ತುಳು ಸಂಸ್ಕೃತಿಯ ಅಭಿವ್ಯಕ್ತಿ ಸಾಹಿತ್ಯ, ಕಾವ್ಯ, ಹಾಡುಗಳ ಮೂಲಕ ಆಗುತ್ತಾ ಬಂದಿದೆ. ತುಳುವ ಪರಂಪರೆ, ಪಾರ್ದನ – ಕಬಿತ, ನುಡಿಗಟ್ಟುಗಳು, ಜಾನಪದ ಹಾಡುಗಳ ಮೂಲಕ ವಿಶೇಷ ಛಾಪು ಮೂಡಿಸಿದೆ. ತುಳು ಸಾಹಿತ್ಯ ರಚನೆಗೆ ಮೂರ್ತ ರೂಪ ದೊರಕಿದ್ದು ೧೯೨೮ರ ನಂತರ, ನಂತರದ ದಶಕಗಳಲ್ಲಿ ತುಳು ಭಾಷೆಯಲ್ಲಿ ಉತ್ತಮ ಕಾವ್ಯ-ಕೃತಿಗಳ ರಚನೆಯಾಗಿದೆ. ತುಳು ಜಾನಪದ ಸಾಹಿತ್ಯ, ಸಂಸ್ಕೃತಿ, ಭಾಷಾವಿಜ್ಞಾನ, ಸಂಶೋಧನೆ ನಾಟಕರಂಗ, ತುಳು ಭಾಷೆಯ ಅಭಿವ್ಯಕ್ತಿಗೆ ಹಲವು ಮುಖಗಳಾದವು. ತೀರಾ ಇತ್ತೀಚೆಗೆ ಅಂದರೆ ಸುಮಾರು ೩೫ ವರ್ಷಗಳ ಹಿಂದೆಯಷ್ಟೇ ಚಲನಚಿತ್ರ ಮಾಧ್ಯಮವು ತುಳುಭಾಷೆ, ಸಂಸ್ಕೃತಿಯ ಅಭಿವ್ಯಕ್ತಿಗೆ ಕೈಗೆಟುಕಿತು. ಈ ಹಂತದಲ್ಲಿ ಚಲನಚಿತ್ರದ ಬೆಳವಣಿಗೆಯ ಬಗ್ಗೆ ಸಣ್ಣ ಪರಿಚಯ ಅಗತ್ಯ.

ವಿಜ್ಞಾನ- ತಂತ್ರಜ್ಞಾನ ಪ್ರಗತಿಯಾಗುತ್ತಾ ಬಂದ ಹಾಗೆ, ಸಿನೆಮಾ ಎನ್ನುವ ಹೊಸ ದೃಶ್ಯ ಮಾಧ್ಯಮ ಬೆಳಕು ಕಂಡಿತು. ಮೊದಲಿಗೆ ಮೂಕಚಿತ್ರಗಳಾಗಿ ತೆರೆ ಕಾಣುತ್ತಿದ್ದ ಚಿತ್ರಗಳು ಕ್ರಮೇಣ ಮಾತು ಕಲಿತು ವಾಕ್ ಚಿತ್ರಗಳಾಗಿ ನಂತರ ರಂಗುರಂಗಾಗಿ ವರ್ಣಮಯ ಚಿತ್ರಗಳಾದವು.

೧೮೯೬ರ ಜುಲಾಯಿ ೭ರಂದು ಫ್ರಾನ್ಸ್‌ನ ಲ್ಯುಮಿಯೇರ್ ಸಹೋದರರು ಭಾರತದಲ್ಲಿ ಮೊದಲ ಬಾರಿಗೆ ಮುಂಬಯಿಯ ವಾಟ್ಸನ್ ಹೋಟೇಲಿನಲ್ಲಿ ‘Arrival of the Train’ ಎನ್ನುವ ಚಿತ್ರವನ್ನು ಪ್ರದರ್ಶಿಸಿದರು. ಇದು ಭಾರತದಲ್ಲಿ ಚಲನಚಿತ್ರದ ಉಗಮಕ್ಕೆ ಕಾರಣವಾಯಿತೆಂದು ಹೇಳಬಹುದು. ವಾರಗಟ್ಟಲೆ ನಡೆದ ಚಿತ್ರಪ್ರದರ್ಶನದಲ್ಲಿ ಬೆಂಕಿ ಆರಿಸುವ ಯಂತ್ರಗಳ ಚಿತ್ರಗಳು, ಹರಿವ ನೀರಿನ ದೃಶ್ಯಗಳು, ಬಿಸಿಲಿನಲ್ಲಿ ಓಡಾಡುತ್ತಿರುವ ಜನರ ದೃಶ್ಯಗಳು, ರೈಲು ಬಂಡಿಯ ಆಗಮನ – ಈ ರೀತಿಯ ದೃಶ್ಯಗಳನ್ನೊಳಗೊಂಡಿದ್ದ ಸಣ್ಣಸಣ್ಣ ಚಿತ್ರಗಳಿದ್ದವು. ಈ ಪ್ರದರ್ಶನವನ್ನು ತಪ್ಪದೆ ವೀಕ್ಷಿಸುತ್ತಿದ್ದ ಹರಿಶ್ಚಂದ್ರ, ಸಖಾರಾಮ ಬಟಾವಾಡೇಕರ್ (ಸವೇ ದಾದಾ) ಸಿನಿಮಾ ಮಾಧ್ಯಮದ ಕಡೆ ಆಕರ್ಷಿತರಾಗಿ ಸಣ್ಣ ಚಿತ್ರಗಳ ನಿರ್ಮಾಣ ಮಾಡುವ ಪ್ರಯತ್ನಕ್ಕೆ ಮುಂದಾದರು. ನಂತರದ ದಶಕದಲ್ಲಿ ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಜರ್ಮನಿ, ಸ್ಪೀಡನ್, ಅಮೇರಿಕಾ ಮೊದಲಾದ ದೇಶಗಳಲ್ಲೂ ಚಲನಚಿತ್ರಗಳ ನಿರ್ಮಾಣ ಕಾರ್ಯ ಮುಂದುವರಿಯಿತು. ೧೯೧೨ರ ಸುಮಾರಿಗೆ ಭಾರತದಲ್ಲಿ ಚಲನಚಿತ್ರಗಳ ತಯಾರಿಕೆಯ ಉದ್ಯಮ ಪ್ರಾರಂಭವಾಯಿತು. ಚಲನಚಿತ್ರಗಳ ಮೋಡಿಗೆ ಮರುಳಾದ ದಾದಾ ಸಾಹೇಬ್ ಪಾಲ್ಕೆ (ದುಂಡಿರಾಜ್ ಗೋವಿಂದ ಪಾಲ್ಕೆ) ೧೯೧೩ರಲ್ಲಿ ‘ರಾಜಾ ಹರಿಶ್ಚಂದ್ರ’ ಚಿತ್ರ ನಿರ್ಮಿಸಿ, ಭಾರತೀಯ ಚಲನಚಿತ್ರ ರಂಗದ ಪಿತಾಮಹ’ ಎಂಬ ಖ್ಯಾತಿ ಪಡೆದರು.

೧೯೩೦ರವರೆಗೆ ಕೇವಲ ಮೂಕಿ ಚಿತ್ರಗಳನ್ನು ಮಾತ್ರ ತಯಾರಿಸಲು ಸಾಧ್ಯವಾಗುತ್ತಿತ್ತು. ೧೯೩೦ರ ಹೊತ್ತಿಗೆ ಹಾಲಿವುಡ್ ಚಿತ್ರಗಳಿಗೆ ಮಾತು, ಶಬ್ದಗಳ ಜೋಡಣೆಯಾಗಿ ವಾಕ್‌ಚಿತ್ರಗಳ ತಯಾರಿಕೆ ಆರಂಭವಾಯಿತು.

ಕರ್ನಾಟಕದಲ್ಲಿ ಮೊದಲಿಗೆ ಸಿನಿಮಾ ಮಾಧ್ಯಮವನ್ನು ಬೆಳಕಿಗೆ ತಂದವರು ಗುಬ್ಬಿವೀರಣ್ಣ, ‘ಹರಿಮಾಯಾ’ ಎನ್ನುವ ಚಿತ್ರವನ್ನು ವೈ.ವಿ. ರಾವ್ ಅವರು ೧೯೨೮ರಲ್ಲಿ ನಿರ್ದೇಶಿಸಿದರಾದರೂ ಪೂರ್ಣ ಪ್ರಮಾಣದ ಚಿತ್ರವಾಗಿರಲಿಲ್ಲ. ಮೊದಲ ಮೂಕಿ ಚಿತ್ರ ವಸಂತಸೇನಾ, ೧೯೩೧ರಲ್ಲಿ ಮೋಹನ ಭವನಾನಿ ಎನ್ನುವವರು ‘ಮೃಚ್ಛಕಟಿಕ’ ಸಂಸ್ಕೃತ ನಾಟಕವನ್ನು ‘ವಸಂತಸೇನಾ’ ಎನ್ನುವ ಚಿತ್ರವನ್ನಾಗಿಸಿದರು. ಈ ಮೂಕಿ ಚಿತ್ರದಲ್ಲಿ ಟಿ.ಪಿ. ಕೈಲಾಸಂ, ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಅಭಿನಯಿಸಿದ್ದರು.

ಭಾರತದಲ್ಲಿ ಪೂರ್ಣಪ್ರಮಾಣದ ವಾಕ್‌ಚಿತ್ರ, ೧೯೩೧ರ ಆಲಂ ಆರಾ. ಮುಂಬಯಿಯ ಇಂಪೀರಿಯಲ್ ಫಿಲ್ಮ್ ಸಂಸ್ಥೆ ನಿರ್ಮಿಸಿದ ಈ ಚಿತ್ರದಲ್ಲಿ ಮಿಸ್ ಬುಬೇದ, ಮಾಸ್ಟರ್ ವಿಠಲ್, ಪೃಥ್ವೀರಾಜ್, ಜಿಲ್ಲೂಬಾಯಿ, ಜಗದೀಶ ಶೇಠಿ ಅಭಿನಯಿಸಿದ್ದರು. ಆದಿ ಇರಾನಿ ಅವರ ಛಾಯಾಗ್ರಹಣ ಮತ್ತು ಅರ್ಧೆಶೇರ್ ಇರಾನಿ ಅವರ ಶಬ್ದ ಸಂಯೋಜನೆ ಈ ಚಿತ್ರಕ್ಕಿತ್ತು.

ಕನ್ನಡದಲ್ಲಿ ೧೯೩೪ರಲ್ಲಿ ‘ಭಕ್ತ ಧ್ರುವ’ ಎನ್ನುವ ಚಿತ್ರ ಮೊದಲು ತಯಾರಾಗಿದ್ದರೂ ಬಿಡುಗಡೆಯಾದದ್ದು ‘ಸತಿ ಸುಲೋಚನಾ’, ಸೌತ್ ಇಂಡಿಯಾ ಮೂವಿಟೋನ್ ಸಂಸ್ಥೆಯ ನಿರ್ಮಾಣವಾಗಿತ್ತು. ಲಕ್ಷ್ಮಿಬಾಯಿ, ಸುಬ್ಬಮ್ಮ ನಾಯ್ಡು, ಆರ್. ನಾಗೇಂದ್ರ ರಾವ್ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ನಮ್ಮ ಜಿಲ್ಲೆಯಲ್ಲಿ, ಮಂಗಳೂರಿನಲ್ಲಿ ಚಿತ್ರರಂಗದ ಇತಿಹಾಸವನ್ನು ನೋಡಿದರೆ, ಹಿಂದಿನಿಂದಲೂ ಚಿತ್ರಪ್ರದರ್ಶನಗಳು ಆಗಿವೆ ಎನ್ನುವುದು ತಿಳಿದು ಬರುತ್ತದೆ. ಮರಾಠಿ ಛಾಯಾಗ್ರಾಹಕ ಹರಿಶ್ಚಂದ್ರ ಸಖಾರಾಮ ಬಟವಾಡೇಕರ್ ಅವರು ಮಂಗಳೂರಿನಲ್ಲಿ ಚಿತ್ರವೊಂದರ ಪ್ರದರ್ಶನ ಮಾಡಿದರು. ಇದು ಜಿಲ್ಲೆಯಲ್ಲಿ ನಡೆದ ಮೊದಲ ಚಿತ್ರ ಪ್ರದರ್ಶನ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಲಾವಿದರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕನ್ನಡದ ಮೊದಲ ವಾಕ್‌ಚಿತ್ರ ‘ವಸಂತ ಸೇನಾ’ದಲ್ಲಿ ಅಭಿನಯಿಸಿದರು. ಪ್ಯಾಂಡೋ ನಯಂಪಳ್ಳಿ ಸುಂದರ ರಾವ್ ಎನ್ನುವವರೂ ಮೂಕಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರು.

ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರರಂಗ ಪ್ರಾರಂಭವಾದ ದಿನಗಳಲ್ಲಿ ಚಿತ್ರ ನಿರ್ಮಾಣದ ಕಡೆಗೆ ಹಲವು ಒಲವು ಬೆಳೆಸಿಕೊಂಡವರು ಡಾ. ಶಿವರಾಮ ಕಾರಂತರು. ೧೯೩೦ರಲ್ಲಿ ‘ಡೆವಿಲ್ ಲ್ಯಾಂಡ್’ ಎನ್ನುವ ಮೂಕಿ ಚಿತ್ರನಿರ್ಮಾಣ ಮತ್ತು ‘ಡೊಮಿಂಗೊ’ ಎನ್ನುವ ಮೂಕಿ ಚಿತ್ರವನ್ನೂ ಅವರು ನಿರ್ಮಿಸಿದ್ದರು.

ತುಳು ಭಾಷೆ ತನ್ನ ಅಸ್ತಿತ್ವದ ಹುಡುಕಾಟದಲ್ಲಿ ತನ್ನದೇ ಸಾಹಿತ್ಯ, ಕಲಾಪ್ರಕಾರಗಳನ್ನು ಪ್ರದರ್ಶಿಸಲು ಮುಂದಾದ ದಿನಗಳಲ್ಲಿ ತುಳು ರಂಗಭೂಮಿ ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿತ್ತು. ರಾಮ ಕಿರೋಡಿಯನ್, ಕೆಮ್ತೂರು ದೊಡ್ಡಣ್ಣ ಶೆಟ್ಟಿ, ದೂಮಪ್ಪ ಮಾಸ್ತರ್, ಕೆ.ಬಿ. ಭಂಡಾರಿ, ಕೆ.ಎನ್. ಟೇಲರ್, ವಿಶುಕುಮಾರ್, ಸಂಜೀವ ದಂಡಕೇರಿ, ಮಚ್ಚೇಂದ್ರನಾಥ್ ಪಾಂಡೇಶ್ವರ್, ಬಿ.ವಿ. ಕಿರೋಡಿಯನ್, ಒಕ್ಕೆತ್ತೂರು ಸೀತಾರಾಂ ಆಳ್ವ, ಆರ್.ಕೆ. ಮಂಗಳೂರು, ಸೀತಾರಾಂ ಕುಲಾಲ್, ಯು.ಆರ್. ಚಂದರ್, ಬಾಲಕೃಷ್ಣ ಮುದ್ಯ, ಬಿ.ಎಂ. ಸಾಲ್ಯಾನ್, ರಾಮಣ್ಣ ರೈ, ಕೆ.ಜೆ. ಕೊಕ್ರಾಡಿ, ಕುದ್ಯಾಡಿ ವಿಶ್ವನಾಥ ರೈ, ಮ್ಯೊದಿನಬ್ಬ, ಜಯರಾಜ್, ವಿಶ್ವನಾಥ್ ಭಂಡಾರಿ, ಪಿ.ಎಸ್. ರಾವ್ – ಹೀಗೆ ತುಳು ನಾಟಕ ರಂಗಕ್ಕೆ ಸೇವೆ ಸಲ್ಲಿಸಿದವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ತುಳು ನಾಟಕಗಳ ಜನಪ್ರಿಯತೆ ತುಳು ಚಿತ್ರಗಳನ್ನು ನಿರ್ಮಿಸುವುದಕ್ಕೆ ಕಾರಣವೂ ಆಯಿತು. ಕನ್ನಡ ಚಿತ್ರರಂಗದಲ್ಲೂ ಪ್ರಾರಂಭದ ದಿನಗಳಲ್ಲಿ ಟಿ.ಪಿ. ಕೈಲಾಸಂ, ಜಿ.ವಿ. ಅಯ್ಯರ್, ಮೋಹನ ಭವಾನಾನಿ, ವೈ. ವಿ. ರಾವ್, ಗುಬ್ಬಿ ವೀರಣ್ಣ ಎಲ್ಲರೂ ರಂಗಭೂಮಿಯಿಂದ ಬಂದವರೇ. ೧೯೭೧ರಲ್ಲಿ ಕೊಡಗಿನವರಾದ ಎಸ್.ಆರ್. ರಾಜನ್ ಅವರು ತುಳು ಭಾಷೆಯ ಮೇಲಿನ ಅಭಿಮಾನಕ್ಕಾಗಿ ತುಳುಚಿತ್ರವೊಂದನ್ನು ನಿರ್ಮಾಣ ಮಾಡುವ ಯೋಚನೆಗೆ ಮುಂದಾದರು. ರಾಜನ್ ಅವರು ತಮ್ಮ ತುಳುನಾಡಿನ ಗೆಳೆಯರ ಜತೆ ಮಾತುಕತೆ ನಡೆಸಿ, ಸ್ಥಳೀಯ ಕಲಾವಿದರನ್ನೇ ಬಳಸಿಕೊಂಡು ‘ಎನ್ನ ತಂಗಡಿ’ ಚಿತ್ರ ಗುಣಮಟ್ಟದಲ್ಲಿ ಚೆನ್ನಾಗಿಲ್ಲದೆ ಹೋದರೂ ಜ್ಯೋತಿ ಚಿತ್ರಮಂದಿರಲ್ಲಿ ಎರಡು ವಾರಗಳ ಪ್ರದರ್ಶನ ಕಂಡು ತುಳುಚಿತ್ರರಂಗದ ಸ್ಥಾಪನೆಗೆ ನಾಂದಿಯಾಯಿತು.

೧೯೭೧ರ ಫೆಬ್ರವರಿ ೧೯ರಂದು ತುಳುಭಾಷೆಯ ಮೊದಲ ಚಿತ್ರ ‘ಎನ್ನ ತಂಗಡಿ’ ಬಿಡುಗಡೆಯಾಯಿತು. ಪಂಡರೀಬಾಯಿ, ಸೋಮಶೇಖರ್ ಪುತ್ರನ್, ಕವಿತಾ, ಆನಂದ್ ಶೇಖರ್, ಲೋಕಯ್ಯ ಶೆಟ್ಟಿ, ದಿಲೀಪ್ ಮಂಗಳೂರು ಮೊದಲಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದರು. ಚಿತ್ರ ಯಶಸ್ಸು ಗಳಿಸಲಿಲ್ಲವಾದರೂ ಸೀಮಿತ ಪ್ರದೇಶದ ಭಾಷೆಯಾಗಿದ್ದ ತುಳುವಿನಲ್ಲೂ ಸಹ ಚಿತ್ರ ನಿರ್ಮಾಣ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿತು. ‘ಎನ್ನ ತಂಗಡಿ’ ಚಿತ್ರ ಮಂದಿರ ದಿನಗಳಲ್ಲಿ ತುಳುಚಿತ್ರರಂಗ ಸುಮಾರು ೩೪ ಚಿತ್ರಗಳನ್ನು ಮಾಡಲು ಅಡಿಪಾಯವನ್ನು ಹಾಕಿಕೊಟ್ಟಿತು. ಈ ಶ್ರೇಯಸ್ಸು ರಾಜನ್ ಅವರಿಗೆ ಖಂಡಿತವಾಗಿ ಸಲ್ಲಲೇಬೇಕು.

ತುಳು ಭಾಷೆಯ ಎರಡನೇ ಚಿತ್ರ ‘ದಾರೆದ ಬುಡೆದಿ’ ಅದೇ ವರ್ಷ (೧೯೭೧) ಬಿಡುಗಡೆಯಾಯಿತು. ಕೆ.ಎನ್. ಟೇಲರ್, ೭೦ರ ದಶಕದಲ್ಲಿ ರಂಗಭೂಮಿ ನಾಯಕ ನಟನಾಗಿ ಮೆರೆಯುತ್ತಿದ್ದ ಕಾಲ. ‘ಗಣೇಶ ನಾಟಕ ಸಭಾ ಕುಡ್ಲ’ ಸಂಸ್ಥೆಯಡಿ ಹಲವು ಜನಪ್ರಿಯ ನಾಟಕಗಳನ್ನು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಿದ್ದರು. ೧೯೩೨ರ ಸುಮಾರಿಗೆ ಮದರಾಸಿಗೆ ಹೋಗಿ ಚಿತ್ರರಂಗದ ಬಗ್ಗೆ ಹುಚ್ಚು ಹಚ್ಚಿಸಿಕೊಂಡಿದ್ದರು. ೧೯೭೧ರಲ್ಲಿ ‘ದಾರೆದ ಬುಡೆದಿ’ ಎನ್ನುವ ತಮ್ಮ ಜನಪ್ರಿಯ ನಾಟಕವನ್ನು ಸಿನೆಮಾ ಮಾಡಲು ಮುಂದಾದರು. ದಿವಂಗತ ನಾರಾಯಣ ಪುತ್ರನ್ ಅವರ ಸಹಾಯದಿಂದ ‘ದಾರೆದ ಬುಡೆದಿ’ ಚಿತ್ರವನ್ನು ‘ಶರವು ಪಿಕ್ಚರ್ಸ್’ ಬ್ಯಾನರ್ ಅಡಿ ನಿರ್ಮಿಸಿದರು. ಲೀಲಾವತಿ, ಕೆ.ಎನ್. ಟೇಲರ್, ಸೋಮಶೇಖರ್ ಪುತ್ರನ್, ಜನಾರ್ದನ್, ಕೆ.ಜೆ. ರಾಜ್, ರಾಮಚಂದ್ರ ಕೂಳೂರು, ನಾರಾಯಣ ಪುತ್ರನ್ ಅಭಿನಯಿಸಿದ್ದ ‘ದಾರೆದ ಬುಡೆದಿ’ ಮಂಗಳೂರಿನ ರೂಪವಾಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಐದು ಶೋಗಳನ್ನು ನೀಡಿದ ದಾಖಲೆಗೆ ಪಾತ್ರವಾಯಿತು. ಈ ಚಿತ್ರವನ್ನು ನಿರ್ದೇಶಿಸಿದವರು ಆರೂರು ಪಟ್ಟಾಭಿಯವರು. ಕನ್ನಡದ ಖ್ಯಾತ ಚಿತ್ರ ನಿರ್ದೇಶಕರಾಗಿದ್ದ ಪಟ್ಟಾಭಿಯವರು, ತುಳುವಿನಲ್ಲಿ ಒಂಭತ್ತು ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕ ಎನ್ನುವ ಖ್ಯಾತಿಗೆ ಪಾತ್ರರಾಗುತ್ತಾರೆ.

ಆನಂದ ಶೇಖರ್ ಎನ್ನುವ ಮತ್ತೊಬ್ಬ ನಟ, ‘ದಾರೆದ ಬುಡೆದಿ’ ಚಿತ್ರದ ಯಶಸ್ಸು ಕಂಡು ‘ಪಗೆತ್ತ ಪುಗೆ’ ಎನ್ನುವ ಚಿತ್ರ ನಿರ್ಮಿಸಲು ಮುಂದಾದರು. ಸೂರ್ಯನಾಯಾಯಣ ಚಡಗ ಅವರ ‘ಹೆಣ್ಣು – ಹೊನ್ನು – ಮಣ್ಣು’ ಕಾದಂಬರಿಯನ್ನು ಆಧರಿಸಿದ ಈ ಚಿತ್ರವನ್ನು ‘ದ್ವುತಿ ಫಿಲಂಸ್’ ಬ್ಯಾನರ್ ಅಡಿ ಕೆ.ಎನ್. ಮಹಾಬಲ ಶೆಟ್ಟಿಯವರ ಜತೆ ಸೇರಿ ಆನಂದ್ ಶೇಖರ್ ‘ಪಗೆತ ಪುಗೆ’ ಚಿತ್ರವನ್ನು ನಿರ್ಮಾಣ ಮಾಡಿದರು. ಚಿತ್ರದ ನಿರ್ದೇಶಕರಾಗಿದ್ದವರು ಆರೂರು ಪಟ್ಟಾಭಿಯವರು. ‘ಪಗೆತ್ತ ಪುಗೆ’ ಚಿತ್ರದಲ್ಲಿ ಆನಂದ ಶೇಖರ್, ಆನಂದ ಗಾಣಿಗ, ಕೆ.ಎನ್.ಟೇಲರ್, ಲೀಲಾವತಿ, ಶಶಿಕಲಾ, ರಾಮಚಂದ್ರ ಕೂಳೂರು, ಬಾಲಕೃಷ್ಣ ಕದ್ರಿ, ಬಿ.ವಿ. ಕಿರೋಡಿಯನ್ ಅಭಿನಯಿಸಿದ್ದಾರೆ. ಈ ಚಿತ್ರ ೧೯೭೨ರಲ್ಲಿ ಸೆಂಟ್ರಲ್ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು.

೧೯೭೨ರಲ್ಲಿ ಮತ್ತೊಂದು ಚಿತ್ತ ‘ಬಿಸತ್ತಿ ಬಾಬು’ ತೆರೆಕಂಡಿತು. ರಮಾನಂದ ಚೂರ್ಯ ಅವರ ನಾಟಕ ಆಧರಿಸಿದ ಈ ಚಿತ್ರದ ನಿರ್ದೇಶನ ಆರೂರು ಪಟ್ಟಾಭಿಯವರದ್ದು. ಎಂ.ವೈ. ಕೋಲಾ ಅವರ ನಿರ್ಮಾಣದಲ್ಲಿ ತಯಾರಿಸಲಾಗಿದ್ದ ಈ ಚಿತ್ರ ‘ಮೈಕ್ರೋ ಫಿಲಂಸ್’ ಎನ್ನುವ ಬ್ಯಾನರ್ ಅಡಿ ನಿರ್ಮಾಣವಾಯಿತು. ಕೆ.ಎನ್. ಟೇಲರ್, ಲೀಲಾವತಿ, ಬಾಲಕೃಷ್ಣ ಕದ್ರಿ, ಹೇಮಲತಾ, ಶಶಿಕಲಾ, ದಿ. ರಾಮಚಂದ್ರ ಕೂಳೂರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ೧೯೭೨ರ ಅಕ್ಟೋಬರ್ ಆರನೇ ತಾರೀಕಿನಂದು ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿ ೭೭ ದಿನಗಳ ಯಶಸ್ವೀ ಚಿತ್ರ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು. ೭೭ ದಿನಗಳ ಯಶಸ್ವೀ ಚಿತ್ರ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿತು. ೭೭ ದಿನಗಳ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಲು ರಾಜ್‌ಕುಮಾರ್ ಅತಿಥಿಯಾಗಿ ಬಂದಿದ್ದರು.

ಅದೇ ವರ್ಷ ಕರ್ನಾಟಕ ರಾಜ್ಯ ಸರಕಾರದಿಂದ ವರ್ಷದ ಮೂರನೇ ಅತ್ಯುತ್ತಮ ಚಿತ್ರ ಹೆಗ್ಗಳಿಕೆಗೆ ಪಾತ್ರವಾಯಿತು.

ತುಳು ಚಿತ್ರರಂಗ ಹುಟ್ಟಿದ ಎರಡು ವರ್ಷಗಳಲ್ಲೇ ನಾಲ್ಕು ಚಿತ್ರಗಳು ತೆರೆಕಂಡದ್ದು ಹಲವರು ಚಿತ್ರ ನಿರ್ಮಾಣದ ಕೆಲಸಕ್ಕೆ ಕೈ ಹಾಕಲು ಸ್ಫೂರ್ತಿ ನೀಡಿತ್ತು.

ಎಂ.ಸೀತಾರಾಂ ಕುಲಾಲ್ ಅವರ ‘ಸತ್ಯೊನೆ ದೇವೆರ್’ ನಾಟಕ ಆಧರಿಸಿ ಶಮೀನ್ ಮತ್ತು ಅನ್ವರ್ ಬೇಗಂ ಅವರು ‘ಉಡಲ್ದ ತುಡರ್’ ಚಿತ್ರವನ್ನು ‘ಕಲಾಕಿರಣ್’ ಜೂ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದರು. ಈ ಚಿತ್ರದ ನಿರ್ದೇಶನ ಎಂ.ವಾಸುದೇವನ್ ಅವರದ್ದು. ೧೯೭೫ರ ಎಪ್ರಿಲ್ ೪ರಂದು ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿ ಐದು ವಾರಗಳ ಪ್ರದರ್ಶನ ಕಂಡಿತು. ಚಿತ್ರಾಂಜಲಿ, ರವಿಶಂಕರ್, ಶಶಿಕಲಾ, ಬಾಲಕೃಷ್ಣ ಕದ್ರಿ, ರಾಮಣ್ಣ ರೈ ಚಿತ್ರದ ಕಲಾವಿದರು.

ತುಳುಚಿತ್ರಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತಿತ್ತು. ಚಿತ್ರ ನಿರ್ಮಾಣಕ್ಕೆ ಕೈ ಹಾಕಿದವರು ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಹೊಸ ಮಾಧ್ಯಮವೊಂದು ಅಭಿವ್ಯಕ್ತಿಗೆ ದೊರಕಿದಾಗ ಸಹೃದಯ ಮನಸ್ಸುಗಳು ಅದರ ಸಾಧ್ಯತೆಯನ್ನು ಪಡೆಯುವ ಯತ್ನ ಮಾಡುತ್ತವೆ.

ತುಳು-ಕನ್ನಡ ಸಾಹಿತ್ಯರಂಗದಲ್ಲಿ, ೭೦ರ ದಶಕದ ಹೊತ್ತಿನಲ್ಲಿ ಹೆಸರು ಮಾಡಿದ್ದ ವಿಶುಕುಮಾರ್, ಸಹಜವಾಗಿಯೇ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಚಿತ್ರಕಥೆಯನ್ನು ಆಯ್ದುಕೊಂಡರು. ಅದಾಗಲೇ ಅವರು ರಚಿಸಿದ್ದ ತುಳುನಾಡಿನ ವೀರ ಪುರುಷರಾದ ಕೋಟಿ – ಚೆನ್ನಯರ ನಾಟಕವನ್ನು ತನ್ನ ನಿರ್ದೇಶನದಲ್ಲಿ ಚಿತ್ರವನ್ನಾಗಿಸಿದರು. ಮುದ್ದು ಸುವರ್ಣ ಅವರ ನಿರ್ಮಾಣದ ‘ಪ್ರಜಾಫಿಲಂಸ್’ ಬ್ಯಾನರ್ ಅಡಿಯಲ್ಲಿ ‘ಕೋಟಿ ಚೆನ್ನಯ’ ಚಿತ್ರ ಬಿಡುಗಡೆಯಾಯಿತು.

ಕೋಟಿ ಚೆನ್ನಯ ಪಾತ್ರಧಾರಿಗಳಾಗಿದ್ದ ಸುಭಾಶ್ ಪಡಿವಾಳ ಮತ್ತು ವಾಮನ್ ರಾಜ್ ಜೋಡಿ ಇಂದಿಗೂ ತುಳುನಾಡಿನಲ್ಲಿ ಜನಪ್ರಿಯತೆಗಳಿಸಿಕೊಂಡಿದೆ. ಜತೆಗೆ ಕಲ್ಪನಾ, ಫೈಟರ್ ಶೆಟ್ಟಿ, ಚೆನ್ನಪ್ಪ ಸುವರ್ಣ, ಲೋಕಯ್ಯ ಶೆಟ್ಟಿ, ಆನಂದ ಗಾಣಿಗ, ಮಂಜುನಾಥ, ಶಾಲಿವಾಹನ, ಕುದ್ಕಾಡಿ ವಿಶ್ವನಾಥ ರೈ, ಬಿ.ಟಿ. ಎನ್, ಕುಲಾಲ್ ಮೊದಲಾದ ಕಲಾವಿದರು ಚಿತ್ರದ ಯಶಸ್ಸಿಗೆ ಕಾರಣರಾದರು. ಹಿರಿಯ ಸಾಹಿತಿಗಳಾದ ಬಿ.ಎ. ವಿವೇಕ ರೈ ಮತ್ತು ಅಮೃತ ಸೋಮೇಶ್ವರ ಅವರ ಹಾಡುಗಳಿಗೆ ಪಿ.ಬಿ. ಎಸ್. ಮತ್ತು ಎಸ್. ಜಾನಕಿ ದನಿ ನೀಡಿದ್ದರು. ಈ ಹಾಡುಗಳು ಇಂದಿಗೂ ಜನರ ನೆನಪಿನಲ್ಲಿ ಉಳಿದಿವೆ.

‘ಕೋಟಿ ಚೆನ್ನಯ’. ೧೯೭೩ರ ಜೂನ್ ೧೫ರಂದು ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ೧೨೫ ದಿನಗಳ ಯಶಸ್ಸಿ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತು. ಈ ದಾಖಲೆಯನ್ನು ಮುಂದೆ ಯಾವ ತುಳು ಚಿತ್ರವೂ ಮೀರಿಲ್ಲ. ರಾಜ್ಯ ಸರಕಾರ ಆ ವರ್ಷದ ನಾಲ್ಕನೇ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ನೀಡಿ ಚಿತ್ರಕ್ಕೆ ಗೌರವ ನೀಡಿತು. ೧೮೭೩ರಲ್ಲಿ ಕೆ.ಎನ್. ಟೇಲರ್ ಅವರ ‘ಕಾಸ್‌ದಾಯೆ ಕಂಡನೆ’ ನಾಟಕವನ್ನು ಆನಂದ ಶೇಖರ್ ಅವರು ಚಿತ್ರವನ್ನಾಗಿಸಿದರು. ಈ ಚಿತ್ರದ ನಿರ್ದೇಶಕರು ಕನ್ನಡದ ಖ್ಯಾತ ನಿರ್ದೇಶಕರಾದ ಗೀತಪ್ರಿಯ ಅವರು. ಸುಮಾರು ೭೦ರ ದಶಕದಲ್ಲಿ ಕೆ.ಎನ್. ಟೇಲರ್, ರಾಜೇಶ್, ನಾಗಪ್ಪ ಆಳ್ವ ಇವರೆಲ್ಲರ ಪರಿಚಿತರಾಗಿದ್ದ ಗೀತಪ್ರಿಯ ಅವರು ಟೇಲರ್ ಅವರ ಒತ್ತಾಯದ ಮೇರೆಗೆ ತುಳುಚಿತ್ರವನ್ನು ನಿರ್ದೇಶಿಸಹೊರಟರು. ‘ಕಾಸ್‌ದಾಯೆ ಕಂಡನೆ’ ಚಿತ್ರದಲ್ಲಿ ಕನ್ನಡದ ಖ್ಯಾತ ನಟಿ ಜಯಮಾಲಾ ಜತೆಗೆ ಕೆ.ಎನ್.ಟೇಲರ್, ಆನಂದ ಶೇಖರ್, ಬಿ.ವಿ. ರಾಧಾ, ರತ್ನಮಾಲಾ ನಟಿಸಿದ್ದರು. ಜಯಮಾಲಾ ಅವರ ಮೊದಲ ಚಿತ್ರ ಇದು. ಈ ಚಿತ್ರದಿಂದ ಅವರು ಕನ್ನಡ ಚಿತ್ರರಂಗಕ್ಕೂ ಪರಿಚಯವಾದರು.

೧೯೭೪ರಲ್ಲಿ ಗೀತಪ್ರಿಯ ಅವರದೇ ನಿರ್ದೇಶನದಲ್ಲಿ ‘ಯಾನ್ ಸನ್ಯಸಿ ಆಪೆ’ ನಾಟಕವೂ ತೆರೆಗೆ ಬಂತು. ಮತ್ತೆ ಅದೇ ತಾರಾಗಣ. ಜಯಮಾಲಾ ಮತ್ತು ಕೆ.ಎನ್. ಟೇಲರ್, ಈ ಚಿತ್ರದ ನಿರ್ಮಾಣ ಎ. ವಿಶ್ವನಾಥ್ ಅವರದ್ದು.

ಅದೇ ವರ್ಷ ಪಿ. ಸಂಜೀವ ದಂಡೆಕೇರಿ ಅವರು ರಂಗಭೂಮಿ ಯಿಂದ ಬೆಳ್ಳಿತೆರೆಗೆ ಕಾಲಿರಿಸಿದರು. ದಂಡೆಕೇರಿ ಅವರ ಜನಪ್ರಿಯ ನಾಟಕ ‘ಬಯ್ಯಮಲ್ಲಿಗೆ’ ಜಯರಾಮ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರವಾಯಿತು.

ನಿರ್ದೇಶನ ಪಟ್ಟಾಭಿಯವರದ್ದು. ಚಿತ್ರದಲ್ಲಿ ಡಾ. ಸಂಜೀವ ದಂಡಕೇರಿ ಜಯಮಾಲಾ, ಚಿತ್ರಾಂಜಲಿ, ವಿ.ಜಿ. ಪಾಲ್ ರಾಮಣ್ಣ ರೈ, ದೇವದಾಸ್, ಜೆ. ರವೀಂದ್ರ ಅಭಿನಯಿಸಿದ್ದರು. ‘ಬಯ್ಯಮಲ್ಲಿಗೆ’ ಚಿತ್ರ ಎರಡು ಚಿತ್ರಮಂದಿರಗಳಲ್ಲಿ (ಜ್ಯೋತಿ ಮತ್ತು ರಾಮಕಾಂತಿ) ಏಕಕಾಲಕ್ಕೆ ಬಿಡುಗಡೆ ಆಯಿತು. ಆದರೆ ನಾಟಕದಷ್ಟು ಚಿತ್ರ ಯಶಸ್ವಿಗಳಿಸಲು ಸಾಧ್ಯವಾಗಲಿಲ್ಲ. ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಅವರು ಸಂಗೀತ ನೀಡಿದ್ದರು. ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯವಾಗಿದೆ.

೧೯೭೪ರಲ್ಲಿ ಕೆ.ಎನ್. ಟೇಲರ್ ಅವರು ನಿರ್ದೇಶನದ ಕಡೆಗೆ ಒಲವು ತೋರಿಸಿದರು. ‘ಏರ್ ಮಲ್ತಿನ ತಪ್ಪು’ ನಾಟಕವನ್ನು ಅದೇ ಹೆಸರಿನಲ್ಲಿ ಚಿತ್ರವನ್ನಾಗಿಸಿದರು.

೧೯೭೫-ತುಳು ಚಿತ್ರರಂಗ ತಟಸ್ಥರಾಗಿದ್ದ ವರ್ಷ. ಯಾವ ಚಿತ್ರಗಳೂ ಬಿಡುಗಡೆಯಾಗಿರಲಿಲ್ಲ. ೧೯೭೬ರಲ್ಲಿ ಕೆ.ಎನ್. ಟೇಲರ್ ಮತ್ತೊಂದು ಚಿತ್ರದ ನಿರ್ಮಾಣ ಪ್ರಾರಂಭಿಸಿದರು. ಗೀತಪ್ರಿಯ ಅವರ ನಿರ್ದೇಶನದಲ್ಲಿ ‘ಸಾವಿರಡೊರ್ತಿ ಸಾವಿತ್ರಿ’ ಚಿತ್ರವು ‘ಗಣೇಶ್ ಇಂಟರ್ ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಯಿತು. ಚಿತ್ರದಲ್ಲಿ ಕೆ.ಎನ್. ಟೇಲರ್, ಮಮತಾ ಶೆಣೈ, ರಾಮಮೂರ್ತಿ ಅಭಿನಯಿಸಿದ್ದರು.

೧೯೭೬ರಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಮತ್ತು ಬಿ.ಎಸ್. ರಾವ್ ಜತೆಗೂಡಿ ನಿರ್ಮಾಣ ಮಾಡಿದ ‘ನ್ಯಾಯೊಗು ಜಿಂದಾಬಾದ್’ ಚಿತ್ರ ಬಿಡುಗಡೆಯಾಯಿತು. ಕುಂದಾನಿ ಸತ್ಯನ್ ಅವರ ಕಥೆಯನ್ನು ಪಿ.ಎಸ್. ಮೂರ್ತಿ ಚಿತ್ರವನ್ನಾಗಿಸಿ ಚಿತ್ರದ ನಿರ್ದೇಶನವನ್ನು ಮಾಡಿದರು. ಚಿತ್ರದಲ್ಲಿ ಪಂಡರಿಬಾಯಿ, ಅಶ್ವತ್ಥ್, ಸವಿತ ರಾಮಮೂರ್ತಿ, ಬಿ.ಎಸ್. ರಾವ್. ಚಂದ್ರಹಾಸ್ ಕೇಪು, ದೊಡ್ಡಣ್ಣ ಶೆಟ್ಟಿ ಅಭಿನಯಿಸಿದ್ದರು. ರಾಮಕಾಂತಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಈ ಚಿತ್ರ ೫ ವಾರಗಳ ಪ್ರದರ್ಶನ ಕಂಡಿತು.

‘ತುಳುನಾಡ ಸಿರಿ’ ತುಳು ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯುಳ್ಳ ಎರಡನೇ ಚಿತ್ರವಾಗಿ ನಿರ್ಮಿಸಲ್ಪಟ್ಟಿತು. ಕೆ.ಜೆ. ಶೆಟ್ಟಿ ಕಡಂದಲೆ ಅವರ ತುಳು ಕಥೆ ‘ತುಳುನಾಡ ಸಿರಿ’ ಆಧರಿಸಿ ಈ ಚಿತ್ರವನ್ನು ತಯಾರಿಸಲಾಯಿತು. ‘ಓಂಕಾರೇಶ್ವರಿ ಪಿಕ್ಟರ್ಸ್ ಬ್ಯಾನರ್’ ಅಡಿಯಲ್ಲಿ ದಯಾನಂದ ಗರೊಡಿ ಅವರ ನಿರ್ಮಾಣದಲ್ಲಿ ಬಿಡುಗಡೆಯಾದ ‘ತುಳುನಾಡ ಸಿರಿ’ ಚಿತ್ರವನ್ನು ಕೆ.ಎನ್. ಟೇಲರ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ಸರೋಜಿನಿ ಶೆಟ್ಟಿ, ಕೆ.ಎನ್. ಟೇಲರ್ ಮೊದಲಾದವರು ಅಭಿನಯಿಸಿದ್ದರು.

ನಂತರದ ವರ್ಷ, ೧೯೭೭ರಲ್ಲಿ ಪಿ. ಸಂಜೀವ ದಂಡಕೇರಿ ಅವರ ಜನಪ್ರಿಯ ನಾಟಕ ‘ಗಂಗಾ-ರಾಮ್’ ‘ಬೊಳ್ಳಿದೋಟ’ವಾಗಿ ಚಿತ್ರವಾಯಿತು. ತಾರಾಗಣದಲ್ಲಿ ಪಿ. ಸಂಜೀವ ದಂಡಕೇರಿ, ಪಂಡರೀಬಾಯಿ, ದಯಾವತಿ, ಎಂ.ಎನ್. ಲಕ್ಷ್ಮೀದೇವಿ, ಸರೋಜಿನಿ ಶೆಟ್ಟಿ ಅಭಿನಯಿಸಿದ್ದರು. ಆರೂರು ಪಟ್ಟಾಭಿಯವರು ಈ ಚಿತ್ರದ ನಿರ್ದೇಶನ ಮಾಡಿದ್ದರು. ನ್ಯೂಚಿತ್ರಾದಲ್ಲಿ ಬಿಡುಗಡೆಯಾದ ಈ ಚಿತ್ರದ ನಿರ್ಮಾಣ ದಂಡಕೇರಿಯವರದ್ದು. ಜಯರಾಂ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಬಿಡುಗಡೆಯಾಯಿತು.

ಕನ್ನಡದ ಪ್ರತಿಭಾವಂತ ಚಿತ್ರ ನಿರ್ದೇಶಕ – ನಟ ಸುಂದರ ಕೃಷ್ಣ ಅರಸ್ ಅವರು ೧೯೭೭ರಲ್ಲಿ ‘ಸಂಗಮ ಸಾಕ್ಷಿ’ ಚಿತ್ರವನ್ನು ನಿರ್ದೇಶಿಸಿದರು.

ವಸಂತ ಬಂಗೇರ ಅವರು ನಿರ್ಮಿಸಿದ ಈ ಚಿತ್ರ, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಫಿಲಂಸ್ ಬ್ಯಾನರ್ ಅಡಿ ನಿರ್ಮಾಣವಾಯಿತು.

ಪುಣೆಯ ಎನ್.ಎಫ್.ಎ.ಐ. (ನ್ಯಾಶನಲ್ ಫಿಲ್ಮ್ ಆರ್ಕೈವ್ಸ್ ಆಫ್ ಇಂಡಿಯಾ)ದಲ್ಲಿ ಈ ಚಿತ್ರದ ಪ್ರಿಂಟ್ ಇದೆ. ತುಳು ಚಿತ್ರವೊಂದರ ಪ್ರಿಂಟ್‌ನಲ್ಲಿರುವುದು ಇದೊಂದೇ.

೧೯೭೮ – ತುಳು ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲು. ಮೊದಲ ವರ್ಣಚಿತ್ರ ‘ಕರಿಮಣಿ ಕಟ್ಟಂದಿ ಕಂಡನಿ’ ಚಿತ್ರ ಬಿಡುಗಡೆಯಾದ ವರ್ಷ. ಆರೂರು ಪಟ್ಟಾಭಿಯವರ ನಿರ್ದೇಶನದಲ್ಲಿ, ಆರೂರು ಭೀಮರಾವ್ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ‘ಆರೂರು ಫಿಲಂಸ್’ ಬ್ಯಾನರ್ ಅಡಿ ನಿರ್ಮಾಣವಾಗಿ ಸುಮಾರು ೧೨ ವಾರ ಪ್ರದರ್ಶನ ಕಂಡಿದೆ.

ಎಪ್ಪತ್ತರ ದಶಕದಲ್ಲಿ ಅರುಣ್ ಕಿರಣ್ ಪ್ರೊಡಕ್ಷನ್ಸ್ ಎನ್ನುವ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿ, ಕನ್ನಡ, ಕೊಂಕಣಿ, ತುಳುನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದ ರಿಚಾರ್ಡ್ ಕಾಸ್ಟಲಿನೊ ಅವರು ‘ಬೊಳ್ಳಿದೋಟ’ ಚಿತ್ರದ ಸಹನಿರ್ಮಾಪಕರಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ೧೯೭೯ರಲ್ಲಿ ‘ನ್ಯಾಯೋಗಾದ್ ಎನ್ನ ಬದ್‌ಕ್‌’ ಚಿತ್ರವನ್ನು ‘ಹಾಲಿವುಡ್ ಬ್ಯಾನರ್ಸ್, ಅಡಿಯಲ್ಲಿ ಸ್ವತಂತ್ರವಾಗಿ ನಿರ್ಮಿಸಿದರು. ಚಂದ್ರಶೇಖರ ಕುಕ್ಕಿಕಟ್ಟೆ ಅವರ ನಿರ್ದೇಶನವಿತ್ತು.

ನಂತರದ ಎರಡು ವರುಷಗಳು ಮೌನ. ತುಳು ಚಿತ್ರರಂಗದಲ್ಲಿ ಚಟುವಟಿಕೆಗಳೇನೂ ಕಾಣಿಸಲಿಲ್ಲ. ೧೯೮೧ರಲ್ಲಿ, ಚಿತ್ರ ವಿತರಕರಾದ ಟಿ.ಎ. ಶ್ರೀನಿವಾಸ್ ಅವರ ‘ಭಾಗ್ಯವಂತೆದಿ’ ತೆರೆ ಕಂಡಿತು. ೧೯೭೦ರಲ್ಲಿ ‘ಚಿತ್ರಭಾರತಿ’ ವಿತರಣಾ ಸಂಸ್ಥೆಯನ್ನು ಪ್ರಾರಂಭಿಸಿ ಕನ್ನಡ ಚಿತ್ರಗಳಿಗೆ ಮಂಗಳೂರು ಮಾರ್ಕೆಟ್ ಎನ್ನುವ ಗಟ್ಟಿ ಬುನಾದಿ ನೀಡಿದವರು ಚಿತ್ರಭಾರತಿ ಸಂಸ್ಥೆ. ತುಳು ಚಿತ್ರಗಳಿಗೂ ವಿತರಣೆಯ ಸೌಲಭ್ಯ ನೀಡಿದರು. ಚಿತ್ರ ವಿತರಣೆಯಿಂದ ಚಿತ್ರ ತಯಾರಿಕೆಯ ಹಾದಿ ಬಲುಬೇಗ ಶ್ರೀನಿವಾಸ್ ಅವರನ್ನು ಸೆಳೆಯಿತು. ಹಾಗಾಗಿ ‘ಭಾಗ್ಯವಂತೆದಿ’ ಚಿತ್ರ ನಿರ್ಮಾಣ ‘ನಿರ್ಮಿತಾ ಎಂಟರ್ ಪ್ರೈಸಸ್’ ಬ್ಯಾನರ್ ಅಡಿಯಲ್ಲಿ, ಕೆ.ಎನ್. ಟೇಲರ್ ಅವರ ‘ಕಂಡನೆ-ಬುಡೆದಿ’ ನಾಟಕವನ್ನು ‘ಭಾಗ್ಯವಂತೆದಿ’ಯಾಗಿ ಚಿತ್ರವನ್ನಾಗಿಸಿದರು. ಚಿತ್ರದ ನಿರ್ದೇಶನ ಆರೂರು ಪಟ್ಟಾಭಿ. ಸದಾಶಿವ ಸಾಲ್ಯಾನ್, ಸುಮಿತ್ರಾ, ಕೆ.ಎನ್. ಟೇಲರ್, ರಾಮಚಂದ್ರ ಕೂಳೂರು, ವಿ.ಜಿ. ಪಾಲ್ ಚಿತ್ರದಲ್ಲಿ ಅಭಿನಯಿಸಿದ್ದರು. ಚಿತ್ರ ಮಂದಿರದಲ್ಲಿ ಸುಮಾರು ೮ ವಾರ ಓಡಿದ ಈ ಚಿತ್ರ, ರಾಜ್ಯ ಸರಕಾರದ ವಿಶೇಷ ಪ್ರಶಸ್ತಿಯನ್ನು ಪಡಕೊಂಡಿತ್ತು.

ಹತ್ತು ವರುಷಗಳ ತುಳುಚಿತ್ರ ನಿರ್ಮಾಣ ಹಾದಿಯಲ್ಲಿ ಒಟ್ಟು ೧೮ ಚಿತ್ರಗಳು ತೆರೆಕಂಡಿದ್ದವು. ಆದರೆ ಮುಂದಿನ ಇಪ್ಪತ್ತೈದು ವರುಷಗಳಲ್ಲಿ ತುಳುಚಿತ್ರರಂಗಕ್ಕೆ ಕೈ ಹಾಕಿ ಸೋತ ನಿರ್ಮಾಪಕರೇ ಹೆಚ್ಚು.

೧೯೮೩ರಲ್ಲಿ, ಒಂದು ವರ್ಷದ ಮೌನದ ನಂತರ ‘ಬದ್ಕೆರೆ ಬುಡ್ಲೆ’ ಚಿತ್ರ ಬಿಡುಗಡೆಯಾಯಿತು. ತುಳುನಾಡಿನ ಸಮಸ್ಯೆಯನ್ನು ಕೈಗೆತ್ತಿಕೊಂಡು ನಿರ್ಮಿಸಿದ ಮೊದಲ ಪ್ರಯತ್ನ ಇದು. ಜಮೀನ್ದಾರಿ ಸಮಸ್ಯೆಗೆ ಸಂಬಂಧಪಟ್ಟ ಕಥಾವಸ್ತುವಿದ್ದ ಈ ಚಿತ್ರದ ನಿರ್ದೇಶನ ಆರೂರು ಪಟ್ಟಾಭಿಯವರದ್ದು ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ – ನಿರ್ದೇಶಕ ರಾಮ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದರು. ಜ್ಯೋತಿ ಚಿತ್ರಮಂದಿರದಲ್ಲಿ ಸುಮಾರು ೧೨ ವಾರಗಳ ಪ್ರದರ್ಶನ ಕಂಡ ಈ ಚಿತ್ರ ಜನಪ್ರಿಯವಾಗಿತ್ತು.

‘ಬದ್ಕೆರೆ ಬುಡ್ಲೆ’ ಚಿತ್ರದ ಯಶಸ್ಸನ್ನು ಕಂಡ ರಾಮ್‌ಶೆಟ್ಟಿ, ಮರುವರ್ಷ ‘ದಾರೆದ ಸೀರೆ’ ಚಿತ್ರ ನಿರ್ಮಾಣಕ್ಕೆ ಮುಂದಾದರು. ಚಿತ್ರಕ್ಕೆ ಕಥೆ, ಸಾಹಿತ್ಯ, ಗೀತೆ, ಸಂಭಾಷಣೆ ನೀಡಿದವರು ಮಚ್ಚೇಂದ್ರನಾಥ್ ಪಾಂಡೇಶ್ವರ್.

ಮತ್ತೆ ಎರಡು ವರ್ಷಗಳ ಮೌನ ಮುರಿದು ೧೯೮೭ರಲ್ಲಿ ‘ಪೆಟ್ಟಾಯಿ ಪಿಲಿ’ ಚಿತ್ರ ಬಿಡುಗಡೆಯಾಯಿತು. ರವಿ ಕಾಂಚನ್ ಅವರು ನಿರ್ದೇಶಿಸಿದ ಈ ಚಿತ್ರಕ್ಕೆ ಸದಾಶಿವ ಸಾಲ್ಯಾನ್ ನಿರ್ಮಾಪಕರಾಗಿದ್ದರು.

೧೯೮೮ರಲ್ಲಿ ದಾಮೋದರ ಬಂಗೇರ ಅವರ ನಿರ್ದೇಶನದಲ್ಲಿ ‘ಬದ್‌ಕೊಂಜಿ ಕಬಿತೆ’ ಚಿತ್ರ ಬಿಡುಗಡೆಯಾಯಿತು. ಚಿತ್ರದಲ್ಲಿ ಗುರುಕಿರಣ್, ಕುಮುದಾ ಬಾರ್ಕೂರು ಅಭಿನಯಿಸಿದ್ದರು. ವಸಂತ ವಿ. ಅಮೀನ್ ಅವರು ಚಿತ್ರಕತೆ, ಸಂಭಾಷಣೆ ನೀಡಿದ್ದರು. ನಿರ್ಮಾಣ ಶ್ರೀಕಾಂತ್ ಅವರದ್ದು.

ದೇವದಾಸ್ ಕಾಪಿಕಾಡ್ ಅವರ ಜನಪ್ರಿಯ ನಾಟಕ ‘ಬಲೇ ಚಾ ಪರ್ಕ’ವನ್ನು ಆಧರಿಸಿ ‘ಸತ್ಯ ಓಲುಂಡು’ ಚಿತ್ರ ನಿರ್ಮಾಣವಾಯಿತು. ೧೯೯೦ರಲ್ಲಿ ತೆರೆಕಂಡ ಈ ಚಿತ್ರದ ನಿರ್ಮಾಪಕರು ಸದಾಶಿವ ಸಾಲ್ಯಾನ್ ಮತ್ತು ಎಸ್.ಎಸ್. ಪುತ್ರನ್, ಆರೂರು ಪಟ್ಟಾಭಿ ಅವರು ನಿರ್ದೇಶಿಸಿದ ಕೊನೆಯ ತುಳು ಚಿತ್ರ ಇದು. ಸುಮಾರು ೯ ತುಳುಚಿತ್ರಗಳನ್ನು ನಿರ್ದೇಶಿಸಿ ದಾಖಲೆ ಮಾಡಿದವರು ಪಟ್ಟಾಭಿ ಅವರು.

ತುಳುಚಿತ್ರರಂಗದ ಎರಡನೇ ದಶಕ ೧೯೮೧-೯೧ರಲ್ಲಿ ತೆರೆಕಂಡ ಚಿತ್ರಗಳು ಕೇವಲ ೬. ಅದುವರೆಗೆ ಒಟ್ಟು ೨೪ ಚಿತ್ರಗಳು ತೆರೆಕಂಡಿದ್ದರೂ ೪ ಚಿತ್ರಗಳು ಮಾತ್ರ ಡಬ್ಬದಲ್ಲೇ ಉಳಿಯುವ ಪರಿಸ್ಥಿತಿ ಉಂಟಾಯಿತು. ಕೆ. ಎನ್. ಟೇಲರ್ ಅವರ ‘ನಮ್ಮ ಭಾಗ್ಯ’ ಚಿತ್ರಕ್ಕೆ ಬಿಡುಗಡೆಯಾಗುವ ಭಾಗ್ಯ ಬರಲಿಲ್ಲ. ಈ ಚಿತ್ರದಲ್ಲಿ ಮಂಜುಳ, ರಾಜೇಶ್, ಸುಂದರಕೃಷ್ಣ ಅರಸ್ ಅಭಿನಯಿಸಿದ್ದರು.

ಅದೇ ರೀತಿ ‘ಸರ್ಪಸಂಕಲೆ’ ಚಿತ್ರ ತಾಂತ್ರಿಕ ತೊಂದರೆಗಳಿಂದ ಸಂಕಲೆಯೊಳಗೆ ಸಿಕ್ಕು ಮುಕ್ತಾಯ ಹಂತ ತಲುಪಲಾಗಲಿಲ್ಲ. ‘ಬಂಗಾರ್ದ ಕುರಲ್’ ಎನ್ನುವ ಮತ್ತೊಂದು ಚಿತ್ರ ಅಪೂರ್ಣವಾಗಿಯೇ ಉಳಿದಿದೆ. ನಂತರದ ವರ್ಷಗಳಲ್ಲಿ ಮತ್ತೊಂದು ಚಿತ್ರ ‘ನಿರೆಲ್’ ಕೂಡ ಅರ್ಧಕ್ಕೆ ನಿಂತುಹೋಗಿದೆ.

೧೯೯೧ರಲ್ಲಿ ಕೂಡ್ಲು ರಾಮಕೃಷ್ಣ ಅವರ ‘ರಾತ್ರಿ -ಪಗೆಲ್’ ಚಿತ್ರ ಬಿಡುಗಡೆಯಾಯಿತು. ಕನ್ನಡದ ‘ಬಿಸಿಲು ಬೆಳದಿಂಗಳು’ ಕಥೆಯನ್ನು ‘ರಾತ್ರೆ ಪಗೆಲ್’ ಮಾಡಿ ತುಳುವಿಗೆ ತಂದವರು ಕೂಡ್ಲು. ಅವಿನಾಶ್, ಅಂಜಲಿ, ತ್ರಿವೇಣಿ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದರು. ಚಿತ್ರದ ನಿರ್ಮಾಣ ರಘುರಾಮ್ ಬೆಂಗಳೂರು ಮತ್ತು ಡಾ. ಚಂದ್ರಿಕಾ.

ತುಳುವಿನ ೨೫ನೇ ಚಿತ್ರ ‘ಬಂಗಾರ್ ಪಟ್ಲೇರ್’

ಹಲವು ವಿಧದಲ್ಲಿ ಈ ಚಿತ್ರ ಪ್ರಮುಖ ಸ್ಥಾನ ಪಡೆದಿದೆ. ನಾರಾಯಣ ಶೆಟ್ಟಿ ಅವರ ‘ಸತ್ಯ ಬತ್ತಲೆ’ ನಾಟಕವನ್ನು ತೆರೆಗೆ ತರುವ ಪ್ರಯತ್ನ ಪಟ್ಟವರು ಡಾ. ರಿಚಾರ್ಡ್‌ ಕ್ಯಾಸ್ಟಲಿನೊ. ಸುಮಾರು ೫-೬ ವರ್ಷಗಳ ಸತತ ಪರಿಶ್ರಮದ ನಂತರ ‘ಬಂಗಾರ್ ಪಟ್ಲೇರ್’ ಚಿತ್ರ ರೂಪ ತಾಳಿತು. ಸುಧಾರಾಣಿ, ವಾಮನ್‌ರಾಜ್, ಸರೋಜಿನಿ ಶೆಟ್ಟಿ, ವಿಜಿಪಾಲ್, ಚಿನ್ನಾ ಕಾಸರಗೋಡು, ರೋಹಿದಾಸ್ ಕದ್ರಿ ಅಭಿನಯಿಸಿದ ಚಿತ್ರಕ್ಕೆ ಸುಂದರ್ನಾಥ್ ಸುವರ್ಣ ಅವರ ಛಾಯಾಗ್ರಹಣವಿತ್ತು. ಈ ಚಿತ್ರ ತುಳುವಿನ ಮೊತ್ತ ಮೊದಲ ಈಸ್ಟ್‌ಮನ್ ಕಲರ್ ಸಿನಿಮಾ ಸ್ಕೋಪ್ ಚಿತ್ರವೂ ಹೌದು. ಈ ಚಿತ್ರವು ರಾಷ್ಟ್ರೀಯ ಮನ್ನಣೆ ಪಡೆದುಕೊಂಡಿತು. ಉತ್ತಮ ಪ್ರಾದೇಶಿಕ ಚಿತ್ರದ ಪ್ರಶಸ್ತಿಯಲ್ಲದೆ, ರಾಜ್ಯ ಸರಕಾರದ ವಿಶೇಷ ಪ್ರಶಸ್ತಿಯು ದೊರೆಯಿತು. ರಾಷ್ಟ್ರಪತಿಯವರಿಂದ ಉತ್ತಮ ನಿರ್ದೇಶನ ಮತ್ತು ಉತ್ತಮ ನಿರ್ಮಾಪಕ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಕಲ್ಕತ್ತಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಪ್ರದರ್ಶನವಾಗಿ ತುಳು ಚಿತ್ರರಂಗಕ್ಕೆ ಜಾಗತಿಕ ಮಟ್ಟದ ಗುರುತನ್ನು ನೀಡಿತು.

‘ಬಂಗಾರ್ ಪಟ್ಲೇರ್’ ಚಿತ್ರದ ಯಶಸ್ಸಿನ ಬೆನ್ನಹಿಂದೆಯೇ ಮತ್ತೊಂದು ದಾಖಲೆಗೆ ಮುಂದಾದ ಕ್ಯಾಸ್ಟಲಿನೋ ೨೪ ಗಂಟೆಗಳಲ್ಲಿ ‘ಸೆಪ್ಟೆಂಬರ್ ೮’ ಚಿತ್ರ ನಿರ್ಮಾಣ ಮಾಡಿದರು. ೧೯೯೪ರಲ್ಲಿ ಚಿತ್ರ ಬಿಡುಗಡೆಯಾಯಿತು. ರಾಷ್ಟ್ರೀಯ ಮಟ್ಟದ ದಾಖಲೆಯ ಜತೆಗೆ ಡಾ. ಶಿವರಾಮ ಕಾರಂತರು ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ಖ್ಯಾತಿಯನ್ನು ಪಡೆಯಿತು. ಶ್ರುತಿ, ಸುನಿಲ್, ಉಮಾಶ್ರೀ, ರಮೇಶ್ ಭಟ್ ಜತೆಗೆ, ಗೀತಾ ಸುರತ್ಕಲ್, ರೋಹಿದಾಸ್ ಕದ್ರಿ, ಆನಂದ ಬೋಳಾರ್ ಇದರಲ್ಲಿ ಅಭಿನಯಿಸಿದ್ದರು.

೧೯೯೫ರಲ್ಲಿ ಟಿ.ವಿ. ಶ್ರೀನಿವಾಸ್ ಅವರ ನಿರ್ಮಾಣದ ‘ಬದ್‌ಕ್‌ದ ಬಿಲೆ’ ಚಿತ್ರ ಬಿಡುಗಡೆಯಾಯಿತು. ನಿರ್ದೇಶನ ಗಣೇಶಪ್ರಿಯ ಅವರದ್ದು. ತಾರಾ, ಅಶೋಕ್, ಭವಾನಿಶಂಕರ್ ಶೆಟ್ಟಿ ಚಿತ್ರದಲ್ಲಿ ಅಭಿನಯಿಸಿದರು.

೧೯೯೬ರಲ್ಲಿ ‘ಮಾರಿಬಲೆ’ ಚಿತ್ರ ತೆರೆಗೆ ಬಂತು. ತುಳು ಚಿತ್ರರಂಗದಲ್ಲಿ ಹೊಸ ಅಲೆಯ ಚಿತ್ರವೊಂದು ತಯಾರಾದದ್ದು ಇದೇ ಮೊದಲು. ಕೃಷ್ಣಪ್ಪ ಉಪ್ಪೂರು ಅವರ ನಾಟಕ ‘ಹೌಂದ್ರಾಯನ ವಾಲಗ’ ‘ಮಾರಿಬಲೆ’ಯಾಗಿ ತುಳುಚಿತ್ರವಾಯಿತು. ಕುಂಬ್ರ ರಘುನಾಥ ರೈ ನಿರ್ಮಾಣದ ಈ ಚಿತ್ರ, ವ್ಯವಸ್ತೆಯ ವಿರುದ್ಧ ಸಿಡಿದೇಳುವ ಪ್ರತಿಭಟನೆ, ಹೋರಾಟದ ದನಿಯಿಂದ ಕೂಡಿತ್ತು.

ನೆಲೆ ಕಳೆದುಕೊಳ್ಳುತ್ತಿರುವ ಸಾಂಸ್ಕೃತಿಕ ಪರಂಪರೆ, ಬದಲಾಗುತ್ತಿರುವ ಸಾಮಾಜಿಕ, ರಾಜಕೀಯ, ಆರ್ಥಿಕ ವ್ಯವಸ್ಥೆ, ನಗರೀಕರಣ, ಸಾಂಕೇತಿಕವಾಗಿ, ಕಲಾತ್ಮಕವಾಗಿ ಈ ಚಿತ್ರದಲ್ಲಿ ಬಿಂಬಿತವಾಗಿದೆ. ವಿ. ಮನೋಹರ್ ಅವರ ಸಂಗೀತ ನಿರ್ದೇಶನ, ಕೃಷ್ಣಪ್ಪ ಉಪ್ಪೂರು ಅವರ ನಿರ್ದೇಶನ. ನಂದಿನಿ (ಭಾವನಾ), ಸಾಯಿ ಬಲ್ಲಾಳ್, ವಾಮನ್‌ರಾಜ್, ಸರೋಜಿನಿ ಶೆಟ್ಟಿ, ಡಿ.ಜಿ. ಹೆಗಡೆ, ವಿ.ಜಿ. ಪಾಲ್, ರೇಮಂಡ್ ಡಿಸೋಜಾ ಈ ಚಿತ್ರದಲ್ಲಿ ಅಭಿನಯಿಸಿದ್ದರು. ತುಳು ಚಿತ್ರರಂಗವನ್ನು ಹೊಸಜಾಡಿನತ್ತ ಕೊಂಡೊಯ್ದ ಚಿತ್ರ ‘ಮಾರಿ ಬಲೆ’. ೧೯೯೮ರಲ್ಲಿ ಅಶ್ವತ್ ನಾರಾಯಣ್ ಅವರ ನಿರ್ಮಾಣದಲ್ಲಿ ರಾಜ್‌ಬಲ್ಲಾಳ್ ಅವರ ನಿರ್ದೇಶನದಲ್ಲಿ ಹಾಡುಗಳೇ ಇಲ್ಲದ ಚಿತ್ರ ‘ಕಾಲ’ ತೆರೆ ಕಂಡಿತು.

೧೯೯೯ರಲ್ಲಿ ತುಳು ಜನಪ್ರಿಯ ನಾಟಕ ‘ಒಂಜಿ ನಿಮಿಷ’, ‘ಒಂತೆ ಅಡ್ಜಸ್ಟ್‌ಮಲ್ಪಿ’ ಎಂದು ತೆರೆಕಂಡಿತು. ಪ್ರಜ್ವಲ್ ಬ್ರಹ್ಮಾವರ ನಿರ್ಮಾಣದಲ್ಲಿ ಕೆದಂಬಾಡಿ ಪ್ರೇಮನಾಥ ರೈ ಅವರ ನಿರ್ದೇಶನದಲ್ಲಿ ತಯಾರಾದ ಈ ಚಿತ್ರದಲ್ಲಿ ಭವ್ಯಶ್ರೀ ರೈ, ಸದಾಶಿವ ಸಾಲ್ಯಾನ್, ಸರೋಜಿನಿ ಶೆಟ್ಟಿ, ಮಾಧವ ಕೆ. ಶಕ್ತಿನಗರ ನಟಿಸಿದ್ದರು. ವಿಜಯಕುಮಾರ್ ಕೊಡಿಯಾಲಬೈಲು ಅವರ ಕತೆ ಮತ್ತು ಗೀತರಚನೆ ಈ ಚಿತ್ರಕ್ಕಿತ್ತು.

೨೦೦೦ದಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗಲಿಲ್ಲ