ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲ ಪತ್ರಿಕೆಯೆಂದು ಗುರುತಿಸಲಾಗಿರುವ ‘ಮಂಗಳೂರು ಸಮಾಚಾರ’ (೧೮೪೫)ದ ಮೂಲಕವೇ ತುಳು ಪತ್ರಿಕೋದ್ಯಮದ ಆರಮಭವನ್ನೂ ಗುರುತಿಸಬಹುದು. ಸಮುದ್ರ ಮಾರ್ಗದ ಮೂಲಕ ಪಶ್ಚಿಮ ಕರಾವಳಿಗೆ ಕಾಲಿಟ್ಟ ಜರ್ಮನಿಯ ಬಾಸೆಲ್ ಮಿಶಿನ್ ಪಾದ್ರಿಗಳು ಮಂಗಳೂರು, ಕಾಸರಗೋಡು ಮೊದಲಾದ ಕಡೆ ನಿಧಾನವಾಗಿ ಶಿಕ್ಷಣ ಸಂಸ್ಥೆ, ಹಂಚಿನ ಕಾರ್ಖಾನೆ, ಮುದ್ರಣ ಮೊದಲಾದ ಕ್ಷೇತ್ರಗಳಲ್ಲಿ ದುಡಿಯುವ ಉದ್ದೇಶದಿಂದ ಸಂಸ್ಥೆಗಳನ್ನು ಸ್ಥಾಪಿಸಿದರು. ಚರ್ಚ್‌ಗಳನ್ನು ಆರಂಭಿಸಿದರು. ‘ಮಂಗಳೂರು ಸಮಾಚಾರ’ ಪತ್ರಿಕೆಯ ಪ್ರಕಟಣೆಯ ಹಿಂದೆ ಧರ್ಮಪ್ರಸಾರ ಮತ್ತು ಸ್ಥಳೀಯರ ಮತಾಂತರದ ಉದ್ದೇಶ ಪ್ರಮುಖವಾಗಿದ್ದರೂ ಐತಿಹಾಸಿಕವಾಗಿ ಅದು ಪತ್ರಿಕೋದ್ಯಮಕ್ಕೆ ಸಲ್ಲಿಸದ ಕಾಣಿಕೆಯನ್ನು ಮರೆಯುವಂತಿಲ್ಲ.

‘ಮಂಗಳೂರು ಸಮಾಚಾರ’ದ ತುಳು ಅಂಕಣದಲ್ಲಿ ಕೆಲವು ಸುದ್ದಿಗಳು ಮತ್ತು ವಿಚಾರಗಳು ತುಳುವಿನಲ್ಲಿ ಪ್ರಕಟವಾಗುತ್ತಿದ್ದವು. ಸ್ಥಳೀಯ ತುಳು ಮಾತನಾಡುವ ಜನರನ್ನು ಆಕರ್ಷಿಸುವುದು ಅದರ ಹಿಂದಿನ ಉದ್ದೇಶವಾಗಿತ್ತು. ೧೮೫೮ರಲ್ಲಿ ತುಳು ಭಾಷೆಯಲ್ಲೇ ವಾರ ಪತ್ರಿಕೆಯೊಂದು ಅಚ್ಚಾಗಿ ಹೊರಬರುತ್ತಿತ್ತು.[1] ಅನಂತರ ಬಹಳ ಕಾಲ ತುಳು ಬರವಣಿಗೆ ಯಾವ ಪತ್ರಿಕೆಯಲ್ಲೂ ಕಾಣಿಸಿಕೊಳ್ಳಲಿಲ್ಲ. ಆಗ ಓದುಗರ ಸಂಖ್ಯೆ ತುಂಬ ಕಡಿಮೆ ಇದ್ದುದು ಮತ್ತು ಓದುಗರು ಕನ್ನಡವನ್ನು ಬಲ್ಲವರಾಗಿದ್ದುದರಿಂದ ಪತ್ರಿಕೆಗಳಲ್ಲಿ ಕನ್ನಡದ ಬಳಕೆಯೇ ಮುಂದುವರಿಯಿತು.

ಗಾಂಧೀಜಿಯವರ ಸ್ವರಾಜ್ಯ ಹೋರಾಟದ ಕಾರಣದಿಂದ ದೇಶಾದ್ಯಂತ ತಮ್ಮ ತಮ್ಮ ದೇಶಭಾಷೆಯ ಬಗೆಗೆ ಜನರಿಗೆ ಎಚ್ಚರ ಮೂಡಿತು. ೧೯೨೮ರಲ್ಲಿ ಉಡುಪಿಯಲ್ಲಿ ಎಸ್‌.ಯು. ಪಣಿಯಾಡಿ, ಎನ್.ಎಸ್. ಕಿಲ್ಲೆ, ಪೊಳಲಿ ಶೀನಪ್ಪ ಹೆಗ್ಡೆ, ಬಡಕಬೈಲು ಪರಮೇಶ್ವರಯ್ಯ ಮೊದಲಾದವರು ತುಳು ಚಳುವಳಿಯನ್ನು ಹುಟ್ಟು ಹಾಕಿದರು. ೧೯೨೮ ಮತ್ತು ೧೯೩೫ರ ಅವಧಿಯಲ್ಲಿ ಎಸ್‌.ಯು. ಪಣಿಯಾಡಿಯವರು ತಮ್ಮ ‘ತುಳುವ ಸಾಹಿತ್ಯಮಾಲೆ’ಯ ಮೂಲಕ ಹನ್ನೊಂದು ಪುಸ್ತಕಗಳನ್ನು ಪ್ರಕಟಿಸಿದರು.

ಈ ಅವಧಿಯಲ್ಲಿ ಪೊಳಲಿ ಶೀನಪ್ಪ ಹೆಗ್ಡೆ, ಬುಡಕಬೈಲ್ ಪರಮೇಶ್ವರಯ್ಯ ಮತ್ತು ಮಂಗಳೂರಿನ ವಕೀಲರಾದ ಆನಂದ ತಳವಾರ ಮೊದಲಾದವರು ಪೊಳಲಿಯಲ್ಲಿ ತುಳು ಸಮ್ಮೇಳನ ಸಂಘಟಿಸಿದರು. ಆಗ ಅವರು ‘ತುಳುನಾಡು’ ಎಂಬ ಕೈಬರಹದ ಪತ್ರಿಕೆಯನ್ನು ಪ್ರಕಟಿಸಿದರು. ‘ಪತ್ರಿಕೆಯ ಪ್ರತಿ ತಿಂಗಳ ಸಂಚಿಕೆಯಲ್ಲಿಯೂ ಹೆಗ್ಡೆಯವರ ಮುತ್ತಿನಂತಹ ಅಕ್ಷರ, ಬಡಕಬೈಲ್ ಪರಮೇಶ್ವರಯ್ಯರ ಬೇರೆ ಬೇರೆ ಲೇಖನಗಳು, ಕವಿತೆಗಳು, ನೀತಿ ಪದ್ಯಗಳು ಅದರಲ್ಲಿ ಇರುತ್ತಿದ್ದವು. ಹೆಗ್ಡೆಯವರ ‘ತೆಲಿಪುಲೆ’ (ನಕ್ಕುಬಿಡಿ) ಸಂಗ್ರಹವನ್ನು ಮತ್ತು ಕಿಲ್ಲೆಯವರ ಪದ್ಯಗಳನ್ನು ಅದರಲ್ಲಿ ಸೇರಿಸುತ್ತಿದ್ದರು. ಆ ಕಾಲದಲ್ಲಿ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಪ್ರದರ್ಶನದಲ್ಲಿ ಈ ಹಸ್ತಪತ್ರಿಕೆಗೆ ಮೊದಲ ಬಹುಮಾನ ಸಿಕ್ಕಿತು’[2] (ಅನುವಾದ ನನ್ನದು).

೧೯೨೧ರಲ್ಲಿ ಹೊನ್ನಯ್ಯ ಶೆಟ್ಟರು ಉಡುಪಿಯಲ್ಲಿ ‘ನವಯುಗ’ ಎಂಬ ಕನ್ನಡ ಪತ್ರಿಕೆ ಆರಂಭಿಸಿದ್ದರು. ತುಳು ಭಾಷೆಯ ಪುನರುಜ್ಜೀವನದ ಕುರಿತು ನಡೆಸಿದ ಚಳವಳಿಯ ಕಾವಿನಿಂದಾಗಿ ‘ನವಯುಗ’ವು ೧೯೩೬ರಿಂದ ಸುಮಾರು ಮೂವು ವರ್ಷಗಳ ಕಾಲ ತಿಂಗಳಿಗೊಂದರಂತೆ ತುಳು ಪುರವಣಿಗೆಗಳನ್ನು ಹೊರತಂದಿತು. ತುಳು ಸಂಚಿಕೆಯ ಆರಂಭದ ಪುರವಣಿಯಲ್ಲಿ (೧-೧೦-೧೯೩೬ ಸಂಪಾದಕರು ಹೀಗೆ ಬರೆದರು –

‘ದಿನ ಕಳೆದಂತೆ ತುಳುಭಾಷೆಯ ಪ್ರಚಾರ ಹೆಚ್ಚಾಗುತ್ತಿದೆ. ತುಳು ಭಾಷೆಯ ಪ್ರಚಾರದ ಅವಶ್ಯಕತೆಯನ್ನು ಜನರೂ ತಿಳಿಯತೊಡಗಿದ್ದಾರೆ. ಸ್ವಭಾಷೆಯ ಬಗೆಗಿನ ಸ್ವಾಭಿಮಾನದ ಈ ಯುಗದಲ್ಲಿ ತುಳುವರು ಪ್ರೀತಿಯಿಂದ ತಮ್ಮ ಭಾಷೆಯನ್ನು ಪ್ರಚಾರ ಮಾಡಿದರೆ ಅದು ತಪ್ಪಲ್ಲವೆಂದು ಭಾವಿಸುತ್ತೇನೆ. ಅನೇಕ ಚಂದಾದಾರರ ಆಪೇಕ್ಷೆಯ ಮೇರೆಗೆ ಮತ್ತು ಕೆಲವು ಹಿತಚಿಂತಕರ ಪ್ರೋತ್ಸಾಹದ ಫಲವಾಗಿ ತಿಂಗಳಿಗೊಂದರಂತೆ ‘ತುಳು ಸಂಚಿಕೆ’ ಎಂಬ ಪುರವಣಿಯನ್ನು ನೀಡಲು ನಿರ್ಧರಿಸಿದ್ದೇವೆ. ಅದರಲ್ಲಿ ಮುಖ್ಯವಾಗಿ ಕತೆ, ಕವನಗಳನ್ನು ಮತ್ತು ತುಳುನಾಡು, ತುಳುವ ಸಂಸ್ಕೃತಿ, ತುಳು ಭಾಷೆ ಮೊದಲಾದವುಗಳ ಬಗೆಗಿನ ಲೇಖನಗಳನ್ನು ಪ್ರಕಟಿಸುವವರಿದ್ದೇವೆ. ತುಳು ಭಾಷೆಯ ಕವಿಗಳು ಮತ್ತು ಲೇಖಕರು ಸಹಕಾರ ನೀಡುವರೆಂಬ ಭರವಸೆ ನಮಗಿದೆ.[3] (ಅನುವಾದ ನನ್ನದು). ಮೂರು ವರ್ಷಗಳ ಬಳಿಕ ಪ್ರಸಾರದ ಕೊರತೆ ಹಾಗೂ ಆರ್ಥಿಕ ಸಂಕಷ್ಟದಿಂದ ತುಳು ಪುರವಣಿಯನ್ನು ನಿಲ್ಲಿಸಬೇಕಾಯಿತು.

೧೯೩೫ರಲ್ಲಿ ಮಂಗಳೂರಿನಲ್ಲಿ ಕುಡ್ಪಿ, ವಾಸುದೇವ ಶೆಣೈಯವರ ಸಂಪಾದಕತ್ವದಲ್ಲಿ ‘ಪ್ರಭಾತ’ ಎಂಬ ಕನ್ನಡ ಪತ್ರಿಕೆ ಪ್ರಕಟವಾಗುತ್ತಿತ್ತು. ಅದರಲ್ಲಿ ತುಳುಗಾದೆ, ತುಳು ಒಗಟು ಮುಂತಾದವು ಕನ್ನಡ ಅರ್ಥದೊಂದಿಗೆ ಪ್ರಕಟವಾಗುತ್ತಿದ್ದವು.

ತುಳುವಿನಲ್ಲಿ ಸುದ್ದಿ ಪತ್ರಿಕೆಗಳು ಪ್ರಕಟವಾದುದಕ್ಕಿಂತಲೂ ಸಾಹಿತ್ಯ ಪತ್ರಿಕೆಗಳು ಪ್ರಕಟವಾದುದು ಹೆಚ್ಚು. ಪಾಕ್ಷಿಕ, ಮಾಸಿಕ, ದ್ವೈ ಮಾಸಿಕ, ತ್ರೈಮಾಸಿಕ ಪತ್ರಿಕೆಗಳಿಗೆ ತೊಡಗಿಸಬೇಕಾದ ಬಂಡವಾಳ ಕಡಿಮೆ ಮತ್ತು ಮಾರುವ ಅವಧಿ ಹೆಚ್ಚಾಗಿರುವ ಅನುಕೂಲತೆಗಳಿಂದಾಗಿ ಸಾಹಿತ್ಯ ಪತ್ರಿಕೆಗಳೇ ತುಳುವಿನಲ್ಲಿ ಹೆಚ್ಚಾಗಿ ಪ್ರಕಟವಾದವು.

೧೯೬೮ರಲ್ಲಿ ಮಂಗಳೂರಿನಲ್ಲಿ ಎಸ್.ಆರ್. ಹೆಗ್ಡೆಯವರ ನೇತೃತ್ವದಲ್ಲಿ ‘ತುಳು ಕೂಟ’ ಸ್ಥಾಪನೆಯಾಗಿ ತುಳು ಸಂಬಂಧೀ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ೧೯೭೦ರ ದಶಕವನ್ನು ತುಳು ಎಚ್ಚರದ ಎರಡನೆಯ ಘಟ್ಟವೆಂದು ಗುರುತಿಸಬಹುದು. ಆ ದಶಕದಲ್ಲಿ ಕೆಲವು ತುಳು ಪತ್ರಿಕೆಗಳು ಹುಟ್ಟಿಕೊಂಡವು.

ಅಮ್ಮೆಂಬಳ ಬಾಳಪ್ಪ, ವಿಶುಕುಮಾರ್, ಅ. ಬಾಲಕೃಷ್ಣ ಶೆಟ್ಟಿ ಪೊಳಲಿ ಸಂಪಾದಕರಾಗಿದ್ದ ‘ತುಳು ಸಿರಿ’ ಎಂಬ ಪಾಕ್ಷಿಕ ೧೯೭೧ರಲ್ಲಿ ಆರಂಭಗೊಂಡು ಸುಮಾರು ಮೂರು ವರ್ಷ ನಡೆಯಿತು. ತುಳು ಭಾಷೆಯ ಪ್ರಾಮುಖ್ಯ, ಅದರ ಹೆಚ್ಚುಗಾರಿಕೆ, ರೀತಿ ರಿವಾಜು, ಕಟ್ಟುಕಟ್ಟಲೆ, ಕತೆ, ಕವಿತೆ, ಲೇಖನ ಮುಂತಾದ ಸಾಹಿತ್ಯ ಅದರಲ್ಲಿ ಪ್ರಕಟವಾಗುತ್ತಿತ್ತು. ತುಳುಕೂಟವು ೧೯೭೧ರ ಜನವರಿಯಿಂದ ‘ತುಳುಕೂಟ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿತು. ಕಲ್ಲಾಯಿ ಜಗನ್ನಾಥ ರೈ ಮತ್ತು ಎಂ. ರತ್ನಕುಮಾರ್ ಈ ಪತ್ರಿಕೆಯ ಸಂಪಾದಕರಾಗಿದ್ದರು. ಎಸ್.ಆರ್. ಹೆಗ್ಡೆ, ಅಮೃತ ಸೋಮೇಶ್ವರ, ಎಂ.ಲೋಕಯ್ಯ ಶೆಟ್ಟಿ, ತಾನೋಜಿರಾವ್ ಬೇಕಲ್ ಮತ್ತು ಶ್ಯಾಮ್ ಗೋಪಾಲ್ ಅದರ ಸಹಾಯಕ ಸಂಪಾದಕರಾಗಿದ್ದರು. ವಿಶೇಷ ಲೇಖನ, ಧಾರಾವಾಹಿ, ಕಥೆ, ಕವನ, ಸುದ್ದಿ ಸಂಗ್ರಹ ಮತ್ತು ಸಿನಿಮಾ ವಿಚಾರಗಳು ಅದರಲ್ಲಿ ಪ್ರಕಟವಾಗುತ್ತಿದ್ದವು. ೧೯೭೭ರ ದೀಪಾವಳಿವರೆಗೆ ನಡೆದ ಈ ಪತ್ರಿಕೆ ಅನಂತರ ಪ್ರಸಾರದ ಕೊರತೆ ಹಾಗೂ ಓದುಗರ ಬೆಂಬಲವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸಿ ನಿಂತು ಹೋಯಿತು. ತುಳು ಪತ್ರಿಕೆ ನಡೆಸಲು ಸ್ವಂತ ಮುದ್ರಣಾಲಯ ಸ್ಥಾಪಿಸಿದ ಕೀರ್ತಿ ಈ ಸಂಸ್ಥೆಯದು.

೧೯೮೪ರಲ್ಲಿ ‘ತುಳುಕೂಟ’ ಪತ್ರಿಕೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಾದವು. ಅದರಂತೆ ತ್ರೈಮಾಸಿಕವಾಗಿ ‘ತುಳುಕೂಟ’ ಪ್ರಕಟಣೆಯನ್ನು ಪುನರಾರಂಭಿಸಿತು. ನಾಲ್ಕು ಸಂಚಿಕೆ ಪ್ರಕಟವಾಗಿ ಅನಂತರ ಅದು ನಿಂತು ಹೋಯಿತು.

ಸಾಂಸ್ಥಿಕ ಮಟ್ಟದಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ತುಳು ಪತ್ರಿಕೆ ನಡೆಸುವ ಸಾಹಸಕ್ಕೆ ಕೆಲವರು ಕೈಹಾಕಿದರು. ತುಳು ಲೇಖಕರಾಗಿದ್ದ ರಮೇಶ ಕರ್ನಾಡ್ ೧೯೭೪ರ ಅಕ್ಟೋಬರ್ ನಲ್ಲಿ ‘ತುಳು ವಾಣಿ’ ಎಂಬ ಮಾಸಿಕವನ್ನು ಮಂಗಳೂರಿನಲ್ಲಿ ಆರಂಭಿಸಿದರು. ಅದರ ಬೆಲೆ ೫೦ ಪೈಸೆ, ಸುಮಾರು ಒಂದೂವರೆ ಸಾವಿರದಷ್ಟು ಪ್ರಸಾರ ಸಂಖ್ಯೆ ಹೊಂದಿತ್ತು. ೧೯೭೬ರಲ್ಲಿ ಸಣ್ಣ ಹರೆಯದಲ್ಲಿ ರಮೇಶ ಕಾರ್ನಾಡ್ ತೀರಿಕೊಳ್ಳುವುದರೊಂದಿಗೆ ‘ತುಳುವಾಣಿ’ ಕಣ್ಣು ಮುಚ್ಚಿತು.

೧೯೭೬ರ ಜನವರಿ ೨೬ರಂದು ಮಾಧವ ಕುಲಾಲ್ ತನ್ನ ಸಂಪಾದಕತ್ವದಲ್ಲಿ ‘ತುಳುವೆರೆ ಬಂಧು’ ಎಂಬ ಪತ್ರಿಕೆಯನ್ನು ಮಂಗಳೂರಿನಿಂದ ಆರಂಭಿಸಿದರು. ಸುದ್ದಿ ಸಂಗ್ರಹ, ಕತೆ – ಕವಿತೆ – ಲೇಖನ ಮುಂತಾದ ತುಳು ಸಾಹಿತ್ಯ, ತುಳು ಸಿನಿಮಾ ವಿಚಾರಗಳು, ವರ್ಷ ಭವಿಷ್ಯ ಇತ್ಯಾದಿ ವಿಚಾರಗಳು ಅದರಲ್ಲಿ ಪ್ರಕಟವಾಗುತ್ತಿದ್ದವು. ಈ ಪತ್ರಿಕೆಗೆ ೬೦ ಪೈಸೆ ಬೆಲೆ ನಿಗದಿಯಾಗಿತ್ತು. ಸುಮಾರು ಒಂದೂವರೆ ಸಾವಿರದಷ್ಟು ಪ್ರಸಾರ ಸಂಖ್ಯೆ ಹೊಂದಿತ್ತು. ಓದುಗರ ಬೆಂಬಲ ಸಾಲದೆ, ನಷ್ಟ ಅನುಭವಿಸಿ ಒಂದೂವರೆ ವರ್ಷದ ಪ್ರಕಟಣೆಯ ಬಳಿಕ ಈ ಪತ್ರಿಕೆ ನಿಂತುಹೋಯಿತು.

‘ತುಳುಕೂಟ’ದ ಸಂಪಾದಕರಲ್ಲಿ ಒಬ್ಬರಾಗಿದ್ದ ಕಲ್ಲಾಯಿ ಜಗನ್ನಾಥ ರೈಗಳು ತನ್ನ ಹಿಂದಿನ ಅನುಭವದ ಹಿನ್ನೆಲೆಯಲ್ಲಿ ೧೯೮೧ರಲ್ಲಿ ‘ತುಳುನಾಡ್’ ಎಂಬ ಮಾಸಿಕ ಆರಂಭಿಸಿದರು. ಎಂ. ಮರಿಯಪ್ಪ ಭಟ್, ಬನ್ನಂಜೆ ಗೋವಿಂದಾಚಾರ್ಯ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಎಂ.ವಿ.ಹೆಗ್ಡೆ, ಗೀತಾ ಕುಲಕರ್ಣಿ, ಕೆ. ಲಕ್ಷ್ಮಣ ಮೊದಲಾದವರು ಅದರ ಸಂಪಾದಕ ಮಂಡಲಿಯಲ್ಲಿದ್ದರು. ಸುಮಾರು ಒಂದು ವರ್ಷ ಕುಂಟುತ್ತಾ ಎಡವುತ್ತಾ ಸಾಗಿದ ಈ ಪತ್ರಿಕೆಯೂ ಪ್ರಕಟಣೆ ನಿಲ್ಲಿಸಬೇಕಾಗಿ ಬಂತು. ೧೯೮೪ ಅಕ್ಟೋಬರ್ ನಲ್ಲಿ ಅವರು ಆ ಪತ್ರಿಕೆಯನ್ನು ಪಾಕ್ಷಿಕವಾಗಿ ಆರಂಭಿಸಿದರು. ೧೯೮೫ರ ಮೇ ವರೆಗೆ ಪ್ರಕಟವಾಗಿ ಅನಂತರ ಅದು ನಿಂತು ಹೋಯಿತು.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ವತಿಯಿಂದ ‘ತುಳುವ’ ಎಂಬ ತ್ರೈಮಾಸಿಕ ೧೯೮೦ರಲ್ಲಿ ಆರಂಭವಾಯಿತು, ಸಂಸ್ಥೆಯ ಕಾರ್ಯಚಟುವಟಿಕೆಯ ವರದಿಯ ಜೊತೆಗೆ ತುಳುಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಲೇಖನಗಳು, ಕಥೆ, ಕವನಗಳು ಅದರಲ್ಲಿ ಅಚ್ಚಾಗುತ್ತಿದ್ದವು. ‘ಖಾಸಗಿ ಪ್ರಸಾರಕ್ಕಾಗಿ’ ಪ್ರಕಟವಾಗುತ್ತಿದ್ದು ಆ ಪತ್ರಿಕೆಯಲ್ಲಿ ತುಳು ಮಾತ್ರವಲ್ಲದೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿಯೂ ಲೇಖನಗಳು ಇರುತ್ತಿದ್ದವು. ಕು. ಶೀ. ಹರಿದಾಸ ಭಟ್ ಅದರ ಸಂಪಾದಕರಾಗಿದ್ದರು.

ಎಷ್ಟೇ ನಷ್ಟ ಅನುಭವಿಸಿದರೂ ಅಲ್ಪಾಯುವಾದರೂ ತುಳು ಪತ್ರಿಕೆಗಳನ್ನು ನಡೆಸುವ ಛಲವಂತರು, ಧೈರ್ಯಸ್ಥರು ಮುಂದೆ ಬರುತ್ತಿದ್ದರು. ೧೯೮೪ರ ಜುಲಾಯಿಯಲ್ಲಿ ಬಾ. ಸಾಮಗ ಮಲ್ಪೆ ‘ತುಳುವೆರ್’ ಎಂಬ ಮಾಸಿಕವನ್ನು ದೆಹಲಿಯಿಂದ ಆರಂಭಿಸಿದರು. ಸುದ್ದಿ ಚಿತ್ರ, ಸಣ್ಣಪುಟ್ಟ ಕತೆ, ಕವನಗಳಿಂದ ಕೂಡಿದ ಈ ಪತ್ರಿಕೆ ಸುಮಾರು ಮೂರು ವರ್ಷಗಳ ಪ್ರಕಟಣೆ ಕಂಡು ನಿಂತು ಹೋಯಿತು.

೧೭-೫-೧೯೮೬ರಲ್ಲಿ ಬಿ. ಮಂಜುನಾಥ್ ‘ತುಳು ರಾಜ್ಯ’ ಎಂಬ ಮಾಸಪತ್ರಿಕೆಯನ್ನು ಮಂಗಳೂರಿನಲ್ಲಿ ಆರಂಭಿಸಿದರು. ೧೯೮೮ರಲ್ಲಿ ಅದನ್ನು ದಿನ ಪತ್ರಿಕೆಯಾಗಿ ಪರಿವರ್ತಿಸಿದರು. ಎರಡು ಪುಟಗಳಲ್ಲಿ ಟ್ಯಾಬ್ಲಾಯ್ಡ್ ಗಾತ್ರದಲ್ಲಿ ಅದು ಪ್ರಕಟವಾಗುತ್ತಿತ್ತು. ತುಳುವಿನಲ್ಲಿ ದಿನಪತ್ರಿಕೆ ಬಹುಶಃ ಅದೇ ಮೊದಲಿನದು. ಓದುಗರ ಬೆಂಬಲವಿಲ್ಲದೆ ಅದು ಬಹುಕಾಲ ನಡೆಯಲಿಲ್ಲ. ಅವರಿಗೆ ಸ್ವಂತ ಮುದ್ರಣಾಲಯವಿದ್ದರೂ ಐದಾರು ವರ್ಷಗಳ ಒಟ್ಟು ಅವಧಿಯಲ್ಲಿ ಆ ಪತ್ರಿಕೆ ನಿಂತು ಹೋಯಿತು.

೧೯೮೭ರ ನವೆಂಬರ್ ನಲ್ಲಿ ಪೇರೂರು ಜಾರು ಬೆಂಗಳೂರಿನಿಂದ ‘ತಿಂಗೊಳುಗೊಂಜಿ ತೂಟೆ’ ಎಂಬ ಮಾಸಿಕ ಆರಂಭಿಸಿದರು. ಅದರಲ್ಲಿ ತುಳು ಸಾಹಿತ್ಯ, ಕತೆ ಕವನಗಳ ಜೊತೆಗೆ ಕನ್ನಡದಲ್ಲಿಯೂ ಕೆಲವು ಲೇಖನಗಳು ಪ್ರಕಟವಾಗುತ್ತಿದ್ದವು. ತುಳುವಿನ ಮೂಲಕ ಕನ್ನಡ ಕಲಿಸುವ ಪ್ರಯತ್ನವನ್ನೂ ಈ ಪತ್ರಿಕೆ ಮಾಡಿತು. ಒಂದೆರಡು ವರ್ಷಗಳ ಪ್ರಕಟಣೆಯ ಬಳಿಕ ಪ್ರಸಾರದ ಕೊರತೆ ಮತ್ತು ಆರ್ಥಿಕ ನಷ್ಟದಿಂದ ಈ ಪತ್ರಿಕೆ ನಿಂತುಹೋಯಿತು.

೧೯೮೭ ಮತ್ತು ೧೯೯೬ರ ಮಧ್ಯೆ ಇನ್ನೂ ಕೆಲವು ಪತ್ರಿಕೆಗಳು ಕೆಲಕಾಲ ಪ್ರಕಟಣೆ ಕಂಡವು. ಉರಲ್ (ಸಂಪಾದಕರು: ಕುದ್ಕಾಡಿ ವಿಶ್ವನಾಥ ರೈ, ಆರಂಭ ೧೯೯೪), ‘ರಾಶಿ’, (ಸಂ. ಗಣನಾಥ ಎಕ್ಕಾರು, ಆರಂಭ ೧೯೮೯), ತುಳುವೆರೆ ಕೇದಗೆ (ಸಂ. ಮುಂಡಪ್ಪ ಬೋಳೂರು, ಆರಂಭ ೧೯೯೧), ತುಳುವೆರೆ ತುಡರ್ (ಸಂ. ಮ. ವಿಠ್ಠಲ ಪುತ್ತೂರು, ಆರಂಭ ೧೯೯೧) ತುಳುವೆರೆ ಕುಡ್ಲ (ಸಂ. ವಿಠ್ಠಲ ಪುತ್ತೂರು), ಪೊಸಕುರಾಲ್ (ಸಂ. ವೇದವ್ಯಾಸ ಕೋಟೆಕಾರು, ಆರಂಭ ೧೯೯೬) ಮೊದಲಾದ ಪತ್ರಿಕೆಗಳು ಕೆಲಕಾಲ ಪ್ರಕಟವಾಗಿ ನಿಂತವು. ‘ರಾಶಿ’ ಮಾಸಿಕದಲ್ಲಿ ತುಳು ಮತ್ತು ಕನ್ನಡದಲ್ಲಿ ತುಳುನಾಡಿನ ಜಾನಪದ, ಆಚಾರ ವಿಚಾರ, ನಂಬಿಕೆ ನಡವಳಿಕೆ, ಬದುಕು, ಆಟಪಾಟ, ಕತೆ ಒಗಟು, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ ಲೇಖನಗಳಿರುತ್ತಿದ್ದವು. ಕ್ಷೇತ್ರದಿಂದ ಸಂಗ್ರಹಿಸಿದ ಮಾಹಿತಿ ಗಳಿರುತ್ತಿದ್ದವು. ಜಾನಪದ ಸಂಗ್ರಹ ಕಾರ್ಯವೂ ಜೊತೆ ಜೊತೆಗೆ ಆಗುತ್ತಿತ್ತು.

ಕೆಲವು ಕನ್ನಡ ಪತ್ರಿಕೆಗಳಲ್ಲಿ ನಿಯಮಿತವಾಗಿ ತುಳು ಅಂಕಣಗಳು ಪ್ರಕಟವಾಗುತ್ತಿದ್ದವು. ಮ. ನವೀನಚಂದ್ರ ಅವರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಸಂಗಾತಿ ಪತ್ರಿಕೆ’ಯಲ್ಲಿ ತುಳು ವಿಭಾಗವಿರುತ್ತಿದ್ದು ಅದರಲ್ಲಿ ಕತೆ, ಕವನ, ಲೇಖನಗಳು ಪ್ರಕಟವಾಗುತ್ತಿದ್ದವು. ಮಂಗಳೂರು ಜಾರಪ್ಪ ಅವರ ‘ಪೂಜಾರಿ ಬಂಧು’ ಮಾಸಿಕದಲ್ಲಿ, ಶ್ರೀನಿವಾಸ ಮರಕಲ ಅವರ ಮಾಸಿಕ ‘ಮೀನಾವಳಿ’ಯಲ್ಲಿ ‘ತುಳುನೆಲ’ ಎಂಬ ವಿಭಾಗವಿರುತ್ತಿದ್ದು ಅದರಲ್ಲಿ ತುಳು ಲೇಖನ, ಕತೆಕವನಗಳು ಪ್ರಕಟವಾಗುತ್ತಿದ್ದವು.

ಸುರತ್ಕಲ್‌ನಿಂದ ಪ್ರಕಟವಾಗುತ್ತಿದ್ದ ‘ಪುರವಾಣಿ’ ವಾರಪತ್ರಿಕೆಯಲ್ಲಿ, ಮಂಗಳೂರಿನ ಶ್ರೀ ವೆಂಕಟೇಶ್ವರ ಶಿವಭಕ್ತಿಯೋಗ ಸಂಘದ ‘ಗೃಹ ಪತ್ರಿಕೆ’ಯಲ್ಲಿ, ಮಂಗಳೂರಿನ ಸಂಜೆ ದಿನಪತ್ರಿಕೆ ‘ಮಂಗಳೂರು ವಾರ್ತೆ’ಯಲ್ಲಿ (ವಾರಕ್ಕೊಮ್ಮೆ ಅರ್ಧ ಪುಟ), ಕಾಸರಗೋಡಿನಿಂದ ಪ್ರಕಟವಾಗುತ್ತಿದ್ದ ‘ಬಯ್ಯಮಲ್ಲಿಗೆ’ ದೈನಿಕದಲ್ಲಿ ವಾರಕ್ಕೊಮ್ಮೆ ತುಳುವಿಗೆ ಪ್ರತ್ಯೇಕ ಅಂಕಣ ಒದಗಿಸಲಾಗಿತ್ತು.

ಸದ್ಯ ಮುಂಬಯಿಯಿಂದ ಪ್ರಕಟವಾಗುವ ‘ಬಂಟವಾಣಿ’ ಮಾಸಿಕ ಅಕ್ಷಯದಲ್ಲಿ, ಕಾಸರಗೋಡಿನಿಂದ ಪ್ರಕಟವಾಗುವ ‘ಕಾರವಲ್’ (ಕನ್ನಡ ದೈನಿಕ)ನಲ್ಲಿ ತುಳುವಿಗೆ ಪ್ರತ್ಯೇಕ ಅಂಕಣ ಒದಗಿಸಿ ಕತೆ, ಕವನ, ಲೇಖನ, ಚುಟುಕ, ಹನಿಗವನ, ಪ್ರಶ್ನೋತ್ತರ ಇತ್ಯಾದಿಗಳನ್ನು ಪ್ರಕಟಿಸಲಾಗುತ್ತಿದೆ. ‘ಕಾರವೆಲ್’ ದೈನಿಕದಲ್ಲಿ ಪ್ರತಿ ಮಂಗಳವಾರ ಸುಮಾರು ಮುಕ್ಕಾಲು ಪುಟದಷ್ಟು, ಸಂಜೆವಾಣಿ ದೈನಿಕದಲ್ಲಿ ವಾರಕ್ಕೊಮ್ಮೆ ತುಳು ಸಾಹಿತ್ಯ ಪ್ರಕಟವಾಗುತ್ತಿದೆ.

೧೯೯೪ರಲ್ಲಿ ಮಂಗಳೂರಿನಲ್ಲಿ ವಿಶ್ವ ತುಳು ಸಮ್ಮೇಳನ ಜರುಗಿತು. ಅದರ ಬೆನ್ನಲ್ಲೇ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪನೆ ಆಯಿತು. ಅಕಾಡೆಮಿಯ ಪ್ರಕಟಣೆಯಾಗಿ ೧೯೯೫ರಿಂದ ‘ಮದಿಪು’ ಎಂಬ ಸಾಹಿತ್ಯ ತ್ರೈಮಾಸಿಕ ಹೊರ ಬರುತ್ತಿದೆ. ಅಕಾಡೆಮಿಯ ಕಾರ್ಯಚಟುವಟಿಕೆಗಳ ವರದಿ, ಕತೆ, ಕವಿತೆ, ಲೇಖನ, ಸಂದರ್ಶನ, ಪುಸ್ತಕ ವಿಮರ್ಶೆ ಮೊದಲಾದವು ಅದರಲ್ಲಿ ಪ್ರಕಟವಾಗುತ್ತಿದೆ. ಅಕಾಡೆಮಿಯ ಚಟುವಟಿಕೆ ಮತ್ತು ಒಟ್ಟಾಗಿ ತುಳು ಸಾಹಿತ್ಯಿಕ -ಸಾಂಸ್ಕೃತಿಕ ಚಟುವಟಿಕೆಯ ಅಭಿವ್ಯಕ್ತಿಗಾಗಿ ೨೦೦೧ರಿಂದ ‘ತುಳು ದರ್ಶನ’ ಎಂಬ ‘ಖಾಸಗಿ ಪ್ರಸಾರದ’ ಮಾಸಪತ್ರಿಕೆಯೊಂದನ್ನು ಅಕಾಡೆಮಿ ಅನಿಯಮಿತವಾಗಿ ಪ್ರಕಟಿಸುತ್ತಿದೆ.

ನಾಟಕಕಾರ ಪಿ.ಎಸ್. ರಾವ್ ಅವರು ೧೯೯೪ರ ಜನವರಿಯಿಂದ ‘ತುಳುಬೊಳ್ಳಿ’ ಎಂಬ ಮಾಸಿಕವನ್ನು ಪ್ರಕಟಿಸುತ್ತಿದ್ದಾರೆ. ಇಪ್ಪತ್ತು ಪುಟಗಳಿರುವ ಈ ಪತ್ರಿಕೆಯಲ್ಲಿ ಸುದ್ದಿ, ಲೇಖನ, ನಗೆಬರಹ, ಕತೆ, ಕವನ, ಚುಟುಕ ಸಂದರ್ಶನ ಇತ್ಯಾದಿ ಬರೆಹಗಳು ಪ್ರಕಟವಾಗುತ್ತಿವೆ. ಇದೂ ಕೂಡ ನಿಂತುಹೋಗಿದೆ.

‘ಮಂಗಳೂರು ಸಮಾಚಾರ’ದಿಂದ ಇಂದಿನವರೆಗೆ ಒಂದೂವರೆ ಶತಮಾನ ಕಳೆದರೂ ತುಳು ಪತ್ರಿಕೋದ್ಯಮವು ಸಾಹಿತ್ಯದ ಅಗತ್ಯವಾಗಿ ಬಂದಿತೇ ಹೊರತು ಮಾಧ್ಯಮ ಅವಶ್ಯಕತೆಯಾಗಿ – ಅಂದರೆ ಸುದ್ದಿ, ಮಾಹಿತಿಯ ಪತ್ರಿಕೋದ್ಯಮವಾಗಿ ಬರಲಿಲ್ಲ ಎಂಬ ಅಂಶವನ್ನು ಗಮನಿಸಬೇಕು. ಕತೆ, ಕವನ, ಲೇಖನ, ಹಾಸ್ಯ ಬರೆವಣಿಗೆ, ನಾಟಕ ಇತ್ಯಾದಿಗಳ ಪ್ರಕಟಣೆಗಾಗಿ ತುಳು ಪತ್ರಿಕೋದ್ಯಮ ದುಡಿದಂತೆ, ಸುದ್ದಿ ಮಾಧ್ಯಮವಾಗಿ ಅದು ಬೆಳೆಯಲಿಲ್ಲ. ಆದರೂ ಕಠಿಣ ಹಾದಿಯಲ್ಲಿ ತುಳು ಪತ್ರಿಕೆಗಳನ್ನು ಹುಟ್ಟು ಹಾಕಿ ನಡೆಸಿದ ಪತ್ರಿಕಾ ಪ್ರೇಮಿಗಳ ಸಾಹಸ ಮತ್ತು ಛಲಗಳನ್ನು ಮೆಚ್ಚಲೇಬೇಕು.

 

[1] ತುಳು – ತುಳು ಗಾದೆಗಳಿಗೊಂದು ಭಾಷ್ಯ, ಭಾಗ – ೧, ಕುದ್ಕಾಡಿ ವಿಶ್ವನಾಥ ರೈ, ಸಹಕಾರೀ ಪ್ರಕಾಶನ, ವಿಶ್ವ ಕಲಾನಿಕೇತನ, ಪುತ್ತೂರು, ಪ್ರ. ೧೯೯೦

[2] ‘ಎನ್.ಎ. ಶೀನಪ್ಪ ಹೆಗ್ಗಡೆ’ ಎಂಬ ಕೃತಿ ಅ. ಬಾಲಕೃಷ್ಣ ಶೆಟ್ಟಿ ಪೊಳಲಿ, ಪ್ರ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ೧೯೩೫.

[3] ‘ನವಯುಗ’ ಮೊದಲ ತುಳು ಪುರವಣಿ ೧-೧೦-೧೯೩೬ ಸಂಪಾದಕರು : ಹೊನ್ನಯ್ಯ ಶೆಟ್ಟಿ, ಉಡುಪಿ.