ಈ ಪ್ರಬಂಧ[1]ದಲ್ಲಿ ತುಳು ಯಕ್ಷಗಾನವೆಂದರೆ, ತುಳು ಭಾಷೆಯಲ್ಲಿ ರಚಿತವಾದ ಪ್ರಸಂಗ, ಅರ್ಥಗಾರಿಕೆ, ವೇಷವಿಧಾನ, ಕನ್ನಡ ಪದ್ಯ, ಕನ್ನಡ ಅರ್ಥಗಾರಿಕೆಗಳಿದ್ದು ತುಳುನಾಡಿಗೆ ಸಂಬಂಧಿಸಿದ ಕಥಾನಕಗಳು, ತುಳು ಕನ್ನಡ ಮಿಶ್ರಣದ ಅಥವಾ ತುಳುವಿನಲ್ಲೆ ಪ್ರದರ್ಶಿತವಾದ ಪೌರಾಣಿಕ (ಎಂದರೆ ಸಂಸ್ಕೃತ ಮೂಲದ ಕಥಾನಕ) ಕಥೆಗಳ ಪ್ರದರ್ಶನಗಳು –ಇವೆಲ್ಲ ಸೇರುತ್ತವೆ. ಮತ್ತು ನಿನ್ನೆ ಎಂದರೆ ಸುಮಾರು ೧೯೫೦ರ ವರೆಗಿನ ಅವಧಿ ಎಂದೂ, ಇಂದು ಎಂದರೆ ಅಂದಿನಿಂದ ಬಳಿಕದ ಅವಧಿ ಎಂದೂ, ನಾಳೆ ಎಂದರೆ, ತುಳು ಯಕ್ಷಗಾನದ ಸಾಧ್ಯತೆ ಮತ್ತು ಸಂಭಾವ್ಯ ಸ್ಥಿತಿಗಳ ಬಗೆಗಿನ ಮುನ್ನೋಟ ಎಂದೂ ಅರ್ಥ. ಇಲ್ಲಿ ತುಳು ಯಕ್ಷಗಾನದ ನಿನ್ನೆ, ಇಂದುಗಳನ್ನು ಪರಿಶೀಲಿಸುವಾಗ, ಮೇಳಗಳು, ಪ್ರಸಂಗಕರ್ತರು, ಕಲಾವಿದರು – ಮೊದಲಾದ ವಿಷಯಗಳನ್ನು ವಿವರವಾಗಿ ಪರಿಶೀಲಿಸಿ ಪಟ್ಟಿ ಮಾಡದೆ, ಪ್ರಧಾನ ಪ್ರವೃತ್ತಿಗಳನ್ನು ಗಮನಿಸಿದೆ. ರಂಗ ಪ್ರಯೋಗದ ದೃಷ್ಟಿಯಿಂದ ಸಾಧಕ ಪರಿಶೀಲನೆಯೇ ಇಲ್ಲಿನ ಪ್ರಧಾನ ಲಕ್ಷ್ಯ.

೧೯೫೦ರ ಅನಂತರ ವಿಶೇಷವಾಗಿ ಬಳಕೆಗೆ ಬಂದ ತುಳು ಯಕ್ಷಗಾನ ಪ್ರದರ್ಶನಗಳು, ಪ್ರಾಚೀನ ಕಲೆಯೊಂದರ ಹೊಸ ಕವಲಾಗಿ, ಹೊಸ ವಿಸ್ತಾರವಾಗಿ, ಕಲೆಗೆ ಹೊಸ ಆಯಾಮವನ್ನು ಕಲ್ಪಿಸಿದವು.

ಜತೆಗೆ ಒಂದು ಖಚಿತ ಶೈಲಿ ಮತ್ತು ಸಂಪ್ರದಾಯದ ರೂಪ ಹೊಂದಿದ ಕಲೆಯೊಂದರಲ್ಲಿ, ಹೊಸ ಸಮಸ್ಯೆಗಳನ್ನು ಸೃಷ್ಟಿಸಿದುದೂ ನಿಜ.

ಸದ್ಯದ ತಿಳಿವಳಿಕೆಯಂತೆ, ತುಳು ಯಕ್ಷಗಾನದ ಇತಿಹಾಸ ನೂರು ವರ್ಷಗಳಷ್ಟು, ೧೮೮೭ರಲ್ಲಿ ಬಾಯಾರು ಪೆರ್ವಡಿ ಸಂಕಯ್ಯ ಭಾಗವತರು ಬರೆದೆ ಪಂಚವಟಿ ವಾಲಿ ಸುಗ್ರೀವರ ಕಾಳಗ (ಪಾರ್ತಿಸುಬ್ಬನ ಪ್ರಸಂಗದ ಅನುವಾದ) ತುಳುವಿನ ಮೊದಲ ಯಕ್ಷಗಾನ ಪ್ರಸಂಗ. ವಿಟ್ಳದ ಅರಮನೆಯ ಸ್ತ್ರೀಯರಿಗಾಗಿ, ಅಲ್ಲಿ ಅದನ್ನು ತುಳುವಿನಲ್ಲೇ ಆಡಿದರೆಂದು ಪ್ರತೀತಿ. ಇಷ್ಟು ಹಿಂದಕ್ಕೆ ತುಳುವಿನಲ್ಲಿ ಯಕ್ಷಗಾನ ರಚನೆ ಆಗಿದ್ದರೂ ೧೯೫೦ರವರೆಗೆ ಬಂದ ತುಳು ಪ್ರಸಂಗ ರವನೆ ಬೆರಳೆಣಿಕೆಯದೇ. ಇಪ್ಪತ್ತರ ದಶಕದಲ್ಲಿ ಬಡಕಬೈಲು ಪರಮೇಶ್ವರಯ್ಯನವರು ಬರೆದ ‘ತುಳು ಕಿಟ್ಣರಾಜಿ ಪರ್ಸಂಗೊ’ (ಕೃಷ್ಣ ಸಂಧಾನ ಪ್ರಸಂಗ), ದೇರಂಬಳ ತ್ಯಾಂಪಣ್ಣ ಶೆಟ್ಟರ ‘ಪಂಚವಟಿ’ (೧೯೩೨), ಪಂದಬೆಟ್ಟು ವೆಂಕಟರಾಯರ ಕೋಟಿಚೆನ್ನಯ (೧೯೩೯) ಇವು ಆವರೆಗಿನ ಪ್ರಮುಖ ರಚನೆಗಳು. (ಇಲ್ಲಿನ ಮಾಹಿತಿಗಳು : ಅಮೃತ ಸೋಮೇಶ್ವರರ ಲೇಖನ; ಯಕ್ಷಕರ್ದಮಃ ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ೧೯೮೪).

ಪ್ರಸಂಗ ರಚನೆ ತುಳುವಿನಲ್ಲಿ ಹಿಂದೆಯೇ ಆರಂಭವಾದರೂ, ತುಳು ಭಾಷೆಯಲ್ಲಿ ರಂಗ ಪ್ರಯೋಗಗಳು ಬೆಳೆದು ಬಂದದ್ದು ೧೯೫೦ರ ಬಳಿಕವೇ. ತುಳು ಯಕ್ಷಗಾನ ಚರಿತ್ರೆಯ ಅತ್ಯಂತ ಮಹತ್ವದ ಪ್ರಸಂಗ ‘ಕೋಟಿ ಚೆನ್ನಯ’ ಕನ್ನಡ ಭಾಷೆಯಲ್ಲಿದ್ದು, ಆರಂಭದಲ್ಲಿ ರಂಗಪ್ರಯೋಗವೂ ಕನ್ನಡದಲ್ಲೆ ಇರುತ್ತಿತ್ತು.

ರಚನೆ ಮತ್ತು ರಂಗಪ್ರಯೋಗದ ದೃಷ್ಟಿಯಿಂದ ವಿಶ್ಲೇಷಿಸಿದಾಗ ನಾವು ‘ತುಳುಯಕ್ಷಗಾನ’’ಗಳೆನ್ನುವಂತಹವುಗಳಲ್ಲಿ ಈ ವಿಧಗಳಿವೆ.

ಭಾಷಾ ದೃಷ್ಟಿಯಿಂದ

-ಪದ್ಯಗಳು – ಅರ್ಥ (ಮಾತುಗಾರಿಕೆ) ಎರಡೂ ಕನ್ನಡದಲ್ಲಿ, ಕತೆ ತುಳು ಸಂಸ್ಕೃತಿಯದು.
– ಪದ್ಯ ರಚನೆ ಕನ್ನಡ – ಮಾತುಗಾರಿಕೆ – ಕನ್ನಡ ಮತ್ತು ತುಳುವಿನಲ್ಲಿ.
– ಪದ್ಯ ರಚನೆ ಮಾತುಗಾರಿಕೆ ಎರಡೂ ತುಳುವಿನಲ್ಲಿ.
– ಪದ್ಯ, ಮಾತು ಎರಡೂ ಎರಡು ಭಾಷೆಗಳಲ್ಲಿ ಮಿಶ್ರಣ.
– ಈ ಪ್ರಯೋಗಗಳೆಲ್ಲದರಲ್ಲಿ, ಕೆಲವು ಪಾತ್ರಗಳಲ್ಲಿ ಮಲಯಾಳದ ಬಳಕೆಯೂ ಇರುವುದುಂಟು.

ಕಥಾ ವಸ್ತುವಿನ ದೃಷ್ಟಿಯಿಂದ

– ತುಳು ನಾಡಿಗೆ ಸಂಬಂಧಿಸಿದ ಕತೆ.
– ಸಂಸ್ಕೃತ ಮೂಲದ (ಭಾರತ, ಭಾಗವತಾದಿ) ಪುರಾಣ.
– ಸಂಸ್ಕೃತ ಮೂಲದ ಕತೆ, ತುಳು ಕತೆಗಳ ಮಿಶ್ರಣ.
– ಜಾನಪದ ಮೂಲದ, ತುಳುವೇತರ ಕತೆ.
– ನಾಟಕ, ಇತಿಹಾಸಗಳ ರೂಪಾಂತರ.
– ಕಾಲ್ಪನಿಕ.
– ಸಿನಿಮಾ ಕತೆಗಳ ತುಳು – ಯಕ್ಷಗಾನ ರೂಪಾಂತರ.

ವೇಷ ಭೂಷಣ ದೃಷ್ಟಿಯಿಂದ

– ಸಾಂಪ್ರದಾಯಕ ಯಕ್ಷಗಾನ ವೇಷಗಳು.
– ನಾಟಕ (ಐತಿಹಾಸಿಕ, ಪೌರಾಣಿಕ ನಾಟಕಗಳ ಜನಪ್ರಿಯ ಶೈಲಿ).
– ಮಿಶ್ರಿತ.

ಮೇಲೆ ವಿವರಿಸಿದ ಅಂಶಗಳು. ೧೯೫೦ರ ಬಳಿಕ ಈವರೆಗೆ ಬೇರೆ ಬೇರೆ ಹಂತಗಳಲ್ಲಿ ಬಳಕೆಯಾದ ಪ್ರವೃತ್ತಿಗಳು. ಇವುಗಳ ಪೈಕಿ ಇದೀಗ ಭಾಷಾ ದೃಷ್ಟಿಯಿಂದ ಪದ್ಯ, ಅರ್ಥ ಎರಡಕ್ಕೂ ತುಳುವನ್ನೆ ಬಳಸಲಾಗುತ್ತಿದೆ. ಕಥಾ ದೃಷ್ಟಿಯಿಂದ ಮೇಲೆ ಹೇಳಿದ ಎಲ್ಲ ರೀತಿಗಳು ಇದ್ದರೂ, ಕಾಲ್ಪನಿಕ, ರೂಪಾಂತರ ಮತ್ತು ಸಿನಿಮೀಯವೆಂಬ ಪ್ರಕಾರಗಳು ಹೆಚ್ಚು. ವೇಷದೃಷ್ಟಿಯಿಂದ, ಸಂಪೂರ್ಣವಾಗಿ ‘ನಾಟಕೀಯ’ವೆನ್ನುವ (ಅಂದರೆ ಕಂಪನಿ ನಾಟಕಗಳಿಂದ ರೂಪುಗೊಂಡ) ರೀತಿಯೆ ವ್ಯಾಪಕವಾಗಿದೆ. ಸಾಂಪ್ರದಾಯಿಕ ಯಕ್ಷಗಾನ ರಂಗ ವೇಷ ವಿಧಾನದಿಂದಲೇ, ತುಳು ಕತೆಗಳನ್ನಾಡುವ ಕ್ರಮ ಆರಂಭದ ಹಂತದಲ್ಲಿ ಮಾತ್ರ ಇತ್ತು. ಇದೀಗ ಅದರ ಪುನಶ್ಚೇತನದ (ವಿಶೇಷತಃ ಸಂಸ್ಕೃತ ಮೂಲದ ಪುರಾಣಕತೆಗಳಿಗೆ[2]) ನಡೆದಿದೆ.

ಐದು ದಶಕಗಳ ಇತಿಹಾಸವುಳ್ಳ ಇಂದಿನ ತುಳು ಯಕ್ಷಗಾನದ ಸಿದ್ಧಿ ಮತ್ತು ವೈಫಲ್ಯಗಳ ಒಂದು ಸರಿಯಾದ ವಿವೇಚನೆ ಮತ್ತು ಮುನ್ನೋಟವುಳ್ಳ ರೂಪೀಕರಣಕ್ಕೆ ಇದು ಸಕಾಲ. ಸಾಂಸ್ಕೃತಿಕ ಪೂರ್ವಗ್ರಹಗಳಾಗಲಿ, ಕೇವಲ ಭಾವವಶತೆಯ ಚಳವಳಿ ಮನೋಧರ್ಮವಾಗಲಿ, ಬರಿಯ ನಾವೀನ್ಯವನ್ನು ಮೆಚ್ಚುವ ದೃಷ್ಟಿಯಾಗಲಿ, ವಾಣಿಜ್ಯಪರ ಸಮರ್ಥನೆಗಳಾಗಲಿ ಈ ಗುರುತರವಾದ ಕೆಲಸಕ್ಕೆ ನೆರವಾಗಲಾರವು. ಬದಲಾಗಿ ಅವು ಬಾಧಕಗಳು. ಆದರೆ, ಯಕ್ಷಗಾನ ವಲಯದಲ್ಲಿ, ವೇದಿಕೆಗಳಲ್ಲಿ – ಬಹಳ ಸಲ ಈ ಬಗೆಯ ನೋಟಗಳನ್ನೆ ಕಾಣುತ್ತೇವೆ – ತುಳು ಯಕ್ಷಗಾನವನ್ನು ಸಮರ್ಥಿಸುವ ಅಥವಾ ಆಪೇಕ್ಷಿಸುವ ಎರಡೂ ಪಕ್ಷಗಳಲ್ಲಿ ಕಲೆಯ ಬೆಳವಣಿಗೆಗೆ ಅಗತ್ಯವಾಗಿ ಬೇಕಾಗಿರುವ ಸೈದ್ಧಾಂತಿಕ ಗಟ್ಟಿತನ ಇರುವ ವಿಮರ್ಶೆ ಯಕ್ಷಗಾನದಲ್ಲಿ ಬೆಳೆಯದಿರುವುದೇ ಯಕ್ಷಗಾನ ರಂಗದ ಪ್ರಧಾನ ಸಮಸ್ಯೆ. ಈ ಸಮಸ್ಯೆಯೇ ತುಳು ಯಕ್ಷಗಾನದ ಇಂದಿನ ಸ್ಥಿತಿಗೂ ಕಾರಣವೆಂದು ಬೇರೆ ಹೇಳಬೇಕಿಲ್ಲ. ವ್ಯಾಪಕವಾದ ಕಲಾತತ್ವಗಳ ಅನ್ವಯ, ಜತೆಗೆ ಯಕ್ಷಗಾನ ಕಲೆಗೆ ವಿಶಿಷ್ಟವಾದ ಮಾನದಂಡಗಳ ಅಳವಡಿಕೆ, ಉಚಿತವಾದ ನಾವೀನ್ಯವನ್ನು ಸ್ವೀಕರಿಸುವ ಮನೋಧರ್ಮ – ಈ ಮೂರರ ಸಮತೋಲವಾದ ಸಮನ್ವಯದಿಂದ ತುಳು ಯಕ್ಷಗಾನದ ವಿಮರ್ಶೆ ಬೆಳೆದು ನಿಲ್ಲಬೇಕಾಗಿದೆ.

ಕಲೆಯ ಬೆಳವಣಿಗೆಗೆ ದಾರಿ ಒಂದಲ್ಲ, ಹಲವು. ಕಲಾಮಾಧ್ಯಮಗಳ ಸಾಧ್ಯತೆಗಳು ಹಲವು. ಇದರೊಂದಿಗೆ, ಬೆಳವಣಿಗೆ ಮತ್ತು ಸಾಧ್ಯತೆಗಳ ಅನ್ವೇಷಣೆಯಲ್ಲಿ ಕಲೆಯು ಕಲೆಯಾಗಿ ಇರಬೇಕೆಂಬ ತತ್ವವನ್ನೂ ಮರೆಯಬಾರದು. ಮಾತ್ರವಲ್ಲ ಸುದೀರ್ಘವಾದ ಇತಿಹಾಸದಲ್ಲಿ, ಹಲವು ತಲೆಮಾರುಗಳ ಕೊಡುಗೆಯಿಂದ ಶ್ರೀಮಂತಿಕೆಯನ್ನೂ, ಸೌಂದರ್ಯವನ್ನೂ, ವಿಶಿಷ್ಟ, ರೂಪವನ್ನು ಗಳಿಸಿರುವ ಒಂದು ಕಲೆ, ಅಂತಹ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಬೇಕಾಗಿರುವ ಹೊಣೆಗಾರಿಕೆ. ಆ ಕಲೆಯಲ್ಲಿ ಆಸಕ್ತರಿರುವ ಎಲ್ಲರಿಗೂ ಇದೆ. ಎಂಬುದೂ ಅಷ್ಟೆ ಮುಖ್ಯ. ಈ ಎರಡು-ನೆಲಗಳನ್ನು ಆಧರಿಸಿ ತುಳು ಯಕ್ಷಗಾನಗಳ ಸಾಧನೆ, ಸೋಲುಗಳ ಬಗೆಗಿನ ಚಿಂತನೆ ನಡೆಯಬೇಕಾಗಿದೆ.

ಕಲೆ ಸಾಹಿತ್ಯಗಳಲ್ಲಿ ಪರಿವರ್ತನೆಗಳು ಐತಿಹಾಸಿಕ ಅವಶ್ಯಕತೆಯಿಂದ ಸಾಮಾಜಿಕ ಸಾಂಸ್ಕೃತಿಕ ಪರಿವರ್ತನೆಗಳ ಫಲರೂಪವಾಗಿ ಬರುತ್ತದೆ ಎಂಬ ಅಭಿಪ್ರಾಯವೊಂದಿದೆಯಷ್ಟೆ. ಆದರೆ, ಹಾಗೆಯೆ ಆಗಬೇಕೆಂದಿಲ್ಲ. ಕೇವಲ ವೈಯಕ್ತಿಕ ಲಹರಿಗಳಿಂದಲೂ, ಹೊಸ ಮಾರ್ಗಗಳು ಹುಟ್ಟಿರಬಹುದು (ವ್ಯಕ್ತಿಗತ ಪ್ರತಿಕ್ರಿಯೆ ಕೂಡ ಐತಿಹಾಸಿಕ ಅವಶ್ಯಕತೆ, ಸಾಮಾಜಿಕ ಪರಿವರ್ತನೆಗಳ ಫಲರೂಪವೇ ಎಂದು ವಾದಿಸಬಹುದಾದರೂ ಆ ವಾದವು ನಿರ್ದುಷ್ಟವಲ್ಲ. ವ್ಯಕ್ತಿ ಪ್ರತಿಕ್ರಿಯೆ, ಐತಿಹಾಸಿಕ ಅವಶ್ಯಕತೆ, ಸಾಮಾಜಿಕ ಪರಿವರ್ತನೆಗಳಿಗಿಂತ ಭಿನ್ನವಾಗಿಯೂ ಬರುತ್ತವೆ). ಹಾಗೆಯೇ ವಾಣಿಜ್ಯಕ ಅವಶ್ಯಕತೆಯಾಗಿ ಕೂಡ ಕಲೆಗಳಲ್ಲಿ ಪರಿವರ್ತನೆಗಳು ಕಂಡುಬರುತ್ತವೆ. ಇದರ ಒಂದು ಖಚಿತ ದೃಷ್ಟಾಂತ ತುಳು ಯಕ್ಷಗಾನ ರಂಗಭೂಮಿ.

ಐತಿಹಾಸಿಕ ಅನಿವಾರ್ಯವಾಗಿ ತುಳು ಯಕ್ಷಗಾನ ಬೆಳೆದು ಬರುವುದಿದ್ದರೆ ಬಹಳ ಹಿಂದೆಯೆ ಹಾಗಾಗುವುದು ಹೆಚ್ಚು ಅವಶ್ಯಕತೆಯಿತ್ತೆನ್ನಬಹುದು. ಏಕೆಂದರೆ, ಈ ಶತಮಾನದ ಆರಂಭದವರೆಗೂ, ತುಳುನಾಡಿನಲ್ಲಿ ಕನ್ನಡ ಬಲ್ಲವರ ಸಂಖ್ಯೆ ಇಂದಿನದಕ್ಕಿಂತ ಅದೆಷ್ಟು ಕಡಿಮೆ ಇದ್ದಿರಬೇಕು. ಇತ್ತು. ಆಗ ಬೆಳೆದು ಬಾರದಿದ್ದ ತುಳು ಯಕ್ಷಗಾನ ೧೯೫೦ರ ನಂತರವೇ ಬೃಹತ್ ಗಾತ್ರದಲ್ಲಿ ಬೆಳೆದುದು, ಅದು ಮುಖ್ಯವಾಗಿ ವಾಣಿಜ್ಯ ಅವಶ್ಯಕತೆಯಾಗಿ ಬೆಳೆಯಿತೆಂಬುದನ್ನು ತೋರಿಸುತ್ತದೆ. ವಾಣಿಜ್ಯ ಅವಶ್ಯಕತೆಗಳಿಂದ ಕಲೆಯಲ್ಲಿ ಪರಿವರ್ತನೆ ಸ್ವಯಂ ವಿಚಿತ್ರವೂ ಅಲ್ಲ, ಅಸಾಧ್ಯವೂ ಎನ್ನುವಂತಿಲ್ಲ. ಅಂತಹ ಪವಿವರ್ತನವು ಹೇಗಿರಬೇಕು ಎಂಬಲ್ಲೆ ವಿವೇಚನೆಗೆ, ವಿವಾದಕ್ಕೆ ಅವಕಾಶವಿರುವುದು.

ಕಲೆಯು ಒಂದು ಕ್ರಮವನ್ನು ಹಿಡಿದು ಸಾಗುವಾಗ, ಅದಕ್ಕೆ ಒಳಗಿನ ಅಥವಾ ಹೊರಗಿನ ಒತ್ತಡಗಳು ಬಿದ್ದಾಗ ಅದು ಇಡಿಯಾಗಿ ರೂಪಾಂತರಗೊಳ್ಳಬಹುದು ಅಥವಾ ಕವಲೊಡೆಯಬಹುದು. ಕವಲೊಡೆದಾಗ, ಮೊದಲ ರೂಪವು ಪ್ರತ್ಯೇಕವಾಗಿ ಉಳಿದು, ಹೊಸರೂಪವು ಬೇರೆಯಾಗುತ್ತದೆ ಅಥವಾ ಅವು ಪುನಃ ಸಮ್ಮಿಶ್ರವಾಗಬಹುದು. ಯಕ್ಷಗಾನದ ಇತಿಹಾಸದಲ್ಲೇ ಇದರ ಉದಾಹರಣೆಯನ್ನು ಹೇಳುವುದಾದರೆ, ಯಕ್ಷಗಾನವೆಂಬ ಒಂದು ಕಲೆಯು ಆಟ, ತಾಳಮದ್ದಲೆಗಳೆಂದು ಎರಡಾದುದು (ಇವುಗಳಲ್ಲಿ ಪೂರ್ವಾಪರ ಯಾವುದೇ ಇರಲಿ) ತೆಂಕು, ಬಡಗು ಎಂಬ ಎರಡು ಪ್ರಭೇದಗಳಾದುದು – ಇವನ್ನು ಗಮನಿಸಬಹುದು. ಕಲೆಯಲ್ಲಿ ಕವಲುಗಳುಂಟಾಗುವುದು ಕಲೆಯ ಪುರೋಭಿವೃದ್ಧಿಗೆ ಕಾರಣವೂ, ಕಲೆಯ ಶ್ರೀಮಂತಿಕೆಯ ಲಕ್ಷಣವೂ ಆಗಬಹುದು. ಆದರೆ, ಅದೇ ಕಲಾವಿಕೃತಿಗಳ ಸೃಷ್ಟಿಗೂ ಮೂಲವಾಗುವುದೂ ಶಕ್ಯ. ತುಳು ಯಕ್ಷಗಾನ ಅಂತಹ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಹೇಳಬೇಕಾಗಿದೆ. ರೂಪದೃಷ್ಟಿಯಿಂದ, ಆಶಯ ದೃಷ್ಟಿಯಿಂದಲ್ಲ.

ಇದರ ಅರ್ಥ, ತುಳು ಯಕ್ಷಗಾನ ರಂಗಕ್ಕೆ, ಗಮನಾರ್ಹ ಸಾಧನೆಗಳು ಇಲ್ಲವೆಂದಲ್ಲ. ತೌಳವ ಪುರಾಣಗಳ (ಕೋಟಿ ಚೆನ್ನಯ, ತುಳುನಾಡ ಸಿರಿ ಮುಂತಾಗಿ) ಅಳವಡಿಕೆ, ಅಂತಹ ಒಂದು ಮಹತ್ವಸಿದ್ಧಿ, ಸಂಸ್ಕೃತ ಪುರಾಣಗಳಿಗಿಂತ ಭಿನ್ನವೂ, ಕೆಲವು ಅಂಶಗಳಲ್ಲಿ ಜೀವಪರವೂ, ಆದ ಒಂದು ಆಶಯ ಪ್ರಪಂಚವನ್ನು ಇವು ತೆರೆದು ತೋರಿದುವು. ತುಳು ಭಾಷೆಯ ಸೌಂದರ್ಯ, ಸತ್ವ, ತನ್ನದೇ ಆದ ಅದರ ಅಭಿವ್ಯಕ್ತಿ ವಿಶೇಷಗಳ ವೈಭವ ರಂಗದಲ್ಲಿ ಸಾಕಾರವಾಯಿತು. ತುಳು ಆಟಗಳ ಮಾತುಗಾರಿಕೆಯ ಸಿದ್ಧಿ ಅಸಾಧಾರಣವಾದುದು. ತುಳು ಆಟಗಳ ನೂರಾರು ಪ್ರಸಂಗಗಳ ಬಹು ಸಹಸ್ರ ಸಂಖ್ಯೆಯ ಪ್ರದರ್ಶನಗಳಲ್ಲಿ ಸೃಷ್ಟಿಯಾದ ತುಳು ಅರ್ಥಗಾರಿಕೆಯ ‘ಸಾಹಿತ್ಯ’ ತುಳು ಸಂಸ್ಕೃತಿಯ ಮಹತ್ಸಿದ್ಧಿಗಳ ಸಾಲಿನಲ್ಲಿ ನಿಲ್ಲುತ್ತದೆ. ಪೋಷಕ ಸಾಹಿತ್ಯದ ಹಿನ್ನೆಲೆ (ಅಂದರೆ ಶಿಷ್ಟ ಕಾವ್ಯಾದಿಗಳು) ಇಲ್ಲದೆ, ಹೆಚ್ಚಿನ ಪ್ರಸಂಗಗಳಲ್ಲೂ ವಿಶೇಷ ವಸ್ತು ವಿಸ್ತಾರವಿಲ್ಲದೆ ಇದ್ದಾಗಲೂ ಇಡಿ ರಾತ್ರಿಗಳ ಅಸಂಖ್ಯ ಪ್ರದರ್ಶನಗಳನ್ನು ರೋಚಕಗಳನ್ನಾಗಿ ರೂಪಿಸಿದ ಕಲಾವಿದರೂ, ಪ್ರಸಂಗ-ಕರ್ತೃಗಳೂ ಅಭಿನಂದನಾರ್ಹರು. ತುಳು ಯಕ್ಷಗಾನ ರಂಗದ ಹಾಸ್ಯವಂತೂ ವಿಶೇಷವಾದ ಗಮನಕ್ಕೆ, ಪ್ರಶಂಸೆಗೆ ಅರ್ಹವಾದದ್ದು. ‘ಸಾಂಸ್ಕೃತಿಕ ವಿಕೇಂದ್ರೀಕರಣ’ವು ತುಳು ಯಕ್ಷಗಾನದ ದೊಡ್ಡ ಸಾಧನೆ.

ಇಷ್ಟೆಲ್ಲ ನಿಜ. ಆದರೆ, ಶೈಲಿಬದ್ಧವಾದ ಒಂದು ಕಲಾಪ್ರಕಾರದಲ್ಲಿ ರೂಪಿತವಾದ ತುಳು ಯಕ್ಷಗಾನ ಪ್ರಯೋಗವು, ಕಲಾದೃಷ್ಟಿಯಿಂದ, ಸೃಷ್ಟಿಸಿದ ಸಮಸ್ಯೆಗಳು ತುಂಬ ಗಂಭೀರವೂ, ಆಪತ್ಕಾರಿಯೂ ಆದ ಪರಿಣಾಮಗಳನ್ನು ಬೀರಿದುವೆಂದು ಹೇಳಬೇಕಾಗಿದೆ. ಇದು, ಕೆಲವರು ಭಾವಿಸಿರುವಂತೆ, ಕನ್ನಡ ಪಕ್ಷಪಾತದಿಂದಾಗಲಿ, ಸಂಸ್ಕೃತ ಪುರಾಣಗಳ ಪೂರ್ವಗ್ರಹದಿಂದಾಗಲಿ, ತುಳು ವಿರೋಧದಿಂದಾಗಲಿ ಮೂಡಿದ ಅನಿಸಿಕೆಯಲ್ಲ. ಬದಲಾಗಿ, ಕಲಾಸಿದ್ಧಾಂತದ ಗಟ್ಟಿತನದಿಂದಲೇ ಪ್ರೇರಿತವಾದ ನ್ಯಾಯವಾದ ಅನಿಸಿಕೆಯಾಗಿದೆ. ಕೆಲವು ಅಭಿರುಚಿಯನ್ನು, ಹಲವರ ರುಚಿಯತ್ತ ಹೊರಳಿಸಿ ಜನಭಾಷೆಯಲ್ಲಿ, ಕಲೆಯನ್ನು ಜನಪರವನ್ನಾಗಿ ರೂಪಿಸುವ ಕೆಲಸವನ್ನು ತುಳು ಯಕ್ಷಗಾನ ಸಾಧಿಸಿದೆ ಎಂಬುದನ್ನೂ ಒಪ್ಪಿಯೂ ಕಲೆಗೆ ಅದರಿಂದ ಆಗಿರುವ ದುಷ್ಪರಿಣಾಮವನ್ನು ಒತ್ತಿ ಹೇಳಬೇಕಾಗಿದೆ. ಸಾಂಸ್ಕೃತಿಕ ನಾವೀನ್ಯದ ಕಾರ್ಯದಲ್ಲಿ ಕಲಾವಿವೇಕ ಮತ್ತು ಸಿದ್ಧತೆಗಳು ಸಾಕಷ್ಟು ಇಲ್ಲದಿದ್ದಾಗ, ವ್ಯತಿರೇಕವುಂಟಾಗುವುದು ಸಹಜ. ಸಾಂಸ್ಕೃತಿಕ ವಿಕೇಂದ್ರೀಕರಣದ ಜತೆ, ಕಲಾತ್ಮಕತೆಯೂ ಬಲಿಯಾಯಿತು ಎಂಬುದೇ ಆತಂಕಕ್ಕೆ ಕಾರಣ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮೂಲಭೂತವಾಗಿ ಲಭ್ಯವಿದ್ದ ಕಲಾ ಸಂಪತ್ತನ್ನು ಉಳಿಸಿಕೊಂಡೇ, ತುಳು ಯಕ್ಷಗಾನ ರಂಗದ ಬೆಳವಣಿಗೆ ಆಗುತ್ತಿದ್ದರೆ, ಎಷ್ಟು ಉತ್ಕೃಷ್ಟವಾಗುತ್ತಿತ್ತು ಅನಿಸುತ್ತದೆ. ಆದರೆ ಅದೀಗ ಊಹೆ ಮಾತ್ರ.

ಆರಂಭದಲ್ಲಿ ಇದು ಊಹೆ ಮಾತ್ರವಾಗಿ ಇರಲಿಲ್ಲ. ೧೯೪೦, ೫೦ರ ದಶಕಗಳಲ್ಲಿ ವಿಶೇಷತಃ ‘ಕೋಟಿ ಚೆನ್ನಯ್ಯ’ ಪ್ರಸಂಗದ ತುಳು ಮತ್ತು ಕನ್ನಡದ ಪ್ರದರ್ಶನಗಳಲ್ಲಿ, ಸಾಂಪ್ರದಾಯಿಕ ವೇಷಭೂಷಣಗಳನ್ನೂ, ರಂಗಕ್ರಮಗಳನ್ನೂ ಅಳವಡಿಸಿ ಆಡುತ್ತಿದ್ದರು. ಅಂದಿನ ಕದ್ರಿಮೇಳ, ಈ ಪದ್ಧತಿಯನ್ನು ಇತ್ತೀಚೆಗೆ ಪುನಃ ತುಳು ಪ್ರಸಂಗಗಳನ್ನು ಸಾಂಪ್ರದಾಯಿಕ ವೇಷಗಳೊಂದಿಗೇ ಪ್ರದರ್ಶಿಸುವ ಕ್ರಮವನ್ನು ಪುನರುಜ್ಜೀವನಗೊಳಿಸುವ ಯತ್ನಗಳು ನಡೆದಿವೆ. (ಕರ್ನಾಟಕ, ಸುರತ್ಕಲ್ ಮೇಳಗಳಲ್ಲಿ) ಇದರ ಭವಿಷ್ಯವನ್ನು ಕಾದು ನೋಡಬೇಕಾಗಿದೆ.

ತುಳು ಯಕ್ಷಗಾನ ಪ್ರದರ್ಶನಗಳು, ಒಂದು ಐತಿಹಾಸಿಕ ಕಲಾತ್ಮಕವಾದ ಸನ್ನಿವೇಶದ ಫಲಸ್ವರೂಪವಾಗಿ ಬರಲಿಲ್ಲ. ಬದಲಾಗಿ ವ್ಯಾವಹಾರಿಕ ಅವಶ್ಯಕತೆಯಾಗಿ ಬಂದು, ಆ ಬಳಿಕ ಒಂದು ಅನಿವಾರ್ಯ ಅವಶ್ಯಕತೆ ಎನಿಸಿ ಬೆಳೆದು ಬಂತು. ಆಗ ಅನ್ಯಮಾರ್ಗದ, ಅನ್ಯ ಪರಂಪರೆಯ, ಮುಖ್ಯತಃ ಮೇಲ್ವರ್ಗದ ಅಭಿರುಚಿಯಾದ ಪುರಾಣ ಪ್ರಸಂಗ (ಸಂಸ್ಕೃತ ಮೂಲದ ಪುರಾಣ)ಗಳನ್ನು ತನ್ನ ಅಭಿರುಚಿಯಾಗಿಯೇ ಒಪ್ಪಿಕೊಂಡಿದ್ದ ತುಳುಜನತೆ, ಇದೀಗ ತಮ್ಮ ಭಾಷೆಯ, ಅಭಿರುಚಿಯ ಪ್ರದರ್ಶನಗಳನ್ನು ಸ್ವಾಗತಿಸಿತು. ಆರ್ಥಿಕ, ಸಾಮಾಜಿಕ ಸ್ವಂತಿಕೆಯನ್ನು ತುಳುವರಲ್ಲಿ ಬಹುಪಾಲು ಜನ ಗಳಿಸಲಾರಂಭಿಸಿದ್ದರಿಂದಲೆ (೧೯೫೦ರ ಬಳಿಕದ ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಗತಿಯಿಂದಾಗಿ) ತುಳು ಯಕ್ಷಗಾನ, ತುಳುವರಿಗೆ ತಮ್ಮ ಅಸ್ತಿತ್ವದ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ, ರಂಗಪ್ರಕಟನವಾಗಿ ಬಂತು. ತುಳು ಬದುಕಿನ ಚಿತ್ರಣದಿಂದ ಆತ್ಮೀಯವೂ ಆಯಿತು. ಇಂತಹ ಸನ್ನಿವೇಶದಲ್ಲಿ ಶೈಲಿ ಮೂಲೆಪಾಲಾದದ್ದು, ಕಲಾವಿದರಿಗೆ, ಕಲಾ ವ್ಯವಸಾಯಿಗಳಾದ ಮೇಳಗಳಿಗೆ, ಅವರಿಗೆ ಆ ಆವಶ್ಯಕತೆ ಗೋಚರಿಸಲಿಲ್ಲವೋ, ಅನಿವಾರ್ಯ ಅನಿಸಲಿಲ್ಲವೋ, ಅಥವಾ ಅಂತಹ ಒಂದು ಸಮಸ್ಯೆಯೇ – ಅಂದರೆ ತುಳು ಯಕ್ಷಗಾನದ ಪ್ರದರ್ಶನ ಮತ್ತು ಸಾಂಪ್ರದಾಯಿಕ ರಂಗರೂಪಗಳ ದ್ವಂದ್ವ –ಅವರನ್ನು ಕಾಡಲಿಲ್ಲವೋ, ಏನೋ, ಅಂತೂ, ತುಂಬ ಪ್ರಮುಖವಾದ ಸಂಕ್ರಮಣ ಘಟ್ಟದಲ್ಲಿ ಈ ಸಮಸ್ಯೆ ಅಲಕ್ಷಿಸಲ್ಪಟ್ಟುದ್ದು ಖೇದಕರ. ಹೀಗೆ, ಬದಲಾದ ಸಾಮಾಜಿಕ ಸ್ವರೂಪದ ಪ್ರತಿಫಲವಾಗಿ ಬಾರದಿದ್ದರೂ, ತುಳು ಯಕ್ಷಗಾನವು ಬದಲಾದ ತುಳುವರ ಸಾಮಾಜಿಕ, ಆರ್ಥಿಕ ಸಮಾಜ ಸ್ವರೂಪ ಸಂದರ್ಭಕ್ಕೆ ಹೊಂದಿಕೆಯಾಗಿ, ಬೆಳೆಯಲು ಅನುಕೂಲವಾಯಿತು. ‘ಕಲೆಯ ಪ್ರಜಾತಂತ್ರೀಯಕರಣ’ (Democratization of art)ದ ಒಂದು ಹಂತ ಎಂದು ಕರೆಯಬಹುದು ಜತೆಗೆ, ಕಲಾಮೌಲ್ಯಗಳು ಅಪಮೌಲ್ಯಗೊಂಡುದೂ ಸತ್ಯ ಅದು ಪ್ರತ್ಯೇಕ ವಿಷಯ.

ಯಕ್ಷಗಾನಗಳು ಬಲುಬೇಗ ಜನಪ್ರಿಯತೆಯನ್ನೂ, ವ್ಯವಹಾರಿಕ ಯಶಸ್ಸನ್ನೂ ಗಳಿಸಿದಂತೆ, ಸಾಕಷ್ಟು ವಿವಾದಗಳನ್ನೂ, ವಿರೋಧಗಳನ್ನೂ ಎದುರಿಸಬೇಕಾದಿತು. ಯಕ್ಷಗಾನ ವಲಯಗಳಲ್ಲಿನ ಮೌಲಿಕ ವಿಮರ್ಶೆ, ಗೋಷ್ಠಿ, ಕಮ್ಮಟಗಳು, ಪತ್ರಿಕೆಗಳಲ್ಲಿ ಪ್ರಕಟವಾದ ಅಭಿಪ್ರಾಯಗಳು – ಇವುಗಳಲ್ಲಿ ಇವು ಕಂಡುಬರುತ್ತಿದ್ದು, ತುಳು ಯಕ್ಷಗಾನಗಳ ಬಗೆಗೆ ಪ್ರಬಲವಾದೊಂದು ವಿರೋಧವಿರುವುದನ್ನು ಕಾಣುತ್ತೇವೆ. ಈ ವಿರೋಧದ ಹಿಂದೆ ಸಾಂಸ್ಕೃತಿಕ ಪೂರ್ವಗ್ರಹ, ಸಂಸ್ಕೃತ ಪುರಾಣಗಳ ಕಡೆಗೆ ಒಲವು ತುಳು ಭಾಷೆಯ ಬಗೆಗಿನ ತಿರಸ್ಕಾರ ಮುಂತಾದವುಗಳೂ ಇರಬಹುದಾದರೂ, ಅವುಗಳೇ ಕಾರಣವೆನ್ನುವಂತಿಲ್ಲ. ಕಲೆಯ ಬಗ್ಗೆ, ಯಕ್ಷಗಾನದ ಸೌಂದರ್ಯ, ಸತ್ವ, ಗಾಂಭೀರ್ಯಗಳ ಬಗ್ಗೆ ಪ್ರಾಮಾಣಿಕ ಕಾಳಜಿ ಇರುವವರು ಚಿಂತಿತರಾಗಬೇಕಾದ, ಗಂಭೀರ ಪ್ರಶ್ನೆಗಳನ್ನು, ಸಮಸ್ಯೆಗಳನ್ನು ತುಳು ಯಕ್ಷಗಾನಗಳು ಒಡ್ಡಿವೆ. ಎಂಬುದು ನಿರ್ವಿವಾದ ಸತ್ಯವಾಗಿದೆ. ಶೈಲಿಯ ಬಗೆಗಿನ ಬದ್ಧತೆ, ಯಕ್ಷಗಾನದ ಅಂಗೋಪಾಂಗಗಳ ಪರಿಜ್ಞಾನ ಮತ್ತು ಹೊಸತನ್ನು ಸ್ವೀಕರಿಸಬಲ್ಲ. ಮುನ್ನೋಟ, ಇವು ಸಪ್ರಮಾಣವಾಗಿ ವ್ಯವಸ್ಥಿತ ವಿಮರ್ಶೆ ಬೆಳೆಯಲಿಲ್ಲ. ಮಾರ್ಗದರ್ಶನದ ಅಭಾವ ಮತ್ತು ವ್ಯಾವಸಾಯಿಕ ಅವಸರದ ಹೊಯ್ಲಿನಲ್ಲಿ ತುಳು ಯಕ್ಷಗಾನ ರಂಗ, ಒಂದು ಬಗೆಯ ದಿಕ್ಕಿಲ್ಲದ ನಡೆಯಲ್ಲಿ ವೇಗವಾಗಿ ಸಾಗಿತು. ಹೊಸತನವು ತಂದಿತ್ತ ಸವಾಲುಗಳನ್ನು ಗಂಭೀರವಾಗಿ ಸ್ವೀಕರಿಸಿ, ಯಕ್ಷಗಾನ ಪ್ರದರ್ಶನಗಳು ತುಳು ಭಾಷೆ ಮತ್ತು ಯಕ್ಷಗಾನ ಕಲಾಸ್ವರೂಪವ –ಇವೆರಡರ ಉಚಿತವಾದ ಸಮನ್ವಯವಾಗಿ ರೂಪುಗೊಳ್ಳುವುದು ಹೇಗೆ ಎಂಬ ಬಗೆಗೆ ಚಿಂತನ ನಡೆಯಲಿಲ್ಲ. ಶೈಲಿ ಬದ್ಧ ಕಲೆಯೊಂದಲ್ಲಿ, ಪ್ರೌಢವಾದ ಪ್ರಯೋಗವೆಂಬದು ಹೇಗಿರಬೇಕು, ಹೇಗಿರುತ್ತದೆ ಎಂಬ ಪೂರ್ವಭಾವಿ ತಾತ್ವಿಕ ಮತ್ತು ಪ್ರಾಯೋಗಿಕ ಪರಿಜ್ಞಾನವು ಇಲ್ಲದಿದ್ದುದರಿಂದ, ತುಳು ಯಕ್ಷಗಾನ ರಂಗವು ಕಲಾಸಿದ್ಧಾಂತದ ಗಟ್ಟಿ ಅಡಿಪಾಯವಿಲ್ಲದೆ ರೂಪಗೊಂಡ ‘ಜನಪ್ರಿಯ’ ಕಲೆ ಮಾತ್ರ ಆಯಿತು. ಹೀಗೆ ತುಳು ಯಕ್ಷಗಾನ ರಂಗಪ್ರಯೋಗ ರೂಪುಗೊಳ್ಳುವಾಗ ಮತ್ತು ಪ್ರದರ್ಶನಗೊಂಡು, ನಿಧಾನವಾಗಿ, ತೆಂಕುತಿಟ್ಟು ಯಕ್ಷಗಾನದ ಬಹ್ವಂಶವನ್ನು ಆವರಿಸಿದಾಗ, ಅದು ಕಲೆಯ ಶೈಲಿ ಮತ್ತು ನಾವೀನ್ಯ, ಭಾಷೆ ಮತ್ತು ರೂಪ, ವಸ್ತು ಮತ್ತು ಶೈಲಿ, ವ್ಯವಸಾಯ ಮತ್ತು ಸಂಪ್ರದಾಯ –ಹೀಗೆ ವಿಭಿನ್ನ ಮುಖಗಳಲ್ಲಿ ಪರಸ್ಪರ ಸಂಬಂಧ, ಪರಿಣಾಮಗಳ ಕುರಿತು ಸಹಜವಾಗಿ ಸಮಸ್ಯೆಗಳನ್ನು ಮುಂದಿಟ್ಟಿತು. ಇವುಗಳನ್ನು ತುಳು ಯಕ್ಷಗಾನ ನಿರ್ಮಿಸಿದ ದ್ವಂದ್ವಗಳು ಎಂಬ ನೆಲೆಯಲ್ಲಿ ಅಭ್ಯಸಿಸಬಹುದು.

ಯಕ್ಷಗಾನದಲ್ಲಿ ತುಳು ಭಾಷಾ ಪ್ರಯೋಗಗಳು, ಈ ಕೆಳಗಿನ ದ್ವಂದ್ವಗಳನ್ನು, ವೈರುದ್ಧ್ಯಗಳನ್ನು, ತೆರೆದು ತೋರಿದವು ಮತ್ತು ಅವುಗಳ ಸಮನ್ವಯದ ದಿಕ್ಕಿನಲ್ಲಿ ಚಿಂತನೆಗೆ ಪ್ರೇರಣೆ ನೀಡಿದುವು:

ಭಾಷೆx ಶೈಲಿ
ನಾಟಕx ಯಕ್ಷಗಾನ
ಶಿಷ್ಟx ಜಾನಪದ
ಪ್ರಾದೇಶಿಕತೆx ವ್ಯಾಪಕತೆ
ಪುರಾಣx ಪುರಾಣೇತರ
ಲೋಕಧರ್ಮಿx ನಾಟ್ಯಧರ್ಮಿ
ಬಡಗುತಿಟ್ಟುx ತೆಂಕುತಿಟ್ಟು

ಈ ಮೇಲಿನ ವಿಷಯಗಳು ಪರಸ್ಪರ ವಿರುದ್ಧ ವಿಷಯಗಳಲ್ಲ. ಆದರೆ ತುಳು ಯಕ್ಷಗಾನದ ಸಂದರ್ಭದಲ್ಲಿ, ಅವುಗಳೊಳಗಿನ ಸಂಬಂಧದ ಬಗೆಗೆ ಮರುಚಿಂತನೆಗೆ ಅವಕಾಶವಾಯಿತು. ಇವುಗಳಲ್ಲಿ ಕೆಲವು ವಿರುದ್ಧ ದಿಕ್ಕಿನಲ್ಲಿ ಸಾಗುವವುಗಳು ಎಂಬುದು ಸ್ಪಷ್ಟ. ಅವುಗಳೊಳಗೆ ಸಂಘರ್ಷವೊಂದು ಇದೆ ಎಂಬಂತಹ ಸ್ಥಿತಿ ತುಳು ಯಕ್ಷಗಾನಗಳಿಂದ ನಿರ್ಮಾಣವಾಯಿತು.

ಭಾಷೆ x ಶೈಲಿ

ತುಳು ಯಕ್ಷಗಾನಗಳಿಂದಾಗಿ ಮುಂದೆ ಬಂದ ಒಂದು ಪ್ರಶ್ನೆ ಕಲಾ ಪ್ರದರ್ಶನದಲ್ಲಿ ಬಳಸುವ ಭಾಷೆಗೂ, ಕಲೆಯ ತನ್ನದಾದ ಶೈಲಿಗೂ, ಸಂಬಂಧವಿದೆಯೆ? ಎಂಬುದು. ಅಂದರೆ, ಕಲೆಯು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ‘ಭಾಷಾಂತರ’ಗೊಂಡಾಗ, ವೇಷ ಮೊದಲಾದುವು ಬದಲಾಗಬೇಕೆ? ಎಂಬ ಪ್ರಶ್ನೆ. ಒಂದು ಭಾಷೆಯಲ್ಲಿ ಪ್ರಚಲಿತವಾಗಿರುವ ಕಲೆಯನ್ನು ಅದೇ ವೇಷ, ಗಾನ, ರಂಗತಂತ್ರಗಳಿಂದ ಬೇರೊಂದು ಭಾಷೆಯಲ್ಲಿ ಪ್ರದರ್ಶಿಸಬಹುದು. ಯಕ್ಷಗಾನವನ್ನು ಹಿಂದಿ, ಮಲೆಯಾಳ, ಇಂಗ್ಲಿಷ್‌ಗಳಲ್ಲಿ ಪ್ರಯೋಗಿಸಲಾಗಿದ್ದು, ಅಲ್ಲಿ ಕಲಾರೂಪವನ್ನು ಬದಲಾಯಿಸಿದ್ದಿಲ್ಲ. ಹಾಗಾದರೆ, ತುಳುವಿನಲ್ಲಿ ಮಾತ್ರ ಏಕೆ ಬದಲಾಯಿತು? ಎಂಬುದು ವಿಚಾರಾರ್ಹ ಇದಕ್ಕೆ ಕಾರಣ, ತುಳು ಯಕ್ಷಗಾನದ ಕಥೆ ಮತ್ತು ಕಥಾವಸ್ತುಗಳು (ಆಧಾರ ಭೂತವಾಗಿ ಕೋಟಿ ಚೆನ್ನಯ, ತುಳುನಾಡ ಸಿರಿ ಮುಂತಾದವು) ಒಂದು ಬಗೆಯ ಐತಿಹಾಸಿಕ ರೂಪದವು, ಅವುಗಳಿಗೆ, ಹಿಂದಿನ ಪ್ರಸಂಗಗಳಿಗೆ ಬಳಸಲಾದ ಯಕ್ಷಗಾನದ ಸಾಂಪ್ರದಾಯಿಕ ವೇಷಗಳು ಸರಿಯಲ್ಲ ಎಂಬ ಅಭಿಪ್ರಾಯ ಕಲಾವಿದರಲ್ಲೂ, ಮೇಳಗಳ ಸಂಚಾಲಕರಲ್ಲೂ ಮೂಡಿ ಪ್ರಚಲಿತವಾಯಿತು. ಅಂದರೆ ಭಾಷೆ ಮತ್ತು ಶೈಲಿಗಳಿಗೊಂದು ಕಾಲ್ಪನಿಕ ದ್ವಂದ್ವ ಏರ್ಪಟ್ಟು, ಭಾಷೆ ಬದಲಾದುದರಿಂದ ಶೈಲಿಯೂ ಬದಲಾಗಬೇಕು ಎಂಬ ‘ಸಿದ್ಧಾಂತ’ ರೂಪಿತವಾಯಿತು. ಇದು ಕಲೆಯ ಗ್ರಹಿಕೆ (Perception)ಯಲ್ಲಿ ಬಂದ ಬಿರುಕು, ತಾವು ಮಾಡಿರುವ ಹೊಸ ಪ್ರಯೋಗವು ಯಕ್ಷಗಾನವಲ್ಲ ಎಂದು ಒಂದು ಬಗೆಯಿಂದ ಒಪ್ಪಿಕೊಂಡು, ಆರಂಭಿಸಿದಂತೆ ಆಯಿತು ಇದರ ಅರ್ಥ. ಪರಿಣಾಮ, ಯಕ್ಷಗಾನದ್ದಕ್ಕಿಂತ ಭಿನ್ನವಾದ ವೇಷಗಳ ಮಾದರಿಯನ್ನು ಆರಿಸಿಕೊಳ್ಳಬೇಕಾದ ಅವಶ್ಯಕತೆ. ಅದಕ್ಕೆ ತಾತ್ಕಲಿಕ ಪರಿಹಾರ, ಐತಿಹಾಸಿಕ ನಾಟಕಗಳ ವೇಷ (ಕಂಪನಿಗಳ ಡ್ರಾಮಾಡ್ರೆಸ್‌ಮಾದರಿ)ಗಳ ಅಂಗೀಕಾರ.

ಯಕ್ಷಗಾನ x ನಾಟಕ

ಇದು ಮೇಲೆ ಹೇಳಿದ ದ್ವಂದ್ವದ ಇನ್ನೊಂದು ಮಗ್ಗುಲು ಎನ್ನಬಹುದು. ಪೂರ್ಣತಃ ಯಕ್ಷಗಾನರಂಗಕ್ಕೆ ಹೊಂದಿಕೆಯಾಗದ ಒಂದು ಪ್ರಯೋಗದಲ್ಲಿ ನಾಟಕ ರೂಪದ ವೇಷಗಳನ್ನು ಸೇರಿಸುವುದೇ ಸರಿ ಎಂಬ ತೀರ್ಮಾನ, ಇದಕ್ಕೆ ಹಿನ್ನೆಲೆಯೂ ಇದ್ದಿತು. ‘ಕಂಪನಿ ನಾಟಕ’ ಮಾದರಿಯ ವೇಷಗಳು ಮೊದಲಾಗಿ ಬಂದದ್ದು ತುಳು ಪ್ರಸಂಗಗಳ ಕಾಲದಲ್ಲಿ ಅಲ್ಲ. ೧೯೩೦ರಲ್ಲಿ ಆರಂಭವಾದ ಕೋಳ್ಯೂರು ನಾಟಕ ಕಂಪೆನಿ, ೧೯೩೧ರಲ್ಲಿ ಆರಂಭವಾದ ಚೊಕ್ಕಾಡಿಯ ಕರ್ನಾಟಕ ಯಕ್ಷಗಾನ ನಾಟಕ ಸಭಾ ಇವುಗಳು ಯಕ್ಷಗಾನ ನಾಟಕವೆಂಬ ಪ್ರಯೋಗಗಳನ್ನು ಆರಂಭಿಸಿದ್ದವು. ನರ್ತನವಿಲ್ಲದ ಆಟಗಳವು ಯಕ್ಷಗಾನ, ನಾಟಕ ಆಗಿತ್ತು. ಹೀಗೆ ಮೊದಲೇ ಬಂದಿದ್ದ ಒಂದು ಪ್ರಭಾವ, ಸಾಂಪ್ರದಾಯಿಕ ಪ್ರಸಂಗಗಳಲ್ಲೂ ಕಾಣಿಸಿ, ರೂಢವಾಗತೊಡಗಿತ್ತು. ತುಳು ಆಟಗಳಲ್ಲಿ ಇದು ಚುರುಕುಗೊಂಡು ಸಮಗ್ರವಾಗಿ ವ್ಯಾಪಿಸಿತು. ಯಕ್ಷಗಾನ ವೇಷಗಳಿಂದಲೇ ತುಳುವಿನಲ್ಲಿ ಆಟಗಳನ್ನಾಡುವ ಪ್ರಯತ್ನ ನಡೆದರೂ, ಬೆಳೆದು ಬಾಳಲಿಲ್ಲ. ಭಾಷೆ ಶೈಲಿಗಳ ದ್ವಂದ್ವಕ್ಕೆ ಪರಿಹಾರವಾಗಿ ಬಂದ ನಾಟಕೀಯ ಯಕ್ಷಗಾನ ಮತ್ತೊಂದು ದ್ವಂದ್ವವನ್ನು ಸೃಷ್ಟಿಸಿತು. ನಾಟಕ ವೇಷ ಪ್ರತ್ಯೇಕತೆಯನ್ನೇನೊ ಕಾಣಿಸಿತು. ಆದರೆ, ಯಕ್ಷಗಾನದ ಹಿಮ್ಮೇಳ, ನೃತ್ಯ ತಂತ್ರಗಳಿಗೆ ಅದು ಹೊಂದಲಿಲ್ಲ. ಕಲಾದೃಷ್ಟಿಯಿಂದ ತುಂಬ ದುರ್ಬಲವಾದ ಈ ಮಾದರಿ, ರಂಗವನ್ನು ವಾಸ್ತವದತ್ತ ಎಳೆಯಿತು. ಈ ಎಳೆತದ ಹಿಂದೆ ಇನ್ನೊಂದು ದ್ವಂದ್ವಾತ್ಮಕತೆಯಿತ್ತು.

ಶಿಷ್ಟ x ಜಾನಪದ

ಯಕ್ಷಗಾನದ ಮೂಲ ಜಾನಪದವೇ ಇದ್ದರೂ, ಅದು ಬೆಳೆದು ನಿಂತ ರೂಪದಲ್ಲಿ ಅದು ಸ್ಥಿರೀಕರಣಗೊಂಡ (Crystalised)ಮತ್ತು ಶಿಷ್ಟ ಶಾಸ್ತ್ರೀಯ ಕಲಾರೂಪ. ಅದನ್ನು ತುಳು ಭಾಷೆಗೆ ಅಳವಡಿಸುವಾಗ, ಶಿಷ್ಟ ಜಾನಪದಗಳ ಸಂಬಂಧ ಸಮನ್ವಯದ ಸಮಸ್ಯೆ ಸಹಜವಾಗಿಯೇ ಬಂತು. ಇದರ ಕಾರಣ, ತುಳು –ಕನ್ನಡಗಳ ಸಂಬಂಧದ ಐತಿಹಾಸಿಕ ಸಾಮಾಜಿಕ ಸ್ವರೂಪದಲ್ಲಿದೆ.

ತುಳುನಾಡಿನಲ್ಲಿ, ಐತಿಹಾಸಿಕ ಕಾರಣಗಳಿಂದ ನೆಲೆನಿಂತ ಕನ್ನಡ ಭಾಷೆ ಶಿಷ್ಟ ಕಾವ್ಯ, ಕಲೆಗಳ ಭಾಷೆಯಾಗಿ ಅಂಗೀಕೃತವಾಯಿತು. ಅದಕ್ಕೆ ‘ದೊಡ್ಡ ಸಂಸ್ಕೃತಿ’ (Greater Tradition) ನ ಸ್ಥಾನವೂ, ತುಳುವಿಗೆ ‘ಚಿಕ್ಕ ಸಂಸ್ಕೃತಿಯ ಸ್ಥಾನವೂ’ (Little Tradition) ಒಂದು ಸಾಮಾಜಿಕ ಗ್ರಹಿಕೆಯಾಯಿತು. ಇದರ ಸರಿ-ತಪ್ಪುಗಳನ್ನು ನಾನಿಲ್ಲಿ ಚರ್ಚಿಸುತ್ತಿಲ್ಲ. ಹಾಗೊಂದು ಸಾಮಾನ್ಯ ಗ್ರಹಿಕೆ ಇದ್ದುದು ನಿಜ ಎಂಬುದನ್ನಷ್ಟೆ ಹೇಳುತ್ತಿದ್ದೇನೆ. ತುಳು ಜನಸಾಮಾನ್ಯರ ಭಾಷೆಯಾಗಿ, ಜನಮನದ ಅಭಿವ್ಯಕ್ತಿ ಮಾಧ್ಯಮವಾಗಿ ಬಹುಕಾಲದಿಂದ ಇದ್ದು, ಅದರಲ್ಲಿ ಜಾನಪದದ ಬಾಹುಳ್ಯವಿದೆ. ಶಿಕ್ಷಕಲೆ, ಸಾಹಿತ್ಯ ಕಡಿಮೆ. ಬದಲಾಗಿ ಕನ್ನಡ ಪಂಡಿತ ಭಾಷೆಯಾಗಿಯೂ ರೂಪುಗೊಂಡು ಬಂದಿದೆ. (ಇಲ್ಲಿನ ಕನ್ನಡದಲ್ಲೂ ಜಾನಪದ ಇದೆ ನಿಜ. ಆದರೆ ಅದು ತುಳುನಾಡಿನ ಬಹು ಮಂದಿಗೆ, ಕಲಿತು ಬರುವ ಭಾಷೆ) ಹೀಗಾಗಿ ಕನ್ನಡದಲ್ಲಿ ಇದ್ದ ಶಿಷ್ಟವಾದ ಯಕ್ಷಗಾನವನ್ನು, ‘ಜಾನಪದ’ ಪ್ರಧಾನವಾದ ತುಳುವಿಗೆ ತರುವಾಗ, ಭಿನ್ನತೆ ಬೇಕು, ಅದರಂತೆ ಇದ್ದರೆ ಸರಿಯಲ್ಲ ಎನಿಸಿ, ಅವಸರದ ಬದಲಾವಣೆ ಜರುಗಿತು. ಭಿನ್ನ ಸ್ವರೂಪದ ಸೃಷ್ಟಿಯ ಪ್ರಕ್ರಿಯೆ ಆರಂಭದಲ್ಲೆ ಶೈಲಿಯಿ ದೃಷ್ಟಿಯಿಂದ ಅವ್ಯವಸ್ಥಿತವಾಯಿತು.

ಪುರಾಣ x ಪುರಾಣೇತರ

ತುಳು ಯಕ್ಷಗಾನಗಳ ಪ್ರಯೋಗ – ಈಚಿನ ಅವಧಿಯಲ್ಲಿ ಆರಂಭವಾಗುವವರೆಗೆ, ಇದ್ದುದು ಪೌರಾಣಿಕ ಪ್ರಸಂಗಗಳೇ (ಅಂದರೆ ಸಂಸ್ಕೃತ ಮೂಲದಿಂದ ಬಂದ ಪುರಾಣಕತೆಗಳ ಪ್ರಸಂಗಗಳು). ತುಳು ಪ್ರಸಂಗ ಎಂದರೆ ‘ಪುರಾಣೇತರ’ ಎಂಬ ಗ್ರಹಿಕೆ ವ್ಯಾಪಕವಾಯಿತು. ‘ತುಳು ಪ್ರಸಂಗಕ್ಕಿಂತ ಯಕ್ಷಗಾನಕ್ಕೆ ಪೌರಾಣಿಕವೇ ಸೂಕ್ತ’, ‘ಅದು ತುಳು ಪ್ರಸಂಗ, ಪೌರಾಣಿಕ ಅಲ್ಲ’, ‘ತುಳು ಕತೆ ಯಾಕಾಗದು, ಪೌರಾಣಿಕವೇ ಆಗಬೇಕೆಂದೇನು?’ ಮುಂತಾಗಿ ಯಕ್ಷಗಾನದ ವಲಯಗಳಲ್ಲಿ ಕೇಳಿಬರುವ ಮೌಖಿಕ ವಿಮರ್ಶೆಯಲ್ಲಿನ ಅಭಿಪ್ರಾಯಗಳಿಗೆ, ಈ ಗ್ರಹಿಕೆಯೇ ಮೂಲ. ಇಲ್ಲಿ ಪುರಾಣವೆಂದರೆ, ಭಾರತ ಭಾಗವತಾದಿಗಳು, ಅದಲ್ಲದ್ದು ಪುರಾಣೇತರ ಎಂದರ್ಥ. ಎಪ್ಪತ್ತರ ದಶಕದ ನಂತರ ಬಂದಿರುವ ಹೆಚ್ಚಿನ ಪ್ರಸಂಗ ಸಾಹಿತ್ಯ ಕಾಲ್ಪನಿಕ ಅಥವಾ ಅನ್ಯಮೂಲಗಳದ್ದೆ ಆಗಿರುವುದೂ ಈ ಮಾತಿನ ಹಿಂದಣ ಆಧಾರವಿರಬಹುದು.

ಇಲ್ಲಿ ಒಂದು ವಿಚಾರವನ್ನು ಗಮನಿಸಬೇಕಾದುದಿದೆ. ಪುರಾಣ ಎಂದರೆ ಭಾಗವತಾದಿ ಅಷ್ಟಾದಶ ಪುರಾಣಗಳು ಮಾತ್ರ, ಅಥವಾ ಸಂಸ್ಕೃತ ಮೂಲದಿಂದ ಬಂದಿರುವ ಪುರಾಣ ಸಾಹಿತ್ಯ ಮಾತ್ರ ಎಂಬ ಗ್ರಹಿಕೆ ಸೀಮಿತವಾದದ್ದು, ಪುರಾಣವೆಂದರೆ ವಿವಿಧ ಜನಾಂಗಗಳಲ್ಲಿ ಪರಂಪರೆಯಿಂದ ಬಂದಿರುವ ಕಥಾ ಪ್ರಕಾರ. ಅದಕ್ಕೆ Myth-legend ಎನ್ನುವರು. ಈ ಅರ್ಥದಲ್ಲಿ ಕೋಟಿ ಚೆನ್ನಯ, ತುಳುನಾಡ ಸಿರಿ, ಪಂಜುರ್ಲಿ ಕತೆ ಇವುಗಳೆಲ್ಲ ತುಳುನಾಡಿನ ಪುರಾಣಗಳೇ. ಇದು ಶಾಸ್ತ್ರೀಯವಾದ ದೃಷ್ಟಿ. ಆದರೆ, ಒಂದು ವಿಷಯ ನಿಜ. ಅದೆಂದರೆ, ಸಂಸ್ಕೃತದ ಪುರಾಣಗಳಿಗೂ ತುಳುನಾಡಿನ ಪುರಾಣಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅದು ಮುಖ್ಯವಾಗಿ ವ್ಯಾಪಕತೆ ಮತ್ತು ಪ್ರಾದೇಶಿಕತೆಗಳಿಗಿರುವ ಅಂತರ.

ಪ್ರಾದೇಶಿಕತೆ x ವ್ಯಾಪಕತೆ

ಹೀಗಾಗಿ ತುಳು ಯಕ್ಷಗಾನ ರಂಗವು ಪ್ರಾದೇಶಿಕ ವಸ್ತು, ವ್ಯಾಪಕತೆಯುಳ್ಳ ವಸ್ತು ಇವುಗಳ ಒಂದು ದ್ವಂದ್ವವನ್ನೂ ಮುಂದೊಡ್ಡಿತು. ತುಳು ಪುರಾಣಗಳು ವಸ್ತು, ವಿವರ, ಪ್ರತಿಪಾದನೆಗಳಲ್ಲಿ ತೀರ ಪ್ರಾದೇಶಿಕ ರೂಪದ್ದು. ಭಾಗವತಾದಿ ಪುರಾಣಗಳಲ್ಲಿ ವಸ್ತು, ಸಮಸ್ಯೆ, ದರ್ಶನಗಳು ಹೆಚ್ಚು ವ್ಯಾಪಕವಾದುವು. ಇಲ್ಲಿ ಹೋಲಿಕೆ ಅಥವಾ ತಾರತಮ್ಯದ ಪ್ರಶ್ನೆ ಇಲ್ಲ. ಅದು ಹಾಗೆ, ಇದು ಹೀಗೆ ಇದೆ ಅಷ್ಟೆ. ಇದಕ್ಕೆ ಆ ಪುರಾಣಗಳು ಹುಟ್ಟಿ ಬೆಳೆದ ಜನಾಂಗಗಳ ವಿಭಿನ್ನ ಸಾಮಾಜಿಕ ಸ್ವರೂಪ, ಇತಿಹಾಸ, ಅವರು ಇದಿರಿಸಿದ ಸಮಸ್ಯೆಗಳು, ಮುಂತಾದವು ಕಾರಣ. ಆದರೆ, ಯಕ್ಷಗಾನವು ಬೆಳೆಸಿಕೊಂಡಿರುವ ವೇಷ, ಗಾನ, ಅಭಿವ್ಯಕ್ತಿ ವಿಧಾನ, ಮಾತಿನ ರೀತಿ ಇವುಗಳು – ಒಟ್ಟಿನಲ್ಲಿ ಅದರ ಕಲಾಭಾಷೆ –ಸಂಸ್ಕೃತ ಪುರಾಣ ಕತೆಗಳಿಗೆ ಅಥವಾ ಅಂತಹ ವಿನ್ಯಾಸವುಳ್ಳವುಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಹಾಗಾಗಿಯೇ ತುಳು ಯಕ್ಷಗಾನ ಪ್ರದರ್ಶನಗಳಿಗೆ ವಿಭಿನ್ನತೆಯನ್ನು ಅಳವಡಿಸುವ ಯತ್ನ –ಅದು ಎಷ್ಟೇ ಅಸಮರ್ಪಕವಾಗಿರಲಿ ನಡೆದದ್ದು ಎನ್ನಬಹುದು. ಹೊಸ ಪ್ರಸಂಗಗಳನ್ನು ರಂಗಕ್ಕೆ ತರುವಾಗ, ಬಡಗುತಿಟ್ಟು, ಯಕ್ಷಗಾನ ಮೇಳಗಳಿಗೆ ಈ ಸಮಸ್ಯೆ ಬರಲಿಲ್ಲ ಎಂಬುದು ಗಮನಾರ್ಹ. ಈ ದೃಷ್ಟಿಯಿಂದ, ತುಳು ಯಕ್ಷಗಾನ ರಂಗದ ಸಂದರ್ಭದಲ್ಲಿ ಬಡಗು –ತೆಂಕು ತಿಟ್ಟುಗಳ[3] ಹೋಲಿಕೆಯು ಅಧ್ಯಯನಾರ್ಹ.

ಬಡಗು x ತೆಂಕು

ತುಳು ಯಕ್ಷಗಾನ ಇರುವುದು ತೆಂಕುತಿಟ್ಟಿನಲ್ಲಿ, ಬಡಗು ತಿಟ್ಟನಲ್ಲಿ ಇಲ್ಲ. ಕಾರಣ ಬಡಗುತಿಟ್ಟು ಕನ್ನಡ ಭಾಷಾ ಪ್ರದೇಶ. ತೆಂಕುತಿಟ್ಟು, ತುಳು ಭಾಷಾ ಪ್ರದೇಶ. ಬಡಗಿನ ಕಲಾವಿದರಿಗೆ ತುಳು ಭಾಷೆ ಬರುವುದಕ್ಕೆ ಒಂದು ಕಾರಣವಾದ ಯೋಗಾಯೋಗ. ಬಡಗು ತಿಟ್ಟಿನಲ್ಲಿ ಸಾಕಷ್ಟು ಹೊಸ ಬಗೆಯ ಪ್ರಸಂಗಗಳು ಬಂದಿವೆ. ಆದರೂ ಅವು ಸಾರತಃ ಸಾಂಪ್ರದಾಯಿಕ ಪ್ರಸಂಗ (ಪೌರಾಣಿಕ)ಗಳಂತೆಯೇ ಇದ್ದು, ಅವುಗಳ ಪ್ರಯೋಗ ವಿಧಾನದಲ್ಲಿ ಅಂತಹ ವ್ಯತ್ಯಾಸಗಳಿಲ್ಲ. ಹಳೆ ಮಾದರಿ ವೇಷಗಳೆ ಹೊಸ ಪ್ರಸಂಗಗಳಲ್ಲೂ ಇವೆ. ತೆಂಕುತಿಟ್ಟಿನಲ್ಲಿ ತುಳು ಯಕ್ಷಗಾನ ಬಂದ ಮೇಲೆ, ತೆಂಕುತಿಟ್ಟು ಬಡಗುತಿಟ್ಟಿಗಿಂತ ತೀರ ಭಿನ್ನವಾಗಿ, ಬೇರೆಯೇ ದಾರಿ ಹಿಡಿದಿದೆ. ಒಂದು ಸ್ಥಾಪಿತವಾದ ಶೈಲಿಯೊಳಗೆ, ಕಲಾರೂಪದೊಳಗೆ, ನಾವೀನ್ಯವನ್ನು ತರುವುದಕ್ಕೆ ಬಡಗುತಿಟ್ಟು ಅನುಸರಿಸಿದ ದಾರಿ, ತೆಂಕುತಿಟ್ಟಿಗೆ ಮಾದರಿಯಾಗುವಂತಿದೆ.

ಲೋಕ ಧರ್ಮಿ x ನಾಟ್ಯಧರ್ಮಿ

ತುಳುವಿನ ಅಭಿವ್ಯಕ್ತಿ ವಿಧಾನ ಹೆಚ್ಚು ‘ಜಾನಪದೀಯ’, ಪ್ರಾದೇಶಿಕ, ಶಿಷ್ಟ ಸಂಸರ್ಗ ಕಡಿಮೆ ಇರುವಂತಹುದು. ಅದು ನಾಟ್ಯ ಶಾಸ್ತ್ರದ ಪರಿಭಾಷೆಯಲ್ಲಿ, ಸಹಜವಾಗಿ ‘ಲೋಕಧರ್ಮಿ’ಗೆ ಒದಗುವಂತಹದು. ತುಳು ಯಕ್ಷಗಾನ ಆಟಗಳನ್ನು ನೋಡಿದರೆ ನಮಗೆ ಇದರ ಅನುಭವ ಆಗುತ್ತದೆ. ಅಲ್ಲಿನ ಮಾತು ರೀತಿ ಇವು ನಿತ್ಯ ಜೀವನಕ್ಕಿಂತ ಬಹಳ ಭಿನ್ನವಾಗಿ ಕಾಣುವುದಿಲ್ಲ. ಇದನ್ನೆ ಕೆಲವರು ಹೇಳುವುದು ‘ತುಳು ಆಟದ ರಂಗಸ್ಥಳ ನಮಗೆ ನಮ್ಮ ಸುತ್ತಲಿನ ಗುತ್ತುಮನೆ, ಗದ್ದೆ, ಬಾಕಿಮಾರುಗಳನ್ನು ದರ್ಶಿಸುತ್ತದೆಯೇ ಹೊರತು ‘ಪೌರಾಣಿಕದ ಭವ್ಯ ಚಿತ್ರ’ವನ್ನಲ್ಲ ಎಂದು. ಇದರ ಸಾಧಕ ಬಾಧಕ ಏನೇ ಇರಲಿ ಈ ಅನಿಸಿಕೆಯಲ್ಲಿ ಸತ್ಯಾಂಶ ಇಲ್ಲದಿಲ್ಲ. ತುಳು ಮಾತು ಸಹಜವಾಗಿ, ದಿನನಿತ್ಯದ ಬದುಕಿನ ಸಮೀಪದ್ದು. –ಅಂದರೆ ತಾಂತ್ರಿಕವಾಗಿ ತುಳು ನಾಟಕಗಳಲ್ಲಿ ‘ನಾಟ್ಯಧರ್ಮಿ’ ಇಲ್ಲವೆಂದಲ್ಲ. – ಯಕ್ಷಗಾನದ ‘ವಿಶಿಷ್ಟ ನಾಟ್ಯ ಧರ್ಮಿ’ಯನ್ನು ಲಕ್ಷಿಸಿದರೆ ಅದು ಲೋಕ ಧರ್ಮಿ. ಹಾಗಾಗಿ ತುಳುವಿನ ಲೋಕ ಧರ್ಮಿಗೆ ಯಕ್ಷಗಾನದ ನಾಟ್ಯ ಧರ್ಮಿಯನ್ನು ಸಹಜವಾಗಿ ಅಳವಡಿಸುವುದು ಒಂದು ಭಾಷೆಯ ಬದಲು ಇನ್ನೊಂದು ಎಂಬಷ್ಟು ಸಲೀಸಲ್ಲ. ತುಳುವಿನ ಸಂದರ್ಭ ಆಗಬೇಕಾದಷ್ಟು ಆಗಿಲ್ಲ (ಇಂತಹ ಪ್ರಯತ್ನ ವ್ಯಕ್ತಿಶಃ ಕಲಾವಿದರಿಂದ ನಡೆದದ್ದುಂಟು). ಕನ್ನಡಕ್ಕಿರುವ ಕಾವ್ಯ, ಸಾಹಿತ್ಯಗಳ ಪೋಷಕದ್ರವ್ಯ ತುಳು ಯಕ್ಷಗಾನಕ್ಕಿಲ್ಲ. ಇರುವಂತಹದು – ಪಾಡ್ದನ ಭೂತಗಳ ಮಾತುಗಾರಿಕೆ ಮೊದಲಾದವು. ಸಾಕಷ್ಟು ರಂಗದಲ್ಲಿ ಬಳಕೆಗೊಂಡಿಲ್ಲ. ಅಲ್ಲದೆ ಜನರಿಗೆ ತಲಪುವುದೇ ತುಳು ಆಟಗಳ ಲಕ್ಷ್ಯವಾದುದರಿಂದ ದಿನ ಬಳಕೆಯ ಭಾಷೆಯೇ ಬಳಕೆಗೊಳ್ಳುವುದು ಸಹಜ. ಭಾಷಾಗಾಂಭೀರ್ಯಕ್ಕೆಳಸಿದರೆ, ಅದು ಕನ್ನಡದಂತೆಯೇ ಪ್ರೇಕ್ಷಕನಿಗೆ ‘ದೂರ’ ಆಗಲೂಬಹುದು.

– ಗಾಂಭೀರ್ಯಗೊಳಿಸದಿದ್ದರೆ ಯಕ್ಷಗಾನಕ್ಕೆ ಹೊಂದುವುದಿಲ್ಲ.
– ದ್ವಂದ್ವವನ್ನು ತುಳು ಯಕ್ಷಗಾನ ಉತ್ತರಿಸಬೇಕಾಗಿದೆ.

ಮೇಲೆ ಚರ್ಚಿಸಿದ ವೈರುಧ್ಯಗಳಲ್ಲಿ ಕೆಲವು ವಾಸ್ತವವಿರಬಹುದು. ಕೆಲವು ಕಲಾರಂಗದಲ್ಲಿ ನಾವೀನ್ಯವು ಅಳವಡುವಾಗ ಮೂಡಿದ ಗ್ರಹಿಕೆಯ ಮಿತಿಗಳಿಂದ ಬಂದವುಗಳಾಗಿರಬಹುದು. ಆದರೆ ಈ ಪ್ರಶ್ನೆಗಳನ್ನು ಉತ್ತರಿಸದೆ ತುಳು ಯಕ್ಷಗಾನರಂಗ ಒಂದು ಸರ್ವಾಂಗ ಪುಷ್ಟವಾದ ಕಲೆಯಾಗಿ ಬೆಳೆಯಲಾರದು.

ಈ ಸಮಸ್ಯೆಗಳು ಅಥವಾ ದ್ವಂದ್ವಗಳು ಬರಲು ಕಾರಣ, ತುಳು ಯಕ್ಷಗಾನಗಳ ಇಂದಿನ ಯುಗದ ಆರಂಭಕಾಲದಲ್ಲಿ ತೆಗೆದುಕೊಂಡ ನಿರ್ಧಾರಗಳ ಧೋರಣೆ. ಒಂದು ಶೈಲಿಯನ್ನೂ, ಕ್ರಮವನ್ನೂ ಅನುಸರಿಸಿಕೊಂಡು ಬೆಳವಣಿಗೆಯ ಹಂತದಲ್ಲಿದ್ದ ಆಡುಮಾತೊಂದನ್ನು ತಂದಾಗ ಉಂಟಾಗುವ ಸ್ಥಿತ್ಯಂತರವೇ ಸಾಕು. ಜತೆಗೆ ವೇಷಗಳನ್ನೂ ಬದಲಾಯಿಸಿದಾಗ ಗೊಂದಲವೇ ಉಂಟಾಯಿತು.

ಯಕ್ಷಗಾನ ಕನ್ನಡದಿಂದ ತುಳುವಿಗೆ ಒಂದು ಸಹಜವಾದ ಸಲೀಸಾದ ಅವಸ್ಥಾಂತರ ಆಗಬೇಕಿದ್ದರೆ, ಅದೇ ವೇಷ, ಅದೇ ಹಿಮ್ಮೇಳಗಳನ್ನು ಅದೇ ಕಲಾಭಾಷೆಯನ್ನು ಬಳಸಿ, ಕನ್ನಡದ ಬದಲು ತುಳುವನ್ನು ಅಳವಡಿಸಿದ್ದರೆ, ಅದೊಂದು ಸಮನ್ವಯಕ್ಕೆ ದಾರಿಯಾಗುತ್ತಿತ್ತು. ಹಳೆಯ ಪ್ರಸಂಗಗಳನ್ನೇ ಹಳೆಯ ಶೈಲಿಯಲ್ಲಿ ತುಳುವಿನಲ್ಲಿ ಆಡಿದ ಬಳಿಕ, ತುಳುವಿಗಾಗಿ ಪ್ರತ್ಯೇಕ ಒಂದು ಪ್ರಭೇದ ನಿರ್ಮಾಣವಾಗುತ್ತಿದ್ದರೆ ಅದು ತೆಂಕು ತಿಟ್ಟಿನ ಸಹಜವಾದ ಮುಂದುವರಿಕೆ ಆಗುತ್ತಿತ್ತು. ಬದಲಾಗಿ ಯಕ್ಷಗಾನಕ್ಕೆ ತುಳುವನ್ನು ತರುತ್ತಲೇ ನಾಟಕ ಶೈಲಿಯನ್ನು ಬೆರೆಸಿದುದರಿಂದ ಭಾಷೆ, ವಸ್ತುಗಳ ಹೊಸತನ ಕಲಾರೂಪದ ಮುಂದೆ ಒಡ್ಡಿದ್ದ ಸಮಸ್ಯೆಗಳು ಮತ್ತಷ್ಟು ಗೋಜಲಾದವು. ಸರ್ವಾಂಗ ಸುಂದರವಾದ ಶೈಲಿಗೆ ಹೊಸವಸ್ತು ಭಾಷೆಗಳ ಹೊಂದಿಕೆಯ ಸದವಕಾಶ ತಪ್ಪಿ, ಸಮನ್ವಯದ ಬದಲು ಬಿರುಕು ಉಂಟಾಯಿತು.

ಸಮನ್ವಯದ ಯತ್ನ ನಡೆಯಲಿಲ್ಲವೆಂದಲ್ಲ. ವಸ್ತುವಿನ ಮಟ್ಟದಲ್ಲಿ ನಡೆಯಿತು. ತುಳು ಪ್ರಸಂಗದ ಆರಂಭಕ್ಕೆ ಶಿವಪಾರ್ವತಿಯರ, ಲಕ್ಷ್ಮೀ ನಾರಾಯಣರ ಒಡ್ಡೋಲಗ ಮಾಡಿ, ಕತೆಯನ್ನು ಅಲ್ಲಿಂದ ತುಳುನಾಡಿಗೆ ತರುವ ಸಂಯೋಜನೆ ಕೆಲವು ಪ್ರದರ್ಶನಗಳಲ್ಲಿ ಇದ್ದಿತು. ಇಂತಹ ಸಂದರ್ಭಗಳಲ್ಲಿ ದೇವಪಾತ್ರಗಳಿಗೆ ಕನ್ನಡ ಭಾಷೆ ಇತ್ತು! (ಸಂಸ್ಕೃತ ನಾಟಕಗಳ ಸಂಸ್ಕೃತ- ಪ್ರಾಕೃತ ಸಂಯೋಜನೆಯಂತೆ) ಈ ಒಂದು ವಿದ್ಯಮಾನವೇ ಆಗಿನ, ಒಟ್ಟು ಧೋರಣೆಯನ್ನು ಬಹಳ ಚೆನ್ನಾಗಿ ಚಿತ್ರಿಸುತ್ತದೆ. ಔತ್ತರೇಯ ಪುರಾಣಗಳೊಂದಿಗೆ, ಸ್ಥಳೀಯ ಪುರಾಣಗಳ ಹೊಂದಿಕೆ. ಪಾಡ್ದನ ಮುಂತಾದ ಜಾನಪದದಲ್ಲೂ ಕಾಣುತ್ತದೆ. ಕಥೆಯ ಮಟ್ಟದಲ್ಲಿ ಇದು ಸುಲಭ (ಅದರ ಸರಿತಪ್ಪುಗಳೇನೇ ಇರಲಿ) ಕಲೆಯ ಮಟ್ಟದಲ್ಲಿ ಅದು ಸಾಧಿತವಾಗಲಿಲ್ಲ. ಇತಿಹಾಸದ ಗತಿ ವಕ್ರವಲ್ಲವೆ?

ತುಳು ಯಕ್ಷಗಾನ ರಂಗದ ಕೆಲವು ವಿರೋಧಾಭಾಸಗಳನ್ನು ಇಲ್ಲಿ ಕುತೂಹಲಕ್ಕಾಗಿ ಪರಿಶೀಲಿಸಬಹುದು.

ಒಂದು : ಸ್ತ್ರೀ ಪಾತ್ರಗಳ ವೇಷ ವ್ಯವಸ್ಥೆ. ತೆಂಕುತಿಟ್ಟಿನಲ್ಲಿ ಸಾಂಪ್ರದಾಯಿಕ ಪ್ರಸಂಗಗಳ ಸ್ತ್ರೀ ಪಾತ್ರಗಳ ಹಳೆತರದ ವೇಷ ವಿಧಾನ ಮಾಯವಾಗಿ ದಶಕಗಳು ಸಂದಿವೆ. ಪುರುಷ ಪಾತ್ರಗಳು ಪ್ರಾಚೀನ ಕಾಲದ ರೂಪಕಗಳು ಸ್ತ್ರೀ ಪಾತ್ರಗಳು ಆಧುನಿಕ ಸಾಮಾಜಿಕ ಸ್ತ್ರೀಯದೇ ಪ್ರತಿರೂಪ ಹೀಗಿತ್ತು. ತುಳು ಪ್ರಸಂಗಗಳು ವ್ಯಾಪಕ ಭಾರತೀಯ ಪೌರಾಣಿಕತೆಯಿಂದ ಪ್ರಾದೇಶಿಕತೆ ಬಂದಾಗ ಈ ಸ್ಥಿತಿ ಮುಂದುವರಿದಿದ್ದರೆ ಆಶ್ಚರ್ಯವಿರಲಿಲ್ಲ. ಆದರೆ ವಿಚಿತ್ರವೆಂಬಂತೆ, ಪುರುಷ ಪಾತ್ರಗಳು ಅವಾಸ್ತವ ರಮ್ಯಾದ್ಭುತ ರೂಪ ಶೈಲಿಯನ್ನು ಬಿಟ್ಟು, ವಾಸ್ತವಿಕದತ್ತ, ನಾಟಕ ಶೈಲಿಗೆ ಹೊರಳಿದಾಗ, ಸ್ತ್ರೀ ಪಾತ್ರಗಳು ‘ಹಿಂದೆ’ ಹೋದವು. ಬಡಗುತಿಟ್ಟಿನಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿದ್ದ ಪಗಡಿಯಂತಹ ಶಿರೋಭೂಷಣ, ಸೊಂಟದ ಡಾಬುಗಳಿಂದ ಅಲಂಕೃತವಾದ ಸ್ತ್ರೀ ವೇಷಗಳು ರಂಗಕ್ಕೆ ಬಂದವು. ಇದು ಮೊದಲಿದ್ದ ವಿರೋಧಾಭಾಸದ, ಇನ್ನೊಂದು ರೂಪ!

ಎರಡು : ಸಾಂಪ್ರದಾಯಿಕ ಪ್ರಸಂಗಗಳ ಒಂದು ಪ್ರಸಿದ್ಧ ದೃಶ್ಯ. ಸ್ತ್ರೀ ಪಾತ್ರಗಳ ಜಲಕೇಳಿ. ಅದು ಆ ಪ್ರಸಂಗಗಳ ಪ್ರಯೋಗಗಳಲ್ಲೆ ಮಹತ್ವ ಕಳಕೊಳ್ಳತೊಡಗಿತ್ತು. ತುಳು ಪ್ರಸಂಗಗಳ ಚೌಕಟ್ಟಿನಲ್ಲಂತೂ, ಅದು ಅಪ್ರಸ್ತುತವಾಗಿತ್ತು. ತುಳು ಐತಿಹ್ಯ, ಪುರಾಣಗಳಲ್ಲಿ ಜಲಕೇಳಿಯ ಪ್ರಸಕ್ತಿಯಿದ್ದಂತಿಲ್ಲ. ಆದರೆ, ತುಳು ಆಟಗಳಲ್ಲಿ ಜಲಕೇಳಿಯ ಮಟ್ಟಿಗೆ, ಹಳೆ ಕ್ರಮದ ಪುನರುಜ್ಜೀವನಗೊಂಡಿತು. ಇದೂ ಬಡಗುತಿಟ್ಟಿನ ಪ್ರಭಾವ ತೀರ ವಿಲಕ್ಷಣ ಸಂದರ್ಭದಲ್ಲಿ.

ಮೂರು : ಹಿಮ್ಮೇಳದ ಶೈಲಿ, ತುಳು ಪ್ರಸಂಗಗಳ ಮೂಲಕ ಕಲೆಯೊಂದು ಪ್ರಾದೇಶಿಕತೆಯತ್ತ ಸಾಗುತ್ತಿದ್ದಾಗ, ಸಹಜವಾಗಿ, ಅದರ ಅಂಗೋಪಾಂಗಗಳೂ ಆ ದಿಕ್ಕಿನಲ್ಲಿ ಸಾಗಬಹುದಾಗಿತ್ತು. ಹಿಮ್ಮೇಳಕ್ಕೆ ತುಳುನಾಡಿನ ಗಾನ ವಿಶೇಷವೂ, ತುಳು ಮಟ್ಟುಗಳೂ, ತುಳು ಜಾನಪದ ವಾದ್ಯಗಳೂ ಬಳಕೆ ಆಗಿದ್ದರೆ ಅದು ಅಸಹಜವಲ್ಲ. ಆದರೆ ಇಲ್ಲಿ ಇನ್ನೊಂದು ವಿಚಿತ್ರ ಸಂಭವಿಸಿತು. ಗಾನ ಶೈಲಿ ಯಕ್ಷಗಾನ ಶೈಲಿಗೂ ಆಚೆ ಹೋಗಿ, ಆಧುನಿಕ ಕರ್ನಾಟಕಿಯ ಶೈಲಿಯನ್ನೂ ಅನುಸರಿಸಿತ್ತು. ಮದ್ದಲೆಯ ಬದಲಿಗೆ ಮೃದಂಗ ಬಳಕೆಗೆ ಬಂತು.

ಈ ಮೂರು ಸಂದರ್ಭಗಳಿಂದ ಕಾಣುವುದು ಇಷ್ಟು, ತುಳು ಯಕ್ಷಗಾನ ಪ್ರಯೋಗದ ಹಿಂದೆ, ಕಲೆಯ ಪ್ರಾದೇಶಿಕೀಕರಣದ ದೃಷ್ಟಿ ಇರಲಿಲ್ಲ. ಭಾಷೆಯನ್ನು ಮಾತ್ರ ಬೇರೆ ಮಾಡಿ, ಉಳಿದುದನ್ನು ಹೇಗೋ ಒಂದು ರೀತಿಯಿಂದ ಹೊಂದಿಸುವುದು ಮಾತ್ರವಾಗಿತ್ತು. ಬೆಳವಣಿಗೆಯ ಬೇರೆ ಬೇರೆ ಅಂಶಗಳು ವಿರುದ್ಧ ದಿಕ್ಕಿನಲ್ಲಿ ಸಾಗಿದುವು. ಇಲ್ಲಿ ಪರಿವರ್ತನವಿತ್ತೆ ಹೊರತು ತಾರ್ಕಿಕ ಗತಿಶೀಲತೆ ಇರಲಿಲ್ಲ ಎನ್ನಬಹುದೇನೋ.

ನಾವು ಇಂದು ತುಳು ಭಾಷಾ ಚಳವಳಿಯ ಸಂದರ್ಭದಲ್ಲಿ ವ್ಯವಹರಿಸುತ್ತಿದ್ದೇವೆ. ಚಳವಳಿಯ, ಅಭಿಮಾನದ ಸನ್ನಿವೇಶಗಳಲ್ಲಿ, ವಸ್ತುನಿಷ್ಠವಾಗಿ ವ್ಯಕ್ತಪಡಿಸಿದ ಅಭಿಪ್ರಾಯಗಳು ತಪ್ಪುಗ್ರಹಿಕೆಗೆ ಕಾರಣವಾಗುವುದುಂಟು. ನಾನು ಹಲವು ವರ್ಷಗಳಿಂದ ತುಳು ಯಕ್ಷಗಾನಗಳನ್ನು ಬಲವಾಗಿ ಆಕ್ಷೇಪಿಸುತ್ತ ಬಂದವನು. ಆದರೆ, ತುಳು ಭಾಷಾ ವಿರೋಧದಿಂದಲ್ಲ. ತುಳು ಭಾಷೆಯ ಯಥೋಚಿತ ಪ್ರಗತಿ, ತುಳು ಭಾಷಾ ಸತ್ವದ ಅಭಿವ್ಯಕ್ತಿಗಳಲ್ಲಿ ನನಗೆ ವಿಶ್ವಾಸವಿದೆ. ತುಳು ಯಕ್ಷಗಾನಗಳ ಬಗ್ಗೆ, ನನ್ನಂತೆ ಆಕ್ಷೇಪಿಸುವ ಹಲವರನ್ನು ‘ತುಳು ವಿರೋಧಿ’ಗಳೆಂದು ಕರೆಯುವುದು ವಿಷಯದ ಗಂಭೀರವಾದ ಪರಿಶೀಲನೆಗೆ ಅಡ್ಡಿಯಾಗುತ್ತದೆ. ಈ ಪ್ರಶ್ನೆ ಭಾಷೆಯದಲ್ಲ. ಯಕ್ಷಗಾನದ ಸುಂದರವಾದ ರೂಪ ಶ್ರೀಮಂತಿಕೆಯ ರಕ್ಷಣೆಯದು, ಆ ಬಗ್ಗೆ ನಾವೆಲ್ಲ ಹೊಣೆಗಾರಿಕೆಯಿಂದ ಯೋಚಿಸಬೇಕು.

ಯಕ್ಷಗಾನವು ಕನ್ನಡದಲ್ಲೆ ಇರಬೇಕೆಂದಿಲ್ಲ. ತುಳುವಿನಲ್ಲಿ ಅದು ಅವತರಿಸಿದಾಗ, ಕಲೆಯು ಜನಪರವಾಗುವುದರತ್ತ, ಪ್ರಸ್ತುತವಾಗುವುದರತ್ತ ಅದೊಂದು ಹೆಜ್ಜೆ. ಸಾಂಸ್ಕೃತಿಕ ವಿಕೇಂದ್ರಿಕರಣ ಎಂದು ಆರಂಭದಲ್ಲಿ ಇದನ್ನೆ ಪ್ರಸ್ತಾವಿಸಿದೆ. ಆದರೆ ಅಷ್ಟರಿಂದಲೇ ತುಳು ಸದ್ಯದ ಸ್ವರೂಪ, ಇದ್ದಕ್ಕಿದ್ದಂತೆ ಒಪ್ಪಿಕೊಳ್ಳಬೇಕಾದುದೆಂದಾಗುವುದಿಲ್ಲ. ವಿವಾದವಿರುವುದು, ತುಳು ಯಕ್ಷಗಾನದ ಅಸ್ತಿತ್ವ, ಔಚಿತ್ಯದ ಬಗ್ಗೆ ಅಲ್ಲ. ಅದು ಹೇಗಿರಬೇಕು ಎಂಬುದರ ಬಗ್ಗೆ ಪ್ರಯೋಗ ವಿಧಾನವೇ ವಿಚಾರಣೀಯ ಅಂಶ ಮತ್ತು ಇಲ್ಲಿ ಗಂಭೀರ ಸವಾಲುಗಳಿವೆ.

ತುಳುನಾಡಿನಲ್ಲಿ ತುಳು – ಕನ್ನಡವೆಂಬ ಎರಡು ಭಾಷೆಗಳಿರುವುದರಿಂದ, ತುಳು ಯಕ್ಷಗಾನದ ಬಗೆಗಿನ ಆಕ್ಷೇಪವು ಕನ್ನಡ ಪರವೆಂಬ ಭಾವನೆ ತರುತ್ತಿದೆ ಅಷ್ಟೆ. ಅದು ಸರಿಯಲ್ಲ. ತುಳು ಒಂದೇ ಇದ್ದಿದ್ದರೆ, ಆಗ ಯಕ್ಷಗಾನವೋ, ತತ್ಸಮಾನವಾದ ಕಲೆಯೋ, ತುಳುವಿನಲ್ಲೆ ಇರುತ್ತಿತ್ತಷ್ಟೇ? ಅನ್ಯಭಾಷಾ ಪ್ರದೇಶಗಳಲ್ಲೂ ಇಂತಹ ಕಲೆ ಇದೆ. ತುಳುವಿನಲ್ಲಿ ಅದು ಬೇಡವೆಂದರೆ. ಅದು ಅವೈಜ್ಞಾನಿಕ ಮತ್ತು ಅತಾರ್ಕಿಕ. ಅದು ತುಳುವೂ ಆಗಿ, ಯಕ್ಷಗಾನವೂ ಆಗಿರುವ ಬಗೆ ಹೇಗೆ ಎಂದು ಯೋಚಿಸಬೇಕಾದುದು ಮುಖ್ಯ.

ಆಶಯದ ನೆಲೆಗೆ ಬರೋಣ. ಕಲೆಯಲ್ಲಿ ಪ್ರಸ್ತುತತೆ ಒಂದು ಮುಖ್ಯ ಅಂಶ. ಸದ್ಯದ ತುಳು ಪ್ರಸಂಗಗಳು, ಆಶಯದ ದೃಷ್ಟಿಯಿಂದ ಸಾಂಪ್ರದಾಯಿಕ ಪ್ರಸಂಗಗಳಿಗಿಂತ ಭಿನ್ನವೇನೂ ಅಲ್ಲ. ಪ್ರತಿಪಾದನೆ, ಅಷ್ಟೆ, ಕೆಲವೊಮ್ಮೆ ಹೆಚ್ಚು ಪ್ರತಿಗಾಮಿಯೂ, ಮುಗ್ಧವೂ ಆಗಿದೆ. ಹೀಗಾಗಿ, ಈ ಅಂಶದಲ್ಲೂ ಪರಿಷ್ಕಾರ ಆಗಬೇಕಾಗಿದೆ. ಒಂದು ದೃಷ್ಟಾಂತವನ್ನು ಪ್ರಸ್ತಾಪಿಸುವುದಾದರೆ, ಕೋಟಿ ಚೆನ್ನಯರ ಕತೆ, ಬರಿಯ ಮಹಿಮಾ ಕಥನವಾಗದೆ ಒಂದು ಹೋರಾಟದ, ಅನ್ಯಾಯದ ವಿರುದ್ಧದ ಬಂಡಾಯವಾಗಿ ಪ್ರಸ್ತುತವಾಗುವ ಸಾಧ್ಯತೆ ಹೊಂದಿದೆ. ಹಾಗಾದಾಗ, ತುಳು ಯಕ್ಷಗಾನ ಆಶಯದಲ್ಲೂ ಸಾರ್ಥಕ್ಯ ಹೊಂದಿದಂತಾಗುತ್ತದೆ. ಸಾಧನೆಗಳ ಪರಿಶೀಲನೆಯಲ್ಲಿ ಇದು ಒಂದು ದಾರಿ ಆಗಬಲ್ಲುದು.

ತುಳು ಯಕ್ಷಗಾನದ ‘ನಾಳೆ’ ಹೇಗಿದ್ದೀತು, ಹೇಗಿದ್ದರೆ ಚೆಂದ – ಎಂಬುದನ್ನು ಈಗ ಪರಿಶೀಲಿಸಬಹುದು. ಇದು ತುಂಬ ಸಾಹಸದ ಮಾತು. ಊಹಾ ಪ್ರಪಂಚ ಆದರೂ, ಅಂತಹ ಊಹೆಯಲ್ಲಿ ಕುತೂಹಲವಿದೆ. ಕಲಾತ್ಮಕ ಪ್ರಯೋಜನವಿದೆ.

ನಾಳೆಯ ತುಳು ಯಕ್ಷಗಾನದ ಮುಂದೆ ಮೂರು ದಾರಿಗಳಿವೆ :

ಅ : ಈಗ ಇದ್ದಂತೆಯೇ, ಜನಪ್ರಿಯತೆ ಅಥವಾ ಜನಸಾಮಾನ್ಯ ಪ್ರಿಯತೆಯೊಂದನ್ನೇ ಲಕ್ಷಿಸಿ, ಈಗಿನ ರೂಪದಲ್ಲೆ ಮುಂದುವರಿಯುತ್ತಾ ಹೋಗುವುದು.

ಆ : ಸಾಂಪ್ರದಾಯಿಕ ಯಕ್ಷಗಾನ ತೆಂಕುತಿಟ್ಟು ಶೈಲಿಯ ವೇಷ, ಹಿಮ್ಮೇಳಗಳಿಂದ ತುಳು ಭಾಷೆಯಲ್ಲಿ ಪ್ರದರ್ಶಿಸುವುದು.

ಇ : ತುಳುನಾಡಿನ ಸಾಂಸ್ಕೃತಿಕ ಪರಿಕರವನ್ನು ಬೆಳಸಿ, ಒಂದು ಪ್ರತ್ಯೇಕ ಶೈಲಿಯ ಸೃಷ್ಟಿ.

– ಇದನ್ನೆ ಸ್ವಲ್ಪ ವ್ಯತ್ಯಾಸಗೊಳಿಸಿ ಹೀಗೆ ನಿರೂಪಿಸಬಹುದು – ಸಂಭವನೀಯವಾಗಿ :

ಅ : ಯಕ್ಷಗಾನದಂತೆಯೇ ಹಿಮ್ಮೇಳ, ನಾಟಕ ಶೈಲಿಯ ವೇಷಗಳು, ರಂಜನ ಪ್ರಧಾನವಾದ ಪ್ರಸಂಗ ರಚನೆ, ಜನಪ್ರಿಯ ಶೈಲಿಯ ಬಳಕೆ, ಇದು ನಿಧಾನವಾಗಿ ಇಡಿಯ ತೆಂಕುತಿಟ್ಟನ್ನು ವ್ಯಾಪಿಸಿ ಸಾಂಪ್ರದಾಯಿಕ ಶೈಲಿಯ ನಾಶವಾಗಬಹುದು.

ಆ : ತೆಂಕುತಿಟ್ಟು ಒಂದೇ ಆಗಿ ಉಳಿದು, ಭಾಷೆಗಳು ಎರಡಾಗಿ ಇರುವುದು. ಕನ್ನಡ ತುಳು ಭಾಷೆಯ ತೆಂಕುತಿಟ್ಟಿನ ಪುನಾರಚನೆ ಎರಡು ವಿಧಾನಗಳ ಮರು ಸೇರ್ಪಡೆ.

ಇ : ತುಳುವಿಗೆ ಪ್ರತ್ಯೇಕವಾದ ಒಂದು ವಿಶಿಷ್ಟ ಶೈಲಿಯ ಸೃಷ್ಟಿ. ತೆಂಕುಟ್ಟಿನ ಒಂದು ಪ್ರಭೇದ ಅಥವಾ ಒಳ ಭೇದದ ನಿರ್ಮಾಣ. ಅರ್ಥಾತ್ ತೆಂಕುತಿಟ್ಟು ಎರಡಾಗುವುದು. ತುಳು ತಿಟ್ಟು, ಹಳೆತಿಟ್ಟು ಎಂದು.

– ಈ ಮೂರರಲ್ಲಿ ಕಲಾದೃಷ್ಟಿಯಿಂದ ಎರಡನೆಯ ಮತ್ತು ಮೂರನೆಯ ಪ್ರಮೇಯಗಳೇ ಸ್ವಾಗತಾರ್ಹ. ನನ್ನ ವೈಯಕ್ತಿಕ ಆಯ್ಕೆ ಎರಡನೆಯ ಪ್ರಮೇಯ. ಮೂರನೆಯದಾದರೂ ವಿರೋಧವಿಲ್ಲ. ಆದರೆ, ಇಂದಿನ ಸ್ಥಿತಿಯನ್ನು ನೋಡಿದರೆ, ಒಂದನೆಯ ಪ್ರಮೇಯ (ಅಂದರೆ, ಇಂದಿನ ಸ್ಥಿತಿಯನ್ನು ನೋಡಿದರೆ, ಒಂದನೆಯ ಪ್ರಮೇಯ (ಅಂದರೆ, ಶೈಲಿಬದ್ಧವಲ್ಲದ ಯಕ್ಷಗಾನ –ನಾಟಕ ರೂಪದ ವ್ಯಾಪಕತೆ ಮತ್ತು ತೆಂಕುಟ್ಟಿನ ಪರಂಪರಾಗತ ರೂಪದ ವಿನಾಶ)ವೇ ಹೆಚ್ಚು ಸಂಭವವಾಗಿ ತೋರುವುದೆಂದು ಖೇದದಿಂದ ಹೇಳಬೇಕಾಗಿದೆ. ಹಾಗಾಗದಿರಲಿ. ಅತ್ಯಂತ ಸುಂದರ ಶ್ರೀಮಂತ ನೃತ್ಯರಂಗ ಯೋಗ್ಯವಾದ ಶೈಲಿಯೊಂದು ನಮ್ಮ ಕಣ್ಣ ಮುಂದೆ ನಾಶವಾಗುವುದಕ್ಕೆ ನಾವು ಸಾಕ್ಷಿಗಳಾಗುವ ಸ್ಥಿತಿ ಬಾರದಿರಲಿ.

ತುಳು ಪ್ರಸಂಗಗಳಿಗೆ, ಅದೇ ಹಳೆಯ ವೇಷಗಳು ರಂಗವಿಧಾನಗಳು ಹೊಂದುವುವೆ? ಎಂಬ ಪ್ರಶ್ನೆಯಿದೆ. ಸತತ ಪ್ರಯೋಗದ ಅಭ್ಯಾಸದಿಂದ ಹೊಂದಿಕೆಯಾಗಬಹುದು. ಯಕ್ಷಗಾನಕ್ಕೆ ತುಳುತನ[4] ಪ್ರತ್ಯೇಕ ತುಳು ತಿಟ್ಟಿನ ರಚನೆಯೇ ಸೂಕ್ತ ಎಂಬ ಅಭಿಪ್ರಾಯವಿದೆ. ಈ ಅಭಿಪ್ರಾಯವನ್ನು ಈರ್ವರು ತಜ್ಞರು ಮಂಡಿಸಿದ್ದಾರೆ. (ಅಮೃತ ಸೋಮೇಶ್ವರರು ಮತ್ತು ಕುದ್ಯಾಡಿ ವಿಶ್ವನಾಥ ರೈಗಳು; ಭಾಷಣಗಳಲ್ಲಿ) ಇವರ ಅಭಿಪ್ರಾಯದಲ್ಲಿ ತುಳುನಾಡಿನಲ್ಲಿರುವ ಭೂತಗಳು, ಗರಡಿ ಮನೆಗಳ ಬೊಂಬೆಗಳು, ತೌಳವ ಶಿಲ್ಪಶೈಲಿಯನ್ನಾಧರಿಸಿ, ನೃತ್ಯಕ್ಕೂ ಹೊಂದುವಂತಹ ವೇಷಭೂಷಣಗಳ ನಿರ್ಮಾಣ. ಒಂದು ರೀತಿಯಲ್ಲಿ, ತೆಂಕು ವೇಷಗಳ ಪರಿವರ್ತಿತ ಶೈಲಿಯ ರಚನೆ; ಜತೆಗೆ ತುಳುನಾಡಿನ ಪ್ರಾಚೀನ್ಯ ವಾದ್ಯ ಪರಿಕರಗಳ ಕಲಾತ್ಮಕ ಅನ್ವಯ (ಉದಾ : ತೆಂಬರೆ ಬಡಿತ) ಇವು ಹೊಸತಿಟ್ಟಿನ ಕೆಲವು ಹೊಳಹುಗಳು. ಇದು ಶಕ್ಯವೇನೋ ಹೌದು. ದೊಡ್ಡ ಸಿದ್ಧತೆಯ, ಪಂಥಾಹ್ವಾನದ ಕೆಲಸ.

ತುಳುನಾಡಿನ ಪ್ರಾಚೀನ ಕಥಾ ಸಂಪ್ರದಾಯ ಸಾಕಷ್ಟು ಶ್ರೀಮಂತವಾಗಿದೆ. ಅದರಿಂದ ಕತೆಗಳನ್ನಾಯ್ದು, ಅವಕ್ಕೆ ಪ್ರಸಂಗರೂಪ ನೀಡುವಾಗ, ಸಾಕಷ್ಟು ಪರಿವರ್ತನೆ ಮಾಡಿ ರಚಿಸಬೇಕು. ಜತೆಗೆ ತುಳು ಯಕ್ಷಗಾನವೆಂದರೆ ತುಳುನಾಡಿನ ವಸ್ತುವೇ ಎಂಬ ನಿಯಮ ಬೇಕಿಲ್ಲ. ಬೇರೆ ಬೇರೆ ಮೂಲದ ಕತೆಗಳನ್ನು ತುಳುವಿನಲ್ಲಿ ಬರೆಯಬಹುದು. ಬೇಕಿದ್ದರೆ ಅದಕ್ಕೆ ತುಳು ಭಾವವನ್ನು ನೀಡಲೆತ್ನಿಸಬಹುದು. ಇಂತಹ ಪ್ರಯತ್ನ ಆಗಲೇ ನಡೆದಿದೆ. (ಉದಾ: ಅನಂತರಾಮ ಬಂಗಾಡಿ ಅವರ ಸಿರಿಕ್ರಿಷ್ಣ – ಚಂದಪಾಲಿ) ಪ್ರಸಂಗ ರಚನೆಯಲ್ಲಿ ಇಲ್ಲದಿದ್ದರೂ ಅಭಿವ್ಯಕ್ತಿಯಲ್ಲಿ ತುಳು ಸ್ವಭಾವ ಅದಕ್ಕೆ ಬಂದೇ ಬರುತ್ತದೆ.

ತುಳುನಾಡಿನ ಪ್ರಾಚೀನ ಕುಣಿತಗಳಾದ ಕರಂಗೋಲು, ಮಾದಿರ, ನಲಿಕೆ ಮುಂತಾದ ಹಲವು ಬಗೆಗಳನ್ನು, ಯಕ್ಷಗಾನೀಕರಿಸಿ ಅಳವಡಿಸಬಹುದು. ಇಲ್ಲಿ ಆ ಕುಣಿತಗಳನ್ನು ತಂದು ಪ್ರದರ್ಶಿಸುವ ‘ನರ್ತನ ವೈವಿಧ್ಯ ಪ್ರದರ್ಶನ’ವೇ ಉದ್ದೇಶವಾಗಿ, ಅದೊಂದು ಫ್ಯಾಶನ್ ಆಗಬಾರದು. ಕಲಾತ್ಮಕ ಪುನಃ ಸೃಷ್ಟಿ, ಔಚಿತ್ಯ ದೃಷ್ಟಿ ಮುಖ್ಯ.

ಅರ್ಥಗಾರಿಕೆಯಲ್ಲಿ, ತುಳುವನ್ನು ಬಹು ಚೆನ್ನಾಗಿ ಪ್ರಯೋಗಿಸಿದ ಕಲಾವಿದರಿದ್ದಾರೆ.[5] ಆದರೆ, ಇಂದಿನ ಒಟ್ಟು ತುಳು ಅರ್ಥಗಾರಿಕೆ ಸರ್ಮಪಕವಾಗಿಲ್ಲ ಅದು, ನಿತ್ಯದ ಮಾತನ್ನೆ ರಂಗದಲ್ಲಿ ಆಡಿದಂತಿದೆ. ಇದು ಬದಲಾಗಬೇಕಾಗಿದೆ. ತುಳು ಆಟಗಳಲ್ಲಿ ಹಾಸ್ಯರಸಕ್ಕೂ, ಅಸಂಸ್ಕೃತ ಶೃಂಗಾರಕ್ಕೂ ಸಲ್ಲುತ್ತಿರುವ ಅತಿ ಪ್ರಾಶಸ್ತ್ಯವೂ ಬದಲಾಗಬೇಕಾಗಿದೆ. ಅರ್ಥಗಾರಿಕೆ ತುಳು ರಚಿತ ಪಾಡ್ದನ ಕಥೆಗಳ, ಶಿಷ್ಟ ಕಾವ್ಯಗಳ ಪೋಷಕ ದ್ರವ್ಯದಿಂದ ರಕ್ತಮಾಂಸ ಒದಗಿ ಬರಬೇಕಾಗುತ್ತದೆ. ಜತೆಗೇ ಬದುಕಿನ ಜತೆ ಕಲೆಯ ಸಂವಾದಿತ್ವ, ಅರ್ಥ ಪೂರ್ಣವಾಗಿ ಪ್ರಸ್ತುತವಾಗಬೇಕು. ನಾಳಿನ ತುಳುನಾಡೇ ಬದಲಾಗದಿರುವಂತಹದು. ಆಗ ಇನ್ನೇನು ಸವಾಲುಗಳು ಕಾದಿವೆಯೋ.

ತುಳು ಯಕ್ಷಗಾನಗಳಿಂದ, ತೆಂಕುತಿಟ್ಟು ತನ್ನ ರೂಪವನ್ನೆ ಕಳಕೊಂಡಿತೆಂಬ ಮಾತು, ದೂರವಾಗಿ, ಸಾಂಪ್ರದಾಯಿಕ ತಿಟ್ಟು ಮತ್ತೆ ಊರ್ಜಿತವಾಗಲಿ. ತನ್ನ ಉದಯಕ್ಕೆ ಚಿಗುರುವಿಕೆಗೆ ಕಾರಣವಾದ ಮೂಲವನ್ನೆ, ತುಳು ಯಕ್ಷಗಾನ ನಾಶಮಾಡದಿರಬೇಕಾದರೆ, ಹಳೆತಿಟ್ಟಿನಲ್ಲಿ ತುಳುತಿಟ್ಟು ಸೇರಿ ಹೋಗಬೇಕು. ಅಥವಾ ಹೊಸತಿಟ್ಟು ವ್ಯವಸ್ಥಿತವಾಗಿ ಹುಟ್ಟಿಬರಬೇಕು. ಆ ಕುರಿತು ಸಂಬಂಧಪಟ್ಟ ಎಲ್ಲರೂ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕಾಗಿದೆ.

ಅಂತಹ ಸೃಷ್ಟಿ ಒದಗಿ ಬರಲಿ. ನಾವು ಮಾಡುವ ಕೃತಿರೂಪದ ಕರ್ಮ ಅನುಕೂಲರೂಪದ ಕಾಲ ಒದಗಿ ಬಂದು, ಕಾಲಕರ್ಮ ಸಂಯೋಗದಿಂದ ಹೊಸ ಯೋಗಸಿದ್ಧಿ ಪ್ರಾಪ್ತಿಸಲಿ.

 

[1] ಎಪ್ರಿಲ್ ೧೬, ೧೯೮೯ರಂದು ಮುಲ್ಕಿ ಬಪ್ಪನಾಡಿನಲ್ಲಿ ನಡೆದ ತುಳು ಸಮ್ಮೇಳನದಲ್ಲಿ ಜರಗಿದ ಗೋಷ್ಠಿಯಲ್ಲಿ ಮಾಡಿದ ಉಪನ್ಯಾಸ – ತುಳು ಯಕ್ಷಗಾನೊ ಕೋಡೆ-ಇನಿ-ಎಲ್ಲೆ.-ಇದರ ಕನ್ನಡ ಲೇಖನ ರೂಪ, ವಿಸ್ತಾರ, ಪರಿಷ್ಕಾರಗಳೊಂದಿಗೆ.

[2] ಪುರಾಣವೆಂದರೆ ಜನಾಂಗಗಳಲ್ಲಿ ಪ್ರಚಲಿತವಿರುವ ಕತೆಗಳ ಒಂದು ರೂಪ. ಇಲ್ಲಿ ಭಾರತ ಭಾಗವತಾದಿ ಅಷ್ಟಾದಶ ಪುರಾಣಗಳನ್ನು, ಆರ್ಯಪುರಾಣ, ವೈದಿಕಪುರಾಣ ಎಂದೆಲ್ಲ ಕರೆಯಲಾಗಿದ್ದರೂ, ಸಂಸ್ಕೃತ ಮೂಲದ ಪುರಾಣಗಳೆಂದು, ಸ್ಪಷ್ಟತೆಗಾಗಿ ಹೆಸರಿಸಲಾಗಿದೆ.

[3] ಸುಮಾರು ಉಡುಪಿಯಿಂದ ಉತ್ತರಕ್ಕೆ ಇರುವ ಪದ್ಧತಿ ಬಡಗುತಿಟ್ಟು, ದಕ್ಷಿಣಕ್ಕಿರುವುದು ತೆಂಕುತಿಟ್ಟು.

[4] ಕಳೆದೆರಡು ವರ್ಷಗಳಲ್ಲಿ ಈ ಪ್ರಯೋಗ ಪುನಃ ಕಾಣಿಸಿಕೊಂಡಿದೆ. ಕರ್ನಾಟಕ ಮೇಳ, ಸುರತ್ಕಲ್ ಮೇಳಗಳು ಸಾಂಪ್ರದಾಯಿಕ ವೇಷಗಳಿಂದಲೇ ತುಳು ಯಕ್ಷಗಾನ ಪ್ರದರ್ಶನಗಳನ್ನು ನೀಡಿವೆ. ಈ ಪುನರುಜ್ಜೀವನದ ಆಂಶಿಕ ಪ್ರಯತ್ನದ ಮುನ್ನಡೆಯನ್ನು ಕಾದು ನೋಡಬೇಕಾಗಿದೆ. ಆದರೆ ಈ ಮೇಳಗಳು ಹಳೆ ಮಾದರಿ ವೇಷಗಳನ್ನು ಬಳಸಿರುವುದು ನಳದಮಯಂತಿ, ಹರಿಶ್ಚಂದ್ರ, ಕರ್ಣಾರ್ಜುನ ಮುಂತಾದ ಪರಂಪರಾಗತ ಪ್ರಸಂಗವಸ್ತುಗಳಿಗೆ ಹೊರತು ತುಳುವಿನದೇ ಕಥಾನಕಗಳಿಗಲ್ಲ. ಇರಲಿ, ಅಂತೂ ಇದೊಂದು ಹೊಸ ತಿರುವು.

[5] ಬೋಳಾರ ನಾರಾಯಣ ಶೆಟ್ಟಿ, ಸಾಮಗ ಸೋದರರು, ಅಣ್ಣಪ್ಪ ಹಾಸ್ಯಾಗರ ಗೋಪಾಲ ಶೆಟ್ಟಿ, ಅಳಕೆ ರಾಮಯ್ಯ ರೈ ಇತ್ಯಾದಿ.