / ಪಪ್ಪುನ / ಕೇಂಡ್‌ / ಣೈ
ಪೆರ್ಯೊ / ಘೆರ್ಜಿತ್‌ / ಖಡ್ಗೊ / ಪತ್ತ್‌ಸ್ಟ್‌ / ವ್ಯಾಘ್ರ / ಕಂಧರೊ / ಖಂಡಿ / ತೆ
 (ರಾ. ೧-೨೧)

ಮೂರು ನಾಲ್ಕು ಮಾತ್ರೆಗಳ ಗಣವಿಭಜನೆ ಈ ಛಂದಸ್ಸಿನಲ್ಲಿ ತೀರಾ ಕೃತಕವೆನಿಸುತ್ತದೆ. ಏಳು ಮಾತ್ರೆಗಳ ಗಣಗಳು ಸಹಜವಾಗಿವೆ.

ಗಂಡೆಯರ್ಜುನ / ಬಿರುತ ವಿದ್ಯೆನಿ / ಚೂಸ್ಟೆರೊ ವಿಬು / ಧೇರ್ಕುಳೆ
ಪಂಡೆರ್‌ನಾರದೆ / ರಿಂದ್ರ ಟಾದಿಟ್‌‍ / ಚೂಸ್ತೆರೋ ನರ / ಪೌರುಷೋ
ಚಂಡಭುಜಲೆ / ಯರ್ಜುನೇಧರೆ / ಟ್‌ತ್ತ್‌ಸ್ವರ್ಗೊಮಿ / ಮುಟ್ಟಲಾ
ಉಂಡ್‌ / ಮಾಂತೆನ / ಆಯಕೇ / ಕೊೞೆ / ವಾಲುದ್ರವ್ಯೊಮಿ / ಮಾಂತಲಾ (ಮ. ಭಾ.-೫-೭೩)

೪.೧.೩ ಐದು ಮಾತ್ರೆಗಳ ಗಣಗಳುಳ್ಳ ಛಂದಸ್ಸು

ಇದು ಹಲವೆಡೆ ವನಮಯೂರ ವೃತ್ತದ ಲಕ್ಷಣಗಳನ್ನು ಹೋಲುತ್ತದೆ. ಐದು ಮಾತ್ರೆಯ ಮೂರುಗಣಗಳೂ ಮೇಲೆ ನಾಲ್ಕು ಮಾತ್ರೆಯ ಪದ್ಮಗಣವೂ ಇರುವುದು ಇದರ ಲಕ್ಷಣ. ಕೊನೆಯ ಪದ್ಮಗಣ ಒಂದು ಮಾತ್ರೆಯ ಕರ್ಷಣ ಅಥವಾ ಮೌನದಿಂದ ಪೂರ್ಣಗಣವಾಗುವುದೂ ಸಾಧ್ಯ. ಚೌಪದಿಯ ಲಕ್ಷಣಗಳಿಗೆ ಈ ಛಂದೋಬಂಧ ಹೊಂದಿಕೊಳ್ಳುತ್ತದೆ.

ದೇವಜಾನೊ / ಮೆಯ್ಯರೆನಿ / ಸಂಬದಿತ್‌ / ನುಂಬು
ದೇವಸಭೆ / ಸಾಧಿತೆರ್‌ / ದ್ವಾರಕಿಟ್‌ / ಕೃಷ್ಣೇ
ದೇವಸುಖೊ / ಭೂಮಿಟನು / ಕೂಲಿಪೊಯಿ / ನೆಡ್ಡ
ದೇವಪತಿ / ವಂದ್ಯೆ ಸುಖಿ / ತ್‌ತ್ತೆರೊಕಿ / ಈಟೀ (ಭಾ. ೧-೧೩-೨೯)

ದೇಸೀ ಛಂದಸ್ಸು

ಮುಖ್ಯವಾಗಿ ಜಾನಪದ ರಚನೆಗಳೆಲ್ಲ ಹಾಡುವ ಕುಣಿತುವ ಉದ್ದೇಶವನ್ನೇ ಹೊಂದಿರುತ್ತವೆ. ಹಾಗಾಗಿ ಅವು ಸತಾಲೆವಾಗಿರುತ್ತವೆ. ಒಂದೋ ಯಾವುದಾದರೂ ತಾಳವಾದ್ಯದೊಂದಿಗೆ ಪ್ರದರ್ಶನಕ್ಕಾಗಿ ಅಥವಾ ನಿಯತಗತಿಯಲ್ಲಿ ಆವರ್ತಿಸುವ ಕೆಲಸದೊಂದಿಗೆ ಶ್ರಮಪರಿಹಾರಕ್ಕಾಗಿ, ಕೆಲಸದ ಆವರ್ತನೆಯನ್ನು ಸಮಗತಿಗೆ ತರುವುದಕ್ಕಾಗಿ ಇಂತಹ ಹಾಡುಗಳು ರಚನೆಗೊಂಡಿರುತ್ತವೆ. ಇಲ್ಲಿ ಕೆಲಸದ ಗತಿಯನ್ನು ನಿಯಂತ್ರಿಸಿ ನಿಯತ ಗೊಳಿಸುವುದು ಹಾಡುಗಳ ಉದ್ದೇಶ. ನೇಜಿ ನೆಡುವಾಗ, ರಾಗಿ ಬೀಸುವಾಗ, ಭತ್ತ ಕುಟ್ಟುವಾಗ ಒಬ್ಬರಿಗಿಂತ ಹೆಚ್ಚು ಮಂದಿ ಜೊತೆಯಾಗಿ ದುಡಿಯುತ್ತಾರೆ. ಎಲ್ಲರ ದುಡಿಮೆಯೂ ಸಮಗತಿಯಲ್ಲಿರಬೇಕು. ಇಲ್ಲದೆ ಹೋದರೆ ಕೆಲಸ ಅಸ್ತವ್ಯಸ್ತವಾಗುತ್ತದೆ. ಹಾಡಿನ ಉಚ್ಚಾರದ ಕಾಲ, ಗತಿ ಮತ್ತು ತಾಳಾಘಾತಗಳು ಕೆಲಸವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ದುಡಿಮೆಯ ಸಂದರ್ಭದಲ್ಲಿ ಹಾಡುವ ಹಾಡುಗಳ ಉದ್ದೇಶ ಶ್ರಮ ಪರಿಹಾರ ಎಂಬ ಮಾತು ಭಾಗಶಃ ಸತ್ಯ. ಇದು ಇಂತಹ ಹಾಡುಗಳ ಭಾಗಿಕ ಉದ್ದೇಶವೇ ಹೊರತು ಮುಖ್ಯ ಉದ್ದೇಶವಲ್ಲ. ಉದಾಹರಣೆಗೆ -ಭತ್ತ ಕುಟ್ಟುವಾಗ ಹಾಡುವ ಹಾಡುಗಳು. ನಾಲ್ಕು ಮಂದಿ ಒಂದೇ ಕುಳಿಯಲ್ಲಿ ಭತ್ತ ತುಂಬಿಸಿ ನೀಳವಾದ ಒನಕೆಗಳಿಂದ ಭತ್ತ ಕುಟ್ಟುತ್ತಾರೆ. ಒಂದರ ನಂತರ ಒಂದರಂತೆ ನಿಯತವಾಗಿ ಒನಕೆಗಳು ಕುಳಿಯನ್ನು ತಲುಪಬೇಕು. ಒಂದು ಒನಕೆ ಕುಳಿಯಲ್ಲಿದ್ದಾಗ ಇನ್ನೊಂದು ಎತ್ತಿದ ಸ್ಥಿತಿಯಲ್ಲಿರುತ್ತದೆ. ಇನ್ನೊಂದು ಇಳಿಯುತ್ತಿರುತ್ತದೆ. ಮತ್ತೊಂದು ಎತ್ತಲ್ಪಡುತ್ತದೆ. ಈ ನಡುವೆ ಒಂದೊಂದೇ ಕಾಲು, ಅಂದರೆ ಒನಕೆಯನ್ನು ಮೇಲುತ್ತುವವರ ಕಾಲು ಚೆಲ್ಲಿದ ಭತ್ತವನ್ನು ಮತ್ತೆ ಕುಳಿಗೆ ದೂಡುತ್ತಿರುತ್ತದೆ. ಈ ಕೆಲಸದಲ್ಲಿ ಇಂದಿಷ್ಟು ತಪ್ಪಿದರೂ ಒನಕೆಗೆ ಒನಕೆ ತಾಗಿ ಅಥವಾ ಕಾಲಿಗೆ ಒನಕೆ ಬಿದ್ದು ಅಪಾಯ ಸಂಬವಿಸಬಹುದು. ಇದನ್ನು ನಿಯಂತ್ರಿಸುವುದು ಒನಕೆವಾಡುಗಳ ಜವಾಬ್ದಾರಿ. ಹಾಡಿನ ಲಯ ಮತ್ತು ತಾಳ ಒನಕೆಯ ಶಬ್ದದೊಂದಿಗೆ ತಾದಾತ್ಮ್ಯ ಹೊಂದಿ ದುಡಿಮೆಯನ್ನು ವ್ಯವಸ್ಥಿತಗೊಳಿಸುತ್ತದೆ. ಶ್ರಮ ಪರಿಹಾರಕ್ಕಿಂತ ಹೆಚ್ಚಾಗಿ ದುಡಿಮೆಯ ಕ್ರಮವನ್ನು ನಿಯಂತ್ರಿಸುತ್ತದೆ.

ಮರವನ್ನು ಉರುಳಿಸಿ ಸಾಗಿಸುವಾಗ ಎಲ್ಲರಲರೂ ಒಮ್ಮೆಲೇ ದಿಮ್ಮಿಯನ್ನು ಎತ್ತಬೇಕು. ಒಬ್ಬೊಬ್ಬರು ಒಮ್ಮೊಮ್ಮೆ ಎತ್ತಿದರೆ ದಿಮ್ಮಿ ಉರುಳಲಾರದು. ಹಾಡಿನ ಪಲ್ಲವಿಯ ತಾಳಾಘಾತದೊಂದಿಗೆ ಶ್ರಮ ಪರಿಪೂರ್ಣವಾಗಿ ಬೆರೆತಾಗ ಮಾತ್ರ ಇದು ಸಾಧ್ಯ.

ನೇಜಿ ನೆಡುವಾಗ, ಬೀಸುವಾಗ – ಮುಂತಾಗಿ ನಿಶ್ಚಿತ ಕ್ರಿಯಾಖಂಡದ ಆವರ್ತನೆಯೊಂದಿಗೆ ಅದೇ ನಿಗದಿತ ಕಾಲಮಿತಿಯಲ್ಲಿ ಹಾಡಿನ ಪಲುಕುಗಳೂ ಆವತಿಸಲ್ಪಡುತ್ತವೆ. ಪ್ರದರ್ಶನಕ್ಕಾಗಿ ಹಾಡುವಾಗಲೂ ತಾಳವಾದ್ಯ ಜತೆಗಿರುವುದರಿಂದ ನಿಶ್ಚಿತ ಕಾಲಮಿತಿಯಲ್ಲೇ ಹಾಡಿನ ಗಣಗಳು ಆವರ್ತಿಸುತ್ತವೆ. ಅಂದರೆ ಯಾವುದೇ ಭಾಷೆಯ ಜಾನಪದ ಹಾಡುಗಳಿದ್ದರೂ ಅವು ತಾಳವನ್ನೇ ಛಂದೋರಚನೆಯ ಮುಖ್ಯ ಮಾನದಂಡವಾಗಿ ಇಟ್ಟುಕೊಳ್ಳುತ್ತವೆ ಎಂದ ಹಾಗಾಯಿತು.

ಯಾವುದೇ ತುಳು ಜನಪದ ಹಾಡನ್ನು ಎತ್ತಿಕೊಂಡರೂ, ಅದರ ಛಂದಸ್ಸನ್ನು ಅಂಶಗಣಗಳಲ್ಲಿ ಗುರುತಿಸಲು ಪ್ರಯತ್ನಿಸುವಾಗ ಕನ್ನಡ ಅಂಶ ಛಂದಸ್ಸಿನ ಲಕ್ಷಣಗಳನ್ನು ಅನ್ವಯಿಸಲು ಸಾಧ್ಯವಾಗುವುದಿಲ್ಲ. ಒಂದೋ ಪಾದದಿಂದ ಪಾದಕ್ಕೆ ಗಣಗಳ ಸಂಖ್ಯೆಯಲ್ಲಿ ವ್ಯತ್ಯಾಸ ಕಾಣಿಸುತ್ತದೆ. ವಿಷ್ಣಗಣದ ಲಯವುಳ್ಳ ಸಾಲುಗಳ ಮಧ್ಯೆ ಬ್ರಹ್ಮ ಅಥವಾ ರುದ್ರ ಗಣಗಳು ಬರುತ್ತವೆ.

ತುಳು ಜನಪದ ಕಾವ್ಯದ ಛಂದಸ್ಸನ್ನು ತ್ರಿಮೂರ್ತಿ ಗಣಗಳ ಆಧಾರದಲ್ಲಿ ಗುರುತಿಸುವುದು ತೀರಾ ಕೃತಕವಾಗುತ್ತದೆ. ಕಾರಣ ತ್ರಿಮೂರ್ತಿ ಗಣಗಳನ್ನು ಗುರುತಿಸುವುದೇ ತಾಳದ ಆಧಾರದಲ್ಲಿ. ಅಂದರೆ ಸಮಾನ ಕಾಲಮಾತ್ರೆಗಳ ಆವರ್ತನೆಯ ಆಧಾರದಲ್ಲಿ. ಸಮಾನ ಮಾತ್ರೆಗಳ ಆವರ್ತನೆ ಸಹಜವಾಗಿ ಇರುವಾಗ ಇನ್ನಷ್ಟು ಸಂಕೀರ್ಣವಾದ, ನಿಶ್ಚಿತ ಲಕ್ಷಣಕ್ಕೆ ಹೊಂದದ ಇನ್ನೊಂದು ಛಂದೋವ್ಯವಸ್ಥೆಯನ್ನು ಹುಡುಕಿ ಅನ್ವಯಿಸುವುದು ಅಪ್ರಸ್ತುತ. ಆದ್ದರಿಂದ ಕಾಲಮಾತ್ರೆ ಮತ್ತು ತಾಳವೇ ತುಳು ಜನಪದ ಛಂದಸ್ಸಿನ ಮೂಲಮಾನಗಳೆಂದು ಹೇಳಲು ಸಂದೇಹಪಡಬೇಕಾಗಿಲ್ಲ.

“ಚೆನ್ನಾಗಿ ವಿಕಸಿತವಾದ ಸಾಕಷ್ಟು ವಿಕಸಿತವಾಗದೆ ಆಡುಭಾಷೆಗಳಾಗಿಯೇ ಉಳಿದಿರುವ, ನಾನಾ ಭಾಷೆಗಳಲ್ಲಿ ನಮಗೆ ಉಪಲಬ್ಧವಾಗಿರುವ ಆಯಾ ಭಾಷೆಯ ಅತಿಯ ಹಳೆಯ ವಾಙ್ಮಯ ರೂಪಗಳನ್ನು ಪರಾಮರ್ಶಿಸಿದರೆ – ಅವೆಲ್ಲ ಪದ್ಯರೂಪದಲ್ಲಿರುವುದೂ, ಆ ಪದ್ಯಗಳೆಲ್ಲ ಲಯಾನ್ವಿತಗಳೇ ಆಗಿರುವುದೂ ಗೊತ್ತಾಗುತ್ತದೆ. ಅವೆಲ್ಲವೂ ನಿರಪವಾದವಾಗಿ ಲಯಾನ್ವಿತ (=ತಾಳಬದ್ಧ)ವಾಗಿರುವ ಕಾರಣವೇನೆಂದರೆ – ಆದಿಕಾಲದ ಪದ್ಯಗಳೆಲ್ಲವೂ ಹಾಡುಗಳಾಗಿಯೇ ಹುಟ್ಟಿದವುಗಳು. ಆದಿಕಾಲದಲ್ಲಿ ಸಂಗೀತವೂ ಸಾಹಿತ್ಯವೂ ಒಂದರಿಂದೊಂದು ಬೇರಾಗಿರಲಿಲ್ಲ. ಆದಿಮ ಜಾತಿಗಳ ಸಂಗೀತವೆಂದರೆ ಆ ಹಾಡುಗಳನ್ನು ಹಾಡುವುದು ಮಾತ್ರವಲ್ಲ, ಅದಕ್ಕನುಗುಣವಾಗಿ ಕುಣಿಯುವುದೂ ಆಗಿತ್ತು. ಕುಣಿತಕ್ಕೆ ತಾಳವೇ ತಾಯಿ; ತಾಳಕ್ಕೆ ಲಯವೇ ತಾಯಿ. ಇದರಿಂದಾಗಿಯೇ ಸಂಸ್ಕೃತದಲ್ಲಿ ನರ್ತಕಿಗೆ ಲಯಪುತ್ರಿಕಾ ಎಂಬ ಹೆಸರು ಬಂದುದಾಗಿದೆ. ವಸ್ತುಸ್ಥಿತಿ ಹೀಗಿರುವ ಕಾರಣ ಆದಿ ಜನಾಂಗಗಳ ಪದ್ಯ ರಚನೆಗಳು – ಅರ್ಥಾತ್‌ಯಾವೊಂದು ಭಾಷೆಯಲ್ಲಿ ಹುಟ್ಟಿ ಬಂದ ಆದ್ಯತಮ ಪದ್ಯಗಳು – ಲಯರಹಿತವಾಗಿರುವ, ಎಂದರೆ ತಾಳಕ್ಕೆ ಒಡಂಬಡದಿರುವ ಸಂಭಾವ್ಯತೆಯೇ ಇದ್ದಿಲ್ಲ” (ಛಂಗ. ಪು. ೨೦೧).

ಈ ಮಾತು ಜನಪದ ಕಾವ್ಯಗಳು ತಾಳಘಟಿತ ಎನ್ನುವುದನ್ನು ಸೂಚಿಸುತ್ತದೆ. ಪದ್ಯ ಎಂದರೆ ಹಾಡು. ಹಾಡು ಎಂದರೆ ಸಂಗೀತ. ಅದು ಲಯಬದ್ಧ. ಲಯಬದ್ಧವಾದದ್ದು ತಾಳಬದ್ದವೂ ಆಗಿರುತ್ತದೆ. ಏಕೆಂದರೆ ಲಯ, ಅಂದರೆ ಪದ್ಯಲಯ, ಎರಡು ತಾಲಾಸ್ಫಾಲನಗಳ ನಡುವೆ ನಡೆಯುವ ಸಸ್ವರ ವಿನ್ಯಾಸ.

ತುಳು ಜಾನಪದ ಛಂದಸ್ಸನ್ನು ಎರಡಾಗಿ ವಿಂಗಡಿಸಬಹುದು. ಒಂದು ನಿಶ್ಚಿತ ಪಾದಗಳುಳ್ಳ ಪದ್ಯಮಾದರಿ (Stanzaic), ಇನ್ನೊಂದು ಪಾದಮಿತಿಯಲ್ಲದೆ ಹರಿಯುವ ಮಾದರಿ. ಪದ್ಯಮಾದರಿಯಲ್ಲಿ ಎರಡು ಮತ್ತು ನಾಲ್ಕು ಪಾದಗಳ ವಿನ್ಯಾಸ ಸಾಮಾನ್ಯವಾಗಿ ಕಂಡುಬರುತ್ತದೆ. ಹೆಚ್ಚಿನ ಕಬಿತೆಗಳೂ ಪದ್ಯಗಳಾಗಿ ವಿಂಗಡಿಸಲ್ಪಟ್ಟವು. ಆದರೆ ಪಾಡ್ದನಗಳು ಹೀಗಿಲ್ಲ. ಅವು ಪಾದಮಿತಿಯಿಲ್ಲದೆ ಹರಿಯುತ್ತವೆ.

ತಾಳಬದ್ದವಾದ ತುಳು ಜನಪದ ಕಾವ್ಯಗಳ ಛಂದಸ್ಸನ್ನು ಕಾಲಮಾತ್ರೆಯ ಆಧಾರದಲ್ಲಿ ಗುರುತಿಸುವ ಪ್ರಯತ್ನ ಇಲ್ಲಿದೆ.

 

[1] ಪಾರಿಭಾಷಿಕ ಪದದಿಂದ ಸೂಚಿಸಲಾಗಿದೆ.

[2] ಭಾ. ಪು. ೨

[3] ÈÈÈ ಈ ಗತಿಯನ್ನು ಅತಿದಂಡಕೀಗತಿ ಎನ್ನುತ್ತಾರೆ.

[4] ೫+೫+೫+೪ರ ನಾಲ್ಕು ಪಾದಗಳು ಚೌಪದಿಯ ಲಕ್ಷಣ.

[5] ಉದಾ:

ತ          ಜ          ಜ          ಲಗ

ದೈವಜ್ಞೆ / ಯತಿಯೊ /            ರಿಚವು /   ಟತೇ

೪          ೪          ೪          ೪

ದೈವ /    ಜ್ಞಯತೀ /             ಯೊರಿಚೊ /           ವುಟತೇ