ಕರ್ನಾಟಕ ರಾಜ್ಯದ ಪಶ್ಚಿಮ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಈಗ ಕೇರಳಕ್ಕೆ ಸೇರಿಕೊಂಡಿರುವ ಕಾಸರಗೋಡು ಜಿಲ್ಲೆಯ ಭೂಪ್ರದೇಶದಲ್ಲಿ ಪ್ರಧಾನವಾದ ಆಡು ಭಾಷೆಯಾದ ತುಳು ದ್ರಾವಿಡಭಾಷಾ ಕುಟುಂಬದಲ್ಲಿ ಒಂದು ಪ್ರಾಚೀನವಾದ ಮತ್ತು ಪ್ರಮುಖವಾದ ಭಾಷೆ. ಈಗಿನ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಸಾಂಸ್ಕೃತಿಕ ಪ್ರದೇಶವನ್ನು ಪರಂಪರಾಗತವಾಗಿ ತುಳುನಾಡು ಎಂದು ಕರೆಯುತ್ತಿದ್ದರು. ಈ ಪ್ರದೇಶದ ಬಹುಜನರ ಆಡುನುಡಿ ತುಳು ಮಾತ್ರವಲ್ಲದೆ, ಅದು ಇತರ ಭಾಷೆಗಳನ್ನು ಮನೆಮಾತಾಗಿ ಉಳ್ಳ ಜನರ ನಡುವಿನ ಸಂಪರ್ಕಭಾಷೆಯು ಹೌದು, ಭಾಷಾವಿಜ್ಞಾನಿ ಡಾ. ರಾಬರ್ಟ್ ಕಾಲ್ಡ್‌ವೆಲ್ ಅವರು ತಮ್ಮ ತೌಲನಿಕ ದ್ರಾವಿಡ ವ್ಯಾಕರಣದಲ್ಲಿ ದ್ರಾವಿಡ ಭಾಷಾ ಕುಟುಂಬದಲ್ಲಿ ತುಳು ಚೆನ್ನಾಗಿ ಬೆಳೆದ ಹಾಗೂ ಅತ್ಯಂತ ವೈಜ್ಞಾನಿಕ ಭಾಷೆ ಎಂದು ಹೇಳಿದರು. ಸುಮಾರು ೨೦೦೦ ವರ್ಷಗಳ ಪ್ರಾಚೀನತೆ ಇದೆಯೆಂದು ಹೇಳಲಾದ ತುಳು ಭಾಷೆಯಲ್ಲಿ, ಮೌಖಿಕಪರಂಪರೆಯ ಜನಪದ ಸಾಹಿತ್ಯ ಹೇರಳವಾಗಿದೆ. ಸಂಧಿ, ಕಬಿತ, ಉರಳ್, ಹಾಡುಗಳು, ಮದಿಪು, ಕತೆ, ಗಾದೆ, ಒಗಟು, ಐತಿಹ್ಯ, ಪುರಾಣ, ನುಡಿಗಟ್ಟು ಇಂತಹ ಬಹು ಪ್ರಕಾರಗಳ ಮೌಖಿಕ ಸಾಹಿತ್ಯ ತುಳುವಿನಲ್ಲಿ ಶ್ರೀಮಂತವಾಗಿದೆ. ಆದರೆ ತುಳುವಿನಲ್ಲಿ ಅಕ್ಷರ ರೂಪದ ಲಿಖಿತ ಸಾಹಿತ್ಯ ನಿರ್ಮಾಣವಾದದ್ದು ೧೯ನೇ ಶತಮಾನದ ಪೂರ್ವಾರ್ಧದಲ್ಲಿ, ಜರ್ಮನ್ ಮಿಶನರಿಗಳು ಮಂಗಳೂರಿಗೆ ಬಂದು ಮುದ್ರಣ ಮತ್ತು ಪ್ರಕಾಶನದ ಕೆಲಸವನ್ನು ಆರಂಭ ಮಾಡಿದ ಬಳಿಕ, ಅವರು ಬೈಬಲ್ ಮತ್ತು ಸುವಾರ್ತೆಗಳ ತುಳು ಅನುವಾದಗಳನ್ನು ಮಾಡಿ ಪ್ರಕಟಣೆಗಳನ್ನು ಹೊರತಂದರು. ಶಾಲಾ ಮಕ್ಕಳಿಗಾಗಿ ತುಳು ಪಠ್ಯಪುಸ್ತಕಗಳನ್ನು ಪ್ರಕಟಿಸಿದರು. ರೆವೆರೆಂಡ್ ಎ. ಮ್ಯಾನರ್‌ನ ತುಳು ನಿಘಂಟುಗಳು ಮತ್ತು ತುಳು ಪಾಡ್ದನಗಳ ಸಂಗ್ರಹ, ರೆವೆರೆಂಡ್ ಜೆ. ಬ್ರಿಗೆಲ್‌ನ ತುಳು ವ್ಯಾಕರಣ ಗ್ರಂಥಗಳಂತಹ ವಿದ್ವತ್ತಿನ ಪ್ರಕಟಣೆಗಳು ಬೆಳಕು ಕಂಡವು. ಮುಂದೆ ೨೦ನೇ ಶತಮಾನದ ಆರಂಭದಲ್ಲಿ ರಾಷ್ಟ್ರೀಯ ಚಳುವಳಿಯ ಹಿನ್ನೆಲೆಯಲ್ಲಿ ತುಳುನಾಡಿನಲ್ಲಿ ತುಳು ಭಾಷೆಗಳ ಸಾಹಿತ್ಯೆದ ಬಗ್ಗೆ ಹೊಸ ಎಚ್ಚರ ಕಾಣಿಸಿಕೊಂಡಿತು. ಪಣಿಯಾಡಿ ಶ್ರೀನಿವಾಸ ಉಪಾಧ್ಯಾಯರು ಉಡುಪಿಯಲ್ಲಿ ತುಳುವ ಸಾಹಿತ್ಯ ಮಾಲೆ ಎನ್ನುವ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ ಅನೇಕ ಹಿರಿಯ ಲೇಖಕರ ತುಳು ಕೃತಿಗಳು ನಿರ್ಮಾಣವಾಗಿ ಪ್ರಕಟವಾಗಲು ಕಾರಣರಾದರು. ಅಮುಣಂಜೆಗುತ್ತು ಶೀನಪ್ಪ ಹೆಗಡೆ, ನಾರಾಯಣ ಕಿಲ್ಲೆ, ಬಡಕಬೈಲು ಪರಮೇಶ್ವರಯ್ಯ, ಸತ್ಯಮಿತ್ತ ಬಂಗೇರ, ಮಾಧವ ತಿಂಗಳಾಯ ಮುಂತಾದವರು ಆಧುನಿಕ ತುಳು ಸಾಹಿತ್ಯ ನಿರ್ಮಾಣದ ರೂವಾರಿಗಳಾಗಿ ತುಳು ಸಾಹಿತ್ಯದ ಭಿನ್ನ ಪ್ರಕಾರಗಳ ಸೃಷ್ಟಿಗೆ ಕಾರಣರಾದರು. ಮುಂದೆ ತುಳು ನಾಟಕ ಸಾಹಿತ್ಯ ನಿರ್ಮಾಣ ಹಾಗೂ ರಂಗಭೂಮಿ ಚಟುವಟಿಕೆಗಳು ತುಳುವನ್ನು ಜನಸಾಮಾನ್ಯರ ಬಳಿಗೆ ಒಯ್ದವು. ತುಳುವಿನಲ್ಲಿ ಯಕ್ಷಗಾನ ಪ್ರಸಂಗಗಳ ನಿರ್ಮಾಣ ಮತ್ತು ಪ್ರದರ್ಶನಗಳು ಗ್ರಾಮೀಣ ಪ್ರದೇಶದಲ್ಲಿ ತುಳುವಿಗೆ ಶಕ್ತಿ ಮತ್ತು ಅನನ್ಯತೆಯನ್ನು ತಂದುಕೊಟ್ಟವು. ಈಗಿನ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದ ಕನ್ನಡ ಎಂ.ಎ. ಶಿಕ್ಷಣದಲ್ಲಿ ತುಳುನಾಡಿನ ಇತಿಹಾಸ, ತುಳು ಭಾಷೆ ಮತ್ತು ಸಾಹಿತ್ಯ, ತುಳು ಜಾನಪದ ಅಧ್ಯಯನದ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಐತಿಹಾಸಿಕ ಘಟನೆ (೧೯೭೬). ಇದರಿಂದಾಗಿ ವಿಶ್ವವಿದ್ಯಾನಿಲಯದಲ್ಲಿ ತುಳು ಅಧ್ಯಯನಕ್ಕೆ ವಿಶೇಷ ಅವಕಾಶಗಳು ಪ್ರಾಪ್ತವಾದವು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಪ್ರೊ. ಕು.ಶಿ. ಹರಿದಾಸಭಟ್ಟರ ನಿರ್ದೇಶನದಲ್ಲಿ ಡಾ. ಯು.ಪಿ. ಉಪಾಧ್ಯಾಯರ ಪ್ರಧಾನ ಸಂಪಾದಕತ್ವದಲ್ಲಿ ನಿರ್ಮಾಣಗೊಂಡ ತುಳು ನಿಘಂಟುವಿನ ಆರು ಸಂಪುಟಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದವು. ಉಡುಪಿ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ತುಳು ಮೌಖಿಕಸಾಹಿತ್ಯದ ದಾಖಲೀಕರಣ ವಿಶೇಷವಾಗಿ ನಡೆದು ಜಾಗತಿಕ ವಿದ್ವಾಂಸರ ಗಮನ ಸೆಳೆಯಿತು. ಕರ್ನಾಟಕ ಸರ್ಕಾರವು ೧೯೯೪ರಲ್ಲಿ ಸ್ಥಾಪಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಸಾಹಿತ್ಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು. ಯುವ ಬರಹಗಾರರಿಗೆ ತುಳು ಸೃಜನ ಸಾಹಿತ್ಯದ ನಿರ್ಮಾಣಕ್ಕೆ ತರಬೇತಿ ಮತ್ತು ಅವಕಾಶಗಳು ದೊರೆತವು. ತುಳುಕೂಟದಂತಹ ಅನೇಕ ಸಂಘ ಸಂಸ್ಥೆಗಳು ನಾಡಿನ ಹೊರಗೆ ಮತ್ತು ಒಳಗೆ ತುಳು ಭಾಷೆ ಮತ್ತು ಸಾಹಿತ್ಯದ ಪ್ರಸರಣವನ್ನು ನಿರಂತರವಾಗಿ ಮಾಡುತ್ತಾ ಬಂದಿವೆ. ತುಳು ಪತ್ರಿಕೆಗಳು, ತುಳು ನಾಟಕಗಳು, ತುಳು ಸಿನಿಮಾಗಳು, ತುಳು ಭಾಷೆ ಸಾಹಿತ್ಯ ಪ್ರಸರಣಕ್ಕೆ ಮಾಧ್ಯಮಗಳ ಮೂಲಕ ಹೆಚ್ಚಿನ ಸಂವನಹಶೀಲತೆಯನ್ನು ಒದಗಿಸಿಕೊಟ್ಟಿವೆ. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಮತ್ತು ತುಳು ಪೀಠದಂತಹ ಸಂಸ್ಥೆಗಳು ತುಳು ಭಾಷೆ, ಸಾಹಿತ್ಯ, ಜಾನಪದದಲ್ಲಿ ಪಿಎಚ್.ಡಿ ಮತ್ತು ಎಂ.ಫಿಲ್. ಸಂಶೋಧನೆಯ ನೆಲೆಯಲ್ಲಿ ತುಂಬ ಮಹತ್ವದ ಕೆಲಸಗಳನ್ನು ಮಾಡಿವೆ. ಅಮೆರಿಕಾ, ಜರ್ಮನಿ, ಫ್ರಾನ್ಸ್, ಜಪಾನ್, ಇಟಲಿ ಮುಂತಾದ ದೇಶಗಳ ಅನೇಕ ವಿದ್ವಾಂಸರು ತುಳು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ನಡೆಸಿ ಪ್ರಕಟಣೆಗಳನ್ನು ಹೊರತಂದಿದ್ದಾರೆ. ಸಾಹಿತ್ಯ ಅಕಾಡೆಮಿ, ನವದೆಹಲಿಯು ಮೊತ್ತಮೊದಲ ಬಾರಿಗೆ ತುಳುವಿನಂತಹ ಒಂದು ಪ್ರಾದೇಶಿಕ ಭಾಷೆಗೆ ಮನ್ನಣೆ ಕೊಟ್ಟು ಭಾಷಾಕ ಸಮ್ಮಾನ್ ಎನ್ನುವ ಗೌರವ ಪ್ರಶಸ್ತಿಯನ್ನು ತುಳುವಿನ ಇಬ್ಬರು ಹಿರಿಯ ಲೇಖಕರಾದ ಮಂದಾರ ಕೇಶವಭಟ್ಟ ಮತ್ತು ಕೆದಂಬಾಡಿ ಜತ್ತಪ್ಪ ರೈ ಅವರಿಗೆ ಕೊಡಮಾಡಿರುವುದು ಭಾರತೀಯ ಸಂದರ್ಭದಲ್ಲಿ ಮಹತ್ವದ ಸಂಗತಿ. ಹೀಗೆ ಭಾರತದ ದೃಷ್ಟಿಯಿಂದ ಒಂದು ಜಿಲ್ಲೆಯ ಮಟ್ಟದಲ್ಲಿ ಇರುವ ಬಾಷೆ ಮತ್ತು ಅದರ ಸಾಹಿತ್ಯ ಸಂಸ್ಕೃತಿಗಳು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವುದರ ಜೊತೆಗೆ ಆಧುನಿಕ ಸನ್ನಿವೇಶದಲ್ಲಿ ಅಭಿವೃದ್ಧಿ ಪಡುವ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸುತ್ತಿರುವ ತುಳು ಸಾಹಿತ್ಯ ಚರಿತ್ರೆಯ ಈ ಸಂಪುಟವು ಅಂತಹ ನೂರಾರು ಪರಿಶ್ರಮಗಳನ್ನು ಏಕೀಕರಣಗೊಳಿಸುವ ಒಂದು ಪ್ರಾಮಾಣಿಕ ಪ್ರಯತ್ನ.

ತುಳುವಿನಲ್ಲಿ ಲಭ್ಯವಾಗುವ ಎಲ್ಲ ಭಾಷಿಕ ಸಾಂಸ್ಕೃತಿಕ ಸಾಧನೆಗಳನ್ನು ಅಧಿಕೃತವಾಗಿ ದಾಖಲುಗೊಳಿಸುವ ಕೆಲಸ ಅವಶ್ಯವಾಗಿ ನಡೆಯಬೇಕಾಗಿತ್ತು. ತುಳುವಿನ ಓರಗೆಯ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಿಗೆ ಸಾಹಿತ್ಯ ಚರಿತ್ರೆ ರಚನೆಯಾಗಿದ್ದು ತುಳುವಿನಲ್ಲಿ ಆ ಕೆಲಸ ನಡೆಯದೆ ಇದ್ದುದು ಒಂದು ಅರಕೆಯಾಗಿ ಉಳಿದಿತ್ತು. ಅದೀಗ ತಡವಾಗಿಯಾದರೂ ಕನ್ನಡ ವಿಶ್ವವಿದ್ಯಾಲಯದಿಂದ ಆಗುತ್ತಿರುವುದು ಸಂತಸದ ಸಂಗತಿ. ತುಳುನಾಡಿನ ಇತಿಹಾಸ, ಭಾಷೆ, ಜಾನಪದ, ಸಾಹಿತ್ಯ, ಯಕ್ಷಗಾನ, ಮಾದ್ಯಮ ಹೀಗೆ ಮುಖ್ಯವಾದ ಆರು ಒಳವಿಭಾಗಗಳಿರುವ ಈ ಸಾಹಿತ್ಯಚರಿತ್ರೆಯನ್ನು ತುಳುವಿನ ವಿಶ್ವಕೋಶ ಎಂದು ಕರೆಯಬಹುದು. ಜೊತೆಗೆ ಆಧುನಿಕಲ ತುಳುವಿನ ಪುನರುಜ್ಜೀವನದಲ್ಲಿ ಪಾತ್ರ ವಹಿಸಿದ ತುಳು ಸಾಂಸ್ಥಿಕ ನೆಲೆಗಳು ಹಾಗೂ ತುಳು ಸಾಹಿತ್ಯ / ಸಂಸ್ಕೃತಿ / ಅಧ್ಯಯನದ ವಿರಣಾತ್ಮಕ ಆಕರಸೂಚಿ ಈ ಸಂಪುಟದ ಮಹತ್ವದ ಅಂಶಗಳು. ತುಳುಭಾಷೆ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದ ವಿವಿಧ ಸಂಘಟನೆಗಳನ್ನು, ಕೃತಿಗಳನ್ನು ಎಲ್ಲ ವಿವರಗಳೊಂದಿಗೆ ಮೊದಲಬಾರಿಗೆ ವೈಜ್ಞಾನಿಕವಾಗಿ ಇಲ್ಲಿ ದಾಖಲು ಮಾಡಲಾಗಿದೆ. ಇದು ತುಳುವಿನಲ್ಲಿ ಇತಿಹಾಸ ರಚನೆಗೆ ಪ್ರಮುಖ ಆಕರವಾಗುವುದು ಖಂಡಿತ. ಹೀಗೆ ತುಳುವಿನ ನಿನ್ನೆ ಇಂದು ನಾಳೆಗಳ ಸಮಗ್ರ ಮಾಹಿತಿಗಳಿ ಒಂದು ಆಕರಕೋಶದ ರೂಪದಲ್ಲಿ ಈ ಸಂಪುಟದಲ್ಲಿ ಜೋಡಣೆಗೊಂಡಿವೆ. ಈ ಸಂಪುಟದ ಇನ್ನೊಂದು ವೈಶಿಷ್ಟ್ಯವೆಂದರೆ ತುಳುವಿನ ಭವಿಷ್ಯದ ಬಗೆಗೂ ಇಲ್ಲಿ ಚಿಂತನೆ ನಡೆದಿದೆ. ಚಲನಚಿತ್ರ, ವಿದ್ಯುನ್ಮಾನ, ಶೈಕ್ಷಣಿಕ ಮುಂತಾದ ಮಾಧ್ಯಮಗಳ ಹಿನ್ನೆಲೆಯಲ್ಲಿ ತುಳುವಿನ ಭವಿಷ್ಯವನ್ನು ರೂಪಿಸುವ ಮಾನಕಗಳನ್ನು ಪರಿಶೀಲಿಸಲಾಗಿದೆ. ಹೀಗೆ ತುಳುವಿನ ಭವಿಷ್ಯದರ್ಶಿ ಭೂಮಿಕೆಯನ್ನು ಪರಿಕಲ್ಪಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿ ಶೋಧನೆಯ ಬಗೆಗೆ ಕಾಳಜಿ ತೋರಿಸಿದಂತೆ ಕರ್ನಾಟಕದ ವಿವಿಧ ಭಾಷೆ, ಸಂಸ್ಕೃತಿ, ಜನಸಮುದಾಯದ ನಡೆ ನುಡಿಯ ಬಗೆಗೂ ಅಧ್ಯಯನ ನಡೆಸುತ್ತಾ ಬಂದಿದೆ. ಈ ಕುರಿತು ಅನೇಕ ಗ್ರಂಥಗಳನ್ನು ಪ್ರಕಟಿಸುತ್ತಾ ಬಂದಿದೆ. ಪ್ರೊ. ಅಮೃತ ಸೋಮೇಶ್ವರರ ತುಳು ಪಾಡ್ದನ ಸಂಪುಟ, ಪ್ರೊ. ಎ.ವಿ. ನಾವಡರು ಸಂಪಾದಿಸಿದ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ದನ, ಡಾ. ಮೋಹನಕೃಷ್ಣ ರೈಯವರ ತುಳು ಸಂಸ್ಕೃತಿ : ಚತುರ್ಮುಖೀ ಅಧ್ಯಯನ ಕನ್ನಡ ವಿಶ್ವವಿದ್ಯಾಲಯದ ಕೃತಿಗಳು. ಈ ದಿಸೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹೊರತರುತ್ತಿರುವ ತುಳು ಸಾಹಿತ್ಯ ಚರಿತ್ರೆ ಒಂದು ಮಹತ್ವದ ಅಧ್ಯಯನ ಯೋಜನೆ ಎಂದು ನಾನು ಭಾವಿಸಿದ್ದೇನೆ. ಕನ್ನಡ ವಿಶ್ವವಿದ್ಯಾಲಯದ ಎರಡು ವಿಭಾಗಗಳಾದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ ಮತ್ತು ಹಸ್ತಪ್ರತಿಶಾಸ್ತ್ರ ವಿಭಾಗಗಳ ಅಧ್ಯಾಪಕರ ಜಂಟಿ ಪ್ರಯತ್ನದ ಫಲವಾಗಿ ಸಂಪನ್ನಗೊಂಡ ಯೋಜನೆಯಿದು. ನನಗಿಂತ ಹಿಂದಿನ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡರ ಕಾಲಾವಧಿ ೨೦೦೧-೨೦೦೪ರಲ್ಲಿ ಆರಂಭಗೊಂಡ ಈ ಯೋಜನೆ ನನ್ನ ಕಾಲಾವಧಿಯಲ್ಲಿ ಪೂರ್ಣಗೊಳ್ಳುತ್ತಿರುವುದು ಸಂತಸದ ಸಂಗತಿ. ಪ್ರಾರಂಭದಲ್ಲಿ ತುಳುವಿನ ಮೌಖಿಕ ಹಾಗೂ ಅಕ್ಷರ ರೂಪದ ಸಾಹಿತ್ಯ ಚರಿತ್ರೆಗೆ ಸೀಮಿತಗೊಂಡಿದ್ದ ಈ ಯೋಜನೆ ಕಾಲದಿಂದ ಕಾಲಕ್ಕೆ ಬೆಳೆಯುತ್ತ ಬಂದು ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟಂತೆ ಒಂದು ವಿಶ್ವಕೋಶದ ರೂಪವನ್ನು ಪಡೆಯಿತು. ಇದರಿಂದ ದ್ರಾವಿಡ ಭಾಷಾ ವರ್ಗದ ಮಹತ್ವದ ಭಾಷೆಯೊಂದರ ಸಮಗ್ರ ಮಾಹಿತಿಗಳು, ಅಧ್ಯಯನದ ವಿವರಗಳು ಮೊದಲ ಬಾರಿಗೆ ಅನಾವರಣಗೊಂಡವು. ಈ ಗ್ರಂಥದಲ್ಲಿ ಬಳಕೆಯಾದ ಆಕರ ಪರಿಕರಗಳು ಮುಂದಿನ ದಿನಗಳಲ್ಲಿ ದ್ರಾವಿಡ ಸಂಸ್ಕೃತಿಯ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸಲು ಶಕ್ತವಾಗಿದೆ.

ತುಳು ಸಾಹಿತ್ಯ ಚರಿತ್ರೆಯ ನಿರ್ಮಾಣದ ಹಿಂದೆ ಹಲವರ ಕನಸು, ಪ್ರಯತ್ನ, ನೆರವು ಸಂಪನ್ನಗೊಂಡಿವೆ. ಪ್ರಸಾರಾಂಗದ ಈಗಿನ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದಾಗ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎ.ವಿ.ನಾವಡ ಅವರು ತುಳು ಸಾಹಿತ್ಯ ಚರಿತ್ರೆ ಯನ್ನು ರೂಪಿಸುವ ಕಾರ್ಯವ್ಯಾಪ್ತಿಗೆ ಪೂರಕವಾದ ಈ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಿದರು. ಅಂತೆಯೇ ಪ್ರೊ. ಎ.ವಿ. ನಾವಡ ಅವರು ಯೋಜನೆಯನ್ನು ಸಿದ್ಧಪಡಿಸಿ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಡಾ. ಸುಬ್ಬಣ್ಣ ರೈ, ಡಾ. ಮಾಧವ ಪೆರಾಜೆ ಅವರ ಜತೆ ಸಮಾಲೋಚಿಸಿ ಅಂದಿನ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರ ಜೊತೆ ಚರ್ಚಿಸಿ ಯೋಜನೆಗೆ ಅಧಿಕೃತ ಒಪ್ಪಿಗೆಯನ್ನು ಪಡೆಯಲಾಯಿತು. ದ್ರಾವಿಡಸಂಸ್ಕೃತಿ ಅಧ್ಯಯನ ವಿಭಾಗದ ಬಳಿಕದ ಮುಖ್ಯಸ್ಥರಾದ ಡಾ. ಸುಬ್ಬಣ್ಣ ರೈ ಹಾಗೂ ಈಗಿನ ಮುಖ್ಯಸ್ಥರಾದ ಡಾ. ಮಾಧವ ಪೆರಾಜೆ ಅವರ ಸಹಕಾರದಿಂದ ಈ ಮಹತ್ವದ ಯೋಜನೆ ಮುಂದುವರಿಯಿತು ಮತ್ತು ಪೂರ್ಣಗೊಂಡಿತು. ಆಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಡಾ. ವಾಮನ ನಂದಾವರ ಅವರು ತುಳು ಸಾಹಿತ್ಯ ಅಕಾಡೆಮಿಯ ಚಾವಡಿಯಲ್ಲಿ ತುಳು ವಿದ್ವಾಂಸರ ಜೊತೆ ಚರ್ಚಿಸಿ ಸಲಹೆ ಸಹಕಾರ ಪಡೆಯುವ ಸಲುವಾಗಿ ಅವಕಾಶ ಕಲ್ಪಿಸಿ ಕನ್ನಡ ವಿಶ್ವವಿದ್ಯಾಲಯವು ತುಳು ನೆಲದಲ್ಲಿ ಮೈಚಾಚಲು ಅನುವು ಮಾಡಿಕೊಟ್ಟರು. ತುಳು ಪಂಡಿತರು ತುಳು ಕೈಂಕರ್ಯದಲ್ಲಿ ಸಲಹೆ ಸಹಕಾರ ನೀಡುವ ಮೂಲಕ ಈ ಸಾಮೂಹಿಕ ಯೋಜನೆಯನ್ನು ಸಾಕರಗೊಳಿಸಿದರು. ಇವರೆಲ್ಲರಿಗೂ ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಾಧ್ಯಾಪಕರಾದ ಪ್ರೊ. ಎ.ವಿ. ನಾವಡ ಅವರ ತುಳು ಸಾಹಿತ್ಯ ಚರಿತ್ರೆಯ ಕನಸಿನ ಬೀಜದ ಕ್ಷಣದಿಂದ ತೊಡಗಿ ಅದು ಸಂಪೂರ್ಣಗೊಳ್ಳುವ ಕೊನೆಯ ಹಂತದವರೆಗೂ ತಮ್ಮನ್ನು ಈ ಯೋಜನೆಗೆ ತೆತ್ತುಕೊಂಡು ವಿಶೇಷವಾಗಿ ದುಡಿದಿದ್ದಾರೆ. ಲೇಖನಗಳ ಮತ್ತು ಲೇಖಕರ ಆಯ್ಕೆ, ವಿದ್ವಾಂಸರೊಂದಿಗೆ ಸಂಪರ್ಕ, ನಿರಂತರ ಸಮಾಲೋಚನೆ, ಕರಡು ತಿದ್ದುವಿಕೆ ಮತ್ತು ಮುದ್ರಣಾಲಯದಲ್ಲಿ ಅಂತಿಮ ರೂಪ ಕೊಡುವ ಎಲ್ಲ ಕೆಲಸಗಳನ್ನು ತುಂಬು ಪ್ರೀತಿ ಪರಿಶ್ರಮದಿಂದ ನಿರ್ವಹಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತಿಯಾದರೂ ತಮ್ಮ ಮೆಚ್ಚಿನ ಯೋಜನೆಗೆ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಪ್ರೀತಿ ವಿಶ್ವಾಸದ ಕೃತಜ್ಞತೆಗಳನ್ನು ತಿಳಿಸಲು ಅಭಿಮಾನಪಡುತ್ತೇನೆ.

ಡಾ. ವಾಮನ ನಂದಾವರ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಈ ಯೋಜನೆ ತುಳು ಚಾವಡಿಯಲ್ಲಿ ಮೊಳಕೆ ಒಡೆಯಿತು. ಬಳಿಕ ಈ ಸಂಪುಟದ ಲೇಖಕರನ್ನು ಸಂಪರ್ಕಿಸುವ, ಲೇಖನಗಳನ್ನು ಸಂಪಾದಿಸುವ, ಅನೇಕ ಲೇಖಕರಿಗೆ ಆಕರ ಗ್ರಂಥಗಳನ್ನು ತಮ್ಮ ವೈಯಕ್ತಿಕ ಭಂಡಾರದಿಂದ ಕೊಡುವ ಕೆಲಸವನ್ನು ನಿರಂತರವಾಗಿ ಡಾ. ನಂದಾವರ ಅವರು ಪ್ರೀತಿಯಿಂದ ಮಾಡಿದ್ದಾರೆ. ತುಳುನಾಡಿನ ಸಾಂಸ್ಕೃತಿಕ ನೆಲೆಗಳು ಮತ್ತು ತುಳು ಸಾಹಿತ್ಯ ಸಂಸ್ಕೃತಿಯ ಆಕರಸೂಚಿಯನ್ನು ತುಂಬ ಪರಿಶ್ರಮಪೂರ್ವಕ ಈ ಸಂಪುಟಕ್ಕಾಗಿಯೇ ಸಿದ್ಧಪಡಿಸಿಕೊಟ್ಟಿದ್ದಾರೆ. ಇವೆಲ್ಲವುಗಳ ಜೊತೆಗೆ ಈ ಸಂಪುಟದ ಮುದ್ರಣದ ಸಂದರ್ಭದಲ್ಲಿ ಕರಡು ತಿದ್ದುವ ಕೆಲಸವನ್ನು ವಿಶ್ವಾಸದಿಂದ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಈ ತುಳು ಸಾಹಿತ್ಯ ಚರಿತ್ರೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ಇವರ ಸಹಕಾರವನ್ನು ವಿಶೇಷವಾಗಿ ಸ್ಮರಿಸುತ್ತೇನೆ.

ತುಳು ಭಾಷೆ, ಸಾಹಿತ್ಯ, ಜಾನಪದ ಮತ್ತು ಸಂಸ್ಕೃತಿಯ ಕ್ಷೇತ್ರದ ಹಿರಿಯ ವಿದ್ವಾಂಸರಾದ ಪ್ರೊ. ಅಮೃತ ಸೋಮೇಶ್ವರ ಅವರು ಮತ್ತು ಈ ಕ್ಷೇತ್ರಗಳ ಮಹತ್ವದ ಸಂಶೋಧಕ ವಿದ್ವಾಂಸರಾದ ಪ್ರೊ. ಚಿನ್ನಪ್ಪಗೌಡರು, ಸಂಪಾದನಾ ಸಲಹಾ ಸಮಿತಿಯ ಸದಸ್ಯರಾಗಿ ಇಡೀ ಸಂಪುಟದ ರೂಪರೇಷೆಯನ್ನು ಅಂತಿಮಗೊಳಿಸುವಲ್ಲಿ ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಈ ಸಾಹಿತ್ಯ ಚರಿತ್ರೆಯ ಸಂಪುಟವು ಈ ಪ್ರಮಾಣದಲ್ಲಿ ಸಂಪನ್ನಗೊಳ್ಳುವಲ್ಲಿ ಈ ವಿದ್ವಾಂಸರ ಸಲಹೆ ಸೂಚನೆಗಳ ಸಹಕಾರವನ್ನು ವಿಶೇಷವಾಗಿ ಸ್ಮರಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ತುಳು ಸಾಹಿತ್ಯ ಚರಿತ್ರೆಯ ಎಂಬ ಈ ಮಹತ್ವದ ಯೋಜನೆ ಪೂರ್ಣಗೊಂಡು ಪ್ರಕಟಣೆಯ ಭಾಗ್ಯ ಕಾಣುವ ಈ ಸಂದರ್ಭದಲ್ಲಿ ಆ ವಿಭಾಗದ ಎಲ್ಲಾ ಅಧ್ಯಾಪಕರನ್ನು ಪ್ರೀತಿ, ವಿಶ್ವಾಸದಿಂದ ಸ್ಮರಿಸುತ್ತೇನೆ.

ವಿಭಾಗದ ಮುಖ್ಯಸ್ಥರುಗಳಾಗಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ಸುಬ್ಬಣ್ಣ ರೈ ಮತ್ತು ಡಾ. ಕೆ. ಮಾಧವ ಪೆರಾಜೆ ಅವರು ತೋರಿಸಿದ ಶ್ರದ್ಧೆ ಮತ್ತು ಪರಿಶ್ರಮಗಳಿಗೆ ವಂದನೆಗಳು.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಬಿ.ಎ. ವಿವೇಕ ರೈ
ಕುಲಪತಿ