ತುಳು ಮೂಲ : ಅ. ಬಾಲಕೃಷ್ಣ ಶೆಟ್ಟಿ ಪೊಳಲಿ
ಕನ್ನಡಕ್ಕೆ : ಎ. ಸುಬ್ಬಣ್ಣ ರೈ

ನಮ್ಮ ಈ ಭಾರತ ದೇಶದಲ್ಲಿ ಮಾನವನು ಮಾತನಾಡುವ ನೂರುಗಟ್ಟಲೆ ಭಾಷೆಗಳಲ್ಲಿ, ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುವ ಸ್ವಭಾವವುಳ್ಳ, ಸವಿಯುಳ್ಳ, ಕೇವಲ ಇಂಪಾದ ಭಾಷೆಗಳಲ್ಲಿ ತುಳು ಸುಂದರವಾದ ಭಾಷೆಯೆಂದು ಶಿಫಾರಸು ಮಾಡಿದವರು ಹಲವಾರು ಭಾಷೆಗಳನ್ನು ಕಲಿತು, ಅವುಗಳ ಸಾಹಿತ್ಯಗಳನ್ನು ಬಲ್ಲವರಾಗಿದ್ದ ಪಂಡಿತ ಕಾಲ್ಡ್‌ವೆಲ್ ಎಂಬವರು. ‘ತಿಂದ ಮೊಲೆ ಹಾಲಲ್ಲೇ ಮೊದಲು ಹಸಿವಾಗುತ್ತದೆಂಬುದನ್ನು ತಿಳಿದ, ನನ್ನ ಭಾಷೆ ತುಳು ಭಾಷೆ; ನನ್ನ ಮಾತೃ ಭಾಷೆ; ಅದನ್ನು ಬೆಳೆಸಬೇಕಾದುದು ಅತ್ಯಗತ್ಯ ಎಂದು ಕರೆಕೊಟ್ಟವರು ಕವಿ ದಿ.ಎನ್.ಎಸ್. ಕಿಲ್ಲೆಯವರು ತುಳುನಾಡಿನಲ್ಲಿ ತುಳು ಭಾಷೆಗೆ ಎತ್ತರದ ಮಣೆ. ಪರದೇಶೀ ಭಾಷೆಗಳಿಗೆ, ವೇಷಗಳಿಗೆ ಮರುಳಾಗಿ ನಮ್ಮನ್ನು ನಾವು ಮರೆಯಬಾರದೆಂದು ಎಚ್ಚರಿಕೆ ಕೊಟ್ಟವರು ಉಡುಪಿಯ ದಿ.ಎಸ್.ಯು ಪಣಿಯಾಡಿಯವರು. ಅವರೆಲ್ಲಾ ಈ ಮಾತುಗಳನ್ನಾಡಿದ ಮೇಲೆ ನಮ್ಮ ನೇತ್ರಾವತಿ ಫಲ್ಗುಣಿ, ಚಂದ್ರಗಿರಿ, ಸೀತಾನದಿಗಳಲ್ಲಿ ಅದೆಷ್ಟೋ ನೀರು ಹರಿದು ಹೋಗಿವೆ. ಬ್ರಿಟಿಷರು ಈ ದೇಶವನ್ನು ನಮ್ಮವರಿಗೆ ಬಿಟ್ಟುಹೋಗಿ, ಜನತೆಯ ಸರಕಾರ ಬಂದಿದೆ. ಚಾಟಿಯ ಬಲದ ಸರಕಾರ ಹೋಗಿ, ಓಟಿನ ನೆಲೆಯ ಸರಕಾರ ಬಂತು. ಐದು ರಾಜ್ಯಗಳಲ್ಲಿ ಛಿದ್ರಗೊಂಡು ಹಂಚಿಹೋಗಿದ್ದ ಕನ್ನಡಿಗರು ‘ಕರ್ನಾಟಕ’ ಎಂಬ ಹೆಸರಿನ ಒಂದೇ ರಾಜ್ಯದಲ್ಲಿ ನೆಲೆಯಾದರು. ಅದೇ ವೇಳೆಗೆ ಒಂದೇ ಜಿಲ್ಲೆಯಲ್ಲಿ ಸೇರಿದ್ದ ತುಳುವರಲ್ಲಿ ಕಾಸರಗೋಡಿನವರನ್ನು ನೀವು ಕನ್ನಡಿಗರೊಂದಿಗೆ ಇರುವುದು ಬೇಡವೆಂದು ಕೇರಳಕ್ಕೆ ಸೇರಿಸಿಬಿಟ್ಟರು. ಒಂದೇ ತಾಯಿಯ ಮಕ್ಕಳು ಎಷ್ಟೋ ಕಾಲದಿಂದ ಜತೆಯಲ್ಲಿ ಇದ್ದವರ ಮಧ್ಯೆಯೇ ಗೋಡೆಯೇರಿಸಿ ಆಳುವವರು ತಾಯ್ಗಂಡತನದ ಕೆಲಸವನ್ನು ಮಾಡಿ ಅವರು ಆಳುವವರ ಬದಲು ಅಳಿಸುವವರಾದರು. ರಾಜಕೀಯವಾಗಿ ತುಳುವರ ಬೆನ್ನಿಗೂ, ಹೊಟ್ಟೆಗೂ ಇನ್ನು ನೆಟ್ಟಗಾಗಲಾರದಂಥ ಏಟು ಕೊಟ್ಟರೂ ಹೃದಯದೊಳಗಡೆ ‘ಅಟ್ಟಿದರೆ ಏನು? ಕಾಡಿಗೆ ಜತೆಯಲ್ಲಿ ಹುಟ್ಟಿದ….’ ಎಂದಂತೆ ಪ್ರೀತಿಯ ಉರುಳು ಸುತ್ತಿಕೊಂಡಿದೆ. ತುಳುವರು ನಾವು ಒಂದೇ ಎಂಬ ಅಭಿಪ್ರಾಯ ಉಳಿದಿದೆ, ಬೆಳೆದಿದೆ.

ತುಳು ನಿನ್ನೆ ಹೇಗಿತ್ತು? ಇಂದು ಹೇಗಿದೆ? ನಾಳೆ ಹೇಗಾಗಬೇಕು? ಎಂಬುದನ್ನು ಸೂಕ್ಷ್ಮವಾಗಿ ಹೇಳಲು ಈ ಬರೆಹದಲ್ಲಿ ಪ್ರಯತ್ನ ಮಾಡುತ್ತೇನೆ. ತುಳು ಭಾಷೆಯಲ್ಲಿ ಇದುವರೆಗೆ ಬಂದ ಸಾಹಿತ್ಯ ಕೃತಿಗಳು, ಪ್ರಕಟಗೊಂಡ ಪುಸ್ತಕಗಳು ಇದಕ್ಕೆ ಆಧಾರ. ತುಳುವಿನಲ್ಲಿ ಬರೆಯುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ದೂರದ ಮುಂಬಯಿಯಲ್ಲಿ ಹ್ಯಾಗೋ ಹಾಗೆಯೇ ನಮ್ಮ ಅಕ್ಕತಂಗಿಯರೂ ಇತ್ತೀಚೆಗೆ ತುಳುವಿನಲ್ಲಿ ಬರೆಯಲು ಪ್ರಾರಂಭಿಸಿದ್ದಾರೆ. ಆ ಎಲ್ಲಾ ವಿವರಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದುವೇ ಒಂದು ಗ್ರಂಥವಾದೀತು. ಹಾಗಂತ ನಾಲ್ಕಾರು ಹೆಸರುಗಳನ್ನಾದರೂ ಹೇಳದೆ ಹೋದರೆ ನನ್ನದೆಲ್ಲಾ ಬರಿಯ ಪೊಳ್ಳು ಎಂದಾರು. ಹಾಗಾಗಿ ಸಂದರ್ಭಕ್ಕೆ ತಕ್ಕ ಹಾಗೆ ಕೆಲವು ಹೆಸರುಗಳನ್ನು ಉಲ್ಲೇಖಿಸುವುದು ಅತ್ಯವೆಂದು ಭಾವಿಸಿ ಇಲ್ಲಿ ಬರೆದಿದ್ದೇನೆ. ಉಳಿದವರ ವಿಷಯ ಗೌಣವಲ್ಲವೆಂದು ತಿಳಿದು ಮನ್ನಿಸಬೇಕೆಂದು ಪ್ರಾರಂಭದಲ್ಲೇ ವಿನಂತಿಸಿಕೊಳ್ಳುತ್ತೇನೆ.

ನಿನ್ನೆ

ತುಳು ಚಳುವಳಿ ಆರಂಭವಾದದ್ದು ೧೯೨೮ನೇ ಇಸವಿಯಲ್ಲಿ ಉಡುಪಿಯಲ್ಲಿ ಶ್ರೀ ಎಸ್.ಯು.ಪಣಿಯಾಡಿಯವರು ಮುಂದೆ ನಿಂತು ನಡೆಸಿದ ಚಳುವಳಿ ಸಂಪೂರ್ಣ ನಂದಿ ಹೋದದ್ದು ೧೯೪೮ನೇ ಇಸವಿಯಲ್ಲಿ. ಆ ಕಾಲದಲ್ಲಿ ತುಳುವ ಸಾಹಿತ್ಯ ಮಾಲೆಯಲ್ಲೂ, ಇತರ ಪ್ರಯತ್ನಗಳಿಂದಲೂ ಬಹಳಷ್ಟು ತುಳು ಪುಸ್ತಕಗಳು ಅಚ್ಚಾದುವು. ೧೯೪೮ರಿಂದ ೧೯೬೮ರ ವರೆಗಿನ ಒಂದು ಕಾಲಘಟ್ಟದಲ್ಲಿ ತುಳು ಅಂದರೆ ನಾಟಕ ಎನ್ನುವ ಅಭಿಪ್ರಾಯವಿತ್ತು. ಅಪರೂಪವೆಂಬಂತೆ ಬೆಳೆದ ಒಂದೆರಡು ಪುಸ್ತಕಗಳು ಅಲ್ಲಿ ಎಲ್ಲಿ ಅಚ್ಚಾಗುತ್ತಿದ್ದ ಕಾಲವದು. ೧೯೬೯ ತುಳುಕೂಟ ಉದಯವಾದ ಕಾಲ. ಅದುವರೆಗೆ ಬಂದ ಎಲ್ಲಾ ಸಾಹಿತ್ಯವನ್ನೂ ನಿನ್ನೆಯ ಕಾಲಘಟ್ಟಕ್ಕೆ ಸೇರಿಸೋಣ.

೧೯೨೮ರ ಪೂರ್ವ

(ಅ) “ಅಯ್ಯಯ್ಯ ಎಂಚ ಪೊರ್ಲಾಂಡ್ ತುಳುವವು” ಎಂಬುದಾಗಿ ತನ್ನ ಕಾವ್ಯದಲ್ಲಿ ಬರೆದು, ತುಳು ಶಬ್ದವನ್ನು ಅಂಬಾರಿ ಹಾಕಿದ ಆನೆಯ ಮೇಲೆ ಕೂರಿಸಿದವ ರತ್ನಾಕರವರ್ಣಿಯೆಂಬ ಮಹಾಕವಿ. ತುಳು ಭಾಷೆಯಲ್ಲಿ ಸಂಸ್ಕೃತ ಲಿಪಿಯಲ್ಲಿ ಭಕ್ತಿಗೀತೆಗಳನ್ನು ರಚಿಸಿದವರು ಉಡುಪಿಯ ವಾದಿರಾಜ ಸ್ವಾಮಿಗಳು. ದ್ವೈತ ಮತ ಪ್ರಚಾರಕವಾದ ಮಧ್ವಾಚಾರ್ಯರೂ ತುಳು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆಂದು ಹೇಳಲಾಗುತ್ತದೆ. ಆದರೆ ಅದರ ಕುರುಹುಗಳೇನೂ ನಮಗೆ ದೊರೆತಿಲ್ಲ. ಯಕ್ಷಗಾನದ ಆದಿಕವಿ ಪಾರ್ತಿಸುಬ್ಬ ಕನ್ನಡದಲ್ಲಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರೂ ಆತ ತುಳುವಿನಲ್ಲಿ ಬರೆದುದು ಅಚ್ಚಾಗಿ ಬಂದಿಲ್ಲ. ಆತ ತುಳುವಿನಲ್ಲಿ ಕೆಲವು ಬಿಡಿ ಪದ (ಪದ್ಯ)ಗಳನ್ನು ಬರೆದಿದ್ದರೂ ಅವುಗಳನ್ನು ಸಂಗ್ರಹಿಸಿಡುವ ಕೆಲಸ ನಡೆಯದೆ ಅದೆಲ್ಲಾ ಮಾಯವಾಗಿರಬೇಕು. ತುಳುನಾಡಿನ ಕವಿ ಮುದ್ದಣ ತನ್ನ ‘ಶ್ರೀ ರಾಮಾಶ್ವಮೇಧಂ’ ಎಂಬ ಗದ್ಯಕಾವ್ಯದಲ್ಲಿ ಅಸಂಖ್ಯ ತುಳು ಭಾಷಾ ಪದಗಳನ್ನು ಅಥವಾ ಅವುಗಳ ತದ್ಭವ ರೂಪಗಳನ್ನು ಪ್ರಯೋಗಿಸಿ ಘಟ್ಟದ ಮೇಲಿರುವ ಜಾಣ ಕನ್ನಡಿಗರನೇಕರನ್ನು ದಾರಿ ತಪ್ಪಿಸಿದ್ದಾನೆ. ಆದರೆ ತುಳುವಿನಲ್ಲಿ ಪದ್ಯ ರಚಿಸಬೇಕೆಂಬ ಬಯಕೆ ಅವನಿಗೆ ಹುಟ್ಟಲಿಲ್ಲ. ತುಳುವಮ್ಮನ ಬೇರಲ್ಲಿ ಜನಿಸಿ, ತುಳುನಾಡಲ್ಲಿ ಬೆಳೆದು, ಕನ್ನಡಿಗರ ಮೇಲ್ಪಂಕ್ತಿಯಲ್ಲಿ ಕುಳಿತ ದೊಡ್ಡ ದೊಡ್ಡ ಕವಿಗಳನೇಕರು ಆಗಿಹೋದರು.[1] ಏಳೂವರೆ ಕೋಲು (ಒಂದು ಅಳತೆಯ ಮಾನ) ನಿರ್ಸಾನಿಗೆ (ನಿಶಾನೆಗೆ) ನೀರು ಹಾರಿದ ಕಂಬಳದ ಓಟದ ಕೋಣ ಉಳುಮೆಯ ಕೆಲಸಕ್ಕೆ ಬಾರದು ಎಂಬಂತೆ ತುಳು ಭಾಷೆಯ ಸ್ಥಿತಿಯಾಯಿತು. ಅವರು ಕನ್ನಡದಲ್ಲಿ ಬರೆದು ಅರಸರ ಬಾಯಿಯಿಂದ ಶಹಬ್ಬಾಸ್‌ಗಿರಿ, ಕೈಯಿಂದ ರತ್ನಮಾಲೆಗಳನ್ನು ಗಿಟ್ಟಿಸಿಕೊಂಡರು. ತುಳುವಿಗೆ ಮಾತ್ರ ಸೊನ್ನೆಯೇ ಗತಿಯಾಯ್ತು.

ಇದು ಯಾಕೆ ಹೀಗಾಯಿತು? ಅವರಿಗೆ ತುಳು ಭಾಷೆಯ ಮೇಲೆ ಪ್ರೀತಿ ಇರಲಿಲ್ಲವೇ? ಆ ಭಾಷೆಯಲ್ಲಿ ಶಬ್ದಗಳಿರಲಿಲ್ಲವೇ? ಅದು ಯಾವುದೂ ಅಲ್ಲ. ನಮ್ಮ ಹಿರಿಯರಾದ ಬಡಕಬೈಲು ಪರಮೇಶ್ವರಯ್ಯ, ಎಸ್.ಯು. ಪಣಿಯಾಡಿ, ಅಮ್ಮುಂಜೆ ಗುತ್ತಿನ ತುಳುವಾಲ ಶೀನಪ್ಪ ಹೆಗ್ಗಡೆ, ಎನ್.ಎಸ್. ಕಿಲ್ಲೆ ಮುಂತಾದವರು ಇದರ ಕಾರಣಗಳನ್ನು ಹುಡುಕಿ ಸ್ಪಷ್ಟವಾಗಿ ಹೇಳಿದ್ದಾರೆ. ತಾವು ಬರೆದುದು ದೊರೆಯ ಕಿವಿಗೆ ಬೀಳಬೇಕೆಂಬುದೊಂದೇ ಹಿಂದಿನ ಕವಿಗಳಿಗಿದ್ದ ಆಸೆಯಾಗಿತ್ತು. ತುಳುವಿನಲ್ಲಿ ಬರೆದರೆ ಅರಸನಿಗೆ ತಿಳಿಯುವುದಿಲ್ಲ. ಆತನ ಸುತ್ತಮುತ್ತ ಸೇರಿರುವವರಿಗೆ ಅರ್ಥ ಆಗುವುದಿಲ್ಲ. ಹಾಗಾಗಿ ತುಳು ಕವಿಗಳು ಕನ್ನಡದ ಕಿವಿಗಳಿಗೆ ಇಂಪಾಗುವಂತೆ ಬರೆದರು. ಕನ್ನಡ ಬಲ್ಲ ಮಂದಿ ತುಳು ಬಲ್ಲವರ ಇನ್ನಷ್ಟು ಪಟ್ಟಿಯನ್ನಿಟ್ಟಿದ್ದಾರೆ. ತಾನು ಬರೆದುದು ಹೆಚ್ಚು ಜನರಿಗೆ ತಲುಪಬೇಕೆಂಬ ಆಸೆಯಿರುವುದೂ ಸಹಜವೇ. ಬಹಳ ಹಿಂದಿನಿಂದಲೇ ಈ ತುಳುನಾಡಿನಲ್ಲಿ ದಿನನಿತ್ಯದ ವ್ಯವಹಾರದಿಂದ ತುಳು ಆರುತ್ತಾ ಅಳಿಯುತ್ತಾ ಹೋಯಿತು. ಹಾಗಿರುವಾಗ ಸಾಹಿತ್ಯ ತುಳುವಿನಲ್ಲಿ ಬರಬೇಕೆಂದು ಹೇಳಲು ಹೇಗೆ ತಾನೇ ಸಾಧ್ಯ? ಇದು ಮಾತ್ರವಲ್ಲದೆ ಪಣಿಯಾಡಿಯವರ ತುಳು ಚಳುವಳಿಯ ಸಂದರ್ಭದಲ್ಲಿ ಅವರ ಕೆಲಸಗಳಿಗೆ ನಮ್ಮ ಜನರೇ ಬೆಂಬಲ ನೀಡಲಿಲ್ಲ. ಬರಹ- ವಾಙ್ಮಯಗಳಿಲ್ಲದ ತುಳು ಭಾಷೆಯನ್ನು ಮೇಲೆತ್ತುವ ಪ್ರಯತ್ನ ಮೊಲಕ್ಕೆ ಕೋಡು ಇರಿಸಿದ ಹಾಗೆ! ಅದಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಲಭಿಸುವುದಕ್ಕೋಸ್ಕರ ಹೋರಾಡುತ್ತಿರುವ ಕಾಲದಲ್ಲಿ ತುಳುವಿನಂತಹ ಚಿಲ್ಲರೆ ವಿಷಯವನ್ನು ಮುಂದಿಟ್ಟುಕೊಂಡು ಒಗ್ಗಟ್ಟನ್ನು ಹಾಳು ಮಾಡುವುದು ಸರಿಯಲ್ಲವೆಂದು ಅವರ ಆಲೋಚನೆ. ಹೀಗಾಗಿ ತುಳುವಿನಲ್ಲಿ ಬರೆಯುವ ಉತ್ಸಾಹ ಒಂದೊಮ್ಮೆಗೆ ಉಕ್ಕಿದರೂ ಅದು ಹಾಗೆಯೇ ತಗ್ಗಿ ಹೋಯಿತು. ಈ ತುಳುನಾಡನ್ನು ಚರಿತ್ರೆಯ ಕಾಲದಲ್ಲಿ ಒಂದು ರಾಜ್ಯವೆಂದು ಪರಿಗಣಿಸಿದ್ದರೂ, ಕೆಲ ಕಾಲ ತುಳುವರೇ ಇಲ್ಲಿ ಆಳ್ವಿಕೆ ನಡೆಸುತ್ತಿದ್ದರೂ ಹೆಚ್ಚು ಕಾಲ ಕನ್ನಡಿಗರೇ ಇಲ್ಲಿ ಅರಸರಾಗಿದ್ದರು. ಹಾಗಾಗಿ ಆ ಕಾಲಘಟ್ಟದಲ್ಲಿ ಆಡಳಿತ ವ್ಯವಹಾರಗಳೆಲ್ಲ ಕನ್ನಡದಲ್ಲೇ ನಡೆದುವು. ಆ ಕಾಲಕ್ಕೆ ಸೇರಿದ ಅದೆಷ್ಟೋ ಶಾಸನಗಳು ಕನ್ನಡದಲ್ಲೇ ಇರುವುದು ಇದಕ್ಕೂ ಸಾಕ್ಷಿಯಾಗಿದೆ.

ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಬೀಳುತ್ತಲೇ ಒಂದು ಭಾಷೆ ಬೆಳೆಯಬೇಕಾದರೆ ಅದರ ಸಾಹಿತ್ಯ ಉಳಿಯಬೇಕಾದರೆ ಅದು ಓಬೇಲೆ, ಗಾದೆ, ಒಗಟು, ಬಿಡಿ ಪದ್ಯಗಳ ಮೂಲಕವಲ್ಲದೆ ಮತ್ತೆ ಹೇಗೆ ತಾನೆ ಸಾಧ್ಯ? ಸುಂದರವಾದ ಶಬ್ದಗಳಲ್ಲಿ, ಒಳ್ಳೆಯ ಒಕ್ಕಣೆಗಳಲ್ಲಿ, ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ರಾಗ ತೆಗೆದು ಹೇಳಿದ ಕೆಲವು ಕತೆಗಳೇ ಪಾಡ್ದನಗಳು. ಪದಗಳನ್ನು ಪೋಣಿಸಿ, ಮೂಟೆ ಕಟ್ಟಿ, ವರ್ಣಿಸುವ ಆ ಕಬಿತಗಳು ಇಂದಿನ ತನಕ ಉಳಿದು ಬಂದಿದ್ದರೂ ಪ್ರತಿಯೊಬ್ಬ ಪಂಬದ, ಪರವ, ಪರತಿ, ಬಿಲ್ಲವರು ತಂತಮ್ಮ ಪ್ರತಿಭೆಗಳನ್ನು ಅದಕ್ಕೆ ಸೇರಿಸಿ ಅಂದಗೊಳಿಸಿದ್ದು ಕಂಡುಬರುತ್ತದೆ.

ತಾಯ್ನುಡಿಯಲ್ಲಿ ಆಡಿದುದನ್ನು ಕೇಳಿದಾಗ, ಬರೆದುದನ್ನು ಓದಿದಾಗ ಮೈ ಜುಂ ಅನ್ನುತ್ತದೆಂಬ ಮನುಷ್ಯನ ಹೃದಯದ ಗುಟ್ಟನ್ನು ಅರಿತವರು ಮಿಶನರಿಗಳು. ಅವರು ಆಂಗ್ಲಭಾಷೆಯಲ್ಲಿದ್ದ ತಮ್ಮ ಧರ್ಮಶಾಸ್ತ್ರಗಳನ್ನು ಕನ್ನಡದಲ್ಲಿ ಹೇಳಿದರೆ ತುಳುವರ ಮನಸ್ಸನ್ನು ಗೆಲ್ಲುವುದು ಕಷ್ಟಸಾಧ್ಯವೆಂದು ಅರಿತಿದ್ದರು. ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಸೆಳೆದುಕೊಳ್ಳಲು ಹೆಣ್ಣು, ಹೊನ್ನು, ಮಣ್ಣು, ಅಧಿಕಾರಗಳ ಆಸೆ ತೋರಿಸುವುದಕ್ಕಿಂತಲೂ ಹೆಚ್ಚು ಕೆಲಸ ಮಾಡುವ ಶಕ್ತಿ ತುಳು ಭಾಷೆಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡು, ತುಳು ಭಾಷೆಯೆಂಬ ಜೇನು ಹುಟ್ಟಿಗೇ ಕೈ ಹಾಕಿದರು. ಆ ಸವಿಜೇನನ್ನು ಕೈ ಹಾಕಿ ತಿಂದರು, ತಿನಿಸಿದರು.

೧೮೩೪ರಲ್ಲಿ ತುಳುನಾಡಿಗೆ ಬಂದ ಮಿಶನರಿಗಳು ತಮ್ಮ ಧರ್ಮಪ್ರಚಾರಕ್ಕಾಗಿ ಅದೆಷ್ಟೋ ಗ್ರಂಥಗಳನ್ನು ತುಳು ಭಾಷೆಗೆ ತರ್ಜುಮೆ ಮಾಡಿ, ಮುದ್ರಿಸಿ ವಿತರಿಸಿದರು. ತುಳುವಿನಲ್ಲಿ ಧರ್ಮೋಪದೇಶ ಮಾಡಿದರು. ಧರ್ಮದ ಹೆಸರಿನಲ್ಲಿ ತುಳುವಿನತ್ತ ದೃಷ್ಟಿ ಹಾಯಿಸಿದರಾದರು ತುಳುವಿನ ಹೃದಯವನ್ನು ಪ್ರವೇಶಿಸಲು ಹೊಸ ದಾರಿಗಳನ್ನು ಹುಡುಕಿಕೊಂಡರು. ತುಳು ಭಾಷೆ ಇರುವವರೆಗೆ ಅದರ ಹೆಸರು ಉಳಿಯುವಂತಹ ಕೆಲಸಗಳನ್ನು ಮಾಡಿದರು. ಬ್ರಿಗೆಲ್ ಎಂಬ ಪಾದ್ರಿ ಆಂಗ್ಲ ಭಾಷೆಯಲ್ಲಿ ಮೊದಲು ತುಳು ವ್ಯಾಕರಣವನ್ನು ರಚಿಸಿ ಇತರ ಬೆಳವಣಿಗೆ ಹೊಂದಿದ ಭಾಷೆಗಳ ಜೊತೆಗೆ ತುಳುವಿಗೂ ಒಂದು ಸ್ಥಾನವನ್ನು ಕಲ್ಪಿಸಿಕೊಟ್ಟರು. ಅದಕ್ಕೀಗ ೧೧೬ ವರ್ಷಗಳಾದವು. ಮುಂದೆ ಈ ತೆರನಾದ ಕೆಲಸ ಮಾಡಿದವರಿಗೆಲ್ಲಾ ಮೊದಲ ದಾರಿದೀಪವಾದವರು ಬ್ರಿಗೆಲ್ ಸಾಹೇಬರು. ಮ್ಯಾನರ್ ಎಂಬ ಗುರುಗಳು (ಪಾದ್ರಿ) ತುಳು – ಇಂಗ್ಲಿಷ್ ನಿಘಂಟು ಸಿದ್ಧಪಡಿಸಿದರು. ಅದೂ ಸಾಲದೆಂಬಂತೆ ಎರಡು ವರ್ಷಗಳ ಬಳಿಕ ಇಂಗ್ಲಿಷ್ – ತುಳು ನಿಘಂಟು ರಚಿಸಿದರು.

ಸಂತೆ, ಜಾತ್ರೆ, ನೇಮ, ಕೋಲಗಳಂತಹ ಜನ ಸೇರುವ ಕಡೆಗೆ ಹೋಗಿ ಅಲ್ಲಿ ಕ್ರೈಸ್ತ ಧರ್ಮದ ಉಪದೇಶ ನೀಡುವುದರ ಜತೆಗೆ ಗಾದೆ, ನುಡಿಗಟ್ಟು, ಒಗಟು, ಪಾಡ್ದನಗಳನ್ನು ಅವರು ಸಂಗ್ರಹಿಸಿದರು. ಇಂದು ‘ಜಾನಪದ’ ಎಂಬ ಹೆಸರಲ್ಲಿ ಅವುಗಳನ್ನು ಕುರಿತು ವಿಶ್ವವಿದ್ಯಾಲಯಗಳಲ್ಲಿ ಮಹತ್ತರ ಕೆಲಸಗಳು ನಡೆಯುತ್ತಿವೆ. ಆದರೆ ನೂರು ವರ್ಷಗಳ ಹಿಂದೆ ಅವರ ಹೆಸರು ಕೂಡಾ ಹುಟ್ಟಿರಲಿಲ್ಲ. ಆ ಕಾಲದಲ್ಲಿ ಪಾದ್ರಿಗಳು ೫೦೦-೧೦೦೦ದಷ್ಟು ಇಂಗ್ಲಿಷ್‌ಗೆ ಸಂವಾದಿಯಾದ ಗಾದೆಗಳನ್ನು (ಅನುವಾದವಲ್ಲ) ಒಟ್ಟಿಗೆ ಮುದ್ರಿಸಿದರು.

ಈ ಕಾರಣದಿಂದಾಗಿ ಹತ್ತೊಂಬತ್ತನೇ ಶತಮಾನದ ಕೊನೆಯ ವೇಳೆಗೆ ತುಳುನಾಡಿನ ಕೆಲವು ತುಳುವರಿಗೆ ತುಳುವಿನಲ್ಲೇ ಬರೆಯಬೇಕೆಂಬ ಆಸೆ ಹುಟ್ಟಿರಬೇಕು. ದೊರೆಗಳ ಕಡೆಯವರೇ ತುಳುವಿನ ಕೆಲಸವನ್ನು ಶಿರಸಾವಹಿಸಿ ಮಾಡುತ್ತಿರುವುದನ್ನು ಅದಕ್ಕೆ ರಾಜಮರ್ಯಾದೆ ಪಡೆಯುತ್ತಿರುವುದನ್ನು ನೋಡಿ ಇತರರಿಗೂ ‘ತುಳು’ ವಿನ ಕೆಲಸ ನಿಷ್ಪ್ರಯೋಜಕವಲ್ಲವೆಂದು ಮನವರಿಕೆಯಾಗಿರಬೇಕು. ಆ ಕಾಲದಲ್ಲಿ ಬಂದ ತುಳು ಕೃತಿಗಳ ಪೈಕಿ ಇಂದಿಗೂ ಉತ್ತಮವಾದುದೆಂಬ ಹೆಸರು ಗಳಿಸಿರುವ ಕೃತಿಯೆಂದರೆ ಸಂಕಯ್ಯ ಭಾಗವತರು ರಚಿಸಿರುವ ‘ತುಳು ಪಂಚವಟಿ’. ಇದು ಅನುವಾದರೂ ಭಾಗವತರು ತಮ್ಮ ಸ್ವಂತ ಪ್ರತಿಭೆ – ಕಲ್ಪನೆಗಳನ್ನು ಸೇರಿಸಿ, ಕತೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿದ್ದಾರೆ. ಇಲ್ಲಿನ ಪದ (ಪದ್ಯಗಳು) ತುಂಬ ಸೊಗಸಾಗಿದ್ದು ತುಳುವಿನ ಸ್ವತಂತ್ರ ರಚನೆಗಳೆಂಬಂತೆ ಭಾಸವಾಗುತ್ತವೆ. [2]

೧೯೨೮ – ೧೯೪೮

೧೯೨೮ರಲ್ಲಿ ಪಣಿಯಾಡಿಯವರು ಒಬ್ಬರೇ ಎದ್ದು ನಿಂತು ಉಡುಪಿಯಲ್ಲಿ ತುಳುವ ಮಹಾಸಭೆಯನ್ನು ಸ್ಥಾಪಿಸಿದರು. ಅವರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡಿದವರು ಅಮ್ಮುಂಜೆಗುತ್ತಿನ ಶೀನಪ್ಪ ಹೆಗ್ಗಡೆಯವರು. ಪಣಿಯಾಡಿಯವರು ತಮ್ಮ ಕೆಲಸವನ್ನು ಪ್ರಾರಂಭಿಸಿ ಇಂದಿಗೆ (೧೯೮೯) ೬೦ ವರ್ಷಗಳಾದವು. (ಈ ೬೦ ವರ್ಷಗಳೆಂದರೆ ಒಂದು ಸಂವತ್ಸರ ಚಕ್ರ. ೧೯೨೭ನೇ ಇಸವಿ ಅಂದರೆ ಒಂದು ಸಂವತ್ಸರ ಚಕ್ರದ ಮೊದಲ ಪ್ರಭಾವ ಸಂವತ್ಸರದಲ್ಲಿ ಮಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಅದರ ಮರುವರ್ಷವೇ ತುಳುವ ಮಹಾಸಭೆ ಉದಯವಾಯಿತು. ಈ ವರ್ಷ ಈ ವಿಭವ ನಾಮ ಸಂವತ್ಸರದಲ್ಲಿ ತುಳುವಿನ ಎರಡನೆಯ ಚಕ್ರ ಪ್ರಾರಂಭವಾಗಿದೆ.) ತುಳು ನುಡಿಯಲ್ಲಿ ತುಳು ಪುಸ್ತಕಗಳನ್ನು ಬರೆಸಿ ಪ್ರಕಟಿಸುವ ಉದ್ದೇಶದಿಂದಲೇ ಅವರು ‘ತುಳುವ ಸಾಹಿತ್ಯಮಾಲೆ’ಯನ್ನು ಪ್ರಾರಂಭ ಮಾಡಿದರು.

೧೯೨೮ನೇ ಇಸವಿಯಿಂದ ೨೦ ವರ್ಷಗಳ ಕಾಲ ಪ್ರಕಟವಾದ ಪುಸ್ತಕಗಳಲ್ಲಿ ಹೆಚ್ಚಿನವುಗಳೂ ನಾಲ್ಕು ಕಾಲ ಉಳಿಯಬಲ್ಲ ಯೋಗ್ಯತೆಯುಳ್ಳವು.[3] ಹೆಸರು, ಹಣ, ಅಧಿಕಾರದ ಅಭಿಲಾಷೆಯಿಲ್ಲದೆ ತುಳು ಭಾಷೆಯ ಸೊಬಗು, ಸವಿ, ಕಂಪನ್ನು ತೋರಿಸಿ ಕೊಡುವ ಉದ್ದೇಶದಿಂದ ರಚನೆಯಾದ ಪುಸ್ತಕಗಳವು. ಅವುಗಳನ್ನು ಬರೆದವರೆಲ್ಲಾ ಕನ್ನಡದಲ್ಲಿ ಸಮರ್ಥರೆನಿಸಿದವರು. ಹಿಂದಿ, ಇಂಗ್ಲಿಷ್, ಸಂಸ್ಕೃತಗಳನ್ನು ಬಲ್ಲವರು ಊರೂರು ಸುತ್ತಾಡಿ, ಜನರನ್ನು ನೋಡಿದವರು. ಹಾಗಾಗಿ ಅವರು ಬರೆದುದು ಅನುಭವದ ಅಮೃತವೆಂದರೆ ಅದು ಅಲಂಕಾರದ ಮಾತೆಂದು ದೂರಬೇಡಿ. ತುಳುವರ ರೀತಿ – ರಿವಾಜು, ಕೂಡು – ಕಟ್ಟುಗಳನ್ನು, ಸಂಸ್ಕೃತಿಯನ್ನು ತಿಳಿಯಪಡಿಸುವ ಕೆಲಸ ಆ ಕಾಲದಲ್ಲಿ ನಡೆಯಿತು. ತುಳು ಪದ್ಯ – ಗದ್ಯಗಳಿಗೆ ಉತ್ತಮ ಶೈಲಿಯೊಂದನ್ನು ರೂಪಿಸಿದ ಕೀರ್ತಿಯು ಆ ಹಿರಿಯರಿಗೆ ಸಲ್ಲುತ್ತದೆ.

ತುಳು ಸಾಹಿತ್ಯಮಾಲೆಯ ಮೊದಲ ಕುಸುಮ ‘ಕಿಟ್ನರಾಜಿ ಪರ್ಸಂಗ’ ಬರೆದ ಬಡಕಬೈಲು ಪರಮೇಶ್ವರಯ್ಯನವರು ಆಶುಕವಿಗಳು; ಉಭಯ ಭಾಷಾ ಕವಿಗಳು. ಅವರು ಸಂಸ್ಕೃತದ ‘ಬಜಗೋವಿಂದಂ’ನ್ನು ಕನ್ನಡ, ತುಳು ಎರಡೂ ಭಾಷೆಗಳಿಗೆ ತರ್ಜುಮೆ ಮಾಡಿ ಮುದ್ರಿಸಿ ಹೆಸರು ಗಳಿಸಿದವರು. ಕಂದ ಪದ್ಯದಲ್ಲಿ ನೀತಿ ಪದಗಳನ್ನು ಬರೆದವರು ಶೀನಪ್ಪ ಹೆಗ್ಡೆಯವರಿಗೆ ತಾಳ-ಮದ್ದಳೆ ಕಲಿಸಿದ ಗುರುಗಳು. ಅವರ ಗದ್ಯದ ಒಕ್ಕಣೆಗಳು ತುಂಬಾ ಸುಂದರವಾಗಿವೆ. ಮತ್ತೊಬ್ಬ ಕವಿ ಮೂವತ್ತು ಪದ್ಯಗಳ ‘ಕಾನಿಗೆ’ಯನ್ನು ನೀಡಿದ ದಿ.ಎನ್.ಎಸ್. ಕಿಲ್ಲೆಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂದರ್ಭದಲ್ಲಿ ತುಳುವಿನಲ್ಲೇ ತಮ್ಮ ಬಹುಪಾಲು ಭಾಷಣಗಳನ್ನು ಮಾಡಿದವರು. ಅವರ ಗದ್ಯದ ಒಕ್ಕಣೆ ಕೂಡ ರೋಮಾಂಚನಕಾರಿಯಾದುದು. ಕನ್ನಡದ ಅಭಿಮಾನದಿಂದ ತುಳುವನ್ನು ಮೂಸದೆ ಇದ್ದ ವಿದ್ವಾಂಸರ ನಡುವೆ ಪಣಿಯಾಡಿ ಯವರು ಮಾಡಿದ ಕೆಲಸಗಳನ್ನು ಮೆಚ್ಚಿ ಬೆಂಬಲ ನೀಡಿದವರು ಕಿಲ್ಲೆಯವರು.

ತುಳು ಗದ್ಯ ಶೈಲಿಯ ಪ್ರವರ್ತಕರಲ್ಲಿ ಪ್ರಮುಖ ಹೆಸರು ಅಮ್ಮುಂಜೆ ಗುತ್ತು ಶೀನಪ್ಪ ಹೆಗ್ಗಡೆಯವರದ್ದು. ಊರೂರು ಸುತ್ತಾಡಿ ಸಂಪಾದಿಸಿದ ಗಾದೆ ನುಡಿಗಟ್ಟುಗಳನ್ನೆಲ್ಲ ಅಳವಡಿಸಿಕೊಂಡು ಬರೆದುದೇ ‘ಮಿತ್ಯ ನಾರಾಯಣ ಕತೆ’. ಬೇರೆ ಬೇರೆ ಊರುಗಳ, ಬೇರೆ ಬೇರೆ ಜಾತಿ ಸಮುದಾಯಗಳ ತುಳು ಪ್ರಭೇದಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಅವರು ಸಂಗ್ರಹಿಸಿದ ಪಾಡ್ದನಗಳಲ್ಲಿ ಮೊತ್ತಮೊದಲು ಅಚ್ಚಾದುದು ‘ತುಳುವಾಲ ಬಲಿಯೇಂದ್ರ’. ಅವರು ಬರೆದ ‘ಬಂಗಾರ್ದಂಗಿದ ಕತೆ’ ಕೂಡ ತುಳುವ ಸಾಹಿತ್ಯ ಮಾಲೆಯಿಂದಲೇ ಪ್ರಕಟವಾಯಿತು. ‘ಅಜ್ಜೆರೆನ ಮಂಡಲ ಮದಿಪು’ ಅವರ ಮತ್ತೊಂದು ತುಳು ಬರವಣಿಗೆ ಪಣಿಯಾಡಿಯವರು ಊರು ಬಿಟ್ಟು ಮದರಾಸಿಗೆ ಹೋದ ಮೇಲೆ ತುಳುವ ಮಹಾಸಭೆಯನ್ನು ಪೊಳಲಿಗೆ ಸ್ಥಳಾಂತರಿಸಿ ಅದರ ಕಾರ್ಯಾಧ್ಯಕ್ಷರಾಗಿ ೧೯೪೮ರ ತನಕ ಅದನ್ನು ಮುನ್ನಡೆಸಿಕೊಂಡು ಬಂದವರಿವರು.

ಸತ್ಯಮಿತ್ರ ಬಂಗೇರರು ಬರೆದ ‘ಅಳಿಯ ಸಂತಾನ ಕಟ್ಟ್‌ದ ಗುಟ್ಟು’ ಎಂಬ ಕೃತಿ ಹಾಗೂ ಇತರ ಕೆಲವು ಗದ್ಯಬರಹಗಳು ಅವರ ಶೈಲಿಯ ಅಚ್ಚುಕಟ್ಟುತನಕ್ಕೆ ಸಾಕ್ಷಿಯಾಗಿವೆ. ಪಣಿಯಾಡಿಯವರು ತುಳುವಿಗೆ ಒಂದು ವ್ಯಾಕರಣವನ್ನು ತುಳುಭಾಷೆಯಲ್ಲೇ ಸಿದ್ಧಪಡಿಸಿಕೊಟ್ಟರು. ತುಳುವಿನ ಮೊದಲ ಬೆಳಕಿಗೆ ತಂದರು. ತನ್ನದೆಲ್ಲವನ್ನೂ ತುಳುವಿಗಾಗಿಯೇ ತ್ಯಾಗ ಮಾಡಿದವರು ಪಣಿಯಾಡಿಯವರು. ಈ ಜಿಲ್ಲೆಗೆ ‘ಅವಿಭಜಿತ ದ.ಕ.’ ತುಳುನಾಡು ಎಂಬ ಹೆಸರನ್ನಿರಿಸುವ ನಿರ್ಣಯವನ್ನು ಕಾಂಗ್ರೆಸ್ ಸಭೆಯಲ್ಲಿ ಮಂಡಿಸುವಾಗ ಅವರಿಗೆ ಹೆಚ್ಚಿನ ಬೆಂಬಲ ಸಿಗಲಿಲ್ಲ. ಆದರೆ ಅವರು ಮನಸ್ಸನ್ನು ಕಹಿ ಮಾಡಿಕೊಳ್ಳದೆ ಎದೆಯನ್ನು ಉಕ್ಕು ಮಾಡಿಕೊಂಡು ಕೆಲಸ ಮುಂದುವರಿಸಿದರು.

ತುಳು ಸಾಹಿತ್ಯ ಮಾಲೆಯಲ್ಲಿ ಪ್ರಕಟವಾದ ಕೃತಿಗಳಲ್ಲಿ ಎಂ.ವಿ. ಹೆಗಡೆಯವರ ‘ಮದ್‌ಮಾಳತ್ತ್ ಮದಿಮಾಯೆ’ (ಕತೆ), ಮಾಧವ ತಿಂಗಳಾಯರ ‘ಜನಮರ್ಲ್‌’ (ನಾಟಕ), ‘ತುಳು ಪದ್ಯಮಾಲಿಕೆ’ ಎಂಬ ಕವಿತೆಗಳ ಸಂಗ್ರಹ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ.

ಅದೇ ಕಾಲಘಟ್ಟದಲ್ಲಿ ಗಣಪತಿ ರಾವ್ ಐಗಳ್ ಅವರು ಭೂತಗಳ ಪಾಡ್ದನಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ದಿ.ಎಂ.ವಿ. ಹೆಗಡೆಯವರ ಕವಿತೆಗಳ ಜನರ ಬಾಯಲ್ಲಿ ಗುಣಗುಣಿಸಿದ್ದವು. ದಿ.ಮೂಲ್ಕಿ ನರಸಿಂಗ ರಾಯರ ‘ತುಳು ಗೀತ ಮಲ್ಲಿಗೆ’ (ಭಗವದ್ಗೀತೆಯ ತುಳು ಅನುವಾದಗಳಲ್ಲಿ ಮೊದಲನೆಯದು), ದಿ.ನರ್ಕಳ ಮಾರಪ್ಪ ಶೆಟ್ರ ಕವಿತೆಗಳು, ದಿ.ಮೋನಪ್ಪ ತಿಂಗಳಾಯರ ‘ತುಳು ಪದ್ಯಾವಳಿ’, ದಿ.ಸುಬ್ರಹ್ಮಣ್ಯ ಶಾಸ್ತ್ರಿಗಳ ‘ಕನ್ಯೋಪದೇಶ’ ಎಂಬ ನೀತಿಬೋಧನೆಯ ಕಬಿತೆ ಇತ್ಯಾದಿಗಳು ಸರಿಸುಮಾರು ಅದೇ ವೇಳೆಗೆ ಪ್ರಕಟವಾದುವು. ದಿ.ಕೆ.ಹೊನ್ನಯ್ಯ ಶೆಟ್ಟಿ, ದಿ.ಕೊರಡ್ಕಲ್ ಶ್ರೀನಿವಾಸ ರಾವ್, ದಿ.ಕಾಂತಾಚಾರ್ಯ, ದಿ.ಪಿ.ಸುಬ್ರಹ್ಮಣ್ಯ ಶಾಸ್ತ್ರಿ, ದಿ.ಮುದ್ರಾಡಿ ಜನಾರ್ದನಾಚಾರ್ಯ, ದಿ.ಎಚ್.ನಾರಾಯಣ ರಾವ್ ಹೀಗೆ ಅನೇಕರು ತುಳು ಕಬಿತೆ, ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ದಿ.ಎ.ಬಿ. ಶೆಟ್ಟಿಯವರು ತಮ್ಮ ‘ನವಯುಗ’ ಪತ್ರಿಕೆಯಲ್ಲಿ ೧೯೩೬ರಿಂದ ಮೂರು ವರ್ಷಗಳ ಕಾಲ ತಿಂಗಳಿಗೊಂದು ತುಳು ಪುರವಣಿಯನ್ನು ಮುದ್ರಿಸಿ ತುಳುವಿನಲ್ಲಿ ಬರೆಯುವವರಿಗೆ ಪ್ರೋತ್ಸಾಹ ನೀಡಿದರು. ಒಂದು ರೀತಿಯಿಂದ ನೋಡಿದರೆ ‘ನವಯುಗ’ವೇ ತುಳುವಿನ ಮೊದಲ ಪತ್ರಿಕೆಯೆನ್ನಬಹುದು. ಮಂಗಳೂರಿನ ‘ರಾಷ್ಟ್ರಜ್ಯೋತಿ’, ಸುರತ್ಕಲಿನ ‘ಪುರವಾಣಿ’, ಮುಂಬೈಯ ‘ಬಂಟರ ವಾಣಿ’ ಎಂಬ ಕನ್ನಡ ಪತ್ರಿಕೆಗಳು ಸ್ವಲ್ಪ ಜಾಗವನ್ನು ತುಳುವಿಗಾಗಿ ಮೀಸಲಿಟ್ಟು ಆಗಾಗ ತುಳು ಬರಹಗಳನ್ನು ಪ್ರಕಟಿಸುತ್ತಿದ್ದುದರ ಬಗೆಗೆ ಇಲ್ಲಿ ಹೇಳಬೇಕಾಗುತ್ತದೆ. ಇದೇ ಕಾಲಘಟ್ಟದಲ್ಲಿ ದಿ.ಪಡುಬಿದ್ರೆ ಶಿವಣ್ಣ ಹೆಗಡೆಯವರು ಬರೆದ ‘ವಿದ್ಯೆದ ತಾದಿ’, ಕಿರಿವಯಸ್ಸಲ್ಲೇ ಇಹಲೋಕ ತ್ಯಜಿಸಿದ ಮಾಧವ ತಿಂಗಳಾಯರು ರಚಿಸಿದ ನಾಟಕಗಳು ಪ್ರಕಟವಾಗಿವೆ. ಬಡಕಬೈಲು ಪರಮೇಶ್ವರಯ್ಯ ಹಾಗೂ ಶೀನಪ್ಪ ಹೆಗ್ಗಡೆಯವರ ಎಷ್ಟೋ ಕತೆಗಳು ಗಂಗಾದೇವಿ ಪಾಲಾಗಿವೆಯೆಂದು ಸ್ವತಃ ಅವರೇ ಬರೆದುಕೊಂಡಿದ್ದಾರೆ.

೧೯೪೮ – ೧೯೬೮

(ಇ) ಸುಮಾರು ೧೯೪೦ರ ನಂತರ ತುಳು ರಂಗಭೂಮಿ ಕ್ಷೇತ್ರದಲ್ಲಿ ಒಮ್ಮಿಂದೊಮ್ಮೆಗೇ ಪ್ರಸಿದ್ಧಿಗೆ ಬಂದ ಹೆಸರೆಂದರೆ ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರದು. ‘ಬಂಗುಡೆ ಮದಿಮಾಯೆ ಬೂತಾಯಿ ಮದಿಮಾಲ್ ತೋಡುಡೆ ಪೋನಗ’ ಎಂಬ ಹಾಡು ಶಾಲೆಗೆ ಹೋಗುವ ಮಕ್ಕಳ ನಾಲಿಗೆ ತುದಿಯಲ್ಲಿತ್ತು. ನಾಟಕಗಳನ್ನು ಬರೆದು, ಪಾಡ್ದನಗಳ ದಾಟಿಯಲ್ಲಿ ರಾಮಾಯಣ ಬರೆದು, ಕವಿತೆ ಬರೆದು ಎಲ್ಲರನ್ನೂ ರಂಜಿಸಿದವರಿವರು. ಹೊರನಾಡುಗಳಿಗೆ ತುಳುನಾಟಕಗಳನ್ನು ಕೊಂಡೊಯ್ದು ಪ್ರದರ್ಶಿಸಿದ ಮೊದಲ ಸಾಧಕರೆಂದು ಕೆಮ್ತೂರುರವರು. ಡಾ. ಕೆ. ಬಾಲಕೃಷ್ಣ ಮುದ್ಯ, ದಿ.ಕೆ.ವಿ. ಭಂಡಾರಿ, ದಿ.ವಿಶುಕುಮಾರ್, ಕೆ.ಎನ್.ಟೈಲರ್, ಮಚ್ಚೇಂದ್ರನಾಥ್, ರಾಮ ಕಿರೋಡಿಯನ್, ಬಿ.ವಿ.ಕಿರೋಡಿಯನ್, ಪಿ.ಎಸ್. ರಾವ್, ಬಿ.ಎಸ್. ರಾವ್, ಸಂಜೀವ ದಂಡಕೇರಿ, ಎಂ.ಎಸ್. ಇಬ್ರಾಹಿಂ, ಡಿ. ಅಸ್ಲಂ, ಸೀತಾರಾಮ ಕುಲಾಲ್, ಕೆ.ಆರ್. ಶ್ರೀಯಾನ್, ಕೆ. ವಿಶ್ವನಾಥ್, ಕೆ.ಮಹಾಬಲ ಮುಂತಾದ ನಾಟಕಗಾರರ ದೊಡ್ಡದೊಂದು ಪಡೆಯೇ ತುಳುನಾಡಲ್ಲಿತ್ತೆಂದು ತಲೆಯೆತ್ತಿ ಹೇಳಬಹುದು. ಆ ಕಾಲದಲ್ಲಿ ಬೇರೆ ಯಾವ ಭಾಷೆಯಲ್ಲೂ ಇಷ್ಟೊಂದು ಮಂದಿ ನಾಟಕಕಾರರು ಇದ್ದರೆಂದು ಹೇಳಲು ನನಗೆ ಧೈರ್ಯವಿಲ್ಲ. ತುಳುನಾಡಲ್ಲಿ ಎಲ್ಲಿ ನೋಡಿದರೂ ತುಳು ನಾಟಕಗಳ ಹಬ್ಬವೇ ಹಬ್ಬ. ಶಾಲೆ, ಕಾಲೇಜು, ಹಾಸ್ಟೆಲ್, ಯುವಕ ಸಂಘ, ಮಹಿಳಾ ಮಂಡಲ, ಊರ ಜಾತ್ರೆ, ಎಲ್ಲದಕ್ಕೂ ತುಳು ನಾಟಕ ಬೇಕೇ ಬೇಕು. ಊರೂರುಗಳಲ್ಲಿದ್ದ ಯುವಕರು ಸಿನಿಮಾ ಮಾದರಿಯಲ್ಲಿ ಬರೆದು ಆಡಿಸಿದ ತುಳು ನಾಟಕಗಳೂ ಇವೆ.

ಸೀತಾನದಿ ಗಣಪಯ್ಯ ಶೆಟ್ಟಿ, ಜತ್ತಿ, ಈಶ್ವರ ಭಾಗವತರು, ಬಾಯಾರು ಜಗನ್ನಾಥ ರೈ ಹೀಗೆ ಕೆಲವರ ಕವನ ಸಂಕಲನಗಳು ಈ ಕಾಲದಲ್ಲಿ ಅಚ್ಚಾದುವು. ಪುಂಡೂರು ದಾಮೋದರ ಪುಣಿಂಚಿತ್ತಾಯ, ಜೋಡುಮಾರ್ಗ ಪದ್ಮಪ್ಪ, ಬೋಳಂಗಡಿ ವೆಂಕಟ್ರಾವ್ ಮೊದಲಾದವರ ಪದ್ಯಗಳು ಪುಸ್ತಕ ರೂಪದಲ್ಲಿ ಬಂದುವು. ನಾಟಕಗಳಿಗಾಗಿ ಸಿನಿಮಾ ದಾಟಿಯಲ್ಲಿ ಬರೆದ ಹಾಡುಗಳು ಪ್ರಕಟವಾದುವು. ಶ್ರೀಮತಿ ಏರ್ಯ ಚಂದ್ರಭಾಗಿ ರೈಯವರು ತುಳು ಕವಿತೆಗಳನ್ನು ಬರೆದರು. ದಿ. ದೂಮಪ್ಪ ಮಾಸ್ತರರು ‘ಮಾದಿರನ ಗಾದೆಲು’ ಎಂಬ ಕೃತಿಯನ್ನು ರಚಿಸಿದರು. ದಿ.ಎಂ. ನಾರಾಯಣ ಮತ್ತು ಸುಬ್ಬಯ್ಯ ಶೆಟ್ಟಿಯವರು ತುಳು ಗಾದೆಗಳನ್ನು ಸಂಪಾದಿಸಿದರು. ಅದರಲ್ಲೂ ಸುಬ್ಬಯ್ಯ ಶೆಟ್ಟಿಯವರ ಸಂಗ್ರಹದಲ್ಲಿ ಹತ್ತು ಸಾವಿರ ಗಾದೆಗಳಿವೆಯಂತೆ. ಸೀತಾನದಿ ಗಣಪಯ್ಯ ಶೆಟ್ಟಿಯವರ ‘ಕೋಟಿ ಚೆನ್ನಯ’ ನಾಟಕ ಬಡಗು ಸೀಮೆಯಲ್ಲಿ ಬಾರೀ ಹೆಸರು ಮಾಡಿತು. ಮುಂಬೈಯಲ್ಲಿ ತುಳು ನಾಟಕ, ಸಿನೆಮಾಗಳನ್ನು ಮಾಡಿರುವ ಸದಾನಂದ ಸುವರ್ಣರ ಹೆಸರು ಕೂಡಾ ನಾಲ್ಕು ಊರುಗಳಲ್ಲಿ ಪಸರಿಸಿದೆ.

ಇದೇ ವೇಳೆಗೆ ‘ಕೋಟಿ ಚೆನ್ನಯ’ದ ಮೂಲಕ ತುಳು ಯಕ್ಷಗಾನ ರಂಗಸ್ಥಳ ಪ್ರವೇಶಿಸಿ ತನ್ನ ಕಾರುಬಾರು ತೋರಿಸಿತ್ತು. ೧೯೬೮ನೇ ಇಸವಿಯ ವೇಳೆಗೆ ಈ ಜಿ‌ಲ್ಲೆಯಲ್ಲಿ ನಡೆಯುತ್ತಿದ್ದ ಯಕ್ಷಗಾನಗಳಲ್ಲಿ ತುಳು ಪ್ರಸಂಗಗಳು ಮೂರನೆ ಒಂದರಷ್ಟು ಭಾಗವನ್ನು ಆಕ್ರಮಿಸಿಕೊಂಡವು.

ಇಂದು

೧೯೬೮-೧೯೭೮

(i) ಸುಮಾರು ೧೯೬೯ರ ವೇಳೆಗೆ ತುಳು ಭಾಷೆಯತ್ತ ವಿದ್ಯಾವಂತರು ಕೆಲವರ ಮನಸ್ಸು ತಿರುಗಿತು. ತುಳುವಿಗೊಂದು ನೆಲೆ ಬೇಕು, ಬೀದಯಲ್ಲಿ ತಿರುಗಾಡುವ ತುಳುವನ್ನು ಮನೆಯಲ್ಲಿ ಕೂರಿಸಿ ಆದರಿಸಬೇಕೆಂಬ ಆಸೆ ಅವರಲ್ಲಿ ಹುಟ್ಟಿದ ಘಳಿಗೆಯೇ ಅದ್ಭುತ ಘಳಿಗೆ. ದಿ.ಎಂ.ವಿ. ಹೆಗ್ಡೆ, ನರ್ಕಳ ಮಾರಪ್ಪ ಶೆಟ್ಟಿ ಮೊದಲಾದ ತುಳುವಿನ ಹಿರಿಯರು ಹೇಳದಿ ಮಾತನ್ನು ನಡೆಸಿಕೊಡಲು ಮುಂದೆ ಬಂದವರೆಂದರೆ ಮಂಗಳೂರಿನಲ್ಲಿ ವಕೀಲರಾಗಿದ್ದ ಶ್ರಿ ಎಸ್. ರಮಾನಂದ ಹೆಗ್ಡೆ ಮತ್ತು ಶ್ರೀ ಬಿ. ಸುಬ್ಬಯ್ಯ ಶೆಟ್ಟಿಯವರು. ಬಹಳಷ್ಟು ಜನ ಅವರಿಗೆ ಪ್ರೋತ್ಸಾಹ ನೀಡಿದ ಕಾರಣ ಮಂಗಳೂರಿನಲ್ಲಿ ‘ತುಳುಕೂಟ’ ಹುಟ್ಟಿಕೊಂಡು ಬೆಳೆಯಿತು.

೧೯೬೮ – ೭೮ರ ಹತ್ತು ವರ್ಷಗಳ ಅವಧಿಯಲ್ಲಿ ತುಳುವರಲ್ಲಿ ಪತ್ರಿಕೆಗಳನ್ನು ಹೊರತರುವ ಪ್ರಯತ್ನಗಳಾದುವು. ಎರಡೇ ವರ್ಷ ಬಾಳಿದರೂ ಡಾ. ಅಮ್ಮೆಂಬಳ ಬಾಳಪ್ಪನವರ ‘ತುಳುಸಿರಿ’ ಒಂದು ಉತ್ತಮ ಪತ್ರಿಕೆ ಎಂಬ ಹೆಸರು ಪಡೆಯಿತು. ತುಳುಕೂಟದವರು ಹೊರತರುತ್ತಿದ್ದ ‘ತುಳುಕೂಟ’ ಪತ್ರಿಕೆ ಕೂಡ ಗಮನಾರ್ಹವಾದುದು. ಅದೇ ರೀತಿ ದಿ. ರಮೇಶ್ ಕಾರ್ನಾಡ್, ಶ್ರೀ ಕಲ್ಲಾಡಿ ಜಗನ್ನಾಥ ರೈ, ಶ್ರೀ ಮಾಧವ ಕುಲಾಲ್ ಮೊದಲಾದವರು ಪತ್ರಿಕೆಗಳನ್ನು ನಡೆಸಿದರು. ಅದಾದ ನಂತರ ದೆಹಲಿಯಲ್ಲಿ ಶ್ರೀ ಬಾ.ಸಾಮಗರು ‘ತುಳುವೆರ್’ ಎಂಬ ಪತ್ರಿಕೆಯನ್ನೂ, ಮಂಗಳೂರಿನಲ್ಲಿ ಶ್ರೀ ಬಿ. ಮಂಜುನಾಥ್ ಅವರು ‘ತುಳು ರಾಜ್ಯೊ’ ಎಂಬ ಪತ್ರಿಕೆಯನ್ನೂ ಹೊರತಂದಿದ್ದರು.

ತುಳುಕೂಟದವರು ‘ತುಳುಪರ್ಬ’ ಆಚರಿಸಿದರು. ಗೋಷ್ಠಿಗಳನ್ನು ಏರ್ಪಾಡು ಮಾಡಿದರು. ಗಣ್ಯರನ್ನೂ, ಸಮರ್ಥರನ್ನೂ ಸೇರಿಸಿದರು. ನಾಟಕ ರಚನೆಗೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಕೂಡ ನೀಡಿದರು.

ಇದೇ ವೇಳೆಗೆ ತುಳು ಸಿನಿಮಾ ಕೂಡಾ ನಿರ್ಮಾಣವಾಗತೊಡಗಿತು. ‘ಎನ್ನ ತಂಗಡಿ’, ‘ದಾರೆದ ಬುಡೆದಿ’, ‘ಕೋಟಿ ಚೆನ್ನಯ’ ಇವು ಬೆನ್ನು ಬೆನ್ನಿಗೆ ಬಂದ ಸಿನಿಮಾನಗಳು. ಇವು ಸರಕಾರದ ಸಬ್ಸಿಡಿಯ ಬಲದಿಂದ ಪರದೆಯ ಮೇಲೆ ನಲಿದವು. ತುಳುವಿನಲ್ಲಿ ಸಿನಿಮಾ ನೋಡುವುದು ನಷ್ಟವಲ್ಲದಿದ್ದರೂ ಲಾಭದ ಕೆಲಸವಲ್ಲವೆಂದು ತಿಳಿದು ಮೆಲ್ಲ ಮೆಲ್ಲನೆ ನಿರ್ಮಾಪಕರು ಅದರಿಂದ ಹಿಂದಕ್ಕೆ ಸರಿದರು. ಸರಕಾರದಿಂದ ಸಬ್ಸಿಡಿ ಸಿಗುತ್ತದೆಂದು ಕಾಯುವಲ್ಲಿನ ಕಷ್ಟ ಅದಕ್ಕಾಗಿ ಕಾದು ಸುಸ್ತಾದವರಿಗೆ ಗೊತ್ತು. ಹಾಗಿದ್ದರೂ ಶ್ರೀ ಕೆ.ಎನ್.ಟೈಲರ್ ಒಬ್ಬರೇ ಬಹಳಷ್ಟು ಪ್ರಯಾಸಪಟ್ಟು ಅತ್ತ ನಾಟಕ ಇತ್ತ ಸಿನೆಮಾ ಹೀಗೆ ಎರಡೂ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆಂಬುದು ಅಭಿಮಾನದ ಸಂಗತಿ.

ಈ ದಶಕದ ಅವಧಿಯಲ್ಲಿ ಕೆದಂಬಾಡಿ ಜತ್ತಪ್ಪ ರೈಯವರು ಕನ್ನಡ ಸಾಹಿತ್ಯದಾಗಸದಲ್ಲಿ ಮಿಂಚಿ ತುಳುವಿನತ್ತ ಇಳಿದರು. ಅಚ್ಚ ತುಳು ಭಾಷೆ ಶಬ್ದಗಳನ್ನು ಕೇಳಬೇಕೆಂದರೆ ನಾವು ಜತ್ತಪ್ಪ ರೈಯವರ ಸಾಹಿತ್ಯವನ್ನು ಓದಬೇಕು. ಶಬ್ದ ದೃಷ್ಟಿಯಲ್ಲಿ ಅವರು ಅಷ್ಟು ಸಮರ್ಥರು. ಅವರು ಹೇಳಿದರೆ ಅದರ ಮೇಲೆ ಅಪೀಲೇ ಇಲ್ಲವೆನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದ ಜತ್ತಪ್ಪ ರೈಯವರು ತಮ್ಮ ಬಹುಪಾಲು ಸಾಮರ್ಥ್ಯವನ್ನು ಅನುವಾದ ಕಾರ್ಯಕ್ಕಾಗಿ ಖರ್ಚು ಮಾಡಿದರು. ‘ಅಜ್ಜ ಬಿರು’ ಎಂಬ ಕವನ ಸಂಕಲನ ಬಂತು. ಇದೇ ಕಾಲಘಟ್ಟದಲ್ಲಿ (೧೯೭೮ರಲ್ಲಿ) ಮಂಗಳೂರು ಸಮೀಪದ ಕುಡುಪುವಿನಿಂದ ‘ಮಂದಾರ ರಾಮಾಯಣ’ದ ಡೆನ್ನನ ಕೇಳಿಸಿತು. ಕೆ.ಎನ್.ಟೈಲರರ ನಾಟಕಗಳು ದಿನದಿಂದ ದಿನಕ್ಕೆ, ಊರಿಂದೂರಿಗೆ ಪಸರಿಸಿದುವು. ಮಂಗಳೂರಿಗೆ ಆಕಾಶವಾಣಿ ಬಂತು. ತುಳು ಕಬಿತೆ, ನಾಟಕ, ಹರಿಕಥೆ, ಯಕ್ಷಗಾನ ಕೇಳಿಸಲು ಪ್ರಾರಂಭವಾಯಿತು. ಆಕಾಶವಾಣಿಯ ಪ್ರೋತ್ಸಾಹ ದೊರೆತ ಕಾರಣ ತುಳುವಿನಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಯಿತು. ಅಷ್ಟು ಮಾತ್ರವಲ್ಲದೆ ತುಳುನಾಡಿನ ಉದ್ದಗಲದಲ್ಲಿ ರಾತ್ರಿ ನಡೆಯುತ್ತಿದ್ದ ಆಟಗಳಲ್ಲಿ ತುಳು ಪ್ರಸಂಗಗಳೇ ವಿಜೃಂಭಿಸಿದುವು. ಎಂತೆಂತಹ ಅವತಾರಗಳು, ಎಂತೆಂತಹ ಹೆಸರುಗಳು ಪ್ರವಾಹದಂತೆ ಊರಲ್ಲಿ ಉಕ್ಕಿ ಬಂದವು. ನಾಳೆ ಪ್ರವಾಹ ಇಳಿದ ಮೇಲೆ ನೋಡಬೇಕು! ಎಷ್ಟು ಕೊಳೆತವುಗಳು? ಯಾವ ವಾಸನೆ? ತುಳು ಅಂದರೆ ನಾಯಿಸಂತೆ ಎಂಬ ಹಾಗೆ ಜನ ನಿಂದಿಸುವ ಸ್ಥಿತಿಗೆ ಆಟ ಬಂದು ತಲುಪಿರುವುದು ಪೋಕಾಲವೆನ್ನಬೇಕೆ? ಇವರ ನಡುವೆಯೇ ಕಳೆದು ನಡುವಿನ ಮಲ್ಲಿಗೆಯಂತೆ ನಾಲ್ಕಾರು ಉತ್ತಮ ಪ್ರಸಂಗಗಳು ಬಂದುದನ್ನು ಪರಿಣತರು ಗುರುತಿಸಿದ್ದಾರೆ.

 

[1] ಪಂಡಿತವೆಂಕಟರಾಜಪುಣಿಂಚತ್ತಾಯರುವಿಷ್ಣುತುಂಗನ’ತುಳುಭಾಗವತೊ’, ‘ಕಾವೇರಿ’ ಎಂಬೆರಡುಪ್ರಾಚೀನಕಾವ್ಯಗಳನ್ನುಸಂಪಾದಿಸಿ, ಅರ್ಥ – ಟಿಪ್ಪಣಿಗಳಸಹಿತಅದನ್ನುಪ್ರಕಟಿಸಿ, ತುಳುಸಾಹಿತ್ಯಕ್ಕೆಮಹದುಪಕಾರಮಾಡಿದ್ದಾರೆ. ಪ್ರಾಚೀನಕನ್ನಡಕಾವ್ಯಗಳಹಾಗೆಇವುಕೂಡಾಸಂಸ್ಕೃತಭೂಯಿಷ್ಠವಾಗಿದ್ದರೂಈಎರಡುಕಾವ್ಯಗಳಲ್ಲಿಅಪೂರ್ವತುಳುಶಬ್ದಗಳಿವೆ. ಆದರೆಇವುಗಳಲ್ಲಿಪ್ರಾಯೋಗವಾಗಿರುವಸ್ಟ್‌ಎಂಬಒಂದುವಿಶಿಷ್ಟರೂಪವಾಗಲೀಅನೇಕಅಪೂರ್ವಶಬ್ದಗಳಾಗಲೀತುಳುವಿನಬೇರೆಬೇರೆಕಾಲದಪಾಡ್ದನ, ಗಾದೆ, ನುಡಿಗಟ್ಟುಯಾವುದರಲ್ಲೂಗೋಚರಿಸದಿರುವುದುವಿಸ್ಮಯದಸಂಗತಿ. ಪುಣಿಂಚತ್ತಾಯರಸಾಹಸತಪಸ್ಸುಗಳಫಲವಾಗಿದೊರೆತಈಎರಡುಕಾವ್ಯಗಳುತುಳುಸಾಹಿತ್ಯಚರಿತ್ರೆಯಮೇಲೆಹೊಸಬೆಳಕನ್ನುಚೆಲ್ಲಿವೆ. ಇತ್ತೀಚೆಗೆಅವರಿಗೆಆಯುರ್ವೇದದಬಗೆಗೆರಚಿತವಾಗಿರುವಒಂದುಗದ್ಯವುಲಭ್ಯವಾಗಿದೆ. ಇವುಮೂರುತುಳುಭಾಷೆಯಲ್ಲಿ, ತುಳುಲಿಪಿಯಲ್ಲಿರಚಿತವಾಗಿರುವಗ್ರಂಥಗಳು.

[2] ‘ನಿನ್ನೆ’ ಮತ್ತು’ಇಂದು’- ಎಂಬೀಕಾಲಘಟ್ಟಗಳಲ್ಲಿತುಳುಭಾಷೆಯಲ್ಲಿಬಂದಿರುವಸಾಹಿತ್ಯದಚೆಲುವನ್ನುತೋರಿಸುವಉದಾಹರಣೆಗಳನ್ನುಕೊಡಬೇಕೆಂಬಆಸೆಎಷ್ಟೇಇದ್ದರೂಈಬರಹದಮಿತಿಮೀರಬಾರದು. ಹೇಳಬೇಕಾದುದನ್ನುಹೇಳದೆಯೂಇರಲಾಗದು – ಎಂಬಆಸೆಯಿಂದಮನಸ್ಸನ್ನು, ಲೇಖನಿಯನ್ನುಎಳೆದುಹಿಡಿದಿದ್ದೇನೆ. ಪಾಡ್ದನಗಳಲ್ಲಿಬರುವವರ್ಣನೆಗಳನ್ನು, ತುಳುಶಬ್ದಗಳನ್ನುಹೆಣೆದಿರುವಸೊಬಗನ್ನುಎಣಿಸಿಕೊಂಡಾಗಲೇಮೈಪುಳಕಗೊಳ್ಳುತ್ತದೆ. ಸೀಮಿತಶಬ್ದಗಳಲ್ಲೇಲೋಕವನ್ನುತೋರಿಸುವಗಾದೆಗಳು, ಶಬ್ದಗಳನ್ನುಚಾಣಾಕ್ಷತನದಿಂದತೋರಿಸುವಜಾಣ್ಮೆಯಒಗಟುಗಳುನಮ್ಮಹಿರಿಯರಕುಸುರಿಕೆಲಸದಸೂಕ್ಷ್ಮಬುದ್ಧಿವಂತಿಕೆಗಳನ್ನುಎತ್ತಿತೋರಿಸುತ್ತದೆ. ನಿನ್ನೆಮತ್ತು ಇಂದಿನಕಾಲಘಟ್ಟಗಳಸಾಹಿತಿಗಳುಬರೆದಿರುವಕೃತಿಗಳಿಂದಒಂದೊಂದುಉದಾಹರಣೆಗಳನ್ನುಕೊಡುತ್ತಾಹೋದವರುಅದುವೇಒಂದುಗ್ರಂಥವಾದೀತು. ಹಾಗಾಗಿಈಒಂದುಲೋಪವನ್ನುಮನ್ನಿಸಬೇಕೆಂದುಮತ್ತೊಮ್ಮೆ, ಮಗದೊಮ್ಮೆವಿನಂತಿಸಿಕೊಳ್ಳುತ್ತೇನೆ.

[3] ತುಳುಭಾಷೆಯರೂಪ’ನಿನ್ನೆ’ ಹೇಗಿತ್ತು? ‘ಇಂದು’ ಹೇಗಿದೆಎಂಬುದುಒಂದುಪ್ರತ್ಯೇಕಬರಹದವಿಷಯ. ಹಾಗಾಗಿಅವನ್ನುಇಲ್ಲಿಸ್ಪರ್ಶಿಸಿಲ್ಲ.