ದ್ರಾವಿಡ ಭಾಷೆಗಳ ಪೈಕಿ ಲಿಪಿ ಇರುವ ಭಾಷೆಗಳಲ್ಲಿ ತೆಲುಗು, ಲಿಪಿ ಇಲ್ಲದ ಭಾಷೆಗಳಲ್ಲಿ ತುಳುವನ್ನು ಸೇರಿಸಿಕೊಂಡು ವರ್ಗಿಕರಿಸಲಾಗುತ್ತಿತ್ತು. ದ್ರಾವಿಡ ಭಾಷೆಗಳಲ್ಲಿ ಅತ್ಯಧಿಕ ಸಂಖ್ಯೆಯ ಜನರು ಮಾತನಾಡುವ ತೆಲುಗು ದ್ರಾವಿಡ ಭಾಷೆಗಳ ಮೂಲ ಲಕ್ಷಣಗಳನ್ನು ಉಳಿಸಿಕೊಂಡಿರುವ ಭಾಷೆಯೂ ಆಗಿದೆ. ಅದೇ ರೀತಿ ದ್ರಾವಿಡ ಭಾಷೆಗಳ ಅನೇಕ ಮೂಲ ಲಕ್ಷಣಗಳನ್ನು ತುಳು ಭಾಷೆಯೂ ಉಳಿಸಿಕೊಂಡಿದೆ. ಈ ಕಾರಣದಿಂದ ಈ ಎರಡೂ ಭಾಷೆಗಳನ್ನು ತೌಲನಿಕವಾಗಿ ಅಭ್ಯಾಸ ಮಾಡುವ ಅವಶ್ಯಕತೆ ಇದೆ. ಸ್ಥೂಲವಾಗಿ ತೆಲುಗನ್ನು ಮಧ್ಯದ್ರಾವಿಡ ಭಾಷೆ ಎಂದೂ ತುಳುವನ್ನು ದಕ್ಷಿಣ ದ್ರಾವಿಡ ಭಾಷೆ ಎಂದೂ ವಿದ್ವಾಂಸರು ಪರಿಗಣಿಸಿದ್ದರೂ ಇದು ಸ್ಥೂಲ ಅಧ್ಯಯನದ ಫಲವೇ ಹೊರತು ಸೂಕ್ಷ್ಮ ಅಧ್ಯಯನದ ಫಲವಲ್ಲ ಎಂಬುದು ಸ್ಪಷ್ಟ.

ತಮಿಳಿಗೆ ಮಾತ್ರ ಅನ್ವಯವಾಗುತ್ತಿದ್ದ ದ್ರಾವಿಡ ಪದವನ್ನು ಒಂದು ಕುಟುಂಬದ ಭಾಷೆಗಳಿಗೆ ಹೆಸರಾಗಿ ಮಾಡಿದಾಗಲೇ ಕಾಲ್ಡೈಲ್‌ಮುಂತಾದ ವಿದ್ವಾಂಸರು ಮೊದಲನೆಯ ತಪ್ಪನ್ನು ಮಾಡಿದ್ದಾರೆ. ದ್ರಾವಿಡ ಭಾಷಾಪದಗಳ ಮತ್ತು ಇಡೀ ಭಾಷಾ ಸ್ವರೂಪದ ಸಮಗ್ರ ಪರಿಚಯ ಮಾಡಿಕೊಳ್ಳದೆಯೇ ಮೂಲ ದ್ರಾವಿಡ ಭಾಷಾ ಸ್ವರೂಪವನ್ನು ತಮಿಳಿನಲ್ಲಿ ಹುಡುಕುವ ಮೂಲಕ ಈ ವಿದ್ವಾಂಸರು ಇನ್ನೂ ದೊಡ್ಡ ಅಪಪ್ರಚಾರವನ್ನು ಮಾಡಿದ್ದಾರೆ. ಇದರಿಂದ ದ್ರಾವಿಡ ಭಾಷಾ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಲಿಖಿತ ಭಾಷೆಗಳಿಂದಲೇ ಭಾಷಾ ಸ್ವರೂಪವನ್ನು ನಿರ್ಧಾರ ಮಾಡುವುದು ಸಾಧ್ಯವಿಲ್ಲವೆಂಬುದು ಜಗವರಿದ ಸತ್ಯವಾದರೂ ತುಳುವಿನಂಥ ಭಾಷೆಗಳಲ್ಲಿರುವ ಹಳೆಯ ರೂಪಗಳನ್ನಾಗಲೀ, ಅವುಗಳಿಗೆ ಹಿನ್ನೆಲೆಯಾಗಿರುವ ಸಾಂಸ್ಕೃತಿಕ ಸ್ವರೂಪವನ್ನಾಗಲೀ ಈ ವಿದ್ವಾಂಸರು ಅರ್ಥ ಮಾಡಿಕೊಂಡಿಲ್ಲ.

ಭೌಗೋಳಿಕವಾಗಿ ತೆಲುಗು ಮತ್ತು ತುಳು ಭಾಷಾಪ್ರದೇಶಗಳಿಗೆ ಸಂಬಂಧವಿಲ್ಲದಿದ್ದರೂ ಭಾಷೆಯ ವಿಷಯದಲ್ಲಿ ಅನೇಕ ಸಮಾನಾಂಶಗಳು ಇರುವುದು ಅಚ್ಚರಿಯ ವಿಷಯ. ಇದರಿಂದ ದ್ರಾವಿಡ ಭಾಷೆಗಳ ವರ್ಗಿಕರಣ ಮಾಡುವಾಗ ವಹಿಸಬೇಕಾದ ಎಚ್ಚರದ ಅರಿವಾಗುತ್ತದೆ. ಭೌಗೋಳಿಕವಾಗಿ ದಕ್ಷಿಣ ಭಾರತಕ್ಕೆ ಸೇರಿದ್ದರೂ ತೆಲುಗು ಭಾಷೆ ಸ್ವರೂಪದ ದೃಷ್ಟಿಯಿಂದ ಮಧ್ಯದ್ರಾವಿಡಕ್ಕೆ ಸೇರುತ್ತದೆಂಬುದನ್ನು ಸ್ಥಾಪಿಸಿದವರು ಡಾ. ಭದ್ರಿರಾಜು ಕೃಷ್ಣಮೂರ್ತಿ. ತುಳು ಭಾಷೆಯನ್ನು ಕೆಲವರು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿಸಿದರೂ ಎಮಿನೋ ಮುಂತಾದವರು ಇದನ್ನು ಅನುಮಾನದಿಂದಲೇ ಮಾಡಿದ್ದಾರೆ. ಕೃಷ್ಣಮೂರ್ತಿ ಅವರು ಕೂಡ ತುಳು ಮಧ್ಯದ್ರಾವಿಡ ಭಾಷಾಗುಂಪಿನಿಂದ ಸ್ವತಂತ್ರವಾಯಿತೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರ. ಪಿ.ಎಸ್‌. ಸುಬ್ರಹ್ಮಣ್ಯಂ ಮುಂತಾದವರು ತುಳು ಭಾಷೆಯನ್ನು, ದಕ್ಷಿಣ ದ್ರಾವಿಡ ಭಾಷೆ ಎಂದೇ ಖಚಿತಪಡಿಸುತ್ತಾರಾದರೂ ಅದನ್ನು ಒಪ್ಪಲೇಕಾದ ಅವಶ್ಯಕತೆ ಇಲ್ಲ. ಸೌತ್‌ವರ್ತ್‌ನಂಥವರು ತುಳು ದಕ್ಷಿಣ ಭಾಷೆಗಳಲ್ಲಿ ಸೇರತಕ್ಕದ್ದಲ್ಲವೆಂದೇ ದೃಢವಾದ ಅಭಿಪ್ರಾಯವನ್ನು ವ್ಯಕ್ತಮಾಡಿದ್ದಾರೆ (IJDL Vol. V no, 1 p. 120) ದ್ರಾವಿಡ ಭಾಷೆಗಳ ಮೂಲವನ್ನು ಹುಡುಕುವಾಗ ತಮಿಳಿನತ್ತ ಮಾತ್ರ ದೃಷ್ಟಿ ಹರಿಸುವ ವಿದ್ವಾಂಸರಿಗೆ ತುಳು ನುಂಗಲಾರದ ತುತ್ತಾಗಿದೆ ಎನ್ನಬಹುದು. ದಕ್ಷಿಣ ಭಾರತಕ್ಕೆ ಬರುವ ಮುಂಚೆಯೇ ಮಧ್ಯದ್ರಾವಿಡ ಭಾಷೆಗಳ ಪೂರ್ವರೂಪದಿಂದ ತುಳು ಭಾಷೆ ಬೇರೆಯಾಗಿರಬಹುದೆಂಬ ಅಭಿಪ್ರಾಯದಲ್ಲಿ ತೂಕವಿದೆ ಎನಿಸುತ್ತದೆ. ತುಳು ಸಮುದ್ರ ತೀರದಲ್ಲಿ ಬಳಕೆಯಾಗುತ್ತಿರುವುದರಿಂದ ಕ್ರಿ.ಪೂ. ೬ನೆಯ ಶತಮಾನದಷ್ಟು ಹಿಂದೆಯೇ ಆ ಭಾಷೆಯನ್ನಾಡುವ ಜನ ಮಧ್ಯ ಏಶಿಯಾದಿಂದ ಸಮುದ್ರಮಾರ್ಗದಲ್ಲಿ ಬಂದು ತುಳುನಾಡಿನಲ್ಲಿ ನೆಲೆಸಿರಬಹುದೆಂದು ಕೂಡ ಊಹಿಸಬಹುದು.

ತುಳು ಮತ್ತು ತೆಲುಗು ಮೂಲದ್ರಾವಿಡದಿಂದ ಕ್ರಿ. ಪೂ. ಅನೇಕ ಶತಮಾನಗಳ ಹಿಂದೆಯೇ ಬೇರೆಯಾಗಿವೆ ಎನ್ನುವುದನ್ನು ಪರೋಕ್ಷ ಆಧಾರಗಳಿಂದ ಖಚಿತಪಡಿಸಬಹುದು. ಆದರೆ ಇದನ್ನು ಸಿದ್ಧಾಂತವಾಗಿ ರೂಪಿಸಲು ಇನ್ನೂ ಆಳವಾದ ಪರಿಶೀಲನೆ ಪರಿಶೋಧನೆ ಅಗತ್ಯವಿದೆ.

ತುಳು ಮತ್ತು ತೆಲುಗು ಬಾಷೆಗಳ ಸ್ವರೂಪವನ್ನು ಪರಿಶೀಲಿಸಿದಾಗ ತಮಿಳಿನಲ್ಲಿ ಮತ್ತು ಅದಕ್ಕೆ ಸಮೀಪವೆಂದು ಭಾವಿಸಬಹುದಾದ ಭಾಷೆಗಳಲ್ಲಿ ಒಂದು ರೀತಿಯ ಪದಗಳು ಮತ್ತು ಭಾಷಾಭಾಗಗಳಿದ್ದರೆ ತೆಲುಗು ಗುಂಪಿಗೆ ಸೇರಿದ ಭಾಷೆಗಳಲ್ಲಿ ಮತ್ತೊಂದು ರೀತಿಯ ಭಾಷಾ ಭಾಗಗಳನ್ನು ಗುರುತಿಸಬಹುದು.

ಉದಾಹರಣೆಗೆ ಮೂಲದ್ರಾವಿಡದ ‘ಚ’ಕಾರ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಲೋಪವಾದರೆ ತೆಲುಗಿನಲ್ಲಿ ಕೆಲವೆಡೆ ಉಳಿದುಬಂದಿದೆ (ಚಲ್ಲ ಮಜ್ಜಿಗೆ). ‘ಎಂಟು’ ಸಂಖ್ಯೆಯನ್ನು ಪರಿಶೀಲಿಸಿದಾಗಲೂ ಎಟ್ಟು (ತಮಿಳು), ಎಟ್ಟು (ಮಲೆಯಾಳಂ), ಎಟ್ಟು (ಕೊಡವ) ಮುಂತಾದ ರೂಪಗಳಿಗೂ ಎನಿಮಿದಿ (ತೆಲುಗು), ಎಣ್‌ಮ (ತುಳು) ರೂಪಗಳಿಗೂ ಇರುವ ವ್ಯತ್ಯಾಸವನ್ನು ಗಮನಿಸಬಹುದು.

ಕಾರಣಾತ್ಮಕ ಮತ್ತು ಸಕರ್ಮಕ ಕ್ರಿಯಾಪದಗಳ ರಚನೆಯಲ್ಲಿ ಕೂಡ ತುಳು ಇತರ ದ್ರಾವಿಡ ಭಾಷೆಗಳಿಗಿಂತ ಭಿನ್ನವಾಗಿದೆ.

ಉರಿ – ಉರಿಪು
ತೀರಿ – ತೀರ್‌ಪು ಇತ್ಯಾದಿಗಳನ್ನು ಉದಾಹರಿಸಬಹುದು.

ಸಂಬಂಧಸೂಚಕ ಕೃದಂತ ಪ್ರತ್ಯಯವಾಗಿ ತಮಿಳು, ಕನ್ನಡ ಗುಂಪಿನಲ್ಲಿ ‘ಅ’ಕಾರ ಬಂದರೆ ತುಳುಭಾಷೆಯಲ್ಲಿ ‘ಇ’ ಕಾರ ಬರುತ್ತದೆ. ಉದಾ:

ಕಲ್‌-ತ್‌-ಇ
ಪೋ-ಯ್‌-ಇ

ಮೂಲದ್ರಾವಿಡದ ‘ಳ’ಕಾರ ತುಳುಭಾಷೆಯಲ್ಲಿ ‘ಲ’ಕಾರವಾದಂತೆ ತೆಲುಗು ಭಾಷೆಯಲ್ಲೂ ‘ಲ’ಕಾರವಾಗುತ್ತದೆ. ಉದಾ:

ತಮಿಳು ಕಳಂ; ತುಳು ಕಲ; ತೆಲುಗು ಕಲಮು

ಅನೇಕ ದ್ರಾವಿಡ ಭಾಷೆಗಳಲ್ಲಿ ತಾಲವ್ಯೀಕರಣ ನಡೆದಿದೆ. ತಮಿಳು, ಮಲೆಯಾಳಂ ಭಾಷೆಗಳಲ್ಲಿ ಆಗಿರುವ ತೌಲವ್ಯೀಕರಣಕ್ಕೂ ತೆಲುಗು ಭಾಷೆಯಲ್ಲಾಗಿರುವ ತೌಲ್ಯವೀಕರಣಕ್ಕೂ ವ್ಯತ್ಯಾಸ ಇರುವುದನ್ನು ಬರೋ ಮುಂತಾದ ವಿದ್ವಾಂಸರು ಗುರುತಿಸಿದ್ದಾರೆ. ತೆಲುಗಿನಲ್ಲಿ ತೌಲವ್ಯೀಕರಣ ಆಗಿರುವ ದಾಖಲೆಗಳು ಸು. ಕ್ರಿ. ಶ. ೫ನೆಯ ಶತಮಾನದೀಂದೀಚೆಗೆ ಕಂಡುಬರುತ್ತವೆ. ಅದರ ಹಿಂದಿನ ಅನೇಕ ಉದಾಹರಣೆಗಳಲ್ಲಿ ‘ಕ’ ಕಾರ ‘ಚ’ ಕಾರವಾಗಿಲ್ಲವೆಂಬುದು ಗಮನಿಸತಕ್ಕದ್ದು. ಕನ್ನಡ ಮತ್ತು ತುಳು ತಾಲವ್ಯೀಕರಣದ ಪ್ರಭಾವಕ್ಕೆ ಒಳಗಾಗದಿದ್ದರೂ ಕೆಲವು ಪದಗಳು ಮಾತ್ರ ತೆಲುಗಿನ ಪ್ರಭಾವದಿಂದ ತಾಲವ್ಯೀಕರಣ ಹೊಂದಿರುವುದನ್ನು ವಿದ್ವಾಂಸರು ಗಮನಿಸಿದ್ದಾರೆ.

ಕೆಲವು ಸರ್ವನಾಮಗಳ ವಿಷಯದಲ್ಲಿ ತುಳು ಮತ್ತು ತೆಲುಗು ಭಾಷೆಗಳ ನಡುವೆ ಸಮಾನಾಂಶಗಳನ್ನು ಗುರುತಿಸಬಹುದು. ಉದಾ:

ಉತ್ತಮ ಪುರುಷ ಸರ್ವನಾಮ (ಏಕವಚನ)
ಏನು (ತೆಲುಗು) ಏನು (ತುಳು)

ಕನ್ನಡದಲ್ಲಿಲ್ಲದ ಉತ್ತಮ ಪುರುಷ ಸಮಾವೇಶಕ ಬಹುವಚನ ಸರ್ವನಾಮ ತುಳುಭಾಷೆಯಲ್ಲಿ ಮತ್ತು ತೆಲುಗು ಭಾಷೆಯಲ್ಲಿದೆ.

ನಮ, ನಾವು (ತುಳು) ಮನಮು (ತೆಲುಗು)

ಮಧ್ಯಮಪುರುಷ ಸರ್ವನಾಮ ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ನೀ, ನೀನ್‌ ಆಗಿದೆ.

ತುಳುಭಾಷೆಯಲ್ಲಿ ‘ಈ’ ತೆಲುಗು ಈವು, ನೀವು ವಿಭಕ್ತಿಗಳ ವಿಷಯದಲ್ಲೂ (ದ್ವಿತೀಯ, ಚತುರ್ಥಿ ಇತ್ಯಾದಿ) ತುಳು ಮತ್ತು ತೆಲುಗು ಭಾಷೆಗಳಲ್ಲಿ ಹೋಲಿಕೆ ಕಂಡುಬರುತ್ತದೆ.

ಮೇಲಿನ ವಿಷಯಗಳನ್ನಲ್ಲದೆ ತೆಲುಗು ಮತ್ತು ತುಳು ಪದ ಭಂಡಾರವನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಗತ್ಯವಿದೆ. ಸ್ಥಳನಾಮಗಳ ಅಧ್ಯಯನದಿಂದಲೂ ಅನೇಕ ವಿಷಯಗಳು ತಿಳಿದುಬರುತ್ತವೆ. ತೆಲುಗು ಮತ್ತು ತುಳು ಭಾಷೆಗಳಲ್ಲಿ ಅಕಾರಾಂತ ಆಗಿರುವ ಪದಗಳನ್ನು ಕನ್ನಡದಲ್ಲಿ ‘ಎ’ ಕಾರಾಂತವಾಗಿ ತಮಿಳಿನಲ್ಲಿ ‘ಐ’ ಕಾರಾಂತವಾಗಿರುವ ಪದಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾದ ಅವಶ್ಯಕತೆ ಇದೆ (ಉದಾ: ಕೋಟ, ಮಲ ಇತ್ಯಾದಿ). ತುಳು ಭಾಷೆಯಲ್ಲಿರುವ ಮಧ್ಯದ್ರಾವಿಡ ಅಂಶಗಳ ಆಳವಾದ ಅಧ್ಯಯನದ ಅಗತ್ಯವಿದೆ.