ಮಾಧ್ಯಮಗಳಲ್ಲಿ ಎನ್ನುವಾಗ ಅಕ್ಷರ ಮಾಧ್ಯಮದ ಪತ್ರಿಕಾ ಸಾಹಿತ್ಯ, ಎಲೆಕ್ಟ್ರಾನಿಕ್ (ವಿದ್ಯುನ್ಮಾನ) ಮಾಧ್ಯಮಗಳ ಶ್ರವ್ಯ ಮತ್ತು ದೃಶ್ಯ ಮೂಲಗಳು ಮುಖ್ಯವಾಗುತ್ತವೆ. ಪ್ರಸ್ತುತ ಲೇಖನದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತುಳು ಭಾಷೆ, ಸಾಹಿತ್ಯಗಳ ಬಳಕೆಯ ಸ್ಥೂಲ ನೋಟವೊಂದನ್ನು ಗಮನಿಸಲಾಗಿದೆ.

ಎಲೆಕ್ಟ್ರಾನಿಕ್ ಮಾಧ್ಯಮಗಳು ಮುಖ್ಯವಾಗಿ :-

೧. ಶ್ರವಣ ಮಾಧ್ಯಮ – ಆಕಾಶವಾಣಿ

೨. ದೃಶ್ಯ ಮಾಧ್ಯಮ – ದೂರದರ್ಶನ

ಭಾರತ ಸರಕಾರದ ಸಾರ್ವಜನಿಕ ಪ್ರಸಾರ ಸೇವೆಯಲ್ಲಿ ನಿರತವಾಗಿರುವ ಈ ಎರಡೂ ಮಾಧ್ಯಮಗಳು ಕೇಂದ್ರ ಸರಕಾರದ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ ಅಂಕಿತದಲ್ಲಿ ಕಾರ್ಯನಿರ್ವಹಿಸುತ್ತಾ ಇವೆ. ಇತ್ತೀಚೆಗೆ ‘ಪ್ರಸಾರಭಾರತಿ’ಯಾಗಿ ಸ್ವಾಯತ್ತ ಸ್ವರೂಪ ಪಡೆದಿವೆ.

ಆಕಾಶವಾಣಿಯಲ್ಲಿ ತುಳು

ಆಕಾಶವಾಣಿ, ಬಾನುಲಿ ಅಥವಾ ಜನಸಾಮಾನ್ಯರ ಮಾತಿನಲ್ಲಿ ‘ರೇಡಿಯೋ’, ಇಪ್ಪತ್ತನೆಯ ಶತಮಾನದ ಇತಿಹಾಸ ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಸಂಪರ್ಕ ಮಾಧ್ಯಮವಾಗಿದೆ. ಇಟೆಲಿಯ ವಿಜ್ಞಾನಿ ಮಾರ್ಕೋನಿ, ಎಲೆಕ್ಟ್ರೋ ಮ್ಯಾಗ್ನೆಟ್ ತರಂಗಗಳ ಮೂಲಕ ಪ್ರಸಾರ ತಂತ್ರವನ್ನು ಖಚಿತಗೊಳಿಸಿದ. ಕ್ರಿ.ಶ. ೧೯೦೬ರಲ್ಲಿ ಮಾನವನ ಮಾತನ್ನು ಈ ತರಂಗಗಳ ಮೂಲಕ ಪ್ರಸಾರ ತಂತ್ರವನ್ನು ಖಚಿತಗೊಳಿಸಿದ. ಕ್ರಿ. ಶ. ೧೯೦೬ರಲ್ಲಿ ಮಾನವನ ಮಾತನ್ನು ಈ ತರಂಗಗಳ ಮೂಲಕ ಪ್ರಸಾರ ಮಾಡಲು ಆರಂಭಿಸಲಾಯಿತು. ಭಾರತದಲ್ಲಿ ೧೯೨೧ರ ಆಗಸ್ಟ್ ತಿಂಗಳಲ್ಲಿ ಮುಂಬೈಯಲ್ಲಿ ಪ್ರಥಮ ಪ್ರಾಯೋಗಿಕ ಪ್ರಸಾರ ನಡೆದು ಮುಂದೆ ೧೯೨೭ರ ಬಳಿಕ ‘ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಕಂಪೆನಿ’ಯ ಮೂಲಕ ಭಾರತದಲ್ಲಿ ಸಂಘಟಿತ ಪ್ರಸಾರಕ್ಕೆ ತೊಡಗಿಸಲಾಯಿತು. ೧೯೩೬ರಲ್ಲಿ ಇದಕ್ಕೆ ‘ಆಲ್ ಇಂಡಿಯಾ ರೇಡಿಯೋ’ ಎನ್ನುವ ಸ್ವರೂಪ ಬಂದಿತು. ಸ್ವಾತಂತ್ರ್ಯಾನಂತರ ರೇಡಿಯೋ ಜಾಲ ವಿಸ್ತರಣೆಯಾಗಿ ಇಂದು ಆಕಾಶವಾಣಿ ವಿಶ್ವದಲ್ಲೇ ಅತೀ ಬೃಹತ್ ಪ್ರಸಾರಜಾಲವಾಗಿದೆ. ಕರ್ನಾಟಕದಲ್ಲಿ ೨೪ ಬಾನುಲಿ ನಿಲಯಗಳು ಸೇರಿದಂತೆ ದೇಶದಲ್ಲಿ ೨೧೦ ಪ್ರಸಾರ ಕೇಂದ್ರಗಳೂ, ಹನ್ನೆರಡುವರೆ ಕೋಟಿ ರೇಡಿಯೋ ಸೆಟ್ಟುಗಳೂ ಇವೆ. ೨೪ ಪ್ರಧಾನ ಹಾಗೂ ೧೪೬ ಉಪಭಾಷೆಗಳಲ್ಲಿ ರೇಡಿಯೋ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಇವುಗಳಲ್ಲಿ ತುಳು ಭಾಷೆಯೂ ಒಂದಾಗಿದೆ.

ಮಂಗಳೂರು ಆಕಾಶವಾಣಿಯಲ್ಲಿ ತುಳು

ಅವಿಭಜಿತ ದ. ಕ. ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು ಆಕಾಶವಾಣಿ ಕೇಂದ್ರ ಆರಂಭವಾದುದು ೧೯೭೬ರ ದಶಂಬರ ೧೧ರಂದು. ಮಂಗಳೂರಿನಲ್ಲಿ ಸ್ಟುಡಿಯೋ ಮತ್ತು ಅಲ್ಪ ಶಕ್ತಿಯ ಪ್ರಸಾರ ಕೇಂದ್ರ ಹಾಗೂ ಉಡುಪಿ – ಬ್ರಹ್ಮಾವರದಲ್ಲಿ ಇದಕ್ಕೆ ಸಂಬಂಧಿಸಿದ ಶಕ್ತಿಶಾಲಿ ಟ್ರಾನ್ಸ್‌ಮೀಟರ್ ಆರಂಭಗೊಂಡಿತು.

ಬಾನುಲಿ ಕೇಂದ್ರವೊಂದು ತನ್ನ ಪ್ರಸಾರ ವ್ಯಾಪ್ತಿಯಲ್ಲಿರುವ ಮುಖ್ಯ ಸಮುದಾಯದ ಎಲ್ಲ ಭಾಷೆಗಳ ಪ್ರತಿಭೆಗಳಿಗೂ ಅವಕಾಶ ಒದಗಿಸಬೇಕಾಗುವುದಾದರೂ ತುಳುನಾಡಿನಲ್ಲಿ ಈ ಕೇಂದ್ರವಿರುವುದರಿಂದ ಸಹಜವಾಗಿ ತುಳುವಿಗೆ ಸಾಕಷ್ಟು ಗಮನ ನೀಡುತ್ತ ಬಂದಿದೆ. ತುಳುವಿನ ಪ್ರತಿಭಾವಂತರ, ಸೃಜನಶೀಲರ ಕೊಡುಗೆಯಿಂದ ಸ್ವತಃ ಸಂಪನ್ನವಾಗುತ್ತಲೂ ಬಂದಿದೆ.

ಇಲ್ಲಿ ಬಾನುಲಿ ಕಾರ್ಯಾರಂಭದ ವೇಳೆಗೆ ಜಿಲ್ಲೆಯಲ್ಲಿ ಭೂ ಮಸೂದೆ ಜಾರಿ, ಉನ್ನತ ಆಂಗ್ಲ ಶಿಕ್ಷಣ ಪ್ರಸಾರ, ಅಭಿವೃದ್ಧಿಯ ಹೆಸರಿನಲ್ಲಿ ಕಾಲೂರಿದ ಉದ್ದಿಮೆಗಳು, ಅದರ ಮೂಲಕ ಬಹುಸಂಖ್ಯೆಯಲ್ಲಿ ಈ ನೆಲಕ್ಕೆ ಬಂದು ನೆಲೆಯಾಗತೊಡಗಿದ ಪರಭಾಷಿಗರು, ಪರಿಣಾಮವಾಗಿ ತುಳು ಭಾಷೆ, ಜನಪದ ಜೀವನ ಒಂದು ರೀತಿಯ ಸಂಕೋಚ – ಮುದುಡುವಿಕೆಗೊಳಪಟ್ಟು, ಸಂಸ್ಕೃತಿ ಪಲ್ಲಟನದ ಸಂಕ್ರಮಣ ಸ್ಥಿತಿಯಲ್ಲಿತ್ತು. ಇಂತಹ ಕಾಲಘಟ್ಟದಲ್ಲಿ ಪ್ರಸಾರ ಕಾರ್ಯ ಆರಂಭಿಸಿದ ಮಂಗಳೂರು ಆಕಾಶವಾಣಿ ಮಾಹಿತಿ, ಮನರಂಜನೆ, ಶಿಕ್ಷಣದ – ಮೂರು ಮುಖ್ಯ ಧ್ಯೇಯಗಳ ಚೌಕಟ್ಟಿನಲ್ಲಿ ತುಳು ಭಾಷೆ, ಸಂಸ್ಕೃತಿ, ಸಾಹಿತ್ಯವು ನಿಸರ್ಗದತ್ತವಾದ ರೀತಿಯಲ್ಲಿ ಉಳಿದು ಬೆಳೆಯುವುದಕ್ಕೆ ಭದ್ರವಾದ ನೆಲೆಗಟ್ಟೊಂದನ್ನು ಒದಗಿಸಿತೆಂದರೆ ಅತಿಶಯೋಕ್ತಿಯಲ್ಲ.

ತುಳುವಿನ ಅಪಾರ ಜನಪದ ಸಾಹಿತ್ಯದ ಕಣಜಗಳು ಅಲ್ಲಲ್ಲಿ ಕುದುರಗಳಲ್ಲಿ ಹುದುಗಿಕೊಂಡಿದ್ದವು. ಆಟ, ನಾಟಕ, ಕಲೆ, ಪ್ರತಿಭಾ ಪ್ರದರ್ಶನಗಳೂ ಅದೇ ತರಹ ತಮ್ಮ ತಮ್ಮ ವ್ಯಾಪ್ತಿಯೊಳಗಡೆ ಇದ್ದವು. ಸೃಜನಾತ್ಮಕ ಸಾಹಿತ್ಯ ರಚನೆ ಪಣಿಯಾಡಿಯೋತ್ತರ ಕಾಲಘಟ್ಟದಲ್ಲಿ ಒಂದಿಷ್ಟು ವಿರಳವಾಗಿ ನಡೆದಿದ್ದರೂ, ತುಳುವಿಗೆ ಪ್ರಕಟಣ ಮಾಧ್ಯಮಗಳು ಕಡಿಮೆ. ಇಂತಹ ಅತಂತ್ರ ಸ್ಥಿತಿಯಲ್ಲಿದ್ದಾಗ ಹುಟ್ಟಿಕೊಂಡ ಮಂಗಳೂರು ಆಕಾಶವಾಣಿ ಕೇಂದ್ರ, ತುಳುವಿನ ವೈಶಿಷ್ಟ್ಯಗಳನ್ನು ಧ್ವನಿಮುದ್ರಿಸಿಕೊಂಡು, ಮನೆಮನೆಗೆ, ಪ್ರಸಾರ ವ್ಯಾಪ್ತಿಯ ಸಮಗ್ರ ಸಮುದಾಯಕ್ಕೆ ತಲುಪಿಸುವ ಮಾಧ್ಯಮವಾಯಿತು. ಉಜಿರೆಯ ಚಂದು ಸುವರ್ಣರ ಕೋಟಿಚೆನ್ನಯ ಪಾಡ್ದನ, ಕೃಷ್ಣಾಪುರದ ಗಿರಿಜಾ ಶೆಡ್ತಿಯವರ ಕೂಟದ ‘ಮಂಜೊಟ್ಟಿಗೋಣ’ ಕಬಿತ, ಹಿರಿಯಡ್ಕದ ಡಂಗು ಪಾಣಾರ – ಜಗ್ಗು ನಲಿಕೆಯವರ ತೆಂಬರೆ ಹಿಮ್ಮೇಳದ ಕೋಡ್ದಬ್ಬು ಪಾಡ್ದನ, ಉಳ್ಳಾಲ ನರ್ಸು ಸೇರಿಗಾರರ ಜಾನಪದ ನಾಗಸ್ವರ, ಗೋಪಾಲ ನಾಯ್ಕರ ‘ಸಿರಿ ಸಂಧಿ’, ಪ್ರತಿ ಬುಧವಾರ ರಾತ್ರಿ ತಾಸೊಂದರ ಅವಧಿಯ ತೆಂಕು – ಬಡಗು ತಿಟ್ಟುಗಳ ಯಕ್ಷಗಾನ, ನಾಟಕಕಾರರ ನಾಟಕಗಳು – ಹೀಗೆ ವೈವಿಧ್ಯಮಯವಾಗಿ ಅವಿಭಜಿತ ದ.ಕ. ಜಿಲ್ಲೆ ಮತ್ತು ಮಲೆನಾಡಿನವರೆಗೂ ವ್ಯಾಪಕವಾಗಿ ರೇಡಿಯೋ ಸೆಟ್ಟ್ ಇದ್ದಲ್ಲೆಲ್ಲಾ ಕೇಳಿಸತೊಡಗಿದವು.

ಸಣ್ಣ ಕತೆಗಳು, ಕವಿತೆ, ಹಾಡು, ನಾಟಕ, ರೂಪಕ, ಸಾಹಿತ್ಯಿಕ ಚರ್ಚೆ, ಕೃಷಿಕರಿಗೆ ಕೃಷಿ ಮಾಹಿತಿ, ವೈದ್ಯಕೀಯ ಸಲಹೆ, ಕಾನೂನು ಮಾಹಿತಿ, ಸಾಧನಶೀಲರೊಡನೆ ಸಂದರ್ಶನ, ಯುವಜನರು, ಮಹಿಳೆಯರು, ಮಕ್ಕಳು, ಗ್ರಾಮೀಣರಿಗೆ ಉಪಯುಕ್ತವೆನಿಸುವ ಆಯಾ ಕ್ಷೇತ್ರದ ಪರಿಣತರ ಕಾರ್ಯಕ್ರಮಗಳು – ಮುಂತಾಗಿ ಸಾರ್ವಜನಿಕ ಶ್ರೋತೃ ಸಮುದಾಯಕ್ಕೆ ಆಲಿಸಲು ಅವಕಾಶವಾದುದು, ತುಳುವರ ಭಾಷೆ, ಸಂಸ್ಕೃತಿಯ ಸ್ವರೂಪವನ್ನು ಜೀವಕಳೆ ನೀಡಿ ಎತ್ತಿ ನಿಲ್ಲಿಸಿದ ಅನುಭವ ನೀಡಿದೆ.

ಈ ಪ್ರಸಾರ ಸಂವಹನ ಕಳೆದ ಸುಮಾರು ಮೂರು ದಶಕಗಳ ಉದ್ದಕ್ಕೆ ಹಾದು ಬಂದಿದೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡುವ ಅವಕಾಶದಿಂದಾಗಿ ಎಷ್ಟೋ ಸಾವಿರ ತುಳು ಕಲಾವಿದರು, ಕವಿ, ಸಾಹಿತಿಗಳು ಪ್ರತಿಭಾ ವಿಕಾಸದ ಅಂಗಣಗಳಿಕೊಂಡರು. ಇವರ ಮೂಲಕವಾಗಿ ಆಕಾಶವಾಣಿಯೂ ಬೆಳೆಯಿತು. ವೈಶಿಷ್ಟ್ಯ ದಾಖಲಿಸಿತು. ಪಾಡ್ದನ ಕಲಾವಿದ – ಕಾವಿದೆಯರು ಮಂಗಳೂರು ಆಕಾಶವಾಣಿಯಲ್ಲಿ ಹಾಡುತ್ತ ಬಂದಿದ್ದಾರೆ. ವಿಭಿನ್ನ ಜನಪದ ಕಲಾವಿದರೊಂದಿಗೆ ಸಂದರ್ಶನ, ತುಳುವರ ಕೃಷಿಕಾರ್ಯ, ಕಲೆ, ವೃತ್ತಿಗಳ ಬಗ್ಗೆ ಮಾಹಿತಿ, ಅಂಥವರ ಸಂದರ್ಶನ, ಪರಿಚಯ – ಹೀಗೆ ಜನಪದ ಸಾಹಿತ್ಯ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಕಾಲಕಾಲಕ್ಕೆ ನಡೆದಿದೆ.

ಇಲ್ಲಿನ ತುಳು ವಿದ್ವಾಂಸರು ಕೂಡಾ ಆಕಾಶವಾಣಿಯೊಂದಿಗೆ ಆರಂಭದಿಂದಲೂ ಹೆಗಲಿಗೆ ಹೆಗಲಿತ್ತು ಮಾರ್ಗದರ್ಶನ, ಸಲಹೆ ನೀಡಿದ್ದಾರೆ. ರಾಮ ಕಿರೋಡಿಯನ್, ಕೆದಂಬಾಡಿ ಜತ್ತಪ್ಪ ರೈ, ದೂಮಪ್ಪ ಮಾಸ್ತರ್ ಮುಂತಾದ ಸಾಹಿತಿ, ನಾಟಕಕಾರರು; ಅಮೃತ ಸೋಮೇಶ್ವರ, ಕು.ಶಿ. ಹರಿದಾಸ ಭಟ್, ಮಂದಾರ ಕೇಶವ ಭಟ್ಟ, ಯು.ಪಿ. ಉಪಾಧ್ಯಾಯ ದಂಪತಿಗಳು, ಬಿ.ಎ.ವಿವೇಕ ರೈ, ಉಡುಪಿಯ ರಾ. ಗೋವಿಂದ ಪೈ ಸಂಶೋಧನಾ ಕೇಂದ್ರ, ಮಂಗಳೂರು ವಿ.ವಿ.ಯ ತುಳು ವಿದ್ವಾಂಸರು, ಕಯ್ಯಾರ ಕಞ್ಞಣ್ಣ ರೈ ಮತ್ತಿತರರು ಇಲ್ಲಿನ ಕಾರ್ಯಕ್ರಮ ರೂಪುರೇಷೆಗೆ ವಿವಿಧ ಬಗೆಯಲ್ಲಿ ನೆರವಾಗಿದ್ದಾರೆ.

ತುಳು ಭಾಷೆಯಲ್ಲಿ ಪುತ್ತೂರು ತುಳು, ಕಾಸರಗೋಡು ತುಳು, ಮಂಗಳೂರು ತುಳು, ಉಡುಪಿ ತುಳು, ಕಲ್ಯಾಣಪುರ ತುಳು, ಕಾರ್ಕಳ ತುಳು, ಮುಂಬಯಿ ತುಳು, ಬೆಂಗಳೂರು ತುಳು, ಚೆನ್ನೈ ತುಳು – ಹೀಗೆ ಇಪ್ಪತ್ತಕ್ಕೂ ಮಿಕ್ಕ ಪ್ರಾದೇಶಿಕ ವ್ಯತ್ಯಾಸದ ಪ್ರಬೇಧಗಳಿವೆ. ಅಂತೆಯೇ ಜೈನ ತುಳು, ಬ್ರಾಹ್ಮಣ ತುಳು, ಸಾಮಾನ್ಯರ ತುಳು ಇಂಥ ವೈವಿಧ್ಯೆತೆಯಿಂದ, ಈ ಎಲ್ಲ ವೈವಿಧ್ಯಗಳ ಸಹಜದ ಸೊಬಗು, ಸೊಗಡನ್ನು ಯಥಾಸ್ಥಿತಿಯಲ್ಲೇ ಕೇಳಲು ಅವಕಾಶವಾದುದು ನಮ್ಮ ಆಕಾಶವಾಣಿಯಲ್ಲಿ.

ಬಹುಜನಕ್ಕೆ ತಲಪುವ ಇಂತಹ ಅವಕಾಶದಿಂದಾಗಿ ತುಳುವಿನಲ್ಲಿ ಶಿಷ್ಟ ಸಾಹಿತ್ಯ ಕೂಡಾ ಸಾಕಷ್ಟು ಬೆಳವಣಿಗೆ ಹೊಂದುವಂತಾಯಿತು. ಕತೆ, ಕವಿತೆ, ನಾಟಕ, ವಿಚಾರ ಸಾಹಿತ್ಯ ಪ್ರಕಾರದಲ್ಲಿ ಬಹಳಷ್ಟು ಪ್ರತಿಭೆಗಳು ಆಕಾಶವಾಣಿಯಲ್ಲಿ ಬೆಳಕಿಗೆ ಬಂದು ಬೆಳೆದಿದ್ದಾರೆ. ಆಕಾಶವಾಣಿ ಮಾಧ್ಯಮವನ್ನು ಬೆಳೆಸಿದ್ದಾರೆ.

ಮಂಗಳೂರು ಆಕಾಶವಾಣಿಯ ಪ್ರಾಯೋಗಿಕ ಪ್ರಸಾರ ಕಾಲದಿಂದಲೂ ತುಳು ನಾಟಕಗಳು ಪ್ರಸಾರ ಆಗುತ್ತಲಿವೆ. ರಾಮ ಕಿರೋಡಿಯನ್, ಮಚ್ಛೆಂದ್ರನಾಥ ಪಾಂಡೇಶ್ವರ, ಅಮೃತ ಸೋಮೇಶ್ವರ, ಕುದ್ಯಾಡಿ ಸೇರಿದಂತೆ ಹಿರಿಯ ನಾಟಕಕಾರರ ಸುಮಾರು ೫೦೦ಕ್ಕೂ ಮಿಕ್ಕ ತುಳುನಾಟಕಗಳು ಪ್ರಸಾರಗೊಂಡಿದೆ. ತುಳುವಿನ ಜನಪದ ಸಾಹಿತ್ಯವನ್ನು ಬಳಸಿಕೊಂಡ ನೂರಾರು ರೂಪಕಗಳೂ ಪ್ರಸಾರವಾಗಿವೆ. ಇಲ್ಲಿನ ವಾದ್ಯ ವೈಶಿಷ್ಟ್ಯಗಳೂ ಜನಪದ ವಾದ್ಯಗಳೂ ಕೇಳುಗರ ಕಿವಿಗಳನ್ನು ತಲುಪಿವೆ. ತುಳು ಚಲನಚಿತ್ರ ಹಾಡುಗಳು, ಭಕ್ತಿಗೀತೆ, ಭಾವಗೀತೆಗಳೂ ನಿಯಮಿತವಾಗಿ ಪ್ರಸಾರವಾಗುತ್ತಿವೆ. ಆಗೀಗಲೊಮ್ಮೆ ಒಂದು ತಾಸಿನ ಅವಧಿಯ ತುಳು ಯಕ್ಷಗಾನ ಪ್ರಸಾರವಾಗುತ್ತಿದೆ. ಸುಮಾರು ಒಂದು ದಶಕದ ಹಿಂದೆ, ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಕೇಂದ್ರ ಪ್ರಸಾರ ಸಚಿವಾಲಯವು ಮಂಗಳೂರು ಆಕಾಶವಾಣಿಯಲ್ಲಿ ‘ತುಳುವಾರ್ತೆ’ಯ ಪ್ರಸಾರಕ್ಕೆ ಅವಕಾಶ ನೀಡಿತು. ವಾರಕ್ಕೊಮ್ಮೆ ಪ್ರತೀ ಗುರುವಾರ ಸಾಯಂಕಾಲ ೬-೧೫ಕ್ಕೆ ಐದು ನಿಮಿಷ ಅವಧಿಯ ‘ತುಳು ಸುದ್ದಿಸಾರ’ ಪ್ರಸಾರವಾಗುತ್ತಲಿದೆ.

ಬಹುಭಾಷಾ ಮಾಧ್ಯಮವಾದ ಅಖಿಲ ಭಾರತ ಆಕಾಶವಾಣಿಯ ಮಂಗಳೂರು ಕೇಂದ್ರದಲ್ಲಿ ಸದ್ಯ ವಾರಕ್ಕೆ ೯೦ ನಿಮಿಷಗಳ ಅವಧಿಯ ತುಳು ಕಾರ್ಯಕ್ರಮಗಳ ಪ್ರಸಾರವಿದೆ. ಅದಿತ್ಯವಾದ (ಯುವಜನರ ಕಾರ್ಯಕ್ರಮ), ಮಂಗಳವಾರ (ಸಾಮಾನ್ಯ ವರ್ಗ), ಗುರುವಾರ (ಮಹಿಳೆಯರು/ಮಕ್ಕಳ ಕಾರ್ಯಕ್ರಮ) – ತಲಾ ೨೫ ನಿಮಿಷಗಳು, ಶುಕ್ರವಾರ ರಾತ್ರಿ ೧೫ ನಿಮಿಷ ಅವಧಿಯ ಭಾಷಣ/ಸಂದರ್ಶನ ಇತ್ಯಾದಿ. ಇವಲ್ಲದೆ ಇತರ ವಿಭಾಗದಲ್ಲಿ ಪಾಡ್ದನ, ಸಂಧಿ ಕಬಿತಗಳೂ ಪ್ರಸಾರವಾಗುವುದಿದೆ. ತುಳುನಾಡಿನ ಭೂತಾರಾಧನೆಗೆ ಸಂಬಂಧಿಸಿದ, ಇಲ್ಲವೇ ಪ್ರಾಚೀನ ಪರಂಪರೆಯ ದೈವಗಳು, ವೀರರಿಗೆ ಸಂಬಂಧಿಸಿದ ನೂರಾರು ಪಾಡ್ದನಗಳು ಬಾನುಲಿ ಕೇಳುಗರಿಗೆ ಪರಿಚಿತವಾಗಿವೆ.

ಇವಲ್ಲದೆ, ಅವಿಭಜಿತ ಜಿಲ್ಲೆಯಾದ್ಯಂತ ತುಳುಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸಾಹಿತ್ಯಿಕ, ಸಾಂಸ್ಕೃತಿಕ ಸಮಾರಂಭಗಳಿಗೆ ಆಕಾಶವಾಣಿಯೇ ಪ್ರತಿನಿಧಿಯಾಗಿ ಹೋಗಿ ಧ್ವನಿಮುದ್ರಿಸಿಕೊಂಡು ಅದರ ವರದಿ / ಸಮೀಕ್ಷೆ ನೀಡುವುದೂ ಇದೆ.

ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಮೇಲೆ ಅದರ ಹಲವು ಉದ್ದೇಶಿತ ಯೋಜನೆಗಳಿಗೆ ಮಂಗಳೂರು ಆಕಾಶವಾಣಿ ಜತೆಗೂಡಿದೆ. ೧೯೯೮ರ ವೇಳೆಗೆ ಅಕಾಡೆಮಿಯ ಸಹಯೋಗದಲ್ಲಿ ಮಂಗಳೂರು ಆಕಾಶವಾಣಿ ತುಳು ನಾಟಕ ರಚನಾ ಕಮ್ಮಟವೊಂದನ್ನು ನಡೆಸಿತು. ಅದರಲ್ಲಿ ಸೃಷ್ಟಿಗೊಂಡ ‘ಆಚುಬಿಜಲಿನ ಅಮರ್ ಬೀರೆರ್’ (ರಚನೆ : ಶಂಕರ ಪೂಜಾರಿ ಕಟಪಾಡಿ), ಕಾಂತಬಾರೆ ಬೂದಬಾರೆ (ಕ್ಯಾಥರಿನ್ ರೊಡ್ರಿಗಸ್‌), ತುಡರ್ (ಸುಮತಿ ಪಾಂಗಾಳ), ‘ಕೋರಿ ತುಯಿ’ (ಆತ್ರಾಡಿ ಅಮೃತಾ), ಕನಪಗ (ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ) ಮುಂತಾದವರ ನಾಟಕಗಳು ಬಾನುಲಿಗಾಗಿ ನಿರ್ಮಾಣಗೊಂಡು ಪ್ರಸಾರವಾದವು.

ಹೀಗೆಯೇ ಅಕಾಡೆಮಿಯ ಸಹಯೋಗದಲ್ಲಿ ‘ಆಕಾಶವಾಣಿ ಕತೆಕುಲು (೧೯೯೭) ಎನ್ನುವ ಪ್ರಸಾರದಿಂದ ಆಯ್ದು ತೆಗೆದ ಕತೆಗಾರರ ಕತೆಗಳ ಸಂಕಲನ ಪ್ರಕಟಿಸಲಾಗಿದೆ. ಇತ್ತೀಚೆಗೆ ೨೦೦೨ರಲ್ಲಿ ‘ಕಪ್ಪುಗಿಡಿ’ಯೆನ್ನುವ ತುಳು ಕಾದಂಬರಿಯೊಂದನ್ನು (ಲೇ. ಜಾನಕಿ ಬ್ರಹ್ಮಾವರ) ಬಾನುಲಿಯಲ್ಲಿ ಹತ್ತು ಕಂತುಗಳಲ್ಲಿ ‘ಸಾಹಿತ್ಯ ಸಿರಿದೊಂಪ’ ಎನ್ನುವ ಶೀರ್ಷಿಕೆಯಲ್ಲಿ ಪ್ರಸಾರ ಮಾಡಿದುದೂ ಅತ್ಯಂತ ಜನಪ್ರಿಯವಾಗಿತ್ತು. ತುಳು ಸಾಹಿತ್ಯ ಪರಿಚಯ ಎನ್ನುವ ಶೀರ್ಷಿಕೆಯಲ್ಲಿ ೨೦೦೨-೨೦೦೩ರಲ್ಲಿ ತುಳು ಸಾಹಿತ್ಯದ ಕೆಲವು ಪ್ರಕಾರಗಳ ಕುರಿತು ವಿದ್ವಾಂಸರ ಉಪನ್ಯಾಸಗಳನ್ನು ಪ್ರಸಾರ ಮಾಡಲಾಯಿತು.

ತುಳುವಿನ ಮಹಾಕಾವ್ಯಗಳನ್ನು ಕೇಳುಗರಿಗೆ ಉಣಬಡಿಸುತ್ತಲೂ ಮಂಗಳೂರು ಆಕಾಶವಾಣಿ ಶ್ರಮಿಸಿದೆ. ಕಳೆದ ದಶಕದಲ್ಲಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ವನ್ನೂ, ಈಚೆಗೆ ೨೦೦೪ರಲ್ಲಿ ಕೆಲಿಂಜ ಸೀತಾರಾಮ ಆಳ್ವರ ‘ತುಳು ಹರಿಶ್ಚಂದ್ರ ಕಾವ್ಯ’ವನ್ನು ‘ವಾಚನ ಪ್ರವಚನ’ ಶೀರ್ಷಿಕೆಯಲ್ಲಿ ಹಲವು ಕಂತುಗಳಲ್ಲಿ ಪ್ರಸಾರ ಮಾಡಲಾಗಿದೆ.

ಈ ೩೦ – ೩೧ ವರ್ಷಗಳ ಅವಧಿಯಲ್ಲಿ ಸುಮಾರು ಒಂದು ಸಾವಿರದಷ್ಟು ತುಳುಕತೆಗಳು, ಅಷ್ಟೇ ಸಂಖ್ಯೆಯ ಕವಿತೆಗಳು, ಸುಮಾರು ೨೦೦ಕ್ಕೆ ಮೇಲ್ಪಟ್ಟ ನಾಟಕ, ರೂಪಕಗಳೂ ಪ್ರಸಾರವಾಗಿವೆ. ೨೦೦೦ನೇ ಇಸವಿಯಲ್ಲಿ ‘ಪರಬಗ್ ದಂಟೆದ ಬಲ’ (ರಾಂ. ಎಲ್ಲಂಗಳ) ಎಂಬ ಧಾರವಾಹಿ ನಾಟಕವೂ ಪ್ರಸಾರಗೊಂಡಿತ್ತು. ಆರಂಭದಿಂದ ಹಲವು ವರ್ಷ ಪರ್ಯಂತ ಪ್ರಸಾರವಾಗುತ್ತಿರುವ ‘ಕೆಂಚನ ಕುರ್ಲರಿ’ (ರಚನೆ, ಪ್ರಧಾನ ಪಾತ್ರ: ಕೆ.ಆರ್.ರೈ) ಹಾಸ್ಯ ಮಾಸಿಕ ಕಾರ್ಯಕ್ರಮವೂ ಅತ್ಯಂತ ಜನಪ್ರಿಯವಾಗಿತ್ತು.

ನಿಗದಿತ ಅವಧಿಗೆ ಅವಲಂಬಿಸಿಕೊಂಡು ತುಳುವಿನ ನಾಟಕಗಳಿಗೆ ತಲಾ ೨೫ ನಿಮಿಷ ಕಾಲಾವಧಿ. ಯುವಜನರ, ಮಹಿಳೆಯರ, ಮಕ್ಕಳ ಕಾರ್ಯಕ್ರಮಗಳು ತಲಾ ೨೫ ನಿಮಿಷ ಅವಧಿಯಲ್ಲಿ (ಹಾಡು ಕತೆ, ಕಿರು ನಾಟಕ, ಪ್ರಹಸನ, ಗಾದೆ, ಒಗಟು, ಮಾಹಿತಿ, ಮನರಂಜನೆಯನ್ನೊಳಗೊಂಡಂತೆ) ಪ್ರಸಾರವಾಗುತ್ತವೆ. ಪ್ರಮುಖವಾದವುಗಳನ್ನು ಕಾಪಿಡಲಾಗುತ್ತದೆ. ಹೀಗೆ ಬಾನುಲಿಯ ಧ್ವನಿ ಭಂಡಾರದಲ್ಲಿ ಕೆದಂಬಾಡಿ, ಕಯ್ಯಾರ ಕಿಞ್ಞಣ್ಣ ರೈ, ಅಮೃತ ಸೋಮೇಶ್ವರ, ಕೆಲಿಂಜ ಗೋಪಾಲ ನಾಯ್ಕರಂಥವರ ಧ್ವನಿಗಳೂ, ತುಳುವಿನ ಹಳೆಯ ಸಾಕಷ್ಟ ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಪಾಡ್ದನ ಪ್ರಧಾನ ಜನಪದ ಸಂಗೀತದ ಧ್ವನಿಸುರುಳಿಗಳೂ ಇವೆ. ೨೦೦೩-೨೦೦೪ರ ಅವಧಿಯಲ್ಲಿ ‘ಮಲ್ಲಿಗೆ ಸಂಪಿಗೆ ಕೇದಾಯಿ, ತುಳುವಪ್ಪೆನ ಪದ್ದೆಯಿ’ ಎನ್ನುವ ಸರಣಿಯಲ್ಲಿ ಹಿರಿಯ ತಲೆಮಾರಿನ ಸುಮಾರು ಐವತ್ತಕ್ಕೂ ಮಿಕ್ಕ ಜನಪದ ಕಲಾವಿದರು, ವಿದ್ವಾಂಸರು, ಸಾಹಿತಿ, ಕಲಾವಿದರ ಸಂದರ್ಶನವನ್ನು ತಲಾ ಇಪ್ಪತ್ತು ನಿಮಿಷಕ್ಕೆ ಪ್ರಸಾರಿಸಲಾಯಿತು.

ಇತ್ತೀಚೆಗೆ ಆಕಾಶವಾಣಿಯ ಪ್ರಾದೇಶಿಕ ಶ್ರೋತೃ ಸಂಶೋಧನ ವಿಭಾಗ ನಡೆಸಿದ ಸರ್ವೇಕ್ಷಣೆಯ ವರದಿಯಂತೆ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುವವರ ಸಂಖ್ಯೆ ೧೬.೩ ಲಕ್ಷ. ಈ ಸಂಖ್ಯೆಯಲ್ಲಿ ಒಂದಿಷ್ಟು ಸರಾಸರಿಗಳನ್ನು ಅತ್ತಿತ್ತ ಮಾಡಿದರೂ ಕೂಡಾ, ಅಷ್ಟು ಹಿರಿದಾದ ಸಂಖ್ಯೆಯ ಶ್ರೋತೃ ವರ್ಗಕ್ಕೆ ತುಳುಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ತಲುಪುತ್ತಿವೆ ಎಂದಾಯಿತು. ಎಫ್.ಎಂ. ಕ್ರಾಂತಿಯಿಂದ ಬಹುಸಂಖ್ಯೆಯ ವಾಹನಗಳಲ್ಲೂ ಈಗ ರೇಡಿಯೋಗಳಿವೆ. ಎಫ್.ಎಂ. ತಾಂತ್ರಿಕತೆಯನ್ನು ಈ ಹಿಂದೆಯೇ ಅಳವಡಿಸಿಕೊಂಡಿರುವ ಮಂಗಳೂರು ಆಕಾಶವಾಣಿ, ಇತ್ತೀಚೆಗೆ (೨೦೦೪) ಹೆಚ್ಚು ಕಡಿಮೆ ಸಂಪೂರ್ಣ ಕಂಪ್ಯೂಟರೀಕೃತ್ಯ, ಡಿಜಿಟಲ್ ರೆಕಾರ್ಡಿಂಗ್ ಆರಂಭಿಸಿ, ಡಿಜಿಟಲ್ ಪ್ರಸಾರವನ್ನೂ ಯಶಸ್ವಿಯಾಗಿ ನಡೆಸುತ್ತಿದೆ. ಪ್ರಸಾರ ತಾಂತ್ರಿಕತೆಯಲ್ಲೂ, ಕಾರ್ಯಕ್ರಮ ಸ್ವರೂಪದಲ್ಲೂ ಕಾಲಕಾಲಕ್ಕೆ ಪ್ರಗತಿಯಾಗುತ್ತಲಿದೆ.

ಹೀಗೆ, ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನೂ ಉಳಿಸಿ ಬೆಳೆಯಿಸುವ ನಿಟ್ಟಿನಲ್ಲಿ ಆಕಾಶವಾಣಿ ಮಾಧ್ಯಮದ ಕೊಡುಗೆ ಮತ್ತು ಸಾಧ್ಯತೆ ಅಪಾರವಾಗಿದೆ.

ದೂರದರ್ಶನ ಮಾಧ್ಯಮದಲ್ಲಿ ತುಳು

ಬೆಂಗಳೂರು ದೂರದರ್ಶನ ‘ಚಂದನವಾಹಿನಿ’ಯಲ್ಲಿ ಕೆಲಮಟ್ಟಿನ ತುಳು ಕಾರ್ಯಕ್ರಮಗಳೂ ಕಳೆದ ಸುಮಾರು ಒಂದು ದಶಕದಿಂದೀಚೆಗೆ ಪ್ರಸಾರವಾಗತೊಡಗಿದವು. ಬೆಂಗಳೂರಿನಲ್ಲಿ ಒಂದೆಡೆ ಮಾತ್ರ ಸ್ಟುಡಿಯೋ ಇರುವ ಕರ್ನಾಟಕದ ಈ ದೂರದರ್ಶನಕ್ಕೆ ಅಖಿಲ ಕರ್ನಾಟಕ ವ್ಯಾಪ್ತಿಯಿದೆ. ಹೀಗಾಗಿ ಪ್ರಾದೇಶಿಕವಾದ ತುಳುಭಾಷೆಯ ಕಾರ್ಯಕ್ರಮದ ದಾಮಾಶಯ ಕಡಿಮೆ. ಆದರೂ ಬೆಂಗಳೂರಿನಲ್ಲಿ ನೆಲೆಸಿರುವ ತುಳುವರು, ಸ್ಥಳೀಯ ಮತ್ತು ಹೊರನಾಡ ತುಳುವರು, ಜನಪ್ರತಿನಿಧಿಗಳ ಬೇಡಿಕೆಗಳನ್ನು ಅನುಲಕ್ಷಿಸಿ, ಕೆಲವೊಂದು ಅಧಿಕಾರಗಳ ಮುತುವರ್ಜಿಯಿಂದ ದೂರದರ್ಶನದಲ್ಲಿ ತಿಂಗಳು – ಮೂರು ತಿಂಗಳಿಗೊಮ್ಮೆ ತಲಾ ಅರ್ಧತಾಸು ಅವಧಿಯ ತುಳು ಕಾರ್ಯಕ್ರಮಗಳು ಪ್ರಸಾರವಾಗತೊಡಗಿದವು. ಇವುಗಳಲ್ಲಿ ತುಳು ಹಾಡುಗಳು, ಕವಿಗೋಷ್ಠಿ ಪ್ರಸಾರ, ಪ್ರತಿಭಾವಂತ ಕವಿ – ಸಾಹಿತಗಳ ಸಂದರ್ಶನಗಳು, ತುಳು ಭಾಷೆ, ಸಾಹಿತ್ಯ ಕುರಿತಾಗಿ ಆಯಾ ಕ್ಷೇತ್ರದ ವಿದ್ವಾಂಸರನ್ನು ಆಹ್ವಾನಿಸಿ ಚರ್ಚಾಗೋಷ್ಠಿ, ಸಂವಾದ ಮುಂತಾದವು ಪ್ರಸಾರವಾಗುತ್ತಿವೆ. ಸಾಹಿತ್ಯ ಸಮ್ಮೇಳನಗಳಂಥ ಸಂದರ್ಭಗಳಲ್ಲಿ ದೂರದರ್ಶನ ಚಿತ್ರೀಕರಣ ತಂಡ ಆಗಮಿಸಿ, ಕಾರ್ಯಕ್ರಮದ ಸಚಿತ್ರವರದಿಗಳನ್ನು ನೀಡಿದ್ದಿದೆ.

ಈ ಭಾಗಕ್ಕೆ ಪ್ರತಿನಿಧಿಗಳನ್ನು ನೇಮಿಸಿ, ಅವರ ಮೂಲಕ ತುಳುನಾಡಿನ ಕಾರ್ಯಕ್ರಮಗಳ ವರದಿಗಳನ್ನು ಬಿತ್ತರಿಸುವ ವ್ಯವಸ್ಥೆಯಿದೆ. ತುಳುಭಾಷೆಯಲ್ಲಿ ವಾರ್ತೆ ನೀಡುವ ಸಿದ್ಧತೆಯೂ ಒಮ್ಮೆ ನಡೆದು ಮತ್ತೆ ಕಾರಣಾಂತರಗಳಿಂದ ಕಾರ್ಯರೂಪಕ್ಕೆ ಬರಲಿಲ್ಲ.

ತುಳುವಿನ ‘ಕೋಟಿಚೆನ್ನಯ’, ‘ಬದ್ಕೆರೆ ಬುಡ್ಲೆ’, ‘ಕಾಸ್‌ದಾಯೆ ಕಂಡನೆ’, ‘ಬಂಗಾರ್ ಪಟ್ಲೆರ್’ – ಮುಂತಾದ ಕೆಲವು ಚಲನಚಿತ್ರಗಳನ್ನು ದೂರದರ್ಶನ ಪ್ರಸಾರ ಮಾಡಿದೆ. ಕೆಲವು ಧಾರವಾಹಿಗಳೂ ಪ್ರಸಾರವಾಗಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದುದೆಂದರೆ ಹೆಸರಾಂತ ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣರು ನಿರ್ಮಿಸಿದ ‘ಗುಡ್ಡೆದ ಭೂತ’ ೧೯೯೧ರಲ್ಲಿ ಹದಿಮೂರು ಕಂತುಗಳಲ್ಲಿ ಈ ಧಾರವಾಹಿ ಕನ್ನಡದಲ್ಲಿ ಪ್ರಸಾರವಾಯಿತಾದರೂ, ಹೆಚ್ಚು ಕಡಿಮೆ ತುಳು ಭಾಷೆ, ಸಂಸ್ಕೃತಿಯ ಸಹಜತೆ ಕಾಪಿಡುವಲ್ಲಿ ತುಳುಮಯವಾಗಿ ಇತ್ತು. ಮುಂದೆ ‘ರೈಟ್ ಪೋಯಿ’ (ಯತೀಶ್ ಆಳ್ವ), ‘ಮಾರಿಗೊಂಜಿ ಕುರಿ’ (ವಿಜಯಕುಮಾರ್ ಶೆಟ್ಟಿ ಕೆಮ್ಮಣ್ಣು, ಮುಂಬಯಿ) ಮತ್ತಿತರ ಕೆಲವು ಧಾರವಾಹಿ, ಕಿರುಚಿತ್ರಗಳು ಪ್ರಸಾರವಾಗಿವೆ. ಬೆಂಗಳೂರಿನ ತುಳುವರು ಆಗೀಗ ಕೆಲವು ತುಳು ನಾಟಕ, ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಳೆದ ವರ್ಷ (೨೦೦೩) ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ‘ಬಿಸು ಕಬಿಕೂಟ’ವನ್ನು ಚಿತ್ರೀಕರಿಸಿ ದೂರದರ್ಶನ ಪ್ರಸಾರಮಾಡಿದೆ. ಮಂಗಳೂರಿನ ಸಿ.ಸಿ. ಇಂಡಿಯಾ ಚಾನೆಲ್‌ನವರ ಮೂಲಕವು ಕೆಲವು ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿಕೊಂಡು ಟೆಲಿಕಾಸ್ಟ್ ಮಾಡಲಾಗಿದೆ.

ತುಳು ಜಾನಪದ ಐತಿಹ್ಯ, ಅರಸುಮನೆತನಗಳ ಕಥಾವಸ್ತುವನ್ನೊಳಗೊಂಡ ತುಳು ಪ್ರಸಂಗಗಳ ಸಾವಿರಾರು ಯಕ್ಷಗಾನ, ನಾಟಕ, ಭಕ್ತಿಗೀತೆ ಭಾವಗೀತೆ, ಕ್ಷೇತ್ರ ಮಹಿಮೆಗಳ ಸಾವಿರಾರು ವಿಭಿನ್ನ ಕ್ಯಾಸೆಟ್‌ಗಳು ಸಿಡಿ, ವಿ.ಸಿ.ಡಿ. ವಿ.ಸಿ.ಆಗಳು ಕಳೆದ ಕಾಲು ಶತಮಾನದುದ್ದಕ್ಕೂ ನಿರ್ಮಾಣವಾಗಿ ತುಳುನಾಡು ಮತ್ತು ಹೊರನಾಡುಗಳ ಹಲವು ಭಾಗಗಳಿಗೆ ವ್ಯಾಪಕವಾಗಿ ಪ್ರಸರಣಗೊಂಡು, ತುಳು ಸಂಸ್ಕೃತಿ ಭಾಷೆ, ಸಾಹಿತ್ಯದ ಪ್ರಸರಣದಲ್ಲಿ ತಮ್ಮದೇ ಆದ ಕೈಂಕರ್ಯವನ್ನು ಸಲ್ಲಿಸಿವೆ.

ಹೀಗೆ ಬಹುಮಾಧ್ಯಮಗಳಲ್ಲಿ ತುಳು ತನ್ನ ವೈಶಿಷ್ಟ್ಯಗಳನ್ನು ದಾಖಲಿಸಿ ಅಸ್ತಿತ್ವವನ್ನು ರುಜುಗೊಳಿಸಿದೆ.