ಮ.ವಿ.ಪು., ೧೯೯೨
ತೌಳವ ಆದರ್ಶ, ಸಂಸ್ಕೃತಿ, ಇತಿಹಾಸ ಮುಪ್ಪುರಿಯಾಗಿರುವ ಭಾರದ್ವಾಜ ಸಂಹಿತೆ ಮಹಾಗ್ರಂಥಗಳು
ತುಳುವೆರೆಂಕುಲು ಕುಡಲ ಮಂಗಳೂರು
ಕ್ರೌ. ೧/೮, ಪುಟಗಳು ೮+೫೩, ರೂ. ಉಚಿತ

ತೌಳವ ಸಾಮ್ರಾಜ್ಯದ ಹಿರಿಮೆ – ಗರಿಮೆಗಳನ್ನು ‘ಭಾರದ್ವಾಜ ಸಂಹಿತೆ’ಯ ಮೂಲಕವಾಗಿ ಕಂಡುಕೊಂಡು ಸಾಹಿತ್ಯದಲ್ಲಿ ತರುವ ಪ್ರಯತ್ನ ಮಾಡಿದ್ದಾರೆ. ತುಳುವ ಆದರ್ಶ, ಸಂಸ್ಕೃತಿ, ಇತಿಹಾಸವನ್ನು ಮತ್ತೆ ಮತ್ತೆ ವಿಮರ್ಶಿಸಿ ಜನಸಾಮಾನ್ಯರಿಗೆ ತಿಳಿಸಲೆತ್ನಿಸಿದ್ದಾರೆ.

ಮುದ್ದು ಮೂಡುಬೆಳ್ಳೆ, ೨೦೦೦
ಕಾಂತಬಾರೆ – ಬೂದಬಾರೆ
ಗೆಳೆಯರ ಬಳಗ ಊರ್ವಸ್ಟೋರ್ಸ್ ಮಂಗಳೂರು
ಡೆ. ೧/೮, ಪು. ೧೩೬+೧೩, ರೂ. ೪೫/-

ಮುಲ್ಕಿ ಸೀಮೆಯ ಸಾಂಸ್ಕೃತಿಕ ಅವಳಿ ವೀರರ ಬಗೆಗಿನ ಅಧ್ಯಯನವಾಗಿದೆ. ಹಾಗಾಗಿ ಕಾಂತಬಾರೆ ಬೂದಬಾರೆಯರ ಕುರಿತು ಈವರೆಗೆ ನಡೆದ ಕೆಲಸಗಳ ಬಗ್ಗೆ ಪರಿಶೀಲಿಸಿ ಅವರ ಇತಿಹಾಸ, ಅವರ ಬಗೆಗಿನ ಪಾಡ್ದನ, ಸಂಧಿಗಳು, ಆರಾಧನಾ ರಂಗದಲ್ಲಿ ಕಾಂತಬಾರೆ ಬೂದಬಾರೆಯರು ಇತ್ಯಾದಿಗಳ ಸಮಗ್ರ ಅಧ್ಯಯನ ಗ್ರಂಥ ಇದಾಗಿದೆ. ಇವರ ಕಥಾನಕದೊಂದಿಗೆ ಕೋಟಿ ಚೆನ್ನಯರ ಕಥಾನಕವನ್ನು ಸೇರಿಸಿ ಎರಡು ಯಮಳ ವೀರ ವರ್ಗದವರ ನಡುವೆ ಕಾಳಗ ಸಂಭವಿಸಿಲ್ಲ ಎಂದು ಲೇಖಕರು ಊಹಿಸುತ್ತಾರೆ. ಅಲ್ಲದೆ ಕಾಂತಬಾರೆ – ಬೂದಬಾರೆಯರಿಗೆ ಸಂಬಂಧಿಸಿದಂತೆ ಕೆಲವು ಛಾಯಾ ಚಿತ್ರಗಳನ್ನೂ ನೀಡಿದ್ದಾರೆ.

ಮುದ್ದು ಮೂಡುಬೆಳ್ಳೆ, ೨೦೦೩
ನಾಡುನುಡಿಯಿದೊಂದು ಬಗೆ (ಅಧ್ಯಯನ ಗ್ರಂಥ)
ಹೇಮಾಂಶು ಪ್ರಕಾಶನ, ಮಂಗಳೂರು
ಡೆ. ೧/೮, ಪು. ೧೧+೧೮೭, ರೂ. ೬೯/-

ಈ ಕೃತಿಯಲ್ಲಿ ‘ಕ್ಷೇತ್ರಾಧ್ಯಯನಗಳು’ ಹಾಗೂ ‘ತುಳುನಾಡು – ನುಡಿ’ ಎಂಬ ಎರಡು ಭಾಗಗಳಿವೆ. ಕ್ಷೇತ್ರಾಧ್ಯಯನಗಳು ಭಾಗದಲ್ಲಿ – ಬೆಳ್ಳೆ – ಕಟ್ಟಿಂಗೇರಿ, ಎಡ್ಮೇರಿನ ಶ್ರೀ ಧೂಮಾವತಿ / ಜುಮಾದಿ ದೈವಸ್ಥಾನ, ಶ್ರೀ ಕ್ಷೇತ್ರ ಮುದ್ರಾಡಿ, ಸಸಿಹಿತ್ಲು ಸಾರಂತರಾಯ ಗರೊಡಿ ಇತ್ಯಾದಿಗಳ ಕುರಿತು ಮಾಹಿತಿಗಳಿಗದ್ದರೆ, ತುಳು – ನಾಡು – ನುಡಿ ಭಾಗದಲ್ಲಿ – ತುಳುನಾಡಿನ ಕೃಷಿ, ವೃತ್ತಿಗಳು, ಜನಪದ ವಾದ್ಯಗಳ ಬಗ್ಗೆ ಮಾಹಿತಿ ನೀಡುವ ಲೇಖನಗಳೊಂದಿಗೆ, ತುಳು ಕಾದಂಬರಿ, ಸಣ್ಣಕಥೆ, ನಾಟಕ ರಂಗ, ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಲೇಖನಗಳೂ ಇವೆ. ಪೂರಕವಾದ ಛಾಯಾಚಿತ್ರಗಳೂ ಇವೆ.

ಮುದ್ದು ಮೂಡುಬೆಳ್ಳೆ, ೨೦೦೫
ತುಳು ರಂಗಭೂಮಿ
ಸಾಹಿತ್ಯ ಸಂಸ್ಕೃತಿ ವೇದಿಕೆ, ಬೆಳ್ಳೆ, ಡೆ. ೧/೮, ಪುಟ : ೭+೧೨೧, ಬೆಲೆ : ರೂ. ೬೦/-

ಸ್ವಾತಂತ್ರ್ಯಪೂರ್ವ ನಾಟಕಗಳಿಂದ ತೊಡಗಿ ತುಳುವಿನಲ್ಲಿ ಪ್ರಯೋಗವಾದ ಅನುವಾದಿತ ನಾಟಕಗಳವರೆಗೆ ವಿವಿಧ ನೆಲೆಗಳಲ್ಲಿ ವಿಷಯ ಮಂಡನೆ ಮಾಡಲಾಗಿದೆ. ಸಾಂದರ್ಭಿಕ ನೆರಳುಚಿತ್ರಗಳನ್ನು ನಡೆಸಿ ಅರ್ಥಪೂರ್ಣ ಅಧ್ಯಯನ ನಡೆಸಲಾಗಿದೆ. ತುಳು ನಾಟಕಗಳ ಒಂದು ಯಾದಿಯನ್ನು ಕೊಟ್ಟಿರುವುದು ಅತ್ಯಂತ ಉಪಯುಕ್ತವಾಗಿದೆ.

ಮೋಹನ್ ಕೋಟ್ಯಾನ್ / ದಾಮೋದರ ಕಲ್ಮಾಡಿ, ೧೯೯೫
ಕೋಟಿ ಚೆನ್ನಯ ಮೌಖಿಕ ಸಾಹಿತ್ಯದ ಅಂತರಾತ್ಮ ದರ್ಶನ
ಡೆ. ೧/೮, ಪು. ೫೦, ರೂ. ೧೫/-

ತುಳುನಾಡಿನ ಜನಪದ ವೀರರಾದ ಕೋಟಿಚೆನ್ನಯರ ಬಗ್ಗೆ ವಿವರಿಸಿದ ಕೃತಿ ಸಂಕಲನ:

ಮೋಹನ್ ಕೃಷ್ಣ ರೈ. ಕೆ., ೧೯೯೯
ತುಳು ಸಂಸ್ಕೃತಿ ಚತುರ್ಮುಖೀ ಅಧ್ಯಯನ
ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ, ಡೆ. ೧/೮, ಪು. ೧೧+೮೩, ರೂ. ೫೦/-

ತುಳುನಾಡಿನ ಬದುಕನ್ನು ಪರಿಚಯಿಸುವ ೪ ಅಧ್ಯಾಯಗಳಿವೆ. ‘ಸಂಸ್ಕೃತಿ ಮುಖ’- ಮೌಖಿಕ ಆಕರಗಳನ್ನು ಬಳಸಿ ಸಂಸ್ಕೃತಿ ಚರಿತ್ರೆಯನ್ನು ನಿರ್ಮಿಸುವ ವಿಧಾನದ ಕುರಿತ ಚರ್ಚೆಯಿದೆ. ‘ಜಾತಿ ಮುಖ’- ಧಾರ್ಮಿಕ ಮತ್ತು ರಾಜಕೀಯ ಶಕ್ತಿಗಳು ತುಳುನಾಡಿನ ಜಾತಿ ವ್ಯವಸ್ಥೆಯ ನಿರ್ಧಾರಕ ಶಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿರುವುದರ ಸ್ವರೂಪದ ವಿವರಣೆ. ‘ಧರ್ಮಮುಖ’- ತುಳು ಸಮಾಜದ ತಾತ್ವಿಕ ಮತ್ತು ಸಾಮಾಜಿಕ ಚೌಕಟ್ಟು ಧಾರ್ಮಿಕ ಆಚರಣೆಗಳ ಮೂಲಕ ಹೇಗೆ ರೂಪುಗೊಂಡಿದೆ ಎನ್ನುವುದರ ಅಧ್ಯಯನ ಇಲ್ಲಿದೆ. ‘ರಂಗ ಮುಖ’- ತುಳುನಾಡಿನ ರಂಗಪ್ರಭೇದಗಳಾದ ಯಕ್ಷಗಾನ ಮತ್ತು ತಾಳ ಮದ್ದಳೆಯಲ್ಲಿನ ವಾಸ್ತವತೆಯ ಕುರಿತ ಚರ್ಚೆ ಇದೆ.

ಯಜ್ಞಾವತಿ ಕೇಶವ ಕಂಗೆನ್, ೧೯೯೪
ಸಾಂಸ್ಕೃತಿಕ ತುಳುನಾಡು (ಅಧ್ಯಯನ)
ಚಂದ್ರಿಕಾ ಪ್ರಕಾಶನ, ಮಂಗಳೂರು, ಡೆ. ೧/೮, ಪು. ೧೦+೮೦, ರೂ. ೩೦/-

ತುಳುನಾಡಿನ ವಿವಿಧ ಹಬ್ಬ, ಕಲೆ, ವಿನೋದಗಳ ಕುರಿತು ಸಂಕ್ಷಿಪ್ತ ಪರಿಚಯ ನೀಡುವ ಪ್ರಯತ್ನ ಈ ಕೃತಿಯಲ್ಲಿ ಆಗಿದೆ.

ರಘುಪತಿ ಭಟ್ಟ ಕೆಮ್ತೂರ, ೧೯೭೯
ತುಳುನಾಡಿನ ಸ್ಥಳನಾಮಗಳು (ಸಂಶೋಧನೆ)
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಪು. ೧೧೫+೨೩+೯, ರೂ. ೩.೫೦

ತುಳುನಾಡಿನ ಸ್ಥಳನಾಮಗಳ ಅಧ್ಯಯನ ಈ ಕೃತಿಯಲ್ಲಿದೆ. ಜಲವಾಚಕ ಸ್ಥಳನಾಮಗಳು, ಭೂಸ್ಥಿತಿ ವಾಚಕ ಸ್ಥಳನಾಮಗಳೂ ಸ್ಥಳನಾಮಗಳ ಭಾಷಾ ವೈಜ್ಞಾನಿಕ ಹಿನ್ನೆಲೆ, ಸ್ಥಳನಾಮ ಅಧ್ಯಯನದ ಪ್ರಯೋಜನಗಳನ್ನು ಕುರಿತು ಪರಿಶೀಲಿಸಲಾಗಿದೆ.

ರಮೇಶ್ ಕೆ.ವಿ., ೧೯೭೮
ತುಳುನಾಡಿನ ಶಾಸನಗಳು (ಸಂಪುಟ)
ಕ್ರೌ. ೧/೮, ಪು. ೨೩೯

ಇದರಲ್ಲಿ ತುಳುನಾಡಿನ ೯೩ ಶಾಸನಗಳ ಪರಿಚಯವಿದೆ.

ರಸಿಕ ಪುತ್ತಿಗೆ, ೧೯೬೭
ಧರ್ಮ ಅರಸು ಶ್ರೀ ತೋಡಕುಕ್ಕಿನಾರ್ ದೈವಸ್ಥಾನ ಪರಿಚಯ
ಕ್ರೌ. ೧/೮, ಪು. ೧೦+೪೮, ರೂ. ೭೫ ಪೈಸೆ

ಕಣಂತೂರು ತೋಡಕುಕ್ಕಿನಾರ್ ದೈವಸ್ಥಾನದ ಮತ್ತು ವಾರ್ಷಿಕ ಆರಾಧನೆಯ ಪರಿಚಯ ಕೃತಿ.

ರಾಜಾಗೋಪಾಲ ಕ. ವೆಂ. (ಸಂ), ೧೯೮೯
ತುಳುವರ ಆಚರಣೆಗಳಲ್ಲಿ ಕಲಾವಂತಿಕೆ (ಸಂಶೋಧನ ಲೇಖನಗಳ ಸಂಗ್ರಹ)
ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು
ಕ್ರೌ. ೧/೮, ಪು. ೧೨೮+೨೪, ರೂ. ೨೫/-

ನಾಗಾರಾಧನೆ, ಭೂತಾರಾಧನೆಗಳು ಒಳಗೊಳ್ಳುವ ಅಲಂಕರಣ ಮತ್ತು ಚಿತ್ರಣಗಳ ವಿವರಗಳನ್ನು ಈ ಗ್ರಂಥದಲ್ಲಿ ಪರಿಶೀಲಿಸಲಾಗಿದೆ. ಜನಪದ ಅಲಂಕರಣ, ಸಿರಿಜಾತ್ರೆ, ನಾಗಮಂಡಲ, ಮೆಕ್ಕೆ ಕಟ್ಟೆಯ ಉರುಗಳು, ಭಿತ್ತಿ ಚಿತ್ರಗಳು ಗೊಂಬೆಯಾಟ, ಭೂತಾರಾಧನೆಯ ಅಲಂಕರಣಗಳು, ಮುಖವಾಡಗಳ ಒಂದು ವಿಶೇಷ ಅಧ್ಯಯನ ಹೀಗೆ ವಿವಿಧ ವಿದ್ವಾಂಸರಿಂದ ರಚನೆಗೊಂಡ ೧೦ ಸಂಶೋಧನ ಲೇಖನಗಳಿವೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ (ಸಂ), ೨೦೦೨
ಆಟಿ (ಲೇಖನಗಳ ಸಂಗ್ರಹ)
ಜಾನಪದ ಕೂಡುಕಟ್ಟು ಸುಳ್ಯ, ಡೆ. ೧/೮, ಪು. ೮+೭೨, ರೂ. ೪೫/-

ಬೇರೆ ಬೇರೆ ಲೇಖಕರ ಒಟ್ಟು ೬ ಲೇಖನಗಳಿವೆ. ಆಟಿಯ ಆಚರಣೆಗಳು, ಆರಾಧನೆ, ವಿಧಿ – ನಿಷೇಧಗಳು, ಅಡುಗೆ, ಆಟ ಹಾಗೆಯೇ ಆಟ ತಿಂಗಳಲ್ಲಿ ಬರುವ ಮುಖ್ಯ ಕುಣಿತವಾದ ಆಟಕಳೆಂಜ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಈ ಕೃತಿಯಲ್ಲಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೯೮
ಕಲ್ಕುಡ – ಕಲ್ಲುರ್ಟಿ (ಸಂಸ್ಕೃತಿ ಶೋಧ)
ಸುಪ್ರಿಯಾ ಪ್ರಕಾಶನ ಪುತ್ತೂರು, ಡೆ. ೧/೮, ಪು.೮+೧೨೮, ರೂ. ೪೮/-

ಕಾರ್ಕಳದ ಗೊಮ್ಮಟ ಮೂರ್ತಿಯನ್ನು ಕೆತ್ತಿದ ಬೀರು ಕಲ್ಕುಡನ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಈ ಪುಸ್ತಕದಲ್ಲಿ ವಿಮರ್ಶಿಸಲಾಗಿದೆ. ಶಿಲ್ಪಿಯ ಕುಲದ ಬಗ್ಗೆಯೂ ಕೂಲಂಕಷವಾಗಿ ಸಂಶೋಧನೆಯನ್ನು ಇಲ್ಲಿ ನಡೆಸಲಾಗಿದೆ. ವಿಶ್ವಕರ್ಮ ಜನಾಂಗದ ವೃತ್ತಿಪರ ವಿವರಗಳನ್ನು ಸಾಂಸ್ಕೃತಿಕವಾಗಿ ಅಧ್ಯಯನ ಮಾಡುವ ಉದ್ದೇಶದಿಂದ ಕಲ್ಕುಡ- ಕಲ್ಲುರ್ಟಿ ಪಾಡ್ದನವನ್ನು ಚಾರಿತ್ರಿಕ ದಾಖಲೆಯಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಗಾಗಿ ಕಂಠಸ್ಥ ಪರಂಪರೆಯಲ್ಲಿ ಹುದುಗಿರುವ ಇತಿಹಾಸದ ವಿವರಗಳನ್ನು ಜನಾಂಗವೊಂದರ ಸಂಸ್ಕೃತಿ ಚರ್ಚೆಗೆ ಒಳಪಡಿಸಲಾಗಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ
ಜನಪದ ಕುಣಿತಗಳು

ತುಳುನಾಡಿನ ಪ್ರಮುಖ ಕುಣಿತಗಳಾದ ಆಟಕಳೆಂಜ, ಹೋಳಿ, ಮಾಯಿದ ಪುರುಷ, ಚೆನ್ನು, ಕರಂಗೋಲು, ಪಿಲಿಪಂಜಿಕುಣಿತ, ಸದ್ಧವೇಷ, ಕಂಗಿಲು, ಮಾದರಿಗಳ ಕುಣತಗಳ ಅಧ್ಯಯನ ಈ ಕೃತಿಯಲ್ಲಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೯೭
ಜಾನಪದ ಮಿನದನ (ಲೇಖನಗಳ ಸಂಗ್ರಹ)
ಸುಪ್ರಿಯಾ ಪ್ರಕಾಶನ ಪುತ್ತೂರು, ಡೆ. ೧/೮, ಪು. ೧೩೮+೯, ರೂ. ೪೫/-

ತುಳುನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಐತಿಹ್ಯ ಕುರಿತು ಅಧ್ಯಯನವನ್ನು ಈ ಕೃತಿಯ ೧೦ ಲೇಖನಗಳಲ್ಲಿ ಮಾಡಲಾಗಿದೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೯೦
ಜಾನಪದ ಸ್ಪಂದನ (ಲೇಖನಗಳ ಸಂಗ್ರಹ)
ಸುಪ್ರಿಯಾ ಪ್ರಕಾಶನ ಮಾಡಾವು, ಡೆ. ೧/೮, ಪು. ೧೦+೧೫೬, ರೂ. ೩೫/-

ತುಳು ಜಾನಪದದ ಕುರಿತು ಸಂಶೋಧನಾತ್ಮಕ ಲೇಖನಗಳ ಮಾಲೆ.

ರಾಮಕೃಷ್ಣ ಆಚಾರ್ ಪಾಲ್ತಾಡಿ, ೧೯೯೯
ತುಳುನಾಡು ನುಡಿ
ಕರ್ನಾಟಕ ಸಂಘ ಪುತ್ತೂರು, ಡೆ. ೧/೮, ಪು. ೪+೬೦, ರೂ. ೩೬/-

ತುಳುನಾಡಿನ ನಡೆ ನುಡಿಗಳ ಬಗ್ಗೆ ಕನ್ನಡದ ಅಧ್ಯಯನ ಕೃತಿ

ರಾಮಚಂದ್ರ ಅಮ್ಮಣ್ಣಾಯ ಪಾವೂರು, ಉಡುಪಿ, ೨೦೦೦
ತುಳುನಾಡಿನಲ್ಲಿ ಮಧ್ವ ಪರ್ಯಟನೆ (ಸಂಶೋಧನಾತ್ಮಕ ಗ್ರಂಥ)
ಕೃದೇವ ಪ್ರಕಾಶನ ಉಡುಪಿ, ಡೆ. ೧/೮, ಪು. ೧೦೦, ರೂ. ೮೦/-

ಆಚಾರ್ಯ ಮಧ್ವರ ತುಳುನಾಡಿನೊಳಗಿನ ಸಂಚಾರವನ್ನು ಗುರುತಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಓದುಗರ ಅನುಕೂಲಕ್ಕಾಗಿ ಕೆಲವು ಅಜ್ಞಾತ ಸ್ಥಳಗಳ ಛಾಯಾಚಿತ್ರಗಳನ್ನು ಪುಸ್ತಕದ ಮಧ್ಯದಲ್ಲಿ ಒಂದು ಭೂನಕಾಶೆಯನ್ನು ಆಚಾರ್ಯ ಮಧ್ವರು ಸಂಚರಿಸಿದ ಸ್ಥಳಗಳ ಪಟ್ಟಿಯನ್ನು ಜೊತೆಗೆ ನೀಡಿದ್ದಾರೆ.

ರಾಮಚಂದ್ರ ರಾವ್ ಎಸ್.ಕೆ., ೧೯೭೫
ಮೂರ್ತಿಶಿಲ್ಪ ನೆಲೆ – ಹಿನ್ನೆಲೆ
ಬೆಂಗಳೂರು ವಿ.ವಿ. ಬೆಂಗಳೂರು
ಕ್ರೌ. ೧/೪ ರೂ. ೧೬/- (ಸಾದಾ) ರೂ. ೨೦/- (ಕ್ಯಾಲಿಕೊ)

ಸಾಂಪ್ರದಾಯಿಕ ಮೂರ್ತಿ ಶಿಲ್ಪದ ಆಧಾರ ವಿವರಗಳು, ಪ್ರಪಂಚದಲ್ಲೆಲ್ಲ ಕಾಣಬರುವ ಮೂಲ ಭೂತ ಜಾನಪದ ಪ್ರಕಾರಗಳ ಹಿನ್ನೆಲೆ, ಭಾರತದ ಕೆಲವೆಡೆ ಬಳಕೆಯಲ್ಲಿರುವ ಧಾರ್ಮಿಕ ವಿಧಿಗಳ ವಿಶ್ಲೇಷಣೆ ಈ ಕೃತಿಯಲ್ಲಿ ನಿರೂಪಿತವಾಗಿವೆ. ಮೂರ್ತಿ ಶಿಲ್ಪ ಬೆಳೆದುಬಂದ ಬೇರೆ ಬೇರೆ ಬಗೆಗಳನ್ನು ಕಾಣಬಹುದು. ಈ ಕೃತಿಯ ‘ಅನುಬಂಧ’ಗಳು ಭಾಗದಲ್ಲಿನ ‘ತುಳುನಾಡಿನ ದೈವಗಳು’ ಅಧ್ಯಾಯದಲ್ಲಿ ಭೂತಾರಾಧನೆಯ ಹಿನ್ನೆಲೆ, ತುಳುನಾಡಿನಲ್ಲಿ ಆರಾಧಿಸಲಾಗುವ ಕೋಟಿ ಚೆನ್ನಯ, ಕಲ್ಕುಡ, ಕಲ್ಲುರ್ಟಿ, ಬೊಬರ್ಯ, ಜಾರಂದಾಯೆ, ಜುಮಾದಿ, ಪಂಜುರ್ಲಿ ಮುಂತಾದ ಭೂತಗಳ ಸಂಕ್ಷಿಪ್ತ ಕಥೆ. ಭೂತಾರಾಧನೆಯ ಕಲಾವಿದರು, ನಾಗ ಮಂಡಲದ ವಿಧಿ-ವಿಧಾನ ಇಂಥ ವಿಷಯಗಳ ಕುರಿತ ಮಾಹಿತಿ-ವಿಶ್ಲೇಷಣೆ ಇದೆ.

ರಾವ್ ಎಚ್.ಬಿ.ಎಲ್. ಮುಂಬಯಿ (ಸಂ), ೨೦೦೧
ಶಿವಳ್ಳಿ ಬ್ರಾಹ್ಮಣರು (ಪ್ರಬಂಧಗಳ ಸಂಗ್ರಹ)
ಶಿವಳ್ಳಿ ಪ್ರತಿಷ್ಠಾನ ಮುಂಬಯಿ, ಡೆ. ೧/೮, ಪು. ೧೬+೩೬೮, ರೂ. ೨೫೦/-

ಶಿವಳ್ಳಿ ಬ್ರಾಹ್ಮಣರ ಬಗ್ಗೆ ಚಾರಿತ್ರಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ದೃಷ್ಟಿಕೋನಗಳ ಮೂಲಕ ವಿವಿಧ ಲೇಖಕರು ಬರೆದ ೨೪ ಪ್ರಬಂಧಗಳ ಸಂಕಲನ. ಉದಾ: ಶಿವಳ್ಳಿ ಬ್ರಾಹ್ಮಣರು : ಒಂದು ಸಾಮಾಜಿಕ ಸಮೀಕ್ಷೆ – ಪಿ. ಶ್ರೀಪತಿ ತಂತ್ರಿ (ಪು. ೧-೨೨) ‘Shivalli Brahmanas : A historical analysis’ – ಮಾಲಿನಿ ಅಡಿಗ (ಪು. ೫೬ – ೮೭) ‘ಬ್ರಾಹ್ಮಣರ ತುಳು’ ಯು.ಪಿ. ಉಪಾಧ್ಯಾಯ (ಪು. ೧೪೫ – ೧೬೧) ‘ಕುಲದೇವಸ್ಥಾನಗಳು’ – ಕೆ. ಲಕ್ಷ್ಮೀನಾರಾಯಣ ಕುಂಡಂತಾಯ (ಪು. ೧೮೯ – ೧೯೩) ‘ತುಳುವಿನ ಪ್ರಾಚೀನ ಕಾವ್ಯಗಳಲ್ಲಿ ಪ್ರಯುಕ್ತವಾದ ಶಿವಳ್ಳಿ ತುಳು’ – ಪದ್ಮನಾಭ ಕೇಕುಣ್ಣಾಯ (ಪು. ೨೧೩ – ೨೪೧) ‘ತುಳುವಿನ ಮೇಲೆ ಸಂಸ್ಕೃತದ ಪ್ರಭಾವ’ – ಕೆ. ಹರಿದಾಸ ಉಪಾಧ್ಯಾಯ – (ಪು. ೨೪೨ – ೨೫೨) ಇಂಥ ಅನೇಕ ಪ್ರಬಂಧಗಳಿವೆ.

ರೂಪಕಲಾ ಆಳ್ವ, ೧೯೯೨
ನಾಟಿ (ಜಾನಪದ ಅಧ್ಯಯನ)
ಸಂದೇಶ ಪ್ರಕಾಶನ, ಮಂಗಳೂರು, ಡೆ. ೧/೮, ಪು. ೧೨೨, ರೂ. ೩೫/-

ಈ ಸಂಕಲನದಲ್ಲಿ ಪಾಡ್ದನಗಳು, ಕಬಿತಗಳು, ಉರಲ್ ಎಂಬ ಮೂರು ಪ್ರಕಾರಗಳಿಗೆ ಸೇರುವ ಕೆಲವು ರಚನೆಗಳನ್ನು ಆರಿಸಿ, ಅನುವಾದಿಸಿ ವ್ಯಾಖ್ಯಾನಿಸಿದ್ದಾರೆ. ಪಾಡ್ದನಗಳ ವಿಭಾಗದಲ್ಲಿ ಪ್ರತಿಯೊಂದರ ಆರಂಭದಲ್ಲಿ ಕಥಾಸಾರವನ್ನೂ, ಕೊನೆಯಲ್ಲಿ ಅದರ ವಿಮಶಾತ್ಮಕವಾದ ಸಂಕ್ಷಿಪ್ತ ಸಮೀಕ್ಷೆಯನ್ನೂ ನೀಡಲಾಗಿದೆ. ಕಬಿತಗಳ ವಿಭಾಗದ ಆರಂಭದಲ್ಲಿ ಕನ್ನಡದ ಸಂಕ್ಷಿಪ್ತ ಸಾರಾಂಶ (ಮಂಜೊಟ್ಟಿಗೋಣ)ವನ್ನು ನೀಡಿ ಕನ್ನಡ ಅನುವಾದವನ್ನೂ ನೀಡಿ ವಿಶ್ಲೇಷಿಸಲಾಗಿದೆ. (ಹಾಗೆಯೇ ಡಿಂಬಿಸಾಲೆ ಕಬಿತವನ್ನು ಕೂಡ) ಪುಟ್ಟ ರಚನೆಗಳಾದ ‘ಉರಲ್‌’ಗಳ ೧೮ ಮಾದರಿಗಳನ್ನು ಇಲ್ಲಿ ನೀಡಲಾಗಿದೆ.

ಲೀಲಾ ಭಟ್ ಬಿ., ೧೯೮೨
ಉಳ್ಳಾಲ್ತಿ ಅಮ್ಮನವರು
ಸಮೀರ ಪ್ರಕಾಶನ ಪುತ್ತೂರು, ಕ್ರೌ ೧/೮, ಪು. ೪+೮+೧೮, ರೂ. ೨/-

ತುಳುನಾಡಿನ ಆರಾಧ್ಯ ದೈವವಾದ ಉಳ್ಳಾಲ್ತಿ ಅಮ್ಮನವರ ಪರಿಚಯ ನೀಡುವ ಕಿರುಕೃತಿ ಉಳ್ಳಾಲ್ತಿ ಅಮ್ಮನವರ ಆರಾಧನೆಯು ತುಳುನಾಡಿನಲ್ಲಿ ನೆಲೆಗೊಂಡುದರ ಹಿನ್ನೆಲೆಯನ್ನು ವಿವೇಚಿಸಲಾಗಿದೆ. ಕೊನೆಯಲ್ಲಿ ಬೇರೆ ಬೇರೆ ಕಡೆ ಆರಾಧಿಸಲಾಗುವ ಉಳ್ಳಾಲ್ತಿ ಅಮ್ಮನವರ ವಿಗ್ರಹ ಕಲಾವಿದರನ್ನು ಬಿಂಬಿಸುವ ಛಾಯಾಚಿತ್ರಗಳೂ ಇವೆ.

ವಸಂತಕುಮಾರ ತಾಳ್ತ ಜೆ, ೧೯೮೫
ಸಾರಸ (ಸಂಶೋಧನ ಪ್ರಬಂಧಗಳು)
ಚಿರಸಾಹಿತ್ಯ ಪ್ರಕಾಶನ, ಬೆಂಗಳೂರು, ಡೆ. ೧/೮, ರೂ. ೨೦/-

‘ದಕ್ಷಿಣ ಕನ್ನಡದಲ್ಲಿ ಬೌದ್ಧಧರ್ಮ’, ‘ಮಂಗಳೂರು – ಒಂದು ಪ್ರಾಚೀನ ಬೌದ್ಧ ಕೇಂದ್ರ’ – ಈ ಎರಡು ಲೇಖನಗಳು ದ.ಕ.ದಲ್ಲಿ ಬೌದ್ಧಧರ್ಮದ ಪ್ರಭಾವದ ವಿವೇಚನೆಯನ್ನು ಮಾಡುತ್ತವೆ. ದ.ಕ. ಜಿಲ್ಲೆಯಲ್ಲಿ ಬೌದ್ಧಧರ್ಮದ ಅಸ್ತಿತ್ವದ ಬಗ್ಗೆ ಕದಿರೆಯ ಮಂಜುನಾಥ ದೇವಾಲಯದ ಮೂಲಕ ಸ್ಪಷ್ಟಪಡಿಸುತ್ತಾರೆ ಹಾಗೂ ‘ಮಂಗಳೂರು’ ಹೆಸರಿನ ಪ್ರಾಚೀನತೆಯ ವಿವೇಚನೆಯನ್ನೂ ಮಾಡಲಾಗಿದೆ. ‘ಜಾನಪದ ಕಥನ ಗೀತೆಗಳು’ – ಇದರಲ್ಲಿ ಕೆರೆಗೆ ಹಾರ ಗೀತೆಯೊಂದಿಗೆ ನಮ್ಮ ಜಿಲ್ಲೆಯ ‘ಕೊರತಿ ಕಂಚಿಯ ಕತೆ’ಯನ್ನು ವಿಶ್ಲೇಷಿಸಿದ್ದಾರೆ. ‘ದಕ್ಷಿಣ ಕನ್ನಡದ ಕೆಲವು ಜಾನಪದ ಐತಿಹ್ಯಗಳು’ – ಇದರಲ್ಲಿ ವ್ಯಕ್ತಿ, ಊರು, ದೇವಸ್ಥಾನ, ಭೂತಸ್ಥಾನ, ಸ್ಥಳಗಳ ಕುರಿತಂತೆ ಐತಿಹ್ಯಗಳಿರುವುದನ್ನು ವಿವರಿಸಿದ್ದಾರೆ ಮತ್ತು ಅವುಗಳ ವಿಶ್ಲೇಷಣೆಯನ್ನೂ ಮಾಡಿದ್ದಾರೆ.

ವಸಂತಕುಮಾರ ಪೆರ್ಲ, ೧೯೯೯
ಅಭ್ಯಾಸ (ಸಂಶೋಧನಾ ಪ್ರಬಂಧಗಳು)
ಸಾಹಿತ್ಯ ಸಂಘ (ರಿ.) ಬದಿಯಡ್ಕ, ಡೆ. ೧/೮, ಪು. ೬+೧೨೮, ರೂ. ೬೦/-

ಕಾಸರಗೋಡು ಕೇರಳ ತುಳುನಾಡಿನ ಸಾಂಸ್ಕೃತಿಕ ಇತಿಹಾಸವನ್ನು ತಿಳಿಸುವ ಹಲವು ಲೇಖನಗಳು ಈ ಕೃತಿಯಲ್ಲಿದೆ ಉದಾ: ‘ಸ್ಥಳನಾಮಗಳ ಮೂಲಕ ಜಾತಿ ನಿರ್ದೇಶ’ (ಪು ೧-೮) ತುಳುನಾಡಿನ ಶಿವಳ್ಳಿ ಬ್ರಾಹ್ಮಣರ ಕೆಲವು ಉಪನಾಮಗಳಿವೆ. ‘ಶಕ್ತಿ ಪೂಜೆ ಮತ್ತು ಭೂತಾರಾಧನೆಗಳ ಅಭೇದ’ (ಪು. ೯-೧೮) ಭುತಾರಾಧನೆ ಹಾಗೂ ಶಕ್ತಿ ದೇವತೆಯ ಆರಾಧನೆಯಲ್ಲಿ ಸಾಮ್ಯತೆಗಳ ಬಗ್ಗೆ. ‘ಅವಳಿ ದೈವಗಳ: ಒಂದು ವಿವೇಚನೆ’ (ಪು. ೧೯+೩೧) ಅವಳಿ ದೈವಗಳ ಮಹಿಮಾತಿಶಯತೆ ಮತ್ತು ಆರಾಧನಾ ಹಿನ್ನೆಲೆ. ‘ತುಳು ಕವನ ಮತ್ತು ಕಥಾ ಸಾಹಿತ್ಯ: ಒಂದು ಪರಿಶೀಲನೆ’ – (ಪು. ೧೦೭ – ೧೨೪) ತುಳುವಿನ ಸಾಹಿತ್ಯ ಕ್ಷೇತ್ರದಲ್ಲಾದ ಕೆಲಸಗಳ ಮಾಹಿತಿಗಳಿವೆ.

ವಸನ್ತ ಭಾರದ್ವಾಜ ಕಬ್ಬಿನಾಲೆ, ೨೦೦೧
ಪಳಂತುಳು ಕಾವ್ಯ (ಪ್ರಾಚೀನ ತುಳು ಕಾವ್ಯಗಳ ಪ್ರಬಂಧ)
ಮಧುಮತಿ ಪ್ರಕಾಶನ ವಿಜಯನಗರ ಬೆಂಗಳೂರು
ಪು. ೧೦+೧೨೦ ಆ. ಡೆ. ೧/೮, ರೂ. ೭೫/-

ಪ್ರಾಚೀನ ತುಳು ಕಾವ್ಯಗಳಾದ ‘ಮಹಾಭಾರತೊ’, ‘ಶ್ರೀ ಭಾಗವತೊ’, ‘ಕಾವೇರಿ’ ಗದ್ಯ, ‘ದೇವಿ ಮಹಾತ್ಮೆ’ಗಳ ಕವಿ-ಕಾಲ ವಿಚಾರದಿಂದ ಛಂದಸ್ಸಿನ ವರೆಗೆ ಮೂಲಕಥಾ ಪ್ರೇರಣೆಯಿಂದ ಧ್ವನಿ ಸ್ಫುರಣದವರೆಗೆ ನುಡಿಗಟ್ಟುಗಳಿಂದ ಶೈಲಿ ವರ್ಣನೆಗಳವರೆಗೆ ವಿವರಿಸಲಾಗಿದೆ. ಕಾವೇರಿ ಕಾವ್ಯದಲ್ಲಿ ಕಂಡು ಬರುವ ಚಿತ್ರಕಾವ್ಯ ಲಕ್ಷಣದ ಪಾರಿಹಾರಿಕೆ ಪದ್ಯಗಳನ್ನುಲ್ಲೇಖಿಸಿ ಅವುಗಳ ಒಗಟನ್ನು ಬಿಡಿಸುತ್ತಾರೆ. ಅರ್ಥಗರ್ಭಿತವಾದ ಶಬ್ದ ಹಾಗೂ ನುಡಿಗಟ್ಟುಗಳ ಅರ್ಥ ವಿಶ್ಲೇಷಣೆ ಮಾಡುತ್ತಾರೆ.

ವಾಮನ ನಂದಾವರ, ೧೯೯೮
ಸಿಂಗದನ (ಲೇಖನ ಸಂಗ್ರಹ) (ದ್ವಿತೀಯ ಮುದ್ರಣ)
ಹೇಮಾಂಶು ಪ್ರಕಾಶನ, ಕಾಟಿಪಳ್ಳ, ಡೆ. ೧/೮, ಪು. ೮೮, ರೂ. ೧೮/-

ತುಳುನಾಡಿನ ಆಚರಣೆ, ಆರಾಧನೆ, ಸಂಸ್ಕೃತಿಯ ಕುರಿತ ಪಾಡ್ದನ ಕಬಿತಗಳು ಚಿತ್ರಿಸುವ ತುಳು ಜನಪದ ವಿನೋದಗಳು, ಕಲೆಗಳು, ಜನಾಂಗ ಅಧ್ಯಯನ, ತುಳುನಾಡಿನ ಹಬ್ಬಗಳು, ಭೂತಾರಾಧನೆಯಲ್ಲಿ ಸಾಹಿತ್ಯಿಕ ಅಂಶಗಳು ಮುಂತಾದ ಅಧ್ಯಯನ ಲೇಖನಗಳ ಸಂಗ್ರಹ.

ವಾಮನ ನಂದಾವರ, ೨೦೦೧
ಕೋಟಿ ಚೆನ್ನಯ ಜಾನಪದೀಯ ಅಧ್ಯಯನ (ಪ್ರೌಢಪ್ರಬಂಧ)
ಹೇಮಾಂಶು ಪ್ರಕಾಶನ, ಗೊಲ್ಲಚ್ಚಿಲ್, ದೇರೆಬೈಲು, ಮಂಗಳೂರು – ೮
ಕ್ರೌ. ೧/೪, ಪು. ೪೨೦, ರೂ. ೫೨೫/-

ವ್ಯಾಪಕ ಕ್ಷೇತ್ರಕಾರ್ಯ ವಿಶ್ಲೇಷಣೆಗಳಿಂದ ಕೂಡಿದ ಕೋಟಿಚೆನ್ನಯ ಅವಳಿ ವೀರರ ಕಥನ. ಜನಪದ ಮಹಾಕಾವ್ಯ ಐತಿಹ್ಯ, ಆರಾಧನೆ, ಆರಾಧನ ಕೇಂದ್ರಗಳ ಹಿನ್ನೆಲೆಯಲ್ಲಿ ಮಾಡಿಬಂದ ಗ್ರಂಥ. ೩೦ ಪುಟಗಳಲ್ಲಿ ೧೦೫ ವರ್ಣ ಚಿತ್ರಗಳು, ೨೨ ಪುಟಗಳ ೧೬೫ ಕಪ್ಪು ಬಿಳುಪು ನೆರಳು ಚಿತ್ರಗಳು, ೧೧೨ ರೇಖಾ ಚಿತ್ರಗಳು, ೮ ಪುಟಗಳಲ್ಲಿ ೨೭ ರೇಖಾ ನಕ್ಷೆಗಳು, ಉನ್ನತ ಸಾಂಸ್ಕೃತಿಕ ಪದಕೋಶ, ಪದ ಸಂದರ್ಭಸೂಚಿ ಇತ್ಯಾದಿ ಇವೆ.

ವಾಮನ ನಂದಾವರ, ೧೯೯೨
ಜನಪದ ಸುತ್ತಮುತ್ತ (ಜಾನಪದ ಅಂಕಣಬರಹಗಳ ಸಂಗ್ರಹ)
ಪ್ರಜಾಬಂಧು ಪ್ರಕಾಶನ ಮಂಗಳೂರು, ಕ್ರೌ. ೧/೮, ಪು. ೧೫೮, ರೂ. ೩೦/-

ಪತ್ರಿಕೆಯ ಅಂಕಣಕ್ಕಾಗಿ ಬರೆದಂಥ ಲೇಖನಗಳನ್ನು ಇಲ್ಲಿ ಪುಸ್ತಕ ರೂಪದಲ್ಲಿ ತರಲಾಗಿದೆ. ಜಾನಪದದ ವಿವಿಧ ಪ್ರಕಾರಗಳಾದ ಭುತಾರಾಧನೆ, ಜಾತ್ರೆ, ಆಟಿ ಮುಂತಾದ ಆಚರಣೆ, ಉರಲ್ ಎಂಬ ಕೆಲಸದ ಹಾಡು, ಗಾದೆಗಳು, ಕುಣಿತಗಳು, ಇತ್ಯಾದಿಗಳ ಕುರಿತ ಬರಹಗಳನ್ನು ಈ ಕೃತಿ ಒಳಗೊಂಡಿದೆ.

ವಿವೇಕ ರೈ ಬಿ.ಎ., ೧೯೯೫
ಆನ್ವಯಿಕ ಜಾನಪದ (ಸಂಶೋಧನಾ ಪ್ರಬಂಧಗಳು)
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು
ಕ್ರೌ. ೧/೮, ಪು. ೧೫೦+೧೨, ರೂ. ೧೬/-

ಒಟ್ಟು ೯ ಸಂಶೋಧನ ಲೇಖನಗಳಿವೆ. ಕರ್ನಾಟಕದ ಜನಪದರ ನಂಬಿಕೆಗಳಿಂದ ತೊಡಗಿ, ವಿವಾಹ ಸಂಬಂಧಗಳಲ್ಲಿ ವಿಧಿ ನಿಷೇಧಗಳೂ, ಮೌಖಿಕ ಸಾಹಿತ್ಯ ವಿಮರ್ಶೆ, ತುಳುನಾಡಿನ ಪ್ರಮುಖ ಕುಣಿತವಾದ ಆಟಿಕಳೆಂಜ ರಾಚನಿಕ ಅಧ್ಯಯನ ಹಾಗೆಯೇ ಜನಾಪದದ ವಿವಿಧ ನೆಲೆಗಳಾದ ಬೇಟೆ ಜಾನಪದ, ಆಕಾಶ ಜಾನಪದ, ಆನ್ವಯಿಕ ಜಾನಪದ ಮುಂತಾದವುಗಳ ವೈಜ್ಞಾನಿಕ ವಿಶ್ಲೇಷಣೆ ಈ ಕೃತಿಯಲ್ಲಿದೆ.

ವಿವೇಕ ರೈ ಬಿ.ಎ., ೧೯೮೦
ತುಳುವ ಅಧ್ಯಯನ : ಕೆಲವು ವಿಚಾರಗಳು (ಸಂಶೋಧನಾ ಲೇಖನಗಳು)
ತುಳು ಪ್ರಕಾಶನ ಮಂಗಳೂರು, ಕ್ರೌ. ೧/೮, ಪು. ೮+೮೮, ರೂ. ೭೫೦/-

ಒಟ್ಟು ೬ ಸಂಶೋಧನ ಲೇಖನಗಳಿವೆ ತುಳುವಿನ ಮೌಖಿಕ ಪರಂಪರೆಗಳಾದ ಪಾಡ್ದನ, ಕಬಿತ, ಉರಲ್‌ಗಳ ವಿಶ್ಲೇಷಣೆ, ತುಳುನಾಡಿನ ಮೇರರು; ಎಂಬ ಜನಾಂಗ ಅಧ್ಯಯನದ ಚಿತ್ರಣ ಹಾಗೂ ತುಳುವನ್ನು ಕಲಿಸುವಾಗ ಅನ್ವಯಿಸಬಹುದಾದ ಸಿದ್ಧಾಂತಗಳ ಮತ್ತು ಎದುರಾಗುವ ಪ್ರಾಯೋಗಿಕ ಸಮಸ್ಯೆಗಳ ಬಗೆಗಿನ ಲೇಖನ – ‘ತುಳು ಕಲಿಸುವಿಕೆ’ಯೂ ಇದೆ.

ವಿವೇಕ ರೈ. ಬಿ.ಎ., ೧೯೭೦
ತೌಳವ ಸಂಸ್ಕೃತಿ
ಕ್ರೌ ೧/೮, ಪು. ೧+೧೩೬

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಜನಪದ ಕಲಾತ್ಮಕ ವಿನೋದಗಳ ಒಂದು ಪರಿಚಯ ಈ ಕೃತಿಯಲ್ಲಿದೆ.

ವಿವೇಕ ರೈ ಬಿ.ಎ., / ಡಿ. ಯದುಪತಿ ಗೌಡ, ೧೯೯೬
ಮಲೆ ಕುಡಿಯರು
ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಮಂಗಳಗಂಗೋತ್ರಿ
ಡೆ. ೧/೮, ಪು. ೧೭೬, ರೂ. ೬೦/-

ತುಳುನಾಡಿನ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಾಸಿಸುತ್ತಿರುವ ಮಲೆಕುಡಿಯರ ಬಗೆಗಿನ ಅಧ್ಯಯನ ಗ್ರಂಥ.

ವಿವೇಕ ರೈ ಬಿ.ಎ., ೧೯೮೫
ತುಳು ಜನಪದ ಸಾಹಿತ್ಯ (ಪ್ರೌಢಪ್ರಬಂಧ)
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಕ್ರೌ. ೧/೪, ರೂ. ೪೦/-

ಈ ಪ್ರೌಢಪ್ರಬಂಧದಲ್ಲಿ ತುಳು ಜನಪದ ಸಾಹಿತ್ಯದ ನಾಲ್ಕು ಮುಖ್ಯ ಪ್ರಕಾರಗಳಾದ ಜನಪದ ಕಾವ್ಯ, ಜನಪದ ಕತೆಗಳು, ಗಾದೆಗಳು, ಒಗಟುಗಳು ಇವುಗಳನ್ನು ಪ್ರತ್ಯೇಕ ಅಧ್ಯಾಯಗಳ ರೂಪದಲ್ಲಿ ಅಧ್ಯಯನ ಮಾಡಲಾಗಿದೆ. ಪಾಡ್ದನ ಮತ್ತು ಜನಪದ ಕತೆಗಳ ಅಧ್ಯಯನಗಳನ್ನು ಮಾಡುವಾಗ ಅವುಗಳ ಮೂಲ ಸಾಮಗ್ರಿಗಳ ಕನ್ನಡ ರೂಪಾಂತರವನ್ನು ಕೊಡಲಾಗಿದೆ.

ವಿವೇಕ ರೈ ಬಿ.ಎ., ೧೮೪೨
ತುಳುವಿನಲ್ಲಿ ಸ್ವಾತಂತ್ರ್ಯ ಪೂರ್ವದ ಪ್ರಸಿದ್ಧ ರಚನೆಗಳು

ತುಳುವಿನಲ್ಲಿ ಗ್ರಂಥ ರಚನೆ ಆರಂಭವಾದಾಗಿನಿಂದ ತೊಡಗಿ, ತುಳುವಿನಲ್ಲಿ ಸ್ವಾತಂತ್ರ ಪೂರ್ವದಲ್ಲಿ ಆದಂತಹ ಭಾಷಾಂತರ, ವ್ಯಾಕರಣ, ಯಕ್ಷಗಾನ, ಕಥೆ – ಕಾದಂಬರಿ, ಕವನ, ಚರಿತ್ರೆಗೆ ಸಂಬಂಧಿಸಿದ ಕಾರ್ಯಗಳನ್ನು (ಸು. ೧೯೪೨ರವರೆಗೆ) ವಿಶ್ಲೇಷಿಸಲಾಗಿದೆ.

ವಿವೇಕ ರೈ ಬಿ.ಎ., ೧೯೯೫
ಗಿಳಿಸೂವೆ
ಅಕ್ಕೆಸಿರಿ ಸಾಂಸ್ಕೃತಿಕ ಕೇಂದ್ರ, ಮಂಗಳೂರು – ೫೭೫ ೦೦೨
ಡೆ. ೧/೮, ಪುಟಗಳು : ೨೭೦, ಬೆಲೆ : ರೂ. ೯೦/-

ಮುಂಗಾರು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಆಯ್ದ ೫೪ ಅಂಕಣ ಲೇಖನಗಳ ಸಂಕಲನ. ಇದರಲ್ಲಿ ಬಹುಪಾಲು ತುಳುವಿಗೆ ಸಂಬಂಧಿಸಿದ ಲೇಖನಗಳಿವೆ.

ವಿವೇಕ ರೈ ಬಿ.ಎ. ಮತ್ತಿತರರು, ೨೦೦೪
ಪುಟ್ಟು ಬಳಕೆಯ ಪಾಡ್ದನಗಳು
ಡೆ. ೧/೮, ಪುಟಗಳು : ೩೦೪, ಬೆಲೆ : ರೂ. ೧೨೦/-

ತುಳು ಜನಪದ ಕಾವ್ಯಗಳ ಸಂಗ್ರಹ.

ವಿಶ್ವನಾಥ ಕಾರ್ನಾಡ, ೧೯೯೪
ತುಳುವರ ಮುಂಬಯಿ ವಲಸೆ
ವಿಭಾಗ, ಮುಂಬಯಿ ವಿ.ವಿ., ಡೆ. ೧/೮, ಪು. ೪೮೮+೨೦, ರೂ. ೧೩೫/-

ತುಳುವರ ಮುಂಬಯಿ ವಲಸೆಯನ್ನು ಈ ಕೃತಿ ವಿಸ್ತಾರವಾಗಿ ಅಧ್ಯನ ಮಾಡುತ್ತದೆ. ವಯಸ್ಸು, ಲಿಂಗ ಹಾಗೂ ಸಾಮಾಜಿಕ ಹಿನ್ನೆಲೆಯ ಮೂಲಕ ಲೇಖಕರು ವಲಸೆಯ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. ಮುಂಬಯಿ ತುಳುವರ ಸಾಮಾಜಿಕ, ಶೈಕ್ಷಣಿಕ ಮತ್ತು ಕೌಟುಂಬಿಕ ಜೀವನವನ್ನು ಚರ್ಚಿಸಿದ್ದಾರೆ ಹಾಗೂ ಶಿಕ್ಷಣದ ಅಭಿವೃದ್ಧಿಯಲ್ಲಿ ರಾತ್ರಿಶಾಲೆಗಳ ಪಾತ್ರವೇನೆಂಬುದರ ಚರ್ಚೆಗೂ ಈ ಕೃತಿಯಲ್ಲಿ ಒತ್ತು ನೀಡಲಾಗಿದೆ. ಹಾಗೂ ಕೊನೆಯ ಅಧ್ಯಾಯದಲ್ಲಿ ಮುಂಬಯಿಯ ತುಳುವರಿಗೆ ಶಾಶ್ವತ ನೆಲೆಯಾಗಬಹುದೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ತಾತ್ವಿಕವಾಗಿ ಚರ್ಚಿಸಿದ್ದಾರೆ.

ವೆಂಕಟರಾಜ ಪುಣಿಂಚತ್ತಾಯ, ೧೯೯೮
ತುಳು ನಡೆ ನುಡಿ (ಲೇಖನಗಳ ಸಂಗ್ರಹ)
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ
ಪು. ೯೨, ಡೆ. ೧/೮, ರೂ. ೨೦/-

ಇಲ್ಲಿಯ ೧೧ ಲೇಖನಗಳು ಹೆಚ್ಚಾಗಿ ತುಳು ಜಾನಪದ, ತುಳು ಮತ್ತು ಮಲಯಾಳಕ್ಕಿರುವ ಸಂಬಂಧದ ವಿಷಯವನ್ನು ಕುರಿತಾಗಿವೆ. ‘ತುಳು ಧಾತು ಕೋಶ’ವು ಒಂದು ವಿಶಿಷ್ಟ ಶಬ್ದ ಸೂಚಿಯಾಗಿದೆ. ಜನಪದ ಸಾಹಿತ್ಯ ಹಾಗೂ ಆರಾಧನೆಗೆ ಸಂಬಂಧಿಸಿದಂತೆ ಮಲಯಾಳ ಹಾಗೂ ತುಳುವಿನ ಸಂಬಂಧಗಳನ್ನು ‘ಮಲಯಾಳ  ಜನಪದ ಸಾಹಿತ್ಯದಲ್ಲಿ ತುಳುನಾಡಿನ ವಿಚಾರಗಳು’ (ಪು. ೪೮-೫೫) ಹಾಗೂ ‘ಕೇರಳದ’ ತೆಯ್ಯಂ’ಗಳು ಮತ್ತು ತುಳುನಾಡಿನ ‘ದೆಯ್ಯೊಂಕುಳು’ (ಪು. ೫೬-೬೧) ಲೇಖನಗಳಲ್ಲಿ ಹೇಳುತ್ತಾರೆ ಪಾಡ್ದನ, ಮೊಗವೀರರು, ಬಾಕುಡರು, ಆದಿದ್ರಾವಿಡರು ಮುಂತಾದ ಜನಾಂಗಗಳ ಕುರಿತಾಗಿ ಹಲವು ಮಾಹಿತಿಗಳನ್ನು ನೀಡುವ ಲೇಖನಗಳೂ ಇಲ್ಲಿವೆ.

ಶಂಭು ಶರ್ಮಾ ಕಡವ, ೧೯೭೦
ತುಳು ದೇಶ ಭಾಷಾ ವಿಚಾರವು, ಕ್ರೌ. ೧/೮, ಪು. ೧೪೪, ರೂ. ೨.೫೦/-

ತುಳು ನಾಡು – ನುಡಿಯ ಬಗ್ಗೆ ತಮ್ಮದೇ ಆದ ವಿಭಿನ್ನ ನೆಲೆಯಲ್ಲಿ ಐತಿಹಾಸಿಕ ಹಾಗೂ ಭಾಷಿಕ ವಿವರಗಳನ್ನು ಲೇಖಕರು ಕೊಟ್ಟಿದ್ದಾರೆ. ತುಳು ದೇಶ – ತುಳು ಭಾಷೆಯ ಬಗ್ಗೆ ತಿಳಿಯಲು ಉಪಯುಕ್ತ ಕೃತಿ.

ಶಿವರಾಮ ಕಾರಂತ ಕೆ., ೧೯೭೬
ಭೂತಾರಾಧನೆ, ಕ್ರೌ. ೧/೮, ಪು. ೪೮, ರೂ. ೧.೫೦/-

ಭೂತಾರಾಧನೆಯ ಬಗೆಗಿನ ಸಂಕ್ಷಿಪ್ತ ಪರಿಚಯಾತ್ಮಕ ಕೃತಿ.

ಶಿವರಾಮ ಕಾರಂತ ಕೆ., ೧೯೭೪
ಯಕ್ಷಗಾನ
ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ
ಕ್ರೌ. ೧/೪, ಪು. ೧೦+೨೦೨+೨೪ illustrated, ರೂ. ೩೦/-

ಯಕ್ಷಗಾನ ಕಲೆಯ ಹಿನ್ನೆಲೆ, ಹುಟ್ಟು, ಅದರ ಸಂಪ್ರದಾಯಗಳು, ನೃತ್ಯ, ವೇಷಭೂಷಣಗಳ ಕುರಿತಂತೆ ಅಧ್ಯಯನ ನಡೆಸಿ ೧೬-೧೭ನೇ ಶತಮಾನಗಳಲ್ಲಿನ ಯಕ್ಷಗಾನ ಕವಿ – ಕಾವ್ಯಗಳ ಸ್ಥೂಲ ಅವಲೋಕನ ನಡೆಸಲಾಗಿದೆ ಹಾಗೂ ಯಕ್ಷಗಾನದ ವೇಷಗಾರಿಕೆ, ಪಾತ್ರ ಪರಿಚಯ ನೀಡುವ ಛಾಯಾಚಿತ್ರಗಳೂ ಇವೆ.

ಶಿವರಾಮ ಶೆಟ್ಟಿ ಶೀರೂರು, ೧೯೯೫
ಬಂಟರ ಮೂಲ ಒಂದು ಅಧ್ಯಯನ
ಡೆ. ೧/೮, ಪು.೯೦+೯, ರೂ. ೭೫/-

ತುಳುನಾಡಿನ ಒಂದು ವಿಶಿಷ್ಟವಾದ ಜನಾಂಗವಾದ ಬಂಟರ ಬಗ್ಗೆ ಅಧ್ಯಯನ ಕೃತಿ.

ಶೆಟ್ಟಿ ಎಸ್.ಡಿ. ಉಜಿರೆ, ೨೦೦೨
ತುಳುನಾಡಿನ ಜೈನ ಧರ್ಮ ಒಂದು ಸಾಂಸ್ಕೃತಿಕ ಅಧ್ಯಯನ (ಪ್ರೌಢ ಪ್ರಬಂಧ) ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಕ್ರೌ. ೧/೪, ಪು. ೨೪+೪೨೪, ರೂ. ೪೫೦/-

ಒಟ್ಟು ೯ ಅಧ್ಯಾಯಗಳಲ್ಲಿ ತುಳುನಾಡಿನ ಜೈನಧರ್ಮದ ರಾಜಕೀಯ, ಸಾಮಾಜಿಕ, ಒಟ್ಟು ಸಾಂಸ್ಕೃತಿಕ ವಿಶ್ಲೇಷಣೆಗಳನ್ನು ನಡೆಸಿದ್ದಾರೆ. ತುಳುನಾಡಿನಲ್ಲಿ ಜೈನಧರ್ಮ ಬೆಳೆದುಬಂದ ರೀತಿಯನ್ನು, ಜೈನಧರ್ಮದ ಎಲ್ಲ ಸಂಪ್ರದಾಯ, ಆಚರಣೆ, ಕಲೆ ಸಾಹಿತ್ಯಗಳನ್ನೂ ಕೂಲಂಕಷವಾಗಿ ವಿವೇಚಿಸಿ ಸಂಪ್ರದಾಯ, ಆಚರಣೆ, ಕಲೆ ಸಾಹಿತ್ಯಗಳನ್ನೂ ಕೂಲಂಕಷವಾಗಿ ವಿವೇಚಿಸಿ ಇಲ್ಲಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ, ಕಲಾತ್ಮಕ ಬದುಕಿಗೆ ಜೈನರು ಕೊಟ್ಟ ಕೊಡುಗೆನೇನೆಂದನ್ನೂ ವಿವೇಚಿಸಿದ್ದಾರೆ. ಹೊಸದಾಗಿ ಲಬ್ಧವಾದ ಶಾಸನಗಳನ್ನು ವಿಶ್ಲೇಷಿಸಿದ್ದಾರೆ. ಜೈನ ಧರ್ಮದ ಹಲವು ಆಚರಣೆ, ವಿಧಿವಿಧಾನಗಳಿಗೆ ಸಂಬಂಧಿಸಿದಂಥ ಛಾಯಾಚಿತ್ರಗಳೂ ಹಾಗೆ ಮಾನಸ್ತಂಭಗಳೂ, ತೀರ್ಥಂಕರರನ್ನು ಬಿಂಬಿಸುವ ಛಾಯಾಚಿತ್ರಗಳೂ ಇವೆ, ರೇಖಾಚಿತ್ರಗಳೂ ಇವೆ.

ಶೇಖರ ಇಡ್ಯ, ೧೯೯೮
ನೇತ್ರಾವತಿ ೧೯೮೩ (ಪ್ರ. ಮು), (ದ್ವಿ, ಮು)
ಐಬಿಎಚ್ ಪ್ರಕಾಶನ ಬೆಂಗಳೂರು, ಕ್ರೌ. ೧/೮, ರೂ. ೬/-

ಕರಾವಳಿಯ ಪ್ರಮುಖ ನದಿಯಾದ ನೇತ್ರಾವತಿಯ ಹುಟ್ಟು ಉಗಮದ ಐತಿಹ್ಯ, ಅದರ ಉಪನದಿಗಳು, ಅದರ ಇತಿಹಾಸ, ನದೀತೀರದ ಮುಖ್ಯ ಸ್ಥಳಗಳು ಇತ್ಯಾದಿಗಳನ್ನೆಲ್ಲಾ ಕೆಲವು ಫೋಟೋಗಳ ಸಮೇತ ನೀಡಲಾಗಿದೆ.

ಶೇಖರ ಇಡ್ಯ, ೧೯೭೨
ಮಂಗಳೂರು
ಐಬಿಎಚ್ ಪ್ರಕಾಶನ, ಬೆಂಗಳೂರು, ಕ್ರೌ ೧/೮, ಪು. ೫೫, ರೂ. ೧.೫೦/-

ಪುರಾಣ, ಇತಿಹಾಸಗಳಲ್ಲಿ ಚಿತ್ರಿತವಾಗಿರುವ, ಪ್ರವಾಸಿಗಳ ಕಣ್ಣಲ್ಲಿ ಬಿಂಬಿಸಲ್ಪಟ್ಟ ಮಂಗಳೂರಿನ ಚಿತ್ರಣ, ಇಲ್ಲಿನ ಪ್ರೇಕ್ಷಣೀಯ ಸ್ಥಳಗಳ ಕುರಿತು ಛಾಯಾಚಿತ್ರಗಳ ಸಮೇತ ಮಾಹಿತಿ ನೀಡುವ ಕಿರುಕೃತಿ.

ಶ್ರೀನಿವಾಸ ಭಟ್ಟ ಪು. ಕಟೀಲು, ೨೦೦೫
ಕೋಲಬಲಿ (ಭೂತಾರಾಧನೆಯ ಕೆಲವು ನೋಟಗಳು)
ಯುಗ ಪುರುಷ ಕಿನ್ನಿಗೋಳಿ, ದ.ಕ.
ಕ್ರೌ. ೧/೮, ಪುಟ : ೫+೪೮, ಬೆಲೆ : ರೂ. ೩೦/-

ಭೂತಾರಾಧನೆಯ ಸಂಕ್ಷಿಪ್ತ ಪರಿಚಯ, ಅಲ್ಲಿ ಬಳಕೆಯಾಗುವ ನುಡಿಕಟ್ಟುಗಳು, ನಂಬಿಕೆಗಳು ಮೊದಲಾದವುಗಳ ಕುರಿತು ಲೇಖನಗಳ ಸಂಗ್ರಹ.

ಸಂಜೀವ ರೈ ಕೆ.ಪಿ., ೨೦೦೪
ಪರ್ಮಲೆ ನಾಡಿನ ವಿಶೇಷತೆಗಳು (ಸಂಶೋಧನಾ ಗ್ರಂಥ)
ಭಗವತಿ ಪ್ರಕಾಶನ, ಪಡುಮಲೆ, ದ.ಕ., ಡೆ. ೧/೮, ಪು. ೧೨೮, ರೂ. ೬೫/-

ಕೋಟಿ ಚೆನ್ನಯರ ಹುಟ್ಟೂರಾದಂಥ ಪರ್ಮಲೆಯ ಅಧ್ಯಯನವನ್ನು ಕೋಟಿ ಚೆನ್ನಯರ ಕಥೆಯನ್ನು ವಸ್ತುವಾಗಿ ತೆಗೆದುಕೊಂಡು ಅಧ್ಯಯನ ಮಾಡದೆ ಇಲ್ಲಿನ ಪುಮಾಣಿ ಕಿನ್ನಿಮಾಣಿ ಚರಿತ್ರೆಯನ್ನು ತೆಗೆದುಕೊಂಡು ಅಧ್ಯಯನ ಮಾಡಲಾದ ಈ ಕೃತಿಯಲ್ಲಿ ಪೂರಕವಾದ ಭಾವಚಿತ್ರಗಳೂ ಇವೆ. ಹಾಗೆಯೇ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳು. ಅಲ್ಲಿನ ಭಾಷೆ ಮತ್ತು ಸಂಸ್ಕೃತಿ, ಅಲ್ಲಿ ದೊರೆಯುವ ಅಮೂಲ್ಯ ಸಂಗ್ರಹಗಳ ಕುರಿತಾಗಿಯೂ ಮಾಹಿತಿ ಇದೆ.

ಸುಬ್ಬಣ್ಣ ರೈ ಎ., ೧೯೯೯
ಕದ್ರಿ (ಧಾರ್ಮಿಕ ಸ್ಥಿತ್ಯಂತರದ ಕೇಂದ್ರ)
ಪ್ರಸಾರಾಂಗ ಕನ್ನಡ ವಿ.ವಿ. ಹಂಪಿ, ಡೆ. ೧/೮, ಪು. ೩೧+೩, ರೂ. ೧೦/-

ಕದ್ರಿಯ ಕುರಿತು ಈ ಮೊದಲೇ ನಡೆದಂಥ ಅಧ್ಯಯನಗಳನ್ನು ಪರಾಮರ್ಶಿಸಿ, ಕೆಲವು ಜಾನಪದ ಸಂಗತಿಗಳನ್ನು ಬಳಸಿಕೊಂಡು ಕದ್ರಿಯ ಧಾರ್ಮಿಕ ಸಾಂಸ್ಕೃತಿಕ ಅಧ್ಯಯನವನ್ನು ಇದರಲ್ಲಿ ನಡೆಸಲಾಗಿದೆ.

ಸುಬ್ಬಣ್ಣ ರೈ ಎ., ೧೯೯೪
ದ.ಕ. ಜಿಲ್ಲೆಯ ಐತಿಹ್ಯಗಳು (ಸಂಶೋಧನಾ ಕೃತಿ)
ಮುಂಬಯಿ ವಿ.ವಿ.ದ ಕನ್ನಡ ಅಧ್ಯಯನ ವಿಭಾಗದ ಪರವಾಗಿ ಮಾಣಿ ಜೂನಿಯರ್
ಛೇಂಬರ್ ಮಾಣಿ, ಡೆ. ೧/೮, ಪು. ೮+೧೫೦+೫೨, ರೂ. ೬೦/-

ಈ ನಿಬಂಧದಲ್ಲಿ ಜನಪದ ಸಾಹಿತ್ಯದ ಒಂದು ಪ್ರಕಾರವಾದ ಐತಿಹ್ಯಗಳನ್ನು ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ತುಂಬ ಶಾಸ್ತ್ರೀಯವಾಗಿ ಪ್ರಸಕ್ತವಾದ ರೀತಿಯಲ್ಲಿ ಅಧ್ಯಯನ ಮಾಡಲಾಗಿದೆ. ‘ಐತಿಹ್ಯ’ ಪದನಿಷ್ಪತ್ತಿ, ಸ್ಥಳೈತಿಹ್ಯ, ವ್ಯಕ್ತಿ ಐತಿಹ್ಯ, ಐತಿಹ್ಯ ಮತ್ತು ಆಧುನಿಕತೆ ಇತ್ಯಾದಿಗಳ ಕುರಿತ ಮಾಹಿತಿಗಳನ್ನು ನೀಡಲಾಗಿದೆ.

ಸುನೀತಾ ಶೆಟ್ಟಿ, ೨೦೦೬
ತುಳು ಜಾನಪದ ಒಂದು ತೌಲನಿಕ ಅಧ್ಯಯನ
ಕನ್ನಡ ಸಾಹಿತ್ಯ ಪರಿಷತ್ತು ಡೆ. ೧/೮, ಪು. ೧೦೦, ಬೆಲೆ : ರೂ. ೪೦/-

ಸುಶೀಲಾ ಪಿ. ಉಪಾಧ್ಯಾಯ, ೧೯೮೯
ಜನಪದ ಆರಾಧನೆ ಮತ್ತು ರಂಗಕಲೆ (ಪ್ರಬಂಧಗಳ ಸಂಕಲನ)
ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಉಡುಪಿ
ಕ್ರೌ. ೧/೮, ಪು. ೮+೧೬೪, ರೂ. ೧೫/-

ಒಟ್ಟು ೩ ಪ್ರಬಂಧಗಳಿವೆ. ತುಳುನಾಡಿನ ಜನಪದ ಆರಾಧನೆಗಳು, ಪುರಾಣ ಕಾವ್ಯಗಳು, ಹಾಗೆಯೇ ತುಳುನಾಡಿನ ಆರಾಧನಾ ಸಂಪ್ರದಾಯಗಳ ಚಿತ್ರಣವೂ ಇದೆ.

ಸುಶೀಲ ಪಿ. ಉಪಾಧ್ಯಾಯ, ೧೯೯೮
ದಕ್ಷಿಣ ಭಾರತ ಜಾನಪದ ಕೆಲವು ನೋಟಗಳು
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ
ಕ್ರೌ. ೧/೮, ಪು. ೧೬+೨೬೨, ರೂ. ೬೦/-

ಈ ಸಂಕಲನದಲ್ಲಿ ತುಳು, ಕನ್ನಡ, ಮಲಯಾಳ, ತಮಿಳು ಜಾನಪದ ಸಂಬಂಧಿ ೧೩ ಲೇಖನಗಳಿವೆ. ಉದಾ: ತುಳುನಾಡಿನ ಆರಾಧನಾ ಸಂಪ್ರದಾಯಗಳು, ಭೂತಾರಾಧನೆ, ನುಡಿಕಟ್ಟು, ದ.ಕ.ದ ನಲಿಕೆ ಜನಾಂಗದ ಅಧ್ಯಯನ, ಕೇರಳದ ಸಂಸ್ಕೃತಿ, ಆಚರಣೆ, ತಮಿಳರ ಕಲೆ, ತುಳು ಜಾನಪದ ಸಾಹಿತ್ಯ ಮುಂತಾದವುಗಳಿಗೆ ಕುರಿತಂತೆ ಲೇಖನಗಳಿವೆ.

ಹರಿದಾಸ ಭಟ್ಟ ಕು.ಶಿ., ೧೯೮೨
ಸ್ವಾತಂತ್ರ್ಯ ಪೂರ್ವ ತುಳು ಸಾಹಿತ್ಯ, ಡೆ. ೧/೮, ಪು. ೨೮, ರೂ. ೫-೦೦

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ತುಳುವಿನ ಬಂದ ಕೃತಿಗಳನ್ನು ಸಮೀಕ್ಷಿಸುವ ವಿವಿಧ ವಿದ್ವಾಂಸರ ಲೇಖನ ಸಂಕಲನ.

ಹಿಮಕರ ಎ.ಕೆ., ೨೦೦೧
ಜನಮನದ ಕಂದ್ರಪ್ಪಾಡಿ (ಸಾಂಸ್ಕೃತಿಕ ಪರಿಚಯ)
ರಾಜದೈವ ಮತ್ತು ಪುರುಷದೈವ ಸ್ಥಾನ ಆಡಳಿತ ಸಮಿತಿ
ಡೆ. ೧/೮, ಪು. ೧೨+೯೦, ರೂ. ೪೦/-

ಕಂದ್ರಪಾಡಿ ಸೀಮೆಯ ಸಾಂಸ್ಕೃತಿಕ ಪರಿಚಯ ನೀಡುವ ಕೃತಿ. ಇದು ಇತಿಹಾಸದೊಳಗಿನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಡಳಿತಾತ್ಮಕ, ಧಾರ್ಮಿಕ ಮುಂತಾದ ವೈವಿಧ್ಯಮಯ ಜಗತ್ತನ್ನು ಒಮ್ಮೆಗೇ ತೆರೆದಿಡುತ್ತದೆ. ಕಂದ್ರಪ್ಪಾಡಿಯಲ್ಲಿ ಆರಾಧಿಸಲಾಗುವ ಪುರುಷದೈವದ ಬಗ್ಗೆಯೂ ಮಾಹಿತಿ ಇದೆ. ವಿವಿಧ ಆರಾಧನೆ – ಆಚರಣೆಯನ್ನು ಬಿಂಬಿಸುವ ರೇಖಾಚಿತ್ರಗಳೂ, ಛಾಯಾಚಿತ್ರಗಳೂ ಇವೆ.

ಧರ್ಮಸ್ಥಳ ಕ್ಷೇತ್ರ ಪರಿಚಯ ೧೯೭೭ (I) ೧೯೭೮ (II, III, IV)
ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್ (ರಿ.) ಉಜಿರೆ.
ಕ್ರೌ. ೧/೮, ಪು. ೨+೫೨. ರೂ. ೨.೫೦/-

ಧರ್ಮಸ್ಥಳದ ಕುರಿತಂತೆ ಕ್ಷೇತ್ರ ಪರಿಚಯ ನೀಡುತ್ತದೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಂಕ್ಷಪ್ತ ಇತಿಹಾಸ ೧೯೭೫
ರೋಯಲ್ ಪ್ರಕಾಶನ, ಅಳಕೆ, ಮಂಗಳೂರು, ಕ್ರೌ. ೧/೮,

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಹಾಗೂ ಕುದ್ರೋಳಿಯ ಇತಿಹಾಸವನ್ನು ತಿಳಿಸುವ ಕೃತಿ.

ದಕ್ಷಿಣ ಕನ್ನಡ ಜಿಲ್ಲೆ ೧೯೬೬
ಕ್ರೌ. ೧/೮, ಪು. ೪+೪೭

ಮೈಸೂರು ಸರಕಾರದ ಪ್ರಚಾರ ಮತ್ತು ವಾರ್ತಾ ಇಲಾಖೆಯ ಪ್ರಕಟಣೆ ಬೆಂಗಳೂರು ದ.ಕ. ಜಿಲ್ಲೆಯ ಪ್ರಥಮ, ದ್ವಿತೀಯ ಯೋಜನೆಗಳಲ್ಲಿ ಹಾಗೂ ತೃತೀಯ ಯೋಜನೆಗಳಲ್ಲಾದ ಪ್ರಗತಿಯನ್ನು ವೈದ್ಯಕೀಯ, ಶಿಕ್ಷಣ, ನೀರಾವರಿ, ಸಾರಿಗೆ – ಸಂಪರ್ಕ ಇತ್ಯಾದಿಗಳ ಮೂಲಕ ತಿಳಿಸಲಾಗಿದೆ. ಮೊದಲ ಅಧ್ಯಾಯವಾದ ‘ತೌಳವ ವೈಭವ’ದಲ್ಲಿ ತುಳುನಾಡಿನ ಪ್ರಮುಖ ಧರ್ಮಗಳು, ಪಂಥಗಳೂ ಇಲ್ಲಿನ ಆರಾಧನೆ, ಮೂಲನಿವಾಸಿಗಳು, ತುಳು ನಾಡಿನ ಅರಸು ಮನೆತನಗಳು ಭೌಗೋಳಿಕ ವಿಸ್ತೀರ್ಣ, ತಾಲೂಕುಗಳು, ಬೆಳೆಗಳು ಇತ್ಯಾದಿಗಳ ಬಗೆಗಿನ ವಿವರಣೆಯಿದೆ. (ಪು. ೩-೧೪)