೨೦೦೧ರಲ್ಲಿ ‘ತುಡರ್’ ಎಂಬ ಮಲ್ಲಾದಿ ವೆಂಕಟಕೃಷ್ಣಮೂರ್ತಿ ಅವರ ‘ಮಂದಾಕಿನಿ’ ಕಾದಂಬರಿಯನ್ನು ಆಧರಿಸಿದ ಚಿತ್ರ ತೆರೆಕಂಡಿತು. ಪ್ರಶಾಂತ್ ಶೆಟ್ಟಿ, ಪ್ರೇಮ್‌ನಾಥ್ ಶೆಟ್ಟಿ, ಮ್ಯಾಥ್ಯೂ ಜತೆ ನಿರ್ಮಾಣದ ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ. ಮಾಧುರಿ, ತಾರಾ, ರಾಜೇಶ್ ಶೆಟ್ಟಿ, ಆಕಾಶ್, ವಿ.ಜಿ. ಪಾಲ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿದ್ಯಾವಂತ ಮಹಿಳೆಯೊಬ್ಬಳು, ದುಶ್ಚಟಗಳಿಗೆ ಬಲಿಯಾಗಿದ್ದ ಗಂಡನನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾಳೆ. ಸಾಮಾಜಿಕ ಸಮಸ್ಯೆಯನ್ನು ಚೆನ್ನಾಗಿಯೇ ಬಿಂಬಿಸಿದ ಚಿತ್ರ ಇದು.

ಹೀಗೆ ೩೦ ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಒಟ್ಟು (ಕಡಲ ಮಗೆ ಸೇರಿ) ೩೩ ಚಿತ್ರಗಳು ತೆರೆಕಂಡವು.

೨೦೦೬ರಲ್ಲಿ ‘ಕೋಟಿ ಚೆನ್ನಯ’ ಚಿತ್ರ ತೆರೆಕಂಡಿತು. ೧೯೭೩ರಲ್ಲಿ ವಿಶುಕುಮಾರ್ ಅವರ ‘ಕೋಟಿ ಚೆನ್ನಯ’ ಕಪ್ಪು ಬಿಳುಪಿನಲ್ಲಿದ್ದರೆ, ಹೊಸ ‘ಕೋಟಿ ಚೆನ್ನಯ’ ವರ್ಣಚಿತ್ರವನ್ನು ಪಿ. ಧನರಾಜ್ ‘ಪ್ರಾರ್ಥನಾ ಕ್ರಿಯೇಶನ್ಸ್’ ಬ್ಯಾನರ್ ಅಡಿಯಲ್ಲಿ ಆನಂದ ಪಿ. ರಾಜು ನಿರ್ದೇಶನದಲ್ಲಿ ನಿರ್ಮಿಸಿದ್ದಾರೆ. ಸಾಹಿತ್ಯ ಸಂಭಾಷಣೆ ವಾಮನ ನಂದಾವರ ಅವರದ್ದು, ವಾಮನ ನಂದಾವರ, ಎಂ. ಸೀತಾರಾಮ ಕುಲಾಲ್ ಅವರ ಗೀತೆಗಳಿಗೆ ವಿ. ಮನೋಹರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಚಿತ್ರದಲ್ಲಿ ವಿನಯಾ ಪ್ರಸಾದ್, ನೀತು ಅಭಿನಯಿಸಿದ್ದಾರೆ.

೨೦೦೬ರಲ್ಲಿ ಮತ್ತೊಂದು ಚಿತ್ರ ‘ಕಡಲ ಮಗೆ’ ಬಿಡುಗಡೆಯಾಯಿತು. ಸಾಧನಾ ಎನ್ ಶೆಟ್ಟಿ ನಿರ್ಮಿಸಿದ ಈ ಚಿತ್ರದ ನಿರ್ದೇಶನ ಪ್ರವೀಣ್ ಅವರದ್ದು. ಸಾಹಿತ್ಯ – ಗೀತೆ ವಿಜಯಕುಮಾರ್ ಕೊಡಿಯಾಲಬೈಲ್ ಅವರದ್ದು.

೧೯೭೧ರಿಂದ ೨೦೦೬ರವರೆಗೆ ಒಟ್ಟು ೩೩ ಚಲನಚಿತ್ರಗಳು ತೆರೆ ಕಂಡಿವೆ. ಚಲನಚಿತ್ರವಲ್ಲದೆ ತುಳು ಟಿ.ವಿ. ಧಾರಾವಾಹಿಯೊಂದು ದೂರದರ್ಶನದಲ್ಲಿ ಪ್ರಸಾರವಾಗಿತ್ತು. ೯೦ರ ದಶಕದಲ್ಲಿ ‘ಗುಡ್ಡೆದ ಭೂತ’ ಎನ್ನುವ ಜನಪ್ರಿಯ ಧಾರಾವಾಹಿಯನ್ನು ಸದಾನಂದ ಸುವರ್ಣ ಅವರು ನಿರ್ದೇಶಿಸಿದ್ದರು. ಟೆರಿಸ್ಟ್ರಿಯಲ್ ಚಾನೆಲ್‌ನಲ್ಲಿ (ಆಗ ಕೇಬಲ್ ಟಿ.ವಿ. ಇರಲಿಲ್ಲ) ಸುಮಾರು ಎರಡು ವರ್ಷಗಳ ಕಾಲ ಧಾರವಾಹಿಯಾಗಿ ಬಂದ ‘ಗುಡ್ಡೆದ ಭೂತ’ ತುಳು ಭಾಷೆಯ ಸೊಗಡನ್ನು ಕರ್ನಾಟಕದಾದ್ಯಂತ ಪಸರಿಸಿತ್ತು.

ಕಳೆದೆರೆಡು ವರ್ಷಗಳಲ್ಲಿ ತುಳುಭಾಷೆಯಲ್ಲಿ ಎರಡು ಚಿತ್ರಗಳು ತಯಾರಾಗಿವೆ. ವಿಜಯಕುಮಾರ್ ಕೊಡಿಯಾಲಬೈಲು ಅವರು ನಿರ್ದೇಶಿಸಿದ ‘ಬರವುದ ಬಂಡಸಾಲೆ’ ಎನ್ನುವ ಕಿರುಚಿತರ ೨೦೦೪ರಲ್ಲಿ ನಿರ್ಮಾಣವಾಯಿತು. ಸುಮಾರು ಒಂದೂವರೆ ಗಂಟೆಯ ಈ ಕಿರುಚಿತ್ರ ಶಿಕ್ಷಣದ ಕುರಿತದ್ದು. ಈ ಚಿತ್ರದ ೭೦ರಿಂದ ೭೫ ಪ್ರದರ್ಶನಗಳನ್ನು ಹಲವು ಶಾಲೆಗಳಲ್ಲಿ ತೋರಿಸಲಾಗಿದೆ. ಅಲ್ಲದೆ ಮುಂಬಯಿಯಲ್ಲಿಯೂ ೧೨ ಪ್ರದರ್ಶನಗಳನ್ನು ಈ ಚಿತ್ರ ಕಂಡಿದೆ.

ತುಳುನಾಡಿನವರು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಮತ್ತೊಂದು ಕಿರುಚಿತ್ರ ‘ಸುದ್ಧ’, ಒಸಿಯನ್ ಅಂತರಾಷ್ಟ್ರೀಯ ವಿಭಾಗದಲ್ಲಿ ಉತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದ ಪ್ರಥಮ ತುಳು ಡಿಜಿಟಲ್ ಚಿತ್ರ ‘ಸುದ್ಧ’, ೨೦೦೬ರಲ್ಲಿ ನಿರ್ಮಾಣವಾಯಿತು. ನಾರಾಯಣ ಶೆಟ್ಟಿ ನಂದಳಿಕೆ ಅವರ ‘ಬೊಜ್ಜ’ ನಾಟಕವನ್ನು ಆಧರಿಸಿ, ಪಿ.ಎನ್. ರಾಮಚಂದ್ರ ಅವರು ‘ಸುದ್ಧ’, ಚಿತ್ರ ತಯಾರಿಸಿದರು. ಚಿತ್ರದ ನಿರ್ಮಾಣ, ಮೋಹನ್ ಮಾರ್ನಡ್, ಸುರೇಂದ್ರ ಕುಮಾರ್ ಮತ್ತು ಪಿ.ಎನ್. ರಾಮಚಂದ್ರ, ಈ ಚಿತ್ರವು ಒಕ್ಕಲು ಪದ್ಧತಿಯ ಹಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಸಾಂಸ್ಕೃತಿಕ ಬದಲಾವಣೆ, ನಗರೀಕರಣ, ಹೊಸ ಸಂಸ್ಕೃತಿಯ ವ್ಯಾಮೋಹ ಇವುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇದು ತುಳುಭಾಷೆಯಲ್ಲಿ ಆದ ಒಂದು ಉತ್ತಮ ಪ್ರಯತ್ನ. ಒಟ್ಟಾರೆಯಾಗಿ ಸಿನಿಮಾ ಎನ್ನುವುದು ಎಲ್ಲ ವರ್ಗದ ಪ್ರೇಕ್ಷಕರಿಗೂ ತಲುಪುವಂತದ್ದಾಗಬೇಕು. ಸ್ವಲ್ಪ ಹಾಸ್ಯ, ಸ್ವಲ್ಪ ಮೆಲೊಡ್ರಾಮಾ, ಸ್ವಲ್ಪ ರೋಮಾನ್ಸ್, ಸ್ವಲ್ಪ ಹಾಡು – ಕುಣಿತ ಹೀಗೆ ಎಲ್ಲ ರೀತಿಯ ಭಾವ ಪ್ರಕಾರಗಳನ್ನು ಎಲ್ಲರಿಗೂ ಉಣಬಡಿಸುವ ಭೋಜನ, ಸಿನೆಮಾ. ಮಾನವ ಸಂಬಂಧಗಳ, ಭಾವನೆಗಳ ಕಥಾಹಂದರವಿರುವ ಚಿತ್ರಗಳು ಜನರನ್ನು ತಲುಪುತ್ತವೆ. ಹೊಸ ರೀತಿಯ ನಿರೂಪಣೆ, ಶೈಲಿ, ಹಳೆಯ ಕಥೆಯಾದರೂ ಹೊಸ ಜಾಡಿನಲ್ಲಿರುವ ನಿರೂಪಣೆ ಜನರಿಗೆ ಇಷ್ಟವಾಗೇ ಆಗುತ್ತದೆ. ಪ್ರೇಕ್ಷಕ ವರ್ಗವನ್ನು ತಯಾರುಮಾಡಿಬಿಟ್ಟರೆ ನಂತರ ಚಿತ್ರಗಳನ್ನು ಮಾಡುವುದು, ಗೆಲ್ಲಿಸುವುದು ಅಷ್ಟು ಕಷ್ಟವೇನಲ್ಲ. ಆದರೆ, ಯಾವ ಚಿತ್ರಗಳಿಗೂ ನೋಡುವ ಪ್ರೇಕ್ಷಕರಿಲ್ಲ ಎಂದರೆ ಅದು ಯೋಚಿಸಬೇಕಾದ ವಿಷಯ.

ತುಳುಚಿತ್ರರಂಗ -ಚಿತ್ರಗಳು ಎನ್ನುವ ಯೋಚನೆ ಮಾಡಿದಾಗ ಇದುವರೆಗೆ ೧೯೭೧ರಿಂದ ೨೦೦೬ರ ವರೆಗೆ ೩೫ ವರ್ಷಗಳಲ್ಲಿ ೩೩ ಚಿತ್ರಗಳು ತೆರೆಕಂಡಿವೆ. ಅಂದರೆ ವರ್ಷಕ್ಕೊಂದು ಚಿತ್ರ ಸರಾಸರಿಯನ್ನು ತಲುಪಲು ಸಾಧ್ಯವಾಗದೆ ಇರುವುದು ದುರಂತ. ನಮ್ಮಲ್ಲಿ ನೋಡುವ ಪ್ರೇಕ್ಷಕರಿಲ್ಲ. ಚಿತ್ರಗಳನ್ನು ಮಾಡುವ ಸಹೃದಯರಿಲ್ಲ. ಈ ಮಾತನ್ನು ಒಪ್ಪಿಕೊಳ್ಳಲು ನಮ್ಮಿಂದ ಸಾಧ್ಯವಾಗುತ್ತದೆಯೇ.

ಈ ಕಾಲಘಟ್ಟದಲ್ಲಿಯಾದರೂ ತುಳುಚಿತ್ರರಂಗ ಕುರಿತಾದ ಗಂಭೀರವಾದ ಚಿಂತನೆ, ಚರ್ಚೆ, ವಿಚಾರ ಮಂಥನ ನಡೆಯಲೇಬೇಕು. ಇಲ್ಲವಾದರೆ, ಇನ್ನು ಹತ್ತು ವರ್ಷಗಳಾದರೂ ಈ ವ್ಯವಸ್ಥೆ ಇದೇ ರೀತಿ ಮುಂದುವರೆಯುವ ಸಾಧ್ಯತೆಗಳಿವೆ. ಕನ್ನಡದ ನಿರ್ದೇಶಕರೊಬ್ಬರನ್ನು ಮಾತುಕತೆ ನಡೆಸುತ್ತಿದ್ದಾಗ ಅವರಿಂದ ಬಂದ ಅಭಿಪ್ರಾಯದಂತೆ ತುಳುವಿನ ಕಥೆ, ಸಂಸ್ಕೃತಿ, ಪರಿಸರ; ತುಳು ಚಿತ್ರ ಮಾಡಿದರೆ ಮಾರ್ಕೆಟ್ ಇಲ್ಲ. ೩೩ ತುಳುಚಿತ್ರಗಳನ್ನು ಮಾಡಲು ಸಾಲ ಸೋಲ ಮಾಡಿ, ಪಡಬಾರದ ಕಷ್ಟನಷ್ಟಗಳನ್ನು ಅನುಭವಿಸಿದ ನಮ್ಮ ನಿರ್ಮಾಪಕರುಗಳೇ ಜೀವಂತ ಉದಾಹರಣೆ. ಅಂದರೆ, ತುಳು ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಎನ್ನುವ ಮಾತಂತೂ ಸತ್ಯ. ಈ ಕಾರಣದಿಂದಾಗಿಯೇ ತುಳುಚಿತ್ರರಂಗವನ್ನು ಚಿತ್ರೋದ್ಯಮ ಎಂದು ಕರೆಯಲು ಸಾಧ್ಯವಿಲ್ಲ. ಹೆಚ್ಚಿನ ತುಳುಚಿತ್ರಗಳು, ಸ್ವಂತ ನೆಲೆಯಿಂದ, ನಿರ್ಮಾಪಕನೊಬ್ಬ ಅಥವಾ ಇತರರ ಜತೆಗೂಡಿ ಹಣ ಹಾಕಿ ನಿರ್ಮಿಸಿದವುಗಳೇ. ಒಂದು ಆರ್ಥಿಕ ಚೌಕಟ್ಟಾಗಲೀ, ಚಿತ್ರ ತಯಾರಿಕೆಯ ಚೌಕಟ್ಟಾಗಲೀ, ವಿತರಣಾ ಚೌಕಟ್ಟಾಗಲೀ, ಪ್ರದರ್ಶನದ ಚೌಕಟ್ಟಾಗಲೀ ತುಳುಚಿತ್ರರಂಗದಲ್ಲಿ ಇಲ್ಲ.

ಹಿಂದಿನ ದಿನಗಳಲ್ಲಿ ಒಂದು ತುಳುಚಿತ್ರದ ಬಜೆಟ್ ಒಂದು ಲಕ್ಷದ ಎಪ್ಪತ್ತೈದು ಸಾವಿರ. ‘ಬದ್ಕೆರೆ ಬುಡ್ಲೆ’ (೧೯೮೩)ರ ಹೊತ್ತಿಗೆ ಬಜೆಟ್ ೩ ಲ್ಷದವರೆಗೆ ಏರಿತ್ತು. ಈಗ ಕನಿಷ್ಠ ೨೦ ಲಕ್ಷದಿಂದ ೫೦ ಲಕ್ಷ ಬಜೆಟ್ ಇಲ್ಲದಿದ್ದಲ್ಲಿ ಚಿತ್ರ ತಯಾರಿಕೆ ಕನಸಿನ ಮಾತು. ಚಿತ್ರ ತಯಾರಿಕೆಗೆ ಹಣ ಹಾಕುವವರು ಮೂರ್ಖರು ಎನ್ನುವಷ್ಟರ ಮಟ್ಟಿಎ ತುಳುಚಿತ್ರರಂಗ ಬಂದು ನಿಂತಿದೆ.

ಚಿತ್ರ ಮಂದಿರಗಳ ವ್ಯವಸ್ಥೆ ಎನ್ನುವುದು ಕೂಡ ನಮ್ಮಲ್ಲಿರುವ ಒಂದು ಕೊರತೆ. ಯಾವ ತುಳುಚಿತ್ರವೂ ಚಿತ್ರಮಂದಿರ ಮಾಲೀಕನಿಗೆ ಸಂತಸ ತಂದಿರುವುದು ತುಂಬಾ ಕಡಿಮೆ. ಕಾರ್ಕಳದ ಚಿತ್ರಮಂದಿರ, ಕಾಸರಗೋಡಿನ ಚಿತ್ರಮಂದಿರಗಳಿಗೆ ತುಳುಚಿತ್ರ ಬೇಡವೇ ಬೇಡವಾಗಿದೆ. ಒಂದು ವಾರ ಓಡಿದರೇ ಹೆಚ್ಚು ಎನ್ನುವ ಹಾಗಾಗಿದೆ. ಯಾವ ಚಿತ್ರಮಂದಿರದಲ್ಲೂ ಕಲೆಕ್ಷನ್ ಇಲ್ಲ. ಚಿತ್ರಮಂದಿರಗಳಿಗೆ ಮೊದಲ ಹೊಡೆತ ಬಿದ್ದದ್ದು, ಉಪಗ್ರಹವಾಹಿನಿಗಳಿಂದ ಮತ್ತು ನಗರಗಳಲ್ಲಿ ಈಗೀಗ Multiplexಗಳಿಂದ ಮನರಂಜನೆಯ ವಿವಿಧ ರೀತಿಯ ಚಾನೆಲ್‌ಗಳು ಬೆರಳ ತುದಿಯಲ್ಲಿ ಬೇಕಾದ ಸಮಯದಲ್ಲಿ ದೊರೆಯುವಾಗ ಮೂರು ಗಂಟೆ ಚಿತ್ರಮಂದಿರದಲ್ಲಿ ಕುಳಿತು ನೋಡುವ ಚಿತ್ರಗಳು ಜನರಿಗೆ ಈಗ ಬೇಡವಾಗಿ ಹೋಗಿದೆ. ಈಗ ಚಿತ್ರಮಂದಿರದಲ್ಲಿ ಸಿನಿಮಾ ಓಡುತ್ತಿರುವುದು ಕೇವಲ ಮೊದಲ ಸಾಲುಗಳ ಪ್ರೇಕ್ಷಕರಿಂದ ಮಾತ್ರ.

ಬಾಲ್ಕನಿ ಪ್ರೇಕ್ಷಕರು, ಮಹಿಳಾ ಪ್ರೇಕ್ಷಕ ವರ್ಗ ಈಗ ಎಲ್ಲಿಯೂ ಕಾಣಸಿಗುತ್ತಿಲ್ಲ. ಇನ್ನೊಂದು ಹೊಡೆತ, ಚಿತ್ರಮಂದರಿಗಳೇ ಮುಚ್ಚಿ ಹೋಗುತ್ತಿರುವುದು. ಮೊದಲು ಕಾಸರಗೋಡು ತಾಲೂಕಿನಲ್ಲಿಯೆ ಐದು ಚಿತ್ರಮಂದಿರಗಳು ಇದ್ದುವು. ಬದಿಯಡ್ಕ, ಕುಂಬಳೆ, ಉಪ್ಪಳ, ಮಂಜೇಶ್ವರ, ಕಾಸರಗೋಡು, ಈಗ ಉಳಿದದ್ದು ಕೇವಲ ಉಪ್ಪಳ, ಮಂಜೇಶ್ವರ, ಮತ್ತು ಕಾಸರಗೋಡು. ಮಂಗಳೂರು, ಉಡುಪಿಯಲ್ಲಿ, ಪುತ್ತೂರು, ಕಾಪು, ಸಿದ್ಧಾಪುರ, ಕಾರ್ಕಳ, ಬಾರ್ಕೂರು, ಬಸ್ರೂರು ಚಿತ್ರಮಂದಿರಗಳು ಮುಚ್ಚಿಹೋಗಿವೆ. ಹಳೆಯ ಚಿತ್ರಮಂದಿರಗಳು ಉಳಿಯುತ್ತಿಲ್ಲ. ಚಿತ್ರಗಳು ಓಡುತ್ತಿಲ್ಲ. ಜನ ಚಿತ್ರ ನೋಡುತ್ತಿಲ್ಲ. ತುಳುಚಿತ್ರಗಳು ಯಶಸ್ವಿಯಾಗದೆ ಇರುವುದಕ್ಕೆ ಹಲವು ಕಾರಣಗಳನ್ನು ನೀಡುತ್ತಾ ಹೋಗಬಹುದು.

ಪ್ರೇಕ್ಷಕನನ್ನು ದೂರುತ್ತಾ ಸಾಕಷ್ಟು ದೂರ ಬಂದಿದ್ದೇವೆ. ಪ್ರೇಕ್ಷಕ ನೊಬ್ಬನೇ ಕಾರಣವಾಗಲಾರ. ಕೆ.ಎನ್. ಟೇಲರ್ ಅವರು ೮-೧೦ ಚಿತ್ರಗಳನ್ನು ಮಾಡಲು ಸಾಧ್ಯವಾದದ್ದು ನಿರ್ಮಾಪಕರಿಂದ. ಉಳಿದಂತೆ ಒಂದು ಚಿತ್ರ ನಿರ್ಮಿಸಿದ ನಿರ್ಮಾಪಕ ಮತ್ತೊಂದು ಚಿತ್ರ ಮಾಡುವ ಪ್ರಯತ್ನ ಮಾಡಿದ್ದು ತುಂಬಾ ಕಡಿಮೆ, ಈ ಎಲ್ಲವನ್ನು ನೇರವಾಗಿ ಹೇಳುವುದಾರೆ, ನಿರ್ಮಾಪಕನಿಗೆ ಹಾಕಿದ ದುಡ್ಡು ಹಿಂದೆ ಬಂದಿಲ್ಲ. ಒಂದು ಚಿತ್ರ ಮಾಡುವಾಗಲೇ ಅರ್ಧಜೀವ ಆಗುವ ನಿರ್ಮಾಪಕ, ಮತ್ತೊಂದು ಚಿತ್ರದ ಬಗ್ಗೆ ಯೋಚಿಸಲು ಹೇಗೆ ಸಾಧ್ಯವಾಗುತ್ತದೆ? ತುಳುಚಿತ್ರ ನಿರ್ಮಾಣದ ಅಡ್ಡಿ ಆತಂಕಗಳೇ ನಿರ್ಮಾಪಕನ್ನು ಭಯಗೊಳಿಸುತ್ತವೆ. ನಮ್ಮಲ್ಲಿನ ನಿರ್ಮಾಪಕರುಗಳಿಗೆ ಅನುಭವದ ಕೊರತೆ ಇದೆ. ಹಣ ಹಾಕಿದರೆ ಸಾಕು ಎನ್ನುವ ಭಾವನೆ ಇದೆ. ಇದುವರೆಗೂ ನಿರ್ಮಾಪಕನೊಬ್ಬ ಸ್ವಂತ ಪ್ರೇರಣೆಯಿಂದ, ಸ್ವಂತ ಶಕ್ತಿಯಿಂದ ಚಿತ್ರ ನಿರ್ಮಿಸಿದ್ದು ಸಹ ಇಲ್ಲ. ಇತರರ ಧನ ಸಹಾಯವನ್ನು ನಂಬಿ ನಿರ್ಮಾಣ ಆಗುವ ಚಿತ್ರಗಳೆ ಹೆಚ್ಚು, ಚಿತ್ರ ತಯಾರಿ, ಮಾರುಕಟ್ಟೆ, ವಿತರಣೆ ಬಗ್ಗೆ ಇರುವ ಅನುಭವ ಮಾಹಿತಿ ಕೂಡ ಕಡಿಮೆ.

ಪ್ರಸ್ತುತ ಯಾವ ರೀತಿಯ ಸಿನಿಮಾ ಅಲೆ ಇದೆ, ಜನರು ಇಷ್ಟಪಡುವ ವಿಷಯ, ಯಾವ ವರ್ಗ ಹೆಚ್ಚು ಸಿನೆಮಾಗಳನ್ನು ನೋಡುತ್ತಾರೆ. ಪೂರ್ವ ತಯಾರಿ, ಸರಿಯಾದ ಬಜೆಟ್ ಯೋಜನೆ ಮತ್ತು ನಿರ್ವಹಣೆ, ಸರಿಯಾದ ವಿತರಣೆ ಇವುಗಳ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡು ಚಿತ್ರ ನಿರ್ಮಾಣಕ್ಕೆ ಕೈ ಹಾಕುವ ಮಂದಿ ತುಂಬಾ ಕಡಿಮೆ. ನಾವು ತಯಾರು ಮಾಡುವ ಚಿತ್ರಗಳು ತಾಂತ್ರಿಕ ಗುಣಮಟ್ಟವನ್ನು ತಲುಪದೇ ಹೋದಲ್ಲಿ ಖಂಡಿತವಾಗಿ ಈಗಿನ ಪ್ರೇಕ್ಷಕ ಒಪ್ಪಿಕೊಳ್ಳುವುದಿಲ್ಲ. ತುಳು ಚಿತ್ರಗಳು ನಾಟಕಗಳು ಹಾಗೆಯೇ ಎನ್ನುವ ಭಾವನೆ ಜನರಿಗಿದೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡ. ಇದು ನಮ್ಮ ನಿರ್ಮಾಪಕ – ನಿರ್ದೇಶಕರೇ ಮಾಡಿಕೊಂಡ ತಪ್ಪು ಎಂದೂ ಹೇಳಬಹುದು. ಕಡಿಮೆ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನಿರ್ಮಾಪಕರ ಗೋಳು.

ತುಳು ಚಿತ್ರಗಳು ತಾಂತ್ರಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿವೆ ಎನ್ನಬಹುದು. ಕಡಿಮೆ ಬಜೆಟ್ ಇದ್ದಾಗ ವರ್ಷಕ್ಕೊಂದು ಚಿತ್ರ ಬಿಡುಗಡೆಯಾಗುತ್ತಿತ್ತು. ಈಗಿನ ಸಂದರ್ಭದಲ್ಲಿ ಕನ್ನಡ, ಹಿಂದಿ, ತಮಿಳು, ಇಂಗ್ಲಿಷ್ ಚಿತ್ರಗಳಿಗೆ ಒಗ್ಗಿಕೊಂಡಿರುವ ಪ್ರೇಕ್ಷಕನಿಗೆ ತುಳುಚಿತ್ರಗಳು ಕಳಪೆ, ಹಳಸಲು ಎನ್ನಿಸಿದರೂ ತಪ್ಪಾಗಲಾರದು. ನಮ್ಮಲ್ಲಿ ನಿರೀಕ್ಷಿತ ಉತ್ತಮ ಚಿತ್ರಗಳನ್ನು ನೀಡಲು ನಾವು ಎಡವಿದ್ದೇವೆ. ಕಡಿಮೆ ಬಜೆಟ್‌ನಲ್ಲಿ ಚಿತ್ರಮಾಡಿ ಮುಗಿಸುವ ತರಾತುರಿ ಮತ್ತು ಅನಿವಾರ್ಯತೆ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಚಿತ್ರ ತಯಾರಿಸಲು ಇರುವ ಆರ್ಥಿಕ ಅಡಚಣೆಗಳು, ಇರುವ ಗುಣಮಟ್ಟದ ಜತೆ ಹೊಂದಾಣಿಕೆ ಇವೆಲ್ಲಾ ಅಡೆತಡೆಗಳಿಂದ, ನಾವು ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಒಳ್ಳೆಯ ನಿರ್ದೇಶಕರು, ಕಲಾವಿದರು, ಸಾಹಿತಿಗಳು, ಸಂಗೀತ ನಿರ್ದೇಶಕರನ್ನು ಬಳಸಿಕೊಳ್ಳುವಲ್ಲಿ ತುಳುಚಿತ್ರರಂಗ ಹಿಂದೆ ಬಿದ್ದಿದೆ.

ಇದುವರೆಗೆ ತಯಾರಾದ ಪ್ರತಿಯೊಂದು ಚಿತ್ರವೂ ಒಂದಲ್ಲ ಒಂದು ರೀತಿಯಲ್ಲಿ ಎಡವಿದೆ. ನಿರ್ಮಾಪಕ ಗಟ್ಟಿಯಿದ್ದಾಗ, ನಿರ್ದೇಶಕನ ಅನುಭವ ಹೊಂದಿಕೆಯಾಗುತ್ತಿರಲಿಲ್ಲ. ಉತ್ತಮ ನಿರ್ದೇಶಕನ ಕಲ್ಪನೆಗಳಿಗೆ ಸಾಕಷ್ಟು ಹಣ ನಿರ್ಮಾಪಕನಲ್ಲಿರುತ್ತಿರಲಿಲ್ಲ. ಹಣದ ಕೊರತೆ, ಹಣ ಹಾಕಿದವರೇ ಚಿತ್ರದಲ್ಲಿ ಅಭಿನಯಿಸುವ ಅನಿವಾರ್ಯತೆ ಇತ್ಯಾದಿ ಕೊರತೆ, ಸಮಸ್ಯೆಗಳನ್ನೇ ಇಟ್ಟುಕೊಂಡು ನಾವು, ಪ್ರೇಕ್ಷಕ ಚಿತ್ರ ನೋಡುತ್ತಿಲ್ಲ ಎಂದು ದೂರುತ್ತಾ ಬಂದಿದ್ದೇವೆ. ಆದರೆ ಇದುವರೆಗೆ ತುಳುಚಿತ್ರರಂಗದಲ್ಲಿ ಒಳ್ಳೆಯ ಟೀಮ್ – ಬಳಗ ರಚನೆಯಾಗಲು ಸಾಧ್ಯವಾಗಲಿಲ್ಲ ಎನ್ನುವುದು ದುರಂತ.

ತುಳುಚಿತ್ರರಂಗದಲ್ಲಿ ವೃತ್ತಿಪರತೆ ಇನ್ನೂ ಕಂಡುಬಂದಿಲ್ಲ. ಯಾರೋ ದುಡ್ಡು ಹಾಕಿ ಮಾಡುವ ಚಿತ್ರಕ್ಕೆ ಇನ್ಯಾರೋ ಬಂದು ನಿರ್ದೇಶನ ಮಾಡುತ್ತಾನೆ. ಚಿತ್ರಕಥೆ ಒಬ್ಬ ಬರೆದರೆ, ಸಂಭಾಷಣೆ ಇನ್ನೊಬ್ಬ.

ಎಲ್ಲ ಸಿನಿಮಾರಂಗ ಇದೇ ತರಹ ಕೆಲಸ ಮಾಡುತ್ದೆ. ಆದರೆ ಅಲ್ಲಿ ಒಳ್ಳೆಯ ಕಾರ್ಯನಿರತ ತಂಡ ಎದ್ದು ಕಾಣುತ್ತದೆ. ಇಲ್ಲಿ ಅದು ಬಿಡಿಬಿಡಿಯಾಗಿ ನಿಲ್ಲುತ್ತದೆ. ಚಿತ್ರದಲ್ಲಿ ಸಂಗೀತ ಮಾತ್ರ ಚೆನ್ನಾಗಿದ್ದು, ಕಥೆ ಚೆನ್ನಾಗಿಲ್ಲದಿದ್ದರೆ ಚಿತ್ರ ಓಡುತ್ತದೆ ಎನ್ನುವ ನಂಬಿಕೆಯಿಲ್ಲ. ಎಲ್ಲ ತಾಂತ್ರಿಕ ವರ್ಗದ ಕೆಲಸ ಪರಸ್ಪರ ಹೊಂದಾಣಿಕೆಯಿಂದ ಚಿತ್ರದ ಯಶಸ್ಸಿಗೆ ಪೂರಕವಾಗಿರಬೇಕು. ಸರಿಯಾದ ಪೂರ್ವ ತಯಾರಿ ಇಲ್ಲದೆ ಚಿತ್ರಮಾಡುವುದು, ತುಳು ಚಿತ್ರ ನಿರ್ಮಾಣದ ಇನ್ನೊಂದು ದೊಡ್ಡ ಕೊರತೆ, ತುಳು ಭಾಷೆ ಗೊತ್ತಿಲ್ಲದ ನಿರ್ದೇಶಕ, ತುಳು ಭಾಷೆಯನ್ನೇ ಮಾತನಾಡದ ನಟಿ-ನಟಿಯರು (ನಾಯಕ/ಕಿ) ಚಿತ್ರದ ಬಜೆಟ್‌ನ್ನು ಹೆಚ್ಚಿಸುವ ಸಾಧ್ಯತೆಗಳೇ ಜಾಸ್ತಿ.

ಅರ್ಧ ದಿನದಲ್ಲಿ ಎರಡು ಶಾಟ್ ಕೂಡ ಓ.ಕೆ. ಆಗದ ಪರಿಸ್ಥಿತಿಯಾದರೆ ೨೦,೦೦೦ – ೨೫,೦೦೦ದಷ್ಟು ರೂಪಾಯಿ ವ್ಯರ್ಥವೇ ಸರಿ.

ಕಛ್ಛಾ ಫಿಲ್ಮ್ ಹೇಗೂ ಖರ್ಚಾಗುತ್ತದೆ. ಜತೆಗೆ ವಸತಿ, ಊಟ, ಸಾರಿಗೆ ವ್ಯವಸ್ಥೆ ಇವೆಲ್ಲ ಸೇರಿ ಅನಗತ್ಯವಾಗಿ ಹಣ ಖರ್ಚು, ಸೀಮಿತ ಬಜೆಟ್‌ನಲ್ಲಿ ಚಿತ್ರ ಮಾಡುವಾಗ ಸರಿಯಾದ ಬಜೆಟ್ ಯೋಜನೆ, ಚಿತ್ರೀಕರಣ ದಿನಚರಿ ಇಲ್ಲದೆ ಹೋದಲ್ಲಿ ನಿರ್ಮಾಪಕನ ದುಡ್ಡಿಗೆ ಖೋತಾ. ತಾಂತ್ರಿಕ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಚಿತ್ರ ಮಾಡಿದರೆ ಖಂಡಿತ ಈಗಿನ ಪ್ರೇಕ್ಷಕರಿಗೆ ತಲುಪುತ್ತದೆ. ಚಿತ್ರೀಕರಣದ ಸಮಯದಲ್ಲಿ ದೃಶ್ಯ ವಿಂಗಡನೆ, ಶಾಟ್ ವಿಂಗಡನೆ ಮಾಡಿಕೊಂಡು, ಸಂಭಾಷಣೆ ಬರೆಯುತ್ತಾ ಕುಳಿತರೆ, ನಿರ್ಮಾಪಕನ ದುಡ್ಡು ನೀರಿನಂತೆ ಹರಿಯುತ್ತಿರುತ್ತದೆ ; ಕರಗುತ್ತಲೂ ಇರುತ್ತದೆ.

ತುಳು ಚಿತ್ರಗಳನ್ನು ಮಾಡುವಾಗ ನಿರ್ಮಾಪಕ – ನಿರ್ದೇಶಕನಿಗೆ ಎದ್ದು ಕಾಡುವ ಸಮಸ್ಯೆ ಎಂದರೆ ತುಳು ಸಂಸ್ಕೃತಿಯನ್ನು ತನ್ನ ಚಿತ್ರದಲ್ಲಿ ತುರುಕಬೇಕೇ, ಬೇಡವೆ ಎನ್ನುವುದು. ಈ ಪ್ರಶ್ನೆಗೆ ಎರಡು ರೀತಿಯ ವಾದಗಳನ್ನು ನೀಡಬಹುದು.

ಒಂದು, ಇದುವರೆಗೆ ಬಂದ ಚಿತ್ರಗಳನ್ನು ಆಧಾರವಾಗಿ ಇಟ್ಟುಕೊಂಡು ಹೇಳಿದರೆ, ತುಳು ಸಂಸ್ಕೃತಿಯ ಅನಗತ್ಯ ತುರುಕುವಿಕೆ, ತುಳು ಚಿತ್ರಗಳಿಗೆ ಮಾರಕವಾಗಿದೆ ಎನ್ನುವುದು. ಇನ್ನೊಂದು, ನಮ್ಮ ಪ್ರಾದೇಶಿಕತೆ, ನಮ್ಮ ಆಚಾರ, ವಿಚಾರ, ಕಲೆ, ಸಂಪ್ರದಾಯ ಇವುಗಳನ್ನು ನಮ್ಮ ಚಿತ್ರಗಳು ಬಿಂಬಿಸದೇ ಹೋದಲ್ಲಿ ಬೇರೆ ಯಾವ ಚಿತ್ರಗಳಿಂದ ಅದನ್ನು ಊಹಿಸಲು ಸಾಧ್ಯ ಎನ್ನುವುದು. ಚಲನ ಚಿತ್ರಗಳಲ್ಲಿ ಅನಗತ್ಯವಾಗಿ ಸಂಸ್ಕೃತಿಯನ್ನು ತುರುಕಲಾಗುತ್ತಿದೆ. ಎನ್ನುವುದೂ ಈವರೆಗೆ ಬಂದಂತಹ ಚಿತ್ರಗಳನ್ನು ಗಮನಿಸಿದರೆ ತಿಳಿಯುತ್ತದೆ. ಕಥೆಗೆ ಅಗತ್ಯವಿದ್ದಲ್ಲಿ ಮಾತ್ರ ತುಳುನಾಡಿನ ಜಾನಪದ, ಸಾಂಸ್ಕೃತಿಕ ಅಂಶಗಳನ್ನು ಬಳಸಿಕೊಳ್ಳುವುದರಲ್ಲಿ ಜಾಣ್ಮೆ ಇದೆ. ಅಗತ್ಯವಿಲ್ಲದೆ, ಕೇವಲ ಪ್ರಶಸ್ತಿ ಸಿಗುವುದೆಂಬ ದೃಷ್ಟಿಕೋನದಲ್ಲಿ ಯಕ್ಷಗಾನ – ಕಂಬಳ – ಭೂತಕೋಲವನ್ನು ತೋರಿಸುವ ಯೋಚನೆಯೇ ತಪ್ಪು.

ನಾವು ‘ಗಾಂಧಿನಗರ’ದ ದೃಷ್ಟಿಯಲ್ಲಿ ತುಳು ಚಿತ್ರಗಳನ್ನು ನೋಡುತ್ತೇವೆ. ಅಲ್ಲಿಯವರೆಗೆ ಕಂಬಳ ಹೊಸತು, ಮೀನು ಹೊಸತು, ಯಕ್ಷಗಾನ ಹೊಸತು, ತುಳುನಾಡಿನ ಮಣ್ಣಿನ ಗುಣ – ಕಣಗಳೂ ಹೊಸತು. ನಾವು ಮತ್ತೆ ಮತ್ತೆ ನಮ್ಮ ಪರಿಸರದಲ್ಲಿ ನೋಡುವುದನ್ನೇ ನಮ್ಮ ಚಿತ್ರಗಳಲ್ಲಿ ತೋರಿಸುವುದಾದರೆ ಜನ ಯಾಕೆ ಚಿತ್ರ ನೋಡಲು ಬರುತ್ತಾರೆ? ತುಳು ಸಂಪ್ರದಾಯ, ಹಿನ್ನೆಲೆ ಇಟ್ಟುಕೋಂಡು ಚಿತ್ರ ಮಾಡಿದರೆ ಯಶಸ್ಸು ಎನ್ನುವ ಅನಿವಾರ್ಯತೆ ಬೇಕಾಗಿಲ್ಲ. ಯಾಕೆಂದರೆ ಕೆ.ಎನ್. ಟೇಲರ್ ಅವರ ಹಲವು ಚಿತ್ರಗಳು ಜನಪ್ರಿಯ ನಾಟಕಗಳಾಗಿದ್ದವು. ಅವುಗಳಲ್ಲಿ ತುಳು ಸಂಸ್ಕೃತಿಯ ಲೇಪನ ವಿರಲಿಲ್ಲ. ಆದರೂ ಅವು ಸಾಮಾಜಿಕವಾಗಿ, ಜನರಿಗೆ ತಲುಪಲು ಸಾಧ್ಯವಾದರೂ ಜನರು ನಾಟಕಗಳನ್ನು ಇಷ್ಟಪಟ್ಟುಕೊಂಡು ಯಶಸ್ವಿಗೊಳಿಸಿದ್ದರು.

ತುಳು ಸಂಸ್ಕೃತಿ ಎಂದರೆ ಕೇವಲ ಭೂತಕೋಲ, ಕಂಬಳ, ಕೋಳಿಕಟ್ಟ, ಯಕ್ಷಗಾನಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಕೃತಿಕ ಬದುಕಿನ ಒಂದು ಭಾಗ ಅಷ್ಟೆ. ಇದಲ್ಲದೆ ತುಳುನಾಡಿಗೆ ವಿಶಿಷ್ಟ ರೀತಿಯ ಎಷ್ಟೋ ಆಚರಣೆಗಳಿವೆ. ನಡವಳಿಕೆ, ಸಂಪ್ರದಾಯ, ಕಟ್ಟುಪಾಡುಗಳಿವೆ. ಅದು ಕೇವಲ ನಾಗಮಂಡಲ ಅಥವಾ ಯಕ್ಷಗಾನಕ್ಕೆ ಸಂಬಂಧಪಟ್ಟಿಲ್ಲ. ಉಡುಗೆ – ತೊಡುಗೆಗಳಾಗಿರಬಹುದು, ಅಡುಗೆಯಾಗಿರಬಹುದು, ಮಾತನಾಡುವ ಧಾಟಿಯಾಗಿರಬಹುದು, ಒಟ್ಟು ಬದುಕಿನ ರೀತಿ ಆಗಿರಬಹುದು. ಇವೆಲ್ಲ ಸಂಸ್ಕೃತಿಯ ಅನಾವರಣ ಮಾಡಿಕೊಡುತ್ತದೆ. ಆದರೆ, ದುರದೃಷ್ಟವೆಂದರೆ ಇಲ್ಲಿಯವರೆಗೂ ಸರಿಯಾದ ರೀತಿಯಲ್ಲಿ ‘ಸಂಸ್ಕೃತಿಯ ಅನಾವರಣ’ ಆಗಲಿಲ್ಲ. ಎಲ್ಲ ಚಿತ್ರಗಳಲ್ಲಿ ಯಕ್ಷಗಾನದ ದೃಶ್ಯ ಇರಲೇಬೇಕಾಗಿಲ್ಲ. ಪಾತ್ರಗಳು, ಸನ್ನಿವೇಶಗಳು, ವಿಷಯ, ಪ್ರದೇಶಗಳು ಎಲ್ಲವೂ ನಮ್ಮದೇ ಆಗಿದ್ದಾಗ ಚಿತ್ರಕ್ಕೆ ಕಳೆಬರುತ್ತದೆ.

ತುಳುನಾಡಿನಲ್ಲಿ ವಿಶೇಷವಾಗಿರುವ ಪಾಡ್ದನ, ಎದುರುಕತೆ, ಕಬಿತೆ, ಸಂಧಿಗಳು – ಇವುಗಳ ಚಿತ್ರಣ ಎಲ್ಲೂ ಆಗಿಲ್ಲ. ಸ್ವಂತಿಕೆ ಇರುವಂತಹ ಜನಪದ ಸಂಸ್ಕೃತಿ ನಮ್ಮಲ್ಲಿದೆ. ಕೊರಗರ ಕುಣಿತ, ಚೆನ್ನು ನಲಿಕೆ, ಆಟಿ ಕಳಂಜ ಎಲ್ಲಾ ನಶಿಸಿಹೋಗುತ್ತಾ ಇರುವ ಈ ಹಂತದಲ್ಲಿ ಸ್ವಲ್ಪ ಮಟ್ಟಿಗಾದರೂ ನಮ್ಮ ಚಿತ್ರಗಳಲ್ಲಿಯಾದರೂ ಇವನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಲೇಬೇಕಾಗಿದೆ. ಕೇವಲ ಒಂದು ವಿಷಯವನ್ನು ಕಥೆಯನ್ನಾಗಿಸಿ, ಯಕ್ಷಗಾನದ ಕಲಾವಿದರ ಬದುಕನ್ನು ಕಥೆಯಾಗಿಸಿ ಚಿತ್ರಗಳ ನಿರ್ಮಾಣ ಯಾಕೆ ಸಾಧ್ಯವಾಗದು ?

ತುಳುಭಾಷೆ ಎಂದಾಗ ಚಿತ್ರಮಂದಿರಗಳಿಗೆ ಹೇಗೆ ಅಸಡ್ಡೆ ಬೆಳೆದಿದೆಯೋ ಅದೇ ರೀತಿ ಒಟ್ಟಾಗಿ ತುಳು ಭಾಷೆಯ ಬಗ್ಗೆ ನಮ್ಮಲ್ಲಿ ಅಭಿಮಾನ ಕಡಿಮೆ ಅಥವಾ ಕಡಿಮೆಯಾಗುತ್ತಾ ಬಂದಿದೆ.

ತಮಿಳುನಾಡಿನಲ್ಲಿ ಈಗಲೂ, ಹೊಸ ಕಲಾವಿದನೊಬ್ಬನ ಹೊಸಚಿತ್ರ ಬಿಡುಗಡೆಯಾಗಿದೆ ಎಂದರೆ, ಜನರು ಮುಗಿಬಿದ್ದು ನೋಡುತ್ತಾರೆ. ಚಿತ್ರ ನೋಡಿದ ನಂತರ ನಟನೆ ನಟನೆ ಬಗ್ಗೆ ತಮ್ಮ ಅಭಿಪ್ರಾಯ ನೀಡುತ್ತಾರೆ. ಚಿತ್ರದ ಬಗ್ಗೆಯು ಸಹ. ಆದರೆ ಇಲ್ಲಿ ಹೊಸ ಕಲಾವಿದರಿಗೆ ಜನರ ಪ್ರೋತ್ಸಾಹ ಕಡಿಮೆ. ನಮ್ಮ ಕಲಾವಿದರು, ಹೇಗೆ ಅಭಿನಯ ನೀಡಿದ್ದಾರೆ ಎನ್ನುವ ಕನಿಷ್ಠ ಕುತೂಹಲವೂ ಇಲ್ಲದಾಗಿದೆ.

ತುಳು ಚಿತ್ರರಂಗ ಆಗಲೀ, ರಂಗಭೂಮಿಯೇ ಆಗಲಿ, ಹೊಸ ಕಲಾವಿದರನ್ನು ತಯಾರು ಮಾಡುವಲ್ಲಿಯೂ ಹಿಂದೆ ಬಿದ್ದಿದೆ. ಕಲಾವಿದರು ತಯಾರಾದರೂ ಬೇರೆ ಚಿತ್ರರಂಗಕ್ಕೆ ಹಾರಿಹೋದ ಹಲವು ಕಲಾವಿದರಿದ್ದಾರೆ. ನಿಜ ಏನೆಂದರೆ, ೨೫ ವರ್ಷಗಳಿಂದ ನೋಡಿದ ಮುಖವನ್ನೇ ನೋಡುತ್ತಿದ್ದೇವೆ, ಶಾಲಾ ಕಾಲೇಜುಗಳಲ್ಲಿ ನಾಟಕ ಅಭ್ಯಾಸ ನಿಂತುಹೋಗಿದೆ. ನಮ್ಮದೇ ಕಲಾವಿದರು ತಯಾರಾಗದ ಹೊರತು ನಾವು ಹೊರಗಿನಿಂದ ಕಲಾವಿದರನ್ನು ಕರೆಯುವ ಅಭ್ಯಾಸವಾಗಿ ಬಿಡುತ್ತದೆ.

ತುಳುನಾಡಿನಲ್ಲಿರುವ ವಿಶಿಷ್ಟ ಪ್ರದೇಶಗಳ ಉಪಯೋಗ ಬಹುಮಟ್ಟಿಗೆ ಆಗಬೇಕು. ಸೆಟ್ ಹಾಕದೆ, ಹೊರಾಂಗಣ ಚಿತ್ರೀಕರಣ ಮಾಡಬೇಕು. ಇದರಿಂದ ನಿರ್ಮಾಣ ಕಾರ್ಯ ಮತ್ತು ಚಿತ್ರೀಕರಣ ಚೌಕಟ್ಟು ಇವೆಲ್ಲವೂ ಸೀಮಿತ ಬಜೆಟ್ ಒಳಗಡೆ ಬುರತ್ತವೆ.

ತುಳು ಚಿತ್ರಗಳ ನಿರ್ದೇಶಕರು, ನಿರ್ಮಾಪಕರುಗಳು, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿದ್ದಾರೆ. ಚಿತ್ರರಂಗದ ಮಾರ್ಕೆಟ್ ವಿಶ್ಲೇಷಣೆ ಮಾಡಿಸಿ, ೨೫ ಲಕ್ಷದೊಳಗೆ ಗಟ್ಟಿ ಕಥೆ, ಸಂಭಾಷಣೆ, ಅಭಿನಯ, ಸ್ಥಳೀಯ ಕಲಾವಿದರು, ಸ್ಥಳೀಯ ಲೋಕೇಶನ್ ಬಳಸಿ ಉತ್ತಮ ಚಿತ್ರ ನೀಡಬಹುದು.

ಕೇವಲ ಸಬ್ಸಿಡಿಗೆ ಬೇಕಾಗಿ ಚಿತ್ರ ಮಾಡಲು ಹೊರಟರೆ, ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ.

ಪ್ರಯೋಗಾತ್ಮಕ ಚಿತ್ರಗಳು, ಪೂರ್ತಿ ಹಾಸ್ಯಭರಿತ ಚಿತ್ರಗಳು, ಮಕ್ಕಳ ಚಿತ್ರಗಳು – ಈ ಪ್ರಕಾರಗಳಲ್ಲಿ ಚಿತ್ರಗಳನ್ನು ಮಾಡಲು ಪ್ರಯತ್ನಿಸಬೇಕು.

ಸ್ಥಳೀಯ ಸರಕಾರ, ಸಂಘ ಸಂಸ್ಥೆಗಳು ಜತೆಜತೆಯಾಗಿ Issue Based filmsಗಳನ್ನು ಮಾಡಬಹುದು.

ತುಳು ಚಿತ್ರಗಳ ಪರ್ಯಾಯ ಪ್ರದರ್ಶನ ವ್ಯವಸ್ಥೆ ಆಗಬೇಕು. ಅಲ್ಲಲ್ಲಿ ಇರುವಂತಹ (ಹೊರದೇಶ) ತುಳು ಸಂಘಗಳನ್ನು ಉದ್ದೇಶಿಸಿ, ಕೆಲವು ಪ್ರೇಕ್ಷಕ ಸಮೂಹಕ್ಕೆ ಚಿತ್ರ ಪ್ರದರ್ಶನ ನೀಡಿ ಚಿತ್ರರಂಗದ ಬಗ್ಗೆ ಮಾಹಿತಿಯನ್ನು ನೀಡಬೇಕು.

ಚಿತ್ರ ಮಂದಿರಗಳನ್ನು ಬಿಟ್ಟು, ಶಾಲಾಕಾಲೇಜುಗಳಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿ ಚಿತ್ರ ಪ್ರದರ್ಶಿಸುವ ವ್ಯವಸ್ತೆ ಮಾಡಬೇಕು. ಹಳ್ಳಹಳ್ಳಿಗೆ ಹೋಗಿ ಪ್ರವಾಸಿ ಚಿತ್ರ / ಸಂಚಾರಿ ಚಿತ್ರ ಎನ್ನುವ ಅರ್ಥದಲ್ಲಿ ಚಿತ್ರ ಪ್ರದರ್ಶನ ನೀಡಬೇಕು.

ಸಹಜವಾದ ಕಥೆಯುಳ್ಳ ನೈಜ ಚಿತ್ರಣ ನೀಡುವಂತಹ ಕಥೆಗಳು ಯಶಸ್ಸು ಕಾಣುತ್ತವೆ.

ತುಳುವಿನಲ್ಲಿ ಸಣ್ಣ ಚಿತ್ರಗಳು, ಸಾಕ್ಷ್ಯಚಿತ್ರಗಳಿಗೆ ಒತ್ತು ನೀಡಿ, ಪ್ರಯೋಗಗಳು ನಡೆಯಬೇಕಾಗಿದೆ. ಪ್ರಯೋಗಾತ್ಮಕ ಮನಸ್ಸು ಇರುವ ನಿರ್ಮಾಪಕರು, ಸಂಘಟಕರು ಬೇಕಾಗಿದ್ದಾರೆ.

ತುಳು ಸಿನಿಮಾ ಮೊದಲ ದಾಖಲೆಗಳು

ತುಳು ಚಲನಚಿತ್ರ ನಿರ್ಮಾಣ ಮತ್ತು ನಿರ್ದೇಶನ ಕಾರ್ಯದಲ್ಲಿ ತಮ್ಮನ್ನು ಮೊದಲಾಗಿ ತೊಡಗಿಸಿಕೊಂಡವರು ತುಳುನಾಡಿನವರಾಗಿರದೆ ಕೊಡಗಿನ ಎಸ್.ಆರ್. ರಾಜನ್ ಆಗಿರುತ್ತಾರೆ.

‘ಬಿಸತ್ತಿ ಬಾಬು’ ನಿರ್ಮಾಪಕ ಎಂ.ವೈ. ಕೋಲ, ಉಡಲ್ದ ತುಡರ್ ಚಿತ್ರ ನಿರ್ಮಾಣ ಮಾಡಿದವರು ಮುಸಲ್ಮಾನ ಅಭಿಮಾನಿಗಳಾದ ಶಮೀನ್ ಮತ್ತು ಅನ್ವರ್ ಬೇಗಮ್ ಆಗಿರುತ್ತಾರೆ.

ರಿಚಾರ್ಡ್ ಕ್ಯಾಸ್ಟಲಿನೋ ಅವರ ‘ಬಂಗಾರ್ ಪಟ್ಲೇರ್’ ಮೊತ್ತಮೊದಲ ಈಸ್ಟ್‌ಮನ್ ಕಲರ್ ತುಳು ಸಿನೆಮಾ ಆಗಿದ್ದು, ತುಳು ಸಿನೆಮಾಗಳಲ್ಲೇ ಅತ್ಯಂತ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಚಿತ್ರ.

ರಿಚಾರ್ಡ್‌ಕ್ಯಾಸ್ಟಲಿನೋ ಅವರ ‘ಸಪ್ಟಂಬರ’ -೮’ ತುಳು ಸಿನೆಮಾ ಚರಿತ್ರೆಯಲ್ಲೇ ಒಂದು ವಿನೂತನ ಪ್ರಯೋಗ.

‘ಬಿಸತ್ತಿ ಬಾಬು’ ಮೊತ್ತ ಮೊದಲ ರಾಜ್ಯ ಪ್ರಶಸ್ತಿ ಪಡೆದ ಚಿತ್ರವಾಗಿದೆ.

ಜಯಮಾಲ ನಟಿಸಿದ ಮೊದಲ ತುಳು ಚಿತ್ರ ‘ಕಾಸ್‌ದಾಯೆ ಕಂಡನಿ’ ಆಗಿರುತ್ತದೆ.

‘ಕರಿಯಣಿ ಕಟ್ಟಂದಿ ಕಂಡನಿ’ ಮೊದಲ ವರ್ಣಚಿತ್ರವಾಗಿದೆ.

‘ಕೋಟಿ ಚೆನ್ನಯ’ ಮೊತ್ತಮೊದಲ ತುಳು ಚಾರಿತ್ರಿಕ ಸಿನೆಮಾವಾಗಿದೆ.

‘ಕಾಲ’ ಅತ್ಯುತ್ತಮ ಕಲಾತ್ಮಕ ಮತ್ತು ಹಾಡುಗಳೇ ಇಲ್ಲದ ಚಲನಚಿತ್ರವೆನಿಸಿಕೊಂಡಿದೆ.

ಅತ್ಯಧಿಕ ತುಳು ಚಿತ್ರಗಳನ್ನು ನಿರ್ದೇಶನ ಮಾಡಿದವರು ಆರೂರು ಪಟ್ಟಾಭಿ.

ತುಳು ಚಿತ್ರಗಳ ಚರಿತ್ರೆಯಲ್ಲೇ ‘ಕೋಟಿಚೆನ್ನಯ’ ಎರಡನೇ ಬಾರಿ ನಿರ್ಮಾಣಗೊಂಡ ಚಿತ್ರವೆನಿಸಿಕೊಂಡಿದೆ.

ಕೆ.ಎನ್. ಟೈಲರ್ ಒಂಬತ್ತು ತುಳು ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ.

ತುಳುವಿನ ಏಕೈಕ ಹಂಚಿಕೆದಾರರಾಗಿ ಪ್ರಾರಂಭದಿಂದಲೂ ಎಂದರೆ ‘ಎನ್ನ ತಂಗಡಿ’ ಸಿನೆಮಾದಿಂದ ತೊಡಗಿ ಇಂದಿನ ಕಾಲದವರೆಗೂ ಚಿತ್ರಭಾರತಿಯ ಟಿ.ಎ. ಶ್ರೀನಿವಾಸ್ ಕಳೆದ ೩೫ ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಚಿತ್ರರಂಗದ ಮೂರು ವಿಭಾಗಗಳಾದ ನಿರ್ಮಾಣ, ಹಂಚಿಕೆ ಹಾಗೂ ಪ್ರದರ್ಶನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ.

ತುಳು ಚಿತ್ರರಂಗ ಅಂದಿನಿಂದ ಇಂದಿನವರೆಗೆ

ಸಂ. ಚಿತ್ರದ ಹೆಸರು ವರ್ಷ ನಿರ್ದೇಶನ ನಿರ್ಮಾಣ
೧. ಎನ್ನ ತಂಗಡಿ ೧೯೭೧ ಎಸ್.ಆರ್. ರಾಜನ್ ಎಸ್.ಆರ್. ರಾಜನ್
೨. ದಾರೆದ ಬುಡೆದ ೧೯೭೧ ಆರೂರು ಪಟ್ಟಾಭಿ ನಾರಾಯಣ ಪುತ್ರನ್, ಕೆ.ಎನ್. ಟೈಲರ್
೩. ಪಗೆತ್ತ ಪುಗೆ ೧೯೭೨ ಆರೂರು ಪಟ್ಟಾಭಿ ಆನಂದ ಶೇಖರ್, ಕೆ.ಎಸ್. ಮಹಾಬಲಶೆಟ್ಟಿ
೪. ಬಿಸತ್ತಿ ಬಾಬು ೧೯೭೨ ಆರೂರು ಪಟ್ಟಾಭಿ ಎಂ.ವೈ. ಕೋಲಾ
೫. ಉಡಲ್ದ ತುಡರ್ ೧೯೭೩ ಎಂ. ವಾಸುದೇವನ್ ಶಮೀನ್ ಮತ್ತು ಅನ್ವರ್ ಬೇಗಂ
೬. ಕೋಟಿ ಚೆನ್ನಯ-೧ ೧೯೭೩ ವಿಶುಕುಮಾರ್ ಮುದ್ದು ಸುವರ್ಣ
೭. ಕಾಸ್‌ದಾಯೆ ಕಂಡನಿ ೧೯೭೩ ಆನಂದ ಶೇಖರ್ ಗೀತಪ್ರಿಯ
೮. ಯಾನ್ ಸಂನ್ಯಾಸಿ ಆಪೆ ೧೯೭೪ ಗೀತಪ್ರಿಯ ಎ. ವಿಶ್ವನಾಥ್
೯. ಏರ್ ಮಲ್ತಿನ ತಪ್ಪು? ೧೯೭೪ ಕೆ.ಎನ್. ಟೈಲರ್ ಕೆ.ಎನ್.ಟೈಲರ್
೧೦. ಬಯ್ಯ ಮಲ್ಲಿಗೆ ೧೯೭೪ ಆರೂರು ಪಟ್ಟಾಭಿ ಸಂಜೀವ ದಂಡಕೇರಿ
೧೧. ಸಾವಿರೊಡೊರ್ತಿ ಸಾವಿತ್ರಿ ೧೯೭೬ ಗೀತಪ್ರಿಯ ಕೆ.ಎನ್. ಟೈಲರ್
೧೨. ನ್ಯಾಯೊಗು ಜಿಂದಾಬಾದ್ ೧೯೭೬ ಪಿ.ಎಸ್.ಮೂರ್ತಿ ಕೆಮತ್ತೂರು ದೊಡ್ಡಣ್ಣ ಶೆಟ್ಟಿ, ಬಿ.ಎಸ್.ರಾವ್
೧೩. ತುಳುನಾಡ ಸಿರಿ ೧೯೭೬ ಕೆ.ಎನ್.ಟೈಲರ್ ದಯಾನಂದ ಗರೋಡಿ
೧೪. ಬೊಳ್ಳಿದೋಟ ೧೯೭೭ ಆರೂರು ಪಟ್ಟಾಭಿ ಸಂಜೀವ ದಂಡಕೇರಿ
೧೫. ಸಂಗಮ ಸಾಕ್ಷಿ ೧೯೭೭ ಸುಂದರ ಕೃಷ್ಣ ಅರಸ್ ವಸಂತ ಬಂಗೇರ
೧೬. ಕರಿಯಣಿ ಕಟ್ಟಂದಿ ಕಂಡನಿ ೧೯೭೮ ಆರೂರು ಪಟ್ಟಾಭಿ ಆರೂರು ಭೀಮರಾವ್
೧೭. ನ್ಯಾಯೊಗಾದ್ ಎನ್ನ ಬದ್‌ಕ್‌ ೧೯೭೯ ಚಂದ್ರಶೇಖರ್ ಕುಕ್ಕಿಕಟ್ಟೆ ರಿಚಾರ್ಡ್‌ಕ್ಯಾಸ್ಟಲಿನೊ
೧೮. ಭಾಗ್ಯವಂತೆದಿ ೧೯೮೧ ಆರೂರು ಪಟ್ಟಾಭಿ ಟಿ.ಎ. ಶ್ರೀನಿವಾಸ
೧೯. ಬದ್ಕೆರೆ ಬುಡ್ಲೆ ೧೯೮೩ ಆರೂರು ಪಟ್ಟಾಭಿ ರಾಮ್ ಶೆಟ್ಟಿ
೨೦. ದಾರೆದ ಸೀರೆ ೧೯೮೪ ರಾಮ್ ಶೆಟ್ಟಿ ಮಚ್ಛೇಂದ್ರನಾಥ್ ಪಾಂಡೇಶ್ವರ
೨೧. ಪೆಟ್ಟಾಯಿ ಪಿಲಿ ೧೯೮೭ ರವಿ ಕಾಂಚನ್ ಸದಾಶಿವ ಸಾಲ್ಯಾನ್
೨೨. ಬದ್ಕೊಂಜಿ ಕಬಿತೆ ೧೯೮೮ ದಾಮೋದರ ಬಂಗೇರ ಶ್ರೀಕಾಂತ್
೨೩. ಸತ್ಯ ಓಲುಂಡು? ೧೯೯೦ ಆರೂರು ಪಟ್ಟಾಭಿ ಸದಾಶಿವ ಸಾಲ್ಯಾನ್, ಎಸ್.ಎಸ್. ಪುತ್ರನ್
೨೪. ರಾತ್ರೆ ಪಗೆಲ್ ೧೯೯೧ ಕೋಡ್ಲು ರಾಮಕೃಷ್ಣ ಪ್ರಜ್ವಲ್ ಬ್ರಹ್ಮಾವರ
೨೫. ಬಂಗಾರ್ ಪಟ್ಲೇರ್ ೧೯೯೩ ರಾಮಣ್ಣ ರೈ ರಿಚಾರ್ಡ್‌ಕ್ಯಾಸ್ಟಲಿನೊ
೨೬. ಸಪ್ಟಂಬರ-೮ ೧೯೯೪ ಡಾ.ರಿಚಾಡ್‌ಕ್ಯಾಸ್ಟಲಿನೊ ರಿಚಾಡ್‌ಕ್ಯಾಸ್ಟಲಿನೊ
೨೭. ಬದ್ಕ್‌ದ ಬಿಲೆ ೧೯೯೫ ಗಣೇಶ ಪ್ರಿಯ ಟಿ.ಎ. ಶ್ರೀನಿವಾಸ
೨೮. ಮಾರಿಬಲೆ ೧೯೯೬ ಕೃಷ್ಣಪ್ಪ ಉಪ್ಪೂರು ರಘುನಾಥ ರೈ
೨೯. ಕಾಲ ೧೯೯೭ ರಾಜ್ ಬಲ್ಲಾಳ ವೈ.ಆರ್.ಅಶ್ವತ್ಥ ನಾರಾಯಣ ರೈ
೩೦. ಒಂತೆ ಅಜೆಸ್ಟ್ ಮಲ್ಟಿ ೧೯೯೯ ಕೆದಂಬಾಡಿ ಪ್ರೇಮನಾಥ್ ಪ್ರಜ್ವಲ್ ಬ್ರಹ್ಮಾವರ
೩೧. ತುಡರ್ ೨೦೦೧ ಕೋಡ್ಲು ರಾಮಕೃಷ್ಣ ಪ್ರಶಾಂತ್ ಶೆಟ್ಟಿ, ಪ್ರೇಮನಾಥ್ ರೈ
೩೨. ಕೋಟಿ ಚೆನ್ನಯ-೨ ೨೦೦೬ ಆನಂದ ಪಿ. ರಾಜು ಆರ್. ಧನರಾಜ್
೩೩. ಕಡಲ ಮಗೆ ೨೦೦೬ ಪ್ರವೀಣ್ ಸಾಧನಾ ಎನ್. ಶೆಟ್ಟಿ
ತೆರೆ ಕಾಣದ ಚಿತ್ರಗಳು
೧. ನಮ್ಮ ಭಾಗ್ಯ ಕೆ.ಎನ್. ಟೈಲರ್ ಗಣಪತಿ ಫಿಲ್ಮ್ಸ್
೨. ಸರ್ಪ ಸಂಕಲೆ ಪಾ. ಗೋಪಾಲಕೃಷ್ಣ ಪಾ. ಗೋಪಾಲಕೃಷ್ಣ
೩. ನಿರೆಲ್ ಸಂಜೀವ ಎಸ್.ಕೆ.
೪. ಬಂಗಾರ್ದ ಕುರಲ್
ಟಿ.ವಿ. ಧಾರಾವಾಹಿ
೧. ಗುಡ್ಡೆದ ಭೂತ ೧೯೯೦ ಸದಾನಂದ ಸುವರ್ಣ
ಕಿರುಚಿತ್ರ
೧. ಬರವುದ ಭಂಡಸಾಲೆ ೨೦೦೪ ವಿಜಯಕುಮಾರ ಕೊಡಿಯಾಲ್‌ಬೈಲ್ ಮ್ಯಾಕ್ಸೆಲ್ ಎಂಟರ್ಪ್ರೈಸಸ್
ಡಿಜಿಟಲ್ ಚಿತ್ರ
೧. ಸುದ್ದೊ ೨೦೦೬ ಪಿ.ಎನ್. ರಾಮಚಂದ್ರ ಮೋಹನ ಮಾರ್ನಾಡ್ ಸುರೇಂದ್ರಕುಮಾರ ರಾಮಚಂದ್ರ ಪಿ.ಎನ್.