ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡು ಹನ್ನೆರಡು ವರ್ಷಗಳು ಕಳೆದುವು. ಈ ವರ್ಷಗಳಲ್ಲಿ ಅಕಾಡೆಮಿ ನಡೆದು ಬಂದ ದಾರಿ ಹಾಗೂ ಆ ದಾರಿಯಲ್ಲಿ ಒಮ್ಮೆ ನಿಂತು, ತಿರುಗಿ ನೋಡುವ ಹೊತ್ತು ಇದು. ಹನ್ನೆರಡು ವರ್ಷಗಳ ಹಿಂದೆ ತುಳು ಸಾಹಿತ್ಯ ಅಕಾಡೆಮಿ ಎನ್ನುವುದು ಇರಲಿಲ್ಲ. ಆದರೆ ತುಳು ಭಾಷೆ, ಸಾಹಿತ್ಯ ಸಂಸ್ಕೃತಿಯ ಕೆಲಸಗಳನ್ನು ಮಾಡುವ ಅನೇಕ ಸಂಘಟನೆಗಳು ಇದ್ದುವು ಎನ್ನುವುದನ್ನು ಮರೆಯುವಂತಿಲ್ಲ. ಅವೆಲ್ಲವೂ ತುಳು ಸಂದರ್ಭದ ಬೆಳವಣಿಗೆಗಾಗಿ ಹುಟ್ಟಿಕೊಂಡು ಆ ದಾರಿಯಲ್ಲಿ ಸಾಗಿ ಬಂದವುಗಳು. ‘ತುಳುಕೂಟ’ಗಳಂತಹ ತುಳುವಿನ ಅನೇಕ ಸಂಘಟನೆಗಳು ತುಳುವಿನ ಮೇಲಿನ ಅಭಿಮಾನ ಮತ್ತು ಕಾಳಜಿಯಿಂದ ಕೆಲಸ ಮಾಡಿವೆ. ಅವುಗಳಲ್ಲಿ ಕೆಲವು ಸಂಘಟನೆಗಳು ‘ತುಳುಸಿರಿ’ ‘ತುಳುಕೂಟ’, ‘ತುಳುನಾಡು’, ‘ತುಳುವೆರೆ ಬಂಧು’, ‘ತುಳು ರಾಜ್ಯ’, ‘ತುಳು ಬೊಳ್ಳಿ’, ‘ತುಳುವೆರೆ ತುಡಿಪು’ ಮೊದಲಾದ ಪತ್ರಿಕೆಗಳನ್ನು ಪ್ರಕಟಿಸಿ ದಾಖಲೆ ನಿರ್ಮಿಸಿವೆ.

ಊರಿನಿಂದ ದೂರ ಹೋಗಿ ನೆಲೆ ನಿಲ್ಲಬೇಕಾಗಿ ಬಂದಾಗ ತುಳುವರು ತುಳುಭಾಷೆ, ಸಂಸ್ಕೃತಿಯ ಅಭಿಮಾನದಿಂದ ಸಂಘಟನೆಗಳಲ್ಲಿ ತೊಡಗಿಸಿಕೊಂಡು ತುಳು ಮಣ್ಣಿನ ನೆಂಪು ಪೆಂಪನ್ನು ಆಗಾಗ ಮೆಲುಕು ಹಾಕುವುದಕ್ಕಾಗಿ ಬಿಡುವು ಸಿಕ್ಕಿದಾಗಲೆಲ್ಲ, ಸಂದರ್ಭ ಬಂದಾಗಲೆಲ್ಲ ಒಟ್ಟು ಸೇರಿ ಸಂಘಟನೆಗಳಲ್ಲಿ ಪಾಲು ಪಡೆಯಲು ತೊಡಗಿದ್ದು ಹೌದು. ಇವೆಲ್ಲಕ್ಕೂ ‘ಕುಡ್ಲ ತುಳುಕೂಟ’ (೧೯೬೯) ಪ್ರೇರಣೆ ನೀಡಿದೆ. ಮುಂದೆ ರಾಜಧಾನಿ ಬೆಂಗಳೂರು, ಪುತ್ತೂರು, ಉಡುಪಿ, ಕಾಸರಗೋಡು ಮೊದಲಾದ ಊರುಗಳಲ್ಲಿ ‘ತುಳುಕೂಟ’ಗಳು ಹುಟ್ಟಿಕೊಳ್ಳುವ ಸ್ಫೂರ್ತಿ ಪಡೆದುಕೊಂಡುವು.

ಒಳನಾಡು

೧. ತುಳುವ ಮಹಾಸಭೆ (೧೯೨೮)

ಎಸ್.ಯು. ಪಣಿಯಾಡಿಯವರ ಆಸಕ್ತಿ ಮತ್ತು ಕಾಳಜಿಯಿಂದಾಗಿ ತುಳುವ ಮಹಾಸಭೆ ಸ್ಥಾಪನೆಗೊಂಡಿತು. ಉಡುಪಿಯಲ್ಲಿ ಅಲ್ಲಿನ ಡಿಸ್ಟ್ರಿಕ್ಟ್ ಬೋರ್ಡು ಸದಸ್ಯರಾಗಿದ್ದ ಯು. ಪಣಿಯಾಡಿ ರಾಮಚಂದ್ರರಾಯರ ಅಧ್ಯಕ್ಷತೆಯಲ್ಲಿ ೨೩ ಸಪ್ಟೆಂಬರ್ ೧೯೨೮ರಂದು ಸೇರಿದ ಸಭೆಯಲ್ಲಿ ತುಳುವ ಮಹಾಸಭೆಯ ಮೊದಲ ಕಾರ್ಯಕಾರಿ ಸಮಿತಿಯ ರಚನೆಯಾಯಿತು. ಅಂಜಾರ್ ರಾಮಣ್ಣ ಹೆಗ್ಗಡೆ (ಅಧ್ಯಕ್ಷ), ಎಸ್‌.ಯು. ಪಣಿಯಾಡಿ (ಕಾರ್ಯದರ್ಶಿ) ಹಾಗೂ ಯು. ರಾಮಚಂದ್ರ ರಾವ್, ಹಿರಿಯಡ್ಕ ನಾರಾಯಣ ರಾವ್, ಯು. ವೆಂಕಪ್ಪಯ್ಯ ಇವರು ಸದಸ್ಯರು. ೩೦ ಸೆಪ್ಟಂಬರ್ ೧೯೨೮ರಂದು ಪ್ರಕಟವಾಗಿರುವ ತುಳುವ ಮಹಾಸಭೆಯ ವಿಜ್ಞಾಪನೆಯ ಮೊದಲ ಪುಟದಲ್ಲಿ ನೆಹರು ಕಮಿಟಿ ವರದಿಯ ಸಾಲುಗಳಿವೆ. ಅದು ಹೀಗಿದೆ: ‘The mere fact that the people living in a particular area feel that they are unit and desire to develop their culture is an important consideration even though there may be no sufficient historical or cultural justification for their demand’.

ತುಳುವ ಮಹಾಸಭೆಯು ಉಡುಪಿಗಷ್ಟೇ ಸೀಮಿತವಾಗಿರಲಿಲ್ಲ. ಇಡೀ ತುಳುನಾಡಿನ ವ್ಯಾಪ್ತಿ ಪಡೆದಿತ್ತು. ಇದರ ಸಭೆಗಳನ್ನು ತುಳುನಾಡಿನ ಯಾವುದೇ ಜಾಗದಲ್ಲಿ ನಡೆಸಬಹುದಾಗಿತ್ತು. ತುಳುನಾಡಿನಲ್ಲಿರುವವರೆಲ್ಲ ಇದರ ಸದಸ್ಯರಾಗಬಹುದಿತ್ತು.

೨. ತುಳುಕೂಟ, ಕುಡ್ಲ (೧೯೬೯)

ಮಂಗಳೂರಿನ ನ್ಯಾಯವಾದಿ ಎಸ್.ಆರ್. ಹೆಗ್ಡೆ, ಮಾಜಿಮಂತ್ರಿ ಬಿ.ಸುಬ್ಬಯ್ಯ ಶೆಟ್ಟಿ, ಎ.ಸಿ. ಭಂಡಾರಿ, ರತ್ನಕುಮಾರ್ ಕುಡ್ಲ ತುಳುಕೂಟದ ಹುಟ್ಟಿಗೆ ಮೂಲಕಾರಣರು. ೧೯೬೯ರ ದೀಪಾವಳಿ ಹಬ್ಬದಂದು ಈ ತುಳುಕೂಟ ಹುಟ್ಟಿತು. ಮೊದಲ ಮೂರು ವರ್ಷ ನವಭಾರತ ಪತ್ರಿಕೆಯ ಜೊತೆಯಲ್ಲಿ ತುಳು ಸಿನೇಮಾಗಳಿಗೆ ಪ್ರಶಸ್ತಿ – ಪುರಸ್ಕಾರ ನೀಡುವ ಕಾರ್ಯಕ್ರಮಗಳನ್ನು ಇರಿಸಿಕೊಂಡಿತ್ತು. ಐದು ವರ್ಷ ತುಳುನಾಟಕ ಸ್ಪರ್ಧೆಗಳನ್ನು ನಡೆಸಿದೆ. ೧೯೭೭ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪ್ರೋತ್ಸಾಹದಿಂದ ಡಿ. ರತ್ನವರ್ಮ ಹೆಗ್ಗಡೆ ನಾಟಕ ಕೃತಿ ಪ್ರಶಸ್ತಿ, ಸಾಹಿತ್ಯ, ಜಾನಪದ, ವಿಚಾರ ವಿಮರ್ಶೆಗಳಿಗೆ ಸಂಬಂಧಿಸಿದಂತೆ ೧೯೭೦, ೧೯೭೭, ೧೯೮೪ರಲ್ಲಿ ಮೂರು ಸಮ್ಮೇಳನಗಳನ್ನೂ, ಮೂರು ವಿಚಾರಗೋಷ್ಠಿಗಳನ್ನೂ, ಆರು ವಿಮರ್ಶಾ ಸಭೆಗಳನ್ನೂ ನಡೆಸಿದೆ.

ಮಡಿಕೇರಿ, ಬೆಂಗಳೂರು, ಮುಂಬಯಿ, ಉಡುಪಿ, ಪುತ್ತೂರು, ಕಾಸರಗೋಡು ಊರುಗಳಲ್ಲಿ ತುಳು ಸಂಘಟನೆಗಳು ಪ್ರಾರಮಭಗೊಳ್ಳಲು ಕುಡ್ಲ ತುಳುಕೂಟ ಕಾರಣವಾಗಿದೆ. ಈ ತುಳುಕೂಟ ಮಾಡಿರುವ ಇನ್ನೊಂದು ಸಾಧನೆಯೆಂದರೆ ಏಳು ವರ್ಷಗಳ ಕಾಲ ‘ತುಳುಕೂಟ ಪತ್ರಿಕೆ’ (೧೯೭೧) ಯನ್ನು ನಡೆಸಿರುವುದು. ತುಳುನಾಡ್ ಪ್ರೆಸ್ ಪ್ರಾರಂಭಿಸಿ ಎರಡು ವರ್ಷ ನಡೆಸಿರುವುದು ಇನ್ನೊಂದು ಸಾಧನೆ. ಮಂಗಳೂರು ಆಕಾಶವಾಣಿ (೧೯೭೬)ಯಲ್ಲಿ ತುಳು ಕಾರ್ಯಕ್ರಮಗಳಿಗೆ ಸಮಯಾವಕಾಶ ಹೆಚ್ಚು ನೀಡುವಂತೆ, ತುಳುನಾಡಿನ ಉದ್ದಿಮೆಗಳಿಗೆ, ತುಳು ಪ್ರತಿಭೆಗಳಿಗೆ ಉದ್ಯೋಗ ದೊರಕಿಸಿ ಕೊಡಲು, ತುಳು ಸಿನೇಮಾ, ನಾಟಕ, ಪುಸ್ತಕ ಪ್ರಕಟಣೆಗಳಿಗೆ ಸರಕಾರದಿಂದ ಪ್ರೋತ್ಸಾಹ ಸಿಗುವಂತೆ ಈ ತುಳುಕೂಟ ಪ್ರಯತ್ನ ನಡೆಸಿದೆ. ಅಗ್ರಗಣ್ಯರಿಗೆ ಸನ್ಮಾನ, ಬಿಸುಹಬ್ಬ ಆಚರಣೆ, ಪುಸ್ತಕ ಪ್ರಕಟಣೆ ಮೊದಲಾದ ಚಟುವಟಿಕೆಗಳಲ್ಲಿ ತುಳುಕೂಟ ತನ್ನನ್ನು ತೊಡಗಿಸಿಕೊಂಡಿದೆ.

೧೯೬೬ರಲ್ಲಿ ಮಂಗಳೂರಲ್ಲಿ ತುಳುಕೂಟ ಪ್ರಾರಂಭವಾಗಿ ೧೯೭೦ರ ಮಕರ ಸಂಕ್ರಮಣದಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು. ಅದರ ಸ್ಥಾಪಕಾಧ್ಯಕ್ಷ ಎಸ್.ಆರ್. ಹೆಗ್ಡೆಯವರಿಗೆ ಎದುರಾದ ಸವಾಲುಗಳು ಹಲವು. ಸಾರ್ವಜನಿಕ ಸಮಾರಂಭಗಳಲ್ಲಿ ತುಳು ಮಾತನಾಡುವುದೇ ಅವಮಾನ ಎಂದುಕೊಂಡಿದ್ದ ಕಾಲವದು. ಶಾಲೆಗಳಲ್ಲಿ ವಿದ್ಯಾರ್ಥಿಗಳು ತುಳು ಮಾತನಾಡಬಾರದು ಎನ್ನುವ ನಿಯಮವೇ ಇತ್ತು. ಎಸ್.ಆರ್. ಹೆಗ್ಡೆ ಇವನ್ನೆಲ್ಲ ಗಮನಿಸಿಕೊಂಡು ‘ತುಳುನಾಡು ಪ್ರೆಸ್’ ನಡೆಸಿದರು. ತುಳು ಪತ್ರಿಕೆ ಹೊರಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಎನ್ನುವ ಹೆಸರು ಕೊಡಬೇಕೆಂಬುದಾಗಿ ಸಮ್ಮೇಳನವೊಂದರಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರೇ ಅಭಿಪ್ರಾಯ ಪಟ್ಟದ್ದುಂಟು. ಸಂಶೋಧಕ ಪಿ.ಗುರುರಾಜ ಭಟ್ಟರು ಬಾರ್ಕೂರು ಉದ್ಯಾವರಗಳು ತುಳುನಾಡಿನ ಕೇಂದ್ರಗಳಾಗಿದ್ದುದರಿಂದ ಅಲ್ಲೆಲ್ಲ ಉತ್ಖನನ ಕಾರ್ಯ ನಡೆಯಬೇಕು ಎಂಬ ಅಭಿಪ್ರಾಯ ಕೊಟ್ಟದ್ದು ಒಂದು ಕ್ರಾಂತಿಯನ್ನೇ ಎಬ್ಬಿಸಿತು. ೧೯೭೧ರ ಮಕರ ಸಂಕ್ರಮಣಕ್ಕೆ ‘ತುಳುಕೂಟ ಪತ್ರಿಕೆ’ ಪ್ರಾರಂಭವಾಯಿತು. ಮರುವರ್ಷ ೧೯೭೨ರಲ್ಲಿ ನವರಾತ್ರಿಯ ವಿಜಯ ದಶಮಿಗೆ ‘ತುಳುನಾಡು ಪ್ರೆಸ್’ ಪ್ರಾರಂಭವಾಯಿತು. ತುಳುಕೂಟ ೧೯೭೭ರವರೆಗೂ ತುಳುಕೂಟ ಪತ್ರಿಕೆಯನ್ನು ಶಾಲಾ ಕಾಲೇಜುಗಳಿಗೆ ಉಚಿತವಾಗಿ ಪತ್ರಿಕೆಗಳನ್ನು ಕಳುಹಿಸಿಕೊಡುತ್ತಿತ್ತು. ತುಳುಕೂಟವನ್ನು ಬೆಳೆಸಿದ ತುಳುಕೂಟದ ಅಧ್ಯಕ್ಷರುಗಳು ಪದಾಧಿಕಾರಿಗಳು: ಅಧ್ಯಕ್ಷರು : ಎಸ್.ಆರ್. ಹೆಗ್ಗಡೆ (೧೯೭೦-೧೯೮೪), ಎ.ಸಿ. ಭಂಡಾರಿ (೧೯೮೪೬-೧೯೮೯), ಎಸ್.ಕೆ. ಅಮೀನ್ (೧೯೮೯ – ೧೯೯೨), ದಾಮೋದರ ಆರ್. ಸುವರ್ಣ (೧೯೯೨ – ೧೯೯೩), ಕೆ.ಎಂ. ಆಳ್ವ (೧೯೯೩ – ೧೯೯೪), ಬಿ. ದಾಮೋದರ ನಿಸರ್ಗ (೧೯೯೪ರಿಂದ) ೧೯೯೫ರಲ್ಲಿ ತುಳುಕೂಟ ಬೆಳ್ಳಿ ಹಬ್ಬವನ್ನು ಆಚರಿಸಿತು. ಬೆಳ್ಳಿಹಬ್ಬದ ನೆನಪಿನ ಮೊದಲ ಕಾರ್ಯಕ್ರಮಗಳಲ್ಲಿ ತುಳು ಮಂದಾರ ರಾಮಾಯಣ ಪ್ರವಚನ ಸಪ್ತಾಹವನ್ನು (ಭಾಸ್ಕರ ರೈ ಕುಕ್ಕುವಳ್ಳಿ, ಚಂದ್ರಕಲಾ ನಂದಾವರ, ತೋನ್ಸೆ ಪುಷ್ಕಳಕುಮಾರ್) ನಡೆಸಿಕೊಟ್ಟರು.

ಭಾರತದ ಸ್ವಾತಂತ್ರ್ಯೋತ್ಸವದ ಸುವರ್ಣೋತ್ಸವದ ನೆನಪಿಗಾಗಿ ೧೯೯೭ರಲ್ಲಿ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲಾಮಟ್ಟದಲ್ಲಿ ಹೆಚ್ಚು ಅಂಕ ಪಡೆದವರಿಗೆ ಪುರಸ್ಕಾರ ನೀಡಲಾಯಿತು. ಮನೆ ಮಾತು ಕನ್ನಡ ಆಗಿದ್ದರೂ ತುಳು ಭಾಷೆಯಲ್ಲಿ ಬಹಳಷ್ಟು ಪುಸ್ತಕಗಳನ್ನೂ ಪ್ರಕಟಿಸಿ ನಿತ್ಯಾನಂದ ಗ್ರಂಥಾಲಯ ಮಾರಾಟ ಸಂಸ್ಥೆಯನ್ನೂ ಸ್ಥಾಪಿಸಿರುವ ಮಾನ್ಯ ವೆಂಕಟರಾವ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತುಳುಕೂಟ ಪ್ರತಿವರ್ಷ ಬಿಸು ಹಬ್ಬವನ್ನು ದೊಡ್ಡ ಮಟ್ಟದಲ್ಲಿ ನಡೆಸಿಕೊಂಡು ಬರುತ್ತಿದೆ. ೧೯೮೭ರಲ್ಲಿ ದಾಮೋದರ ಆರ್. ಸುವರ್ಣರು ಈ ಹಬ್ಬವನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ಆಚರಿಸುವುದನ್ನು ರೂಢಿಗೆ ತಂದರು. ೧೯೮೯ರಲ್ಲಿ ಮೂಲ್ಕಿಯಲ್ಲಿ ಹರಿಕೃಷ್ಣ ಪುನರೂರು ಅವರ ಮುಂದಾಳುತನದಲ್ಲಿ ಬಿಸು ಹಬ್ಬದ ದಿನದಂದೆ ಎರಡು ದಿನಗಳ ಎರಡನೆಯ ತುಳು ಸಮ್ಮೇಳನ ನಡೆಯಿತು. ಅದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಹುಟ್ಟಿಗೆ ನಾಂದಿ ಹಾಡಿತು.

ತುಳುಕೂಟ ಕಂಡಿದ್ದ ಕನಸು

೧. ಮಂಗಳೂರಲ್ಲಿ ಆಕಾಶವಾಣಿ ಕೇಂದ್ರ ಪ್ರಾರಂಭ.

೨. ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಪೀಠ ಸ್ಥಾಪನೆ.

೩. ತುಳುವರೇ ಬಹುಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಹೆಸರಿಡುವುದು.

೪. ತುಳು ನಾಟಕ ಕಲಾವಿದರಿಗೂ ಸರಕಾರದಿಂದ ಮಾಸಾಶನ, ಸಹಾಯ ಧನ ಸಿಗಬೇಕು.

೫. ಕೇಂದ್ರ ಸಾಹಿತ್ಯ ಅಕಾಡೆಮಿ ತುಳುಭಾಷೆಗೆ ಮನ್ನಣೆ ನೀಡಬೇಕು.

೬. ರಾಜ್ಯ ಸಾಹಿತ್ಯ ಅಕಾಡೆಮಿ ಮತ್ತು ಜಾನಪದ ಅಕಾಡೆಮಿ ತುಳುಕೃತಿಗಳಿಗೂ ಪ್ರಶಸ್ತಿ ಸಹಾಯ ಧನ ನೀಡಬೇಕು.

೭. ತುಳು ಸಿನೇಮಾಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ಸಿಗಬೇಕು.

೮. ಮಂಗಳೂರು ಆಕಾಶವಾಣಿಯಲ್ಲಿ ಸ್ಥಳೀಯ ಸುದ್ದಿಗಳು ತುಳುವಿನಲ್ಲಿ ಪ್ರಸಾರವಾಗಬೇಕು.

೯. ತುಳು ಪತ್ರಿಕೆ, ಪ್ರಕಾಶನ ಸಂಸ್ಥೆಗಳಿಗೆ ಸರಕಾರ ಸಹಾಯ ಧನ ನೀಡಬೇಕು.

೧೦. ಸಂವಿಧಾನದ ವಿಧಿಯಂತೆ ತುಳು ಉಳಿದ ದ್ರಾವಿಡ ಭಾಷೆಗಳ ಹಾಗೇ ರಾಷ್ಟ್ರ ಮನ್ನಣೆಗೆ ಅರ್ಹವಾಗಿವೆ. ಇದು ಈಡೇರಬೇಕು.

೧೧. ತುಳುವಿಗೆ ಪ್ರತ್ಯೇಕ ಅಕಾಡೆಮಿ ಆಗಬೇಕು.

೧೨. ಉದ್ಯಾವರ ಬಾರ್ಕೂರು ಪ್ರದೇಶಗಳಲ್ಲಿ ಉತ್ಖನನ ನಡೆಸಿ ಪ್ರಾಚೀನ ತುಳು ಸಂಸ್ಕೃತಿಯನ್ನು ಬೆಳಕಿಗೆ ತರುವುದು.

೧೩. ಮಂಗಳೂರು ಪುರಭವನದ ವೇದಿಕೆ ಸುತ್ತ ತುಳು ಸಂಸ್ಕೃತಿ ಸಂಬಂಧ ಚಿತ್ರಗಳನ್ನು ಬರೆಸುವುದು.

೧೪. ಮಂಗಳೂರಿನ ಹೊಸ ಮಾರ್ಗ ವೃತ್ತಗಳಿಗೆ ತುಳುವರ ಮತ್ತು ತುಳು ಸಂಸ್ಕೃತಿಗೆ ಸಂಬಂಧಿಸಿದ ಹೆಸರುಗಳನ್ನು ಇಡುವುದು.

೩. ತುಳುಕೂಟ ಪುತ್ತೂರು (೧೯೭೩)

ಪುತ್ತೂರು ತುಳುಕೂಟದ ಸ್ಥಾಪನೆಗೆ ಮೂಲಕಾರಣ ವಿಠಲ ಪುತ್ತೂರು ಅವರು. ಅಗ್ರಾಳ ಪುರಂದರ ರೈ (ಅಧ್ಯಕ್ಷ), ಕುದ್ಕಾಡಿ ವಿಶ್ವನಾಥ ರೈ (ಕಾರ್ಯದರ್ಶಿ), ಅಮೃತ ಸೋಮೇಶ್ವರ, ವಿಠಲ ಪುತ್ತೂರು, ಧರ್ಮರಾಜ, ಬಾಬು ಶೆಟ್ಟಿ (ಸದಸ್ಯರು) ಇವರನ್ನೊಳಗೊಂಡ ಪುತ್ತೂರು ತುಳುಕೂಟ ಕೊಂಬೆಟ್ಟಿನ ಶಿವರಾವ್ ಹಾಲ್‌ನಲ್ಲಿ ಉದ್ಘಾಟನೆಗೊಂಡಿತು. ಪ್ರಾರಂಭದ ದಿನಗಳಲ್ಲಿ ಅಮೃತ ಸೋಮೇಶ್ವರರ ‘ತುಳುನಾಡ ಶಿಲ್ಪಿ’, ಕುದ್ಕಾಡಿಯವರ ‘ಅಬ್ಬಕಬ್ಬೆ’ ನಾಟಕಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಎರಡನೆಯ ಅವಧಿಯಲ್ಲಿ (೧೯೮೫) ನ್ಯಾಯವಾದಿ ಪುರಂಧರ ರೈ ಪಿ. (ಅಧ್ಯಕ್ಷ), ಬಳಿಕ ೧೯೮೯ರಲ್ಲಿ ಕೆಲಿಂಜ ಸೀತಾರಾಮ ಆಳ್ವ ಅಧ್ಯಕ್ಷರುಗಳಾಗಿ ಆಯ್ಕೆಗೊಂಡರು.

ಮಹಾವೀರ ವಾಣಿಯನ್ನು ‘ಗೀತೆದ ಶಿಶು’ ಎಂಬುದಾಗಿ ತುಳುವಿನಲ್ಲಿ ಬರೆದಿರುವ ಕೆಲಿಂಜ ಸೀತಾರಾಮ ಆಳ್ವರಿಗೆ, ‘ತುಳುವೆರೆ ಕುಸಾಲ್ ಕುಸೆಲ್’ ಕೃತಿಗೆ ಭಾರತೀಯ ಭಾಷೆಗಳ ಕೇಂದ್ರೀಯ ಪ್ರಶಸ್ತಿ, ‘ಬೀರ’ ತುಳು ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಾಮನ ನಂದಾವರರಿಗೆ, ಹಿರಿಯ ಸಾಹಿತಿ ಅಮೃತ ಸೋಮೇಶ್ವರರಿಗೆ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಡೆದ ಶೀನಪ್ಪ ಭಂಡಾರಿಯವರಿಗೆ ಸನ್ಮಾನ ಕಾರ್ಯಕ್ರಮ, ೧೯೯೩ರ ಎಪ್ರಿಲ್ ತಿಂಗಳಿನಲ್ಲಿ ಒಂದು ವಾರದ ಯಕ್ಷಗಾನ ಸ್ಪರ್ಧೆ, ವಿಶ್ವ ತುಳು ಸಮ್ಮೇಳನದ ಪೂರ್ವಭಾವಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲಾದವುಗಳನ್ನು ಏರ್ಪಡಿಸಿದೆ.

ತುಳುಕೂಟ ಪುತ್ತೂರು ಇದರ ಅಧ್ಯಕ್ಷರಾಗಿ ಆರಮಭದಿಂದಲೂ ಕಳೆದ ಹಲವಾರು ವರ್ಷಗಳಿಂದ ಕುದ್ಕಾಡಿ ವಿಶ್ವನಾಥ ರೈ ಕೆಲಸ ಮಾಡಿದ್ದಾರೆ. ನಾಲ್ಕು ವರ್ಷಗಳಷ್ಟು ಕಾಲ ಪಾಲ್ತಾಡಿ ರಾಮಕೃಷ್ಣ ಆಚಾರ್, ಆಮೇಲೆ ಕೆ.ಎಚ್. ದಾಸಪ್ಪ ರೈ ಕಳೆದ ಮೂರು ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ.

೪. ತುಳುಕೂಟ ಉಡುಪಿ (೧೯೮೪)

ಭಾಸ್ಕರಾನಂದ ಕುಮಾರ್ (ಅಧ್ಯಕ್ಷರು), ಜಯಚಂದ್ರ ಹೆಗ್ಡೆ, ಎಂ. ದಾಮೋದರ (ಉಪಾಧ್ಯಕ್ಷರು), ಬಿ.ಎನ್. ಹರೀಶ್ ಬೋಳೂರು (ಪ್ರಧಾನ ಕಾರ್ಯದರ್ಶಿ), ಮೋಹನ್ ಕೋಟ್ಯಾನ್ ಮತ್ತು ಕೆ. ಸುಬ್ಬಣ್ಣಯ್ಯ (ಜೊತೆಕಾರ್ಯದರ್ಶಿಗಳು), ಯು.ಜೆ. ದೇವಾಡಿಗ (ಕೋಶಾಧಿಕಾರಿ) ಮೊದಲಾದವರ ಕಾರ್ಯಕಾರಿ ಸಮಿತಿಯಲ್ಲಿ ೨೫ ಅಕ್ಟೋಬರ್ ೧೯೮೪ರಂದು ಉಡುಪಿ ತುಳುಕೂಟ ಅಸ್ತಿತ್ವಕ್ಕೆ ಬಂತು.

ಹಿರಿಯ ಕಲಾವಿದರಿಗೆ, ವಿದ್ವಾಂಸರಿಗೆ, ಸನ್ಮಾನ, ಮಕ್ಕಳಿಗೆ ಭಾವಗೀತೆ, ನೃತ್ಯರೂಪಕ, ಚಿತ್ರಗಾರಿಕೆ, ಪ್ರಬಂಧ ಮೊದಲಾದ ವಿಭಾಗಗಳಲ್ಲಿ ಸ್ಪರ್ಧೆಗಳು, ತುಳುವಿನಲ್ಲಿ ಪೌರಾಣಿಕ ಯಕ್ಷಗಾನ, ತುಳು ಬರಹಗಾರರಿಗಾಗಿ ಶಿಬಿರ, ತುಳುನಾಟಕ ಬರೆಯುವವರಿಗಾಗಿ ೭ ದಿನಗಳ ಕಮ್ಮಟ, ‘ತುಳುನಾಡ ಇತಿಹಾಸ’, ‘ಕೇದಗೆ’, ‘ಜೋಕ್ಲೆ ಪದೊಕುಲು’, ‘ಜೀವನ ಪಾಡ್ದನ’, ‘ಪೆಂಗದೂಮನ ಕಬಿತೊಲು’ ಮೊದಲಾದ ಪುಸ್ತಕಗಳ ಪ್ರಕಟಣೆ ಕಾರ್ಯಕ್ರಮಗಳನ್ನು ಉಡುಪಿ ತುಳುಕೂಟ ನಡೆಸಿದೆ. ೧೯೯೪ರಿಂದ ‘ಯು.ಎ.ಇ. ತುಳುಕೂಟ’ದ ಸಹಕಾರ ದಿಂದ ‘ಪಣಿಯಾಡಿ ತುಳು ಕಾದಂಬರಿ ಸ್ಪರ್ಧೆ’ ನಡೆಸುತ್ತಾ ಪ್ರತಿ ವರ್ಷ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ನೀಡುತ್ತಾ ಬರುತ್ತಿರುವುದು ಉಡುಪಿ ತುಳುಕೂಟದ ಬಹುದೊಡ್ಡ ಸಾಧನೆ. ಹಾಗೆಯೇ ವಿಶಿಷ್ಟ ರೀತಿಯಲ್ಲಿ ಉಡುಪಿ ತುಳುಕೂಟ ದಶಮಾನೋತ್ಸವ ಆಚರಿಸಿದೆ.

೫. ತುಳುವೆರೆ ಬಳಗ ಕೋಡಂಗಲ್ಲು (೧೯೮೮)

೨೮ ಅಗೋಸ್ತು ೧೯೮೮ರಂದು ಮೂಡಬಿದ್ರೆಯ ಕೋಡಂಗಲ್ಲು ಮಹಮ್ಮಾಯಿ ದೇವಸ್ಥಾನದಲ್ಲಿ ಕೆಲವರು ತುಳು ಅಭಿಮಾನಿಗಳು ಒಟ್ಟು ಸೇರಿ ‘ತುಳುವೆರೆ ಬಳಗ’ ರಚಿಸಿಕೊಂಡರು. ಜಿನೇಶ್ ಎಚ್ (ಅಧ್ಯಕ್ಷ), ದಿನೇಶ್ ಕೆ.ವಿ. ಶೆಟ್ಟಿ (ಉಪಾಧ್ಯಕ್ಷ), ಚಂದ್ರಹಾಸ ದೇವಾಡಿಗ (ಪ್ರಧಾನ ಕಾರ್ಯದರ್ಶಿ), ವಿಶ್ವನಾಥ ಭಂಡಾರಿ (ಖಜಾಂಚಿ) ಮೊದಲಾದ ಹನ್ನೊಂದು ಮಂದಿ ಇತರರು ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಈ ಬಳಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಮಾಜ ಸೇವಾ ಕಾರ್ಯಕ್ರಮಗಳನ್ನೂ ಕ್ರೀಡಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದೆ.

೬. ಅಖಿಲ ಭಾರತ ತುಳು ಒಕ್ಕೂಟ (೧೯೮೯)

ತುಳುಕೂಟ (ರಿ) ಮಂಗಳೂರು ಇವರ ಆಶ್ರಯದಲ್ಲಿ ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಜ್ಞಾನಮಂದಿರದಲ್ಲಿ ಅಮೃತ ಸೋಮೇಶ್ವರ ಅಧ್ಯಕ್ಷತೆಯಲ್ಲಿ ೧೫, ೧೬ ಎಪ್ರಿಲ್ ೧೯೮೯ರಲ್ಲಿ ಎರಡು ದಿನಗಳ ಅಖಿಲ ಭಾರತ ತುಳು ಸಮ್ಮೇಳನ ನಡೆದಿತ್ತು. ಈ ಸಮ್ಮೇಳನದ ಎರಡನೆಯ ದಿನ ನಡೆದ ೬ನೆಯ ಗೋಷ್ಠಿಯಲ್ಲಿ ಎಸ್.ಆರ್. ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಭಾರತ ತುಳು ಒಕ್ಕೂಟದ ರಚನೆಯ ಬಗೆಗೆ ಚರ್ಚೆ ನಡೆಯಿತು. ಈ ಚರ್ಚೆಯಲ್ಲಿ ದೆಹಲಿಯ ಬಾ. ಸಾಮಗ, ಮುಂಬಯಿಯಿಯ ಎನ್.ಎಂ. ಅಮೀನ್, ಬರೋಡಾದ ಎನ್. ಜಯರಾಮ ಶೆಟ್ಟಿ ಮತ್ತು ಎಸ್ಕೆ ಹಳೆಯಂಗಡಿ, ಮೀರಜ್‌ನ ಜಿ. ಸದಾಶಿವ ಶೆಟ್ಟಿ ಮತ್ತು ಶ್ರೀನಿವಾಸ ಮಂಕುಡೆ, ಬೆಂಗಳೂರಿನ ಎಂ. ವೇಣುಗೋಪಾಲ ಶೆಟ್ಟಿ ಮತ್ತು ಎಂ. ಆನಂದ ಶೆಟ್ಟಿ, ಹೈದರಾಬಾದಿನಿಂದ ಎಂ.ಎಸ್. ಆಚಾರ್ಯ, ಮದರಾಸಿನಿಂದ ಬಿ. ಪ್ರಭಾಕರ ಶೆಟ್ಟಿ, ಅಬುದಾಬಿಯಿಂದ ಪರಮೇಶ್ವರ ಸೂಟರಪೇಟೆ, ಉಡುಪಿ ಮಣಿಪಾಲದಿಂದ ಭಾಸ್ಕರಾನಂದ ಕುಮಾರ್ ಮತ್ತು ಬಿ.ಎನ್. ಹರೀಶ್ ಬೋಳೂರು, ಮಂಗಳೂರಿನಿಂದ ಅಡ್ಯಾರು ಮಹಾಬಲ ಶೆಟ್ಟಿ, ಮಚ್ಛೇಂದ್ರನಾಥ ಪಾಂಡೇಶ್ವರ, ಎಂ. ರತ್ನಕುಮಾರ್ ಮೊದಲಾದವರು ಪ್ರತಿನಿಧಿಗಳಾಗಿ ಪಾಲುಗೊಂಡಿದ್ದರು.

ಮುಂದಿನ ವರ್ಷಗಳಲ್ಲಿ ತುಳು ಒಕ್ಕೂಟ ಬೆಂಗಳೂರು, ಮುಂಬಯಿ, ಮೀರಜ್, ಪೂನ ಮೊದಲಾದೆಡೆಗಳ್ಲಲಿ ಒಕ್ಕೂಟದ ಸದಸ್ಯರ ಸಭೆ ಕರೆದು ಸಮಾಲೋಚನೆ ನಡೆಸುವ ಪರಂಪರೆಯನ್ನು ರೂಢಿಗೆ ತಂದಿತ್ತಾದರೂ ಒಕ್ಕೂಟದ ಉದ್ದೇಶದಂತೆ ಮುಂದುವರಿಯಲಿಲ್ಲ. ಅದಕ್ಕೆ ಸದಸ್ಯರ ಆಸಕ್ತಿಯ ಕೊರತೆಯೇ ಮುಖ್ಯ ಕಾರಣವೋ ಸಂಘಟನಾ ಶಕ್ತಿಯ ಕೊರತೆಯೋ ತಿಳಿಯದು. ಹಾಗೆಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ೨೦೦೨ರಲ್ಲಿ ತುಳುವಿಗೆ ಸಂವಿಧಾನಾತ್ಮಕ ಮಾನ್ಯತೆಗಾಗಿ ಕೇಂದ್ರ ಸರಕಾರಕ್ಕೆ ಮನವಿ ಒಪ್ಪಿಸಲು ದೆಹಲಿಗೆ ನಿಯೋಗ ಹೋದ ಸಂದರ್ಭದಲ್ಲಿ ತುಳು ಒಕ್ಕೂಟ ಸಕ್ರಿಯವಾದ ಬೆಂಬಲ ನೀಡಿದೆ.

ಇತ್ತೀಚೆಗೆ ಅಖಿಲ ಭಾರತ ತುಳು ಒಕ್ಕೂಟದ ಅಂಗ ಸಂಸ್ಥೆಯಾಗಿ ಅಡ್ಯಾರ್ ಪ್ರದೇಶದಲ್ಲಿ ತುಳು ಪರಿಷತ್ತು ರೂಪುಗೊಂಡಿದೆ. ಅಡ್ಯಾರ್ ಕಟ್ಟೆಯಲ್ಲಿ ಇದಕ್ಕೆ ಸಂಬಂಧಿಸಿದ ಕಛೇರಿಯೊಂದಿದ್ದು ಅಲ್ಲಿ ಗ್ರಂಥಾಲಯವೊಂದನ್ನು ರೂಪಿಸುವ ಯೋಜನೆಯನ್ನು ಹಾಕಿಕೊಂಡಿದೆ.

೭. ತುಳುಕೂಟ ಇಟ್ಟೆಲ್ (೧೯೯೩)

ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪರಿಷತ್ತು (೧೯೯೭)

ವಿಟ್ಲದಂತಹ ಗ್ರಾಮೀಣ ಪ್ರದೇಶದಲ್ಲಿ ತುಳು ಭಾಷೆ, ಸಂಸ್ಕೃತಿ ಪೋಷಣೆಗೆ ಒಂದು ಸಂಘಟನೆ ಅಗತ್ಯ ಎನ್ನುವುದನ್ನು ಮನಗಂಡು ಗಣೇಶ ಪ್ರಸಾದ ಪಾಂಡೇಲು ಮತ್ತು ಚೆನ್ನಪ್ಪ ಅಳಿಕೆ ೧೯೯೩ರ ನವಂಬರ್ ತಿಂಗಳಲ್ಲಿ ಇಟ್ಟೆಲ್ ತುಳು ಕೂಟ ಸಂಘಟನೆಯನ್ನು ಕಟ್ಟಿಕೊಂಡು ಮುಂದೆ ರಘು ಇಡ್ಕಿದು, ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು, ಎನ್. ಸೀತಾರಾಮ ಆಳ್ವ, ಪಿ.ಜಯರಾಮ ರೈ. ವಿ. ಸುಬ್ರಹ್ಮಣ್ಯ ಭಟ್ ಕುಂಟಪದವು, ಡಿ. ಜಯರಾಮ ಪಡ್ರೆ, ರಮೇಶ ಉಳಯ ಅಡ್ಯನಡ್ಕ, ಆನಂದ ರೈ ಅಡ್ಕಸ್ಥಳ, ಶಶಿಕಾಂತ ಬಾಳೆಕೋಡಿ, ಎ.ಎನ್.ಕೆ. ಉಕ್ಕುಡ, ವಿಷ್ಣುಗುಪ್ತ ಪುಣಚ, ಮಹೇಂದ್ರನಾಥ ಸಾಲೆತ್ತೂರು ಮೊದಲಾದವರು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿರುತ್ತಾರೆ. ಮುಖ್ಯವಾಗಿ ‘ತುಳು ತೆಲಿಕೆ ನಲಿಕೆ’, ‘ಆಟಿದ ಆಯನೊ ಪರ್ಬ’, ‘ಅಪ್ಪೆಗ್ ಬಾಲೆದ ಓಲೆ’, ‘ಪುಟ್ಟುದಿನ’ ಮೊದಲಾದ ಕೃತಿ ಪ್ರಕಟಣೆಯಂತಹ ಕಾರ್ಯಸಾಧನೆಯಲ್ಲಿ ಈ ಸಂಘಟನೆ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಘಟನೆ ೧೯೯೭ರ ಬಳಿಕ ತನ್ನ ಕಾರ್ಯವ್ಯಾಪ್ತಿಯನ್ನು ಬಂಟ್ವಾಳ ತಾಲೂಕು ವಿಸ್ತರಿಸಿಕೊಂಡು ಕೆಲಸ ಮಾಡುತ್ತಿದೆ. ‘ದಿಲ್ಲಿಡ್ ತುಳು ಬೊಳ್ಪು’ ಸಂವಿಧಾನದಲ್ಲಿ ತುಳು ಸೇರ್ಪಡೆಯಂತಹ ರಾಷ್ಟ್ರೀಯ ಸಮಾವೇಶದಲ್ಲೂ ಪಾಲುಗೊಂಡು ತನ್ನ ಬೆಂಬಲವನ್ನು ಸೂಚಿಸಿದೆ.

೮. ತುಳುಕೂಟ ಕಾಸರಗೋಡು (೧೯೯೩)

ಕುಡ್ಲ ತುಳುಕೂಟದ ಸಕ್ರಿಯ ಕಾರ್ಯಕರ್ತರಾಗಿ ೧೪ ವರ್ಷಗಳ ಅನುಭವವಿದ್ದ ಉದಯಶಂಕರ ಎನ್.ಎ. ಇವರು ನ್ಯಾಯವಾದಿ ಆಡೂರು ಉಮೇಶ ನಾಯ್ಕರ ಅಧ್ಯಕ್ಷತೆಯಲ್ಲಿ ೧೯೯೩ರ ಆಗಸ್ಟ್ ತಿಂಗಳಲ್ಲಿ ಕಾಸರಗೋಡು ತುಳುಕೂಟದ ಉದಯಕ್ಕೆ ಕಾರಣರೆನಿಸಿಕೊಂಡಿದ್ದಾರೆ.

ಕಣ್ಣಾನೂರು ಮತ್ತು ಕಲ್ಲಿಕೋಟೆ ಆಕಾಶವಾಣಿ ಕೇಂದ್ರಗಳಲ್ಲಿ ತುಳು ಕಾರ್ಯಕ್ರಮ ಪ್ರಸಾರವಾಗುವಂತೆ ಕಾಸರಗೋಡು ತುಳುಕೂಟ ಪ್ರಯತ್ನ ಮಾಡಿದೆ. ವಿಶ್ವ ತುಳು ಸಮ್ಮೇಳನ (೧೯೯೪)ದ ಪ್ರಚಾರಕ್ಕೆ ೧೯೯೪ ಜನವರಿಯಲ್ಲಿ ೩೦ ಮಂದಿ ಕವಿಗಳನ್ನು ಒಟ್ಟು ಸೇರಿಸಿ ಕವಿ ಸಮ್ಮೇಳನ ನಡೆಸಿದೆ. ಕಾಸರಗೋಡು ಪರಿಸರದ ತುಳುವರ ಸಂಘಟನೆಯಲ್ಲಿ ತನ್ನದೇ ಆದ ರೀತಿಯಲ್ಲಿ ತುಳುಕೂಟ ಕಾರ್ಯನಿರ್ವಹಿಸುತ್ತಿದೆ.

೯. ತುಳುವೆರೆಂಕುಲು ಕುಡಲ (೧೯೯೩)

ಧರ್ಮರಾಜ ಎನ್. ಕಾಡ ಅವರು ಅಧ್ಯಕ್ಷರಾಗಿದ್ದು, ಮ. ವಿಠಲ ಪುತ್ತೂರು ಇವರು ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಘಟನೆಯಲ್ಲಿ ವಾಮನ ನಂದಾವರ, ಮುದ್ದು ಮೂಡುಬೆಳ್ಳೆ, ಕೆ. ವಾಮನ, ಸೀತಾರಾಮ ಆಳ್ವ ಕೆಳಿಂಜ, ವಿಜಯಕುಮಾರ ಭಂಡಾರಿ ಪುತ್ತೂರು ಮೊದಲಾದ ಸದಸ್ಯರ ಸಂಘಟನೆಯಲ್ಲಿ ಈ ಸಂಸ್ಥೆ ಕೆಲವು ವರ್ಷ ಅಸ್ತಿತ್ವದಲ್ಲಿತ್ತು. ಮುಖ್ಯವಾಗಿ ಮ. ವಿಠಲ ಪುತ್ತೂರು ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ತುಳುವೆರೆ ತುಡರ್’ ಮಾಸಪತ್ರಿಕೆಯ ಬೆಂಬಲಕ್ಕಾಗಿ ತುಳುವೆರೆಂಕುಲು ಕುಡಲ ಸಾಕಷ್ಟು, ಕೆಲಸ ಮಾಡಿದೆ. ಸ್ಥಳೀಯ ಚಾರಿತ್ರಿಕ, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸ ಹೋಗಿ ಕ್ಷೇತ್ರ ಮಾಹಿತಿ ಸಂಗ್ರಹಿಸಿ ತುಳುವೆರೆ ತುಡರ್ ಪತ್ರಿಕೆಯಲ್ಲಿ ಆ ಕುರಿತ ಲೇಖನಗಳನ್ನು ಪ್ರಕಟಿಸುವುದು, ವಿಚಾರಸಂಕಿರಣ, ಕವಿಕೂಟ ಮೊದಲಾದ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ಸಂಘಟನೆಯ ಉದ್ದೇಶವಾಗಿತ್ತು. ರಾಣಿ ಅಬ್ಬಕ್ಕನ ಇತಿಹಾಸ, ಐತಿಹ್ಯ ಸಂಗ್ರಹಕ್ಕಾಗಿ ಉಳ್ಳಾಲಕ್ಕೆ ಪ್ರವಾಸ ಹೋಗಿರುವುದು ಅಂತಹ ಕಾರ್ಯಕ್ರಮಗಳಲ್ಲಿ ಒಂದು ಇದರ ಕಾರ್ಯಾಲಯ ಮಂಗಳೂರಿನ ರಥಬೀದಿಯ ಮಹಾವೀರ ಕಟ್ಟಡದಲ್ಲಿ ಇತ್ತು.

೧೦. ತುಳುವೆರೆ ಕೂಟ (ರಿ) ಶಕ್ತಿನಗರ (೧೯೯೭)

ಮಂಗಳೂರಿನ ಕುಲಶೇಖರದ ಶಕ್ತಿನಗರದಲ್ಲಿ ತುಳುವೆರೆ ಕೂಟ ೧೯೯೬ರ ಮಕರ ಸಂಕ್ರಮಣದಂದು ಪ್ರಾರಂಭಗೊಂಡಿತು. ಹಲವು ವೈವಿಧ್ಯಮಯ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಸಂಘಟನೆ ದಶಮಾನೋತ್ಸವ ವರ್ಷಾಚರಣೆಯನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿದೆ.

ಇದೀಗ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನೂ ತುಳುವ ಚಾವಡಿಯನ್ನೂ ಈಗಾಗಲೇ ಲೋಕಾರ್ಪಣಗೊಳಿಸಿದೆ. ಇದರ ನೆನಪಿಗಾಗಿ ದಯಾನಂದ ಜಿ. ಕತ್ತಲ್‌ಸಾರ್ ಸಂಪಾದಕತ್ವದಲ್ಲಿ ‘ಪಿಂಗಾರ’ ಎನ್ನುವ ದಶಮಾನೋತ್ಸವ ಸಂಚಿಕೆಯನ್ನು ಕೂಡ ತಂದಿರುತ್ತದೆ. ದಯಾನಂದ ಎನ್.ಆರ್., ವಿಶ್ವನಾಥ, ರಮಾನಂದ, ಮಹೇಶ್ ಚಿಲಿಂಬಿ, ಯು.ಕೃಷ್ಣ, ವಿಮಲ, ಸುಜಾತ ಈ ಏಳು ಜನರಿಂದ ಈ ತುಳುಕೂಟ ಪ್ರಾರಂಭವಾಯಿತು. ಸ್ಥಾಪನೆಯಾದಂದಿನಿಂದ ಎರಡು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ದಯಾನಂದ ಎನ್.ಆರ್.ಇಂದಿನವರೆಗೂ ಇದರ ಬೆಳವಣಿಗೆಗಾಗಿ ಉಳಿದವರ ನೆರವಿನಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

೧೯೯೯ರಿಂದ ೨೦೦೧ ರವರೆಗೆ ಅಧ್ಯಕ್ಷರಾಗಿ ರಮಾನಂದ ಅವರೂ, ೨೦೦೧-೨೦೦೩ ರವೆಗೆ ವಿಶ್ವನಾಥ ಅವರೂ, ೨೦೦೩ ರಿಂದ ೨೦೦೪ ರವರೆಗೆ ಸುಧಾಕರ ಜೋಗಿಯವರೂ ಸೇವೆ ಸಲ್ಲಿಸಿದ್ದಾರೆ. ಮಹಾನಗರ ಪಾಲಿಕೆಯ ಸ್ಥಳೀಯ ಪ್ರತಿನಿಧಿ ಮಹಾಬಲ ಮಾರ್ಲರು ಈ ತುಳುವೆರೆ ಕೂಟದ ಗ್ರಂಥಾಲಯ ಕಟ್ಟಡಕ್ಕಾಗಿಯೂ ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿ ಸಹಕಾರ ನೀಡಿದ್ದಾರೆ.

೧೧. ಜಾನಪದ ಕೂಡುಕಟ್ಟು ಸುಳ್ಯ (೧೯೯೭)

೧. ಸುಳ್ಯ ತಾಲೂಕು ಅಸುಪಾಸಿನ ಜಾನಪದ-ಕತೆ, ಪಾಡ್ದನ ಕುಣಿತ, ಆಚರಣೆಗಳು ಮೊದಲಾದವುಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಗ್ರಂಥ ರೂಪದಲ್ಲಿ ಪ್ರಕಟಿಸುವುದು.

೨. ಸುಳ್ಯ ಪರಿಸರದಲ್ಲಿ ಮನುಷ್ಯ ಸಂಬಂಧಿ ಭೂತಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳ ಬಗೆಗೆ ಮಾಹಿತಿ ಸಂಗ್ರಹಿಸುವುದು.

೩. ತುಳುನಾಡಿನ ವಿಶಿಷ್ಟವಾದ ಕೆಡ್ಡಸ, ಬಿಸು, ಆಟಿ ಮೊದಲಾದ ಹಬ್ಬಗಳನ್ನು ಸುಳ್ಯ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಆಚರಿಸುವುದು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ವಿಶ್ಲೇಷಣಾತ್ಮಕ ಗ್ರಂಥಗಳನ್ನು ಪ್ರಕಟಿಸುವುದು.

ಇವೇ ಮೊದಲಾದ ಉದ್ದೇಶಗಳನ್ನಿಟ್ಟುಕೊಂಡು ಜಾನಪದ ವಿದ್ವಾಂಸ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಮಾರ್ಗದರ್ಶನದಲ್ಲಿ ‘ಜಾನಪದ ಕೂಡುಕಟ್ಟು’ ಸುಳ್ಯ ಸಂಘಟನೆ ೧೯೯೭ರ ಕಾಲಕ್ಕೆ ಪ್ರಾರಂಭವಾಯಿತು. ಇದರ ಪದಾಧಿಕಾರಿಗಳು ಪಾಲ್ತಾಡಿ ರಾಮಕೃಷ್ಣ ಆಚಾರ್ (ಅಧ್ಯಕ್ಷ), ಮೀನಾಕ್ಷಿ ಎಂ. ಗೌಡ (ಗೌರವಾಧ್ಯಕ್ಷೆ), ಪ್ರಭಾಕರ ಶಿಶಿಲ (ಉಪಾಧ್ಯಕ್ಷ), ಸುಂದರ ಕೇನಾಜೆ (ಕಾರ್ಯದರ್ಶಿ), ಸೀತಾರಾಮ ಕೇವಲ (ಕೋಶಾಧಿಕಾರಿ), ದುರ್ಗಾಕುಮಾರ್ ನಾಯರ್ ಕೆರೆ ಮತ್ತು ಹೇಮಾವತಿ ವೆಂಕಟ್ ಸುಳ್ಯ (ಸಹಕಾರ್ಯದರ್ಶಿ).

ಕರ್ನಾಟಕದ ಜಾನಪದ ವಿದ್ವಾಂಸರಾದ ಕೆ. ಚಿನ್ನಪ್ಪ ಗೌಡ, ಅಂಬಳಿಕೆ ಹಿರಿಯಣ್ಣ, ಪುರುಷೋತ್ತಮ ಬಿಳಿಮಲೆ, ಬಸವರಾಜ ಮಲ ಶೆಟ್ಟಿ, ಕೃಷ್ಣಯ್ಯ ಎಸ್.ಪಿ., ಕಮಲಾಕ್ಷ ಮೊದಲಾದವರ ಮಾರ್ಗದರ್ಶನದಲ್ಲಿ ಜಾನಪದ ಕೂಡುಕಟ್ಟು ಸುಳ್ಯ ಆಸಕ್ತರಿಗೆ ತರಬೇತಿ ನೀಡುವ ಶಿಬಿರಗಳನ್ನು ಏರ್ಪಡಿಸಿದೆ. ಈ ಶಿಬಿರದ ಮಾರ್ಗದರ್ಶನದ ಲಾಭ ಪಡೆದು ಕ್ಷೇತ್ರ ಕಾರ್ಯ ನಡೆಸಿ ಚಂದ್ರಶೇಖರ ಮಂಡೆಕೋಲು (೨೦೦೧), ‘ಅನ್ವೇಷಣೆ’ ಎನ್ನುವ ಗ್ರಂಥವನ್ನು ಪ್ರಕಟಿಸುತ್ತಾರೆ. ಸುಳ್ಯ ಮತ್ತು ಪುತ್ತೂರು ತಾಲೂಕಿನ ದುಗ್ಗಲಡ್ಕ, ಮಂಡೆಕೋಲು, ಕಮಿಲ, ಗುತ್ತಿಗಾರು, ಪೆರುವಾಜೆ, ಸವಣೂರು, ಸುಳ್ಯ ಮೊದಲಾದ ಕಡೆಗಳಲ್ಲಿ ಈಗಾಗಲೇ ಹೆಸರಿಸಿದ ಹಬ್ಬಗಳನ್ನು ಆಚರಿಸುವ ಕಾರ್ಯಕ್ರಮಗಳನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದೆ.

ಆಟಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ವಿವಿಧ ವಿದ್ವಾಂಸರುಗಳಿಂದ ವಿಚಾರಗೋಷ್ಠಿಗಳಿಗಾಗಿ ಪ್ರಬಂಧಗಳನ್ನು ಬರೆಯಿಸಿ ಅವುಗಳನ್ನು ಪಾಲ್ತಾಡಿ ರಾಮಕೃಷ್ಣ ಆಚಾರ್ (೨೦೦೨) ಸಂಪಾದನೆಯಲ್ಲಿ ‘ಆಟಿ’ ಎಂಬ ಗ್ರಂಥವನ್ನು ಪ್ರಕಟಿಸಲಾಗಿದೆ.

ಕೆಡ್ಡಸ ಹಬ್ಬದ ಆಚರಣೆಗೆ ಸಂಬಂಧಿಸಿದ ಹಾಗೆ ಪಾಲ್ತಾಡಿ ರಾಮಕೃಷ್ಣ ಆಚಾರ್ (೨೦೦೭) ‘ಕೆಡ್ಡಸ’ ಎನ್ನುವ ಗ್ರಂಥವೊಂದನ್ನು ಪ್ರಕಟಿಸಿದ್ದಾರೆ.

ಕೂಡುಕಟ್ಟು ಸುಳ್ಯ ಮಾರ್ಗದರ್ಶನಲದಲ್ಲಿ ಹಲವಾರು ಜನಪದ ಕುಣಿತ ತಂಡಗಳು ರೂಪುಗೊಂಡಿವೆ.

೧೩. ಅಖಿಲ ಭಾರತ ತುಳು ಯುವಕ ಪರಿಷತ್ (೨೦೦೬)

ತುಳು ಭಾಷಿಗರನ್ನು ಒಗ್ಗಟ್ಟಾಗಿಸಿ ಭಾಷೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ತುಳು ಯುವಕ ಪರಿಷತ್ ೨೦೦೬ರ ಜುಲಾಯಿಯಲ್ಲಿ ಅಸ್ತಿತ್ವಕ್ಕೆ ಬಂತು. ಇದರ ರಾಜ್ಯ ಅಧ್ಯಕ್ಷರಾಗಿ ಅಶ್ವತ್ಥ್ ಭಾರದ್ವಾಜ, ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಕ್ಲೀವನ್ ಲಾಜಿಲ್ ಮೆಂಡೋನ್ಹಾ, ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾನಾಯಕ್, ಹಾಗೆಯೇ ವಾಸಿಮ್ ಬೆಳಪು, ಪಾಂಗಳ ಹರೀಶ್ ಶೆಟ್ಟಿ, ಸಂತೋಷ್ ಶೆಟ್ಟಿ ಮೊದಲಾದವರು ಸಮಿತಿಯಲ್ಲಿದ್ದಾರೆ.

ನೂಜಿಬಾಳ್ತಿಲ ತೆರ್ಗ್‌ರ್ ತುಳುಕೂಟ, ಪಾಣಾಜೆ ತುಡರ್ ತುಳುಕೂಟ ಮೊದಲಾದ ತುಳುನಾಡಿನ ತುಳು ಸಂಘಟನೆಗಳು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿವೆ.

ಹೊರನಾಡು

ದೇಶದುದ್ದಗಲಗಳಲ್ಲೂ, ಪರದೇಶಗಳಲ್ಲೂ ತುಳುವರು ತಾವು ನೆಲೆಸಿದಲ್ಲಿ ತಮ್ಮವರನ್ನು ಸಂಘಟಿಸಿ ಸಂಘಗಳನ್ನು ಸ್ಥಾಪಿಸಿಕೊಂಡು ತುಳುವರ ಇರವನ್ನು ತೋರ್ಪಡಿಸಿದ್ದಲ್ಲದೆ, ತುಳು ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉತ್ಥಾನದತ್ತ ಒಲವು ಹರಿಸಿದ್ದನ್ನು ಕಳೆದ ಹಲವು ದಶಕಗಳಿಂದ ಈಚೆಗೆ ಕಾಣಬಹುದಾಗಿದೆ.

ಹೊರನಾಡ ತುಳು ಸಂಘ – ಸಂಸ್ಥೆಗಳಲ್ಲಿ (ಕರ್ನಾಟಕ ಹೊರತು ಪಡಿಸಿ) ‘ಮುಂಬೈ, ತುಳು ಸಂಘ (ರಿ.)’, ‘ಬರೋಡ, ತುಳುನಾಡ್ ಸಂಘ (ರಿ)’, ‘ಮೀರಜ್ – ಸಾಂಗ್ಲಿ ತುಳು ಸಂಘ (ರಿ)’, ‘ನಾಸಿಕ್ ತುಳುನಾಡ್ ಸಂಘ (ರಿ.)’, ‘ಸೋಲಾಪುರ’ ಹಾಗೂ ‘ತುಳು ಸಮಾಜಂ ಮದ್ರಾಸ್’ ಮೊದಲಾದುವುಗಳು ತುಳು ಜನರ ಸಂಘಟನೆಯ ದಿಸೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವೆಲ್ಲ ತಮ್ಮದೇ ಆದ ಛಾಪು ಒತ್ತಿದ ಹಲವಾರು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿವೆ.

೧. ಮುಂಬಯಿ ತುಳು ಸಂಘ (೧೯೮೯)

ತುಳು ಸಂಘಟನೆಯಲ್ಲಿ ಮುಂಬಯಿಯಲ್ಲಿ ಬಹು ಹಿಂದಿನಿಂದಲೂ ಕೆಲಸ ಮಾಡುತ್ತಿದ್ದುವು. ಆದರೆ ಅಧಿಕೃತವಾಗಿ ೧೯೮೯ರಲ್ಲಿ ಈ ಸಂಘ ಅಸ್ತಿತ್ವಕ್ಕೆ ಬಂತು. ಮುಂಬಯಿ ಮಹಾನಗರದ ತುಳುವರನ್ನು ಸಂಘಟಿಸಿರುವ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಆದರೂ ತುಳುವರಿಗೆ ತಮ್ಮ ವರನ್ನು ನೆಲೆಗೊಳಿಸಬೇಕಾಗಿತ್ತು. ತುಳುನಾಡಿಗರ ವಿಭಿನ್ನ ಜಾತಿ ಸಂಘ ಸಂಸ್ಥೆಗಳು, ಕರ್ನಾಟಕ ಸಂಘ ಸಂಸ್ಥೆಗಳು, ಕನ್ನಡಿಗರ ವಿದ್ಯಾಸಂಸ್ಥೆಗಳು ಈಗಾಗಲೇ ಗಟ್ಟಿಯಾಗಿ ಬೇರೂರಿ ಕನ್ನಡ ನಾಡಿನ ತುಳುವರ ಪ್ರತಿಭೆಗಳಿಗೂ ಪರಸ್ಪರ ಬೆರೆಯುವ ಅವಕಾಶಗಳನ್ನು ಕಲ್ಪಿಸಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ತುಳು ಜನರ ವಿಶಿಷ್ಟ ಉನ್ನತ ಸಾಂಸ್ಕೃತಿಕ ಪರಂಪರೆಯನ್ನು ಮೆರೆಸಲು ಮರೆಯಲಿಲ್ಲ.

ಈ ದ್ವಂದ್ವದಲ್ಲಿ ತುಳು ಸಂಘ ಸಾಕಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡುವ ಆಹ್ವಾನವಿತ್ತದ್ದು ಅನಿವಾರ್ಯವಾಗಿತ್ತು. ಈ ಅನಿವಾರ್ಯತೆ ಈಗಲೂ ಇದೆ.

ಮಹಾರಾಷ್ಟ್ರ ರಾಜ್ಯ ಸರಕಾರದ ಮಂತ್ರಿ ಹುದ್ದೆ ಅಲಂಕರಿಸಿ, ತುಳುವರಿಗೆ ಗೌರವ ತಂದಿತ್ತ ಲಲಿತಾ ರಾವ್‌ರವರ ಅಧ್ಯಕ್ಷತೆಯಲ್ಲಿ ಎನ್.ಎಂ. ಅಮೀನ್, ಪಿ.ಸಿ. ರಾವ್, ಸುನೀತಾ ಶೆಟ್ಟಿ ಮೊದಲಾದ ತುಳು ಸಂಘದ ಹಿರಿಯ ಕಿರಿಯ ಧುರೀಣರ ತುಂಬು ಉತ್ಸಾಹ ಮತ್ತು ಪಾಲ್ಗೊಳ್ಳುವಿಕೆ ಮುಂಬೈ ತುಳುವರ ಹೊಸ ಆಶೆ – ಆಕಾಂಕ್ಷೆಗಳು ಗರಿಗೆದರಿ ನಲಿಯುವಂತೆ ಮಾಡಿತೆನ್ನಬಹುದು.

ತುಳು ಸಮ್ಮೇಳನ, ಯಕ್ಷಗಾನ – ನಾಟಕ, ವಿಚಾರ ಸಂಕಿರಣ, ಸಾಹಿತ್ಯ – ಕವಿಗೋಷ್ಠಿ, ಪ್ರವಚನ, ಸಾಂವಿಧಾನಿಕ ಸ್ಥಾನಮಾನ ಪ್ರಯತ್ನ, ತುಳುಪೀಠ ಸ್ಥಾಪನೆ ಹೀಗೆ ಹತ್ತು ಹಲವು ಸಾಂಸ್ಕೃತಿಕ, ಸಮಾಜಸೇವಾ ಕಾರ್ಯಕ್ರಮಗಳನ್ನು ತುಳು ಸಂಘ ನಡೆಸಿಕೊಂಡು ಬರುತ್ತಿದೆ.

೨. ತುಳುಕೂಟ ಬೆಂಗಳೂರು (೧೯೭೨)

ಕುಡ್ಲ ತುಳುಕೂಟದ ವಿಸ್ತರಣೆಯಾಗಿ ರಾಜಧಾನಿ ಬೆಂಗಳೂರಲ್ಲಿ ತುಳುಕೂಟದ ಅಗತ್ಯವಿತ್ತು. ೨೩ ಎಪ್ರಿಲ್ ೧೯೭೨ರಂದು ಬೆಂಗಳೂರಿನ ತುಳು ಅಭಿಮಾನಿಗಳು ಅದರ ರಚನೆಗೆ ಕಾರಣರಾದರು. ಈ ತುಳುಕೂಟದ ಸದಸ್ಯರೇ ಸೇರಿಕೊಂಡು ತುಳುನಾಟಕ, ಯಕ್ಷಗಾನಕೂಟ, ತಾಳಮದ್ದಳೆ ಕೂಟ ಕಾರ್ಯಕ್ರಮಗಳ ಜೊತೆಗೆ ಹೆಸರಾಂತ ಕಲಾ ತಂಡಗಳನ್ನು ಆಮಂತ್ರಿಸಿ ಕಲಾಪ್ರದರ್ಶನವನ್ನು ಏರ್ಪಡಿಸುವುದು, ಉತ್ತಮ ತುಳು ಸಿನೆಮಾಗಳ ಪ್ರದರ್ಶನ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡುವುದು ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

೧೯೮೩ರಲ್ಲಿ (ಫೆಬ್ರವರಿ ೨೦, ೨೧) ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ, ೧೯೮೮ರಲ್ಲಿ ತುಳು ವಿಚಾರಗೋಷ್ಠಿ ತುಳುನಾಟಕ ಮತ್ತು ಕಾವ್ಯ ಸ್ಪರ್ಧೆ ನಡೆಸಿ ಉತ್ತಮ ಕೃತಿಗಳಿಗೆ ಪುರಸ್ಕಾರ ನೀಡುವುದು, ಪ್ರತಿಭಾವಂತರಿಗೆ ಸನ್ಮಾನಕೂಟ, ಪೊಳಲಿ ಶೀನಪ್ಪ ಹೆಗ್ಗಡೆಯವರ ಜನ್ಮ ಶತಮಾನೋತ್ಸವ, ಗ್ರಂಥ ಪ್ರಕಟಣೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದೆ.

ತುಳು ಅಕಾಡೆಮಿಯ ರದ್ಧತಿಯ ಪ್ರಶ್ನೆ ಬಂದಾಗ ಊರಿನ ತುಳು ಸಂಘಟನೆಗಳ ಜೊತೆ ಕೈಜೋಡಿಸಿ ಮುಖ್ಯಮಂತ್ರಿಗಳಿಗೆ ಮನವಿ ಒಯ್ದು ಒಪ್ಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇದರ ಫಲವಾಗಿ ಮತ್ತೆ ತುಳು ಅಕಾಡೆಮಿ ಪ್ರಾರಂಭವಾಗಿದೆ. ಹಾಗೆಯೇ ತುಳುಭಾಷೆಯನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸುವ ಪ್ರಯತ್ನದಲ್ಲಿ ಪಾತ್ರ ವಹಿಸಿದೆ.

ಇದೇ ತುಳುಕೂಟ ಬೆಂಗಳೂರಲ್ಲಿ ‘ತುಳುವೆರೆಂಕುಲು’ ಎನ್ನುವ ಇನ್ನೊಂದು ತುಳುವರ ಸಂಘಟನೆಗೂ ಕಾರಣ ಪ್ರೇರಣೆಯಾದುದುಂಟು. ಇವೆರಡೂ ಪರಸ್ಪರ, ಸಮಾನಾಂತರವಾಗಿ ತುಳುವಿನ ಬೆಳವಣಿಗೆಯಲ್ಲಿ ಪ್ರಧಾನ ಪ್ರಾತ್ರ ವಹಿಸುತ್ತಿವೆ. ವಿಶುಕುಮಾರ್, ಮಂ. ಆನಂದ ಶೆಟ್ಟಿ, ಎಸ್.ಆರ್. ಹೆಗ್ಡೆ, ಇಂದಿರಾ ಹೆಗ್ಡೆ, ಮಾಧವ ಕುಲಾಲ್, ಪ್ರಭಾಕರ ರೈ, ಉಷಾ ಪಿ. ರೈ, ಡಿ.ಕೆ. ಚೌಟ, ಗೀತಾ ಸುರತ್ಕಲ್ ಮೊದಲಾದವರು ಬೆಂಗಳೂರು ತುಳುಕೂಟದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.

ತುಳುಕೂಟ ಬೆಂಗಳೂರು ಇದರ ಬೆಳ್ಳಿಹಬ್ಬ ಆಚರಣೆಯ ನೆನಪಿಗೆ ಉಷಾ ಪಿ. ರೈ. (೨೦೦೦) ಅವರ ಸಂಪಾದನೆಯಲ್ಲಿ ‘ಬೊಳ್ಳಿ’ ಎಂಬ ನೆಂಪು ಸಂಚಿಕೆಯನ್ನು ಹೊರತಂದಿದ್ದಾರೆ.

೩. ತುಳುವೆರೆಂಕುಲು, ಬೆಂಗಳೂರು (ರಿ.) (೧೯೮೯)

ಊರು ಬಿಟ್ಟು ಬೆಂಗಳೂರು ಸೇರಿದ ತುಳುವರು ತುಳು ಕೂಟ ಸಂಸ್ಥೆ ಕಟ್ಟಿಕೊಂಡ ಹಾಗೆಯೇ ತುಳುವೆರೆಂಕುಲು ಎನ್ನುವ ಇನ್ನೊಂದು ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಪತ್ರಕರ್ತ ಕವಿ, ಸಾಹಿತಿ ಮಲಾರ್. ಜಯರಾಂ ರೈ ಬರೆದಿರುವ ತುಳು ಹಾಡಿನ ಶೀರ್ಷಿಕೆಯಿಂದ ಪ್ರೇರಣೆಗೊಂಡು ಅದೇ ಹೆಸರನ್ನು ತಮ್ಮ ಸಂಘಟನೆಗೂ ಆಯ್ಕೆ ಮಾಡಿಕೊಂಡರು. ೮ ಅಕ್ಟೋಬರ್ ೧೯೮೯ ರಂದು ಎನ್. ರವೀಂದ್ರನಾಥ್ ರೈ ಸಂಚಾಲಕತ್ವದಲ್ಲಿ ಸೇರಿದ ಯುವ ಸಂಘಟನೆಯಲ್ಲಿ ಸಂಸ್ಥೆ ಹುಟ್ಟು ಪಡೆಯಿತು. ವೈ. ಎಸ್. ಹೆಗ್ಡೆ, ಎಂ.ಕೆ. ರವೀಂದ್ರನಾಥ್, ಮಲಾರ್ ಜಯರಾಂ ರೈ, ಮಾಧವ ಕುಲಾಲ್, ಎಂ. ಶಿವರಾಂ ಶೆಟ್ಟಿ, ಪಿ.ಎಸ್. ರೈ, ರವೀಂದ್ರಕುಮಾರ್, ಕೆ.ಎಲ್. ರಮಾನಾಥ್ ಭಟ್, ಕೆ.ಎನ್. ಅಡಿಗ, ವಿಜಯಕುಮಾರ್ ಕುಲಶೇಖರ, ವಾಮನ ಬಂಗೇರ, ಉದಯ ಧರ್ಮಸ್ಥಳ, ಕೆ.ಪಿ. ಪುತ್ತೂರಾಯ, ಬಿ. ಮನ್‌ಮೋಹನ್, ವಾಮನ್ ಸಾಲಿಯಾನ್ ಮೊದಲಾದ ಸಂಘಟಕರು ತುಳುವೆರೆಂಕುಲು ಸಂಸ್ಥೆಗೆ ನಿರ್ದಿಷ್ಟ ಧ್ಯೇಯೋದ್ದೇಶಗಳನ್ನು ಮುಂದಿಟ್ಟುಕೊಂಡು ಕಾರ್ಯಸಾಧನೆಗಳಿಗೆ ಕಾರಣಕರ್ತರೆನಿಸಿಕೊಂಡಿದ್ದಾರೆ. ಬಲಿಯೇಂದ್ರ ಪರ್ಬ, ‘ಬಲಿಯೇಂದ್ರ ಪುರಸ್ಕಾರ’ದಂತಹ ರಚನಾತ್ಮಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ತುಳು ಭಾಷೆ, ಸಾಹಿತ್ಯ ಸಂಸ್ಕೃತಿ ಕಲೆ ಸಂಬಂಧವಾದ ಕಾರ್ಯಕ್ರಮಗಳನ್ನೂ ರಾಜಧಾನಿ ಬೆಂಗಳೂರಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ವೈ.ಎಸ್. ಹೆಗ್ಡೆ ಅಧ್ಯಕ್ಷರಾಗಿದ್ದ ಕಾಲದಲ್ಲಿ ತುಳುವೆರೆಂಕುಲು ಬೆಂಗಳೂರು ೧೯೯೨ರಲ್ಲಿ ಬೆಂಗಳೂರಿನಲ್ಲಿ  ಒಂದು ದಿನದ ತುಳುವೆರೆ ಸಮ್ಮೇಳನ ನಡೆಸಿದೆ. ಇದರ ನೆನಪಿಗೆ ‘ತುಳುಸಿರಿ’ ವಿಶೇಷ ಸಂಚಿಕೆಯನ್ನು ಪ್ರಕಟಿಸಿದೆ. ಅದೇ ರೀತಿ ದಶಮಾನೋತ್ಸವ ಸಮಾರಂಭ ಮತ್ತು ಬಲಿಯೇಂದ್ರ ಪರ್ಬದ ಸಂದರ್ಭದಲ್ಲಿ ಮನಮೋಹನ್ ಬೋಳಾರ (೨೦೦೧) ಅವರ ಸಂಪಾದನೆಯಲ್ಲಿ ‘ತುಳುಶಕ್ತಿ’ ಸ್ಮರಣಸಂಚಿಕೆಯನ್ನು ಪ್ರಕಟಿಸಿದೆ.

೪. ತುಳು ಮಿತ್ರೆರ್ (೧೯೯೮)

ಬೆಂಗಳೂರು ತುಳುಕೂಟ, ತುಳುವೆರೆಂಕುಲು, ತುಳು ಚಾವಡಿ ಇವುಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಮಿಜಾರು ಕನಕಬೆಟ್ಟು ರವೀಂದ್ರನಾಥ (ರವಿಕಿರಣ) ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡ ತುಳು ಮಿತ್ರೆರ್ ಸಂಸ್ಥೆ ಹಲವು ಸಕ್ರಿಯ ಸಾಹಸ ಕಾರ್ಯಗಳನ್ನು ನಡೆಸಿದೆ. ೧೯೯೭ರ ಸಪ್ತಂಬರ ತಿಂಗಳಲ್ಲಿ ಮಂಗಳೂರು ಪುರಭವನದ ಎದುರು ಮತ್ತು ೧೯೯೮ರ ಜನವರಿಯಲ್ಲಿ ಬೆಂಗಳೂರು ಗಾಂಧಿ ಪ್ರತಿಮೆಯ ಎದುರು ತುಳು ಭಾಷೆಗೆ ಭಾರತದ ಸಂವಿಧಾನದ ಎಂಟನೆಯ ಪರಿಚ್ಛೇದಲ್ಲಿ ಸ್ಥಾನ ಸಿಗಬೇಕೆಂಬ ಉದ್ದೇಶದಿಂದ ಧರಣಿ ಸತ್ಯಾಗ್ರಹ ಚಳುವಳಿಯನ್ನೂ, ವಿಚಾರ ಸಂಕಿರಣಗಳನ್ನೂ ಸಂಸ್ಥೆ ಸಂಘಟಿಸಿದೆ. ೧೫ ನವೆಂಬರ್ ೧೯೯೮ರಲ್ಲಿ ಮಂಜೇಶ್ವರದಿಂದ ತಲಪಾಡಿಯವರೆಗೆ ವಾಹನ ಜಾಥಾ ನಡೆಸಿ ಕರ್ನಾಟಕದಲ್ಲಿ ಕಾಸರಗೋಡು ವಿಲೀನಗೊಳ್ಳಲು ಹೋರಾಟ ನಡೆಸಿದೆ. ತುಳುವಿನ ಅಭಿವೃದ್ಧಿಗಾಗಿ ತುಳು ಸಂಘಟನೆಗಳು ನಡೆಸುವ ಕಾರ್ಯಕ್ರಮಗಳಿಗೆ ಪ್ರಾಯೋಜನೆ ನೀಡಿ ಸಹಕರಿಸುವುದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮೊದಲಾದ ತುಳುವರ ಸಂಘಟನೆಗಳಲ್ಲಿ ದತ್ತಿ ನಿಧಿ ಸ್ಥಾಪನೆ (ಈಗಾಗಲೇ ೨೦೦೫ರಲ್ಲಿ ಎಂ.ಕೆ. ವಿಜಯಲಕ್ಷ್ಮಿ ಅವರ ಹೆಸರಲ್ಲಿ ತುಳುನಾಡು, ಭಾಷೆಗೆ ಜೈನರ ಕೊಡುಗೆ ವಿಷಯದಲ್ಲಿ ದತ್ತಿನಿಧಿ ಇಟ್ಟಿರುತ್ತಾರೆ.) ಮೊದಲಾದುವು ಈ ಸಂಘಟನೆಯ ಪ್ರಧಾನ ಉದ್ದೇಶಗಳು. ಇದರ ಸ್ಥಾಪಕ ಅಧ್ಯಕ್ಷರಾಗಿರುವ ಎಂ.ಕೆ. ರವೀಂದ್ರನಾಥ (ರವಿಕಿರಣ) ೨೦೦೬ರಲ್ಲಿ ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಮಂದಾರ ರಾಮಾಯಣ ಗಮಕ ವಾಚನ ಮತ್ತು ವಿಚಾರಗೋಷ್ಠಿ ನಡೆಸಿರುತ್ತಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಇಮಿ ಸಹಯೋಗದಲ್ಲಿ ಬೆಂಗಳೂರು, ಉಡುಪಿ, ಕಾರ್ಕಳ, ಸುಳ್ಯ, ಕುಡುಪು, ಕಿನ್ನಿಗೋಳಿ, ಮೂಡಬಿದರೆ ಮೊದಲಾದ ಕಡೆಗಳಲ್ಲಿಯೂ ಮಂದಾರ ರಾಮಾಯಣದ ಕುರಿತ ವಿಚಾರ ಸಂಕಿರಣಗಳಿಗೆ ಪ್ರಾಯೋಜನೆ ನೀಡಿರುತ್ತಾರೆ. ಮಂದಾರ ಕೇಶವ ಭಟ್ಟರ ಕುರಿತು ಪುಸ್ತಕ ರಚನೆಗಾಗಿ ಮತ್ತು ಪ್ರಕಟಣೆಗಾಗಿ ಕಾಂತಾವರ ಕನ್ನಡ ಸಂಘಕ್ಕೆ ಆರ್ಥಿಕ ನೆರವು ನೀಡಿರುತ್ತಾರೆ.

೫. ತುಳುವ ಚಾವಡಿ, ಬೆಂಗಳೂರು (೧೯೯೯)

ಇದು ಮುಖ್ಯವಾಗಿ ತುಳುವರನ್ನು ಒಟ್ಟುಗೂಡಿಸುವ ಯುವ ಸಂಘಟನೆಯಾಗಿದ್ದು ಪ್ರಕಾಶ್ ಆಳ್ವ ಇದರ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಎಂ.ಕೆ. ರವೀಂದ್ರನಾಥ, ವಿಜಯಕುಮಾರ್ ಕುಲಶೇಖರ ಮೊದಲಾದವರು ಇದರ ಸಲಹಾ ಮಂಡಳಿ ಸದಸ್ಯರಾಗಿದ್ದಾರೆ. ತುಳುವರ ಹಬ್ಬಗಳ ಆಚರಣೆ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾಂದರ್ಭಿಕವಾಗಿ ಇವರು ಆಚರಿಸುತ್ತಿರುತ್ತಾರೆ.

೬. ಕರ್ನಾಟಕ ಕರಾವಳಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು

ಸೌಂದರ್ಯ ರಮೇಶ್ ಇದರ ಗೌರವಾಧ್ಯಕ್ಷರಾಗಿದ್ದಾರೆ. ಸಾರ್ವಜನಿಕ ಕರಾವಳಿ ಉತ್ಸವವನ್ನು ದೊಡ್ಡ ಮಟ್ಟದಲ್ಲಿ ನಡೆಸುತ್ತಿರುತ್ತಾರೆ.

೭. ತುಳುನಾಡ ಸಂಘ ಬರೋಡ (೧೯೮೭)

ಬಾ. ಸಾಮಗರ ಪ್ರೇರಣೆಯಿಂದ ಎಸ್ಕೆ ಹಳೆಯಂಗಡಿ, ದಯಾನಂದ ಬೋಂಟ್ರ, ರಾಜಕುಮಾರ್ ಸಾಲ್ಯಾನ್ ತಲ್ಪಾಡಿ, ವಾಸು ಪೂಜಾರಿ ಮೊದಲಾದ ಉತ್ಸಾಹಿಗಳ ದೃಢ ಸಂಕಲ್ಪದಿಂದ ಉದ್ಯಮಿ ಜಯರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ೯ ಡಿಸೆಂಬರ್ ೧೯೮೭ರಿಂದ ಅಸ್ತಿತ್ವಕ್ಕೆ ಬಂದಿರುವ ಬರೋಡ ತುಳು ಸಂಘ ಗಮನ ಸೆಳೆಯುವ ಗುಣಮಟ್ಟದ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬರುತ್ತಿದೆ. ತುಳು ಸಂಘಟನೆಗಳಲ್ಲಿ ತುಳುಭವನ ನಿರ್ಮಾಣದಂತಹ ಮಹತ್ವದ ಯೋಜನೆಯನ್ನು ಈ ಸಂಘ ಹಾಕಿಕೊಂಡಿತ್ತು. ತುಳುವರ ಡೈರೆಕ್ಟರಿ ಪ್ರಕಟಣೆ, ಯಕ್ಷಗಾನ, ಹರಿಕತೆ, ನಾಟಕ, ಗಣ್ಯರಿಗೆ ಸನ್ಮಾನ, ಸಾಂಸ್ಕೃತಿಕ ಕೂಟ, ಪಿಕ್ನಿಕ್ ಸ್ನೇಹಕೂಟ ಮೊದಲಾದವುಗಳನ್ನು ನಡೆಸುತ್ತಾ ಬರುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ತಮ ತುಳು ಸಾಹಿತ್ಯ ಕೃತಿಗಳಿಗೂ ಬಹುಮಾನ ನೀಡಬೇಕು. ಭಾಷೆ ಹಾಗೂ ಸಂಸ್ಕೃತಿಯ ಬೆಳವಣಿಗೆಗಾಗಿ ಕರ್ನಾಟಕ ಸರಕಾರ ಬೇರೆಯೇ ಒಂದು ವಿಭಾಗ ಸ್ಥಾಪನೆ ಮಾಡಬೇಕು, ಆಕಾಶವಾಣಿ, ದೂರದರ್ಶನಗಳಲ್ಲಿ ತುಳು ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂಬುದಾಗಿ ಸರಕಾರಕ್ಕೆ ಮನವಿ ನೀಡುವಂತಹ ಕಾರ್ಯಕ್ರಮಗಳನ್ನು ನಡೆಸಿದೆ.