ಪಂಚದ್ರಾವಿಡ ಭಾಷೆಗಳಲ್ಲೊಂದೆಂಬ ಹಿರಿಮೆಯ ‘ತುಳು ಭಾಷೆ’ ಈಗ ಆಧುನಿಕ ತಂತ್ರಜ್ಞಾನ ಮಾಧ್ಯಮಗಳಲ್ಲಿ ತನ್ನದೇ ಆದ ಸ್ಥಾನಮಾನವನ್ನು ಹೊಂದುತ್ತಿದೆ ಎಂದು ವಿಶ್ವಾಸದಿಂದಲೇ ಹೇಳಬಹುದು. ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಸ್ಥಾಪನೆಯೊಂದಿಗೆ ಈ ಎಲ್ಲಾ ಹೊಸತನಗಳಿಗೆ ಚಾಲನೆ ದೊರೆಯಿತು. ಅಕಾಡೆಮಿಯ ಮತ್ತು ತುಳು ನಾಡುನುಡಿಗೆ ಸಂಬಂಧಿಸಿದ ಅನೇಕ ಸಂಘ ಸಂಸ್ಥೆಗಳ ಚಟುವಟಿಕೆಗಳು ವಿಸ್ತಾರವಾಗುತ್ತಿದ್ದಂತೆ ವಿವಿಧ ಮಾಧ್ಯಮಗಳಲ್ಲಿ ಹೊಸ ಬಗೆಯ ಅವಕಾಶಗಳು ಕೂಡಾ ವಿಸ್ತರಿಸಿದವು. ಆ ವರೆಗೆ, ತುಳುವಿಗೆ ಮಂಗಳೂರು ಆಕಾಶವಾಣಿ ನಿಲಯವೊಂದೇ ಪ್ರಬಲವಾದ ಅಭಿವ್ಯಕ್ತಿಯ ಮಾಧ್ಯಮವಾಗಿತ್ತು. ಬಾನುಲಿಗೆ ಮೊದಲು ತುಳು ಸಾಹಿತ್ಯ ಕೃತಿಗಳು ಪ್ರಕಟವಾಗುತ್ತಿದ್ದವು. ಆದರೆ ಬಾನುಲಿ ಮುಂತಾದ ಆಧುನಿಕ ಮಾಧ್ಯಮಗಳ ಬೆಂಬಲ ದೊರೆತಾಗ ವಸ್ತುಶಃ ತುಳು ಭಾಷೆ, ಸಂಸ್ಕೃತಿ, ಸಾಹಿತ್ಯ ಇತ್ಯಾದಿಗಳಿಗೆ ಅಪಾರವಾದ ಮತ್ತು ವ್ಯಾಪಕವಾದ ನೆಲೆಯಲ್ಲಿ ಅವಕಾಶಗಳು ಲಭಿಸಿದವು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾದ ಬಿ.ಎ. ವಿವೇಕ ರೈ ಅವರು ಅಕಾಡೆಮಿಯ ಮುಖವಾಣಿಯಾದ ‘ಮದಿಪು’ವಿನ ಪ್ರಥಮ ಸಂಚಿಕೆಯಲ್ಲಿ (೧೯೯೬) ಸಂಪಾದಕೀಯದಲ್ಲಿ ಹೀಗೆ ಉಲ್ಲೇಖ ಮಾಡಿದ್ದಾರೆ:

“ತುಳುಟು ಬರೆಪುನಕ್‌ಲೆಗ್ ಒಂಜಿ ಕಳೊ ಮಲ್ತ್ ಕೊರ್ಪುನ ಬಯಕೆಡ್ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಮದಿಪು’ ಪುನ್ಪುನ ಮೂಜಿ ತಿಂಗೊಲಡಿನ್ ತುಳುವೆರೆ ಮೆಟ್ಟೆಲ್‌ಗೆ ಪಾಡೊಂದುಂಡು. ತುಳು ಸಾಹಿತ್ಯ ಪನ್ವಿನವು ಬೇತೆಬೇತೆ ಮರ್ಗಿಲ್‌ಲೆಡ್ ಬುಳೆವೊಡು, ತುಳುತ ಪೊಸ ಬರವುದಕ್‌ಲೆಗ್ ಬೆರಿಸಾಯ ಕೊರೊಡು, ತುಳುಟು ಬರೆಪುನ, ಓದುನ ಉಮೇದ್ ಎಚ್ಚಾವೊಡು ಪನ್ಪುನವು ತುಳು ಸಾಹಿತ್ಯ ಅಕಾಡೆಮಿದ ಆಸೆ”.

ತುಳು ಸಾಹಿತ್ಯ ವಿವಿಧ ಮಗ್ಗುಲುಗಳಲ್ಲಿ ಬೆಳೆಯಬೇಕು. ತುಳು ಬರಹಗಳಿಗೆ ಪ್ರೋತ್ಸಾಹ ನೀಡಬೇಕು ಎಂಬ ಆಶಯ ಈ ಬರಹದಲ್ಲಿತ್ತು. ಇದೇ ವೇಳೆ, ಅವರು ಸಮೂಹ ಮಾಧ್ಯಮಗಳು ಆಧುನಿಕ ತಂತ್ರಜ್ಞಾನದ ಫಲವನ್ನು ತುಳುವಿಗೆ ನೀಡಬೇಕು ಎಂದು ಸತತವಾಗಿ ತನ್ನ ಹಂಬಲವನ್ನು ವ್ಯಕ್ತಪಡಿಸುತ್ತಿದ್ದರು. ವಿಶೇಷವೆಂದರೆ, ಈ ಕೋರಿಕೆ-ಆಶಯ ವ್ಯಕ್ತವಾದ ಒಂದೆರಡು ವರ್ಷಗಳಲ್ಲೇ ಆಧುನಿಕ ತಂತ್ರಜ್ಞಾನ ಬಗೆಬಗೆಯಾಗಿ ತುಳು ಭಾಷೆಯನ್ನು ಅಪ್ಪಿಕೊಂಡಿತು ಇದು ಸಾಕಾರಗೊಂಡ ಮತ್ತು ಸಾಕಾರಗೊಳ್ಳುತ್ತಿರುವ ವಿವರಗಳ ಉಲ್ಲೇಖಕ್ಕಿಂತ ಮೊದಲು ಇನ್ನೊಂದು ಮಹತ್ತ್ವದ ವಿಚಾರವನ್ನು ಇಲ್ಲಿ ವಿಶ್ಲೇಷಿಸಬಹುದಾಗಿದೆ. ಇದು ಹೊರನಾಡ ತುಳುವ ಜನತೆಗೆ ಸಂಬಂಧಿಸಿದ್ದಾಗಿದೆ. ಆದರೆ, ಈ ಬೆಳವಣಿಗೆ ತುಳುವಿನ ಮಟ್ಟಿಗೆ ಅತ್ಯಂತ ಮಹತ್ತ್ವದ್ದೂ ಆಗಿದೆ.

ದೇಶ ವಿದೇಶಗಳ ತುಳುವ ಸಂಸ್ಥೆಗಳು

ಮುಂಬೈ, ಬೆಂಗಳೂರು, ಚೆನ್ನೈ, ಪುಣೆ, ಸಾಂಗ್ಲಿ, ದಿಲ್ಲಿ, ಬರೋಡ, ಅಹಮದಾಬಾದ್…. ಹೀಗೆ ದೇಶದ ಅನೇಕ ಕೇಂದ್ರಗಳಲ್ಲಿ ತುಳುವರ ಸಂಘ ಸಂಸ್ಥೆಗಳು ಸಕ್ರಿಯವಾಗಿವೆ. ತುಳು ಭಾಷೆ, ಸಂಸ್ಕೃತಿಯ ಉಳಿವಿಗೆ ಅವರು ನೀಡಿರುವ ಮತ್ತು ನೀಡುತ್ತಿರುವ ಕೊಡುಗೆ ಅನನ್ಯವಾದದ್ದಾಗಿದೆ. ಅವರ ಎಲ್ಲಾ ಚಟುವಟಿಕೆಗಳು ಪತ್ರಿಕೆಗಳ ಮೂಲಕ ಸಂವಹನವಾಗುತ್ತಿದ್ದವು.

ಈ ನಡುವೆ ವಿದೇಶಗಳಲ್ಲಿ ತುಳುವಿನ ಕಂಪು ಪಸರಿಸಲು ಆರಂಭವಾಯಿತು. ಅಮೇರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ತುಳುವರು ತಮ್ಮದೇ ಆದ ಸಂಘಟನೆಗಳನ್ನು ರೂಪಿಸಿ, ಅಲ್ಲಿ ತುಳು ಸಂಬಂಧಿತ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಆದರೆ, ಗಲ್ಫ್ ದೇಶಗಳಲ್ಲಿ ಮಾತ್ರ ತುಳುವರ ಸಂಘಟನೆ ಅತ್ಯಂತ ಕ್ರಿಯಾತ್ಮಕವಾಗಿ ಮತ್ತು ಪ್ರಬಲವಾಗಿ ಮೂಡಿಬಂತು. ಕಳೆದ ಒಂದೂವರೆ ದಶಕದ ಅವಧಿಯಲ್ಲಂತೂ ಈ ಚಟುವಟಿಕೆಗಳು ವಿಸ್ತಾರವಾದ ನೆಲೆಯನ್ನು ಪಡೆದುಕೊಂಡಿತು. ದುಬಾಯಿ, ಅಬುದಾಬಿ, ಶಾರ್ಜಾ, ಬಹ್ರೈನ್, ಕುವೈಟ್…. ಹೀಗೆ ವಸ್ತುಶಃ ಎಲ್ಲಾ ಗಲ್ಫ್ ದೇಶಗಳಲ್ಲಿ ತುಳು ಸಂಘಟನೆಗಳು ಸಕ್ರಿಯವಾಗಿವೆ. ಕರಾವಳಿ ಜಿಲ್ಲೆಯ ಕೆಲವು ಪ್ರದೇಶಗಳ ಹೆಸರನ್ನು ಇರಿಸಿಕೊಂಡು ಅಥವಾ ನಿರ್ದಿಷ್ಟ ಸಾಮಾಜಿಕ ಸಮುದಾಯದ ಸಂಘಟನೆಯ ಸ್ವರೂಪದಲ್ಲಿ ಕೂಡಾ ಸಂಘ ಸಂಸ್ಥೆಗಳು ಕಾರ್ಯನಿರತವಾಗಿವೆ.

ತುಳುನಾಡಿನ ಸಾಧಕರನ್ನು, ಯಕ್ಷಗಾನ-ನಾಟಕ-ನೃತ್ಯ-ಸಂಗೀತ ಕಲಾವಿದರನ್ನು, ಕಲಾ ಸಂಸ್ಥೆಗಳನ್ನು ಅವರು ವಿದೇಶಗಳಿಗೆ ಆಹ್ವಾನಿಸಿ, ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದಾರೆ. ಈ ಕುರಿತಾದ ಮಾಹಿತಿಗಳು ಹುಟ್ಟೂರಿನ ಜನರನ್ನು ತಲುಪಬೇಕು ಎಂಬ ಆಶಯ ಅವರಲ್ಲಿ ಸಹವಾಗಿಯೇ ಸ್ಫುರಿಸಿದೆ. ಈ ರೀತಿಯ ಸಂವಹನ ಸಾಧ್ಯವಾಗುವುದು ಹೇಗೆ? ಆಗ ನೆರವಿಗೆ ಬಂದಿದೆ ಆಧುನಿಕ ತಂತ್ರಜ್ಞಾನ ಮತ್ತು ವಿಶೇಷವಾಗಿ ಮಾಹಿತಿ ತಂತ್ರಜ್ಞಾನ. ಈ ಮೂಲಕ ಆಧುನಿಕ ತಂತ್ರಜ್ಞಾನ ಮಾಧ್ಯಮಗಳಲ್ಲಿ ತುಳು ಭಾಷೆಯನ್ನು ಬಳಸುವಂತಹ ವಿಶೇಷವಾದ ಅವಕಾಶ ಪ್ರಾಪ್ತಿಯಾಯಿತು. ಮುದ್ರಣ ಮಾಧ್ಯಮ ಮಾತ್ರವಲ್ಲದೇ, ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿಯೂ ತುಳು ಭಾಷೆ ಸಂಬಂಧಿತ ಚಟುವಟಿಕೆಗಳು ರಾರಾಜಿಸಲು ಆರಂಭವಾದವು. ಈ ಮೂಲಕ ಬಗೆಬಗೆಯ ಅವಕಾಶಗಳು ತುಳು ಭಾಷೆಗೆ ದೊರೆಯಲು ಆರಂಭವಾದವು. ಈ ಎಲ್ಲಾ ಸಾಧ್ಯತೆಗಳನ್ನು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮೂಹ ಮಾಧ್ಯಮಗಳು ಯಶಸ್ವಿಯಾಗಿ ಬಳಸಿಕೊಳ್ಳಲಾರಂಭಿಸಿದವು. ಕಾಸರಗೋಡು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾಗಶಃವಾಗಿ ಈ ಅವಕಾಶಗಳು ಬಳಕೆಯಾದವು. ಆದರೆ, ಜಗತ್ತಿನ ಎಲ್ಲಾ ಭಾಷೆಗಳಂತೆ ತುಳು ಭಾಷೆ ಕೂಡಾ ಆಧುನಿಕ ತಂತ್ರಜ್ಞಾನದ ಸಂಪೂರ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಲು ಈ ಮೂಲಕ ಸಾಧ್ಯವಾಯಿತು.

ತುಳು ವಾಹಿನಿಗಳು

ಈ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ, ತಮ್ಮದೇ ಆದ ಅಧ್ಯಾಯವನ್ನು ರೂಪಿಸಿಕೊಂಡವು ತುಳು ಟಿ.ವಿ. ಚಾನೆಲ್‌ಗಳು. ಇಲ್ಲಿ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿರುವ ‘ನಮ್ಮ ಕುಡ್ಲ’ ತುಳು ವಾಹಿನಿಯನ್ನು ವಿಶ್ಲೇಷಿಸಬಹುದಾಗಿದೆ.

ಮಂಗಳೂರಿನಲ್ಲಿ ದೂರದರ್ಶನದ ಪ್ರಸಾರ ಆರಂಭವಾದದ್ದು ೧೯೮೪ರಲ್ಲಿ. ಒಂದು ದಶಕದ ಅಂತರದಲ್ಲಿ ಇಲ್ಲಿ ಸೆಟಲೈಟ್ ಚಾನೆಲ್‌ಗಳ ಕೇಬಲ್ ಟಿ.ವಿ. ಜಾಲ ಅಸ್ತಿತ್ವಕ್ಕೆ ಬಂದಿತು. ಆ ಸಂದರ್ಭದಲ್ಲಿ ಬಾಣುಲಿ ಹೊರತು ತುಳುವಿನ ಯಾವುದೇ ಕಾರ್ಯಕ್ರಮಗಳಿಗೆ ಮಾಧ್ಯಮಗಳಿರಲಿಲ್ಲ. ಮುದ್ರಣ ಮಾಧ್ಯಮದಲ್ಲಿ ತುಳು ಭಾಷೆ ಗಮನಾರ್ಹ ಎಂಬಂತಹ ಅವಕಾಶಗಳನ್ನು ಹೊಂದಿರಲಿಲ್ಲ. ಸ್ಥಳೀಯವಾಗಿ ಕೇಬಲ್ ಟಿ.ವಿ. ನಿರ್ವಾಹಕರು ತಮ್ಮದೇ ಆದ ಒಂದು ಚಾನೆಲ್ ರೂಪಿಸಿ ಅದರಲ್ಲಿ ಸ್ಥಳೀಯ ಸುದ್ದಿಗಳ ಪ್ರಸಾರವನ್ನು ಆರಂಭಿಸಿದರು. ಮಂಗಳೂರಿನಲ್ಲಿ ೧೯೯೪ರಲ್ಲಿ ಇಂತಹ ಒಂದು ಕನ್ನಡದ ಸ್ಥಳೀಯ ಸುದ್ದಿ ಚಾನೆಲ್ ಅಪಾರ ಯಶಸ್ಸು ಪಡೆಯಿತು. ‘ನಮ್ಮ ಕುಡ್ಲ’ (ನಮ್ಮ ಮಂಗಳೂರು) ಆರಂಭದ ವೇಳೆ ಕನ್ನಡದ ಇನ್ನೂ ಕೆಲವು ಸ್ಥಳೀಯ ಸುದ್ದಿ ಕಾರ್ಯಕ್ರಮಗಳಿದ್ದವು.

ತುಳುವಿನ ಪ್ರಥಮ ಕೇಬಲ್ ಟಿ.ವಿ. ಸುದ್ದಿ ವಾಹಿನಿ ‘ನಮ್ಮ ಕುಡ್ಲ’ ಪ್ರಸಾರ ಆರಂಭವಾದದ್ದು ೧೯೯೯ರ ಸಪ್ಟೆಂಬರ್ ೪ ರಂದು. ಭಾನುವಾರಗಳ ಹೊರತಾಗಿ ಪ್ರತೀ ಸಂಜೆ ಅರ್ಧ ತಾಸಿನ ಸ್ಥಳೀಯ ಸುದ್ದಿ ಕಾರ್ಯಕ್ರಮ ಇದಾಗಿತ್ತು. ಜತೆಗೆ ಪ್ರತೀ ಭಾನುವಾರ ಮೂರು ತಾಸುಗಳ ‘ಐತಾರೊಡ್ದು ಐತಾರ’ ಎಂಬ (ಭಾನುವಾರದಿಂದ ಭಾನುವಾರ) ಸುದ್ದಿ ಗೊಂಚಲು ಪ್ರಸಾರ ಆರಂಭವಾಯಿತು. ಸುದ್ದಿ ಕಾರ್ಯಕ್ರಮ ಮರುದಿನ ಮುಂಜಾನೆ ಮರುಪ್ರಸಾದ.

“ತುಳು ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನೀಡಬೇಖೆಂಬುದು ನಮ್ಮ ಉದ್ದೇಶವಾಗಿತ್ತು. ಆದರೆ, ಜನತೆ, ಯಾವ ರೀತಿಯಲ್ಲಿ ಸ್ವೀಕಾರ ಮಾಡುತ್ತಾರೆ ಎಂಬುದು ಖಚಿತವಿರಲಿಲ್ಲ. ಆದರೂ, ನಿರ್ಧಾರವನ್ನು ಕಾರ್ಯರೂಪಕ್ಕೆ ತಂದೆವು. ಸುದ್ದಿ ಪ್ರಸಾರದ ಮೊದಲ ದಿನವೇ ಅಪೂರ್ವ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಸತತ ದೂರವಾಣಿ ಕರೆಗಳ ಮೂಲಕ ಅಭಿನಂದನೆ ನೀಡತೊಡಗಿದರು. ನಮ್ಮಲ್ಲಿ ಅಪೂರ್ವ ಉತ್ಸಾಹವನ್ನು ತುಂಬಿದರು. ತುಳು ಸಾಹಿತಿಗಳು, ಕಲಾವಿದರು, ಸಾಧಕರು, ಸಾಮಾಜಿಕ-ಧಾರ್ಮಿಕ-ರಾಜಕೀಯ ಮುಖಂಡರು. ಹೀಗೆ ಅಭಿನಂದನೆಗಳ ಸುರಿಮಳೆಯಾಯಿತು. ಈಗಲೂ ಅದೇ ರೀತಿಯ ಮೆಚ್ಚುಗೆ, ಪ್ರೋತ್ಸಾಹ ವೀಕ್ಷಕರಿಂದ ದೊರೆಯುತ್ತಿದೆ” ಎನ್ನುತ್ತಾರೆ ನಮ್ಮ ಕುಡ್ಲ ಬಳಗದ ಅಧ್ಯಕ್ಷ ಹರೀಶ್ ಕರ್ಕೇರಾ ಅವರು.

ಸ್ಥಳೀಯವಾದ ಸುದ್ದಿಗಳು, ವಿಶೇಷ ಸಂದರ್ಶನಗಳು ಈ ವಾರ್ತಾ ಪ್ರಸಾರದಲ್ಲಿರುತ್ತದೆ. ಐತಾರೊಡ್ದು ಐತಾರ ಕಾರ್ಯಕ್ರಮ ವಸ್ತುಶಃ ನ್ಯೂಸ್ ಮ್ಯಾಗಜಿನ್, ಅದರಲ್ಲಿ ವಾರದ ವಿಶೇಷ ಘಟನೆಗಳು, ಧಾರ್ಮಿಕ ಕೇಂದ್ರಗಳ ಕ್ಷೇತ್ರದರ್ಶನ, ಸಾಧಕರ ಸಂದರ್ಶನ, ತುಳು ಗಾದೆ ಒಗಟುಗಳು, ಸಣ್ಣ ಕವಿತೆಗಳು, ಕೊಡಿಮರ್ದ್, ತುಳು ಪರಂಪರೆ ಕುರಿತಾದ ರಸಪ್ರಶ್ನೆಗಳಿರುತ್ತವೆ. ಇಂದಿಗೂ ಅದೇ ಜನಪ್ರಿಯತೆಯನ್ನು ಈ ಕಾರ್ಯಕ್ರಮ ಹೊಂದಿದೆ.

ಆರಂಭಿಕ ದಿನಗಳಲ್ಲಿ ಈ ಕಾರ್ಯಕ್ರಮಗಳನ್ನು ವಿಡಿಯೋ ಕ್ಯಾಸೆಟ್‌ಗಳಲ್ಲಿ ದಾಖಲಿಸಲಾಗುತ್ತಿತ್ತು. ತಾಂತ್ರಿಕವಾಗಿ ಇದು ವಿಎಚ್‌ಎಸ್‌ ಎಂಬ ವ್ಯವಸ್ಥೆ. ಪ್ರತೀ ದಿನ ಎಡಿಟಿಂಗ್ ಮೂಲಕ ವಿ.ಸಿ.ಆರ್.ನಿಂದ ವಿ.ಸಿ.ಆರ್.ಗೆ ತಂತ್ರಜ್ಞಾನದಲ್ಲಿ ರೆಕಾರ್ಡಿಂಗ್. ಆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ವಿವಿಧೆಡೆ ಕೇಬಲ್ ನಿರ್ವಾಹಕರಿದ್ದರು. ಈಗ ಇರುವಂತೆ ನಿರ್ವಾಹಕರ ಒಕ್ಕೂಟದ ಏಕೀಕೃತ ಪ್ರಸಾರ ವ್ಯವಸ್ಥೆ ಇರಲಿಲ್ಲ. ತಾಂತ್ರಿಕವಾಗಿ ಇಂಗ್ಲಿಷ್ ಪರಿಭಾಷೆಯಲ್ಲೇ ಉಲ್ಲೇಖಿಸುವುದಾದರೆ ಎಡಿಟ್ ಆದ ಮಾಸ್ಟರ್ ಕಾಪಿಯನ್ನು ವಿಸಿಆರ್ ಗಳ ಮೂಲಕ ಅನೇಕಾನೇಕ ಪ್ರತಿಗಳನ್ನು ಮಾಡಿ ಸಮಯಕ್ಕೆ ಸರಿಯಾಗಿ ನಿರ್ವಾಹಕರಿಗೆ ತಲುಪಿಸಬೇಕಾಗಿತ್ತು. ಹೆಚ್ಚಿನ ಸಿಬ್ಬಂದಿ, ಬಂಡವಾಳ, ಸಮಯ ಎಲ್ಲವೂ ಈ ನಿಟ್ಟಿನಲ್ಲಿ ಅಗತ್ಯವಾಗಿತ್ತು.

ಅನಂತರ ತಾಂತ್ರಿಕತೆ ಉನ್ನತೀಕರಣಗೊಂಡಿತು. ವಸ್ತುಶಃ ಹೆಚ್ಚಿನ ಪ್ರಸಾರಕರು ಒಕ್ಕೂಟಗಳನ್ನು ಮಾಡಿಕೊಂಡರು. ಅದರಿಂದ ಅನುಕೂಲವಾಯಿತು. ಉದಾ: ಇಪ್ಪತ್ತು ನಿರ್ವಾಹಕರ ಒಂದು ಕಂಟ್ರೋಲ್ ರೂಂ ಇದ್ದರೆ, ಅಲ್ಲಿಗೆ ಒಂದು ಡಿವಿ ಫಾರ್ಮ್ಯಾಟ್‌ನ ಸುದ್ದಿಗೊಂಚಲು ನೀಡಿದರಾಯಿತು. ಈಗ ಎಲ್ಲಾ ನಿಯಂತ್ರಣ ಕೇಂದ್ರಗಳು ಡಿಜಿಟಲ್ ಆಗಿ ಪರಿವರ್ತನೆಯಾಗಿವೆ. ಎಡಿಟಿಂಗ್ ಈಗ ಕಂಪ್ಯೂಟರ್ ಗಳ ಮೂಲಕ ನಡೆಯುತ್ತಿದೆ. ಎಡಿಟಿಂಗ್ ಆದ ಪ್ರತಿಗಳು ಈಗ ಸಿಡಿ ಫಾರ್ಮ್ಯಾಟ್ ಹೊಂದಿರುತ್ತದೆ. ಈ ಸಿಡಿಗಳ ಬಹು ಪ್ರತಿಗಳನ್ನು ಸುಲಭವಾಗಿ ತಯಾರಿಸಲು ಸಾಧ್ಯವಾಗುತ್ತದೆ.

ತುಳು ಸಾಹಿತ್ಯ, ಸಂಸ್ಕೃತಿ

ಮಂಗಳೂರು ಉಡುಪಿ ಮಾತ್ರವಲ್ಲದೆ ಬಂಟ್ವಾಳ, ಮೂಡಬಿದರೆ, ಪುತ್ತೂರು, ಸುಳ್ಯ, ವಿಟ್ಲ, ಕಾರ್ಕಳ, ಮೂಲ್ಕಿ, ಸುರತ್ಕಲ್, ತೊಕ್ಕೊಟ್ಟು, ಕುಂದಾಪುರ, ಕಿನ್ನಿಗೋಳಿ…. ಹೀಗೆ ಉಭಯ ಜಿಲ್ಲೆಗಳಲ್ಲಿ ಈಗ ಅನೇಕ ಸ್ಥಳೀಯ ವಾಹಿನಿಗಳು ತುಳು, ಕನ್ನಡ, ಕೊಂಕಣಿ, ಬ್ಯಾರಿ, ಇಂಗ್ಲಿಷ್ ಭಾಷೆಗಳಲ್ಲೆಲ್ಲ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಬಹುತೇಕ ಕಾರ್ಯಕ್ರಮಗಳು ಆಯಾ ಪ್ರದೇಶಗಳಲ್ಲಿ ನೇರ ಪ್ರಸಾರವಾಗುತ್ತಿರುವುದು ಉಲ್ಲೇಖನಿಯವಾದ ಇನ್ನೊಂದು ಬೆಳವಣಿಗೆ, ಒಂದೂವರೆ ವರ್ಷದ ಹಿಂದೆ ಕುಳಾಯಿಯಲ್ಲಿ ಸ್ಥಾಪನೆಯಾದ ‘ನಮ್ಮ ಟಿ.ವಿ.’ ಈಗ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪ್ರಸಾರ ವ್ಯಾಪ್ತಿ ಹೊಂದಿದ್ದು, ಪಟ್ಟಾಂಗ, ನಮ್ಮ ಚಾವಡಿಯಂತಹ ಜನಪ್ರಿಯ ತುಳು ಕಾರ್ಯಕ್ರಮಗಳನ್ನು ನೀಡುತ್ತಿದೆ.

ಮಂಗಳೂರಿನ ದಾಸ್ ಪ್ರಕಾಶ್ ಮೀಡಿಯಾದವರು ತುಳು ದೈನಂದಿನ ವಾರ್ತಾ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧೆಡೆ ಪ್ರಸಾರ ಮಾಡುತ್ತಿದ್ದಾರೆ. ಕರಾವಳಿ ವಾರ್ತೆ, ನಮ್ಮ ನಾಡು, ಪೊಸಕುರಲ್ ಮುಂತಾದ ತುಳು ಕಾರ್ಯಕ್ರಮಗಳು ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿವೆ. (ಇಲ್ಲಿ ಉಲ್ಲೇಖಿತ ಹೆಸರುಗಳು ಪ್ರಾತಿನಿಧಿಕ ಮಾತ್ರ; ಸಮಗ್ರವಲ್ಲ. ಕೆಲವು ವಾಹಿನಿಗಳು ಸ್ವಲ್ಪ ಕಾಲ ಮಾತ್ರ ಕಾರ್ಯನಿರ್ವಹಿಸಿದರೆ, ಇನ್ನು ಕೆಲವು ತುಳು ಕಾರ್ಯಕ್ರಮಗಳಿಗೆ ನಿರ್ಮಾಪಕರು ಸಿದ್ಧರಾಗಿದ್ದಾರೆ).

ಈ ತುಳು ವಾಹಿನಿಗಳ ಕಾರ್ಯಕ್ರಮಗಳಿಂದಾಗಿ ತುಳು ಭಾಷೆ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತಷ್ಟು ಸಮಗ್ರಗೊಂಡಿದೆ. ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ವಾಮನ ನಂದಾವರ ಅವರು ‘ತಳು ಭಾಷೆಯ ಬೆಳವಣಿಗೆ ಏಕೆ-ಹೇಗೆ?’ ಎಂಬ ಲೇಖನದಲ್ಲಿ ಹೀಗೆ ವಿಶ್ಲೇಷಿಸುತ್ತಾರೆ.

‘ತುಳುನಾಡಿನ ತುಳುವರ ಬಹುಪಾಲು ಚರಿತ್ರೆ ತುಳು ಭಾಷೆಯಲ್ಲೇ ಇದೆ. ಎಂದರೆ ತುಳುವರ ಮೌಖಿಕ ಪರಂಪರೆಯ ಪ್ರಕಾರಗಳಾದ ಕತೆ, ಪಾಡ್ದನ, ಗಾದೆ, ಒಗಟು, ಉರಲ್, ಕಬಿತ, ಐತಿಹ್ಯಗಳಲ್ಲಿ ಈ ಚರಿತ್ರೆ ಬಹುಪಾಲು ಅಡಕವಾಗಿದೆ. ತುಳು ಪಾಡ್ದನಗಳು ಕೇವಲ ಭೂತ ದೈವಗಳ ಬೀರ-ಸಂಧಿ ಮಾತ್ರ ಆಗಿರದೆ ಅವು ತುಳುನಾಡಿನ ಚರಿತ್ರೆಯನ್ನೇ ಸಾರುತ್ತಿವೆ. ಪಾಡ್ದನಗಳಲ್ಲಿ ಅಪೂರ್ವ ಸಾಹಿತ್ಯವೂ ಇದೆ. ಈ ಪಾಡ್ದನಗಳ ಅಥವಾ ತುಳು ಜನಪದ ಸಾಹಿತ್ಯದ ಸಮಗರ ಅಧ್ಯಯನ ನಡೆಸಿದ್ದೇ ಆದರೆ ಈ ಜಿಲ್ಲೆಯ ಚರಿತ್ರೆಯನ್ನು ಚೆನ್ನಾಗಿ ಅಥವಾ ಪುನರ್ನಿರ್ಮಿಸಿ ಹೊಸದಾಗಿಯೇ ಬರೆಯಲು ಸಾಧ್ಯವಿದೆ. ತುಳು ಭಾಷೆಯ ಮೇಲಿನ ಅಭಿಮಾನದಿಂದ ಅಥವಾ ತುಳುವಿನಲ್ಲಿ ಪ್ರತಿಭೆಯಿರುವ ಲೇಖಕರು ಬರೆದ ಕೃತಿಗಳು ಇಲ್ಲಿನ ಜನರನ್ನು ಸರಿಯಾಗಿ ತಲುಪುತ್ತಿಲ್ಲ ಮತ್ತು ತಲುಪುವಂತಹ ವ್ಯವಸ್ಥೆಯೂ ಇಲ್ಲ.

ಈ ಜಿಲ್ಲೆಯ ಶಾಲಾಕಾಲೇಜುಗಳು, ಸಂಘ ಸಂಸ್ಥೆಗಳು ತುಳು ಕೃತಿಗಳಿಗೆ ತಮ್ಮ ಗ್ರಂಥ ಭಂಡಾರಗಳಲ್ಲಿ ಜಾಗ ಕೊಡುತ್ತಿವೆಯೇ? ಅವು ಯಾಕೆ? ಬೇಡ ಎನ್ನುವವರೇ ಹೆಚ್ಚು. ಇಂತಹ ಮನೋಭಾವ ಇರುವಲ್ಲಿ ತುಳುವಿನ ಬೆಳವಣಿಗೆ ಹೇಗೆ ಸಾಧ್ಯ? ತುಳುವಿನಲ್ಲಿ ಕೃತಿಗಳನ್ನು ಪ್ರಕಟಿಸಿದ ಲೇಖಕರ ಪಾಡೇನು? ಗಂಭೀರವಾಗಿ ಯೋಚಿಸಬೇಕಾದ ಸಂಗತಿಯಿದು”.

ವಿಶೇಷವೆಂದರೆ, ನಂದಾವರ ಅವರು ೧೯೯೧ರಲ್ಲಿ ಬರೆದ ಲೇಖನವಿದು. ಈ ಲೇಖನದ ಆಶಯಗಳೆಲ್ಲ ಈಗ ಬಹುಪಾಲು ಈಡೇರಿದೆ. ಆಧುನಿಕ ತಂತ್ರಜ್ಞಾನದ ಮಾಧ್ಯಮಗಳಲ್ಲಿ ತುಳು ಭಾಷೆಯ ಬಳಕೆಯಿಂದಾಗಿ ಈ ಕೃತಿಗಳ ಸಂವಹನವಾಗುತ್ತಿದೆ. ಅಕ್ಷರಸ್ಥರನ್ನೂ ಅನಕ್ಷರಸ್ಥರನ್ನೂ ಏಕಕಾಲದಲ್ಲಿ ತಲುಪುವ ಈ ಮಾಧ್ಯಮಗಳು ತುಳು ಸಂಬಂಧಿತ ಚಟುವಟಿಕೆಗಳಿಗೆ ಹೊಸ ಆಯಾಮವನ್ನೇ ಒದಗಿಸಿದೆ. ಈ ಮಾಧ್ಯಮಗಳಲ್ಲಿ ತುಳು ಪಾಡ್ದನಗಳು ಪ್ರತಿಧ್ವನಿಸುತ್ತಿವೆ. ಒಗಟುಗಳು ತೆರೆದುಕೊಳ್ಳುತ್ತವೆ. ಕವಿತೆಗಳು ಧ್ವನಿಸುತ್ತಿವೆ. ಕತೆಗಳ ಲೋಕ ಸಾಕ್ಷಾತ್ಕಾರಗೊಳ್ಳುತ್ತಿದೆ. ತುಳು ಭಾಷೆಯ ಸಂಪತ್ತು ಅನಾವರಣಗೊಳ್ಳುತ್ತಿದೆ. ಹೊಸಪೀಳಿಗೆಯ ತುಳು ಲೇಖಕರು, ಕಲಾವಿದರು ಈ ಮೂಲಕ ಅರಳಿ ಕೊಳ್ಳುತ್ತಿದ್ದಾರೆ.

ಒಂದು ಪ್ರಾದೇಶಿಕವಾದ ಭಾಷೆ ಭಿನ್ನವಾಗಿ ಪುನರುತ್ಥಾನಗೊಂಡಿದೆ.

ದೇಶ ವಿದೇಶಗಳಲ್ಲಿರುವ ತುಳುವರ ಸಂಘಟನೆಗಳು ತಮ್ಮೆಲ್ಲಾ ಚಟುವಟಿಕೆಗಳ ಪ್ರಸಾರ, ಪ್ರಚಾರ, ಸಂವಹನಕ್ಕೆ ಈ ಆಧುನಿಕ ತಂತ್ರಜ್ಞಾನವನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಪಕ್ಕದ ಬೆಂಗಳೂರು, ಸನಿಹದ ಚೆನ್ನೈ, ನಮ್ಮದೇ ಮುಂಬಯಿ, ಒಂದಿಷ್ಟು ದೂರ ದುಬಾಯಿ…. ಅಲ್ಲಿ ತುಳುವಿನ ಕಾರ್ಯಕ್ರಮ ನಡೆಯಿತು. ಎಂದಾದರೆ; ಸಾಧ್ಯವಾದರೆ ಅದೇ ದಿನ, ಅಥವಾ ಮರುದಿನ ಅದರ ಕೆಲವು ಸ್ವಾರಸ್ಯಕರ ಚಿತ್ರಿಕೆಗಳನ್ನು ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳ ತುಳುವಾಹಿನಿಗಳ ನಿರ್ವಾಹಕರಿಗೆ ಇ-ಮೇಲ್ ಮಾಡಿಬಿಟ್ಟರಾಯಿತು. ತತ್‌ಕ್ಷಣ ಇಲ್ಲಿ ಪ್ರಸಾರ. ಕೊಲ್ಲಿ ರಾಷ್ಟ್ರಗಳಿಂದ ಇನ್ನು ಮಂಗಳೂರಿಗೆ ಪ್ರತೀದಿನ ಎಂಬ ಹಾಗೆ ವಿಮಾನ ಹಾರಾಟವಿದೆ. ಒಂದು ಡಿವಿಡಿಯನ್ನೋ ಒಂದು ಸಿಡಿಯನ್ನೋ ಈ ವಿಮಾನದಲ್ಲಿ ಬರುವವರೊಂದಿಗೆ ನೀಡಿದರಾಯಿತು. ಮರುದಿನ ಇಲ್ಲಿ ಪ್ರಸಾರ. ಬಂಧು ಮಿತ್ರರ ಜತೆಗೆ ಎಂತಹ ಅದ್ಭುತ ಅನುಸಂಧಾನ!?

ಇದು ಸಾಧ್ಯವಾಗಿರುವುದು ಆಧುನಿಕ ತಂತ್ರಜ್ಞಾನ ಮಾಧ್ಯಮಗಳಲ್ಲಿ ತುಳು ಭಾಷೆಯ ಸಮರ್ಥವಾದ ಬಳಕೆಯಿಂದ ಎಂದು ಪುನರುಚ್ಚರಿಸೋಣವೇ? ನಿಜಕ್ಕೂ ಇದೊಂದು ಅದ್ಭುತವೆಂದರೆ ಅತಿಶಯೋಕ್ತಿಯಾಗಲಾರದು. ಅಲ್ಲವೇ?

ಗೂಡುದೀಪ ಸ್ಪರ್ಧೆ, ತಪ್ಪಂಗಾಯಿ, ಲಗೋರಿ ಮುಂತಾದ ಇಲ್ಲಿನ ಪರಂಪರೆಗಳಿಗೂ ಈ ಮಾಧ್ಯಮಗಳು ಪುನಶ್ಚೇತನ ನೀಡಿವೆ. ಅನೇಕಾನೇಕ ಪ್ರತಿಭಾವಂತರು ವಾರ್ತಾವಾಚಕರಾಗಿ, ಸಂದರ್ಶಕರಾಗಿ, ನಿರೂಪಕರಾಗಿ ಬೆಳಕಿಗೆ ಬಂದಿದ್ದಾರೆ. ಅನೇಕ ಮಂದಿ ತುಳು ಯುವ ಜನತೆಗೆ ಉದ್ಯೋಗ ಕೂಡಾ ಲಭಿಸಿದೆ. ಅನ್ನುವುದು ಪೂರಕವಾಗಿ ಉಲ್ಲೇಖನೀಯ ಸಂಗತಿಗಳು.

ಸಿಡಿ – ವಿಸಿಡಿಗಳಲ್ಲಿ

ಯಕ್ಷಗಾನ ಈ ಪ್ರದೇಶದ ಜೀವನಾಡಿಯಂತಿರುವ ಅಪ್ರತಿಮ ಕಲೆ. ಕಳೆದ ಎರಡೂವರೆ ದಶಕಗಳಿಂದ ತುಳು ನಾಟಕಗಳಂತೂ ಭರ್ಜರಿಯಾದ ಯಶಸ್ಸನ್ನು ಸ್ಥಳೀಯವಾಗಿ ಮತ್ತು ದೇಶ ವಿದೇಶಗಳಲ್ಲಿ ದಾಖಲಿಸಿವೆ. ಆಧುನಿಕ ಮಾಧ್ಯಮಗಳನ್ನು ಸಹಜವಾಗಿಯೇ ಈ ಕಲೆಗಳು ಬಳಸಿಕೊಳ್ಳುತ್ತಿವೆ.

ತುಳು ಯಕ್ಷಗಾನದ ಕ್ಯಾಸೆಟ್‌ಗಳು ಉತ್ತಮ ಮಾರುಕಟ್ಟೆಯನ್ನು ಹೊಂದಿದ್ದವು. ಕಾಲಾನುಕಾಲಕ್ಕೆ ತಾಂತ್ರಿಕ ಬದಲಾವಣೆಗಳು ಬಂದಿವೆ. ತುಳು ಯಕ್ಷಗಾನದ ವಿಸಿಡಿಯ ಬಗ್ಗೆ ಪ್ರಯತ್ನಗಳಾಗಿವೆ. ಕೆಲವು ತುಳು ಯಕ್ಷಗಾನದ ವೀಡಿಯೋ ಸಿಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತರ್ಜಾಲಗಳಲ್ಲಿಯೂ ಈ ಕುರಿತಾದ ಪ್ರಯತ್ನಗಳಾಗಿವೆ.

ತುಳು ನಾಟಕಗಳು ಆಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿವೆ. ಮುಂಚೂಣಿಯ ಕಲಾವಿದರಾದ ದೇವದಾಸ್ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್‌ಬೈಲ್, ನವೀನ್ ಡಿ. ಪಡೀಲ್ ಅವರ ಈ ನಿಟ್ಟಿನ ಸಾಧನೆ ಗಮನಾರ್ಹ. ಈ ಕಲಾವಿದರ ನಾಟಕಗಳು ನೂರಿನ್ನೂರು – ಕೆಲವು ಬಾರಿ ಇನ್ನೂ ಹೆಚ್ಚು ಯಶಸ್ವೀ ಪ್ರದರ್ಶನಗಳನ್ನು ಕಂಡಿವೆ.

ಈಗ ಪ್ರದರ್ಶನವಾಗುತ್ತಿರುವ ನಾಟಕಗಳನ್ನು ಹೊರತು ಪಡಿಸಿದರೆ ಈ ನಾಟಕಗಳಲ್ಲಿ ಸುಮಾರು ಶೇ. ೭೫ರಷ್ಟು ಕ್ಯಾಸೆಟ್, ಸಿಡಿ, ವಿಸಿಡಿ ರೂಪಗಳಲ್ಲಿ ಲಭ್ಯವಿದೆ. “ಸ್ಥಳೀಯವಾಗಿ ಮತ್ತು ದೇಶಾದ್ಯಂತ ತುಳುವರಿಂದ ಅಪಾರ ಬೇಡಿಕೆ ಇದೆ. ಹಾಸ್ಯ ಪ್ರಧಾನವಾಗಿರುವ ಮತ್ತು ಸಮಾಜಕ್ಕೆ ವಿಶೇಷವಾದ ಸಂದೇಶವನ್ನು ಹೊಂದಿರುವ ನಮ್ಮ ನಾಟಕಗಳನ್ನು ನಿರ್ಮಿಸಿದ್ದೇವೆ. ಆಧುನಿಕ ತಂತ್ರಜ್ಞಾನದಿಂದ ತುಳು ರಂಗಭೂಮಿಗೆ ದೊರೆತ ಕೊಡುಗೆ ಇದಾಗಿದೆ. ಇದನ್ನು ನೋಡಿದವರು -ಕೇಳಿದವರು ನಮಗೆ ಇ-ಮೇಲ್ ಮೂಲಕ ಅಭಿನಂದನೆ ನೀಡುತ್ತಾರೆ. ನಾಟಕದ ಸಂಭಾಷಣೆಗಳನ್ನು ಕೇಳುತ್ತಾ ಮನಸ್ವೀ ನಗುತ್ತಾ, ಎಲ್ಲಾ ದುಗುಡ ದುಮ್ಮಾನಗಳನ್ನು ಮರೆಯುತ್ತಿದ್ದೇವೆ ಎಂದು ಅವರು ಹೇಳುವಾಗ ಕಲಾವಿದನಾಗಿ ನನ್ನ ಮನಸ್ಸು ತುಂಬಿ ಬರುತ್ತದೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿದರೆ ಅದು ಹೇಗೆ ಆನಂದದಾಯಕವಾಗಬಲ್ಲದು ಅನ್ನುವುದಕ್ಕೆ ಇದು ಪರಿಪೂರ್ಣ ದೃಷ್ಟಾಂತ” ಎನ್ನುತ್ತಾರೆ ದೇವದಾಸ್ ಕಾಪಿಕಾಡ್.

ತುಳುವಿನಲ್ಲಿ ಈ ರೀತಿಯ ಸಾರ್ವತ್ರಿಕ ಬದಲಾವಣೆ ಕಳೆದ ಒಂದು ದಶಕದ ಅವಧಿಯಲ್ಲಿ ಸಾಧ್ಯವಾಗಿದೆ. ತುಳುವನ್ನು ಕನ್ನಡ ಲಿಪಿಯಲ್ಲೇ ಬಳಸಾಗುತ್ತಿದೆಯಾದ್ದರಿಂದ ಈ ಹೊಂದಾಣಿಕೆ ಸುಲಭಸಾಧ್ಯ ಎಂಬ ನಿರ್ಧಾರಕ್ಕೆ ಬರಬಹುದು ಅನಿಸುತ್ತದೆ. ಆದ್ದರಿಂದ ಪ್ರತ್ಯೇಕವಾದ ಸಾಫ್ಟ್‌ವೇರ್ ಇತ್ಯಾದಿಗಳ ವಿಷಯ ಉದ್ಭವಿಸುವುದಿಲ್ಲ. ಸುದ್ದಿ ಪ್ರಸಾರವಾಗುತ್ತಿರುವಾಗ ಭಾಷಣಕಾರರು ಯಾವುದೇ ಭಾಷಣ ಮಾಡಲಿ ಅದರ ಸಾರಾಂಶವನ್ನು ತುಳುವಿನಲ್ಲಿ ಉದ್ಘೋಷಿಸಲಾಗುತ್ತದೆ. ಆದ್ದರಿಂದ, ಈ ಭಾಷಣಕಾರರ ಆಶಯಗಳನ್ನು ಸುಲಭವಾಗಿ ತುಳುವಿನಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ. ತಂತ್ರಜ್ಞಾನವನ್ನು ಸುಲಭವಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆ ಇದೊಂದು ನಿದರ್ಶನವಾಗಿದೆ.

ಅಂತರ್ಜಾಲದಲ್ಲಿ

ಇದು ಇಂಟರ್ನೆಟ್ ಯುಗ. ಅಂತರ್ಜಾಲದಲ್ಲಿ ತುಳುಭಾಷೆಯನ್ನು ಬಳಸಿಕೊಳ್ಳಲಾಗುತ್ತಿದೆಯೇ? ಇದಕ್ಕೆ ಸಂತಸದಾಯಕವಾದ ಉತ್ತರವೆಂದರೆ- “ಹೌದು”.

ಅಂತರ್ಜಾಲದ ಅನುಷ್ಠಾನವಾದಾಗಲೇ ತುಳುವನ್ನು ಅಳವಡಿಸಲು ವಿವಿಧೆಡೆ ಪ್ರಯತ್ನಗಳಾಗಿದ್ದವು. ಖಾಸಗಿ ವಲಯಗಳಲ್ಲಿ ಅನೇಕರು ಯಶಸ್ವಿಯೂ ಆಗಿದ್ದಾರೆ. ಈ ಬಗ್ಗೆ ನಿರ್ದಿಷ್ಟವಾದ ದಿನಾಂಕ ಅಥವಾ ನಿಖರವಾದ ಸಂಖ್ಯೆ ಲಭ್ಯವಾಗುತ್ತಿಲ್ಲವಾದರೂ ತುಳುವರನೇಕರು ತಮ್ಮ ಕುಶಲೋಪರಿಗಳನ್ನು ತುಳುವಿನಲ್ಲೇ ಅಂತರ್ಜಾಲದಲ್ಲಿ ನಡೆಸುತ್ತಿರುವುದು ತಿಳಿದುಬರುತ್ತದೆ. ದಶಕದ ಹಿಂದೆ ಅಬುಧಾಬಿ ದುಬಾಯಿಗಳಲ್ಲಿ ಕೆಲವು ತುಳು ಅಭಿಮಾಣಿಗಳು ಈ ಪ್ರಯತ್ನ ನಡೆಸಿ, ಯಶಸ್ಸನ್ನೂ ಪಡೆದಿದ್ದಾರೆ. ತುಳು ಪತ್ರಿಕೆಯ ರೂಪದಲ್ಲಿ ಆರಂಭಿಕವಾಗಿ ಪ್ರಯತ್ನವನ್ನು ನಡೆಸಲಾಗಿತ್ತು. ತುಳು ಪರಂಪರೆಯ ತಿಂಡಿಗಳನ್ನು ತಯಾರಿಸುವುದು ಹೇಗೆ ಎಂಬ ಮಾಹಿತಿಯಿಂದ ಆರಂಭವಾದ ಇಂತಹ ಮಾಹಿತಿ ಪತ್ರ ಮುಂದೆ ಜನಪ್ರಿಯವಾಗಿ ವಿದೇಶಗಳಲ್ಲಿರುವ ವಧೂ-ವರರ ಮಾಹಿತಿಗಳನ್ನು ಪೋಷಕರಿಗೆ ನೀಡುವ ಪ್ರಮುಖ ಮಾಧ್ಯಮವಾಗಿಯೂ ಬೆಳೆದಿತ್ತು.

ತುಳುವನ್ನೇ ಪ್ರಸಾರ ಮಾಡುವ ಪ್ರತ್ಯೇಕವಾದ ಅಂತರ್ಜಾಲ ಇಲ್ಲಿ ನಿರ್ಮಾಣವಾಗಿಲ್ಲ. ಆದರೆ, ಇಲ್ಲಿ ಇರುವ ಕೆಲವು ಅಂತರ್ಜಾಲಗಳು ಉದಾ: ದಾಯ್ಚಿವರ್ಲ್ಡ್‌ಡಾಟ್‌ಕಾಂ, ಕರ್ನಾಟಕ ೨೦೨೦ ಡಾಟ್‌ಕಾಂ, ಕನ್ನಡವಾಹಿನಿ ಡಾಟ್‌ನೆಟ್‌ಇತ್ಯಾದಿಗಳಲ್ಲಿ ತುಳುವಿಗೆ ಸಂಬಂಧಿಸಿದ ಅಥವಾ ತುಳುವಿನ ಕಾರ್ಯಕ್ರಮಗಳ ವರದಿಗಳು ಪ್ರಸಾರವಾಗುತ್ತಿದೆ. ೨೦೦೭ರ ಫೆಬ್ರವರಿಯಲ್ಲಿ ಕೆನರಾ ಡಾಟ್‌ಕಾಂ, ಕೆನರಾ ವಲ್ಡ್‌ಡಾಟ್‌ಕಾಂ, ಕೆನರಾಟಿವಿ ಡಾಟ್‌ಕಾಂಗಳು ‘ನಮ್ಮ ಕುಡ್ಲ’ದ ತುಳು ಕಾರ್ಯಕ್ರಮದ ಪ್ರಸಾರ ನಡೆಸುತ್ತಿವೆ. ಈ ಮೂಲಕ ಅಂತರ್ಜಾಲದಲ್ಲಿ ತುಳು ಭಾಷೆಯ ಸುದ್ದಿ ಪ್ರಸಾರ ಆರಂಭವಾದಂತಾಗಿದೆ.

೯.೭.೨೦೦೦ದಂದು ಮಂಗಳೂರಿನ ಸಿಸಿ ಇಂಡಿಯಾ ಚಾನೆಲ್‌ನವರು ಈ ಲೇಖನ ನಿರೂಪಣೆಯಲ್ಲಿ ಜನಮನ ಎಂಬ ಸಾಪ್ತಾಹಿಕ ಎರಡು ತಾಸುಗಳ ನೇರ ಪ್ರಸಾರದ ಕಾರ್ಯಕ್ರಮವನ್ನು ಆರಂಭಿಸಿದರು. ಇಲ್ಲಿ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ವ್ಯಾಪಕ ನೆಲೆಯ ಕಾರ್ಯಕ್ರಮಗಳು ಸಾಂದರ್ಭಿಕವಾಗಿ ಪ್ರಸಾರವಾಗುತ್ತಿವೆ. ನಾಡೋಜ ಕಯ್ಯಾರ ಕಿಞ್ಞಣ್ಣ ರೈ, ಬಿ.ಎ. ವಿವೇಕ ರೈ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ವಾಮನ ನಂದಾವರ, ಕೆ. ಚಿನ್ನಪ್ಪಗೌಡ, ಜಯಲಕ್ಷ್ಮೀ ಆಳ್ವ, ದೇವದಾಸ್ ಕಾಪಿಕಾಡ್, ಕೆ.ಎನ್. ಟೇಲರ್, ಸದಾನಂದ ಸುವರ್ಣ, ಎಂ. ವೀರಪ್ಪ ಮೊಯಿಲಿ, ಅಮೃತ ಸೋಮೇಶ್ವರ, ರಿಚರ್ಡ್‌ಕ್ಯಾಸ್ಟಲಿನೊ, ಸೀತಾರಾಮ ಕುಲಾಲ್ ಮುಂತಾದ ಸಾಧಕರು ಈ ಕಾರ್ಯಕ್ರಮದಲ್ಲಿ ತುಳುವಿಗೆ ಸಂಬಂಧಿಸಿದ ವಿಶಿಷ್ಠ ಅಧ್ಯಾಯಗಳನ್ನು ಪ್ರಸ್ತುತ ಪಡಿಸಿದರು. ಡಿ. ವೀರೇಂದ್ರ ಹೆಗ್ಗಡೆ, ವಿದ್ಯಾಪ್ರಸನ್ನ ತೀರ್ಥಸ್ವಾಮೀಜಿ, ಗುರುದೇವಾನಂದ ಸ್ವಾಮೀಜಿಯವರು ಮಾರ್ಗದರ್ಶನ ನೀಡಿದರು. ಈಗ ಈ ಕಾರ್ಯಕ್ರಮದ ಆಯ್ದಭಾಗ ಕನ್ನಡ ವಾಹಿನಿ ಡಾಟ್‌ಕಾಂನಲ್ಲಿ ಜಗತ್ತಿನಾದ್ಯಂತ ಆಸಕ್ತರಿಗೆ ಲಭ್ಯವಾಗಲಿದೆ. ಜನಮನಕ್ಕೆ ಈಗ ಏಳು ವರ್ಷ, ೩೫೦ ಸಂಚಿಕೆ ದಾಟಿ ಮುಂದುವರಿಯುತ್ತಿದೆ. ಇನ್ನು ಮುಂದೆ ಜಗತ್ತಿನಾದ್ಯಂತ ಇಂಟರ್ನೆಟ್ ವೀಕ್ಷಕರು ಕೂಡಾ ಈ ನೇರಪ್ರಸಾರದ ಕಾರ್ಯಕ್ರಮಕ್ಕೆ ಕರೆ ಮಾಡಬಹುದಾಗಿದೆ. ತುಳು ಕಾರ್ಯಕ್ರಮಗಳಿದ್ದಾಗ ಅವರುಗಳೊಂದಿಗೆ ತುಳುವಿನಲ್ಲೇ ಮಾತುಕತೆಯನ್ನು ನಡೆಸಬಹುದಾಗಿದೆ.

ಆಧುನಿಕ ತಂತ್ರಜ್ಞಾನ ಮಾಧ್ಯಮಗಳಲ್ಲಿ ತುಳು ಭಾಷೆಯ ಬಳಕೆಯು ಇನ್ನೊಂದು ಮಹತ್ತ್ವದ ಸಾಧನೆ ಇದಾಗಲಿದೆ.

ಹೊಸ ಸಾಧ್ಯತೆಗಳು

ಮಾಧ್ಯಮಗಳ ಎಲ್ಲಾ ಸಾಧ್ಯತೆಗಳನ್ನು ತುಳು ಭಾಷೆ ಹೀಗೆ ಒಳಗೊಂಡಿದೆ. ಜಗತ್ತಿನಾದ್ಯಂತ ಈ ಮೂಲಕ ತುಳು ಭಾಷೆಯ ಕಂಪು ಪಸರಿಸುತ್ತಿದೆ.

ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಬೆಳವಣಿಗೆಯನ್ನು ಗಮನಿಸಿದರೆ ಈಗ ತುಳುವಿಗೆ ಬೇಕಾಗಿರುವುದು ಪೂರ್ಣ ಪ್ರಮಾಣದ ಒಂದು ಅಂತರ್ಜಾಲ ಪತ್ರಿಕೆ. ಇಂತಹ ಪತ್ರಿಕೆ ರೂಪುಗೊಂಡರೆ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಜನಪದ, ಇತಿಹಾಸ ಪದ್ಧತಿಗಳು, ಕೌಟುಂಬಿಕ ಸ್ವರೂಪ ಸಹಿತ ಸಮಗ್ರ ಪರಂಪರೆಗೆ ಸಂಪೂರ್ಣ ಶಕ್ತಿ ಸಂಚಯನವಾದಂತಾಗುತ್ತದೆ. ಆಧುನಿಕ ತಂತ್ರಜ್ಞಾನದ ಸಂಪೂರ್ಣ ಅವಕಾಶಗಳನ್ನು ತುಳು ಭಾಷೆ ಪಡೆಯುವಂತಾಗುತ್ತದೆ. ತಂತ್ರಜ್ಞಾನ ಬಳಕೆಯ ಈಗಿನ ವೇಗವನ್ನು ಗಮನಿಸಿದರೆ, ಅತಿ ಶೀಘ್ರದಲ್ಲಿಯೇ ಈ ಕನಸು ಕೂಡಾ ನನಸಾಗಲಿದೆ ಎನ್ನಬಹುದು. ತುಳುವರ ದೀರ್ಘಕಾಲದ ಬೇಡಿಕೆಯಾದ ‘ತುಳು ಭಾಷೆ ಸಂವಿಧಾನದ ೮ನೆಯ ಪರಿಚ್ಛೇದಕ್ಕೆ ಸೇರ್ಪಡೆಯಾಗುವುದು’ ಈಡೇರಿದರೆ ಈ ಎಲ್ಲಾ ಆಶಯಗಳಿಗೆ ಮತ್ತಷ್ಟು ಬಲಬಂದಂತಾಗುತ್ತದೆ.

ಕಯ್ಯಾರ ಕಿಞ್ಞಣ್ಣ ರೈ ಅವರ ತುಳು ಕವಿತೆಯೊಂದರ ಸಾಲುಗಳು:
ಏತ್ ಪೊರ್ಲುದ ಭಾಷೆ ನಮ ತುಳು
ಸಾರ ಎಸಳ್‌ದ ತಾಮರೆ
ಪಂಡಿ ಬಾಯಿಡ್ ಕೇಂಡಿ ಕೆಬಿಟ್
ಉರ್ಕುಂಡಮೃತೊದ ನುರೆ ನುರೆ

ಏನಿತು ಅಂದದ ಭಾಷೆ ನಮ್ಮ ತುಳು
ಸಾವಿರ ಎಸಳಿನ ತಾವರೆ
ಹೇಳಿದ ಬಾಯಲಿ ಕೇಳಿದ ಕವಿಗಳಲಿ
ಉಕ್ಕುವುದು ಅಮೃತದ ನೊರೆ ನೊರೆ