೧. ಸ್ವರಮಾಲೆ

ತುಳು ವ್ಯಾಕರಣವನ್ನು ಮೊತ್ತಮೊದಲಿಗೆ ಬರೆದವರು ರೆವೆ. ಜೆ. ಬ್ರಿಗೆಲ್ ಎಂಬವರು. ಅವರ A Grammar of Tulu Language ಎಂಬ ಪುಸ್ತಕವು ೧೮೭೨ನೆಯ ಇಸವಿಯಲ್ಲಿ ಮಂಗಳೂರಿನ ಬಾಸೆಲ್‌ಮಿಶನ್‌ಪ್ರೆಸ್ಸಿನಲ್ಲಿ ಮುದ್ರಿತವಾಯಿತು. ಇದರ ಒಂದನೆಯ ಅಧ್ಯಾಯದಲ್ಲಿ ವರ್ಣಮಾನೆಯ ಕುರಿತು ‘In this alphabet there are 15 vowels, two Medials and 34 consonants’ ಎಂದು ಹೇಳಿ, ಸ್ವರಗಳ ಕುರಿತಾಗಿ ಈ ರೀತಿ ಹೇಳಲಾಗಿದೆ :-

Vowels are either short or long or diphthogal or indefinite.

Short :- ಅ ಇ ಉ ಋ ಎ ಒ

Long :- ಆ ಈ ಊ ೠ ಏ ಓ

Diphthongal :- ಐ ಔ

Indefinite :- ್(as in ತ್‌) sounded nearly as the French e in e in je. Dr. hepsius in his Standard Alphabet represents it by you

ಈ ಪಟ್ಟಿಯನ್ನು ಕಾಣುವಾಗ ಕನ್ನಡದಲ್ಲಿ ಅಕಾರಾದಿಯಾಗಿ ಔಕಾರಂತ್ಯದ ವರೆಗಿನ ಹದಿನಾಲ್ಕು ಸ್ವರಗಳು ಇರುವಂತೆಯೇ ತುಳುವಿನಲ್ಲಿಯೂ ಇವೆಯೆಂದೂ, ಇವುಗಳಲ್ಲದೆ ಇನ್ನೊಂದು ಸ್ವರವು ಪ್ರತ್ಯೇಕವಾಗಿದ್ದು ಇದು ಅನಿರ್ದಿಷ್ಟ  ಎಂಬ ಸಂಜ್ಞೆಯುಳ್ಳುದೆಂದೂ ತೋರಿಬರುತ್ತದೆ. ಈ ಸಂಜ್ಞೆ ಹೊಸತಾಗಿ ಸೃಷ್ಟಿಸಲ್ಪಟ್ಟುದು ಎಂಬುದು ಅದರ ಸ್ವರೂಪವನ್ನು ಕಂಡಾಗಲೇ ಅವಗತವಾಗುವುದರಿಂದ ಅದಕ್ಕೆಅದೇ ಸಂಜ್ಞೆಸರಿಯೆಂದು ಎಲ್ಲರೂ ಅಂಗೀಕರಿಸಬೇಕೆಂದಿಲ್ಲವೆಂದೂ ಸ್ಪಷ್ಟವಾಗುತ್ತದೆ. ಬೇರೆ ಸಂಜ್ಞೆಯನ್ನು ಅದಕ್ಕೆ ಕೊಡುವ ವರೆಗೂ – ತರ್ಕಶುದ್ಧವಾಗಿ ಇಂತಹುದೇ ಸರಿಯೆಂದು ಸಾಧಿಸುವವರೆಗೂ – ಅದನ್ನು ಅನಿರ್ದಿಷ್ಟವೆಂದು ಹೇಳಿದ್ದರೂ ತಪ್ಪಾಗದೆಂದು ತೋರುತ್ತದೆ.

ತುಳು ವ್ಯಾಕರಣವನ್ನು ತುಳು ಭಾಷೆಯಲ್ಲಿಯೆ ಬರೆದು ೧೯೩೨ರಲ್ಲಿ ಉಡುಪಿಯ ತುಳುನಾಡು ಛಾಪಖಾನೆಯಲ್ಲಿ ಪ್ರಕಟಿಸಿದವರು ಶ್ರೀ ಎಸ್. ಯು ಪಣಿಯಾಡಿಯವರು. ಅವರು ತುಳುವಿನ ಸ್ವರಮಾಲೆಯ ಕುರಿತು ಈ ಮಾತುಗಳನ್ನು ಬರೆದಿದ್ದಾರೆ :

[1]”ಅ ಇ ಉ್ ಉ ಎ್ ಎ ಒ

ಈ ಏಳೇ ಸ್ವರಗಳು ತುಳು ಭಾಷೆಯಲ್ಲಿರುವುದು.

ಉ‌ಎಂಬ ಸ್ವರವು ದ್ರಾವಿಡ ಭಾಷೆಗಳಿಗೆ ಅಗತ್ಯಬೇಕು. ತುಳುವಿನಲ್ಲಿ ಈ ಸ್ವರದ ಉಪಯೋಗವು ತುಂಬ ಕಡೆಯಲ್ಲಿ ಬರುತ್ತದೆ : ಇದನ್ನು ಪ್ರತ್ಯೇಕ ಸ್ವರವಾಗಿ ತೆಗೆದುಕೊಳ್ಳದಿದ್ದರೆ ‘ಮಳ್ತ್‌ದ್‌, ಮರ್ದ್‌‌ಡ್‌, ಕಡತ್‌ದ್‌೦ಡ್‌’ ಇತ್ಯಾದಿಗಳನ್ನು ಉಚ್ಚರಿಸಲು ಸಾಧ್ಯವೇ ಇಲ್ಲ. ಅದೂ ಅಲ್ಲದೆ ವೃತ್ತಗಳಲ್ಲಿ ಮಾತ್ರೆಯ ಲೆಕ್ಕಕ್ಕೂ ಕಷ್ಟವಾಗುತ್ತದೆ. ತಮಿಳು ಭಾಷೆಯಲ್ಲಿಯೂ ಈ ಸ್ವರದ ಉಪಯೋಗವು ತುಂಬ ಇದೆ. ಆದರೆ ಇದನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳದ ಕೆಲವು ಕಡೆಯಲ್ಲಿ ಅರ್ಧ ಇಕಾರವೆಂದೂ ಕೆಲವು ಕಡೆ ಅರ್ಧ ಉಕಾರವೆಂದೂ ತಮಿಳೂ ವ್ಯಾಕರಣಕಾರರು ವ್ಯವಹರಿಸುತ್ತಾರೆ”.

ಇನ್ನು ಮುಂದುವರಿಸಿ [2]’ಎ್‌ಎಂಬ ಸ್ವರವೂ ದ್ರಾವಿಡ ಭಾಷೆಗಳಿಗೆ ಅಗತ್ಯ ಬೇಕು. ಕೆಲವು ದ್ರಾವಿಡ ಭಾಷೆಗಳಲ್ಲಿ ಈ ಸ್ವರದ ಉಪಯೋಗವು ತೋರುವುದಿದ್ದರೂ ವ್ಯಾಕರಣಕಾರರು ಗಮನಿಸಲಿಲ್ಲ. ತುಳುವಿನಲ್ಲಿ ಸ್ಪಷ್ಟವಾಗಿ ಅನೇಕ ಕಡೆ ಕಾಣುತ್ತದೆ. ಈ ಸ್ವರದ ಸಹಾಯವಿಲ್ಲದಿದ್ದರೆ ‘ಏನ್‌ಪೋಪೆ’ ‘ಆಯೆ ಪೋಪೆ’ ಇತ್ಯಾದಿ ಭೇದವನ್ನು ತೋರಿಸಲು ಸಾಧ್ಯವೇ ಇಲ್ಲ; ತಮಿಳು ಭಾಷೆಯಲ್ಲಿಯೂ ಈ ಸ್ವರದ ಉಪಯೋಗವಿದೆ. ಆದರೆ ಅದನ್ನು ಹ್ರಸ್ಟ ‘ಐ’ ಕಾರವೆಂದು ತಮಿಳು ವ್ಯಾಕರಣಕಾರರು ವ್ಯವಹರಿಸುವವರು” ಎಂದಿದ್ದಾರೆ.

ಮುಂದೆ [3]’ಅಕಾರಾದಿ ಸ್ವರಗಳಿಗೆ ಪ್ರತಿಯೊಂದಕ್ಕೆ ಹದಿನೆಂಟು ಭೇದಗಳಿದ್ದರೂ ಸಾಧಾರಣ ವ್ಯವಹಾರಕ್ಕೆ ಹ್ರಸ್ವ ದೀರ್ಘಗಳು ಮಾತ್ರ ಸಾಕು. ಐಕಾರ ಔಕಾರಗಳು ತುಳು ಭಾಷೆಯ ಶಬ್ದಗಳನ್ನು ಉಪಯೋಗಿಸಲು ಅಗತ್ಯವಿಲ್ಲದಿದ್ದರೂ ಬೇರೆ ಭಾಷೆಯ ಶಬ್ದಗಳನ್ನು ಉಪಯೋಗಿಸುವುದಕ್ಕಾಗಿ ಬೇಕು. ಆದುದರಿಂದ ತುಳು ಭಾಷೆಯ ಸ್ವರಮಾಲೆಯನ್ನು ಉಪಯೋಗಿಸುವುದಕ್ಕಾಗಿ ಬೇಕು. ಆದುದರಿಂದ ತುಳು ಭಾಷೆಯ ಸ್ವರಮಾಲೆಯನ್ನು ಸಾಧಾರಣ ರೀತಿಯಲ್ಲಿ ಹೀಗಿಟ್ಟುಕೊಳ್ಳಬಹುದು.

ಅ ಆ ಇ ಈ ಉ್ ಊ್ ಉ ಊ ಎ್ ಏ್ ಎ ಏ ಐ ಒ ಓ ಔ ಎಂದು ತಿಳಿಸಿದ್ದಾರೆ.

ಇವರ ಅಭಿಮತದಂತೆ ತುಳುವಿನಲ್ಲಿ ಹದಿನಾರು ಸ್ವರಗಳಿವೆ. ಇವರು ಬ್ರಿಗೆಲ್ ಅವರ ಪಟ್ಟಿಯಲ್ಲಿ ಕಂಡುಬರುವ ಋ ಮತ್ತು ೠ ಎಂಬ ಸ್ವರಗಳನ್ನು ಪರಿತ್ಯಜಿಸಿ ಉ್ ಊ್‌ಎ್ ಏ್ ಎಂಬ ಬೇರೆ ನಾಲ್ಕು ಸ್ವರಗಳನ್ನು ಕೂಡಿಸಿಕೊಂಡಿದ್ದಾರೆ. ಅವರ ಪಟ್ಟಿಯಲ್ಲಿ ಋ ೠ ಎಂಬ ಸ್ವರಗಳು ಸೇರಿಕೊಂಡಿರುವುದಕ್ಕೆ, ಅವರೇ ಹೇಳಿದಂತೆ, ‘More recently the Canarese alphabet has been adopted both in writing and printing’ (ಇತ್ತೀಚೆಗೆ ಕನ್ನಡ ವರ್ಣಮಾಲೆಯನ್ನು ಬರೆಯುವುದಕ್ಕೂ ಮುದ್ರಣಕ್ಕೂ ಸ್ವೀಕರಿಕೊಳ್ಳಲಾಗಿದೆ) ಎಂಬುದೆ ಕಾರಣವಾಗಿದೆ. ಕನ್ನಡದಲ್ಲಿ ಈ ಎರಡು ಸ್ವರಗಳು ಸೇರಿಕೊಂಡಿರುವುದರ ಔಚಿತ್ಯವನ್ನು ಶಾಸ್ತ್ರೀಯವಾಗಿ ವಿವೇಚಿಸಿ ಸರಿಯಾದ ಒಂದು ಸಿದ್ಧಾಂತಕ್ಕೆ ಬಂದ ಅವರು ಈ ರೀತಿ ಕನ್ನಡದ ವರ್ಣಮಾಲೆಯನ್ನು ಅಂಗೀಕರಿಸಿದುದಲ್ಲ. ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ತಮ್ಮ ‘ಕನ್ನಡ ವರ್ಣಗಳು’ (ಧಾರವಾಡದ ‘Kannada Research Institute’ ೧೯೫೫ರಲ್ಲಿ ಅಚ್ಚು ಹಾಕಿಸಿದ ಪುಸ್ತಕ) ಎಂಬ ವಿವೇಚನಾತ್ಮಕ ಗ್ರಂಥದಲ್ಲಿ ‘ಮೂಲ ಕನ್ನಡ ವರ್ಣಮಾಲೆ’ ಯಲ್ಲಿ ಇರತಕ್ಕ ಸ್ವರಗಳು ಎಷ್ಟು ಎಂದರೆ, ಈ ಹತ್ತು ಮಾತ್ರ; ಈ ಐದು ದ್ವಂದ್ವಗಳು ಮಾತ್ರ:

ಅ ಆ ಇ ಈ ಉ ಊ ಎ ಏ ಒ ಓ ಎಂದು ತಮ್ಮ ಸಿದ್ಧಾಂತವನ್ನು ಕೊಟ್ಟಿದ್ದಾರೆ. ತುಳುವಿನಲ್ಲಿಯೂ ಶ್ರೀ ಭಟ್ಟರು ಹೇಳುವ ಎಲ್ಲ ಸ್ವರಗಳು ಇವೆಯೆಂಬ ವಿಷಯಲದಲ್ಲಿ ಹಿಂದೆ ಹೇಳಿದ ಇಬ್ಬರು ತುಳು ವೈಯಾಕರಣರೂ ಸಹಮತವುಳ್ಳವರಾಗಿದ್ದಾರೆ. ಇವರಲ್ಲಿ ಬ್ರಿಗೆಲ್‌ ಅವರು ಅನಿರ್ದಿಷ್ಟ ಸ್ವರವನ್ನೊಂದನ್ನು ಹೇಳಿದ್ದಾರಾದರೆ, ಅದೇ ಸ್ವರದ ದೀರ್ಘಸ್ವರೂಪವನ್ನೂ ಕೂಡಿಸಿಕೊಂಡಿದ್ದಾರೆ ಪಣಿಯಾಡಿಯವರು. ಬ್ರಿಗೆಲ್‌ಅವರ ಅಭಿಪ್ರಾಯದಂತೆ ಈ ಅನಿರ್ದಿಷ್ಟ ಸ್ವರವು ಉಕಾರಕ್ಕೆ ಬಹು ಸಮೀಪವಾಗಿದೆಯೆಂದು ಸ್ಪಷ್ಟ ವಾಗುತ್ತದೆ. ಏಕೆಂದರೆ ಡಾ. ಲೇಪ್ಸಿಯಸ್ ಅವರು ಈ ಸ್ವರದ ಉಚ್ಚಾರವನ್ನು u ಎಂಬ ಸಂಜ್ಞೆಯಿಂದ ಸೂಚಿಸಿದ್ದಾರೆ ಎಂದು ತಿಳಿಸಿರುವರು. ಇನ್ನು ಈ ಸ್ವರದ ಕುರಿತು ಮೊದಲು ವಿವೇಚಿಸೋಣ:

ಒಂದು ಭಾಷೆಯ ವರ್ಣಸಂಖ್ಯಾನಿರ್ಣಯಕ್ಕೆ ಅಯಾ ಭಾಷೆಯನ್ನಾಡುವಾಗ ಕಿವಿಗೆ ಬೀಳುವ ಧ್ವನಿಗಳ ಸಂಖ್ಯೆಯೇ ಆಧಾರ ವಾಗಿದೆ. ಹಾಗೆಂದು ಒಂದು ಶಬ್ದವನ್ನುಚ್ಚರಿಸುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಧ್ವನಿವ್ಯತ್ಯಾಸ ಮಾಡಿ ಉಚ್ಚರಿಸಬಹುದಾದರೂ ಅರ್ಥವ್ಯತ್ಯಾಸವಾಗದೆ ಇದ್ದರೆ ಅಲ್ಲಿ ವರ್ಣವ್ಯತ್ಯಾಸವನ್ನು ಹೇಳುವುದಿಲ್ಲ, ಹೇಳಬಾರದು. ದೃಷ್ಟಾಂತಕ್ಕಾಗಿ, ಸಂಸ್ಕೃತದಲ್ಲಿ ಪಾಣಿನಿಯ ಕಾಲದಿಂದಲೇ ಅಕಾರವು ಸಂವೃತವಾಗಿಯೂ ವಿವೃತವಾಗಿಯೂ ಉಚ್ಚಾರಗೊಳ್ಳುತ್ತಿತ್ತೆಂದು ಅವನ ಸೂತ್ರದಿಂದಲೇ ತಿಳಿಯುತ್ತದೆ. ಸಿದ್ಧಾಂತ ಕೌಮುದಿ ಬಾಲ ಮನೋರಮಾ ವ್ಯಾಖ್ಯಾನ ಸಹಿತ ಗ್ರಂಥದ ೧೨ನೆಯ ಪುಟದ ೧೧ನೆಯ ಸೂತ್ರವನ್ನು ನೋಡಬಹುದು. ಆದರೆ ಅಂತಹ ವ್ಯತ್ಯಸ್ತ ರೀತಿಯಲ್ಲಿ ಉಚ್ಚಾರಗೊಂಡ ಮಾತ್ರಕ್ಕೆ ಅರ್ಥವ್ಯತ್ಯಾಸವಾಗುವುದಿಲ್ಲವೆಂಬುದರಿಂದಲೇ ಅಂದಿನಿಂದ ಇಂದಿನ ವರೆಗೂ ಅಕಾರವೆಂಬ ವರ್ಣವನ್ನು ಹೇಳಿದ್ದಾರೆ. ಇಂದಿಗೂ ಕನ್ನಡದಲ್ಲಾಗಲಿ ಇತರ ಭಾಷೆಗಳಲ್ಲಾಗಲಿ ಅಕಾರವನ್ನು ಕೆಲವರು ಸಂವೃತವಾಗಿಯೂ, ಕೆಲವರು ವಿವೃತವಾಗಿಯೂ ಉಚ್ಚರಿಸುತ್ತಾರಾದರೂ ಅರ್ಥವ್ಯತ್ಯಾಸವಿಲ್ಲದ ಕಾರಣವೇ ಅಕಾರಗಳು ಭಿನ್ನ ಭಿನ್ನವೆಂದು ವ್ಯವಹಾರವಿಲ್ಲ. ಹೇಗೆಂದರೆ ಉತ್ತರ ಕರ್ನಾಟಕದಲ್ಲಿ ಹಾಗಿಲ್ಲದಿದ್ದರೂ ಕನ್ನಡದ ವರ್ಣಮಾಲೆಯಲ್ಲಿ ವ್ಯತ್ಯಾಸವಾಗಿಲ್ಲವಷ್ಟೆ. ಇದೇ ರೀತಿಯಲ್ಲಿ ಪ್ರತ್ಯೇಕ ವರ್ಣತ್ವವು ಸಿದ್ಧಿಸಬೇಕಾದರೆ, ಉಚ್ಚಾರದಲ್ಲಿ ವ್ಯತ್ಯಾಸವು ಕಾಣಿಸಿಕೊಂಡರೆ ಮಾತ್ರ ಸಾಲದು; ಅಂತಹ ವ್ಯತ್ಯಸ್ತೋಚ್ಚಾರದಿಂದ ಶಬ್ದದ ಅರ್ಥವೂ ಬದಲಾವಣೆಗೊಳ್ಳಬೇಕು. ಈ ತಳಹದಿಯಿಂದ ಮುಂದುವರಿದರೆ, ತುಳುವಿನಲ್ಲಿ ಕನ್ನಡದಲ್ಲಿರುವ ಉಕಾರಕ್ಕಿಂತ ಭಿನ್ನವಾದ ಆದರೆ ಅದಕ್ಕೆ ಸಮೀಪವಾದ ಒಂದು ಪ್ರತ್ಯೇಕ ಸ್ವರವಿದೆಯೇ? ಇದ್ದರೆ ಅದರ ಉಚ್ಚಾರದ ರೀತಿ ಹೀಗೆ? ಇತ್ಯಾದಿಗಳನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ತುಳುವಿನಲ್ಲಿ, ಹಿಂದೆಯೇ ಹೇಳಿದಂತೆ ಕನ್ನಡದಲ್ಲಿರುವ ಉಕಾರವು ಇದ್ದೇ ಇದೆ. ಕನ್ನಡಲ್ಲಿ ಅದನ್ನು ಹೇಗೆ ಉಚ್ಚರಿಸುತ್ತಾರೋ ತುಳುವಿನಲ್ಲಿಯೂ ಅದನ್ನು ಹಾಗೆಯೇ ಉಚ್ಚರಿಸುತ್ತಾರೆ. ‘ಉಪಕಾರ’ವನ್ನು ಸಂಸ್ಕೃತದಲ್ಲಿ ಉಚ್ಚರಿಸುವ ಹಾಗೆಯೇ ತುಳುವಿನಲ್ಲಿಯೂ ಉಚ್ಚರಿಸುತ್ತಾರೆ. ಸಂಸ್ಕೃತದ ಗುರು, ದುರುಕ್ತಿ, ಉರು ಮುಂತಾದ ಶಬ್ದಗಳಲ್ಲಿಯೂ, ಕನ್ನಡದ ಉಂಟು, ಉಪ್ಪು, ಮುಸುಡು ಮುಂತಾದ ಶಬ್ದಗಳಲ್ಲಿಯೂ ಕಂಡುಬರುವ ಉಕಾರವು ಆಯಾ ಭಾಷೆಗಳಲ್ಲಿ ಉಚ್ಚಾರಗೊಳ್ಳುವಂತೆಯೆ ತುಳುವಿನಲ್ಲಿಯೂ ಉಚ್ಚಾರಗೊಳ್ಳುವ ಉಕಾರವು ಈ ಭಾಷೆಯ ಉಂಡು, ಉಪ್ಪು, ಮುಸುಂಟು ಇತ್ಯಾದಿಗಳಲ್ಲಿ ಕಂಡು ಬರುತ್ತದೆ. ಈ ಉಕಾರಕ್ಕೆ ಬಹು ಸಮೀಪವಾಗಿ ಉಚ್ಚಾರಗೊಳ್ಳುವ ಇನ್ನೊಂದು ಸ್ವರವು ತುಳುವಿನಲ್ಲಿದೆಯೆಂದು ಹಿಂದೆ ಹೇಳಿದ ತುಳು ವ್ಯಾಕರಣಕಾರರಿಬ್ಬರೂ ಹೇಳುತ್ತಾರೆ. ಬ್ರಿಗೆಲ್‌ಅವರು ಇದನ್ನು ‘್’ ಈ ರೀತಿ ತೊರಿಸಿದ್ದರೆ. ಪಣಿಯಾಡಿಯವರು ‘ಉ್’ ಎಂದೆ ತೋರಿಸಿದ್ದಾರೆ. ಮೊದಲನೆಯವರು. ತೋರಿಸಿಕೊಟ್ಟ ಸ್ವರೂಪವು ಹೇಗೆಯೇ ಇದ್ದರೂ ಅದರ ಉಚ್ಚಾರವು ಉಕಾರಕ್ಕೆ ಸಮೀಪವೆಂದು ಅವರ ಅಭಿಪ್ರಾಯವಿದೆಯಷ್ಟೆ. ಮತ್ತಿನವರು ಅದರ ಸ್ವರೂಪವನ್ನು ತೋರಿಸಿದುದರಲ್ಲಿಯೇ ಅದು ಉಕಾರಕ್ಕೆ ಸಮೀಪವಾಗಿದೆಯೆಂದು, ಉಕಾರವನ್ನು ಬರೆದು ಅದರ ಮುಂದೆ ವ್ಯಂಜನಗಳನ್ನು ಸೂಚಿಸುವ ಚಿಹ್ನೆಯನ್ನು ಇರಗೊಡಿಸಿದುದರಿಂದ ಅರ್ಥವಾಗುತ್ತದೆ. ಆದರೆ  ಆ ಇಬ್ಬರೂ ಈ ವಿಶಿಷ್ಟ ಸ್ವರವನ್ನು ಸೇರಿಸಿ ಸಿದ್ಧವಾಗುವ ಪದಗಳನ್ನು ಮಳ್ತ್‌ದ್‌, ಮರ್ದ್‌‌ಡ್‌ ಇತ್ಯಾದಿಯಾಗಿ ವ್ಯಂಜನಾಂತ ಸ್ವರೂಪದಲ್ಲಿಯೇ ಇರಗೊಡಿಸಿದ್ದಾರೆ. ಇದರ ಬದಲಾಗಿ ಮಳ್ತ್‌ದ್‌ ಮರ್ದ್‌‌ಡ್‌ ಇತ್ಯಾದಿ ರೂಪಗಳನ್ನು ಇರಿಸುತ್ತಿದ್ದರೆ ಹೆಚ್ಚು ಸಮರ್ಪಕವಾಗುತ್ತಿತ್ತು. ಒಂದು ಬಗೆಯಲ್ಲಿ ತರ್ಕ ಹೂಡಿದರೆ ಆ ಉಕಾರಗಳೆಲ್ಲ ಸ್ವತಂತ್ರವಾಗಿ ಪ್ರತ್ಯೇಕವಾಗಿರುವ ಒಂದು ವ್ಯಂಜನವನ್ನು ಒಂದು ಮಾತ್ರಾಕಾರದಲ್ಲಿ ಉಚ್ಚರಿಸುವಾಗ ಹೇಗೆ ಹೆಳುತ್ತೇವೋ ಹಾಗೆಯೇ ಉಚ್ಚಾರಗೊಳ್ಳುತ್ತವೆ ಎಂಬ ಕಾರಣದಿಂದ ಆ ಚಿಹ್ನೆಯನ್ನು ಹಾಕಿದುದು ತಪ್ಪಲ್ಲ ಎನ್ನಬಹುದು. ಆದರೆ ಸಂಯುಕ್ತಾಕ್ಷರಗಳಲ್ಲಿ ಹಾಗೆ ತೋರಿಸಿದರೆ ನಮ್ಮ ಸಹಜ ಪ್ರವೃತ್ತಿಯಂತೆ ಪೂರ್ವವ್ಯಂಜನವನ್ನು ಉತ್ತರ ವ್ಯಂಜನದೊಡನೆ ಸೇರಿಸಿ ಉಚ್ಚರಿಸಿಬಿಡುತ್ತೇವೆ. ಆಗ ಅದರೆ ಸಹಜೋಚ್ಚಾರವು ತಪ್ಪಿಹೋಗುತ್ತದೆ. ಅವರು ಬಳಸಿದ ಚಿಹ್ನೆ ಯಾವುದೇ ಇರಲಿ. ಅವರಿಬ್ಬರೂ ‘ಉಕಾರಕ್ಕೆ ಸಮಿಪದ ಸ್ವರವೊಂದಿದೆ; ಈ ಸ್ವರ ಸಂಯೋಗದಿಂದ ಶಬ್ದದ ಅರ್ಥದಲ್ಲಿ ವ್ಯತ್ಯಾಸವೂ ಕಾಣುತ್ತದೆ’ ಎಂದು ತೋರಿಸಿಕೊಟ್ಟಿರುವುದು ಸಮುಚಿತವೇ ಆಗಿದೆ. ಈ ಸ್ವರವನ್ನು ತುಳುವಿನಿಂದ ಕಳೆದು ಹಾಕಿದರ, ಆ ಭಾಷೆಯ ವೈಶಿಷ್ಟ್ಯವೇ ನಷ್ಟವಾಗುತ್ತದೆ. (ವಿಶಿಷ್ಟ ಸ್ವರವನ್ನು ‘ಉ’ ಎಂದು ಉಕಾರದ ಮೇಲೆ ಒಂದು ಬಿಂದುವನ್ನು ಹಾಕಿ ಸೂಚಿಸಿದರೆ ತುಳು ಭಾಷೆಯನ್ನು  ಓದಿ ತಿಳಿಯುವವರಿಗೆ ಹೆಚ್ಚು ಅನುಕೂಲವಾಗಬಹುದು. ಇಲ್ಲಿ ಪ್ರಕೃತ ಈ ಸ್ವರವನ್ನು ‘ಉ’ ಎಂದೆ ತೋರಿಸಲಾಗುವುದು) ತುಳುವಿನಲ್ಲಿ ಬಚ್ಚುಂಡು = ಆಯಾಸವಾಗುತ್ತದೆ; ತಿನ್ಪುಂಡು = ತಿನ್ನುತ್ತದೆ; ಇತ್ಯಾದಿಗಳಲ್ಲಿ ಉಕಾರವೇ ಉಚ್ಚರಿಸಲ್ಪಡುತ್ತಾರಾದರೆ, ಬಚ್ಚುದುಪೋಂಡು = ಆಯಾಸವಾಗಿ ಹೋಯಿತು; ತಿಂದುಂಡು = ತಿಂದಿತು; ಇತ್ಯಾದಿಗಳಲ್ಲಿ ಉಕಾರವು ಉಚ್ಚಾರಗೊಳ್ಳುತ್ತದೆ. ಈ ಉಚ್ಚಾರ ವ್ಯತ್ಯಾಸದಿಂದ ಆಯಾ ಶಬ್ದದ ಅರ್ಥದಲ್ಲಿ ವ್ಯತ್ಯಾಸವಾಗುವುದನ್ನು ಗುರುತಿಸಬಹುದು.

ಇದಕ್ಕಿಂತಲೂ ಸ್ಪಷ್ಟವಾಗಿ ಎರಡು ಬಗೆಯ ಉಕಾರಗಳು ಉಚ್ಚಾರವಾಗುವುದನ್ನು ಈ ಕೆಳಗಣ ಯುಗ್ಮಗಳಲ್ಲಿ ಕಾಣಬಹುದು :-

ಕೆರು = ಕೊಂದೀತು            ಕೆರು = ಕೊಲ್ಲು

ತಿನು = ತಿಂದೀತು  ತಿನು = ತಿನ್ನು

ನಡು = ಮಧ್ಯ                 ನಡು = (ಸಸ್ಯವನ್ನು) ಊರು

ಇಲ್ಲಿ ಮೊದಲೆರಡು ಯುಗ್ಮಗಳಲ್ಲಿ ಸಂಭಾವನಾ ಕ್ರಿಯೆಯಲ್ಲಿ ಉಕಾರವೂ, ವಿಧ್ಯರ್ಥದಲ್ಲಿ ಉಕಾರವೂ ಇರುವುದು ಸುಸ್ಪಷ್ಟ. ಕೊನೆಯ ಯುಗ್ಮದಲ್ಲಿ ನಾಮಪದದಲ್ಲಿ ಉಕಾರವೂ, ವಿದ್ಯರ್ಥದಲ್ಲಿ ಉಕಾರವೂ ಗೋಚರಿಸುತ್ತದೆ. ಹೀಗೆ ಉಚ್ಚಾರ ಭೇದದಿಂದ ಅರ್ಥವೇ ವ್ಯತ್ಯಾಸಗೊಳ್ಳುವಾಗ ಉಕಾರವೆಂಬ ಒಂದು ಸ್ವರವೂ, ಉಕಾರವೆಂಬ ಇನ್ನೊಂದು ಸ್ವರವೂ ತುಳುವಿನಲ್ಲಿ ವೆಯೆಂದು ಒಪ್ಪಿಕೊಳ್ಳದೆ ಗತ್ಯಂತರವಿಲ್ಲ. ಆದರೆ ಪಣಿಯಾಡಿ ಯವರೆಂದಂತೆ ಈ ‘ಉ’ ಕಾರಕ್ಕೆ ದೀರ್ಘ ರೂಪವು ಸಹಜವಾಗಿ ಇಲ್ಲ. ಏಕೆಂದರೆ ಈ ಸ್ವರದ ದೀರ್ಘರೂಪವು ಸೇರಿ ಸಿದ್ಧವಾಗುವ ಶಬ್ದವು ತುಳುವಿನಲ್ಲಿಲ್ಲ. ಆಡುವಾಗ ಈ ಉಕಾರಕ್ಕೆ ದೀರ್ಘರೂಪವನ್ನು ಕೊಡುವವರಿದ್ದರೂ, ಇಂತಹ ಉಚ್ಚಾರ ವ್ಯತ್ಯಾಸದಿಂದ ಅರ್ಥದಲ್ಲಿ ಏನೂ ಬದಲಾವಣೆಯಾಗುವುದಿಲ್ಲವಾದುದರಿಂದ ಇದಕ್ಕೆ ದೀರ್ಘತ್ವವಿಲ್ಲ ಎಂದೇ ಸಿದ್ಧವಾಗುತ್ತದೆ.

ಈ ‘ಉ’ಕಾರವನ್ನು ಹೇಗೆ ಉಚ್ಚರಿಸಬೇಕೆಂದು ತುಳುವರೆಲ್ಲರೂ ಬಲ್ಲರಾದರೂ ಉಳಿದವರಿಗೆ ಈ ವಿಷಯ ಅವಶ್ಯವಾಗಿದೆ. ಸಂಸ್ಕೃತದ ಕೃಪೆ, ಕೃಷ್ಣ ಮುಂತಾದ ಶಬ್ದಗಳನ್ನು ಕೆಲವರು ಕ್ರುಪೆ, ಕ್ರುಷ್ಣ ಎಂಬಂತೆಯೂ, ಇನ್ನು ಕೆಲವರು ಕ್ರಿಪೆ, ಕ್ರಿಷ್ಣ ಎಂಬಂತೆಯೂ ಉಚ್ಚರಿಸುವುದನ್ನು ಕೇಳಬಹುದು. ಸಹಜವಾಗಿ ಋಕಾರ ಸೇರಿದ ಶಬ್ದವೆಂದು ಈ ಎರಡು ವರ್ಗದವರ ಉಚ್ಚಾರದಲ್ಲಿಯೂ ಕಾಣುವಂತಿಲ್ಲ. ಋಕಾರವೇ ಸೇರಿದ ಶಬ್ದವೆಂದು ತಿಳಿದು ಸರಿಯಾಗಿ ಉಚ್ಚರಿಸುವಲ್ಲಿ ‘ಕೃ’ ಎಂಬುದನ್ನು ಉಚ್ಚರಿಸುವಾಗ ಯಾವ ಉಕಾರದ ಛಾಯೆಯಿದ್ದಂತೆ ಕೇಳಬಹುದೋ, ಅದೇ ತುಳುವಿನ ವಿಶಿಷ್ಟವಾದ ‘ಉ’ ಕಾರವಾಗಿದೆ. ಇನ್ನೊಂದು ಬಗೆಯಲ್ಲಿ ಹೇಳುವುದಿದ್ದರೆ ಇದು ಅನೌಷ್ಠ್ಯ ಉಕಾರವೆಂದು ಹೇಳಬಹುದು. ಕನ್ನಡದಲ್ಲಿಯೂ ಕೆಲಕೆಲವರ ಉಚ್ಚಾರದಲ್ಲಿ ಉಕಾರಕ್ಕೆ ಅನೌಷ್ಠ್ಯತ್ವವು ಕಾಣಲೂಬಹುದು. ಉದಾಹರಣೆಗೆ ಕುಂದಾಪುರದ ಕಡೆಯಲ್ಲಿಯೂ ಮಂಗಳೂರು ಮುಂತಾದ ಪ್ರದೇಶದ ಕೋಟದವರಲ್ಲಿಯೂ ಪದಾಂತದಲ್ಲಿ (ಕೆಲವೆಡೆ ಪದಮಧ್ಯದಲ್ಲಿ ಕೂಡ) ಬರುವ ಉಕಾರವನ್ನು ಅನೌಷ್ಠ್ಯವಾಗಿ ಉಚ್ಚರಿಸುವುದು ಕೇಳಬರುತ್ತದೆ- ಅಕ್ಕು (ಆದೀತು), ಹೋಕ್ಕು (=ಹೋಗಬೇಕು), ಬತ್ತು (=ಬರುತ್ತದೆ) ಮರುಕ (=ಸಂಕಟ) ನಡುಗು ಇತ್ಯಾದಿಗಳೆಲ್ಲಲ್ಲ ಉಕಾರವು ಕೊನೆಗೋ ಮಧ್ಯಕ್ಕೋ ಇದ್ದರೂ ಉಚ್ಚಾರದಲ್ಲಿ ಆ ರೀತಿಯಿಲ್ಲದೆ ಅನೌಷ್ಠ್ಯವಾಗಿದೆ. ಈ ರೀತಿ ಉಚ್ಚಾರದಲ್ಲಿ ಧ್ವನಿ ಬೇರೆಯಾಗಿದೆಯೆಂಬುದರಲ್ಲಿ ಅಲ್ಲಿ ಅರ್ಥವ್ಯತ್ಯಾಸವಿಲ್ಲದ ಕಾರಣ, ಅದನ್ನು ಬೇರೆ ವರ್ಣವೆಂದು  ಪರಿಗಣಿಸುವುದಿಲ್ಲ. ತಮಿಳಿನಲ್ಲಿ ಇದನ್ನು ಅರ್ಧ ಉಕಾರವೆಂದು ವ್ಯವಹರಿಸುವ ವಿಷಯವನ್ನು ಪಣಿಯಾಡಿಯವರು ತಿಳಿಸಿದ್ದಾರಾದರೂ ಅಲ್ಲಿಯೂ ಅದು ಅರ್ಥ ವ್ಯತ್ಯಾಸವನ್ನು ತಂದೊಡ್ಡುವುದಿಲ್ಲ, ಹಾಗೆಂದು ಅರ್ಧ ಉಕಾರವು ಅರ್ಧ ಉಕಾರವಾಗಿಯೆ ಉಚ್ಚರಿಸಲ್ಪಡುತ್ತದೆ. ಬರೆಹದಲ್ಲಿ ಉಕಾರವೆಂಬ ಒಂದು ಪ್ರತ್ಯೇಕ ವರ್ಣವಿಲ್ಲದ ಉಕಾರವೇ ಇದ್ದು, ಈ ಅರ್ಧ ಉಕಾರವೆಂದು ವ್ಯವಹೃತವಾಗುವುದಕ್ಕೆ,  ವರ್ಣವ್ಯವಸ್ಥೆಯ ದೃಷ್ಟಿಯಿಂದ ಭಿನ್ನವರ್ಣತ್ವವಿಲ್ಲವೆಂದೇ ಸಿದ್ಧವಾಗುತ್ತದೆ. ಅನ್ಯಭಾಷೆಯವನು ಚಾಕ್ಷುರೂಪವನ್ನು ನೋಡಿ ಇದ್ದಂತೆಯೇ ಉಕಾರವಾಗಿ ಉಚ್ಚರಿಸಿದರೆ ತಮಿಳರ ಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಅಷ್ಟೆ ಹೊರತು, ಅದು ಭಿನ್ನವರ್ಣವೆಂದು ವ್ಯವಹೃತವಾಗುವಂತಿಲ್ಲ. ಆದರೆ ತುಳುವಿನಲ್ಲಿ, ಅರ್ಥವ್ಯತ್ಯಾಸವನ್ನು ತಂದೊಡ್ಡುವ, ತಮಿಳಿನ ಅರ್ಧ ಉಕಾರದಂತೆ ಉಚ್ಚಾರಗೊಳ್ಳುವ, ಒಂದು ಸ್ವರವಿದೆಯೆಂದು ಒಪ್ಪಿಕೊಳ್ಳಲೇಬೇಕು. ಇದನ್ನೆ ಸದ್ಯಕ್ಕೆ ‘ಉ’ಕಾರವೆಂದು ಸಂಜ್ಞೆಯಿಂದ ತೋರಿಸಬಹುದು.

ಇದೇ ರೀತಿಯಲ್ಲಿ ತುಳುವಿನಲ್ಲಿ  ‘ಎ’ ಕಾರವೊಂದಿದೆಯೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಪಣಿಯಾಡಿಯವರು ಇದನ್ನು ‘ಎ್‌’ ಎಂದು ಬರೆದು ತೋರಿಸಿ ಉದಾಹರಣೆಗಳನ್ನು ಕೊಟ್ಟಿದ್ದಾರೆ. ಬ್ರಿಗೆಲ್‌ ಅವರು ಇದರ ಪ್ರಸ್ತಾಪವನ್ನೆ ಎತ್ತದೆ ಬಿಟ್ಟಿದ್ದಾರೆ. ಅವರಿಗೆ ಇದು ಏಕೆ ಗಮನಕ್ಕೆ ಬರಲಿಲ್ಲವೋ ತಿಳಿಯದು. ಕನ್ನಡದಲ್ಲಿಯೂ ‘ಎ’ ಕರಾದ ಉಚ್ಚಾರದಲ್ಲಿ ವ್ಯತ್ಯಾಸವನ್ನು ಕಾಣುತ್ತೇವೆ ಎಂಬುದಕ್ಕೆ ಕವಿರಾಜಮಾರ್ಗದಲ್ಲಿ ಬರುವ ಈ ಕೆಳಗಣ ಒಂದು ಪದ್ಯವನ್ನೇ ನೋಡಿಕೊಂಡರೆ ಸಾಕು :-

‘ಅದಱೊಳಗಂ ಕಿಸುವೊೞಲಾ
ವಿದಿತಮಹಾಕೊಪಣನಗರದಾ ಪುಲಿಗೆಱೆಯಾ
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್‌’

ಇಲ್ಲಿ ಬರುವ ‘ನಾಡೆ’ ಎಂಬೆರಡು ಪದಗಳೂ ಒಂದೇ ರೀತಿಯಲ್ಲಿ ಬರೆಯಲ್ಪಡುವುದಾದರೂ, ಇವೆರಡರ ಉಚ್ಚಾರದಲ್ಲಿ ವ್ಯತ್ಯಾಸವಿದೆಯೆಂದು ಕನ್ನಡಿಗರೆಲ್ಲ ಬಲ್ಲರು. ಮೊದಲನೆಯ ‘ನಾಡೆ’ ಎಂಬುದು ದೇಶಾರ್ಥದ ‘ನಾಡು’ ಎಂಬ ಶಬ್ದಕ್ಕೆ ಅವಧಾರಣಾರ್ಥದ ‘ಎ’ ಎಂಬ ಸ್ವರವು ಸೇರಿ ಸಿದ್ಧವಾದುದು; ಮತ್ತಿನದು ಆಧಿಕ್ಯಾರ್ಥವನ್ನು ಕೊಡುವ ಕನ್ನಡದ ಅವ್ಯಯಶಬ್ದವು. ಇವೆರಡನ್ನು ಒಂದೇ ಬಗೆಯಲ್ಲಿ ಉಚ್ಚರಿಸುವುದರಿಂದ ಇವುಗಳೊಳಗಿನ ಅಭಿಪ್ರಾಯ ವ್ಯತ್ಯಾಸವನ್ನು ತಿಳಿಯಲು ಸಾಧ್ಯವಿಲ್ಲವೆಂದಿದ್ದರೂ ಲಿಪಿರೂಪದಲ್ಲಿ ಕನ್ನಡಿಗರು ಯಾವ ವ್ಯತ್ಯಾಸವನ್ನು ಕಾಣಿಸಿಲ್ಲವಷ್ಟೆ. ಇದೆ ರೀತಿ ಸಂಸ್ಕೃತದಲ್ಲಿ ಉದಾತ್ತಾನುದಾತ್ತ ಸ್ವರಿತ ಭೇದಗಳಿವೆಯೆಂಬುದನ್ನು ಎಲ್ಲ ಸಂಸ್ಕೃತಜ್ಞರೂ ಬಲ್ಲರು. ಇಂತಹ ಉಚ್ಚಾರಭೇದದಿಂದ ಅರ್ಥವೇ ವ್ಯತ್ಯಾಸವಾಗುವುದೆಂದು ‘ಇಂದ್ರಸ್ಯ ಶತ್ರು’ ವೈದಿಕ ಸೂಕ್ತದ ವಿಷಯಕವಾದ ಕಥೆಯಿಂದ ಸಾಧಿಸುತ್ತಾರೆ. ಆದರೂ ಅನಂತರದ ಸಂಸ್ಕೃತ ಸಾಹಿತ್ಯದಲ್ಲಿ ಅವುಗಳನ್ನು ಪ್ರತ್ಯೇಕಿಸಿ ತೋರಿಸುವ ಚಿಹ್ನೆಯಾಗಲೀ, ಉಚ್ಚಾರ ವ್ಯತ್ಯಾಸವಾಗಲೀ ಇದ್ದಂತೆ ಕಂಡುಬರುವುದಿಲ್ಲವೆಂಬುದರಿಂದಲೇ ಅಂತಹ ಧ್ವನಿ ಭೇದಗಳಾಗುವಲ್ಲಿ ಅವುಗಳಿಗೆ ಬೇರೆ ವರ್ಣತ್ವವನ್ನು ಹೇಳಿಲ್ಲ. ಇದರಂತೆ ತುಳುವಿನಲ್ಲಿಯೂ ಬೇರೆ ಒಂದು ಸ್ವರವನ್ನು ಹೊಸತಾಗಿ ಸೇರಿಸಿಕೊಳ್ಳಲು ಅಗತ್ಯವಿಲ್ಲ ಎಂದೇ ತೋರಬಹುದು. ಆದರೆ ಹಿಂದೆಯೇ ಹೇಳಿದಂತೆ, ಉಚ್ಚಾರ ವ್ಯತ್ಯಾಸದಿಂದ ಅರ್ಥವೇ ವ್ಯತ್ಯಸಗೊಳ್ಳುವುದಿದ್ದರೆ, ಅದನ್ನು ಪ್ರತ್ಯೇಕ ವರ್ಣವೆಂದು ತೋರಿಸಿಕೊಡದಿದ್ದರೆ ಆ ಭಾಷೆಯನ್ನು ಓದುವವರಿಗೆ ಪ್ರಯಾಸವಾಗದಿರದು.

ತುಳುವಿನಲ್ಲಿ ‘ಪೋಯೆ’ ‘ಬರ್ಪೆ’ ಮುಂತಾದ ಕ್ರಿಯಾಪದ ರೂಪಗಳಿವೆ. ಇವುಗಳಲ್ಲಿ ಬರುವ ಕೊನೆಯ ‘ಎ’ ಕಾರವನ್ನು ಕನ್ನಡದೆ ನೆಲೆ, ಎಲೆ (ಪತ್ರ) ಕೆರೆ ಮುಂತಾದ ಶಬ್ದಗಳ ಮತ್ತು ತುಳುವಿನ ನಿಲೆ, ಇರೆ, ಕೆದು ಮುಂತಾದ ಶಬ್ದಗಳ ‘ಎ’ ಕಾರವನ್ನು ಉಚ್ಚರಿಸುವಂತೆ ಉಚ್ಚರಿಸಿದರೆ ಉತ್ತಮ ಪುರುಷದ ಏಕವಚನ ಸ್ವರೂಪದಾಗುತ್ತದೆ. ಇದರ ಬದಲಾಗಿ ನಾಡೆ (ಆಧಿಕ್ಯಾರ್ಥ) ಆತನೆ ಇತ್ಯಾದಿಗಳಲ್ಲಿ ಬರುವ ಅವಧಾರಣಾರ್ಥಕ ‘ಎ’ ಕಾರದಿಂದ ಕೂಡಿಕೊಂಡಂತೆ ಉಚ್ಚರಿಸಿದರೆ ಪುಲ್ಲಿಂಗ ಪ್ರಥಮ ಪುರುಷದ ಏಕ ವಚನ ಸ್ವರೂಪವು ಸಿದ್ಧವಾಗುತ್ತದೆ. ಈ ಎರಡು ಬಗೆಯ ಉಚ್ಚಾರದಲ್ಲಿ ಮೊದಲಿನದನ್ನು ಅನುದಾತ್ತ ‘ಎ’ ಕಾರವೆಂದೂ, ಮತ್ತಿನದನ್ನು ಉದಾತ್ತ ‘ಎ’ ಕಾರವೆಂದೂ ಗ್ರಹಿಸಿ ಓದಿದರೆ ದೋಷವಿಲ್ಲ ದಂತಾಗುತ್ತದೆ. ಲಿಂಗಪುರುಷ ವ್ಯತ್ಯಾಸವನ್ನು ಇಷ್ಟು ಸ್ಫುಟವಾಗಿ ಕಾಣಿಸುವ ‘ಎ’ ಕಾರವನ್ನು ಒಂದೇ ಚಾಕ್ಷುಷ ರೂಪದಿಂದ ಕಾಣಿಸಿದರೆ ಓದುವವನಿಗೆ ತೊಡಕಾಗದೆ ಇರಲಾರದೆಂಬುದರಿಂದ ಅನುದಾತ್ತ ‘ಎ’ ಕಾರವನ್ನು ‘ಎ’ ಎಂದೂ ಉದಾತ್ತ ‘ಎ್’ ಎಂದೂ ಬರೆದು ಮುದ್ರಿಸಿದರೆ ಅನುಕೂಲವಾದೀತು.

(i) ಏನು ಪೋಯೆ (ನಾನು ಹೋದೆನು)

(ii) ಆಯೆ ಪೋಯೆ (ಅವನು ಹೋದನು)

(ಮೇಲಿನ ಉದಾಹರಣೆಗಳಲ್ಲಿ ಏನು ಎಂಬುದನ್ನು ಯಾನು ಎಂದೂ ಉಚ್ಚರಿಸುತ್ತಾರೆ ಕೆಲವರು) ಈ ರೀತಿ ಅರ್ಥವ್ಯತ್ಯಾಸವಾಗುವ ಕಾರಣ ಎರಡು ಬಗೆಯ ಎಕಾರಗಳನ್ನು ತುಳುವಿನಲ್ಲಿ ಇಟ್ಟುಕೊಳ್ಳಲೇಬೇಕು.

ಪಣಿಯಾಡಿಯವರು ಉದಾತ್ತ ಎಕಾರವನ್ನು ‘ಎ’ ಎಂದೂ, ಅನುದಾತ್ತ ಎಕಾರವನ್ನು ‘ಎ್’ ಎಂದೂ ತೊರಿಸಿದ್ದಾರೆ. ಒಂದು ಬಗೆಯಲ್ಲಿ ಇದು ಸಮಂಜಸವೆಂದು ತೋರಬಹುದಾದರೂ, ಉತ್ತಮ ಪುರಷ್ಯೆಕವಚನದ ಕ್ರಿಯಾಪದದಲ್ಲಿ ಬರುವ ಎಕಾರವು ಕನ್ನಡದ ಮನೆ, ನೆರೆ ಇತ್ಯಾದಿಗಳಲ್ಲಿ ಬರುವ ಎಕರಾದಂತೆಯೇ ಉಚ್ಚಾರವಾಗುವುದರಿಂದ ಇದನ್ನು ಇದ್ದ ಸ್ವರೂಪದಲ್ಲಿಯೆ ಇಟ್ಟು, ಪುಲ್ಲಿಂಗ ಪ್ರಥಮ ಪುರುಷೈಕವಚನ ಸ್ವರೂಪದ ‘ಎ’ ಕಾರವನ್ನು ಭಿನ್ನ ಸ್ವರೂಪದಿಂದ ತೋರಿಸಿದರೆ ಮಾತ್ರ ಅನುಕೂಲವಾದೀತು. ಇಲ್ಲವಾದರೆ ತುಳುವಿನ ಎಕಾರಯುಕ್ತ ಪದಗಳನ್ನೆಲ್ಲ ರೂಢಿ ಉಚ್ಚಾರಕ್ಕಿಂತ ಭಿನ್ನವಾಗಿ ಉಚ್ಚರಿಸಬೇಕಾದ ಅನುಚಿತ ಕ್ರಮವು ರೂಢವಾಗಬಹುದು. ಹಿಂದೆಯೆ ಹೇಳಿದಂತೆ ಉದಾತ್ತವಾಗಿ ಉಚ್ಚಾರಗೊಳ್ಳುವ, ಪ್ರಥಮ ಪುರುಷೈಕವಚನ ಕ್ರಿಯಾಪದದಲ್ಲಿ ಬರುವ ಎಕಾರವನ್ನು ಮಾತ್ರ ‘ಎ’ ಎಂದು ತೋರಿಸುವುದೇ ವಿಹಿತ.

ಎಕಾರದ ಉದಾತ್ತಾನುದಾತ್ತವೆಂಬೆರಡು ಉಚ್ಚಾರ ಭೇದಗಳು ರೂಢಿಯಲ್ಲಿ ಹ್ರಸ್ಟ ಎಕಾರಕ್ಕೆ ಮಾತ್ರ ಇವೆ. ದೀರ್ಘವಾದಲ್ಲಿ ಈ ಬೇದವಿಲ್ಲದಿರುವುದರಿಂದ ವರ್ಣವ್ಯವಸ್ಥೆಯಲ್ಲಿ ದೀರ್ಘ ‘ಏ’ ಕಾರಕ್ಕೆ ಎರಡು ರೂಪಗಳನ್ನು ಹೇಳುವುದು ಸರಿಯೆನಿಸದು.

‘ಕನ್ನಡ ವರ್ಣಗಳು’ ಎಂಬ ಪುಸ್ತಕದಲ್ಲಿ ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಕನ್ನಡದಲ್ಲಿ ಐ ಮತ್ತು ಔ ಎಂಬ ಸ್ವರಗಳು ಸಹಜವಾಗಿ ಇಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ತುಳುವಿನಲ್ಲಿಯೂ ಈ ಎರಡು ಸ್ವರಗಳು ಸಹಜವಾಗಿ ಇಲ್ಲ. ತುಳುವಿನಲ್ಲಿ ಕಯ್‌ಎಂದರೆ ಹಸ್ತ. ಕೆಯ್‌ಎಂದರೆ ಬತ್ತದ ಗಿಡ; ಮಯ್‌ ಎಂದರೆ ಕಾಡಿಗೆ, ಮೆಯ್‌ಎಂದರೆ ದೇಹ; ಎಯ್ಪಂಜಿ ಎಂದರೆ ಮುಳ್ಳು ಹಂದಿ, ಅಯ್ನು ಎಂದರೆ ಪಂಚ ಎಂಬರ್ಥದ ಸಂಖ್ಯಾವಾಚಕ. ಹೊಸಗನ್ನಡದಲ್ಲಿ ಈ ಯಕಾರಯುಕ್ತವಾದ ಇಂತಹ ಶಬ್ದಗಳನ್ನು ಐ ಎಂಬ ಒಂದೇ ಬಗೆಯಲ್ಲಿ ಬರೆಯುತ್ತಾರೆ, ಓದುತ್ತಾರೆ ಕೂಡ. ಮೇಲಿನ ಉದಾಹರಣೆಗಳಿಂದ ತುಳುವಿನಲ್ಲಿ ಐ ಎಂಬುದಿಲ್ಲದೆ ಅಯ್‌ಮತ್ತು ಎಯ್‌ಎಂಬ ರೂಪಗಳಿವೆಯೆಂಬುದು ಸ್ಪಷ್ಟವಾಗುತ್ತದೆ. ಪಣಿಯಾಡಿಯವರೂ ಐ ಮತ್ತು ಔಗಳು ತುಳುವಿನಲ್ಲಿಲ್ಲವೆಂದು ಹೇಳಿ, ಮುಂದೆ ಮಾತ್ರ ಅನ್ಯಭಾಷಾ ಶಬ್ದಗಳನ್ನೂ ಉಪಯೋಗಿಸುವಲ್ಲಿ ಇದೆಯೆಂದೂ ತಿಳಿಸಿದ್ದಾರೆ. ಔ ಎಂಬುದು ತುಳುವಿನಲ್ಲಿ ಅವು ಎಂಬ ರೂಪದಲ್ಲಿರುವುದಲ್ಲದೆ ಒವು ಎಂಬ ರೂಪದಲ್ಲಿಯೂ ಕಂಡುಬರುತ್ತದೆ. ಈ ಒವು ಎಂಬುದನ್ನು ಕೆಲವರು ಎವು ಎಂದೂ ಉಚ್ಚರಿಸುವುದಿದೆ. ಹಾಗಿದ್ದರೂ ತುಳುವಿನಲ್ಲಿ ಔ ಎಂಬ ಸ್ವರವಿಲ್ಲವೆಂದು ನಿರ್ಧರಿಸಬಹುದು.

ಈ ಬಗೆಯಲ್ಲಿ ತುಳುವಿನ ಸ್ವರಮಾಲೆಯಲ್ಲಿ ಈ ಕೆಳಗಣ ಸ್ವರಗಳಿವೆಯೆಂದು ಇಟ್ಟುಕೊಳ್ಳಬೇಕು :-

ಅ ಆ, ಇ, ಈ, ಉ, ಉ, ಊ, ಎ, ಎ, ಐ, ಏ, ಒ, ಓ

ಈ ಹನ್ನೆರಡು ಸ್ವರಗಳು ಇಂದು ವ್ಯವಹಾರದಲ್ಲಿರುವ ತುಳುವಿನಲ್ಲಿ ಬಳಕೆಯಲ್ಲಿವೆ.

೨. ವ್ಯಂಜನಗಳು

ರೆವ. ಬ್ರಿಗೆಲ್ ಎಂಬವರು ಬರೆದು ೧೮೭೨ರಲ್ಲಿ ಮಂಗಳೂರಿನ ಬಾಸೆಲ್‌ಮಿಶನ್‌ಮುದ್ರಣಾಲಯದಲ್ಲಿ ಪ್ರಕಟಿಸಿದ A Grammar of the Tulu Language  ಎಂಬ ಪುಸ್ತಕದಲ್ಲಿ ತುಳುವಿನಲ್ಲಿ ಈ ಕೆಳಗಣ ವ್ಯಂಜನಗಳಿವೆಯೆಂದು ತಿಳಿಸಿದ್ದಾರೆ :-

ವರ್ಗೀಯ ವ್ಯಂಜನಗಳು (೨೫)

ಕ   ಖ   ಗ    ಘ   ಙ
ಚ   ಛ   ಜ   ಝ   ಞ
ಟ   ಠ   ಡ   ಢ    ಣ
ತ   ಥ   ದ   ಧ   ನ
ಪ   ಫ   ಬ   ಭ   ಮ

ಅವರ್ಗೀಯ ವ್ಯಂಜನಗಳು (೯)

ಯ   ರ   ಲ   ವ   ಶ   ಷ   ಸ   ಹ   ಳ

ಅನಂತರ ೧೯೩೨ರಲ್ಲಿ ಶ್ರೀ ಎಸ್. ಯು. ಪಣಿಯಾಡಿಯವರು ಬರೆದು ಉಡುಪಿ ತುಳುನಾಡು ಛಾಪಖಾನೆಯಲ್ಲಿ ಪ್ರಕಟಿಸಿದ ತುಳು ಭಾಷೆಯಲ್ಲಿರುವ ‘ತುಳು ವ್ಯಾಕರಣ’ ಎಂಬ ಪುಸ್ತಕದಲ್ಲಿ ತುಳು ಭಾಷೆಯ ವ್ಯಂಜನಗಳೆಂದು ಕೆಳಗಿನವುಗಳನ್ನು ಕೊಟ್ಟಿದ್ದಾರೆ :-

ಕ   ಗ   ಙ
ಚ   ಜ   ಞ
ಟ   ಡ   ಣ
ತ   ದ   ನ
ಪ   ಬ   ಮ
ಯ  ರ   ಲ   ವ   ಸ   ಹ   ಳ   ಱ   ೞ

ಒಟ್ಟು ಇಪ್ಪತ್ತನಾಲ್ಕು ವ್ಯಂಜನಗಳೂ (ಈ ಪ್ರಕ್ರಮದಲ್ಲಿ ಅವರು ಕೊಟ್ಟಿಲ್ಲ)

ಇವರಿಬ್ಬರ ವ್ಯಂಜನಮಾಲೆಗಳನ್ನು ತುಲನೆ ಮಾಡಿ ನೋಡಿದರೆ, ಬ್ರಿಗೆಲ್ಲರು ಸಂಸ್ಕೃತದ ವ್ಯಂಜನಗಳನ್ನು ಅಂಗೀಕರಿಸಿಕೊಂಡಿದ್ದಾರೆಂದೂ ಪಣಿಯಾಡಿಯವರು ಹೆಚ್ಚಿನ ಮಟ್ಟಿಗೆ ದ್ರಾವಿಡ ವ್ಯಂಜನಗಳನ್ನು ಮಾತ್ರ ಒಪ್ಪಿಕೊಂಡಿದ್ದಾರೆಂದೂ ಅವಗತವಾಗದಿರದು. ಕನ್ನಡದಲ್ಲಿಯೂ ಇಂದು ಸಾಮಾನ್ಯವಾಗಿ ಬ್ರಿಗೆಲ್ಲರು ಹೇಳಿರುವ ವ್ಯಂಜನಗಳನ್ನೇ ಕಾಣುತ್ತೇವೆ. ಆದರೆ ಭಾಷಾಶಾಸ್ತ್ರಜ್ಞರು, ಕೆಲವು ವ್ಯಂಜನಗಳು ದ್ರಾವಿಡ ಭಾಷೆಗಳಿಗೆ ಸಹಜಗಳಲ್ಲ ; ಅನ್ಯಭಾಷಾ ಶಬ್ದಗಳನ್ನು ಪ್ರಯೋಗಿಸುವಲ್ಲಿ ಅವುಗಳ ಬಳಕೆಯಾಗುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ಈ ದೃಷ್ಟಿಯಿಮದ ಮಹಾಪ್ರಾಣಾಕ್ಷರ ರಹಿತವಾದ ವರ್ಗೀಯ ವ್ಯಂಜನಗಳು ಹದಿನೈದೇ ಇರುವುದೆಂದು ಪಣಿಯಾಡಿಯವರು ಹೇಳಿದುದು ಸಮಂಜಸವಾಗಿದೆ. ಕನ್ನಡ ವರ್ಣಮಾಲೆಯಲ್ಲಿ ಮಹಾಪ್ರಾಣಾಕ್ಷರಗಳು ಸಹಜವಾಗಿಯೇ ಇವೆಯೆಂದು (ಒಳವು ಮಹಾಪ್ರಾಣಂಗಳ್ ವಿಳಸತ್ಕರ್ಣಾಟ ಭಾಷೆಯೊಳ್ ಕೆಲವು ನಿಜೋಜ್ವಳಮಾಗಿ – ಸೂ. ೨೫) ಸಾಧಿಸುವುದಕ್ಕೆ ಹೊರಟುದನ್ನು ಪರಿಶೀಲಿಸಿದರೆ ಅವನಿಗೂ ಕನ್ನಡದಲ್ಲಿ ಮಹಾಪ್ರಾಣಗಳು ಇವೆಯೇ ಎಂಬ ಸಂದೇಹ ತಟ್ಟಿರಬೇಕು ಎಂಬುದು ಸೂಚಿತವಾಗುತ್ತದೆ. ಅವನು ಮಹಾ ಪ್ರಾಣಗಳನ್ನು ಸಂಖ್ಯೆಯಲ್ಲಿಯೂ ಅನುಕೃತಿಗಳಲ್ಲಿಯೂ ಪ್ರಯೋಗಿಸುತ್ತಾರೆಂದೂ ಹೇಳಿದ್ದಾನೆ. ಸಂಖ್ಯೆ ಮತ್ತು ಅನುಕರಣಗಳನ್ನು ಅಲ್ಪಪ್ರಾಣಾಕ್ಷರಯುಕ್ತವಾಗಿಯೇ ಹೇಳಬೇಕಾದವುಗಳನ್ನು ಮಹಾಪ್ರಾಣಾಕ್ಷರಯುಕ್ತಗಳನ್ನಾಗಿ ಉಚ್ಚರಿಸುವವರಿದ್ದಾರೆ ಎಂದ ಮಾತ್ರಕ್ಕೆ ಅವು ಕನ್ನಡಕ್ಕೆ – ದ್ರಾವಿಡ ಭಾಷೆಗಳಿಗೆ – ಸಹಜವೆಂದು ಸಾಧಿಸುವಂತಿಲ್ಲ. ‘ನಿಜೋಜ್ವಳಮಾಗಿ’ರುವ ಮಹಾಪ್ರಾಣ ಗಳುಳ್ಳ ಶಬ್ದಗಳಿಗೆ ಉದಾಹರಣೆಗಳನ್ನು ಪರಿಶೀಲಿಸುವಾಗಲೂ ಅವುಗಳೆಲ್ಲ ಸ್ವತಂತ್ರ ಕನ್ನಡ ಶಬ್ದಗಳೆಂದು ಹೇಳುವಂತಿಲ್ಲ.[4] ಆದುದರಿಂದ ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲವೆಂದು ಖಂಡಿತವಾಗಿ ಹೇಳಬೇಕು. ಇದರಂತೆಯೇ ತುಳುವಿನಲ್ಲೂ ಮಹಾಪ್ರಾಣಗಳಿಲ್ಲ ವೆಂದು ತುಳು ಭಾಷೆಯ ಸ್ವತಂತ್ರ ಶಬ್ದಗಳನ್ನು ಪರಿಶೀಲಿಸಿದಾಗ ಗೊತ್ತಾಗದಿರದು.

ಕೇಶಿರಾಜನ ಮತದಂತೆ ಕನ್ನಡದಲ್ಲಿ ನಲುವತ್ತೇಳು ವರ್ಣಗಳಿವೆಯಷ್ಟೆ. ಆರಂಭದಲ್ಲಿ ಸಂಸ್ಕೃತ ವರ್ಣಮಾಲೆಯಲ್ಲಿ ಕೊಟ್ಟು ಅದಕ್ಕೆ ಕ್ಷಳವನ್ನು ಕೂಡಿಸಿ ಆ ವರ್ಣಗಳಲ್ಲಿ ಋ ಌ  ವರ್ಣಗಳನ್ನು ಶ, ಷ, ವಿಸರ್ಗ, ಜಿಹ್ವಾ ಮೂಲೀಯ (:ಕ) ಉಪಧ್ಮಾನೀಯ (ಃಪ) ಮತ್ತು ಸಂಸ್ಕೃತದ ಲಕಾರದ ಬದಲಾಗಿ ಪ್ರಯೋಗವಾಗುವ ಳ (ಕ್ಷಳ) ಎಂಬುದನ್ನೂ ಕಳೆಯಬೇಕೆಂದು ದೇಶೀಯಗಳಾದ ಎ, ಓ, ಱ, ೞ ಮತ್ತು ಳ (ಈ ಕೊನೆಯ ಮೂರರಲ್ಲಿ ೞ ಎಂಬುದನ್ನೂ ಱೞವೆಂದೂ ಳಕಾರವನ್ನೂ ಕುಳವೆಂದು ಪ್ರಾಚೀನ ವೈಯಾಕರಣರು ಹೇಳಿದ್ದಾರೆ. ಱ ಎಂಬುದನ್ನೂ ಕನ್ನಡ ಕೈಪಿಸಿಯಲ್ಲಿ ಬಂಡಿಯರ ಅಥವಾ ಶಕಟರೇಫವೆಂದು ಕರೆದಿದ್ದಾರೆ. ಶ್ರೀ ಸೇಡಿಯಾಪು ಕೃಷ್ಣ ಭಟ್ಟರು ಇದನ್ನು ಅಱ ಎಂದು ಕರೆಯಬೇಕೇಂದು ಯುಕ್ತಿಯುಕ್ತವಾಗಿ ತೋರಿಸಿಕೊಟ್ಟಿದ್ದಾರೆ. ತಮ್ಮ ಕನ್ನಡ ವರ್ಣಗಳು ಎಂಬ ಪುಸ್ತಕದ ಅನುಬಂಧ ಲೇಖನದಲ್ಲಿ) ಎಂಬವುಗಳನ್ನು ಕೂಡಿಸಿಕೊಳ್ಳಬೇಕೆಂದೂ  ತಿಳಿಸಿದ್ದಾನೆ[5] ಇದರಿಂದ ಋ ವರ್ಣಗಳೇ ಮುಂತಾದವು ಕನ್ನಡದಲ್ಲಿಲ್ಲವೆಂದು – ಕನ್ನಡದ ಸಹಜ ವರ್ಣಗಳಲ್ಲ, ಸಂಸ್ಕೃತ ಶಬ್ದಗಳಲ್ಲಿ ಬರುವುವುಗಳೆಂದು – ಸ್ಪಷ್ಟಪಡಿಸಿದ್ದಾನೆ. ತುಳುವಿನಲ್ಲಿಯೂ ಇತರ ದ್ರಾವಿಡ ಭಾಷೆಗಳಲ್ಲಿಯೂ ಇದು ಹೀಗೆಯೇ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕನ್ನಡದ ದೇಸೀಯ ವರ್ಣಗಳಲ್ಲಿ ಹ್ರಸ್ಟ ಎಕಾರ ಮತ್ತು ಒಕಾರಗಳಿರುವಂತೆ ಎಲ್ಲ ದ್ರಾವಿಡ ಭಾಷೆಗಳಲ್ಲೂ ಇವೆ. ಉಳಿದ ಅಱ, ಱೞ, ಮತ್ತು ಕುಳಗಳ ವಿಚಾರ ಮುಂದೆ ನೋಡೋಣ.

ಈಗ ಅನುನಾಸಿಕಗಳ ಕುರಿತು ಒಂದು ಮಾತು :- ಕನ್ನಡದಲ್ಲಿ ಙ ಮತ್ತು ಞ ಎಂಬೆರಡು ಅನುನಾಸಿಕಗಳು ಸ್ವತಂತ್ರವಾಗಿ ಬಳಕೆಯಲ್ಲಿದ್ದಂತೆ ಕಂಡುಬರುವುದಿಲ್ಲ. ತುಳುವಿನಲ್ಲಾದರೆ ಅನುನಾಸಿಕಗಳೂ ಇವೆರಡೂ ಪ್ರಯೋಗಗೋಳ್ಳುತ್ತವೆ. ಡಙ್ಙ ಡಙ್ಙ ಎಂಬ ಅನುಕರಣ ಶಬ್ದದಲ್ಲಿಯೂ, ಅಙ್ಙಣ (ಅಂಗಳ-ಅಂಗಣ)ದಲ್ಲಿಯೂ, ಮಙ್ಙಣೆ, ಅರೆಙ್ಙಣು, ಬಙ್ಙ (ಭಂಗ) ಞಙ್ಙು ಇತ್ಯಾದಿ ಶಬ್ದಗಳಲ್ಲಿಯೂ ಈ ಙಕಾರವು ಸ್ಪಷ್ಟವಾಗಿ ಗೋಚರಿಸುತ್ತದೆ. ಬ್ರಿಗೆಲ್ಲರು ಕೊಟ್ಟಿರುವ ಞ ಙೆ ಎಂಬುದರಲ್ಲಿಯೂ ಈ ವರ್ಣದ ಪ್ರಯೋಗವಿದೆ. ಆದರೆ ಈ ಶಬ್ದದ ಅರ್ಥವೇನು ಎಂಬುದು ತಿಳಿಯದು. ಪ್ರಾಯಶಃ ಞಙ್ಙಿ ಎಂದು ಮೇಲೆ ಕೊಟ್ಟಿರುವ ಶಬ್ದವನ್ನು ಞಙ್ ಎಂದು ಬರೆಯಹೊರಟು, ಮುದ್ರಣವಾಗುವಾಗ ಪ್ರಮಾದವಶಾತ್‌ ಹಾಗಾಯಿತೋ ಏನೋ! ಅಂತೂ ಪರಿಮಿತವಾಗಿಯಾದರೂ ಙಕಾರವು ತುಳುವಿನಲ್ಲಿ ಸ್ವತಂತ್ರವಾಗಿ ಪ್ರಯೋಗವಾಗುವುದಾದರೆ,  ಞಕಾರದ ಪ್ರಯೋಗವು ಇನ್ನಷ್ಟು ಹೆಚ್ಚಾಗಿದೆ. ಞಕ್ಕು, ಞಙ್ಙು, ಞಯಿಕು, ಞಾಣು, ಞೋಳಿ, ಕುಞ್ಞಪ್ಪೆ (ಪುಂ), ಕುಞ್ಞಪ್ಪೆ (ಸ್ತ್ರೀ) ಕಿಞ್ಞಮ್ಣ, ಕೊಞ್ಞ್‌, ಅಞ್ಞಣ, ತಞ್ಞಣ ಮುಂತಾದ ಎಷ್ಟೋ ಶಬ್ದಗಳಲ್ಲಿ ಈ ಞಕಾರವು ಧಾರಾಳವಾಗಿ ಬಳಕೆಯಲ್ಲಿದೆ. ಇಷ್ಟು ಸ್ಪಷ್ಟವಾಗಿ ಈ ಅನುನಾಸಿಕ ಪ್ರಯೋಗವಿರುವುದರಿಂದ ಕನ್ನಡದ ಈ ಅನುನಾಸಿಕಗಳಿಗಿಂತ ತುಳುವಿನಲ್ಲಿ ಇವುಗಳ ಸ್ಥಾನವು ಹೆಚ್ಚು ಭದ್ರವಾದುದೆಂದು ಸ್ಪಷ್ಟವಾಗುತ್ತದೆ.

ಕುಳ  (ಸಹಜ ಳಕಾರ) ವು ಎಲ್ಲ ದ್ರಾವಿಡ ಭಾಷೆಗಳಲ್ಲೂ ಇದೆ. ಆದರೆ ಅೞ ಮತ್ತು ಱೞ ಉಳಿದ ದ್ರಾವಿಡ ಭಾಷೆಗಳಲ್ಲಿ ಹಿಂದೆ ಇದ್ದಂತೆ ತುಳುವಿನಲ್ಲಿಯೂ ಹಿಂದೆ ಇದ್ದುವೆ? ವಿಚಾರಿಸಬೇಕಾದ ವಿಷಯವಿದು.

ತುಳು ಭಷೆಯ ಗ್ರಂಥವು ಲಿಖಿತವಾಗಿ ಒಂದು ಇಲ್ಲದಿರುವುದರಿಂದ ಈ ವಿಷಯವನ್ನು ಇತ್ಯರ್ಥ ಮಾಡಲು ಯಾವ ಆಧಾರವೂ ಇಲ್ಲ. ಬಳಕೆಯಲ್ಲಿರುವ ತುಳುವಿನ ಪಾಡ್ದನ, ಸಂಧಿ ಮುಂತಾದವುಗಳಲ್ಲಿಯೂ ಇವುಗಳ ಉಚ್ಚಾರವು ಕೇಳ ಬರುವುದಿಲ್ಲ. ಇಂದು ಆಡುವ ಮಾತಿನಲ್ಲಿಯೂ ಈ ವರ್ಣೋಚ್ಚಾರವು ಕೇಳುವುದಿಲ್ಲ. ಎಲ್ಲ ದ್ರಾವಿಡ ಭಾಷೆಗಳಲ್ಲಿಯೂ ಈ ವರ್ಣಗಳು ಇದ್ದುವು ಎಂಬುದರಿಂದ ತುಳುವಿನಲ್ಲಿಯೂ ಇವು ಇದ್ದಿರಬೇಕು ಎಂದು ಅನುಮಾನಿಸಿಯೇ ಪ್ರಾಯಶಃ ಪಣಿಯಾಡಿಯವರು ಈ ಎರಡು ವರ್ಣಗಳನ್ನು ತಮ್ಮ ತುಳು ವರ್ಣಮಾಲೆಯಲ್ಲಿ ಸೇರಿಕೊಂಡಂತೆ ಕಾಣುತ್ತದೆ. ಅವರು ಈ ವಿಷಯದಲ್ಲಿ ಏನು ಹೇಳುತ್ತಾರೆ ಎಂದು ನೋಡೋಣ :-

ಱ ಎಂಬ ವ್ಯಂಜನವು[6] ರೂಢಿಯಲ್ಲಿಲ್ಲದಿದ್ದರೂ ಎಲ್ಲ ದ್ರಾವಿಡ ಭಾಷೆಗಳಲ್ಲಿ ಇದ್ದಂತೆಯೆ ತುಳುವಿನಲ್ಲೂ ಇದೆ. ಕೆಲವು ಕಡೆ ಅದರ ಛಾಯೆ ತೋರುತ್ತದೆ. ಆರೆ + ಒಟ್ಟು ಎಂಬಲ್ಲಿ ಸಂಧಿ ಮಾಡುವಾಗ ಆಱೋಟ್ಟು ಎಂದಾಗುತ್ತದೆ. ಆರ್ +ಒಟ್ಟು ಎಂಬಲ್ಲಿ ಮಾತ್ರ ಆರೊಟ್ಟು ಎಂದು ಸಂಧಿಯಾಗುವುದು ಅಱೆ ಎಂದರೆ ಅನ್ನದ ಅಕ್ಕಿ. ಅರಿ ಎಂದರೆ ಶತ್ರು ಎಂಬರ್ಥದ ಸಂಸ್ಕೃತ ಶಬ್ದ.

[7]”ೞ ಎಂಬ ವ್ಯಂಜನ ವಿಶೇಷವಾಗಿ ರೂಢಿಯಲ್ಲಿಲ್ಲವಾದರೂ ಎಲ್ಲ ದ್ರಾವಿಡ ಭಾಷೆಗಳಲ್ಲಿ ಇದ್ದಂತೆಯೆ ತುಳುವಿನಲ್ಲೂ ಉಂಟು. ಕೆಲವು ಕಡೆಯಲ್ಲಿ ಅದರ ಛಾಯೆ ತೋರುತ್ತದೆ. ಅೞ್‌ (ಅಳುವುದು) ಕೊೞ್‌ (ಕೊಡುವುದು) ಇತ್ಯಾದಿ ಸ್ಥಳಗಳಲ್ಲಿ ಭೇದ ತೋರುತ್ತದೆ. ಅದಲ್ಲದೆ ಆ ವಿಕಾರಕ್ಕೆ ಕೆಲ ಕಡೆಗಳಲ್ಲಿ ರಕಾರವೂ ಕೆಲ ಕಡೆಗಳಲ್ಲಿ ಳಕಾರವೂ ಆಗಿದೆ. ಉದಾ: ಕೊೞ್‌- ಕೊರು; ಬಾೞೆ – ಬಾಳೆ, ಬಾರೆ’

ಅಱ, ಱೞಗಳು ತುಳುವಿನಲ್ಲಿವೆಯೆಂದು, ಪಣಿಯಾಡಿಯವರು ಸಾಧಿಸಲು ಹೊರಟರೂ ಇಂದು ಅವುಗಳ ಸ್ಪಷ್ಟೋಚ್ಚಾರವು ಎಲ್ಲಿಯೂ ಕೇಳಬರುವುದಿಲ್ಲ. ಈ ವಿಷಯ ಅವರಿಗೂ ಗೊತ್ತಿದ್ದುದರಿಂದ ಅವರೆ ‘ಱಕಾರ ೞಕಾರಗಳ ಛಾಯೆ ಕೆಲವೆಡೆಯಲ್ಲಿ ತೋರಿಬಂದರೂ ವ್ಯವಹಾರದಕ್ಕೆ ಅಷ್ಟು ಅಗತ್ಯವಿಲ್ಲ. ಆದುದರಿಂದ ವರ್ಣ ಮಾಲೆಯಲ್ಲಿ ಸೇರಿಸುವ ಅಗತ್ಯವಿಲ್ಲ’ ಎಂದಿದ್ದಾರೆ. ಕನ್ನಡದಲ್ಲಿ ಅಱವಿದ್ದ ಶಬ್ದಗಳು ತುಳುವಿನಲ್ಲಿ ಭಿನ್ನ ಭಿನ್ನ ವ್ಯಂಜನಗಳ ಆದೇಶವನ್ನು ಪಡೆದು ಇಂದು ಪ್ರಯೋಗವಾಗುತ್ತವೆ ಎಂಬುದಕ್ಕೆ ಈ ಕೆಳಗಣ ಉದಾಹರಣೆಗಳನ್ನು ನೋಡಬಹುದು :-

ಕನ್ನಡ ತುಳು
ಆಱು     ಆಜು (ಒಣಗು, ಆರಿಹೋಗು)
ಆಱು     ಆಜಿ (ಸಂಖ್ಯೆ)
ಕಱೆ      ಕಜೆ (ಕಪ್ಪು ಬಣ್ಣ ಬಂದುದು)
ಕುಱೆ     ಕುರಿ
ಕೆಱೆ      ಕೆದು ಇತ್ಯಾದಿ

ಕನ್ನಡದ ಱಕಾರಕ್ಕೆ ಆದೇಶವಾಗಿ ತುಳುವಿನಲ್ಲಿ ಇಂದು ರ, ಜ, ದ ಕಾರಗಳು ಆದೇಶವಾಗಿ ಬರುತ್ತದೆ. ಹಾಗೆಯೇ ೞಕಾರಕ್ಕೆ ಕೆಲವೆಡೆ ರಕಾರವೂ ಕೆಲವೆಡೆ ಳಕಾರವೂ ಆದೇಶವಾಗುತ್ತವೆಯೆಂದು ಪಣಿಯಾಡಿಯವರೇ ತಿಳಿಸಿದ್ದಾರೆ. ಕನ್ನಡದ ೞಕಾರಕ್ಕೆ ತುಳುವಿನಲ್ಲಿಯೂ ಹೆಚ್ಚಾಗಿ ರಕಾರವೇ ಆದೇಶವಾಗಿದೆಯೆಂಬುದಕ್ಕೆ ಈ ಕೆಳಗಣ ಶಬ್ದಗಳನ್ನು ನೋಡಿಕೊಳ್ಳಬಹುದು :

ಕನ್ನಡ            ತುಳು
ಅೞಿ (ನಾಶ)        ಅಳಿ
ಕೞಿ (ನಾಶ)         ಕರಿ
ಉೞಿ                ಒರಿ
ಕುೞಿ                 ಗುರಿ
ತೌೞ್               ತಾರಿ ಇತ್ಯಾದಿ

ಸಂಖ್ಯಾವಾಚಕವಾದ ಏೞ್‌ಎಂಬುದು ಕನ್ನಡದಲ್ಲಿ ೞಕಾರಯುಕ್ತವಾಗಿದ್ದರೂ ತುಳುವಿನಲ್ಲಿ ಏಳ್‌ಎಂದು ಕುಳವಾಗಿದೆ.

ರೆವ. ಎ. ಮೆನ್ನರ್ ಎಂಬವರು ಸಿದ್ಧಪಡಿಸಿ, ಬಾಸೆಲ್‌ಮಿಶನ್‌ಮುದ್ರಣಾಲಯದಲ್ಲಿ ಪ್ರಕಟವಾದ ‘Tulu – English Dictionary’ ಯಲ್ಲಿ ಈ ಎರಡು ವರ್ಣಗಳ ಅಸ್ತಿತ್ವವನ್ನು ಹೇಳಿಲ್ಲ. ಶ್ರೀ ಎಮ್. ಮರಿಯಪ್ಪ ಭಟ್‌ಮತ್ತು ಎ. ಶಂಕರ ಕೆದಿಲಾಯರು ಸಿದ್ಧಪಡಿಸಿ ಮದ್ರಾಸು ವಿಶ್ವವಿದ್ಯಾಲಯದಿಂದ ಪ್ರಕಟವಾದ ‘Tulu-English Dictionary’ ಯ ಪೀಠಿಕಾ ಭಾಗದ Tulu Language and Literature ಎಂಬುದರಲ್ಲಿ ಈ ಎರಡು ವರ್ಣಗಳ ಕುರಿತು ಈ ಮಾತಿದೆ :

“In the hoary past there should have been the alveolar, r, l which have now merged with the ordinary r and l. (A study of cognates will prove this historical fact)”.

ಯಾವುದೋ ಒಂದು ಕಾಲಕ್ಕೆ ಱ ಮತ್ತು ೞ ಎಂಬವುಗಳು ತುಳುವಿನಲ್ಲಿ ಇದ್ದಿರಬೇಕೆಂದು ಊಹಿಸಿದ್ದಾರೆ. ಈಗ ಅವು ರ ಮತ್ತು ಳ ಕಾರಗಳಲ್ಲಿ ಬೆರೆತುಕೊಂಡಿದೆ. ಎಂದು ಅಭಿಪ್ರಾಯಪಟ್ಟಿದ್ದಾರೆ. Rev. A. Manner ಮತ್ತು Brigel ಎಂಬಿಬ್ಬರಿಗೂ ತುಳುವಿನಲ್ಲಿ ಅಱ, ಱೞಗಲ ಉಚ್ಚಾರವು ಕಿವಿಗೆ ಬೀಳದಿದ್ದ ಕಾರಣವೇ ಅವರು ಆ ವರ್ಣಗಳನ್ನು ಬಿಟ್ಟಿದ್ದಾರೆ ಎಂಬುದು ಸ್ಪಷ್ಟ. ಇತ್ತೀಚೆಗಿನ ತುಳು-ಆಂಗ್ಲ ಕೋಶದಲ್ಲಿಯೂ ಅವುಗಳನ್ನು ಬಳಸಿಲ್ಲ. ಹೀಗೆ ತುಳುವಿನಲ್ಲಿ ಆ ವರ್ಣಗಳಿದ್ದುವೆಂಬುದಕ್ಕೆ ಬೇರಾವ ಆಧಾರಗಳೂ ದೊರೆಯುವುದಿಲ್ಲ. ಆದರೂ ಮದ್ರಾಸು ವಿಶ್ವವಿದ್ಯಾಲಯವು ೧೯೫೯ರಲ್ಲಿ ಪ್ರಕಟಿಸಿದ Dravidian Comparative Vocabulary ಎಂಬ ಪುಸ್ತಕದಲ್ಲಿ ಸುೞಿಗಾಳಿ, ಕೊಱಗ ಕೊಱವಾಜಿ, ಕೞ, ಗಱು, ಎಸೞ್‌ಇತ್ಯಾದಿ ಎಷ್ಟೋ ಶಬ್ದಗಳಲ್ಲಿ ಈಯೆರಡು ವರ್ಣಗಳ ಅಸ್ತಿತ್ವವನ್ನು ಕಾಣಿಸಲಾಗಿದೆ. ಇದಕ್ಕೆ ನಿಷ್ಕೃಷ್ಟವಾದ ಆಧಾರವೇನಿದೆಯೋ ತಿಳಿಯದು. ಪ್ರಾಯಶಃ ಪಣಿಯಾಡಿಯವರು ಅನುಮಾನಿಸಿದಂತೆ ಈ ಗ್ರಂಥದ ಸಂಪಾದಕರೂ ಅನುಮಾನಿಸಿರ ಬಹುದು. ಈ ಸಂಪಾದಕರು ಕನ್ನಡ ತುಳುಗಳಿಗೆ ಒಂದೇ ವರ್ಣಮಾಲೆಯೆಂದು ತೋರಿಸಿ, ಈ ಕೆಳಗಿನ ವ್ಯಂಜನಗಳನ್ನು ಕೊಟ್ಟಿದ್ದಾರೆ :-

ಕ   ಗ    ಙ
ಚ   ಜ   ಞ
ಟ   ಡ   ಣ
ತ   ದ   ನ
ಪ   ಬ  ಮ
ಯ  ರ  ಱ  ಲ  ವ   ಸ   ಳ   ಹ   ಳ   ೞ

– ಒಟ್ಟು ಇಪ್ಪತ್ತೈದು ವ್ಯಂಜನಗಳು. ಇಲ್ಲಿ ಕೊಟ್ಟಿರುವ ಎರಡು ಳಕಾರಗಳಲ್ಲಿ ಒಂದು ಕುಳವೂ ಇನ್ನೊಂದು ಕ್ಷಳವೂ ಆಗಿವೆಯೆಂದು ಹೇಳದೆ ಗತ್ಯಂತರವಿಲ್ಲ. ಕೇಶಿರಾಜನೇ ಅಚ್ಚಗನ್ನಡ ಶುದ್ಧಗೆಯಿಂದ ಕ್ಷಳವನ್ನು ಕಳೆದಿರುತ್ತಾ ಇವರು ಕೂಡಿಸಿಕೊಂಡಿರುವುದರ ಔಚಿತ್ಯವೇನೋ!

ತುಳುವೇ ತಾಯ್ನುಡಿಯಾಗಿರುವವರು ಕೆಲವು ತುಳುವಿನಲ್ಲಿ ಳಕಾರವೇ ಇಲ್ಲ ವೆಂದು ಹೇಳುವುದೂ ಇದೆ. ಆದರೆ ಮದ್ರಾಸು ವಿಶ್ವವಿದ್ಯಾಲಯದಿಂದ ಪ್ರಕಟವಾದ ತುಳು – ಆಂಗ್ಲ ಕೋಶದಲ್ಲಿ ಲ ಕರಾವೂ ಹೇಗೆ ಭಿನ್ನವಾಗಿ ತುಳುವಿನಲ್ಲಿವೆಯೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೂಲಿ ಎಂದರೆ ಕೆಲಸಕ್ಕೆ ದೊರೆಯುವ ಹಣ, ಕೂಳಿ ಎಂದರೆ ಹಲ್ಲು ಹೀಗೆಯೇ ಸೂಲೆ ಎಂದರೆ ನೋಡಿರಿ ಎಂಬರ್ಥವಿದ್ದರೆ ಸೂಳೆ ಎಂದರೆ ರೂಢಿಯಲ್ಲಿ ವೇಶ್ಯಾವೃತ್ತಿಯವಳು. ಈ ರೀತಿಯಲ್ಲಿ ಲ ಮತ್ತು ಳ ಕಾರಗಳು ಭಿನ್ನವಾಗಿವೆಯೆನ್ನುವುದು ಸಹಜವಾದರೂ ಕೆಲವರು ಎಲ್ಲವನ್ನೂ ಲಕಾರವಾಗಿ ಉಚ್ಚರಿಸುವುದಿದೆ ಎಂದ ಮಾತ್ರಕ್ಕೆ ತುಳುವಿನಲ್ಲಿ ಳಕಾರವಿಲ್ಲವೆನ್ನುವುದು ಶಾಸ್ತ್ರೀಯವೆನ್ನಿಸದು. ಆದರೂ ಪೂರ್ವಗ್ರಹದಿಂದ ಅವರು ಪ್ರಕರಣವಶದಿಂದ ಅರ್ಥವ್ಯತ್ಯಾಸವನ್ನು ಇತರ ದ್ರಾವಿಡ ಭಾಷೆಗಳಲ್ಲಿ ಹೇಗೋ ಹಾಗೆ ತಿಳಿದುಕೊಳ್ಳುತ್ತೇವೆ ಎನ್ನುತ್ತಾರೆ. ಕನ್ನಡದಲ್ಲಿ ಒಂದು ಎಂಬುದು ಸಂಖ್ಯಾವಾಚಕವೂ ಒಟ್ಟುಕೂಡು ಎಂಬರ್ಥವುಳ್ಳದೂ ಆದುದರಿಂದ ಭಿನ್ನವೆಂದು ಪ್ರಕರಣದಿಂದ ಗ್ರಹಿಸಿಕೊಳ್ಳುವುದಿಲ್ಲವೇ? ಆದರೆ ಇಂತಹವಾದವು ಭಾಷಾ ಶಾಸ್ತ್ರದ ದೃಷ್ಟಿಯಿಂದ ಯುಕ್ತಿಯುಕ್ತವೆನ್ನಿಸದು. ಏಕೆಂದರೆ ತುಳುವರಲ್ಲಿ ಕೆಲವರು ಅಣ್ಣೆ ಎಂಬುದನ್ನು ಅನ್ನೆ ಎಂದೂ ಕಣ್ಣು ಎಂಬುದನ್ನು ಕನ್ನು ಎಂದೂ ಉಚ್ಚರಿಸುತ್ತಾರೆ. ಇದರಿಂದ ತುಳುವಿನಲ್ಲಿ ಣಕಾರವೂ ಇಲ್ಲವೆನ್ನಲಾಗುವುದಿಲ್ಲವಷ್ಟೆ. ಇಂದಿನ ತುಳುವಿನಲ್ಲಿ ಅಱ ಮತ್ತು ಱೞ ಎಂಬವುಗಳು ಇಲ್ಲವೆಂದು ಮಾತ್ರ ಒಪ್ಪಿಕೊಳ್ಳಬಹುದು.

ಹಾಗೆಯೇ ಭಾಷಾಶಾಸ್ತ್ರಜ್ಞರು ವಿಚಾರಾಂತ್ಯದಲ್ಲಿ ಹಕಾರವು ಕನ್ನಡ ವರ್ಣಮಾಲೆಯಲ್ಲಾಗಲಿ ಇತರ ದ್ರಾವಿಡ ವರ್ಣಮಾಲೆಯಲ್ಲಾಗಲಿ ಸ್ವತಂತ್ರವಾಗಿ ಇಲ್ಲವೆಂದಿದ್ದಾರೆ. ಆದರೂ ಈ ವರ್ಣವು ಈ ಭಾಷೆಗಳಲ್ಲಿ ಸೇರಿಕೊಂಡುದನ್ನು ಅಪೂರ್ವವಾಗಿ ಕಾಣುತ್ತೇವೆ. ಇದಕ್ಕೆ ಪ್ರಾರಂಭದ ಸ್ವರವನ್ನು ಖಚಿತಪಡಿಸುವ ಪ್ರಯತ್ನದಲ್ಲಿ ಹಕಾರವು ಮೊದಲು ಸೇರಿಕೊಂಡಿರಬೇಕೆಂಬ ಊಹೆಯನ್ನು ಮುಂದಿಡಬಹುದು. ಕನ್ನಡದ ಧಾತು ಪ್ರಕರಣದಲ್ಲಿ ಕೇಶಿರಾಜನು

‘ದೊರೆವಡೆದ ಮಹಾಪ್ರಾಣಾ
ಕ್ಷರದಿಂ ಙಞ ಶಷಾಂತಹಾಂತಕ್ಷಾಂತೋ
ಧ್ಧರಣದಿನುದ್ಭವಿಸವುಬ
ಲ್ಲರ ಮತದಿಂ ಧಾತು ತಿಳಿವುದವನೀ ಕ್ರಮದಿಂ’ (ಸೂ ೨೬೫)

ಎಂದು ಹೇಳಿದ್ದಾನೆ. ಕನ್ನಡ ಧಾತುಗಳ ವಿಷಯದಲ್ಲಿ ಈ ಮಾತು ಸರಿಯಾದರೂ ತುಳುವಿನಲ್ಲಿ ಙ ಞಗಳು ಇವೆಯೆಂದು ಕಂಡಿದ್ದೇವೆ. ಹಕಾರವು ಸಹಜವಾಗಿ ಇಲ್ಲ. ಪಣಿಯಾಡಿಯವರು ಹಕಾರವನ್ನು ವರ್ಣಮಾಲೆಯಲ್ಲಿ ಸೇರಿಸಿಕೊಂಡುದು ಮಾತ್ರವಲ್ಲದೆ ಧಾತು ಪಾಠದಲ್ಲಿ ಮತ್ತು ವಿಶೇಷ ವಿಚಾರ ಪ್ರಕರಣದಲ್ಲಿ ಹಕಾರವುಳ್ಳ ಧಾತುಗಳನ್ನೂ ಶಬ್ದಗಳನ್ನೂ ಕೊಟ್ಟಿದ್ದಾರೆ. ಅವುಗಳಲ್ಲಿ ತಮೆ-ಹಮೆ, ತೆಟ್ಟ್‌-ಸೆಟ್ಟ್‌-ಹೆಟ್ಟ್‌, ತಪ್ಪು- ಹಪ್ಪು, ತಜಪ್ಪು- ಹಜಪ್ಪು ಇತ್ಯಾದಿಗಳಲ್ಲೆಲ್ಲ ತಕಾರದ ಬದಲಿಗೆ ಹಕಾರವು ಪ್ರಯೋಗವಾದುದು ಸ್ಪಷ್ಟವಾಗಿ ಕಂಡುಬರುತ್ತದೆ. ಉಳಿದ ಹಾಕ್‌, ಹಾಸ್‌, ಹೆಚ್ಚ್‌ ಇತ್ಯಾದಿಗಳಲ್ಲಿ ಬರುವ ಹಕಾರವು ಸಹಜವಾಗಿ ಸ್ವರಾದಿಗೆ ಸೇರಿಕೊಂಡ ಹಕಾರವೆಂಬಂತೆ ಹೆಚ್ಚಿನವರ ಉಚ್ಚಾರದಲ್ಲಿ ಸ್ಫುಟವಾಗುಕತ್ತದೆ. ಈ ಕಾರಣದಿಂದ ತುಳುವಿನಲ್ಲಿ ಹಕಾರವೂ ಸಹಜವರ್ಣವೆಂದು ಅಂಗೀಕರಿಸುವಂತಿಲ್ಲ ಎಂಬುದು ಸಿದ್ಧವಾಗುತ್ತದೆ. ಇದಕ್ಕೆ ಶ್ರೀ ಸೇಡಿಯಾಪು ಕೃಷ್ಮ ಭಟ್ಟರ ‘ಕನ್ನಡ ವರ್ಣಗಳು’ ಎಂಬುದನ್ನು ಅಧ್ಯಯನ ಮಾಡಿದರೆ ಸರಿಯಾದ ಸಮಾಧಾನವೂ ದೊರೆಯುತ್ತದೆ. ಅಂತೂ, ಇಂದು ಬಳಕೆಯಲ್ಲಿರುವ ತುಳುವಿನಲ್ಲಿ ಈ ಕೆಳಗಿನ ವ್ಯಂಜನಗಳಿವೆಯೆಂದು ಅಂಗೀಕರಿಸಬಹುದು :-

ಕ   ಗ   ಙ
ಚ   ಜ   ಞ
ಟ   ಡ   ಣ
ತ   ದ   ನ
ಪ   ಬ   ಮ
ಯ  ರ   ಲ   ವ   ಸ   ಳ

– ಒಟ್ಟು ಇಪ್ಪತ್ತೊಂದು ವ್ಯಂಜನಗಳು. ಹನ್ನೆರಡು ಸ್ವರಗಳನ್ನೂ ಕೂಡಿಸಿಕೊಳ್ಳುವಾಗ ತುಳುವಿನಲ್ಲಿ ಸಹಜವಾಗಿ ಮೂವತ್ತಮೂರು ವರ್ಣಗಳಿವೆಯೆಂದು ಸಿದ್ಧವಾಗುತ್ತದೆ.

ಅನ್ಯಭಾಷಾಶಬ್ದಗಳನ್ನು ಬಳಸಿಕೊಳ್ಳುವಾಗ ಬೇರೆ ವರ್ಣಗಳು ಸೇರಿಕೊಳ್ಳಬಹುದಾದರೂ ಅವುಗಳನ್ನು ತುಳುವಿನ ವರ್ಣಮಾಲೆಯೆನ್ನುವಂತಿಲ್ಲ. ಕನ್ನಡದಲ್ಲಿಯೂ ಅನ್ಯಭಾಷಾ ಶಬ್ದಗಳನ್ನು ಪ್ರಯೋಗಿಸಬೇಕಾದಲ್ಲಿ ಬೇರೆ ವರ್ಣಗಳನ್ನು ಬಳಸುತ್ತಾರೆ ಎಂಬುದರಿಂದ ಅವು ಕನ್ನಡದ ವರ್ಣಮಾಲೆಗಳೆಂದು ಭಾಷಾ ಶಾಸ್ತ್ರಜ್ಞರು ಒಪ್ಪಿಕೊಳ್ಳುವುದಿಲ್ಲ. ತುಳುವಿಗೂ  ಈ ನಿಯಮವನ್ನು ಅನ್ವಯಿಸಿಕೊಳ್ಳುವುದು ಶಾಸ್ತ್ರೀಯವಾಗಿದೆ.

 

[1] ಅ ಇ ಉ್ ಉ ಎ್ ಎ ಒ ಈ ಏಳೆ ಸ್ವರಕುಳು ತುಳು ಭಾಷೆಡ್‌ಇಪ್ಪಿನಿ. ‘ಉ’ನ್ಪಿ ಸ್ವರ ದ್ರಾವಿಡ ಭಾಷೆಳೆಗ್‌ಅಗತ್ಯ ಬೋಡು. ತುಳುಟು  ಈ ಸ್ವರತ ಉಪಯೋಗ ದಿಂಜ ಕಡೆಟ್‌ಬರ್ಪುಂಡು, ಇಂದೆನ್‌ಪ್ರತ್ಯೇಕ ಸ್ವರಾದ್‌ಗೆತ್ತೊಂಡ್‌ಜಡ ‘ಮಳ್ತ್‌ದ್‌, ಮರ್ದ್‌‌ಡ್‌, ಕಡತ್‌ದ್‌೦ಡ್‌’ ಇತ್ಯಾದಿಳೆನ್ ಉಚ್ಚರಿಪೆರೆ ಸಾದ್ಯನೇ ಇದ್ದಿ. ಆತಾವಂದೆ… ವೃತ್ತಳೆಡ್‌ಮಾತ್ರೆದ ಲೆಕ್ಕಗ್‌ಲಾ ಕಷ್ಟ ಆಪುಂಡು. ತಮಿಳ್‌ಭಾಷೆಡ್‌ಲಾ ಈ ಸ್ವರತ ಉಪಯೋಗ ದಿಂಜ ಉಂಡು. ಆಂಡ ಉಂದೆನ್‌ಪ್ರತ್ಯೇಕವಾದ್‌ಗೆತೊಣಂದೆ ಕಲಕಡೆಟ್‌ಅರ್ಧ ಇಕಾರಂದ್‌ಲಾ, ಕಲಕಡೆಟ್‌ಅರ್ಧ ಉಕಾರಾಂದ್‌ಲಾ ತಮಿಳ್ ವ್ಯಾಕರಣಕಾರೆರ್ ವ್ಯವಹರಿಪೆರ್.

[2] ‘ಎ್’ ನ್ಪಿ ಸ್ವರಲಾ ದ್ರಾವಿಡ ಭಾಷೆಳೆಡ್‌ಈ ಸ್ವರತ ಉಪಯೋಗ ತೋಜಂಡಲಾ ವ್ಯಾಕರಣಕಾರೆರ್ ಗಮನಿತ್‌ದ್‌ಜೆರ್. ತುಳುಟು ಸ್ಪಷ್ಟಾದ್‌ಅನೇಕ ಕಡೆಟ್‌ತೋಜುಂಡು. ಈ ಸ್ವರತ ಸಹಾಯ ಇಜ್ಜಿಡ ‘ಏನ್‌ಪೋಪೆ್’ ‘ಆಯೆ ಪೋಪೆ’ ಇತ್ಯಾದಿ ಭೇದನ್ ತೋಜಿಪಾವೆರೆಗ್ ಸಾಧ್ಯನೇ ಇಜ್ಜಿ. ತಮಿಳು ಭಾಷೆಡ್‌ಲಾ ಈ ಸ್ವರತ ಉಪಯೋಗ ಉಂಡು. ಆಂಡ ಅವ್ವೆನ್ ಹ್ರಸ್ಟ ‘ಐ’ ಕಾರಂದ್‌ತಮಿಳ್ ವ್ಯಾಕರಣಕಾರೆರ್ ವ್ಯವಹರಿಪೆರ್.

[3] ಅಕಾರಾದಿ ಸ್ವರಕುಳೆಗ್ ಒ೧ಬೊಂಜೆಕ್ ಪದಿನೆಡ್ಮ ಭೇದಳು ಇತ್ತ್‌೦ಡಲಾ ಸಾಧಾರಣ ವ್ಯವಹಾರಗ್‌ಹ್ರಸ್ವದೀರ್ಘಳು ಮಾತ್ರ ಇಯ್ಯಾವು. ಐಕಾರ, ಔಕಾರಳು ತುಳು ಭಾಷೆದ ಶಬ್ದಳೆನ್ ಉಪಯೋಗಿಪರೆಗ್ ಬೋಡು. ಆನೆಡ್ದಾವರ ತುಳು ಭಾಷೆದ ಸ್ವರಮಾಲೆನ್ ಸಾಧಾರಣ ರೀತಿಡ್‌ಇಂಚ ದೀವೊಣೊಳಿ.

[4] ಆ ಇ ಈ ಉ್ ಊ ಉ ಊ ಎ್ ಏ್ ಎ ಏ ಐ ಒ ಓ ಔ

[5] ಶಬ್ದ ಮಣಿದರ್ಪಣದ ಸೂತ್ರ ೪೨ ಮತ್ತು ೪೩ನ್ನು ನೋಡಿ.

[6] ಱನ್ಪಿ ವ್ಯಂಜನ ವಿಶೇಷವಾದ್ ರೂಢಿಡ್‌ಇಜ್ಜಿಡಲಾ ಮಾತ ದ್ರಾವಿಡ ಭಾಷೆಳೆಡ್‌ಇತ್ತಿನ ಲೆಕ್ಕನೆ ತುಳುಟುಲಾ ಉಂಟು. ಕೆಲ ಕಡೆಟ್ ಅಯ್ತ ಛಾಯೆ ತೋಜುಂಡು. ಆರ್ + ಒಟ್ಟುನ್ಪಿ ಜಾಗೆಡ್ ಸಂಧಿ ಮಾಳ್ಪುನಗ ಆಱೊಟ್ಯಂದ್‌ಆಪುಂಡು. ಆರ್ + ಒಟ್ಟುನ್ಪಿ ಜಾಗೆಡ್‌ಮಾತ್ರ ಆರೋಟ್ಟುಂದು ಸಂಧಿ ಆಪಿನಿ. ಅಱೆಂದ್‌೦ಡ ನುಪ್ಪುದ ಅರಿ. ಅರಿಂದ್೦ಡ ಶತ್ರುನ್ಪಿ ಅರ್ಥದ ಸಂಸ್ಕೃತ ಶಬ್ದ.

[7] ಱನ್ಪಿ ವ್ಯಂಜನ ವಿಶೇಷಾದ್‌ರೂಢಿಡ್‌ಇಜ್ಜಿಂಡಲಾ ಮಾತ ದ್ರಾವಿಡ ಭಾಷೆಳೆಡ್‌ಇತ್ತಿಲಕ್ಕನೆ ತುಳುಟುಲಾ ಉಂಡು. ಕೆಲಕಡೆಟ್‌ಐತ ಛಾಯೆ ತೋಜುಂಡು. ಅೞ್‌(ಅರ್ಪಿನಿ) ಕೊೞ್‌(ಕೊರ್ಪಿನಿ) ಇತ್ಯಾದಿ ಜಾಗೆಳೆಡ್‌ಭೇದ ತೋಜುಂಡು. ಆತಾವಂದೆ ಆ ಱಕಾರಗ್‌ಕೆಲಕಡೆಟ್‌ರಕಾರಲಾ ಕೆಲಕಡೆಟ್‌ರಕಾರಲಾ ಕೆಲಕಡೆಟ್‌ಳಕಾರಲಾ ಆತ್‌೦ಡ್‌. ಉದಾ : ಕೊೞ್‌ಕೊರ್, ಬಾೞೆ – ಬಾಳೆ, ಬಾರೆ.