೮. ತುಳುನಾಡ ಸಂಘ ಮೀರಜ್ – ಸಾಂಗ್ಲಿ (೧೯೮೭)

ಆರಂಭದಲ್ಲಿ ಮಿರಜ್ ಹೋಟೇಲ್ ಕಿರಣ್ ಸಭಾಗೃಹದಲ್ಲಿ ಸಮಾಜ ಸೇವಾ ಮತ್ತು ಸಾಂಸ್ಕೃತಿಕ ಸಮಾರಂಭ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಾ ಮುಂದೆ ಸಾಂಗ್ಲಿ ಮಾಧವನಗರ ಮತ್ತು ಜೈಸಿಂಗ್‌ಪುರ ಪರಿಸರದ ತುಳುವರನ್ನು ಸದಸ್ಯನ್ನಾಗಿ ಸೇರಿಸಿಕೊಂಡು ಕಾರ್ಯ ವಿಸ್ತರಣೆಗೊಳಿಸಿತು. ಈ ಸಂಘದ ಸ್ಥಾಪನೆಗೆ ಮೂಲ ಕಾರಣಕರ್ತ ಶ್ರೀನಿವಾಸ ಮಂಕುಡೆಯವರು. ಗೆಳೆಯ ಸೀತಾರಾಮ್ ಭಟ್, ಶ್ರೀನಿವಾಸ ಭಟ್ ಜೆ., ಗುಂಡಿಬೈಲು ಸದಾಶಿವ ಭಟ್ ಮೊದಲಾದವರ ಜೊತೆ ಸಂಘದ ಧ್ಯೇಯ ಧೋರಣೆಗಳ ಕುರಿತು ಸಮಾಲೋಚಿಸಿ ಕಾರ್ಯಪ್ರವೃತ್ತರಾದರು.

ಇದರ ಮೊದಲ ಅಧ್ಯಕ್ಷರಾಗಿ ಗುಂಡಿಬೈಲು ಸದಾಶಿವ ಭಟ್ಟರು ಆಯ್ಕೆಗೊಂಡು ದೇಶದೆಲ್ಲೆಡೆ ಅಸ್ತಿತ್ವದಲ್ಲಿರುವ ತುಳು ಸಂಘಟನೆಗಳ ಜೊತೆ ಸಂಪರ್ಕ ಬೆಳೆಸಿ ತುಳುನಾಡ್ ಸಂಘವನ್ನು ಬಲಪಡಿಸಿದರು. ದೇಜು ಪೂಜಾರಿ, ಕರುಣಾಕರ ಶೆಟ್ಟಿ, ಮೂಲ್ಕಿ ರಾಮಚಂದ್ರ ಸಾಲಿಯಾನ್, ಸುರೇಶ ರೈ, ಸಂಜೀವ ದೇವಾಡಿಗ, ಸದಾಶಿವ ಶೆಟ್ಟಿ, ಅನಂತ ಕೃಷ್ಣಾಚಾರ್ಯ, ನಾಗರಾಜಾಚಾರ್ಯ, ಗೋವಿಂದಾಚಾರ್ಯ, ಭಾಸ್ಕರ ಕೆದಿಲಾಯ ಮೊದಲಾದವರ ಸಮಯೋಚಿತ ಸಕಾಲಿಕ ಬೆಂಬಲ ಈ ಸಂಘಕ್ಕೆ ಸಿಕ್ಕಿದೆ.

ಪಿ.ಆರ್.ನಾಯಕ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ತುಳುನಾಡ ಭವನ ಕೇಂದ್ರದ ಶಂಕು ಸ್ಥಾಪನೆ ನಡೆಯಿತು. ಆನಂದ ರಾಯರ ಪ್ರಾಯೋಜಕತ್ವದಲ್ಲಿ ವೇದವ್ಯಾಸಾಚಾರ್ಯರ ಅಧ್ಯಕ್ಷತೆಯಲ್ಲಿ ಕಟ್ಟಡ ಸಮಿತಿ ರಚನೆಯಾಯಿತು. ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸ ಜೆ. ಭಟ್ ಆಯ್ಕೆಗೊಂಡರು. ೧೯೯೪-೯೬ರ ಅವಧಿಗೆ ಗಣೇಶ ವಿ. ರೈ ಅಧ್ಯಕ್ಷರಾಗಿದ್ದರು.

ದಿವಾಕರ ಶೆಟ್ಟಿ ಅಧ್ಯಕ್ಷರಾಗಿದ್ದ ಹಾಗೂ ಶ್ರೀನಿವಾಸ ಮಂಕುಡೆಯವರು ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತುಳುನಾಡ ಸಂಘದ ಕಟ್ಟಡ ನಿರ್ಮಾಣದ ಕನಸು ಸಾಕಾರಗೊಂಡಿತು. ಈ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ತುಳುಭಾರತಿ ಸ್ಮರಣ ಸಂಚಿಕೆಗಳು ಈ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ತುಳುಭಾರತಿ ಸ್ಮರಣ ಸಂಚಿಕೆಗಳು ಶ್ರೀನಿವಾಸ ಮಂಕುಡೆಯವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿತು. ೧೦ ಜೂನ್ ೨೦೦೦ದಲ್ಲಿ ‘ಕರ್ನಾಟಕ ತುಳುನಾಡ ಸಂಘ’ ಸಾಂಗ್ಲಿ – ಮೀರಜ್ ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ತಲೆಯೆತ್ತಿ ನಿಂತಿತು. ೨೧ ಮಾರ್ಚ್‌೨೦೦೪ರಲ್ಲಿ ಕರ್ನಾಟಕ ತುಳುನಾಡ ಸಂಸ್ಕೃತಿ ಭಾರತದಲ್ಲಿ ನಾಡು ನುಡಿಗೆ ಸೇವೆಗೈದ ನಲುವತ್ತು ಮಂದಿ ಹಿರಿಯ ಕಿರಿಯ ಗಣ್ಯ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ನಡೆಯಿತು. ಇದೇ ಸಂದರ್ಭದಲ್ಲಿ ‘ತುಳುನಾಡ ಬೊಳ್ಳಿ’ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಯಿತು.

ಜೆ. ಶ್ರೀನಿವಾಸ ಭಟ್ಟರು ಇದರ ಸ್ಥಾಪಕಾಧ್ಯಕ್ಷರು ಮತ್ತು ಗೌರವಾಧ್ಯಕ್ಷರು ಹಾಗೂ ತುಳುನಾಡ ಸಾಂಸ್ಕೃತಿಕ ಭವನದ ಅಧ್ಯಕ್ಷರು. ಮೀರಜ್‌ನಲ್ಲಿ ೨೧ ಮಾರ್ಚ್‌೧೯೮೭ರಲ್ಲಿ ದೀಪಾವಳಿಯ ಪಾಡ್ದನದಿಂದ ಸ್ಥಾಪನೆಗೊಂಡ ತುಳುನಾಡ ಸಂಘ ಸಾಂಗ್ಲಿ, ಮಾಧವನಗರ, ಜೈಸಿಂಗ್ ನಗರಗಳವರೆಗೆ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಈ ಸಂಘ ಸುಮಾರು ಒಂದು ಸಾವಿರದಷ್ಟು ಪುರಸ್ಕಾರವನ್ನು ಪಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ನೆರವು, ರಕ್ತದಾನ ಶಿಬಿರ, ವಿದ್ಯಾನಿಧಿ, ಅನಾಥ ಶವಸಂಸ್ಕಾರ, ಪ್ರತಿಭಾ ಪುರಸ್ಕಾರ, ಕ್ರೀಡಾಕೂಟ ಮೊದಲಾದವುಗಳನ್ನು ನಡೆಸುತ್ತಿದೆ.

ಮೀರಜ್ ತುಳುನಾಡ ಸಂಘ ಮಾಡಿದ ಬಹಳ ದೊಡ್ಡ ಕೆಲಸ ಎಂದರೆ ‘ತುಳುನಾಡ ಸಾಂಸ್ಕೃತಿಕ ಭವನ’ ನಿರ್ಮಾಣ ಯೋಜನೆ ಹಾಕಿಕೊಂಡು ಅದನ್ನು ಒಂದು ಅಗತ್ಯದ ಮಹಾಕಾರ್ಯ ಎಂಬ ರೀತಿಯಲ್ಲಿ ಮಾಡಿ ಮುಗಿಸಿದುದು. ಇದರ ಯೋಜನೆಗೆ ಸಂಘದ ಸದಸ್ಯರು ದಿನಾ ಪಿಗ್ಮಿ ಖಾತೆಯ ಮೂಲಕ ಹಣ ತುಂಬಿ ಕಾರ್ಯ ಪೂರ್ತಿಗೆ ಪಣತೊಟ್ಟು ಕೆಲಸ ಮಾಡಿದ್ದಾರೆ.

‘ಅಖಿಲ ಭಾರತ ತುಳು ಒಕ್ಕೂಟ’ದ ಸ್ಥಾಪಕ ಸದಸ್ಯತ್ವ ಹಾಗೂ ವಿಶ್ವ ತುಳು ಸಮ್ಮೇಳನದ ಪ್ರಾಯೋಜಕತ್ವ ಪಡೆದಿರುವ ಸಂಘದ ಪ್ರೇರಣಾ ಶಕ್ತಿಯಾಗಿ ಶ್ರೀನಿವಾಸ ಜೆ. ಭಟ್, ವ್ಯಾಸರಾವ್ ಆಚಾರ್ಯ, ಪಿ.ಆರ್. ನಾಯಕ್, ಶಂಕರ ಶೆಟ್ಟಿ, ಸದಾಶಿವ ಶೆಟ್ಟಿ, ಭಾಸ್ಕರ ಕೆದ್ಲಾಯ, ಅಶ್ವಿನಿ ಕೃಷ್ಣ ಭಟ್, ದೇಜು ಪೂಜಾರಿ, ಕೇಶವ ರಾವ್ ಮೂಲ್ಕಿ, ಗಣೇಶ ರೈ, ಸುಂದರ ಶೆಟ್ಟಿ, ಬಾಲಕೃಷ್ಣ ಆಚಾರ್ಯ, ಸೀತಾರಾಮ ಭಟ್, ಶ್ರೀನಿವಾಸ ಮಂಕುಡೆ, ದಿವಾಕರ ಎಸ್. ಶೆಟ್ಟಿ ಮೊದಲಾದವರು ಈಗಿನ ಅಧ್ಯಕ್ಷ ಗಣೇಶ ವಿ. ರೈ ಅವರೊಂದಿಗೆ ತುಳುನಾಡ ಸಂಘದ ಬೆಳವಣಿಗೆಗಾಗಿ ಉತ್ಸಾಹದಿಂದ ಸೇವೆ ಸಲ್ಲಿಸುತ್ತಿದ್ದಾರೆ.

೯. ತುಳು ಸೇವಾ ಸಂಘ ನಾಡಿಕ (೧೯೮೮)

ವೆಂಕಟಾಚಲಯ್ಯ, ಬಿ.ವಿ. ಕುಡ್ವ ಕೃಷ್ಣಾನಂದ ಶೆಟ್ಟಿ, ಅಮ್ಮೆಂಬಳ ಬಾಳಪ್ಪ ಮೊದಲಾದವರು ‘ಮಂಗಳಾ’ ಸ್ಮರಣ ಸಂಚಿಕೆ ಬಿಡುಗಡೆ ಮೂಲಕ ತುಳು ಸೇವಾ ಸಂಘ ನಾಸಿಕದ ಉದಯಕ್ಕೆ ಮೊದಲ ಸೇಸೆ ನುಡಿ ಹಾಕಿದವರು. ಮಹಾರಾಷ್ಟ್ರದಲ್ಲಿ ನೆಲೆಸಿರುವ ತುಳುವರ ಸಂಘಟನೆಯಿದು. ಸಾಂಸ್ಕೃತಿಕವಾಗಿ ವಿವಿಧ ಮನೋರಂಜನೆ, ತುಳು ನಾಟಕ, ಯಕ್ಷಗಾನ, ಕ್ರೀಡಾಕೂಟ, ಹರಿಕತೆ, ಬಾಲಪ್ರತಿಭಾ ಪ್ರದರ್ಶನ, ಪ್ರವಾಸ ಕಾರ್ಯ, ಸ್ನೇಹ ಸಮ್ಮೇಳನಗಳನ್ನೂ ನಡೆಸಿ ಯಶಸ್ವಿ ಮನ್ನಣೆ ಪಡೆದಿದೆ.

‘ತುಳು ಭವನ’ ಸ್ವಂತ ಕಟ್ಟಡಕ್ಕೆ, ಈಗಾಗಲೇ ಜಾಗ ಖರೀದಿಸಿದ ದೂರದರ್ಶಿತ್ವ ಸಂಘದ್ದಾಗಿದೆ. ಭೂಕಂಪ ಪೀಡಿತರಿಗೆ ರೂ. ೧೫, ೧೫೧/- ನ್ನು ನೀಡಿ ಸಮಾಜಸೇವೆಯಲ್ಲಿ ಕೂಡಾ ಪಾದಾರ್ಪಣೆ ಮಾಡಿರುವುದು ಪ್ರಶಂಸನೀಯ.

ಪಿ.ಟಿ.ರೈಯವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಸಂಘ ಉಮೇಶ ಮೂಲ್ಕಿಯವರ ಕಾರ್ಯದರ್ಶಿತ್ವದಲ್ಲಿ ಚಿಗುರಿ ಬೆಳೆಯಿತು. ಸಂಸ್ಥೆಯ ಏಳಿಗೆಗೆ ಈಗಿನ ಅಧ್ಯಕ್ಷ ಸಂಜೀವ ಶೆಟ್ಟಿ, ಕ್ಯಾಪ್ಟನ್ ಸದಾಶಿವ, ಕೆ.ಡಿ. ಆಳ್ವ, ಅಮೀನ್, ಸಾಲ್ಯಾನ್, ಮುಂಜಿತ್ತಾಯ, ಬಂಗೇರ, ಲಿಂಗಪ್ಪ ಶೆಟ್ಟಿ, ಜನಾರ್ದನ ಪೂಜಾರಿ ಪ್ರಕಾಶ ಅಚ್ಚಣ್ಣ ಮೊದಲಾದವರು ಸಲ್ಲಿಸುತ್ತಿರುವ ಸೇವೆ ಅನನ್ಯವಾದದ್ದು.

ಅಖಿಲ ಭಾರತ ತುಳು ಒಕ್ಕೂಟದ ಸದಸ್ಯತ್ವ ಪಡೆದಿರುವ ನಾಸಿಕ ತುಳು ಸಂಘ ಇಲ್ಲಿ ನೆಲೆಸಿರುವ ತುಳುವರ ಆಶಾಕಿರಣವಾಗಿದೆ.

೧೦. ತುಳುವ ಸಮಾಜಂ ಮದ್ರಾಸು (೧೯೮೩)

ಮದ್ರಾಸು ಮಹಾನಗರದಲ್ಲಿ ತುಳುವರನ್ನು ಒಗ್ಗೂಡಿಸಿ ತುಳುವ ಸಮಾಜಂ, ತುಳು ಭಾಷೆ ಸಂಸ್ಕೃತಿಯ ಪ್ರಚಾರ ಸಾಕಷ್ಟು ನಡೆಸಿದೆ. ಪ್ರಭಾಕರ ಶೆಟ್ಟಿ ಮೊದಲಾದ ಹುಮ್ಮನಸ್ಸಿನ ಕಾರ್ಯಕರ್ತರೊಂದಿಗೆ ತುಳು ಎಚ್ಚರ ಅಭಿರುಚಿ ಮೂಡಿಸುವ ಕೆಲಸ ಸಾಕಷ್ಟು ನಡೆಸಿದ್ದಾರೆ.

ಮದ್ರಾಸ್ ತುಳು ಸಮಾಜಂ (೨೩ ಅಕ್ಟೋಬರ್ ೧೯೮೪) ಹುಟ್ಟಿಕೊಂಡು ಒಂದು ವರ್ಷ ಪೂರೈಸಿದಾಗ ನಡೆಸಿದ ಪ್ರಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಕಡೀರ್’ (ಮೊದಲ ಕುಡಿ) ಎನ್ನುವ ಸ್ಮರಣ ಸಂಚಿಕೆಯನ್ನು ಹೊರತಂದಿರುತ್ತದೆ. ಇದರಲ್ಲಿ ಎ. ಮಿತ್ರಸೇನ ಶೆಟ್ಟಿ ಆಳದಂಗಡಿ ಬರೆದಿರುವ ‘ತುಳುನು ಮೆರೆಪಾಲೆ’ (ತುಳುವನ್ನು ಮೆರೆಯಿಸಿ) ಎನ್ನುವ ಲೇಖನದಲ್ಲಿ ಸಂಘಟನಾ ಶಕ್ತಿಯ ಬಗೆಗೆ ತಿಳಿಸುತ್ತ ಮದ್ರಾಸು ನಗರದಲ್ಲಿ ಬಹುಕಾಲದ ಹಿಂದಿನಿಂದಲೂ ತುಳುವರು ವೃತ್ತಿ ಕಾರಣದಿಂದ ನೆಲೆಸಿರುವರಾದರೂ ಒಟ್ಟು ಸೇರಿದ ಸಂದರ್ಭವೆಂದರೆ ೨ ಅಕ್ಟೋಬರ್ ೧೯೮೪ ರಂದು ಅವರು ಪ್ರದರ್ಶಿಸಿದ ‘ಕಾವೇರಿ’ ಎನ್ನುವ ತುಳುನಾಟಕದ ಮೂಲಕ. ಹಾಗೆಯೇ ಒಂದು ವರ್ಷದ ಬಳಿಕ ವಿಜಯ ದಶಮಿಯಂದು ಪ್ರದರ್ಶಿಸಿದ ಮೂಡಾಯಿಡ್ದ್ ಪಡ್ಡಾಯಿ, ಬದ್ಕೆರೆ ಬುಡ್ಲೆ, ಮುಡಿಪ್ಪಂದಿ ಪೂ, ಧರ್ಮಕ್ಕೆ ಬುಡಂದ್ (ಧರ್ಮ ಕೈ ಬಿಡದು) ನಾಟಕಗಳೂ ಅವರನ್ನೆಲ್ಲ ಮತ್ತೆ ಒಟ್ಟು ಸೇರುವಂತೆ ಮಾಡಿದೆ ನೆನಪಿಸಿಕೊಂಡಿದ್ದಾರೆ. ಇದೇ ‘ಕಡೀರ್’ನಲ್ಲಿ ಶ್ರೀಮತಿ ಕೆ.ಪಿ. ರವಿಕಲಾ ದಾಮೋದರ, ಬಿ.ಜಿ. ತಂತ್ರಿ ಎಡಪದವು, ಎಸ್.ಪಿ. ಜೈನ್, ಕೆ.ವಿ.ಜೈನ್ ಮೊದಲಾದವರ ಕವನ, ಲೇಖನಗಳು ಇವೆ. ಎಲ್ಲಕ್ಕಿಂತಲೂ ಮೂಡುಬಿದರೆ ಸಾವಿರ ಕಂಬದ ಬಸದಿ, ಕದ್ರಿ, ಕಾರಿಂಜೆ, ಕಟೀಲು, ಬಪ್ಪನಾಡು, ಮಂಗಳಾದೇವಿ, ಪೊಳಲಿ, ಅಂಬಲಪಾಡಿ, ಕೊಲ್ಲೂರು, ಬಾರ್ಕೂರು, ಉಡುಪಿ, ಕುಡುಪು, ಕಾಂತೇಶ್ವರ ದೇವಸ್ಥಾನಗಳ ನೆರಳು ಚಿತ್ರಗಳು ಗಮನ ಸೆಳೆಯುತ್ತವೆ.

ಬಿ.ಜಿ. ತಂತ್ರಿ (ಸಂಚಾಲಕರು), ಎ. ಮಿತ್ರಸೇನ ಶೆಟ್ಟಿ (ಖಜಾಂಜಿ), ಪಿ. ಗಂಗಾಧರ ಶೆಟ್ಟಿಗಾರ್ (ಲೆಕ್ಕ ಪರಿಶೋಧಕ) ಮೊದಲಾದವರು ಮದ್ರಾಸು ತುಳು ಸಮಾಜದ ಮೊದಲ ಪದಾಧಿಕಾರಿಗಳಾಗಿದ್ದರು. ದೆಹಲಿಯ ‘ತುಳುವೆರ್’ ಪತ್ರಿಕೆಯ ಸಂಪಾದಕ ಬಾ. ಸಾಮಗರು ಈ ವಾರ್ಷಿಕೋತ್ಸವ ನಾಟಕವೊಂದಕ್ಕೆ ಪ್ರಾಯೋಜನೆ ನೀಡಿರುತ್ತಾರೆ.

೧೧. ತುಳುನಾಡ್ ಸಂಘ (ರಿ.) ಸೋಲಾಪುರ (೧೯೮೮)

ಕರ್ನಾಟಕ ರಾಜ್ಯದ ಗಡಿ ಪ್ರದೇಶ, ಸೋಲಾಪುರ ಮಹಾರಾಷ್ಟ್ರದಲ್ಲಿದೆ. ೧೯೮೮ರಲ್ಲಿ ವಜ್ರಕುಮಾರ್ ಧಾರವಾಡ ಇವರಿಂದ ಉದ್ಘಾಟನೆಗೊಂಡಿತು.

ತುಳುನಾಡಿನ ವಿದ್ವಾಂಸರು, ಕಲಾವಿದರಿಂದ ಹರಿಕತೆ, ಯಕ್ಷಗಾನ ಪ್ರವಚನ, ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಲ್ಲದೆ, ಪ್ರತೀ ವರ್ಷ ವಾರ್ಷಿಕೋತ್ಸವ, ವಿವಿಧ ಸಾಂಸ್ಕೃತಿಕ ವಿನೋದಾವಳಿ, ಶಾರದಾ ಪೂಜೆ, ಸಂಗೀತ, ಗಾನ, ನಾಟ್ಯ, ಕ್ವಿಜ್ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಸಹಭೋಜನ ಕೂಟಗಳನ್ನು ವ್ಯವಸ್ಥೆಗೊಳಿಸಿ ಕಡಿಮೆ ತುಳುವರಿರುವ ಇಲ್ಲಿ ಒಬ್ಬರನ್ನೊಬ್ಬರು ಆತ್ಮೀಯರನ್ನಾಗಿಸಿದ ಸಾಧನೆ ಸಂಘದ್ದು.

ಅಧ್ಯಕ್ಷರಾಗಿ ವಾಸುದೇವ, ಐತಾಳ್, ಸಂಜೀವ ಮಣಿಯಾಣಿ, ದಿವಾಕರ ಶೆಟ್ಟಿ, ರವಿ ಹೆಗ್ಡೆ, ಕರುಣಾಕರ ಶೆಟ್ಟಿ, ಜೈನ್, ದೇವೀಪ್ರಸಾದ್ ಕಟೀಲ್ ಮೊದಲಾದವರು ಕನ್ನಡ – ಮರಾಠಿ ಪ್ರಭಾವ ಹೆಚ್ಚಿರುವ ಸೋಲಾಪುರದಲ್ಲಿ ತುಳುವರನ್ನು ಸಂಘಟಿಸಿದ ಶ್ರೇಯಸ್ಸಿಗೆ ಅರ್ಹರಾಗಿದ್ದಾರೆನ್ನಬಹುದು.

೧೨. ದೆಹಲಿಯ ತುಳುವೆರ್

ದಿಲ್ಲಿಯಲ್ಲಿ ಪತ್ರಕರ್ತ ಸಾಹಿತಿ ‘ತುಳುವೆರ್’ ಪತ್ರಿಕೆ ಸಂಪಾದಕ ಬಾ. ಸಾಮಗ ದೇಶವಿಡೀ ಸುತ್ತಿ ತುಳುವರಲ್ಲಿ ತುಳು ಭಾಷೆಯ ಬಗ್ಗೆ ಅಭಿಮಾನ ಎಚ್ಚರನ್ನು ಮೂಡಿಸಿದ ಅಪೂರ್ವ ವ್ಯಕ್ತಿ ಎಂಬುದಕ್ಕೆ ಎರಡು ಮಾತಿಲ್ಲ. ಮುಂಬೈ, ಮದರಾಸು, ಹೈದರಾಬಾದ್, ದಿಲ್ಲಿ, ಗೋವಾದಲ್ಲಿ ಅಖಿಲ ಭಾರತ ಮಟ್ಟದ ತುಳು ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ‘ಏಕವ್ಯಕ್ತಿ ಸಂಘ’ ವೆನಿಸಿ ಯಶಸ್ವಿ ಪ್ರಯತ್ನ ನಡೆಸಿದ್ದಾರೆ. ರಾಜಧಾನಿ ದಿಲ್ಲಿಯಲ್ಲಿ ತುಳು ಭಾಷಾಭಿವೃದ್ಧಿ ಗೋಷ್ಠಿ, ತುಳು ಸಿನೆಮಾ, ಯಕ್ಷಗಾನ ಏರ್ಪಡಿಸಿ ದೂರದರ್ಶನ, ಆಕಾಶವಾಣಿಯಲ್ಲಿ ಪ್ರಸಾರಕ್ಕೆ ಒತ್ತಾಯ, ಕೊಂಕಣ ರೈಲು ಪ್ರಾರಂಭಕ್ಕೆ ಹೋರಾಟ ನಡೆಸಿ ತುಳುವರ ಅಭಿನಂದನೆಗೆ ಕಾರಣರಾಗಿದ್ದಾರೆ.

ಹೈದರಾಬಾದ್ ಗೋವಾದಲ್ಲೂ ಸಾಕಷ್ಟು ತುಳುವರಿದ್ದಾರೆ. ಇಲ್ಲಿಯೂ ದೇಶದ ಮೂಲೆ ಮೂಲೆಗಳಿಂದ ಆಮಂತ್ರಿತ ವಿದ್ವಾಂಸ ಗಣ್ಯರನ್ನು ಕರೆಸಿ ತುಳು ಸಮ್ಮೇಳನ ವ್ಯವಸ್ಥೆಗೊಳಿಸಿ ಭಾಷೆಗೊಂದು ಘನಸ್ತಿಕೆಯನ್ನು ಪುನರುಜ್ಜೀವನವನ್ನು ತಂದುಕೊಟ್ಟರೂ ಒಂದು ವೇದಿಕೆ ಸಂಸ್ಥೆಯಡಿ ತುಳುವರನ್ನು ಒಗ್ಗೂಡಿಸುವ ಸಂಘಟನಾತ್ಮಕ ಬೆಳವಣಿಗೆಯ ಹೊಸ ಸಾಧ್ಯತೆಯನ್ನು ಬಾ. ಸಾಮಗರು ತೋರಿಸಿಕೊಟ್ಟಿದ್ದಾರೆ.

೧೩. ಪುಣೆ ತುಳುಕೂಟ (೧೯೯೮)

ಪುಣೆ ತುಳುಕೂಟ ಇಂದು ಅದರ ಅಧ್ಯಕ್ಷರಾದ ಜಯ ಕೆ. ಶೆಟ್ಟಿ ಹಾಗೂ ಮಹಿಳಾಧ್ಯಕ್ಷೆಯಾದ ಶೋಭಾ ಶೆಟ್ಟಿ ಅವರನ್ನೊಳಗೊಂಡ ಸಮಿತಿಯಲ್ಲಿ ಇತ್ತೀಚೆಗೆ ೯ನೆಯ ವಾರ್ಷಿಕೋತ್ಸವವನ್ನು ಆಚರಿಸಿರುತ್ತದೆ.

೧೪. ದೆಹಲಿಯಲ್ಲಿ ತುಳು ಸಂಘಟನೆ (೨೦೦೨)/ತುಳುನಾಡು ಅಭಿವೃದ್ಧಿ ವೇದಿಕೆ

ಸುಮಾರು ಮೂವತ್ತೈದು ವರ್ಷಗಳ ಹಿಂದೆ ಸೌತ್ ಕೆನರಾ ಕ್ಲಬ್, ದೆಹಲಿ ಬಂಟರ ಸಂಘ ಹಾಗೂ ಇತರ ಎಲ್ಲಾ ವರ್ಗದ ತುಳುವರು ಸೇರಿಕೊಂಡು ದೆಹಲಿಯಲ್ಲಿ ಕಾರ್ಯಕ್ರಮ ನಡೆಸುತ್ತಿದ್ದರು. ಯಕ್ಷಗಾನ, ಬಯಲಾಟ, ಕೋಲ, ತುಳು ನಾಟಕ, ಸಿನೇಮಾ ಪ್ರದರ್ಶನ ಹಾಗೂ ಊರಿನ ತಿಂಡಿ ತಿನಸುಗಳ ತಯಾರಿ ಮತ್ತು ಭೋಜನ ಕೂಟ ಮೊದಲಾದ ತುಳುನಾಡ ಬದುಕಿಗೆ ಸಂಬಂಧ ಪಟ್ಟ ಹಾಗೆ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅಲ್ಲೆಲ್ಲ ಅನೇಕ ತುಳುನಾಡಿನ ಉಡುಪಿ ಹೋಟೇಲುಗಳಿದ್ದವು. ಆದರೆ ತುಳು ಭಾಷೆಯ ಕುರಿತ ಬೆಳವಣಿಗೆಗೆ ಅವಕಾಶವಿರಲಿಲ್ಲ. ಅದಕ್ಕಾಗಿಯೇ ತುಳುನಾಡು ಅಭಿವೃದ್ಧಿ ವೇದಿಕೆಯನ್ನು ರಚಿಸಿಕೊಂಡು ತುಳು ಭಾಷೆಯನ್ನು ಸಂವಿಧಾನ ಎಂಟನೆಯ ಪರಿಚ್ಛೇದಕ್ಕೆ ಸೇರಿಸುವಂತಹ ಕಾರ್ಯಯೋಜನೆಯಲ್ಲಿ ಅದು ತನ್ನನ್ನು ಪ್ರಧಾನವಾಗಿ ತೊಡಗಿಸಿಕೊಂಡಿವೆ. ೧೬, ಫೆಬ್ರವರಿ ೨೦೦೩ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ವಾಮನ ನಂದಾವರ ತುಳು ಅಭಿವೃದ್ಧಿ ವೇದಿಕೆ ಡೆಲ್ಲಿಯ ಅಧ್ಯಕ್ಷ ಎಂ. ವೀರಪ್ಪ, ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಬೆಳ್ಳಾರೆ, ರಾಷ್ಟ್ರೀಯ ಸಮಾವೇಶ ಸಮಿತಿಯ ಅಧ್ಯಕ್ಷ ಐ. ರಾಮ ಮೋಹನ್‌ರಾವ್,  ಕೇಂದ್ರ ಸರಕಾರದ ರಕ್ಷಣಾ ಸಚಿವ ಜಾರ್ಜ್‌ಫೆರ್ನಾಂಡೀಸ್, ಮಾಜಿ ಕೇಂದ್ರ ಸಚಿವ ಧನಂಜಯಕುಮಾರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡೀಸ್ ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಅಡ್ಕಾರ್ ಮಹಾಬಲ ಶೆಟ್ಟಿ, ಕುಡ್ಲ ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ, ದೆಹಲಿ ತುಳುವರ ಮತ್ತು ಕನ್ನಡಿಗರ ಸಂಘಟಕ ಪುರುಷೋತ್ತಮ ಬಿಳಿಮಲೆ ಮತ್ತು ಇತರ ತುಳು ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರೀಯ ಸಮಾವೇಶ ನಡೆಸಿ ಕೇಂದ್ರ ಸರಕಾರಕ್ಕೆ ಮನವಿ ಒಪ್ಪಿಸಲಾಗಿತ್ತು.

ಎಂ. ವೀರಪ್ಪ ಅವರು ತುಳುನಾಡು ಅಭಿವೃದ್ಧಿ ವೇದಿಕೆಯ ಅಧ್ಯಕ್ಷರೂ, ವಸಂತ ಶೆಟ್ಟಿ ಬೆಳ್ಳಾರೆ ಪ್ರಧಾನ ಕಾರ್ಯದರ್ಶಿಯಾಗಿಯೂ, ಐ. ರಾಮಮೋಹನ್ ರಾವ್ ಸಮಾವೇಶ ಸಮಿತಿ ಅಧ್ಯಕ್ಷರೂ ಆಗಿದ್ದರು.

ಇದೀಗ ಈ ವೇದಿಕೆ ಐ. ರಾಮಮೋಹನ್ ಅವರ ಅಧ್ಯಕ್ಷತೆಯಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚಿಸಿಕೊಂಡು ತುಳು ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.

೧೫. ತುಳುಕೂಟ ಭದ್ರಾವತಿ (೨೦೦೩)

ಶಿವಮೊಗ್ಗದ ಭದ್ರಾವತಿಯ ಪರಿಸರದಲ್ಲಿ ನೆಲೆಸಿರುವ ತುಳುವರು ಮುಖ್ಯವಾಗಿ ಕರುಣಾಕರ ಶೆಟ್ಟಿ (ಅಧ್ಯಕ್ಷ), ಹರೀಶ್ ಯು. (ಕಾರ್ಯದರ್ಶಿ) ನೇತೃತ್ವದಲ್ಲಿ ಸಂಘಟನೆಗೊಂಡು ೨೦೦೩ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದ ಸಮಾರಂಭದಲ್ಲಿ ಅಕಾಡೆಮಿಯ ಅಧ್ಯಕ್ಷ ವಾಮನ ನಂದಾವರ ಅವರು ಶಿವಮೊಗ್ಗ ಜಿಲ್ಲೆಯ ಮೊದಲ ಭದ್ರಾವತಿ ತುಳುಕೂಟವನ್ನು ಉದ್ಘಾಟಿಸಿದರು.

೧೬. ಕರ್ನಾಟಕ ತುಳು ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ‘ಸಾಂಗತ್ಯ’ (೨೦೦೭)

ಸಾಂಗತ್ಯ ಎನ್ನುವ ವೇದಿಕೆಯೊಂದು ಇತ್ತೀಚೆಗೆ ಉದಿಸಿದ್ದು ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಾಂಗತ್ಯದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಾಧ್ಯಕ್ಷ ಶಿವಾನಂದ ಕರ್ಕೇರ ಹಾಗೂ ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ಗಣೇಶ ಪ್ರಸಾದ ಪಾಂಡೇಲು ಮೊದಲಾದವರ ಸಂಘಟನೆಯಲ್ಲಿ ೨೦ ಫೆಬ್ರವರಿ ೨೦೦೭ರಂದು ಕರ್ನಾಟಕ ತುಳು ಸಾಹಿತ್ಯ-ಸಾಂಕ್ಕೃತಿಕ ವೇದಿಕೆಯೊಂದು ಉದ್ಘಾಟನೆಗೊಂಡಿತು.

ಪರನಾಡು

೧. ತುಳುಕೂಟ ದುಬೈ (ಯು.ಎ.ಇ.)

ತುಳು ಭಾಷೆ, ಕಲೆ, ಸಂಸ್ಕೃತಿಯ ಸೊಗಡು ಕಡಲಾಚೆಯ ನಾಡುಗಳಲ್ಲಿ ನಿಜವಾಗಿ ವಿಜೃಂಭಿಸುತ್ತಿದೆಯೆಂದಾದರೆ ಆ ಗೌರವ ‘ಯು.ಎ.ಇ. ತುಳುಕೂಟ ದುಬೈ’ಗೆ ಸಲ್ಲಬೇಕು. ‘ತುಳುವೆರೆಂಕ್ಲು’, ‘ತುಳುಭಾಷೆ ನಮ್ಮ’, ‘ನಂಕಾದ್ ತುಳು ಪರ್ಬ’ ಸಂದೇಶದೊಡನೆ, ತುಳು ಪರ್ಬ ಉತ್ಸವ ದುಬಾಯಿಯಲ್ಲಿ ಆಚರಿಸಲ್ಪಡುತ್ತಿದೆ. ತುಳುಯಾತ್ರೆಯಲ್ಲಿ ದಸರಾವನ್ನು ನೆನಪಿಸುವ ತುಳು ಮಾತೆಯ ಮೂರ್ತಿಯನ್ನು ಕುಳ್ಳಿರಿಸಿ ರಥೋತ್ಸವ ನಡೆಸುತ್ತಾರೆ. ಹುಲಿವೇಷ, ಅನಾರ್ಕಲಿ, ಬೇತಾಳ, ಬಿರುದು – ಬಾವುಟಗಳೊಂದಿಗೆ ರಂಗು ರಂಗಿನ ಸುಡುಮದ್ದು ಪಟಾಕಿ, ವಾದ್ಯಮೇಳದ ಅಭೂತಪೂರ್ವ ಜಾತ್ರೋತ್ಸವ ಆಚರಿಸುತ್ತಾರೆ. ಭೂತಕೋಲ, ಗೊಂದೋಳು ಮತ್ತಿರ ತುಳುನಾಡ ಮಣ್ಣಿನ ಸಂಸ್ಕೃತಿ ಬಿಂಬಿಸುವ ಪ್ರದರ್ಶನಗಳು, ದುಬೈಯಲ್ಲಿ ಮಿನಿ ತುಳುನಾಡನ್ನೇ ಸೃಷ್ಟಿಸಿ ಧರೆಗಿಳಿಸಿದಂತೆ ನಡೆಸಲ್ಪಡುವ ಅಪ್ಪಟ ತುಳುನಾಡ ಹೆಮ್ಮೆಯ ಪಡಿಯಚ್ಚು ಅದ್ಭುತ ಹಾಗೂ ಒಕ್ಕೊರಳ ಪ್ರಶಂಸೆಗೆ ಒಳಗಾಗಿದೆ.

ದುಬೈಯ ಬೆನ್ನೆಲುಬಾಗಿ ಉಮೇಶ ನಂತೂರೂ, ಸಿದ್ಧಕಟ್ಟೆ ಶೇಖರ್ ಶೆಟ್ಟಿ, ಭಾಸ್ಕರ ಆಚಾರ್, ಜಯಾನಂದಕುಮಾರ್, ಶೇಖರ್ ಶೆಟ್ಟಿ, ಗೋಪಿ ಕಾಮತ್, ಸುಲೇಮಾನ್, ಮಸ್ಕರೇಞಸ್, ಕೃಷ್ಣರಾಜ್ ತಂತ್ರಿ ಮತ್ತಿತರರ ಉತ್ಸಾಹಿ ತಂಡವೇ ಯಶಸ್ಸಿನ ಪತಾಕೆ ಜಗದೆತ್ತರ ಎತ್ತಿ ಹಿಡಿದು ತುಳು ಭಾಷೆಗೆ ಗೌರ ತಂದಿತ್ತಿದೆ. ಪ್ರಖ್ಯಾತ ಬಿ.ಆರ್. ಶೆಟ್ಟಿಯವರು ಪೋಷಕರಾಗಿ ನೀಡುತ್ತಿರುವ ಸಹಕಾರ ಮಾರ್ಗದರ್ಶನ ಉಲ್ಲೇಖನೀಯ.

೨. ತುಳುಕೂಟ ಮಸ್ಕತ್

ಡಿ.ಆರ್. ಕಾವೂರು, ಯು.ವಿ. ಆಚಾರ್, ಚಂದ್ರಶೇಖರ, ಜೂಲಿಯಟ್, ಶಾಂತಾರಾಂ, ಲವ, ತಾರಾನಾಥ್, ಕೋಟ್ಯಾನ್, ದಿನೇಶ ಶೆಟ್ಟಿ, ಕರುಣಾಕರ ರಾವ್, ಹರಿಭಟ್, ಜೆ.ಟಿ. ಶ್ರೀಯಾನ್ ಮೊದಲಾದವರು ಮಸ್ಕತ್ ತುಳುಕೂಟವನ್ನು ಮಸ್ತಾಗಿ ಕಡೆದು ನಿಲ್ಲಿಸಿದ್ದಾರೆ. ಅತ್ಯಧಿಕ ಸಂಖ್ಯೆಯಲ್ಲಿ ತುಳು ಸಂಸ್ಕೃತಿ ಪ್ರತಿಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ತುಳು ಸಂಸ್ಕೃತಿಯ ನಿಜವಾದ ರಾಯಭಾರಿಗಳಾಗಿ ಹಮ್ಮಿಕೊಂಡಿರುವ ಯೋಜನೆಗಳು, ಅದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪರರಾಷ್ಟ್ರದಲ್ಲಿಯೂ ಗಮನಾರ್ಹ ಸಾಧನೆಯನ್ನಬಹುದು.

೩. ತುಳುಕೂಟ ಅಬುದಾಬಿ

ಇಲ್ಲೂ ತುಳು ಸಂಸ್ಕೃತಿಯ ಬೆಳವಣಿಗೆಯತ್ತ ತುಳುವರೆಲ್ಲ ಒಗ್ಗೂಡಿ ಒಂದೆಡೆ ಕಲೆತು ನಕ್ಕುನಲಿದು ಸಂಭ್ರಮದಿಂದ ‘ತುಳು ಉತ್ಸವ’ ಆಚರಿಸುತ್ತಿದ್ದಾರೆ.

ಜಗದಗಲ ತುಳು ಭಾಷೆ, ಕಲೆ, ಸಂಸ್ಕೃತಿಯ ಜೋಪಾನ ಹಾಗೂ ಪುನರುತ್ಥಾನದತ್ತ ಆಶಾಂಕುರ ಮೊಳಕೆಯೊಡೆಯುತ್ತಿದೆ. ವಿಶ್ವ ತುಳು ಸಮ್ಮೇಳನ ನಡೆಯಲಿರುವ ಪೂರ್ವಕಾಲದಲ್ಲಿ ತುಳು ಸಂಘ – ಸಂಸ್ಥೆಗಳು, ಸಂಘಟಕರು, ತುಳುವ ರಾಜಕೀಯ ಮುಖಂಡರು, ಸಾಹಿತಿ, ವಿದ್ವಾಂಸರು ಹುಮ್ಮಸ್ಸಿನಿಂದ ತಮ್ಮೊಳಗಿನ ತಾರತಮ್ಯ, ಭಿನ್ನಾಭಿಪ್ರಾಯಗಳನ್ನು ತೊರೆದು ಮಾತೃಭಾಷೆ ತುಳು ದೇವಿಯ ಸೇವೆಯಲ್ಲಿ ಮನಸಾ ದುಡಿಯುತ್ತಾರಾದರೆ ಸಾಂವಿಧಾನಿಕ ಸ್ಥಾನಮಾನಗಳಿಸಿ, ಕನಸಿನ ‘ತುಳುನಾಡ ಜಿಲ್ಲೆ’ ನಾಮಕರಣ ಪಡೆದು, ತುಳುವರ ಇರವನ್ನು ಅಜರಾಮರವನ್ನಾಗಿಸುವ ದಿನ ದೂರವಿಲ್ಲ.

ತುಂಬಿ ತುಳುಕುತ್ತಿರುವ ತೌಳವ ಬೊಕ್ಕಸದ ಸಂಪದೈಸಿರಿ ‘ನಿಧಿ’ ಖಂಡಿತಾ ದಕ್ಕೀತು. ಪಂಚ ದ್ರಾವಿಡ ಭಾಷೆಗಳ ಸ್ಥಾನದಲ್ಲಿ ವಿರಾಜಮಾನವಾಗಿ ಸಮಾನ ಗೌರವಾರ್ಹತೆಗೆ ಪಾತ್ರವಾಗುವ ಸುವರ್ಣ ಯುಗದ ಭಾಗ್ಯದ ಬಾಗಿಲು ತೆರೆದು, ಪುಣ್ಯಭೂಮಿ ತುಳುನಾಡ ಸಂಸ್ಕೃತಿ ಪುನಶ್ಚೇತನಗೊಂಡು ಪ್ರಜ್ವಲಿಸುವಂತಾಗಲೆಂಬ ಹಾರೈಕೆ ಈ ಸಂಘಟನೆಯದು.

೪. ತುಳುಕೂಟ ಕತಾರ್ (೧೯೯೯)

ಆಧುನಿಕ ಕಾಲದಲ್ಲಿ ಭಾರತೀಯ ಭಾಷೆಗಳ ಸಾಹಿತ್ಯ-ಸಂಸ್ಕೃತಿ ಪುನರಾಲೋಕ ಪ್ರಜ್ಞೆ ಪ್ರವೃತ್ತಿ ಭಾರತೀಯ ಸಂಸ್ಕೃತಿಯ ಪುನರುಜ್ಜೀವನದ ಮಹಾಶಕ್ತಿಯೆನಿಸಿಕೊಳ್ಳುತ್ತದೆ. ಈ ನೆಲೆಯಲ್ಲಿ ಸಂಸ್ಕೃತಿಯ ಬಗೆಗಿನ ಅಭಿಮಾನ, ವೈಚಾರಿಕತೆ ಮತ್ತು ಮರುಸೃಷ್ಟಿ ಪ್ರಕ್ರಿಯೆಗೆ ಮಹತ್ತ್ವವಿದೆ. ಆದರೆ ಇಂತಹ ಚಟುವಟಿಕೆಗಳಿಗೆ ಯಾವುದಾದರೊಂದು ಸಂಘಟನಾ ಶಕ್ತಿ ಕಾರಣ ಮತ್ತು ಪ್ರೇರಣೆಯಾಗಬೇಕಾಗುತ್ತದೆ. ಹಾಗೆ ನೋಡಿದರೆ ಮಂಗಳೂರು ಕ್ರಿಕೆಟ್ ಕ್ಲಬ್‌ನ ನಾಯಕರೆನಿಸಿಕೊಂಡ ಫೆಲಿಕ್ಸ್ ಲೋಬೋ ದೋಹಾ ಕತಾರ್ ನಲ್ಲಿ ಪ್ರದರ್ಶನ ಏರ್ಪಡಿಸಲು ೨೩ ಮಂದಿ ಕಲಾವಿದರ ತಂಡವೊಂದನ್ನು ತುಳುನಾಡಿನಿಂದ ಕರೆಸಿಕೊಳ್ಳುವ ಧೈರ್ಯ ಮಾಡಿದುದೇ ದೋಹ ಕತಾರ್ ತುಳುಕೂಟದ ಉದಯಕ್ಕೆ ಮೂಲ. ಇಂತಹ ಒಂದು ಸಂಘಟನೆಯ ನೇತೃತ್ವವನ್ನು ವಾಮನ್ ಮರೋಳಿಯವರು ಸಂಘಟಿಸಿದ ಅಡ್‌ಹಾಕ ಸಮಿತಿ ವಹಿಸಿಕೊಂಡಿದ್ದರಿಂದಲೇ ೨೩ ಎಪ್ರೀಲ್ ೧೯೯೯ ರಲ್ಲಿ ಕತಾರ್ ತುಳುಕೂಟ ರೂಪಗೊಂಡಿತು. ಇದಕ್ಕೆ ಭಾರತೀಯ ರಾಯಭಾರಿ ಆರ್.ಎಲ್. ನಾರಾಯಣನ್ ಅವರ ಶುಭಾಕಾಂಕ್ಷೆಯ ನುಡಿ ದೊರೆತು ೨೨ ಅಕ್ಟೋಬರ್ ದಂದು ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡಿತು. ಮುಂದೆ ಪಿ.ಬಿ. ಹೆಗ್ಡೆಯವರು ಅಧ್ಯಕ್ಷರಾಗಿ ಆಯ್ಕೆ ಪ್ರಾತಿನಿಧ್ಯ ಪಡೆದರು. ಕತಾರ್ ತುಳುಕೂಟದ ಸ್ಥಾಪಕ ಸದಸ್ಯರಲ್ಲಿ ಟಿ.ಎಸ್.ಬಿ. ಬುಡಾನ್ ಭಾಷಾ, ದೇವಾನಂದ ಉಪಾಧ್ಯಾಯ, ಸತೀಶ್ ಕೆ., ಎನ್.ಎಸ್. ಭಟ್, ಪಿ.ಬಿ. ಹೆಗ್ಡೆ, ಎಂ. ಇಕ್ಬಾಲ್, ಮನ್ನಾ, ಶಂಕರ್ ಶೆಟ್ಟಿ, ವಾಮನ ಮರೋಳಿ, ಕೃಷ್ಣತೇಜ ಶೆಟ್ಟಿ ಮೊದಲಾದವರು ಮುಖ್ಯರಾಗುತ್ತಾರೆ. ೨೦೦೨ ರಿಂದ ಅಧಿಕಾರಕ್ಕೆ ಬಂದ ದಿವಾಕರ ಪೂಜಾರಿ ಅವರ ನೇತೃತ್ವದ ತುಳುಕೂಟ ವಿಶಿಷ್ಟವಾದ ಮತ್ತು ಗಮನೀಯ ಬೆಳವಣಿಗೆಯನ್ನೂ ಕಂಡಿದೆ. ೨೦೦೧ರ ಕಾಲಕ್ಕೆ ಕತಾರಿನಲ್ಲಿ ಆರು ಸಾವಿರದಷ್ಟು ತುಳುವರು ಇದ್ದರು. ತುಳುಕೂಟ ಕತಾರ್ ತನ್ನ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ‘ನಿರೆಲ್ (ನೆರಳು) ಎನ್ನುವ ವಿಶೇಷ ಸಂಚಿಕೆಗಳನ್ನೂ ಪ್ರಕಟಿಸಿದೆ. ಇದರ ಸಂಪಾದಕರಾದ ಎ. ಶ್ರೀನಿವಾಸ ರಾವ್ ಮುಹಮ್ಮದ್ ಶಮೀನ್ ಅವರನ್ನೂ ಉಲ್ಲೇಖಿಸಬಹುದು.

ಕತಾರ್ ತುಳುಕೂಟದ ಈಗಿನ ಅಧ್ಯಕ್ಷರಾದ ದಿವಾಕರ ಪೂಜಾರಿ ಅವರು ತುಳುನಾಡಿನ ಅಡುಗೆ ಆಹಾರ ವೈವಿಧ್ಯ ವೈಶಿಷ್ಟವನ್ನು ಪರಿಚಯಿಸಿ, ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ‘ಆಹಾರೋತ್ಸವ’ ಅದೇ ರೀತಿ ಪ್ರತಿಭಾ ಶೋಧ ಮೊದಲಾದ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದಾರೆ.

೫. ತುಳುಕೂಟ ಕುವೈಟ್ (೨೦೦೧)

ತುಳುಪರ್ಬ, ತುಳು ರಸಮಂಜರಿ, ತುಳು ಜನಪದ ಸ್ಪರ್ಧೆಗಳನ್ನು ನಡೆಸುತ್ತ ಇತ್ತೀಚಿನ ವರ್ಷಗಳಲ್ಲಿ ಸುಧಾಕರ ಶೆಟ್ಟಿ (ಅಧ್ಯಕ್ಷ), ಚಂದ್ರಹಾಸ ಶೆಟ್ಟಿ (ಉಪಾಧ್ಯಕ್ಷ), ಪ್ರಧಾನ ಕಾರ್ಯದರ್ಶಿ (ಎ.ಕೆ. ರವೀಂದ್ರ), ಕೋಶಾಧಿಕಾರಿ (ಇಲ್ಯಾಸ್ ಸಾಂಟಿಸ್), ಲೆಕ್ಕ ಪರಿಶೋಧಕ (ಮುಹಮ್ಮದ್ ನಝೀರ್ ಬೋಳಾರ್), ಸಾಂಸ್ಕೃತಿಕ ಕಾರ್ಯದರ್ಶಿ (ಲ್ಯಾನ್ಸಿ ರೋಡ್ರಿಗಸ್) ಮೊದಲಾದವರ ಸಂಘಟನ ಶಕ್ತಿಯಿಂದ ಕುವೈಟ್ ತುಳುಕೂಟ ಗಮನಸೆಳೆಯುತ್ತದೆ.

೧. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ (೧೯೬೫)

ರಾಷ್ಟ್ರಕವಿ ಎಂ. ಗೋವಿಂದ ಪೈ ನಿಧನರಾದಾಗ ಅವರಲ್ಲಿದ್ದ ಐದಾರು ಸಾವಿರ ಪುಸ್ತಕಗಳು ಅನಾಥ ಸ್ಥಿತಿಯಲ್ಲಿದ್ದುವು. ಅವುಗಳನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿಗೆ ತರಲು ಮಾಡಿದ ಪ್ರಯತ್ನವೇ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಹುಟ್ಟಿಗೆ ಪ್ರೇರಣೆಯಾಯಿತು. ಈ ಪ್ರೇರಣೆಯ ಕಾರಣದಿಂದಾಗಿ ೧೯೬೫ ದಶಂಬರ ೧೭ರಂದು ಜಿ.ಇ. ರಾಜರತ್ನಂ ಅವರಿಂದ ಈ ಸಂಶೋಧನೆ ಕೇಂದ್ರದ ಉದ್ಘಾಟನೆಯೂ ಆಯಿತು. ಇದಾದ ಬಳಿಕ ೧೯೨೭ ಜನವರಿ ೧೭ರಂದು ತುಳುನಾಡಿನ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ಪ್ರಾಚೀನ ಶಿಲಾ ಶಾಸನ, ವಿಗ್ರಹಗಳು, ಶಿಲೆ, ಲೋಹ, ಮರ ಮೊದಲಾದುವುಗಳಿಂದ ಮಾಡಿದ ಮೂರ್ತಿಗಳು, ಹಸ್ತಪ್ರತಿಗಳು ಇತ್ಯಾದಿ ಸಂಗ್ರಹಕ್ಕಾಗಿ ಪ್ರಾಚ್ಯವಸ್ತು ಸಂಗ್ರಹಾಲಯವೊಂದರ ಉದ್ಘಾಟನೆಯೂ ಆಯಿತು.

ಇದೇ ರೀತಿ ಮುಂದೆ ಮೈಸೂರು ವಿಶ್ವವಿದ್ಯಾಲಯ ೧೯೨೫ ಎಪ್ರಿಲ್ ೧೧ರಂದು ಈ ಕೇಂದ್ರವನ್ನು ಪಿಎಚ್‌.ಡಿ. ಮಟ್ಟದ ತರಬೇತಿಗೆ ಅವಕಾಶ ಕಲ್ಪಿಸುವ ಕೇಂದ್ರವನ್ನಾಗಿ ಪರಿಗಣಿಸಿ ಮಾನ್ಯತೆ ನೀಡಿತು. ಆಗಿನ ಉಪಕುಲಪತಿಗಳಾಗಿದ್ದ ಡಿ.ವಿ. ಅರಸ್ ಹೊಸದಾಗಿ ಕಟ್ಟಿಸಿದ ರಾಷ್ಟ್ರಕವಿ ಭವನವನ್ನು ಉದ್ಘಾಟಿಸಿದರು. ಹೀಗೆ ರಾಷ್ಟ್ರಮಟ್ಟದ ವಿಚಾರಗೋಷ್ಠಿಗಳು, ಗ್ರಂಥ ಪ್ರಕಟಣೆಗಳು ಹಾಗೂ ಪರಾಮರ್ಶನ ಗ್ರಂಥಾಲಯ ಮೊದಲಾದುವುಗಳಿಂದ ಈ ಕೇಂದ್ರ ಬೆಳವಣಿಗೆ ಪಡೆಯಿತು.

ವಿದ್ವಾಂಸರಾದ ಎಂ. ಮರಿಯಪ್ಪ ಭಟ್ಟ, ಶಿವರಾಮ ಕಾರಂತ, ಪಿ. ಗುರುರಾಜ ಭಟ್ಟರು ಆರಂಭ ಕಾಲದಲ್ಲಿ ಈ ಕೇಂದ್ರದ ಮಾರ್ಗದರ್ಶನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು.

ದ್ರಾವಿಡ ಭಾಷೆಗಳ ಅಂತಾರಾಷ್ಟ್ರೀಯ ಸಂಸ್ಥೆ, ದೆಹಲಿ, ರಾಷ್ಟ್ರೀಯ ನಾಟಕ ಶಾಲೆ, ಫಿನ್ಲೆಂಡಿನ ನಾರ್ಡಿಕ್ ಜಾನಪದ ಸಂಶೋಧನ ಸಂಸ್ಥೆ ಮೊದಲಾದವುಗಳ ಸಹಯೋಗದಲ್ಲಿ ಕಲೇವಾಲ ಮಹೋತ್ಸವ ಆರಾಧನಾ ರಂಗಕಲೆಗಳ ರಾಷ್ಟ್ರೀಯ ವಿಚಾರ ಸಂಕಿರಣ ಮೊದಲಾದುವುಗಳನ್ನು ಹಮ್ಮಿಕೊಂಡು ತುಳುನಾಡಿನ ಕೋಲ, ನೇಮ, ನಾಗಮಂಡಲ, ಢಕ್ಕೆ ಬಲಿ, ಕೇರಳದ ತೆಯ್ಯಂ ಹಾಗೂ ಪಡೆಯಣಿ, ಕರ್ನಾಟಕದ ಗೊಂದಲಿಗರಾಟ ಮೊದಲಾದುವುಗಳ ತೌಲನಿಕ ಅಧ್ಯಯನದ ರಂಗೋತ್ಸವಗಳನ್ನೂ ನಡೆಸಿದೆ. ಅಮೇರಿಕಾ, ಯುರೋಪ್, ಜಪಾನ್, ಆಸ್ಟ್ರೇಲಿಯಾ ಮೊದಲಾದ ರಾಷ್ಟ್ರಗಳ ವಿದ್ವಾಂಸರಾದ ಪೀಟರ್ ಜೆ. ಕ್ಲಾಸ್, ಹೈಡ್ರೂನ್ ಬ್ರೂಕ್ನರ್, ಲೌರಿ ಹಾಂಕೋ ಮೊದಲಾದವರು ಸಂಶೋಧನೆಗಳಿಗಾಗಿ ಈ ಕೇಂದ್ರದ ಸಂಬಂಧ ಇಟ್ಟುಕೊಂಡವರು.

ಉಡುಪಿಯ ಎಂ.ಜಿ.ಎಂ. ಕಾಲೇಜಿಗೆ ಸೇರಿದ ರಾಷ್ಟ್ರಕವಿ ಗೋವಿಂದ ಪೈ ಸ್ನಾತಕೋತ್ತರ ಸಂಶೋಧನ ಕೇಂದ್ರದಲ್ಲಿ ಸಂಘಟಿತರಾದ ತುಳು-ಕನ್ನಡ-ಇಂಗ್ಲಿಷ್ ನಿಘಂಟು ಯೋಜನೆ ೧೯೭೯ರ ಅಕ್ಟೋಬರ್ ೧ರಂದು ಪ್ರಾರಮಭಗೊಂಡು ಮರುದಿನ ಅಕ್ಟೋಬರ್ ೨ರಂದು ಗಾಂಧೀ ಜಯಂತಿ ಯಂದು ಆಗಿನ ವಿದ್ಯಾಸಚಿವ ಸುಬ್ಬಯ್ಯ ಶೆಟ್ಟಿ ಅವರಿಂದ ಉದ್ಘಾಟಿಸಲ್ಪಟ್ಟಿತು. ಮೈಸೂರಿನ ವಿಶ್ರಾಂತ ಕುಲಪತಿ ದೇ. ಜವರೇ ಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ, ಮಂಗಳೂರಿನ ಕೆ.ಎಸ್.ಎನ್. ಅಡಿಗ, ಸೇಡಿಯಾಪು ಕೃಷ್ಣ ಭಟ್ಟ, ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮೊದಲಾದವರು ಈ ಯೋಜನೆಗೆ ಚಾಲನೆ ನೀಡಿದ ಮೊದಲ ಮಹನೀಯರು.

ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಕು.ಶಿ. ಹರಿದಾಸ ಭಟ್ಟರು ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿಯೂ, ಯು.ಪಿ. ಉಪಾಧ್ಯಾಯ ಸಹಸಂಪಾದಕರಾಗಿಯೂ ನಿಯುಕ್ತರಾದರು. ಮುಂದೆ ಅನೇಕ ಗಣ್ಯರ, ವಿದ್ವಾಂಸರ ಸಹಕಾರದಿಂದ ೧೯೯೮ರ ಕಾಲಕ್ಕೆ ತುಳು ನಿಘಂಟಿನ ಆರು ಬೃಹತ್ ಸಂಪುಟಗಳು ಸಿದ್ಧವಾಗಿ ಪ್ರಕಟಗೊಂಡವು. ಹೆರಂಜೆ ಕೃಷ್ಣ ಭಟ್ಟರು ನಿರ್ದೇಶಕರಾಗಿರುವ ಈ ಸಂಸ್ಥೆ ತುಳುವಿನ ಕೈಂಕರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

೨. ಮಂಗಳೂರು ವಿಶ್ವವಿದ್ಯಾನಿಲಯ (೧೯೬೮ / ೧೯೮೦)

ಮಂಗಳೂರಲ್ಲಿ ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಪ್ರಾರಂಭವಾದ ಕಾಲದಿಂದಲೇ ತುಳು ಸಾಹಿತ್ಯ ಸಂಬಂಧಿ ಕೆಲಸಗಳೂ ಆರಂಭಗೊಂಡಿವೆ. ಆರಂಭದಲ್ಲಿ ಸ್ನಾತಕೋತ್ತರ ಅಧ್ಯಯನ ಅವಕಾಶ ಕೇವಲ ಮೂರು ವಿಷಯಗಳಿಗೆ ಸೀಮಿತವಾಗಿದ್ದರೂ ಅವುಗಳಲ್ಲಿ ಪ್ರಧಾನವಾಗಿ ಕನ್ನಡ ವಿಭಾಗವಿದ್ದುದರಿಂದ ಆ ವಿಭಾಗದ ಮೂಲಕ ಕನ್ನಡದೊಂದಿಗೆ ತುಳುವಿನ ಕೆಲಸಗಳೂ ಜೊತೆ ಜೊತೆಯಲ್ಲಿಯೇ ನಡೆದುಕೊಂಡು ಬಂದಿವೆ. ಬಿ.ಎ. ವಿವೇಕ ರೈ ಅವರು ಇಲ್ಲಿ ಕನ್ನಡ ವಿಭಾಗದಲ್ಲಿ ೧೯೬೮ರಿಂದ ವಿದ್ಯಾರ್ಥಿಯಾಗಿ ಆ ಬಳಿಕ ೧೯೭೦ರಿಂದ ಅಧ್ಯಾಪನ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಂದಿನಿಂದಲೇ ತುಳು ಸಾಹಿತ್ಯ, ತುಳು ಜಾನಪದ ಅಧ್ಯಯನದ ಕೆಲಸಗಳು ಪ್ರಾರಂಭವಾಗಿವೆ. ಈ ಸ್ನಾತಕೋತ್ತರ ಕೇಂದ್ರದ ಪಲಚಂವಿ ಪ್ರಕಾಶನದ ನಾಲ್ಕನೆಯ ಪ್ರಕಟಣೆಯೇ ವಿವೇಕ ರೈ ಅವರ ೭೦೦ ತುಳು ಗಾದೆಗಳ ಸಂಕಲನವಾದ ‘ತುಳು ಗಾದೆಗಳು’, ಅದೇ ವರ್ಷ ಮಂಗಳ ಗಂಗೋತ್ತಿಯ ಕನ್ನಡ ಸಂಘದ ಮೂಲಕ ಅವರ ‘ತುಳು ಒಗಟುಗಳು’ ಕೃತಿಯೂ ಪ್ರಕಟವಾಗಿದೆ. ಮಂಗಳಂಗೋತ್ತಿಯ ನಿರ್ದೇಶಕರಾಗಿದ್ದ ಎಸ್.ವಿ. ಪರಮೇಶ್ವರ ಭಟ್ಟರು ಕನ್ನಡಿರಾಗಿದ್ದರೂ ಅವರಲ್ಲಿದ್ದ ತುಳು ಮನಸ್ಸು ಇಂತಹ ಕೆಲಸಗಳಿಗೆ ಪ್ರೇರಣೆ ನೀಡಿದೆ ಎನ್ನುವುದು ನಿಜ.

ಮಂಗಳಗಂಗೋತ್ತಿಯ ಕನ್ನಡ ವಿಭಾಗದ ಮೂಲಕ ಮುಂದೆ ಈ ಪ್ರೇರಣೆ ಬಹಳಷ್ಟು ಕೆಲಸಗಳಿಗೆ ಚೈತನ್ಯ ನೀಡಿದೆ. ಒಂದೆಡೆ ೧೯೮೦ರಿಂದ ವಿಶ್ವವಿದ್ಯಾನಿಲಯ ಪೂರ್ಣ ಪ್ರಮಾಣದ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡ ಬಳಿಕ ಅಲ್ಲಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಿರ್ದಿಷ್ಟ ಪದವಿಗಳಿಗಾಗಿ ಸಿದ್ಧಪಡಿಸಿದ ಹಲವು ಪ್ರೌಢ ಪ್ರಬಂಧಗಳಿಗಾಗಿ ತುಳು ಸಾಹಿತ್ಯ, ತುಳು ಜಾನಪದ ಕ್ಷೇತ್ರಗಳಲ್ಲಿ ಅಧ್ಯಯನ ಸಂಶೋಧನೆಗಳು ವ್ಯವಸ್ಥಿತವಾಗಿ ನಡೆಯತೊಡಗಿದುವು. ಅಂತಹ ಅಧ್ಯಯನಗಳಲ್ಲಿ ತುಳು ಜನಪದ ಸಾಹಿತ್ಯ (ಬಿ.ಎ. ವಿವೇಕ ರೈ), ಭೂತಾರಾಧನೆ : ಜಾನಪದೀಯ ಅಧ್ಯಯನ (ಕೆ. ಚಿನ್ನಪ್ಪಗೌಡ), ಮುಗೇರರು ಜನಾಂಗ ಜಾನಪದ (ಕೆ. ಅಭಯಕುಮಾರ್), ಕೋಟಿ ಚೆನ್ನಯ್ಯ ಜಾನಪದೀಯ ಅಧ್ಯಯನ (ವಾಮನ ನಂದಾವರ), ನುಡಿ ಸಿಂಗಾರ (ಗಣೇಶ ಅಮೀನ್ ಸಂಕಮಾರ್) ಮೊದಲಾದುವು ಗ್ರಂಥ ರೂಪದಲ್ಲಿ ಪ್ರಕಟವಾಗಿಯೂ ಬಂದಿವೆ. ಇನ್ನೊಂದೆಡೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ೧೯೮೪ರಲ್ಲಿ ತುಳುವಿನ ಮೊದಲಾಗಿ ದೊರೆತ ಪ್ರಾಚೀನ ಮಹಾಕಾವ್ಯ ತುಳು ಭಾಗವತೊ (ಸಂಪಾದನೆ : ವೆಂಕಟರಾಜ ಪುಣಿಂಚತ್ತಾಯ), ೧೯೮೯ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪೆರುವಾಯ ಸುಬ್ಬಯ್ಯ ಶೆಟ್ಟಿಯವರ ತುಳು ಗಾದಿಗೆಳ ಬೃಹತ್ ಸಂಪುಟವನ್ನು ಪ್ರಕಟಿಸಿದೆ. ಮತ್ತೊಂದೆಡೆ ಪ್ರಾದೇಶಿಕ ಕಲೆ, ಸಂಸ್ಕೃತಿಯ ಅಧ್ಯಯನಕ್ಕೆ ಪೂರಕವಾದ ತುಳು ಜನಪದ ಕಮ್ಮಟ, ಶಿಬಿರಗಳನ್ನು ಆಗಾಗ ಏರ್ಪಡಿಸುತ್ತಿದೆ. ಹಾಗೆಯೇ ಕನ್ನಡ ವಿಭಾಗದಲ್ಲಿ ಐಚ್ಛಿಕವಾಗಿ ತುಳುವಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಬಹುದಾದ ಅವಕಾಶವನ್ನೂ ಕಲ್ಪಿಸಿಕೊಟ್ಟಿದೆ.

ದಕ್ಷಿಣ ಕನ್ನಡ ಮತ್ತು ಕೊಡಗು ಪ್ರದೇಶಗಳಿಗೆ ಸಂಬಂಧಿಸಿದಂತೆ ಸಾಂಸ್ಕೃತಿಕ ವಸ್ತು ಸಂಗ್ರಹಾಲಯವೊಂದನ್ನು ಸಂಯೋಜಿಸಿ ಈ ಪ್ರದೇಶಗಳ ಗತ ಬದುಕಿನ ಭೌತಿಕ ಜಗತ್ತನ್ನು ಪ್ರದರ್ಶಿಸುವ ಕಾಯಕದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಹತ್ವದ ಪಾತ್ರ ವಹಿಸಿಕೊಂಡಿದೆ.

೩. ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಉಡುಪಿ (೧೯೮೪)

ಉಡುಪಿಯ ಎಂ.ಜಿ.ಎಂ. ಕಾಲೇಜು, ತುಳುನಾಡಿನ ಭಾಷೆ, ಸಾಹಿತ್ಯ, ಇತಿಹಾಸ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿದ ಕರ್ನಾಟಕ ಸರಕಾರ, ತುಳು ನಿಘಂಟು ಯೋಜನೆಯನ್ನು ಎತ್ತಿಕೊಳ್ಳಲು ಈ ಸಂಸ್ಥೆಗೆ ಅನುಮತಿ, ನೆರವು ನೀಡಿತ್ತು. ಭಾಷಾ ವಿಜ್ಞಾನಿಗಳಾದ ಯು.ಪಿ. ಉಪಾಧ್ಯಾಯ, ಸುಶೀಲಾ ಉಪಾಧ್ಯಾಯ ಅವರು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಹೀಗೆ ಎಂ.ಜಿ.ಎಂ. ಕಾಲೇಜು ಪ್ರಾದೇಶಿಕ ಮಟ್ಟದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದನ್ನು ಗುರುತಿಸಿದ ಪೋರ್ಡ್‌ಫೌಂಡೇಶನ್ ಈ ಸಂಸ್ಥೆಗೆ ಕರ್ನಾಟಕ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯನ ಕೇಂದ್ರವನ್ನು (Regional Resources Centre for Folk Performing Arts ಸಂಕ್ಷಿಪ್ತ ನಾಮ : RRC) ಆರಂಭ ಮಾಡಲು ೯ ಫೆಬ್ರವರಿ ೧೯೮೪ರಂದು ನೆರವು ನೀಡಲು ಮುಂದೆ ಬಂತು. ಈ ಸವಾಲನ್ನು ಸ್ವೀಕರಿಸಿದ ಮಣಿಪಾಲ್ ಆಫ್ ಜನರಲ್ ಎಜುಕೇಶನ್ ಈ ಸಂಸ್ಥೆಗೆ ಅಗತ್ಯವಾದ ಕಟ್ಟಡ ಮೊದಲಾದ ನೆರವು ನೀಡಿತು. ಈ ಎರಡು ಸಂಸ್ಥೆಗಳ ನೆರವಿನಿಂದ ಎಂ.ಜಿ.ಎಂ. ಕಾಲೇಜಿನ ಒಂದು ಅಂಗವಾಗಿ ಕು.ಶಿ. ಹರಿದಾಸ ಭಟಟರ ನಿರ್ದೇಶಕತ್ವದಲ್ಲಿ ಈ ಸಂಸ್ಥೆ ಅಸ್ತಿತ್ವಕ್ಕೆ ಬಂತು.

ಈ ಸಂಸ್ಥೆಯ ಉದ್ದೇಶ ಕರ್ನಾಟಕದ ೨೦ ಜಿಲ್ಲೆಗಳಲ್ಲಿರುವ ಜಾನಪದ ರಂಗಕಲೆಗಳನ್ನೂ ವ್ಯವಸ್ಥಿತವಾದ ರೀತಿಯಲ್ಲಿ ಸಮಗ್ರ ದಾಖಲೀಕರಣ ಮಾಡಿ, ವರ್ಗೀಕರಿಸಿ, ವಿದ್ವಾಂಸರ, ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಶೈಕ್ಷಣಿಕ, ಸಂಶೋಧನಾತ್ಮಕ ಉದೇಶಗಳಿಗಾಗಿ ಒದಗಿಸುವುದು. ಕರ್ನಾಟಕ ಜಾನಪದದ ಮೂಡಲಪಾಯ, ಬೀಸುಕಂಸಾಳೆ ಮೊದಲಾದವುಗಳ ಜೊತೆಯಲ್ಲಿ ಕರಾವಳಿ ಕರ್ನಾಟಕದ ತುಳು ಜಾನಪದ ತೆಂಕು ತಿಟ್ಟು ಯಕ್ಷಗಾನ, ತಾಳಮದ್ದಳೆ, ಭೂತಾರಾಧನೆ, ನಾಗಾರಾಧನೆ, ತುಳು ಜನಪದ ಕುಣಿತಗಳು, ಆಚರಣೆಗಳು, ಕತೆಗಳು, ಹಾಡುಗಳು ಮೊದಲಾದ ವಿವಿಧ ಪ್ರಕಾರಗಳು, ಕ್ಷೇತ್ರಕಾರ್ಯ ದಾಖಲೀಕರಣ, ಜನಪದ ಗ್ರಂಥಗಳ ಪ್ರಕಟಣ ಅಂತಾರಾಷ್ಟ್ರೀಯ ಮೊದಲಾದ ಜಾನಪದ ಕಮ್ಮಟಗಳು, ಫೆಲೋಶಿಪ್ ಯೋಜನೆಗಳು ಇತ್ಯಾದಿ ಕಾರ್ಯಕ್ರಮಗಳು ನಡೆದಿವೆ. ನಡೆಯುತ್ತಿವೆ. ಆರ್.ಆರ್.ಸಿ. ಸಂಸ್ಥೆಯನ್ನು ಸಂಬಳವಂತರಿಂದ ಬೆಳೆಸುವುದಕ್ಕಿಂತಲೂ ಶ್ರದ್ಧಾವಂತರಿಂದ ಕಟ್ಟಿ ಜಾಗತಿಕ ನೆಲೆಯ ಮಾದರಿ ಸಿರಿ ಸಂಪದ ಆರ್ಕೈವ್ಸ್ ಕೇಂದ್ರವನ್ನಾಗಿ ಕು.ಶಿ. ಹರಿದಾಸ ಭಟ್ ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದಾರೆ.

೪. ಶ್ರೀ ಧರ್ಮಸ್ಥಲ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ (೧೯೮೮)

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ರೂಪಿಸಿದ ಈ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಅಪೂರ್ವವಾದ ಹಸ್ತಪ್ರತಿ ಭಂಡಾರ ಮತ್ತು ಗ್ರಂಥ ಭಂಡಾರವಿದೆ. ಐದು ಸಾವಿರಕ್ಕೂ ಹೆಚ್ಚು ಓಲೆ ಗ್ರಂಥಗಳಿವೆ. ತಾಳೆ ಗರಿಯ ಗ್ರಂಥಗಳಲ್ಲದೆ ಎರಡು ಸಾವಿರ ಕಾಗದದ ಹಸ್ತಪ್ರತಿಗಳೂ ಅಲ್ಲಿವೆ. ಇಲ್ಲಿ ತುಳುಲಿಪಿಯಲ್ಲಿ ಬರೆಯಲಾದ ಅನೇಕ ತಾಳಗೆರಿ ಗ್ರಂಥಗಳಿವೆ. ಪ್ರತಿಷ್ಠಾನದ ಗ್ರಂಥ ಭಂಡಾರದ ನಿರ್ದೇಶಕರಾದ ಎಸ್.ಡಿ. ಶೆಟ್ಟಿ, ಹಿರಿಯ ವಿದ್ವಾಂಸರಾದ ಗೌ.ಮ. ಉಮಾಪತಿ ಶಾಸ್ತ್ರಿ, ಎಸ್.ಆರ್. ವಿಘ್ನರಾಜ ಮೊದಲಾದವರು ಈ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಘ್ನರಾಜರು ೨೦೦೫ರಲ್ಲಿ ಪ್ರಾಚೀನ ತುಳು ಕಾವ್ಯ ಪರಂಪರೆಗೆ ಸೇರಿರುವ ‘ತುಳು ರಾಮಾಯಣ ಗ್ರಂಥ’ವನ್ನು ತುಳುಲಿಪಿ ತಾಡವೋಲೆ ಗ್ರಂಥದಿಂದ ಕನ್ನಡಕ್ಕೆ ಲಿಪ್ಯಂತರಗೊಳಿಸಿ ಸಂಪಾದಿಸಿರುತ್ತಾರೆ.

೫. ಮಂಜೂಷ ವಸ್ತು ಸಂಗ್ರಹಾಲಯ (೧೯೮೯)

ಇದು ಧರ್ಮಸ್ಥಳ ಮಂಜುನಾಥ ಸಾಂಸ್ಕೃತಿಕ ಪ್ರತಿಷ್ಠಾನದ ಒಂದು ಅಂಗವಾಗಿದ್ದು ಜಾಗತಿಕ ನೆಲೆಯ ಸಂಗ್ರಹವಾಗಿದೆ. ಇಲ್ಲಿ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಬಹಳಷ್ಟು ವಸ್ತುಗಳು ಪರಿಕರಿಗಳಿವೆ. ಭೂತಾರಾಧನೆ, ನಾಗಾರಾಧನೆಗಳಿಗೆ ಸಂಬಂಧಿಸಿದಂತೆ ಅನೇಕ ವಸ್ತುಗಳಿವೆ. ಒಂದೆಡೆ ಕೊಡಮಣಿತ್ತಾಯ ದೈವದ ವೇಷಭುಷಣಗಳನ್ನು ಜೋಡಿಸಿಟ್ಟಿರುವುದು ಆ ದೈವಕ್ಕೆ ಅಲಂಕಾರ ಮಾಡಿರುವ ಭಂಗಿಯಲ್ಲೇ ಇದೆ. ಬಹು ಗಾತ್ರದ ಗಗ್ಗರ, ಎಣ್ಣೆ ಗುಜ್ಜಣಿಗೆ, ಆಯುಧ, ಆಭರಣ, ವೇಷಭೂಷಣ ಮೊದಲಾದ ವಿವಿಧ ಪರಿಕರಗಳ ಸಂಗ್ರಹವಿದೆ.

೬. ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ (೧೯೯೨)

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಭಾಷೆಯ ಅಭಿವೃದ್ಧಿ ನೆಲೆಯಲ್ಲಿ ಒಂದು ಪೀಠ ರಚನೆಯಾಗಬೇಕೆನ್ನುವ ಉದ್ದೇಶದಿಂದ ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳು ನಡೆದಿದ್ದುವು. ಕಾರಣ ಅಂತಹ ಪೀಠ ಸ್ಥಾಪನೆಯ ಬಗೆಗೆ ಈ ಪ್ರದೇಶದ ಜನರಲ್ಲಿ ಒಂದು ನೀರಿಕ್ಷೆಯಿತ್ತು. ಎಲ್ಲ ಕೆಲಸಗಳನ್ನು ನೇರವಾಗಿ ಯೋಜನೆಯ ಜೊತೆಗೆ ಸ್ಥಳೀಯ ಒಂದು ಸಂಸ್ಥೆ ಸೇರಿಕೊಂಡಾಗ ಕೆಲಸ ಮಾಡುವುದು ಹೆಚ್ಚು ಸುಲಭ. ಈ ದೃಷ್ಟಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕುಲಪತಿ ಎಂ.ಐ. ಸವದತ್ತಿಯವರ ಕಾಲದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪೀಠವೊಂದನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲು ಒಪ್ಪಿಕೊಂಡು ಅದಕ್ಕೆ ಅನುದಾನ ನೀಡುವ ವ್ಯವಸ್ಥೆ ಮಾಡಿದರು. ಇದರ ಸಂಯೋಜಕರಾಗಿ ಪ್ರಾಧ್ಯಾಪಕ ಬಿ.ಎ. ವಿವೇಕ ರೈ ಹಾಗೂ ಗಣಪತಿ ಭಟ್ ಮತ್ತು ಯದುಪತಿ ಗೌಡ ಇದಕ್ಕೆ ಸಹಾಯಕ ಸಂಶೋಧಕರಾಗಿ ನೇಮಕಗೊಂಡರು.

ತುಳುವಿಗೆ ಸಂಬಂಧಿಸಿದಂತೆ ತುಳು ಭಾಷೆಯಲ್ಲಿ, ಕನ್ನಡದಲ್ಲಿ ಹಾಗೂ ಇತರ ಭಾಷೆಗಳಲ್ಲಿ ಪ್ರಕಟಗೊಂಡ ಎಲ್ಲ ಗ್ರಂಥಗಳನ್ನೂ ಸಂಗ್ರಹಿಸಿ ಅವುಗಳ ಮಾಹಿತಿ ಸಂಗ್ರಹಿಸಿಡುವುದು ಹಾಗೂ ಆ ಕುರಿತು ವಿವರಣಾತ್ಮಕವಾದ ಗ್ರಂಥಸೂಚಿ ಸಿದ್ಧಪಡಿಸಿ ಪ್ರಕಟಿಸುವ ಯೋಜನೆ ಈ ಪೀಠದ ಉದ್ದೇಶಗಳಲ್ಲಿ ಒಂದು. ಅದನ್ನು ತುಳುವಿನಲ್ಲಿ, ಕನ್ನಡದಲ್ಲಿ ಮತ್ತು ಇಂಗ್ಲಿಷಿನಲ್ಲಿ ಪ್ರಕಟಿಸುವ ಉದ್ದೇಶವಿರಿಸಿಕೊಂಡಿತ್ತು. ೨೧, ೨೨ ಎಪ್ರಿಲ್ ೧೯೯೩ರಲ್ಲಿ ಭೂತಾರಾಧನೆ ಬಣ್ಣಗಾರಿಕೆಯ ಎರಡು ದಿನಗಳ ಕಮ್ಮಟ ಏರ್ಪಡಿಸಿ ದೃಶ್ಯ, ಶ್ರವ್ಯ ಮತತು ನೆರಳು ಚಿತ್ರಗಳ ಹಾಗೂ ಲಿಖಿತ ದಾಖಲೆ ಮಾಡುವ ಉದ್ದೇಶದಿಂದ ನಡೆದ ಕಮ್ಮಟದ ಫಲವಾಗಿ ‘ಭೂತಾರಾಧನೆಯ ಬಣ್ಣಗಾರಿಕೆ’ ಗ್ರಂಥ ಮುಂದೆ ೨೦೦೧ರಲ್ಲಿ ಪ್ರಕಟಗೊಂಡು ಹೊರಬರಲು ಸಾಧ್ಯವಾಯಿತು.

ತುಳುಪೀಠ ತುಳುನಾಡಿನ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವಾಸಿಸುವ ಮಲೆಕುಡಿಯರ ಬುಡಕಟ್ಟು ಜನಾಂಗದ ಅಧ್ಯಯನ ನಡೆಸಿ ಬಿ.ಎ. ವಿವೇ ರೈ, ಡಿ. ಯದುಪತಿ ಗೌಡ ಅವರ ಸಂಪಾದನೆಯಲ್ಲಿ ‘ಮಲೆ ಕುಡಿಯರು’ (೧೯೬೯) ಗ್ರಂಥವನ್ನು ಪ್ರಕಟಿಸಿದೆ. ಹಾಗೆಯೇ ತುಳುನಾಡಿನ ಕೃಷಿ ಸಂಸ್ಕೃತಿಗೆ ಸಂಬಂಧಿಸಿ ನಾಟಿ – ನೇಜಿಯ ಹಾಡುಗಳಾದ ‘ಕಬಿತಗಳು’ (೧೯೯೭) ಗ್ರಂಥವೊಂದನ್ನು ಪ್ರಕಟಿಸಿದೆ. ಅದೇ ರೀತಿ ಬಿ.ಎ. ವಿವೇಕ ರೈ, ಯದುಪತಿ ಗೌಡ, ರಾಜಶ್ರೀ ಸಂಪಾದನೆಯಲ್ಲಿ ತುಳು ಮೌಖಿಕ ಸಂಪ್ರದಾಯದ ಕಾವ್ಯಪ್ರಕಾರದ ಪಾಡ್ದನ (ಸಂದಿ)ಗಳನ್ನು ಸಂಗ್ರಹಿಸಿ ‘ಪುಟ್ಟುಬಳಕೆಯ ಪಾಡ್ದನಗಳು’ (೨೦೦೪) ಗ್ರಂಥರೂಪದಲ್ಲಿ ಪ್ರಕಟವಾಗಿದೆ. ಈ ನಡುವೆ ತುಳುನಾಡಿನ ಜನಪದ ಆಟಗಳ ಕುರಿತು ಪ್ರಾತ್ಯಕ್ಷಿಕೆ ಕಮ್ಮಟ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿದ್ದು, ಇಂತಹ ಉಪಯುಕ್ತ ಯೋಜನೆಗಳಲ್ಲಿ ತುಳುಪೀಠ ತನ್ನನ್ನು ತೊಡಗಿಸಿಕೊಂಡಿದೆ.

೭. ಕರ್ನಾಟಕ ಥಿಯೋಲಾಜಿಕಲ್ ಕಾಲೇಜು (ಬಾಸೆಲ್ ಮಿಶನ್) ಬಲ್ಮಠ ಮಂಗಳೂರು

ಇಲ್ಲಿನ ಗ್ರಂಥಾಲಯದಲ್ಲಿ ಬಾಸೆಲ್ ಮಿಶನಿನ ಕಾಲದ ಎಂದರೆ ೧೯ನೆಯ ಶತಮಾನದ ತುಳುನಾಡಿಗೆ ಸಂಬಂಧಿಸಿದ ಅಪೂರ್ವ ಆಕರ ಗ್ರಂಥಗಳಿವೆ. ಅಂತಹ ಇನ್ನಷ್ಟು ಆಕರಗಳು ಇದೀಗ ಜರ್ಮನಿಯಿಂದ ಸಿಡಿಗಳ ರೂಪದಲ್ಲಿ ಇಲ್ಲಿನ ಆರ್ಕೈವ್ ಕೇಂದ್ರದಲ್ಲಿ ಲಭ್ಯ ಇವೆ.

೮. ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಪ್ರತಿಷ್ಠಾನ ಬೈದಶ್ರೀ ಕಾರ್ಯಾಲಯ, ಆದಿಉಡುಪಿ

ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರಿಗೆ ಸಂಬಂಧಿಸಿದ ಮುಖ್ಯ ಮಹಾಕಾವ್ಯ ಇತಿಹಾಸ, ಗರಡಿಗಳ ಹಾಗೂ ಆರಾಧನಾ ರಂಗಭೂಮಿಯ ಸಮಗ್ರ ಅಧ್ಯಯನ, ಸಂಶೋಧನೆ ಹಾಗೂ ಗ್ರಂಥ ಪ್ರಕಟಣ ಮತ್ತು ಆಧುನಿಕ ತಂತ್ರಜ್ಞಾನ ಮಾಧ್ಯಮಗಳಲ್ಲಿ ವ್ಯಾಪಕ ದಾಖಲೀಕರಣಗೊಳಿಸಿ ಒಂದು ಆರ್ಕೈವ್ ಕೇಂದ್ರವನ್ನಾಗಿ ರೂಪುಗೊಳಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪನೆಗೊಂಡಿರುತ್ತದೆ. ಈಗಾಗಲೇ ತುಳುನಾಡ ಗರಡಿಗಳ ಸಾಂಸ್ಕೃತಿಕ ಅಧ್ಯಯನ (೧೯೯೦), ಕೋಟಿ ಚೆನ್ನಯ ಪಾಡ್ದನ ಸಂಪುಟ (೨೦೦೨) ಹಾಗೂ ಇನ್ನಿತರ ಗ್ರಂಥಗಳು ಈ ಕೇಂದ್ರದ ಮೂಲಕ ಪ್ರಕಟಗೊಂಡಿವೆ.

೯. ತುಳು ಬದುಕು ವಸ್ತು ಸಂಗ್ರಹಾಲಯ ಮತ್ತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ (೧೯೯೫)

ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನ ಇತಿಹಾಸ ಅಧ್ಯಾಪಕ ತುಕಾರಾಂ ಪೂಜಾರಿಯವರ ಕುತೂಹಲ ಮತ್ತು ಪರಿಶ್ರಮದ ಫಲವಾಗಿ ತುಳು ಸಂಸ್ಕೃತಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವೊಂದು ೧೯೯೫ರ ಜನವರಿ ೨೧ರಂದು ಉದ್ಘಾಟನೆಗೊಂಡಿತು. ಪ್ರಾದೇಶಿಕ ಸಾಂಸ್ಕೃತಿಕ ಅಧ್ಯಯನ ಕೇಂದ್ರದಂತಹ ಯೋಜನೆಯಲ್ಲಿ ತುಳು ಬದುಕಿಗೆ ಸಂಬಂಧಿಸಿದ ಭೌತಿಕ ಪರಿಕರಗಳನ್ನು ಮಾತ್ರ ಸಂಗ್ರಹಿಸುವ ಕೆಲಸವಲ್ಲದೆ ವಿಚಾರಗೋಷ್ಠಿಗಳೂ, ಅಧ್ಯಯನ ಕಮ್ಮಟಗಳೂ ನಡೆಯುತ್ತಿದ್ದು ‘ಕಣ್ಮರೆಯಾಗುತ್ತಿರುವ ತುಳು ಬದುಕು’ (೧೯೯೭) ಮೊದಲಾದ ಗ್ರಂಥಗಳ ಪ್ರಕಟಣೆಯ ಕಾರ್ಯವೂ ನಡೆಯುತ್ತಿರುವುದರಿಂದ ಈ ಎರಡು ನೆಲೆಗಳ ಕೆಲಸಗಳಿಗೂ ಮಹತ್ವ ಹಾಗೂ ಭವಿಷ್ಯವಿದೆ.