ಮಿಶನರಿ ಸಾಹಿತ್ಯ ಸೇವೆ
ಸಂಶೋಧನೆ – ಭಾಷಾವಿಜ್ಞಾನ – ವ್ಯಾಕರಣ ನಿಘಂಟು

ಮಿಶನರಿಗಳಿಂದ ಜರಗಿದ ಮುಖ್ಯ ಕೆಲಸ. ಯಾವತ್ತೂ ಅವರ ಋಣ ಸಂದಾಯ ಮಾಡಲು ಸಾಧ್ಯವಾಗದ ಕೆಲಸವೆಂದರೆ ವ್ಯಾಕರಣ, ನಿಘಂಟು ರಚನೆ, ಪಾಡ್ದನ, ಗಾದೆಗಳ ಸಂಗ್ರಹ.

ವ್ಯಾಕರಣ ನಿಘಂಟು

ಜೆ. ಬ್ರಿಗೆಲ್ ಬರೆದ ಗ್ರಾಮರ್ ಆಫ್ ತುಳು ಲಾಂಗ್ವೇಜ್ – ೧೮೭೨

ಎ.ಮ್ಯಾನರ್ ರಚಿಸಿದ ‘ತುಳು ಇಂಗ್ಲಿಷ್ ನಿಘಂಟು’ – ೧೮೮೬

ಎ. ಮ್ಯಾನರ್ ರಚಿಸಿದ ‘ಇಂಗ್ಲಿಷ್ – ತುಳು ನಿಘಂಟು’ – ೧೮೮೮

ಸಂಶೋಧನೆ

ಎ.ಸಿ. ಬರ್ನೆಲ್ ಬರೆದ ‘ದಿ ಡೆವಿಲ್ ವರ್ಶಿಪ್ ಆಫ್ ದಿ ತುಳುವಾಸ್’- ೧೮೯೪ -೯೭

ಎ. ಮ್ಯಾನರ್ ಪ್ರಕಟ ಮಾಡಿದ ‘ಪಾಡ್ದನೊಳು’ – ೧೮೮೬

ಜಾನಪದ

ಜಿ ರಿಟ್ಟರ್ ಅವರ ‘ತುಳು ಜೋಕುಲೆ ಗೀತೊಳು’ -೧೮೭೯

ಬಾಸೆಲ್ ಮಿಶನ್‌ದಕುಲು ಪ್ರಕಟ ಮಲ್ತಿನ ಸಹಸ್ರಾರ್ಧ ತುಳು

ಗಾದೆಲು – ೧೮೭೪, ೧೮೯೬

ಬ್ರಿಗೆಲರು ಇಂಗ್ಲಿಷ್ ಮಂದಿಗೆ ತುಳು ಕಲಿಯಲು ಅನುಕೂಲವಾಗಲೆಂದು ಇಂಗ್ಲಿಷ್ ಮಾಧ್ಯಮದ ಮೂಲಕ ತುಳು ವ್ಯಾಕರಣ ಬರೆದರು. ಧ್ವನಿ ವ್ಯುತ್ಪತ್ತಿ, ವಾಕ್ಯ ರಚನೆ (Phonology, Etymology, Syntax) ಎಂದು ೨೩ ವಿಭಾಗಗಳಲ್ಲಿ ತುಳು ಭಾಷೆಯ ಸಮಗ್ರ ಪರಿಚಯವನ್ನು ನೀಡಿದರು. ಮೊದಲ ಭಾಗದಲ್ಲಿ ವರ್ಣಮಾಲೆ, ಉಚ್ಛಾರಣೆ, ಸಂಧಿ ನಿಯಮಗಳು. ಎರಡನೆಯ ಭಾಗದಲ್ಲಿ ಶಬ್ದಗಳ ವರ್ಗೀಕರಣ, ನಾಮಪದ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ, ಅವ್ಯಯಗಳು. ಮೂರನೆಯ ಭಾಗದಲ್ಲಿ ವಾಕ್ಯ ರಚನೆ, ಶಬ್ದಗಳ ಸ್ಥಾನ ನಿರ್ದೇಶಿತ ಅರ್ಥ ಹಾಗೂ ಪ್ರಯೋಗ ವಿಧಾನ, ವಿಶ್ಲೇಷಣೆ, ಅರ್ಥ ಘಟಕಗಳ ರಚನೆ, ಅವುಗಳ ರೂಪ, ವಾಕ್ಯಗಳ ಜೋಡಣೆ ಇತ್ಯಾದಿ ವಿಚಾರಗಳನ್ನು ಹೇಳಿದೆ. ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಪ್ರಕಟವಾದ ಈ ವ್ಯಾಕರಣದಲ್ಲಿ ಇಷ್ಟೆಲ್ಲ ವಿಶೇಷಗಳನ್ನು ಹೇಳಿದ ಬ್ರಿಗೆಲರ ಭಾಷಾಜ್ಞಾನ ನೋಡುವಾಗ ನಮಗೆ ಆಶ್ಚರ್ಯವಾಗುತ್ತದೆ.

ಕ್ಯಾಮರರ್ ಹಾಗೂ ಮ್ಯಾನರ್ ಈ ಎರಡು ಜನರ ಪ್ರಯತ್ನದ ಫಲವಾಗಿ ತುಳುವಿನ ಅಗಾಧ ಶಬ್ದ ಸಂಪತ್ತನ್ನು ಪಡೆದ ಒಂದು ನಿಘಂಟು ನಮಗೆ ದೊರೆಯಿತು. ತುಳುನಾಡಿನ ಎಷ್ಟೋ ವೃತ್ತಿ, ಉದ್ಯೋಗ, ಸಾಮಾಜಿಕ ಧಾರ್ಮಿಕ ಆಚರಣೆಗಳ ಪದಕೋಶ ಸಿಗದಿದ್ದರೂ ಸಾಮಾನ್ಯ ಜನಜೀವನದಲ್ಲಿ ವಾಡಿಕೆಯಲ್ಲಿರುವ ಆಧಾರಭೂತ ಶಬ್ದ ಸಮೂಹದ ಇಷ್ಟು ಒಳ್ಳೆಯ ಸಂಗ್ರಹ ನೂರು ವರ್ಷಗಳ ಹಿಂದೆಯೇ ಈ ವಿದ್ವಾಂಸರು ನಮಗೆ ಒದಗಿಸಿ ಕೊಟ್ಟುದಕ್ಕೆ ನಾವು ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

ಮ್ಯಾನರ್ ಸಂಗ್ರಹಿಸಿದ ‘ತುಳು ಪಾಡ್ದನೊಲು’ ನಮ್ಮ ಪಾಡ್ದನಗಳ ಮೊದಲ ಸಂಗ್ರಹ. ಈ ನೂರು ವರ್ಷಗಳಲ್ಲಿ ನಮಗೆ ಇನ್ನೊಂದು ಇಂತಹ ಸಂಗ್ರಹ ತರಲು ಸಾಧ್ಯವಾಗಲಿಲ್ಲ. ಈ ಪಾಡ್ದನಗಳನ್ನು ಕೊಟ್ಟು ಕೆಲವು ಪಾಡ್ದನಗಳ ಭಿನ್ನ ಪಠ್ಯಗಳನ್ನು ನೀಡಿ ಪಾಡ್ದನಗಳ ವೈಜ್ಞಾನಿಕ ಅಧ್ಯಯನಕ್ಕೆ ದಾರಿ ತೋರಿದ್ದಾರೆ. ಬರ್ನೆಲ್ ಬರೆದ ‘ದಿ ಡೆವಿಲ್ ವರ್ಶಿಪ್ ಆಪ್ ದಿ ತುಳುವ’ ಗ್ರಂಥದಲ್ಲಿ ೨೮ ಪಾಡ್ದನವಲ್ಲದೆ ಭೂತಾರಾಧನೆ, ಪಾಡ್ದನಗಳ ಅಧ್ಯಯನಕ್ಕೆ ನಾಂದಿ ಹಾಡಿದ ಒಂದು ವಿದ್ವಪೂರ್ಣ ಗ್ರಂಥವಾಗಿದೆ. ಗಾದೆಗಳ ಸಂಗ್ರಹದಲ್ಲೂ ತುಳುನಾಡಿನ ಜನಜೀವನ, ಅವರ ನಂಬಿಕೆ, ವಿಚಾರ, ಆದರ್ಶಗಳು ಜನರಿಗೆ ಸಿಗುವಂತಾಗಿ ಜಾನಪದ ಅಧ್ಯಯನಕ್ಕೆ ನೆರವಾಗಿದೆ.

ಹೀಗೆ ಈ ಕ್ರಿಶ್ಚಿಯನ್ ಮಿಶನರಿಗಳು ೧೮೪೦ನೇ ಇಸವಿಯಿಂದ ತೊಡಗಿ ೧೯೨೫ರ ತನಕ ಬೈಬಲ್ ಸಾಹಿತ್ಯದ ಅನುವಾದ ವ್ಯಾಕರಣ, ನಿಘಂಟು ರಚನೆ, ಪಾಡ್ದನ, ಭೂತಾರಾಧನೆ, ಗಾದೆಗಳ ಸಂಗ್ರಹ ಇತ್ಯಾದಿ ಗ್ರಂಥಗಳನ್ನು ಪ್ರಕಟ ಮಾಡುವ ಮೂಲಕ ತುಳು ಭಾಷೆ – ಸಾಹಿತ್ಯ – ಸಂಸ್ಕೃತಿಗಳ ಪುನರುದ್ಧಾರಕ್ಕೆ ನಾಂದಿ ಹಾಕಿದರು. ಅವರ ಪ್ರಯತ್ನದ ಮೂಲಕ ನಮ್ಮವರಿಗೆ ಸ್ಫೂರ್ತಿ ಹೊಂದಲು ಅದರಿಂದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅಂದರೆ ೧೯೧೦ ರಿಂದ ೧೯೪೦ರ ತನಕ ತುಳು ಚಳುವಳಿ ಮೂಡಿಬಂದಿತು. ಮೊದಲ ಮಿಶನರಿ ಯುಗದಲ್ಲಿ ತುಳು ಅನುವಾದ, ವ್ಯಾಕರಣ, ಕೋಶ, ಸಂಶೋಧನಾ ಗ್ರಂಥ ಬಂದರೂ ಸೃಜನಶೀಲ ಸಾಹಿತ್ಯದ ರಚನೆ ಈ ಕಾಲದಲ್ಲಿ ಆಗಲಿಲ್ಲ. ಅದಕ್ಕೆ ಕಾರಣ ಆ ಕಾಲದಲ್ಲಿ ಪ್ರಯತ್ನ ಮಾಡಿದವರು ಮಿಶನರಿಗಳು. ಅವರ ಉದ್ದೇಶವೇ ಬೇರೆ. ಕಾವ್ಯ ರಚನೆ ಅಲ್ಲ.

ತುಳುವಿನ ಸೃಜನಶೀಲ ಸಾಹಿತ್ಯ ರಚನೆ ನೋಡಬೇಕಾದರೆ ನಾವು ಎರಡನೆಯ ಯುಗಕ್ಕೆ ಬರಬೇಕು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಜನರಿಗೆ ತಮ್ಮ ಭಾಷೆ, ಸಂಸ್ಕೃತಿಯ ಮೇಲೆ ಅಭಿಮಾನ ಹುಟ್ಟಿತು. ೧೯೨೮ರಲ್ಲಿ ಪಣಿಯಾಡಿ ಶ್ರೀನಿವಾಸ ಆಚಾರ್ಯರ ಮೂಲಕ ಸ್ಥಾಪನೆಯಾದ ತುಳು ಸಾಹಿತ್ಯಮಾಲೆಯ ಮೂಲಕ ತುಳುವಿನಲ್ಲಿ ಸೃಜನಶೀಲ ಸಾಹಿತ್ಯ ರಚನೆಗೆ ಉತ್ತೇಜನ ದೊರೆಯಿತು. ಬಡಕಬೈಲು ಪರಮೇಶ್ವರಯ್ಯ, ಪೊಳಲಿ ಶೀನಪ್ಪ ಹೆಗ್ಗಡೆ, ಎನ್.ಎಸ್.ಕಿಲ್ಲೆ, ಮಾಧವ ತಿಂಗಳಾಯ, ಸತ್ಯಮಿತ್ರ ಬಂಗೇರ, ಎಂ.ವಿಟ್ಠಲ ಹೆಗ್ಡೆ ಇವರೆಲ್ಲ ಪಣಿಯಾಡಿಯವರ ಜೊತೆ ಸೇರಿ ತುಳುವಿನ ಸೃಜನಶೀಲ ಸಾಹಿತ್ಯಕ್ಕೆ, ತುಳುವಿನ ಪುನರುಜ್ಜೀವನಕ್ಕೆ ಭದ್ರ ಪಂಚಾಂಗ ಹಾಕಿದರು.

ತುಳು ಭಾಷೆಯ ಸಾಹಿತ್ಯ ರಚನೆಗೆ ಯೋಗ್ಯವಾದ ಭಾಷೆ. ಅದರಲ್ಲಿ ಕನ್ನಡ, ತಮಿಳು ಇತ್ಯಾದಿ ಭಾಷೆಯಂತೆಯೇ ಸೊಗಸಾದ ಸಾಹಿತ್ಯ ರಚನೆ ಮಾಡಲು ಸಾಧ್ಯವಿದೆಯೆನ್ನುವುದನ್ನು ತೋರಿಸಿದುದೇ ಎರಡನೆಯ ಯುಗ. ಈ ಯುಗದಲ್ಲಿ ತುಳುವಿನ ಯಕ್ಷಗಾನ ಗ್ರಂಥಗಳು, ಪಾಡ್ದನಗಳು, ಕವಿತಾ ಸಂಕಲನಗಳು, ಕತೆಗಳು, ನಾಟಕಗಳು, ಕಾದಂಬರಿಗಳು ಎಲ್ಲವೂ ಪ್ರಕಟವಾದವು. ವಾದಿರಾಜ ಸ್ವಾಮಿಗಳು ಬರೆದುದು ಎಂದು ಪ್ರಸಿದ್ಧವಾಗಿರುವ ‘ಲೇಲೆ ಲೇಲೆಗಾ’ ಎನ್ನುವ ದಶಾವತಾರ ಸ್ತೋತ್ರವೇ ತುಳುವಿನ ಮೊದಲ ಕವನ ಎಂದು ನಾವು ನಂಬಿದರೆ ೧೬ನೇ ಶತಮಾನದಲ್ಲೇ ತುಳು ಕವನ ರಚನೆ ಪ್ರಾರಂಭವಾಯಿತೆಂದು ಹೇಳಬಹುದು. ಆದರೆ ಅದನ್ನು ಬರೆದವರು ಯಾರು ಎನ್ನುವ ವಿಷಯದಲ್ಲಿ ವಿವಾದ – ಸಂದೇಹವಿದೆ.

ಎರಡನೆಯ ಯುಗದಲ್ಲಿ ಸಾಹಿತ್ಯ ರಚನೆ ರಾಜಾಶ್ರಯದ ಮೂಲಕವೇ ಆಯಿತು. ಮೊದಲ ತುಳು ಯಕ್ಷಗಾನ ‘ಪಂಚವಟಿ ರಾಮಾಯಣ ವಾಲಿ ಸುಗ್ರೀವೆರೆ ಕಾಳಗ’ ಬರೆದ ಸಂಕಯ್ಯ ಭಾಗವತರು ವಿಟ್ಲ ಸೀಮೆಯ ಬಳ್ಳಾಲರ ಆಸ್ಥಾನ ಕವಿಯಂತೆ. ಇದು ಪ್ರಕಟವಾದುದು ೧೯೧೭ರಲ್ಲಾದರೂ ೧೮೮೭ರಲ್ಲಿ ಬರೆದುದನ್ನು ಈ ಕಾವ್ಯದಲ್ಲಿ ತುಳುಭಾಷೆಯ ವಾಸನೆ ಚೆನ್ನಾಗಿ ಪ್ರಕಟವಾಗಿದೆ. ದೇಸಿ ನುಡಿಗಟ್ಟು, ಕಾವ್ಯಮಯ ಶೈಲಿ, ಸಂಭಾಷಣೆಯ ಸೊಗಸು ಇದನ್ನೆಲ್ಲಾ ನೋಡಿದಾಗ ತುಳು ಸಾಹಿತ್ಯದ ಈ ಚೊಚ್ಚಲ ಕೃತಿಗೆ ಒಂದು ವಿಶಿಷ್ಟ ಸ್ಥಾನವಿದೆ. ಇದು ಬ್ರಾಹ್ಮೇತರ ಸಾಮಾನ್ಯ ತುಳು ಉಪಭಾಷೆಯಲ್ಲಿ ರಚಿತವಾಗಿದೆ.

ಸುಬ್ರಹ್ಮಣ್ಯ ಶಾಸ್ತ್ರಿಗಳು ಬ್ರಾಹ್ಮಣರ ತುಳುವಿನಲ್ಲಿ ಬರೆದ ೧೯೧೬ರಲ್ಲಿ ಪ್ರಕಟ ಮಾಡಿದ ‘ತುಳು ಕನ್ಯೋಪದೇಶ’ ಮದುಮಗಳಿಗೆ ಗಂಡನ ಮನೆಗೆ ಹೋಗುವಾಗ ಮಾಡಿದ ಉಪದೇಶ ಮಾದರಿಯ ಗ್ರಂಥ. ೮೮ ಶ್ಲೋಕಗಳಲ್ಲಿ ರಚಿತವಾದ ಈ ಗ್ರಂಥ ಹೆಣ್ಣು ಮಕ್ಕಳ ಕರ್ತವ್ಯಗಳನ್ನು ತೋರಿಸಿಕೊಡುವ ಉಪದೇಶಾತ್ಮಕ ಮಾದರಿಯದು. ತುಳುವರಿಗೆ ತಮ್ಮ ಭಾಷೆಯ ಮೇಲೆ ಪ್ರೀತಿ, ಅಭಿಮಾನ ಹುಟ್ಟಲು, ಹೆಣ್ಣು ಮಕ್ಕಳಲ್ಲಿ ವಿದ್ಯಾಭಿರುಚಿ ಬೆಳೆಯಲು ಇದನ್ನು ಬರೆದುದಾಗಿ ಕವಿ ಹೇಳಿರುವರು. ಬ್ರಾಹ್ಮಣ ಭಾಷೆಯ ಧಾಟಿ ಇದರಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ.

ಬಡಕಬೈಲು ಪರಮೇಶ್ವರಯ್ಯನವರ ‘ತುಳು ಕಿಟ್ಣರಾಜಿ ಪರ್ಸಂಗೊ’ ೧೯೨೯ನೇ ಇಸವಿಯಲ್ಲಿ ಪ್ರಕಟವಾದ ತುಳು ಯಕ್ಷಗಾನ ಪ್ರಸಂಗ. ಕನ್ನಡ ಪ್ರಸಂಗದ ಅನುವಾದವಾದರೂ ತುಳು ಸಂಸ್ಕೃತಿಯ ಚೆಹರೆಯನ್ನು ಇದರಲ್ಲಿ ಸರಿಯಾಗಿ ನೋಡಬಹುದು. ತುಳುವಿನ ಮಣ್ಣಿನ ಗುಣ ಇದರಲ್ಲಿ ಎದ್ದು ತೋರುತ್ತದೆ. ಅನುವಾದ ಎಲ್ಲೂ ಕೃತಕವಾಗಿ ತೋರಿಬರುವುದಿಲ್ಲ. ಇದೇ ಲೇಖಕರ ‘ಭಜಗೋವಿಂದ’ದ ಅನುವಾದವೂ ೧೯೨೦ರಲ್ಲಿ ಪ್ರಕಟವಾಯಿತು. ‘ತುಳು ನೀತಿ ಪದ್ಯೊಲು’ ಎಂಬ ಸಂಗ್ರಹವನ್ನು ತಂದರು. ಇದರಲ್ಲಿ ೧೦೦ ತುಳು ನೀತಿಪದ್ಯಗಳಿವೆ.

ನಂದಳಿಕೆ ಶೀನಪ್ಪ ಹೆಗ್ಗಡೆಯವರ ‘ತುಳುವಾಲ ಬಲಿಯೇಂದ್ರ’ ಪಾಡ್ದನ ರೂಪದಲ್ಲಿ ೧೯೨೯ರಲ್ಲಿ ಪ್ರಕಟವಾಯಿತು. ಪೌರಾಣಿಕ ಕತೆಗೆ ಜಾನಪದ ಒಪ್ಪ ನೀಡಿ ತುಳುವಿನ ಒಂದು ಅಪೂರ್ವ ರಚನೆಯಾಗಿ ಬಂದಿದೆ ಈ ಕೃತಿ. ತುಳುವರು ಬಲೀಂದ್ರ ಹಬ್ಬವನ್ನು ಆಚರಣೆ ಮಾಡುವ ರೀತಿಯನ್ನು ನೀಡಿರುವ ಮೂಲಕ ನಮ್ಮ ತುಳುವ ಜಾನಪದಕ್ಕೆ ಸಂಬಂಧಿಸಿದ ಅಪೂರ್ವ ಮಾಹಿತಿಯನ್ನು ನೀಡಿದ್ದಾರೆ.

ಕೆ.ಬಿ. ನಾರಾಯಣ ಶೆಟ್ಟಿ (ಎನ್.ಎಸ್.ಕಿಲ್ಲೆ) ಅವರು ‘ಕಾನಿಗೆ’ ಎಂಬ ಹೆಸರಲ್ಲಿ ೩೪ ತುಳು ಕವಿತಾ ಸಂಗ್ರಹವನ್ನು ೧೯೩೨ರಲ್ಲಿ ಪ್ರಕಟಿಸಿದರು. ತುಳುವಿನ ಒಂದು ಸಹಜ ಕಾವ್ಯಶಕ್ತಿಯನ್ನು ಈ ಸಂಗ್ರಹದಲ್ಲಿ ನೋಡಬಹುದು. ಹೆಣ್ಣು ಮಕ್ಕಳು ಪದ್ಯರೂಪದಲ್ಲಿ ಹಾಡಲು ಅನುಕೂಲವಾಗುವ ದಾಟಿಯಲ್ಲಿ ಇಲ್ಲಿನ ರಚನೆಗಳಿವೆ. ತುಳುಭಾಷೆಯಲ್ಲೂ ಸಂಗೀತಾತ್ಮಕ ರಚನೆ ಸಾಧ್ಯ ಎನ್ನುವುದು ಇದರಿಂದ ತಿಳಿಯುತ್ತದೆ.

೧೯೩೩ರಲ್ಲಿ ಪ್ರಕಟವಾದ ಮಾಧವ ತಿಂಗಳಾಯರ ‘ಜನ ಮರ್ಲ್’ ತುಳುವಿನ ಮೊದಲ ನಾಟಕ. ಆ ಕಾಲದಲ್ಲಿ ಇದನ್ನು ತುಳುನಾಡಿನಾದ್ಯಂತ ರಂಗಭೂಮಿಯಲ್ಲಿ ಪ್ರದರ್ಶಿಸಿದರು. ಅವರ ‘ಧರ್ಮದ ಉದಲ್’, ‘ಬದಿ ರಕ್ಕಸೆ’ ಎಂಬ ಬೇರೆ ಎರಡು ನಾಟಕಗಳು ರಂದದಲ್ಲಿ ಯಶಸ್ವಿಯಾದುವಂತೆ. ಆದರೆ ಆ ನಾಟಕಗಳು ಮುದ್ರಣವಾಗಲಿಲ್ಲ. ಸಮಾಜ ಸುಧಾರಣೆ, ಹಳ್ಳಿಯ ಉದ್ಧಾರ ಇತ್ಯಾದಿ ವಸ್ತುಗಳನ್ನು ಆಧರಿಸಿದ ಈ ನಾಟಕಗಳು ತುಳುಭಾಷೆಯ ಸಂಭಾಷಣೆಯ ಸೊಗಸನ್ನು ತೋರಿಸುತ್ತವೆ.

ಎಂ. ವಿಠಲ ಹೆಗ್ಗಡೆಯವರ ‘ಮದ್ಮಾಳತ್ತ್ ಮದ್ಮಾಯೆ’ ೧೯೩೩, ಶೀನಪ್ಪ ಹೆಗ್ಗಡೆಯವರ ‘ಮಿತ್ಯ ನಾರಾಯಣ ಕತೆ’ ೧೯೩೫ ಎಸ್.ಯು.ಪಣಿಯಾಡಿವರ ‘ಸತೀ ಕಮಲೆ’ ೧೯೩೬- ಇವು ಮೂರೂ ಕಾದಂಬರಿ ಪ್ರಕಾರಕ್ಕೆ ಸೇರಿದವು. ‘ಮದ್ಮಾಲತ್ತ್ ಮದಿಮಾಯೆ’ ನೀಳ್ಗತೆ ಜಾತಿಗೆ ಸೇರಿದ್ದಾಗಿದೆ. ‘ಪೌರಾಣಿಕ ಕತೆಯ ರೂಪದಲ್ಲಿದೆ. ‘ಸತೀ ಕಮಲೆ’ ಸಂಪೂರ್ಣ ಒಂದು ಕಾದಂಬರಿ ರೂಪದಲ್ಲಿದೆ.

‘ಮದ್ಮಾಳತ್ತ್ ಮದಿಮಾಯೆ’ ಒಂದು ಹಾಸ್ಯ ವಿಡಂಬನ ಕೃತಿ ಎಂದು ಹೇಳಬಹುದು. ವಿಡಂಬನದ ಮೂಲಕ ಸಮಾಜ ಸುಧಾರಣೆ ಮಾಡುವುದು ಲೇಖಕರ ಉದ್ದೇಶ. ಒಬ್ಬ ಧನವಂತ ಮುದುಕ ಹೆಣ್ಣಿನ ವ್ಯಾಮೋಹದಲ್ಲಿ ಹಾಳಾಗುವ ಕತೆಯನ್ನು ಸತ್ವಪೂರ್ಣ ಶೈಲಿಯಲ್ಲಿ ಎಂ.ವಿ.ಹೆಗ್ಗಡೆಯವರು ಬರೆದಿದ್ದಾರೆ.

‘ಮಿತ್ಯ ನಾರಾಯಣ ಕತೆ’ ಜನಪದ ಶೈಲಿಯ ಸತ್ವವನ್ನು ಚೆನ್ನಾಗಿ ಹೀರಿಕೊಂಡು ಪೌರಾಣಿಕ ಕತೆಗಳ ಮಾದರಿಯಲ್ಲಿ ರಚನೆ ಮಾಡಿದ ಕೃತಿ. ತುಳುನಾಡಿನ ಜನಜೀವನದಲ್ಲಿ ಕಂಡುಬರುವ ಸಂಪ್ರದಾಯ, ನಂಬಿಕೆ, ಆಚರಣೆ, ವೃತ್ತಿ, ಕಸುಬು ಇತ್ಯಾದಿಗಳ ವರ್ಣನೆ, ತುಳುವಿನ ಗಾದೆಗಳು ಇತ್ಯಾದಿ ಎಲ್ಲವೂ ಇದರಲ್ಲಿವೆ. ತುಳು ಸಂಸ್ಕೃತಿಯ ಸಂಶೋಧಕರಿಗೂ ಇದು ಒಂದು ಆಕರ ಗ್ರಂಥವಾಗಬಹುದು.

ತುಳುವಿನ ಮೊದಲ ಕಾದಂಬರಿ ಎಂದು ಹೆಸರು ಮಾಡಿದ ‘ಸತೀ ಕಮಲೆ’ ಯನ್ನು ಪಣಿಯಾಡಿಯವರು ಬ್ರಾಹ್ಮಣ ತುಳುವಿನಲ್ಲಿ ಬರೆದರು. ೧೯೨೧ರಲ್ಲಿ ಬರೆದ ಈ ಕಾದಂಬರಿ ೧೯೩೬ರಲ್ಲಿ ಪ್ರಕಟವಾಯಿತು. ಪಣಿಯಾಡಿಯವರ ಕ್ರಾಂತಿಕಾರಿ ಮನೋಧರ್ಮದ ಪ್ರತೀಕವಾಗಿರುವ ಈ ಕಾದಂಬರಿಯಲ್ಲಿ ಸ್ತ್ರೀಶಿಕ್ಷಣ, ಬಾಲ್ಯವಿವಾಹ, ವಿಧವಾ ವಿವಾಹ, ಸ್ವಾತಂತ್ರ್ಯ ಚಳುವಳಿ, ತುಳುಭಾಷೆಯ ಪುನರುದ್ಧಾನ ಇತ್ಯಾದಿ ಸಮಸ್ಯೆಗಳ ವಿವೇಚನೆ ಉಂಟು. ಕತೆಯನ್ನು ಬೆಳೆಸುವ ತಂತ್ರ, ಹಿತಮಿತವಾಗಿರುವ ಹಾಸ್ಯಮ, ಸರಳಶೈಲಿ ಇತ್ಯಾದಿ ಗುಣಗಳು ಆಧುನಿಕ ಕಾದಂಬರಿಯಂತೆಯೇ ಇದ್ದು ಇದು ತುಳು ಸಾಹಿತ್ಯದ ಒಂದು ಅಪೂರ್ವ ಕೃತಿಯಾಗಿದೆ.

‘ತುಳು ಸಾಹಿತ್ಯ ಮಾಲೆ’ಯ ೧೨ ಕೃತಿಗಳಲ್ಲಿ ೯ ಸೃಜನಾತ್ಮಕ ಸಾಹಿತ್ಯ ಕೃತಿಗಳು, ಎರಡು ವ್ಯಾಕರಣ – ಸಂಶೋಧನ ಕೃತಿಗಳು. ಒಂದು ತುಳು ಮಹಾಸಭೆಯ ವರದಿ, ತುಳು ಸಾಹಿತ್ಯ ಮಾಲೆ ಮತ್ತು ೧೨ ಕೃತಿಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿತ್ತು. ಅವುಗಳ ಹೆಸರನ್ನು ನೀಡಿತ್ತು. ಆದರೆ ಪ್ರಕಟವಾಗುವ ಮೊದಲೇ ಎಸ್.ಯು. ಪಣಿಯಾಡಿಯವರು ಊರುಬಿಟ್ಟು ಹೋಗುವ ಕಾಲ ಬಂದಿತು. ಆ ಗ್ರಂಥಗಳ ಹಸ್ತಪ್ರತಿಗಳು ಏನಾದವೋ ತಿಳಿಯದು.

ಪಣಿಯಾಡಿಯವರ ಸಾಹಿತ್ಯಮಾಲೆಯಲ್ಲದೆ ಬೇರೆ ಕೆಲವು ಪ್ರಕಾಶನ ಸಂಸ್ಥೆಗಳೂ ತುಳು ಸಾಹಿತ್ಯ ನಿರ್ಮಾಣ ಕಾರ್ಯದಲ್ಲಿ ಪರಿಶ್ರಮ ಮಾಡಿದ್ದವು. ಎಂ.ಪಿ.ವಿ. ಶರ್ಮಾ ಬರೆದ ಪದ್ಯ ಸಂಗ್ರಹ ‘ಕನ್ನಡಕೊ’, ನರ್ಕಳ ಮಾರಪ್ಪ ಶೆಟ್ಟಿ ಬರೆದ ‘ಅಮಲ್ ದೆಪ್ಪಡೆ’ (೧೯೨೯), ‘ಪೊರ್ಲ ಕಂಟ್'(೧೯೩೦) ಎನ್ನುವ ಕವನ ಸಂಗ್ರಹಗಳು, ಮೋನಪ್ಪ ತಿಂಗಳಾಯರು ಬರೆದ ‘ತುಳು ಪದ್ಯಾವಳಿ’ (೧೯೩೦) ಎನ್ನುವ ಕವನ ಸಂಗ್ರಹ, ಎಚ್. ನಾರಾಯಣ ರಾವ್ ಬರೆದ ‘ಪತಿತೋದ್ಧರಣ ಪದ್ಯಾವಳಿ’, ದಾಮೋದರ ಪುಣಿಂಚತ್ತಾಯರು ಬರೆದ ‘ಸ್ತುತಿರೂಪದ ಪದ್ಯಗಳು’, ಸೀತಾನದಿ ಗಣಪಯ್ಯ ಶೆಟ್ಟಿಯವರ ‘ತುಳು ಭಜನಾವಳಿ’ ಇತ್ಯಾದಿಗಳು ತುಳು ಭಾಷೆ, ಕಾವ್ಯ ರಚನೆಗೆ ತಕ್ಕುದಾದ ಭಾಷೆ ಎನ್ನುವುದನ್ನು ತೋರಿಸಿಕೊಟ್ಟವು. ಈ ಕವಿತೆಗಳಲ್ಲಿ ಭಕ್ತಿ ಭಾವವನ್ನು ಜನರಲ್ಲಿ ಹುಟ್ಟಿಸುವ ಜೊತೆಗೆ ಸಮಾಜ ಸುಧಾರಣೆಯ ದೃಷ್ಟಿಯೂ ಇದ್ದಿತ್ತು. ಧೂಮಪಾನ ನಿಷೇಧ, ಪಶುಬಲಿ ನಿಷೇಧ ಇತ್ಯಾದಿಗಳ ಪ್ರಚಾರ ಮಾಡಿ ಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸುವುದು ಈ ಕೃತಿಗಳ ಉದ್ದೇಶವಾಗಿದ್ದಂತೆ ಕಾಣುತ್ತದೆ.

ಮುಲ್ಕಿ ನರಸಿಂಗರಾಯರ ‘ಗೀತೆಮಲ್ಲಿಗೆ’ ಎನ್ನುವ ‘ತುಳು ಭಗವದ್ಗೀತೆ’ ೧೯೩೪ರಲ್ಲಿ ಪ್ರಕಟವಾಗಿದ್ದು, ಅದು ಭಗವದ್ಗೀತೆಯ ತುಳು ಭಾಷಾಂತರ. ದೇರಂಬಳ ತ್ಯಾಂಪಣ್ಣ ಶೆಟ್ಟಿಯವರ ಪಂಚವಟಿ ವಾಲಿ ಸಂಹಾರ ತುಳುವಿನ ಮೂರನೆ ಯಕ್ಷಗಾನ ಗ್ರಂಥ.

ಜೈನಧರ್ಮಕ್ಕೆ ಸಂಬಂಧಿಸಿದ ಗ್ರಂಥಗಳೂ ಈ ಸಂದರ್ಭದಲ್ಲಿ ಪ್ರಕಟವಾದುವು. ‘ಅಂದೇ ಸ್ವಾಮಿ’ , ‘ದೇವೆರ್’, ‘ಜೈನೆರೆ ತುಳು ನಿತ್ಯವಿಧಿ’ – ಸಂಧ್ಯಾ ವಂದನೆ, ದೇವರ ಪೂಜೆ ಇವು ಕೆಲವು ಮುಖ್ಯ ಕೃತಿಗಳು.

ಈ ಯುಗದಲ್ಲಿ ತುಳುನಾಡಿನ ಇತಿಹಾಸ, ಸಂಶೋಧನೆಯ ಮೇಲೂ ಗ್ರಂಥಗಳು ಪ್ರಕಟವಾದುವು.

ಶೀನಪ್ಪ ಹೆಗ್ಗಡೆಯವರು ಬರೆದ ‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ’ ಮತ್ತು ‘ಭೂತಾಳ ಪಾಂಡ್ಯ ರಾಯನ ಅಳಿಯಕಟ್ಟು’ (೧೯೧೮) ಮತ್ತು ಗಣಪತಿ ರಾವ್ ಐಗಳ್ ಬರೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ (೧೯೨೨) ಕನ್ನಡದಲ್ಲಿ ಬರೆದ ಗ್ರಂಥವಾದರೂ ತುಳು ಭಾಷೆ, ಸಂಸ್ಕೃತಿಯ ಪುನರುದ್ಧಾರದ ಕಾಲದಲ್ಲಿ ಬೇಕಾದ ಸಹಾಯ ಮಾಡಿದವು.

ತುಳುಭಾಷೆಯಲ್ಲಿ ಬರೆದ ‘ಅಳಿಯ ಸಂತಾನದ ಕಟ್ಟ್‌ದ ಗುಟ್ಟು’ (ಸತ್ಯಮಿತ್ರ ಬಂಗೇರ) ತುಳು ಭಾಷೆಯಲ್ಲಿ ಸಂಶೋಧನಾ ಗ್ರಂಥ ರಚನೆಯ ಸಾಧ್ಯತೆಯನ್ನು ತೋರಿದ ಕೃತಿ. ಸಂಶೋಧನೆಯಂತಹ ವಿಷಯವನ್ನು ಕೂಡಾ ಸುಲಭ ಸರಳ ಭಾಷೆಯಲ್ಲಿ ಎಷ್ಟು ಸೊಗಸಾಗಿ ಬರೆಯಬಹುದು ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಭೂತಾಳಪಾಂಡ್ಯನ ಇತಿಹಾಸಕ್ಕೆ ಬೇಕಾದ ಆಧಾರಗಳು ಅಲ್ಲಿ ಸಿಗುತ್ತವೆ.

ಇನ್ನೊಂದು, ತುಳುಭಾಷೆಯಲ್ಲೇ ಬರೆದ ಕೃತಿ ಪಣಿಯಾಡಿಯವರ ‘ತುಳು ವ್ಯಾಕರಣ’. ಪಾಣಿನಿಯ ವ್ಯಾಕರಣ ಪ್ರಕ್ರಿಯೆಯ ಶೈಲಿಯಲ್ಲಿ ಆಧುನಿಕ ಭಾಷಾವಿ‌ಜ್ಞಾನದ ಮನೋಧರ್ಮವನ್ನು ಪ್ರಕಟಪಡಿಸಿರುವ ಈ ಗ್ರಂಥ ತುಳುಭಾಷೆಯ ಅಧ್ಯಯನದಲ್ಲಿ ಮೈಲಿಗಲ್ಲಾಗಿದೆ.

ತುಳು ಮಹಾಸಭೆಯಂತೆಯೇ ‘ನವಯುಗ’ ವಾರಪತ್ರಿಕೆಯೂ ತನ್ನ ಸಂಚಿಕೆಗಳಲ್ಲಿ ತುಳು ಲೇಖನಗಳನ್ನು ಪ್ರಕಟಿಸಲು ಆರಂಭಿಸಿ ತುಳು ಬರವಣಿಗೆಗೆ ಪ್ರೋತ್ಸಾಹ ನೀಡಲು ಆರಂಭಿಸಿತು. ನವಯುಗ ಪತ್ರಿಕೆ ಈ ಶತಮಾನದ ಮೂರನೇ ದಶಕದಲ್ಲಿ ತೋರಿದ ಆದರ್ಶವನ್ನು ನಮ್ಮ ಪ್ರತಿಕೆಗಳು ಇಂದಿಗೂ ಅನುಕರಣೆ ಮಾಡಬೇಕು.

ಸ್ವಾತಂತ್ರ್ಯ ದೊರೆತ ಬಳಿಕ ಈ ತುಳು ಚಳುವಳಿ ಸ್ವಲ್ಪ ಕಾಲ ಸ್ಥಗಿತಗೊಂಡುದು ಬೇಸರದ ಸಂಗತಿ. ಪಣಿಯಾಡಿ, ಶೀನಪ್ಪ ಹೆಗ್ಗಡೆ, ತಿಂಗಳಾಯ, ಬಂಗೇರ ಮುಂತಾದವರು ಹಾಕಿಕೊಟ್ಟ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಬಂದಿದ್ದರೆ ಇಷ್ಟು ಹೊತ್ತಿಗೆ ತುಳು ಸಾಹಿತ್ಯ ಸಮೃದ್ಧವಾಗಿ ಬೆಳೆದು ಅದರಲ್ಲಿ ಪಠ್ಯಪುಸ್ತಕ, ಕಥೆ, ಕಾದಂಬರಿ ಇತ್ಯಾದಿಗಳು ಬಂದು ಶಾಲೆಯಲ್ಲೂ ಕಲಿಸುವ ಭಾಷೆಯಾಗುತ್ತಿತ್ತು. ಇಂದು ಭಾರತ ಸರಕಾರವೂ ಅಲ್ಪಸಂಖ್ಯಾತರಿಗಾಗಿ, ಗಿರಿಜನರಿಗಾಗಿ ಅವರ ಭಾಷೆಗಳನ್ನು ಅಭಿವೃದ್ಧಿಪಡಿಸುವ, ಓದು ಬರಹಗಳ ಮೂಲಕ ಪ್ರಚಾರ ಮಾಡಿ ಶಾಲೆಗಳಲ್ಲಿ ಕಲಿಸಲು ಸೂಕ್ತ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಆ ಬಗೆಯ ಪ್ರಯತ್ನವನ್ನು ನಾವು ಮಾಡಲಿಲ್ಲ. ತುಳುವಿನಲ್ಲಿ ಬರೆಯುವ, ಪ್ರಕಟಿಸುವ, ಓದುವ ಸಂಪ್ರದಾಯ ಅಲ್ಲಿಗೇ ನಿಂತುಹೋದಂತಾಯಿತು.

ಆದರೆ ಈ ಸಂದರ್ಭದಲ್ಲಿ ಸ್ವಲ್ಪ ತಡವಾಗಿಯಾದರೂ ಅಲ್ಲಲ್ಲಿ ಒಳ್ಳೆಯ ಪ್ರಯತ್ನಗಳು ನಡೆದಂತೆ ಕಾಣಿಸುತ್ತದೆ. ಈ ದಿಕ್ಕಿನಲ್ಲಿ ತುಳು ನಾಟಕಗಳ ಪಾತ್ರ ಬಹಳ ಮುಖ್ಯವಾದುದು. ಸಂಘ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ತುಳು ನಾಟಕಗಳಿಗೆ ಪ್ರೋತ್ಸಾಹ ದೊರೆತು ತುಳು ನಾಟಕಗಳ ರಚನೆ, ಅಭಿನಯ ಬೆಳೆಯುತ್ತ ಬಂತು. ಕೆಮ್ತೂರು ದೊಡ್ಡಣ್ಣ ಶೆಟ್ಟಿ, ಕೆ.ಎನ್. ಟೈಲರ್, ರಾಮ ಕಿರೋಡಿಯನ್, ಯು.ಆರ್. ಚಂದರ್, ಕೆ.ಬಿ.ಭಂಡಾರಿ, ಮಚ್ಚೇಂದ್ರನಾಥ್, ರಮಾನಂದ ಚೂರ್ಯ, ಸೀತಾರಾಮ ಕುಲಾಲ್, ಪಿ.ಎಸ್.ರಾವ್ ಮುಂತಾದ ದೊಡ್ಡ ದೊಡ್ಡ ನಾಟಕಕಾರರ ರಚನೆಗಳು ರಂಗಭೂಮಿಯಲ್ಲಿ ಜನಸಾಮಾನ್ಯರ ಮೆಚ್ಚುಗೆ ಪಡೆಯುತ್ತ ಬಂತು. ತುಳು ಸಮಾಜದ ಸಾಮಾಜಿಕ ಸಮಸ್ಯೆಗಳನ್ನು ಬೆಳಕಿಗೊಡ್ಡುವ ಈ ನಾಟಕಗಳಲ್ಲಿ ತುಳು ಮಾತಿನ ಸೊಗಸು, ಗಾದೆಗಳ ಅರ್ಥವಂತಿಕೆ ಮುಂತಾದವು ಮೈತುಂಬಿಕೊಂಡು ಬಂದುವು.

ಇದೇ ಸಮಯದಲ್ಲಿ ಮಂಗಳೂರಿನ ‘ತುಳುಕೂಟ’ ಎನ್ನುವ ಸಂಸ್ಥೆಯೂ ತುಳುವಿನಲ್ಲಿ ಮಾಸಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿ ಕೆಲವು ವರ್ಷಗಳ ಕಾಲ ಒಳ್ಳೆಯ ಕೆಲಸ ಮಾಡಿತು. ತುಳುವಿನಲ್ಲಿ ಕತೆಗಳು, ಲೇಖನಗಳು, ಕವಿತೆಗಳು, ಹಾಸ್ಯ ಬರಹಗಳು, ಭಗವದ್ಗೀತೆ ಇತ್ಯಾದಿಗಳ ಭಾಷಾಂತರಗಳು ಬಂದು ತುಳು ಸಾಹಿತ್ಯದ ರಚನೆಗೆ ಬಂದು ಬಗೆಯ ಪ್ರೋತ್ಸಾಹ ದೊರೆಯಿತು. ಪಣಿಯಾಡಿಯವರ ತುಳು ಮಹಾಸಭೆಯ ಬಳಿಕ ಸುಸಂಘಟಿತ ರೀತಿಯಲ್ಲಿ ಭಾಷಾಪ್ರಚಾರ, ಸಾಹಿತ್ಯಸೇವೆ ಮಾಡಿದ ಸಂಸ್ಥೆ ಇದುವೇ. ಇದೇ ರೀತಿಯಲ್ಲಿ ‘ತುಳುವೆರೆ ಬಂಧು’, ‘ತುಳುಸಿರಿ’, ‘ತುಳುನಾಡ್’ ಎನ್ನುವ ಪತ್ರಿಕೆಗಳು ಬರಲಾರಂಭಿಸಿದವು. ಆದರೆ ಆರ್ಥಿಕ ದೃಷ್ಟಿಯಲ್ಲಿ ಈ ಪತ್ರಿಕೆಗಳನ್ನು ಮುಂದೆ ತರಲು ಸಾಧ್ಯವಾಗಲಿಲ್ಲ. ತುಳುನಾಡಿನ ಜನರಲ್ಲಿ ತುಳುವಿನಲ್ಲಿ ಓದಲು ಬರೆಯಲು ಪ್ರೋತ್ಸಾಹ ನೀಡುವ ಮನೋಭಾವ ಬೆಳೆಯಲಿಲ್ಲ.

ಭಾಷಾವೈಜ್ಞಾನಿಕ ರೀತಿಯಲ್ಲಿ ತುಳುಭಾಷೆಯ ಅಧ್ಯಯನ ಸಂಶೋಧನೆಯೂ ಈ ಕಾಲದಲ್ಲೇ ಮುಂದೆ ಬಂದಿತು.

ಇದೀಗ ಒಂದು ಹತ್ತು ವರ್ಷಗಳಿಂದೀಚೆಗೆ ಕೆಲವು ವಿದ್ವಾಂಸರು, ವಿಚಾರವಾದಿಗಳು ತುಳುಭಾಷೆ, ಸಾಹಿತ್ಯದ ಪುನರದ್ಧಾರಕ್ಕೆ ಪ್ರಯತ್ನ ಮಾಡಲು ಆರಂಭಿಸಿದರು. ನಮ್ಮ ಸಾಹಿತ್ಯಕ್ಕೂ ಒಂದು ಶಿಷ್ಟ ಪರಂಪರೆಯನ್ನು ಬೆಳೆಸಬೇಕು. ಬೇರೆ ಭಾಷೆಯಲ್ಲಿ ಇರುವಂತೆ ಒಂದು ಒಳ್ಳೆಯ ಸಾಹಿತ್ಯ ಪರಂಪರೆಯನ್ನು ಸೃಷ್ಟಿ ಮಾಡಬೇಕು. ಸಾಮಾನ್ಯ ಜನರನ್ನು ನಗಿಸುವ ನಾಟಕಗಳು, ಹಾಸ್ಯದ ಕತೆ, ಕವನಗಳು ಮಾತ್ರ ಸಾಲದು ಎನ್ನುವ ಪ್ರಜ್ಞೆ ಈ ಕಾಲದಲ್ಲಿ ಮೂಡಿಬರತೊಡಗಿತು.

ಮಂದಾರ ಕೇಶವ ಭಟ್ಟರು ಬರೆದ ‘ಮಂದಾರ ರಾಮಾಯಣ’, ಅಮೃತ ಸೋಮೇಶ್ವರರು ಬರೆದ ‘ಗೋಂದೊಲು’, ರಾಯರಾವುತೆ ನಾಟಕಗಳು, ವಾಮನ ನಂದಾವರ ಬರೆದ ‘ಓಲೆ ಪಟಾಕಿ’, ದೂಮಪ್ಪ ಮಾಸ್ತರರು ಬರೆದ ‘ಮಾದಿರನ ಗಾದೆಲು’, ಕುದ್ಕಾಡಿ ವಿಶ್ವನಾಥ ರೈಗಳು ಬರೆದ ಹೊಸ ಸಾಮಾಜಿಕ ಪ್ರಜ್ಞೆಯ ಪ್ರಯೋಗಾತ್ಮಕ ನಾಟಕಗಳು, ಜತ್ತಪ್ಪ ರೈಗಳು ಬರೆದ ಗದ್ಯಗ್ರಂಥಗಳು, ಪುಣಿಂಚತ್ತಾಯರ ಕವನಗಳು ಮತ್ತು ಇತ್ತೀಚೆಗೆ ಬರತೊಡಗಿದ ಬೇರೆ ಬೇರೆ ಯಕ್ಷಗಾನ ಪ್ರಸಂಗಗಳು ತುಳು ಸಾಹಿತ್ಯದ ಶಿಷ್ಟ ಸಾಹಿತ್ಯ ಹಸುರಾಗಿ ಬೆಳೆದು ಬಂದಲ್ಲಿ ತುಳುವಿನಲ್ಲಿ ಒಂದು ಶಿಷ್ಟ ಸಂಪ್ರದಾಯ ರೂಪುಗೊಂಡು ಇದು ಬೇರೆ ಸಾಹಿತ್ಯ ಭಾಷೆಗಳ ಸಾಲಿನಲ್ಲಿ ಕುಳಿತುಕೊಳ್ಳಲು ಯೋಗ್ಯವಾದೀತು ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಶ್ವವಿದ್ಯಾಲಯದ ಮಟ್ಟದಲ್ಲೂ ತುಳು ಭಾಷೆಯ ಮೇಲೆ ಸಂಶೋಧನೆ ಮಾಡುವ ಸಂಪ್ರದಾಯ ಬೆಳೆದು ಬರುತ್ತಿದೆ. ತುಳುಭಾಷೆಯ ವೈಜ್ಞಾನಿಕ ವಿಶ್ಲೇಷಣೆಯ ಬೀಜ ಕಾಲ್ಡ್‌ವೆಲ್, ಮ್ಯಾನರ್, ಬ್ರಿಗೆಲ್ ಮುಂತಾದವರ ಕಾಲದಿಂದಲೇ ಆರಂಭಗೊಂಡಿದ್ದರೂ ಆ ಸಂಪ್ರದಾಯವನ್ನು ಪ್ರಬುದ್ಧಗೊಳಿಸಿದವರು ಈಚೆಗಿನ ಸಂಶೋಧಕರು. ಎಲ್.ವಿ. ರಾಮಸ್ವಾಮಿ ಅಯ್ಯರ್ ೧೯೨೮ -೫೫ ರ ಕಾಲಾವಧಿಯಲ್ಲಿ ತುಳುವಿನ ಮೇಲೆ ಕೆಲವೊಂದು ಲೇಖನ ಬರೆದಿದ್ದರು. ಆದರೆ ಸರಿಯಾದ ವೈಜ್ಞಾನಿಕ ರೀತಿಯ ಅಧ್ಯಯನ ಆರಂಭವಾದುದು ೧೯೬೦ನೆಯ ಇಸವಿಯ ಬಳಿಕ. ಪೂನಾ ವಿಶ್ವವಿದ್ಯಾನಿಲಯದಲ್ಲಿ ಡಾ. ಡಿ.ಎನ್. ಶಂಕರಭಟ್ಟರು ೧೯೬೬ರಲ್ಲಿ ಬ್ರಾಹ್ಮಣ ತುಳುವಿನ ಮೇಲೆ ಮಹತ್ವದ ಪ್ರಬಂಧ ಬರೆದ ಪ್ರಕಟಿಸಿದರು. ೧೯೭೧ರಲ್ಲಿ ಕೂಡ ಲಕ್ಷ್ಮೀನಾರಾಯಣ ಭಟ್ಟರು ಅಮೇರಿಕಾದಲ್ಲಿ ‘ಬ್ರಾಹ್ಮಣ ತುಳು – ಇತರ ತುಳು’- ಈ ವಿಚಾರದ ಮೇಲೆ ಪಿಎಚ್‌.ಡಿ. ಮಹಾಪ್ರಬಂಧ ಬರೆದರು. ೧೯೭೮ರಲ್ಲಿ ಅನಂತಶಯನದಲ್ಲಿ ಡಾ. ಎಂ.ರಾಮರು ‘ಕಾಸರಗೋಡು ಪ್ರದೇಶದ ಕುಲಾಲ ಸಮುದಾಯದವರ ತುಳು ಭಾಷೆ’ಯ ಬಗ್ಗೆ ಸಂಶೋಧನಾ ಪ್ರಬಂಧ ಬರೆದರು. ೧೯೭೯ರಲ್ಲಿ ಅನಂತಶಯನದಲ್ಲಿ ಮಲ್ಲಿಕಾದೇವಿ ಎನ್ನುವವರು ತುಳು ಕ್ರಿಯಾಪದದ ರೂಪ ವಿಶ್ಲೇಷಣೆ ಮಾಡಿ ಮಹಾಪ್ರಬಂಧ ಬರೆದರು. ತುಳುಭಾಷೆಯ ಮೇಲೆ ಬರೆದ ಈ ನಾಲ್ಕು ಪಿಎಚ್.ಡಿ.ಪ್ರಬಂಧಗಳು ತುಳುಭಾಷೆಯ ಬೇರೆ ಬೇರೆ ಮುಖದ ಪರಿಚಯ ಮಾಡಿಕೂಡುವ ಮೂಲಕ ಮುಂದೆ ಬರುವ ಸಂಶೋಧಕರಿಗೆ ದಾರಿ ತೋರಿಸುತ್ತವೆ.

ಇಷ್ಟೇ ಅಲ್ಲದೆ, ತುಳುಭಾಷೆಯ ಮೇಲೆ ಅನೇಕ ಸಂಶೋಧನಾ ಲೇಖನಗಳು ಬಂದಿವೆ. ಡಾ. ರಾಮಚಂದ್ರರಾಯರು ಬರೆದ ಸಾಮಾನ್ಯ ತುಳು – ಬ್ರಾಹ್ಮಣರ ತುಳುವಿನ ವ್ಯತ್ಯಾಸ ಹೇಳುವ ಲೇಖನ, ಡಾ. ಯು.ಪಿ. ಉಪಾಧ್ಯಾಯರು ಬರೆದ ತುಳು ಕ್ರಿಯಾಪದಗಳು ಎನ್ನುವ ಲೇಖನ, ಶಂಕರ ಭಟ್ಟರ ತುಳು ಉಪಭಾಷೆಗಳ ತುಲನಾತ್ಮಕ ವಿಶ್ಲೇಷಣೆ ಮಾಡಿರುವ ಲೇಖನ, ಡಾ. ವಿಲ್ಯಂ ಮಾಡ್ತಾ ಬರೆದಿರುವ ತುಳುವಿನ ನಿಷೇದಾರ್ಥ ಪ್ರತ್ಯಯಗಳನ್ನು ಕುರಿತ ಲೇಖನ, ಚೇಚಮ್ಮ ಇಸಾಕ್ ಬರೆದಿರುವ ಅನಂತಶಯನ ತುಳುವಿನ ರೂಪ ವಿಶ್ಲೇಷಣೆ, ಡಾ. ಎಂ.ರಾಮ, ಡಾ. ರಾಮಕೃಷ್ಣ ಶೆಟ್ಟಿ, ಡಾ. ಪಿ.ಎಸ್.ಸುಬ್ರಹ್ಮಣ್ಯಂ ಬರೆದ ಲೇಖನಗಳು ತುಳುಭಾಷೆಯ ಸ್ವರೂಪ. ವೈಶಿಷ್ಟ್ಯಗಳನ್ನು ತೋರಿಸುತ್ತವೆ. ಇಂಗ್ಲೀಷ್ ಭಾಷೆಯಲ್ಲಿ ಬರೆದಿರುವ ಲೇಖನಗಳಲ್ಲದೆ ಕನ್ನಡದಲ್ಲಿ ಡಾ. ಹಂಪನಾ, ತೆಕ್ಕುಂಜ, ಡಾ. ಕುಶಾಲಪ್ಪ ಗೌಡ, ಡಾ. ಜಲಜಾಕ್ಷಿ, ಡಾ. ರಾಮಚಂದ್ರ ರಾವ್, ಕಡವ ಶಂಭು ಶರ್ಮಾ ಮುಂತಾದವರು ತುಳು ಭಾಷೆಯ ಸ್ವರೂಪ ವಿವೇಚನೆ ಮಾಡಿ ಲೇಖನ ಬರೆದುದುಂಟು.

ಮಂಗಳೂರು ವಿಶ್ವವಿದ್ಯಾಲಯದ ಡಾ. ವಿವೇಕ ರೈ ತುಳುಭಾಷೆ, ಸಂಸ್ಕೃತಿ, ಸಾಹಿತ್ಯ, ಜಾನಪದ ಇವುಗಳ ಮೇಲೆ ಬೇರೆ ಬೇರೆ ಲೇಖನಗಳನ್ನು ಬರೆದಿದ್ದಾರೆ. ಸಂಶೋಧನ ಗ್ರಂಥಗಳನ್ನು ಬರೆದಿದ್ದಾರೆ. ಡಾ. ಕೆಮ್ತೂರು ರಘುಪತಿ ಭಟ್ಟರು ತುಳುನಾಡಿನ ಸ್ಥಳನಾಮದ ಮೇಲೆ ಪಿಎಚ್.ಡಿ. ಮಹಾಪ್ರಬಂಧ ಬರೆದಿದ್ದಾರೆ. ತುಳುನಾಡಿನ ಚರಿತ್ರೆಯ ಮೇಲೆ ಗೋವಿಂದ ಪೈ, ಸಾಲೆತ್ತೂರು, ಕೆ.ವಿ.ರಮೇಶ, ಗುರುರಾಜ ಭಟ್, ಸೂರ್ಯನಾಥ ಕಾಮತ್, ವಸಂತ ಮಾಧವ, ವಸಂತ ಶೆಟ್ಟಿ, ವೆಂಕಟರಾಯಾಚಾರ್ ಮುಂತಾದ ವಿದ್ವಾಂಸರು ಸಂಶೋಧನೆ ಮಾಡಿದ್ದಾರೆ. ಅವರು ತೋರಿಸಿಕೊಟ್ಟ ದಾರಿಯಲ್ಲಿ ನಮ್ಮ ತರುಣ ಸಂಶೋಧಕರು ಮುಂದೆ ಹೋಗಬೇಕು. ತುಳುನಾಡಿನ ಚರಿತ್ರೆ, ಸಂಸ್ಕೃತಿಯ ಅಧ್ಯಯನ ನಡೆಯಬೇಕು.