ತುಳುಭಾಷೆ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ ಸಮೃದ್ಧವಾದ ಹಾಗೂ ವಿಕಸಿತವಾದ ಭಾಷೆ ಎಂದೂ, ಅದಕ್ಕೆ ಎರಡು ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿದೆ ಎಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಭಾಷೆ ವಿಕಸಿತವಾಗಿದ್ದು ಅದನ್ನಾಡುವವರೂ ಸುಸಂಸ್ಕೃತ ಹಾಗೂ ಮುಂದುವರಿದ ನಾಗರಿಕ ಪ್ರಜೆಗಳಾಗಿದ್ದೂ ಅದರಲ್ಲಿ ಶಿಷ್ಟ ಸಂಪ್ರದಾಯದ ಲಿಖಿತ ಸಾಹಿತ್ಯ ಹೆಚ್ಚಾಗಿ ಬೆಳೆದು ಬರದಿದ್ದಕ್ಕಾಗಿ ಕಳೆದ ಶತಮಾದನ ಭಾಷಾ ವಿದ್ವಾಂಸ ರೆ. ಕಾಲ್ಡ್‌ವೆಲ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಯಾವುದೋ ರಾಜಕೀಯ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಲಿಖಿತ ಸಾಹಿತ್ಯ ವಿಪುಲವಾಗಿ ಬೆಳೆದು ಬರದಿದ್ದರೂ ಲಿಖಿತ ಸಾಹಿತ್ಯ ಸೃಷ್ಟಿಯೇ ಆಗಲಿಲ್ಲ ಎನ್ನುವ ಹಾಗಿಲ್ಲ. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಶ್ರೀ ಭಾಗವತೊ’ ಎಂಬ ಮಹಾಕಾವ್ಯ ಹಾಗೂ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ ಪ್ರಕಟಿಸಿದ ‘ಕಾವೇರಿ ಕಾವ್ಯ’ ಹದಿನೇಳನೆಯ ಶತಮಾನದಲ್ಲಿ ರಚಿತವಾದ ಮೇರುಕೃತಿಗಳು. ಇನ್ನೂ ಒಂದು ಗದ್ಯ ಕಾವ್ಯದ ಹಸ್ತಪ್ರತಿ ಲಭ್ಯವಾಗಿದೆ. ಹೀಗಾಗಿ ತುಳುಭಾಷೆಗಳೂ, ಕನ್ನಡ, ತಮಿಳು ಮುಂತಾದ ಸಾಹಿತ್ಯ ಭಾಷೆಗಳ ಸಾಲಿನಲ್ಲಿ ಗೌರವದ ಸ್ಥಾನ ದೊರಕಿದೆ. ಇದಲ್ಲದೆ ಬಾಯ್ದೆರೆಯ ಮೂಲಕ ಹರಿದು ಬಂದ ಜನಪದ ಸಾಹಿತ್ಯ ತುಳುವಿನಲ್ಲಿ ಸಮೃದ್ಧವಾಗಿ ಬೆಳೆದು ಬಂದಿದೆ. ತುಳುನಾಡಿನ ಜನಜೀವನದ ವಿವಿಧ ಮುಖಗಳನ್ನು, ಧಾರ್ಮಿಕ ಹ ಹಾಗೂ ಸಾಮಾಜಿಕ ಪರಂಪರೆಯ ವಿವಿಧ ಚಿತ್ರಗಳನ್ನು ಪ್ರತಿಬಿಂಬಿಸುವಲ್ಲಿ ಈ ಪಾಡ್ದನರೂಪದ ಜನಪದ ಸಾಹಿತ್ಯ ಸಫಲವಾಗಿದೆ. ತುಳುನಾಡಿನ ಜನತೆಯ ವಿವಿಧ ವೃತ್ತಿ ಕಸುಬುಗಳು, ಹಬ್ಬ ಹರಿದಿನಗಳು, ಧಾರ್ಮಿಕ ಆಚರಣೆಗಳು, ಸಂಗೀತಕಲೆಗಳು, ಆಟ ವಿನೋದಗಳು ಮುಂತಾದವುಗಳಿಗೆ ಸಂಬಂಧಿಸಿದ ಶಬ್ದ ಸಂಪತ್ತು, ಬೆಳೆದು ಬಂದ ತುಳುಭಾಷೆಯ ಶಬ್ದಭಂಡಾರ ಸಮೃದ್ಧವಾಗಿದೆ. ಇತ್ತೀಚೆಗಿನ ಐದಾರು ದಶಕಗಳಲ್ಲಿ ಲಿಖಿತ ಸಾಹಿತ್ಯವು ವಿಪುಲವಾಗಿ ಬೆಳೆಯತೊಡಗಿದೆ. ಮೂಲ ದ್ರಾವಿಡ ಭಾಷೆಯ ಅನೇಕ ಲಕ್ಷಣಗಳನ್ನು ಉಳಿಸಿಕೊಂಡು ಬಂದುದರಿಂದ ಈ ಭಾಷೆಯ ವಿಶ್ಲೇಷಣೆ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಹಾಗೂ ಮೂಲರೂಪದ ಪುನರ‍್ನಿರ್ಮಾಣಕ್ಕೆ ಅಮೂಲ್ಯ ಕಾಣಿಕೆಗಳನ್ನು ಕೊಡಬಲ್ಲದು ಎಂದು ಭಾಷಾವಿಜ್ಞಾನಿಗಳು ಹೇಳುತ್ತಿದ್ದಾರೆ.

ನಾಗಮಂಡಲ-ಭೂತಾರಾಧನೆ ಮುಂತಾದ ಧಾಮಿರ್ಕ ಆಚರಣೆಗಳು, ಯಕ್ಷಗಾನ, ತಾಳಮದ್ದಳೆ ಮುಂತಾದ ರಂಗಪ್ರಭೇದಗಳು ಆಟಿಕಳಂಜ, ಮಾದಿರ ಮುಂತಾದ ಜನಪದ ವಿನೋದಗಳು; ಪಲ್ಲಿ ಪತ್ತುನಿ, ಪೊಕ್ಕು ಗೊಬ್ಬುನಿ, ಕಲ್ಲಾಟ ಮುಂತಾದ ಆಟ ಕ್ರೀಡೆಗಳು; ಅಳಿಯ ಸಂತಾನ ಕಟ್ಟು ಮುಂತಾದ ಸಾಮಾಜಿಕ ಸಂಸ್ಥೆಗಳು; ವಿಶಿಷ್ಟ ಬೇಸಾಯ, ಮೀನುಗಾರಿಕೆ, ಬೇಟೆ ಇತ್ಯಾದಿಗಳ ಸಂಪ್ರದಾಯಗಳು – ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ತುಳು ಸಂಸ್ಕೃತಿಯ ಸತ್ವ ಈ ಭಾಷೆಯಲ್ಲಿ ಹಾಗೂ ಅದರಲ್ಲಿನ ಜನಪದ ಸಾಹಿತ್ಯದಲ್ಲಿ ಅಡಕವಾಗಿದೆ. ಕರಾವಳಿ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದರೂ ಈ ಜನಾಂಗ ಅಖಿಲ ಕರ್ನಾಟಕ ಸಂಸ್ಕೃತಿಗೂ, ಭಾರತೀಯ ಸಂಸ್ಕೃತಿಯ ಸಮಗ್ರತೆಗೂ ತನ್ನದೇ ಆದ ವಿಶಿಷ್ಟ ಕಾಣಿಕೆಗಳನ್ನೂ ಕೊಟ್ಟಿರುವುದರಿಂದ ಅದು ಅಧ್ಯಯನಯೋಗ್ಯವಾಗಿದೆ.

ಸುಮಾರು ನೂರಮೂವತ್ತು ವರ್ಷಗಳ ಮೊದಲು ಕ್ರೈಸ್ತ ಮಿಶನರಿಗಳು ತುಳು ಭಾಷೆಯನ್ನೂ ಕನ್ನಡ ಲಿಪಿಯ ಮೂಲಕ ಬರೆದು ಮುದ್ರಿಸಿ ಕೆಲವು ಧಾರ್ಮಿಕ ಗ್ರಂಥಗಳನ್ನೂ ಇತರ ಸಾಹಿತ್ಯ ಕೃತಿಗಳನ್ನು ಪ್ರಕಟಿಸತೊಡಗಿದರು. ಅದಕ್ಕಿಂತ ಮೊದಲು ತುಳು ಲಿಪಿ ಎಂಬುದೊಂದು ಬಳಕೆಯಲ್ಲಿತ್ತು. ಆದರೆ ಅದನ್ನು ಬ್ರಾಹ್ಮಣರು ಸಂಸ್ಕೃತ ಗ್ರಂಥಗಳನ್ನು ಬರೆಯಲು ಮಾತ್ರ ಉಪಯೋಗಿಸುತ್ತಿದ್ದರು ಮತ್ತು ಈಗಲೂ ಅದನ್ನು ಮಂತ್ರ ಶಾಸ್ತ್ರ ಇತ್ಯಾದಿಗಳ ಬರಹಕ್ಕೆ ಉಪಯೋಗಿಸುತ್ತಿದ್ದಾರೆ. ಕೆಲವು ಶತಮಾನಗಳ ಹಿಂದಿನಿಂದಲೂ ದಕ್ಷಿಣ ಕ ನ್ನಡದ ಬ್ರಾಹ್ಮಣರು ಶಾಸ್ತ್ರಾಧ್ಯಯನಕ್ಕಾಗಿ ಕೇರಳಕ್ಕೆ ಹೋಗುವ ಪರಂಪರೆ ನಡೆದುಬಂದಿದೆ. ಅವರೂ ಕೇರಳದ ವಿದ್ವಾಂಸರೂ ಸೇರಿ ತುಳು ಮಲೆಯಾಳ ಲಿಪಿಯನ್ನು ರೂಪಿಸಿದರು. ಮುಂದೆ ಆ ಲಿಪಿಯೇ ಸ್ವಲ್ಪ ಬದಲಾವಣೆ ಹೊಂದು ಅದರ ಮೂಲಕ ಮಲೆಯಾಳದಲ್ಲಿ ಲಿಖಿತ ಸಾಹಿತ್ಯ ಬೆಳೆಯಿತು. ಅದಕ್ಕಿಂತ ಸ್ವಲ್ಪವೇ ವ್ಯತ್ಯಾಸಗೊಂಡಿರುವ ತುಳು ಲಿಪಿ ಸಂಸ್ಕೃತ ವಿದ್ವಾಂಸರ, ಪುರೋಹಿತರ ಬರವಣಿಗೆಗೆ ಉಪಯೋಗಿಸಲ್ಪಡತೊಡಗಿತು. ಒಂದೆರಡು ಶಾಸನಗಳೂ ಆ ತುಳು ಲಿಪಿಯಲ್ಲಿ ದೊರೆತಿದೆ. ೧೭ನೆಯ ಶತಮಾನದಲ್ಲಿ ಬರೆದ ತುಳು ಭಾಗವತದ ಮತ್ತು ಕಾವೇರಿ ಎಂಬ ಕಾವ್ಯದ ಹಸ್ತಪ್ರತಿಗಳೂ ಆ ಲಿಪಿಯಲ್ಲಿ ದೊರಕಿವೆ.

ಕ್ರೈಸ್ತ ಮಿಶನರಿಗಳು ೧೮೩೪ರಲ್ಲಿ ದಕ್ಷಿಣ ಕನ್ನಡಕ್ಕೆ ಬಂದು ಮಂಗಳೂರು, ಮೂಲ್ಕಿ, ಉಡುಪಿ ಮುಂತಾದ ಕಡೆ ಪ್ರಚಾರದಲ್ಲಿರುವ ಆಡುನುಡಿಗಳನ್ನು ಗಮನಿಸಿ ಈ ಭಾಷೆಯಲ್ಲಿಯೇ ಧರ್ಮಪ್ರಚಾರ, ಬೈಬಲ್ ಮುಂತಾದ ಧಾರ್ಮಿಕ ಗ್ರಂಥಗಳ ಭಾಷಾಂತರ ಮುಂತಾದ ಕಾರ್ಯಕ್ರಮಗಳನ್ನು ಕೈಗೊಂಡರು. ಪ್ರಾದೇಶಿಕ ಭಾಷೆ ಕನ್ನಡವಾಗಿರುವುದರಿಂದ ಕನ್ನಡ ಲಿಪಿಯಲ್ಲಿಯೇ ತುಳು ಗ್ರಂಥಗಳನ್ನು ಪ್ರಕಟಿಸತೊಡಗಿದರು. ತುಳು ಕಲಿಯುವವರಿಗಾಗಿ ತುಳು ವ್ಯಾಕರಣ ಮತ್ತು ನಿಘಂಟುಗಳ ರಚನೆಗಾಗಿ ಕಾರ್ಯಪ್ರವೃತ್ತರಾದರು. ಅವರ ಉದ್ದೇಶ ಏನೇ ಆಗಿದ್ದರೂ ಅವರ ಪ್ರಯತ್ನದ ಫಲವಾಗಿ ತುಳುಭಾಷೆಯಲ್ಲಿ ಶಿಷ್ಯ ಸಾಹಿತ್ಯದ ರಚನೆಗೆ ನಾಂದಿಯಾಯಿತು ಮತ್ತು ಅದಕ್ಕೆ ಬೇಕಾದ ಪ್ರೋತ್ಸಾಹ ದೊರೆಯಿತು ಎಂಬುದರಲ್ಲಿ ಸಂದೇಹವಿಲ್ಲ. ಅವರು ನೀಡಿದ ನಿಘಂಟು ಹಾಗೂ ವ್ಯಾಕರಣ ಗ್ರಂಥ ತುಳುಭಾಷೆಯ ಪುನರುಜ್ಜೀವನದ ಘಟ್ಟದಲ್ಲಿ ಅತಿ ಮಹತ್ವದ ಪಾತ್ರ ವಹಿಸಿವೆ ಹಾಗೂ ಸ್ವಾತಂತ್ರ್ಯಪೂರ್ವದ ದಶಕಗಳಲ್ಲಿ ದಿವಂಗತ ಪಣಿಯಾಡಿ ಮತ್ತು ಸಂಗಡಿಗರ ತುಳು ಚಳವಳಿಗೆ ಪ್ರೇರಣೆ ನೀಡಿವೆ. ಅಂದಿನಿಂದ ಕನ್ನಡ ಲಿಪಿಯಲ್ಲಿಯೇ ತುಳುವಿನ ಬರೆವಣಿಗೆ ಮುಂದುವರಿಯುತ್ತಿದೆ.

ತುಳುಭಾಷೆಗೂ ಕ್ರೈಸ್ತ ಮಿಶನರಿಗಳು ನೂರು ವರ್ಷಗಳ ಹಿಂದೆಯೇ ಶಬ್ದಕೋಶವನ್ನು ರಚಿಸಿದ್ದರು. ಕ್ರೈಸ್ತ ಮಿಶನರಿಗಳಲ್ಲಿ ರೆವರೆಂಡ್ ಕೆಮ್ಮರರ್ ಮತ್ತು ರೆವರೆಂಡ್ ಅಮ್ಮನ್ ಮೊತ್ತಮೊದಲಿಗೆ ಈ ಭಾಷೆಯ ಕಡೆ ದೃಷ್ಟಿ ಹರಿಸಿದ್ದರು. ರೆವರೆಂಡ್ ಜಿ.ಕೆಮ್ಮರರ್ ಎನ್ನುವವರು ೧೮೫೬ರಲ್ಲಿಯೇ ತುಳುಭಾಷೆಯ ಶಬ್ದ ಸಂಪತ್ತನ್ನು ಸಂಗ್ರಹಿಸತೊಡಗಿ ೧೮೫೮ರ ಹೊತ್ತಿಗೆ ಸುಮಾರು ೨೦೦೦ ಶಬ್ದ ಘಟಕಗಳನ್ನು ಸಂಗ್ರಹ ಮಾಡಿ ತೀರಿಹೋದರು. ರೆವರೆಂಡ್ ಮ್ಯಾನರ್ ಎಂಬವರು ಈ ಕಾರ್ಯವನ್ನು ಮುಂದುವರಿಸಿದ ಕಾಪು ಮಧ್ವರಾಯ, ಮೂಲ್ಕಿ ಸೀತಾರಾಮ, ಮಂಗಳೂರು ಸರ್ವೋತ್ತಮ ಪೈ ಹಾಗೂ ಬಾಸೆಲ್ ಮಿಶನಿನ ಇಸ್ರೇಲ್ ಆರೋನ್ ಮುಂತಾದವರ ಸಹಕಾರದಿಂದ ಸುಮಾರು ೧೮೦೦೦ ಶಬ್ದಗಳನ್ನೊಳಗೊಂಡ ತುಳು-ಇಂಗ್ಲಿಷ್ ನಿಘಂಟನ್ನು ೧೮೮೮ರಲ್ಲಿ ಪ್ರಕಟಿಸಿದರು. ಮುಂದಿನ ಈ ಒಂದು ಶತಮಾನದ ಅವಧಿಯಲ್ಲಿ ತುಳುವಿನ ಅಧ್ಯಯನಕ್ಕೆ ನಮ್ಮ ಮುಂದಿನ ಮೇರುಕೃತಿಗಳು ಇವು ಮಾತ್ರ ಭಾಷಾವಿಜ್ಮಾನವಾಗಲಿ, ನಿಘಂಟು ರಚನಾಶಾಸ್ತ್ರವಾಗಲೀ ಬೆಳೆದಿರುವ ಆ ಕಾಲದಲ್ಲಿ ಇಂತಹ ಒಂದು ಮಹತ್ತ್ವಪೂರ್ಣ ಕಾಣಿಕೆಯನ್ನು ಸಲ್ಲಿಸಿದ ಕ್ರೈಸ್ತ ಮಿಶನರಿಗಳು ನಿಜವಾಗಿಯೂ ಪ್ರಾತಃಸ್ಮರಣೀಯರು.

ಕನ್ನಡ ಲಿಪಿಯಲ್ಲಿಯೂ ಪರಿಷ್ಕೃತ ರೋಮನ್ ಲಿಪಿಯಲ್ಲಿಯೂ ಶಬ್ದಗಳನ್ನು ನಮೂದಿಸಿ ತುಳು ಶಬ್ದಗಳ ಸರಿಯಾದ ಉಚ್ಚಾರಣೆಯನ್ನು ಸೂಚಿಸಲು ಲಿಪಿಯಲ್ಲಿ ವಿಶೇಷ ಚಿಹ್ನೆಗಳನ್ನು ಉಪಯೋಗಿಸಿ ಶಬ್ದಗಳ ವಿವಿಧ ಅರ್ಥಗಳನ್ನು ನಮೂದಿಸಿ ಅವುಗಳಿಗೆ ಸಂಬಂಧಿಸಿದ ನುಡಿಗಟ್ಟುಗಳನ್ನೂ ಕೊಟ್ಟು ನಿಘಂಟನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮರ್ಪಕವಾಗಿ ಮಾಡಲಿಕ್ಕೆ ರೆವರೆಂಡ್ ಮ್ಯಾನರ್ ಶ್ರಮಿಸಿದ್ದರು. ಆ ಕಾಲದಲ್ಲಿನ ಸೀಮಿತ ಅನುಕೂಲತೆಗಳ ಆಶ್ರಯದಲ್ಲಿ ಇಷ್ಟು ದೊಡ್ಡ ಕೆಲಸ ಮಾಡಿದ್ದು ಒಂದು ಮಹತ್ಸಾಧನೆ. ನಿಷ್ಠಾವಂತ ಜರ್ಮನ್ ಮಿಶನರಿಗಳ ಭಾಷಾಪ್ರೇಮಕ್ಕೆ ಇದೊಂದು ಜ್ವಲಂತ ಉದಾಹರಣೆ.

ಆದರೆ ನೂರು ವರ್ಷಗಳ ಹಿಂದೆ ತುಳುಭಾಷೆಗೆ ಪ್ರಪ್ರಥಮವಾಗಿ ರಚಿತವಾದ ನಿಘಂಟಿನಲ್ಲಿ ದೋಷಗಳಿಲ್ಲದಿರುವುದು ಸಾಧ್ಯವಿಲ್ಲ. ಲಿಖಿತ ಸಾಹಿತ್ಯವಿಲ್ಲದಿದ್ದ ಮತ್ತು ವಿವಿಧ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳಿಂದ ಕೂಡಿದ ಈ ಭಾಷೆಗೆ ಸಂಪೂರ್ಣ ಹಾಗೂ ಸರ್ವಸಂಗ್ರಾಹಕವಾದ ನಿಘಂಟಿನ ರಚನೆಯಾಗಬೇಕಾದರೆ ಆಡುನುಡಿಗಳ ಪರಿವೀಕ್ಷಣೆ ನಡೆಯಬೇಕು. ವಿವಿಧ ವೃತ್ತಿ ಕಸುಬುಗಳು, ಹಬ್ಬ ಹರಿದಿನಗಳು, ಸಾಮಾಜಿಕ ಧಾರ್ಮಿಕ ಆಚರಣೆಗಳು, ಜನಪದ ಕಲೆ ವಿನೋದಗಳು, ಆಟೋಟಗಳು ನಡೆಯುವಲ್ಲಿ ಹೋಗಿ ಕ್ಷೇತ್ರಕಾರ್ಯ ನಡೆಸಿ ಶಬ್ಧಸಂಗ್ರಹ ಮಾಡಬೇಕಾಗಿದೆ. ಆದರೆ ಹಿಂದಿನ ನಿಘಂಟುಕಾರರಿಗೆ ಅದಕ್ಕೆ ಬೇಕಾದ ಅನುಕೂಲತೆಗಳಿರಲಿಲ್ಲ. ಅದಕ್ಕೆ ಬೇಕಾದ ಭಾಷಾ ವೈಜ್ಞಾನಿಕ ತಂತ್ರಗಳು ಪ್ರಚಾರಕ್ಕೆ ಬಂದಿರಲಿಲ್ಲ. ಮ್ಯಾನರ್ ನಿಘಂಟು ತುಳುವಿನ ಎರಡು ಮುಖ್ಯ ಉಪಭಾಷೆಗಳಾದ ಸಾಮಾನ್ಯ ತುಳು ಹಾಗೂ ಶಿವಳ್ಳಿಯವರ ತುಳು ಎಂಬ ಭೇದವನ್ನೂ ಪರಿಗಣಿಸಲಿಲ್ಲ. ವಿವಿಧ ಉಪಭಾಷೆಗಳಲ್ಲಿ ಕಂಡುಬರುವ ತುಳು ಪದಗಳ ರೂಪಭೇದಗಳಾಗಲಿ, ಪರ್ಯಾಯ ಪದಗಳಾಗಲಿ ಕನ್ನಡದಲ್ಲಿ ಅರ್ಥ ವಿಶ್ಲೇಷಣೆಯಾಗಲಿ ಇತರ ದ್ರಾವಿಡ ಭಾಷೆಗಳ ಜ್ಞಾತಿಪದಗಳಾಗಲಿ ಅರ್ಥನಿರೂಪಣೆಗೆ ಸಹಾಯಕವಾಗುವ ಗಾದೆಗಳಾಗಲಿ ಉಲ್ಲೇಖಿಸಲ್ಪಟ್ಟಿಲ್ಲ. ಸಮಾಸ ಪದಗಳೂ ಸಾಧಿತ ಪದಗಳೂ ಕೆಲವೆಡೆ ಕಂಡುಬಂದರೂ ಅವು ಸಾಕಷ್ಟು ಸಂಖ್ಯೆಯಲ್ಲಿಲ್ಲ. ವಿವಿಧ ವೃತ್ತಿ ಕಸುಬುಗಳು, ಹಬ್ಬ ಹರಿದಿನಗಳು, ಸಾಮಾಜಿಕ ಧಾರ್ಮಿಕ ಆಚರಣೆಗಳು, ಜನಪದ ಕಲೆ ವಿನೋದಗಳು, ಆಟೋಟಗಳು ನಡೆಯುವಲ್ಲಿ ಹೋಗಿ ಕ್ಷೇತ್ರಕಾರ್ಯ ನಡೆಸಿ ಶಬ್ದಸಂಗ್ರಹ ಮಾಡಬೇಕಾಗಿದೆ. ಆದರೆ ಹಿಂದಿನ ನಿಘಂಟುಕಾರರಿಗೆ ಅದಕ್ಕೆ ಬೇಕಾದ ಅನುಕೂಲತೆಗಳಿರಲಿಲ್ಲ. ಅದಕ್ಕೆ ಬೇಕಾದ ಭಾಷಾ ವೈಜ್ಞಾನಿಕ ತಂತ್ರಗಳು ಪ್ರಚಾರಕ್ಕೆ ಬಂದಿರಲಿಲ್ಲ. ಮ್ಯಾನರ್ ನಿಘಂಟು ತುಳುವಿನ ಎರಡು ಮುಖ್ಯ ಉಪಭಾಷೆಗಳಾದ ಸಾಮಾನ್ಯ ತುಳು ಹಾಗೂ ಶಿವಳ್ಳಿಯವರ ತುಳು ಎಂಬ ಭೇದವನ್ನೂ ಪರಿಗಣಿಸಲಿಲ್ಲ. ವಿವಿಧ ಉಪಭಾಷೆಗಳಲ್ಲಿ ಕಂಡುಬರುವ ತುಳು ಪದಗಳ ರೂಪಭೇದಗಳಾಗಲಿ, ಪರ್ಯಾಯ ಪದಗಳಾಗಲಿ ಕನ್ನಡದಲ್ಲಿ ಅರ್ಥ ವಿಶ್ಲೇಷಣೆಯಾಗಲಿ ಇತರ ದ್ರಾವಿಡ ಭಾಷೆಗಳ ಜ್ಞಾತಿಪದಗಳಾಗಲಿ ಅರ್ಥನಿರೂಪಣೆಗೆ ಸಹಾಯಕವಾಗುವ ಗಾದೆಗಳಾಗಲಿ ಉಲ್ಲೇಖಿಸಲ್ಪಟ್ಟಿಲ್ಲ. ಸಮಾಸ ಪದಗಳೂ ಸಾಧಿತ ಪದಗಳೂ ಕೆಲವೆಡೆ ಕಂಡುಬಂದರೂ ಅವು ಸಾಕಷ್ಟು ಸಂಖ್ಯೆಯಲ್ಲಿಲ್ಲ. ವಿವಿಧ ವೃತ್ತಿ ಕಸುಬುಗಳು, ಹಬ್ಬ ಹರಿದಿನಗಳು, ಸಾಮಾಜಿಕ ಧಾರ್ಮಿಕ ಆಚರಣೆಗಳು, ಕಲಾ ವಿನೋದಗಳು ಮುಂತಾದವುಗಳಿಗೆ ಸಂಬಂಧಿಸಿದ ತಾಂತ್ರಿಕ ಪದಗಳು ಅದರಲಿಲ್ಲ. ತುಳುವಿನ ವಿಶಿಷ್ಟ ಶೈಲಿಗಳಲ್ಲಿ ಹಾಗೂ ಜನಪದ ಸಾಹಿತ್ಯದಲ್ಲಿ ಕಂಡುಬರುವ ಪದಗಳಿಲ್ಲ.

ಮದ್ರಾಸು ವಿಶ್ವವಿದ್ಯಾನಿಲಯದ ಮಾಜಿ ಪ್ರಾಚಾರ್ಯರಾಗಿದ್ದ ದಿವಂಗತ ಪ್ರೊ. ಮರಿಯಪ್ಪ ಭಟ್ಟರೂ, ಡಾ. ಶಂಕರ ಕೆದಿಲಾಯರೂ ಸೇರಿ ಸುಮಾರು ಎಂಟು ಸಾವಿರ ಶಬ್ದಗಳ ಕೋಶವೊಂದನ್ನು ೧೯೬೭ರಲ್ಲಿ ಪ್ರಕಟಿಸಿದರು. ಮ್ಯಾನರ್ ನಿಘಂಟಿನ ಸರಳೀಕೃತ ರೂಪದಲ್ಲಿರುವ ಈ ನಿಘಂಟಿನಲ್ಲಿ ಪ್ರೊ. ಭಟ್ ಮತ್ತು ಡಾ. ಕೆದಿಲಾಯರು ಮೂಲ ನಿಘಂಟಿನಲ್ಲಿ ಸೇರಿಕೊಂಡು ಮತ್ತು ಈಗ ಪ್ರಚಾರದಲ್ಲಿಲ್ಲದ ಎಷ್ಟೋ ಸಂಸ್ಕೃತ ಪದಗಳನ್ನು ತೆಗೆದುಹಾಕಿ ಅರ್ಥ ವಿವರಣೆಯಲ್ಲಿ ಕಂಡುಬಂದ ದೋಷಗಳನ್ನು ನಿವಾರಿಸಿ ಪುತ್ತೂರು ಪ್ರದೇಶದಲ್ಲಿ ಸಂಪಾದಕರು ಕಂಡು ಕೇಳಿದ ಕೆಲವು ಶಬ್ದಗಳನ್ನೂ ಸೇರಿಸಿ ಜನಸಾಮಾನ್ಯರಿಗೆ ಆಧಾರಭೂತ ಶಬ್ದ ಸಂಪತ್ತಿನ ಕೈಪಿಡಿಯೊಂದನ್ನು ಒದಗಿಸಿಕೊಟ್ಟರು. ಆದರೆ ತುಳುವಿನ ಆಡುನುಡಿಗಳ ಬಗ್ಗೆ ಜಿಲ್ಲೆಯಾದ್ಯಂತ ಸರ್ವೇಕ್ಷಣೆ ನಡೆಸಲು ಅವರಿಗೆ ಅವಕಾಶವಿರಲಿಲ್ಲ. ತುಳುನಾಡಿನ ವೃತ್ತಿ ಕಸುಬುಗಳಲ್ಲಿ, ಸಾಮಾಜಿಕ, ಧಾರ್ಮಿಕ ಆಚರಣೆಗಳಲ್ಲಿ, ಕಲೆ ವಿನೋದ ಗಳಲ್ಲಿ ಬಳಸುವ ಸಾವಿರಾರು ಪದಗಳನ್ನು ಸಂಗ್ರಹ ಮಾಡುವ ಪ್ರಯತ್ನ ನಡೆಯಲಿಲ್ಲ. ಹೀಗಾಗಿ ತುಳುವಿನ ಸರ್ವಸಂಗ್ರಾಹಕವಾದ ನಿಘಂಟು ದೊರಕದೆ ಹೋಯಿತು.

ತುಳುನಾಡಿನ ಜನತೆ ಈಗ ತನ್ನ ಭಾಷೆ ಹಾಗೂ ಸಂಸ್ಕೃತಿಗಳ ಗತವೈಭವವನ್ನು ನೆನೆಸುತ್ತಾ ಅದರ ಪುನರುಜ್ಜೀವನಕ್ಕಾಗಿ ಪ್ರಯತ್ನಿಸತೊಡಗಿದೆ. ತುಳುವಿನಲ್ಲಿ ಶಿಷ್ಟ ಸಾಹಿತ್ಯದ ರಚನೆ, ಸಾಮೂಹಿಕ ಸಂಪರ್ಕ ಮಾಧ್ಯಮಗಳಲ್ಲಿ ತುಳುವಿನ ಬಳಕೆ, ವಿದ್ಯಾಕ್ಷೇತ್ರದಲ್ಲಿ ಅದಕ್ಕೆ ಸ್ಥಾನಮಾನ, ಪ್ರಾಚೀನ ಕಲೆ, ವಿನೋದ, ಆಚರಣೆ ಮುಂತಾದವುಗಳು ದಾಖಲೆ, ಪ್ರಚಾರ, ಪ್ರೋತ್ಸಾಹ ಹಾಗೂ ಅವುಗಳ ಬಗ್ಗೆ ಸಂಶೋಧನೆ ಮುಂತಾದವುಗಳ ಕಡೆ ಜನತೆಯ ಗಮನ ಸೆಳೆದಿದೆ. ತುಳುವಿನ ಈ ಪುನರುಜ್ಜೀವನದ ಸಂದರ್ಭದಲ್ಲಿ ಸಂಸ್ಕೃತಿಯ ಪರಿಚಯ ಹಾಗೂ ಅಧ್ಯಯನ – ಸಂಶೋಧನೆಗಳ ಆಕರ ಗ್ರಂಥವಾಗಬಲ್ಲಂತಹ ಒಂದು ಸರ್ವಸಂಗ್ರಾಹಕ ನಿಘಂಟಿನ ಅವಶ್ಯಕತೆಯಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಉಡುಪಿನ ಎಂ.ಜಿ.ಎಂ. ಕಾಲೇಜಿನ ಸ್ನಾತಕೋತ್ತರ ಸಂಶೋಧನ ವಿಭಾಗದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ತುಳುನಾಡಿನ ಚರಿತ್ರೆ, ಮಾನವಕುಲ ಶಾಸ್ತ್ರ, ಸಮಾಜಜೀವನ, ಭಾಷೆ, ಕಲೆ ಮುಂತಾದವುಗಳ ಬಗ್ಗೆ ಆಳವಾದ ಸಂಶೋಧನೆ ನಡೆಸುವ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ತುಳುಭಾಷೆಯ ಆಡುನುಡಿಗಳ ಸರ್ವೇಕ್ಷಣೆ ಹಾಗೂ ಸರ್ವಸಂಗ್ರಾಹಕವಾದ ನಿಘಂಟಿನ ರಚನೆ ಆದ್ಯ ಕರ್ತವ್ಯವೆಂದು ಮನಗಂಡಿತು. ಸಾಮಾಜಿಕ, ಧಾರ್ಮಿಕ, ಕಲಾತ್ಮಕ ಹಾಗೂ ವ್ಯಾವಸಾಯಿಕ ಪರಿಸರಗಳಲ್ಲಿ ಉಪಯೋಗಿಸುವ ಪದಗಳು ಹಾಗೂ ವಿವರಣೆಗಳು ತುಳುನಾಡಿನ ಜನತೆಯ ಭಾಷೆ ಮಾತ್ರವಲ್ಲದೆ ಸಂಸ್ಕೃತಿಯ ಅಧ್ಯಯನಕ್ಕೂ ಬೇಕಾದ ಮಾಹಿತಿಯ ನ್ನೊದಗಿಸಿ ಆಕರಗ್ರಂಥವಾಗಬೇಕೆಂದು ನಿರ್ಣಯಿಸಿತು.

ಜಗತ್ತಿನ ಪ್ರಮುಖ ಸಾಹಿತ್ಯಿಕ ಭಾಷೆಗಳಲ್ಲಿ ಪ್ರಕಟವಾದ ನಿಘಂಟು ಗಳೆಲ್ಲ ಸಾಹಿತ್ಯ ಕೃತಿಗಳಲ್ಲಿ ಆಯ್ದುಕೊಂಡು ಅವುಗಳಿಂದ ಪದ ಶೇಖರಣೆ ಮಾಡಿ ರಚಿಸಿದವುಗಳು. ಹೀಗೆ ಶೇಖರಣೆ ಮಾಡಿದ ಪದರಾಶಿಗೆ ಪೂರಕವಾಗಿ ಮಾತ್ರ ಕೆಲವೊಮ್ಮೆ ಆಡುನುಡಿಯಿಂದ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದು ಅಲ್ಲಲ್ಲಿ ಕಂಡುಬರುತ್ತದೆ. ಸಾಹಿತ್ಯ ಭಂಡಾರದ ರಚನೆಯಾಗದ ಆಡುಭಾಷೆಗಳಿಗಾಗಿ ಪ್ರಕಟವಾದ ನಿಘಂಟುಗಳೆಂದರೆ ಭಾಷಾಶಾಸ್ತ್ರಜ್ಞರು ತಮ್ಮ ಭಾಷಾ ವೈಜ್ಞಾನಿಕ ವಿಶ್ಲೇಷಣೆಗಾಗಿ ಸಂಗ್ರಹಿಸಿದ ಪದಗಳ ಪಟ್ಟಿ ಅಥವಾ ಕ್ರೈಸ್ತ ಮಿಶನರಿಗಳು ಹಾಗೂ ಕೆಲವು ಸಾಮಾಜಿಕ ಶೈಕ್ಷಣಿಕ ಸಂಸ್ಥೆಗಳು ರಚಿಸಿದ ಚಿಕ್ಕಪುಟ್ಟ ಪದಕೋಶಗಳು. ಇವು ಆಯಾ ಆಡುಭಾಷೆಗಳಲ್ಲಿ ನಿತ್ಯಜೀವನದಲ್ಲಿ ಉಪಯೋಗಿಸುವ ಆಧಾರಭೂತ ಶಬ್ದಾವಳಿ (ಬೇಸಿಕ್ ವೊಕಾಬ್ಯುಲರಿ)ಗಳಿಗೆ ಮಾತ್ರ ಸೀಮಿತವಾಗಿದ್ದು ಆ ಭಾಷೆಯನ್ನಾಡುವ ಜನಾಂಗ ತಮ್ಮ ವಿವಿಧ ವೃತ್ತಿಕಸುಬುಗಳ ಸಂದರ್ಭದಲ್ಲಿಯಾಗಲಿ, ಸಾಮಾಜಿಕ ಧಾರ್ಮಿಕ ಆಚರಣೆಗಳಲ್ಲಿಯಾಗಲಿ, ಕಲಾ ವಿನೋದಾತ್ಮಕ ಸನ್ನಿವೇಶಗಳಲ್ಲಿಯಾಗಲಿ ಉಪಯೋಗಿಸುವ ಸಮಗ್ರ ಶಬ್ದ ಸಂಪತ್ತನ್ನು ಸಂಪೂರ್ಣವಾಗಿ ಸೆರೆಹಿಡಿದು ವಿಶ್ಲೇಷಿಸುವ ಪ್ರಯತ್ನ ಮಾಡಲಿಲ್ಲ.

ಮೇಲೆ ಸೂಚಿಸಿದ ಎಲ್ಲ ಅಂಶಗಳನ್ನೊಳಗೊಂಡು ತುಳು ಭಾಷೆ, ಸಂಸ್ಕೃತಿ ಹಾಗೂ ಜಾನಪದದ ಸಮಗ್ರ ಮಾಹಿತಿಗಳನ್ನೊಳಗೊಂಡ ಸಂಸ್ಕೃತಿ ಕೋಶವಾಗಬಲ್ಲ ಒಂದು ಸಮಗ್ರ ನಿಘಂಟನ್ನು ರಚಿಸುವುದೇ ನಮ್ಮ ಯೋಜನೆಯ ಉದ್ದೇಶ. ಈ ವಿವಿಧೋದ್ದೇಶ ಯೋಜನೆಗಾಗಿ ತುಳುನಾಡಿನ ವಿವಿಧ ಪ್ರದೇಶಗಳಿಂದ ಹಾಗೂ ವಿವಿಧ ಸಾಮಾಜಿಕ ವರ್ಗದ ಅವರಿಂದ ನಿತ್ಯಜೀವನದಲ್ಲಿ ಬಳಕೆಯಲ್ಲಿರುವ ಆಧಾರಭೂತ ಶಬ್ದಾವಳಿಯ ಮಾತುಗಳನ್ನೂ, ಬೇಸಾಯ, ಮೀನುಗಾರಿಕೆ, ಬೇಟೆ, ಕುಶಲ ಕೈಗಾರಿಕೆ, ವೃತ್ತಿಕಸುಬುಗಳ ಸನ್ನಿವೇಶಗಳಲ್ಲಿ ಉಪಯೋಗಿಸುವ ತಾಂತ್ರಕ ಪದಗಳನ್ನೂ, ಸಾಮಾಜಿಕ ಧಾರ್ಮಿಕ ಆಚರಣೆಗಳಲ್ಲಿ ಬಳಸುವ ಸಾಂಸ್ಕೃತಿಕ ಪದಗಳನ್ನೂ, ಭೂತಾರಾಧನೆ, ಕೋಲ, ಕಂಬಳ, ಕೋಳಿಅಂಕವೇ ಮೊದಲಾದ ಧಾರ್ಮಿಕ ಹಾಗೂ ವಿನೋದಾತ್ಮಕ ಸನ್ನಿವೇಶಗಳಲ್ಲಿ ಕೇಳಿಬರುವ ವಿಶಿಷ್ಟ ಶಬ್ದಸಂಪತ್ತನ್ನೂ ಆಯಾ ಪರಿಸರದಲ್ಲಿಯೇ ಕ್ಷೇತ್ರಕಾರ್ಯ ನಡೆಸಿ ಸಂಗ್ರಹಿಸಿ ಪ್ರತಿಯೊಂದು ಪದಕ್ಕೂ ಬೇರೆ ಬೇರೆ ಪ್ರದೇಶ ಹಾಗೂ ಬೇರೆ ಬೇರೆ ವರ್ಗದವರಲ್ಲಿ ಬಳಕೆಯಲ್ಲಿರುವ ರೂಪಭೇದ, ಧ್ವನಿ ಭೇಗಳನ್ನೂ ಗುರುತಿಸಿ, ಸಾಹಿತ್ಯಭಾಷೆ, ಬಾಲಭಾಷೆ, ಜನಪದ ಸಾಹಿತ್ಯವಾದ ಪಾಡ್ದನಗಳ ಭಾಷೆ, ಭೂತದ ನುಡಿಕಟ್ಟಿನ ಭಾಷೆ ಮುಂತಾದ ವಿಶಿಷ್ಟ ಶೈಲಿಗಳಿಂದಲೂ, ಶಬ್ದಗಳನ್ನು ಕಲೆ ಹಾಕಿ, ತುಳುನಾಡಿನ ವಿಶಿಷ್ಟ ಕುಲನಾಮ, ಸ್ಥಳನಾಮ, ವ್ಯಕ್ತಿನಾಮ ಮುಂತಾದವುಗಳನ್ನು ಸಂಗ್ರಹಿಸಿ, ವಾಗ್ರೂಢಿ, ಭಾವನಾತ್ಮಕ ಉದ್ಗಾರ, ಪ್ರತ್ಯಯಗಳು, ಸಂಧಿ ಸಮಾಸಗಳ ಸಂದರ್ಭದಲ್ಲಿ ಬರುವ ರೂಪವಿಕಾರಗಳು ಮುಂತಾದವುಗಳನ್ನು ಸಂಗ್ರಹಿಸಿ ಅವುಗಳನ್ನು ಕನ್ನಡ ಲಿಪಿಯಲ್ಲಿಯೂ ರೋಮನ್ ಲಿಪಿಯಲ್ಲಿಯೂ ಉಲ್ಲೇಖಿಸಿ ಸಮಾನಾರ್ಥ ಪದಗಳನ್ನು ನಮೂದಿಸಿ ಅರ್ಥ ಭೇದಗಳನ್ನೂ ಇವುಗಳಿಂದ ಸಾಧಿತವಾದ ಸಮಾಸ ಪದಗಳನ್ನೂ ನುಡಿಗಟ್ಟುಗಳನ್ನೂ ನಮೂದಿಸಿ ಅವುಗಳಿಗೆ ಸಂಬಂಧಿಸಿದ ಗಾದೆಗಳನ್ನೂ ಬರೆದು ತಮಿಳು, ಮಲೆಯಾಳ, ಕನ್ನಡ ಮುಂತಾದ ಸೋದರಭಾಷೆಗಳಲ್ಲಿ ಕಂಡುಬರುವ ಅವುಗಳ ಜ್ಞಾತಿಪದಗಳನ್ನೂ ಕೊಡುವುದು ನಮ್ಮ ಯೋಜನೆಯ ಉದ್ದೇಶವಾಗಿದೆ. ಭಾರತದ ಇನ್ನಾವ ಭಾಷೆಗಳಿಗೂ ಸರ್ವೇಕ್ಷಣೆ ಅಥವಾ ಕ್ಷೇತ್ರಕಾರ್ಯಗಳ ಆಧಾರದ ಮೇಲೆ ಇಷ್ಟು ವಿಸ್ತಾರವಾದ ನಿಘಂಟಿನ ರಚನೆಯಾಗಲಿಲ್ಲ ಎಂಬುದು ವಿದ್ವಾಂಸರಿಗೆ ತಿಳಿದ ವಿಚಾರ.

ಪದಗಳ ಪ್ರಾದೇಶಿಕ ಹಾಗೂ ಸಾಮಾಜಿಕ ಪ್ರಭೇದಗಳಲ್ಲಿ ತೋರುವ ರೂಪಭೇದಗಳನ್ನೂ ಧ್ವನಿ ವ್ಯತ್ಯಾಸಗಳನ್ನೂ ತೋರಿಸುವುದರಿಂದ ತುಳುವಿನ ಉಪಭಾಷಾ ವೈಶಿಷ್ಟ್ಯ ಹಾಗೂ ತುಳುವಿನಲ್ಲಿ ನಡೆದ ಧ್ವನಿ ಪರಿವರ್ತನೆಗಳ ವೈಜ್ಞಾನಿಕ ಅಧ್ಯಯನ ಹಾಗೂ ತುಳುವಿನ ಮೂಲರೂಪದ ಸಂಶೋಧನೆಗೆ ಬೇಕಾದ ಮಾಹಿತಿಗಳು ಸಿಕ್ಕಿದಂತಾಗುತ್ತದೆ. ಅಲ್ಲದೆ ಸಂಪರ್ಕ ಮಾಧ್ಯಮ, ಸಾಹಿತ್ಯ ರಚನೆ, ಪಠ್ಯಪುಸ್ತಕ ನಿರ್ಮಾಣ ಮೊದಲಾದುವುಗಳಿಗೆ ಬೇಕಾದ ಶಿಷ್ಟರೂಪವೊಂದು ವಿಕಾಸವಾಗಲಿಕ್ಕೆ ಸಹಾಯವಾಗುತ್ತದೆ. ಸಾಧಿತ ಶಬ್ದಗಳು, ನುಡಿಗಟ್ಟುಗಳು, ಗಾದೆಗಳು ತುಳುವಿನಲ್ಲಿ ಲಿಖಿತ ಸಾಹಿತ್ಯ ಬೆಳೆದು ಬರುವ ಹಾಗೂ ಪಠ್ಯಪುಸ್ತಕಗಳ ನಿರ್ಮಾಣದ ಸಂದರ್ಭದಲ್ಲಿ ಗಮನಾರ್ಹವಾದ ಕೊಡುಗೆ ನೀಡಲಿದೆ. ಧಾರ್ಮಿಕ, ಸಾಮಾಜಿಕ, ಕಲಾತ್ಮಕ ಹಾಗೂ ವ್ಯಾವಸಾಯಿಕ ಸಂದರ್ಭದಲ್ಲಿ ಬರುವ ಮಾತುಗಳು ಮತ್ತು ಅವುಗಳ ವಿವರಣೆಗಳು ತುಳುವರ ಸಾಂಸ್ಕೃತಿಕ ವೈಶಿಷ್ಟ್ಯಗಳ ಅರಿವು, ಪ್ರಚಾರ, ಪುನರ್ನಿಮಾಣ, ಸಂಶೋಧನೆ ಇತ್ಯಾದಿಗಳಿಗೆ ಸಹಾಯಕವಾಗುತ್ತವೆ. ಇತರ ಸೋದರ ಭಾಷೆಗಳಲ್ಲಿನ ಜ್ಞಾತಿಶಬ್ದಗಳ ಉಲ್ಲೇಖ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ, ಚಾರಿತ್ರಿಕತೆ, ತುಳುಭಾಷೆಯ ಪ್ರಾಚೀನತೆ ಹಾಗೂ ಮೂಲ ದ್ರಾವಿಡ ಭಾಷೆಯ ಶಾಖಾ ಪ್ರಭೇದಗಳಲ್ಲಿ ತುಳುವಿನ ಸ್ಥಾನಮಾನಗಳ ನಿರ್ಣಯಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಲಿವೆ. ಹೀಗೆ ಸರ್ವಸಂಗ್ರಾಹಕವಾದ ಈ ವಿಸ್ತೃತ ನಿಘಂಟು ತುಳುವ ಅಧ್ಯಯನಕ್ಕೆ ಆಕರಗ್ರಂಥವನ್ನೊದಗಿಸಲಿದೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ.

ತುಳುಭಾಷೆ ಭೌಗೋಳಿಕವಾಗಿ ಒಂದು ಚಿಕ್ಕ ಪ್ರದೇಶಕ್ಕೆ ಸೀಮಿತ ವಾಗಿದ್ದರೂ ಅದರ ಆಡುನುಡಿಯ ವೈವಿಧ್ಯ ವೈಶಿಷ್ಟ್ಯಗಳು ಭಾಷಾವಿಜ್ಞಾನಿಗಳಿಗೆ ಸವಾಲಿನಂತಿವೆ. ಆದರೆ ಇವುಗಳ ವೈಜ್ಞಾನಿಕ ವಿಶ್ಲೇಷಣೆಯಾಗಲಿ, ಸರ್ವೇಕ್ಷಣೆ ಯಾಗಲಿ ಈವರೆಗೆ ನಡೆದಿಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಖ್ಯಾತ ಭಾಷಾ ವಿಜ್ಞಾನಿಗಳಾದ ಟಿ.ಬರೋ ಮತ್ತು ಕಲಿಫೋರ್ನಿಯಾ ವಿಶ್ವ ವಿದ್ಯಾನಿಲಯದ ವಿದ್ವಾಂಸರಾದ ಎಂ.ಬಿ.ಎಮಿನೋ ಇಬ್ಬರೂ ಸೇರಿ ‘ದ್ರಾವಿಡ ಭಾಷೆಗಳ ವ್ಯುತ್ಪತ್ತಿಕೋಶ’ ಎಂಬ ಮಹಾನ್ ಮೇರುಕೃತಿಯ ರಚನೆ ಮಾಡಿದಾಗ ತುಳುಭಾಷೆಯ ಬಗ್ಗೆ ಅವರ ಮುಂದಿದ್ದ ಒಂದೇ ಗ್ರಂಥ ರೆ.ಮ್ಯಾನರ್ ಅವರ ನಿಘಂಟು. ಆದರೆ ಅದರಲ್ಲಿ ತುಳುವಿನ ಉಪಭಾಷೆಗಳ ಬಗ್ಗೆ ಮಾಹಿತಿಗಳು ಇಲ್ಲದಿದ್ದುದರಿಂದ ಮತ್ತು ತುಳುವರ ಸಾಂಸ್ಕೃತಿಕ ಜೀವನ ಹಾಗೂ ವೃತ್ತಿ ಕಸುಬುಗಳ ಸಂದರ್ಭದಲ್ಲಿ ಬಳಕೆಯಲ್ಲಿರುವ ಶಬ್ದಸಂಪತ್ತು ಇಲ್ಲದಿದ್ದುದರಿಂದ ತಮಗೆ ಸಾಕಷ್ಟು ಅಡಚಣೆಗಳುಂಟಾದುವು. ಈಗ ತಯಾರಾಗುತ್ತಿರುವ ಈ ನಿಘಂಟು ಮುಂದಿನ ಭಾಷಾ ವೈಜ್ಞಾನಿಕ ಕಾರ್ಯಗಳಿಗೆ ಹಾಗೂ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನಕ್ಕೆ ಸಾಕಷ್ಟು ಮಹತ್ವದ ಸಾಮಗ್ರಿಗಳನ್ನು ಕೊಡಬಹುದು ಎಂದು ಈ ವಿದ್ವಾಂಸರುಗಳು ನಮ್ಮ ಯೋಜನೆಯನ್ನು ಹರಸಿದ್ದಾರೆ. ನಮ್ಮ ಮಾದರಿ ಪುಟಗಳನ್ನು ನೋಡಿ ಮೆಚ್ಚಿ ಪ್ರೋತ್ಸಾಹಕರವಾದ ಮಾತುಗಳನ್ನಾಡಿದ್ದಾರೆ. ದ್ರಾವಿಡ ಭಾಷೆಗಳಿಗಾಗಿ ದುಡಿದ ಇಂಗ್ಲೆಂಡ್, ಅಮೇರಿಕಾ ದೇಶದ ಇತರ ವಿದ್ವಾಂಸರುಗಳೂ, ನಮ್ಮ ಧ್ಯೇಯ ಧೋರಣೆಗಳನ್ನು ಅನುಮೋದಿಸಿ ಇದು ಒಂದು ವಿಶಾಲವಾದ, ವಿಸ್ತೃತವಾದ ಹಾಗೂ ಅತ್ಯಂತ ಅಗತ್ಯವಾದ ಸಕಾಲಿಕವಾದ ಯೋಜನೆಯಾಗಿದೆ ಎಂದು ನಮ್ಮನ್ನು ಹುರಿದುಂಬಿಸಿದ್ದಾರೆ.

ಹಿಂದಿನ ಎರಡು ನಿಘಂಟುಗಳಿಗಿಂತ ಸಾಕಷ್ಟು ಹೆಚ್ಚು ವ್ಯಾಪಕವಾದ ಈ ಯೋಜನೆ ಆಧುನಿಕ ಭಾಷಾ ತತ್ವಗಳಿಗನುಸಾರವಾಗಿ, ವಿಸ್ತೃತವಾದ ಉಪಭಾಷಾ ಪರಿವೀಕ್ಷಣೆ ಹಾಗೂ ನಿಘಂಟು ರಚನಾಶಾಸ್ತ್ರದ ಸಿದ್ಧಾಂತಗಳಿಗನುಸಾರವಾಗಿ ಅರ್ಥವಿಶ್ಲೇಷಣೆ, ನಿರೂಪಣೆಗಳನ್ನೊಳಗೊಂಡಿರಬೇಕೆಂದು ನಿರ್ಧರಿಸಿರುವುದರಿಂದ ಅದಕ್ಕೆ ಮಹತ್ತರವಾದ ಧನಬಲವೂ ಜನಬಲವೂ ಬೇಕಾಗಿದೆ. ತುಳುಭಾಷೆ ಹಾಗೂ ಸಂಸ್ಕೃತಿಯ ಪುನರ್‌ನಿರ್ಮಾಣದಲ್ಲಿ ಸಾಕಷ್ಟು ಕಾಳಜಿ ವಹಿಸುತ್ತಿರುವ ನಾಡಿನ ಹಿರಿಯ ಕಿರಿಯ ವಿದ್ವಾಂಸರುಗಳೂ ಮುಂದೆ ಬಂದಿದ್ದಾರೆ. ಸರಕಾರವೂ ಮುಂದೆ ಬಂದಿದೆ. ೧೯೭೯ನೆಯ ಇಸವಿಯಲ್ಲಿ ನಮ್ಮ ಯೋಜನೆಯನ್ನು ಮಂಡಿಸಿದ ಕೂಡಲೇ ಕರ್ನಾಟಕ ಸರಕಾರ ಇದರ ಮಹತ್ವವನ್ನು ಮನಗಂಡು ಈ ಯೋಜನೆಗೆ ಆರ್ಥಿಕ ಅನುದಾನ ನೀಡಲು ಸಮ್ಮತಿಸಿದೆ. ಸಂಶೋಧನ ಕೇಂದ್ರವನ್ನು ನಡೆಸುತ್ತಿರುವ ಎಂ.ಜಿ.ಎಂ.ಕಾಲೇಜಿನ ಧರ್ಮದರ್ಶಿಮಂಡಳಿ ಇದಕ್ಕೆ ಬೇಕಾದ ಕಟ್ಟಡ, ಪೀಠೋಪಕರಣ ಗಳನ್ನೂ, ಕಛೇರಿಯ ಇತರ ಸೌಲಭ್ಯಗಳನ್ನೂ ಒದಗಿಸಿಕೊಟ್ಟಿದೆ. ಹೀಗೆ ಕರ್ನಾಟಕ ಸರಕಾರ, ಎಂ.ಜಿ.ಎಂ.ಕಾಲೇಜು, ಮಣಿಪಾಲದ ಅಕಾಡೆಮಿ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ, ಸನ್ಮಾನ್ಯ ಶ್ರೀ ಸುಬ್ಬಯ್ಯ ಶೆಟ್ಟಿ, ಸನ್ಮಾನ್ಯ ಶ್ರೀ ವೀರಪ್ಪ ಮೊಯಿಲಿ, ಪ್ರೊ.ಡಿ. ಜವರೇಗೌಡ, ತುಳುನಾಡಿನ ವಿದ್ವಾಂಸರುಗಳಾದ ಶ್ರೀ ಸೇಡಿಯಾಪು ಕೃಷ್ಟ ಭಟ್ಟ, ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕಯ್ಯಾರ ಕಿಞ್ಞಣ್ಣ ರೈ ಮುಂತಾದವರ ಶುಭಾಶಯ, ಸಹಕಾರದೊಂದಿಗೆ ೧೯೭೯ ಅಕ್ಟೋಬರ್ ಎರಡನೇ ತಾರೀಕಿನಂದು ನಿಘಂಟು ಯೋಜನೆ ಕಾರ್ಯಾರಂಭ ಮಾಡಿತು.

ನಿಘಂಟು ಯೋಜನೆ ಈ ತನಕ ಸಾಧಿಸಿದ ಕಾರ್ಯಗಳನ್ನು ಈ ರೀತಿ ಪಟ್ಟಿ ಮಾಡಬಹುದು.

೧. ಪೂರ್ವಭಾವೀ ಸಿದ್ಧತೆಗಳು, ಸಂಶೋಧಕರ ತರಬೇತಿ ಶಿಬಿರಗಳು

೨. ಪ್ರಾರಂಭಿಕ ಸರ್ವೇಕ್ಷಣೆ, ಉಪಭಾಷಾ ಕ್ಷೇತ್ರಗಳ ನಿರ್ಧಾರ

೩. ಮಾದರಿ ಪುಟಗಳ ಪ್ರಕಟಣೆ, ಧ್ಯೇಯ ಧೋರಣೆಗಳ ನಿರ್ಧಾರ

೪. ೪೫ ಗ್ರಾಮಗಳಲ್ಲಿ ಶಿಬಿರ ನಡೆಸಿ ಕ್ಷೇತ್ರಕಾರ್ಯ, ವಿವಿಧ ವರ್ಗದ ಜನರ ಆಡುಭಾಷೆಯಿಂದ ೫೦ ಸಾವಿರ ಪದಗಳ ಹಾಗೂ ಉಪಭಾಷಾ ರೂಪಗಳ ಸಂಗ್ರಹಣೆ ಮತ್ತು ದಾಖಲಾತಿ.

೫. ಕ್ಯಾಸೆಟ್ಟುಗಳಲ್ಲಿ ೩೦೦ ಗಂಟೆಗಳಷ್ಟು ಕಾಲದ ಪಾಡ್ದನ, ಗೀತೆಗಳು, ಕಬಿತಗಳು, ಶಿಶುಪ್ರಾಸಗಳು ಇತ್ಯಾದಿಗಳ ಧ್ವನಿಮುದ್ರಣ.

೬. ಸುಮಾರು ೨೫ ಸಾವಿರ ಸಾಲುಗಳಲ್ಲಿ ಪಾಡ್ದನಗಳ ಲಿಪೀಕರಣ, ಕ್ಯಾಸೆಟ್ಟುಗಳ ಪಾಡ್ದನಗಳಿಂದ ಹಾಗೂ ಲಿಪೀಕರಣ ಮಾಡಿದ ಪಾಡ್ದನಗಳಿಂದ ವಿಶಿಷ್ಟ ಪದಗಳ, ನುಡಿಗಟ್ಟುಗಳ ಸಂಗ್ರಹಣೆ.

೭. ವಿವಿಧ ವೃತ್ತಿ ಕಸುಬುಗಳ, ಗುಡಿಕೈಗಾರಿಕೆಗಳ ಜನರೊಡನೆ ಸಂದರ್ಶನ ನಡೆಸಿ ಧ್ವನಿಮುದ್ರಣ ಹಾಗೂ ಮಾಹಿತಿಗಳ ದಾಖಲಾತಿ.

೮. ನಾಲ್ಕು ಸಾವಿರ ಗಾದೆ ಹಾಗೂ ಒಗಟುಗಳ ಸಂಗ್ರಹ

೯. ಬೇಸಾಯ, ತೋಟಗಾರಿಕೆ, ಮೀನುಗಾರಿಕೆ, ಮೂರ್ತೆ, ಬೇಟೆ, ಗಾಣ, ಮಡಕೆ ತಯಾರಿ, ಬುಟ್ಟಿ ನೇಯುವುದು, ಬಟ್ಟೆ ನೇಯ್ಗೆ ಇತ್ಯಾದಿ ಕಸುಬುಗಳನ್ನು ಆಯಾ ಕಸುಬುಗಳು ನಡೆಯುವ ಸ್ಥಳದಲ್ಲಿಯೇ ವೀಕ್ಷಿಸಿ ಪದಸಂಗ್ರಹಣೆ.

೧೦. ಕಂಬಳ, ಕೋಳಿ ಅಂಕ ಮುಂತಾದ ಜನಪದ ವಿನೋದಗಳಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹ.

೧೧. ರಾತ್ರಿ ಪೂರ್ತ ಜರಗುವ ಕೋಲ ನೇಮಗಳಲ್ಲಿ ಭಾಗವಹಿಸಿ ಭೂತಾರಾಧನೆಗೆ ಸಂಬಂಧಪಟ್ಟ ವಿವಿಧ ಸಂಪ್ರದಾಯಗಳಿಗೆ, ಆರಾಧನಾ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿಗಳ ಸಂಗ್ರಹ, ಭೂತದ ನುಡಿಗಟ್ಟುಗಳ ಸಂಗ್ರಹ, ದಾಖಲಾತಿ.

೧೨. ಎಲ್ಲ ವರ್ಗದವರ ಮದುವೆ, ಮೈನೆರೆಯುವ ಹಬ್ಬ, ಅಂತ್ಯಕ್ರಿಯೆ ಮುಂತಾದ ಸಾಮಾಜಿಕ, ಧಾರ್ಮಿಕ ಸಂಸ್ಕಾರ ಆಚರಣೆಗಳನ್ನೂ ಹಬ್ಬ ಹರಿದಿನಗಳ ಆಚರಣೆಗಳನ್ನೂ ಸ್ಥಳದಲ್ಲಿಯೇ ವೀಕ್ಷಿಸಿ ಮಾಹಿತಿ ಸಂಗ್ರಹ.

೧೩. ತುಳುವರ ನಂಬಿಕೆಗಳು, ವಿಧಿನಿಷೇಧಗಳು ಮುಂತಾದವುಗಳ ಬಗ್ಗೆ ಮಾಹಿತಿ ಸಂಗ್ರಹ.

೧೪. ಬಾಲಭಾಷೆ, ಬೈಗಳು, ಸಂಬೋಧನಗಳು, ಅನುಕರಣವಾಚಿ ಪದಗಳು, ಕುಲನಾಮಗಳು, ವ್ಯಕ್ತಿನಾಮಗಳು, ಸ್ಥಳನಾಮ ಘಟಕಗಳು ಇತ್ಯಾದಿಗಳ ಸಂಗ್ರಹ.

೧೫. ‘ಶ್ರೀ ಭಾಗವತೊ’ ಹಾಗೂ ‘ಕಾವೇರಿ’ ಎಂಬ ಪ್ರಾಚೀನ ಕಾವ್ಯಗಳಿಂದ ೮೦೦೦ ಪದಗಳ ಹಾಗೂ ಅವುಗಳಿಗೆ ಸಂಬಂಧಿಸಿದ ಪ್ರಯೋಗಗಳ ಸಂಗ್ರಹ.

೧೬.ಕ್ರಿಶ್ಚಿಯನ್ ಮಿಶನರಿಗಳ ತುಳು ಪ್ರಕಟಣೆಗಳು, ಶ್ರೀ ಪಣಿಯಾಡಿಯವರ ಕಾಲದ ತುಳು ಸಾಹಿತ್ಯಕೃತಿಗಳು ಹಾಗೂ ಆಧುನಿಕ ತುಳು ಸಾಹಿತ್ಯದ ಕೃತಿಗಳಿಂದ ಪದಗಳ ಸಂಗ್ರಹ.

೧೭.ಸಂಗ್ರಹಿಸಿದ ಮಾಹಿತಿಗಳನ್ನು ವಿಷಯಗಳಿಗನುಸಾರವಾಗಿ ವರ್ಗೀಕರಿಸಿ ಪಟ್ಟಿಕೆಗಳಿಗಿಳಿಸಿದ್ದು.

೧೮. ವರ್ಗೀಕೃತ ಮಾಹಿತಿಗಳ ಪಟ್ಟಿ ಮಾಡಿ ನಿಘಂಟಿನ ‘ಅಸ್ಥಿಪಂಜರ’ ರೂಪದ ರಚನೆ.

೧೯. ಶರೀರದ ಅಂಗಾಂಗಗಳು, ಮನೆ ಮತ್ತು ಮನೆಗೆ ಸಂಬಂಧಿಸಿದ ಪದಗಳು, ವೃಕ್ಷ ಸಂಪತ್ತು ಇವುಗಳಿಗೆ ಸಂಬಂಧಿಸಿದ ಪದಗಳಿಗೆ ಅರ್ಥ ಬರೆದು ಕರಡು ಪ್ರತಿಯ ತಯಾರಿ.

೨೦. ಶರೀರದ ಅಂಗಾಂಗಗಳಿಗೆ ಸಂಬಂಧಿಸಿದ ೫೦೦ ಪದಗಳಿಗೆ ಬರೆದ ಕರಡು ಪ್ರತಿಯನ್ನು ‘ಕರಾಜಿನ ಮಾದರಿ ಸಂಪುಟ’ ಎಂಬ ಹೆಸರಿನಿಂದ ೮೦ ಪುಟಗಳಲ್ಲಿ ಮುದ್ರಿಸಿ ಪ್ರಕಟಣೆ.

೨೧. ಪಟ್ಟಿಕೆಗಳನ್ನು ಅಕಾರಾದಿಯಾಗಿ ವರ್ಗೀಕರಿಸಿ ನಿಘಂಟಿನ ಕರಡು ಪ್ರತಿ ತಯಾರಿಕೆಯ ಪ್ರಾರಂಭ ಮುದ್ರಣ ಪ್ರತಿಯ ತಯಾರಿ.

೨೨. ಮೊದಲನೆಯ ಸಂಪುಟದ ಪ್ರಕಟಣೆ.

ಈ ನಿಘಂಟು ದೋಷಮುಕ್ತು, ಸರ್ವಾಂಗ ಪರಿಪೂರ್ಣ ಎಂದು ಹೇಳುವ ಧೈರ್ಯವಾಗಲಿ, ದಿಟ್ಟತನವಾಗಲಿ ನಮ್ಮಲ್ಲಿಲ್ಲ. ಒಂದು ಭಾಷೆಯ ಶಬ್ದ ಸಾಗರದ ಆಳವನ್ನು ಹೊಕ್ಕು ಅದರ ವಿಶ್ವರೂಪ ದರ್ಶನ ಮಾಡಿಸುವುದು ಯಾರಿಂದಲೂ ಸಾಧ್ಯವಾಗದ ಕೆಲಸ. ಮಾನವ ಪ್ರಯತ್ನ ಎಷ್ಟಿದ್ದರೂ ಅದಕ್ಕೆ ಸಾಲದು. ಆಧುನಿಕ ನಿಘಂಟುಗಳ ಪಿತಾಮಹನಾದ ಸ್ಯಾಮುವೆಲ್ ಜಾನ್‌ಸನ್ ಹೇಳುವಂತೆ ಇತರ ಲೇಖಕರು ಪ್ರಶಸ್ತಿ, ಹೊಗಳಿಕೆಗಳನ್ನು ಆಶಿಸಬಹುದು, ಪಡೆಯಬಹುದು. ಆದರೆ ನಿಘಂಟುಕಾರ ತನ್ನನ್ನು ನಿಂದನೆಯ ಬಾಣಗಳಿಂದ ಮುಕ್ತನಾಗುವಂತೆ ಪ್ರಯತ್ನಿಸುವುದೂ ದೊಡ್ಡ ಸಾಹಸವಾಗುತ್ತದೆ. ದೈವದತ್ತವಾದ ಬುದ್ಧಿ ಹಾಗೂ ಮಾನವ ಪ್ರಯತ್ನ ಎಷ್ಟಿದ್ದರೂ ಅದಕ್ಕೆ ಸಾಲದು.

ಒಂದಲ್ಲ ಎರಡಲ್ಲ ಅನೇಕ ದೃಷ್ಟಿಕೋನದಿಂದ ನೋಡಿದರೂ ಈ ನಿಘಂಟು ಭಾರತೀಯ ಭಾಷೆಗಳಲ್ಲಿಯೇ ಈವರೆಗೆ ಮೂಡಿಬಂದ ನಿಘಂಟುಗಳಿಗಿಂತ ವಿಶಿಷ್ಟವಾಗಿದೆ ಎಂದು ನಾವು ಧೈರ್ಯವಾಗಿ ಹೇಳಬಹುದೆನಿಸುತ್ತದೆ. ಎಲ್ಲ ಭಾಷೆಗಳ ನಿಘಂಟುಗಳೂ ಸಾಹಿತ್ಯ ಕೃತಿಗಳಿಂದ ಪದಗಳನ್ನು ಹೆಕ್ಕಿ ಸಂಗ್ರಹಿಸಿದ ಕೋಶಗಳು. ಆದರೆ ಇಲ್ಲಿ ನಾವು ಹದಿನೇಳನೆಯ ಶತಮಾನದ ‘ಶ್ರೀ ಭಾಗವತೊ’, ‘ ಕಾವೇರಿ’ ಯಿಂದ ಆಧುನಿಕ ತುಳು ಸಾಹಿತ್ಯದ ಮಂದಾರ ರಾಮಾಯಣದವರೆಗಿನ ಹಲವಾರು ಸಾಹಿತ್ಯ ಕೃತಿಗಳಿಂದ ಮಾತ್ರವಲ್ಲದೆ ತುಳುವಿನ ಸಮೃದ್ಧವಾದ ಪಾಡ್ದನ ರೂಪದ ಜನಪದ ಸಾಹಿತ್ಯದಿಂದಲೂ ಆಡುಭಾಷೆಯ ವಿವಿಧ ಪ್ರಕಾರಗಳಿಂದಲೂ, ಶಬ್ದ ಸಂಗ್ರಹ ಮಾಡಿದ್ದೇವೆ. ಹೀಗೆ ವಾಗ್ದೇವಿಯ ವಿವಿಧ ಮುಖಗಳಿಂದ ಹೊರಹೊಮ್ಮುವ ನಾದಲಹರಿಯನ್ನು ಹಿಡಿದಿಟ್ಟು ಸಂಪನ್ನಗೊಳಿಸಿದ ನಿಘಂಟುಗಳು ನಮಗೆ ತಿಳಿದ ಮಟ್ಟಿಗೆ ಇನ್ಯಾವ ಭಾಷೆಯಲ್ಲಿಯೂ ಮೂಡಿಬರಲಿಲ್ಲ. ವಿವಿಧ ಮೂಲಗಳಿಂದ ಮಾತ್ರವಲ್ಲದೆ ವಿವಿಧ ಶೈಲಿಗಳಿಂದ ಪದಸಂಗ್ರಹ ಮಾಡಿದ ನಿಘಂಟುಗಳೂ ದೊರಕುವುದಿಲ್ಲ. ಆದರೆ ಇಲ್ಲಿ ನಾವು ಭೂತದ ನುಡಿಕಟ್ಟಿನ ವಿಶಿಷ್ಟ ವಾಗ್ರೂಢಿಗಳಿಂದ ಬಾಲಭಾಷೆಯ ಸರಳ ಸ್ನಿಗ್ಧ ವಚನಗಳವರೆಗೆ ಎಲ್ಲ ಬಗೆಯ ಶೈಲಿಯಿಂದಲೂ ಪದಸಂಗ್ರಹ ಮಾಡಿದ್ದೇವೆ. ಉದಾಹರಣೆಗಳನ್ನು ಕೊಡುವಾಗ ಪ್ರಾಚೀಣ ಕಾವ್ಯ ಶ್ರೀ ಭಾಗವತೊದಿಂದ, ಮಿಶನರಿಗಳು ಮಾಡಿದ ಬೈಬಲ್ ಅನುವಾದದಿಂದ, ಪಣಿಯಾಡಿಯವರ ಕಾಲದ ಸಾಹಿತ್ಯದಿಂದ, ಆಧುನಿಕ ನಾಟಕ, ಕತೆ, ಕಾವ್ಯ, ಯಕ್ಷಗಾನಗಳಿಂದ ಮಾತ್ರವಲ್ಲದೆ ಪಾಡ್ದನ, ಸಂಧಿ, ಉರಾಲ್, ಕಬಿತೆ, ಅಜ್ಜಿಕತೆ ಮುಂತಾದ ಶೈಲಿ ಪ್ರಭೇದಗಳಿಂದಲೂ ಪ್ರಯೋಗಗಳನ್ನು ಕೊಟ್ಟಿದ್ದೇವೆ. ಇವುಗಳೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಆ ಪದಕ್ಕೆ ಸಂಬಂಧಿಸಿದ ಗಾದೆಗಳು, ಒಗಟುಗಳು, ಚಮತ್ಕಾರದ ಮಾತುಗಳು, ತಮಾಷೆಯ ಮಾತುಗಳು, ಬೈಗಳು, ನಂಬಿಕೆ, ವಿಧಿ ನಿಷೇಧಗಳು ಇತ್ಯಾದಿಗಳನ್ನೂ ಕೊಟ್ಟು ಆ ಪದ ತುಳುವರ ನಿತ್ಯ ಜೀವನದ ವಿವಿಧ ಸಂದರ್ಭಗಳಲ್ಲಿ ಹೇಗೆ ಪ್ರಯೋಗವಾಗುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಇಷ್ಟು ವಿಪುಲವಾಗಿ ಒಂದು ಭಾಷೆಯ ಸಾಹಿತ್ಯಕ, ಶಿಷ್ಟ ಹಾಗೂ ಗ್ರಾಮ್ಯ ಪ್ರಯೋಗಗಳನ್ನು ಒಂದು ಕಡೆ ಕಲೆ ಹಾಕಿದ ಪ್ರಯತ್ನ ಇತರ ಯಾವ ಭಾಷೆಗಳಲ್ಲಿಯೂ ನಡೆಯಲಿಲ್ಲ ಎಂದು ನಮ್ಮ ಭಾವನೆ.