ಸಂಪಾದನ
ವಾಮನ ನಂದಾವರ
ಉಷಾಕಿರಣ

 

ಗದ್ಯ – ಅಧ್ಯಯನ

ಕನ್ನಡ

ಅನಂತರಾಮ ಬಂಗಾಡಿ ಕೆ., ೨೦೦೩
ಬಂಗಾಡಿ ದೈಯ್ಯೊಂಕುಳು ಕುತ್ರೊಟ್ಟು ಮಾಡ
ಬಿ.ಎಸ್. ಮುಕುಂದ ಸುವರ್ಣ, ಬೆದ್ರಬೆಟ್ಟು, ಬಂಗಾಡಿ

ಇಂದಬೆಟ್ಟಿನ ಹಾಡಿ ದೈವಗಳ ಕ್ಷೇತ್ರಕ್ಕೆ ಸಂಬಂಧಿಸಿದ ಪಾಡ್ದನ ಆಧಾರಿತ ಕೃತಿ. ಇದರೊಂದಿಗೆ ದೈವಗಳ ಪ್ರಸರಣಕ್ಕೆ ಸಂಬಂಧಿಸಿದ ಸ್ಥಳಗಳಾದ ಕೊಲ್ಲಿ ದುರ್ಗಾದೇವಿ ದೇವಸ್ಥಾನ ಮತ್ತು ಅರ್ಧನಾರೀಶ್ವರ ಕ್ಷೇತ್ರ ಮೊದಲಾದ ಚರಿತ್ರೆಗಳು ಇದರಲ್ಲಿವೆ. ಶ್ರೀಮಂತ ಅರಸು ಮನೆತನಗಳಾದ ಬಂಗರ ಸಾಧನೆಗಳು ಅವರು ಕಟ್ಟಿಸಿದ ದೇವಗಳಗಳ ವಿವರಗಳನ್ನು ಸಂಗ್ರಹಿಸಿ ಇದರಲ್ಲಿ ನೀಡಲಾಗಿದೆ.

ಅನಂತರಾಮ ಬಂಗಾಡಿ ಕೆ., ೧೯೮೨
ಸಿರಿಕ್ಷೇತ್ರ ದರ್ಪಣ (ಕ್ಷೇತ್ರ ಪರಿಚಯ)
ಕೆ. ಶ್ರೀನಿವಾಸ ಹೊಳ್ಳ, ಧರ್ಮದರ್ಶಿ ಶ್ರೀ ಸತ್ಯನಾರಾಯಣ ಕ್ಷೇತ್ರ ಕುತ್ರೊಟ್ಟು, ಡೆ. ೧/೮.

ಕುತ್ರೊಟ್ಟು ಸತ್ಯನಾರಾಯಣ ಕ್ಷೇತ್ರದ ಸಿರಿಗಳ, ದೈವಗಳ ಕತೆಯನ್ನು ಬಂಗಾಡಿಯ ಸಮಗ್ರ ಇತಿಹಾಸದೊಂದಿಗೆ ಸೇರಿಸಿ ಬರೆಯಲಾಗಿದೆ.

ಅಭಯಕುಮಾರ್ ಕೌಕ್ರಾಡಿ, ೧೯೯೭
ಮುಗೇರರು – ಜನಾಂಗ ಜಾನಪದ ಅಧ್ಯನ (ಪ್ರೌಢ ಪ್ರಬಂಧ)
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಮತ್ತು ಕರ್ನಾಟಕ ತುಳು
ಸಾಹಿತ್ಯ ಅಕಾಡೆಮಿ, ಮಂಗಳೂರು, ಡೆ. ೧/೮, ಪು. ೩೨೦, ರೂ. ೨೦೦/-

ಮುಗೇರರ ಜೀವನಾವರ್ತನ, ವಾರ್ಷಿಕಾವರ್ತನ ಆಚರಣೆಗಳು, ಹಬ್ಬಗಳನ್ನು ಕುಣಿತಗಳು, ಮುಗೇರರ ಸಾಮಾಜಿಕ ಸ್ಥಾನಮಾನ ಮೊದಲಾದವುಗಳನ್ನು ಇಲ್ಲಿನ ಒಂಬತ್ತು ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ.

ಅಮೃತ ಸೋಮೇಶ್ವರ, ೧೯೭೮
ಅವಿಲು (ಲೇಖನ ಸಂಕಲನ)
ಕನ್ನಡ ಸಂಘ ವಿವೇಕಾನಂದ ಕಾಲೇಜು ಪುತ್ತೂರು, ಪು. ೧೩೪+೬, ರೂ ೭/-

ತುಳು ಜನಪದ ಸಾಹಿತ್ಯ (ಪಾಡ್ದನ, ಕಬಿತ, ಜನಪದ ಗೀತೆ) ಕ್ರೀಡೆ, ಭೂತಾರಾಧನೆ, ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನಗಳಿವೆ.

ಅಮೃತ ಸೋಮೇಶ್ವರ, ೧೯೮೨
ಕೊರಗರು
ಐಬಿಎಚ್ ಪ್ರಕಾಶನ ಬೆಂಗಳೂರು ಕ್ರೌ. ೧/೮, ಪು. ೪೮, ರೂ. ೨/-

ಬುಡಕಟ್ಟು ಜನಾಂಗಕ್ಕೆ ಸೇರಿದ ಕೊರಗ ಜನಾಂಗದ ಕುರಿತು ಪರಿಚಯ ನೀಡುವ ಕಿರು ಕೃತಿ.

ಅಮೃತ ಸೋಮೇಶ್ವರ, ೧೯೮೪
ತುಳು ಬದುಕು ಕೆಲವು ಮುಖಗಳು (ವಿಮರ್ಶಾ ಪ್ರಬಂಧಗಳು)
ಪ್ರಕೃತಿ ಪ್ರಕಾಶನ ಕೋಟೆಕಾರು, ಡೆ. ೧/೮, ಪು. ೪+೧೫೨, ರೂ. ೧೫/-

ತುಳು ಭಾಷೆ, ಜಾನಪದ, ಆಚರಣೆ, ಆರಾಧನೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ೧೨ ವಿಮರ್ಶಾ, ಪ್ರಬಂಧಗಳಿವೆ. ಉದಾ: ‘ತುಳು ಜಾನಪದ ಒಂದು ಸಮೀಕ್ಷೆ’, ‘ತುಳು ಕನ್ನಡ’, ‘ಕೆಡ್ಡಸ’, ‘ಪಾಡ್ದನಗಳಲ್ಲಿನ ತುಳು ಸಮಾಜ’, ‘ತುಳುನಾಡಿನ ಜನಪದ ಆಟೋಟಗಳು’, ‘ಪಂಜುರ್ಲಿ ದೈವದ ಒಂದು ನೇಮ’, ‘ತುಳುವಿನಲ್ಲಿ ಮಕ್ಕಳ ಸಾಹಿತ್ಯ’ ಇತ್ಯಾದಿ.

ಅರವಿಂದ ಮಾಲಗತ್ತಿ, ೧೯೯೩
ತುಳುವರ ಆಟಿಕಳೆಂಜ ಅಂತರ್ ದೃಷ್ಟೀಯ ಸಂಶೋಧನೆ
ಹೇಮಾಂಶು ಪ್ರಕಾಶನ, ಕಾಟಿಪಳ್ಳ, ಕ್ರೌ ೧/೮, ಪು. ೧೧೫, ರೂ. ೨೧/-

ಕಳೆಂಜನ ಬೇರೆ ಬೇರೆ ಪಾಡ್ದನ ಪಠ್ಯಗಳನ್ನು ಸಂಗ್ರಹಿಸಿ ಭೂತಾರಾಧನೆಯ ಹಿನ್ನೆಲೆಯಲ್ಲಿ ಮಾತ್ರವಲ್ಲದೆ ವಿವಿಧ ದೃಷ್ಟಿಕೋನಗಳಿಂದ ಆಟಿಕಳೆಂಜನನ್ನು ಅರ್ಥ ಮಾಡಿಕೊಡುವ ಪ್ರಯತ್ನ ಇಲ್ಲಿ ನಡೆದಿದೆ. ಅಲ್ಲದೆ ಲೇಖಕರು ಆಟಿಕಳೆಂಜನನ್ನು ತುಳುನಾಡಿನ ವ್ಯಾಪ್ತಿಯಿಂದ ಹೊರಗೊಯ್ದು ಕನ್ನಡದ ಜೋಕುಮಾರನ ಜೊತೆಗೂ ತುಲನೆ ಮಾಡಿದ್ದಾರೆ.

ಅರವಿಂದ ಮಾಲಗತ್ತಿ ಡಾ., ೧೯೯೧
ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ (ಪ್ರಬಂಧ ಸಂಕಲನ) ಶೈಲ ಪ್ರಕಾಶನ ಮುದ್ದೇಬಿಹಾಳ, ಕ್ರೌ. ೧/೮, ಪು. ೫೦+೪, ರೂ. ೧೦/-

ಒಟ್ಟು ೧೦ ಪ್ರಬಂಧಗಳಿವೆ. ಭೂತ – ಭೂತಾರಾಧನೆ ಎಂದರೇನು? ಭೂತಾರಾಧನೆಯಲ್ಲಿನ ಜಾತಿವಾದ, ಭೂತಾರಾಧನೆಯ ನಂಬಿಕೆಗಳು, ಜನಪದ ಕಲೆಗಳ ಕುರಿತ ಪ್ರಬಂಧಗಳು ಈ ಕೃತಿಯಲ್ಲಿವೆ.

ಅರುಣ್ ಕುಮಾರ್ ಎಸ್.ಆರ್., ೧೯೯೭
ಜಾನಪದ ಅನುಶೀಲನ (ಲೇಖನ ಸಂಕಲನ)
ಪೂರ್ಣ ಪ್ರಕಾಶನ, ಧರ್ಮಸ್ಥಳ, ಕ್ರೌ ೧/೮, ಪು. ೧೭+೮೬, ರೂ. ೩೫/-

೧೧-೧೨-೯೭ ರಿಂದ ೧೪-೧೨-೯೭ರ ವರೆಗೆ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆರವಿನಿಂದ ಪ್ರಕಟವಾದ ಕೃತಿ. ಭೂತ, ನಾಗ, ಸಿರಿ ಆರಾಧನೆ ಹಾಗೂ ಕಬಿತಗಳು, ಜನಪದ ಕ್ರೀಡೆಗಳ ಬಗೆಗಿನ ಒಟ್ಟು ೯ ಲೇಖನಗಳಿವೆ.

ಅರುಣ್ ಕುಮಾರ್ ಎಸ್.ಆರ್., ೧೯೯೫
ಸೀಮೆ (ಸಂಶೋಧನಾತ್ಮಕ ಲೇಖನಗಳು)
ಜಾನಪದ ಸಂಘ ವಿಜಯ ಕಾಲೇಜು ಮುಲ್ಕಿ,
ಡೆ. ೧/೮, ಪು. ೧೨+೧೨೨, ರೂ. ೩೦/-

ಬೇರೆ ಬೇರೆ ಲೇಖಕರ ೧೧ ಲೇಖನಗಳಿವೆ. ಎಲ್ಲಾ ಲೇಖನಗಳೂ ಸಾಂಸ್ಕೃತಿಕ, ಜಾನಾಂಗಿಕ ಹಾಗೂ ವಿವಿಧ ನಂಬಿಕೆ, ಆಚರಣೆ ಮುಂತಾದವುಗಳಿಗೆ ಸಂಬಂಧಿಸಿವೆ. ಅಷ್ಟಮಿ, ಕದಿರುಹಬ್ಬ, ಕಂಬಳ, ಆಟಿ ತಿಂಗಳು, ಆಶ್ಲೇಷ ಬಲಿ ಇಂಥ ವಿಷಯಗಳಿಗೆ ಹಾಗೂ ಬಂಟರು, ಕೊರಗರು, ಮುಸ್ಲಿಮರು ಇಂಥ ಜನಾಂಗಗಳಿಗೆ ಸಂಬಂಧಿಸಿದ ಅಧ್ಯಯನಗಳು ಇಲ್ಲಿವೆ.

ಅರುಣ್ ಕುಮಾರ್ ಎಸ್.ಆರ್., (ಸಂ), ೧೯೯೩
ಮಂಜೊಟ್ಟಿ (ಕಂಬಳ ಕುರಿತ ಲೇಖನಗಳ ಸಂಗ್ರಹ)
ಮುಲ್ಕಿ ಸೀಮೆ ಅರಸು ಕಂಬಳ ಸಮಿತಿ, ಪಡುಪಣಂಬೂರು
ಕ್ರೌ ೧/೮, ರೂ. ೧೦/-

ವಿವಿಧ ಲೇಖಕರು ಬರೆದ ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳದ ಕುರಿತ ಲೇಖನಗಳ ಸಂಗ್ರಹ.

ಕಮಲಾಕ್ಷ ಪಿ.

ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ ಮತ್ತು ಗಿರಿಜನ ಸಾಮಾಜಿಕ ಇತಿಹಾಸ (ಅಧ್ಯಯನ) ಕಮಲಾಕ್ಷ ಅಂಬೇಡ್ಕರ್ ನಗರ ಮಂಗಳೂರು, ಕ್ರೌ. ೧/೮

ದ.ಕ. ಜಿಲ್ಲೆಯ ಹರಿಜನ ಗಿರಿಜನರ ಸಾಮಾಜಿಕ ಜೀವನದ ಕುರಿತು ಅವರ ಪೂರ್ವ ಇತಿಹಾಸ, ಸಾಮಾಜಿಕ ಆಚಾರ – ವಿಚಾರ ಮತ್ತು ಸಮಾಜದ ಕಟ್ಟುಕಟ್ಟಳೆಗಳ ಸಂಕ್ಷಿಪ್ತ ವಿವರಗಳು, ಅವರ ಉಪಜಾತಿಗಳ ವಿವರ, ಅವರು ಆಚರಿಸುವ ಹಬ್ಬಗಳು, ಅವರ ವಿನೋದ ಆಟಗಳು, ಮದುವೆಯ ವಿಧಿ-ವಿಧಾನ ಇತ್ಯಾದಿ ಮಾಹಿತಿ ಈ ಕೃತಿಯಲ್ಲಿದೆ.

ಕಿಲ್ಲೆ ಎನ್.ಎಸ್. ಮತ್ತು ಶೀನಪ್ಪ ಹೆಗ್ಡೆ ಎನ್.ಎ., ೧೯೫೪
ಪ್ರಾಚೀನ ತುಳುನಾಡು
ಮದಿರಾ ಕಿಲ್ಲೆ ಮಂಗಳೂರು, ರೂ. ೨-೦-೦

ಪುರಾಣ, ಪಾಡ್ದನಗಳ ಮೂಲಕ ತುಳುನಾಡಿನ ಚಿತ್ರಣವನ್ನು ನೀಡಿ, ಪ್ರಾಚೀನ ಸಮಾಜ, ಧರ್ಮ, ಬಳಿಗಳು, ಜಾತಿಗಳು ಇತರ ಕಡೆಗಳಿಂದ ಬಂದ ಜಾತಿಗಳ ಬಗ್ಗೆ ಮಾಹಿತಿಯನ್ನು ನೀಡಿ ತುಳುವರ ಆಚರಣೆ, ಆರಾಧನೆ, ಹಬ್ಬಗಳು, ಕಟ್ಟುಕಟ್ಟಳೆಗಳ ವಿವರಗಳನ್ನು ನೀಡಲಾಗಿದೆ.

ಕ೦ಡಂತಾಯ ಕೆ.ಎಲ್., ೨೦೦೩
ನಂಬಿಕೆ ನಡವಳಿಕೆ (ಲೇಖನಗಳ ಸಂಗ್ರಹ)
ಸರಸ್ವತಿ ಪ್ರಕಾಶನ, ಕುಂಜೂರು, ಡೆ. ೧/೮, ಪು. ೫೪+೬, ರೂ. ೨೫/-

ನಾಗಾರಾಧನೆ, ಪಡುಬಿದ್ರಿಯ ಢಕ್ಕೆ ಬಲಿ, ತುಳುವರ ‘ಸತ್ಯ’ ಆರಾಧನೆಯ ಸುತ್ತಮುತ್ತ, ಕಂಬಳ, ಸಿರಿಜಾತ್ರೆ, ದೀಪಾವಳಿ, ‘ನಾಗರ ಪಂಚಮಿ’, ‘ಪಡುಬಿದ್ರಿ ಬ್ರಹ್ಮಸ್ಥಾನ – ಬಯಲು ಆಲಯದ ಚಿದಂಬರ ರಹಸ್ಯ’, ‘ಸಿರಿ’- ದೈವತ್ವಕ್ಕೇರಿದ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದಕಿ’, ಮುಂತಾದ ೧೫ ಲೇಖನಗಳಿವೆ.

ಕೃಷ್ಣಪ್ಪ ಪೂಜಾರಿಕೆ ಕೆ.
ತುಳುನಾಡಿನ ಬಿಲ್ಲವರು (ಜನಾಂಗ ಅಧ್ಯನ)
ರೂ. ೫೦ ಪೈಸೆ.

ಬಿಲ್ಲವರ ಕುಲಕಸುಬು, ಬಿಲ್ಲವರೆಂಬ ಹೆಸರು ಬರಲು ಕಾರಣ, ಅವರ ಸಮಸ್ಯೆಗಳು ಇತ್ಯಾದಿಗಳನ್ನು ಚರ್ಚಿಸುತ್ತದೆ.

ಗಣನಾಥ ಎಕ್ಕಾರು, ೨೦೦೦
ತುಳುನಾಡಿನ ಜನಪದ ಆಟಗಳು (ಪ್ರೌಢ ಪ್ರಬಂಧ)
ಜ್ಞಾನೋದಯ ಪ್ರಕಾಶನ ಬೆಂಗಳೂರು, ಡೆ. ೧/೮, ಪು. ೨೦+೩೮೦, ರೂ. ೧೯೫/-

ಜನಪದ ಆಟಗಳ ಮೂಲಕ ಸಂವಹನಗೊಳ್ಳುವ ತುಳು ಸಂಸ್ಕೃತಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂವಹನಗೊಳ್ಳುವ ತುಳು ಸಂಸ್ಕೃತಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ವಿವೇಚನೆಯನ್ನು ಮಾಡಲಾಗಿದೆ. ಆಚರಣಾತ್ಮಕ ಸಂಬಂಧಗಳನ್ನು ಪಡೆದುಕೊಂಡಿರುವ ೫ ಆಟಗಳು ಮತ್ತು ೫ ಮನರಂಜನಾ ಆಟಗಳ ಹಲವು ಪಠ್ಯಗಳನ್ನಿಟ್ಟುಕೊಂಡು ವಿಶ್ಲೇಷಣೆ ನಡೆಸಲಾಗಿದೆ.

ಗಣಪಯ್ಯ ಭಟ್ ಪುಂಡಿಕ್ಯಾ, ೧೯೯೭
ತೌಳವ (ಲೇಖನ ಸಂಕಲನ)
ಸಿಂಧೂರ ಪ್ರಕಾಶನ, ಮೂಡಬಿದ್ರೆ, ಡೆ. ೧/೮, ಪು. ೧೩೪, ರೂ. ೬೫/-

ತುಳುನಾಡಿನ ಇತಿಹಾಸ, ರಾಜಮನೆತನಗಳು, ಶಾಸನಗಳು, ಸಂಸ್ಕೃತಿ ಕುರಿತ ೧೫ ಅಧ್ಯಯನ ಲೇಖನಗಳ ಸಂಗ್ರಹಣ ಕೃತಿ ಕೊನೆಯಲ್ಲಿ ಕೆಲವು ಚಿತ್ರಗಳನ್ನು ಮುದ್ರಿಸಲಾಗಿದೆ.

ಗಣೇಶ ಅಮೀನ್ ಸಂಕಮಾರ್, ೨೦೦೦
ಧರ್ಮರಸು ಉಳ್ಳಾಯ (ಸಂಶೋಧನಾತ್ಮಕ ಗ್ರಂಥ)
ಸಿರಿ ಪ್ರಕಾಶನ, ಅಗೊಳಿ ಮಂಜಣ ಜಾಣಪದ ಕೇಂದ್ರ ಪಾವಂಜೆ
ಡೆ. ೧/೮, ಪು. ೪೦, ರೂ. ೨೫/-

ಕಂಡಿಗೆ ಉಳ್ಳಾಯ ಕ್ಷೇತ್ರದ ಇತಿಹಾಸವನ್ನೊಳಗೊಂಡ ಕೃತಿ ಕೊನೆಯಲ್ಲಿ ಉಳ್ಳಾಯ ದೈವದ ಪಾಡ್ದನವನ್ನು ನೀಡಲಾಗಿದೆ.

ಗಾಯತ್ರೀ ನಾವಡ, ೧೯೯೯
ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು. (ಪ್ರೌಢ ಪ್ರಬಂಧ)
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಮತ್ತು ಸಿರಿ ಪ್ರಕಾಶನ
ಹೊಸಪೇಟೆ, ಡೆ. ೧/೮, ಪು. ೧೬+೨೧೬, ರೂ. ೧೮೦/-

ಹೆಣ್ಣಿನ ಅಂತರಂಗದ ನುಡಿಗೆ, ನೋಟಕ್ಕೆ ಜಾನಪದ ಮಹತ್ವದ ಆಕರವಾಗಿರುವುದನ್ನು ಕರಾವಳಿಯ ಜಾನಪದ ಪ್ರಕಾರಗಳ ವಿಶ್ಲೇಷಣೆಯಲ್ಲಿ ತೋರಿಸಿಕೊಟ್ಟಿದೆ. ತುಳುವ ಬಂಧುತ್ವ ವ್ಯವಸ್ಥೆ, ವೀರತ್ವದ ಪರಿಕಲ್ಪನೆ, ಲೋಕದೃಷ್ಟಿ, ಸ್ತ್ರೀ ಶಕ್ತಿಯ ಮಾದರಿಯಾಗಿ ಸಿರಿ ಪಾಡ್ದನಗಳನ್ನು ವಿವೇಚಿಸುವ ಪ್ರಯತ್ನ.

ಗಾಯತ್ರೀ ನಾವಡ, ೧೯೯೭
ವಿರಚನೆ (ಸ್ತ್ರೀವಾದಿ ಸಂಸ್ಕೃತಿ ಚಿಂತನ ಪ್ರಬಂಧಗಳ ಸಂಕಲನ)
ಎನ್.ಆರ್.ಎ.ಎಂ.ಎಚ್. ಪ್ರಕಾಶನ ಕೋಟೇಶ್ವರ
ಡೆ. ೧/೮, ಪು. ೧೪+೧೪೬, ರೂ. ೯೦/-

ಜಾನಪದವನ್ನು ಸ್ತ್ರೀವಾದದ ನೆಲೆಯಿಂದ ವಿಶ್ಲೇಷಿಸುವ ಪ್ರಯತ್ನವನ್ನು ೧೨ ಪ್ರಬಂಧಗಳಲ್ಲಿ ಮಾಡಲಾಗಿದೆ. ‘ಲಿಂಗ ಪ್ರಭೇದ ಮತ್ತು ಪಠ್ಯ ಸ್ವರೂಪ’- ಸಿರಿ ಪಾಡ್ದನವನ್ನು ಪುರುಷ ಹಾಗೂ ಮಹಿಳಾ ಪಠ್ಯದ ಮೂಲಕ ವಿಶ್ಲೇಷಿಸಲಾಗಿದೆ. ‘ಪಾಡ್ದನಗಳು ಪ್ರಕಟಿಸುವ ಸ್ತ್ರೀತ್ವದ ಪ್ರತಿನಿಧೀಕರಣ’- ಬಲ ಜೇವು ಮಾನಿಗ, ನಾಗಸಿರಿ ಕಲ್ಲುರ್ಟಿ ಮತ್ತು ಬಾಲೆಮಾನಿ ಪಾಡ್ದನಗಳು ಪ್ರಕಟಿಸುವಂಥ ಸ್ತ್ರೀತ್ವದ ಪ್ರತಿನಿಧೀಕರಣ ಭಾರತೀಯ ಸಾಂಪ್ರದಾಯಿಕ ಮಾದರಿಗೆ ಹೇಗೆ ವಿರುದ್ಧವಾಗಿದೆಯೆಂಬುದನ್ನು ತೋರಿಸಿಕೊಡಲಾಗಿದೆ. ‘ಸಿರಿ’ ಹೆಣ್ಣಿನ ಅನನ್ಯತೆಯ ಹುಡುಕಾಟ’- ಸಿರಿ ಪಾಡ್ದನದ ಕಥಾನಕದ ಮೂಲಕ ಸಿರಿಯ ಅನನ್ಯತೆಯ ಮಹತ್ವವನ್ನು ವಿಶ್ಲೇಷಿಸಲಾಗಿದೆ.

ಗುರುರಾಜ ಭಟ್ ಪಿ., ೧೯೭೭
ತುಳುನಾಡಿನ ನಾಗಮಂಡಲ (ಅಧ್ಯಯನ)
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ಪು. ೪೪, ರೂ. ೧೫೦/-

ತುಳುನಾಡಿನಲ್ಲಿನ ನಾಗಪೂಜೆಯ ವೈಶಿಷ್ಟ್ಯಗಳು, ಇಲ್ಲಿನ ನಾಗಶಿಲ್ಪಗಳಲ್ಲಿ ವೈವಿಧ್ಯವನ್ನು ಚಿತ್ರಗಳ ಸಮೇತ ವಿವರಿಸಿ ನಾಗಮಂಡಲ, ಢಕ್ಕೆ ಬಲಿಯ ಸ್ವರೂಪವನ್ನು ಈ ಕಿರುಕೃತಿಯಲ್ಲಿ ನೀಡಲಾಗಿದೆ.

ಗುರುರಾಜ ಭಟ್ ಪಿ., ೧೯೭೬
ತುಳುನಾಡಿನ ಸಪ್ತಕ್ಷೇತ್ರಗಳು
ಐಬಿಎಚ್ ಪ್ರಕಾಶನ ಬೆಂಗಳೂರು, ಕ್ರೌ. ೧/೮, ಪು. ರೂ. ೧.೫೦/-

ತುಳುನಾಡಿನ ಸಪ್ತಕ್ಷೇತ್ರಗಳೆಂದು ಹೆಸರಾದ ಕಾಪ್ಯ ಪೀಠ, ಕುಮಾರಾದ್ರಿ, ಕುಂಭಾಶಿ, ಶಂಕರ ನಾರಾಯಣ, ಧ್ವಜೇಶ್ವರ, ಕೊಲ್ಲೂರು, ಗೋಕರ್ಣಗಳ ಪರಿಚಯಾತ್ಮಕ ಕಿರು ಕೃತಿ.

ಗುರುರಾಜ ಭಟ್ ಪಿ., ೧೯೭೨
ದಕ್ಷಿಣ ಕನ್ನಡದ ತುಳುವರೂ ತುಳುವ ಸಂಸ್ಕೃತಿಯೂ
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌನ್ ೧/೮, ಪು. ೫೮+೨, ರೂ. ೧.೫೦/-

ತುಳುನಾಡಿನ ಸಮಾಜ, ತುಳುವರ ರಾಜಕೀಯ – ಧಾರ್ಮಿಕ ಇತಿಹಾಸ, ಆರಾಧನಾ ಪದ್ಧತಿಗಳು, ಪೂಜೆ, ಪುರಸ್ಕಾರ, ನಾಗಾರಾಧನೆ, ಭೂತಾರಾಧನೆ ಇತ್ಯಾದಿ. ವಿವಿಧ ಕ್ಷೇತ್ರಗಳಲ್ಲಿ ಜರಗುವ ಜಾತ್ರೆ, ಆಯನ ಇತ್ಯಾದಿಗಳ ಕುರಿತಂತೆ ಹಾಗೂ ಪ್ರಸಿದ್ಧ ಕಲೆಯಾದ ಯಕ್ಷಗಾನ – ತಾಳಮದ್ದೆಳೆಯ ಕುರಿತಂತೆಯೂ ಮಾಹಿತಿ ನೀಡುವ ಕೃತಿ.

ಚಂದ್ರಶಖರ ಮಂಡೆಕೋಲು, ೨೦೦೧
ಅನ್ವೇಷಣೆ (ಸಂಶೋಧನಾ ಲೇಖನ)
ಅನ್ವೇಷಣಾ ಬಳಗ ಮಂಡೆಕೋಲು, ಡೆ. ೧/೮, ಪು. ೧೦+೫೫, ರೂ. ೪೦/-

೮ ಲೇಖನಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ. ಮೊದಲ ೬ ಲೇಖನಗಳು ಭೂತಾರಾಧನೆ ಮತ್ತು ಇತಿಹಾಸಕ್ಕೆ ಸಂಬಂಧಿಸಿವೆ. ಸುಳ್ಯದಲ್ಲಿ ಆರಾಧಿಸಲಾಗುವ ಭೂತಗಳನ್ನು ಅವುಗಳ ಉಗಮದ ಐತಿಹ್ಯಗಳ ಆಧಾರದಿಂದ ಅವುಗಳ ವಿಶೇಷತೆಗಳನ್ನು ನೀಡಲಾಗಿದೆ. ಜಾಲ್ಲೂರಿನ ದಾಲ್ಸೂರಾಯಿ, ಮಾಲೆಂಗ್ರಿಯ ಮಾಲಿಂಗರಾಯ, ದುಗಲಡ್ಕದ ದುಗ್ಗಲಾಯ ‘ಸುಳ್ಯದ ಶಾಸನಗಳು (ಪು. ೨೯-೩೬) ಇತಿಹಾಸಕ್ಕೆ ಸಂಬಂಧಿಸಿದ್ದು ಒಟ್ಟು ೬ ಶಾಸನಗಳ ಕಾಲವನ್ನು ಗುರುತಿಸಿ ಶಾಸನಕ್ಕೆ ಸಂಬಂಧಿಸಿದ ಚರಿತ್ರೆಯನ್ನು ನೀಡಲಾಗಿದೆ. ‘ಬಳ್ಪದ ತ್ರಿಶೂಲಿನಿ’ (ಪು. ೩೭-೪೨) ಈ ದೇವಾಲಯದ ಶಿಲ್ಪಕಲೆ, ಇತಿಹಾಸ, ಆಡಳಿತ, ಪ್ರಸ್ತುತ ಸೇವೆ, ಉತ್ಸವಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೆ ಚಾರಣ ಲೇಖನಗಳಾದ ‘ಕೌಡಿಕಾನ ಘೋರಕಾನನ’ (೪೩-೪೭)’ ಸ್ವಾತಂತ್ರ್ಯ ಪೂರ್ವದ ಅಡಗುದಾಣಗಳು (೪೮-೫೨) ಇವೆ.

ಚಿನ್ನಪ್ಪ ಗೌಡ ಕೆ., ೧೯೮೫
ಜಾಲಾಟ (ಸಂಶೋಧನಾ ಲೇಖನಗಳು)
ಚಿಂತನ ಪ್ರಕಾಶನ ಉಜಿರೆ, ಡೆ. ೧/೮, ಪು. ೧೨೪, ರೂ. ೨೪/-

ಒಟ್ಟು ೪ ಲೇಖನಗಳಿವೆ.‘ಭೂತಾರಾಧನೆಯ ಪ್ರಭೇದ ಜಾಲಾಟ’ – ಬೇರೆ ಬೇರೆ ಕಡೆಗಳಲ್ಲಿ ಜರಗುವ ಮುಖ್ಯ ಜಾಲಾಟಗಳನ್ನು ಅಧ್ಯಯನ ದೃಷ್ಟಿಯಿಂದ ಸಮೀಕ್ಷಿಸಿ, ಅವುಗಳ ತಾಂತ್ರಿಕ, ಧಾರ್ಮಿಕ, ಲೌಕಿಕ ಹಾಗೂ ರಂಗಭೂಮಿಯ ಗುಣಧರ್ಮ ಇತ್ಯಾದಿಗಳನ್ನು ವಿಶ್ಲೇಷಿಸಲಾಗಿದೆ. ‘ತುಳುನಾಡಿನ ಜಾತ್ರೆಗಳು’, ಉತ್ಸವಗಳ ಕುರಿತ ಒಂದು ವ್ಯವಸ್ಥಿತ ಪ್ರಾದೇಶಿಕ ಅಧ್ಯಯನ. ಇಲ್ಲಿ ತುಳುನಾಡಿನ ಶೈವ, ವೈಷ್ಣವ, ಜೈನ, ಶಾಕ್ತ, ಗಾಣಪತ್ಯ, ಸ್ಕಂದ ಇತ್ಯಾದಿ ಪರಂಪರೆಯ ಉತ್ಸವಗಳ ವೈಶಿಷ್ಟ್ಯಗಳನ್ನು ವಿವರಿಸಿ ಭೂತೋತ್ಸವಕ್ಕೂ ದೇಗುಲಗಳ ಶಿಷ್ಟ ಉತ್ಸವಕ್ಕೂ ಏರ್ಪಟ್ಟಿರುವ ಸಂಬಂಧದ ಕುರಿತೂ ವಿಚಾರ ಮಾಡಿದ್ದಾರೆ. ‘ದೃಷ್ಟಿಕಥೆಗಳು – ಒಂದು ವಿಶ್ಲೇಷಣೆ’- ಕೆಟ್ಟ ಕಣ್ಣಿನ ನಿರ್ವಚನ, ದೇಶವಿದೇಶಗಳ ವಿಭಿನ್ನ ಜನಾಂಗಗಳಲ್ಲಿ ಆ ಕುರಿತಾದ ನಂಬಿಕೆ, ಕೆಟ್ಟ ಕಣ್ಣು ತಾಗುವ ಸಂದರ್ಭಗಳು, ಕಣ್ಣು ಮುಟ್ಟಿಸುವವರ ಜಾಯಮಾನ, ದೃಷ್ಟಿದೋಷ, ಪರಿಹಾರ ಸೂತ್ರಗಳು ಮುಂತಾದವುಗಳೊಂದಿಗೆ ೨೮ರಷ್ಟು ದೃಷ್ಟಿತಾಗಿದ ಸಂದರ್ಭಗಳನ್ನು ಉಲ್ಲೇಖಿಸಿ ವಿಶ್ಲೇಷಿಸಿದ್ದಾರೆ. ‘ಭೂತಾರಾಧನೆಯಲ್ಲಿ ವರ್ಣಸಾಂಗತ್ಯ’ -ಧಾರ್ಮಿಕ ರಂಗಭೂಮಿಯಾದ ಭೂತಾರಾಧನೆಯಲ್ಲಿ ಬಣ್ಣಗಳ ಪಾತ್ರವೇನು, ಮುಖವರ್ಣಿಕೆ, ವೇಷಭೂಷಣ ವಿನ್ಯಾಸಗಳಲ್ಲಿ ವಿವಿಧ ವರ್ಣಗಳ ವಿಲಕ್ಷಣ ಸಂಯೋಜನೆ ಎಂಥ ಗಾಢವಾದ ಪ್ರಭಾವವನ್ನು ಉಂಟು ಮಾಡಲು ಶಕ್ತವಾಗಿದೆ ಎಂಬುದನ್ನು ಲೇಖಕರು ಸೌಂದರ್ಯ ಶಾಸ್ತ್ರ ಮತ್ತು ಮನಃಶಾಸ್ತ್ರೀಯ ದೃಷ್ಟಿಯಿಂದ ವಿವೇಚಿಸಲೆತ್ನಿಸಿದ್ದಾರೆ.

ಚಿನ್ನಪ್ಪ ಗೌಡ ಕೆ., ೧೯೮೩
ಭೂತಾರಾಧನೆ : ಕೆಲವು ಅಧ್ಯಯನಗಳು
ಡೆ. ೧/೮, ಪು. ೧೨+೧೮+೮೮, ರೂ. ೧೫/-

ತುಳುನಾಡಿನ ಭೂತಾರಾಧನೆಯ ಕುರಿತ ೫ ಅಧ್ಯಯನ ಲೇಖನಗಳು ಈ ಕೃತಿಯಲ್ಲಿವೆ. ಭೂತಾರಾಧನೆ ಪ್ರದರ್ಶನ ಕಲೆಯ ಅನೇಕ ಸಾಂದರ್ಭಿಕ ಚಿತ್ರಗಳನ್ನು ಇದರಲ್ಲಿ ಗಮನಿಸಬಹುದು.

ಚಿನ್ನಪ್ಪ ಗೌಡ ಕೆ., ೧೯೯೦
ಭೂತಾರಾಧನೆ ಜಾನಪದೀಯ ಅಧ್ಯಯನ (ಪ್ರೌಢ ಪ್ರಬಂಧ)
ಮದಿಪು ಪ್ರಕಾಶನ, ಮಂಗಳಗಂಗೋತ್ರಿ, ಕ್ರೌ. ೧/೪, ಪು. ೩೧೩, ರೂ. ೧೮೦/-

ಭೂತಾರಾಧನೆಯ ಪರಿಕಲ್ಪನೆ, ಭೂತಾರಾಧನೆಯ ಪ್ರಭೇದ ಮತ್ತು ರಂಗ ಪರಿಕರಗಳ ಕುರಿತ ಒಂದು ವಿಸ್ತಾರವಾದ ಅಧ್ಯಯನವಿದೆ. ಭೂತಾರಾಧನೆಯ ಸಾಂಸ್ಕೃತಿಕ ಸ್ವರೂಪದ ವಿಶ್ಲೇಷಣೆ, ಭೂತಾರಾಧನೆ ಮತ್ತು ಯಕ್ಷಗಾನದ ತೌಲನಿಕ ವಿವೇಚನೆಯನ್ನೊಳಗೊಂಡಿದೆ. ಭೂತಾರಾಧನೆ ಒಂದು ನ್ಯಾಯಾಂಗ ಪದ್ಧತಿಯಾಗಿ ಮತ್ತು ಚಿಕಿತ್ಸಾ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ವಿಶ್ಲೇಷಣೆಯನ್ನು ಮಾಡಲಾಗಿದೆ ಮತ್ತು ಭೂತಾರಾಧನೆಯ ಬಣ್ಣದ ಮತ್ತು ಕಪ್ಪುಬಿಳುಪು ಛಾಯಾಚಿತ್ರಗಳು, ವೇಷಭೂಷಣಗಳ ರೇಖಾಚಿತ್ರಗಳು, ಭೂತಾರಾಧನೆಯ ಸ್ವರೂಪವನ್ನು ವಿವರಿಸುವ ತಖ್ತೆಗಳಿವೆ.

ಚಿನ್ನಪ್ಪ ಗೌಡ ಕೆ., ೨೦೦೩
ಸಂಸ್ಕೃತಿ ಸಿರಿ (ಸಂಶೋಧನಾ ಲೇಖನಗಳ ಸಂಗ್ರಹ)
ಮದಿಪು ಪ್ರಕಾಶನ, ಮಂಗಳಗಂಗೋತ್ರಿ
ಡೆ. ೧/೮, ಪು. ೩೮೪. ರೂ. ೩೦೦/- (ಕ್ಯಾಲಿಕೊ) ರೂ. ೨೪೦/- (ಸಾದಾ).

ಭೂತಾರಾಧನೆ, ಸಿರಿ ಆರಾಧನೆ, ಜನಪದ ಕುಣಿತಗಳು, ಕ್ರೀಡೆಗಳು, ಯಕ್ಷಗಾನ, ಮಲೆಕುಡಿಯ ಜನಾಂಗ, ಪ್ರದೇಶ ಜಾನಪದ ಅಧ್ಯಯನ, ಜಾಲಾಟ, ಆರಾಧನಾ ರಂಗಭೂಮಿ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡುರವಂಥ ೨೨ ಸಂಶೋಧನಾ ಲೇಖನಗಳು ಈ ಕೃತಿಯಲ್ಲಿವೆ.

ಜಲಜಾಕ್ಷಿ ಕೆ.ವಿ., ೨೦೦೩
ತುಳುಭಾಷೆ ಸಾಹಿತ್ಯ ಸಂಪ್ರದಾಯ (ಲೇಖನ ಸಂಗ್ರಹ)
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಡೆ. ೧/೮, ಪು. ೧೧+೧೦೧, ರೂ. ೬೦/-

ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಒಟ್ಟು ೫ ಲೇಖನಗಳಿವೆ. ತುಳುಭಾಷೆಯ ವೈಶಿಷ್ಟ್ಯಗಳನ್ನು ತೌಲನಿಕವಾಗಿಯೂ ಸೋದಾಹರಣವಗಿಯೂ ವಿಶದೀಕರಿಸಿ ಈ ಭಾಷೆಯ ಸ್ಥಾನ ನಿರ್ದೇಶನವನ್ನು ‘ತುಳುಭಾಷೆಯ ಕೆಲವು ವೈಶಿಷ್ಟ್ಯಗಳು’ ಲೇಖನದಲ್ಲಿ ನೀಡಿ ಕನ್ನಡ ಮತ್ತು ತುಳುವಿನ ಸಂಬಂಧಗಳ ವಿಶ್ಲೇಷಣೆಯನ್ನು ‘ಕನ್ನಡ – ತುಳು ಸಂಬಂಧ’ ಲೇಖನದಲ್ಲಿ ಮಾಡಲಾಗಿದೆ. ‘ತುಳು ಸಾಹಿತ್ಯ ಬೆಳೆದು ಬಂದ ಬಗೆ’ಯೆಂಬ ಲೇಖನದಲ್ಲಿ ತುಳು ಭಾಷಾ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಡೆದ ಸಾಹಿತ್ಯ ಕೃಷಿಯ ಸಮೀಕ್ಷೆಯಿದೆ. ‘ತುಳುನಾಡಿನ ಪಾರಂಪರಿಕ ಉಡುಗೆ ತೊಡುಗೆಗಳು’ – ತುಳುನಾಡಿನ ಭಿನ್ನ ಭಿನ್ನ ಸಾಂಸ್ಕೃತಿಕ ಗುಂಪುಗಳ ಸಾಂಪ್ರದಾಯಿಕ, ಸಾಂದರ್ಭಿಕ ಉಡುಗೆ ತೊಡುಗೆಗಳ ವಿಶ್ಲೇಷಣೆ ಮಾಡುತ್ತದೆ.

ಜಾರು ಪೇರೂರು
ತುಳು, ತುಳುನಾಡು ಹಾಗೂ ತುಳುವಿಗೊಂದು ಲಿಪಿ ಏಕೆ ಮತ್ತು ಹೇಗೆ?
ಡೆ. ೧/೮, ರೂ. ೨/-, ಪು. ೩೨.

ತುಳುವರ ಪ್ರಾಚೀನತೆ, ಅವರ ಸಾಮಾಜಿಕ ಪದ್ಧತಿಯಾದ ‘ಅಳಿಯ ಸಂತಾನ ಕಟ್ಟಿ’ನ ಕುರಿತಂತೆ ಹಾಗೂ ತುಳುನಾಡಿನ ಸಾಂಸ್ಕೃತಿಕ ವೀರರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಬ್ರಾಹ್ಮಣ ಗುಂಪಿಗೆ ಸೇರಿದವಳೇ ಎಂಬುದರ ಚರ್ಚೆಯನ್ನು ಆರಂಭದಲ್ಲಿ ಮಾಡಿ ಆ ನಂತರ ತುಳುನಾಡು ಭಾಷೆ, ಲಿಪಿಯ ಕುರಿತಂತೆ ವಿಶ್ಲೇಷಣೆ ನಡೆಸಲಾಗಿದೆ.

ತಿರುಮಲೇಶ್ವರ ಭಟ್ ಮತ್ತು ಇತರರು, ೨೦೦೫
ಪಂಚವಾದ್ಯ
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ಡೆ. ೧/೮, ರೂ. ೧೦೦/-, ಪು. ೧೮೬

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕರಾವಳಿಯ ಜಾನಪದ ವಾದ್ಯಗಳ ಕುರಿತು ೨೦೦೩ ಮಾರ್ಚ್‌೭ರಿಂದ ೯ರ ವರೆಗೆ ನಡೆದ ಕಮ್ಮಟದ ಚಿಂತನ ಮಂಥನಗಳ ಲಿಪೀಕೃತ ಪಠ್ಯ.

ದಾಮೋದರ ಕಲ್ಮಾಡಿ, ಚೆಲುವರಾಜ್ ಪೆರಂಪಳ್ಳಿ, ೧೯೯೮
ಜನಮಾನಸಲದಲ್ಲಿ ಕೋಟಿಚೆನ್ನಯರು
ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯನ ಪ್ರತಿಷ್ಠಾನ (ರಿ) ಉಡುಪಿ
ಪು. ೮೨, ಡೆ. ೧/೮, ರೂ. ೨೫/-.

ಕೋಟಿ ಚೆನ್ನಯರ ಪೂರ್ವಕಥೆ, ಪುರಾಣ ಐತಿಹ್ಯ, ಅವರ ತಾಯಿ, ಅವರ ಹುಟ್ಟು ಸಾಧನೆ ಏನು? ಇಂದು ಅಸಾಧ್ಯ ದೈವಗಳಾಗಿರುವ ಅವರ ಹಿನ್ನೆಲೆ ಮಹತ್ವವೇನು? ಗರೊಡಿಗಳಲ್ಲಿ ನಡೆಯುವ ವಿಧಿ ಆಚರಣೆ ಆರಾಧನೆಗಳ ವೈಶಿಷ್ಟ್ಯಗಳೇನು? ಮುಂತಾದವುಗಳ ಅಧ್ಯಯನ ಈ ಕೃತಿಯಲ್ಲಿದೆ.

ದೇವಿಪ್ರಸಾದ್ ಸಂಪಾಜೆ (ಸಂ), ೨೦೦೩
ಕೊಡಗಿನಲ್ಲಿ ಭಾಷಾಸಾಂಸ್ಕೃತಿಕ ಸಾಮರಸ್ಯ (ಸಂಶೋಧನಾ ಲೇಖನಗಳು)
ಅಮರ ಕ್ರಾಂತಿ ಉತ್ಸವ ಸಮಿತಿ ಸುಳ್ಯ, ಡೆ. ೧/೮, ಪು. ೧೦೨, ರೂ. ೬೦/-

ದ.ಕ., ಕೊಡಗಿನ ಚರಿತ್ರೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಿ ಇದು. ಬೇರೆ ಬೇರೆ ನೆಲೆಗಟ್ಟುಗಳಿಂದ, ಸಮುದಾಯಗಳಿಂದ, ಭಾಷಾ ಪ್ರಕಾರಗಳಿಂದ ಕೊಡಗನ್ನು ಮತ್ತು ಕೊಡಗು ಭಾಷೆಯನ್ನು ತುಲನೆ ಮಾಡುವ ಪ್ರಯತ್ನ ಈ ಕೃತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ತುಳು, ಅರೆಭಾಷೆ, ಹವ್ಯಕ, ಮಲಯಾಳಿ ಭಾಷೆಗಳು ಮತ್ತು ಸಂಸ್ಕೃತಿಗಳು ಕೊಡಗು ಭಾಷಾ ಸಮುದಾಯಗಳೊಂದಿಗೆ ಅಂತರ್ಗತವಾಗಿರುವುದನ್ನು ಇಲ್ಲಿನ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ. ಉದಾ: ‘ತುಳು ಕೊಡವ ಭಾಷಾ ಸಾಂಸ್ಕೃತಿಕ ಸಂಬಂಧ’ ಪೂವಪ್ಪ ಕಣಿಯೂರು (ಪು. ೨೭-೪೨) ತುಳು ಹಾಗೂ ಕೊಡವದ ಸಂಬಂಧವನ್ನು ಸಾಹಿತ್ಯ – ಸಾಂಸ್ಕೃತಿಕ ಅಂಶಗಳಿಂದ ವಿಶ್ಲೇಷಿಸಲಾಗಿದೆ.

ನಡ್ಕ ಡಿ.ಜಿ., ೨೦೦೩
ಕೋಟಿ ಚೆನ್ನಯ (ಜಾನಪದ ಅಧ್ಯಯನ)
ಜೀರ್ಣೋದ್ಧಾರ ಸಮಿತಿ ಐವತ್ತೊಕ್ಕು ಶ್ರೀ ಮಹಾವಿಷ್ಣು ದೇವಸ್ಥಾನ ಐವತ್ತೊಕ್ಲು
ಡೆ. ೧/೮, ಪು. ೭೮+೪+೨ ರೂ. ೫೫/-

ಕೋಟಿ ಚೆನ್ನಯರ ಇತಿಹಾಸದ ಅಧ್ಯಯನ ಕೃತಿ.

ನಡ್ಕ ಡಿ.ಜಿ., ೨೦೦೪
ಅರಸು ದೈವಗಳು ಮತ್ತು ಇಕ್ಕೇರಿ ಅರಸರು
ಜಾನಪದ ಕೂಡುಕಟ್ಟು ಸುಳ್ಯ ಡೆ. ೧/೮, ಪುಟ : ೮೦, ಬೆಲೆ : ರೂ. ೩೦/-

ಅರಸು ದೈವಗಳ ಮತ್ತು ಇಕ್ಕೇರಿ ಅರಸರ ಒಂದು ಸ್ಥೂಲ ಅಧ್ಯಯನ ಈ ಗ್ರಂಥದಲ್ಲಿದೆ.

ನವೀನ್ ಕುಮಾರ್ ಮರಿಕೆ, ೨೦೦೦
ತುಳುನಾಡಿನಲ್ಲಿ ಕೊರಗ ತನಿಯ (ಅಧ್ಯಯನ)
ಶ್ರೀ ಮಹಾಶಕ್ತಿ ಸಂಘ ಆರ್ಯಾಪು, ಪುತ್ತೂರು
ಡೆ. ೧/೮, ಪು. ೧೫+೬೧, ರೂ. ೩೦/-

ಕೊರಗ ತನಿಯನ ಹುಟ್ಟು, ಉಗಮ, ಪ್ರಸರಣವನ್ನು ಹೇಳುವ ಕೊರಗ ತನಿಯನ ಪಾಡ್ದನವನ್ನು ಗದ್ಯ-ಪದ್ಯರೂಪದಲ್ಲೂ ನೀಡಿ ಅದರ ಕನ್ನಡ ಅನುವಾದವನ್ನು ನೀಡಲಾಗಿದೆ. ಹಾಗೆಯೇ ಅಂಗರ ಬಾಕುಡ ದೈವದ ಕುರಿತ ಕಥೆಯನ್ನು ಹೇಳಲಾಗಿದೆ. ಹಾಗಾಗಿ ಪ್ರಸ್ತುತ ಸಂಗ್ರಹದಲ್ಲಿ ದಲಿತ ವರ್ಗದ ಎರಡು ದೈವಗಳ ಚರಿತ್ರೆಯನ್ನು ಸಮೀಕ್ಷಿಸಲಾಗಿದೆ.

ನವೀನ್‌ಕುಮಾರ್ ಮರಿಕೆ, ೨೦೦೬
ಕತ್ತಲಿನಿಂದ ಬೆಳಕಿಗೆ ಜಾನಪದೀಯ ಲೇಖನಗಳು
ಡೆ. ೧/೮, ಪು. ೮೮, ರೂ. ೫೦/-

ಭುತಾರಾಧನೆಗೆ ಸಂಬಂಧಿಸಿದ ಅಧ್ಯಯನ ಲೇಖನಗಳು.

ನಾಗೇಶ್ ಬಿ.ಆರ್., ೧೯೯೫
ಎದ್ದ ಬಿದ್ದ ತೆರೆಗಳು
ಕರ್ನಾಟಕ ಸಂಘ ಪುತ್ತೂರು, ಡೆ. ೧/೮, ಪು. ೮+೭೨, ರೂ. ೩೬/-

ದ.ಕ. ಜಿಲ್ಲೆಯಲ್ಲಿ ರಂಗಭೂಮಿ ನಡೆದು ಬಂದ ದಾರಿಯನ್ನು ನಿರೂಪಿಸುತ್ತದೆ. ತುಳು ನಾಟಕಗಳು ಬೆಳೆದು ಬಂದ ಬಗೆ, ಮಂಗಳೂರಿ ನಲ್ಲಿರುವ ತುಳು ನಾಟಕ ಸಂಸ್ಥೆಗಳು, ಮುಖ್ಯ ದಿಗ್ದರ್ಶಕರು, ಪ್ರಸಿದ್ಧವಾದತುಳು ನಾಟಕಗಳ ಬಗ್ಗೆಯೂ ಕೂಡ ‘ತುಳು ನಾಟಕಗಳು’ ಶೀರ್ಷಿಕೆಯಡಿ ಯಲ್ಲಿ ಮಾಹಿತಿ ದೊರೆಯುತ್ತದೆ. (ಪು. ೪೭-೫೨)

ನಾವಡ ಎ.ವಿ., ೧೯೯೯
ಒಂದು ಸೊಲ್ಲು ನೂರು ಸೊರ (ಜಾನಪದ ಪ್ರಬಂಧಗಳು)
ಕರ್ನಾಟಕ ಸಂಘ ಪುತ್ತೂರು, ಡೆ. ೧/೮, ಪು. ೧೨+೧೭೬, ರೂ. ೯೦/-

‘ಕನ್ನಡ ಜಾನಪದ ಅಧ್ಯಯನ – ಒಂದು ಬೀಸುನೋಟ’ – ಇದರಲ್ಲಿ ಕರ್ನಾಟಕ ಜಾನಪದ ಅಧ್ಯಯನದ ೪ ಕಾಲಘಟ್ಟಗಳ ಬಗ್ಗೆ ಹೇಳಲಾಗಿದೆ. ಪಾಡ್ದನಗಳ ಕುರಿತು, ಜನಪದ ನಂಬಿಕೆಗಳ ಕುರಿತು ಜಾನಪದ ಪಠ್ಯ ದಾಖಲಾತಿ ಮತ್ತು ಸಂಪಾದನೆಯ ಕುರಿತು, ಹಾಗೆಯೇ ಜನಾಂಗದಲ್ಲಿ ಬರುವಂಥ ಖಾರ್ವಿಗಳ ಕುರಿತ ಲೇಖನಗಳು ಇಲ್ಲಿವೆ: ‘ತುಳು ಪಾಡ್ದನದ ಅಧ್ಯಯನ : ಒಂದು ವಿವೇಚನೆ’, ‘ಜನಪದ ನಂಬಿಕೆಗಳು : ತಾತ್ವಿಕ ವಿಶ್ಲೇಷಣೆ’, ‘ಜಾನಪದ ಪಠ್ಯ ದಾಖಲಾತಿ ಮತ್ತು ಸಂಪಾದನೆ’, ‘ಯಕ್ಷಗಾನ ಮತ್ತು ಆಧುನಿಕ ಸಂದೇಶ’, ‘ಪಾಡ್ದನಗಳ ಪ್ರದರ್ಶನ ಸಂದರ್ಭ ಹಾಗೂ ವರ್ಗೀಕರಣ’, ‘ಕಡಲ ಜೀವಿಗಳು: ಕೊಂಕಣ ಖಾರ್ವಿ’ ಇಂಥ ೧೩ ಲೇಖನಗಳು ಈ ಕೃತಿಯಲ್ಲಿವೆ. ಕು.ಶಿ. ಜಾನಪದ ಪ್ರಶಸ್ತಿ ಹಾಗೂ ವರ್ಧಮಾನ (ಹಿರಿಯ) ಪ್ರಶಸ್ತಿ ಗಳಿಸಿದ ಕೃತಿ.

ನಾವಡ ಎ.ವಿ., ೧೯೯೩
ಜಾನಪದ ಸಮಾಲೋಚನ (ವಿಚಾರಗೋಷ್ಠಿಯ ಪ್ರಬಂಧ ಸಂಗ್ರಹ)
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು
ಡೆ. ೧/೮, ಪು. ೧೨+೧೯೨, ರೂ. ೩೦/-

ಒಟ್ಟು ೮ ಸಂಶೋಧನ ಲೇಖನಗಳಿವೆ. ಮೊದಲ ನಾಲ್ಕು ಲೇಖನಗಳಲ್ಲಿ ಆಧುನಿಕ ಜಾನಪದ ಸಿದ್ಧಾಂತಗಳ ಹಿನ್ನೆಲೆಯನ್ನೇ ವಿಶ್ಲೇಷಣೆಗೊಂಡ ವೈಜ್ಞಾನಿಕ ದೃಷ್ಟಿಕೋನದ ಬರಹಗಳಿವೆ. (ತುಳುಮೌಖಿಕ ಕಾವ್ಯ ಪರಂಪರೆ, ನಾಗಮಂಡಲ, ದ.ಕ. ಗ್ರಾಮವೊಂದರ ಆರಾಧನೆಯ ಸಂಕೀರ್ಣ, ಜನಪದ ಕತೆಯ ಅಧ್ಯಯನದಲ್ಲಿ)‘ಕನಾಟಕ ಜಾನಪದಕ್ಕೆ ವಿದೇಶಿಯರ ಕೊಡುಗೆ’ ೧೯ನೇ ಶ.ದ. ಆರಂಭದಿಂದ ೨೦ನೇ ಶ.ದ. ಅಂತ್ಯದವರೆಗೆ ಕೆಲಸ ಮಾಡಿದ ಎಲ್ಲ ಪ್ರಮುಖ ವಿದೇಶೀ ವಿದ್ವಾಂಸರ ಸಾಧನೆಗಳ ಪರಿಚಯವಿದೆ. ‘ಕುಡುಬಿಯರು’, ‘ಕೊರಗ’ರ ಕುರಿತ ಲೇಖನಗಳು ಆಯಾ ಜನಾಂಗಗಳ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತವೆ. ‘ಹಗರಣಗಳು’- ದಕ್ಷಿಣ ಕನ್ನಡದ ಪ್ರದರ್ಶನ ಕಲೆಗಳಾದ ಜಾಲಾಟ, ಕಾಡ್ಯನಾಟ, ಪಾಣರಾಟ, ಕುಡುಬಿ ಕುಣಿತ ಮುಂತಾದವುಗಳ ಪರಿಚಯವನ್ನೊದಗಿಸುತ್ತದೆ.

ನಾವಡ ಎ.ವಿ., ೨೦೦೩
ತುಳು ಪಾಡ್ದನ ಬಂಧ ಮತ್ತು ವಿನ್ಯಾಸ (ವಿಮರ್ಶಾತ್ಮಕ ಅಧ್ಯಯನ)
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ಡೆ. ೧/೮, ಪು. ೧೨+೨೦೬, ರೂ. ೧೦೦/-

ತುಳುನಾಡಿನ ಭೌಗೋಳಿಕ, ಐತಿಹಾಸಿಕ ಹಿನ್ನೆಲೆಯನ್ನು ಆರಂಭದ ಲೇಖನದಲ್ಲಿ ವಿವರಿಸುತ್ತಾ ದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನದ ಕುರಿತು ವಿಶ್ಲೇಷಣೆ ಮಾಡುವ ಲೇಖನ, ಹಾಗೆಯೇ ‘ಪಾಡ್ದನ’ ಪದ ನಿಷ್ಪತ್ತಿ, ಪಾಡ್ದನಗಳ ಪ್ರದರ್ಶನ ಸಂದರ್ಭ, ಪಾಡ್ದನಗಳಲ್ಲಿ ಸಮಾಸ ರಚನೆ, ಭಾಷೆ ಶೈಲಿ, ಇತಿಹಾಸದ ಆಕರವಾಗಿ ಪಾಡ್ದನಗಳು, ಪಾಡ್ದನದಲ್ಲಿ ತುಳುವ ಸಂಸ್ಕೃತಿ, ಬಂಧುತ್ವ ವ್ಯವಸ್ಥೆ ಇತ್ಯಾದಿಗಳನ್ನು ವಿಶ್ಲೇಷಿಸುವಂಥ ಒಟ್ಟು ೧೫ ಲೇಖನಗಳು ಈ ಕೃತಿಯಲ್ಲಿದೆ.

ನಾವಡ ಎ.ವಿ., ೧೯೮೪
ವಿವಕ್ಷೆ (ಲೇಖನ ಸಂಕಲನ)
ಕರ್ನಾಟಕ ಸಂಘ, ಪುತ್ತೂರು, ಡೆ. ೧/೮, ಪು. ೭+೮೨, ರೂ. ೧೫/-

ತುಳುವಿಗೆ ಸಂಬಂಧಿಸಿದ ಲೇಖನಗಳು: ‘ತುಳು ಲಿಪಿ- ಕೆಲವು ವಿಚಾರಗಳು’ (ಪು. ೫೮-೬೧) – ತುಳು ಲಿಪಿಯ ಶಾಸನಗಳ ಕುರಿತಂತೆ ಕೆಲವೊಂದು ವಿಚಾರಗಳಿವೆ. ‘ತುಳು ಪಾಡ್ದನದ ವೈಶಿಷ್ಟ್ಯಗಳು ಹಾಗೂ ತುಳು ಪಾಡ್ದನಗಳು ತುಳು ಸಂಸ್ಕೃತಿಯನ್ನು ಹೇಗೆ ಒಳಗೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ‘ತುಳುಭಾಷೆಯ ಪ್ರಗತಿ’- (ಪು. ೭೦-೭೫) ತುಳುಭಾಷೆಯ ಪುನರುಜ್ಜೀವನಕ್ಕೆ ಕಾರಣಕರ್ತರಾದವರು, ತುಳುವಿನಲ್ಲಿ ಆಗಬೇಕಾದ ಕೆಲಸಗಳೇನು? ತುಳುವನ್ನು ಶಿಕ್ಷಣ ಮಾಧ್ಯಮವನ್ನಾಗಿ ಸೇರಿಸಬೇಕೇ ಎಂಬ ವಿಷಯಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ. ೧೯೮೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದ ಕೃತಿ.

ಪಾಂಡುರಂಗ ಡಿ. ಆರ್., ೧೯೯೦
ದಕ್ಷಿಣ ಕನ್ನಡ ಜಿಲ್ಲೆಯ ಬೈರರು ಸಾಹಿತ್ಯಿಕ – ಸಾಂಸ್ಕೃತಿಕ ಅಧ್ಯಯನ (ಪ್ರೌಢ ಪ್ರಬಂಧ)
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ
ಡೆ. ೧/೮, ಪು. ೨೫೬+೧೦, ರೂ. ೬೦/-

ಈ ಬುಡಕಟ್ಟಿನ ಮೂಲದ ಕುರಿತು ಆರಂಭದಲ್ಲಿ ಚರ್ಚಿಸಿ, ನಂತರ ಈ ಬೈ ಜನಾಂಗದ ಜೀವನ ವಿಧಾನ, ಸಂಪ್ರದಾಯಗಳು, ಕಲೆಗಳು, ಜನಪದ ಸಾಹಿತ್ಯ ಮುಂತಾದ ವಿಷಯಗಳ ಕುರಿತ ಅಧ್ಯಯನವನ್ನು ನಡೆಸಲಾಗಿದೆ.

ಪಕಿರ ಮುಲಯ ಬಿ., ೧೯೨೬
ಅಳಿಯ ಸಂತಾನ ಕಟ್ಟಿನ ತುಳುಜನರ ಶುಭಾಶಯ ಕಟ್ಟುಕಟ್ಟಳೆಗಳು
ರೂ. ೮ ಆಣೆ

ಈ ಪುಸ್ತಕದಲ್ಲಿ ಹೆಚ್ಚಾಗಿ ಅಳಿಯಕಟ್ಟಿನವರು ಆಚರಿಸತಕ್ಕ ಜನನ, ನಾಮಕರಣ, ಚೌಲ, ಋತುಶಾಂತಿ, ಸೀಮಂತ, ವಿವಾಹ, ಕೂಡಾವಳಿ, ಮದುವೆ ಮರಣ ಕಾಲದ ವಿಧಿಗಳು ಮತ್ತು ಬೊಜ್ಜದ ಕ್ರಮ ಮುಂತಾದ ಸಂಸ್ಕಾರಗಳನ್ನು ಕೂಲಂಕಷವಾಗಿ ವಿವರಿಸಲಾಗಿದೆ.

ಪಾಟಾಳಿ ಕೆ.ಸಿ., ೧೯೮೯
ಶ್ರೀ ಪಡುಮಲೆ ಕ್ಷೇತ್ರದರ್ಶನ
ಶ್ರೀ ಭಗವತೀ ಪ್ರಕಾಶನ ಪಡುಮಲೆ, ಡೆ. ೧/೮, ಪು. ೧೨+೪೪, ರೂ. ೮/-

ಇದರಲ್ಲಿ ಲೇಖಕರು ‘ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರು’, ‘ಪೂಮಾಣಿ ಕಿನ್ನಿಮಾಣಿ ದೇವಸ್ಥಾನ’, ‘ಕೋಟಿ ಚೆನ್ನಯರ ಹುಟ್ಟೂರು’ ಎಂಬ ಪಡುಮಲೆಯ ಮೂರು ಕಾರಣಿಕ ವಿಷಯ ಕ್ಷೇತ್ರಗಳ ವಿವರವನ್ನು ಸಂಧಿ, ಪಾಡ್ದನ, ಚರಿತ್ರೆಗಳ ಮೂಲಕ ವಿವರಿಸಲೆತ್ನಿಸಿದ್ದಾರೆ.

ಪೀಟರ್ ವಿಲ್ಸನ್ ಪ್ರಭಾಕರ್, ೧೯೮೯
ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಶನ್ (ಪ್ರೌಢಪ್ರಬಂಧದ ಸಾರಾಂಶ)
ಕನ್ನಡ ಸಂಘ, ವಿವೇಕಾನಂದ ಕಾಲೇಜು, ಪುತ್ತೂರು. ಪು. ೮+೯೮, ರೂ. ೫/-

ದ.ಕ. ಜಿಲ್ಲೆಯ ಭಾಷೆ, (ತುಳು, ಕನ್ನಡ ಹಾಗೂ ಇತರ ಭಾಷೆಗಳಲ್ಲಿನ ಬೆಳವಣಿಗೆಯ ಪಾತ್ರ) ಸಾಹಿತ್ಯ, ಸಂಸ್ಕೃತಿ ಬೆಳೆಸಲು, ಕೃಷಿ, ಕೈಗಾರಿಕೆ, ಆರೋಗ್ಯ ಸುಧಾರಿಸಲು ಬಾಸೆಲ್ ಮಿಶನ್ ನಡೆಸಿದ ಚಟುವಟಿಕೆಗಳು, ಇತರೆಡೆಗಳಲ್ಲಿ ಸ್ಥಾಪಿಸಿದ ಕೇಂದ್ರಗಳು, ಸ್ಥಳೀಯ ಸ್ವಾತಂತ್ರ್ಯ ಹೋರಾಟದ ಕಡೆಗೆ ಅದರ ಧೋರಣೆ, ಬ್ರಿಟಿಷ್ ಸರಕಾರದೊಂದಿಗೆ ಇದ್ದ ಸಂಬಂಧ ಇತ್ಯಾದಿ ಚರಿತ್ರೆಯ ತುಣುಕುಗಳ ಸಂಗ್ರಹವಿದೆ.

ಪುರುಷೋತ್ತಮ ಬಿಳಿಮಲೆ, ೧೯೯೦
ಕರಾವಳಿ ಜಾನಪದ (ಜಾನಪದ ಸಂಶೋಧನಾ ಲೇಖನಗಳು)
ಡೆ. ೧/೮, ಪು. ೧೭+೭, ರೂ. ೭೫/-

೧೦ ಸಂಪ್ರಬಂಧಗಳಿವೆ ಜನಪದ ಕಾವ್ಯ, ಸಿದ್ಧವೇಷ, ಕಂಬುಳ, ಜನಪದ ಕತೆ, ಐತಿಹ್ಯ, ಉರುಗಳು, ಮದುವೆ, ಜೋಗಿಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ಇಲ್ಲಿದೆ. ಪೂರಕವಾಗಿ ಛಾಯಾಚಿತ್ರಗಳೂ ಇವೆ.

ಪುರುಷೋತ್ತಮ ಬಿಳಿಮಲೆ, ೧೯೯೭
ಕೂಡುಕಟ್ಟು (ಜಾನಪದ ಅಧ್ಯಯನ ಲೇಖನಗಳು)
ಆನಂದಕಂದ ಗ್ರಂಥಮಾಲೆ ಮಲ್ಲಾಡಿಹಳ್ಳಿ, ಡೆ. ೧/೮, ರೂ. ೧೫೦/-

೧೫ ಲೇಖನಗಳ ಸಂಪುಟ, ಮೈಲಾರಲಿಂಗನ ಮದುವೆ, ಸಾವಿನಾಚರಣೆ, ಪಂಚಭೂತಗಳ ಪರಿಕಲ್ಪನೆ, ಸಾಂಸ್ಕೃತಿಕ ಅನನ್ಯತೆ, ಅರಣ್ಯ ಜಾನಪದ, ಜಾನಪದ ಲೋಕದೃಷ್ಟಿ, ಸಂವಹನ, ದಾಖಲಾತಿ, ಪುರಾಣ, ಯಕ್ಷಗಾನ, ಜನಪದ ಕಥೆ, ಆಟ, ನಾಗಮಂಡಲ, ಜನಸಂಸ್ಕೃತಿ, ಮಹಿಳಾ ಜಾನಪದ ಮತ್ತಿತರ ವಿಷಯಗಳ ಕುರಿತ ಚರ್ಚೆ ಈ ಕಲೆಗಳನ್ನು ಬಿಂಬಿಸುವ ಛಾಯಾಚಿತ್ರಗಳೂ ಇವೆ.

ಪೂವಪ್ಪ ಕಣಿಯಾರು, ೨೦೦೪
ಪೂಕರೆ ಮತ್ತು ಇತರ ಜಾನಪದೀಯ ಲೇಖನಗಳು
ರಾಜ್ ಪ್ರಕಾಶನ, ಬನ್ನಿಮಂಟಪ, ಮೈಸೂರು – ೫೭೦ ೦೧೫
ಡೆ. ೧/೮, ಪುಟಗಳ : ೧೬೦, ಬೆಲೆ : ರೂ. ೧೨೫/-

ಪ್ರಾದೇಶಿಕ ನೆಲೆಯಲ್ಲಿ ತುಳುವನ್ನು ಪ್ರಧಾನ ಸಂಪರ್ಕ ಭಾಷೆಯಾಗುಳ್ಳ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಇಲ್ಲಿನ ಸಾಂಸ್ಕೃತಿಕ ವಿವರಗಳುಳ್ಳ ಹನ್ನೊಂದು ಲೇಖನಗಳ ಸಂಕಲನವಿದು.

ಪೂಂಜ ಯಂ ಆರ್.ಎಚ್.
ಸಮಾಜದ ನಡವಳಿಕೆಗಳ ಸುಧಾರಣೆ
ಬಂಟರ ಸಂಘ ಮುಲ್ಕಿ

ಬಂಟ ಸಮುದಾಯದ ಮದುವೆಯ ವಿಧಿ -ವಿಧಾನ, ನಡಾವಳಿಯ ವಿವೇಚನೆ ಇದರಲ್ಲಿದೆ. ಹಾಗೆಯೇ ಅನೇಕ ಉತ್ತಮ ಸಲಹೆ- ಸೂಚನೆಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ತಪ್ಪುಗಳನ್ನು ತಿಳಿಸಿ ಅವುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ.

ಬಾಬು ಅಮೀನ್ ಬನ್ನಂಜೆ, ೧೯೯೪
ತುಳು ಜನಪದ ಆಚರಣೆಗಳು
ಗುರುಭಾರತಿ ಅಧ್ಯಯನ ಕೇಂದ್ರ, ಡೆ. ೧/೮, ಪು. ೧೧+೧೪೯, ರೂ. ೫೦/-

ತುಳುವರು ಆಚರಿಸುವಂಥ ಆಚರಣೆಗಳು ಧಾರ್ಮಿಕ ವಿಧಿ ವಿಧಾನಗಳು, ಹಬ್ಬ – ಹರಿದಿನಗಳ ಬಗ್ಗೆ ಮಾಹಿತಿ ನೀಡುವಂಥ ಕೃತಿ. ಉದಾ: ಕಜಂಬು ಮದುವೆ (ಗಂಡು ಮಕ್ಕಳಿಗೆ ಮುಖಕ್ಷೌರ ಮಾಡುವ ಆಚರಣೆ) ಮದುವೆ, ಬಯಕೆ, ಮರಣ, ಬೊಜ್ಜ ಇಂಥ ಸಂಸ್ಕಾರಗಳು ಕುರಿತು, ಪತ್ತನಜೆ, ಕೆಡ್ಡಸ, ದೀಪಾವಳಿ, ಕದಿರ ಹಬ್ಬ ಇತ್ಯಾದಿ ಹಬ್ಬಗಳ ಕುರಿತಂತೆ ಮಾಹಿತಿ ನೀಡುತ್ತದೆ.

ಬಾಬು ಅಮೀನ್ ಬನ್ನಂಜೆ / ಮೋಹನ್ ಕೋಟ್ಯಾನ್, ೧೯೯೦
ತುಳುನಾಡ ಗರೊಡಿಗಳ ಸಾಂಸ್ಕೃತಿಕ ಅಧ್ಯಯನ
ಡೆ. ೧/೮, ಪು. ೩೮೧+೩+೩೦, ರೂ. ೨೫೦/-

ಈ ಗ್ರಂಥದಲ್ಲಿ ‘ಗರೊಡಿ’ ಶಬ್ದ ನಿಷ್ಪತ್ತಿ, ತುಳುನಾಡ ‘ಗರೊಡಿ’ ಮತ್ತು ಕೇರಳದ ‘ಕಳರಿಗಳ ಸಂಬಂಧ, ಗರೊಡಿಗಳ ನಿರ್ಮಾಣ, ಪ್ರಸರಣ, ಗರೊಡಿಗಳ ವಾಸ್ತುರಚನೆ, ಗರೊಡಿಯಲ್ಲಿನ ಇತರ ದೈವಶಕ್ತಿಗಳು, ಕಲಾವಸ್ತುಗಳು, ಆರಾಧನಾ ವಿಧಾನ, ದರ್ಶನಪಾತ್ರಿಗಳ ಹಾಗೂ ನೇಮಕ್ಕೆ ಕಟ್ಟುವವರ ವಿಚಾರ, ಬ್ರಹ್ಮ ಬೈದರ್ಕಳ ಗರೊಡಿಗೂ, ಶೈವ ದೇಗುಲಕ್ಕೂ ಇರುವ ಸಾಮ್ಯ, ಗರೊಡಿಗಳ ಜಾನಪದ ಮೌಲ್ಯ ಇತ್ಯಾದಿಗಳನ್ನು ವಿವೇಚಿಸಲಾಗಿದೆ.

ಬಾಬು ಅಮೀನ್ ಬನ್ನಂಜೆ, ೨೦೦೨
ದೈವಗಳ ಮಡಿಲಲ್ಲಿ (ಜಾನಪದ ಸಂಕಲನ)
ಕೆಮ್ಮಲಜೆ ಜಾನಪದ ಪ್ರಕಾಶನ ಉಡುಪಿ, ಡೆ. ೧/೮, ಪು. ೯+೯೮, ರೂ. ೪೫/-

ಈ ಸಂಕಲನದಲ್ಲಿ ಅಡ್ಕದ ಕಟ್ಟೆಯ ಪಂಚ ಧೂಮಾವತಿ, ಬೀರು ಕಲ್ಕುಡ, ಒಡಿಲ್ತಾಯ, ಕೋಡಿಯ ಬಬ್ಬು, ಕಲ್ಮಾಡಿಯ ಬಗ್ಗು ಪಂಜುರ್ಲಿ ಮತ್ತು ಮಾಯಾಂದಾಲ್ ಈ ೬ ಶಕ್ತಿಗಳನ್ನು ಪರಿಚಯಿಸಿ ಅಡ್ಕದ ಕಟ್ಟೆಯ ಪಂಚ ಧೂಮಾವತಿಯ ಪ್ರಸರಣವನ್ನು ಮಾತ್ರ ವಿವರಿಸಲಾಗಿದೆ.

ಬಾಬು ಶಿವಪೂಜಾರಿ, ೨೦೦೩
ಬಿಲ್ಲವರು ಒಂದು ಅಧ್ಯಯನ (ಅಧ್ಯಯನ)
ಬಿಲ್ಲವ ಜಾಗೃತಿ ಬಳಗ ಮುಂಬಯಿ, ಡೆ. ೧/೮, ಪು. ೮+೧೩೯, ರೂ. ೧೦೦/-

ಪ್ರಾಚೀನ ಬಿಲ್ಲವರ ಸ್ಥಿತಿಗತಿಗಳನ್ನು ನೋಡುವ ಪ್ರಯತ್ನವನ್ನು ಇದರಲ್ಲಿ ಮಾಡಲಾಗಿದೆ. ಬಿಲ್ಲವರ ಸ್ಥಿತಿಗತಿಗಳನ್ನು ನೋಡುವ ಪ್ರಯತ್ನವನ್ನು ಇದರಲ್ಲಿ ಮಾಡಲಾಗಿದೆ. ಬಿಲ್ಲವರ ಬಗೆಗೆ ದಾಖಲಾದ ಲಭ್ಯ ಶಿಲಾ ಶಾಸನಗಳನ್ನು, ಪಾಡ್ದನಗಳಲ್ಲಿ ವರ್ಣಿಸಲಾದ ಬಿಲ್ಲವ ಜನಾಂಗದ ಕೆಲವು ಐತಿಹ್ಯಗಳನ್ನು, ತುಳುನಾಡ ಚರಿತ್ರೆಕಾರರು ಉಲ್ಲೇಖಿಸಿದ ವಿಷಯಗಳನ್ನು ತೆಗೆದುಕೊಂಡು ಕೃತಿ ರಚನೆಗೊಂಡಿದೆ.

ಮಂದಾಕಿನಿ ಪುರೋಹಿತ್
ತುಳುನಾಡಿನ ಜಾನಪದ ಅಧ್ಯಯನ
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ
ಡೆ. ೧/೮, ಪು. ೩೨+೪

ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರವು ನಡೆಸಿದ್ದ ಅಧ್ಯಯನ ಶಿಬಿರದ ವರದಿ ಇದಾಗಿದೆ. ತುಳುನಾಡಿನ ಭೂತಗಳಾದ ಪಂಜುರ್ಲಿ, ನಂದಿಗೋಣ ಇತ್ಯಾದಿಗಳ ಬಗ್ಗೆ, ಸಿರಿಜಾತ್ರೆ, ಭೂತಕೋಲಗಳ ಬಗೆಗಿನ ಮಾಹಿತಿಯನ್ನು ಲೇಖಕಿ ನೀಡಿದ್ದಾರೆ.